Saturday, December 26, 2009

ತವರು ಅರಸಿದ ನಮ್ಮ ಕಾಡಿನ ಹುಲಿ ಮತ್ತು ಪ್ರಪಂಚದ ಅನಾಥ ಹುಲಿಗಳು.

ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ತವರನ್ನರಸಿ ೪೦೦ ಕಿಮಿ ಹುಲಿಯಾನ ತಲೆಬರಹ ಕುತೂಹಲಕರವಾಗಿತ್ತು. ಕಾಡು ಗುಡ್ಡ ಜನವಸತಿ ಪ್ರದೇಶ ಹಾಗೂ ನದಿಗಳನ್ನು ಈ ಹುಲಿರಾಯ ಆರಾಮವಾಗಿ ದಾಟಿ ನಾಲ್ಕು ನೂರು ಕಿಮಿ ಬಂದಿದ್ದ. ನಮ್ಮ ದೇಶದಲ್ಲಿ ಅಧಿಕಾರಿಗಳ ರಾಜಕಾರಣಿಗಳ ಪೆದ್ದುತನಕ್ಕೆ ಕೆಳಗಿನ ಲಿಮಿಟ್ ಇಲ್ಲವೆನ್ನುವುದಕ್ಕೆ ಇದೊಂದು ಸಾಕ್ಷಿ.   ಮದ್ರಾಸಿನ ಅನಾಥಾಶ್ರಮದಲ್ಲಿರುವ  ಮಕ್ಕಳು  ನೋಡಲು ಚಂದ ಇಲ್ಲ. ಹಾಗಾಗಿ ಚಂದಾಗಿರುವ ಕೊಳಗೇರಿಯಲ್ಲಿರುವ ಮಕ್ಕಳನ್ನು ಅಪಹರಿಸಿ ಪರದೇಶಕ್ಕೆ ರಪ್ತು ಮಾಡುವ ಒಂದು ಜಾಲದ ಬಗೆಗೆ ಹಿಂದೆ ಬರೆದಿದ್ದೆ. ಅಂತೆಯೇ ಎಲ್ಲವೂ ಸರಿಯಾಗಿದ್ದ ಒಂದು ಹುಲಿಯನ್ನು ಅಪರಿಚಿತ ಪ್ರದೇಶಕ್ಕೆ ಕೊಂಡುಹೋಗಿಬಿಡುವ ವರ್ತನೆಯ ಔಚಿತ್ಯ ಪ್ರಶ್ನಿಸುವಂತಾಗಿದೆ.

ಎಪ್ಪತ್ತರ ದಶಕದಲ್ಲಿ ೧೨೦೦ ಹುಲಿಗಳು ಮಾತ್ರ ಬಾರತದ ಕಾಡುಗಳಲ್ಲಿ ಉಳಿದುಕೊಂಡಿದ್ದವು. ಇಪ್ಪತ್ತು ವರ್ಷದಲ್ಲಿ ಅದು ೩೫೦೦ ಕ್ಕೇರಿದರೂ ನಂತರದ ಇಪ್ಪತ್ತು ವರ್ಷಗಳಲ್ಲಿ ಬಹಳಷ್ಟು ಕುಸಿದಿದೆ. ೨೦೦೮ರ ಹುಲಿಗಣತಿ ಪ್ರಕಾರ ಬರೇ ೧೪೧೧ ಹುಲಿಗಳು ಉಳಿದುಕೊಂಡಿವೆ. ಇದರಲ್ಲಿ ಕೃತಕವಾಗಿ ನಿರ್ಮಿಸಲ್ಪಟ್ಟ ಕಾಲಿನ ಅಚ್ಚುಗಳೂ ಸೇರಿವೆ. ಕೆಲವು ರಕ್ಷಿತಾರಣ್ಯದಲ್ಲಿ (?) ಸಂಪೂರ್ಣ ಕಾಣೆಯಾಗಿದೆ. ಹುಲಿಗಳು ಬೇಟೆಗಾರರಿಗೆ ಆಹುತಿಯಾಗುವುದು ಅಧಿಕಾರಿಗಳ ನಿರ್ವಹಣಾ ವೈಫಲ್ಯ ಹೊರತು ನೈಸರ್ಗಿಕ ಕಾರಣಗಳಲ್ಲ.


ಈಗ ಬಾರತ, ಚೀನಾ ಮತ್ತು ಸೈಬೀರಿಯಾದಲ್ಲಿ ಹುಲಿಗಳು ನಿರ್ನಾಮವಾಗುತ್ತಿದ್ದರೆ ಅಮೇರಿಕದಲ್ಲಿ ಅದೊಂದು ಬಹು ಬೇಡಿಕೆಯ ಅಹಂಕಾರದ, ಪ್ರತಿಷ್ಠೆಯ ವಸ್ತುವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂದು ಅಮೇರಿಕದಲ್ಲಿ ಹನ್ನೆರಡು ಸಾವಿರ ಹುಲಿಗಳಿವೆ.. ಆದರೆ ಇಡೀ ಜಗತ್ತಿನ ಕಾಡುಗಳಲ್ಲಿ ಹುಡುಕಿದರೆ ಇದರ ಅರ್ಧದಷ್ಟೂ ಇಲ್ಲ. ಇಪ್ಪತೈದು ಸಾವಿರ ರೂಪಾಯಿ ಕೊಟ್ಟರೆ ಕಿತ್ತಳೆ ಬಣ್ಣದ ಹುಲಿ ಮರಿಯನ್ನು ಖರೀದಿಸಬಹುದು. ಹೌದು. ಅಮೇರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಹುಲಿ ಮರಿ ಖರೀದಿ ಕಾನೂನುಬದ್ದವಾಗಿರುತ್ತದೆ.

ಅಮೇರಿಕದಲ್ಲಿ ಹೇಗೆ ಇಷ್ಟೋಂದು ಹುಲಿಗಳು ಎನ್ನುವ ಪ್ರಶ್ನೆ ಸ್ವಾಭಾವಿಕ. ಅಲ್ಲಿ ಇತ್ತೀಚಿನ ವರೆಗೆ
ಹುಲಿ ಮರಿ ವ್ಯವಹಾರ ಲಾಭದಾಯಕ. ವರ್ಷಕ್ಕೆ ಎರಡು ಬಾರಿ ಎಂಟು ಮರಿ ಹಾಕುವ ಹುಲಿಮರಿಗಳು - ಬಿಳಿ ಬಣ್ಣವಾದರೆ ಸಾಕಿದವನಿಗೆ ಮೂವತ್ತು ಲಕ್ಷ ರೂಪಾಯಿ ತರಬಲ್ಲದು. ಈ ಹುಲಿಮರಿಗಳನ್ನು ದೇಶಾದ್ಯಂತ ಪ್ರದರ್ಶನಕ್ಕೆ ಕೊಂಡು ಹೋಗುವ ಚಿಕ್ಕ ಪುಟ್ಟ ಸಂಸ್ಥೆಗಳಿವೆ. ಹುಲಿಮರಿಯೊಂದಿಗೆ ಅಂದರೆ ಅದನ್ನು ಅಪ್ಪಿಕೊಳ್ಳುವ ಬಾವಚಿತ್ರಕ್ಕೆ ಕೇವಲ ಒಂದು ಸಾವಿರ ರೂಪಾಯಿ. ಅಲ್ಲಿನ ಕಾನೂನು ಪ್ರಕಾರ ಆರು ತಿಂಗಳಿಂದ ಹೆಚ್ಚು ಪ್ರಾಯದ ಮರಿಗಳನ್ನು ಇದಕ್ಕೆ ಉಪಯೋಗಿಸುವಂತಿಲ್ಲ. ಅವು ಮನುಷ್ಯರಿಗೆ ಅಪಾಯಕಾರಿಯಾಗಬಹುದು. ಆಗ ಈ ಸಾವಿರಾರು ಜನರೊಂದಿಗೆ ಪೋಟೊ ತೆಗಿಸಿಕೊಂಡ ಮರಿ ಹುಲಿಯನ್ನು ಬಿಸಾಕಿ ಇನ್ನೊಂದು ಪುಟ್ಟ ಮರಿಯನ್ನು ಪಡಕೊಳ್ಳುತ್ತಾರೆ. ಟೆಕ್ಸಾಸಿನಲ್ಲಿ ಸುಮಾರು ಇಪ್ಪತ್ತು ಜನ ಇಂತಹ ದೊಂಬರಾಟದವರಿದ್ದಾರೆ.

ಕ್ರಿಸ್ಮಸ್ ಹಬ್ಬಕ್ಕೆ ಮಕ್ಕಳಿಗೆ ಪುಟಾಮಿ ಬೆಕ್ಕಿನ ಮರಿ ಎನ್ನುವ ಚಟ ಇಂದು ಹುಲಿಮರಿ ಎನ್ನುವ ವರೆಗೆ ತಲಪಿದೆ. ನಿಜ, ಪುಟಾಣಿ ಹುಲಿ ಮರಿಗಳು ಚಂದ ಕಾಣುತ್ತವೆ. ಆದರೆ ೩೦೦ ಕಿಲೊ ತೂಗಿ ದಿನಕ್ಕೆ ಹತ್ತು ಕಿಲೊ ಆಹಾರ ಅಂದರೆ ಮಾಂಸ ಅಪೇಕ್ಷಿಸುವಾಗ ಯಜಮಾನ ಸುಸ್ತಾಗುತ್ತಾನೆ. ಇಂದು ಮೃಗಾಲಯಗಳು ಹುಲಿಯನ್ನು ದಾನ ಮಾಡುತ್ತೇನೆ ಎಂದರೆ no thanks ಎನ್ನುತ್ತಿವೆ. ಬೇಡವಾದ ಹುಲಿಗಳು ನೆಲಮಾಳಿಗೆಯಲ್ಲಿ ಕಟ್ಟಿ ಹಾಕಲ್ಪಟ್ಟಿವೆ, ಪುಟ್ಟಬೋನಿನಲ್ಲಿ ಸೊರಗುತ್ತಿವೆ, ರಸ್ತೆಯಲ್ಲಿ ಅಡ್ಡಾಡುತ್ತಿವೆ. ವಾಹನದ ಅಡಿಗೆ ಸಿಕ್ಕ ಹುಲಿಗಳ ಉದಾಹರಣೆ ಇದೆ.

ಪದ್ಯಹೇಳುತ್ತಿದ್ದ ದೀ| ಮೈಕಲ್ ಜಾಕ್ಸನ್ ಗುದ್ದುಗಾರ ಮೈಕ್ ಟೈಸನ್ ಇವರೆಲ್ಲ ಹುಲಿ ಒಡೆಯರಾಗಿದ್ದವರು. ಕೆಲವು ವರ್ಷ ಹಿಂದೆ ಟಾರ್ಜನ್ ಪಾತ್ರದ ನಟನ ಹುಲಿ ತಪ್ಪಿಸಿಕೊಂಡು ಇಪ್ಪತ್ತಾರು ಗಂಟೆ ಸತಾಯಿಸಿ ಕೊನೆಗೆ ಗುಂಡಿಗೆ ಎದೆಯೊಡ್ಡಿತು. ಹಲವು ಮಾದಕ ವಸ್ತು ಕಳ್ಳಸಾಗಾಣಿಕೆಗಾರರಿಗೆ ಹುಲಿಗಳೇ ಕಾವಲು ನಾಯಿಗಳು. ಅಂತಹ ಕಳ್ಳಸಾಗಾಣಿಕೆದಾರರಿಂದ ಜಪ್ತಿಯಾದ ಹುಲಿ ಸಿಂಹ ಮತ್ತು ಕರಡಿ ಮರಿಗಳು ಜತೆಯಾಗಿಯೇ ಬೆಳೆದವು.  ಒಂದೇ ಆವರಣದಲ್ಲಿ ವಾಸಿಸುವ ಎಂಟು ವರ್ಷದ ಈ ತ್ರಿಮೂರ್ತಿಗಳು ಭಾರಿ ದೋಸ್ತಿಗಳು.





ಅಮೇರಿಕದಲ್ಲಿ ಈ ಅನಾಥ ಪ್ರಾಣಿಗಳ ಸಾಕಲು ಹಲವು ಖಾಸಗಿ ಅಭಯದಾಮಗಳಿವೆ. ಇದೊಂದು ರೀತಿಯಲ್ಲಿ ವೃದ್ದಾಶ್ರಮಗಳೆನ್ನಬಹುದು. ಅವು ಬದುಕಿರುವ ವರೆಗೆ ಸಾಕುತ್ತಾರೆ. ಕೊಲ್ಲುವುದಿಲ್ಲ, ಮರಿ ಹಾಕಿಸುವುದಿಲ್ಲ, ಖರೀದಿ ಮಾರಾಟ ಯಾವುದೂ ಅಲ್ಲಿ ನಡೆಯುವುದಿಲ್ಲ. ಇಂತಹ ಒಂದು ಅಭಯದಾಮದವರು   ನಾವು ವರ್ಷಕ್ಕೆ ೧೫೦ ಕ್ಕೂ ಮಿಕ್ಕಿ ಪ್ರಾಣಿಗಳ ತಿರಸ್ಕರಿಸುತ್ತೇವೆ. ಪ್ರಾಣಿಗಳ ಜತೆಗೆ ಅದನ್ನು ಪ್ರೀತಿಯಿಂದ ಸಾಕಿದವರ ಧನ ಸಹಾಯ ಅಪೇಕ್ಷಿಸುತ್ತೇವೆ ಅಂತಹ ಪ್ರಾಣಿಗಳ ಅವುಗಳ ಕೊನೆಗಾಲದ ವರೆಗೆ ಸಾಕುತ್ತೇವೆ ಎನ್ನುತ್ತಾರೆ.

ಬಿಳಿ ಹುಲಿ ಮರಿಗೆ ಬೇಡಿಕೆ ಹೆಚ್ಚು. ಎಲ್ಲವೂ ಸುಮಾರು ಐವತ್ತು ವರ್ಷ ಹಿಂದೆ ಅಮೇರಿಕಕ್ಕೆ ತಂದ ಬಿಳಿ ಹುಲಿಯೊಂದರ ಸಂತತಿ. ಹತ್ತಿರದ ಸಂಬಂಧದಲ್ಲೇ ಬೆಳೆಸಿದ ಸಂಬಂಧ ಎನ್ನುವ ಇವುಗಳಿಗೆ ಅನುವಂಶಿಕ ಆರೋಗ್ಯ ಸಮಸ್ಯೆಗಳು ಹೆಚ್ಚು. ಮೆಳ್ಳೆಗಣ್ಣಿನ ಚಿತ್ರದಲ್ಲಿರುವ ಬಿಳಿ ಹುಲಿಯೂ ಅನುವಂಶಿಕ ತೊಂದರೆಗಳ ಅನುಭವಿಸುತ್ತದೆ. ಕುರುಡುತನ, ಕಿಡ್ನಿ ಸಮಸ್ಯೆ ಇತ್ಯಾದಿ ಸಾಮಾನ್ಯವಾಗುತ್ತಿದೆಯಂತೆ. ಆನುವಂಶಿಕ ತೊಂದರೆ ಇರಬಹುದಾದ ಈ ಹುಲಿಗಳಲ್ಲಿ ಮರಿ ಹಾಕಿಸುವಂತಿಲ್ಲ. ಮನುಷ್ಯನ ಹೆದರಿಕೆ ಇರದ ಮತ್ತು ಕಾಡಿನ ನಡುವಳಿಕೆ ಅರಿಯದ ಇವುಗಳನ್ನು ಸಂಪೂರ್ಣ ಕಾಡು ಪ್ರಾಣಿಯನ್ನಾಗಿ ಮಾಡುವುದು ಕಷ್ಟ. ಆದರೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಥಳಾಂತರ ಮಾಡುವ ಬದಲು ಪ್ರವಾಸಿಗಳಿಗೆ ತೋರಿಸಲು ಇವುಗಳು ಸಾಕು. ಆಹಾರ ಹಾಕುತ್ತಾ ಇದ್ದರಾಯಿತು.





ಪರದೇಶದಿಂದ ತಂದು ಸಾಕುವುದು ಹೊಸ ವಿಚಾರವಲ್ಲ. ಈಗ ಬನ್ನೇರುಘಟ್ಟ ಉದ್ಯಾನದಲ್ಲಿರುವ ಹುಲಿಗಳೆಲ್ಲವೂ ಯುರೊಪಿನಲ್ಲಿ ಸಾಕುಪ್ರಾಣಿಗಳಾಗಿದ್ದವು. ಅದೇ ರೀತಿಯಲ್ಲಿ ಪನ್ನ ಪಾರ್ಕಿನಲ್ಲಿ ಹುಲಿಗಳು ನೀರ್ನಾಮ ಹೊಂದಿದ್ದರೆ ಒಂದು ತನ್ನದೇ ತಿರುಗಾಟದ ವಲಯ ಹೊಂದಿದ್ದ ಹುಲಿಯನ್ನು ಹಿಡಿದು ಇನ್ನೊಂದು ಕಡೆ ಬಿಡುವುದರ ಬದಲು ಬಿಸಾಕು ದರದಲ್ಲಿ ಅಮೇರಿಕದಲ್ಲಿ ಸಿಗುವ ಅನಾಥ ಹುಲಿಯನ್ನು ಅಲ್ಲಿ ಬಿಡಬಹುದಾಗಿತ್ತು. ಅಂದರೆ ಒಂದು ಉದ್ಯಾನವನದಿಂದ ಇನ್ನೊಂದಕ್ಕೆ ಸ್ಥಳಾಂತರಿಸುವ ಬದಲು ಅಮೇರಿಕದಿಂದ ಅನಾಥ ಹುಲಿಗಳನ್ನು ತಂದು ಬಿಟ್ಟರೆ ಉತ್ತಮ ಪರಿಹಾರವಾಗಬಹುದು. ಒಂದುವರೆ ಕೋಟಿ ಎರಡು ಹುಲಿಗಳ ಸ್ಥಳಾಂತರಕ್ಕೆ ಖರ್ಚು ಮಾಡುವ ಸರಕಾರ ಈ ಅನಾಥ ಹುಲಿಗಳ ತರಿಸಿ ಸಾಕಬಹುದು.


ಬಾರತ ಹಾಗೂ ಇನ್ನಿತರ ಚೀನಾದ ಆಸುಪಾಸಿನ ದೇಶಗಳಿಗೆ ಈ ಅನಾಥ ಹುಲಿಗಳ ಸ್ಥಳಾಂತರಗೊಳಿಸಿದರೆ ಕಾಡಿನಲ್ಲಿರುವ ಹುಲಿಗಳು ಉಳಿಯಬಹುದು. ಹುಲಿ ಕಳ್ಳಸಾಗಾಣಿಕೆಯ ಮೂಲವೇ ಚೀನಾದಲ್ಲಿರುವ ಅಪಾರ ಬೇಡಿಕೆ. ಏಕಚಕ್ರಾಪುರದವರು ಬಕಾಸುರನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ನಮ್ಮ ಹುಲಿಕಳ್ಳರಿಗೂ ವರ್ಷಕ್ಕೆ ನಾಲ್ಕು ಕೊಡುತ್ತೇವೆ ಅನ್ನಬಹುದು. ಮತದಾರರಾದ ಅವರೂ ಬದುಕಬೇಕಲ್ಲಾ |  ಜೈರಾಮ  ಎಲ್ಲಿದ್ದಿಯಾ  ಮಹರಾಯ ?   ನಮ್ಮಲ್ಲಿ  ಹುಲಿ ಕೊಂದವರಿಗೆ   ಕಾನೂನು ಒಳಪಡುವುದಕ್ಕೆ ಶಿಕ್ಷೆಯಾಗುವುದಕ್ಕೆ ಜಾತಿ ಪ್ರಶ್ನೆ ಎದುರಾಗುತ್ತದೆ.

ಮೂರು ತಿಂಗಳ ಹಿಂದೆ ನಮ್ಮ ಪರಿಸರ ಸಚಿವರು ಹುಲಿ ಸಂತತಿ ರಕ್ಷಣೆಯ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಸಾರುವ ಉದ್ದೇಶದಿಂದ 2010ನೇ ಇಸವಿಯನ್ನು ಭಾರತ ಅಂತರರಾಷ್ಟ್ರೀಯ ಹುಲಿ ವರ್ಷವಾಗಿ ಆಚರಿಸಲಿದೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ವರ್ಷಾಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಅದೇ ವರ್ಷ ನವೆಂಬರ್ನಲ್ಲಿ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ವಿಶ್ವದ ಶೇ60ರಷ್ಟು ಹುಲಿಗಳು ಭಾರತದಲ್ಲಿದ್ದು ವರ್ಷಾಚರಣೆಗೆ ಭಾರತದ ನಾಯಕತ್ವವೇ ಸಮಂಜಸ ಎಂದು ಜೈರಾಂ ರಮೇಶ್ ತಿಳಿಸಿದ್ದಾರೆ. ಹುಲಿ ಸಂರಕ್ಷಣೆಗೆ ಭಾರತ ಕೈಗೊಂಡಷ್ಟು ಕ್ರಮಗಳನ್ನು ಬೇರಾವುದೇ ದೇಶ ಕೈಗೊಂಡಿಲ್ಲ ಎಂದು ರಾಜಕಾರಣಿ ರಮೇಶ್ ತಿಳಿಸಿದ್ದಾರೆ.

ಪ್ರಾಣಿಗಳಲ್ಲಿ ದಾರಿ ಹುಡುಕುವ ಸಾಮರ್ಥ್ಯ ಅಪಾರ. ಅರುವತ್ತು ವರ್ಷ ಹಿಂದಿನ ನನ್ನ ಹಿರಿಯರ ಅನುಭವ. ಆಗ ನನ್ನ ತಂದೆ ಪಟ್ಟಣದಲ್ಲಿ ವಕೀಲರಾಗಿ ಕೆಲಸಮಾಡುತ್ತಿದ್ದರು. ಪಟ್ಟಣದಲಿರುವ ಅವರ ವಸತಿಗೆ ಒಂದು ಹಾಲು ಕರೆಯುವ ಎಮ್ಮೆ ಹಳ್ಳಿಮನೆಯಿಂದ ತರುತ್ತಿದ್ದರು. ಅದು ಬತ್ತಿದ ನಂತರ ಮತ್ತೊಂದು ಎಮ್ಮೆ ತರುತ್ತಿದ್ದರಂತೆ. ಒಮ್ಮೆ ಹಳ್ಳಿಮನೆಯಲ್ಲಿ ಮೇಯಲು ಬಿಟ್ಟ ಮುಂಚಿನ ದಿನ ಹಳ್ಳಿಗೆ ಬಂದ ಎಮ್ಮೆ ಸಂಗಾತಿಗಳನ್ನೆಲ್ಲ ಕರಕೊಂಡು ಮೂವತ್ತು ಕಿಮಿ ದೂರದ ಪಟ್ಟಣಕ್ಕೆ ಬಂದಾಗ ಪಟ್ಟಣದ ಮನೆಯಲ್ಲಿ ಅವನ್ನು ಕಟ್ಟಿಹಾಕಲು ಹಗ್ಗವಿಲ್ಲ, ಹಾಲು ಕರೆಯಲು ಪಾತ್ರೆಯಿಲ್ಲ. ಹಳ್ಳಿಯಲ್ಲಿ ಬೆಳಗಿನ ಚಾ ಕುಡಿಯಲೂ ಸಹಾ ಹಾಲಿಲ್ಲ ಎನ್ನುವ ಸನ್ನಿವೇಶವಾಗಿತ್ತಂತೆ.



Tuesday, December 01, 2009

ಕಡಲ ತಡಿಯಲ್ಲಿ ಐವತ್ತು ಕಿಮಿ ಸವಾರಿ

ರೋಹಿತ್ ರಾವ್ ಅವರು ಬಂದ ಕೂಡಲೇ ತಂಡದ ಮುಖಂಡತ್ವ ವಹಿಸಿಕೊಂಡರು. ಸದಾಸಂ ಸಾರಥಿ ಅನಿಲನಿಗೆ ಮಾಡು ಬೇಡಗಳ ವಿವರಿಸಿ ನಿರಂತರ ಸಂಚಾರವಾಣಿ ಸಂಪರ್ಕದಲ್ಲಿರುತ್ತೇನೆ ಮತ್ತು ಏನು ಸಂಶಯ ಇದ್ದರೂ ನನ್ನನ್ನು ವಿಚಾರಿಸು ಎಂದು ಸ್ಪಷ್ಟ ಪಡಿಸಿದರು. ಸ್ಥಳ ಗುರುತಿಸುವ ವಿಧಾನ ಅಂದರೆ ಯಾವುದು landmark ಹೌದು ಮತ್ತು ಯಾವುದು ಅಲ್ಲ ಎನ್ನುವುದರ ವ್ಯತ್ಯಾಸ ವಿವರಿಸಿದರು.

ಕೆಲವು ಕಡೆಗಳಲ್ಲಿ ನಮಗೆ ಜತೆಯಲ್ಲಿ ಸಾಗಲು ಸಾದ್ಯವಿಲ್ಲ ಎನ್ನುವ ಕಾರಣಕ್ಕೆ ಹದಿನಾರರ ಹಿರಿಯ ಮಗ ಅನಿಲ ಪ್ರಥಮ ಚಾಲಕ ಎಂದು ಮೊದಲೇ ನಿರ್ದರಿಸಿದ್ದೆ. ಸಂಪರ್ಕ ಸಾದ್ಯತೆಯ ನೆಲೆಯಲ್ಲಿ ಎಲ್ಲೆಲ್ಲಿ ಯಾರು ಗಾಡಿ ಓಡಿಸುವುದು ಎಂದು ಮುಂಚೆಯೇ ತೀರ್ಮಾನಿಸಿದ್ದೆ. ಆದರೆ ಹನ್ನೆರಡರ ಕಿರಿಯ ಸುನಿಲ ಹೊಟ್ಟೆ ಸಮಸ್ಯೆಯಿಂದಾಗಿ ನಿಗದಿತ ದೂರವನ್ನು ಕ್ರಮಿಸಲಿಲ್ಲ. ಇದರಿಂದಾಗಿ ಪ್ರಯಾಣದ ಸಿಂಹಪಾಲು ಅನಿಲ ಚಲಾಯಿಸಿದ ಮತ್ತು ರೋಹಿತರ ಪುಟ್ಟ ಮಗ ಅಭಿನವ ಅವನಿಗೆ ಜತೆಗಾರನಾಗಿದ್ದ. ರೋಹಿತರ ಬಾಷೆಯಲ್ಲಿ ಅಭಿಗೆ ಕಾಂಗರೂ ಸವಾರಿ.

ಅನಿಲನಿಗೆ ಅನಿರೀಕ್ಷಿತವಾಗಿ ಎದುರಾದದ್ದು ನೆಲ ಬಾಂಬುಗಳು. ಈ ನೆಲಬಾಂಬುಗಳ ಸಿಡಿಸುತ್ತಾ ಸಾಗಿದ ನಮ್ಮ ಸರದಾರ. ಅಲ್ಲಿ ಶೌಚಾಲಯ ವ್ಯವಸ್ತೆ ಇಲ್ಲದೆ ಸಮುದ್ರದ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕೂರುವುದು ಸಾಮಾನ್ಯ. ಈ ಸುಳಿವು ರೋಹಿತ್ ನನಗೆ ವಾರದ ಮೊದಲೇ ಹೇಳಿದ್ದರು ಮತ್ತು ನಾನು ಅನಿಲನಿಗೆ ಪೂರ್ವ ಸೂಚನೆ ಕೊಟ್ಟಿದ್ದೆ. ಅವನು ಅದನ್ನು ಗಂಬೀರವಾಗಿ ಪರಿಗಣಿಸಿರಲಿಲ್ಲ.

ಪಣಂಬೂರಿನಲ್ಲಿ ೭೫೦ ಮೀಟರ್ ಕಡಲ ತೀರ ಖಾಸಗಿ ಸಂಸ್ಥೆ ನಿರ್ವಹಣೆಯಾದುದರಿಂದ ಸ್ವಚ್ಚವಾಗಿತ್ತು. ಅದನ್ನು ನೋಡಿದ ನಮ್ಮ ಸಾರಥಿ ಅನಿಲ ಉದ್ದಕ್ಕೂ ಈ ರೀತಿ ಸ್ವಚ್ಚ ಇರುವುದೆಂದು ಬಾವಿಸಿ ವೇಗ ಹೆಚ್ಚಿಸಿಕೊಂಡಿರಬೇಕು. ನಿಧಾನವಾಗಿ ಹೋಗುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಸ್ವಚ್ಚವಾದ ಸ್ಥಳ ಕೊನೆಗೊಳ್ಳುವಾಗ ಇವನಿಗೆ ಗ್ರಹಿಕೆಗೆ ಬರಲು ವಿಳಂಬವಾಯಿತು.



ಎರಡು ಕಿಮಿ ಮುಂದೆ ಚಿತ್ರಾಪುರದಲ್ಲಿ ರೋಹಿತರ ಗೆಳೆಯ ಯತೀಶ್ ಬೈಕಂಪಾಡಿ ಅವನನ್ನು ತಡೆಗಟ್ಟಿ ಒಳಗೆ ಕರೆಸಿದರು. ಅಲ್ಲಿ ಇವನು ಮೊದಲು ಕೇಳಿದ್ದೇ ಕೈ ಮೈ ತೊಳೆದುಕೊಳ್ಳಲು ನೀರು. ನೆರೆದವರಲ್ಲಿ ಒಬ್ಬರು ಛೀ ಪೀ ಎಂದಾಗ ಇವನು ಮತ್ತೂ ಕಂಗಾಲು. ಅಂತೂ ಗಂಧದ ಸಾಬೂನು ಹಾಕಿ ಚೆನ್ನಾಗಿ ತೊಳೆದುಕೊಂಡು ದುರ್ಗಂಧದಿಂದ ಪಾರಾದ. ಆಶ್ಚರ್ಯಕರವೆನಿಸುವಂತೆ ಮುಂದೆ ಕುಳಿತಿದ್ದ ಅಭಿಗೆ ಸ್ವಲ್ಪವೂ ಸಿಂಪರಣೆ ಆಗದಿರುವುದು ನಮಗೆ ಅನುಕೂಲವಾಯಿತು.

ಚಿತ್ರಾಪುರದಲ್ಲಿ ಕಡಲ ತೀರ ಸ್ವಚ್ಚಗೊಳಿಸುವ ಕರ ಸೇವೆ ನಡೆಯುತ್ತಿತ್ತು. ಹಾಗೆ ಅವರಿಗೆಂದು ಏರ್ಪಾಡಾದ ಅವಲಕ್ಕಿ ಸಜ್ಜಿಗೆ ಚಾ ನಮಗೂ ಸಮರಾಧನೆಯಾಯಿತು. ಸದಾಸಂ ಸವಾರಿ ಕಂಡ ಊರವರು ಮುಂದಿನ ದಾರಿಯ ಬಗೆಗೆ ಖಚಿತ ಮಾಹಿತಿ ಇತ್ತರು. ಅಭಿವೃದ್ದಿ ಕಾರ್ಯಗಳು ಕಡಲ ತೀರದ ರಸ್ತೆ ಹಾಗೂ ಸಮುದ್ರಕ್ಕೆ ಕಲ್ಲು ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿರುವ ಕಾರಣ ರೋಹಿತ್ ಆರು ತಿಂಗಳು ಹಿಂದಿನ ಕಣ್ಣಾರೆ ಕಂಡ ಮಾಹಿತಿ ಹಳೆಯ ಸುದ್ದಿಯಾಗುತ್ತದೆ.
 
ಸುರತ್ಕಲ್ ದೀಪಸ್ತಂಬ ಬಳಿಯಲ್ಲಿ ಸಮುದ್ರ ತೀರದಲ್ಲಿ ಪೂರಾ ಕಲ್ಲು. ತೀರದಿಂದ ಮೇಲಕ್ಕೆ ಬಂದು ಸುತ್ತು ಬಳಸಿ ಮರಳ ತೀರಕ್ಕೆ ವಾಪಾಸು. ಸದಾಸಂ ಸಾಗಲು ಸ್ಪಷ್ಟ ನಿರ್ದೇಶನ ಕೊಟ್ಟ ರೋಹಿತ್ ಮುಂದಿನ ಬೇಟಿಯ ಜಾಗಕ್ಕೆ ದಾವಿಸುತ್ತಿದ್ದರು. ನಾನು ಬಸ್ಸಿನಲ್ಲಿ ಬಂದಿಳಿದ ಗೆಳೆಯ ಅನಿಲ್ ಕುಮಾರರ ರಸ್ತೆ ಬದಿಯಿಂದ ಕರಕೊಂಡು ಶರತ್ ಬಾರಿನ ಹತ್ತಿರ ಸಾಗುವ ರಸ್ತೆಯಲ್ಲಿ ಸಸಿಹಿತ್ಲು ಸಮೀಪದ ಸಮುದ್ರ ತೀರಕ್ಕೆ ಹೋದೆ. ತಡವಾಗಿಯಾದರೂ ಅನಿಲಕುಮಾರ್ ನಮ್ಮ ತಂಡ ಸೇರಿಕೊಂಡದ್ದು ಬಹಳ ಉಪಕಾರವಾಯಿತು. ಮುಂದೆ ಸಂಜೆ ವರೆಗೆ ವಾನ್ ಓಡಿಸುವುದೂ ಪೋಟೊ ತೆಗೆಯುವುದೂ ಅವರು ಮಾಡಿದರು.




ಸದಾಸಂನಲ್ಲಿ ಸಾಗುವ ಅನಿಲ ಅಭಿಗೆ ಕಡಲ ತೀರದ ನೇರದಾರಿ. ಅನುಸರಿಸುವ ನಾವು ಸುತ್ತು ಬಳಸಿ ಕೆಲವೊಮ್ಮೆ ಗುಡ್ಡ ಹತ್ತಿ ಇಳಿದು ಸಾಗುವಾಗ ಅವರು ಮೊದಲೇ ಗಮ್ಯ ಸ್ಥಾನ ತಲಪಿರುತ್ತಾರೆ. ಒಂದಷ್ಟು ದೂರ ಸದಾಸಂ ಸಾಗುವ ವರೆಗೆ ಪೊಟೊ ತೆಗೆಯುತ್ತಿದ್ದು ನಂತರ ಕಾರಿಗೆ ಹಿಂತಿರುಗಿ ಓಡಿ ಬಂದು ಕೆಮರ ಜೋಪಾನವಾಗಿ ತೆಗೆದಿರಿಸಿ ಕಾರು ಓಡಿಸುವ ರೋಹಿತ್ ಒಮ್ಮೆಲೆ ಎರಡು ಮೂರು ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಇದೆಲ್ಲಾ ಮಾಡುವುದಲ್ಲದೆ ಅಲ್ಲಲ್ಲಿ ಹಕ್ಕಿಗಳ ಚಿತ್ರವನ್ನೂ ಸೆರೆ ಹಿಡಿಯುತ್ತಿದ್ದರು.

ಮದ್ಯಾಹ್ನ ವರೆಗೆ ನಮ್ಮ ಜತೆಯಲ್ಲಿದ್ದ ಮೊಟರ್ ಸೈಕಲಿನಲ್ಲಿ ಬಂದ ನಿಬಿಶ್ ಇಲ್ಲಿ ಬಹಳ ಸಹಾಯಮಾಡಿದರು. ಅಂತೂ ಗಡಿಬಿಡಿಯಲ್ಲಿ ಕಡಲತೀರಕ್ಕೆ ತಲಪುವಾಗ ನಮಗೆ ಸದಾಸಂ ಸವಾರರು ಮುಂದೆ ಸಾಗಿದ್ದಾರೋ ಅಲ್ಲ ಇನ್ನೂ ಹಿಂದಿನಿಂದ ಬರುತ್ತಿದ್ದಾರೋ ಎನ್ನುವ ಗೊಂದಲ ಎದುರಾಗುತಿತ್ತು. ಕೆಲವು ಕಡೆಗಳಲ್ಲಿ ಸಮುದ್ರಕೊರೆತಕ್ಕೆ ಕಲ್ಲು ಹಾಕಿದ ಕಾರಣ ರಸ್ತೆಯಿಂದ ಗೋಚರಿಸುವುದಿಲ್ಲ.

ಸಸಿಹಿತ್ಲು ಮುಂದಿನ ಸುಮಾರು ಆರು ಕಿಮಿ ಉದ್ದಕ್ಕೂ ರಸ್ತೆ ಕಡಲ ತೀರದಲ್ಲಿಯೇ ಸಾಗುತ್ತದೆ. ಅನಂತರ ಸುನಿಲ ಸವಾರಿಗೆ ಕುಳಿತ. ಮುಂದಿನ ದಾರಿಯಲ್ಲಿ ಸಾಗುವಾಗ ಹೆಚ್ಚು ಕಮ್ಮಿ ನಮ್ಮ ಕಣ್ಣೆದುರೇ ಇದ್ದ ಅನ್ನಬಹುದು. ಅಂತೂ ಸುಮಾರು ಹನ್ನೆರಡುವರೆಗೆ ಮೂಲ್ಕಿ ಅಳಿವೆ ಬಾಗಿಲಿಗೆ ತಲಪಿದೆವು.



ಶಾಂಬವಿ ಮತ್ತು ನಂದಿನಿ ನದಿಗಳು ಜತೆಯಾಗಿ ಸಮುದ್ರ ಸೇರುವ ಈ ಜಾಗ ಬಹಳ ಚೆನ್ನಾಗಿದೆ. ಹೆಜಮಾಡಿ ಕೋಡಿ, ಕೊಳಚಿಕಂಬಳ ಮತ್ತು ಚಿತ್ರಾಪು ದ್ವೀಪ ನಮ್ಮ ಎದುರಿಗಿತ್ತು. ಸುನಿಲನಿಗೆ ಸಮುದ್ರದಲ್ಲಿ ಡಾಲ್ಫಿನ್ ಅಲ್ಲಿ ಕಂಡದ್ದು ಬಹಳ ಸಂತಸವಾಯಿತು. ಅಗಾಗ ಪಕ್ಷಿ ವೀಕ್ಷಣೆಗೆ ಹೊಳೆಯಾಚೆಯ ಚಿತ್ರಾಪುವಿಗೆ ಬರುವ ರೋಹಿತ್ ಅವರಿಗೆ ಇದು ಬಹಳ ಪರಿಚಿತ ಪ್ರದೇಶ. ನಮಗೆ ವಿವಿದ ಸಮಯದಲ್ಲಿ ಬರುವ ಹಕ್ಕಿಗಳ ಹಾಗೂ ಅವುಗಳ ವರ್ತನೆಯ ಬಗ್ಗೆ ಮಾಹಿತಿ ಕೊಟ್ಟರು. ಅಲ್ಲಿ ಮುಕ್ಕಾಲು ಘಂಟೆ ಕಳೆದದ್ದೇ ನಮಗೆ ಗೋತ್ತಾಗಲಿಲ್ಲ.





ಮೂಲ್ಕಿಯಲ್ಲಿ ನದಿ ದಾಟುವ ಬಗೆಗೆ ಬಾರಿ ಜಿಜ್ನಾಸೆಯಲ್ಲಿದ್ದೆ. ಯೋಚನೆ ಬೇಡ ನನ್ನನ್ನು ಹಿಂಬಾಲಿಸು ಎಂದ ರೋಹಿತ್ ನೇರವಾಗಿ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಕಾರು ಓಡಿಸಿದರು. ಮದ್ಯದಲ್ಲಿ ಅನಿಲ ಸದಾಸಂನಲ್ಲಿದ್ದು ನಾನು ಮತ್ತು ಅನಿಲ್ ಕುಮಾರ್ ವಾನಿನಲ್ಲಿ ಹಿಂಬಾಲಿಸಿದೆವು. ಕೆಲವೆಡೆ ಹೋಂಡ ಗುಂಡಿ ತುಂಬಿದ ರಾಜ ರಸ್ತೆ ವಾಹನಗಳಿಗಿಂತ ಸದಾಸಂಗೆ ಹೆಚ್ಚು ಸೂಕ್ತವೆನಿಸುವಂತಿತ್ತು. ಮೂಲ್ಕಿ ಊರ ಮದ್ಯೆ ನಮ್ಮ ಮೆರವಣಿಗೆ ಊಟಕ್ಕೆಂದು ಹೋಟೆಲ್ ಪಕ್ಕದಲ್ಲಿ ನಿಂತಿತು.


ಸದಾ ರೋಹಿತರ ಕಾರನ್ನು ಹಿಂಬಾಲಿಸುತ್ತಿದ್ದ ಸದಾಸಂ ಫಕ್ಕನೆ ಎದುರಲ್ಲಿರುವವರಿಗೆ ಗೋಚರವಾಗುತ್ತಿರಲಿಲ್ಲ. ದಾಟಿದ ತಕ್ಷಣ ಇದ್ಯಾವ ಕರ್ಕಶ ಶಬ್ದ ಎಂದು ಜನರು ತಿರುಗಿ ನೋಡುವಾಗ ಅನಿರೀಕ್ಷಿತವಾಗಿ ಅಪರೂಪವೆನಿಸುವ ಆಕಾರದ ಸದಾಸಂ ಗೋಚರವಾಗುತ್ತದೆ. ಆಗ ಬಾಯಿ ಬಿಟ್ಟು ನೋಡುವ ಅವರ ಅಶ್ಚರ್ಯದ ನೋಟ ನನಗೂ ನಾನಿದ್ದ ವಾಹನ ಚಾಲನೆ ಮಾಡುತ್ತಿದ್ದ ಅನಿಲ್ ಕುಮಾರರಿಗೂ ಒಳ್ಳೆಯ ಮನರಂಜನೆಯಾಗಿತ್ತು.



ಉಳಿದ ಇಬ್ಬರು ಚಾಲಕರಂತೆ ಅನಿಲನೂ ಅವನ ವಾಹನದ ಕೀಲಿಕೈ ಹಿಡಿದುಕೊಂಡು ಹೊಟೇಲಿನೊಳಗೆ ಹೋದ. ನೆನಪಾಯಿತು - ಮೂವತ್ತೈದು ವರ್ಷ ಹಿಂದೆ ನಾನು ಮೊದಲು ನಮ್ಮ ಹಳ್ಳಿಯ ಪಕ್ಕದ ಪಟ್ಟಣಕ್ಕೆ ಕೊಂಡು ಹೋದ  ಮೊದಲ  ವಾಹನ ಹಿಂಬಾಲಕ ಗಾಡಿ ಒಳಗೊಂಡ ನಮ್ಮ ಪವರ್ ಟಿಲ್ಲರ್.  ನೂರು ಲೀಟರ್ ಡೀಸಲ್ ತರಲು ಟಿಲ್ಲರ್ ತಗೊಂಡು ಹೋಗಲು ಅಪ್ಪನ ಒಪ್ಪಿಗೆ ಪಡಕೊಂಡಿದ್ದೆ. ಅಂದು ವಾಹನ ಚಾಲನೆ ಪರವಾನಿಗೆ ಪಡಕೊಳ್ಳಲು ನನಗೆ ಪ್ರಾಯ ಆಗಿರಲಿಲ್ಲ.  ಅನಿಲನಿಗೂ ಈಗ  ಇತರ ವಾಹನ ಪರವಾನಿಗೆ ಪಡಕೊಳ್ಳಲು ಪ್ರಾಯ ಆಗಲಿಲ್ಲ.

ನಮಗೆ ಮೊದಲ ನೋಟಕ್ಕೆ ಮರಳಿನಲ್ಲಿ ಸಾಮ್ಯತೆ ಕಂಡರೂ ಸಮೀಪದಿಂದ ನೋಡುವಾಗ ವ್ಯತ್ಯಾಸ ಗುರುತಿಸಲು ಸಾದ್ಯವಾಗುತ್ತದೆ. ಒದ್ದೆ ಮರಳಾಗಲಿ ಒಣ ಮರಳಾಗಲಿ ತುಲನೆ ಮಾಡುವಾಗ ಚಕ್ರಕ್ಕೆ ಕೊಡುವ ಹಿಡಿತದಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಅದುದರಿಂದ ನಮ್ಮ ಸಮಯಸೂಚಿ ಪೂರಾ ಅಡಿಮೇಲಾಯಿತು. ಚಕ್ರಕ್ಕೆ ಹಿಡಿತ ಸಿಗದೆ ಹುಗಿಯುತ್ತಾ ನಿದಾನವಾಗಿ ಸಾಗುವುದು ಹಲವು ಕಡೆಗಳಲ್ಲಾಯಿತು.

ಬಿಸಿಲಿನ ಹೊಡೆತ ಬಹಳ ಇರುತ್ತದೆ ಎಂದು ರೋಹಿತ್ ಸೂಚನೆ ಮೊದಲೇ ಕೊಟ್ಟ ಕಾರಣ sunscreen lotion ತಗೊಂಡು ಹೋಗಿದ್ದೆವು. ಮೂವರು ಮಕ್ಕಳು ಅದನ್ನು ಹಚ್ಚಿಕೊಂಡು ಚರ್ಮ ಬೆಂದು ಹೋಗುವುದರ ತಪ್ಪಿಸಿಕೊಂಡರು. ನಾವು ನಿರಂತರವಾಗಿ ಬಿಸಿಲಿನಲ್ಲಿ ಇಲ್ಲದ ಕಾರಣ ನಮಗೆ ಹಚ್ಚಿಕೊಳ್ಳದಿರುವುದು ತೊಂದರೆಯಾಗಲಿಲ್ಲ.

ಸದಾಸಂ ಬಿಡಿಬಾಗಗಳ ಬಗ್ಗೆ ಬಹಳ ಕಾಳಜಿ ವಹಿಸಿದ್ದೆ. ಭಾನುವಾರ ಎಂದರೆ ಯಾವ ಬಿಡಿಬಾಗ ಅಂಗಡಿಯೂ ತೆರೆದಿರುವುದಿಲ್ಲ. ಸಾಮಾನ್ಯವಾಗಿ ಬದಲಾಯಿಸುವ ಎಲ್ಲ ಸಾಮಾನುಗಳ ಪಟ್ಟಿ ಮಾಡಿ ಒಯ್ದಿದ್ದೆ. ಚಕ್ರ ಮೇಲೆ ಎರಚುವ ಮರಳು ಚೈನ್ ಕೊರೆಯುವ ಕಾರಣ ಒಂದು ಚೈನ್ ಮಾತ್ರವಲ್ಲ ಹೆಚ್ಚುವರಿ ಲಿಂಕ್ ಸಹಾ ನನ್ನಲ್ಲಿತ್ತು. ಆದರೆ CD unit ಹೊರತು ಪಡಿಸಿ ಯಾವ ಬಾಗವೂ ಕೈಕೊಡಲಿಲ್ಲ. ಅದೂ ಸಹಾ ಮುಂಚಿನ ದಿನದ ಸ್ನಾನದಿಂದಾಗಿ ಇರಬಹುದು ಅನ್ನಿಸುತ್ತದೆ. ಯಾಕೆಂದರೆ ವಿಫಲವಾದ ಬಿಡಿ ಬಾಗ ಈಗ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.




ಭರತದ ಸಮಯವಾದುದರಿಂದ ಎರಡು ಜಾಗಗಳಲ್ಲಿ ಏರಿನಿಂತ ನೀರು ನಮಗೆ ದಾರಿಗಡ್ಡವಾಯಿತು. ಪಡುಬಿದ್ರೆ ಸಮೀಪ ವಾಪಾಸು ಹೆದ್ದಾರಿಗೆ ಬರದೆ ವಿದಿಯಿರಲಿಲ್ಲ. ಉಚ್ಚಿಲ ಸಮೀಪದಲ್ಲಿ ಪಕ್ಕದಲ್ಲಿರುವ ರಸ್ತೆಗೆ ಏರಿ ದಾಟಲು ಸಾದ್ಯವಾಯಿತು. ಗೂಗಲ್ ಚಿತ್ರವನ್ನು ಅನುಸರಿಸಿ ಕಣ್ಮುಚ್ಚಿ ಬರುವಂತಿಲ್ಲ ಅನ್ನುವುದಕ್ಕೆ ಇದೊಂದು ಉದಾಹರಣೆ. ಭಟ್ಕಳ ಸಮೀಪದ ಗೂಗಲ್ ಚಿತ್ರದಲ್ಲಿ ಸದಾ ಮೋಡ ಹಾಗೂ ಮೋಡದ ನೆರಳು ಕಾಣುತ್ತದೆ ಅನ್ನೋದು ಬೇರೆ ವಿಚಾರ.
 
ಸಂಜೆ ನಾಲ್ಕೂವರೆಗೆ ಕಾಪು ದೀಪಸ್ಥಂಬ ತಲಪಿದರು ಅನಿಲ್ ಮತ್ತು ಅಭಿ. ಅಲ್ಲಿ ಸುಂದರ ಮರಳ ಶಿಲ್ಪ ಮಾಡಿದ್ದರು. ಕಾಪುವಿನಲ್ಲಿ ದೀಪಸ್ಥಂಬ ದಾಟಿದ ನಂತರ ಗೂಗಲ್ ಚಿತ್ರ ಒಂದು ತೋಡು ದಾಟಲು ಸಂಕ ತೋರಿಸುತ್ತದೆ. ಆದರೆ ಅದನ್ನು ಸಮೀಪಿಸಲು ದಾರಿ ಉಂಟೊ ಅನ್ನುವುದು ನನಗೆ ಅಲ್ಲಿಗೆ ತಲಪುವ ತನಕವೂ ಸಂಶಯ ಇತ್ತು. ಆದರೆ ತೊಂದರೆ ಉಂಟಾಗಲಿಲ್ಲ. ಸದಾಸಮ್ ಮತ್ತು ಜತೆ ವಾಹನಗಳು ಸಂಕ ಸಲೀಸಾಗಿ ದಾಟಿದವು. ಅನಂತರ ಹೊಯಿಗೆಯಲ್ಲಿ ಹೋಗುವವನನ್ನು ಬೀಳ್ಕೊಟ್ಟೆವು.

ಗುಡುಗು ಮಿಂಚು ಮಳೆಯ ಲಕ್ಷಣಗಳು ಜೋರಾಗುತ್ತಾ ಇತ್ತು. ಅನಿಲ ಒದ್ದೆಯಾಗಲು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ನಮ್ಮ ಒತ್ತಡಕ್ಕೆ ಮುಂದುವರಿಯಲು ಒಪ್ಪಿದ. ಸ್ವಲ್ಪ ದೂರ ಅನಂತರ ನಮ್ಮ ಮುಂದಿನ ಭೇಟಿಯಲ್ಲಿ ನಾನು ಅವನನ್ನು ಇಳಿಸಿ ಸವಾರಿಗೆ ಸದಾಸಂ ಏರಿದೆ. ಎರಡು ಕಿಮಿ ಮುಂದೆ ತಂಡದವರನ್ನು ನನಗೆ ಸಿಕ್ಕಲು ಹೇಳಿದೆ.

ಐವತ್ತಡಿ ಅಡಿ ಸಾಗುವುದರೊಳಗೆ ಬಂದ ಬೃಹತ್ ತೆರೆ ನನ್ನನ್ನು ಸೊಂಟದ ವರೆಗೂ ಸದಾಸಂನ್ನು ಸಂಪೂರ್ಣವಾಗಿ ತೋಯಿಸಿತು. ಎಲ್ಲಿಯೊ ವಾಹನದ ವಿದ್ಯುತ್ ಜಾಲದಲ್ಲಿ ಅವ್ಯವಸ್ಥೆ ಉಂಟು ಮಾಡಿತು. ಯಂತ್ರ ಸ್ಥಬ್ದವಾಯಿತು. ಅಲ್ಲಿನ ವರೆಗೆ ಸದಾಸಂ ಚಾಲಕ ಸದಾ ಸಂಚಾರವಾಣಿ ಇಟ್ಟುಕೊಂಡಿದ್ದರೆ ಇಲ್ಲಿ ನನ್ನ ಜತೆಯಲ್ಲಿ ಮಾತ್ರ ಅದು ಇರಲಿಲ್ಲ. ಹಾಗಾಗಿ ನನಗೆ ತಂಡದವರ ಸಂಪರ್ಕಿಸಲು ಕಷ್ಟವಾಯಿತು. ಎರಡೂ ಬದಿ ನೀರಿನ ಮದ್ಯೆ ಅಲ್ಲಿದ್ದದ್ದು ಒಂದೇ ಹಾದಿ. ಕೊನೆಗೆ ದಾರಿಯಲ್ಲಿ ಹೋಗುತ್ತಿರುವ ಒಂದು ರಿಕ್ಷವನ್ನು ನಿಲ್ಲಿಸಿ ಪಾಚಿ ಬಣ್ಣದ ಒಮ್ನಿಗೆ ಸಂದೇಶ ಕಳುಹಿಸಲು ಯತ್ನಿಸಿದೆ.

ನಾನು ಮನೆಯಿಂದ ಹೊರಡುವಾಗ ಸಿದ್ದ ಪಡಿಸಿದ ವೇಳಾಪಟ್ಟಿಯಲ್ಲಿ ಸಂಜೆ ಐದೂವರೆಗೆ ಸದಾಸಂ ವಾಹನಕ್ಕೆ ಹೇರುವುದಾಗಿತ್ತು. ಮನೆಗೆ ವಾಪಾಸು ಬರಲು ಕನಿಷ್ಟ ಮೂರು ಘಂಟೆ ಬೇಕೆಂದು ತೀರ್ಮಾನಿಸಿದ್ದೆ. ಆದರೆ ನಾನು ಸದಾಸಂ ಏರಿದಾಗಲೇ ಘಂಟೆ ಐದಾಗಿತ್ತು.

ಮುಂದೆ ಹೋದವರು ಸ್ವಲ್ಪ ಸಮಯ ಕಾದು ಅನಂತರ ವಾಪಾಸು ಬಂದರು. ನಾನು ಅಷ್ಟರೊಳಗೆ ಊರ ಹುಡುಗರ ಸಹಾಯದಿಂದ ನನ್ನ ಕುದುರೆಯನ್ನು ರಸ್ತೆ ಬದಿಗೆ ತಂದಿರಿಸಿದ್ದೆ. ಮಳೆ ಜೋರಾಗಿತ್ತು. ನಾವೆಲ್ಲ ಒದ್ದೆಯಾಗಿದ್ದೆವು. ಸದಾಸಂ ಎತ್ತಿ ಒಮ್ನಿಯೊಳಗಿಟ್ಟೆವು. ಹೆದ್ದಾರಿ ತಲಪುವಾಗ ಗುಡುಗು ಸಿಡಿಲು ಮಳೆ. ವಾಪಾಸು ಬರುವಾಗಲೂ ಮುಡಿಪು ದಾರಿಯಾಗಿ ಬಂದೆ. ಬಸ್ಸಿನಲ್ಲಿ ಬಂದ ಇಬ್ಬರು ಅನಿಲರು ಊರು ಮುಟ್ಟುವಾಗ ನಾನೂ ತಲಪಿದೆ. ಅಂತೂ ರಾತ್ರಿ ಒಂಬತ್ತುವರೆಗೆ ಮನೆ ಸೇರಿದೆವು.

ಮರುದಿನ ಮಧ್ಯಾಹ್ನ ನೋಡುವಾಗ ಪೈಂಟ್ ಮಾಸಿದ ಜಾಗದಲ್ಲಿ ತುಕ್ಕು ಹಿಡಿಯಲು ಪ್ರಾರಂಬವಾಗಿತ್ತು. ಅಂದು ಸಂಪತ್ ಚೆನ್ನಾಗಿ ತೊಳೆದ ಕಾರಣ ಉಪ್ಪು ನೀರಿನ ಲೇಪನ ಅಳಿಸಿಹೋಯಿತು.

Friday, November 27, 2009

ಕಡಲ ತೀರದ ಸದಾಸಂ ಪ್ರವಾಸಕ್ಕೆ ತಯಾರಿ

ಒಮ್ಮೆ ಕಡಲ ತೀರಕ್ಕೆ ಸದಾಸಂ ತೆಗೆದುಕೊಂಡು ಹೋದ ನಂತರ ಮುಂದಿನ ಸವಾಲಿಗೆ ವಿಕಿಮಾಪಿಯ ಭೂಪಟದಲ್ಲಿ ಅವಕಾಶ ಹುಡುಕುತ್ತಿದ್ದೆ. ಪಣಂಬೂರಿನ ಬಂದರು ದಾಟಿದರೆ ಮೂಲ್ಕಿಯಲ್ಲಿ ಮಾತ್ರ ಅಡಚಣೆ. ನಂದಿನಿ ಶಾಂಬವಿ ನದಿಗಳು ಜತೆಯಾಗಿ ಸಮುದ್ರ ಸೇರುವ ಮೂಲ್ಕಿ ಅಳಿವೆ ಬಾಗಿಲನ್ನು ದೋಣಿಯಲ್ಲಿ ದಾಟಲು ಸಾದ್ಯವಾದರೆ ಮುಂದೆ ಮಲ್ಪೆ ವರೆಗೆ ತೊಂದರೆಯಿಲ್ಲ     ಸುಮಾರು ಐವತ್ತು ಕಿಲೋಮೀಟರ್  ಸವಾರಿಗೆ  ಸಿಗುತ್ತದೆ.  ಹೆದ್ದಾರಿಯಲ್ಲಿ ನಮಗೆ ಸಿಗುವ ಹಲವು ನದಿಗಳು ಜತೆ ಸೇರಿ ಮೂಲ್ಕಿ ಮಲ್ಪೆಯಲ್ಲಿ ಸಮುದ್ರ ಸೇರುತ್ತದೆ. ಹಾಗಾದರೆ ಈ ತೀರದಲ್ಲಿ ಮಕ್ಕಳೊಂದಿಗೆ ಹೋದರೆ ಎಂದು ಕನಸು ಕಟ್ಟಲು ಪ್ರಾರಂಬ. ದೈಹಿಕವಾಗಿ ದುರ್ಬಲನಾದ ನನಗೆ ಪಕ್ಕದ ಮನೆಯ ಅನಿಲ್ ಕುಮಾರ್ ಮೇಲುಸ್ತುವಾರಿಯಾಗಿ ಬಂದರೆ ಸಹಾಯವಾದೀತು ಎಂದು ಅಲೋಚಿಸಿದೆ. .

ನಮ್ಮಲ್ಲಿ ಇಂತಹ ಪ್ರಯಾಣಗಳ ರೂಪಿಸುವುದು ಸುಲಭವಲ್ಲ. ಇದೊಂದು ಸವೆಯದ ದಾರಿ. ಅದುದರಿಂದ ಜಾಗ್ರತೆಯಿಂದ ಮುಟ್ಟಿಮುಟ್ಟಿ ಸಾಗಬೇಕಾಯಿತು. ಗಡಿ ಪ್ರದೇಶದಿಂದ ಹಾಗೂ ಕಡಲತೀರದಿಂದ ಇನ್ನೂರು ಕಿಮಿ ವರೆಗೆ ನಿರ್ಬಂದಿತ ಪ್ರದೇಶವೆಂದು ಪರಿಗಣನೆ. ಇತ್ತೀಚಿನ ವರೆಗೆ ಭೂಪಟ ಸಂಪಾದಿಸುವುದು ಸಾಹಸದ ವಿಚಾರವಾಗಿತ್ತು. ಆರೋಹಣ ಪರ್ವತಾರೋಹಿಗಳ ತಂಡಕ್ಕಾಗಿ ಅಶೋಕವರ್ಧನರು   ಒಂದು ಸರಕಾರಿ ಭೂಪಟ ಪಡಕೊಳ್ಳಲು ಮಾಡಿದ ಪ್ರಯತ್ನಗಳು ದಾಖಲಾರ್ಹ. ಈಗ ಆಕಾಶ ಚಿತ್ರ ಲಬ್ಯವಾಗುವ ಕಾರಣ ಪರವಾಗಿಲ್ಲ.

ಈ ಪ್ರವಾಸಕ್ಕೆ ಅಡಿಪಾಯ ಹಾಕಲು ಘಂಟೆಗಟ್ಟಲೆ ಕಂಪ್ಯುಟರ್ ಮುಂದೆ ವಿಕಿಮಾಪಿಯ ನೋಡುತ್ತಾ ಕೂತಿದ್ದೇನೆ. ಕ್ರಮ ಬದ್ದವಾಗಿ ಕೆಲಸ ಮಾಡಲು ಚಿತ್ರಗಳಿಗೆ ಕ್ರಮಾಂಕ ಕೊಡುವುದರಲ್ಲಿ ಜಾಗ್ರತೆ ಬೇಕು. ನಡುವೆ ಅಂತರ ಉಳಿಯದಂತೆ ಒಂದರ ಕೊನೆಯಿಂದ ಮತ್ತೊಂದರ ಪ್ರಾರಂಬ ಅನ್ನುವಂತೆ ವ್ಯವಸ್ತೆಗೊಳಿಸಿದೆ. ಮೊದಲು ಗೂಗಲ್ ಭೂಪಟಕ್ಕೆ ಒಂದು ಎರಡು ಎಂದು ಕ್ರಮಾಂಕ ಕೊಟ್ಟೆ. ಕಂಪ್ಯುಟರ್ ಗುರುತಿಸುವಾಗ 1,10,11,12,13,....19,2,20,21,22.... ಎನ್ನುವಂತಹ ಸಮಸ್ಯೆ ಎದುರಾಯಿತು. ಅಲ್ಲಿ ಎರಡು ಬಾರಿ ಎಡವಿದ ನಂತರ ಕೊನೆಗೆ ಸ್ಥಳದ ಅಕ್ಷಾಂಶವ ಅನುಸರಿಸಿ ಉದಾಹರಣೆಗೆ ಅಕ್ಷಾಂಶ ೧೩.೩೪೫೬ ದ ನಕ್ಷೆಗೆ ೧೩೩೪೫೬ ಎಂಬ ಸಂಖ್ಯೆ ಕೊಟ್ಟ ನಂತರ ಕೆಲಸ ಸಲೀಸು. ಈ ಪ್ರವಾಸಕ್ಕಾಗಿ ನೂರಾರು ಚಿತ್ರಗಳ ನಕಲು ಮಾಡಿಕೊಂಡಿದ್ದೇನೆ.

ಎಲ್ಲೆಲ್ಲಿ ಕಡಲತೀರದಲ್ಲಿ ರಸ್ತೆ ಉಂಟು ಎನ್ನುವುದನ್ನು ಗುರುತಿಸುವುದು ಮುಂದಿನ ಹೆಜ್ಜೆ. ಅನುಭವ ಕೊರತೆಯಿಂದಾಗಿ ಮಕ್ಕಳನ್ನು ಒಬ್ಬಂಟಿಯಾಗಿ ಬಹು ದೂರ ಕಳಿಸುವಂತಿರಲಿಲ್ಲ. ಕಡಲ ತೀರದಲ್ಲಿಯೇ ರಸ್ತೆ ಇದ್ದರೆ ಚಿಕ್ಕವ ಸುನಿಲ ಸ್ವಲ್ಪ ದೂರವಾದರೆ ದೊಡ್ಡವ ಅನಿಲ ಎಂದು ತೀರ್ಮಾನಿಸಿದೆ. ಜತೆಯಲ್ಲಿ ಸಾಗುವ ಸಹಾಯಕ ವಾಹನ ಒಮ್ನಿಯನ್ನು ಆತ್ಮೀಯರಾದ ಅನಿಲ್ ಕುಮಾರ ಓಡಿಸುವುದಕ್ಕೆ ಒಪ್ಪಿದ ಕಾರಣ ನನಗೆ   ಯೋಜನೆ ರೂಪಿಸಲು ಸಹಾಯವಾಯಿತು.




ಇಂತಹ ಪ್ರವಾಸಕ್ಕೆ GPS ಸಲಕರಣೆ ಬಹಳ ಉಪಕಾರಿ. ಈ ಬಗೆಗೆ ವರುಷದ ಹಿಂದೆ ಬ್ಲೋಗ್ ಬರಹ ಬರೆದಿದ್ದೆ.  ಜಿಪಿಎಸ್
ಉಪಯೋಗಿಸುತ್ತಿರುವ ಶಿರಸಿಯ ಬಾಲು ಹೆಗ್ಡೆಯವರಲ್ಲಿ ಇ-ಪತ್ರ ಮೂಲಕ ವಿಚಾರಿಸಿದೆ. ಹೊರದೇಶದಲ್ಲಿದ್ದ ಅವರು ತಕ್ಷಣ ಉತ್ತರಿಸಿದರೂ ಬೆಂಗಳೂರಿನಿಂದ ತರಿಸುವುದು ಸುಲಭವಲ್ಲ ಮತ್ತು ಒಂದು ಮಳೆಗೆ ಒಂದು ಕೊಡೆ ಕೊಂಡಂತಾಗುವುದೋ ಎನ್ನುವ ಗೊಂದಲದಲ್ಲಿ ಈ ಪ್ರವಾಸದ ಮಟ್ಟಿಗೆ ಅದರ ಆಸೆ ಬಿಟ್ಟೆ. ಅರ್ಥಹೀನ ತೇರಿಗೆಯಿಂದಾಗಿ ನಮಗೆ ತೀರಾ ದುಬಾರಿಯೆನಿಸುವ ಉಪಕರಣ.  ಗುಜರಾತಿನಲ್ಲಿ ಕಳೆದ ವರ್ಷ ಇಬ್ಬರು ಜಿಪಿಎಸ್ ಉಪಯೋಗಿಸಿ ನಮ್ಮ ಅರ್ಥಹೀನ ಕಾನೂನುಗಳಿಗೆ ಸಿಲುಕಿ ಜೈಲುವಾಸ ಅನುಬವಿಸಿದ್ದಾರೆ.  

