Thursday, October 15, 2009

ಕುಲಾಂತರಿ ಬದನೆಗೆ ನಾವು ಪ್ರಯೋಗ ಪಶುಗಳು.



ಕುಲಾಂತರ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಬಂದ ಪಟ್ಟ ಸಮಿತಿ ಒಪ್ಪಿದೆ ಎಂದು ಇಂದಿನ ಪತ್ರಿಕೆಯಲ್ಲಿ ಕಂಡು ಆಘಾತವಾಯಿತು. ಹಲವಾರು ವರ್ಷಗಳಿಂದ ನಡೆಯುತ್ತಿರುವ ಆಂದೋಲನಕ್ಕೆ ಇದೊಂದು ಹಿನ್ನೆಡೆ. ಆದರೆ ಈ ಸಮಿತಿಯಿಂದ ನಾವು ನ್ಯಾಯಬದ್ದ ವರದಿ ನಿರೀಕ್ಷಿಸುವಂತಿರಲಿಲ್ಲ.

ಕುಲಾಂತರಿ ತಂತ್ರಜ್ನಾನ ಒಪ್ಪಿಗೆ ಸಮಿತಿಯ ಮೂರು ಜನ ಸದಸ್ಯರ ಹಿನ್ನೆಲೆ ಸಂಶಯಾಸ್ಪದ.
ಇದು ಪೋಲಿಸು ಇಲಾಖೆಯ ಸಲಹಾ ಸಮಿತಿಗೆ ದಾವೂದ್ ಇಬ್ರಾಯಿಯನ್ನು ನೇಮಿಸಿದಂತಾಗಿದೆ. ಇಬ್ಬರು ಮೊದಲು ಮಹಿಕೊ ಬೀಜ ಕಂಪೇನಿ ಕೃಪಾಪೋಷಿತ ಸಂಶೋದನೆಯಲ್ಲಿ ನಿರತರಾಗಿದ್ದರು. ಮೂರನೆಯವರು ಸ್ವತಹ ಕುಲಾಂತರಿ ತಂತ್ರಜ್ನಾನದಲ್ಲಿ ನಿರತರಾಗಿರುವವರು.

ನಮ್ಮ ದೇಶದಲ್ಲಿ ಕಡಿಮೆ ಉತ್ಪತ್ತಿಗೆ ಕಾರಣ ಕಳಪೆ ಗುಣಮಟ್ಟದ ಕೀಟನಾಶಕವೆಂದು ಕೆಲವು ನಮ್ಮ ಹಿತಚಿಂತಕ ಕಂಪೇನಿಗಳು ಬೆಳೆಗೆ ಕೀಟಗಳ ನಿರೋದಿಸುವ ಶಕ್ತಿ ಇದ್ದರೆ ಉತ್ತಮವೆಂದು ಡಂಗುರ ಸಾರುತ್ತಿವೆ. ಕೀಟಗಳು ತಿನ್ನೋದೆ ಇಲ್ಲವಾದ ಕಾರಣ ಬೆಳೆ ಕೊಯಿಲಾಗುವಾಗ ಹೆಚ್ಚು ಸಿಗುತ್ತದೆ. ಬಿತ್ತನೆ ಬೀಜ ಮಾತ್ರ ಪ್ರತಿ ಸಲ ಖರೀದಿಸಬೇಕು ಹಾಗೂ ಸ್ವಲ್ಪ ದುಬಾರಿ. ಇದು ದೊಡ್ಡ ವಿಷಯವೇ ಅಲ್ಲ ಎನ್ನುತ್ತಾರೆ ಬೀಜ ಕಂಪೇನಿಯ ಪಾಠ ಉರುಹೊಡೆದ ನಮ್ಮ ಅಧಿಕಾರಿಗಳು ರಾಜಕಾರಣಿಗಳು. .

ಸರಿ ಮಾರಾಯರೇ, ಅವರು ಏನು ಬೇಕಾದರು ಮಾಡಿಕೊಳ್ಳಲಿ ಎಂದು ನಾವು ಸುಮ್ಮನಿರುವಂತಿಲ್ಲ. ಇದರಲ್ಲಿ ಸಾಮಾನ್ಯ ಬದನೆಗಿಂತ ಶೇ. ೧೫ ರಷ್ಟು ಕಡಿಮೆ ಕಾಲೊರಿ ಅಂತೆ. ಹಾಗಾದರೆ ಹೆಚ್ಚು ತಿಂದರಾಯಿತು ಬಿಡಿ. ಈ ಕುಲಾಂತರಿ ಆಹಾರ ಪದಾರ್ಥಗಳಿಗೆ ಗುರುತು ಚೀಟಿ ಅಂಟಿಸುವ ಯೋಜನೆ ಇಲ್ಲ. ನಮ್ಮ ಊಟದ ಬಟ್ಟಲಿನಲ್ಲಿ ಕುಲಾಂತರಿ ಆಹಾರ ಸಾಮುಗ್ರಿ ತಲಪುವಾಗಲೂ ನಮಗೆ ತಿಳಿಯಲು ಅಸಾದ್ಯ. ಅದುದರಿಂದ ಇದನ್ನು ಎಲ್ಲರೂ ವಿರೋದಿಸುವ ಅಗತ್ಯ ಇರುತ್ತದೆ. ಪ್ರಪಂಚದಲ್ಲಿ ಇಂದು ಕುಲಾಂತರಿ ಅಹಾರ ಪದಾರ್ಥ ಚಲಾವಣೆ ಇರುವುದು ಅಮೇರಿಕದ ಬಾಗವಾದ ಹವಾಯಿ ದ್ವೀಪದಲ್ಲಿ ಪಪ್ಪಾಯಿ ಹಣ್ಣು ಮಾತ್ರ.

