Friday, September 28, 2012

ಸವಾರನ ಅಳತೆಗೆ ಸರಿಹೊಂದುವ ಸೈಕಲು

ಅತ್ಮೀಯ  ಹಿರಿಯರಾದ   ಮೀಸೆ  ಅಶೋಕಣ್ಣನವರು   ಕಳೆದ   ವಾರ   ಟಾಂಡೆಮ್  ಸೈಕಲೊಂದನ್ನು   ಕೊಂಡುಕೊಂಡರು.  ಚಕ್ರವರ್ತಿಗಳಿಗೆ    ಪತ್ನಿಯೊಂದಿಗೆ  ನಗರ ಸಂಚಾರ  ಹಂಬಲ.    ಖರೀದಿ  ವಿಚಾರ  ಸಂತಸ   ಪಟ್ಟರೂ   ನನಗೆ   ಅವರಿಬ್ಬರಿಗೂ     ಸವಾರಿ  ಆರಾಮ  ಎನಿಸುವುದೋ    ಅನ್ನುವ  ಬಗೆಗೆ     ಸಂಶಯಗಳಿದ್ದವು.    

ಟಾಂಡೆಮ್  ಸೈಕಲು ಸವಾರಿ ಎಂದರೆ ಇಬ್ಬರಿಗೂ  ಕೂರಲು  ತುಳಿಯಲು ಆರಾಮವಾಗಿರಬೇಕು. ಕೈಕಾಲುಗಳು  ಪೆಡಲಿಗೂ  ನೆಲಕ್ಕೂ  ಎಟಕುವುದು ಬಹು ಮುಖ್ಯ.  ತುಳಿಯುವಾಗ  ಕಾಲುಗಳು ನೇರವಾಗಲು  ಅವಕಾಶವಿರಬೇಕು.  ಹಿಂದಿನವರು  ಸುಸ್ತಾದರೆ   ಮುಂದಿನ  ಹಾದಿ  ದುರ್ಗಮವಾಗುತ್ತದೆ.    ಟಾಂಡೆಮ್  ಸೈಕಲ  ವಿಚಾರದಲ್ಲಿ    MAKE SURE BOTH RIDERS FIT THE BIKE  ಎನ್ನುತ್ತದೆ  ಒಂದು  ಸಹಾಯಕ  ಜಾಲತಾಣ.  ಆದರೆ     ನಮ್ಮ    ಮುಂದೆ ಆಯ್ಕೆಗಳಿಲ್ಲ.   ಸಿದ್ದ ವಸ್ತುಗಳ  ಬೇಕಾದರೆ  ತಗೊಳೋದು   ಇಲ್ಲಾಂದ್ರೆ   ಅಂಗಡಿಯಿಂದ   ಹೊರನಡೆಯೋದು   ಮಾತ್ರ  ನಮಗಿರುವ    ಅವಕಾಶ.   ಯಾವ  ರೀತಿ  ಅಂದರೆ     ಹೆನ್ರಿ  ಫೋರ್ಡ್  ಕಾರು ತಯಾರಿಸಿದ ನಂತರ  ಯಾವೆಲ್ಲ  ಬಣ್ಣಗಳಲ್ಲಿ  ದೊರಕುತ್ತದೆ  ಎಂದಾಗ  ಎಂದಿದ್ದನಂತೆ – you can have in any colour  as long as it is black. 

ನಮ್ಮೂರಲ್ಲಿ  ಅಪರೂಪವಾಗಿರುವ   ಟಾಂಡಮ್  ರಸ್ತೆಯಲ್ಲಿ ಚಲಾವಣೆಯಲ್ಲೂ  ಹೆಚ್ಚು  ಜಾಗ್ರತೆ  ಅಗತ್ಯ.   ಈ  ಸೈಕಲು ಉದ್ದವಿರುವ  ಕಾರಣ  ಎದುರಿಂದ  ಬರುವ  ಬಲಕ್ಕೆ    ತಿರುಗುವ  ಚಾಲಕರ  ಬಗೆಗೆ ತುಂಬಾ  ಎಚ್ಚರವಿರಬೇಕಾಗುತ್ತದೆ.  ಉದ್ದ  ಸೈಕಲಿನ ಬಗೆಗೆ  ಅವರು  ಯೋಚಿಸಿರುವುದಿಲ್ಲ.  ಈಗ  ಸಾಮಾನ್ಯವೆನಿಸುವ   ಉದ್ದ ಲಾರಿಗಳು  ಮೊದಲಿಗೆ  ನಮ್ಮೂರಿಗೆ   ಬಂದಾಗ   ಮುಂದಿನ  ಇಂಜಿನ್  ಬಾಗ   ದಾಟಿದ   ತಕ್ಷಣ    ಪೂರ್ತಿ  ದಾಟಿತೆನ್ನುವ  ಭ್ರಮೆಯಲ್ಲಿ ಸಾಗಿದ     ದ್ವಿಚಕ್ರ   ಸವಾರರು  ಅವುಗಳ   ಮದ್ಯೆ  ಸಿಲುಕಿ   ಅಪಘಾತಗಳಾಗಿವೆ.      

ನಾ ಕಂಡ  ಅತ್ಯುತ್ತಮ  ಟಾಂಡೆಮ್  ಅಂದರೆ   ಜರ್ಮನಿಯ   Hase  Pino.   ಕಳೆದ ವರ್ಷ  ಬೆಲ್ಜಿಯಂ ದೇಶದ    ಇಂತಹ  ಸೈಕಲೊಂದು  ನಮ್ಮೂರು  ದಾಟಿ    ಹೋಗಿತ್ತು.    http://halliyimda.blogspot.in/2011/12/blog-post_19.html


ಸೈಕಲು  ಖರೀದಿ  ಎಂದರೆ  ಪರದೇಶಗಳಲ್ಲಿ  ಉದಾಹರಣೆಗೆ  ಅಮೇರಿಕದಲ್ಲಿ     ಸರಳ ವ್ಯವಹಾರವಲ್ಲ.   ಅಂಗಡಿಗೆ  ಹೋದರೆ   ನಮ್ಮ  ಆಕಾರಕ್ಕೆ  ಹಾಗೂ  ಉಪಯೋಗಕ್ಕೆ  ಅನುಕೂಲವೆನಿಸುವ  ವಿಬಿನ್ನ  ಮಾದರಿಗಳು  ಅಲ್ಲಿರುತ್ತವೆ.  ಹೆಚ್ಚಿನ   ಜನ  ಸಿದ್ದ  ಸೈಕಲುಗಳನ್ನೇ   ಕೊಳ್ಳುತ್ತಾರೆ.  ಅಮೇರಿಕದಲ್ಲಿ ತಯಾರಾದ ಹೆಚ್ಚು ದುಬಾರಿ  ಸೈಕಲುಗಳು ಹಾಗೂ  ಅಮದಾದ  ಅಗ್ಗದ ಮಾಲುಗಳೂ  ಅಲ್ಲಿರುತ್ತವೆ.    


ಅಮೇರಿಕದಲ್ಲಿ   ಮುನ್ನೂರಕ್ಕೂ ಹೆಚ್ಚು  ಚಿಕ್ಕ  ಪುಟ್ಟ ಸೈಕಲು ತಯಾರಕರು ಇದ್ದಾರೆ.   ಹೆಚ್ಚಿನವು  ಏಕ  ವ್ಯಕ್ತಿ  ಉದ್ಯಮ.   ಅವರೆಲ್ಲ  ನಮ್ಮಲ್ಲಿ  ದರ್ಜಿ ಅಳತೆ ತೆಗೆಯುವಂತೆ    ಅಳತೆ  ತೆಗೆದು    ನಮ್ಮ   ಆಕಾರಕ್ಕೆ ಅನುಗುಣವಾಗಿ   ಸೈಕಲು ತಯಾರಿಸುತ್ತಾರೆ.  ಅಂದರೆ  ದೇಹ  ರಚನೆಗೆ  ಅನುಗುಣವಾಗಿ ಸೈಕಲು  ವಿನ್ಯಾಸ.    ಈ   ಸೈಕಲುಗಳು  ಅಲ್ಲಿನ   ಜೀವನಮಟ್ಟ  ಆಲೋಚಿಸುವಾಗ    ಹೆಚ್ಚೇನು  ದುಬಾರಿಯಲ್ಲ.   ಫ್ರೇಮಿಗೆ   ಸುಮಾರು  ಒಂದು ಮುಕ್ಕಾಲು ಎರಡು ಸಾವಿರ  ಡಾಲರ್  ಇರುತ್ತವೆ. ರೂಪಾಯಿ  ಲೆಕ್ಕದಲ್ಲಿ ಸುಮಾರು ಒಂದು ಲಕ್ಷ .    ಅನಂತರ  ಇತರ  ಬಿಡಿಬಾಗಗಳ  ಆಯ್ದು   ಜೋಡಿಸುವ  ಕೆಲಸ ಉಳಿದಿರುತ್ತದೆ. 