ಮೂಲ್ಕಿಯಲ್ಲಿ ಹೊಳೆ ದಾಟಲು ಸಾದ್ಯವಾಗುವುದಾದರೆ ಪಣಂಬೂರಿನಿಂದ ಇಲ್ಲವಾದರೆ ಪ್ರಾರಂಬ ಬಪ್ಪನಾಡಿನಲ್ಲಿ ಹೊಳೆಯ ಆಚೆ ಕಡೆಯಿಂದ ಎಂದು ನಿರ್ದರಿಸಿದ್ದೆ. ಸದಾಸಂ ಎರಡು ಬಾರಿ ವ್ಯಾನಿಗೆ ಹಾಕಿ ತೆಗೆಯುವುದು ಶ್ರಮದಾಯಕ. ನಾನು ದೈಹಿಕವಾಗಿ ದುರ್ಬಲನಾದುದರಿಂದ ನನಗೆ ಈ ಹೆಚ್ಚಿನ ಶ್ರಮದಾಯಕ ಕೆಲಸ ಎಳೆದು ಹಾಕಿಕೊಳ್ಳಲು ಆಸಕ್ತಿ ಇರಲಿಲ್ಲ.

ಹೊಳೆದಾಟುವ ಬಗ್ಗೆ ವಿಚಾರಿಸುತ್ತಿರುವಾಗ ಅಶೋಕವರ್ಧನರು ರೋಹಿತ್ ರಾವ್ ಅವರ ಸಂಚಾರವಾಣಿ ಸಂಖ್ಯೆ ಕೊಟ್ಟು ಅವರಲ್ಲಿ ವಿಚಾರಿಸು ಎಂದರು. ರೋಹಿತರು ಎರಡು ಬಾರಿ ನೂರ ಐವತ್ತಕ್ಕೂ ಮಿಕ್ಕಿ ಸ್ಕೌಟ್ ಮಕ್ಕಳ ಸೈನ್ಯವನ್ನು ಮಂಗಳೂರಿನಿಂದ ಮಲ್ಪೆ ತನಕ ಕಾಲ್ನಡುಗೆಯಲ್ಲಿ ಮುನ್ನಡೆಸಿದ ಅನುಭವ ಇರುವಂತಹವರು. ಬೇಟಿಯಾದಾಗ ರೊಹಿತ್ ಅವರು ಸಹಕರಿಸಲು ಒಪ್ಪಿಕೊಂಡರು ಮಾತ್ರವಲ್ಲ ಅಂದು ಕೆಮರ ಹಾಗೂ ಜಿಪಿಎಸ್ ಸಮೇತ ಹಾಜರಿರುತ್ತೇನೆ ಅಂದರು.

ಮೊದಲು ಈ ಪ್ರವಾಸದ ವಿಚಾರ ಹೆಚ್ಚು ಗೆಳೆಯರಲ್ಲಿ ಹಂಚಿಕೊಳ್ಳಲಿಲ್ಲ. ಸಿಮಿತ ಆರೊಗ್ಯದ ಕಾರಣ ನನಗೆ ಗಮನವಿಟ್ಟು ಕಾರ್ಯ ನಿರ್ವಹಿಸಲು ಬಹಳ ಕಷ್ಟವಾಗುತ್ತದೆ. ಅದುದರಿಂದ ಜನರ ಸಂತೆಯಲ್ಲಿ ಗಮನ ಕೈಕೊಡುವುದರ ಇಷ್ಟಪಡುವುದಿಲ್ಲ. ಯಂತ್ರ ಹಾಗೂ ಮಕ್ಕಳ ಮೇಲೆ ಸಂಪೂರ್ಣ ಗಮನವಿಡಲು ನನ್ನ ತಯಾರಿ ಕೆಲವರಿಗೆ ಮಾತ್ರ ತಿಳಿಸಿದ್ದೆ.

ಸಮುದ್ರತೀರದಲ್ಲಿ ಸವಾರಿ ಮಾಡುವಾಗ ತೆರೆಗಳು ತೇವಗೊಳಿಸಿದ ಮರಳಿನಲ್ಲಿ ಸವಾರಿ ಉತ್ತಮ. ಅಲ್ಲಿ ಚಕ್ರಕ್ಕೆ ಗಟ್ಟಿ ತಳ ಸಿಕ್ಕುವ ಕಾರಣ ಸವಾರಿ ಸುಲಭ ಹಾಗೂ ವೇಗವಾಗಿ ಸಾಗಬಹುದು. ಇಂದನ ಖರ್ಚು ಕಡಿಮೆ. ಒದ್ದೆ ಮರಳಿನಲ್ಲಿ ಸವಾರಿ ಸುಲಭ ಎನ್ನುವುದು ಎಲ್ಲಾ ಸಮುದ್ರ ತೀರದಲ್ಲಿ ಸೈಕಲಿಸಿದವರಿಗೂ ತಿಳಿದ ವಿಚಾರ. ಆದರೆ ನಿರಂತರವಾಗಿ ತೆರೆಗಳ ಮೇಲೆ ವಾರೆ ಕಣ್ಣಿಡುತ್ತಾ ಇರಬೇಕಾಗುತ್ತದೆ. ನನ್ನ ತಯಾರಿ ಎಂದರೆ ಸಾದ್ಯವಾದಷ್ಟು comprehensive ಆಗಿ ಚಿಂತಿಸುತ್ತೇನೆ. ಹಾಗೆ ಮಕ್ಕಳಿಗೆ ರಕ್ಷಣಾ ಕವಚ life jacket ಬೇಕಾ ? ಎನ್ನುವ ಪ್ರಶ್ನೆ ಉಂಟಾಗಿತ್ತು. ಬೇಡ, ಅಗತ್ಯವಿಲ್ಲ ಎಂದರು ರೋಹಿತ್. ಈ ತೆರೆಗಳ ಮೇಲೆ ಕಣ್ಣಿಡುವ ವಿಚಾರದಲ್ಲಿ ಕೊನೆ ಹಂತದಲ್ಲಿ ಸೋತವನು ನಾನೇ.

ಸದಾಸಂ ಚೈನಿಗೆ ಕಳೆದ ಸಲ ಕಡಲ ತೀರಕ್ಕೆ ಹೋಗಿ ಬಂದ ನಂತರ ಶಂಕರಣ್ಣನ ಕಾರ್ ವೀಲ್ಸ್ ನಲ್ಲಿ ಡೀಸಲ್ ಸ್ನಾನ ಮಾಡಿಸಿ ಅನಂತರ ಒತ್ತಡದ ಗಾಳಿ ಹಿಡಿದು ಒಣಗಿಸಿದ್ದೆವು. ಈ ಸಲ ಹೋಗುವ ಮೊದಲು ಏನು ಮಾಡಲಿ ಎಂದಾಗ ಎಣ್ಣೆ ಲೇಪನೆ ಬೇಡ ಎಂದರು ಶಂಕರಣ್ಣ. ಅದನ್ನು ಬಿಗಿ ಪಡಿಸುವ ಬಗೆಗೆ ಮೋಹನರಲ್ಲಿ ಮಾತನಾಡುವಾಗ ಸದ್ಯಕ್ಕೆ ಹೀಗೆ ಇರಲಿ, ಮರಳು ಸಂದಿನಲ್ಲಿ ಸೇರಿ ಬಿಗಿಯಾಗಬಹುದು ಎಂದವರು ಹೇಳಿದರು. ದಂಡಯಾತ್ರೆ ಮರುದಿನ ಸದಾಸಂ ಚಕ್ರಗಳನ್ನು ಎತ್ತಿ ನೋಡುವಾಗ ಚೈನ್ ಬಹಳ ಬಿಗಿಯಾದದ್ದು ಕಂಡು ಬಂತು. ಮೊದಲು ಹೆಚ್ಚು ಬಿಗಿಪಡಿಸಿದ್ದರೆ ತುಂಡಾಗುವ ಸಾದ್ಯತೆ ಇದ್ದಿರಬಹುದು.

ಪ್ರವಾಸಕ್ಕೆ ದಿನ ನಿಶ್ಚಯಿಸುವಾಗ ಮರುದಿನ ಮಕ್ಕಳಿಗೆ ರಜೆ ಇರಬೇಕು ಎಂದು ತೀರ್ಮಾನಿಸಿದ್ದೆ. ಹಾಗೆ ೨೮ರ ಬಕ್ರಿದ್ ರಜಾ ದಿನ ಹೋದರೆ ಮರುದಿನ ರವಿವಾರ ಮಕ್ಕಳಿಗೆ  ಶಾಲೆಗೆ ರಜೆ ಮಾಡದೆ   ಸುದಾರಿಸಿಕೊಳ್ಳಲು ಸಾದ್ಯವೆಂದು ಆಲೋಚನೆಯಾಗಿತ್ತು. ಮುಸ್ಲಿಮರ ಹಬ್ಬದ ರಜೆ ಯಾವತ್ತೂ ಅನಿಶ್ಚಿತ. ಚಂದ್ರ ಕಾಣಬೇಕು....... ಈ ಮದ್ಯೆ ಅಶೋಕವರ್ಧನರು ಒಂದು ಕಾರ್ಯಕ್ರಮದ ಸುಳಿವು ಕೊಟ್ಟಾಗ ನಮ್ಮ ಪ್ರವಾಸ ಹಿಂದೂಡಲ್ಪಟ್ಟಿತು. ೨೨ರಂದು ಹೋಗಿ ಬಂದರೆ ಮರುದಿನ ಮಕ್ಕಳಿಗೆ ಷಷ್ಠಿ ರಜೆ ಇತ್ತು  ಅನ್ನುವ ಕಾರಣದಿಂದ  ೨೨ ರವಿವಾರದಂದೇ  ಹೊರಟೆವು.   ಕೊನೆಗೆ ಬಕ್ರಿದ್ ಲೆಕ್ಕದ ಮಕ್ಕಳ ರಜೆಯೂ ಒಂದು ದಿನ ಹಿಂದೂಡಲ್ಪಟ್ಟು ಅಕಸ್ಮಾತ್ ನಾವು ೨೮ ರಂದು ನಿಗದಿ ಪಡಿಸಿದ್ದರೆ ಸಮಯ ಹೊಂದಾಣಿಕೆಯಾಗದೆ ರದ್ದಾಗುವ ಸಾದ್ಯತೆ ಇತ್ತು.

ರೋಹಿತ್ ಅವರು ಬೆಳಗ್ಗೆ ಬೇಗ ಪ್ರಾರಂಬಿಸುವ ಅನಿವಾರ್ಯತೆ ಒತ್ತಿ ಹೇಳಿದ್ದರು. ಬಿಸಿಲಿನ ಹೊಡೆತಕ್ಕೆ ನಾವು ತತ್ತರಿಸುವ ಕಾರಣ ಬಿಸಿಲೇರುವ ಮೊದಲೇ ಸುರುಮಾಡುವುದು ಮಾತ್ರವಲ್ಲ ಸಾಕಷ್ಟು ಕ್ರಮಿಸ ಬೇಕು ಎಂದಿದ್ದರು. ಹಾಗೆ ಬೆಳಗ್ಗೆ ನಾಲ್ಕು ಮುಕ್ಕಾಲಿಗೆ ಮನೆಯಿಂದ ಹೊರಟೆವು. ನೇರ ಮಂಗಳೂರಿನ ದಾರಿ ಹೊಂಡಗುಂಡಿ ತುಂಬಿದ ಕಾರಣ ಹತ್ತು ಕಿಮಿ ಹೆಚ್ಚಿನ ಮುಡಿಪು ಮೂಲಕದ ಬಳಸು ದಾರಿಯಲ್ಲಿ ಸಾಗಿದೆವು. ನಮ್ಮಲ್ಲಿಂದ ಸುಮಾರು ಅರುವತ್ತು ಕಿಮಿ ದೂರದ ಕೂಳೂರು ಮುಟ್ಟಿ ರೋಹಿತರಿಗೆ ಸಂದೇಶ ಕಳುಹಿಸಿದೆ. ಈಗ  ಹೋಟೇಲಿನಲ್ಲಿದ್ದೇವೆ. ಇಪ್ಪತ್ತು ನಿಮಿಷದಲ್ಲಿ ಕಡಲ ತೀರದಲ್ಲಿರುತ್ತೇವೆ.

ನನಗೆ ರೋಹಿತರು ಬರುವ ಮೊದಲೇ ಸದಾಸಂ ಇಳಿಸಿ ಚಾಲನೆ ಮಾಡುವ ತವಕ. ಸ್ವಲ್ಪ diversion ಇದ್ದರೂ ನನ್ನ ಏಕಾಗ್ರತೆ ಬಂಗವಾಗುವ ಕಾರಣ  ಅವರೆಲ್ಲ ಸೇರುವ ಮೊದಲೇ   ಸಂಪೂರ್ಣ ಗಮನವಿಟ್ಟು ಸದಾಸಂ ಪ್ರಯಾಣಕ್ಕೆ ಅಣಿಗೊಳಿಸುವುದು  ಉತ್ತಮ ಅಂದುಕೊಂಡಿದ್ದೆ. ಪಣಂಬೂರು ಕಡಲತೀರದ ವಾಹನ   ನಿಲುಗಡೆ ಪ್ರದೇಶದಲ್ಲಿ ಇದನ್ನು ಇಳಿಸಿದೆವು.

ಹಿಂದಿನ ಸಂಜೆ ವಾಹನಕ್ಕೆ ಏರಿಸುವ ಮೊದಲು ಸ್ವಲ್ಪ ನೀರು ಹಾಕಿ ತೊಳೆದದ್ದು ಸಮಸ್ಯೆ ಉಂಟುಮಾಡಿತು. ಚಾಲನೆ ಸಾದ್ಯವಾದರೂ ಎಂಜಿನ್ ತುಂಬಾ ಎಗರಾಡುತಿತ್ತು. ರೋಹಿತರ ಗೆಳೆಯ ನಿಬಿಶರು ತಂತ್ರಜ್ನರ ಸಂಪರ್ಕಿಸಿದರು. ಅವರು ಬಂದವರೇ ಎರಡೇ ನಿಮಿಷದಲ್ಲಿ CD Unit ತೊಂದರೆ ಎಂದರು. ನಾನು ಹಿಡಿದುಕೊಂಡು ಹೋದ ಬಿಡಿಬಾಗಗಳಲ್ಲಿ ಇದು ಸಹಾ ಇದ್ದ ಕಾರಣ ತಕ್ಷಣ ಬದಲಾಯಿಸಿ ಸಮಸ್ಯೆ ಪರಿಹರಿಸಿಕೊಂಡೆವು. ತಂತ್ರಜ್ನರು ಶುಲ್ಕ ಪಡಕೊಳ್ಳಲು ಒಪ್ಪದೆ ತಮ್ಮ ಬುಲ್ಲೆಟ್ ಹತ್ತಿ ಹೊರಟುಹೋದರು.



Sunday, November 15, 2009

ಕುರಾಮನ ರಾಮನಗರದಲ್ಲಿ ಕೈ ಸಾಲ ವಿರುದ್ದ ಫತ್ವಾ

ಸರಕಾರ ಜನರಿಗೆ ಹೆಚ್ಚೆಚ್ಚು ಸಾಲ ಲಬ್ಯವಾಗಲು ಪ್ರಯತ್ನಿಸುತ್ತಿದೆ. ಸಾಚಾರ ಕಮಿಟಿ ಮುಸ್ಲೀಮರಿಗೆ ಸಿಗುತ್ತಿರುವ ಬಾಂಕ್ ಸಾಲದ ಪ್ರಮಾಣ  ಬಹಳ ಕಡಿಮೆ   ಎಂದು ಅಬಿಪ್ರಾಯ ಪಟ್ಟಿದೆ. ಸಾಲ ಸಿಗುವುದು ಕಷ್ಟ ಎಂದು ಹೇಳುತ್ತಿರುವ ಮುಸ್ಲಿಂ ಸಮಾಜದ ಸಂಸ್ಥೆಯೊಂದು ಬಸ್ಮಾಸುರನಾಗಲು ಹೊರಟಿದೆ. ಕುರಾಮಸ್ವಾಮಿಯ ರಾಮನಗರದಲ್ಲಿ ಅಂಜುಮಾನ್ ಮುಸ್ಲೀಮರ ಸಾಲಪಡಕೊಳ್ಳುವ ಸಾದ್ಯತೆಗೆ ಅಡ್ಡಕಾಲು ಹಾಕುತ್ತಿದೆ.

ಅಂಜುಮಾನಿಗೆ ಬಡ್ಡಿ ವ್ಯವಹಾರ ಇಸ್ಲಾಂ ತತ್ವಗಳಿಗೆ ವಿರೋಧ ಎನ್ನುವುದು ಎಚ್ಚರವಾದುದು ಇತ್ತೀಚೆಗೆ. ಎಂಟು ವರ್ಷಗಳಿಂದ ರಾಮನಗರದಲ್ಲಿ ಕಾರ್ಯಾಚಿಸುತ್ತಿಎರುವ ಬಿಎಸ್ಎಸ್ ಕಿರುಸಾಲ ಸಂಸ್ಥೆಗೆ ಈಗ ಹಣದ ಒಳಹರಿವು ನಿಂತಿದೆ. ಈ ಅಂಜುಮಾನ್ ಪದಾದಿಕಾರಿಗಳೆಲ್ಲ ಗಂಡಸರಾಗಿದ್ದು ಕಿರುಸಾಲ ಪಡಕೊಳ್ಳುವವರು ಹೆಚ್ಚಿನವರು ಹೆಂಗಸರು. ಸ್ವಾಬಾವಿಕವಾಗಿ ಹೆಂಗಸರ ಸ್ವಾವಲಂಬನೆ ಚಿಂತನೆ ಗಂಡಸರಿಗೆ ರುಚಿಸುತ್ತಿಲ್ಲ. ಅದುದರಿಂದ ಸಾಲ ಮರುಪಾವತಿ ಮಾಡಬೇಡಿ ಎಂದು ಒತ್ತಡ ಹಾಕುತ್ತಿದೆ. ಗುಂಡಾಗಿರಿಯೂ ನಡೆಯುತ್ತಿದೆ.

ಈ ಕಿರುಸಾಲದ ಕಲ್ಪನೆ ಹುಟ್ಟು ಹಾಕಿದ್ದು ಬಾಂಗ್ಲ ದೇಶದ ಮಹಮದ್ ಯುನುಸ್ ಎನ್ನುವ ಕಾಲೇಜು ಮೇಷ್ಟ್ರು. ಕಳೆದ ವರ್ಷ ಸರಕಾರದ ಸಾಲ ಮುನ್ನಾ ಸುದ್ದಿ ಕೇಳಿದ ಮಹಮದ್ ಯುನುಸ್ ಬಡವರಿಗೆ ಸಾಲ ಹಿಂತಿರುಗಿಸಲು ಹಣವಿಲ್ಲವಾದರೆ   ಸರಕಾರ  ಹಣ ಕೊಡಲಿ. ಸಾಲ ಮುನ್ನಾ ಕೆಟ್ಟ ಸಂಪ್ರದಾಯವಾಗುತ್ತದೆ ಎಂದು ಯುನುಸ್ ಹೇಳಿದ್ದರು.

ಈ ಸಾಲ ಮರುಪಾವತಿ ನಿಲ್ಲಲು ಆರ್ಥಿಕ ಹಿನ್ನೆಡೆ ಕಾರಣವಲ್ಲ. ಕ್ರೈಸ್ತ ಹಾಗೂ ಹಿಂದು ಸಮಾಜದವರು ಮರುಪಾವತಿ ಮಾಡುತ್ತಿದ್ದಾರೆ.  ಜಾತ್ಯಾತೀತ ರಾಜಕಾರಣಿಗಳೂ ಬುದ್ದಿಜೀವಿಗಳೂ ಈಗ ಸುಮ್ಮನಿರುವುದು ಆಶ್ಚರ್ಯ ಉಂಟುಮಾಡುತ್ತದೆ. ಸಮಾಜದ ಬಡ ಜನರ ಹಿತರಕ್ಷಣೆ ಮಾಡುತ್ತದೆ ಎನ್ನುವ ಅಂಜುಮಾನಿನ ಬೋಗಸ್ ನಿಲುವಿನ   ವಿರುದ್ದ   ಶಾಬನ  ಅಜ್ಮಿಯಂತಹವರಾದರೂ  ಸ್ವರ ಎತ್ತಬೇಕಾಗಿತ್ತು. ಮತ ಬಾಂಕ್ ಎನಿಸಿಕೊಂಡ ಮುಸ್ಲಿಮರಿಗೆ ಬೇಸರವಾದರೆ ? ಎಂದು ಎಲ್ಲರೂ ಸುಮ್ಮನಿರುವಂತಿದೆ.

ಅಂಕಣಕಾರ ಸ್ವಾಮಿನಾಥನ್ ಅಯ್ಯರ್ ಈ ಬಗೆಗೆ ಕಳೆದ ವಾರ ಬರೆದಾಗ ಸಂಬಂದ ಪಟ್ಟವರು ಎಚ್ಚೆತ್ತುಕೊಂಡಾರು ಎಂದು ಬಾವಿಸಿದ್ದೆ. ಆದರೆ ಈ ಮರುಪಾವತಿ ಮಾಡದ ಸೀಕು ರಾಜ್ಯಾದ್ಯಂತ ದೇಶಾದ್ಯಂತ ಹಬ್ಬುವ ಲಕ್ಷಣವೇ ದಟ್ಟವಾಗಿದ್ದು ಕಿರುಸಾಲಕ್ಕೆ ಮುಸ್ಲಿಂ ಮಹಿಳೆಯರು ಅನರ್ಹರಾಗುವಂತೆ ಕಾಣುತ್ತದೆ.

Tuesday, November 10, 2009

ಐವರು ಮೊಟರ್ ಸೈಕಲಿನಲ್ಲಿ ಅರುಣಾಚಲ ಪ್ರದೇಶಕ್ಕೆ

 

ಮೊನ್ನೆ ಅಂತರ್ಜಾಲದಲ್ಲಿ ಅರುಣಾಚಲ ಪ್ರದೇಶದಲ್ಲಿ ಮೋಟರ್ ಸೈಕಲ್ ಪ್ರವಾಸದ ಬಗೆಗೆ ಅಮೇರಿಕದಲ್ಲಿ ವಿಡಿಯೋ ಪ್ರದರ್ಶನ ಎಂದು ಸುಳಿವು ಕಂಡು ಆಶ್ಚರ್ಯ ಸಂತಸ ಎರಡೂ ಆಯಿತು. ಅಪರಿಚಿತ ಊರುಗಳಲ್ಲಿ ದೀರ್ಘ ಪ್ರವಾಸ ಎಂದರೆ ನಾವು ಬಹಳಷ್ಟು ತಯಾರಿ ಮಾಡಬೇಕಾಗುತ್ತದೆ. ರಸ್ತೆ ಇಲ್ಲದ ಪ್ರದೇಶದಲ್ಲಿ ಬೆಂಗಾವಲು ವಾಹನ ಇಲ್ಲದ ಕನಿಷ್ಟ ತಯಾರಿಯೊಂದಿಗೆ ಸಂದರ್ಭಕ್ಕೆ ಒಗ್ಗಿಕೊಳ್ಳುವ ಕಥೆ ಊಹನೆಯಲ್ಲಿಯೇ ತುಂಬಾ ಕುಶಿ ಕೊಡುತ್ತದೆ. ನನ್ನ ಪ್ರವಾಸವೂ ಇದೇ ದೋರಣೆಯಲ್ಲಿ ಸಾಗಿತ್ತು.

ಒಮ್ಮೆ ಏಕಾಂಗಿಯಾಗಿ ಲಡಾಕಿಗೆ ಮತ್ತು ಐದು ಜನರ ಪಟಲಾಂ ಕಟ್ಟಿಕೊಂಡು ಅರುಣಾಚಲ ಪ್ರದೇಶದಲ್ಲಿ ರಸ್ತೆಯೇ ಇಲ್ಲದ ಪ್ರದೇಶಗಳಲ್ಲಿ ಮೊಟರ್ ಸೈಕಲ್ ಪ್ರವಾಸ ಮಾಡಿದ ತುಣುಕುಗಳು ಇಲ್ಲಿವೆ.   ಹಿಂದೆ ಪ್ರವಾಸ ಮಾಡಿದವರ ಕಥೆಗಳು ಓದುವಾಗ ನಮಗೆ ಎದುರಾಗಬಹುದಾದ ಸನ್ನಿವೇಶಗಳ ಸುಳಿವು ಕೊಡುತ್ತದೆ. ನಮ್ಮ ಸಮಾಜದಲ್ಲಿ ಬಿನ್ನ ಹಾದಿಯಲ್ಲಿ ನಡೆಯುವ ಚಿಂತನೆಯೇ ಬಹಳ ಕಡಿಮೆ. ಹಲವು ನನ್ನ ಪ್ರಾಯದವರು ಆರಾಮ ಕುರ್ಚಿಯ ಪ್ರವಾಸದಲ್ಲಿಯೇ ತೃಪ್ತರಾಗಿದ್ದರು. ನಾನು ಇಂದಿಗೂ ಇಂತಹ ಕಥೆಗಳ ಇಷ್ಟಪಡುತ್ತೇನೆ.




ನಮ್ಮಲ್ಲಿ ಕಾಶ್ಮೀರಕ್ಕೆ ಮೊಟರ್ ಸೈಕಲಿನಲ್ಲಿ ಹೋಗಿ ಬಂದವರು ಬಹಳ ಜನ ಇದ್ದಾರೆ. ಲಡಾಕಿನಲ್ಲಿ ಪ್ರಪಂಚದ ಅತ್ಯಂತ ಎತ್ತರದ ದಾರಿ ಎನ್ನುವ ಫಲಕದ ಎದುರು ಪೋಟೊ ತೆಗೆದುಕೊಳ್ಳುವುದು ನಮ್ಮವರ ಅತಿ ಮುಖ್ಯ ಗುರಿಯಾಗಿತ್ತು. ಆದರೆ ಈ ವ್ಯಕ್ತಿ ಒಬ್ಬಂಟಿಯಾಗಿ ಹೆಣ ಬಾರದ ಕೆಮರಾ ಹೊತ್ತುಕೊಂಡು ಹೋಗಿ ತಂದ ಚಿತ್ರಗಳು ಅದ್ಬುತವಾಗಿವೆ. ಎಲ್ಲವೂ ಅವರೇ ಆದಾಗ ಶುದ್ದ ಮರಕೋತಿಯಾಟ ನಡೆಯುತ್ತದೆ. ಕೆಮರವನ್ನು ಇಟ್ಟು ಹಿಂದಕ್ಕೆ ಹೋಗಿ ಅದರ ಎದುರು ಸವಾರಿ ಮಾಡಿ ಪುನಹ ಹೋಗಿ ಕೆಮರ ಹಿಡಿದುಕೊಂಡು ಬರಬೇಕು.  ಇವರ ಡೇರೆ ಬಿಡಿಸುವುದು ಮಡಚವುದು ನೋಡುವಾಗ ನನಗೆ ನನ್ನ ಪ್ರವಾಸದ ನೆನಪಾಗುತ್ತದೆ. ಇದೊಂದು ಡಿವಿಡಿ ಜಾಹಿರಾತು ಆದರೂ ಕೆಲವು ಚಿತ್ರಗಳು ತುಂಬಾ ಚೆನ್ನಾಗಿವೆ. ಹಲವು ಪ್ರಶಸ್ತಿಗಳನ್ನು ಈ ವಿಡಿಯೋ ಗಿಟ್ಟಿಸಿಕೊಂಡಿದೆ.

Thursday, November 05, 2009

ರಾಮಜ್ಜನ ಉಯಿಲು ಎನ್ನುವ ವಿಡಿಯೋ ಪ್ರಸಂಗ

ದೆಹಲಿ ಉಚ್ಚ ನ್ಯಾಯಾಲಯ ಕಳೆದ ತಿಂಗಳು ವಿಡಿಯೋಕೃತ ಉಳಿಲು ಕಾನೂನುಬದ್ದ ಎಂದು ತೀರ್ಪು ಕೊಟ್ಟಿದೆ. ಅಕ್ಷರಗಳಲ್ಲಿ ಸ್ಫಷ್ಟವಾಗಿ ಬರೆದರೂ ಶ್ರೀಯುತರು ಸತ್ತ ನಂತರ ಸಾವಿರ ಸಂಶಯಗಳು ಮೇಲೇಳುತ್ತವೆ. ಇದು ಇನ್ನೂ ಹೆಚ್ಚು ಸ್ಪಷ್ಟ. ಇದರಿಂದ ನಮ್ಮಲ್ಲಿಗೆ ಹಲವು ತಕರಾರು ಬರುವುದು ತಪ್ಪಬಹುದು ಎಂದು ನ್ಯಾಯಾಲಯ ಅಬಿಪ್ರಾಯ ಪಟ್ಟಿದೆ. ಉಳ್ಳವರಿಗೆ ಇದೊಂದು ಹೊಸ ಅದ್ಬುತವಾದ ಅವಕಾಶ. ಸಹಸ್ರ ಚಂದ್ರ ದರ್ಶನ ಷಷ್ಟಿ ಪೂರ್ತಿ ಕಾರ್ಯಕ್ರಮ ಇತ್ಯಾದಿಗಳಿಗೆ  ಹೊಸತಾಗಿ  ಸೆರ್ಪಡೆಯಾಗ ಬಹುದಾದ ಆಡಂಬರದ ಕಾರ್ಯಕ್ರಮ ಉಳಿಲು ಓದುವುದು. ಇಂತಹ  ಕಾರ್ಯಕ್ರಮಗಳ ಕೊರತೆ  ಇದೆ  ಎನ್ನುವುದು ಕೆಲವರ ಅಬಿಪ್ರಾಯ.  

ಅಜ್ಜಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ಅಜ್ಜ ಉಯಿಲು ಓದುವ ಕಾರ್ಯಕ್ರಮಕ್ಕೆ ಮಕ್ಕಳು ಮೊಮ್ಮಕ್ಕಳನ್ನೆಲ್ಲ ಪರ ಊರಿಂದ ಪರದೇಶಗಳೀಂದ ಕರೆಸಬಹುದು. ದುಡ್ಡೇ ದೊಡ್ಡಪ್ಪ ಅನ್ನುವ ಈ ಕಾಲದಲ್ಲಿ ಎಲ್ಲರಿಗೂ ತಮ್ಮ ಪಾಲು ಎಷ್ಟು ಖಚಿತಪಡಿಸಿಕೊಳ್ಳುವ ತವಕ ಇರುವುದು ಸಹಜ. ನನ್ನ ಮಾತು ಮೀರಿ ಅವಳ ಜತೆ ಓಡಿಹೋದ ಮಗನಿಗೆ ಐವತ್ತೆಕ್ರೆ ಎಕ್ರೆ ತೋಟ ಎಂದ ತಕ್ಷಣ ಹಿಮ್ಮೇಳದ  ಚೆಂಡೆ   ಒಮ್ಮೆ ಚುರುಕಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮ ನೆಪದಲ್ಲಿ ಕದ್ರಿ ಗೋಪಾಲನಾಥರನ್ನೋ ಕಟೀಲು ಮೇಳವನ್ನೋ ಕರೆಸಬಹುದು. ನಮ್ಮ ಚಿಕ್ಕಪ್ಪನ ಮೃತ್ಯು ಪತ್ರ ತಯಾರಿ ದಿನ ಗುರುಕಿರಣ ಬಂದು ಹಾಡಿದ್ದ ಎಂದು ಹೆಮ್ಮೆಯ ವಿಚಾರ ಆಗಬಹುದು. ಇನ್ನೂ ಶ್ರೀಮಂತರಾದರೆ ಶಾರುಖ್ ಕುಣಿದ ಎಂದು ಹೇಳಿಕೊಳ್ಳಬಹುದು. ಕಾರ್ಯಕ್ರಮವನ್ನೇ ಸಿಂಗಾಪುರದಲ್ಲಿ ಮಾಡುವ ಬಗೆಗೆ ಚಿಂತಿಸಬಹುದು. ವಿಡಿಯೋದವರು ಪತ್ರಿಕೆಗಳಲ್ಲಿ ನಾವು ಅದರಲ್ಲಿ ಹೆಚ್ಚು ಸಮರ್ಥರು ಎಂದು ಈ ಬಗ್ಗೆ ಜಾಹಿರಾತು ಕೊಡಬಹುದು. ಅಡಿಗೆಯವರೂ ಶಾಮಿಯಾನದವರೂ ನಾವು ಈ ಕಾರ್ಯಕ್ರಮ ನಿರ್ವಹಿಸಬಲ್ಲೆವು ಎಂದು ದ್ವನಿ ಸೇರಿಸಬಹುದು.

