Saturday, May 21, 2011

ಮಲೆಯಾಳ ಮಾತೃಭೂಮಿಯಲ್ಲೊಂದು ಸಂದರ್ಶನ

ಮೊನ್ನೆ ಮಂಗಳವಾರ ೧೭ರಂದು ಬೆಳಗ್ಗೆ ನನಗೆ ಇದ್ದಕ್ಕಿದ್ದಂತೆ ಕೇರಳದಿಂದ ಇ-ಪತ್ರಗಳು ಬರಲು ಪ್ರಾರಂಬವಾಯಿತು. ಪಕ್ಕನೆ ಕಾರಣ ಗೊತ್ತಾಗಲಿಲ್ಲ. ಹೆಚ್ಚಿನವು ನಿನ್ನ ಬಗ್ಗೆ ನನ್ನ ಪೇಪರಿನಲ್ಲಿ ಓದಿದ್ದೆ. ಹೆಚ್ಚು ವಿವರ ತಿಳಿಸಿ ಎನ್ನುವ ಪತ್ರಗಳು. ಯಾವ ಪತ್ರಿಕೆ, ಯಾವಾಗ ಪ್ರಕಟನೆ ಎನ್ನುವ ವಿವರಗಳು ಎರಡು ಗೀಟಿನ ಪತ್ರಗಳಲ್ಲಿ ಒಂದರಲ್ಲೂ ಇರಲಿಲ್ಲ. ಮೊದಲು ಅದನ್ನು ಅಷ್ಟು ಗಂಬೀರವಾಗಿ ಪರಿಗಣಿಸದೆ ಅವನ್ನೆಲ್ಲ ಕಸದ ಬುಟ್ಟಿಗೆಸೆದೆ. ಆದರೆ ಇದೇ ಸಾರಾಂಶದ ಪತ್ರಗಳು ಮತ್ತೂ ಬಂದ ಕಾರಣ ಎಲ್ಲವನ್ನೂ ಪುನಹ ತೆಗೆದು ನೋಡಿ ಕಾರಣ ಊಹಿಸಿದೆ.

ಸರಿಯಾಗಿ ತಿಂಗಳ ಹಿಂದೆ ಅಂದರೆ ಎಪ್ರಿಲ್ ೧೭ರಂದು ಮಾತೃಭೂಮಿ ವರದಿಗಾರರು ಕಾಸರಗೋಡಿನಲ್ಲಿ ನನ್ನ ಬೇಟಿ ಮಾಡಿದ್ದರು. ಎಂಡೊ ಕಾರ್ಯಕ್ರಮದಲ್ಲಿ ಅವರನ್ನು ಡಾ ಶ್ರೀಪತಿ ಪರಿಚಯ ಮಾಡಿಕೊಟ್ಟಿದ್ದರು. ವರದಿಗಾರರಾದ ವಿನೋದ್ ನಾಲ್ಕೆಂಟು ಪ್ರಶ್ನೆ ಕೇಳಿ ತಕ್ಷಣ ಪೋಟೊಗ್ರಾಫರ್ ಒಬ್ಬರನ್ನು ಬರಮಾಡಿ ಚಿತ್ರ ತೆಗೆಸಿದರು. ನಾನು ನನ್ನಲ್ಲಿದ ಈ ವಾಹನದ ವೈಶಿಷ್ಟ ವಿವರಿಸುವ ಒಂದು ಕರಪತ್ರ ಕೊಟ್ಟೆ. ಅಕಸ್ಮಾತ್ ಹೆಚ್ಚಿನ ವಿವರ ಬೇಕಾದರೆ ಸಂಶಯಗಳಿದ್ದರೆ ಸಂಪರ್ಕಿಸಿ ಎಂದು ಹೇಳಿದೆ.

ಪತ್ರಿಕಾವರದಿ ಬಗೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ನನ್ನ ಪ್ರಕಾರ ಮುಖ್ಯ ಅನಿಸುವ - ಮನುಷ್ಯ ಪ್ರಯತ್ನ ಹಾಗೂ ಯಂತ್ರ ಸಹಾಯ ಸಮ್ಮೀಳನವಾಗುವ ಏಕಮಾತ್ರ ವಾಹನ ಎಂದು ಯಾವ ಪತ್ರಿಕಾ ವರದಿಯಲ್ಲೂ ಇಂದಿನ ವರೆಗೆ ನನಗೆ ತಿಳಿದಂತೆ ಪ್ರಕಟವಾಗಿಲ್ಲ. ತಿಂಗಳು ಕಳೆಯುವಾಗ ನಾನು ಅದನ್ನು ಮರೆತು ಬಿಟ್ಟೆ. ಕೇರಳದಿಂದಲೇ ಹಲವಾರು ಪತ್ರ ಬಂದ ನಂತರ ಚುರುಕಾಯಿತು ಮನಸ್ಸು.

ವರದಿಗಾರರ ಸಂಪರ್ಕ ಕೋರಿ ಶ್ರೀಪಡ್ರೆಯವರಿಗೆ ನಾನು ಪತ್ರಿಸಿದೆ. ಶ್ರೀಪಡ್ರೆಯವರೂ ವರದಿಗಾರರಿಗೆ ಇ-ಪತ್ರಿಸಿದರು. ಅಂತೂ ಪ್ರಕಟವಾದ ಐದು ದಿನ ಕಳೆದು ಮಾತೃಭೂಮಿಯಲ್ಲಿರುವ ರಾಜೇಶ್ ನನಗೊಂದು ಪುಟ್ಟ ಚಿತ್ರಣ ಕಳುಹಿಸಿಕೊಟ್ಟರು. ಚಿತ್ರ ಸಣ್ಣದು. ನನಗೆ ಮಲೆಯಾಳ ಓದಲು ಬರುವುದಿಲ್ಲ. ಹಾಗಾಗಿ ಸಾಕು. ನಿಮಗೆ ಬರುವುದಾಗಿದ್ದರೆ ನಾನೇನು ಮಾಡುವಂತಿಲ್ಲ. ಅಂದು ನನ್ನ ಆಸಕ್ತಿ ಬದಿಗಿರಿಸಿ ಅವರೊಂದಿಗೆ ಮಾತನಾಡಿದ್ದೆ. ದಿನ ಪತ್ರಿಕೆ ಸಂಜೆಗಾಗುವಾಗ ಪೊಟ್ಟಣ ಕಟ್ಟಲು ಮಾತ್ರ ಉಪಯೋಗ ಅನ್ನುವಂತೆ ಸಂದರ್ಶನ ಮುಗಿದ ನಂತರ ನಮ್ಮ ಮಟ್ಟಿಗೆ ವರದಿಗಾರರ ವರ್ತನೆಯೂ ಅಷ್ಟೇ. ಈ ಚಿತ್ರ ದೊರಕಲು ಕಾರಣರಾದ ಶ್ರೀ ಪಡ್ರೆಯವರಿಗೆ ಕೃತಜ್ನತೆಗಳು. ಪ್ರಕಟವಾದ ವಿಚಾರ ಸಂಬಂದಿಸಿದ ವ್ಯಕ್ತಿಗೆ ತಿಳಿಸುವ ಸೌಜನ್ಯ ವರದಿಗಾರರಿಗಿದ್ದರೆ ಚೆನ್ನ.

No comments: