Friday, November 27, 2009

ಕಡಲ ತೀರದ ಸದಾಸಂ ಪ್ರವಾಸಕ್ಕೆ ತಯಾರಿ

ಒಮ್ಮೆ ಕಡಲ ತೀರಕ್ಕೆ ಸದಾಸಂ ತೆಗೆದುಕೊಂಡು ಹೋದ ನಂತರ ಮುಂದಿನ ಸವಾಲಿಗೆ ವಿಕಿಮಾಪಿಯ ಭೂಪಟದಲ್ಲಿ ಅವಕಾಶ ಹುಡುಕುತ್ತಿದ್ದೆ. ಪಣಂಬೂರಿನ ಬಂದರು ದಾಟಿದರೆ ಮೂಲ್ಕಿಯಲ್ಲಿ ಮಾತ್ರ ಅಡಚಣೆ. ನಂದಿನಿ ಶಾಂಬವಿ ನದಿಗಳು ಜತೆಯಾಗಿ ಸಮುದ್ರ ಸೇರುವ ಮೂಲ್ಕಿ ಅಳಿವೆ ಬಾಗಿಲನ್ನು ದೋಣಿಯಲ್ಲಿ ದಾಟಲು ಸಾದ್ಯವಾದರೆ ಮುಂದೆ ಮಲ್ಪೆ ವರೆಗೆ ತೊಂದರೆಯಿಲ್ಲ     ಸುಮಾರು ಐವತ್ತು ಕಿಲೋಮೀಟರ್  ಸವಾರಿಗೆ  ಸಿಗುತ್ತದೆ.  ಹೆದ್ದಾರಿಯಲ್ಲಿ ನಮಗೆ ಸಿಗುವ ಹಲವು ನದಿಗಳು ಜತೆ ಸೇರಿ ಮೂಲ್ಕಿ ಮಲ್ಪೆಯಲ್ಲಿ ಸಮುದ್ರ ಸೇರುತ್ತದೆ. ಹಾಗಾದರೆ ಈ ತೀರದಲ್ಲಿ ಮಕ್ಕಳೊಂದಿಗೆ ಹೋದರೆ ಎಂದು ಕನಸು ಕಟ್ಟಲು ಪ್ರಾರಂಬ. ದೈಹಿಕವಾಗಿ ದುರ್ಬಲನಾದ ನನಗೆ ಪಕ್ಕದ ಮನೆಯ ಅನಿಲ್ ಕುಮಾರ್ ಮೇಲುಸ್ತುವಾರಿಯಾಗಿ ಬಂದರೆ ಸಹಾಯವಾದೀತು ಎಂದು ಅಲೋಚಿಸಿದೆ. .

ನಮ್ಮಲ್ಲಿ ಇಂತಹ ಪ್ರಯಾಣಗಳ ರೂಪಿಸುವುದು ಸುಲಭವಲ್ಲ. ಇದೊಂದು ಸವೆಯದ ದಾರಿ. ಅದುದರಿಂದ ಜಾಗ್ರತೆಯಿಂದ ಮುಟ್ಟಿಮುಟ್ಟಿ ಸಾಗಬೇಕಾಯಿತು. ಗಡಿ ಪ್ರದೇಶದಿಂದ ಹಾಗೂ ಕಡಲತೀರದಿಂದ ಇನ್ನೂರು ಕಿಮಿ ವರೆಗೆ ನಿರ್ಬಂದಿತ ಪ್ರದೇಶವೆಂದು ಪರಿಗಣನೆ. ಇತ್ತೀಚಿನ ವರೆಗೆ ಭೂಪಟ ಸಂಪಾದಿಸುವುದು ಸಾಹಸದ ವಿಚಾರವಾಗಿತ್ತು. ಆರೋಹಣ ಪರ್ವತಾರೋಹಿಗಳ ತಂಡಕ್ಕಾಗಿ ಅಶೋಕವರ್ಧನರು   ಒಂದು ಸರಕಾರಿ ಭೂಪಟ ಪಡಕೊಳ್ಳಲು ಮಾಡಿದ ಪ್ರಯತ್ನಗಳು ದಾಖಲಾರ್ಹ. ಈಗ ಆಕಾಶ ಚಿತ್ರ ಲಬ್ಯವಾಗುವ ಕಾರಣ ಪರವಾಗಿಲ್ಲ.

ಈ ಪ್ರವಾಸಕ್ಕೆ ಅಡಿಪಾಯ ಹಾಕಲು ಘಂಟೆಗಟ್ಟಲೆ ಕಂಪ್ಯುಟರ್ ಮುಂದೆ ವಿಕಿಮಾಪಿಯ ನೋಡುತ್ತಾ ಕೂತಿದ್ದೇನೆ. ಕ್ರಮ ಬದ್ದವಾಗಿ ಕೆಲಸ ಮಾಡಲು ಚಿತ್ರಗಳಿಗೆ ಕ್ರಮಾಂಕ ಕೊಡುವುದರಲ್ಲಿ ಜಾಗ್ರತೆ ಬೇಕು. ನಡುವೆ ಅಂತರ ಉಳಿಯದಂತೆ ಒಂದರ ಕೊನೆಯಿಂದ ಮತ್ತೊಂದರ ಪ್ರಾರಂಬ ಅನ್ನುವಂತೆ ವ್ಯವಸ್ತೆಗೊಳಿಸಿದೆ. ಮೊದಲು ಗೂಗಲ್ ಭೂಪಟಕ್ಕೆ ಒಂದು ಎರಡು ಎಂದು ಕ್ರಮಾಂಕ ಕೊಟ್ಟೆ. ಕಂಪ್ಯುಟರ್ ಗುರುತಿಸುವಾಗ 1,10,11,12,13,....19,2,20,21,22.... ಎನ್ನುವಂತಹ ಸಮಸ್ಯೆ ಎದುರಾಯಿತು. ಅಲ್ಲಿ ಎರಡು ಬಾರಿ ಎಡವಿದ ನಂತರ ಕೊನೆಗೆ ಸ್ಥಳದ ಅಕ್ಷಾಂಶವ ಅನುಸರಿಸಿ ಉದಾಹರಣೆಗೆ ಅಕ್ಷಾಂಶ ೧೩.೩೪೫೬ ದ ನಕ್ಷೆಗೆ ೧೩೩೪೫೬ ಎಂಬ ಸಂಖ್ಯೆ ಕೊಟ್ಟ ನಂತರ ಕೆಲಸ ಸಲೀಸು. ಈ ಪ್ರವಾಸಕ್ಕಾಗಿ ನೂರಾರು ಚಿತ್ರಗಳ ನಕಲು ಮಾಡಿಕೊಂಡಿದ್ದೇನೆ.