ಈ ಕಾರ್ಯಕ್ರಮದ ಒಂದು ಉಪಕಾರವೆಂದರೆ ಅವರು ಸತ್ತ ನಂತರ ಉತ್ತರಾದಿಕಾರಿಗಳು ದೊಣ್ಣೆ ಹಿಡಿದುಕೊಂಡು ಕಾದಾಡುವ ಸಾದ್ಯತೆ ಕಡಿಮೆ. ಎಲ್ಲರಿಗೂ ಅವರ ಪಾಲಿನ ಬಗೆಗೆ ಖಚಿತವಿರುತ್ತದೆ. ಅಪ್ಪ ನನ್ನ ಹೆಸರಿನಲ್ಲಿ ಐದು ಕೋಟಿ ಇಟ್ಟಿದ್ದಾನಲ್ಲ ಅದನ್ನು ಕೊಡು ಎಂದು ಪ್ರೀತಿಯ ಮಗಳು ಸಹೋದರರ ಜತೆ ಜಗಳಕ್ಕೆ ನಿಲ್ಲುವ ಅವಕಾಶ ಇರುವುದಿಲ್ಲ. ಹೆರಿಗೆಗೆ ಮೊದಲು ಸ್ಕಾನ್ ಮಾಡಿ ಮಗು ಹೆಣ್ಣೊ ಗಂಡೋ ಎಂದು ಖಚಿತಪಡಿಸಿಕೊಂಡಂತೆ ಈ ಕಾರ್ಯಕ್ರಮ ನೆರವೇರಿದರೆ ಎಲ್ಲರಿಗೂ ಯಜಮಾನರ ಸಾವಿನ ಅನಂತರ ತಮ್ಮ ಪಾಲಿನ ಬಗೆಗೆ ಕುತೂಹಲ ಉಳಿಯುವುದೂ ಇಲ್ಲ.

Sunday, November 01, 2009

ತೂಗು ಸೇತುವೆಗೆ ಅಧಾರ ಕಲ್ಪಿಸಿದ ಗಾಳಿಪಟ

ನಾನು ಬಹಳ ಪ್ರೀತಿಸುವ ಹವ್ಯಾಸಗಳಲ್ಲಿ ಗಾಳಿಪಟ ಬಿಡುವುದು ಒಂದು. ಹಿಂದೆ ಪಣಂಬೂರಿನಲ್ಲಿ ಗಾಳಿಪಟ ಉತ್ಸವ ಆದಾಗ ಗಾಳಿಪಟ ಖರೀದಿಸಿ ತಂದು ವಾರಗಟ್ಟಲೆ ಮಕ್ಕಳ ಸೇರಿಸಿಕೊಂಡು ಬಿಡುತ್ತಾ ಸಂತಸ ಪಟ್ಟಿದ್ದೆವು. ಈಗ ಮದ್ರಾಸಿನಲ್ಲಿ ಗಾಳಿ ಪಟ ಬಿಟ್ಟರೆ ಸಾವಿರ ರೂಪಾಯಿ ದಂಡ ಮೂರು ತಿಂಗಳು ಜೈಲು ಸುದ್ದಿ ಓದುವಾಗ ಮದ್ರಾಸಿನ ಮಕ್ಕಳ ಬಗೆಗೆ ಮರುಕ ಉಂಟಾಗುತ್ತದೆ. ಸಂಪೂರ್ಣ ನಿಷೇದಿಸುವ ಬದಲು ಕಡಲ ತೀರದಲ್ಲಾಗಲಿ ನಿರ್ದಿಷ್ಟ ಆಟದ ಮೈದಾನದಲ್ಲಾಗಲಿ ಬಿಡಬಹುದೆಂದು ಕಾನೂನು ಮಾಡಬಹುದಾಗಿತ್ತು.

ಸಮಸ್ಯೆ ಇರುವುದು ಇನ್ನೊಬ್ಬರ ಗಾಳಿಪಟದ ದಾರ ಕತ್ತರಿಸಲೆಂದು ಗಾಳಿಪಟ ಬಿಡುವ ನೂಲಿಗೆ ಗಾಜಿನ ಪುಡಿ ಲೇಪನ. ಇದರ ವಿರೋದ ಪ್ರಚಾರಾಂದೋಲನ ಕೈಗೊಂಡು ಮಕ್ಕಳ ಮನ ಪರಿವರ್ತನೆ ಮಾಡಬೇಕು ವಿನಾ ಗಾಳಿ ಪಟವನ್ನೇ ಕಾನೂನು ಬಾಹಿರ ಮಾಡುವುದು ಸರಿಯೆನಿಸುವುದಿಲ್ಲ. ಕಡಿದು ಹೋದ ದಾರ ದಾರಿಗೆ ಅಡ್ಡವಾಗಿದ್ದು ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲ ಎನ್ನುವುದನ್ನೂ ಖಚಿತ ಪಡಿಸಿಕೊಳ್ಳಬೇಕು. ನಿಮ್ಮ ಕ್ರಿಯೆಯ trickle down effect ಗೂ ನೀವು ಹೊಣೆ ಎನ್ನುವ ವಿಚಾರ ಮನದಟ್ಟುಮಾಡಬೇಕು. ಇದು ಜೀವನದ ಒಂದು ಮುಖ್ಯ ಪಾಠ.

ನಾನು ಅಪಘಾತದಲ್ಲಿ ಒಳಗಾದ ಹಾರು ರೆಕ್ಕೆಯಾಗಲಿ ಅಥವಾ ವಿಮಾನವಾಗಲಿ ಹೇಗೆ ಹಾರುತ್ತದೆಂದು ವೈಜ್ನಾನಿಕವಾಗಿ ವಿವರಿಸಲು ಗಾಳಿಪಟವೇ ಪ್ರಥಮ ಹಾಗೂ ಸರಳ ಉದಾಹರಣೆ. ಗಾಳಿ ಪಟ ಬಿಡುವುದೆಂದರೆ ಪ್ರತಿ ಕ್ಷಣವೂ ಚುರುಕಾಗಿರಬೇಕಾಗುತ್ತದೆ. ಮಾದರಿ ವಿಮಾನ ಹಾರಿಸುವಂತೆ ಗಾಳಿ ಪಟವೂ ಆ ಕ್ಷಣದಲ್ಲಿ ಹೇಗೆ ಹಾರುತ್ತಿದೆ ಎನ್ನುವುದರ ಗಮನಿಸಿ ನಿಯಂತ್ರಿಸುತ್ತಾ ಇರಬೇಕಾಗುತ್ತದೆ.

ನೂರ ಐವತ್ತು ವರ್ಷ ಹಿಂದೆ ಅಮೇರಿಕ ಕೆನಡ ದೇಶಗಳ ಗಡಿಯಲ್ಲಿರುವ ನೈಗರಾ ಜಲಪಾತದ ಮೇಲೆ ಪ್ರಥಮ ಸೇತುವೆ ಕಟ್ಟುವಾಗ ಮೊದಲು ಹಗ್ಗವನ್ನು ಈ ಕಡೆಯಿಂದ ಆ ಕಡೆಗೆ ಕಟ್ಟುವ ಬಗೆ ಹೇಗೆ ಎನ್ನುವುದರ ಪ್ರಶ್ನೆ ಉಂಟಾಗಿತ್ತಂತೆ. ಎರಡು ದೇಶಗಳ ನಡುವೆಯಿದ್ದ ಎಂಟು ನೂರು ಅಡಿ ಅಗಲದ ಕಣಿವೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮೊದಲ ಹಗ್ಗ ಎಳೆಯುವುದು ದೊಡ್ಡ ಸವಾಲಾಗಿತ್ತು. ದೋಣಿ ಉಪಯೋಗಿಸುವಂತಿರಲಿಲ್ಲ. ವಿಮಾನ ಎನ್ನುವ ಕಲ್ಪನೆ ಇಲ್ಲದ ಕಾಲ. ಬಿಲ್ಲು ಬಾಣ ಉಪಯೋಗಿಸೋಣ ಎಂದರೆ ಬಾಣ ಎಸೆಯುವುದಕ್ಕಿಂತ ಹೆಚ್ಚು ದೂರವಿತ್ತು. ಅಗ ಸೇತುವೆ ವಿನ್ಯಾಸ ಮಾಡುವ ತಂತ್ರಜ್ನ ಚಾರ್ಲ್ಸ್ ಎಲ್ಲೆಟ್ ಒಂದು ಗಾಳಿ ಪಟ ಹಾರಿಸುವ ಸ್ಪರ್ದೆ ಏರ್ಪಡಿಸಿದರು.

ಪ್ರಪಾತದ ಒಂದು ಬದಿಯಿಂದ ಆಚೆ ಬದಿಗೆ ತಲಪಿ ಕೈಗೆಟಕುವಂತೆ ಪ್ರಥಮ ಬಾರಿ ಗಾಳಿ ಪಟ ಹಾರಿಸಿದವನಿಗೆ ಐದು ಡಾಲರ್ ಬಹುಮಾನ ಘೋಷಿಸಿದರು. ೧೮೪೯ ರಲ್ಲಿ ಈ ಐದು ಡಾಲರ್ ಚಿಕ್ಕ ಮೊತ್ತವಾಗಿರಲಿಲ್ಲ. ಕೆನಡದ ಬದಿಯಿಂದ ಗಾಳಿಪಟ ಹಾರಿಸಿದ ಹೊಮನ್ ನಾಶ್ ಎನ್ನುವ ಅಮೇರಿಕದ ಹತ್ತು ವರ್ಷದ ಹುಡುಗ ಈ ಸ್ಪರ್ದೆಯಲ್ಲಿ ಗೆದ್ದ. ಗಾಳಿ ಬೀಸುವುದು ಕೆನಡದ ಬದಿಯಿಂದ ಎಂಬ ಕಾರಣಕ್ಕೆ ಹೊಳೆಯನ್ನು ದೋಣಿಯಲ್ಲಿ ದಾಟಿ ಪೂರಕವಾಗಿರುವ ಗಾಳಿಗೆ ಕಾದಿದ್ದನಂತೆ. ಆವನು ತಗ್ಗಿನಲ್ಲಿ ಹಾರಿಸಿದ ಗಾಳಿ ಪಟವನ್ನು ಅಮೇರಿಕದ ಬದಿಯಲ್ಲಿ ಹಿಡಿಯಲು ಸಾದ್ಯವಾಯಿತು.

ಅನಂತರ ನಿರ್ಮಿಸಲಾದ ಏಳು ನೂರ ಅರುವತ್ತ ಎರಡು ಅಡಿ ಉದ್ದ ಮತ್ತು ಎಂಟು ಅಡಿ ಅಗಲದ ತೂಗು ಸೇತುವೆ ಸಾದ್ಯವಾದುದು ಹೋಮನ್ ನಾಶ್ ನ ಗಾಳಿಪಟದಿಂದ. ಗೆದ್ದ ಹೋಮನ್ ನಾಶ್ ಎಂಬತ್ತು ವರ್ಷ ಅನಂತರ ಆತನ ಸಾವಿನ ವರೆಗೂ ಈ ಬಗೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದನಂತೆ. ಹಾಗೆ ಮೊದಲು ಗಾಳಿ ಪಟದ ಹಗ್ಗದ ಆದಾರದಲ್ಲಿ ಗಟ್ಟಿಯಾದ ಹಗ್ಗ ಎಳೆದರು. ನಂತರ ಹೆಚ್ಚು ತೋರದ ಹಾಗೂ ಬಾರವಾದ ಸರಿಗೆ ಎಳೆಯುತ್ತಾ ಹೋಗಿ ಅನಂತರ ತೂಗು ಸೇತುವೆಯನ್ನು ಆಧರಿಸುವ ಕಬ್ಬಿಣದ ಹಗ್ಗವನ್ನೂ ಎಳೆಯಲಾಯ್ತು.

ಒಂದು ಚಿಕ್ಕ ಹಗ್ಗ ಎಂತಹ ಬೃಹತ್ ಸೇತುವೆಯಾಗಿ ಬದಲಾವಣೆ ಹೊಂದಿತೋ ಹಾಗೆಯೇ ಚಿಕ್ಕ ಚಿಂತನೆ ನಮ್ಮ ಕನಸುಗಳ ನನಸಾಗಿಸುತ್ತದೆ. ಪ್ರತಿ ಸಲ ಯೋಚಿಸಿದಾಗ ಚಿತ್ರ ನಮಗೆ ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಆದರೆ ಹಾರಾಡುವ ಗಾಳಿಪಟಕ್ಕೆ ಸಿಮಿತಗೊಳಿಸುವ ಹಗ್ಗದ ಆದಾರವಿದೆ. ಚಿಂತನೆಯನ್ನು ಸಿಮಿತಗೊಳಿಸುವುದು ನಮ್ಮ ಅಲೋಚನೆ ಸಾಮರ್ಥ್ಯ ಹಾಗೂ ಸಾದಿಸುವ ಹಸಿವು ಮಾತ್ರ.

Tuesday, October 27, 2009

ನ್ಯೂ ಯೋರ್ಕಿನಲ್ಲಿ ಜೇನು ಪೆಟ್ಟಿಗೆ ಇಟ್ಟ ಯಶವಂತ ಡಾಕ್ಟ್ರು



ಗಗನಚುಂಬಿ ಕಟ್ಟಡಗಲೇ ತುಂಬಿರುವ ನ್ಯೂ ಯೋರ್ಕ್ ಪಟ್ಟಣ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರದಲ್ಲಿ ಜೇನು ಗೂಡಿಗೆ ಅವಕಾಶವೇ ಇಲ್ಲ. ಹೀಗಿರುವಾಗ ಡಾ ಯಶವಂತ್ ಚಿತಾಲ್ಕರ್ ಎಂಬ ಮನಶಾಸ್ತ್ರಿಗಳ ಟೆರೇಸಿನ ಚಿತ್ರ ನನಗೆ ಕಂಡಾಗ ಆಶ್ಚರ್ಯವಾಯಿತು. ಚಿತ್ರದಲ್ಲಿ ಕಾಣುವಂತೆ ಅವರಲ್ಲಿ ಹಲವು ಬಗೆಯ ಗಿಡಗಳು ಮಾತ್ರವಲ್ಲ ಎರಡು ಜೇನು ಗೂಡುಗಳೂ ಇವೆ.

ಇದೀಗ ಜೇನು ನೊಣಗಳು ಮೊಬೈಲ್ ಟವರಿನಿಂದಾಗಿ ಗೂಡಿಗೆ ವಾಪಾಸಾಗದೆ ನಾಶವಾಗುತ್ತಿರುವ ಸುದ್ದಿ ಮದ್ಯೆ ಅಮೇರಿಕದ ಪಟ್ಟಣಗಳಲ್ಲಿ ಜೇನು ಸಾಕುವ ವಿಚಾರ ಕೇಳಿ ಕುಶಿಯಾಯಿತು. ಸಾಲು ಮನೆಯಲ್ಲಿ ವಾಸಿಸುವ ಇವರ ವಸತಿಯ ಮೇಲೆ ತರಕಾರಿ ಹಾಗೂ ಜೇನು ಸಾಕಣೆ ಸ್ಪೂರ್ತಿದಾಯಕ ವಿಚಾರ.

ಪಟ್ಟಣ ಕೃಷಿ ಮುಖ್ಯವಾಗಿ ತರಕಾರಿ ಬೆಳೆಯುವುದು ಕನ್ನಡ ಓದುಗರಿಗೆ ಹೊಸ ವಿಚಾರವಲ್ಲ. ಹಾಸನದಲ್ಲಿ ಡಾ| ವಿಜಯ ಅಂಗಡಿ ಮತ್ತು ಬೆಂಗಳೂರಿನಲ್ಲಿ ಶ್ರೀಮತಿ ಅನುಸೂಯ ಶರ್ಮ ಇದರ ಮಾಡಿ ಪ್ರಚರಿಸುತ್ತಿದ್ದಾರೆ. ಅದರೆ ಜೇನು ಗೂಡು ???

ಸ್ವಲ್ಪ ಸಮಯ ಹಿಂದೆ ಅಲ್ಲೊಂದು ಗೂಡಿನಲ್ಲಿ ಜೇನು ನೊಣಗಳು ಸಾಲಾಗಿ ಗೂಡಿಗೆ ಬರುವುದು ಹೋಗುವುದು ಕಂಡ ಯಶವಂತ್ ಡಾಕ್ಟ್ರು ಅದರ ಸಮ್ಮೋಹನಕ್ಕೆ ಒಳಗಾದರು. ಅವರು ಗೂಡು ಇಟ್ಟುಕೊಳ್ಳುವುದೆಂದರೆ ಹಾರುವ ಕೀಟಗಳು ನನಗೆ ದರ್ಮಾರ್ಥವಾಗಿ ಆಹಾರೋತ್ಪನ್ನ ತರುತ್ತವೆ. ಪಟ್ಟಣದಲ್ಲಿದ್ದುಕೊಂಡೇ ಕೃಷಿಕನಾಗಿರಲು ಸಾದ್ಯ ಎನ್ನುತ್ತಾರೆ. ಕಳೆದ ಚಳಿಗಾಲದಲ್ಲೊಂದು ತರಗತಿಯಲ್ಲಿ ಬಾಗವಹಿಸಿದ ಡಾ ಚಿತಾಲ್ಕರ್ ಈಗ ಎರಡು ಜೇನು ಕುಟುಂಬಗಳ ಒಡೆಯರು.

ಅಲ್ಲಿ ವಾಸವಾಗಿರುವ ಜಿಮ್ ಫಿಸ್ಚರ್ ಕಳೆದ ವರ್ಷ ಜೇನು ಸಾಕಣೆ ತರಗತಿ ಏರ್ಪಡಿಸಿದ್ದರು. ಅನಂತರ ಸುಮಾರು ಮೂವತ್ತು ಗೂಡುಗಳು ಹೆಚ್ಚಲು ಅದು ಪ್ರೇರಕ. ಮೇಷ್ಟ್ರು ಶಿಷ್ಯರೂ ಜತೆಗೂಡಿ ಸಹಕಾರಿ ಸಂಘಕ್ಕೆ ಅಡಿಗಲ್ಲು ಹಾಕಿದ್ದಾರೆ. ಉಪಕರಣಗಳ ಜತೆಯಾಗಿ ಖರೀದಿ ಮತ್ತು ಜೇನು ಮಾರಾಟ ಅವರ ಚಿಂತನೆಯಲ್ಲಿದೆ. ಪಟ್ಟಣಗಳಲ್ಲಿ ಜೇನು ಸಾಕಲು ನೆರೆಹೊರೆಯವರದೇ ಕಿರಿಕಿರಿ. ಯಾರೂ ಜೇನು ಗೂಡುಗಳ ಸಮೀಪ ವಾಸಿಸಲು ಇಷ್ಟಪಡುವುದಿಲ್ಲ. ಜೇನು ನೊಣಗಳ ಬಗೆಗೆ ಮನದಾಳದಲ್ಲಿರುವ ಮೂಢ ನಂಬಿಕೆಗಳೇ ಕಾರಣ ಎನ್ನುತಾರೆ ಫಿಸ್ಚರ್ ಮಾಷ್ಟ್ರು.

ಪಟ್ಟಣದಲ್ಲಿ ಪಾರ್ಕುಗಳ ಗಿಡ ಮರಗಳ ಸನೀಹ ಇದ್ದರೆ ಮಾತ್ರ ಜೇನು ಗೂಡುಗಳು ಪ್ರಯೋಜನಕಾರಿಯಾಗಬಹುದು ಎಂದು ನಿಕ್ ಕಾಲ್ಡರೋನ್ ಎನ್ನುವ ಕೀಟಶಾಸ್ತ್ರಿ ಮೇಷ್ಟ್ರು ಹೇಳುತ್ತಾರೆ. ನಮ್ಮ ಸುತ್ತಲೂ ಪರಿಸರ ಜೀವಂತವಾಗಿರಬೇಕಾದರೆ ಗಿಡಮರಗಳು ಇರಬೇಕು. ಅವುಗಳಿಗೆ ಪರಾಗಸ್ಪರ್ಷ ಮಾದುವ ಜೀವಿಗಳ ಅಗತ್ಯ ಇರುತ್ತದೆ. ಗೂಡುಗಳಿಗೆ ಅಪಾಯವಿದ್ದರೆ ಮಾತ್ರ ಜೇನು ಕೊಣಗಳು ಕಚ್ಚುತ್ತವೆ. ಗೂಡಿನಿಂದ ದೂರವಿರುವಾಗ ಹೆಚ್ಚಾಗಿ ಕಚ್ಚುವುದಿಲ್ಲ ಎನ್ನುತ್ತಾರೆ ಕಾಲ್ಡೆರೋನ್.

ಅಂದ ಹಾಗೆ ಡಾಕ್ಟ್ರು ಜೇನು ಸಾಕುವ ಸುದ್ದಿ ಯಾರಿಗೂ ಹೇಳಬೇಡಿ. ಯಾಕೆಂದರೆ ನ್ಯೂಯೋರ್ಕ್ ಪಟ್ಟಣದಲ್ಲಿ ಜೇನು ಸಾಕಣೆ ಕಾನೂನು ಬಾಹಿರ. ನಿಗದಿತ ದಂಡ ಎರಡು ಸಾವಿರ ಡಾಲರ್ ಅಂದರೆ ಒಂದು ಲಕ್ಷ ರೂಪಾಯಿ. ಇದನ್ನು ನ್ಯಾಯಬದ್ದ ಗೊಳಿಸಲು ಪ್ರಯತ್ನಗಳಾಗುತ್ತಿವೆಯಂತೆ.

ಇತ್ತೀಚಿನ ದಿನಗಳಲ್ಲಿ ಕೀಟ ಬಾದೆ ಹಾಗೂ ನೊಣಗಳು ದಿಕ್ಕು ತಪ್ಪಿ ಗೂಡಿಗೆ ವಾಪಾಸಾಗದ ನಿಗೂಡ ಸಮಸ್ಯೆಯಿಂದಾಗಿ ಇತರ ಕಡೆಗಳಂತೆ ಅಮೇರಿಕದಲ್ಲೂ ಜೇನು ಸಂತತಿ ನಾಶವಾಗುತ್ತಿದೆ. ಜತೆಯಲ್ಲಿ ಬಿನ್ನವಾದ ಕಾರಣಗಳಿಗೆ ಈಗ ಅಲ್ಲಿ ಪಟ್ಟಣದಲ್ಲಿ ಜೇನು ಸಾಕಣೆ ಜನಪ್ರಿಯವಾಗುತ್ತಿದೆಯಂತೆ. ಜೇನು ನೊಣ ವಿರಳವಾದರೆ ಅಹಾರ ಬೆಳೆಗಳಿಗೆ ಪರಾಗ ಸ್ಪರ್ಷ ಹೇಗೆ ಎಂದು ಚಿಂತಿತರಾದವರೂ ಇದ್ದಾರೆ. ಅವರ ಕೈತೋಟದ ಬೆಳೆಗಳು ಅಬಿವೃದ್ದಿ ಹೊಂದಲು ಜೇನು ಸಾಕುವವರಿದ್ದಾರೆ.

ಹತ್ತು ವರ್ಷಗಳಿಂದ ಜೇನು ಸಾಕುವ ನ್ಯೂ ಯೋರ್ಕಿನ ನಾಗರಿಕರೊಬ್ಬರ ಗಿಡಗಳಲ್ಲಿ ಹೂಗಳು ದಾರಾಳವಾಗಿದ್ದರೂ ಕಾಯಿ ಕಚ್ಚುತ್ತಿರಲಿಲ್ಲ. ತೋಟಗಾರಿಕೆ ಇಲಾಖೆಯವರಲ್ಲಿ ವಿಚಾರಿಸಲು ಇಲ್ಲಿ ಪರಾಗಸ್ಪರ್ಶಕ್ಕೆ ಕೀಟಗಳು ಇಲ್ಲ ಎನ್ನುವ ಉತ್ತರ ಬಂತು. ಅದನ್ನು ಕೇಳಿ ಅವರು ಜೇನು ಸಾಕಣೆ ಪ್ರಾರಂಬಿಸಿದರು. ಈಗ ಕುಶಿಯಾಗಿದ್ದಾರೆ.

ಸೈಕಲ್ ಪ್ರವಾಸದ ಸಮಯದಲ್ಲಿ ಅಮೇರಿಕದಲ್ಲಿ ಹೊವಾರ್ಡ್ ಪಾರ್ಕ್ಸ್ ಎನ್ನುವ ಮಿತ್ರರೊಬ್ಬರು ಸುಮಾರು ಇಪ್ಪತ್ತು ಅಡಿ ಉದ್ದ ಇಪ್ಪತ್ತು ಅಡಿ ಅಗಲದಲ್ಲಿ ಸುಮಾರು ಮೂವತ್ತು ಜೇನು ಕುಟುಂಬಗಳ ಸಾಕುತ್ತಿದ್ದರು. ಎಲ್ಲವೂ ಎರಡು ಕುಟುಂಬಗಳಿರುವ ಉಪ್ಪರಿಗೆ ಪೆಟ್ಟಿಗೆಗಳು. ಗೂಡಿನ ಪ್ರವೇಶ ದ್ವಾರದಲ್ಲಿ ಬೇರೆ ಬೇರ್ ಬಣ್ಣದಲ್ಲಿ ವಿವಿಧ + / - ಚಿಹ್ನೆಗಳು. ಜೇನು ನೊಣಗಳು ಅದನ್ನು ಗುರುತಿಸಿ ತಮ್ಮ ವಸತಿಗೆ ಹಿಂತಿರುಗುತ್ತವೆ ಎಂದಾಗ ನನಗೆ ಸೋಜಿಗ ಊಂಟುಮಾಡಿತ್ತು.





ಈಗ ಅಮೇರಿಕದ ಅದ್ಯಕ್ಷ ಒಬಾಮ ಅವರ ಬಿಳಿ ಮನೆ ಹುಲ್ಲು ಹಾಸಿನಲ್ಲೂ ಪ್ರಥಮ ಬಾರಿಗೆ ಜೇನು ಗೂಡಿದೆ. ಈ ಸಲ ಸುಮಾರು ನೂರು ಪೌಂಡ್ ಜೇನು ಸಿಗಬಹುದು. ಅದುದರಿಂದ ಬಿಳಿ ಮನೆ ಉಪಯೋಗಕ್ಕೆ ಮಾತ್ರವಲ್ಲ ಬಂದ ಗಣ್ಯ ಅತಿಥಿಗಳಿಗೆ ಉಡುಗರೆಯಾಗಿ ಕೊಡಲೂ ಸಾಕು ಎನ್ನುತಾರೆ ಅಲ್ಲಿನ ನಿರ್ವಾಹಕರು.  

Saturday, October 24, 2009

ಹಿಮಾಲಯದಲ್ಲೊಂದು ಯಶಸ್ವಿ ಮಳೆ ನೀರು ಕೊಯಿಲು.



ಚೆವಾಂಗ್ ನೋರ್ಫೆಲ್ ಅವರು ಕೃತಕ ನೀರ್ಗಲ್ಲನ್ನು ರೂಪಿಸುತ್ತಾರೆ. ಹಲವು ತಿಂಗಳು ಹರಿದು ಹೋಗುವ ನೀರು ಕಾಪಿಡುವ ಇದು ನಮ್ಮ ಮಳೆನೀರಿನ ಕೊಯಿಲಿನ ಇನ್ನೊಂದು ಸ್ವರೂಪ. ಇತ್ತೀಚೆಗೆ ನೈಜ ನಿರ್ಗಲ್ಲುಗಳು ಪರ್ವತದ ಮೇಲ್ಬಾಗಕ್ಕೆ ಹೆಚ್ಚು ಸಿಮಿತವಾಗುತ್ತಿವೆ ಮತ್ತು ತಡವಾಗಿ ನೀರಾಗುತ್ತವೆ. ಕೆಳಬಾಗದಲ್ಲಿದ್ದು ಆರಂಬದಲ್ಲಿ ನೀರಾಗುತ್ತಿದ್ದ ನೀರ್ಗಲ್ಲುಗಳು ಈಗ ರೂಪುಗೊಳ್ಳುವುದೇ ಇಲ್ಲ 

ಸರಳವಾದ ಅವರ ಪ್ರಯೋಗ ಸದ್ಯಕ್ಕೆ ಪರ್ಯಾಯಗಳಿಲ್ಲ. ಆದರೆ ಇದಕ್ಕೆ ಸಹಾ ನೀರು ಬೇಕು. ಹಿಮಗಾಲದಲ್ಲಿ ದೊರಕುವ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಲ್ಲಿನಿಂದ ನಿರ್ಮಿಸಲಾದ ದೊಡ್ಡ ಕೆರೆಗಳಲ್ಲಿ ಉಳಿಸಿಕೊಳ್ಳುವುದು. ಇದರ ಆಕಾರ ನಮ್ಮ ಕರಾವಳಿಯಲ್ಲಿ ತೋಡುಗಳಿಗೆ ಅಡ್ಡವಾಗಿ ಕಟ್ಟುವ ಕಟ್ಟದಂತಿರುತ್ತದೆ ಅನಿಸುತ್ತದೆ. ಚಳಿ ಹೆಚ್ಚಾದಂತೆ ಈ ಕೆರೆಗಳಲ್ಲಿರುವ ನೀರು ಹಿಮಗಡ್ಡೆಗಳಾಗುತ್ತವೆ.

ನೋರ್ಫಲ್ ಅವರ ಕೃತಕ ನೀರ್ಗಲ್ಲುಗಳು ಎಪ್ರಿಲ್ ಅಥವಾ ಮೆ ತಿಂಗಳಲ್ಲಿ ನೀರಾಗುತ್ತವೆ ಎನ್ನುತ್ತಾರೆ.
ನಾವು ಜೂನ್ ಇಪ್ಪತ್ತೊಂದರ ನಂತರ ಬಿತ್ತನೆ ಮಾಡಿದರೆ ಬೆಳೆ ಬೆಳೆಯಲು ಸಾದ್ಯವೇ ಇಲ್ಲ ಎನ್ನುವ ಗಾದೆ ಮಾತಿದೆ. ಈ ವರ್ಷ ನೀರಿನ ಆಗಮನ ವಿಳಂಬವಾಗಿ ಜೂನ್ ಇಪ್ಪತ್ತೆಂಟಕ್ಕೆ ಬಿತ್ತನೆ ಮಾಡಿದೆವು ಎನ್ನುತ್ತಾರೆ ಅಲ್ಲಿನ ರೈತರೊಬ್ಬರು.

ಮೊದಲು ಹೊಲದಲ್ಲಿ ತುಂಬಾ ಹಿಮ ಇರುತಿತ್ತು. ಈಗ ಇಲ್ಲವೇ ಇಲ್ಲ ಎನ್ನುತ್ತಾರೆ ಹಳ್ಳಿಯ ಜನ. ಶೇಕಡ ಎಂಬತ್ತರಷ್ಟು ರೈತರು ನೀರ್ಗಲ್ಲು ನೀರಾಗುವುದರನ್ನೇ ಅವಲಂಬಿಸುತ್ತಾರೆ. ಈ ಕೃತಕ ನೀರ್ಗಲ್ಲು ಬೇಗ ನೀರಾಗುವ ಕಾರಣ ರೈತರು ಬೇಗ ಬಿತ್ತನೆ ಮಾಡಬಹುದು. ಈಗ ಎತ್ತರದಲ್ಲಿ ಮಾತ್ರ ಉಳಿದಿರುವ ನೀರ್ಗಲ್ಲುಗಳು ತಡವಾಗಿ ನೀರಾಗುವ ಕಾರಣ ಬಿತ್ತನೆಯನ್ನು ವಿಳಂಬಿಸಬೇಕಾಗುತ್ತದೆ.

