Monday, October 17, 2011

ನಾಲ್ಕು ಸದಾಸಂ ಮಾರಾಟವಾಯಿತು


ನಾನು ತರಿಸಿದ ಐದು ಸದಾಸಂಗಳಲ್ಲಿ ನಾಲ್ಕು ಇತ್ತೀಚೆಗೆ ಮಾರಾಟವಾದವು. ಇವು ನಾಲ್ಕು, ನಾಲ್ಕು ವರ್ಷಗಳ ಕಾಲ ನನ್ನ ಮನೆಯ ಕೋಣೆಯೊಂದರಲ್ಲಿ ಇದ್ದು ಈಗ ಒಮ್ಮೆಗೆ ಎಂಬಂತೆ ಮಾರಾಟವಾದವು. ಎರಡು ಗಿರಾಕಿಗಳೂ ಇಲ್ಲಿಗೆ ಬಂದು ಗುಣಮಟ್ಟ ಹಾಗೂ ಬೆಲೆ ಬಗೆಗೆ ತೃಪ್ತರಾಗಿ ಕೊಂಡುಹೋದದ್ದು ಈ ಬಗೆಗೆ ಮುಖ್ಯ ವಿವರಗಳ ಇಲ್ಲಿ ದಾಖಲಿಸುತ್ತಿದ್ದೇನೆ.

ದೇಹ ಸಹಕರಿಸದ ಕಾರಣ ಮಳೆಗಾಲ ನಾಲ್ಕು ತಿಂಗಳು ತೋಟಕ್ಕೆ ಹೋಗುವುದನ್ನೇ ನಿಲ್ಲಿಸಿದ್ದೆ. ಹಲವು ಬಾರಿ ಜಾರಿ ಬಿದ್ದೆ. ಹೋದಾಗಲೂ ಗಮನವೆಲ್ಲ ಅಡಿಕೆ ಮರ, ಕೊಳೆರೋಗದ ಬಾಧೆ, ಕಳೆ ಇತ್ಯಾದಿಗಳ ಬದಲಿಗೆ ನನ್ನ ಸದಾ ಬಾದಿಸುತ್ತಿರುವ ನೋವಿನ ಕಡೆಗೆ ಇರುತಿತ್ತು. ಪ್ರತಿಯೊಂದು ತೋಟದ ನಿರ್ವಹಣೆಯಲ್ಲೂ ಸಣ್ಣ ಪುಟ್ಟ ವ್ಯತ್ಯಾಸಗಳು. ಹಳೆಯ ಕೆಲಸಗಾರರೆಲ್ಲ ಬರುವುದ ನಿಲ್ಲಿಸಿದ ಕಾರಣ ನನ್ನ ತೋಟದ ಬಗೆಗೆ ಅನುಬವವಿಲ್ಲದ ಹೊಸಬರ ಅಬಿಪ್ರಾಯವನ್ನೇ ಅವಲಂಬಿಸುವಂತಾಯಿತು. ಆದರೆ ಕೃಷಿ ಕಾರ್ಮಿಕರದೊಂದು ಸಮಸ್ಯೆ. ಅವರು ತಲೆಯನ್ನು ಮನೆಯಲ್ಲಿಯೇ ಬಿಟ್ಟು ಬರುತ್ತಾರೆ.

ತೋಟವನ್ನು ಸುದಾರಿಸುವುದು ನನ್ನ ಕರ್ತವ್ಯ ಜೀವನೋಪಾಯ. ದೇಹ ಸೋತ ಐವತ್ತು ಸಮಿಪಿಸುತ್ತಿರುವ ನನಗೆ ಹೊಸ ಉದ್ಯೋಗ ಕಷ್ಟಸಾದ್ಯ. ನನ್ನ ಕುಟುಂಬ ಹಾಗೂ ಕೆಲಸಗಾರರಿಗಾಗಿ ಬೆಳೆ ರೂಡಿ ಮಾಡಿ ಮಾರುವುದು ಮತ್ತು ನಿರ್ವಹಿಸುವುಸುದು ನಾನು ಅವಶ್ಯ ಕರ್ತವ್ಯ ಎಂದು ಬಾವಿಸುತ್ತಿದ್ದೆ. ಕ್ರಮೇಣ ಕೆಲಸಗಾರರೂ ಕುಟುಂಬದವರೂ ಬೆನ್ನ ಹಿಂದಿರುವುದು ನನ್ನ ಭ್ರಮೆ ಅನಿಸಹತ್ತಿ ಅಗಿದುಗಿಯುವ ಅಡಿಕೆಯ ತೋಟದ ಬಗೆಗೆ ಆಸಕ್ತಿ ಕಳಕೊಂಡೆ.

ನಾಲ್ಕು ವರ್ಷಗಳ ಹಿಂದೆ ನನಗೆ ಚೀನಾದಿಂದ ಸದಾಸಂ ತರಿಸುವ ಅಲೋಚನೆ ಬಂತು. ದಶಕದ ಹಿಂದೆ ಅಡಿಕೆಪತ್ರಿಕೆಯಲ್ಲಿ ಸದಾಸಂ ಬಗೆಗೊಂದು ನುಡಿಚಿತ್ರವಿತ್ತು. ಸುತ್ತುಮುತ್ತು ವಿಚಾರಿಸಲು ಬೆಂಗಳೂರಿನಲ್ಲಿದ್ದ ಮಾರಾಟಗಾರರೊಬ್ಬರು ವಿಪರೀತ ದುಬಾರಿ ಬೆಲೆ ಹೇಳುತ್ತಿದ್ದುದರಿಂದ ನೇರವಾಗಿ ತರಿಸುವ ಆಲೋಚನೆ ಮಾಡಿದೆ. ಮೇಲ್ನೋಟಕ್ಕೆ ಅವರ ಮಾರಾಟ ನಂತರದ ಸೇವೆ ಸೊನ್ನೆ ಅನಿಸುತಿತ್ತು.

ಹೀಗೆ ಪರ್ಯಾಯಗಳ ಚಿಂತಿಸಹತ್ತಿದೆ. ಸ್ಪೈನ್ ದೇಶದ ಒಂದು ತಯಾರಕರೊಂದಿಗೆ ಪತ್ರವ್ಯವಹಾರ ನಡೆಯಿತು. ಅಗತ್ಯ ಬಿದ್ದರೆ ಹೋಗಿ ತರುವುದೆಂದು ನಿರ್ದರಿಸಿ ಅದಕ್ಕೂ ತಯಾರಿ ನಡೆಸಿದ್ದೆ. ಕೊನೆಗೆ ಅವರು ನಮ್ಮಲ್ಲಿ ನೇರಮಾರಾಟ ಇಲ್ಲ, ವ್ಯಾಪಾರಿಗಳಿಗೆ ಮಾತ್ರ ಎಂದು ಹೇಳಬೇಕೆ ?

