Monday, May 18, 2009
ರೇವ ಎಂಬ ಗಗನಕುಸುಮ
ಇತ್ತೀಚೆಗೆ ಲಂಡನಿನ ಮೇಯರ್ ವಿದ್ಯುತ್ ವಾಹನಗಳ ಬಗೆಗೆ ೩೦ ಮಿಲಿಯ ಡಾಲರ್ ಯೋಜನೆಯನ್ನು ಅನಾವರಣಗೊಳಿಸಿದರು. ಆ ಪಟ್ಟಣದಲ್ಲಿ ಒಂದು ಲಕ್ಷ ವಿದ್ಯುತ್ ಕಾರುಗಳು ಮತ್ತು ೨೫೦೦೦ ಕಾರುಗಳ ಚಾರ್ಜ್ ಮಾಡುವ ವ್ಯವಸ್ಥೆಯನ್ನು ೨೦೧೫ರ ಮೊದಲು ಅನುಷ್ಟಾನಗೊಳಿಸುವ ಗುರಿ ಹೊಂದಿದ್ದಾರೆ. ನಂತರದ ವಾರದಲ್ಲಿ ಅಲ್ಲಿನ ಕೆಂದ್ರ ಸರಕಾರ ವಿದ್ಯುತ್ ಚಾಲನೆ ವಾಹನಗಳಿಗೆ ಮೂರುವರೆ ಲಕ್ಷ ರೂಪಾಯಿವರೆಗಿನ ಸಹಾಯದನವನ್ನು ಘೋಷಿಸಿತು. ಅದನ್ನು ಕಂಡ ನನಗೆ ತುಂಬಾ ಕುಶಿಯ ಜತೆ ನಮ್ಮ ಸರಕಾರಗಳ ನಿರ್ಲಕ್ಷತೆ ಬಗೆಗೆ ಬೇಸರ ಮೂಡಿತು.
ಹೆಚ್ಚಿನ ಗ್ರಾಹಕರು ವಾಹನ ಖರೀದಿ ಮಾಡುವಾಗ ಇಂದನದ ವೆಚ್ಚದ ಬಗೆಗೆ ಚಿಂತಿಸುತ್ತಾರೆ ಹೊರತು ಅದರಿಂದಾಗ ಬಹುದಾದ ಪರಿಸರ ಮಲೀನತೆ ಅಲ್ಲ ಎನ್ನುವುದು ನಮಗೆ ಅರಿವಿದೆ ಎನ್ನುತ್ತಾರೆ ಅಲ್ಲಿನ ಸಾರಿಗೆ ಮಂತ್ರಿ ಹೂನ್. ಈಗ ಸಮಯ ಹೋದಂತೆ ಹೆಚ್ಚು ಹೆಚ್ಚು ಗ್ರಾಹಕರು ಈ ಬಗೆಗೆ ಜಾಗ್ರತಿ ತೋರ್ಪಡಿಸುತ್ತಿದ್ದು ಅವರಿಗೆ ಸಹಾಯ ಹಸ್ತ ಚಾಚುವುದು ಸರಕಾರದ ಕರ್ತವ್ಯವೂ ಆಗಿರುತ್ತದೆ. ಆವು ಉಪಯೋಗಿಸುವ ವಿದ್ಯುತ್ ಸಹಾ ಪರಿಸರ ಸ್ನೇಹಿಯಾಗಿದ್ದರೆ ಉತ್ತಮ ಎಂದೂ ಹೇಳುತ್ತಾರೆ.
ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬರೇ ವಿದ್ಯುತ್ ಕಾರೆಂದರೆ ಪ್ರಯೋಜನವಿಲ್ಲ. ಆ ವಿದ್ಯುತ್ ಎಲ್ಲಿಂದ ಬರುತ್ತದೆ ಅನ್ನುವುದೂ ಮುಖ್ಯ. ಕಲ್ಲಿದ್ದಲು ಹೊತ್ತಿಸಿ ವಿದ್ಯುತ್ ತಯಾರಿಸಿ ಆ ವಿದ್ಯುತ್ ಉಪಯೋಗಿಸಿ ಕಾರು ಓಡಿಸಿದರೆ ಯಾವ ಪ್ರಯೋಜನವೂ ಇಲ್ಲ. ಬೆಂಗಳೂರಿನಲ್ಲಿ ಕಾರಿನ ಹೊಗೆ ನಳಿಗೆ ಉಗುಳುವ ಹೊಗೆಯನ್ನು ರಾಯಚೂರಿನಲ್ಲಿ ಉಗುಳಲಾಗುತ್ತದೆ ಅಷ್ಟೇ. ಈ ಲೆಕ್ಕಾಚಾರ ಒಟ್ಟಾರೆ ಪರಿಸರಕ್ಕೆ ಪೂರಕವಲ್ಲ. ಅಲ್ಲದೆ ವಿದ್ಯುತ್ ಕೋಶಗಳ ತಯಾರಿ ಬಹಳ ಮಲೀನತೆಗೆ ಕಾರಣವಾಗಿರುತ್ತದೆ.
