Tuesday, December 18, 2012

ನಮಗೆ ಬಂದೂಕು ಸಂಸ್ಕೃತಿ ಬೇಕಾ ?


ಮೊನ್ನೆ  ಅಮೇರಿಕದ  ಶಾಲೆಯೊಂದರೆ  ಇಪ್ಪತ್ತು ಮಕ್ಕಳ ಮತ್ತು  ಆರು   ಟೀಚರುಗಳ  ಕಗ್ಗೊಲೆ ಪ್ರಕರಣ  ಓದುವಾಗ  ನೆನಪಾಯಿತು -  ಒಂದು  ಹಳೆಯ   ಸಂಬಾಷಣೆ.  ಅಮೇರಿಕದ   ಆತ್ಮೀಯ  ಗೆಳೆಯ    ಎರಿಕ್  ಕೇಳಿದ “ ಭಾರತಿಯರು ಅಮೇರಿಕನರ    ಬಗೆಗೆ  ಯಾವ ಅಬಿಪ್ರಾಯ  ಹೊಂದಿದ್ದಾರೆ ? “  ಈ  ಮಹರಾಯನಿಗೆ   ನನ್ನ  ಕೆಣಕುವ  ಹವ್ಯಾಸ.    ನಾನು  ನಗುತ್ತಾ ಉತ್ತರಿಸಿದೆ. “ ಎಲ್ಲರೂ  ಕೋವಿ    ಇಟ್ಟುಕೊಂಡಿರುತ್ತಾರೆ. ಕೆಲವರು  ಎರಡನ್ನು.”  ಆಗ  ಕೈಗಳನ್ನು   ಮೇಲೆತ್ತಿ  ಹೇಳಿದ  ಎರಿಕ್ ನೋಡಯ್ಯಾ  ನನ್ನಲ್ಲಿಲ್ಲ.  ಹಾಗಾದರೆ  ಎಲ್ಲ  ಅಮೇರಿಕದವರೂ  ಕೋವಿ ಇಟ್ಕೊಂಡಿರ್ತಾರೆ  ಅನ್ನುವುದು  ತಪ್ಪು  ಆಲೋಚನೆನಾ  ? 




ಅಲ್ಲ   ನಮಗೆ  ಆ  ಭಾವನೆ  ಬರುವುದು  ಸಹಜ.    ಯಾಕೆಂದರೆ   ಪ್ರತಿ ವರ್ಷ  ಅಮೇರಿಕದಲ್ಲಿ   ಮೂವತ್ತು  ಸಾವಿರಕ್ಕೂ  ಹೆಚ್ಚು ಜನ   ಗುಂಡು ಬಡಿದು  ಸಾಯುತ್ತಾರೆ.  ಅದರಲ್ಲಿ  ಬಹುಪಾಲು  ಸತ್ತವರಿಗೂ  ಗುಂಡಿಕ್ಕಿದವರಿಗೂ  ಪರಿಚಯನೇ  ಇರೋದಿಲ್ಲ.     ಮೊನ್ನೆ  ಅಮೇರಿಕ್ದಲ್ಲಿ   ಶಾಲಾ  ದಾಳಿಯ ದಿನವೇ   ದೇಶದ  ಇನ್ನೊಂದು ಬಾಗದಲ್ಲಿ  ಒಬ್ಬ      ಎಲ್ಲರನ್ನೂ  ಉಡಾಯಿಸ್ ಬಿಡ್ತೇನೆ  ಅಂತ   ಬೆದರಿಸಿದ್ದ.   ಈ    ಅರೆ ಹುಚ್ಚನನ್ನು  ಪೋಲಿಸರು ವಶಕ್ಕೆ  ತೆಗೆದುಕೊಂಡಾಗ     ೪೭  ಕೋವಿಗಳೂ  ಅಪಾರ  ಮದ್ದುಗುಂಡುಗಳೂ  ಅವನ ಮನೆಯಲ್ಲಿದ್ದವು.   ಅವನ  ಮನೆಯಲ್ಲಿ  ಸುಮಾರು  ನಮ್ಮ  ಹಣದಲ್ಲಿ ಹೇಳೊದಾದ್ರೆ  ಐವತ್ತೈದು ಲಕ್ಷ  ರೂಪಾಯಿ  ಮೌಲ್ಯದ   ಸ್ಪೋಟಕ    ಮಾಲು    ಅವನಲ್ಲಿತ್ತು. 

