ಮನುಷ್ಯನನ್ನು ದೇವರು ಸದಾ ಚಟುವಟಿಕೆಯಲ್ಲಿರುವಂತೆ ರೂಪಿಸಿದ್ದಾನೆ. ಜೀವನದ ಎರಡು ತುದಿಗಳಲ್ಲಿ ಅಂದರೆ ಹುಟ್ಟು ಸಾವಿನ ಆಸುಪಾಸು ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಸದಾ ತನ್ನ ಕಾಲಿನ ಮೇಲೆ ನಿಲ್ಲುವಂತೆ ಚಲಿಸುವಂತೆ ನಮ್ಮನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ನಮಗೆ ಹೊರಿಸಿಕೊಳ್ಳುವುದೆಂದರೆ ಇಷ್ಟ. ನಡೆಯುವುದು ಕಷ್ಟ. ನಾಲ್ಕು ಹೆಜ್ಜೆ ಹೋಗಲೂ ವಾಹನವನ್ನೇ ಅವಲಂಬಿಸಲು ಇಷ್ಟ ಪಡುತ್ತೇವೆ. ಕಾಸಿಲ್ಲದವ ಮಾತ್ರ ನಡೆಯುವುದು ಎಂದು ನಮ್ಮವರ ಖಚಿತ ನಿಲುವು. ನಮಗೆ ಎಲ್ಲಕ್ಕೂ ಮಾದರಿಯಾದ ಅಮೇರಿಕದವರು ಶೌಚಾಲಯಕ್ಕೂ ಕಾರಲ್ಲಿ ಹೋಗುವರೊ ಅನ್ನುವ ಗುಮಾನಿ.
ಅಮೇರಿಕದಲ್ಲಿ ಚಲನಾತೀತ ಮನುಷ್ಯರಿಗೆ ಮಾತ್ರವಲ್ಲ ಅವರ ನಾಯಿ ಬೆಕ್ಕುಗಳಿಗೂ ಈಗ ಸಕ್ಕರೆ ಖಾಯಿಲೆ ಹಬ್ಬಲು ಪ್ರಾರಂಬಿಸಿದೆ. ಈ ಸಕ್ಕರೆ ಖಾಯಿಲೆ ಬಗೆಗೆ ನನಗೆ ನೆನಪಿಗೆ ಬರುವುದು ತೇಜಸ್ವಿ ಕಥೆಯೊಂದರ ಪಾತ್ರದಾರಿ. ಅವರು ತನಗೆ ಪರಂಗಿಯವರ ಸೀಕು ಉಂಟೆಂದು ಡಾಕ್ಟ್ರು ಹೇಳಿದರೆಂದು ಹೆಂಡತಿಯೊಂದಿಗೆ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಸಕ್ಕರೆ ಖಾಯಿಲೆ ಸಾಕುನಾಯಿಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾ ಮೂವತ್ತ ಮೂರರಷ್ಟು ಏರಿದರೆ ಬೆಕ್ಕುಗಳಲ್ಲಿ ಶೇಕಡಾ ಹದಿನಾರು. ಹೋಲಿಕೆಯಲ್ಲಿ ಆ ದೇಶದಲ್ಲಿ ಮನುಷ್ಯರಲ್ಲಿ ಬರೇ ಶೇಕಡಾ ಹತ್ತು ಹೆಚ್ಚುವರಿಯಾಗಿ ಈ ಸೀಕು ಗುರುತಿಸಲ್ಪಟ್ಟಿದೆ.