ಮೊದಲೇ ಚೀನಾ ಕಂಪೇನಿಯೊಂದಿಗೆ ಸಂಪರ್ಕಿಸಿದ್ದೆ. ಹೆಚ್ಚು ಕಮ್ಮಿ ಅದೇ ಅಕಾರ ಆದರೆ ಸ್ವಲ್ಪ ಅಗ್ಗದ ಮಾಲು. ಹಲವಾರು ಪತ್ರಗಳ ವಿನಿಮಯವಾಯಿತು. ಎಲ್ಲವೂ ಸಮರ್ಪಕ ಅನಿಸಿದ ನಂತರ ಹಣ ಕಳುಹಿಸಲು ತಯಾರಾದೆ. ಹೀಗೆ ಎಲ್ಲವೂ ನಿರ್ದಾರವಾದ ನಂತರ ನಾವು ಕಳುಹಿಸುವುದು ಒಂದು ಪೆಟ್ಟಿಗೆ ಅಂದರೆ ಒಮ್ಮೆಗೆ ಮೂವತ್ತ ಮೂರು ಸದಾಸಂ. ಸಾಂಪಲ್ ಅಂದರೆ ಐದು ಆದರೆ ಅದಕ್ಕೆ ಮೂವತ್ತು ಡಾಲರ್ ಹೆಚ್ಚು ಕೊಡಬೇಕು ಎಂದರು. ಹೀಗಾಗಿ ಒಂದು ಉಪಯೋಗಕ್ಕೆ ಹಾಗೂ ಎರಡನೆಯದು ಬಿಡಿಬಾಗಕ್ಕೆ ಹೀಗೆ ಎರಡು ತರಿಸುವ ಆಸಕ್ತಿ ಇದ್ದ ನಾನು ಅನಿವಾರ್ಯವಾಗಿ ಐದು ತರಿಸಬೇಕಾಯಿತು.

ಐದರಲ್ಲಿ ನಾಲ್ಕನ್ನು ಒಳಗಿರಿಸಿ ಒಂದನ್ನು ಮಾತ್ರ ಉಪಯೋಗಿಸುತ್ತಿದ್ದೆ. ಅಗತ್ಯಕ್ಕೆ ಅವುಗಳಲ್ಲಿ ಒಂದರ ಚಕ್ರ, ಬಿಡಿ ಬಾಗಗಳ ಕಳಚಿದ್ದುಂಟು. ಮಳೆಗಾಲದಲ್ಲಿ ಸಿಂಪರಣೆ ನೋಡಿಕೊಳ್ಳಲು ಮತ್ತು ಬೇಸಿಗೆಯಲ್ಲಿ ನೀರಾವರಿ ಬಗೆಗಿನ ಓಡಾಟಕ್ಕೆ ಬಹಳ ಉಪಯುಕ್ತವಾಗಿತ್ತು. ಹಲವು ಬಾರಿ ಸಮುದ್ರತೀರಕ್ಕೆ ಒಮ್ನಿಯಲ್ಲಿ ಹಾಕಿ ಕೊಂಡುಹೋಗಿದ್ದೆವು. ಒಮ್ಮೆ ಪಣಂಬೂರಿನಿಂದ ಮಲ್ಪೆ ವರೆಗೆ ಮರಳಿನ ಮೇಲೆ ಓಡಿಸಿದ್ದೆವು.

ಸದಾಸಂ ಉಪಯೋಗಕ್ಕೆ ನಮಗಿರುವ ಅವಕಾಶಗಳು ಹೆಚ್ಚಿಲ್ಲ. ಸುತ್ತುಮುತ್ತಲಿನ ಎಲ್ಲ ರಸ್ತೆಗಳೂ ಜಲ್ಲಿ ಡಾಂಬರು ಹಾಸಿರುವುದರಿಂದ ಇದರ ಉಪಯೋಗಕ್ಕೆ ಯೋಗ್ಯವಲ್ಲ. ಹಾಗೆ ಕೆಲವು ಕಚ್ಚಾ ಮಣ್ಣ ರಸ್ತೆಗಳಿದ್ದರೂ ಅವರು ಅರಣ್ಯ ಇಲಾಖೆಯ ಮರ್ಜಿಯಲ್ಲಿವೆ. ಘಾಟಿ ರಸ್ತೆಗಳ ಬಗೆಗೆ ವಿಚಾರಿಸಿದರೂ ಅನುಕೂಲಕರ ಉತ್ತರ ಎಲ್ಲಿಂದಲೂ ಬಂದಿರಲಿಲ್ಲ. ಹಾಗೆ ನನ್ನ ಜಮೀನಿನ ಹೊರಗೆ ಎಂದರೆ ಸಮುದ್ರತೀರದಲ್ಲಿ ಮಾತ್ರ ಉಪಯೋಗಿಸಲು ಸಾದ್ಯವಾಯಿತು.

ಸರಕು ಸಾಗಾಣಿಕೆಗೆ ಆರು ಸಾವಿರ ಖರ್ಚಿನಲ್ಲಿ ಒಂದು ಹಿಂಬಾಲಕ ಗಾಡಿ ಮಾಡಿಸಿದರೂ ಅದು ಸದುಪಯೋಗವಾಗಲಿಲ್ಲ. ಹೆಚ್ಚು ಸಾಮಾನು ಹಾಕಲು ಇದರ ತೂಕ ಸಾಲುತ್ತಿರಲಿಲ್ಲ. ಸಾಮಾನು ಎತ್ತಿ ಹಾಕಲು ನಾನು ದುರ್ಬಲನಾಗಿ ವಿಫಲ. ಕೆಲಸದವರಿಗೆ ನಾನು ಎದುರಿಲ್ಲದಿದ್ದರೆ ಉತ್ತಮ ಎನಿಸಿ ನೀವು ಹೋಗಿ ನಾವು ಹೊತ್ತು ತರುತ್ತೇವೆ ಅನ್ನುತ್ತಿದ್ದರು.

ನಮ್ಮ ತೊಟದ ಬದಿಯ ತೋಡು ನಲ್ವತ್ತು ಕಿಮಿ ದೂರ ಸುತ್ತು ಬಳಸಿ ಕೊನೆಗೆ ಸಮುದ್ರ ಸೇರುವುದು ಕಾಸರಗೋಡು ತಾಲೂಕಿನ ಉಪ್ಪಳದಲ್ಲಿ. ಒಮ್ಮೆ ಎರಡು ಸದಾಸಂ ಬಳಸಿ ಸಾಗಲು ಎಲ್ಲ ಸಿದ್ದತೆ ನಡೆಸಿದ್ದೆ. ಬೆಂಬಲ ವಾಹನಕ್ಕೆ ಪಕ್ಕದ ಮನೆಯ ಅಪತ್ಬಾಂದವ ಅನಿಲ್ ಕುಮಾರರ ಸಹಕಾರ ಕೋರಿದೆ. ಇದಕ್ಕೆ ಅವಕಾಶದ ಕಿಂಡಿ ಇರುವುದು ಮಳೆ ಬರುವ ಮುನ್ನ ತೋಡು, ಹೊಳೆಯಲ್ಲಿ ಕಟ್ಟ ತೆಗೆದ ನಂತರದ ಒಂದು ವಾರ ಅಂದರೆ ಮೆ ತಿಂಗಳ ಕೊನೆಯಲ್ಲಿ ಮಾತ್ರ. ನನ್ನ ಉತ್ಸಾಹ ಮಕ್ಕಳಲ್ಲಿ ಇರದ ಕಾರಣ ನಿರೀಕ್ಷಿತ ಸಹಾಯ ದೊರಕಲಿಲ್ಲ. ತಯಾರಿ ವ್ಯರ್ಥವಾಯಿತು. ಪ್ರವಾಸ ಕನಸಿನಲ್ಲಿಯೇ ಉಳಿಯಿತು.

