Wednesday, August 25, 2010

ವಿದ್ಯುತ್ ಸಹಾಯದಿಂದ ತ್ರಿ ಚಕ್ರ ಸವಾರಿ

ಇತ್ತೀಚಿನ  ದಿನಗಳಲ್ಲಿ  ನನ್ನ  ತ್ರಿ ಚಕ್ರ ಪ್ರವಾಸದ  ಬಗ್ಗೆ  ತಲೆ ಕೇಡಿಸಿಕೊಂಡಿದ್ದ  ಕಾರಣ    ಬ್ಲೋಗ್ ನಿರ್ಲಕ್ಷಕ್ಕೆ  ಒಳಗಾಯಿತು.  ಕೆಲವು  ಗೆಳೆಯರು  ಹಳ್ಳಿಯಿಂದ  ನಿರ್ಗಮಿಸಿದ್ದಿರಾ ?  ಎಂದು  ಪತ್ರಿಸಿದಾಗ  ಇಲ್ಲ  ಸದ್ಯದಲ್ಲಿ ನಿರ್ಗಮಿಸುತ್ತಿದ್ದೇನೆ  ಕನ್ಯಾಕುಮಾರಿಗೆ  ಎಂದು  ಉತ್ತರಿಸಿದ್ದೆ.

ಈಗೊಂದು ವಿಶಿಷ್ಟವಾದ  ಪ್ರವಾಸ  ಕೈಗೊಂಡಿದ್ದೇನೆ.  ಸೈಕಲಿನಲ್ಲಿ  ರಿಕಂಬಂಟ್  ಅರ್ಥಾತ್  ಮಲಗಿ  ಬಿಡುವುದು ಒಂದು  ಬೆಳಕು ಕಾಣದ  ಮಾದರಿ.  ನನಗೋ  ಮೈಮಾಲುವ  ಕಾರಣ   ದ್ವಿಚಕ್ರ ಪರವಾನಿಗೆ  ರದ್ದಾಗಿದೆ. ಹಾಗೆ  ಈಗ  ತ್ರಿಚಕ್ರಕ್ಕೆ  ಮೊರೆ ಹೋಗಿದ್ದೇನೆ.  ಸೈಕಲಿನ  ಅವಿಶ್ಕಾರದಲ್ಲಿ  ಗೇರುಗಳ  ಅನಂತರ  ಗಮನಾರ್ಹ  ಬೆಳವಣಿಕೆ  ಎಂದರೆ ಈ  ವಿದ್ಯುತ್  ಸಹಾಯಕ  ವ್ಯವಸ್ಥೆ. ಅದರಿಂದ  ದುರ್ಬಲರು  ಅಥವಾ  ಕಾರಣಾಂತರ  ಸೈಕಲ್  ಉಪಯೋಗಿಸದವರೂ  ಉಪಯೋಗಿಸಬಹುದಾದ  ಅನುಕೂಲಕರ  ವ್ಯವಸ್ಥೆ.

ನಿಜಕ್ಕೂ  ನಾವು  ಸಾರಿಗೆ  ಬಗೆಗೆ  ನಾವು  ಅನುಸರಿಸುತ್ತಿರುವ  ಮಾದರಿ  ತಪ್ಪು.  ಈಗಾಗಲೇ  ದೆಹಲಿಯಲ್ಲಿ  ಶೇಕಡ ೨೩ ರಷ್ಟು  ಭೂಬಾಗ   ರಸ್ತೆಗಳೇ  ಆಗಿವೆ.  ಆದರೂ  ಅಲ್ಲಿ  ಕಾರು  ನಿಲ್ಲಿಸಲು ಕಷ್ಟಪಡುತ್ತಿದ್ದಾರೆ  ಮಾತ್ರವಲ್ಲ    ವಿಚಾರ  ಹೊಡೆದಾಟ  ಕೊಲೆ  ಪ್ರಕರಣಗಳೂ  ನಡೆದಿವೆ. ಸುಮಾರು  ಮೂವತ್ತೈದು  ವರ್ಷ  ಹಿಂದೆ   ನಾನೊಮ್ಮೆ  ರಾಂಚಿಗೆ  ಹೋಗಿದ್ದೆ.  ರೈಲಿನಲ್ಲಿ  ಮೊದಲಾಗಿ    ಸೀಟ್ ಕಾದಿರಿಸಿರಲಿಲ್ಲ.    ಕೂಲಿಯವ  ಶಂಟಿಂಗ್ ಯಾರ್ಡ್ ನಿಂದ  ಮಾಮೂಲಿ  ಕಂಪಾರ್ಟ್ ಮೆಂಟ್ ನಲ್ಲಿ  ಸಾಮಾನಿಡುವ  ಅಟ್ಟಳಿಗೆಯಲ್ಲಿ  ಕುಳಿತು  ಬಂದು    ಜಾಗವನ್ನು  ನಮಗೆ  ಇಪ್ಪತ್ತಕ್ಕೋ  ಮೂವತ್ತಕ್ಕೋ  ಮಾರಿದ. ಅದುವೇ  ಮುಂದಿನ  ಮೂರು  ದಿನದ  ಸಿಂಹಾಸನ, ಶಯನ ಕೋಣೆ.  ಒಂದು  ಚಾ ಕೊಳ್ಳಲೋ  ಪಾಯಿಖಾನೆಗೋ  ಹೋಗಲೂ  ಅಳುಕು.  ಇತರರು   ಅಕ್ರಮಿಸಿದರೆ ಅನಂತರ  ನಮಗಿಲ್ಲವಲ್ಲ.  ಹಾಗೆ  ಇಂದು  ಹಲವರು ಬೆಳಗ್ಗಿನಿಂದ  ರಾತ್ರಿ ವರೆಗೆ  ಅಥವಾ  ವಾರಗಟ್ಟಲೆ  ಕಾರು  ನಿಂತಲ್ಲ್ಲಿಂದ  ಚಲಿಸುವುದೇ  ಇಲ್ಲ.

ಸುಮಾರು  ನಾಲ್ಕು ರೂಪಾಯಿ  ವಿದ್ಯುತ್  ನನಗೆ  ದಿನಕ್ಕೆ  ನೂರು  ಕಿಮಿ ಚಲಿಸಲು  ಸಾಕಾಗುತ್ತದೆ.  ನಿಜ,    ಬಗೆಗೆ  ಬಹಳ  ಲೆಕ್ಕಾಚಾರಗಳು  ಅಗತ್ಯ.  ಆದರೆ ನಮ್ಮ  ಹೆಚ್ಚಿನ  ಓಡಾಟ  ಒಮ್ಮೆಗೆ  ಪ್ಪತ್ತು  ಕಿಮಿ ದಾಟುವುದಿಲ್ಲ  ಎಂದಾಗ    ವಿದ್ಯುತ್  ಸೈಕಲು ನಿಜಕ್ಕೂ  ಉಪಯುಕ್ತ. ಇದರ  ಬಗೆಗೆ  ಹೆಚ್ಚಿನ  ವಿವರಣೆ  http://e-triking-india.blogspot.com/  ತಾಣದಲ್ಲಿ  ಲಭ್ಯ.

ನಾನು  ಉಪಯೋಗಿಸುತ್ತಿರುವುದು  ಮೊಬೈಲ್  ಅಥವಾ  ಲಾಪ್ ಟೋಪ್ ಗಳಲ್ಲಿ  ಉಪಯೋಗಿಸುತ್ತ್ರುವ   ಲಿತಿಯಂ ಅಯೋನ್ ಬಾಟರಿ.   ಇವು ಕಡಿಮೆ  ತೂಕ, ದುಬಾರಿ  ಆದರೆ  ಪರಿಸರ  ಸ್ನೇಹಿ.  ಹೀಗೆ    ಲೆಕ್ಕಾಚಾರದಿಂದ  ಕರಾರುವಕ್ಕಾಗಿ  ಎಷ್ಟು  ದೂರ  ಚಲಿಸಬಹುದು,  ಎಷ್ಟಕ್ಕೆ  ಚಾರ್ಜಿಂಗ್  ತಾಣಗಳು  ಸೇವೆ  ಒದಗಿಸಬಹುದು  ಮುಂತಾದ  ಪ್ರಶ್ನೆಗಳಿಗೆ  ಉತ್ತರಿಸಲು ಇನ್ನೂ  ಸಾಕಷ್ಟು  ಸಂಶೋಧನೆ  ಅಗತ್ಯ.      ಇದೊಂದು  ರೀತಿಯಿಯಲ್ಲಿ  technology  demo  ಪ್ರವಾಸ    ಅನ್ನಲೂ  ಬಹುದು. 

Friday, July 16, 2010

ಸೈಕಲ್ ಪರ ಜಾಹಿರಾತು

ಕಾರು ಓಡಿಸುವುದು ವಿಮಾನದಲ್ಲಿ ಪ್ರವಾಸ ಮಾಡುವುದು ಯಶಸ್ಸಿನ ಸಂಕೇತ ಎಂದು ನಮಗೆ ಚಿಕ್ಕಂದಿನಿಂದಲೇ ತಲೆಯಲ್ಲಿ ತುಂಬಲಾಗಿದೆ. ನಾವು   ನಮ್ಮ ಸಮಾಜದ ವಿದ್ಯಾಬ್ಯಾಸವನ್ನು ಮಾದ್ಯಮಕ್ಕೆ, ಜಾಹಿರಾತುಗಳಿಗೆ ವಹಿಸಿಕೊಟ್ಟು  ನಿಶ್ಚಿಂತೆಯಿಂದಿದ್ದೇವೆ. ಹೆಚ್ಚು ನೈಸರ್ಗಿಕ ಸಂಪನ್ಮೂಲಗಳ ಖರ್ಚು ಮಾಡಿದವನೇ ಜಾಣ ಅನ್ನುವ ಬಾವನೆ ಅವು ಮನದಲ್ಲಿ ಮೂಡಿಸುತ್ತವೆ. ಈ ಕ್ಷತ್ರಿಮ ಸಂದೇಶದ ಹಿಂದೆ ಸ್ವಾರ್ಥ ಹಿತಾಶಕ್ತಿಗಳ ಕೈವಾಡವಿರುವುದು ನಮಗೆ ಅರಿವಾಗುವುದೇ ಇಲ್ಲ. ಸೈಕಲಿನಲ್ಲಿ ಓಡಾಡುವವ ಸ್ವಾಭಿಮಾನ ಉಳಿಸಿಕೊಳ್ಳಲು ಹರಸಾಹಸ ಮಾಡುವ ಸನ್ನಿವೇಶ. ಪ್ರಪಂಚದ ಎಲ್ಲೆಡೆ ಪರೀಸ್ಥಿತಿ ಕೆಟ್ಟದಾಗಿಲ್ಲ ಅನ್ನುವುದಕ್ಕೊಂದು ಉದಾಹರಣೆ. .


ಡೆನ್ಮಾರ್ಕಿನಲ್ಲೊಂದು ಟಿವಿ ಜಾಹಿರಾತು. ಹೊಸ ಕಾರು ತೊಳೆಯುತ್ತಿರುವಾತ ಪಕ್ಕದ ಮನೆಯವನನ್ನು ಕೂಗಿ ಕರೆದು ತನ್ನ ಕಾರನ್ನು ಬಣ್ಣಿಸುತ್ತಾನೆ. ನನ್ನ ಕಾರಿನಲ್ಲಿ  ಎಬಿಎಸ್, ಹದಿನಾರು ಇಂಚು ರಿಮ್ ಮತ್ತು ಆರು ಗೇರು ಇತ್ಯಾದಿ ಇರುವುದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.



ಎರಡನೇಯ ವ್ಯಕ್ತಿ ಇಪ್ಪತ್ತೆಂಟು ಇಂಚು ರಿಮ್, ಎಂಟು ಗೇರು, ಪ್ರಕಾಶಮಯ ದೀಪಗಳು ಮತ್ತು ಕಂಪ್ಯುಟರ್ ಅಳವಡಿಸಿದ ತಿರುಗಣಿ. ನನ್ನ ಪತ್ನಿ ಮತ್ತು ಮಗಳೂ ಅವುಗಳನ್ನು ಹೊಂದಿದ್ದಾರೆ ಎನ್ನುವಾಗ ಕಾರಿನ ಯಜಮಾನ ತಲೆ ತಗ್ಗಿಸಿ ಮನೆಯೊಳಗೆ ಹೋಗುತ್ತಾನೆ. ಕಂಡು ಕುಶಿಯಾಗಿ ಹಂಚಿಕೊಳ್ಳೋಣ ಅನಿಸಿತು.


ವ್ಯಾಯಾಮ ನಮ್ಮ ದೇಹದಲ್ಲಿ ಆರೋಗ್ಯಕರವಾದ endorphins ಹೆಚ್ಚು ತಯಾರಾಗಲು ಪೂರಕವಾಗಿದ್ದು ನಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಮುಂದುವರಿದ (?) ದೇಶಗಳಲ್ಲಿ ಕಾರು ಮೇಲಿನ ಅವಲಂಬನೆಯಿಂದಾಗಿ ಜನಸಾಮಾನ್ಯರು ವ್ಯಾಯಾಮ ಮಾಡುವ ಹಕ್ಕೂ  ಕಳಕೊಳ್ಳುತ್ತಿದ್ದಾರೆ. ಮನುಷ್ಯನ ವಿನ್ಯಾಸವು  ತನ್ನ ಪ್ರಯತ್ನದಲ್ಲೇ ಮುಂದೆ ಚಲಿಸುವಂತೆ ಇದ್ದು ನಮಗೆ ಈಗ ಕಾರು ಮತ್ತು ತೈಲ ಕಂಪೇನಿಗಳ ಬೋಧನೆಯಿಂದಾಗಿ ಆ ವಿಚಾರ ಮರೆತು ಹೋಗಿದೆ. ದರ್ಮಾರ್ಥ ಲಭ್ಯವಿರುವ ವಸ್ತುವನ್ನು ಪೊಟ್ಟಣ ಕಟ್ಟಿ ಮಾರುವುದು ಬಂಡವಾಳಶಾಹಿ ಚಿಂತನೆಯ ಫಲವಾಗಿದೆ. ಉದಾಹರಣೆ ಬಾಟಲಿ ನೀರು, ವ್ಯಾಯಾಮದ ಜಿಮ್, ಕಾರು ಮತ್ತು ಬಟ್ಟೆ ಒಣಗಿಸಲು ಉರುಳು ಯಂತ್ರಗಳು ಈಗ ಹಳ್ಳಿಗಳೂ ಸೇರಿದಂತೆ ಎಲ್ಲೆಲ್ಲೂ ಲಭ್ಯ.