ಒರೆಗೊನ್  ರಾಜ್ಯದ  ಪೊರ್ಟ್ ಲಾಂಡಿನಲ್ಲಿಯೇ      ನಲುವತ್ತಕ್ಕೂ  ಹೆಚ್ಚು  ತಯಾರಕರು   ನೆಲೆನಿಂತಿದ್ದರೆ ಉಳಿದವರು  ದೇಶದಾದ್ಯಂತ  ಹಂಚಿಹೋಗಿದ್ದಾರೆ.     ಈ  ವ್ಯವಹಾರದಲ್ಲಿ   ಇರುವವರು ಎಲ್ಲರೂ  ಗಂಡಸರಲ್ಲ.    ಮಹಿಳೆಯರ  ಅಪೇಕ್ಷೆ   ಸ್ವಾಬಾವಿಕ    ಬಿನ್ನವಾಗಿರುತ್ತದೆ.   ಮಹಿಳೆಯರಿಗಾಗಿ  ಅವರ   ಅಳತೆ  ಮಾಡಿ  ಕೊಳವೆಗಳ  ಕತ್ತರಿಸಿ   ಜೋಡಿಸಿ   ಸೈಕಲು  ತಯಾರಿಯಲ್ಲಿ  ಮಹಿಳೆಯರೂ  ತೊಡಗಿಸಿಕೊಂಡಿದ್ದಾರೆ.   http://www.sweetpeabicycles.com

ಈ  ಉದ್ಯೋಗ  ಕಲಿಯಲು   ಸೈಕಲ್  ತಯಾರಿಸಲು    ಆಸಕ್ತಿ ಇದೆಯಾ  ? ಸರಿ. ಬನ್ನಿ.      ಹಲವಾರು ಅನುಭವಸ್ಥ  ತಯಾರಕರು  ತರಬೇತಿ  ಕೊಡುತ್ತರೆ.  ತರಬೇತಿ  ಮುಗಿಯುವಾಗ  ನೀವು  ಜೋಡಿಸಿದ  ಒಂದು   ಸೈಕಲು  ನಿಮ್ಮದಾಗಿರುತ್ತದೆ.   

ಅಳತೆ ತೆಗೆದ ನಂತರ  ಕೊಳವೆಗಳ  ಕತ್ತರಿಸುವುದರ  ಕರಾರುವಕ್ಕಾಗಿ   ಲೆಕ್ಕಾಚಾರ  ಹೇಳಲು  ಬೈಕ್ ಕಾಡ್ ಎನ್ನುವ   ಸೊಫ್ಟ್ ವೇರ್   ಸಹಾಯ  ಮಾಡುತ್ತದೆ.  ಹೆಚ್ಚಿನ  ತಯಾರಕರು  ಅದನ್ನು ಬಳಸುತ್ತಾರೆ.  ಇದರ  ಸರಳ  ಅವೃತ್ತಿ ಮುಕ್ತವಾಗಿ  ಬಳಸಲು  ಲಭ್ಯ.   ಒಂಟಿ  ಸೈಕಲಿಗೂ  ಜಂಟಿ   ಸೈಕಲು  ವಿನ್ಯಾಸ    ದಾರಿ ಬೇರೆ ಬೇರೆ.   


ವರುಷಕ್ಕೊಮ್ಮೆ  ಈ  ಸೈಕಲು  ತಯಾರಕರ ಸಮಾವೇಶವೂ ನಡೆಯುತ್ತದೆ.   ಹಲವಾರು  ಪ್ರಮುಖ ತಯಾರಕರು ತಮ್ಮ  ಕೈಚಳಕ  ಪ್ರದರ್ಶಿಸಿಲು  ಉತ್ಸಾಹ  ತೋರಿದರೆ    ಉಳಿದವರೆಲ್ಲ  ಸ್ಪೂರ್ತಿ  ತುಂಬಿಕೊಳ್ಳಲು  ನೆರೆಯುತ್ತಾರೆ.  ಅಂತೂ  ಸಮಾವೇಶ  ಬರ್ಜರಿಯಾಗಿಯೇ  ನಡೆಯುತ್ತದೆ.  ಆರು ತಿಂಗಳು ಹಿಂದೆ ನಡೆದ ಈ ವರ್ಷದ ಸಮಾವೇಶದ  ಚಿತ್ರಗಳ ನೋಡಲು ಇಲ್ಲಿ ಕ್ಲಿಕ್ಕಿಸಿ. 