ಸದಾಸಂಗಳ ಮಾರಲು ತಯಾರಿದ್ದರೂ ತೀರಾ ಉತ್ಸುಕನೂ ಆಗಿರಲಿಲ್ಲ. ಅದು ಬಳಸುವ ಪೆಟ್ರೊಲ್ ಉಪಯೋಗ ಕನಿಷ್ಟಗೊಳಿಸಲು ಮನಸಾಕ್ಷಿ ಒತ್ತಡ ಹಾಕುತಿತ್ತು. ಒಮ್ಮೊಮ್ಮೆ ಉಳಿದ ನಾಲ್ಕರ ಗುಜರಿಗೆ ಹಾಕೋಣವೆನಿಸಿದ್ದೂ ಇದೆ. ಆದರೆ ಎರಡು ಕಾರಣಗಳಿಗೆ ಉಳಿಸಿದೆ. ಮೊದಲನೆಯದಾಗಿ ನಾನು ಅಷ್ಟೊಂದು ಆರ್ಥಿಕವಾಗಿ ಸಬಲನಲ್ಲ. ಎರಡನೆಯದು ಅದು ಅದರ ಸೇವಾವದಿಯ ಇಂದನ ಬಳಕೆ ಮತ್ತು ಪರೀಸರ ಮಲೀನತೆ ಲೆಕ್ಕಹಾಕಿದರೆ ಸುಮಾರು ಮೂರನೇಯ ಒಂದು ತಯಾರಿಯಲ್ಲಿಯೇ ಖರ್ಚಾಗಿರುತ್ತದೆ. ಅದುದರಿಂದ ನೈತಿಕವಾಗಿಯೂ ಒಂದು ಉಪಯೋಗವಾಗಬಹುದಾದ ವಸ್ತು ಗುಜರಿಗೆ ಹಾಕುವುದು ಸಮಂಜಸ ಎನಿಸಲಿಲ್ಲ.

ಲೆಕ್ಕಾಚಾರದಲ್ಲಿ ಅಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ಒಂದಕ್ಕೆ ೧೧೦ ಸಾವಿರ ಅಂತಿದ್ದರು. ನಾನು ಐದಕ್ಕೆ ಸುಮಾರು ೧೭೦ ಖರ್ಚು ಮಾಡಿದ್ದೇನೆ. ಅಂದರೆ ಒಂದಕ್ಕೆ ಸುಮಾರು ಮೂವತ್ತನಾಲ್ಕು. ಈಗ ನನಗೆ ಸಿಕ್ಕಿದ್ದು ಸರಾಸರಿ ನಲವತ್ತು.

ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ನನ್ನದಕ್ಕೆ ಎಪ್ಪತ್ತು ಸಾವಿರ ಅಂದೇ ತೆಗೆದಿರಿಸಿದ್ದರೆ ಉಳಿದ ನಾಲ್ಕರ ಆಂದಿನ ಅಸಲು ಒಂದು ಲಕ್ಷವೆಂದು ಪರಿಗಣಿಸಿದರೆ ನನಗೆ ಈಗ ಸಿಕ್ಕಿದ ೧೬೦ ಅನ್ನುವಾಗ ಬಡ್ಡಿ ಒಂದಂಶ ದೊರಕಿತು ಅನ್ನಬಹುದು. ಸರಿಯಾಗಿ ನಾಲ್ಕು ವರ್ಷ ಸಮಯ. ಅಂತೂ ಒಂದು ಲೆಕ್ಕಾಚಾರ ಮುಕ್ತಾಯ.

ನನಗಿವು ನನ್ನಂತೆ ಅಂಗವಿಕಲತೆ ಬಾದಿಸುವ ಅಥವಾ ಕೃಷಿಕರಿಗೆ ಉಪಯೋಗವಾಗಬೇಕೆನ್ನುವ ಆಸೆ ಇತ್ತು. ಆದರೆ ನಾಲ್ಕು ವರ್ಷ ಅಂದರೆ ಸಾವಿರದ ಐನೂರು ದಿನ ಯಾರೂ ಪೈಕಿ ಅನಿಸಿಕೊಳ್ಳುವವರು ಸಂಪರ್ಕಿಸಲಿಲ್ಲ. ಕೊನೆಗೆ ನಾನು ತ್ರಿಪುರಕ್ಕೆ ಮಾರಿದ ಒಂದು ಮತ್ತು ಚಂದಿಗಡಕ್ಕೆ ಮಾರಿದ ಮೂರು ಪಟ್ಟಣಿಗರ ಮೋಜಿನ ಸವಾರಿಗೆ ಉಪಯೋಗಿಸಲ್ಪಡುವುದೆನ್ನುವ ಬೇಸರ ನನಗುಳಿಯುತ್ತದೆ.

ನಾನು ತರಿಸುವಾಗಲೇ ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆಯವರು ತಕ್ಷಣ ಮಾರಲೂ ತಯಾರಾಗಿರು ಎನ್ನುವ ಒತ್ತಾಯದ ಸೂಚನೆ ಕೊಟ್ಟಿದ್ದರು. ಆದರೆ ನಾನು ನಾಲ್ಕು ದಿನ ಉಪಯೋಗಿಸಿ ಅನಂತರ ಆಲೋಚನೆ ನನ್ನದಾಗಿತ್ತು. ಗೋವಿಂದ ಗುಜರಿ ಮಾರಿ ಮೋಸ ಮಾಡಿದ ಅನ್ನುವ ಮಾತು ಕೇಳಲು ನಾನು ತಯಾರಿರಲಿಲ್ಲ.