ನೋರ್ಫಲ್ ಹತ್ತು ನೀರ್ಗಲ್ಲು ನಿರ್ಮಿಸಿದ್ದಾರೆ. ಅತಿ ದೊಡ್ಡದು ಒಂದು ಮೈಲು ಉದ್ದವಾಗಿತ್ತು. ೨೦೦೬ರಲ್ಲಿ ಬಂದ ಅಪರೂಪದ ಮಳೆ ಈ ಕೃತಕ ತಡೆಯನ್ನು ಕೊಚ್ಚಿಕೊಂಡು ಹೋಯಿತು. ಉತ್ತಮ ಕೃತಕ ನೀರ್ಗಲ್ಲು ನೀರ್ಮಾಣಕ್ಕೆ ಸುಮಾರು ಇಪ್ಪತೈದು ಲಕ್ಷ ರೂಪಾಯಿ ಅಗತ್ಯ. ಆದರೆ ಅವರಿಗೆ ಸರಕಾರದಿಂದ ಐದು ವರ್ಷದಲ್ಲಿ ಹತ್ತು ಲಕ್ಷ ದೊರಕುತ್ತದೆ. ಪತ್ರಕರ್ತರು ಬಂದು ನೋಡಿದ್ದಾರೆ ಹಾಗೂ ಬರೆದಿದ್ದಾರೆ. ಈ ವರೆಗೆ ಯಾವ ವಿಜ್ನಾನಿಯೂ ಈ ಕಡೆ ತಲೆ ಹಾಕಲಿಲ್ಲ. ಅದರ ಬಗೆಗೆ ಅವರಿಗೆ ಗೊಡವೆ ಇಲ್ಲ. ಪಂಡಿತ ಸಭೆಗೆ ಈ ಜ್ನಾನ ತಿಳಿಸುವ ಬದಲು ತಾನು ಹಳ್ಳಿಗರಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಆಸಕ್ತ ಎನ್ನುತ್ತಾರೆ ನೋರ್ಫೆಲ್.

ರಾಜದಾನಿ ಲೇಹ್ ನಲ್ಲಿ ಹೆಚ್ಚು ಪ್ರವಾಸಿಗಳು ಬರುವುದೂ ಸಮಸ್ಯೆ ಬಿಗಡಾಯಿಸಲು ಕಾರಣ. ಕಳೆದ ಎಂಟು ವರ್ಷಗಳಲ್ಲಿ ವಾರ್ಷಿಕ ಪ್ರವಾಸಿಗಳ ಸಂಖ್ಯೆ ಹದಿನೆಂಟು ಸಾವಿರದಿಂದ ಎಪ್ಪತ್ತನಾಲ್ಕು ಸಾವಿರಕ್ಕೆ ಏರಿದೆ. ದಿನಾ ಸ್ನಾನ ಶೌಚಾಲಯದಲ್ಲಿ ಫ್ಲಶ್ ಇತ್ಯಾದಿ ನೀರಿನ ಖರ್ಚು ಹೆಚ್ಚಿಸುವ ಅಬ್ಯಾಸಗಳು ಹೆಚ್ಚು ವ್ಯಾಪಕವಾಗುತ್ತಿವೆ. ಈಗ ದಿನಂಪ್ರತಿ ಏಳು ಲಕ್ಷ ಗಾಲನ್ ಪೊರೈಸುವ ಇಂಡಸ್ ನದಿಯಿಂದ ಹದಿನಾರು ಲಕ್ಷ ಗಾಲನ್ ನೀರು ಎತ್ತುವ ಯೋಜನೆ ಕಾರ್ಯಗತವಾಗುವ ಹಂತದಲ್ಲಿದೆ. ಇಂಡಸ್ ನದಿಯಿಂದ ಪಡಕೊಳ್ಳುವ ಪ್ರತಿ ಹನಿ ನೀರು ಪಾಕಿಸ್ತಾನದ ಕೃಷಿಗೆ ಅಷ್ಟರ ಮಟ್ಟಿಗೆ ಕೊರತೆ ಉಂಟು ಮಾಡುತ್ತದೆ. ಅವರಿಗೆ ಕಡಿಮೆಯಾದರೆ ನಮಗೇನು ಎನ್ನುವ ಮಾತು ಕೇಳಿಬರುತ್ತದೆ

 ಕಳೆದ ತಿಂಗಳು ಲಡಾಕಿನಲ್ಲಿ ನಡೆದ ಹವಾಮಾನ ಸಮಾವೇಶದಲ್ಲಿ ನೋರ್ಫೆಲ್ ದೃಶ್ಯ ವಿವರಣೆ ಕಾರ್ಯಕ್ರಮ ಕೊಟ್ಟಿದ್ದರು. ಹಮಾಮಾನ ಬದಲಾವಣೆಯಲ್ಲಿ ಲಡಾಖ್ ಮೊದಲು ಸಮಸ್ಯೆ ಅನುಭವಿಸುತ್ತದೆ. ಅದುದರಿಂದ ನಾವು ನ್ಯಾಯ ಬಯಸುತ್ತೇವೆ ಎಂದು ಸರಕಾರೇತರ ಸಂಸ್ಥೆ ನಡೆಸುವ ಪದ್ಮ ತಾಶಿ ಹೇಳುತ್ತಾರೆ. ಹವಾಮಾನ ನ್ಯಾಯ ಎಂದರೆ ಈ ಸಮಸ್ಯೆಗೆ ಮುಖ್ಯ ಕಾರಣವಾದ ಮುಂದುವರಿದ ದೇಶಗಳು ಪರಿಹಾರ ಹಣ ಕೊಟ್ಟರೆ ನೋರ್ಫೆಲ್ ಅವರ ಕಟ್ಟಗಳನ್ನು ಮತ್ತು ೨೦೦೬ ರ ನೆರೆಯಲ್ಲಿ ನಷ್ಟ ಅನುಭವಿಸಿದ ಹಳ್ಳಿಗಳನ್ನು ಪುನರ್ ನೀರ್ಮಾಣ ಮಾಡ ಬಹುದು.

ಪರೀಸ್ಥಿತಿ ಮುಂದುವರಿದರೆ ನಾವು ಮುಂದಿನ ತಲೆಮಾರಿಗೆ ಈ ಭೂಮಿಯನ್ನು ವರ್ಗಾಯಿಸುವುದಿಲ್ಲ. ನೀರು ಇಲ್ಲವೆನ್ನುವ ಸನ್ನಿವೇಶದಲ್ಲಿ ಲಡಾಖಿನ ಜನ ಗಂಟು ಮೂಟೆ ಕಟ್ಟಿ ಹೊರಡಬೇಕಾಗುತ್ತದೆ ಎನ್ನುವ ಚಿಂತನೆ ಅಲ್ಲಿನ ಹಿರಿಯರಲ್ಲಿದೆ.

ಕಾಶ್ಮೀರದಲ್ಲಿರುವ ಸಾವಿರಾರು ಜನರಿಗೆ ನೀರು ಪೊರೈಸುವ ಹಾಗೂ ಬಾರತದ ಅತಿ ದೊಡ್ಡ ನೀರ್ಗಲ್ಲು ಇತರ ಹಿಮಾಲಯದ ನೀರ್ಗಲ್ಲುಗಳಿಂದ ವೇಗವಾಗಿ ಚಿಕ್ಕದಾಗುತ್ತಿರುವುದು ಕಳವಳಕಾರಿ ವಿಚಾರ. ಕಳೆದ ನೂರು ವರ್ಷದಲ್ಲಿ ೧.೧ ಡಿಗ್ರಿ ತಾಪಾಮಾನ ಹೆಚ್ಚಿದೆ. ಕಾಶ್ಮೀರದ ಅತಿ ದೊಡ್ಡದಾದ ಜೇಲಂ ನದಿಗೆ ನೀರು ಪೊರೈಸುವ ಕಲಹೊಯಿ ನೀರ್ಗಲ್ಲು ಕಳೆದ ಮೂವತ್ತು ವರ್ಷಗಳಲ್ಲಿ ೧೧ ಚದರ ಕಿಮಿಗಳಲ್ಲಿ ೨.೬ ಚದರ ಕಿಮಿ ಕುಗ್ಗಿದೆ. ಕಾಶ್ಮೀರದ ಜನ ಈ ನೀರ್ಗಲ್ಲುಗಳನ್ನೇ ನೀರಿಗೆ ಅವಲಂಬಿಸುವ ಕಾರಣ ತಜ್ನರ ಪ್ರಕಾರ ಇದು ಬಹಳ ಗಂಬೀರ ವಿಚಾರ

ಈ ಬಗ್ಗೆ ನಮ್ಮ ಪರಿಸರ ಸಚಿವ ಜೈರಾಮ ರಮೇಶರು ಏನು ಮಾಡುತ್ತಿದ್ದಾರೆ ?? ಅವರು ಹವಾಮಾನ ಬದಲಾವಣೆ ಮತ್ತು ನಿರ್ಗಲ್ಲುಗಳ ಕುಗ್ಗುವುದಕ್ಕೆ ಇರುವ ಸಂಬಂದ ಇನ್ನೂ ಖಚಿತವಾಗಿಲ್ಲ. ಇನ್ನೂ ಹೆಚ್ಚು ಆ ಬಗ್ಗೆ ಸಂಶೋದನೆಗಳು ನಡೆಯಬೇಕು ಎಂದು ಆಗಸ್ತ್ ತಿಂಗಳಲ್ಲಿ ಅಪ್ಪಣೆ ಕೊಡಿಸಿದ್ದಾರೆ.

Tuesday, October 20, 2009

ಕಡಲತೀರದಲ್ಲಿ ಸದಾಸಂ



ಕಡಲ ತೀರದಲ್ಲಿ ಸದಾಸಂ (ಸಕಲ ದಾರಿ ಸಂಚಾರಿ) ಚಲಾಯಿಸುವುದು ಒಂದು ಅದ್ಬುತ ಅನುಭವ. ಅಂಗಳದಲ್ಲಿ ತೊಟದಲ್ಲಿ ಇನ್ನೂರು ಅಡಿ ನೇರ ದಾರಿ ಸಿಗದ ನಮಗೆ ಉದ್ದವಾದ ಸಮುದ್ರ ತೀರ ಬಹಳ ಕುಶಿಕೊಡುತ್ತದೆ. ಇದರಿಂದ ಮಕ್ಕಳು ಅನಿಲ ಸುನಿಲರು ತುಂಬಾ ಸಂತಸ ಪಟ್ಟರು. ಸವಾರಿ ಮಾತ್ರವಲ್ಲ ಹಲವು ಕಸರತ್ತುಗಳ ಅಬ್ಯಾಸ ಮಾಡಲು ಅವಕಾಶ ಮಾಡಿಕೊಡುತ್ತದೆ.

ಸೊಮೇಶ್ವರ ಕಡಲ ತೀರಕ್ಕೆ ನಮ್ಮ ಮನೆಯಿಂದ ಐವತ್ತು ಕಿಲೋಮೀಟರ್. ಹಿಂದಿನ ದಿನವೇ ಸದಾಸಂ ಮಾರುತಿ ವಾನಿನೊಳಗೆ ಹಾಕಿದ ಕಾರಣ ಬೆಳಗ್ಗೆ ಬೇಗನೆ ಹೊರಡಲು ಸಾದ್ಯವಾಯಿತು. ದಾರಿಯಲ್ಲೊಂದು ತಿಂಡಿ ನಿಲುಗಡೆ. ೦೯೩೦ಕ್ಕೆ ಸಮುದ್ರ ತೀರ ತಲಪಿದೆವು. ತಲಪಿದ ಕೂಡಲೇ ವಾಹನದಿಂದ ಇಳಿಸಿ ಸವಾರಿ ಪ್ರಾರಂಬಿಸಿದೆವು.

ಸದಾಸಂ ಚಕ್ರಗಳು ಮರಳಲ್ಲಿ ಸ್ವಲ್ಪ ಮಟ್ಟಿಗೆ ಹೂತು ಹೋಗುತ್ತವೆ. ಅದರಿಂದಾಗಿ ಇಂಜಿನ ವೇಗ ಸದಾ ಹೆಚ್ಚಿರುವ ಕಾರಣ ಅದಕ್ಕೆ ಘಾಟಿ ರಸ್ತೆಯ ಅನುಭವವಾಗುತ್ತದೆ. ಅಂದರೆ ಹೆಚ್ಚು ಒತ್ತಡ ಇರುತ್ತದೆ. ಪೆಟ್ರೋಲ್ ತುಂಬುವಾಗ ಮಾತ್ರ ಅದಕ್ಕೆ ಬಿಡುವು ಕೊಡಲು ನಮಗೆ ಸಾದ್ಯವಾದದ್ದು. ತಣಿಯಲು ಸ್ವಲ್ಪ ಅವಕಾಶ ಕೊಡೋಣ ಎಂದರೆ ಒಬ್ಬ ಸವಾರ ವಾಪಾಸಾಗುವಾಗ ಮತ್ತೊಬ್ಬ ತಯಾರಾಗುತ್ತಿದ್ದ.

ಮರಳರಾಶಿ ಏರುವಾಗ ವೇಗ ಇದ್ದರೆ ಉತ್ತಮ. ದಿಬ್ಬಗಳ ಏರಲಾಗದೆ ಸೋತಾಗ ಅಥವಾ ಸಮತಟ್ಟಾದರೂ ತಡೆ ಉಂಟಾದಾಗ ಚಕ್ರಗಳು ಮರಳು ಒಕ್ಕುವುದರಲ್ಲಿ ತೊಡಗುತ್ತದೆ. ಆಗಲೇ ಆದರೆ ವಿರುದ್ದ ದಿಕ್ಕಿನಲ್ಲಿ ಗೇರು ಬದಲಾಯಿಸಿ ಚಲಿಸಿದರೆ ಹೂತಲ್ಲಿಂದ ಎದ್ದುಬರುತ್ತದೆ. ಬದಲಾಗಿ ಮತ್ತೂ ಒತ್ತಡ ಹಾಕಿದರೆ ಐದು ಸೆಕುಂಡಿನಲ್ಲಿ ಅರ್ಧ ಚಕ್ರ ಮರಳಲ್ಲಿ ಹೂತು ಹೋಗುತ್ತದೆ. ಹೆಚ್ಚು ಹೂತು ಹೋದಲ್ಲಿ ಎತ್ತಿ ಮೇಲಿಡ ಬೇಕಾಗುತ್ತದೆ.

ಇದಕ್ಕಿಂತ ಮೊದಲು ಒಂದೇ ದಿನದಲ್ಲಿ ಇಷ್ಟು ಎಡೆಬಿಡದೆ ಸದಾಸಂ ಉಪಯೋಗಿಸಿರಲಿಲ್ಲ. ಬಿಟ್ಟು ಬಿಟ್ಟು ಉಪಯೋಗ ದಿನದಲ್ಲಿ ಅತಿ ಹೆಚ್ಚೆಂದರೆ ಒಂದೂವರೆ ಘಂಟೆ ಇರಬಹುದು. ನಮ್ಮ ದೈನಂದಿನ ಉಪಯೋಗ ಅಷ್ಟೇ. ಈ ಪ್ರಯೋಗಕ್ಕೆ ಆತ್ಮೀಯರಾದ ಕಾಂತಿಲದ ಮೋಹನ ಅವರ ಟ್ಯೂನಿಂಗ್ ಬಹಳ ಸಹಕಾರಿಯಾಗಿತ್ತು.

ಸದಾಸಂ ವೇಗವಾಗಿ ಸಮುದ್ರ ತೀರದಲ್ಲಿ ಸಾಗುವಾಗ ವಾಹನದ ಮೇಲೂ ಸ್ವಲ್ಪ ಮಟ್ಟಿಗೆ ನಮ್ಮ ಮೇಲೂ ಮರಳ ಸಿಂಚನವಾಗುತ್ತದೆ. ಉಳಿದ ವಿಚಾರ ಪರವಾಗಿಲ್ಲ, ಚೈನ್ ಮೇಲೆ ಕೂರುವ ಮರಳು ಅದರನ್ನು ಕೊರೆಯಲು ಪ್ರಾರಂಬಿಸುತ್ತದೆ. ಅದುದರಿಂದ ನಮ್ಮ ಮೂರುವರೆ ಘಂಟೆ ಸವಾರಿಯಲ್ಲಿ ಸ್ವಲ್ಪ ಚೈನ್ ಉದ್ದ ಬಂದಿದೆ ಅನಿಸುತ್ತದೆ.

ಮರಳಲ್ಲಿ ಅಡ್ಡ ಬಿದ್ದರೂ ಮೂಳೆ ಪುಡಿಯಾಗುವ ಸಾದ್ಯತೆ ಕಡಿಮೆ. ಅದುದರಿಂದ ನಮಗೆ ವೇಗವಾಗಿ ದೇಹದ ಬಾರವನ್ನು ಮುಂದಕ್ಕೆ ಹಾಕಿ ಅಂದರೆ ನಿಂತುಕೊಂಡು ಚಡಾವು ಏರುವುದು ಮುಂತಾದವುಗಳ ಅಬ್ಯಾಸ ಮಾಡಲು ನಮಗೆ ಸಲೀಸಾಯಿತು. ಚಡ್ಡಿ ದರಿಸಿದ ಹುಡುಗರು ಬಹುಪಾಲು ಸಮಯ ಹೆಲ್ಮೆಟ್ ಧರಿಸಿರಲಿಲ್ಲ. ಸುರಕ್ಷಿತತೆ ಮಟ್ಟಿಗೆ ಉದ್ದ ಪಾಂಟು ಹಾಕುವುದು ಹೆಲ್ಮೇಟ್ ಧರಿಸುವುದು ಉತ್ತಮ.

ಮದ್ಯಾಹ್ನ ಒಂದೂವರೆ ಸಮೀಪಿಸುವಾಗ ಹೊರಡುವ ಆಲೋಚನೆ ಬಂದಾಗ - ಸುನಿಲ ತಂದು ವೇಗವಾಗಿ ತಿರುಗಿಸಿ ನಿಲ್ಲಿಸಿದಾಗ ಚೈನ್ ಕಳಚಿಕೊಂಡಿತು.  ಅದನ್ನು ಸರಿಪಡಿಸಿದೆ. ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೆ ಪ್ರತಿಕ್ರಿಯೆ ಇಲ್ಲ. ಸಮಸ್ಯೆ ಪರಿಹರಿಸುವ ಉತ್ಸಾಹದಿಂದ ಹೆಚ್ಚು ಹಸಿವೆ ಆಯಾಸ ಎರಡೂ ಬಾದಿಸುತಿತ್ತು. ವಾಪಾಸು ಬರುವಾಗ ದಾರಿಯಲ್ಲಿ ಸ್ಥಳೀಯ ತಂತ್ರಜ್ನ ಇಸುಬು ಹತ್ತಿರ ಸಮಸ್ಯೆ ಹುಡುಕು ಮಾರಾಯ ಎಂದರೆ ಫ್ಯೂಸ್ ಹೋಗಿದೆ ಎಂದರು.











Thursday, October 15, 2009

ಕುಲಾಂತರಿ ಬದನೆಗೆ ನಾವು ಪ್ರಯೋಗ ಪಶುಗಳು.



ಕುಲಾಂತರ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಬಂದ ಪಟ್ಟ ಸಮಿತಿ ಒಪ್ಪಿದೆ ಎಂದು ಇಂದಿನ ಪತ್ರಿಕೆಯಲ್ಲಿ ಕಂಡು ಆಘಾತವಾಯಿತು. ಹಲವಾರು ವರ್ಷಗಳಿಂದ ನಡೆಯುತ್ತಿರುವ ಆಂದೋಲನಕ್ಕೆ ಇದೊಂದು ಹಿನ್ನೆಡೆ. ಆದರೆ ಈ ಸಮಿತಿಯಿಂದ ನಾವು ನ್ಯಾಯಬದ್ದ ವರದಿ ನಿರೀಕ್ಷಿಸುವಂತಿರಲಿಲ್ಲ.

ಕುಲಾಂತರಿ ತಂತ್ರಜ್ನಾನ ಒಪ್ಪಿಗೆ ಸಮಿತಿಯ ಮೂರು ಜನ ಸದಸ್ಯರ ಹಿನ್ನೆಲೆ ಸಂಶಯಾಸ್ಪದ.
ಇದು ಪೋಲಿಸು ಇಲಾಖೆಯ ಸಲಹಾ ಸಮಿತಿಗೆ ದಾವೂದ್ ಇಬ್ರಾಯಿಯನ್ನು ನೇಮಿಸಿದಂತಾಗಿದೆ. ಇಬ್ಬರು ಮೊದಲು ಮಹಿಕೊ ಬೀಜ ಕಂಪೇನಿ ಕೃಪಾಪೋಷಿತ ಸಂಶೋದನೆಯಲ್ಲಿ ನಿರತರಾಗಿದ್ದರು. ಮೂರನೆಯವರು ಸ್ವತಹ ಕುಲಾಂತರಿ ತಂತ್ರಜ್ನಾನದಲ್ಲಿ ನಿರತರಾಗಿರುವವರು.

ನಮ್ಮ ದೇಶದಲ್ಲಿ ಕಡಿಮೆ ಉತ್ಪತ್ತಿಗೆ ಕಾರಣ ಕಳಪೆ ಗುಣಮಟ್ಟದ ಕೀಟನಾಶಕವೆಂದು ಕೆಲವು ನಮ್ಮ ಹಿತಚಿಂತಕ ಕಂಪೇನಿಗಳು ಬೆಳೆಗೆ ಕೀಟಗಳ ನಿರೋದಿಸುವ ಶಕ್ತಿ ಇದ್ದರೆ ಉತ್ತಮವೆಂದು ಡಂಗುರ ಸಾರುತ್ತಿವೆ. ಕೀಟಗಳು ತಿನ್ನೋದೆ ಇಲ್ಲವಾದ ಕಾರಣ ಬೆಳೆ ಕೊಯಿಲಾಗುವಾಗ ಹೆಚ್ಚು ಸಿಗುತ್ತದೆ. ಬಿತ್ತನೆ ಬೀಜ ಮಾತ್ರ ಪ್ರತಿ ಸಲ ಖರೀದಿಸಬೇಕು ಹಾಗೂ ಸ್ವಲ್ಪ ದುಬಾರಿ. ಇದು ದೊಡ್ಡ ವಿಷಯವೇ ಅಲ್ಲ ಎನ್ನುತ್ತಾರೆ ಬೀಜ ಕಂಪೇನಿಯ ಪಾಠ ಉರುಹೊಡೆದ ನಮ್ಮ ಅಧಿಕಾರಿಗಳು ರಾಜಕಾರಣಿಗಳು. .

ಸರಿ ಮಾರಾಯರೇ, ಅವರು ಏನು ಬೇಕಾದರು ಮಾಡಿಕೊಳ್ಳಲಿ ಎಂದು ನಾವು ಸುಮ್ಮನಿರುವಂತಿಲ್ಲ. ಇದರಲ್ಲಿ ಸಾಮಾನ್ಯ ಬದನೆಗಿಂತ ಶೇ. ೧೫ ರಷ್ಟು ಕಡಿಮೆ ಕಾಲೊರಿ ಅಂತೆ. ಹಾಗಾದರೆ ಹೆಚ್ಚು ತಿಂದರಾಯಿತು ಬಿಡಿ. ಈ ಕುಲಾಂತರಿ ಆಹಾರ ಪದಾರ್ಥಗಳಿಗೆ ಗುರುತು ಚೀಟಿ ಅಂಟಿಸುವ ಯೋಜನೆ ಇಲ್ಲ. ನಮ್ಮ ಊಟದ ಬಟ್ಟಲಿನಲ್ಲಿ ಕುಲಾಂತರಿ ಆಹಾರ ಸಾಮುಗ್ರಿ ತಲಪುವಾಗಲೂ ನಮಗೆ ತಿಳಿಯಲು ಅಸಾದ್ಯ. ಅದುದರಿಂದ ಇದನ್ನು ಎಲ್ಲರೂ ವಿರೋದಿಸುವ ಅಗತ್ಯ ಇರುತ್ತದೆ. ಪ್ರಪಂಚದಲ್ಲಿ ಇಂದು ಕುಲಾಂತರಿ ಅಹಾರ ಪದಾರ್ಥ ಚಲಾವಣೆ ಇರುವುದು ಅಮೇರಿಕದ ಬಾಗವಾದ ಹವಾಯಿ ದ್ವೀಪದಲ್ಲಿ ಪಪ್ಪಾಯಿ ಹಣ್ಣು ಮಾತ್ರ.

 ಬದನೆಗೆ ಬಾರತವೇ ತವರು. ಬದನೆಯ ಮಟ್ಟಿಗೆ ಪ್ರಪಂಚದಲ್ಲಿ ಎಲ್ಲೂ ಇಷ್ಟು ವಿವಿದತೆ ಇರುವುದಿಲ್ಲ. ಈಗ ಇದನ್ನು ಸರಕಾರ ಅನುಮೋದಿಸಿದರೆ ಪ್ರಪಂಚದಲ್ಲಿಯೇ ಪ್ರಥಮವಾಗಿ ತವರಿನಲ್ಲಿಯೇ ಒಪ್ಪಿದ ಕುಲಾಂತರಿ ಆಹಾರ ಪದಾರ್ಥವಾಗುತ್ತದೆ ಮತ್ತು ಈ ವಿವಿದತೆಯನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. . ಚೀನದವರು ಸೊಯಾ ಅವರೆ ಮತ್ತು ಪೆರು ದೇಶದವರು ಬಟಾಟೆಯಲ್ಲಿ ಈ ದೊಂಬರಾಟ ಒಪ್ಪಿಲ್ಲ ಎನ್ನುವುದನ್ನು ನಾವು ಈಗ ನೆನಪಿಸಿಕೊಳ್ಳಬೇಕು.

ಹತ್ತಿಯಂತಹ ಮನುಷ್ಯ ತಿನ್ನದ ಬೆಳೆಯು ಕುಲಾಂತರಿ ಆದಾಗ ಅಲ್ಲರ್ಜಿ ಮತ್ತು ಪ್ರಾಣಿಗಳ ಸಾವಿಗೆ ಕಾರಣವಾಗಬಹುದಾದರೆ ಬದನೆಯಂತಹ ನಿತ್ಯ ಬಳಕೆ ಆಹಾರ ಪದಾರ್ಥಕ್ಕೆ ಇದನ್ನು ಬೆರೆಸಿದರೆ ಆಗುವ ಅನಾಹುತ ಊಹಿಸಲು ಅಸಾದ್ಯ.

ನಾನು ಪ್ರಯೋಗಾಲಯದ ಇಲಿ ಅಲ್ಲ ಎಂದು ಸಾವಿರಾರು ಜನ ಈ ಇ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಇ ಪತ್ರಗಳನ್ನು ದೊಡ್ಡ ಸಿಂಗರಿಗೆ ಕಳುಹಿಸಲಾಗಿತ್ತು. ಅನಂತರ ನಿಮ್ಮ ಕಾಳಜಿ ಅರ್ಥವಾಗಿದೆ ಎಂದು ಕೇಂದ್ರ ಸರಕಾರದ ಪತ್ರವೂ ನನಗೆ ಬಂದಿತ್ತು.

ಈಗ ತಜ್ನರ ವರದಿ ಕೇಂದ್ರ ಸರಕಾರದ ಕೈ ಸೇರಿದೆ. ಇನ್ನು ಬಾಕಿ ಇರುವುದು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಮುದ್ರೆ ಮಾತ್ರ ಬಾಕಿ. ಗಾಬರಿ ಏನೂ ಬೇಡ. ನಾನು ಸರಿಯಾಗಿ ವ್ಯವಸ್ಥೆ ಮಾಡುತ್ತೇನೆ. ಇನ್ನೂ ನನ್ನ ಕೈಯಲ್ಲೇ ಇದೆ ಎನ್ನುತ್ತಾರೆ ಕೈ ಪಕ್ಷದ ಮಂತ್ರಿ ಜೈರಾಮ ರಮೇಶ. ನಾಲ್ಕು ತಿಂಗಳು ಹಿಂದೆ ತಾನು ಕುಲಾಂತರಿ ಅಹಾರದ ವಿರೋದ ಎಂದು ಹೇಳಿದ ಮಹಾನ್ ಸಾಹಸಿ ಜೈರಾಮರ ಕೈಯಲ್ಲಿರುವುದೇ ನನಗೆ ಗಾಬರಿಗೆ ಕಾರಣ.


ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಸಿಯಾಚನ್ ಗಡಿ ಪ್ರದೇಶಕ್ಕೆ ಹೋದದ್ದೂ ಇವರ ಸಾಹಸದ ಎದುರು ಬರೇ ಸಪ್ಪೆ. ನಮ್ಮ ವೀರ ಧೀರ ಪರಿಸರ ಮಂತ್ರಿ ಜೈರಾಮ್ ರಮೇಶರು ಬೋಪಾಲಕ್ಕೆ ಹೋದದ್ದು ಮಾತ್ರವಲ್ಲ ಪಾಳು ಬಿದ್ದಿರುವ ಕೀಟನಾಶಕ ಕಾರ್ಖಾನೆಯಲ್ಲಿ ರಾಶಿಬಿದ್ದ ಕಲ್ಮಶವನ್ನೂ ಮುಟ್ಟಿದರು. ಸುತ್ತುಮುತ್ತೆಲ್ಲ ಇಷ್ಟು ಹಸಿರಾಗಿರುವಾಗ ಬೂಮಿ ವಿಷಮಯವಾಗಿರಲು ಸಾದ್ಯವೇ ? ಎಂದು ಪ್ರಶ್ನಿಸಿದರು. ನಾನು ಹೋಗಿ ಮುಟ್ಟಿ ನೋಡಿದೆ, ಆದರೂ ಕೆಮ್ಮುತ್ತಿಲ್ಲ ಆರೋಗ್ಯವಾಗಿ ಹಾಗೂ ಜೀವಂತವಾಗಿದ್ದೇನೆ. ಅದುದರಿಂದ ಈ ಇಪ್ಪತ್ತೈದು ವರ್ಷ ಹಿಂದಿನ ದುರಂತ ಮರೆತು ನಾವು ಮುಂದಕ್ಕೆ ಸಾಗಬೇಕು ಎಂದು ಅಪ್ಪಣೆ ಕೊಡಿಸಿದರು. ಹಾಗೆಯೇ ಕುಲಾಂತರಿ ಬದನೆಯಲ್ಲಿ ಮಾಡಿದ ಪಲ್ಯ ತಿಂದರೂ ನಾನು ಬದುಕಿದ್ದೇನೆ ಎನ್ನಬಹುದು ಈ ಮಹಾನುಭಾವರು …….. ರಾಮ್, ರಾಮ್

ಆದರೂ ನಮ್ಮ ಪ್ರಯತ್ನ ನಾವು ಮಾಡೋಣ. ಪರಿಸರ ಮಂತ್ರಿ ಜೈರಾಮರಿಗೆ ಒಂದು ಪತ್ರ ಬರೆಯಿರಿ. ವಿಳಾಸ ಹಾಗೂ ಸಲಹೆಗೆ ಈ ಕೊಂಡಿಯನ್ನು ಕ್ಲಿಕ್ಕಿಸ.

ಬಾರತಕ್ಕೆ ಈ ಕುಲಾಂತರಿ ಬೆಳೆಗಳು ಬೇಕೊ ಅನ್ನುವ ವಿಚಾರದಲ್ಲಿ ಹೆಚ್ಚಿನ ಮಾಹಿತಿಗೆ  

Saturday, October 10, 2009

ಪ್ರವಾಸಿ ಸುರಕ್ಷತೆ ಮಟ್ಟಿಗೆ ಜಪಾನಿನಲ್ಲಿ ತಲೆ ನೋವಿಲ್ಲ.