ವಿದ್ಯುತ್ ವಾಹನದ ಇತಿಹಾಸ ದೀರ್ಘವಾಗಿದ್ದರೂ ಅವಿಷ್ಕಾರ ನಿದಾನವಾಗಲು ಮುಖ್ಯ ಕಾರಣಗಳು ಮೂರು. ಅನುಕೂಲಕರವಾದ ಅಗ್ಗವಾಗಿರುವ ಇಂದನ ಪೆಟ್ರೋಲ್, ತಕ್ಕುದಾದ ವಿದ್ಯುತ್ ಕೋಶಗಳ ಕೊರತೆ ಮತ್ತು ಅಸಮರ್ಪಕ ಬಾಟರಿ ಚಾರ್ಜಿಂಗ್ ಜಾಲದಿಂದಾಗಿ ಬಾಟರಿ ವಾಹನಗಳು ಹೆಚ್ಚು ಜನಪ್ರಿಯವೆನಿಸಲು ತಡೆಯೊಡ್ಡಿದವು. ಈಗ ಪರಿಸರ ಕಾಳಜಿ ಎನ್ನುವ ಹೊಸ ವಿಚಾರ ಚಲಾವಣೆಗೆ ಬಂದಿದೆ. ಹೊಸ ಆಸಕ್ತಿ ಸುರುವಾಗಿದೆ.
ಅರುಣಾಚಲ ಪ್ರದೇಶದ ರಾಜ್ಯಪಾಲರು ರಾಜಭವನದಲ್ಲಿ ಬೆಂಗಳೂರಿನಲ್ಲಿ ತಯಾರಾಗುವ ಎರಡು ರೇವ ವಿದ್ಯುತ್ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಕಳೆದ ತಿಂಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಲ್ಲಿಗೆ ಬೇಟಿ ಇತ್ತಾಗ ಅದರಲ್ಲಿ ಸಂಚರಿಸಿದ್ದರು. ಅವರು ಎಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ಬೇಟಿ ಇತ್ತಾಗ ಇದೇ ಸಂಸ್ಥೆ ತಯಾರಿಸುವ ವಿದ್ಯುತ್ ಗಾಲ್ಫ್ ಗಾಡಿಯಲ್ಲಿ ಇಂಫೋಸಿಸ್ ಸಂಸ್ಥೆಯಲ್ಲಿ ಸುತ್ತಾಡಿದ್ದರು. ಇದೀಗ ಇಂತಹ ಗಾಲ್ಫ್ ಗಾಡಿಗಳು ಮಂತ್ರಿಗಳಿಗೆ ವಿದಾನ ಸೌದದ ಸುತ್ತಲಿರುವ ಕಛೇರಿಗಳ ನಡುವೆ ಓಡಾಡಲು ಉಪಯೋಗಿಸುವ ಸುದ್ದಿ ಇರುತ್ತದೆ.
ಸರಕಾರಕ್ಕೆ ವಿದ್ಯುತ್ ಕಾರುಗಳ ಬಗೆಗೆ ಅರಿವಿಲ್ಲ ಎನ್ನುವಂತಿಲ್ಲ. ಕೇಂದ್ರ ತಂತ್ರ ಜ್ನಾನ ಮಂತ್ರಿ ಕಪಿಲ್ ಸಿಬಾಲ್ ದೆಹಲಿಯ ಮುಖ್ಯ ಮಂತ್ರಿಣಿ ಶೀಲಾ ದೀಕ್ಷಿತ್ ಇವರೆಲ್ಲ ರೇವ ಕಾರು ಬಳಸುವವರೇ. ಸರಕಾರಿ ಖರೀದಿಗೆ ಕೇಂದ್ರದ ಅಸಂಪ್ರದಾಯಿಕ ಇಂದನ ಖಾತೆ ಸಹಾಯ ಮಾಡುತ್ತದೆ. ಕೆಲವು ರಾಜ್ಯ ಸರಕಾರಗಳು ಚಿಲ್ಲರೆ ರಿಯಾಯತಿ ತೋರಿಸುತ್ತವೆ. ಸರಕಾರ ಮಾರುತಿ ಕಾರಿಗೆ, ಟಾಟ ನ್ಯಾನೊವಿಗೆ ಕೊಟ್ಟ ಬೆಂಬಲದ ಸಣ್ಣ ಪಾಲು ಈ ವಾಹನಕ್ಕೆ ಕೊಟ್ಟರೆ ನಮ್ಮಲ್ಲಿ ಸಾವಿರಾರು ವಾಹನಗಳು ಮಾರಾಟವಾಗುತಿತ್ತು. ಇಂದಿಗೂ ಬೆಂಗಳೂರಿನಲ್ಲಿ ತಯಾರಾಗುವ ರೇವ ಕಾರಿಗೆ ಅತ್ಯದಿಕ ಬೆಂಬಲ ದೊರಕುತ್ತಿವುದು ಯುರೋಪಿನಲ್ಲಿ. ಅಲ್ಲಿ ಈ ಬೆಂಬಲ ವಾರದಿಂದ ವಾರಕ್ಕೆ ಎಂಬಂತೆ ಹೆಚ್ಚುತ್ತಿದಯಂತೆ. ಮೇಲಿನ ಎರಡೂ ಚಿತ್ರಗಳಲ್ಲಿ ಕಾಣಿಸುವ ಕಾರು ಬೆಂಗಳೂರಿನಲ್ಲಿ ತಯಾರಾಗುವ ರೇವ. ಇಂಗ್ಲೇಂಡಿನಲ್ಲಿ G-Wiz ಅನ್ನುವ ಹೆಸರಿನಲ್ಲಿ ಮಾರುತ್ತಾರೆ.