ಕೊನೆಯ ಮೂರು ನನ್ನ ಕಣ್ಣೆದುರಿನಿಂದ ಮರೆಯಾಗಿ ಒಂದೇ ಘಂಟೆಯಲ್ಲಿ ನನಗೊಂದು ದೂರವಾಣಿ ಸಂದೇಶ – ನಾಳೆ ನಿಮ್ಮಲ್ಲಿಗೆ ಬರುತ್ತೇವೆ. ಕೊನೆಗೆ ಬಂದ ಚಾಮರಾಜನಗರದ ಕೃಷಿಕ ಕೈಲಾಸಮೂರ್ತಿಯವರು ನನ್ನ ಸದಾಸಂ ಸುತ್ತು ಬಂದು ಹಲವು ಯೋಚನೆ ಯೋಜನೆಗಳ ನನ್ನ ಮುಂದಿಟ್ಟರು. ನಾನೂ ಯೋಚನೆಗೆ ಸಾದ್ಯವಾದ ಸಾದ್ಯತೆಗಳ ಅವರೊಂದಿಗೆ ಚರ್ಚಿಸಿದೆ. ಮರುದಿನ ಪುನಹ ದೂರವಾಣಿಯಲ್ಲಿ ನನ್ನ ವೈಯುಕ್ತಿಕ ಗಾಡಿಯನ್ನು ಕೊಡಬಹುದೋ ? ಕೇಳಿದರು. ಈಗ ಅದು ಉಪಯೋಗವಾಗುತ್ತಿಲ್ಲವಾದರೂ ನನಗಿರುವ ಆದರವಿದೆಯಲ್ಲಾ ? ಅದನ್ನು ಮೀರಲು ಸಾದ್ಯವಾಗುವುದಿಲ್ಲ.

Wednesday, October 05, 2011

ಸೈಕಲ್ ಹತ್ತಿ ಹೊರಟಿತು ರಾಣಿಯವರ ಬೇಟಿಗೆ ಹೊಸ ಮಂತ್ರಿಗಳ ಪಟಲಾಂ

ನಮ್ಮಲ್ಲಿ ಹೊಸ ಮಂತ್ರಿಮಂಡಲ ಅಧಿಕಾರ ಸ್ವೀಕರಿಸಿದ ಅನಂತರ ಅದ್ಯಕ್ಷರ ಅಥವಾ ರಾಜ್ಯಪಾಲರ ಬೇಟಿಗೆ ಹೊಗುವುದಿದೆಯಲ್ಲ, ಅಂತೆಯೇ ಡೆನ್ಮಾರ್ಕ್ ದೇಶದಲ್ಲಿ ಹೊಸ ಮಂತ್ರಿ ಮಂಡಲ ಅಧಿಕಾರ ಸ್ವೀಕರಿಸಿದ ಅನಂತರ ಸುದ್ದಿ ತಿಳಿಸಲೆಂದು ಸೌಹಾರ್ದ ಬೇಟಿಗೆಂದು ಅರಮನೆಗೆ ರಾಣಿಯ ಬೇಟಿಗೆ ಹೋಗುವುದು ಸಂಪ್ರದಾಯ. ಲ್ಲಿ ರಾಣಿಯವರು ಚಾ ಹಾಗೂ ಬಿಸ್ಕಿತು ಕೊಟ್ಟು ಈ ಹೊಸ ಮಂತ್ರಿಗಳ ಸತ್ಕರಿಸುತ್ತಾರೆ.

ನಮ್ಮಲ್ಲಾದರೆ ಇಂತಹ ಸನ್ನಿವೇಶಗಳಲ್ಲಿ ಹೊಸ ಮಾದರಿ ದುಬಾರಿ ಕಾರುಗಳ ಮೆರವಣಿಕೆಯೇ ಸಾಗುತ್ತದೆ. ಮೆರವಣಿಕೆ ಆಡಂಬವರವೆನಿಸಿದಷ್ಟು ತನ್ನ ಘನತೆ ಹೆಚ್ಚೆನ್ನುವ ಭ್ರಮೆ ಮಂತ್ರಿ ಸಾಹೇಬರಿಗೆ. ಯೆಡ್ಡಪ್ಪನ ಸರ್ಕಾರ ಸದಾ ಅಕಾಶದಲ್ಲಿ ಹಾರಾಡುತ್ತಿದ್ದ ಆತನಿಗಾಗಿ ಇತ್ತೀಚೆಗೆ ನಾಲ್ಕು ಬಹು ದುಬಾರಿ ಕಾರುಗಳನ್ನೂ ಕೊಂಡಿತ್ತು.

ಅಲ್ಲಿ ಇತ್ತೀಚೆಗೆ ಹೊಸ ಸಮ್ಮಿಶ್ರ ಸರಕಾರ ಅಧಿಕಾರ ಸ್ವೀಕಾರ ಮಾಡಿದ ಅನಂತರ ಹೊಸ ಮಂತ್ರಿಗಳೆಲ್ಲ ರಾಣಿಯ ಬೇಟಿಗೆಂದು ತೆರಳಿದರು. ಹೌದಾ ಇದರಲ್ಲೇನು ವಿಶೇಷ ? ೨೩ ಜನರ ಮಂತ್ರಿಮಂಡಲದಲ್ಲಿ ಆರು ಸ್ಥಾನ ಪಡಕೊಂಡ ಕಿರಿಯ ಪಕ್ಷದ ಹೊಸ ಮಂತ್ರಿಗಳು ಅರಮನೆಗೆ ಹೋದದ್ದು ಸೈಕಲು ತುಳಿದುಕೊಂಡು.

ಪ್ರಥಮ ಬಾರಿಗೆ ಮಂತ್ರಿಯಾದ ಮಧು ಸರೀನ್ ಎಂಬ ಬಾರತದಲ್ಲಿ ಜನಿಸಿದವರು ಒಂದು ವಿಶಿಷ್ಟ ಆದರೆ ಅಲ್ಲಿ ಜನಪ್ರಿಯವಾದ ಸರಕು ಸಾಗಾಣಿಕಾ ಸೈಕಲಿನಲ್ಲಿ ತೆರಳಿದ್ದರು. ಚುನಾವಣಾ ಪ್ರಚಾರಕ್ಕೂ ಅವರು ಇದೇ ಸೈಕಲು ಬಳಸಿದ್ದರು. ಅವರ ಸೈಕಲಿನಲ್ಲೊಂದು ಅಣು ವಿದ್ಯುತ್ ಬೇಡ ಕೃತಜ್ನತೆಗಳೆಂಬ ಸ್ಟಿಕ್ಕರ್ ಇತ್ತು. ಪ್ರಪಂಚಕ್ಕೊಂದು ಸುತ್ತು ಸೈಕಲು ಪ್ರವಾಸದಲ್ಲಿ ಇದೇ ಸ್ಟಿಕ್ಕರ್ ನನ್ನ ಸೈಕಲ್ ಡೈನೆಮೊಕ್ಕೆ ಅಂಟಿಸಿದ್ದೆ.