ಆ  ದೇಶದಲ್ಲಿ  ಕೋವಿ ಪರವಾದ  ಲಾಬಿ  ರಾಜಕೀಯವಾಗಿ   ಬಹಳ  ಶಕ್ತಿವಂತವಾಗಿದ್ದು  ಹೆಚ್ಚಿನ   ಬೆಂಬಲವಿದ್ದುದು   ಮೊನ್ನೆ  ಸೋತ  ಆನೆ  ಪಕ್ಷದವರದು.    ಏನಾದರೂ   ಗಲಾಟೆ ನಡೆದಾಗ  ಸಂಬಂದಿಸಿದವರ  ಟಿವಿ  ಚರ್ಚೆಗೆ  ಅಹ್ವಾನಿಸುವ  ಸಂಪ್ರದಾಯ  ನಮ್ಮಲ್ಲಿರುವಂತೆ  ಅಲ್ಲೂ  ಇದೆ.   ಹಾಗೆ  ಮೂವತ್ತ ಒಂದು   ಕೋವಿವಾದಿ    ರಾಜಕಾರಣಿಗಳಿಗೆ  ಅಹ್ವಾನ  ಹೋದರೂ  ಯಾರೂ  ಸ್ವೀಕರಿಸಲಿಲ್ಲ.   ಎಲ್ಲರೂ  ಮಾದ್ಯಮದಿಂದ  ಅಡಗಿದ್ದಾರೆ.   ಅಲ್ಲಿನ   ಪತ್ರಿಕೆಯೊಂದರಲ್ಲಿ   ಸುದ್ದಿ  ಮತ್ತು   ಕ್ರಿಸ್ ಮಸ್  ಪ್ರಯುಕ್ತ   ರೀಯಾಯತಿ     ಕೋವಿ  ಮಾರಾಟದ ಜಾಹಿರಾತು  ಸಲೀಸಾಗಿ ಅಕ್ಕಪಕ್ಕದಲ್ಲಿ ಹಾಕಿರುವುದನ್ನು  ನೋಡಬಹುದು.     ಒಬಾಮ  ಪಕ್ಷದ  ಹೆಚ್ಚಿನವರು    ಬೆಂಬಲಿಸುವ  ಕೋವಿ ವಿರೋದಿ  ಕಾನೂನು ಅಲ್ಲಿ  ಬೇಗದಲ್ಲಿ   ಜಾರಿಗೆ ಬರಲೆಂದು  ಆಶೀಸೋಣ.   ತಡವಾದರೆ  ಪುನಹ  ’ ಕೋವಿವಾದಿಗಳು  ’   ಒಗ್ಗಟ್ಟಾಗಿ   ಅವರದೇ    ಕೈ ಮೇಲಾಗುತ್ತದೆ.





ನಮ್ಮನೆಯಲ್ಲೂ   ಒಂದು ಕೋವಿ ಇತ್ತು.     ನನ್ನ  ಅಜ್ಜ   ಅಂದರೆ  ಅಪ್ಪನ  ಚಿಕ್ಕಪ್ಪ ೧೯೨೮ರಲ್ಲಿ  ಮದ್ರಾಸಿನಲ್ಲಿ ನಡೆದ  ಕಾಂಗ್ರೇಸ್  ಅಧಿವೇಶನಕ್ಕೆ  ಹೋಗಿದ್ದರು.  ಹೋದ  ನೆನಪಿಗೆ   ಎನಾದರೂ  ತರಬೇಕಲ್ಲ.    ಹಾಗೆ    ಬರುವಾಗ ತಂದದ್ದು ಒಂದು ಒಂಟಿ ನಳಿಗೆ  ಕೋವಿ.  ಮಕ್ಕಳಿಲ್ಲದೆ  ಅವರು  ತೀರಿಕೊಂಡಾಗ  ಅಜ್ಜಿ  ಅದನ್ನು ನನ್ನಪ್ಪನ  ವಶಕ್ಕೊಪ್ಪಿಸಿದರು.  ಪರಿಣಾಮವಾಗಿ     ನನ್ನಪ್ಪನೂ  ಕೋವಿ ಲೈಸೆನ್ಸ್ ದಾರರಾದರು.  