ಹತ್ತು ವರ್ಷ ಹಿಂದೆ ವರುಷಕ್ಕೆ ನಲುವತ್ತು ಸಾವಿರ ವಿದ್ಯುತ್ ಸ್ಕೂಟರ್ ಮಾರಿದ ಚೀನದಲ್ಲಿ ಕಳೆದ ವರ್ಷ ಮಾರಾಟವಾದ ಸ್ಕೂಟರ್ ಗಳ ಸಂಖ್ಯೆ ಒಂದೂವರೆ ಕೋಟಿ ಮೀರಿತ್ತು. ನಮ್ಮಲ್ಲೂ ಈಗ ಹೆಚ್ಚೇನು ಸರಕಾರದ ಬೆಂಬಲವಿಲ್ಲದೆಯೇ ವಿದ್ಯುತ್ ಸ್ಕೂಟರುಗಳು ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ. ದೈಹಿಕ ಸಮಸ್ಯೆಯಿಂದಾಗಿ ನನಗೆ ದ್ವಿಚಕ್ರ ಚಲಾಯಿಸಲು ಸಾದ್ಯವಾಗುವುದಿಲ್ಲ.
ವರ್ಷಕ್ಕೆ ಸುಮಾರು ಹನ್ನೆರಡು ಸಾವಿರ ಕಿಮಿ ವಾಹನ ಚಲಾಯಿಸುವ ನಾನು ಬಹಳ ಸಮಯದಿಂದ ಈ ಬಗೆಗೆ ಚಿಂತಿಸುತ್ತಿದ್ದೇನೆ. ಪ್ರಯಾಣದ ಅರ್ಧದಷ್ಟು ದೂರ ವಾಹನದಲ್ಲಿ ಒಬ್ಬನೇ ಇರುತ್ತೇನೆ. ಮಕ್ಕಳಿಬ್ಬರನ್ನು ಒಮ್ಮೊಮ್ಮೆ ಶಾಲೆಗೆ ಬಿಡುವ ಕಾರಣ ಸುಮಾರು ನಾಲ್ಕು ಸಾವಿರ ಕಿಮಿ ಮಕ್ಕಳೂ ಸೇರಿದಂತೆ ಮೂವರ ಪ್ರಯಾಣ. ಅಂತೂ ದಿನಕ್ಕೆ ನಲುವತ್ತು ಮೀರುವುದು ಅಪರೂಪ. ದಿನವಿಡೀ ಮನೆಯಲ್ಲಿರುವ ಕಾರಣ ಸೌರ ವಿದ್ಯುತ್ ತುಂಬಿಸಲು ಪೂರಕವಾಗಿರುತ್ತದೆ. ಅವಶ್ಯಕತೆಗಿಂತ ಹೆಚ್ಚು ಸೌರ ವಿದ್ಯುತ್ ಕೋಶಗಳು ನನ್ನಲ್ಲಿದ್ದು ಮಲೀನತೆ ಉಂಟಾಗದೆ ಪ್ರಯಾಣ ಸಾದ್ಯವಾಗುತಿತ್ತು. ಈ ಬಗೆಗೆ ಉತ್ತಮ ಪ್ರಯೋಗವಾಗುತಿತ್ತು.