ಮುಮು ಸದಾನಂದ ಗೌಡ್ರು ಅಧಿಕಾರ ಸ್ವೀಕರಿಸಿ ದಕ್ಷಿಣ ಕನ್ನಡಕ್ಕೆ ಬಂದಾಗ ಮಂಗಳೂರಿನಿಂದ ಪುತ್ತೂರಿಗೆ ದಾವಿಸುತ್ತಿದ್ದ ಅವರ ಮೆರವಣಿಕೆಯಲ್ಲಿ ಐವತ್ತಕ್ಕೂ ಹೆಚ್ಚು ಕಾರು ಜೀಪುಗಳಿದ್ದವು ಎಂದು ನೆನಸಿಕೊಳ್ಳುವಾಗ ಹೇಸಿಗೆಯಾಗುತ್ತದೆ. ಹಲವರಲ್ಲಿ ಇದ್ದುದು ಚಾಲಕ ಮಾತ್ರ. ಅವುಗಳಲ್ಲಿ ಬಹುಪಾಲು ಇಂದನ ಖರ್ಚು ಸಮಾಜ ತುಂಬಿಕೊಡುವ ಸರಕಾರಿ ವಾಹನಗಳು. ನನ್ನ ಗ್ರಹಚಾರ ಎಂದರೆ ಅಂದು ನಾನು ಮಂಗಳೂರಿಗೆ ಹೊರಟಿದ್ದೆ.

http://www.copenhagenize.com/2011/10/bicycles-to-visit-queen.html

http://www.copenhagenize.com/2011/09/election-campaigning-by-bicycle.html

http://news.xinhuanet.com/english2010/world/2011-10/03/c_131173286.htm

Saturday, July 09, 2011

ದಕ್ಷಿಣ ಸುಡಾನ್ ಇಂದು ಸ್ವತಂತ್ರ

ಸೈಕಲು ಪ್ರವಾಸದಲ್ಲಿ ನಾನು ಕೆನ್ಯಾ ರಾಜದಾನಿ ನೈರೋಬಿಗೆ ಹಾರುವುದು. ಅನಂತರ ಉಗಂಡಾ, ಸುಡಾನ್ ದಾರಿಯಾಗಿ ಈಜಿಪ್ಟ್ ತಲಪುವುದು ನನ್ನ ಗುರಿಯಾಗಿತ್ತು. ಬಹು ಪಾಲು ರಸ್ತೆ ಇಲ್ಲದ ಕಾರಣ ಜುಬಾ ಪಟ್ಟಣದಿಂದ ನೈಲ್ ನದಿಯ ದೋಣಿಯಲ್ಲಿ ಉತ್ತರಕ್ಕೆ ಸಾಗುವುದು ನನ್ನ ಆಲೋಚನೆಯಾಗಿತ್ತು. ನನ್ನ ಉದ್ದೇಶಿತ ಹಾದಿಯಲ್ಲಿ ಬಹು ಕಾಲದಿಂದ ಅಂದರೆ ಅಂದಿಗೆ ಮೂವತ್ತು ವರ್ಷದಿಂದ ಜನಾಂಗಿಯ ಕಲಹ ನಡೆಯುತ್ತಿದ್ದರೂ ಹಲವು ಪ್ರವಾಸಿಗರು ದೋಣಿಯಲ್ಲಿ ದಾಟುವುದರಲ್ಲಿ ಸಫಲರಾಗಿದ್ದರು. ಅಲ್ಲಿನ ಒಂದು ದೋಣಿಯ ಚಿತ್ರ ಇಲ್ಲಿದೆ. http://is.gd/yuNje2 ನನ್ನ ಜರ್ಮನಿಯ ಸೈಕಲು ಗೆಳೆಯ ಫ್ರೆಡ್ ಪೋಲ್ ೧೯೬೪ ರಲ್ಲಿ ಇಲ್ಲೆ ದಾಟಿದ್ದರು. ಅದಕ್ಕೆ ನಾನು ಸಾಕಷ್ಟು ತಯಾರಿ ನಡೆಸಿದ್ದೆ.

ಆದರೆ ಕೆನ್ಯಾ ತಲಪುವಾಗ ಪರೀಸ್ಥಿತಿ ಕಠೀಣವಾಗಿರುವುದು ಅರಿವಾಯಿತು. ನನ್ನ ದಾರಿಯಲ್ಲಿದ್ದ ಉಗಂಡಾ ಹಾಗೂ ಸುಡಾನ್ ಅಂತರ್ಯುದ್ದ ಬರ್ಜರಿಯಾಗಿ ನಡೆಯುತ್ತಿದ್ದರೆ ಉತ್ತರದ ಇತಿಯೋಪಿಯ ಸಹಾ ದಾರಿ ಬಿಡುತ್ತಿರಲಿಲ್ಲ. ಹಾಗಾಗಿ ನನ್ನ ಯೋಜನೆಗಳೆಲ್ಲ ತಲೆಕೆಳಗಾಗಿ ಯುರೋಪಿನಿಂದ ಹಿಂತಿರುಗುವ ಬದಲು ಅಮೇರಿಕವನ್ನು ಹಾದು ಜಗತ್ತು ಪೂರ್ತಿ ಸುತ್ತು ಬರಲು ತೀರ್ಮಾನಿಸಿದೆ.

ಸುಡಾನ್ ದೇಶದಲ್ಲಿ ಉತ್ತರದಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯ. ಅದಿಕಾರವೆಲ್ಲ ಅವರ ಕೈಯಲ್ಲಿ ಕೇಂದ್ರಿತ. ದಕ್ಷಿಣದಲ್ಲಿ ವಾಸ್ತವ್ಯ ಇರುವುದು ಕರಿಯ ಕ್ರೈಸ್ತ ಅನುಯಾಯಿಗಳು. ಬ್ರೀಟಿಶರು ಸ್ವಾತಂತ್ರ ಕೊಡುವಾಗ ಈಜಿಪ್ಟ್ ಜತೆ ಒಪ್ಪಂದ ಮಾಡಿ ಒಂದು ಕಿತಾಪತಿ ಮಾಡಿದ್ದರು. ಕರಿ ಜನರೇ ಜೀವಿಸುವ ದಕ್ಷಿಣ ಸುಡಾನ್ ಪ್ರಾಂತ್ಯವನ್ನು ಪಕ್ಕದ ಕರಿಯ ಜನರಿರುವ ಕೆನ್ಯಾ ಉಗಂಡಾದಿಂದ ಬೇರ್ಪಡಿಸಿ ಬಹು ಕಾಲ ಈಜಿಪ್ಟ್ ವಶವಾಗಿದ್ದ ಉತ್ತರ ಸುಡಾನ್ ಜತೆ ಸೇರಿಸಿಬಿಟ್ಟರು. ಚಿತ್ರದಲ್ಲಿ ಕಾಣುವಂತೆ ಉತ್ತರಬಾಗ ಮರುಭೂಮಿಯಾದರೆ ದಕ್ಷಿಣಬಾಗದಲ್ಲಿ ಹುಲ್ಲುಗಾವಲು ಹಾಗೂ ಕುರುಚಲು ಕಾಡು. ಉತ್ತರದವರಿಂದ ಸತತವಾಗಿ ದಬ್ಬಾಳಿಕೆ, ಅನ್ಯಾಯ. ಶ್ರೀಲಂಕದಲ್ಲಿ ಇದ್ದಂತಹ ಪರೀಸ್ಥಿತಿ.