ನನ್ನ ಹುಚ್ಚಾಟ  ತಿರುಗಾಟವೆಲ್ಲ  ಮುಗಿದು ಮನೆಯಲ್ಲಿ ಕೃಷಿ ಸಹಾಯಕ್ಕೆ  ತೊಡಗಿಸಿಕೊಂಡಿದ್ದೆ.  ಆ ಸಮಯ  ಕೋವಿ ಪರವಾನಿಗೆ  ನವೀಕರಣ  ಸಮಯವಾಯಿತು.  ನನ್ನಲ್ಲಿ ಅಪ್ಪ  ಹೇಳಿದರು – ನನಗೆ ವಯಸ್ಸಾಯಿತು.   ಕೋವಿ ಲೈಸೆನ್ಸ್  ಇನ್ನು    ನಿನ್ನ ಹೆಸರಿಗೆ ಮಾಡುತ್ತೇನೆ.  ಅಗ  ನಾನು,   " ಅದರಲ್ಲಿ ನನಗೆ ನಂಬಿಕೆ ಇಲ್ಲ"ವೆಂದು  ಉತ್ತರಿಸಿದೆ.  ಅದಕ್ಕೆ  ಅವರು  -   ಪರವಾನಿಗೆ  ನವೀಕರಣ ಆಗದೆ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.  ಹಾಗಾಗಿ ಅದನ್ನು  ಪೋಲಿಸ್  ಠಾಣೆಯಲ್ಲಿ  ಇಡುತ್ತೇನೆ.  ಅದು ಸರಕಾರಕ್ಕಾಗಲಿ.  [ ಅಕಸ್ಮಾತ  ಬೇಕೆನಿಸಿದರೆ   ಲೈಸೆನ್ಸ್  ಮಾಡಿಸಿದ  ನಂತರ  ತರಬಹುದು.]     ನಾನು ಸಂತೋಷದಿಂದ  ಒಪ್ಪಿ  ಅಪ್ಪನನ್ನು   ವಿಟ್ಲದ    ಪೋಲಿಸ್ ಠಾಣೆಗೆ ಕರೆದುಕೊಂಡು   ಹೋದೆ.   “ನಣ  ಇಂದು  ನಿಕ್ ಳೆಗ್  “   ಅಂತ   ಹೇಳಿ  ಅವರು  ಅದನ್ನು  ಅಲ್ಲಿ  ಒಪ್ಪಿಸಿಬಂದರು.  ಇದು ಇಪ್ಪತ್ತು  ಇಪ್ಪತ್ತ  ನಾಲ್ಕು   ವರ್ಷ  ಹಿಂದಿನ  ಮಾತು. 

ಪುಣ್ಯಕ್ಕೆ  ಇದರ  ಮೇಲೆ  ಕಣ್ಣಿಟ್ಟಿದ್ದ  ಖರೀದಿಸುವ  ಆಸಕ್ತಿ ಇದ್ದ  ಯಾರಿಗೂ  ಇದರ  ಸುಳಿವು ಸಿಗಲಿಲ್ಲ.  ಅಕಸ್ಮಾತ್  ಗೊತ್ತಾದರೆ  ನಾವು  ತುಂಬಾ   ಒತ್ತಡಕ್ಕೆ  ಒಳಗಾಗುತ್ತಿದ್ದೆವು.  ಖಾಸಗಿ  ಸಂಗ್ರಹದಿಂದ  ಒಂದು  ಕೋವಿ  ಸರಕಾರಕ್ಕೆ  ಹೋದದ್ದು  ನನಗೆ ಸಂತಸದ  ವಿಚಾರವೇ.   

ಗೆಳೆಯ  ನಾರಾಯಣ  ಮೂರ್ತಿ  ಹೇಳಿದ ಒಂದು  ಕಥೆ   ನೆನಪಾಗುತ್ತದೆ.  ಹಿಂದೆ  ಕೋವಿ  ಇಟ್ಕೊಳ್ಳುವುದು  ನಿರ್ಬಂದ   ಇದ್ದ  ಮಹಾಯುದ್ದದ  ಸಮಯ.   ಹಾಗೆ  ಒಮ್ಮೆ ಪರವಾನಿಗೆ  ಇಲ್ಲದ  ಕೋವಿ  ಇರುವ ಗುಮಾನಿಯಲ್ಲಿ ಪೋಲಿಸರು ದಾಳಿ  ಒಂದು ಮನೆಗೆ  ಮಾಡಿದರು. ಇಡೀ ಮನೆ   ಜಾಲಾಡಿದರೂ   ಕೋವಿ ಸಿಗಲಿಲ್ಲ. ಮನೆಯಲ್ಲಿರುವ  ಪುಟ್ಟ  ಹುಡುಗನ ಪೋಲಿಸ  ಇನ್ ಸ್ಪೆಕ್ಟರ್   ಪುಸಲಾಯಿಸಿದರು.  ತಾವು  ಹುಡುಕುತ್ತಿರುವ  ಸಾಮಾನಿನ  ಆಕಾರ  ಹೇಳಿದರು.   ಹುಡುಗ  ಚುರುಕಾದ  “ ಟಪೋ  ಅನ್ನೋದಾ  ನೀವು ಹುಡುಕಿತ್ತಿರುವುದು.  ಅದು ನನಗೆ ಗೊತ್ತು “ ಎಂದು   ಮಾಡಿನ  ಮರೆಯಲ್ಲಿ ಅಡಗಿಸಿಟ್ಟಿದ್ದ  ಕೋವಿ  ತೋರಿಸಿದ.  ಆ ಹುಡುಗ  ಮುಂದೆ  ಊರ ಶಾಲೆ  ಮಾಸ್ತರ್ ಆದ  ನಂತರ  ಪುಂಡ ಹುಡುಗರ  ಬಾಯಲ್ಲಿ “  ಟಪೊ “ ಮಾಸ್ತರರಾದ.   