 ಬದನೆಗೆ ಬಾರತವೇ ತವರು. ಬದನೆಯ ಮಟ್ಟಿಗೆ ಪ್ರಪಂಚದಲ್ಲಿ ಎಲ್ಲೂ ಇಷ್ಟು ವಿವಿದತೆ ಇರುವುದಿಲ್ಲ. ಈಗ ಇದನ್ನು ಸರಕಾರ ಅನುಮೋದಿಸಿದರೆ ಪ್ರಪಂಚದಲ್ಲಿಯೇ ಪ್ರಥಮವಾಗಿ ತವರಿನಲ್ಲಿಯೇ ಒಪ್ಪಿದ ಕುಲಾಂತರಿ ಆಹಾರ ಪದಾರ್ಥವಾಗುತ್ತದೆ ಮತ್ತು ಈ ವಿವಿದತೆಯನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. . ಚೀನದವರು ಸೊಯಾ ಅವರೆ ಮತ್ತು ಪೆರು ದೇಶದವರು ಬಟಾಟೆಯಲ್ಲಿ ಈ ದೊಂಬರಾಟ ಒಪ್ಪಿಲ್ಲ ಎನ್ನುವುದನ್ನು ನಾವು ಈಗ ನೆನಪಿಸಿಕೊಳ್ಳಬೇಕು.

ಹತ್ತಿಯಂತಹ ಮನುಷ್ಯ ತಿನ್ನದ ಬೆಳೆಯು ಕುಲಾಂತರಿ ಆದಾಗ ಅಲ್ಲರ್ಜಿ ಮತ್ತು ಪ್ರಾಣಿಗಳ ಸಾವಿಗೆ ಕಾರಣವಾಗಬಹುದಾದರೆ ಬದನೆಯಂತಹ ನಿತ್ಯ ಬಳಕೆ ಆಹಾರ ಪದಾರ್ಥಕ್ಕೆ ಇದನ್ನು ಬೆರೆಸಿದರೆ ಆಗುವ ಅನಾಹುತ ಊಹಿಸಲು ಅಸಾದ್ಯ.

ನಾನು ಪ್ರಯೋಗಾಲಯದ ಇಲಿ ಅಲ್ಲ ಎಂದು ಸಾವಿರಾರು ಜನ ಈ ಇ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಇ ಪತ್ರಗಳನ್ನು ದೊಡ್ಡ ಸಿಂಗರಿಗೆ ಕಳುಹಿಸಲಾಗಿತ್ತು. ಅನಂತರ ನಿಮ್ಮ ಕಾಳಜಿ ಅರ್ಥವಾಗಿದೆ ಎಂದು ಕೇಂದ್ರ ಸರಕಾರದ ಪತ್ರವೂ ನನಗೆ ಬಂದಿತ್ತು.

ಈಗ ತಜ್ನರ ವರದಿ ಕೇಂದ್ರ ಸರಕಾರದ ಕೈ ಸೇರಿದೆ. ಇನ್ನು ಬಾಕಿ ಇರುವುದು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಮುದ್ರೆ ಮಾತ್ರ ಬಾಕಿ. ಗಾಬರಿ ಏನೂ ಬೇಡ. ನಾನು ಸರಿಯಾಗಿ ವ್ಯವಸ್ಥೆ ಮಾಡುತ್ತೇನೆ. ಇನ್ನೂ ನನ್ನ ಕೈಯಲ್ಲೇ ಇದೆ ಎನ್ನುತ್ತಾರೆ ಕೈ ಪಕ್ಷದ ಮಂತ್ರಿ ಜೈರಾಮ ರಮೇಶ. ನಾಲ್ಕು ತಿಂಗಳು ಹಿಂದೆ ತಾನು ಕುಲಾಂತರಿ ಅಹಾರದ ವಿರೋದ ಎಂದು ಹೇಳಿದ ಮಹಾನ್ ಸಾಹಸಿ ಜೈರಾಮರ ಕೈಯಲ್ಲಿರುವುದೇ ನನಗೆ ಗಾಬರಿಗೆ ಕಾರಣ.


ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಸಿಯಾಚನ್ ಗಡಿ ಪ್ರದೇಶಕ್ಕೆ ಹೋದದ್ದೂ ಇವರ ಸಾಹಸದ ಎದುರು ಬರೇ ಸಪ್ಪೆ. ನಮ್ಮ ವೀರ ಧೀರ ಪರಿಸರ ಮಂತ್ರಿ ಜೈರಾಮ್ ರಮೇಶರು ಬೋಪಾಲಕ್ಕೆ ಹೋದದ್ದು ಮಾತ್ರವಲ್ಲ ಪಾಳು ಬಿದ್ದಿರುವ ಕೀಟನಾಶಕ ಕಾರ್ಖಾನೆಯಲ್ಲಿ ರಾಶಿಬಿದ್ದ ಕಲ್ಮಶವನ್ನೂ ಮುಟ್ಟಿದರು. ಸುತ್ತುಮುತ್ತೆಲ್ಲ ಇಷ್ಟು ಹಸಿರಾಗಿರುವಾಗ ಬೂಮಿ ವಿಷಮಯವಾಗಿರಲು ಸಾದ್ಯವೇ ? ಎಂದು ಪ್ರಶ್ನಿಸಿದರು. ನಾನು ಹೋಗಿ ಮುಟ್ಟಿ ನೋಡಿದೆ, ಆದರೂ ಕೆಮ್ಮುತ್ತಿಲ್ಲ ಆರೋಗ್ಯವಾಗಿ ಹಾಗೂ ಜೀವಂತವಾಗಿದ್ದೇನೆ. ಅದುದರಿಂದ ಈ ಇಪ್ಪತ್ತೈದು ವರ್ಷ ಹಿಂದಿನ ದುರಂತ ಮರೆತು ನಾವು ಮುಂದಕ್ಕೆ ಸಾಗಬೇಕು ಎಂದು ಅಪ್ಪಣೆ ಕೊಡಿಸಿದರು. ಹಾಗೆಯೇ ಕುಲಾಂತರಿ ಬದನೆಯಲ್ಲಿ ಮಾಡಿದ ಪಲ್ಯ ತಿಂದರೂ ನಾನು ಬದುಕಿದ್ದೇನೆ ಎನ್ನಬಹುದು ಈ ಮಹಾನುಭಾವರು …….. ರಾಮ್, ರಾಮ್

ಆದರೂ ನಮ್ಮ ಪ್ರಯತ್ನ ನಾವು ಮಾಡೋಣ. ಪರಿಸರ ಮಂತ್ರಿ ಜೈರಾಮರಿಗೆ ಒಂದು ಪತ್ರ ಬರೆಯಿರಿ. ವಿಳಾಸ ಹಾಗೂ ಸಲಹೆಗೆ ಈ ಕೊಂಡಿಯನ್ನು ಕ್ಲಿಕ್ಕಿಸ.

ಬಾರತಕ್ಕೆ ಈ ಕುಲಾಂತರಿ ಬೆಳೆಗಳು ಬೇಕೊ ಅನ್ನುವ ವಿಚಾರದಲ್ಲಿ ಹೆಚ್ಚಿನ ಮಾಹಿತಿಗೆ  

Saturday, October 10, 2009

ಪ್ರವಾಸಿ ಸುರಕ್ಷತೆ ಮಟ್ಟಿಗೆ ಜಪಾನಿನಲ್ಲಿ ತಲೆ ನೋವಿಲ್ಲ.

ನಾ ಕಂಡ ದೇಶಗಳಲ್ಲಿ ಪ್ರವಾಸಿಗೆ ಹೆಚ್ಚು ನಿರ್ಭಯವಾಗಿ ಓಡಾಡಲು ಸಾದ್ಯವಿರುವುದು ಕನಿಷ್ಟ ಅಪಾಯಕಾರಿ ಜಪಾನ್ ಅನ್ನಬಹುದು. ಕಳ್ಳರ ಹಾವಳಿ ಇಲ್ಲ. ಅದಕ್ಕೊಂದು ರುಜುವಾತು ಎಂದರೆ ನಾನು ಜಪಾನು ತಲಪಿದ ಮೊದಲ ರಾತ್ರಿ ನಿದ್ರಿಸಿದ್ದು ರಸ್ತೆ ಪಕ್ಕದಲ್ಲಿರುವ ಜನ ಸಾಗುವ ಮೇಲು ಸೇತುವೆಯಲ್ಲಿ.

ಟೋಕಿಯೊ ಪಟ್ಟಣದ ಒಳಗಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಂಜೆಯಾಗಿತ್ತು. ಹೊರಬಂದು ಸೈಕಲ್ ಏರಿದೆ. ೫೫೦ ಕಿಮಿ ದೂರದ ಒಸಕಾ ನನ್ನ ಗುರಿಯಾಗಿತ್ತು. ಕವಸಾಕಿ ಯೊಕೊಹೊಮ ಊರುಗಳು ಕಳೆಯಿತು. ಕತ್ತಲಾಯಿತು. ಜನದಟ್ಟಣೆ ಕಡಿಮೆಯಾಗಲಿಲ್ಲ. ಸಾಮಾನ್ಯವಾಗಿ ರಾತ್ರಿ ನಿದ್ರಿಸಲು ದಾರಿಹೋಕರಿಗೆ ಪಕ್ಕನೆ ಕಣ್ಣಿಗೆ ಬೀಳದಂತಹ ಜಾಗ ಆರಿಸಿಕೊಳ್ಳುತ್ತಿದ್ದೆ. ಅಂದು ಅಂತಹ ಜಾಗ ಕಾಣಲಿಲ್ಲ. ನನಗೆ ಅಪರಿಚಿತ ಹೊಸ ಪರಿಸರ. ವಿಪರೀತ ಸುಸ್ತಾಗಿತ್ತು. ಹಾಗೆ ಒಂದು ಮೇಲು ಸೇತುವೆ ಮೇಲೆ ನನ್ನ ಮಲಗುವ ಚೀಲ ಬಿಡಿಸಿದೆ.