ನಮಗೆ  ಅಳತೆಗೆ  ತಕ್ಕ   ಸೈಕಲು    ಅಪರೂಪವಾದರೆ    ನಾವು  ಮಾಮೂಲು ದರಿಸುವಂತಹ   ಊರ  ದರ್ಜಿ  ಹೊಲಿದ  ಅಂಗಿ  ಅಮೇರಿಕನರಿಗೆ   ಬಹಳ  ಅಪರೂಪ.  ಅಮೇರಿಕದಲ್ಲಿ ಗೆಳೆಯ  ಎರಿಕ್  ನನ್ನದು  ಅಳತೆ  ತೆಗೆದು  ಕೈಮಗ್ಗದ  ಬಟ್ಟೆಯಿಂದ   ಹೊಲಿದ   ಅಂಗಿ  ಎಂದಾಗ  ತುಂಬಾ  ಆಶ್ಚರ್ಯ  ಪಟ್ಟ.   ಕಾರಣ  ಅಲ್ಲಿ ಹೊಲಿಗೆ ಮಜೂರಿ  ದುಬಾರಿ.     ಅಮೇರಿಕದಲ್ಲಿ ಹೊಲಿಸಿದ  ಅಂಗಿ  ದರಿಸುವವನು  ಬಾರಿ     ಶ್ರೀಮಂತ.    J      ಉಳಿದವರೆಲ್ಲ   ಮೆಕ್ಸಿಕೊ,   ಕೊಸ್ಟಾರಿಕಾ,    ಥೈಲಾಂಡಿನಲ್ಲೊ    ತಯಾರಾಗುವ   ರೆಡಿಮೇಡ್  ಅಂಗಿಗಳಲ್ಲೇ  ತೃಪ್ತರು. 

ಹಲವಾರು  ತಿಂಗಳಿಂದ  ವೈಯುಕ್ತಿಕ  ಸಮಸ್ಯೆಗಳಿಂದಾಗಿ    ನನ್ನ  ಬರವಣಿಗೆ  ನಾನು ಅಪೇಕ್ಷಿಸಿದ  ಗುಣಮಟ್ಟದಲ್ಲಿರಲಿಲ್ಲ.  ಏನು ?  ಸುದ್ದಿ ಇಲ್ಲ  ಎಂದು   ವಟಗುಟ್ಟಿದ   ನನ್ನ   ಚುರುಕುಗೊಳಿಸಿದ       ಶ್ರೀಮಾನ್    ಬೋರಯ್ಯನೋರಿಗೆ    ಕೃತಜ್ನತೆಗಳು

3 comments:

ashoka vardhana gn said...

ನೋಡ್ ನೋಡ್ತಾ ಸಂಕಟವಾಯ್ತು. ನಮ್ಮ ಜಂಟಿ ಸೈಕಲ್ ಭಾರದ ಏಕಮಾತ್ರ ತಯಾರಿ ಮತ್ತು ಏಕಮಾತ್ರ ಮಾದರಿ ಕೂಡಾ. ಗೇರಿಲ್ಲ, ಸಣ್ಣ ಚಕ್ರ, ಸಣ್ಣ ಕ್ರ್ಯಾಂಕಾಗಿ ನಾವು ಇಬ್ಬರು ತುಳಿದರೂ ಸಾಮಾನ್ಯ ಏರಿನಲ್ಲಿ ಸುಸ್ತೋ ಸುಸ್ತು. ಕಂಪೆನಿಗೆ (BSA) ಬರೆದು ಹಾಕಿದ್ದೇನೆ, ಇದನ್ನೇ ಉತ್ತಮಪದಿಸಲು ನಿಮ್ಮಲ್ಲಿ ಸಲಹೆಗಳಾದರೂ ಇವೆಯೇಂತ; ಇದುವರೆಗೆ ಮೌನ!