ದೆಹಲಿಯ  ಹೊರವಲಯದ  ಗಜಿಯಾಬಾದಿನಲ್ಲಿ   ಐದು ಸಾವಿರ ಕೋವಿ ಪೋಲಿಸರಲ್ಲಿ  ಇದ್ದರೆ  ಇಪ್ಪತ್ತು ಸಾವಿರ ಕೋವಿ ಲೈಸೆನ್ಸುದಾರರಲ್ಲಿಯೇ ಇದೆ   ಎನ್ನುತ್ತದೆ  ಇಂಗ್ಲೇಂಡಿನ ಪತ್ರಿಕೆಯ  ವರದಿ.    ಲೆಕ್ಕಕ್ಕೆ  ಸಿಗಗಿದುರುವುದು  ಎಷ್ಟೋ,  ಯಾರಿಗೂ  ಗೊತ್ತಿಲ್ಲ.. ನನ್ನಕ್ಕನ  ಮಗ  ಬಿಹಾರದ  ಕಾಲೇಜಿನ  ವಿದ್ಯಾರ್ಥಿಯಾಗಿರುವಾಗ  ಹೇಳುತ್ತಿದ್ದ.  "ಮಾವ,  ಅಲ್ಲೆಲ್ಲ  ’ ಕಟ್ಟಾ ’  ಊರಲ್ಲಿ ತಯಾರದ  ಪಿಸ್ಟೂಲ್  ಹೊಂದುವುದು  ಮಾಮೂಲಿ.   ಕೆಲವೊಮ್ಮೆ  ಹುಡುಗರು  ಶಾಲೆಗೂ  ತರುತ್ತಾರೆ. "

ಪೊಂಟಿ  ಚಡ್ಡಾ ಎನ್ನುವಾತ  ಉತ್ತರ  ಪ್ರದೇಶದ   ಮದ್ಯದ  ದೊರೆ.   ಅವನಿಗೆ ಹಲವು  ಕೋವಿಗಳ  ಪರವಾನಿಗೆ  ಇತ್ತು.     ಸಹೋದರನೊಂದಿಗೆ   ಪಾಲಿನ  ವಿಚಾರ  ಜಗಳ.  ಏನಾದರೂ  ಒಪ್ಪಂದಕ್ಕೆ  ಬರೋಣ  ಅಂತ  ಸೇರಿದರು,  ಇಬ್ಬರ  ಜತೆಯೂ   ದೊಡ್ಡ    ಬೆಂಗಾವಲು ಪಡೆ,    ಹಲವು  ಕೋವಿ ಹಿಡಕೊಂಡ  ರಕ್ಷಕರು.   ಮಾತುಕಥೆ  ಮದ್ಯೆ  ಯಾರೋ ಹಿತೈಶಿಗಳು [?]    ಮೊದಲ ಗುಂಡು ಹಾರಿಸಿ  ಗುಂಡು ಕಾಳಗ ಸುರುಮಾಡಿದರು.   ಗುಂಡಿನ  ಸದ್ದು ನಿಲ್ಲೊವಾಗ  ಪೊಂಟಿ  ಮತ್ತವನ  ಸಹೋದರ  ಇಬ್ಬರೂ  ಹೆಣವಾಗಿ ಮಲಗಿದ್ದರು. 