ಸ್ವಾತಂತ್ರ ಸಿಕ್ಕರೂ ಶಾಂತಿ ನೆಲೆಸುವುದು ??? ನಲುವತ್ತು ಬಿಲಿಯ ಡಾಲರ್ ಸಾಲವನ್ನು ಹೇಗೆ ಪಾಲು ಮಾಡುವುದು – ಈ ಸಾಲ ಕರಿಯರ ದಮನಕ್ಕೆ ವಿಮಾನ ಹಾಗೂ ಮದ್ದುಗುಂಡು ಖರೀದಿಗೆ ಈ ಸಾಲದ ಹಣ ಉಪಯೋಗವಾದದ್ದು ಹೊರತು ಅನ್ನ ಬಟ್ಟೆಗಾಗಿ ಅಲ್ಲ. ಕರಿಯರಿಗಂತೂ ಬಡಿಗೆ ಕೊಟ್ಟು ಬಡಿಸಿಕೊಂಡ ಅನುಭವ. ಅಪಾರ ಜೀವಹಾನಿಯಾಗಿದೆ. ಉದ್ದೇಶಿತ ಗಡಿ ಪ್ರದೇಶದ ನೆಲದಡಿಯಲ್ಲಿ ತೈಲಸಂಪತ್ತಿದೆ. ಸತತ ದಬ್ಬಾಳಿಕೆ ಅನುಭವಿಸಿದ ದಕ್ಷಿಣದಲ್ಲೀಗ ಬೆಡಿ ಹಿಡಿದ ಹಲವಾರು ಬಣಗಳಿವೆ. ಅವುಗಳ ಒಟ್ಟುಗೂಡಿಸುವುದು ಸುಲಭಸಾದ್ಯವಲ್ಲ. ಇವೆಲ್ಲ ಲೆಕ್ಕಾಚಾರ ಗೊಂದಲಾಮಯ. ಅದರೂ ಇನ್ನಾದರೂ ಶಾಂತಿ ನೆಲಸುವುದೋ ?

Friday, July 08, 2011

ಕೆನಡಾದ ವಿಕಲಾಂಗ ಮಹಿಳೆ ಕೈ ಚಾಲನೆ ತ್ರಿ ಚಕ್ರದಲ್ಲಿ ಬಾರತ ಅಳೆದದ್ದು


ಕಳೆದ ವಾರ ನನ್ನ ಪ್ರೀತಿಯ ನಾಯಿ ರಾಜುವನ್ನು ಪಶುವೈದ್ಯರಲ್ಲಿ ಕರಕೊಂಡು ಹೋದಾಗ ಹಿಂದಿನ ಬ್ರಿಯಾನ್ ಬಗೆಗಿನ ಪುಟದ ಬಗ್ಗೆ ಎರಡು ಮಾತುಗಳ ಹೇಳಿದ್ದೆ. ಮಾತಾಡುತ್ತಿರುವಾಗ ಡಾ ಪ್ರಸನ್ನಕುಮಾರ್ ಅವರು ಬ್ರಿಯಾನ್ ವಿಲ್ಸನ್ ಅವರಿಗೆ ವಿದ್ಯುತ್ ಅಳವಡಿಕೆ ಗೊತ್ತಿಲ್ಲವೇನೊ ಅನ್ನುವ ಸಂಶಯ ವ್ಯಕ್ತ ಪಡಿಸಿದ್ದರು. ಅಂದಿನ ಹುಡುಕಾಟದಲ್ಲಿಯೇ ಸ್ಲೊವೆನಿಯ ದೇಶದ ಸೈಕಲು ತಾಣವೊಂದರಲ್ಲಿ ಬಾರತಕ್ಕೆ ಸಂಬಂದಿಸಿದ ಈ ಕೆಳಗಿನ ಸುಳಿವು ಸಿಕ್ಕಿತು. http://www.udobnoposvetu.si/

ಇದೊಂದು ಕೆನಡ ದೇಶದ ಅಪಘಾತಕ್ಕೊಳಗಾದ ಕಾರಣ ದೇಹ ಸೋತ ೩೨ ವರ್ಷದ ಮಹಿಳೆ ಮೊರ್ಗನ್ ಬ್ರೇಡಾ ಅವರು ವಿದ್ಯುತ್ ಸಹಾಯಕ ಅಳವಡಿಸಿದ ಕೈ ಸೈಕಲಿನಲ್ಲಿ ಬಾರತವನ್ನು ಅಳೆದ ಕಥೆ. ಇದು ಹಲವು ಕಾರಣಗಳಿಗೆ ಹೆಚ್ಚು ಬೆಳಕು ಚೆಲ್ಲಬೇಕಾಗಿತ್ತು. ಅಂಗವಿಕಲತೆ ಮೀರಿ ನಡೆವ ಹಾಗೂ ವಿದ್ಯುತ್ ಸಹಾಯ ಸಮರ್ಥವಾಗಿ ಬಳಸುವ ಅತ್ಯುತ್ತಮ ಮಾರ್ಗದರ್ಶಿ ನಮಗಾಗಬಲ್ಲದು. ಸೊಂಟದ ಕೆಳಗೆ ವಶವಿಲ್ಲದ ಮಹಿಳೆ ಗಂಟೆಗಟ್ಟಲೆ ಕುಳಿತು ಸೈಕಲು ಚಾಲನೆ ಮಾಡುವುದು ಅದ್ಬುತವೇ ಸರಿ.http://theableproject.com/blog/


ನಾನು ಈ ಗುಂಪು ಪ್ರವಾಸದ ಬಗೆಗೆ ಮೊದಲು ಓದಿದರೂ ಈ ತ್ರಿಚಕ್ರ ಚಾಲಕಿ ಬಗೆಗೆ ಆಗ ಸುಳಿವು ಗೋಚರಿಸಿರಲಿಲ್ಲ. ಏಳು ವಾರಗಳಲ್ಲಿ ಅಗ್ರಾದಿಂದ ಕನ್ಯಾಕುಮಾರಿ ತನಕ ಸುಮಾರು ನಾಲ್ಕು ಸಾವಿರ ಕಿಮಿ ಇವರು ತ್ರಿ ಚಕ್ರ ತಿರುಗಿಸಿದ್ದರು. ಅದರ ಬಾಗವಾಗಿ ನಾನು ಕಳೆದ ವರ್ಷ ಹೋದ ಹೊಸಪೇಟೆಯಿಂದ ಮೈಸೂರು ವರೆಗಿನ ರಸ್ತೆಯಲ್ಲಿಯೇ ಆದರೆ ವಿರುದ್ದ ದಿಕ್ಕಿನಲ್ಲಿ ಅವರು ಸಾಗಿದ್ದರು. ಗುಂಪು ಪ್ರವಾಸದ ಬಾಗಿಯಾದರೂ ಇವರಿಗೆ ವಿಶೇಷ ವ್ಯವಸ್ಥೆಗಳ ಮಾಡಲಾಗಿತ್ತಂತೆ. ವೈಯುಕ್ತಿಕ ಬೆಂಗಾವಲು ವಾಹನ ಮೋರ್ಗನ್ ಬ್ರೇಡಾ ಅವರನ್ನು ಅನುಸರಿಸುತ್ತಿತ್ತು. ಮುಂಬಯಿಯಲ್ಲಿ ೪೨ ತ್ರಿಚಕ್ರ ಸೈಕಲುಗಳ ಅಂಗವಿಕಲರಿಗೆ ದಾನ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇಂತಹ ನಿಯೊಜಿತ ಪ್ರವಾಸಗಳು ನಮ್ಮಲ್ಲಿ ಅಪರೂಪ. ಮುಂಚಿನ ಸಂಜೆಯೇ ಯಾತ್ರಿಗಳಿಗೆ ಮರುದಿನದ ದಾರಿ ಬಗೆಗೆ ಸ್ಪಷ್ಟ ಮಾಹಿತಿ ಕೊಡಲಾಗುತ್ತದೆ. ನಿರ್ಣಾಯಕ ತಿರುವುಗಳ ಬಗೆಗೆ ವಿವರಗಳು ಕೊಡುವುದು ಮಾತ್ರವಲ್ಲ, ರಸ್ತೆ ಬದಿಯ ಯಾವುದಾದರೂ ಮರಕ್ಕೋ ಕಂಬಕ್ಕೋ ಹಳದಿ ರಿಬ್ಬನ್ ಕಟ್ಟಿರುತ್ತಾರೆ. ಪ್ರವಾಸಿಗಳು ಏಕಾಂಗಿಯಾಗಿ ಅಥವ ಜತೆಗೂಡಿ ಸಾಗಬಹುದು. ನಡುದಿನಕ್ಕಾಗುವಾಗ ದಾರಿಯಲ್ಲಿ ಊಟದ ವಾಹನ ಇವರಿಗೆ ಕಾದಿರುತ್ತದೆ. ಹಾಗೆ ದಾರಿಯಲ್ಲಿ ಊರವರ ದೋಸ್ತಿ ಮಾಡಲು, ಡಬ್ಬಾ ಹೋಟೆಲ್ ನುಗ್ಗಲು ಎಲ್ಲಕ್ಕೂ ಈ ಸೈಕಲು ಸವಾರರು ಸ್ವತಂತ್ರರು.