ನಾ ಕಂಡ ದೇಶಗಳಲ್ಲಿ ಪ್ರವಾಸಿಗೆ ಹೆಚ್ಚು ನಿರ್ಭಯವಾಗಿ ಓಡಾಡಲು ಸಾದ್ಯವಿರುವುದು ಕನಿಷ್ಟ ಅಪಾಯಕಾರಿ ಜಪಾನ್ ಅನ್ನಬಹುದು. ಕಳ್ಳರ ಹಾವಳಿ ಇಲ್ಲ. ಅದಕ್ಕೊಂದು ರುಜುವಾತು ಎಂದರೆ ನಾನು ಜಪಾನು ತಲಪಿದ ಮೊದಲ ರಾತ್ರಿ ನಿದ್ರಿಸಿದ್ದು ರಸ್ತೆ ಪಕ್ಕದಲ್ಲಿರುವ ಜನ ಸಾಗುವ ಮೇಲು ಸೇತುವೆಯಲ್ಲಿ.

ಟೋಕಿಯೊ ಪಟ್ಟಣದ ಒಳಗಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಂಜೆಯಾಗಿತ್ತು. ಹೊರಬಂದು ಸೈಕಲ್ ಏರಿದೆ. ೫೫೦ ಕಿಮಿ ದೂರದ ಒಸಕಾ ನನ್ನ ಗುರಿಯಾಗಿತ್ತು. ಕವಸಾಕಿ ಯೊಕೊಹೊಮ ಊರುಗಳು ಕಳೆಯಿತು. ಕತ್ತಲಾಯಿತು. ಜನದಟ್ಟಣೆ ಕಡಿಮೆಯಾಗಲಿಲ್ಲ. ಸಾಮಾನ್ಯವಾಗಿ ರಾತ್ರಿ ನಿದ್ರಿಸಲು ದಾರಿಹೋಕರಿಗೆ ಪಕ್ಕನೆ ಕಣ್ಣಿಗೆ ಬೀಳದಂತಹ ಜಾಗ ಆರಿಸಿಕೊಳ್ಳುತ್ತಿದ್ದೆ. ಅಂದು ಅಂತಹ ಜಾಗ ಕಾಣಲಿಲ್ಲ. ನನಗೆ ಅಪರಿಚಿತ ಹೊಸ ಪರಿಸರ. ವಿಪರೀತ ಸುಸ್ತಾಗಿತ್ತು. ಹಾಗೆ ಒಂದು ಮೇಲು ಸೇತುವೆ ಮೇಲೆ ನನ್ನ ಮಲಗುವ ಚೀಲ ಬಿಡಿಸಿದೆ.

ನಿದ್ರೆ ಬರುವ ವರೆಗೂ ದಾರಿಯಲ್ಲಿ ಸಾಗುವ ಜನರ ವರ್ತನೆ ಗಮನಿಸುತ್ತಿದ್ದೆ. ಯಾರೂ ನನ್ನ ಬಗೆಗೆ ಕುತೂಹಲ ತೋರಿಸಿದಂತೆ ಕಾಣಲಿಲ್ಲ. ದೀರ್ಘ ವಿಮಾನ ಪ್ರಯಾಣದಿಂದ ಸುಸ್ತಾದ ಕಾರಣ ಚೆನ್ನಾಗಿ ನಿದ್ದೆ ಬಂತು. ಬೆಳಕು ಹರಿಯುವಾಗ ಎದ್ದೆ. ಸೈಕಲು ಏರಿ ಪ್ರಯಾಣ ಮುಂದುವರಿಸಿದೆ. ಆ ರಾತ್ರಿ ನನ್ನ ಇಡೀ ಪ್ರವಾಸದಲ್ಲಿ ಹೆಚ್ಚು ಜನ ಕಾಣುವ ಪ್ರದೇಶದಲ್ಲಿ ನಾನು ನಿದ್ದೆಮಾಡಿದ್ದು.

ಮುಂದೆಯೂ ಜಪಾನಿನಲ್ಲಿ ರಸ್ತೆ ಪಕ್ಕದಲ್ಲಿ, ಗದ್ದೆಗಳ ನಡುವಿನ ಹಾದಿಯಲ್ಲಿ ನನ್ನ ಪುಟ್ಟ ಡೇರೆ ಬಿಡಿಸಿ ಮಲಗುವ ಚೀಲದಲ್ಲಿ ನಿದ್ರಿಸಿದ್ದೇನೆ. ಪೆಟ್ರೋಲ್ ಪಂಪ್ ಶೌಚಾಲಯವನ್ನೂ ಉಪಯೋಸಿದ್ದೇನೆ ಎಂದು ಅಸ್ಪಷ್ಟ ನೆನಪು

ಜಪಾನು ಎಂದರೆ ನಾಲ್ಕು ಮುಖ್ಯ ದ್ವೀಪಗಳು. ಹೊಕೈಡೊ ಹೊಂಶು ಶಿಕೋಕು ಕ್ಯುಶು. ನಾನು ಹೊಂಶುನಲ್ಲಿರುವ ಟೋಕಿಯೊದಲ್ಲಿಳಿದು ಸೈಕಲಿನಲ್ಲಿ ೫೫೦ ಕಿಮಿ ದೂರದ ಒಸಕಾ ವರೆಗೆ ಸೈಕಲು ತುಳಿದೆ. ಪುಜಿ ಪರ್ವತದ ಸಮೀಪ ಸಾಗುವ ಪರ್ವತ ರಸ್ತೆ. ಅಲ್ಲಿಂದ ಶಿಕೋಕು ದ್ವೀಪದಲ್ಲಿರುವ ಟಕಮಟ್ಸು ಎಂಬಲ್ಲಿಗೆ ಫೆರಿ ಪ್ರಯಾಣ. ಅಲ್ಲಿ ಈಗ ಸೇತುವೆ ಆಗಿದೆಯಂತೆ. ಅಲ್ಲಿಂದ ಮಟ್ಸುಯಾಮ ವರೆಗೆ ಸೈಕಲು. ಕೊನೆಗೆ ಮಟ್ಸುಯಾಮದಿಂದ ಪುಕೋಕ ವಿಮಾನ ನಿಲ್ದಾಣದ ಹತ್ತಿರವಿರುವ ಕ್ಯುಶು ದ್ವೀಪದಲ್ಲಿರುವ ಕಿಟಕಾಯಿಶು ಎಂಬಲ್ಲಿಗೆ ಫೆರಿ. ಹೀಗೆ ಜಪಾನಿನಲ್ಲಿ ಎರಡು ಬಾರಿ ಫೆರಿ ಉಪಯೋಗಿಸಿ ಸಮುದ್ರ ದಾಟಿದೆ. ಎರಡೂ ನಾಲ್ಕಾರು ಘಂಟೆ ಪ್ರಯಾಣ.

ನನಗೆ ಬಂದಿಳಿಯುವಾಗ ಮಸನೋಬು ಫುಕೋಕ ಎಂಬ ರೈತರ ಹೆಸರು ಮತ್ತು ಸಮೀಪದ ಮಟ್ಸುಯಾಮ ಪಟ್ಟಣದ ಹೆಸರು ಮಾತ್ರ ಗೊತ್ತಿದ್ದರೂ ಹುಡುಕುವುದರಲ್ಲಿ ಸಫಲನಾದೆ. ಅಷ್ಟು ಕನಿಷ್ಟ ಮಾಹಿತಿಯೊಂದಿಗೆ ನಾನು ಹೊರಟಿದ್ದೆ ಎನ್ನುವುದರ ಯೋಚಿಸುವಾಗ ಇಂದು ಅಶ್ಚರ್ಯವಾಗುತ್ತದೆ. ನಾನು ಹುಡುಕ ಹೊರಟ ಫುಕೋಕರು ಮಟ್ಸುಯಾಮ ಪಟ್ಟಣದ ಸಮೀಪದ ಇಯೊ ಎಂಬ ಹಳ್ಳಿಯಲ್ಲಿ ವಾಸ.



ಫುಕೋಕರ ಮನೆಯ ಆವರಣ ಹೊಕ್ಕಾಗ ನನಗೊಂದು ಪರಿಚಿತ ಪರಿಸರದ ಅನುಭವ. ನಮ್ಮಲ್ಲಿ ಹಳೆ ಮನೆಗಳಲ್ಲಿರುವಂತೆ ಆವರಣ ಗೋಡೆಗೆ ಒಂದು ನಡೆದು ಒಳಹೋಗುವ ಬಾಗಿಲು. ಅದಕ್ಕೊಂದು ಪುಟ್ಟ ಮಾಡು. ಮನೆಯ ಎದುರೊಂದು ಎರಡು ಮಾಡಿನ ಮುಖಮಂಟಪವಿರುವುದು ಚಿತ್ರದ ನಡು ಬಾಗದಲ್ಲಿ ಕಾಣುತ್ತದೆ. ಕಟ್ಟಿದ ಶೈಲಿ ಬಿನ್ನವಾಗಿದ್ದರೂ ಹೋಲಿಕೆ ಕಂಡಂತಾಯಿತು.

ಅಲ್ಲಿನ ಜನ ಬಹಳ ವಿನಯವಂತರು ಆದರೂ ನಾನು ಎನ್ನಲು ಎದೆ ಬದಲು ಮೂಗು ತೋರಿಸುವ ಕೈ ಸನ್ನೆ ಗೊಂದಲ ಉಂಟುಮಾಡುತ್ತದೆ. ವಂದನೆ ಎಂದರೆ ಬಾಗುವುದು ಎರಡು ಸಲಕ್ಕೆ ಸಿಮಿತಗೊಳಿಸದೆ ನಾವು ಪುನಃ ಬಗ್ಗಿದರೆ ಅವರೂ ಬಗ್ಗುತ್ತಾರೆ. ಇಂಗ್ಲೀಷ್ ಅರಿವು ಕಡಿಮೆ. ನೀವು ಅವರಲ್ಲಿಗೆ ಹೋದರೆ ಪದ ಹುಡುಕಲು ಅವರ ಡಿಕ್ಷನರಿ ಹೊರಬರುತ್ತದೆ.

ಒಮ್ಮೆ ಒಂದು ಮನೆಯಲ್ಲಿ ಕುಡಿಯುವ ನೀರು ಬಾಟಲಿಗೆ ತುಂಬಿ ಕೊಡಬಹುದೋ ? ಕೇಳಿದೆ. ಹಸುರು ಚಾ ಹಾಕಿ ಕೊಡಲೇ ಎಂದರು. ನನಗೆ ಹಾಗೆಂದರೆ ಏನೆಂದು ಕಲ್ಪನೆ ಇಲ್ಲವಾದರೂ ಒಪ್ಪಿದೆ. ನಾನು ಹಾಲು ಸಕ್ಕರೆ ಹಾಕಿದ ಚಾ ಕೊಡುತ್ತಾರೆ ಅಂದುಕೊಂಡಿದ್ದೆ. ನಮ್ಮಲ್ಲಿ ಕುದಿಸುವಾಗ ಮುಡಿವಾಳದ ಬೇರು ಬೆರೆಸಿದಂತಹ ನೀರಿಗೆ ಹೋಲುವಂತದ್ದು ಜಪಾನಿನವರ ಹಸುರು ಚಾ.

ಜಪಾನಿನಲ್ಲಿ ಬ್ರೆಡ್ ಬದಿಯ ತುಂಡುಗಳನ್ನು ಅಂಗಡಿಯಲ್ಲಿ ಮಾರುವ ಪಾಕೇಟುಗಳಿಗೆ ಹಾಕುವುದಿಲ್ಲ. ಬೇಕರಿಗಳ ಬಳಿ ಹೋದರೆ ನಮಗೆ ಈ ಬದಿಯ ತುಂಡುಗಳ ಬಹಳ ಅಗ್ಗವಾಗಿ ಪಡಕೊಳ್ಳಲು ಸಾದ್ಯ. ಇದೂ ನನ್ನ ಹಣ ಉಳಿಸಲು ಸಹಾಯ ಮಾಡಿತು. ತುಂಬಾ ದುಬಾರಿ ದೇಶವಾದ ಜಪಾನಿನಲ್ಲಿ ಕನಿಷ್ಟ ಖರ್ಚಿನಲ್ಲಿ ಸುದಾರಿಸಿದೆ.

Friday, October 09, 2009

ಬಾರತದಲ್ಲೊಂದು ಹಸಿರು ಪಕ್ಷ




ಬಾರತದ ಪ್ರಮುಖ ಪರಿಸರವಾದಿಯೊಬ್ಬರು ಹಸಿರು ಪಕ್ಷ ಸ್ಥಾಪನೆಯ ಪ್ರಯತ್ನದಲ್ಲಿದ್ದಾರೆ. ಕಲಕತ್ತಾ ರಸ್ತೆಗಳಿಂದ ಲಕ್ಷಾಂತರ ಹಳೆಯ ಗುಜರಿ ವಾಹನಗಳ ಹೊರ ಹಾಕಲು ಸಫಲರಾದ ಸುಬಾಷ ದತ್ತ ದೇಶದ ಪರಿಸರ ಹೋರಾಟಕ್ಕೆ ನ್ಯಾಯ ದೊರಕಿಸಲು ರಾಜಕೀಯ ಪಕ್ಷ ಪ್ರಾರಂಬಿಸಲು ಹೊರಟಿದ್ದಾರೆ.

ಕಲಕತ್ತ ನಗರದಲ್ಲಿ ಹಳೆಯ ವಾಹನ ನಿಷೇದಕ್ಕೊಸ್ಕರ ಉಚ್ಚ ನ್ಯಾಯಲಯದ ವರೆಗೂ ಹೋಗಿದ್ದಾರೆ. ಪರಿಣಾಮ ಹದಿನೈದು ವರುಷಗಿಂತ ಹಳೆಯವಾಹನಕ್ಕೆ ನಿರ್ಬಂದ ವಿದಿಸಲಾಗಿದೆ. ಹಲವು ಬಾರಿ ಮುಂದೂಡಲ್ಪಟ್ಟು ಕೊನೆಗೂ ಈ ವರ್ಷದ  ಆಗಸ್ತ್ ಒಂದರಿಂದ ಕಾರ್ಯಗತವಾದ ನಂತರ ಅಲ್ಲಿನ ವಾಯು ಮಲೀನತೆ ಗಣನೀಯವಾಗಿ ಕುಗ್ಗಿದೆಯಂತೆ.

ವೃತ್ತಿಯಲ್ಲಿ ಇವರೊಬ್ಬ ಲೆಕ್ಕ ಪರಿಶೋಧಕರು. ಕಳೆದ ಮೂವತ್ತು ವರ್ಷಗಳಿಂದ ಬಾರತದಲ್ಲಿ ಪರಿಸರ ಮತ್ತು ಪರಂಪರೆ ತಾಣ ಉಳಿಸಿಕೊಳ್ಳಲು ಅತ್ಯಂತ ಹೆಚ್ಚು ಸಲ ನ್ಯಾಯಾಲಯ ಮೊರೆ ಹೊಕ್ಕವರು.

೧೯೭೮ರಲ್ಲಿ ಒಂದು ಮರ ಕಡಿಯುವುದರ ಉಳಿಸಲು ಪ್ರತಿಭಟನೆ ಕೈಗೊಂಡ ದತ್ತರು ತನ್ಮೂಲಕ ಪರಿಸರ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು. ಪ್ರಥಮ ಚುಂಬನದಲ್ಲಿ .. ಅನ್ನುವಂತೆ ಅಂದು ಆ ಮರಕ್ಕಾಗಿ ಜೈಲು ವಾಸವೂ ಅನುಭವವಾಯಿತು. ಅನಂತರ ಎಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಕೇಸುಗಳ ದಾಖಲಿಸಿದ್ದಾರೆ ಮತ್ತು ಅವುಗಳಲ್ಲಿ ಶೇಕಡ ಎಪ್ಪತ್ತರಲ್ಲಿ ಗೆದ್ದಿದ್ದಾರೆ. ವಾಯುನೆಲೆ ಸುತ್ತಲು ವಾಸಿಸುವವರು ಕಿವುಡರಾಗುವುದರಿಂದ ಹಿಡಿದು ಗಂಗಾ ನದಿಗೆ ಹೊಲಸು ಬಿಸಾಕುವ ವಿಚಾರದ ವರೆಗೆ ವಿಬಿನ್ನ ವಿಚಾರಗಳ ಬಗ್ಗೆ ಹೋರಾಟ ನಡೆಸಿದ್ದಾರೆ. ಇವರ ಪ್ರಯತ್ನದಿಂದಾಗಿ ೧೯೯೬ರಲ್ಲಿ   ದೇಶಕ್ಕೆ ಪ್ರಥಮವಾಗಿ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯ ಮಟ್ಟದ ಪರಿಸರ ಬೆಂಚ್ ಪ್ರಾರಂಬಿಸಲ್ಪಟ್ಟಿತು

ಹಸಿರು ಪಕ್ಷದ ಅನಿವಾರ್ಯತೆಯನ್ನು ಬೊಟ್ಟುಮಾಡುವ ದತ್ತರು ಪರಿಸರ ಉಳಿಸುವ ಮಟ್ಟಿಗೆ ರಾಜಕೀಯ ಪಕ್ಷಗಳೆಲ್ಲ ಪಕ್ಕ ಕಳ್ಳರು ಎನ್ನುತ್ತಾರೆ. ಕಡಲತಡಿಯಲ್ಲಿ ರಸಾಯನಿಕ ಕಾರ್ಖಾನೆ ವಿರೋದಿಸುವ ದೀದಿಯವರ ತ್ರಿನಮೂಲ್ ಪಕ್ಷ ಹಳೆಯ ಗುಜರಿ ವಾಹನಗಳ ಬೆಂಬಲಿಸುತ್ತದೆ.

ಅಲ್ಲಿನ ಹಸುರು ಪಕ್ಷದೊಂದಿಗೆ ಸಂವಾದಕ್ಕೆ ಸಮಾನಾಸಕ್ತರೊಂದಿಗೆ ಇತ್ತೀಚೆಗೆ ಇಂಗ್ಲೇಂಡ್, ಜರ್ಮನಿಯ ಪ್ರವಾಸ ಕೈಗೊಂಡ ಶ್ರೀ ದತ್ತರು ಪರಿಸರ ಹೋರಾಟ ಇಂದು ಸ್ಥಳೀಯ ವಿಚಾರವಾಗಿಯೇ ಉಳಿದಿದ್ದು ಸಮುಗ್ರ ಹೋರಾಟಕ್ಕೆ ರಾಷ್ಟ್ರೀಯ ಪಕ್ಷದ ಅಗತ್ಯ ಒತ್ತಿ ಹೇಳುತ್ತಾರೆ. ನಮಗೆ ಅಲ್ಲವಾದರೂ ಕಲಕತ್ತದ ಮತದಾರರಿಗೆ ಮುಂದಿನ ಚುನಾವಣೆಯಲ್ಲಿ ಇವರನ್ನು ಬೆಂಬಲಿಸುವ ಅವಕಾಶ ದೊರಕುವುದು ಖಚಿತ ಎನಿಸುತ್ತದೆ.

Sunday, October 04, 2009

ಸೈಕಲು ಡೈನೆಮೊ ಹಾಗೂ ವಿದ್ಯುತ್ ತಯಾರಿ


ಇಂದು ಜಾಲದಲ್ಲಿ ಒಂದು ಆಫ್ರಿಕದ ಹುಡುಗ ಸೈಕಲ್ ಡೈನೆಮೊ ಕೇಂದ್ರಿತ ವಿದ್ಯುತ್ ಗಾಳಿ ಯಂತ್ರ ಮಾಡಿದ ವಿವರಗಳು ಕಣ್ಣಿಗೆ ಬಿತ್ತು. ನನ್ನ ಸೈಕಲು ಪ್ರವಾಸದ ಸಮಯ ಇಂತಹ ಡೈನೆಮೊ ನನಗೆ ರಸ್ತೆ ಕಾಣಲು ಮಾತ್ರವಲ್ಲ ಡೇರೆಯೊಳಗೆ ಕೂಡ ಅಗತ್ಯವಾದ ಬೆಳಕನ್ನು ಪೊರೈಸುತ್ತಿತ್ತು. ಆದರೆ ದೀರ್ಘವಾದ ಹಗಲಿನಿಂದಾಗಿ ನಾನು ರಾತ್ರಿ ಸೈಕಲು ಸವಾರಿ ಮಾಡಿದ್ದು ಕಡಿಮೆ.

ಪ್ರವಾಸದ ಸಮಯ ನನ್ನ ಹತ್ತಿರ ಟಾರ್ಚ್ ಇರಲಿಲ್ಲ. ಇಂತಹ ಸರಳ ಸಾಮುಗ್ರಿಗಳ ಅನಾವಶ್ಯಕ ಹೊರುವುದರ ಬದಲು ಅಗತ್ಯ ಬಿದ್ದಾಗ ಕೊಂಡುಕೊಳ್ಳುವುದು ನನ್ನ ದೋರಣೆಯಾಗಿತ್ತು. ಮೊದಲು ನಾಲ್ಕು ತಿಂಗಳು ನಾನು ಒಂಟಿಯಾಗಿ ಹೊರಗೆ ಮಲಗಿರಲಿಲ್ಲ. ಯುರೋಪಿನಲ್ಲಿ ಮೊದಲು ಚಳಿ ಜೋರಾಗಿತ್ತು. ಮೆ ತಿಂಗಳಲ್ಲಿ ಒಂಟಿಯಾಗಿ ಆಕಾಶದಡಿ ಡೇರೆ ಬಿಡಿಸಿ ಮಲಗಲು ಪ್ರಾರಂಬಿಸಿದೆ. ಅನಂತರ ದೊಡ್ಡ ಪಟ್ಟಣಗಳ ಹೊರತು ಪಡಿಸಿದರೆ ಎಲ್ಲೂ ತಂಗುವುದಕ್ಕೆ ಹಣ ಖರ್ಚು ಮಾಡಲಿಲ್ಲ.

ರೋಮಿನಲ್ಲಿ ಕೊಡುಗೆಯಾಗಿ ಸಿಕ್ಕ ಸೈಕಲಿನಲ್ಲಿ ಮುಂದಿನ ಚಕ್ರಕ್ಕೆ ಡೈನೆಮೊ ಅಳವಡಿಸಲಾಗಿತ್ತು. ಡೇರೆಯ ಬಾಗಿಲಿನ ಬಳಿಯಲ್ಲಿ ಸೈಕಲನ್ನು ಅಡಿಮೇಲಾಗಿ ಇಟ್ಟು ಚಕ್ರ ನನ್ನ ಕೈಗೆ ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೆ. ಏಳು ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಡೇರೆಯಲ್ಲಿ ಎಲ್ಲ ಸಾಮಾನುಗಳೂ ವ್ಯವಸ್ಥಿತವಾಗಿ ಇಡುತ್ತಿದ್ದು ಕಣ್ಣು ಮುಚ್ಚಿದರೂ ಸಿಗುವಂತಿತ್ತು. ಅಕಸ್ಮಾತ್ ಬೆಳಕು ಬೇಕಾದರೆ ಹೊರಗೆ ಕೈ ಹಾಕಿ ಚಕ್ರ ತಿರುಗಿಸುತ್ತಿದ್ದೆ. ನಾಲ್ಕು ಕ್ಷಣ ಸಿಗುವ ಬೆಳಕು ನನಗೆ ಸಾಕಾಗುತ್ತಿತ್ತು.

ಐದು ವರ್ಷ ಹಿಂದೆ ಮಲಾವಿ ದೇಶದ ಬಡ ಹುಡುಗನೊಬ್ಬ ಕೈಗೆ ಸಿಕ್ಕ ಗುಜರಿವಸ್ತುಗಳ ಉಪಯೋಗಿಸಿ ಒಂದು ಡೈನೆಮೊ ಮಾಡಿದ್ದು ಮತ್ತು ಅನಂತರ ಅವನಿಗೆ ವಿದ್ಯಾಬ್ಯಾಸ ಸಹಾಯ ದೊರಕಿದ್ದೂ ಮೊದಲು ಓದಿದ್ದೆ. ಈಗ ಸೂಕ್ಷ್ಮವಾಗಿ ಚಿತ್ರ ನೋಡುವಾಗ ಅವನ ಡೈನೆಮೊ ಮಾದರಿಯಲ್ಲಿಯೇ ನಾನು ಬಳಸಿದ್ದು ಗಮನಕ್ಕೆ ಬಂದು ಈ ಬಗೆಗೆ ಬರೆಯಲು ಕೂತೆ.   ಗಾಳಿ ಯಂತ್ರ ಎಂದರೆ ಬೆಳಕು ಮಾತ್ರವಲ್ಲ ಸ್ವಾತಂತ್ರ ಎನ್ನುವ ಅವನ ಕಥೆ ಚೆನ್ನಾಗಿದೆ.

Saturday, October 03, 2009

ವಿದೇಶದಲ್ಲಿ ಹಣ ಬದಲಾವಣೆ.

ಅರೋಹಣ ತಂಡ    ಜತೆ ಪಶ್ಚಿಮ ಘಟ್ಟದ ಗುಡ್ಡವೊಂದರಲ್ಲಿ ಹೆಜ್ಜೆ ಹಾಕುತ್ತಿದ್ದೆ. ಅಂದು ಪರಿಚಯವಾದ ಹೊಸ ಗೆಳೆಯರು ನನ್ನ ಮುಂಚಿನ ವರ್ಷದ ಸೈಕಲು ಪ್ರವಾಸದ ಬಗೆಗೆ ಕುತೂಹಲದಿಂದ ವಿಚಾರಿಸುತ್ತಿದ್ದರು. ಪ್ರಶ್ನೋತ್ತರ ಸಂಬಾಷಣೆ ನಮ್ಮದೇ ಸಾಗುತ್ತಿದ್ದು ಉಳಿದವರು ನಡೆಯುತ್ತಾ ಕಿವಿಗೊಡುತ್ತಿದ್ದರು.

ಪರದೇಶದ ಹೆಚ್ಚಿನ ಹಣ ಎಲ್ಲ ಕಡೆಗಳಲ್ಲಿ ಚಲಾವಣೆ ಆಗುತ್ತದೆ. ಆದುದರಿಂದ ಆಯಾ ಊರಿನ ಹಣಕ್ಕೆ ಬದಲಾವಣೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಾಪಾಸು ಬರುವಾಗ ನನ್ನಲ್ಲಿ ಆರೇಳು ದೇಶಗಳ ನೋಟುಗಳಿದ್ದವು. ನಾವು ಕೊಡುವ ದರಕ್ಕೂ ಪಡಕೊಳ್ಳುವ ದರಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ ಮತ್ತು ಬಾಂಕಿನ ಶುಲ್ಕ ಪ್ರತ್ಯೇಕ. ಹೀಗೆ ಆಯಾ ದೇಶದಲ್ಲಿ ಬೇಕಾದಷ್ಟು ಮಾತ್ರ ಹೊರತು ಅನಗತ್ಯವಾಗಿ ಹಣವನ್ನು ಬದಲಾವಣೆ ಮಾಡಬಾರದು ಎಂದು ಹೇಳಿದೆ.

ಉದಾಹರಣೆ ಕೊಡುವುದು ನನ್ನದೊಂದು ಕೆಟ್ಟ ಚಾಳಿ. ಇದಕ್ಕೆ ಉದಾಹರಣೆಯಾಗಿ ಆಚಾರಿ ಹತ್ತಿರ ಚಿನ್ನ ಕೊಟ್ಟ ಹಾಗೆ ಎಂದುಬಿಟ್ಟೆ. ಪ್ರತಿ ಸಲವೂ ಶೇಕಡ ಐದರಷ್ಟು ನಮ್ಮ ಸಂಪತ್ತು ಕರಗುತ್ತದೆ ಎನ್ನುವ ವಿಚಾರ ಅರ್ಥಮಾಡಿಸುವುದು ನನ್ನ ಉದ್ದೇಶವಾಗಿತ್ತು.   ಆಗ  ಅಶೋಕವರ್ಧನರು ಮದ್ಯೆ ಬಾಯಿ ಹಾಕಿ ಕೇಳಿದರು. ಅವರು ಏನು ಮಾಡುತ್ತಾರೆ ಗೊತ್ತಾ ? ಇಲ್ಲವೆಂದು ಉತ್ತರಿಸಿದೆ. ಆಗ ಅಶೋಕವರ್ಧನರು ಹೇಳಿದರು ಆಚಾರರು ಮಂಗಳೂರಿನಲ್ಲಿ ಚಿನ್ನದ ಅಂಗಡಿ ಇಟ್ಟಿದ್ದಾರೆ. ನನ್ನ ಪರೀಸ್ಥಿತಿ ………..

Monday, September 28, 2009

ಅಂದು ಸೈಕಲನ್ನೂ ಹೀಗೆ ಭದ್ರಪಡಿಸುತ್ತಿದ್ದೆ.





ಜಾಲದಲ್ಲಿ ಈ ಚಿತ್ರ ನೋಡಿದಾಗ ನನ್ನ ಸೈಕಲು ಪ್ರವಾಸದ ದಿನಗಳು ನೆನಪಾದವು. ಸೈಕಲನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಬೇಕಾದ ಸಂದರ್ಬಗಳಲ್ಲಿ ನಾನು ಹೆಚ್ಚಾಗಿ ಈ ರೀತಿಯ ಕಂಬಗಳನ್ನೇ ಅವಲಂಬಿಸಿ ಭದ್ರಪಡಿಸುತ್ತಿದ್ದೆ . ಅಂಗಡಿಗೆ ಬಾಂಕಿಗೆ ಇತ್ಯಾದಿ ಆಗಾಗ ಹೋಗಬೇಕಾಗುತಿತ್ತು. ಬೀಗದಿಂದ ಎದುರಿನ ಚಕ್ರವನ್ನು ಕಂಬಕ್ಕೆ ಬಿಗಿದ ನಂತರ ಆರಾಮವಾಗಿ ಬಿಟ್ಟು ಹೋಗಿ ಕೆಲಸ ಮುಗಿಸಿ ಬರಲು ಸಾದ್ಯವಾಗುತಿತ್ತು. ಸೈಕಲು ಮಾತ್ರವಲ್ಲ ಅದರಲ್ಲಿದ್ದ ಚೀಲಗಳನ್ನೂ ಯಾರೂ ಮುಟ್ಟಿರಲಿಲ್ಲ.

ಈ ಚಿತ್ರ ಗಮನ ಸೆಳೆಯಲು ಇನ್ನೊಂದು ಕಾರಣ ಅಪಘಾತದ ಅನಂತರ ನಾಲ್ಕು ತಿಂಗಳು ಮಲಗಿ ಎದ್ದು ಈ ರೀತಿಯ walker ಉಪಯೋಗಿಸಿ ಪುನಹ ನಡೆಯಲು ಕಲಿತೆ. ಇದೊಂದು ಅಮೂಲ್ಯ ಪಾಠವನ್ನು ಕಲಿಸಿತು. ಮೂವತ್ತು ವರ್ಷ ನಡೆದವನಿಗೆ ನಾಲ್ಕು ತಿಂಗಳು ಮಲಗಿದರೂ ಪುನಹ ನಡೆಯಲು ದೇಹದ ಸಮತೋಲನ ಕಾಪಾಡಲು ಮರೆತುಹೋಗಿರಬಹುದು ಎಂದು ಮೊದಲು ಅನ್ನಿಸಿರಲಿಲ್ಲ. ಆದರೆ ನಡೆಯಲು ಇದು ಬಹಳ ಉಪಯುಕ್ತವೆನಿಸಿತು.

ನಡೆಯುವುದು ಮರೆತಂತೆ ಮಾತೃ ಬಾಷೆ ಬಗೆಗೊಂದು ಅನುಭವ. ಜರ್ಮನಿಯ ಹಾಂಬರ್ಗ್ ಪಟ್ಟಣ ದಾಟುವಾಗ ದಾರಿಯಲ್ಲಿ ಕಂಡ ಬಾರತದ ರಾಯಭಾರಿ ಕಛೇರಿಗೆ ಹೋಗಿದ್ದೆ - ಒಂದು ಬಾರತದ ಭೂಪಟ ಪಡಕೊಳ್ಳುವ ಉದ್ದೇಶವಿತ್ತು. ಹೊರಡುವಾಗ ನನ್ನಲ್ಲಿ ಭೂಪಟ ಇದ್ದರೂ ಎಲ್ಲಿಯೋ ಕಳಕೊಂಡಿದ್ದೆ. ನಿಮ್ಮೂರು ಎಲ್ಲಾಯಿತು ಎಂದವರಿಗೆ ಬೆರಳುಗಳ V ಆಕಾರದಲ್ಲಿ ತೋರಿಸಿ ಇದು ದಕ್ಷಿಣ ಬಾರತ. ಇದು ಪೂರ್ವ ಕರಾವಳಿಯಲ್ಲಿರುವ ಮದ್ರಾಸ್. ಇದು ಪಶ್ಚಿಮ ಕರಾವಳಿಯ ಮಂಗಳೂರು . ಅಲ್ಲಿಗೆ ಸಮೀಪ ನಮ್ಮೂರು ಎಂದು ಉತ್ತರಿಸುತ್ತಿದೆ.