ನಮ್ಮಲ್ಲಿ  ಕೊಡವರಂತೆ    ಹಲವು ಜನಾಂಗಕ್ಕೆ   ಕೋವಿ ಎಂದರೆ  ಹೆಮ್ಮೆಯ ವಿಚಾರ.  ಅವರ ಕೈಯಿಂದ  ಕೋವಿ ಕಸಿದುಕೊಳ್ಳುವುದು ಕಷ್ಟ ಸಾದ್ಯ.     ಅತಿ  ಹೆಚ್ಚು  ನಾಗರಿಕರ  ಕೈಯಲಿ ಕೋವಿ  ಇರುವ  ಪಟ್ಟಿಯಲ್ಲಿ    ನಮ್ಮ  ದೇಶ  ಎರಡನೆ  ಸ್ಥಾನದಲ್ಲಿದೆಯಂತೆ   ಅಲ್ಲ  ಆಕ್ರಮ  ಕೋವಿಗಳ  ಸೇರಿಸಿದರೆ  ಮೊದಲನೆಯದೋ  ?    ನನ್ನ  ಗ್ರಾಮದಲ್ಲಿಯೇ  ಒಬ್ಬ   (ಕು)ಖ್ಯಾತ   ಅಕ್ರಮ  ಕೋವಿ  ತಯಾರಕನಿದ್ದಾನೆ.  ಅವನು ಹಲವು ಬಾರಿ  ಪೋಲಿಸರು ಹಿಡಿದರೂ   ವ್ಯಾಪಾರ ಲಾಬ  ಅವನನ್ನು  ಸಂಪೂರ್ಣ  ತ್ಯಜಿಸಲು ಬಿಡುವುದಿಲ್ಲ.  

ಸಂಪೂರ್ಣ ಕೋವಿ  ನಿವಾರಣೆ  ಸಾದ್ಯವಿಲ್ಲದ ವಿಚಾರ  ಬಿಡಿ.   ಆದರೂ  ನನ್ನದೊಂದು ಪ್ರಶ್ನೆ -  ನಮಗೆ ಬಂದೂಕು  ಸಂಸ್ಕೃತಿ  ಬೇಕಾ  ?   ನಾವು  ಮನೆಯಲ್ಲಿ  ಕೋವಿ ಇಟ್ಟುಕೊಳ್ಳಬೇಕಾ  ?  

4 comments:

  1. ಟ್ರಿಗ್ಗರ್ ಹ್ಯಾಪೀ ಎಂಬ ನುಡಿಗಟ್ಟೇ ಹೇಳುವಂತೆ ಕೋವಿ ಮಾತ್ರ ಅಲ್ಲ, ಯಾವುದೇ ಆಯುಧ ಅಷ್ಟೇ ಏಕೆ ಯುದ್ಧ ವಿದ್ಯೆ ಇದ್ದವರಿಗೆ ಅದರ ಬಳಕೆಯ ಚಪಲ ಬಿಟ್ಟದ್ದಲ್ಲ. ಆತ್ಮ ರಕ್ಷಣೆ, ಸಕಾರಣ ಎಂಬಿತ್ಯಾದಿ ಹೇಳಿಕೆಗಳೆಲ್ಲಾ ಅವಿಚಾರದ ಸಮರ್ಥನೆ ಮಾತ್ರ.

    ಕರಾಟೆ ಕಲಿತ ಹೊಸತರಲ್ಲಿ ನನ್ನ ಗೆಳೆಯನೊಬ್ಬ ವೀರಾವೇಶದಲ್ಲಿ ಭಾರೀ ನಾಯಿಯೊಂದರ ಮುಂದೆ ಪೌರುಷ ತೋರಲು ಹೋಗಿ ನರಳಿದ್ದು ಒಂದು ಮುಖ.

    ಕೇವಲ ಕಾಡಕಪಿಗಳಿಂದ ತೋಟ ರಕ್ಷಣೆಗಾಗಿ ಮನೆಯಲ್ಲಿದ್ದ ಕೋವಿ ಹಿರಿಯರ ಕಣ್ಣು ತಪ್ಪಿದಾಗ ಎಳೆಯರಾಟದಲ್ಲಿ ಮುಗ್ದ ಮನುಷ್ಯ ಜೀವವನ್ನೇ ಬಲಿ ತೆಗೆದುಕೊಂಡ ಘಟನೆಗಳು ಎಷ್ಟೂ ಕೇಳಿದ್ದೇವೆ. ಅಮೆರಿಕಾ ಸೋವಿಯತ್ ರಷ್ಯಾಗಳ ಆಯುಧಾಗಾರ ಬಲಿತಾಗಲೇ ಅಲ್ಲವೇ ತಾರಾಸಮರದ ದಟ್ಟ ಸಂಭವನೀಯತೆ ಜಗತ್ತನ್ನು ಕಾಡಿದ್ದು. ಇಂದು ಮನೆಮನೆಗಳನ್ನಲ್ಲ, ದೇಶ ದೇಶಗಳನ್ನೂ ನಿರಸ್ತ್ರಗೊಳಿಸುವ ಕುರಿತು ಚಿಂತಿಸದಿದ್ದರೆ, ಕಾರ್ಯತತ್ಪರರಾಗದಿದ್ದರೆ ಭ್ರಾಮಕ ಪ್ರಳಯಗಳೂ ಪರಿಣಾಮದಲ್ಲಿ ನಿಜವಾಗುವುದರಲ್ಲ್ಲಿಯಾವ ಸಂದೇಹವೂ ಇಲ್ಲ.

