Thursday, February 26, 2009
ನೂಡಲ್ ತಿನ್ನುವ ಪಾಠ
ಇಟಲಿಯಲ್ಲಿ ನಾನು ತಲಪುವಾಗ ಇನ್ನೂ ಚಳಿಗಾಲ. ಹವೆಗೆ ಹೊಂದಿಕೊಳ್ಳಲು ಹಾಗೂ ಮುಂದಿನ ದೇಶಗಳ ವೀಸಾ ಪಡಕೊಳ್ಳಲು ನಾಲ್ಕು ದಿನ ರೋಮಿನಲ್ಲಿದ್ದೆ. ಅಲ್ಲಿನ ರೋಟರಾಕ್ಟ ಕ್ಲಬ್ ಸದಸ್ಯರ ಸಂಪರ್ಕವಾಯಿತು. ಅವರು ನನಗೆ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಮಾಡಿಕೊಟ್ಟರು. ಅವರ ರಾತ್ರಿಯೂಟದ ಒಂದು ಸಭೆಗೂ ಕರಕೊಂಡು ಹೋಗಿದ್ದರು. ಅಲ್ಲಿ ಒಂದು ಪ್ರದಾನ ಖಾದ್ಯ - ನಮ್ಮಲ್ಲಿ ಈಗ ಜನಪ್ರಿಯವೆನಿಸಿರುವ ನೂಡಲ್ಸ್. ಮೊದಲು ಎಂದೂ ನೋಡದ ಈ ಸೇವಿಗೆಯನ್ನು ಚಾಕು ಚಮಚಗಳಲ್ಲಿ ತಿನ್ನುವುದು ನನಗೆ ಸವಾಲಾಯಿತು.
ಪಕ್ಕದಲ್ಲಿದ್ದ ಅಪ್ತ ಗೆಳೆಯ ಸ್ಟೆಫೇನೊ ನೋಡು ಮಾರಾಯ ಫೋರ್ಕು ಹೀಗೆ ಹಿಡಿದು ಹೀಗೆ ತಿರುವಿ ತಿರುವಿ ಅದು ಸುತ್ತಿಕೊಳ್ಳುವಂತೆ ಮಾಡಿ ………. ನನಗೆ ಮೊದಲೇ ಗಲಿಬಿಲಿ. ಅಲ್ಲಿ ಸೇರಿದ ಸುಮಾರು ಹದಿನೈದು ಜನ ವಾರೆ ಕಣ್ಣಲ್ಲಿ ನನ್ನನ್ನು ಗಮನಿಸುತ್ತಿದ್ದ ಅನುಭವವಾಗುತ್ತಿದ್ದು ಮತ್ತೂ ಗಡಿಬಿಡಿಗೆ ಕಾರಣ. ನಾನು ನೀನು ನಿನ್ನ ತಟ್ಟೆ ನೋಡು ಸ್ಟೆಫೇನೊ, ನಾನು ನನ್ನ ತಟ್ಟೆ ನಿಬಾಯಿಸುವೆ ಎಂದು ಹೇಳಿದ ತಕ್ಷಣ ಮಾತು ಅತಿಯಾಯಿತೆನಿಸಿ ಮುಜುಗರದಿಂದ ಬಾಯಿ ಕಚ್ಚಿಕೊಂಡೆ. ತಕ್ಷಣ ನೆನಪಿಗೆ ಬಂದ ನಮ್ಮೂರ ರಾಜನ ಕಥೆ ಹೇಳಿದೆ.
ಒಬ್ಬ ಅಕ್ಕಿ ಕಾಳಲ್ಲಿ ರಾಜನ ಹೆಸರು ನೂರು ಸರ್ತಿ ಬರೆದು ತಂದು ರಾಜನಿಗೆ ಅರ್ಪಿಸಿದ. ಬಹು ದೊಡ್ಡ ಬಹುಮಾನ ಅಪೇಕ್ಷಿಸಿದ. ರಾಜ ವ್ಯವಹಾರಿಕ ಮನುಷ್ಯ. ಅಕ್ಕಿಯಲ್ಲಿ ಬರೆಯುವ ಕೆಲಸ ಬದುಕಿನ ದೃಷ್ಟಿಯಲ್ಲಿ ಪ್ರಯೋಜನಕಾರಿಯಲ್ಲ. ಬಹುಮಾನವಾಗಿ ಅವನಿಗೊಂದು ಕಿಲೊ ಅಕ್ಕಿ ಕೊಟ್ಟ. ಹಾಗೆಯೇ ಇಲ್ಲಿ ಕಷ್ಟ ಪಟ್ಟು ತಿನ್ನುವ ನೂಡಲ್ ನನ್ನ ಊರಲ್ಲಿ ತಿನ್ನುವ ಸಂಭವ ತೀರಾ ಕಡಿಮೆ ಎಂದು ಹೇಳಿ ಪರೀಸ್ಥಿತಿಯನ್ನು ತಿಳಿಯಾಗಿಸಿದೆ.
ಈ ಚಿತ್ರ ನೋಡುವಾಗ ಅಂದು ನಾನು ಪಟ್ಟ ಪಚೀತಿ ನೆನಪಾಯಿತು. ಈಗ ನಮ್ಮನೆಗೂ ನೂಡಲ್ಸ್ ತಲಪಿದೆ.
No comments:
Post a Comment