ಎಲ್ಲೆಲ್ಲಿ ಕಡಲತೀರದಲ್ಲಿ ರಸ್ತೆ ಉಂಟು ಎನ್ನುವುದನ್ನು ಗುರುತಿಸುವುದು ಮುಂದಿನ ಹೆಜ್ಜೆ. ಅನುಭವ ಕೊರತೆಯಿಂದಾಗಿ ಮಕ್ಕಳನ್ನು ಒಬ್ಬಂಟಿಯಾಗಿ ಬಹು ದೂರ ಕಳಿಸುವಂತಿರಲಿಲ್ಲ. ಕಡಲ ತೀರದಲ್ಲಿಯೇ ರಸ್ತೆ ಇದ್ದರೆ ಚಿಕ್ಕವ ಸುನಿಲ ಸ್ವಲ್ಪ ದೂರವಾದರೆ ದೊಡ್ಡವ ಅನಿಲ ಎಂದು ತೀರ್ಮಾನಿಸಿದೆ. ಜತೆಯಲ್ಲಿ ಸಾಗುವ ಸಹಾಯಕ ವಾಹನ ಒಮ್ನಿಯನ್ನು ಆತ್ಮೀಯರಾದ ಅನಿಲ್ ಕುಮಾರ ಓಡಿಸುವುದಕ್ಕೆ ಒಪ್ಪಿದ ಕಾರಣ ನನಗೆ   ಯೋಜನೆ ರೂಪಿಸಲು ಸಹಾಯವಾಯಿತು.




ಇಂತಹ ಪ್ರವಾಸಕ್ಕೆ GPS ಸಲಕರಣೆ ಬಹಳ ಉಪಕಾರಿ. ಈ ಬಗೆಗೆ ವರುಷದ ಹಿಂದೆ ಬ್ಲೋಗ್ ಬರಹ ಬರೆದಿದ್ದೆ.  ಜಿಪಿಎಸ್
ಉಪಯೋಗಿಸುತ್ತಿರುವ ಶಿರಸಿಯ ಬಾಲು ಹೆಗ್ಡೆಯವರಲ್ಲಿ ಇ-ಪತ್ರ ಮೂಲಕ ವಿಚಾರಿಸಿದೆ. ಹೊರದೇಶದಲ್ಲಿದ್ದ ಅವರು ತಕ್ಷಣ ಉತ್ತರಿಸಿದರೂ ಬೆಂಗಳೂರಿನಿಂದ ತರಿಸುವುದು ಸುಲಭವಲ್ಲ ಮತ್ತು ಒಂದು ಮಳೆಗೆ ಒಂದು ಕೊಡೆ ಕೊಂಡಂತಾಗುವುದೋ ಎನ್ನುವ ಗೊಂದಲದಲ್ಲಿ ಈ ಪ್ರವಾಸದ ಮಟ್ಟಿಗೆ ಅದರ ಆಸೆ ಬಿಟ್ಟೆ. ಅರ್ಥಹೀನ ತೇರಿಗೆಯಿಂದಾಗಿ ನಮಗೆ ತೀರಾ ದುಬಾರಿಯೆನಿಸುವ ಉಪಕರಣ.  ಗುಜರಾತಿನಲ್ಲಿ ಕಳೆದ ವರ್ಷ ಇಬ್ಬರು ಜಿಪಿಎಸ್ ಉಪಯೋಗಿಸಿ ನಮ್ಮ ಅರ್ಥಹೀನ ಕಾನೂನುಗಳಿಗೆ ಸಿಲುಕಿ ಜೈಲುವಾಸ ಅನುಬವಿಸಿದ್ದಾರೆ.  

ಮೂಲ್ಕಿಯಲ್ಲಿ ಹೊಳೆ ದಾಟಲು ಸಾದ್ಯವಾಗುವುದಾದರೆ ಪಣಂಬೂರಿನಿಂದ ಇಲ್ಲವಾದರೆ ಪ್ರಾರಂಬ ಬಪ್ಪನಾಡಿನಲ್ಲಿ ಹೊಳೆಯ ಆಚೆ ಕಡೆಯಿಂದ ಎಂದು ನಿರ್ದರಿಸಿದ್ದೆ. ಸದಾಸಂ ಎರಡು ಬಾರಿ ವ್ಯಾನಿಗೆ ಹಾಕಿ ತೆಗೆಯುವುದು ಶ್ರಮದಾಯಕ. ನಾನು ದೈಹಿಕವಾಗಿ ದುರ್ಬಲನಾದುದರಿಂದ ನನಗೆ ಈ ಹೆಚ್ಚಿನ ಶ್ರಮದಾಯಕ ಕೆಲಸ ಎಳೆದು ಹಾಕಿಕೊಳ್ಳಲು ಆಸಕ್ತಿ ಇರಲಿಲ್ಲ.

ಹೊಳೆದಾಟುವ ಬಗ್ಗೆ ವಿಚಾರಿಸುತ್ತಿರುವಾಗ ಅಶೋಕವರ್ಧನರು ರೋಹಿತ್ ರಾವ್ ಅವರ ಸಂಚಾರವಾಣಿ ಸಂಖ್ಯೆ ಕೊಟ್ಟು ಅವರಲ್ಲಿ ವಿಚಾರಿಸು ಎಂದರು. ರೋಹಿತರು ಎರಡು ಬಾರಿ ನೂರ ಐವತ್ತಕ್ಕೂ ಮಿಕ್ಕಿ ಸ್ಕೌಟ್ ಮಕ್ಕಳ ಸೈನ್ಯವನ್ನು ಮಂಗಳೂರಿನಿಂದ ಮಲ್ಪೆ ತನಕ ಕಾಲ್ನಡುಗೆಯಲ್ಲಿ ಮುನ್ನಡೆಸಿದ ಅನುಭವ ಇರುವಂತಹವರು. ಬೇಟಿಯಾದಾಗ ರೊಹಿತ್ ಅವರು ಸಹಕರಿಸಲು ಒಪ್ಪಿಕೊಂಡರು ಮಾತ್ರವಲ್ಲ ಅಂದು ಕೆಮರ ಹಾಗೂ ಜಿಪಿಎಸ್ ಸಮೇತ ಹಾಜರಿರುತ್ತೇನೆ ಅಂದರು.

ಮೊದಲು ಈ ಪ್ರವಾಸದ ವಿಚಾರ ಹೆಚ್ಚು ಗೆಳೆಯರಲ್ಲಿ ಹಂಚಿಕೊಳ್ಳಲಿಲ್ಲ. ಸಿಮಿತ ಆರೊಗ್ಯದ ಕಾರಣ ನನಗೆ ಗಮನವಿಟ್ಟು ಕಾರ್ಯ ನಿರ್ವಹಿಸಲು ಬಹಳ ಕಷ್ಟವಾಗುತ್ತದೆ. ಅದುದರಿಂದ ಜನರ ಸಂತೆಯಲ್ಲಿ ಗಮನ ಕೈಕೊಡುವುದರ ಇಷ್ಟಪಡುವುದಿಲ್ಲ. ಯಂತ್ರ ಹಾಗೂ ಮಕ್ಕಳ ಮೇಲೆ ಸಂಪೂರ್ಣ ಗಮನವಿಡಲು ನನ್ನ ತಯಾರಿ ಕೆಲವರಿಗೆ ಮಾತ್ರ ತಿಳಿಸಿದ್ದೆ.