ಆಗ ಹಾಂಬರ್ಗ್ ಪಟ್ಟಣದಲ್ಲಿ ನಮ್ಮೂರ ಪ್ರವಾಸಿಗಳು ವಿರಳ ಅಂತ ಕಾಣುತ್ತದೆ. ತುಂಬಾ ಅತ್ಮೀಯವಾಗಿ ಚಾ ಕೊಟ್ಟು ಉಪಚರಿಸಿದರು. ಅಲ್ಲಿ ನಮ್ಮ ಜಿಲ್ಲೆಯವರೇ ಆದ ಮೂಡಬಿದರೆಯವರು ಇಬ್ಬರು ಕೆಲಸಮಾಡುತ್ತಿದ್ದರು. ಅವರು ಸಂತೋಷ ಪಟ್ಟು ಕನ್ನಡ ಹಾಗೂ ತುಳುವಿನಲ್ಲಿ ಮಾತನಾಡಿದರು. ನಾನು ತಡವರಿಸಿದೆ. ತಿಂಗಳುಗಟ್ಟಲೆ ಇಂಗ್ಲೀಷ್ ಮಾತ್ರ ಉಪಯೋಗಿಸಿದ ಕಾರಣ ನನಗೆ ಪಕ್ಕನೆ ಕನ್ನಡದಲ್ಲಿ ತುಳುವಿನಲ್ಲಿ ಉತ್ತರಿಸಲು ಸಾದ್ಯವಾಗಲಿಲ್ಲ.

ತಿಂಗಳ ಅನಂತರ ನಾನು ಸಲೀಸಾಗಿ ನಡೆಯಲು ಪ್ರಾರಂಬಿಸಿದಾಗ ವಾಕರ್ ಅಟ್ಟ ಸೇರಿತು. ದಾರಾಳ ಸಂಪತ್ತು ಉಳ್ಳ ಸಂಬಂದಿಯೊಬ್ಬರು ಇದನ್ನು ಕೇಳಿ ಕೊಂಡು ಹೋದರು. ಅನಂತರ ಹಿಂತಿರುಗಿಸಲೇ ಇಲ್ಲ. ಹೆಚ್ಚಿನವರಿಗೆ ಇದರ ಉಪಯೋಗ ನನ್ನಂತೆ ತಾತ್ಕಾಲಿಕ. ಬೇರೆ ಪರಿಚಿತ ಬಡವರು ತಾತ್ಕಾಲಿಕವಾಗಿ ಉಪಯೋಗಿಸಲು ಕೇಳಿದಾಗ ನಾನು ಇಲ್ಲವೆನ್ನಬೇಕಾಯಿತು. ಎರವಲು ಪಡೆದವರು ಉಪಯೋಗಿಸಿದ ಅನಂತರ ಹಿಂತಿರುಗಿಸುವ ಸೌಜನ್ಯ ತೋರಿಸದೆ ಹೋದದ್ದು ಬಹಳ ಮನಸ್ಸಿಗೆ ನೋವಾಯಿತು.

Wednesday, September 23, 2009

ಪೋಕ್ರಾನ್ 2 ಟುಸ್ ಆದರೂ



ಈಗೊಂದು ವಾರದಿಂದ ದಿನವೂ ಪೋಕ್ರಾನ್ ಬಗೆಗೆ ಪತ್ರಿಕೆಗಳಲ್ಲಿ ಎರಡು ಸಾಲು ಮೀಸಲು. ಹತ್ತು ವರ್ಷ ಹಿಂದೆ ವಾಜಪೆಯಿ ಸಿಡಿಸಿದ ಅಣು ಪಟಾಕಿ ಯಶಸ್ವಿಯಾಗಿತ್ತೋ ಟುಸ್ ಎಂದಿತ್ತೋ ಎನ್ನುವುದು ನಮಗೆ ಎಂದೂ ತಿಳಿಯಲು ಸಾದ್ಯವಿಲ್ಲ. ರಾಷ್ಟ್ರೀಯ ಭದ್ರತೆ ನೆಪದಲ್ಲಿ ಎಲ್ಲವೂ ಗುಪ್ತ ಹಾಗೂ ತೆರೆಮರೆಯ ಆಟ. ಪೋಕ್ರಾನ್ ೨ ರಲ್ಲಿ ಸ್ಫೋಟಗೊಂಡ ಬಾಂಬು ಬರೇ ೨೫ ಕಿಲೋ ಟನ್ ಶಕ್ತಿ ಹೊರಹಾಕಿದೆ ಎನ್ನುತ್ತಾರೆ ಆಗ ಪಾಲ್ಗೊಂಡಿದ್ದ ವಿಜ್ನಾನಿ ಆರ್ ಸಂತಾನಂ. ಛೀ. ಛೀ ಅಲ್ಲವೇ ಅಲ್ಲ, ಅಲ್ಲಿ ೪೫ ಕಿಲೊ ಟನ್ ಶಕ್ತಿ ಉತ್ಪನ್ನವಾಗಿದೆ ಎಂದು ಸರಕಾರದ ಅಧಿಕೃತ ವಕ್ತಾರರ ಅಭಿಮತ. ನಮ್ಮ ಮಾಜಿ ರಾಷ್ಟ್ರಪತಿ ರಾಕೇಟು ವಿಜ್ನಾನಿ ಕಲಾಂ ಸಾಹೇಬರೂ ಪರೀಕ್ಷೆ ಯಶಸ್ವಿ ಎನ್ನುತ್ತಾರೆ. ಈಗ ಚರ್ಚೆಯಾಗುತ್ತಿರುವ ಕಾರಣ ಏನೆಂದರೆ ಇಪ್ಪತ್ತೈದು ಆದರೆ ಚೀನಾ ಪಾಕಿಸ್ತಾನವನ್ನು ಬೆದರಿಸಲು ಸಾಲದು. ನಲುವತ್ತೈದು ನಮ್ಮ ಘನಸ್ತಿಗೆಗೆ ಅಗತ್ಯ ಎನ್ನುತ್ತದೆ ಅಂದಿನ ಹಾಗೂ ಇಂದಿನ ಬಾರತ ಸರಕಾರ.

 ಅಮೇರಿಕ ಹಿರೋಶಿಮದ ಮೇಲೆ ಹಾಕಿದ ಒಂದು ಲಕ್ಷ ಜನರನ್ನು ಕೊಂದ ಬಾಂಬು ಬರೇ ಹದಿನೈದು ಕಿಲೋಟನ್ ಸ್ಪೋಟ ಉಂಟುಮಾಡಿದ್ದು. ನಾಗಸಾಕಿ ಮೇಲೆ ಹಾಕಿದ ಬಾಂಬು ಚೂರು ದೊಡ್ಡದು – ಇಪ್ಪತ್ತೊಂದು ಕಿಲೋ ಟನ್ ಸ್ಫೋಟ. ಆದರೆ ಏನು ಮಾಡುವುದು, ಅದು ಜನವಿರಳ ಊರಾದುದರಿಂದ ಬರೇ ಎಂಬತ್ತು ಸಾವಿರ ಜನ ಸತ್ತರು. ಹಾಕಿದಲ್ಲಿ ಜನ ಇರುತ್ತಿದ್ದರೆ ಹತ್ತು ಲಕ್ಷ ಜನರನ್ನೂ ಕೊಲ್ಲುವ ಸಾಮರ್ಥ್ಯ ಅದು ಹೊಂದಿತ್ತು. ನಮಗೀಗ ಐದು ಲಕ್ಷ ಜನವನ್ನಾದರೂ ಕೊಲ್ಲುವ ಬಾಂಬಿನ ಬಯಕೆ.

ಮೊನ್ನೆ  ನಮ್ಮ  ವಾಯು ದಳದ  ವಿಮಾನದಿಂದ  ಎಲ್ಲೋ ಉದುರಬೇಕಾಗಿದ್ದ ಬಾಂಬು ಎಲ್ಲೋ ಉದುರಿ ರಾಜಸ್ಥಾನದ ಲಕ್ಷಾಂತರ ಜನರಿಗೆ ನೀರುಣಿಸುವ ಇಂದಿರಾ ಗಾಂಧಿ ನಾಲೆ ಹಾನಿಯಾಗದೆ ಇರುವುದು ರಾಷ್ಟ್ರೀಯ ಪುಣ್ಯ ಎನ್ನಬಹುದು. ಸುಮಾರು ಇಪ್ಪತ್ತೈದು ಕಿಮಿ ದೂರದಲ್ಲಿ ಈ ಬಾಂಬಿನ ಗುರಿಯಾಗಿತ್ತು  ಅದುದರಿಂದ ಈ ಅಣು ಬಾಂಬು ಐದು ಲಕ್ಷ ಜನರನ್ನು ಕೊಲ್ಲುವ ಗುರಿ ಪೂರ್ತಿ ಗಡಿಯಾಚೆಯೋ ಅನ್ನುವುದು ಅನುಮಾನ. ಈ ವರ್ಷ ಗುರಿ ತಪ್ಪಿ ಬಾಂಬು ಉದುರುವುದು ಇದು ಮೂರನೇಯ ಬಾರಿ. ಅರು ತಿಂಗಳು ಹಿಂದೆ ಬಾಂಬು ಉದುರಿ ಬೆಳೆ ಕಳಕೊಂಡ ಮನೆಗೆ ಹಾನಿಯಾದ ರೈತರಿಗೆ ಇನ್ನೂ ಪರಿಹಾರ ವಿತರಣೆಯಾಗಿಲ್ಲ.
ಮೇರಾ ಭಾರತ್ ಮಹಾನ್



 ಶುಕ್ರವಾರ ೨೫ ಸೆಪ್ಟಂಬರ್ -ಬಾಲಂಗೋಚಿ

ಪೋಖ್ರಾನ್ ಸ್ಫೋಟದ ಬಗೆಗೆ ಇಂದಿನ ಪತ್ರಿಕೆಯಲ್ಲಿ ಅನಿಲ್ ಕಾಕೋಡ್ಕರ್ ನಾಗಸಾಕಿ ಅಣು ಬಾಂಬಿನ ಒಂಬತ್ತು ಪಾಲು ಶಕ್ತಿಯುತವಾದ ಬಾಂಬು ತಯಾರಿಸಲು ನಮಗೆ ತಾಕತ್ ಇದೆಯೆಂದು ಸ್ಪಷ್ಟ ಪಡಿಸಿದ್ದಾರೆ. ಈ ಬಗೆಗೆ ಯಾರಿಗೂ ಅನುಮಾನ ಬೇಡ.  

ನಾನು ಅಪಘಾತವಾಗಿ ಆಸ್ಪತ್ರೆಯಲ್ಲಿ ಮಲಗಿದ್ದ ದಿನಗಳಲ್ಲಿ ಅಮೇರಿಕದಲ್ಲಿ ವಾಸ್ತವ್ಯ ಇರುವ ಸಂಬಂದಿಕರು ಬಂದಿದ್ದರು. ಅಂದಿನ ಅದ್ಯಕ್ಷ ಬುಷ್ ಬಾರತದ ಬಗೆಗೆ ಕೆಣಕುವ ಮಾತುಗಳಾಡುತ್ತಿದ್ದ ಕಾಲ. ನನ್ನ ಅರೈಕೆ ನೋಡಿಕೊಳ್ಳುತ್ತಿದ್ದ ಸದಾ ತಮಾಷೆ ಮಾತುಗಳನ್ನು ಆಡುತ್ತಿದ್ದ ಡಾ| ತುಳಸಿದಾಸಣ್ಣ ಅಗ ಹೇಳಿದ್ದರು – ನಾವು ಜತೆಯಾಗಿ ಬಾಂಬು ಹಾಕಿದರೆ ನಿಮ್ಮ ಬುಷ್ ಸಹಾ ಓಡಿಹೋದಾನು. ಈ ಬಗೆಗೆ ಅನುಮಾನ ಬೇಡ.

Thursday, September 17, 2009

ತಮಿಳುನಾಡಿನಲ್ಲಿ ಕೃಷಿ ಸಲಹೆ ಕೊಟ್ಟರೆ “ದಂಡ”

ತಮಿಳುನಾಡು ಶಾಸಕರ ಆಲೋಚನೆ ಪ್ರಕಾರ ರೈತರಿಗೆ ಕೃಷಿ ಬಗೆಗೆ ತಿಳುವಳಿಕೆ ಸೊನ್ನೆ. ಅದುದರಿಂದ ಒಂದು ರೈತ ವಿರೋಧಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಈ ಗಂಬೀರ ಪರಿಣಾಮದ ಮಸೂದೆಗೆ ಶಾಸಕರೆನ್ನುವ ಕುರಿಗಳು ಯಾವುದೇ ಚರ್ಚೆ ಇಲ್ಲದೆ ಕೈ ಎತ್ತಿಯೇ ಬಿಟ್ಟಿದ್ದಾರೆ. ಸುಳಿವು ಕೊಟ್ಟ ಸೆಲ್ವಂ ಎಂಬ ಮಾಜಿ ಸರಕಾರಿ ಅದಿಕಾರಿ ಹಾಲಿ ಸಾವಯುವ ಕೃಷಿಕ ಇದರ ಬಗೆಗೆ ಚೆನ್ನಾಗಿ ವಿವರಿಸಿದ್ದಾರೆ. Thanks Selvam.  

ಈ ಕಾನೂನು ಪ್ರಕಾರ ಕೃಷಿ ಸಲಹೆ ಕೊಡಲು ಹಕ್ಕು ಇರುವುದು ತಮಿಳುನಾಡಿನಲ್ಲಿ ಕೃಷಿ ಅಬ್ಯಾಸ ಮಾಡಿದವರಿಗೆ ಸಿಮಿತ. ಮೊನ್ನೆ ತೀರಿಹೋದ ಹಸಿರು ಕ್ರಾಂತಿ ಪಿತಾಮಹ ನೋರ್ಮನ್ ಬರ್ಲಾಗ್ ಅವರಿಗೆ ಸಹಾ ತಮಿಳು ರೈತರಿಗೆ ಸಲಹೆ ಕೊಡುವ ಯೋಗ್ಯತೆ ಇಲ್ಲ. ಉಳಿದವರು ಕೃಷಿ ಬಗೆಗೆ ಸಲಹೆ ಕೊಟ್ಟರೆ ಮೊದಲ ಬಾರಿ ಐದು ಸಾವಿರ ರೂಪಾಯಿ ಹಾಗೂ ಎರಡನೆಯ ಬಾರಿ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲ್ಪಡುತ್ತದೆ. ಮೂರನೆಯ ಬಾರಿ ಸಲಹೆ ಕೊಟ್ಟರೆ ಆರು ತಿಂಗಳು ಗೂಡು ವಾಸ ವಿಧಿಸುವರಂತೆ.

ನಮ್ಮ ಪರಂಪರೆಯ ಕೃಷಿ ಜ್ನಾನ ಹೆಚ್ಚೆಚ್ಚು ನಿರ್ಲಕ್ಷಿತವಾಗುವುದು ಸಮಾಜಕ್ಕೆ ಗಂಬೀರ ಅಪಾಯ. ತಮಿಳುನಾಡಿನ ಶಾಸನ ಕೃಷಿ ಪಾರಂಪರಿಕ ಜ್ನಾನ ಸಂಪೂರ್ಣ ನಿರ್ಲಕ್ಷಿಸುತ್ತದೆ. ತರಗತಿಯಲ್ಲಿಯೇ ಪ್ರಥಮ ಬಾರಿ ಬತ್ತದ ತೆನೆ ಕಂಡವ ಕೂಡ ರೈತ ಮಕ್ಕಳಿಂದ ಮೇಲು.

ಬಳಕೆದಾರರ ವೇದಿಕೆಯ ಡಾ ರವೀಂದ್ರನಾಥ ಐತಾಳರು ತಮ್ಮ ಉದಯವಾಣಿ ಅಂಕಣದಲ್ಲಿ ಅದುನಿಕ ವಿಜ್ನಾನ ಅಥವಾ ವೈದ್ಯ ವಿಜ್ನಾನ ಎಲ್ಲಿ ತಪ್ಪಿ ಬೀಳುವುದೆಂದು ಒಂದು ಕೂತೂಹಲಕರ ಉದಾಹರಣೆ ಕೊಟ್ಟಿದ್ದಾರೆ. ಇದು ಕೃಷಿಗೂ ಅನ್ವಯ. ಮಣ್ಣು ಇರುವುದು ಗಿಡ ಹಿಡಿದುಕೊಳ್ಳಲು ಮಾತ್ರ. ಒಳಸುರಿಗಳನ್ನೆಲ್ಲ ನಾವು ಹಾಕಿ ಬೆಳೆಸುತ್ತೇವೆ ಎಂದು ಬಹುಕಾಲ ರಸಾಯನಿಕ ಕೃಷಿಯ ದೋರಣೆಯಾಗಿತ್ತು.


ಶಿರಸಿಯ ಡಾ| ವೆಂಕಟ್ರಮಣ ಹೆಗಡೆಯವರು ತಾವು ಐದು ವರ್ಷ ಕೃಷಿ ವಿಚಾರ ಕಲಿತು ಪದವಿ ಪಡೆದದ್ದು. ನಮಗೆ ಡಾಕ್ಟರ್ ಕರೆದುಕೊಳ್ಳುವ ಹಕ್ಕುಂಟು ಹಾಗೂ ಮನುಷ್ಯರಿಗೆ ಚಿಕಿತ್ಸೆ ಕೊಡುವವರು ಕೆಂಪು ಚಿಹ್ನೆ ಮತ್ತು ಪಶು ವೈದ್ಯರು ನೀಲಿ ಚಿಹ್ನೆ ಬಳಸುವಂತೆ ನಾವು ಹಸುರು ಚಿಹ್ನೆ ಬಳಸುತ್ತೇವೆ ಎಂದು ಬಹಳ ಹಿಂದೆಯೇ ಹೇಳಿದ್ದಾರೆ. ಹಾಗೆ ತಮಿಳುನಾಡಿನ ಕಾನೂನು ಇವರನ್ನು ವೃತ್ತಿ ನಿರತ ಕೃಷಿ ತಜ್ನನೆಂದು ಗುರುತಿಸುತ್ತದೆ.

ಹೊಸತಾಗಿ ಮನೆಗೆ ಬಂದ ಸೊಸೆ ಎಲ್ಲರೂ ನನಗೆ ಹೊಂದಿಕೊಂಡರೆ ಗೃಹಶಾಂತಿ ಖಚಿತ ಎಂದಂತೆ ನಾವು ನಮ್ಮ ಕೃಷಿಯನ್ನು ಬಾಹ್ಯ ಒಳಸುರಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಿದ್ದೇವೆ. ಎಲ್ಲ ಆರೋಗ್ಯ ಸಮಸ್ಯೆಗಳಿಗೂ antibiotics ಮದ್ದು ಎಂಬಂತೆ ಸ್ಥಳೀಯ ಪರೀಸ್ಥಿತಿಯನ್ನು ಪಾರಂಪಾರಿಕ ಪದ್ದತಿಗಳನ್ನು ನಿರ್ಲಕ್ಷಿಸುತ್ತಿದ್ದೇವೆ.

ಪ್ರತಿಬಾರಿಯೂ ಬಿತ್ತನೆ ಬೀಜ ಮಾರುಕಟ್ಟೆಯಿಂದ ಖರೀದಿಸಬೇಕು. ಮುಂದಿನ ಬೆಳೆಗೆ ಕಾಪಾಡಬಾರದು ಎನ್ನುವ ಬೀಜ ಮಾರಾಟ ಕಂಪೆನಿ ರಕ್ಷಕ ಕಾನೂನಿನಂತೆಯೇ ಈ ಕಾನೂನು ಸಹಾ ರೈತರ ಹಿತಾಸಕ್ತಿಗೆ ಮಾರಕ. ಏಕೆಂದರೆ ಇಂದು ಸರಕಾರಿ ಅಧಿಕಾರಿಗಳ ವಿಜ್ನಾನಿಗಳ ನಿಷ್ಟೆ ಇರುವುದು ಒಳಸುರಿ ತಯಾರಿಸುವ ಬಹುರಾಷ್ಟ್ರೀಯ ಕಂಪೇನಿಗಳಿಗೆ. ಈ ಬೆಳವಣಿಕೆಯನ್ನು ಊಹಿಸುವಾಗ ರೈತರ ಭವಿಷ್ಯದ ಬಗೆಗೆ ಭಯ ಉಂಟಾಗುತ್ತದೆ.

Monday, September 14, 2009

ವಂಚಕರು ವಂಚಕರೇ ತ್ಯಾಗಿಗಳಲ್ಲ.

ಸಮಾಜಕ್ಕೆ ಮೋಸ ಮಾಡಿದ ವಂಚಕರು ವಂಚಕರೇ. ಪತ್ರಿಕೆ ಓದುವಾಗ ಅಂದದ ಮುಖದ ಹಿಂದಿರುವ ವಂಚನೆ ಕಥೆ ನೆನಪಾಯಿತು. ಯಾವುದಾದರು ದುಷ್ಟ ವ್ಯಕ್ತಿಯನ್ನು ಹೊಗಳಿದರೆ ತಪ್ಪಾಗಿ ಚಿತ್ರಿಸಿದರೆ ಬೇಸರವಾಗುತ್ತದೆ. ಪ್ರಜಾವಾಣಿಯಲ್ಲಿ ಮುಂದಿರುವ ವಾಕ್ಯಗಳನ್ನು ಕಂಡು ಹಾಗೆಯೇ ಆಯಿತು.


 ಪಾಕಿಸ್ತಾನದಲ್ಲಿ ಸಕ್ಕರೆ ಕೊರತೆ ಹೆಚ್ಚುತ್ತಿರುವಂತೆ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ತಮ್ಮ ಮನೆಯಲ್ಲಿ ಸಿಹಿ ತಿನಿಸುಗಳನ್ನು ತಯಾರಿಸದಂತೆ ಸ್ವಯಂ ನಿಷೇಧ ಹೇರಿಕೊಂಡಿದ್ದಾರೆ. ಪತ್ನಿ ಫೌಜಿಯಾ ಗಿಲಾನಿ ಅವರ ಮನವಿ ಮೇರೆಗೆ ಪ್ರಧಾನಿ ತಮ್ಮ ಮನೆಯ ಅಡುಗೆಭಟ್ಟರಿಗೆ ಸಿಹಿ ತಿನಿಸು ತಯಾರಿಸದಂತೆ ಆದೇಶಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಪ್ರಧಾನಿ ಸಿಬ್ಬಂದಿಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಸಕ್ಕರೆ ಬಿಕ್ಕಟ್ಟು ಪರಿಹಾರವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಎನ್ನುವ ವರದಿ ಪ್ರಜಾವಾಣಿ ಪ್ರಕಟಿಸಿತು.  

ಪ್ರದಾನಿಯ ಪತ್ನಿ ಫೌಜಿಯಾ ಗಿಲಾನಿ ಹಿಂದೆ ತಮ್ಮ ಕಂಪೇನಿಗಳಿಗೆ ಬಹು ದೊಡ್ಡ ಸಾಲವನ್ನು ಪಡೆದು ಚಿಕ್ಕಾಸು ಹಿಂತಿರುಗಿಸದೆ ಕಳೆದ ವಾರವಷ್ಟೇ ಸಾಲ ಮುನ್ನಾ ಮಾಡಿಸಿಕೊಂಡವರು. ನ್ಯಾಯಾಲಯಕ್ಕೆ ಹಾಜರಾಗದ ಅವರಿಗೆ ಇದಕ್ಕಾಗಿ ಅವರ ಅನುಪಸ್ಥಿತಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲ್ಪಟ್ಟಿತ್ತು. ಆದರೆ ಮಾದ್ಯಮಗಳಿಗೆ ಇವರು ದೇಶಕ್ಕೆ ಮಾದರಿಯಾಗಲು ಸಿಹಿತಿಂಡಿ ವರ್ಜಿಸಿದವರು ಎನ್ನುವುದೇ ಸುದ್ದಿಯಾಗುತ್ತದೆ.  



ಶ್ರೀಸಾಮಾನ್ಯನ ಮಟ್ಟಿಗೆ ಪಾಕಿಸ್ಥಾನದಲ್ಲಿ ಇಂದು ಸಕ್ಕರೆ ಕನ್ನಡಿಯೊಳಗಿನ ಗಂಟಾಗಿದೆ ಎನ್ನುವುದಕ್ಕೆ ಅಲ್ಲಿನ ಪತ್ರಿಕೆಯ ಇಲ್ಲಿರುವ ಎರಡು ಚಿತ್ರಗಳು ಸಾಕ್ಷಿ. ಸಕ್ಕರೆ ಉದ್ಯಮ ಸರಕಾರವನ್ನು ತನ್ನ ಹಿಡಿತದಲ್ಲಿರಿಸಿಕೊಂಡು ಪರೀಸ್ಥಿತಿಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದೆಯಂತೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕ್ರಯ ಏರಿದರೂ ಇಳಿದರು ಅದನ್ನು ಚೆನ್ನಾಗಿ ಬಳಸಿಕೊಳ್ಳುವ ಈ ವರ್ಗ ಜನರನ್ನು ಚೆನ್ನಾಗಿ ಹಿಂಡುತ್ತವೆ.

ಉಚ್ಚ ನ್ಯಾಯಾಲಯ ಸಕ್ಕರೆ ಬಿಡುಗಡೆ ಮಾಡಲು ಆದೇಶಿಸಿದರೂ ಕ್ಯಾರೆ ಮಾಡದ ಗೋದಾಮುಗಳ ಮೇಲೆ ದಾಳಿ ಅನಿವಾರ್ಯವಾಗಿದೆ. ಹಬ್ಬದ ಕಾಲದಲ್ಲಿ ಸಕ್ಕರೆ ದುಬಾರಿ ಎಂದು ಜನರೆಲ್ಲ ಪರಿತಪಿಸುತ್ತಿದ್ದರೆ ಸರಕಾರದ ವಿಚಾರಣೆ ಮುಗಿಯಲು ಹತ್ತು ದಿನ ಬೇಕಂತೆ. ಅಷ್ಟರಲ್ಲಿ ಹಬ್ಬ ಮುಗಿದುಹೋಗಿರುತ್ತದೆ.  

ಪಾಕಿಸ್ಥಾನದಲ್ಲಿ ರಾಜಕೀಯ ತೂಕ ಉಳ್ಳವರು ಬಾಂಕ್ ಸಾಲ ಹಿಂದಿರುಗಿಸುವುದು ಅಪರೂಪ. ಠೇವಣಿಗಳಿಗೆ ಸೇಕಡಾ ಐದು ಬಡ್ಡಿ ಕೊಡುವ ಪಾಕಿಸ್ತಾನಿ ಬಾಂಕುಗಳು ಸಾಲಗಳಿಗೆ ಹತ್ತೊಂಬತ್ತರ ಬಡ್ಡಿ ವಿಧಿಸುತ್ತದೆ. ನಮ್ಮಲ್ಲಿ ಬಾಂಕುಗಳು ನಿರ್ವಹಿಸಲು ಸಾಲಗಳ ಮತ್ತು ಠೇವಣಿಗಳ ಮದ್ಯೆ ಬಡ್ಡಿಯಲ್ಲಿ ಶೇಕಡ ನಾಲ್ಕು ಐದು ವ್ಯತ್ಯಾಸ ಇರುವುದು ಸಾಮಾನ್ಯ. ಇಸ್ಲಾಂ ಬಡ್ಡಿ ವ್ಯವಹಾರ ನಿಷೇಧಿಸುತ್ತದೆ ಎನ್ನುತ್ತಾ ನಮ್ಮಲಿನ ಮೂರು ಪಾಲು ಬಡ್ಡಿ ವ್ಯತ್ಯಾಸದಲ್ಲಿ ಪಾಕಿಸ್ತಾನಿ ಬಾಂಕುಗಳು ನಿರ್ವಹಿಸುತ್ತವೆಯಂತೆ. ಅಪಾರ ಲಾಭವು ಈ ರಾಜಕೀಯ ಪುಡಾರಿಗಳ ಸಾಲ ಸರಿದೂಗಿಸಲು ಸಹಾಯ ಮಾಡುತ್ತದೆ.  

ಇಂದೀಗ ಪಾಕಿಸ್ತಾನದಲ್ಲಿ ಆ ತಾಲಿಬಾನರಿಗಿಂತ ಈ ರಾಜಕಾರಣಿ, ವರ್ತಕ, ಉದ್ಯಮಿಗಳಂತಹ ಆಂತರಿಕ ದಗಾಕೋರರೇ ಹೆಚ್ಚು ಅಪಾಯವೋ ಅನ್ನುವ ಸಂಶಯ ಬರುತ್ತಿದೆಯಂತೆ. ನಮ್ಮಲ್ಲೂ ದೇಶದ, ಸಮಾಜದ ಮಟ್ಟಿಗೆ ಇದು ನಿಜ ಅನಿಸುತ್ತದೆ. ಕೆಲವು ಹೆಸರುಗಳ ಬದಲಾಯಿಸಿದರೆ ಗಡಿಯಾಚೆಗಿನ ಈ ಕಥೆಗಳು ಕರ್ನಾಟಕಕ್ಕೆ ಬಾರತಕ್ಕೆ ಚೆನ್ನಾಗಿ ಅನ್ವಯಿಸುತ್ತದೆ. ಅದುದರಿಂದ ಇದನ್ನು ಬರೆಯುವ ಆಸಕ್ತಿ ಉಂಟಾಯಿತು.

Thursday, September 10, 2009

ಹಲಾಲ್ ಹುಡುಕು ತಾಣದ ಸೇವೆ ಆರಂಬ

ತಿಂಗಳ ಹಿಂದೆ ಯಹೂದಿಯರ ಹುಡುಕು ತಾಣ ಕೋಗಲ್ ಬಗೆಗೆ ಬರೆಯುವಾಗ ಮುಸ್ಲೀಮರ ಹುಡುಕು ತಾಣ ಸದ್ಯದಲ್ಲಿಯೆ ಕಾಣಿಸಿಕೊಳ್ಳಬಹುದೆನ್ನುವ ಸೂಚನೆ ಕೊಟ್ಟಿದ್ದೆ.ಅದು ಈಗ ನಿಜವಾಗಿದೆ. http://www.imhalal.com/ ಎನ್ನುವ ತಾಣ ಸೇವೆ ಪ್ರಾರಂಬಿಸಿದೆ.


ಬಂಟ್ವಾಳ ಕಾಲೇಜಿನಲ್ಲಿ ಬುರ್ಕಾ ಹಾಕಿ ಅನಾವಶ್ಯಕ ಗೊಂದಲ ಎಬ್ಬಿಸಿ ಕೊನೆಗೆ ಉಳ್ಳಾಲ ಕಾಲೇಜು ಸೇರಿದ ವಿದ್ಯಾರ್ಥಿನಿ ಅಯೇಶಾಳಂತವರಿಗೆ ಇದು ತುಂಬಾ ಅನುಕೂಲ. ದರ್ಮಸೂಕ್ಷ್ಮ ವಿಚಾರಗಳ ವಿಮರ್ಶೆಗೆ ಸಹಾಯಮಾಡಬಹುದು. ಹುಡುಕಾಟವನ್ನು ಸುಲಭಗೊಳಿಸುವುದು ಮಾತ್ರವಲ್ಲ ಇದರಲ್ಲಿ ಹಲಾಲ್ / ಹರಾಮ್ ಮೀಟರ್ ಅಳವಡಿಸಿದ್ದಾರೆ. ಅದುದರಿಂದ ಸಂಶಯ ಇದ್ದರೆ ಹುಡುಕಾಟದ ವಿಚಾರ ಎಷ್ಟರ ಮಟ್ಟಿಗೆ ಹರಾಮ್ ಎನ್ನುವುದು ಸೂಚನೆ ಸಿಗುತ್ತದೆ.

ಹರಾಮ್ ಪಟ್ಟಿಯಲ್ಲಿ ಮೂರು ವರ್ಗಗಳು.