Monday, July 05, 2010

ಮಠದಲ್ಲಿರುವ ಮಸೀದಿ

ನಿನ್ನೆ ತಿರುಗಾಟದಲ್ಲಿ ಉಪ್ಪಿನಂಗಡಿ ಸಮೀಪ ಮಠದಲ್ಲಿರುವ ಮಸೀದಿ ಕಂಡಾಗ ಹಿಂದಿನ ಕಥೆಯೊಂದು ನೆನಪಾಯಿತು. ಐಶ್ವರ್ಯ ತ್ರಿಲೋಕ ಸುಂದರಿಯೆಂದು ಆಯ್ಕೆಯಾಗುವಾಗ ಕೇಂದ್ರದಲ್ಲಿ ಕಲ್ಪನಾಥ ರೈ ಅನ್ನುವ ಮಂತ್ರಿಯಿದ್ದರು. ರೈ ಒಬ್ಬರು ಗೆದ್ದರೆ ನಾವು ಸುಮ್ಮನಿರುವುದಾದರೂ  ಹೇಗೆ ಎಂದು  ಬುದ್ದಿವಂತ  ಸಹಾಯಕನೊಬ್ಬ ಪ್ರಶ್ನಿಸಿ ಒಂದು  ಪ್ರಸ್ತಾಪವನ್ನು ಮುಂದಿಟ್ಟ. ಉತ್ತರ ಪ್ರದೇಶದ ಈ ರೈ ಮಂತ್ರಿಗಳು ರುಜು ಹಾಕಿದರು.



ನಮ್ಮ ಯೆಡಿಯೂರಪ್ಪನವರು ಈ ಮಸೀದಿಯನ್ನೂ ಹಂಚೋಣಕ್ಕೆ ಸೇರಿಸುವರೇ ? ಏಕೆಂದರೆ ಅದು ಮಠದಲ್ಲಿದೆ.

Wednesday, April 07, 2010

ಹೆಗಲೇರಿದ ನನ್ನ ಸೈಕಲು

ಈ ಚಿತ್ರ ನೋಡುವಾಗ ನೆನಪು ಇಪ್ಪತೈದು ವರ್ಷ ಹಿಂದಕ್ಕೋಡಿತು. ಕಾರಣ ನ್ಯುಯೊರ್ಕ್ ಪಟ್ಟಣದಲ್ಲೊಮ್ಮೆ ನನ್ನ ಸೈಕಲೂ ಹೆಗಲೇರಿತ್ತು.
ತಡ ಸಂಜೆ ಅಮೇರಿಕ ತಲಪಿದ ಕಾರಣ ರಾತ್ರಿ ವಿಮಾನ ನಿಲ್ದಾಣದಲ್ಲೇ ಕಳೆದಿದ್ದೆ. ಅಲ್ಲೊಂದು ಕಂಬಕ್ಕೆ ಸೈಕಲು ಭದ್ರಪಡಿಸಿ ಮಲಗುವ ಚೀಲ ಬಿಡಿಸಿ ನಿದ್ದೆಗೆ ಜಾರಿದ್ದೆ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಪಟ್ಟಣದ ಹೊರಸಾಗಲು ದಾರಿ ಹುಡುಕುತ್ತಿದ್ದೆ. ನನ್ನಲ್ಲಿ ಭೂಪಟಗಳಿರಲಿಲ್ಲ. ಆದರೆ ಗುರಿ ಮತ್ತು ಸಾಗುವ ದಿಕ್ಕು ಎರಡೂ ಖಚಿತವಾಗಿತ್ತು. ನ್ಯೂ ಯೋರ್ಕ್ ಪಟ್ಟಣದ ವಿಮಾನ ನಿಲ್ದಾಣ ಇರೋದು ಲಾಂಗ್ ಐಲಾಂಡ್ ದ್ವೀಪದಲ್ಲಿ.