ಸಮುದ್ರತೀರದಲ್ಲಿ ಸವಾರಿ ಮಾಡುವಾಗ ತೆರೆಗಳು ತೇವಗೊಳಿಸಿದ ಮರಳಿನಲ್ಲಿ ಸವಾರಿ ಉತ್ತಮ. ಅಲ್ಲಿ ಚಕ್ರಕ್ಕೆ ಗಟ್ಟಿ ತಳ ಸಿಕ್ಕುವ ಕಾರಣ ಸವಾರಿ ಸುಲಭ ಹಾಗೂ ವೇಗವಾಗಿ ಸಾಗಬಹುದು. ಇಂದನ ಖರ್ಚು ಕಡಿಮೆ. ಒದ್ದೆ ಮರಳಿನಲ್ಲಿ ಸವಾರಿ ಸುಲಭ ಎನ್ನುವುದು ಎಲ್ಲಾ ಸಮುದ್ರ ತೀರದಲ್ಲಿ ಸೈಕಲಿಸಿದವರಿಗೂ ತಿಳಿದ ವಿಚಾರ. ಆದರೆ ನಿರಂತರವಾಗಿ ತೆರೆಗಳ ಮೇಲೆ ವಾರೆ ಕಣ್ಣಿಡುತ್ತಾ ಇರಬೇಕಾಗುತ್ತದೆ. ನನ್ನ ತಯಾರಿ ಎಂದರೆ ಸಾದ್ಯವಾದಷ್ಟು comprehensive ಆಗಿ ಚಿಂತಿಸುತ್ತೇನೆ. ಹಾಗೆ ಮಕ್ಕಳಿಗೆ ರಕ್ಷಣಾ ಕವಚ life jacket ಬೇಕಾ ? ಎನ್ನುವ ಪ್ರಶ್ನೆ ಉಂಟಾಗಿತ್ತು. ಬೇಡ, ಅಗತ್ಯವಿಲ್ಲ ಎಂದರು ರೋಹಿತ್. ಈ ತೆರೆಗಳ ಮೇಲೆ ಕಣ್ಣಿಡುವ ವಿಚಾರದಲ್ಲಿ ಕೊನೆ ಹಂತದಲ್ಲಿ ಸೋತವನು ನಾನೇ.

ಸದಾಸಂ ಚೈನಿಗೆ ಕಳೆದ ಸಲ ಕಡಲ ತೀರಕ್ಕೆ ಹೋಗಿ ಬಂದ ನಂತರ ಶಂಕರಣ್ಣನ ಕಾರ್ ವೀಲ್ಸ್ ನಲ್ಲಿ ಡೀಸಲ್ ಸ್ನಾನ ಮಾಡಿಸಿ ಅನಂತರ ಒತ್ತಡದ ಗಾಳಿ ಹಿಡಿದು ಒಣಗಿಸಿದ್ದೆವು. ಈ ಸಲ ಹೋಗುವ ಮೊದಲು ಏನು ಮಾಡಲಿ ಎಂದಾಗ ಎಣ್ಣೆ ಲೇಪನೆ ಬೇಡ ಎಂದರು ಶಂಕರಣ್ಣ. ಅದನ್ನು ಬಿಗಿ ಪಡಿಸುವ ಬಗೆಗೆ ಮೋಹನರಲ್ಲಿ ಮಾತನಾಡುವಾಗ ಸದ್ಯಕ್ಕೆ ಹೀಗೆ ಇರಲಿ, ಮರಳು ಸಂದಿನಲ್ಲಿ ಸೇರಿ ಬಿಗಿಯಾಗಬಹುದು ಎಂದವರು ಹೇಳಿದರು. ದಂಡಯಾತ್ರೆ ಮರುದಿನ ಸದಾಸಂ ಚಕ್ರಗಳನ್ನು ಎತ್ತಿ ನೋಡುವಾಗ ಚೈನ್ ಬಹಳ ಬಿಗಿಯಾದದ್ದು ಕಂಡು ಬಂತು. ಮೊದಲು ಹೆಚ್ಚು ಬಿಗಿಪಡಿಸಿದ್ದರೆ ತುಂಡಾಗುವ ಸಾದ್ಯತೆ ಇದ್ದಿರಬಹುದು.

ಪ್ರವಾಸಕ್ಕೆ ದಿನ ನಿಶ್ಚಯಿಸುವಾಗ ಮರುದಿನ ಮಕ್ಕಳಿಗೆ ರಜೆ ಇರಬೇಕು ಎಂದು ತೀರ್ಮಾನಿಸಿದ್ದೆ. ಹಾಗೆ ೨೮ರ ಬಕ್ರಿದ್ ರಜಾ ದಿನ ಹೋದರೆ ಮರುದಿನ ರವಿವಾರ ಮಕ್ಕಳಿಗೆ  ಶಾಲೆಗೆ ರಜೆ ಮಾಡದೆ   ಸುದಾರಿಸಿಕೊಳ್ಳಲು ಸಾದ್ಯವೆಂದು ಆಲೋಚನೆಯಾಗಿತ್ತು. ಮುಸ್ಲಿಮರ ಹಬ್ಬದ ರಜೆ ಯಾವತ್ತೂ ಅನಿಶ್ಚಿತ. ಚಂದ್ರ ಕಾಣಬೇಕು....... ಈ ಮದ್ಯೆ ಅಶೋಕವರ್ಧನರು ಒಂದು ಕಾರ್ಯಕ್ರಮದ ಸುಳಿವು ಕೊಟ್ಟಾಗ ನಮ್ಮ ಪ್ರವಾಸ ಹಿಂದೂಡಲ್ಪಟ್ಟಿತು. ೨೨ರಂದು ಹೋಗಿ ಬಂದರೆ ಮರುದಿನ ಮಕ್ಕಳಿಗೆ ಷಷ್ಠಿ ರಜೆ ಇತ್ತು  ಅನ್ನುವ ಕಾರಣದಿಂದ  ೨೨ ರವಿವಾರದಂದೇ  ಹೊರಟೆವು.   ಕೊನೆಗೆ ಬಕ್ರಿದ್ ಲೆಕ್ಕದ ಮಕ್ಕಳ ರಜೆಯೂ ಒಂದು ದಿನ ಹಿಂದೂಡಲ್ಪಟ್ಟು ಅಕಸ್ಮಾತ್ ನಾವು ೨೮ ರಂದು ನಿಗದಿ ಪಡಿಸಿದ್ದರೆ ಸಮಯ ಹೊಂದಾಣಿಕೆಯಾಗದೆ ರದ್ದಾಗುವ ಸಾದ್ಯತೆ ಇತ್ತು.

ರೋಹಿತ್ ಅವರು ಬೆಳಗ್ಗೆ ಬೇಗ ಪ್ರಾರಂಬಿಸುವ ಅನಿವಾರ್ಯತೆ ಒತ್ತಿ ಹೇಳಿದ್ದರು. ಬಿಸಿಲಿನ ಹೊಡೆತಕ್ಕೆ ನಾವು ತತ್ತರಿಸುವ ಕಾರಣ ಬಿಸಿಲೇರುವ ಮೊದಲೇ ಸುರುಮಾಡುವುದು ಮಾತ್ರವಲ್ಲ ಸಾಕಷ್ಟು ಕ್ರಮಿಸ ಬೇಕು ಎಂದಿದ್ದರು. ಹಾಗೆ ಬೆಳಗ್ಗೆ ನಾಲ್ಕು ಮುಕ್ಕಾಲಿಗೆ ಮನೆಯಿಂದ ಹೊರಟೆವು. ನೇರ ಮಂಗಳೂರಿನ ದಾರಿ ಹೊಂಡಗುಂಡಿ ತುಂಬಿದ ಕಾರಣ ಹತ್ತು ಕಿಮಿ ಹೆಚ್ಚಿನ ಮುಡಿಪು ಮೂಲಕದ ಬಳಸು ದಾರಿಯಲ್ಲಿ ಸಾಗಿದೆವು. ನಮ್ಮಲ್ಲಿಂದ ಸುಮಾರು ಅರುವತ್ತು ಕಿಮಿ ದೂರದ ಕೂಳೂರು ಮುಟ್ಟಿ ರೋಹಿತರಿಗೆ ಸಂದೇಶ ಕಳುಹಿಸಿದೆ. ಈಗ  ಹೋಟೇಲಿನಲ್ಲಿದ್ದೇವೆ. ಇಪ್ಪತ್ತು ನಿಮಿಷದಲ್ಲಿ ಕಡಲ ತೀರದಲ್ಲಿರುತ್ತೇವೆ.

ನನಗೆ ರೋಹಿತರು ಬರುವ ಮೊದಲೇ ಸದಾಸಂ ಇಳಿಸಿ ಚಾಲನೆ ಮಾಡುವ ತವಕ. ಸ್ವಲ್ಪ diversion ಇದ್ದರೂ ನನ್ನ ಏಕಾಗ್ರತೆ ಬಂಗವಾಗುವ ಕಾರಣ  ಅವರೆಲ್ಲ ಸೇರುವ ಮೊದಲೇ   ಸಂಪೂರ್ಣ ಗಮನವಿಟ್ಟು ಸದಾಸಂ ಪ್ರಯಾಣಕ್ಕೆ ಅಣಿಗೊಳಿಸುವುದು  ಉತ್ತಮ ಅಂದುಕೊಂಡಿದ್ದೆ. ಪಣಂಬೂರು ಕಡಲತೀರದ ವಾಹನ   ನಿಲುಗಡೆ ಪ್ರದೇಶದಲ್ಲಿ ಇದನ್ನು ಇಳಿಸಿದೆವು.

ಹಿಂದಿನ ಸಂಜೆ ವಾಹನಕ್ಕೆ ಏರಿಸುವ ಮೊದಲು ಸ್ವಲ್ಪ ನೀರು ಹಾಕಿ ತೊಳೆದದ್ದು ಸಮಸ್ಯೆ ಉಂಟುಮಾಡಿತು. ಚಾಲನೆ ಸಾದ್ಯವಾದರೂ ಎಂಜಿನ್ ತುಂಬಾ ಎಗರಾಡುತಿತ್ತು. ರೋಹಿತರ ಗೆಳೆಯ ನಿಬಿಶರು ತಂತ್ರಜ್ನರ ಸಂಪರ್ಕಿಸಿದರು. ಅವರು ಬಂದವರೇ ಎರಡೇ ನಿಮಿಷದಲ್ಲಿ CD Unit ತೊಂದರೆ ಎಂದರು. ನಾನು ಹಿಡಿದುಕೊಂಡು ಹೋದ ಬಿಡಿಬಾಗಗಳಲ್ಲಿ ಇದು ಸಹಾ ಇದ್ದ ಕಾರಣ ತಕ್ಷಣ ಬದಲಾಯಿಸಿ ಸಮಸ್ಯೆ ಪರಿಹರಿಸಿಕೊಂಡೆವು. ತಂತ್ರಜ್ನರು ಶುಲ್ಕ ಪಡಕೊಳ್ಳಲು ಒಪ್ಪದೆ ತಮ್ಮ ಬುಲ್ಲೆಟ್ ಹತ್ತಿ ಹೊರಟುಹೋದರು.



Sunday, November 15, 2009

ಕುರಾಮನ ರಾಮನಗರದಲ್ಲಿ ಕೈ ಸಾಲ ವಿರುದ್ದ ಫತ್ವಾ

ಸರಕಾರ ಜನರಿಗೆ ಹೆಚ್ಚೆಚ್ಚು ಸಾಲ ಲಬ್ಯವಾಗಲು ಪ್ರಯತ್ನಿಸುತ್ತಿದೆ. ಸಾಚಾರ ಕಮಿಟಿ ಮುಸ್ಲೀಮರಿಗೆ ಸಿಗುತ್ತಿರುವ ಬಾಂಕ್ ಸಾಲದ ಪ್ರಮಾಣ  ಬಹಳ ಕಡಿಮೆ   ಎಂದು ಅಬಿಪ್ರಾಯ ಪಟ್ಟಿದೆ. ಸಾಲ ಸಿಗುವುದು ಕಷ್ಟ ಎಂದು ಹೇಳುತ್ತಿರುವ ಮುಸ್ಲಿಂ ಸಮಾಜದ ಸಂಸ್ಥೆಯೊಂದು ಬಸ್ಮಾಸುರನಾಗಲು ಹೊರಟಿದೆ. ಕುರಾಮಸ್ವಾಮಿಯ ರಾಮನಗರದಲ್ಲಿ ಅಂಜುಮಾನ್ ಮುಸ್ಲೀಮರ ಸಾಲಪಡಕೊಳ್ಳುವ ಸಾದ್ಯತೆಗೆ ಅಡ್ಡಕಾಲು ಹಾಕುತ್ತಿದೆ.

ಅಂಜುಮಾನಿಗೆ ಬಡ್ಡಿ ವ್ಯವಹಾರ ಇಸ್ಲಾಂ ತತ್ವಗಳಿಗೆ ವಿರೋಧ ಎನ್ನುವುದು ಎಚ್ಚರವಾದುದು ಇತ್ತೀಚೆಗೆ. ಎಂಟು ವರ್ಷಗಳಿಂದ ರಾಮನಗರದಲ್ಲಿ ಕಾರ್ಯಾಚಿಸುತ್ತಿಎರುವ ಬಿಎಸ್ಎಸ್ ಕಿರುಸಾಲ ಸಂಸ್ಥೆಗೆ ಈಗ ಹಣದ ಒಳಹರಿವು ನಿಂತಿದೆ. ಈ ಅಂಜುಮಾನ್ ಪದಾದಿಕಾರಿಗಳೆಲ್ಲ ಗಂಡಸರಾಗಿದ್ದು ಕಿರುಸಾಲ ಪಡಕೊಳ್ಳುವವರು ಹೆಚ್ಚಿನವರು ಹೆಂಗಸರು. ಸ್ವಾಬಾವಿಕವಾಗಿ ಹೆಂಗಸರ ಸ್ವಾವಲಂಬನೆ ಚಿಂತನೆ ಗಂಡಸರಿಗೆ ರುಚಿಸುತ್ತಿಲ್ಲ. ಅದುದರಿಂದ ಸಾಲ ಮರುಪಾವತಿ ಮಾಡಬೇಡಿ ಎಂದು ಒತ್ತಡ ಹಾಕುತ್ತಿದೆ. ಗುಂಡಾಗಿರಿಯೂ ನಡೆಯುತ್ತಿದೆ.

ಈ ಕಿರುಸಾಲದ ಕಲ್ಪನೆ ಹುಟ್ಟು ಹಾಕಿದ್ದು ಬಾಂಗ್ಲ ದೇಶದ ಮಹಮದ್ ಯುನುಸ್ ಎನ್ನುವ ಕಾಲೇಜು ಮೇಷ್ಟ್ರು. ಕಳೆದ ವರ್ಷ ಸರಕಾರದ ಸಾಲ ಮುನ್ನಾ ಸುದ್ದಿ ಕೇಳಿದ ಮಹಮದ್ ಯುನುಸ್ ಬಡವರಿಗೆ ಸಾಲ ಹಿಂತಿರುಗಿಸಲು ಹಣವಿಲ್ಲವಾದರೆ   ಸರಕಾರ  ಹಣ ಕೊಡಲಿ. ಸಾಲ ಮುನ್ನಾ ಕೆಟ್ಟ ಸಂಪ್ರದಾಯವಾಗುತ್ತದೆ ಎಂದು ಯುನುಸ್ ಹೇಳಿದ್ದರು.

ಈ ಸಾಲ ಮರುಪಾವತಿ ನಿಲ್ಲಲು ಆರ್ಥಿಕ ಹಿನ್ನೆಡೆ ಕಾರಣವಲ್ಲ. ಕ್ರೈಸ್ತ ಹಾಗೂ ಹಿಂದು ಸಮಾಜದವರು ಮರುಪಾವತಿ ಮಾಡುತ್ತಿದ್ದಾರೆ.  ಜಾತ್ಯಾತೀತ ರಾಜಕಾರಣಿಗಳೂ ಬುದ್ದಿಜೀವಿಗಳೂ ಈಗ ಸುಮ್ಮನಿರುವುದು ಆಶ್ಚರ್ಯ ಉಂಟುಮಾಡುತ್ತದೆ. ಸಮಾಜದ ಬಡ ಜನರ ಹಿತರಕ್ಷಣೆ ಮಾಡುತ್ತದೆ ಎನ್ನುವ ಅಂಜುಮಾನಿನ ಬೋಗಸ್ ನಿಲುವಿನ   ವಿರುದ್ದ   ಶಾಬನ  ಅಜ್ಮಿಯಂತಹವರಾದರೂ  ಸ್ವರ ಎತ್ತಬೇಕಾಗಿತ್ತು. ಮತ ಬಾಂಕ್ ಎನಿಸಿಕೊಂಡ ಮುಸ್ಲಿಮರಿಗೆ ಬೇಸರವಾದರೆ ? ಎಂದು ಎಲ್ಲರೂ ಸುಮ್ಮನಿರುವಂತಿದೆ.

ಅಂಕಣಕಾರ ಸ್ವಾಮಿನಾಥನ್ ಅಯ್ಯರ್ ಈ ಬಗೆಗೆ ಕಳೆದ ವಾರ ಬರೆದಾಗ ಸಂಬಂದ ಪಟ್ಟವರು ಎಚ್ಚೆತ್ತುಕೊಂಡಾರು ಎಂದು ಬಾವಿಸಿದ್ದೆ. ಆದರೆ ಈ ಮರುಪಾವತಿ ಮಾಡದ ಸೀಕು ರಾಜ್ಯಾದ್ಯಂತ ದೇಶಾದ್ಯಂತ ಹಬ್ಬುವ ಲಕ್ಷಣವೇ ದಟ್ಟವಾಗಿದ್ದು ಕಿರುಸಾಲಕ್ಕೆ ಮುಸ್ಲಿಂ ಮಹಿಳೆಯರು ಅನರ್ಹರಾಗುವಂತೆ ಕಾಣುತ್ತದೆ.

Tuesday, November 10, 2009

ಐವರು ಮೊಟರ್ ಸೈಕಲಿನಲ್ಲಿ ಅರುಣಾಚಲ ಪ್ರದೇಶಕ್ಕೆ

 

ಮೊನ್ನೆ ಅಂತರ್ಜಾಲದಲ್ಲಿ ಅರುಣಾಚಲ ಪ್ರದೇಶದಲ್ಲಿ ಮೋಟರ್ ಸೈಕಲ್ ಪ್ರವಾಸದ ಬಗೆಗೆ ಅಮೇರಿಕದಲ್ಲಿ ವಿಡಿಯೋ ಪ್ರದರ್ಶನ ಎಂದು ಸುಳಿವು ಕಂಡು ಆಶ್ಚರ್ಯ ಸಂತಸ ಎರಡೂ ಆಯಿತು. ಅಪರಿಚಿತ ಊರುಗಳಲ್ಲಿ ದೀರ್ಘ ಪ್ರವಾಸ ಎಂದರೆ ನಾವು ಬಹಳಷ್ಟು ತಯಾರಿ ಮಾಡಬೇಕಾಗುತ್ತದೆ. ರಸ್ತೆ ಇಲ್ಲದ ಪ್ರದೇಶದಲ್ಲಿ ಬೆಂಗಾವಲು ವಾಹನ ಇಲ್ಲದ ಕನಿಷ್ಟ ತಯಾರಿಯೊಂದಿಗೆ ಸಂದರ್ಭಕ್ಕೆ ಒಗ್ಗಿಕೊಳ್ಳುವ ಕಥೆ ಊಹನೆಯಲ್ಲಿಯೇ ತುಂಬಾ ಕುಶಿ ಕೊಡುತ್ತದೆ. ನನ್ನ ಪ್ರವಾಸವೂ ಇದೇ ದೋರಣೆಯಲ್ಲಿ ಸಾಗಿತ್ತು.

ಒಮ್ಮೆ ಏಕಾಂಗಿಯಾಗಿ ಲಡಾಕಿಗೆ ಮತ್ತು ಐದು ಜನರ ಪಟಲಾಂ ಕಟ್ಟಿಕೊಂಡು ಅರುಣಾಚಲ ಪ್ರದೇಶದಲ್ಲಿ ರಸ್ತೆಯೇ ಇಲ್ಲದ ಪ್ರದೇಶಗಳಲ್ಲಿ ಮೊಟರ್ ಸೈಕಲ್ ಪ್ರವಾಸ ಮಾಡಿದ ತುಣುಕುಗಳು ಇಲ್ಲಿವೆ.   ಹಿಂದೆ ಪ್ರವಾಸ ಮಾಡಿದವರ ಕಥೆಗಳು ಓದುವಾಗ ನಮಗೆ ಎದುರಾಗಬಹುದಾದ ಸನ್ನಿವೇಶಗಳ ಸುಳಿವು ಕೊಡುತ್ತದೆ. ನಮ್ಮ ಸಮಾಜದಲ್ಲಿ ಬಿನ್ನ ಹಾದಿಯಲ್ಲಿ ನಡೆಯುವ ಚಿಂತನೆಯೇ ಬಹಳ ಕಡಿಮೆ. ಹಲವು ನನ್ನ ಪ್ರಾಯದವರು ಆರಾಮ ಕುರ್ಚಿಯ ಪ್ರವಾಸದಲ್ಲಿಯೇ ತೃಪ್ತರಾಗಿದ್ದರು. ನಾನು ಇಂದಿಗೂ ಇಂತಹ ಕಥೆಗಳ ಇಷ್ಟಪಡುತ್ತೇನೆ.