    ಅಶೋಕವರ್ಧನ

    ReplyDelete
  2. ಕೋವಿಗಳು ನಿಜವಾಗಿಯೂ ಇರುವುದು ಮನೆಗಳಲ್ಲಲ್ಲ - ಮನಸ್ಸಿನಲ್ಲಿ.
    ಮನೆಯಲ್ಲಿರುವ ಕೋವಿಯನ್ನು ತೆಗೆದುಹಾಕಿದರೆ ಆ ಜಾಗ ತುಂಬಿಸಲು ಮತ್ತೇನೋ ಹೊಸತು ಬರಬಹುದಲ್ಲವೇ?
    ಮನವನ್ನು ನಿರಸ್ತ್ರಗೊಳಿಸುವುದು ಮುಖ್ಯ ಎಂದು ಅನಿಸುವುದು ನನಗೆ. ಬಂದೂಕು ಬೆಂಕಿಯಂತೆ - ಅದು ಬಳಸುವವನ ಕೈಯ್ಯ ಜಾಣ್ಮೆ. ಬೆಳಗಲೂ ಬಲ್ಲುದು, ಸುಡಲೂ ಬಹುದು..

    ReplyDelete
  3. ಕೋವಿ ಲೈಸನ್ಸ್ ಇಷ್ಟು ಕಷ್ಟ ಇದ್ದೇ ನಮ್ಮ ದೇಶದಲ್ಲಿ ಇಷ್ಟೆಲ್ಲಾ ಕೋವಿಗಳು ಓಡಾಡುತ್ತವೆ ಅಂದರೆ ಇನ್ನು ಅಮೆರಿಕಾದಂತೆ ಸುಲಭವಾಗಿ ಲೈಸನ್ಸ್ ಸಿಗುವುದಾಗಿದ್ದರೆ ಹೇಗಿದ್ದಿರಬಹುದು ಪರಿಸ್ತತಿ! ಬಂದೂಕು ಸಂಸ್ಕೃತಿ ಖಂಡಿತಾ ಬೇಡ.

    ReplyDelete
  4. ನನ್ನಲ್ಲಿ ಕೋವಿ ಇಲ್ಲ,ಮನೆಯನ್ನು ಕಾಯುವ ನಾಯಿಯೂ ಇಲ್ಲ.ಕಾಡಿನ ಪಕ್ಕದ ಮನೆ ,ಸಹಜವಾಗಿಯೇ ಕಾಡು ಪ್ರಾಣಿಗಳ ಉಪಟಳ.ಆದರೂ ಕೋವಿ ಬೇಕು ಎಂದೆನಿಸಿಲ್ಲ.ಆದರೆ ಒಂದು ಸಮಾಜವಾಗಿ ಕೋವಿ ಅಥವಾ ಸ್ವರಕ್ಶಣೆಗಾಗಿ ಆಯುಧ ಇಲ್ಲದಿದ್ದರೆ ಹೇಗೆ ಎಂದೆನಿಸುತ್ತದೆ.ಸಂಪೂರ್ಣ ನಿಶೇಧ ಸಲ್ಲ.ಅಮೇರಿಕಾದಲ್ಲಿ ಆದದ್ದು ನನ್ನ ಅಂದಾಜಿನಂತೆ ಕೋವಿಯ ಪರಿಣಾಮ ಅಲ್ಲ.ಮಾನಸಿಕ ಅಸಮತೋಲನ ಅದು.ವೈಭೋಗದ ಹಿಂದೆ ಓಡುವುದರಿಂದ ಉಂಟಾದ ಅಸಂತ್ರಿಪ್ತಿಯ ಪರಿಣಾಮ ಅದು.

    ReplyDelete