ಹಾಗಾಗಿ ಮೇಲು ಸೇತುವೆಯಲ್ಲಿ ಸಾಗುವ ಹೆದ್ದಾರಿ, ನದಿಯಡಿಯಲ್ಲಿ ಸಾಗುವ ರೈಲು ದಾರಿ ಎಲ್ಲವೂ ನನಗೆ ಅಸಾದ್ಯ ಅಥವಾ ದುಬಾರಿಯಾಗಿತ್ತು. ಆದರೂ ಬ್ರೊಂಕ್ಸ್ ಪ್ರದೇಶಕ್ಕೆ ಸಾಗಲು ವೀಟ್ ಸ್ಟೋನ್ ಸೇತುವೆ ಹತ್ತಿರ ಸಾಗಿದೆ. ಅಲ್ಲಿ ಖಚಿತ ಬೋರ್ಡ್ ಇತ್ತು – ಸೈಕಲುಗಳಿಗೆ ಪ್ರವೇಶವಿಲ್ಲ. ಅಲ್ಲಿ ಸಿಕ್ಕವರೆಲ್ಲ ವಿಚಾರಿಸಿದೆ. ಎಲ್ಲರೂ ಗೊತ್ತಿಲ್ಲವೆಂದು ತಲೆಯಾಡಿಸಿದರು. ಕೊನೆಗೊಬ್ಬನಲ್ಲಿ ನೀವು ನದಿಯಾಚೆ ಬ್ರೋಂಕ್ಸ್ ಗೆ ಹೇಗೆ ಹೋಗುವಿರಿ ಎಂದಾಗ ಆ ಪೂರ್ವಾಗ್ರಹ ಪೀಡಿತ ಅಸಾಮಿ ಇಲ್ಲಿಂದ ಯಾರೂ ಬ್ರೋಂಕ್ಸ್ ಗೆ ಹೋಗುವುದಿಲ್ಲ ಎಂದು ಬಿಟ್ಟ. ಅವನಿಗೆ ಅದೊಂದು ಕರಿಯರು ವಾಸವಾಗಿರುವ ಕೊಳಕು ಪ್ರದೇಶ ಅನ್ನುವ ಅನಿಸಿಕೆ.

ಕೊನೆಗೊಂದು ಪೋಲಿಸ್ ಕಾರು ಸಮೀಪಿಸಿ ಅದರಲ್ಲಿದ್ದ ಪೋಲಿಸರ ಹತ್ತಿರ ವಿಚಾರಿಸಿದೆ. ಅವರೂ ತಲೆ ಕೆರೆದು ಕೊಂಡರು. ಕೊನೆಗೆ ಅವರ ವೈರ್ಲೆಸ್ ಉಪಯೋಗಿಸಿ ಮಾಹಿತಿ ಹುಡುಕಿ ಕೊಟ್ಟರು. ನೀನು ಟ್ರೈಬೊರೊ ಸೇತುವೆ ಬಳಿ ಸಾಗು ಎಂದರು. ನನ್ನ ಸವಾರಿ ಟ್ರೈಬೊರೊ ಸೇತುವೆ ಬಳಿ ಸಾಗಿತು. ಅಲ್ಲಿ ಸೇತುವೆ ಮೇಲೆ ಸೈಕಲು ಸಾಗುವ ದಾರಿಯೇನೊ ಇತ್ತು. ಅದು ಮಾತ್ರ ನೂರು ಮೆಟ್ಟಲು ದಾಟಿದ ನಂತರವಿತ್ತು. ಕೆಲಸವಾಗಬೇಕಾದರೆ ಕತ್ತೆ ಕಾಲೂ ......... ನೆನಪಾಯಿತು. ಸರಿ ಸೈಕಲು ನನ್ನ ಹೆಗಲೇರಿತು. ಸೇತುವೆ ಮೇಲೆ ಮತ್ತು ಉತ್ತರದ ಬದಿಯಲ್ಲಿ ಸೈಕಲಿಗೆ ಪಾದಚಾರಿಗಳಿಗೆನ್ನುವ ಅಗಲವಾದ ದಾರಿ ಇತ್ತು.

ವಾಪಾಸು ಬಂದ ನಂತರ ಹೇಳುತ್ತಾ ಇದ್ದೆ. ಹೆಚ್ಚಿನ ಪಾಲು ಸೈಕಲು ನನ್ನ ಹೊತ್ತಿತು. ಕೆಲವೆಡೆ ಜತೆಯಲ್ಲಿ ವಿಮಾನ ಹಡಗು ರೈಲು ಪ್ರಯಾಣ ಮಾಡಿದ್ದೂ ಉಂಟು. ನ್ಯೂ ಯೊರ್ಕಿನಲ್ಲೊಮ್ಮೆ ಮಾತ್ರ ನಾನು ಸೈಕಲು ಹೆಗಲೇರಿಸುವುದು ಅನಿವಾರ್ಯವಾಗಿತ್ತು.

ಒಂದಂತೂ ಸತ್ಯ. ಸೈಕಲು ಸವಾರರೆಂದರೆ ಪ್ರಪಂಚದ ಎಲ್ಲ ಕಡೆಗಳಲ್ಲೂ ತಾತ್ಸಾರ. ಕಾರುಗಳ ಈ ರೀತಿ ಮೆಟ್ಟಲುಗಳ ಮೇಲೆ ಸಾಗಲು ಯಾರೂ ಹೇಳುವುದಿಲ್ಲ.

Sunday, March 28, 2010

ಸೈಕಲ್ ಲೋಕದಲ್ಲಿ ವೇಗದೂತ

ನೆದರ್ ಲಾಂಡಿನಲ್ಲಿ ನನ್ನ ಪಾಡಿಗೆ ಸೈಕಲಿಸುತ್ತಿದ್ದೆ. ಅನಿರೀಕ್ಷಿತವಾಗಿ ಬಹಳ ವೇಗವಾಗಿ ದಾಟಿ ಹೋದ ಸೈಕಲು ನನ್ನನ್ನು ಆಶ್ಚರ್ಯಚಕಿತನನ್ನಾಗಿ ಮಾಡಿತು. ಬಹಳ ಪ್ರಯತ್ನಿಸಿದರೂ ನನಗೆ ಅದರನ್ನು ಸಮೀಪಿಸಲು ಸಾದ್ಯವಾಗಲೇ ಇಲ್ಲ. ನಮ್ಮ ಮದ್ಯೆ ಇರುವ ಅಂತರ ಹೆಚ್ಚಾಗುತ್ತಲೇ ಹೋಯಿತು. ನಂತರ ಗೊತ್ತಾದ ವಿಚಾರ ಅದೊಂದು recumbent cycle.



ವೈಜ್ನಾನಿಕವಾಗಿ ಆಲೋಚಿಸುವಾಗ ನಾವು ಮುಂದೆ ಸಾಗುವಾಗ ಗಾಳಿಯನ್ನು ಸೀಳುತ್ತಾ ಸಾಗುತ್ತೇವೆ. ನಡುಗೆಯ ವೇಗದಲ್ಲಿ ಅದು ನಮ್ಮನ್ನು ಸಮಸ್ಯೆ ಉಂಟು ಮಾಡುವುದಿಲ್ಲ. ಆದರೆ ವೇಗ ಹೆಚ್ಚಿದಂತೆ ಅದು exponentially ಹೆಚ್ಚಾಗುತ್ತದೆ. ಇಪ್ಪತ್ತೈದು ಕಿಮಿ ವೇಗದಲ್ಲಿ ಸಾಗುವ ಸೈಕಲ್ ಸವಾರ ತನ್ನ ಶಕ್ತಿಯ ಅರ್ಧ ಬಾಗವನ್ನು ಈ ಗಾಳಿಯ ತಡೆಯನ್ನು ಭೇದಿಸುವಕ್ಕೆ ವಿನಿಯೋಗಿಸುತ್ತಾನೆ. ಸಾಗಿದ ಕೂಡಲೇ ಬೆನ್ನ ಹಿಂದೆ ಉಂಟಾಗುವ ಗಾಳಿಯ ಕಡಿಮೆ ಒತ್ತಡ ಸಾಗುವವನನ್ನು ಹಿಂದಕ್ಕೆ ಎಳೆಯುತ್ತದೆ. ಅದುದರಿಂದ ಗಾಳಿಗೆ ಎದುರಾಗುವ ದೇಹದ ವಿಸ್ತೀರ್ಣ ಕಡಿಮೆಯಾಗಲು ಸೈಕಲ್ ಸ್ಪರ್ಧಾಳುಗಳು ಬಾಗಿ ಸೈಕಲಿಸುತ್ತಾರೆ.

ಜೋರಾಗಿ ಸೈಕಲ್ ತುಳಿಯುವುದರಲ್ಲಿ ಗಾಲಿ ತಳ್ಳುವುದರ ಬದಲಿಗೆ ಗಾಳಿ ತಳ್ಳುವುದಕ್ಕೆ ಬಹಳ ಶಕ್ತಿ ವಿನಿಯೋಗವಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಸುಮಾರು ನೂರು ವಾಟ್ಸ್ ಶಕ್ತಿಯಿಂದ ಸೈಕಲಿಸಬಹುದೆಂದು ಅಂದಾಜಿಸಲಾಗಿದೆ. ಎಡೆಬಿಡದೆ ಇಪ್ಪತ್ತನಾಲ್ಕು ಘಂಟೆ ಸೈಕಲಿಸಿದ ಹಳೆಯ ದಾಖಲೆಯನ್ನು ದಾಟಲು ಪ್ರಯತ್ನಿಸಿದ ಗ್ರೆಗ್ ಅವರ ಕತೆ ಚೆನ್ನಾಗಿದೆ. ಅವರು ಅದಕ್ಕಾಗಿ ತಯಾರು ಮಾಡಿದ ವಾಹನ ನೂರು ವಾಟ್ಸ್ ಶಕ್ತಿ ಉಪಯೋಗಿಸಿ ನಲುವತ್ತೈದು ಕಿಮಿ ಕ್ರಮಿಸಬಹುದಾದರೆ ನಮ್ಮ ಮಾಮೂಲಿ ಸೈಕಲ್ ಬರೇ ಇಪ್ಪತ್ತೆರಡು ಕಿಮಿ ಹೋಗುತ್ತದೆ. ಗ್ರೆಗ್ ಅವರು ಇಪ್ಪತ್ತ ನಾಲ್ಕು ಘಂಟೆಯಲ್ಲಿ ಒಂದು ಸಾವಿರದ ನಲುವತ್ತ ಎರಡು ಕಿಮಿ ದೂರದಷ್ಟು ಸೈಕಲಿಸಿದ್ದರು.