ನಾನ್ನೊಬ್ಬ ಕೃಷಿಕ. ಆದಾಯ ತೇರಿಗೆ ಪಟ್ಟಿಯಲ್ಲಿರುವವರಿಗೆ ಸವಕಳಿ ಎಂಬ ತೇರಿಗೆ ರಿಯಾಯತಿ ಅಂಶ ಖರೀದಿಗೆ ಸಹಾಯ ಮಾಡುತ್ತದೆ. ಕೊನೆಗೂ ಲೆಕ್ಕ ಮಾಡಿದರೆ ನಾನು ಉಳಿಸುವುದು ಪರಮಾವಧಿ ಒಂದೂವರೆ ಸಾವಿರ ಯುನಿಟ್ ಅಂದರೆ ಏಳೆಂಟು ಸಾವಿರ ರೂಪಾಯಿ. ಅದಕ್ಕಾಗಿ ನಾಲ್ಕು ಲಕ್ಷ ಚಿಲ್ಲರೆ ಖರ್ಚು ಮಾಡುವುದು ಬುದ್ದಿವಂತಿಕೆ ಅನಿಸದು. ಜತೆಯಲ್ಲಿ ನಾಲ್ಕನೇಯ ವರ್ಷ ಕಾರಿನಲ್ಲಿರುವ ವಿದ್ಯುತ್ ಕೋಶ ಬದಲಾಯಿಸಬೇಕಾಗ ಬಹುದು. ನನ್ನ ಇ ಪತ್ರಕ್ಕೆ ದೂರವಾಣಿ ಸಂಬಾಷಣೆಗೆ ಈ ಕಂಪೇನಿಯಿಂದ ಸಕಾರಾತ್ಮಕವಾದ ಉತ್ತರವೂ ನನಗೆ ಲಬಿಸಿರಲಿಲ್ಲ.
ಸೌರ ವಿದ್ಯುತ್ ಲಾಭ ಎನ್ನುವಂತಿಲ್ಲ. ಇಲ್ಲೊಂದು ಸ್ವಂತ ಅನುಭವ. ನಾನು ಮೂರು ವರ್ಷ ಹಿಂದೆ ಮನೆಯ ಉಪಯೋಗಕ್ಕಾಗಿ ವಿದ್ಯುತ್ ಕೋಶಗಳು ಹಾಗೂ ವ್ಯವಸ್ಥೆಗಾಗಿ ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿದೆ. ಈಗ ವಿದ್ಯುತ್ ಬಿಲ್ಲಿನಲ್ಲಿ ತಿಂಗಳಿಗೆ ನಾಲ್ಕು ನೂರರಿಂದ ಐನೂರು ರೂಪಾಯಿ ವರೆಗೆ ಉಳಿತಾಯ. ದಿನವಿಡೀ ವಿದ್ಯುತ್ ಇಲ್ಲವಾದರೂ ನಮಗೆ ಸಮಸ್ಯೆಯಾಗುವುದಿಲ್ಲ ಎನ್ನುವುದು ಗುಣಾತ್ಮಕ ವಿಚಾರ. ಈ ವಾಕ್ಯ ಕುಟ್ಟುವಾಗಲೂ ವಿದ್ಯುತ್ ಕಡಿತವಿರುವ ಕಾರಣ ಸೂರ್ಯದೇವನಿಗೆ ನಮೋ ನಮಹ. ಈ ಮೂವತ್ತು ಸಾವಿರ ತುಂಬಲು ಐದು ವರ್ಷ ಬೇಕು. ಅಷ್ಟರೊಳಗೆ ನನ್ನ ವಿದ್ಯುತ್ ಕೋಶಗಳ ಹೆಚ್ಚಿನ ಆಯುಷ್ಯ ಮುಗಿದಿರುತ್ತದೆ. ಪುನಹ ಮೂವತ್ತು ಸಾವಿರ.......
ಯಾರಲ್ಲೂ ಸೌರ ಫಲಕಗಳೂಗಳೂ ವಿದ್ಯುತ್ ಕಾರು ಎರಡೂ ಇದ್ದಂತಿಲ್ಲ. ಇರುವುದಾದರೆ ಈ ಪರ್ಯಾಯದ ಮೌಲ್ಯಮಾಪನೆ ಸಾದ್ಯವಾಗುತಿತ್ತು. ಹೊಸ ರೇವಾ ಕಾರು ಖರೀದಿಸುವ ಚೈತನ್ಯ ನನಗಿಲ್ಲವಾದುದರಿಂದ ಸದ್ಯಕ್ಕೆ ವಿದ್ಯುತ್ ಕಾರಿನ ಬಗೆಗೆ ಕನಸು ಕಾಣುವುದೊಂದೇ ನನಗಿರುವ ದಾರಿ.
No comments:
Post a Comment