ನಿದ್ರೆ ಬರುವ ವರೆಗೂ ದಾರಿಯಲ್ಲಿ ಸಾಗುವ ಜನರ ವರ್ತನೆ ಗಮನಿಸುತ್ತಿದ್ದೆ. ಯಾರೂ ನನ್ನ ಬಗೆಗೆ ಕುತೂಹಲ ತೋರಿಸಿದಂತೆ ಕಾಣಲಿಲ್ಲ. ದೀರ್ಘ ವಿಮಾನ ಪ್ರಯಾಣದಿಂದ ಸುಸ್ತಾದ ಕಾರಣ ಚೆನ್ನಾಗಿ ನಿದ್ದೆ ಬಂತು. ಬೆಳಕು ಹರಿಯುವಾಗ ಎದ್ದೆ. ಸೈಕಲು ಏರಿ ಪ್ರಯಾಣ ಮುಂದುವರಿಸಿದೆ. ಆ ರಾತ್ರಿ ನನ್ನ ಇಡೀ ಪ್ರವಾಸದಲ್ಲಿ ಹೆಚ್ಚು ಜನ ಕಾಣುವ ಪ್ರದೇಶದಲ್ಲಿ ನಾನು ನಿದ್ದೆಮಾಡಿದ್ದು.

ಮುಂದೆಯೂ ಜಪಾನಿನಲ್ಲಿ ರಸ್ತೆ ಪಕ್ಕದಲ್ಲಿ, ಗದ್ದೆಗಳ ನಡುವಿನ ಹಾದಿಯಲ್ಲಿ ನನ್ನ ಪುಟ್ಟ ಡೇರೆ ಬಿಡಿಸಿ ಮಲಗುವ ಚೀಲದಲ್ಲಿ ನಿದ್ರಿಸಿದ್ದೇನೆ. ಪೆಟ್ರೋಲ್ ಪಂಪ್ ಶೌಚಾಲಯವನ್ನೂ ಉಪಯೋಸಿದ್ದೇನೆ ಎಂದು ಅಸ್ಪಷ್ಟ ನೆನಪು

ಜಪಾನು ಎಂದರೆ ನಾಲ್ಕು ಮುಖ್ಯ ದ್ವೀಪಗಳು. ಹೊಕೈಡೊ ಹೊಂಶು ಶಿಕೋಕು ಕ್ಯುಶು. ನಾನು ಹೊಂಶುನಲ್ಲಿರುವ ಟೋಕಿಯೊದಲ್ಲಿಳಿದು ಸೈಕಲಿನಲ್ಲಿ ೫೫೦ ಕಿಮಿ ದೂರದ ಒಸಕಾ ವರೆಗೆ ಸೈಕಲು ತುಳಿದೆ. ಪುಜಿ ಪರ್ವತದ ಸಮೀಪ ಸಾಗುವ ಪರ್ವತ ರಸ್ತೆ. ಅಲ್ಲಿಂದ ಶಿಕೋಕು ದ್ವೀಪದಲ್ಲಿರುವ ಟಕಮಟ್ಸು ಎಂಬಲ್ಲಿಗೆ ಫೆರಿ ಪ್ರಯಾಣ. ಅಲ್ಲಿ ಈಗ ಸೇತುವೆ ಆಗಿದೆಯಂತೆ. ಅಲ್ಲಿಂದ ಮಟ್ಸುಯಾಮ ವರೆಗೆ ಸೈಕಲು. ಕೊನೆಗೆ ಮಟ್ಸುಯಾಮದಿಂದ ಪುಕೋಕ ವಿಮಾನ ನಿಲ್ದಾಣದ ಹತ್ತಿರವಿರುವ ಕ್ಯುಶು ದ್ವೀಪದಲ್ಲಿರುವ ಕಿಟಕಾಯಿಶು ಎಂಬಲ್ಲಿಗೆ ಫೆರಿ. ಹೀಗೆ ಜಪಾನಿನಲ್ಲಿ ಎರಡು ಬಾರಿ ಫೆರಿ ಉಪಯೋಗಿಸಿ ಸಮುದ್ರ ದಾಟಿದೆ. ಎರಡೂ ನಾಲ್ಕಾರು ಘಂಟೆ ಪ್ರಯಾಣ.

ನನಗೆ ಬಂದಿಳಿಯುವಾಗ ಮಸನೋಬು ಫುಕೋಕ ಎಂಬ ರೈತರ ಹೆಸರು ಮತ್ತು ಸಮೀಪದ ಮಟ್ಸುಯಾಮ ಪಟ್ಟಣದ ಹೆಸರು ಮಾತ್ರ ಗೊತ್ತಿದ್ದರೂ ಹುಡುಕುವುದರಲ್ಲಿ ಸಫಲನಾದೆ. ಅಷ್ಟು ಕನಿಷ್ಟ ಮಾಹಿತಿಯೊಂದಿಗೆ ನಾನು ಹೊರಟಿದ್ದೆ ಎನ್ನುವುದರ ಯೋಚಿಸುವಾಗ ಇಂದು ಅಶ್ಚರ್ಯವಾಗುತ್ತದೆ. ನಾನು ಹುಡುಕ ಹೊರಟ ಫುಕೋಕರು ಮಟ್ಸುಯಾಮ ಪಟ್ಟಣದ ಸಮೀಪದ ಇಯೊ ಎಂಬ ಹಳ್ಳಿಯಲ್ಲಿ ವಾಸ.