ಎದುರು ಗಾಳಿ ಅನುಭವಿಸಿದ ಸೈಕಲಿಗನಿಗೆ ಅದು ಎಷ್ಟು ಕಷ್ಟವೆನ್ನುವುದು ಅರಿವಿರುತ್ತದೆ. ಗಾಳಿಗೆ ಎದುರಾಗುವ ನಮ್ಮ ದೇಹದ ಚದರಳತೆ ಗಾಳಿಯ ತಡೆಯನ್ನು ನಿರ್ಣಯಿಸುತ್ತದೆ. ಅದುದರಿಂದ ವೇಗವಾಗಿ ಸೈಕಲಿಸುವವರು ಬಗ್ಗಿ ಸೈಕಲ್ ತುಳಿಯುತ್ತಾರೆ. ನಾವು ದರಿಸುವ ಬಟ್ಟೆ ದೊರಗಾಗಿದ್ದರೆ ಸಹಾ ಗಾಳಿಯ ತಡೆ ಹೆಚ್ಚು. ದೇಹಕ್ಕಂಟುವ ಪೋಲಿಸ್ಟರ್ ಬಟ್ಟೆಯನ್ನು ಸೈಕಲ್ ಸವಾರಿಯನ್ನು ಗಂಬೀರವಾಗಿ ಪರಿಗಣಿಸುವವರು ದರಿಸುತ್ತಾರೆ.



೧೮೯೯ರಲ್ಲಿ ಒಬ್ಬ ಸೈಕಲಿಗ ಅಂದು ಮಾರುಕಟ್ಟೆಯಲ್ಲಿದ್ದ ಅತ್ಯಂತ ವೇಗದ ವಾಹನಕ್ಕಿಂತ ಹೆಚ್ಚು ಜೋರಾಗಿ ಸಾಗಿ ಒಂದು ನಿಮಿಷದಲ್ಲಿ ಒಂದು ಮೈಲು ಕ್ರಮಿಸಿದ್ದ. ರೈಲು ಹಳಿಗಳ ಮದ್ಯೆ ಹಾಕಿದ್ದ ಹಲಗೆಯ ಮೇಲೆ ಸೈಕಲ್ ಸವಾರಿ ಕೈಗೊಳ್ಳಲಾಗಿತ್ತು. ಅವನಿಗೆ ಎದುರು ರೈಲು ಗಾಡಿಯೊಂದು ಗಾಳಿಯ ತಡೆ ನಿವಾರಿಸುತ್ತಾ ಸಾಗಿತ್ತು. ಅದರ ನೆರಳಲ್ಲಿ ಉಂಟಾದ ನಿರ್ವಾತ ಪ್ರದೇಶ ಹಿಂದಿನಿಂದ ಸಾಗಿದ ಚಾರ್ಲಿಗೆ ಪರೋಕ್ಷ ಸಹಾಯವನ್ನೂ ಮಾಡಿತ್ತು.


ಮೇಲಿನ ಚಿತ್ರದಲ್ಲಿರುವ ಬಾರ್ಬರ ಎಂಬವರು ಕಳೆದ ವರ್ಷ ಜೂನಿನಲ್ಲಿ ಕೇವಲ ಎಂಬತ್ತ ಎರಡು ಕಿಮಿ ವೇಗದಲ್ಲಿ ಸೈಕಲಿಸಿ ವೈಯುಕ್ತಿಕ ದಾಕಲೆ ಸ್ಥಾಪಿಸಿದರು. ಅವರಿಗೆ ಮಹಿಳೆಯರಲ್ಲಿ ಪ್ರಥಮ ಮತ್ತು ಪ್ರಪಂಚದ ನಾಲ್ಕನೆಯ ಸ್ಥಾನ ಎಂಬ ಎರಡು ದಾಖಲೆಗಳು ಲಬ್ಯವಾದವು. ಈ ಪುಟ್ಟ ರೀಲು ನೋಡುವಾಗ ನಿಮಗೆ ಅಂದು ನನಗಾದ ಅನುಭವ ಹೆಚ್ಚು ಅರ್ಥವಾಗಬಹುದು.

ಈ ಸೈಕಲುಗಳು ದೊಡ್ಡ ಸಂಖ್ಯೆಯಲ್ಲಿ ತಯಾಗದ ಕಾರಣ ಬಹಳ ದುಬಾರಿ. ಎಲ್ಲವೂ ಎಂಟು ಹತ್ತು ಜನ ಕೆಲಸ ಮಾಡುವ ತಿಂಗಳಿಗೆ ನಾಲ್ಕು ಎಂಟು ಸೈಕಲು ನಿರ್ಮಿಸುವ ಪುಟ್ಟ ಕಾರ್ಖಾನೆಗಳು. ಆಸಕ್ತ ಜನ ಮಾತ್ರ ಇವುಗಳ ಗಿರಾಕಿ.