ದಿನಕ್ಕೆ ಸುಮಾರು ೮೦ – ೧೦೦ ಕಿಮಿ ಪ್ರಯಾಣ. ಒಮ್ಮೆ ಅದು ೧೮೦ ಆದದ್ದೂ ಉಂಟಂತೆ. ನಾಲ್ಕು ಐದು ದಿನಗಳಿಗೊಮ್ಮೆ ಒಂದು ದಿನ ವಿಶ್ರಾಂತಿ. ಅಪಾಯಕರ ದಾರಿ ದಾಟಿಸಲು ವಾಹನ ವ್ಯವಸ್ಥೆ ಇದ್ದರೂ ಇವರ ಪ್ರವಾಸ ಯೋಜಿಸಿದವರೇ ಬಂಡಿಪುರದಲ್ಲಿ ಆನೆಯಲ್ಲಿ ತುಳಿಸಿಕೊಂಡು ಕೆಲವು ದಿನ ಆಸ್ಪತ್ರೆ ವಾಸ ಮಾಡಿದ್ದಾರೆ. ವೇಗವಾಗಿ ಸಾಗುವ ಕಾರಿನ ಹಾರ್ನ್ ಕೇಳಿ ಕೆರಳಿದ ಗಂಡಾನೆ ಇವರನ್ನು ಬಂದು ತುಳಿಯಿತಂತೆ. ಒಬ್ಬ ಕೆಟ್ಟ ಕಾರು ಚಾಲಕ ದೇಶದ ಮರ್ಯಾದೆಯನ್ನೇ ತೆಗೆದ ಅನ್ನೋಣ. http://is.gd/X6HSX8 ಮತ್ತು http://is.gd/pi3iDc ರಲ್ಲಿ ಈ ಘಟನೆ ವಿವರಗಳಿವೆ.

ಮೋರ್ಗನ್ ಬ್ರೇಡಾ ಅವರು ಬಾರತಕ್ಕೆ ಬಂದಿರುವುದು ಬರೇ ಪ್ರವಾಸಕ್ಕಲ್ಲ. ದೆಹಲಿಯ ವೈದ್ಯರೊಬ್ಬರ ಹತ್ತಿರ ಹೊಸ ಬಗೆಯ ಬೆನ್ನೆಲುಬು ಚಿಕಿತ್ಸೆಯನ್ನು ಪಡಕೊಳ್ಳಲು ಸಹಾ. ಈಗ ಬಹಳ ದುಬಾರಿಯಾದ ಸುಮಾರು ಇಪ್ಪತ್ತು ಲಕ್ಷ ರೂಪಾಯಿ ಖರ್ಚಾಗುವ ಚಿಕಿತ್ಸೆ ಯಶಸ್ವಿಯಾಗಿ ತನ್ನ ಕಾಲ ಮೇಲೆ ನಿಲ್ಲುವ ಅವರ ಗುರಿ ತಲಪಲು ಸಹಾಯಕವಾಗಲೆಂದು ಹಾರೈಸುತ್ತೇನೆ.

http://www.spinalcordinjuryzone.com/news/10431/riding-a-bike-with-her-hands


Monday, June 27, 2011

ಕೈ ಸೈಕಲು ಯಾತ್ರೆ ಹೊರಟ ಶಾಂತಿದೂತ

ಅಮೇರಿಕದ ಪಶ್ಚಿಮ ಕರಾವಳಿಯಲ್ಲಿ ೧೧೦೦ ಮೈಲುಗಳ ತ್ರಿಚಕ್ರ ಪ್ರಯಾಣ ಹೊರಟಿದ್ದಾರೆ ಬ್ರಿಯಾನ್ ವಿಲ್ಸನ್. ಎಪ್ಪತ್ತರ ಮಾಜಿ ಸೇನಾನಿ ಶಾಂತಿಯುತ ಪ್ರತಿಭಟನೆಯಲ್ಲಿ ಸರಕಾರದ ದೌರ್ಜನ್ಯದಿಂದ ಎರಡೂ ಕಾಲುಗಳ ಕಳಕೊಂಡ ಕಾರಣ ಕೈಯಲ್ಲಿ ತಿರುಗಿಸಿ ಚಾಲನೆ ಮಾಡುವ ಮೂರು ಚಕ್ರದ ವಾಹನದಲ್ಲಿ ಹೊರಟಿದ್ದಾರೆ. ವಿಲ್ಸನ್ ಅವರು ತ್ರಿ ಚಕ್ರ ತುಳಿಯುವುದಲ್ಲ, ತಳ್ಳುವುದು ಅನ್ನುಬಹುದೇನೊ ? ಯಾಕೆಂದರೆ ಅವರು ಚಕ್ರಕ್ಕೆ ಚಾಲನೆ ಕೊಡುವುದು ಕೈಯಲ್ಲಿ. ಅವರು ಹಳಿಯಲ್ಲಿ ರಕ್ತ ಎನ್ನುವ ತಮ್ಮ ಜೀವನ ಕಥೆ ಇತ್ತೀಚೆಗೆ ಪ್ರಕಟಿಸಿದ್ದಾರೆ. ಪುಸ್ತಕದ ಬಗೆಗೆ ಅಲ್ಲಲ್ಲಿ ಸಂವಾದಗಳಲ್ಲೂ ಪಾಲ್ಗೊಳ್ಳಲಿದ್ದಾರೆ.