ಫುಕೋಕರ ಮನೆಯ ಆವರಣ ಹೊಕ್ಕಾಗ ನನಗೊಂದು ಪರಿಚಿತ ಪರಿಸರದ ಅನುಭವ. ನಮ್ಮಲ್ಲಿ ಹಳೆ ಮನೆಗಳಲ್ಲಿರುವಂತೆ ಆವರಣ ಗೋಡೆಗೆ ಒಂದು ನಡೆದು ಒಳಹೋಗುವ ಬಾಗಿಲು. ಅದಕ್ಕೊಂದು ಪುಟ್ಟ ಮಾಡು. ಮನೆಯ ಎದುರೊಂದು ಎರಡು ಮಾಡಿನ ಮುಖಮಂಟಪವಿರುವುದು ಚಿತ್ರದ ನಡು ಬಾಗದಲ್ಲಿ ಕಾಣುತ್ತದೆ. ಕಟ್ಟಿದ ಶೈಲಿ ಬಿನ್ನವಾಗಿದ್ದರೂ ಹೋಲಿಕೆ ಕಂಡಂತಾಯಿತು.

ಅಲ್ಲಿನ ಜನ ಬಹಳ ವಿನಯವಂತರು ಆದರೂ ನಾನು ಎನ್ನಲು ಎದೆ ಬದಲು ಮೂಗು ತೋರಿಸುವ ಕೈ ಸನ್ನೆ ಗೊಂದಲ ಉಂಟುಮಾಡುತ್ತದೆ. ವಂದನೆ ಎಂದರೆ ಬಾಗುವುದು ಎರಡು ಸಲಕ್ಕೆ ಸಿಮಿತಗೊಳಿಸದೆ ನಾವು ಪುನಃ ಬಗ್ಗಿದರೆ ಅವರೂ ಬಗ್ಗುತ್ತಾರೆ. ಇಂಗ್ಲೀಷ್ ಅರಿವು ಕಡಿಮೆ. ನೀವು ಅವರಲ್ಲಿಗೆ ಹೋದರೆ ಪದ ಹುಡುಕಲು ಅವರ ಡಿಕ್ಷನರಿ ಹೊರಬರುತ್ತದೆ.

ಒಮ್ಮೆ ಒಂದು ಮನೆಯಲ್ಲಿ ಕುಡಿಯುವ ನೀರು ಬಾಟಲಿಗೆ ತುಂಬಿ ಕೊಡಬಹುದೋ ? ಕೇಳಿದೆ. ಹಸುರು ಚಾ ಹಾಕಿ ಕೊಡಲೇ ಎಂದರು. ನನಗೆ ಹಾಗೆಂದರೆ ಏನೆಂದು ಕಲ್ಪನೆ ಇಲ್ಲವಾದರೂ ಒಪ್ಪಿದೆ. ನಾನು ಹಾಲು ಸಕ್ಕರೆ ಹಾಕಿದ ಚಾ ಕೊಡುತ್ತಾರೆ ಅಂದುಕೊಂಡಿದ್ದೆ. ನಮ್ಮಲ್ಲಿ ಕುದಿಸುವಾಗ ಮುಡಿವಾಳದ ಬೇರು ಬೆರೆಸಿದಂತಹ ನೀರಿಗೆ ಹೋಲುವಂತದ್ದು ಜಪಾನಿನವರ ಹಸುರು ಚಾ.

ಜಪಾನಿನಲ್ಲಿ ಬ್ರೆಡ್ ಬದಿಯ ತುಂಡುಗಳನ್ನು ಅಂಗಡಿಯಲ್ಲಿ ಮಾರುವ ಪಾಕೇಟುಗಳಿಗೆ ಹಾಕುವುದಿಲ್ಲ. ಬೇಕರಿಗಳ ಬಳಿ ಹೋದರೆ ನಮಗೆ ಈ ಬದಿಯ ತುಂಡುಗಳ ಬಹಳ ಅಗ್ಗವಾಗಿ ಪಡಕೊಳ್ಳಲು ಸಾದ್ಯ. ಇದೂ ನನ್ನ ಹಣ ಉಳಿಸಲು ಸಹಾಯ ಮಾಡಿತು. ತುಂಬಾ ದುಬಾರಿ ದೇಶವಾದ ಜಪಾನಿನಲ್ಲಿ ಕನಿಷ್ಟ ಖರ್ಚಿನಲ್ಲಿ ಸುದಾರಿಸಿದೆ.

Friday, October 09, 2009

ಬಾರತದಲ್ಲೊಂದು ಹಸಿರು ಪಕ್ಷ




ಬಾರತದ ಪ್ರಮುಖ ಪರಿಸರವಾದಿಯೊಬ್ಬರು ಹಸಿರು ಪಕ್ಷ ಸ್ಥಾಪನೆಯ ಪ್ರಯತ್ನದಲ್ಲಿದ್ದಾರೆ. ಕಲಕತ್ತಾ ರಸ್ತೆಗಳಿಂದ ಲಕ್ಷಾಂತರ ಹಳೆಯ ಗುಜರಿ ವಾಹನಗಳ ಹೊರ ಹಾಕಲು ಸಫಲರಾದ ಸುಬಾಷ ದತ್ತ ದೇಶದ ಪರಿಸರ ಹೋರಾಟಕ್ಕೆ ನ್ಯಾಯ ದೊರಕಿಸಲು ರಾಜಕೀಯ ಪಕ್ಷ ಪ್ರಾರಂಬಿಸಲು ಹೊರಟಿದ್ದಾರೆ.