ಅಮೇರಿಕದ ಬಾವಿ ಇಂಜಿನಿಯರುಗಳು ಮನುಷ್ಯ ಚಾಲಿತ ವಾಹನ ಅಬಿವೃದ್ದಿ ಪಡಿಸುತ್ತಿದ್ದಾರೆ. ಅವರು ಅತ್ಯುತ್ತಮ ಸೈಕಲುಗಳ ವಿನ್ಯಾಸಗೊಳಿಸುವ ಸ್ಪರ್ದೆಯಲ್ಲಿ ಬಾಗವಹಿಸುತ್ತಾರೆ. ಪ್ರಪಂಚದ ಹಲವು ಕಡೆಗಳಲ್ಲಿ ವಾಹನಗಳ ನೂಕು ಬಲ ಮಾನವ ಶಕ್ತಿಯಿಂದ ಮಾತ್ರ ಪೊರೈಸಲು ಸಾದ್ಯ. ಅದುದರಿಂದ ಮಾನವನ ಶ್ರಮ ಸದುಪಯೋಗಗೊಳಿಸುವ ಈ ಪ್ರಯತ್ನಗಳು ಖಂಡಿತ ಆರೋಗ್ಯಕರ.


ಕಳೆದ ತಿಂಗಳು ಪಿತಾಂಪುರದಲ್ಲಿ ಬಾರತದ ಐವತ್ತಕ್ಕೂ ಮಿಕ್ಕಿ ಇಂಜಿನಿಯರಿಂಗ್ ಕಾಲೇಜುಗಳು ಪಾಲ್ಗೊಂಡ ಬಗ್ಗಿ ವಾಹನ ವಿನ್ಯಾಸ ಸ್ಪರ್ದೆ ನಡೆದಿತ್ತು. ಎಲ್ಲಕ್ಕೂ ಲಂಬಾರ್ಡಿನಿ ಇಂಜಿನ್ ಅಳವಡಿಸಿದ ನಾಲ್ಕು ಚಕ್ರದ ವಾಹನಗಳು. ಅವುಗಳ ವಿನ್ಯಾಸಗೊಳಿಸುವುದರಲ್ಲಿ ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸಲು ಅವಕಾಶ ಇತ್ತು. ಅದರೆ ಈ ಗಾಡಿಗಳ ವಿನ್ಯಾಸದ ಸ್ಪರ್ದೆಯಲ್ಲಿ ಒಂದಷ್ಟು ಕೈಗಾರಿಕೆಗಳಿಗೆ ತಮಗೆ ಬೇಕಾದ ವಿದ್ಯಾರ್ಥಿಗಳ ಹೆಕ್ಕಲು ಸಹಾಯವಾಯಿತು ಹೊರತು ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಹೀಗೆ ಅಮೇರಿಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತುಳಿಯುವ ಶ್ರಮದ ಸದುಪಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಮ್ಮ ವಿದ್ಯಾರ್ಥಿಗಳು ಪ್ರಾಯೋಗಿಕವಲ್ಲದ project work ನಲ್ಲಿ ನಿರತರಾಗಿರುತ್ತಾರೆ.

ಇಂದು ನಮ್ಮ ವಿಜ್ನಾನಿಗಳು ತಂತ್ರಜ್ನರು ವಾಹನಗಳ ಗಾಳಿ ತಡೆಯನ್ನು ಕಡಿಮೆ ಮಾಡಲು ಹಲವು ವಿಧದಲ್ಲಿ ಪ್ರಯತ್ನಿಸುತ್ತಾರೆ. ಹೆಚ್ಚು ಗಾಳಿ ತಡೆ ಉಂಟುಮಾಡುವ ವಾಹನಗಳ ಮೊನಚಾದ ಮೂಲೆಗಳನ್ನು ಉರುಟಾಗಿಸುತ್ತಾರೆ. ಅದರೆ ಬಡವರ ಸೈಕಲ್ ತಂತ್ರಜ್ನಾನ ಕಳೆದ ನೂರು ವರ್ಷಗಳಲ್ಲಿ ಯಾವುದೇ ಪ್ರಗತಿಯನ್ನು ಹೊಂದಿಲ್ಲ. ಮೊದಲು ಅವರಿಗೆ ಬೇಕಾದ ಕಾರಕೂನರನ್ನು ರೂಪಿಸಲೆಂದು ನಮ್ಮ ವಿದ್ಯಾ ವ್ಯವಸ್ಥೆಗೆ ಬ್ರಿಟೀಷರು ಅಡಿಪಾಯ ಹಾಕಿದ್ದರು. ಅದು ಇಂದು ಸೈಬರ್ ಕೂಲಿಗಳ ತಯಾರಿಕೆಗೆ ಉಪಯೋಗವಾಗುತ್ತಲಿದೆ. ಸ್ವಾವಲಂಬನೆ ಚಿಂತನೆ ದೂರವೇ ಉಳಿದಿದೆ.