ನಮ್ಮಲ್ಲಿ ಕಾಶ್ಮೀರಕ್ಕೆ ಮೊಟರ್ ಸೈಕಲಿನಲ್ಲಿ ಹೋಗಿ ಬಂದವರು ಬಹಳ ಜನ ಇದ್ದಾರೆ. ಲಡಾಕಿನಲ್ಲಿ ಪ್ರಪಂಚದ ಅತ್ಯಂತ ಎತ್ತರದ ದಾರಿ ಎನ್ನುವ ಫಲಕದ ಎದುರು ಪೋಟೊ ತೆಗೆದುಕೊಳ್ಳುವುದು ನಮ್ಮವರ ಅತಿ ಮುಖ್ಯ ಗುರಿಯಾಗಿತ್ತು. ಆದರೆ ಈ ವ್ಯಕ್ತಿ ಒಬ್ಬಂಟಿಯಾಗಿ ಹೆಣ ಬಾರದ ಕೆಮರಾ ಹೊತ್ತುಕೊಂಡು ಹೋಗಿ ತಂದ ಚಿತ್ರಗಳು ಅದ್ಬುತವಾಗಿವೆ. ಎಲ್ಲವೂ ಅವರೇ ಆದಾಗ ಶುದ್ದ ಮರಕೋತಿಯಾಟ ನಡೆಯುತ್ತದೆ. ಕೆಮರವನ್ನು ಇಟ್ಟು ಹಿಂದಕ್ಕೆ ಹೋಗಿ ಅದರ ಎದುರು ಸವಾರಿ ಮಾಡಿ ಪುನಹ ಹೋಗಿ ಕೆಮರ ಹಿಡಿದುಕೊಂಡು ಬರಬೇಕು.  ಇವರ ಡೇರೆ ಬಿಡಿಸುವುದು ಮಡಚವುದು ನೋಡುವಾಗ ನನಗೆ ನನ್ನ ಪ್ರವಾಸದ ನೆನಪಾಗುತ್ತದೆ. ಇದೊಂದು ಡಿವಿಡಿ ಜಾಹಿರಾತು ಆದರೂ ಕೆಲವು ಚಿತ್ರಗಳು ತುಂಬಾ ಚೆನ್ನಾಗಿವೆ. ಹಲವು ಪ್ರಶಸ್ತಿಗಳನ್ನು ಈ ವಿಡಿಯೋ ಗಿಟ್ಟಿಸಿಕೊಂಡಿದೆ.

Thursday, November 05, 2009

ರಾಮಜ್ಜನ ಉಯಿಲು ಎನ್ನುವ ವಿಡಿಯೋ ಪ್ರಸಂಗ

ದೆಹಲಿ ಉಚ್ಚ ನ್ಯಾಯಾಲಯ ಕಳೆದ ತಿಂಗಳು ವಿಡಿಯೋಕೃತ ಉಳಿಲು ಕಾನೂನುಬದ್ದ ಎಂದು ತೀರ್ಪು ಕೊಟ್ಟಿದೆ. ಅಕ್ಷರಗಳಲ್ಲಿ ಸ್ಫಷ್ಟವಾಗಿ ಬರೆದರೂ ಶ್ರೀಯುತರು ಸತ್ತ ನಂತರ ಸಾವಿರ ಸಂಶಯಗಳು ಮೇಲೇಳುತ್ತವೆ. ಇದು ಇನ್ನೂ ಹೆಚ್ಚು ಸ್ಪಷ್ಟ. ಇದರಿಂದ ನಮ್ಮಲ್ಲಿಗೆ ಹಲವು ತಕರಾರು ಬರುವುದು ತಪ್ಪಬಹುದು ಎಂದು ನ್ಯಾಯಾಲಯ ಅಬಿಪ್ರಾಯ ಪಟ್ಟಿದೆ. ಉಳ್ಳವರಿಗೆ ಇದೊಂದು ಹೊಸ ಅದ್ಬುತವಾದ ಅವಕಾಶ. ಸಹಸ್ರ ಚಂದ್ರ ದರ್ಶನ ಷಷ್ಟಿ ಪೂರ್ತಿ ಕಾರ್ಯಕ್ರಮ ಇತ್ಯಾದಿಗಳಿಗೆ  ಹೊಸತಾಗಿ  ಸೆರ್ಪಡೆಯಾಗ ಬಹುದಾದ ಆಡಂಬರದ ಕಾರ್ಯಕ್ರಮ ಉಳಿಲು ಓದುವುದು. ಇಂತಹ  ಕಾರ್ಯಕ್ರಮಗಳ ಕೊರತೆ  ಇದೆ  ಎನ್ನುವುದು ಕೆಲವರ ಅಬಿಪ್ರಾಯ.  

ಅಜ್ಜಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ಅಜ್ಜ ಉಯಿಲು ಓದುವ ಕಾರ್ಯಕ್ರಮಕ್ಕೆ ಮಕ್ಕಳು ಮೊಮ್ಮಕ್ಕಳನ್ನೆಲ್ಲ ಪರ ಊರಿಂದ ಪರದೇಶಗಳೀಂದ ಕರೆಸಬಹುದು. ದುಡ್ಡೇ ದೊಡ್ಡಪ್ಪ ಅನ್ನುವ ಈ ಕಾಲದಲ್ಲಿ ಎಲ್ಲರಿಗೂ ತಮ್ಮ ಪಾಲು ಎಷ್ಟು ಖಚಿತಪಡಿಸಿಕೊಳ್ಳುವ ತವಕ ಇರುವುದು ಸಹಜ. ನನ್ನ ಮಾತು ಮೀರಿ ಅವಳ ಜತೆ ಓಡಿಹೋದ ಮಗನಿಗೆ ಐವತ್ತೆಕ್ರೆ ಎಕ್ರೆ ತೋಟ ಎಂದ ತಕ್ಷಣ ಹಿಮ್ಮೇಳದ  ಚೆಂಡೆ   ಒಮ್ಮೆ ಚುರುಕಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮ ನೆಪದಲ್ಲಿ ಕದ್ರಿ ಗೋಪಾಲನಾಥರನ್ನೋ ಕಟೀಲು ಮೇಳವನ್ನೋ ಕರೆಸಬಹುದು. ನಮ್ಮ ಚಿಕ್ಕಪ್ಪನ ಮೃತ್ಯು ಪತ್ರ ತಯಾರಿ ದಿನ ಗುರುಕಿರಣ ಬಂದು ಹಾಡಿದ್ದ ಎಂದು ಹೆಮ್ಮೆಯ ವಿಚಾರ ಆಗಬಹುದು. ಇನ್ನೂ ಶ್ರೀಮಂತರಾದರೆ ಶಾರುಖ್ ಕುಣಿದ ಎಂದು ಹೇಳಿಕೊಳ್ಳಬಹುದು. ಕಾರ್ಯಕ್ರಮವನ್ನೇ ಸಿಂಗಾಪುರದಲ್ಲಿ ಮಾಡುವ ಬಗೆಗೆ ಚಿಂತಿಸಬಹುದು. ವಿಡಿಯೋದವರು ಪತ್ರಿಕೆಗಳಲ್ಲಿ ನಾವು ಅದರಲ್ಲಿ ಹೆಚ್ಚು ಸಮರ್ಥರು ಎಂದು ಈ ಬಗ್ಗೆ ಜಾಹಿರಾತು ಕೊಡಬಹುದು. ಅಡಿಗೆಯವರೂ ಶಾಮಿಯಾನದವರೂ ನಾವು ಈ ಕಾರ್ಯಕ್ರಮ ನಿರ್ವಹಿಸಬಲ್ಲೆವು ಎಂದು ದ್ವನಿ ಸೇರಿಸಬಹುದು.