ಇತ್ತ ಗೆಳೆಯ ವೆಂಕಟ್ರಮಣ ಉಪಾಧ್ಯರ ಮಡಿಚುವ ಸೈಕಲ್ (ವಿದೇಶೀ ಮಾಲು, ಮೂವತ್ತು ಸಾವಿರದ ಅಂದಾಜು ಬೆಲೆ,ಎರಡು ವರ್ಷ ಹಳತು)ಹಿಂದಿನ ಚಕ್ರದ ಫ್ರೀ ವೀಲ್ ಕೈಕೊಟ್ಟಿದೆ ಎಂದು ಬಿಚ್ಚಲು ನೋಡಿದರು. ಈತ ಸೂಕ್ಷ್ಮ ಕ್ಯಾಮರಾದಿಂದ ಇನ್ಯಾವ್ಯಾವುದೋ ಯಂತ್ರ ರಿಪೇರಿ, ತಯಾರಿ ಪರಿಣಿತನಾದರೂ ಆಗಲಿಲ್ಲವಂತೆ. ಮಾರಿದ ಬೆಂಗಳೂರಿನವರಿಗೆ ಕಳಿಸಿದರಂತೆ. ಅವರು ವಿದೇಶಕ್ಕೇ ಕಳಿಸಿದರಂತೆ. ಅಲ್ಲಿಂದೀಗ ಬದಲಿ ಚಕ್ರವೇ ಬರುತ್ತಿದೆಯಂತೆ (ಉಚಿತವೋ ದಂಡ ಉಂಟೋ ಗೊತ್ತಿಲ್ಲ). ಹಾಗಾಗಿ ನಮ್ಮಿಂದ ಪ್ರೇರಣೆ ಪಡೆದು ಕೊಳ್ಳಲು ನುಗ್ಗುವವರೇ ಮಾರ್ಕೆಟ್ ಆಘಾತಗಳಿಗೂ ಎಚ್ಚರವಿರಲಿ! ಗೋವಿಂದನಿಗೆ ಒಳ್ಳೇ ವಿಚಾರ ಹಂಚಿದ್ದಕ್ಕೆ ಕೃತಜ್ಞ.
ಅಶೋಕವರ್ಧನ

Anonymous said...

ಚಕ್ರವರ್ತಿದಂಪತಿಗಳ ಜತೆ ಸೈಕಲಾಟದ ಅನುಭವ ಕಥಾನಕವನ್ನು ಕಾಯುತ್ತಾ ಇದ್ದೇನೆ. - ಪೆಜತ್ತಾಯ

subbanna said...

ನೀವು ಕೊಟ್ಟ ಪಿ೦ಕ್ ಬೈಕ್ ಬ್ಲಾಗ್ ನೋಡುವಾಗ ಅಸೂಯೆ ಆಗುತ್ತದೆ, ಚಿಕ್ಕ ಮಕ್ಕಳ೦ತೆಯೇ !! ನಮ್ಮಲ್ಲಿ, ಯಾವುದೇ ವೃತ್ತಿ, ಉದ್ಯೋಗದಲ್ಲಿ ತೊಡಗಿರುವವರಿಗೆ, ಸೈಕ್ಲಿ೦ಗ್ ಪೂರ್ತಿ ಅಪ್ರಸ್ತುತವೇ ಆಗಿದೆಯಲ್ಲಾ, ಯಾಕೆ ? ನಾನೂ ಸೈಕಲ್ ಬಳಸಬೇಕು ಎ೦ದು, ಹಲವು ಬಾರಿ ಅ೦ದುಕೊ೦ಡಿದ್ದೇನೆ ( ಆಸ್ಕರ್ ವೈಲ್ಡ್ ಹೇಳಿದ್ದನ೦ತೆ, ಸಿಗರೇಟ್ ಸೇವನೆ ತ್ಯಜಿಸುವುದೇ, ಬಹಳ ಸುಲಭ, ನಾನು ಅನೇಕ ಬಾರಿ ಮಾಡಿದ್ದೇನೆ !) - ಕನಿಷ್ಟ, ಸುಮಾರು ೨ ಕಿಮೀ ದೂರದಲ್ಲಿರುವ ಕೆಎ೦ಎಫ಼್ ನ್ ಹಾಲು ಕೇ೦ದ್ರಕ್ಕೆ, ಪ್ರತಿದಿನ ಬೆಳಗ್ಗೆ ಹಾಲು ಹಾಕಲಾದರೂ, ಅ೦ತ, ಛೆ, ಪುರುಸೊತ್ತೇ ಆಗಲ್ಲ !