ಹಲಾಲ್ : fascism, nigger, molester, murder and torture, kiss - ಸಂಪೂರ್ಣ ದರ್ಮಸಮ್ಮತವಾದದ್ದು .

ಹರಾಮ್ ವರ್ಗ ಒಂದು : Suicide bombings love, kissing and Nazi
ಅತ್ಮಹತ್ಯಾ ಬಾಂಬು ದಾಳಿ ಹರಾಮ್ ಪಟ್ಟಿಯಲ್ಲಿ ಸೇರುವುದು ಚರ್ಚಾಸ್ಪದ. ಇದು ನಿಜಕ್ಕೂ ಹಲಾಲ್ ಅಂದುಕೊಂಡಿದ್ದೆ.

ಹರಾಮ್ ವರ್ಗ ಎರಡು : Sex

ಹರಾಮ್ ವರ್ಗ ಮೂರು : Fornication , gay, lesbian and sexy - ಕೆಂಪು ಅಕ್ಷರ ಎಚ್ಚರಿಕೆಯೊಂದಿಗೆ ಬೇರೆ ಶಬ್ದಗಳ ಉಪಯೋಗಿಸಲು ಸೂಚನೆ. ಈ ವಿಭಾಗದಲ್ಲಿ ಹೆಚ್ಚು ಕಾರುಬಾರು ನಡೆಸಿದರೆ ನಮ್ಮ ಐಪಿ ವಿಳಾಸ ಪೋಲಿಸರಿಗೆ ರವಾನೆಯಾಗುವುದೋ ಗೊತ್ತಿಲ್ಲ

ತಮಾಷೆ ಇರೋದೆಂದರೆ Kiss ನಿಂದ kissing ಮತ್ತು sex ನಿಂದ sexy ಹೆಚ್ಚು ಹರಾಮ್ ಆಗುವುದು. ಪ್ರಾರ್ಥನೆ ಸಮಯದಲ್ಲಿ ಪ್ರಾಯುಷ: ಇದರಲ್ಲಿ ಸೇವೆ ನಿರಾಕರಣೆ ಇದ್ದರೂ ಇರಬಹುದು.





ಎಲ್ಲದರಲ್ಲೂ ಕೋಮು ವಾಸನೆ ಮೂಗಿಗೆ ಹೊಡೆಯುವ ಕಾಂಗ್ರೀಸು ಜಾಂಡೀಸು ಪಕ್ಷಗಳಿಗೂ ಇದು ಅನುಕೂಲ. ಚಿಕ್ಕ ಪುಟ್ಟ ವಿಚಾರಗಳಿಗೆ ಮಂಗನ ಬಾಲಕ್ಕೆ ಬೆಂಕಿ ಇಟ್ಟಂತೆ ವರ್ತಿಸುವ ಅವರಿಗೆ ಇಸ್ಲಾಂ ದರ್ಮ ಅರ್ಥೈಸಲು ಸಹಾಯವಾಗಬಹುದು.

ಇನ್ನು ನಮ್ಮ ಬಜರಂಗಿಗಳು ಸುಮ್ಮನಿರುವುದಾದರು ಹೇಗೆ ? ಹಿಂದೂ ರಾಷ್ಟ್ರಕ್ಕೆ ಅನುಗುಣವಾಗಿ ಒಂದು ಜಾಲ ಸ್ಥಾಪಿಸುತ್ತಿದ್ದರು. ಎಂದು ನಾನು ಬರೆದ ವಿಚಾರ ಸತ್ಯವಾಗುವ ದಿನ ಸದ್ಯದಲ್ಲಿಯೇ ಬರಬಹುದು. ಹಿಂದೂ ಹುಡುಕು ತಾಣ ಹಿಂಗಲ್ ದೇಶಕ್ಕೆ ಅರ್ಪಣೆಯಾಗುವ ಮತ್ತು . ಅದರಲ್ಲಿ ಇಂತಹ ನಿರ್ಬಂದಗಳು ಕಾಣಿಸಿಕೊಳ್ಳುವ ಸಾದ್ಯತೆಗಳಿವೆ.

Tuesday, September 08, 2009

ಇಫ್ತರ್ ರಾಜಕೀಯ ಹಿಂದೆ ಇಂದಿರಾ ಗಾಂಧಿ

ಈಗ ಇಪ್ತರ್ ಕೂಟಗಳ season ಪ್ರಾರಂಬವಾಗಿದೆ. ರಾಜಕೀಯದಲ್ಲಿ ತೂಕ ಇರುವವರೆಲ್ಲ ಇಪ್ತರ್ ಕೂಟ ಏರ್ಪಡಿಸುವವರೇ. ಯಾರ ಇಫ್ತರ್ ಪಾರ್ಟಿಯಲ್ಲಿ ಯಾರು ಯಾರು ಪಾಲ್ಗೊಂಡರು ಎನ್ನುವುದು ರಾಜಕೀಯ ಸಮತೋಲನ ದಿಕ್ಸೂಚಿ. ಅದುದರಿಂದ ಮಾದ್ಯಮ ಪ್ರಚಾರದ ಬೆಂಬಲವೂ ಇರುತ್ತದೆ. ಈ ಇಫ್ತರ್ ಕೂಟಗಳ ವಿಶೇಷ ಏನೆಂದರೆ ನಿಜಕ್ಕೂ ಹಸಿದವನಿಗೆ ಅಲ್ಲಿ ಪ್ರವೇಶವಿಲ್ಲ.  ಈ ರಾಜಕೀಯ ದೊಂಬರಾಟದ ಪ್ರಯೋಜನ ಅರಿತು ಇದರ ಲೋಕಪ್ರಿಯವಾಗಿ ಅಮೇರಿಕದಲ್ಲಿ ಪುಟ್ಟ ಜಾರ್ಜ್ ಬುಶ್ ಸಹಾ ಇಫ್ತರ್ ಪಾರ್ಟಿ ಏರ್ಪಡಿಸಿದ್ದರು. ಈ ವರ್ಷ ಬರಾಕ್ ಒಬಾಮ ಬುಶ್ ಮೇಲ್ಪಂಕ್ತಿ ಅನುಸರಿಸಿದ್ದಾರೆ.

ದಾರ್ಮಿಕ ನಾಯಕರ ಪ್ರಕಾರ ಉಪವಾಸ ಕೊನೆಗೊಳ್ಳುವುದು ವೈಯುಕ್ತಿಕವಾಗಿ ಸರಳವಾಗಿರಬೇಕು. ಇಲ್ಲಿ ನೂರಾರು ಜನ ಪಾಲ್ಗೊಂಡು ಅಡಂಬರದ ಪ್ರದರ್ಶನ ಜನಜಾತ್ರೆ ನಡೆಯುತ್ತದೆ. ಇದನ್ನು ಹಲವು ಮುಸ್ಲಿಂ ಪಂಡಿತರು ವಿರೋದಿಸುತ್ತಾರೆ. ದೆಹಲಿಯ ಶಾಹಿ ಇಮಾಂ ಹಲವು ವರ್ಷಗಳಿಂದ ಇದನ್ನು ಪ್ರತಿಭಟಿಸುತ್ತಲೇ ಇದ್ದಾರೆ. ಇವರ ಮಾತಿಗೆ ಯೋಗ್ಯ ಬೆಲೆ ದೊರಕುತ್ತಿದ್ದರೆ ಇಂದು ಇತರ ದರ್ಮದ ಜನರು ಮಾತ್ರ ಇಫ್ತರ್ ಪಾರ್ಟಿಯಲ್ಲಿ ಸೇರಲು ಸಾದ್ಯ.

ಇದರ ಮೂಲದ ಬಗೆಗೆ ಎರಡು ವದಂತಿಗಳಿವೆ. ಅವರ  ಪಾಲ್ಗೊಳ್ಳುವಿಕೆ ಮೊದಲ ಕೂಟದಲ್ಲೋ ಎರಡನೆಯದರಲ್ಲಿಯೋ ಅಸ್ಪಷ್ಟ. ಅಂತೂ ಸಂಪ್ರದಾಯ ಬೆಳವಣಿಕೆಯಲ್ಲಿ ಇಂದಿರಾ ಗಾಂಧಿ ಪ್ರದಾನ ಪಾತ್ರ ವಹಿಸುತ್ತಾರೆ.

ಇಂದಿರಾ ಗಾಂಧಿ ಒಬ್ಬ ಕೇಂದ್ರ ಸರಕಾರದ ಹಿರಿಯ ಮುಸ್ಲೀಮ್ ಅಧಿಕಾರಿಯನ್ನು ಬೇಟಿ ಮಾಡಲು ಇಚ್ಚಿಸಿದರು. ಸಂದೇಶ ಕಳುಹಿಸಲು ಸಹಾಯಕರಿಗೆ ಹೇಳಿದರು. ಆಗ ಆ ಸಹಾಯಕ ಅದು ಉಪವಾಸ ಕೊನೆಗೊಳ್ಳುವ ಸಮಯವಾದುದರಿಂದ ಅವರು ಬರಲಿಕ್ಕಿಲ್ಲ ಎಂದಾಗ ಅವರಿಗೆ ಇಲ್ಲಿಯೇ ಉಪವಾಸ ಕೊನೆಗೊಳಿಸಲು ವ್ಯವಸ್ಥೆ ಮಾಡಿ ಎಂದು ಹೇಳಿದರು.

ಎರಡನೆಯದು ಅಂದಿನ ಸಚಿವ ಗುಜ್ರಾಲ್ ಶಫಿ ಕುರೇಶಿ ಎನ್ನುವ ರೈಲು ಮಂತ್ರಿಯನ್ನು ಮಾತುಕತೆಗೆ ಅಹ್ವಾನಿಸಿದರು. ಕುರೇಶಿ ಬರೋದಿಲ್ಲ ಎನ್ನುವಾಗ ನಮ್ಮಲ್ಲಿಯೇ ಇಫ್ತರಿಗೆ ವ್ಯವಸ್ತೆ ಮಾಡುತ್ತೇನೆ ಮಾರಾಯ, ಬಾ ಎಂದ ಗುಜ್ರಾಲ್ ಮರುದಿನ ಇದನ್ನು ಇಂದಿರಾ ಕಿವಿಗೆ ಹಾಕಿದರು.


ಎರಡು ವರ್ಷ ಹಿಂದೆ ಡಾಕ್ಟರ್ ಯೆಡಿಯೂರಪ್ಪನ ಸರಕಾರಕ್ಕೆ ಬೆಂಬಲ ಹಿಂತೆಗೆದು ಕೊಂಡ ನಿದ್ದೇವೆ ಗೌಡ ಬೆಂಗಳೂರಿನಲ್ಲಿ ಇಫ್ತರ್ ಕೂಟ ಏರ್ಪಡಿಸಿದ್ದರು. ಗುಟ್ಟಾಗಿ ಎರಡೂ ಪಕ್ಷಗಳ ಸಂಪರ್ಕದಲ್ಲಿದ್ದು ಮುಂದಿನ ಹೆಜ್ಜೆ ಚಿಂತನೆಯಲ್ಲಿದ್ದರು. ಕೇಂದ್ರ ಸರಕಾರ ವಿಧಾನ ಸಭೆಯನ್ನು ವಿಸರ್ಜಿಸಿದ ಸುದ್ದಿ ಸಂಚಾರವಾಣಿಯಲ್ಲಿ ಕೇಳಿ ಕಳಾಹೀನರಾಗಿ ನೇರವಾಗಿ ಕಾರಿನಲ್ಲಿ ಬಂದು ಕುಳಿತು ನಡೆಯಪ್ಪ ಎಂದು ಸಾರಥಿಗೆ ಆದೇಶಿಸಿದರು.


ಬಾಗಿನ: ದುರ್ಬಳಕೆ ನಿಲ್ಲಲಿ ಎಂದು ಪ್ರಜಾವಾಣಿ ಓದುಗರೊಬ್ಬರು ನಿನ್ನೆ ಹೇಳಿದಂತೆ ಇಫ್ತರ್ ಸಂಪ್ರದಾಯ ಮುಸ್ಲೀಮರಿಗೆ ಸಿಮಿತವಾಗಲಿ ಎಂದು ಸಂಪ್ರದಾಯವಾದಿ ಮುಸ್ಲೀಮರು ಹೇಳುತ್ತಾರೆ. ಆದರೆ ಸದಾ ಸ್ವಾರ್ಥ ಸಾದನೆ ಚಿಂತಿಸುವ ರಾಜಕಾರಣಿಗಳು ಸುಮ್ಮನಿರುವುದು ಹೇಗೆ ?

Saturday, September 05, 2009

ಹಣಕಾಸಿನ ತುಲನಾತ್ಮಕ ಹೋಲಿಕೆ

ನಾವು ಬೇರೆ ಊರಿನ ಬಗೆಗೆ ಮಾತನಾಡುವಾಗ ಅಲ್ಲಿನ ಜನರ ಜೀವನ, ಹವಾಮಾನ ಇತ್ಯಾದಿ ವಿಚಾರಿಸುತ್ತೇವೆ. ತುಲನಾತ್ಮಕ ಹೋಲಿಕೆ ವಾಪಾಸ್ ಬಂದಾಗ ನನ್ನಲ್ಲಿ ಹಲವರು ಕೇಳಿದ ಸಾಮಾನ್ಯ ವಿಚಾರ. ಎಲ್ಲವೂ ಬಿನ್ನವಾಗಿರುವ ಕಾರಣ ಹೋಲಿಕೆ ಕಷ್ಟಸಾದ್ಯ. ಇದಕ್ಕೊಂದು ಪರಿಹಾರವಾಗಿ ಹಣಕಾಸು ಪತ್ರಿಕೆಯೊಂದು ಪ್ರತಿವರ್ಷ ಬರ್ಗರ್ ಸೂಚ್ಯಾಂಕ ಪ್ರಕಟಿಸುತ್ತದೆ.

ಮಕ್ಡೊನಾಲ್ಡ್ ಹೋಟೆಲ್ ಹೆಚ್ಚಿನ ದೇಶಗಳಲ್ಲಿ ಮಾರುವುದು ಒಂದೇ ಪ್ರಮುಖ ಮಾಲು. ಹಾಮ್ ಬರ್ಗರ್ ಹೆಸರಿನ ಚಪ್ಪಟೆಯಾದ ದನದಮಾಂಸದ ತುಂಡು ಇಟ್ಟಿರುವ ಕತ್ತರಿಸಿದ ಬನ್. ಜತೆಯಲ್ಲಿ ಚೂರು ಸೊಪ್ಪು ತರಕಾರಿ, ಈರುಳ್ಳಿ ತುಂಡು ಇತ್ಯಾದಿ ಹಾಕಿದ ೫೪೦ ಕಾಲರಿಯ ಪಾಕ. ಆದರೆ ಬೇರೆ ಬೇರೆ ದೇಶಗಳಲ್ಲಿ ದರಪಟ್ಟಿಯಲ್ಲಿ ಮಾತ್ರ ಬಹಳಷ್ಟು ವ್ಯತ್ಯಾಸ. ದನದ ಮಾಂಸಕ್ಕೆ ನಮ್ಮಲ್ಲಿ ನಿರ್ಬಂದ ಇರುವ ಕಾರಣ ಬಾರತ ಈ ಪಟ್ಟಿಯಲ್ಲಿ ಗೋಚರಿಸುವುದಿಲ್ಲ.

ಕೆಲವು ದೇಶದಲ್ಲಿ ದುಬಾರಿ, ಕೆಲವರಲ್ಲಿ ಅಗ್ಗವಾಗಿ ಆ ದೇಶದ ಹಣದ ಮೌಲ್ಯವನ್ನು ಈ ಸೂಚ್ಯಾಂಕ ಬೊಟ್ಟು ಮಾಡಿ ತೋರಿಸುತ್ತದೆ. ಅಲ್ಲಿನವರ ಜೀವನಮಟ್ಟ, ಅಲ್ಲಿಗೆ ಹೋದರೆ ಪ್ರವಾಸಿಗಾಗುವ ಖರ್ಚು ಇತ್ಯಾದಿಗಳ ಸೂಚನೆ ಕೂಡುತ್ತದೆ. ಅಮೇರಿಕದಲ್ಲಿ 3.57 ಡಾಲರಿಗೆ ಸಿಗುವ ಬರ್ಗರ್ ಚೀನಾದಲ್ಲಿ ಬರೇ 1.82 ಡಾಲರಿಗೆ ಲಬಿಸುತ್ತದೆ. ಅದೇ ಬರ್ಗರಿಗೆ ನಾರ್ವೆ ದೇಶದಲ್ಲಾದರೆ 6.1 ಡಾಲರ್ ಸ್ವೇಡನಿನಲ್ಲಿ 4.93 ಡಾಲರ್ ಕೊಡ ಬೇಕು. ನಾರ್ವೆ ಸ್ವೇಡನ್ ದುಬಾರಿ ಎನ್ನುವುದು ಸ್ಪಷ್ಟ ವಿಚಾರ.

ನಮ್ಮ  ಸಂಬಂದಿಕರು   ಹೋಗಿದ್ದರು ಅಮೇರಿಕಕ್ಕೆ, ಮಗಳ ಹೆರಿಗೆಗೆ. ವಾಪಾಸು ಬರುವಾಗ ಅಜ್ಜನ ತಲೆತುಂಬಾ ಕೂದಲು. ವಾಪಾಸ್ ಹೋದ ನಂತರ ಬಾರತದಲ್ಲಿಯೇ ಕಟಾವ್ ಮಾಡಿಸಿ ಎಂದು ಮಗಳು ಅಳಿಯ ಹೇಳಿದರೂಂತ ಕಾಣುತ್ತದೆ. ಇದು ನೆನಪಾಗಲು ಕಾರಣ ಮೊನ್ನೆ ಹೋಲಿಕೆಯ ಬಗೆಗೆ ಹುಡುಕಾಟದಲ್ಲಿ ಒಂದು ಉತ್ತಮ ಉದಾಹರಣೆ ಸಿಕ್ಕಿತು. ಅದನ್ನೇ ಇಲ್ಲಿ ಅಂಟಿಸುತ್ತಿದ್ದೇನೆ. ಅಮೇರಿಕದಲ್ಲಿ ಕ್ಷೌರಿಕನ ಶುಲ್ಕ ದುಬಾರಿ ಎಂದು ಅಲ್ಲಿನವರೇ   ಹೇಳಿಕೊಳ್ಳುತ್ತಿದ್ದಾರೆ. 

After all, haircuts can't be exported, and this is almost a direct measure of purely labor costs. In the USA, I pay ~$18 for a haircut, inclusive of tips and taxes. In India, on a vacation, I paid Rs.33.75 for a haircut, which is $0.68. Using this exchange, labor is 26.6666 times cheaper in India. 

ಸೈಕಲ್ ಪ್ರವಾಸದಲ್ಲಿರುವಾಗ ನಾನೊಮ್ಮೆ ಅಮೇರಿಕದಲ್ಲಿ ಕತ್ತರಿಗೆ ತಲೆಯೊಡ್ಡಿದ್ದೆ. ಅಲ್ಲಿನ ಹಳ್ಳಿಗಳಲ್ಲಿರುವ ಹೆಂಗಸರು ಮನೆಯಲ್ಲಿರುವ ಗಂಡ ಹಾಗೂ ಮಕ್ಕಳ ತಲೆಗೂದಲು ಕತ್ತರಿಸುವುದು ಸಾಮಾನ್ಯ. ಗಂಡ ಎರಿಕ್ ನ ತಲೆಗೂದಲು ನಾನು ಕತ್ತರಿಸೋದು, ಬೇಕಾದರೆ ನಿನ್ನ ತಲೆಗೂದಲು ಕತ್ತರಿಸುತ್ತೇನೆ ಎಂದು ಅತಿಥ್ಯ ಕೊಟ್ಟ ಎರಿಕ್- ಆನ್ ಅವರಲ್ಲಿ ಆತ್ಮೀಯರಾದ ಮನೆಯೊಡತಿ ಆನ್ ಹೇಳಿದಾಗ ನಾನು ಮರುಮಾತಿಲ್ಲದೆ ಒಪ್ಪಿದೆ. ಅಂದು ನನಗೆ ಹತ್ತು ಡಾಲರ್ ಉಳಿಯಿತು. ಮೂರು ತಿಂಗಳ ಬೆಳೆದಿದ್ದ ತಲೆಗೂದಲು ಕಟಾವ್ ಅಯ್ತು.

Thursday, September 03, 2009

ನೂರು ದಿನದಲ್ಲಿ ಹವಾಮಾನ ಸಮಾವೇಶ

ಹಿಮಾಲಯ ಪರ್ವತಗಳ ಮೇಲೆ ಅಪಾರ ಪ್ರಮಾಣದಲ್ಲಿ ಹಿಮಬೀಳುತ್ತದೆ. ಬೇಸಿಗೆಯಲ್ಲಿ ಆ ಹಿಮ ಕರಗಿ ನೀರಾಗಿ ಈ ಪರಿಸರದಲ್ಲಿ ಜನ್ಮ ತಾಳುವ ಏಳು ಬೃಹತ್ ನದಿಗಳಲ್ಲಿ ಹರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೂಮಿ ಉಷ್ಣಾಂಶದಿಂದಾಗಿ ಬೀಳುವ ಹಿಮ ರೂಪಿಸುವ ನೀರ್ಗಲ್ಲು ಗಣನೀಯವಾಗಿ ಕಡಿಮೆಯಾಗುತ್ತಿದ್ದು ಈ ನದಿಗಳ ದಡದಲ್ಲಿರುವ ೧.೩ ಬಿಲಿಯ ಜನರು ಸದ್ಯದಲ್ಲಿಯೇ ನೀರಿನ ಕೊರತೆ ಅನುಭವಿಸುವಂತಾಗಿದೆ.


ನೂರು ದಿನಗಳಲ್ಲಿ ಸ್ವೇಡನ್ ದೇಶದ ಕಾಪೆನ್ ಹಾಗನ್ ಪಟ್ಟಣದಲ್ಲಿ ಜಗತ್ತಿನ ರಾಜಕೀಯ ಮುಖಂಡರು ಸಭೆ ಸೇರಲಿದ್ದಾರೆ. ಇದರನ್ನು ಗಮನಸೇಳೆಯುವ ಅಂಗವಾಗಿ ಚೀನಾದ ಬೀಜಿಂಗಿನಲ್ಲಿರುವ ಭೂಮಿ ದೇವಾಲಯದಲ್ಲಿ ನೂರು ಮಂಜುಗಡ್ಡೆಯ ಮಕ್ಕಳ ವಿಗ್ರಹಗಳನ್ನು ನಿರ್ಮಿಸಲಾಗಿತ್ತು. ಭವಿಷ್ಯದ ಗಂಬೀರತೆಯನ್ನು ಸೂಚಿಸಲು ಕರಗುವ ಕರಗುತ್ತಿರುವ ವಿಗ್ರಹಗಳೇ ಸಾಕ್ಷಿ ಎನ್ನುವಂತಿತ್ತು.

ಈ ಸಭೆಯಲ್ಲಿ ಪ್ರಪಂಚದ ಮುಖ್ಯ ದೇಶಗಳು ಈ ಸನ್ನಿವೇಶವನ್ನು ಎದುರಿಸುವ ಬಗೆಗೆ ಗಂಬೀರ ಚರ್ಚೆ ನಡೆಸಲಿವೆ. ಭಾರತ ಮತ್ತು ಚೀನ ಈ ಸಮಾವೇಶದಲ್ಲಿ ಮುಖ್ಯ ಪಾತ್ರ ವಹಿಸಲಿದ್ದು ಅಮೇರಿಕ ಹಾಗೂ ಯುರೋಪಿಯನ್ ದೇಶಗಳೊಂದಿಗೆ ತಮ್ಮ ಪಾಲಿನ ನಿರ್ವಹಣೆ ಚರ್ಚಿಸಲಿವೆ. ಇದು ಪರೋಕ್ಷವಾಗಿ ಪ್ರಪಂಚದ ಆರು ಬಿಲಿಯ ಜನರ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ.



ಪುಟ್ಟ ಮಗು ಕೊಡೆ ಹಿಡಿಯುವ ಮೂಲಕ ತನ್ನ ಪ್ರಯತ್ನ ಮಾಡುವುದೋ ? ಈ ಜಾಗತಿಕ ಆಂದೋಲನದಲ್ಲಿ ನೀವು ಸಹಾ ಕೈ ಜೋಡಿಸಬಹುದು. Greenpeace ತಾಣದಲ್ಲಿ ಸಹಿ ಹಾಕಬಹುದು. ರಾಜಕೀಯ ಮುಖಂಡರಿಗೆ ಒತ್ತಡ ಹಾಕಲು ಸಮಯ ಸಿಮಿತವಾಗಿದೆ. ತ್ವರೆ ಮಾಡಿ.

ಮೊನ್ನೆ ಯಾರೋ ಒಬ್ಬರು ಭೂಮಿಯ ಉಷ್ಣಾಂಶ ಹೆಚ್ಚುವುದಕ್ಕೆ ಪುರಾವೆಗಳಿಲ್ಲ. ಎಲ್ಲವೂ ಪರಿಸರವಾದಿಗಳ ವಿಜ್ನಾನಿಗಳು ಮಾಡುತ್ತಿರುವ ಅಂಕಿ ಸಂಖ್ಯೆಗಳ ದೊಂಬರಾಟ ಎಂದರು.  ಅವರಿಗೆ ಅರ್ಥಮಾಡಿಸಲು  ಈ ಚಿತ್ರ ತೋರಿಸಬೇಕಾಯಿತು.

Thursday, August 27, 2009

ಬಹುರಾಷ್ಟ್ರೀಯ ಎಂಡೊಸಲ್ಫಾನ್ ತಯಾರಕರನ್ನು ಸೋಲಿಸಿದ ಹಳೆಯ ಕಾಚ ಚಳುವಳಿ

ಇಂದಿನ ಉದಯವಾಣಿಯಲ್ಲಿ ಡಾ| ಸಿ ನಿತ್ಯಾನಂದ ಪೈ ಅವರು ಎಂಡೊಸಲ್ಫಾನ್ ನಿಷೇದಕ್ಕೆ ಬಾರತದ ಪ್ರತಿರೋಧವೇಕೆ ? ಎನ್ನುವ ವಿವರವಾದ ಬರಹ ಬರೆದಿದ್ದಾರೆ.

ಈ ಕೀಟನಾಶಕದ    ನಿಷೇದಕ್ಕೆ ಅಂತರಾಷ್ಟ್ರೀಯ ಪ್ರಯತ್ನಗಳಾಗುತ್ತಿದ್ದು ಬಾರತದಲ್ಲಿ ಖಾಸಗಿ ವಲಯ ಮಾತ್ರವಲ್ಲ ಸರಕಾರಿ ಕಾರ್ಖಾನೆಯಲ್ಲೂ ತಯಾರಾಗುವ ಎಂಡೊಸಲ್ಫಾನ್ ಅಳಿವಿಗೆ ನಮ್ಮ ಸರಕಾರ ಪ್ರಬಲ ವಿರೋಧ ವ್ಯಕ್ತ ಪಡಿಸುತ್ತದೆ. ಇಲ್ಲಿ ಪ್ರಜೆಗಳ ಆರೋಗ್ಯದ ಬದಲು ಸರಕಾರದ ನಿಲುವಿನಲ್ಲಿ ವ್ಯಾಪಾರಿ ಹಿತಾಸಕ್ತಿಯೇ ಮೇಲುಗೈ ಸಾಧಿಸುತ್ತದೆ. ಬಾರತ  ಸರಕಾರದ  ನಿಲುವಿನ    ಬಗೆಗೆ ನ್ಯುಜೀಲಾಂಡಿನ ಚಳುವಳಿಗಾರ್ತಿ Dr. Meriel Watts ಸ್ಪಷ್ಟವಾಗಿ   ಹೇಳುತ್ತಾರೆ. This is a clear conflict of interest, a manufacturer is using its power to veto international agreements on a chemical."

ಡಾ ನಿತ್ಯಾನಂದ ಪೈ ಅವರು ಕೊನೆಯಲ್ಲಿ ಈ ಲೇಖನ ಅಚ್ಚಿಗೆ ಹೋಗುವ ಮುನ್ನ ತಿಳಿದು ಬಂದಂತೆ ವಿಶ್ವದಲ್ಲಿಯೇ ಅತ್ಯದಿಕ ಪ್ರಮಾಣದ ಎಂಡೊಸಲ್ಫಾನ್  ತಯಾರಿಸುತ್ತಿರುವ ಬಾಯರ್ ಸಂಸ್ಥೆ ೨೦೧೦ ರಿಂದ ಇದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಬರೆದಿದ್ದಾರೆ. ತೀರ್ಮಾನದ ಹಿಂದಿನ ಗುಟ್ಟು ಕುತೂಹಲದಾಯಕವಾಗಿರುವ ಕಾರಣ ನಾನು ಇದನ್ನು ಹಂಚಿಕೊಳ್ಳಲು ತೀರ್ಮಾನಿಸಿದೆ.

ಹತ್ತಿ ಬೆಳೆಯುವಾಗ ವ್ಯಾಪಕವಾಗಿ ಎಂಡೊಸಲ್ಫಾನ್ ಉಪಯೋಗಿಸುತ್ತಾರೆ. ಇದನ್ನು ವಿರೋಧಿಸುವ ಸಂಸ್ಥೆಗಳು ನವೀನ ಪ್ರತಿಭಟನೆ ರೂಪಿಸಿದವು. ಅದರ ಅಂಗವಾಗಿ ೧೬ ದೇಶಗಳಲ್ಲಿ ಹಳೆಯ ಉಪಯೋಗಿಸಿದ ಮಾಮೂಲಿ ಕಾಚ ಹಿಂತಿರುಗಿಸಿದ ಜನರಿಗೆ ಸಾವಯುವ ಹತ್ತಿಯಿಂದ ತಯಾರಿಸಿದ ಕಾಚವನ್ನು ಉಚಿತವಾಗಿ ಹಂಚಲಾಯಿತು. ಹೀಗೆ ರಾಶಿ ಬಿದ್ದ ಹಳೆಯ ಕಾಚಗಳನ್ನು ಜರ್ಮನಿಯಲ್ಲಿರುವ ಪ್ರಪಂಚದ ಅತಿ ದೊಡ್ಡ ಎಂಡೊಸಲ್ಫಾನ್ ತಯಾರಕ ಬಾಯರ್ ಕಂಪೇನಿಗೆ ರವಾನಿಸಲಾಯಿತು. ಇಲ್ಲಿ ಅಣಕವೆಂದರೆ ಭಾರತದಲ್ಲಿ   ಬೆಳೆದ   ಸಾವಯುವ ಹತ್ತಿ ಈ ಆಂದೋಲನದಲ್ಲಿ ಗಮನಾರ್ಹ ಪಾತ್ರ ವಹಿಸಿದೆ. ಬದಲಿ ಕೊಟ್ಟ ಕಾಚಗಳು  ತಯಾರಾದುದು ಬಾರತದಲ್ಲಿ ಬೆಳೆದ ಸಾವಯುವ ಹತ್ತಿಯಿಂದ. ಆದರೆ ಬಾರತ ಸರಕಾರ ಮಾತ್ರ ಈ ಆಂದೋಲನದ ವಿರುದ್ದ ಕೆಲಸ ಮಾಡುತ್ತಿದೆ.

ಹಳೆಯ ಕಾಚಗಳ ಪರ್ವತ ಕಂಡು ಬೆದರಿದ ಬಯಾರ್ ಸಂಸ್ಥೆ ಬರುವ ವರ್ಷ ಈ ಕೀಟನಾಶಕ  ತಯಾರಿಕೆ  ಸಂಪೂರ್ಣ ನಿಲ್ಲಿಸಿಲು ಒಪ್ಪಿಕೊಂಡಿತು.

ನಮ್ಮಲ್ಲಿ  ಇಂತಹ    ಎಂಡೊಸಲ್ಫಾನ್  ನಿಷೇದಕ್ಕೆ ಆಂದೋಲನ  ನಡೆಯುವುದಾದರೆ   ಹಳೆಯ ಚಡ್ಡಿ ಕಾಚ ಕಳುಹಿಸಲು ಯೋಗ್ಯ ವಿಳಾಸ,


ಬಾರತ  ಸರಕಾರದ  ಸರ್ವ ತೀರ್ಮಾನಗಳೂ ಕೈಗೊಳ್ಳುವಂತಹ
ದೆಹಲಿ ಸಿಂಹಾಸನದ ಹಿಂದಿನ ಶಕ್ತಿ -
೧೦ ಜನಪತ್ .