ಈ ಕಾರ್ಯಕ್ರಮದ ಒಂದು ಉಪಕಾರವೆಂದರೆ ಅವರು ಸತ್ತ ನಂತರ ಉತ್ತರಾದಿಕಾರಿಗಳು ದೊಣ್ಣೆ ಹಿಡಿದುಕೊಂಡು ಕಾದಾಡುವ ಸಾದ್ಯತೆ ಕಡಿಮೆ. ಎಲ್ಲರಿಗೂ ಅವರ ಪಾಲಿನ ಬಗೆಗೆ ಖಚಿತವಿರುತ್ತದೆ. ಅಪ್ಪ ನನ್ನ ಹೆಸರಿನಲ್ಲಿ ಐದು ಕೋಟಿ ಇಟ್ಟಿದ್ದಾನಲ್ಲ ಅದನ್ನು ಕೊಡು ಎಂದು ಪ್ರೀತಿಯ ಮಗಳು ಸಹೋದರರ ಜತೆ ಜಗಳಕ್ಕೆ ನಿಲ್ಲುವ ಅವಕಾಶ ಇರುವುದಿಲ್ಲ. ಹೆರಿಗೆಗೆ ಮೊದಲು ಸ್ಕಾನ್ ಮಾಡಿ ಮಗು ಹೆಣ್ಣೊ ಗಂಡೋ ಎಂದು ಖಚಿತಪಡಿಸಿಕೊಂಡಂತೆ ಈ ಕಾರ್ಯಕ್ರಮ ನೆರವೇರಿದರೆ ಎಲ್ಲರಿಗೂ ಯಜಮಾನರ ಸಾವಿನ ಅನಂತರ ತಮ್ಮ ಪಾಲಿನ ಬಗೆಗೆ ಕುತೂಹಲ ಉಳಿಯುವುದೂ ಇಲ್ಲ.

Sunday, November 01, 2009

ತೂಗು ಸೇತುವೆಗೆ ಅಧಾರ ಕಲ್ಪಿಸಿದ ಗಾಳಿಪಟ

ನಾನು ಬಹಳ ಪ್ರೀತಿಸುವ ಹವ್ಯಾಸಗಳಲ್ಲಿ ಗಾಳಿಪಟ ಬಿಡುವುದು ಒಂದು. ಹಿಂದೆ ಪಣಂಬೂರಿನಲ್ಲಿ ಗಾಳಿಪಟ ಉತ್ಸವ ಆದಾಗ ಗಾಳಿಪಟ ಖರೀದಿಸಿ ತಂದು ವಾರಗಟ್ಟಲೆ ಮಕ್ಕಳ ಸೇರಿಸಿಕೊಂಡು ಬಿಡುತ್ತಾ ಸಂತಸ ಪಟ್ಟಿದ್ದೆವು. ಈಗ ಮದ್ರಾಸಿನಲ್ಲಿ ಗಾಳಿ ಪಟ ಬಿಟ್ಟರೆ ಸಾವಿರ ರೂಪಾಯಿ ದಂಡ ಮೂರು ತಿಂಗಳು ಜೈಲು ಸುದ್ದಿ ಓದುವಾಗ ಮದ್ರಾಸಿನ ಮಕ್ಕಳ ಬಗೆಗೆ ಮರುಕ ಉಂಟಾಗುತ್ತದೆ. ಸಂಪೂರ್ಣ ನಿಷೇದಿಸುವ ಬದಲು ಕಡಲ ತೀರದಲ್ಲಾಗಲಿ ನಿರ್ದಿಷ್ಟ ಆಟದ ಮೈದಾನದಲ್ಲಾಗಲಿ ಬಿಡಬಹುದೆಂದು ಕಾನೂನು ಮಾಡಬಹುದಾಗಿತ್ತು.

ಸಮಸ್ಯೆ ಇರುವುದು ಇನ್ನೊಬ್ಬರ ಗಾಳಿಪಟದ ದಾರ ಕತ್ತರಿಸಲೆಂದು ಗಾಳಿಪಟ ಬಿಡುವ ನೂಲಿಗೆ ಗಾಜಿನ ಪುಡಿ ಲೇಪನ. ಇದರ ವಿರೋದ ಪ್ರಚಾರಾಂದೋಲನ ಕೈಗೊಂಡು ಮಕ್ಕಳ ಮನ ಪರಿವರ್ತನೆ ಮಾಡಬೇಕು ವಿನಾ ಗಾಳಿ ಪಟವನ್ನೇ ಕಾನೂನು ಬಾಹಿರ ಮಾಡುವುದು ಸರಿಯೆನಿಸುವುದಿಲ್ಲ. ಕಡಿದು ಹೋದ ದಾರ ದಾರಿಗೆ ಅಡ್ಡವಾಗಿದ್ದು ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲ ಎನ್ನುವುದನ್ನೂ ಖಚಿತ ಪಡಿಸಿಕೊಳ್ಳಬೇಕು. ನಿಮ್ಮ ಕ್ರಿಯೆಯ trickle down effect ಗೂ ನೀವು ಹೊಣೆ ಎನ್ನುವ ವಿಚಾರ ಮನದಟ್ಟುಮಾಡಬೇಕು. ಇದು ಜೀವನದ ಒಂದು ಮುಖ್ಯ ಪಾಠ.

ನಾನು ಅಪಘಾತದಲ್ಲಿ ಒಳಗಾದ ಹಾರು ರೆಕ್ಕೆಯಾಗಲಿ ಅಥವಾ ವಿಮಾನವಾಗಲಿ ಹೇಗೆ ಹಾರುತ್ತದೆಂದು ವೈಜ್ನಾನಿಕವಾಗಿ ವಿವರಿಸಲು ಗಾಳಿಪಟವೇ ಪ್ರಥಮ ಹಾಗೂ ಸರಳ ಉದಾಹರಣೆ. ಗಾಳಿ ಪಟ ಬಿಡುವುದೆಂದರೆ ಪ್ರತಿ ಕ್ಷಣವೂ ಚುರುಕಾಗಿರಬೇಕಾಗುತ್ತದೆ. ಮಾದರಿ ವಿಮಾನ ಹಾರಿಸುವಂತೆ ಗಾಳಿ ಪಟವೂ ಆ ಕ್ಷಣದಲ್ಲಿ ಹೇಗೆ ಹಾರುತ್ತಿದೆ ಎನ್ನುವುದರ ಗಮನಿಸಿ ನಿಯಂತ್ರಿಸುತ್ತಾ ಇರಬೇಕಾಗುತ್ತದೆ.