ಕಲಕತ್ತ ನಗರದಲ್ಲಿ ಹಳೆಯ ವಾಹನ ನಿಷೇದಕ್ಕೊಸ್ಕರ ಉಚ್ಚ ನ್ಯಾಯಲಯದ ವರೆಗೂ ಹೋಗಿದ್ದಾರೆ. ಪರಿಣಾಮ ಹದಿನೈದು ವರುಷಗಿಂತ ಹಳೆಯವಾಹನಕ್ಕೆ ನಿರ್ಬಂದ ವಿದಿಸಲಾಗಿದೆ. ಹಲವು ಬಾರಿ ಮುಂದೂಡಲ್ಪಟ್ಟು ಕೊನೆಗೂ ಈ ವರ್ಷದ  ಆಗಸ್ತ್ ಒಂದರಿಂದ ಕಾರ್ಯಗತವಾದ ನಂತರ ಅಲ್ಲಿನ ವಾಯು ಮಲೀನತೆ ಗಣನೀಯವಾಗಿ ಕುಗ್ಗಿದೆಯಂತೆ.

ವೃತ್ತಿಯಲ್ಲಿ ಇವರೊಬ್ಬ ಲೆಕ್ಕ ಪರಿಶೋಧಕರು. ಕಳೆದ ಮೂವತ್ತು ವರ್ಷಗಳಿಂದ ಬಾರತದಲ್ಲಿ ಪರಿಸರ ಮತ್ತು ಪರಂಪರೆ ತಾಣ ಉಳಿಸಿಕೊಳ್ಳಲು ಅತ್ಯಂತ ಹೆಚ್ಚು ಸಲ ನ್ಯಾಯಾಲಯ ಮೊರೆ ಹೊಕ್ಕವರು.

೧೯೭೮ರಲ್ಲಿ ಒಂದು ಮರ ಕಡಿಯುವುದರ ಉಳಿಸಲು ಪ್ರತಿಭಟನೆ ಕೈಗೊಂಡ ದತ್ತರು ತನ್ಮೂಲಕ ಪರಿಸರ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು. ಪ್ರಥಮ ಚುಂಬನದಲ್ಲಿ .. ಅನ್ನುವಂತೆ ಅಂದು ಆ ಮರಕ್ಕಾಗಿ ಜೈಲು ವಾಸವೂ ಅನುಭವವಾಯಿತು. ಅನಂತರ ಎಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಕೇಸುಗಳ ದಾಖಲಿಸಿದ್ದಾರೆ ಮತ್ತು ಅವುಗಳಲ್ಲಿ ಶೇಕಡ ಎಪ್ಪತ್ತರಲ್ಲಿ ಗೆದ್ದಿದ್ದಾರೆ. ವಾಯುನೆಲೆ ಸುತ್ತಲು ವಾಸಿಸುವವರು ಕಿವುಡರಾಗುವುದರಿಂದ ಹಿಡಿದು ಗಂಗಾ ನದಿಗೆ ಹೊಲಸು ಬಿಸಾಕುವ ವಿಚಾರದ ವರೆಗೆ ವಿಬಿನ್ನ ವಿಚಾರಗಳ ಬಗ್ಗೆ ಹೋರಾಟ ನಡೆಸಿದ್ದಾರೆ. ಇವರ ಪ್ರಯತ್ನದಿಂದಾಗಿ ೧೯೯೬ರಲ್ಲಿ   ದೇಶಕ್ಕೆ ಪ್ರಥಮವಾಗಿ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯ ಮಟ್ಟದ ಪರಿಸರ ಬೆಂಚ್ ಪ್ರಾರಂಬಿಸಲ್ಪಟ್ಟಿತು

ಹಸಿರು ಪಕ್ಷದ ಅನಿವಾರ್ಯತೆಯನ್ನು ಬೊಟ್ಟುಮಾಡುವ ದತ್ತರು ಪರಿಸರ ಉಳಿಸುವ ಮಟ್ಟಿಗೆ ರಾಜಕೀಯ ಪಕ್ಷಗಳೆಲ್ಲ ಪಕ್ಕ ಕಳ್ಳರು ಎನ್ನುತ್ತಾರೆ. ಕಡಲತಡಿಯಲ್ಲಿ ರಸಾಯನಿಕ ಕಾರ್ಖಾನೆ ವಿರೋದಿಸುವ ದೀದಿಯವರ ತ್ರಿನಮೂಲ್ ಪಕ್ಷ ಹಳೆಯ ಗುಜರಿ ವಾಹನಗಳ ಬೆಂಬಲಿಸುತ್ತದೆ.