ಸಾಕುಪ್ರಾಣಿ ಆಸ್ಪತ್ರೆ ಜಾಲವೊಂದಕ್ಕೆ ನಲುವತ್ತ ಮೂರು ರಾಜ್ಯಗಳಲ್ಲಿ ೭೭೦ ಕ್ಲೀನಿಕುಗಳು. ಅಲ್ಲಿಗೆ ಚಿಕಿತ್ಸೆಗೆಂದು ಬಂದ ಇಪ್ಪತ್ತೈದು ಲಕ್ಷ ನಾಯಿ ಬೆಕ್ಕಿನ ರೋಗಮಾಹಿತಿಯಿಂದ ಈ ಲೆಕ್ಕಾಚಾರ ಕಂಡುಬರುತ್ತದೆ. ಈ ಬೆಳವಣಿಕೆಗೆ ಪ್ರಮುಖ ಕಾರಣ ಸಾಕು ಪ್ರಾಣಿಗಳಲ್ಲಿ ಬೊಜ್ಜು ಬೆಳೆಯುತ್ತಿರುವುದು. ಕಾರಣ - ತಿನ್ನುವುದು ಹೆಚ್ಚು ಮತ್ತು ಕಡಿಮೆ ವ್ಯಾಯಾಮ. ಗುರುತಿಸಿದ ನಂತರ ಚಿಕಿತ್ಸೆ ಸರಳ – ದಿನಕ್ಕೆರಡು ಬಾರಿ ಇನ್ಸುಲಿನ್ ಚುಚ್ಚುವುದು. ಈಗ ಲಕ್ಷಾಂತರ ಸಾಕುಪ್ರಾಣಿಗಳು ದಿನಾಲು ಹೀಗೆ ಚುಚ್ಚಿಸಿಕೊಳ್ಲುತ್ತಿವೆಯಂತೆ.
http://seattletimes.nwsource.com/html/health/2014823374_catdog22.html
ನಾನು ಸೈಕಲು ಅಥವಾ ಟ್ರೈಕ್ ಇಷ್ಟ ಪಡುವುದು ಬರೇ ಈ ಸೀಕುಗಳ ಹೆದರಿಕೆಯ ಕಾರಣ ಅಲ್ಲ. ಕರುಳಿಗೆ ಸಂಬಂದಿಸಿದ ವೈರಿಂಗ್ ಕೆಟ್ಟಿರುವ ಕಾರಣ ನನಗೆ ಉಳಿದವರಿಗಿಂತ ಸಮಸ್ಯೆ ಹೆಚ್ಚು. ತುಳಿಯುವ ಕಾಲಿನ ಚಲನೆ ಮಲ ಸರಾಗವಾಗಲು ಸಾಗಲು ನೆರವಾಗುವುದೋ ಆಸೆ. ಹೌದೆನ್ನುತ್ತಾರೆ ಲಂಡನಿನ ತಜ್ನ ವೈದ್ಯರೊಬ್ಬರು. ಅವರ ಮಾತಿನಲ್ಲಿಯೇ ಹೇಳುವುದಾದರೆ " Physical activity helps decrease the time it takes food to move through the large intestine, limiting the amount of water absorbed back into your body and leaving you with softer stools, which are easier to pass " explains
http://www.ballymoneycyclingclub.com/Cycling-and-Health.html
ಇಂದು ಶೌಚಾಲಯದಲ್ಲಿ ಕೂರುವ ಹಾಗೂ ನಾಳೆ ಆಸ್ಪತ್ರೆಯಲ್ಲಿ ಮಲಗುವ ಸಮಯ ಕನಿಷ್ಟಗೊಳಿಸಲು ಸೈಕಲ್ ಬಳಸೋಣ. ಕೀಳರಿಮೆ ಬಿಸಾಕಿ ಹೆಚ್ಚು ನಡೆಯೋಣ. ಹೆಚ್ಚು ಸೈಕಲಿಸೋಣ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ದೇಹ ದಂಡನೆ ಹೆಚ್ಚಲಿ. ಇಲ್ಲವಾದರೆ ಅನಂತರ ಚಿಕಿತ್ಸೆಗೆಂದು ಹೆಚ್ಚು ದಂಡ ತೆರಬೇಕಾಗುತ್ತದೆ.
No comments:
Post a Comment