ನೂರ ಐವತ್ತು ವರ್ಷ ಹಿಂದೆ ಅಮೇರಿಕ ಕೆನಡ ದೇಶಗಳ ಗಡಿಯಲ್ಲಿರುವ ನೈಗರಾ ಜಲಪಾತದ ಮೇಲೆ ಪ್ರಥಮ ಸೇತುವೆ ಕಟ್ಟುವಾಗ ಮೊದಲು ಹಗ್ಗವನ್ನು ಈ ಕಡೆಯಿಂದ ಆ ಕಡೆಗೆ ಕಟ್ಟುವ ಬಗೆ ಹೇಗೆ ಎನ್ನುವುದರ ಪ್ರಶ್ನೆ ಉಂಟಾಗಿತ್ತಂತೆ. ಎರಡು ದೇಶಗಳ ನಡುವೆಯಿದ್ದ ಎಂಟು ನೂರು ಅಡಿ ಅಗಲದ ಕಣಿವೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮೊದಲ ಹಗ್ಗ ಎಳೆಯುವುದು ದೊಡ್ಡ ಸವಾಲಾಗಿತ್ತು. ದೋಣಿ ಉಪಯೋಗಿಸುವಂತಿರಲಿಲ್ಲ. ವಿಮಾನ ಎನ್ನುವ ಕಲ್ಪನೆ ಇಲ್ಲದ ಕಾಲ. ಬಿಲ್ಲು ಬಾಣ ಉಪಯೋಗಿಸೋಣ ಎಂದರೆ ಬಾಣ ಎಸೆಯುವುದಕ್ಕಿಂತ ಹೆಚ್ಚು ದೂರವಿತ್ತು. ಅಗ ಸೇತುವೆ ವಿನ್ಯಾಸ ಮಾಡುವ ತಂತ್ರಜ್ನ ಚಾರ್ಲ್ಸ್ ಎಲ್ಲೆಟ್ ಒಂದು ಗಾಳಿ ಪಟ ಹಾರಿಸುವ ಸ್ಪರ್ದೆ ಏರ್ಪಡಿಸಿದರು.

ಪ್ರಪಾತದ ಒಂದು ಬದಿಯಿಂದ ಆಚೆ ಬದಿಗೆ ತಲಪಿ ಕೈಗೆಟಕುವಂತೆ ಪ್ರಥಮ ಬಾರಿ ಗಾಳಿ ಪಟ ಹಾರಿಸಿದವನಿಗೆ ಐದು ಡಾಲರ್ ಬಹುಮಾನ ಘೋಷಿಸಿದರು. ೧೮೪೯ ರಲ್ಲಿ ಈ ಐದು ಡಾಲರ್ ಚಿಕ್ಕ ಮೊತ್ತವಾಗಿರಲಿಲ್ಲ. ಕೆನಡದ ಬದಿಯಿಂದ ಗಾಳಿಪಟ ಹಾರಿಸಿದ ಹೊಮನ್ ನಾಶ್ ಎನ್ನುವ ಅಮೇರಿಕದ ಹತ್ತು ವರ್ಷದ ಹುಡುಗ ಈ ಸ್ಪರ್ದೆಯಲ್ಲಿ ಗೆದ್ದ. ಗಾಳಿ ಬೀಸುವುದು ಕೆನಡದ ಬದಿಯಿಂದ ಎಂಬ ಕಾರಣಕ್ಕೆ ಹೊಳೆಯನ್ನು ದೋಣಿಯಲ್ಲಿ ದಾಟಿ ಪೂರಕವಾಗಿರುವ ಗಾಳಿಗೆ ಕಾದಿದ್ದನಂತೆ. ಆವನು ತಗ್ಗಿನಲ್ಲಿ ಹಾರಿಸಿದ ಗಾಳಿ ಪಟವನ್ನು ಅಮೇರಿಕದ ಬದಿಯಲ್ಲಿ ಹಿಡಿಯಲು ಸಾದ್ಯವಾಯಿತು.

ಅನಂತರ ನಿರ್ಮಿಸಲಾದ ಏಳು ನೂರ ಅರುವತ್ತ ಎರಡು ಅಡಿ ಉದ್ದ ಮತ್ತು ಎಂಟು ಅಡಿ ಅಗಲದ ತೂಗು ಸೇತುವೆ ಸಾದ್ಯವಾದುದು ಹೋಮನ್ ನಾಶ್ ನ ಗಾಳಿಪಟದಿಂದ. ಗೆದ್ದ ಹೋಮನ್ ನಾಶ್ ಎಂಬತ್ತು ವರ್ಷ ಅನಂತರ ಆತನ ಸಾವಿನ ವರೆಗೂ ಈ ಬಗೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದನಂತೆ. ಹಾಗೆ ಮೊದಲು ಗಾಳಿ ಪಟದ ಹಗ್ಗದ ಆದಾರದಲ್ಲಿ ಗಟ್ಟಿಯಾದ ಹಗ್ಗ ಎಳೆದರು. ನಂತರ ಹೆಚ್ಚು ತೋರದ ಹಾಗೂ ಬಾರವಾದ ಸರಿಗೆ ಎಳೆಯುತ್ತಾ ಹೋಗಿ ಅನಂತರ ತೂಗು ಸೇತುವೆಯನ್ನು ಆಧರಿಸುವ ಕಬ್ಬಿಣದ ಹಗ್ಗವನ್ನೂ ಎಳೆಯಲಾಯ್ತು.

ಒಂದು ಚಿಕ್ಕ ಹಗ್ಗ ಎಂತಹ ಬೃಹತ್ ಸೇತುವೆಯಾಗಿ ಬದಲಾವಣೆ ಹೊಂದಿತೋ ಹಾಗೆಯೇ ಚಿಕ್ಕ ಚಿಂತನೆ ನಮ್ಮ ಕನಸುಗಳ ನನಸಾಗಿಸುತ್ತದೆ. ಪ್ರತಿ ಸಲ ಯೋಚಿಸಿದಾಗ ಚಿತ್ರ ನಮಗೆ ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಆದರೆ ಹಾರಾಡುವ ಗಾಳಿಪಟಕ್ಕೆ ಸಿಮಿತಗೊಳಿಸುವ ಹಗ್ಗದ ಆದಾರವಿದೆ. ಚಿಂತನೆಯನ್ನು ಸಿಮಿತಗೊಳಿಸುವುದು ನಮ್ಮ ಅಲೋಚನೆ ಸಾಮರ್ಥ್ಯ ಹಾಗೂ ಸಾದಿಸುವ ಹಸಿವು ಮಾತ್ರ.