ಅಲ್ಲಿನ ಹಸುರು ಪಕ್ಷದೊಂದಿಗೆ ಸಂವಾದಕ್ಕೆ ಸಮಾನಾಸಕ್ತರೊಂದಿಗೆ ಇತ್ತೀಚೆಗೆ ಇಂಗ್ಲೇಂಡ್, ಜರ್ಮನಿಯ ಪ್ರವಾಸ ಕೈಗೊಂಡ ಶ್ರೀ ದತ್ತರು ಪರಿಸರ ಹೋರಾಟ ಇಂದು ಸ್ಥಳೀಯ ವಿಚಾರವಾಗಿಯೇ ಉಳಿದಿದ್ದು ಸಮುಗ್ರ ಹೋರಾಟಕ್ಕೆ ರಾಷ್ಟ್ರೀಯ ಪಕ್ಷದ ಅಗತ್ಯ ಒತ್ತಿ ಹೇಳುತ್ತಾರೆ. ನಮಗೆ ಅಲ್ಲವಾದರೂ ಕಲಕತ್ತದ ಮತದಾರರಿಗೆ ಮುಂದಿನ ಚುನಾವಣೆಯಲ್ಲಿ ಇವರನ್ನು ಬೆಂಬಲಿಸುವ ಅವಕಾಶ ದೊರಕುವುದು ಖಚಿತ ಎನಿಸುತ್ತದೆ.

Sunday, October 04, 2009

ಸೈಕಲು ಡೈನೆಮೊ ಹಾಗೂ ವಿದ್ಯುತ್ ತಯಾರಿ


ಇಂದು ಜಾಲದಲ್ಲಿ ಒಂದು ಆಫ್ರಿಕದ ಹುಡುಗ ಸೈಕಲ್ ಡೈನೆಮೊ ಕೇಂದ್ರಿತ ವಿದ್ಯುತ್ ಗಾಳಿ ಯಂತ್ರ ಮಾಡಿದ ವಿವರಗಳು ಕಣ್ಣಿಗೆ ಬಿತ್ತು. ನನ್ನ ಸೈಕಲು ಪ್ರವಾಸದ ಸಮಯ ಇಂತಹ ಡೈನೆಮೊ ನನಗೆ ರಸ್ತೆ ಕಾಣಲು ಮಾತ್ರವಲ್ಲ ಡೇರೆಯೊಳಗೆ ಕೂಡ ಅಗತ್ಯವಾದ ಬೆಳಕನ್ನು ಪೊರೈಸುತ್ತಿತ್ತು. ಆದರೆ ದೀರ್ಘವಾದ ಹಗಲಿನಿಂದಾಗಿ ನಾನು ರಾತ್ರಿ ಸೈಕಲು ಸವಾರಿ ಮಾಡಿದ್ದು ಕಡಿಮೆ.

ಪ್ರವಾಸದ ಸಮಯ ನನ್ನ ಹತ್ತಿರ ಟಾರ್ಚ್ ಇರಲಿಲ್ಲ. ಇಂತಹ ಸರಳ ಸಾಮುಗ್ರಿಗಳ ಅನಾವಶ್ಯಕ ಹೊರುವುದರ ಬದಲು ಅಗತ್ಯ ಬಿದ್ದಾಗ ಕೊಂಡುಕೊಳ್ಳುವುದು ನನ್ನ ದೋರಣೆಯಾಗಿತ್ತು. ಮೊದಲು ನಾಲ್ಕು ತಿಂಗಳು ನಾನು ಒಂಟಿಯಾಗಿ ಹೊರಗೆ ಮಲಗಿರಲಿಲ್ಲ. ಯುರೋಪಿನಲ್ಲಿ ಮೊದಲು ಚಳಿ ಜೋರಾಗಿತ್ತು. ಮೆ ತಿಂಗಳಲ್ಲಿ ಒಂಟಿಯಾಗಿ ಆಕಾಶದಡಿ ಡೇರೆ ಬಿಡಿಸಿ ಮಲಗಲು ಪ್ರಾರಂಬಿಸಿದೆ. ಅನಂತರ ದೊಡ್ಡ ಪಟ್ಟಣಗಳ ಹೊರತು ಪಡಿಸಿದರೆ ಎಲ್ಲೂ ತಂಗುವುದಕ್ಕೆ ಹಣ ಖರ್ಚು ಮಾಡಲಿಲ್ಲ.

ರೋಮಿನಲ್ಲಿ ಕೊಡುಗೆಯಾಗಿ ಸಿಕ್ಕ ಸೈಕಲಿನಲ್ಲಿ ಮುಂದಿನ ಚಕ್ರಕ್ಕೆ ಡೈನೆಮೊ ಅಳವಡಿಸಲಾಗಿತ್ತು. ಡೇರೆಯ ಬಾಗಿಲಿನ ಬಳಿಯಲ್ಲಿ ಸೈಕಲನ್ನು ಅಡಿಮೇಲಾಗಿ ಇಟ್ಟು ಚಕ್ರ ನನ್ನ ಕೈಗೆ ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೆ. ಏಳು ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಡೇರೆಯಲ್ಲಿ ಎಲ್ಲ ಸಾಮಾನುಗಳೂ ವ್ಯವಸ್ಥಿತವಾಗಿ ಇಡುತ್ತಿದ್ದು ಕಣ್ಣು ಮುಚ್ಚಿದರೂ ಸಿಗುವಂತಿತ್ತು. ಅಕಸ್ಮಾತ್ ಬೆಳಕು ಬೇಕಾದರೆ ಹೊರಗೆ ಕೈ ಹಾಕಿ ಚಕ್ರ ತಿರುಗಿಸುತ್ತಿದ್ದೆ. ನಾಲ್ಕು ಕ್ಷಣ ಸಿಗುವ ಬೆಳಕು ನನಗೆ ಸಾಕಾಗುತ್ತಿತ್ತು.