ವಿಯಟ್ನಾಂ ಯುದ್ದದಲ್ಲಿ ಪಾಲ್ಗೊಂಡ ಅವರಿಗೆ ಕ್ರಮೇಣ ಅಮೇರಿಕದ ವಿದೇಶಿ ನೀತಿ ಬಗೆಗೆ ಅಸಹನೆ ಮೂಡಿತು. ಯುದ್ದ ವಿರೋದಿ ಚಟುವಟಿಗಳಲ್ಲಿ ತೊಡಗಿಸಿಕೊಂಡರು. ಹೀಗೆ ಒಂದು ಪೂರ್ವನಿರ್ದಾರಿತ ಯುದ್ದ ಸಾಮುಗ್ರಿ ಕೊಂಡೊಯ್ಯುತ್ತಿದ್ದ ರೈಲು ನಿಲುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಬಂದ ಪಟ್ಟವರಿಗೆಲ್ಲ ತಿಳಿಸಿದ ಪೂರ್ವ ನಿಯೋಜಿತ ಸತ್ಯಾಗ್ರಹದಲ್ಲಿ ಊಹಿಸಿದಂತೆ ರೈಲು ನಿಲ್ಲುವುದು ಮತ್ತು ಇವರ ಬಂಧನ ನಡೆಯಲಿಲ್ಲ. ರೈಲು ಚಾಲಕರಿಗೆ ಸೀದಾ ಸಾಗಲು ಮೇಲಿನಿಂದ ಆದೇಶ ಬಂದಿತ್ತು. ಪರಿಣಾಮ ಸರಕಾರಿ ಪ್ರೇರಿತ ಕೊಲೆ ಪ್ರಯತ್ನ - ಇವರ ತಲೆಬುರುಡೆ ಜಖಂ ಹಾಗೂ ಕಾಲುಗಳೆರಡೂ ಖತಂ.

ದೈಹಿಕ ಸಮಸ್ಯೆಗಳಿಂದ ಸೋತ ನನಗೆ ತ್ರಿಚಕ್ರ ಬಹಳ ಜೀವನೋತ್ಸಾಹ ಮರಳಿಸಿದಂತೆ ವಿಲ್ಸನರಿಗೂ ಖಿನ್ನತೆಯ ಹೋರಾಡಲು ತ್ರಿಚಕ್ರ ಸಹಾಯ ಮಾಡಿದೆಯಂತೆ. ಈ ವಾಹನ ಕೊಡುವ ಸ್ವಾತಂತ್ರ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಜೀವನಕ್ಕೆ ಬಹಳ ಸಹಾಯಕವಾಗಿದೆಯೆನ್ನುತ್ತಾರೆ ವಿಲ್ಸನ್. ಇವರ T – ಅಂಗಿಯಲ್ಲಿ ಗಾಂದೀಜಿಯವರ ಚಿತ್ರ ಹಾಗೂ ಮಾತುಗಳೂ ನನಗೆ ಕುಶಿಯಾದವು. ಹಾಗೆ ಕಾರು ಹಾಗೂ ಸೈಕಲುಗಳ ಹೋಲಿಸುವ ಕೆಳಗಿನ ಪಾರವೂ ಇಷ್ಟವಾಯಿತು - ಬಾಷಾಂತರಿಸಿ ಅರ್ಥ ಕೆಡಿಸುವ ಬದಲು ಮೂಲವನ್ನೇ ಇಲ್ಲಿ ಅಂಟಿಸುತ್ತಿರುವೆ.

Cars have artificially enabled us to think we can move fast and go wherever we want instantaneously without any impact on our psyche, on the earth, or on our relationships. I like going 10 mph, that's the speed at which I believe my human genetics are designed for... that's a human scale. A bicycle begins to recover that feeling of a pace that is more human that enables you to be able to reflect and see more around you... To me, it's thrilling almost, to be on my handcycle."

http://bikeportland.org/2011/06/24/veteran-peace-activist-brian-willson-embarks-on-1100-handcycle-tour-55504#more-55504

ಇದು ವಿಲ್ಸನರ ಪ್ರಥಮ ದೀರ್ಘ ಪ್ರಯಾಣವಲ್ಲ. ೨೦೦೬ರಲ್ಲಿ ಸುಮಾರು ೯೦೦ ಮೈಲು ಗುಂಪು ಸೈಕಲು ಪ್ರವಾಸವನ್ನು ಮುನ್ನಡೆಸಿದ್ದರು. ಶಾಂತಿ ಮಂತ್ರ ಜಪಿಸುವ ಒಂದು ಕಾರ್ಯಕ್ರಮಕ್ಕೆ ಪೆಟ್ರೋಲ್ ಬಳಸದ ಸರಳ ಜೀವನ ಪ್ರತಿಪಾದಿಸುವ ಒಂದು ಸಂದೇಶವನ್ನೂ ಹೊತ್ತು ಸೈಕಲುಗಳಲ್ಲಿಯೇ ಸಾಗಿದ್ದರು.

http://www.vfp56.org/seattle.html

ಸರಕಾರಿ ರೈಲು ವಿಲ್ಸನ್ ಅವರ ಕಾಲು ಕಿತ್ತುಕೊಂಡ ಪ್ರಕರಣ ಓದುವಾಗ ಯಾಕೋ ಸ್ವಾಮಿ ನಿಗಮಾನಂದರ ನೆನಪಾಗುತ್ತದೆ. ಗಂಗಾ ನದಿ ತಟದಲ್ಲಿರುವ ಜಲ್ಲಿ ಪುಡಿಮಾಡುವ ಕೈಗಾರಿಕೆ ವಿರುದ್ದ ಹಲವಾರು ಬಾರಿ ಸತ್ಯಾಗ್ರಹ ಕೈಗೊಂಡ ಸ್ವಾಮಿ ನಿಗಮಾನಂದರು ಮಾದ್ಯಮದ ದೃಷ್ಟಿಗೆ ಬೀಳದೆ ಆತ್ಮಾರ್ಪಣೆ ಮಾಡಿಕೊಂಡರು. ಪವಿತ್ರ ಗಂಗಾನದಿಯನ್ನು ರಾಜಕೀಯವಾಗಿ ಬಳಸುವ ಅಲ್ಲಿ ಅದಿಕಾರದಲ್ಲಿರುವ ಕೇಸರಿ ಪಕ್ಷ ಅಪರಾದಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅವರು ಕೊನೆಯುಸಿರು ಎಳೆಯುವ ಸಮಯದಲ್ಲಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡಕೊಂಡ ರಾಮದೇವ ಸ್ವಾಮಿಗಳಿಗೆ ಸರಕಾರ ಹಾಗೂ ಮಾದ್ಯಮಗಳಿಂದ ರಾಜಮರ್ಯಾದೆ ದೊರಕಿತ್ತು.

http://www.tehelka.com/story_main50.asp?filename=Ne020711COVERSTORY.asp