ಐದು ವರ್ಷ ಹಿಂದೆ ಮಲಾವಿ ದೇಶದ ಬಡ ಹುಡುಗನೊಬ್ಬ ಕೈಗೆ ಸಿಕ್ಕ ಗುಜರಿವಸ್ತುಗಳ ಉಪಯೋಗಿಸಿ ಒಂದು ಡೈನೆಮೊ ಮಾಡಿದ್ದು ಮತ್ತು ಅನಂತರ ಅವನಿಗೆ ವಿದ್ಯಾಬ್ಯಾಸ ಸಹಾಯ ದೊರಕಿದ್ದೂ ಮೊದಲು ಓದಿದ್ದೆ. ಈಗ ಸೂಕ್ಷ್ಮವಾಗಿ ಚಿತ್ರ ನೋಡುವಾಗ ಅವನ ಡೈನೆಮೊ ಮಾದರಿಯಲ್ಲಿಯೇ ನಾನು ಬಳಸಿದ್ದು ಗಮನಕ್ಕೆ ಬಂದು ಈ ಬಗೆಗೆ ಬರೆಯಲು ಕೂತೆ.   ಗಾಳಿ ಯಂತ್ರ ಎಂದರೆ ಬೆಳಕು ಮಾತ್ರವಲ್ಲ ಸ್ವಾತಂತ್ರ ಎನ್ನುವ ಅವನ ಕಥೆ ಚೆನ್ನಾಗಿದೆ.

Saturday, October 03, 2009

ವಿದೇಶದಲ್ಲಿ ಹಣ ಬದಲಾವಣೆ.

ಅರೋಹಣ ತಂಡ    ಜತೆ ಪಶ್ಚಿಮ ಘಟ್ಟದ ಗುಡ್ಡವೊಂದರಲ್ಲಿ ಹೆಜ್ಜೆ ಹಾಕುತ್ತಿದ್ದೆ. ಅಂದು ಪರಿಚಯವಾದ ಹೊಸ ಗೆಳೆಯರು ನನ್ನ ಮುಂಚಿನ ವರ್ಷದ ಸೈಕಲು ಪ್ರವಾಸದ ಬಗೆಗೆ ಕುತೂಹಲದಿಂದ ವಿಚಾರಿಸುತ್ತಿದ್ದರು. ಪ್ರಶ್ನೋತ್ತರ ಸಂಬಾಷಣೆ ನಮ್ಮದೇ ಸಾಗುತ್ತಿದ್ದು ಉಳಿದವರು ನಡೆಯುತ್ತಾ ಕಿವಿಗೊಡುತ್ತಿದ್ದರು.

ಪರದೇಶದ ಹೆಚ್ಚಿನ ಹಣ ಎಲ್ಲ ಕಡೆಗಳಲ್ಲಿ ಚಲಾವಣೆ ಆಗುತ್ತದೆ. ಆದುದರಿಂದ ಆಯಾ ಊರಿನ ಹಣಕ್ಕೆ ಬದಲಾವಣೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಾಪಾಸು ಬರುವಾಗ ನನ್ನಲ್ಲಿ ಆರೇಳು ದೇಶಗಳ ನೋಟುಗಳಿದ್ದವು. ನಾವು ಕೊಡುವ ದರಕ್ಕೂ ಪಡಕೊಳ್ಳುವ ದರಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ ಮತ್ತು ಬಾಂಕಿನ ಶುಲ್ಕ ಪ್ರತ್ಯೇಕ. ಹೀಗೆ ಆಯಾ ದೇಶದಲ್ಲಿ ಬೇಕಾದಷ್ಟು ಮಾತ್ರ ಹೊರತು ಅನಗತ್ಯವಾಗಿ ಹಣವನ್ನು ಬದಲಾವಣೆ ಮಾಡಬಾರದು ಎಂದು ಹೇಳಿದೆ.

ಉದಾಹರಣೆ ಕೊಡುವುದು ನನ್ನದೊಂದು ಕೆಟ್ಟ ಚಾಳಿ. ಇದಕ್ಕೆ ಉದಾಹರಣೆಯಾಗಿ ಆಚಾರಿ ಹತ್ತಿರ ಚಿನ್ನ ಕೊಟ್ಟ ಹಾಗೆ ಎಂದುಬಿಟ್ಟೆ. ಪ್ರತಿ ಸಲವೂ ಶೇಕಡ ಐದರಷ್ಟು ನಮ್ಮ ಸಂಪತ್ತು ಕರಗುತ್ತದೆ ಎನ್ನುವ ವಿಚಾರ ಅರ್ಥಮಾಡಿಸುವುದು ನನ್ನ ಉದ್ದೇಶವಾಗಿತ್ತು.   ಆಗ  ಅಶೋಕವರ್ಧನರು ಮದ್ಯೆ ಬಾಯಿ ಹಾಕಿ ಕೇಳಿದರು. ಅವರು ಏನು ಮಾಡುತ್ತಾರೆ ಗೊತ್ತಾ ? ಇಲ್ಲವೆಂದು ಉತ್ತರಿಸಿದೆ. ಆಗ ಅಶೋಕವರ್ಧನರು ಹೇಳಿದರು ಆಚಾರರು ಮಂಗಳೂರಿನಲ್ಲಿ ಚಿನ್ನದ ಅಂಗಡಿ ಇಟ್ಟಿದ್ದಾರೆ. ನನ್ನ ಪರೀಸ್ಥಿತಿ ………..