Wednesday, March 30, 2011

ತ್ರಿಚಕ್ರ ಪ್ರಯಾಣಕ್ಕೆ ಗರೀಷ್ಟ ಎರಡು ಪಾಲು ಸಮಯ

ವಾರದ  ಹಿಂದೆ    ಕಥೆಗಾರ ವಸುದೇಂದ್ರರು  ನಮ್ಮಲ್ಲಿಗೆ ಬಂದಿದ್ದರು.  ಅವರೊಂದಿಗೆ ಮಾತನಾಡುತ್ತಾ  ತುಳಿಯುವುದರೊಂದಿಗೆ  ಈ  ಸಹಾಯಕ  ನೂಕುಬಲದ ಉಪಯುಕ್ತತೆ ವಿವರಿಸಿದೆ.  ಉದಾಹರಣೆಯಾಗಿ   ನಾನು  ಯಾವುದೇ  ಜಾಗದಿಂದ  ಪಟ್ಟಣದೊಳಗಿನ    ಇನ್ಯಾವುದೇ   ಜಾಗಕ್ಕೆ  ಕಾರು  ಅಥವಾ ಮೊಟರ್ ಸೈಕಲುಗಳಿಗೆ ಬೇಕಾಗುವ  ಸಮಯದ ಒಂದೂವರೆಯಿಂದ ಎರಡು ಪಾಲಿನಷ್ಟು  ಹೊತ್ತಿನಲ್ಲಿ  ನನ್ನ ಟ್ರೈಕಿನಲ್ಲಿ   ಹೋಗಲು ಸಾದ್ಯ  ಎಂದು  ಹೇಳಿದ್ದೆ.  ಅದರೆ  ಹೋಲಿಕೆ  ಹೆಚ್ಚಿನ ಪಾಲು  ಅಗಲವಾದ  ಎಂಬತ್ತು ಕಿಮಿ  ಸಾದ್ಯವಿರುವ   ಹೆದ್ದಾರಿಯಾದರೆ  ಮಾತ್ರ  ಅಸಂಬವ ಎಂದೂ  ಹೇಳಿದ್ದೆ.

ಅವರನ್ನು  ನನ್ನ  ಅಪ್ತ  ಗೆಳೆಯ ನಾರಾಯಣ  ಮೂರ್ತಿ  ಹದಿನೈದುವರೆ ಕಿಮಿ  ದೂರದ  ಮರಕಿಣಿಯಿಂದ  ಕರೆ ತಂದಿದ್ದರು.   ನಾರಾಯಣ  ಮೂರ್ತಿಗೆ  ಈ   ದೂರ ಕ್ರಮಿಸಲು ಸುಮಾರು  ಇಪ್ಪತೈದು ಮೂವತ್ತು ನಿಮಿಷ ಬೇಕಾಗುವುದಂತೆ.  ಮೊನ್ನೆ  ಟ್ರೈಕಿನಲ್ಲಿ ನಾನು  ನಲುವತ್ತೊಂಬತ್ತು ನಿಮಿಷಗಳಲ್ಲಿ  ನಮ್ಮ ಮನೆಯಿಂದ  ಅಲ್ಲಿಗೆ  ತಲಪಿದ್ದೆ.  ಉದ್ದಕ್ಕೂ ರಸ್ತೆ   ವಾಹನಗಳ  ಓಡಾಟಕ್ಕೆ  ಪೂರಕವಾಗಿತ್ತು.    ಹೊಂಡ ಗುಂಡಿಗಳ  ಮುಚ್ಚಿದರೂ  ಅದರ ಮೇಲೆ ಮಹಾಕಾಯ  ಹೊರಳದ  ಕಾರಣ   ಅಲ್ಲೆಲ್ಲ   ರಸ್ತೆ   ನನ್ನ  ತ್ರಿ ಚಕ್ರವನ್ನು ಎತ್ತೆತ್ತಿ  ಬಿಸಾಕುತಿತ್ತು.  ಆದರೂ  ಸುಮಾರು  ಹದಿನೆಂಟುವರೆ  ಕಿಮಿ  ವೇಗ   ಸಾದ್ಯವಾಗಿತ್ತು.  ಅರುವತ್ತು ಎಪ್ಪತ್ತು ಕಿಮಿ ವೇಗ ನಾರಾಯಣ ಮೂರ್ತಿ ಆಗಾಗ ಸಾದಿಸಿದರೂ  ಆ ಪ್ರಕಾರ   ದೂರ  ಕ್ರಮಿಸಿರುವುದಿಲ್ಲ. ಸಮಯ ಉಳಿಸಿರುವುದೂ  ಇಲ್ಲ.    ಹಾಗಾಗಿ  ಈ  ವಾಹನಗಳ      ವೇಗವೆಲ್ಲ   ನಮ್ಮ  ಮಂಕು ಮಾಡುತ್ತೆ.     


 ಈ  ಬಗೆಗೆ  ಇನ್ನೊಂದು  ಉದಾಹರಣೆ.    ಕಳೆದ  ಶುಕ್ರವಾರ ಮಂಗಳೂರಿಗೆ  ಹೋಗಿದ್ದೆ.  ಬಿ ಸಿ ರೋಡಿನಲ್ಲಿ  ಮೇಲುಸೇತುವೆ  [ಮೇಲ್ಕಾಣುವ  ಚಿತ್ರ ಸೇತುವೆ ಮೇಲಿನದು]  ಕೆಲಸ  ಅಪೂರ್ಣವಾದರೂ  ಹೋಗಲು  ಸಾದ್ಯವಿರುವ   ಕಾರಣ  ಕೆಟ್ಟ ರಸ್ತೆ ಹಾಗೂ  ವಾಹನ ದಟ್ಟನೆಯ  ಕಿರಿಕಿರಿಯಿಲ್ಲದೆ    ಅರಾಮವಾಗಿ  ದಾಟಲು  ಸಾದ್ಯವಾಯಿತು.  ವಾಪಾಸು  ಹೊರಡುವಾಗ  ನನ್ನ ಜಿಪಿಎಸ್  ಚಾಲನೆ  ಮಾಡಲು  ಮರೆತ  ಕಾರಣ  ಸುಮಾರು ಹತ್ತು ಕಿಮಿ  ಅದರಲ್ಲಿ  ದಾಖಲಾಗಲಿಲ್ಲ.  ಅಂತೂ    ದಿನದಲ್ಲಿ  ದಾಖಲಾದ  ಎಪ್ಪತ್ತ ಮೂರು ಕಿಮಿ  ಮೂರು ಘಂಟೆ ನಲುವತ್ತು  ನಿಮಿಷಗಳಲ್ಲಿ  ಕ್ರಮಿಸಿ   ಸರಾಸರಿ  ಇಪ್ಪತ್ತು ಕಿಮಿ  ಚಲಿಸಿದ್ದೆ.  ನನ್ನ ಗರೀಷ್ಟ  ವೇಗ   ಇಪ್ಪತ್ತೈದು ಕಿಮಿ   ಆದರೂ  ಒಟ್ಟಾರೆ   ಚಾಲನೆ  ಸಮಯ   ಎಂಬತ್ತರಲ್ಲಿ  ಸಾಗುವ   ದುಬಾರಿ    ಕಾರುಗಳ    ಎರಡ  ಪಾಲು  ಸಮಯವಷ್ಟೇ  ಬೇಕಾಗುತ್ತದೆ.   ನನ್ನದು  ತ್ರಿಚಕ್ರದ ಬದಲಿಗೆ   ದ್ವಿಚಕ್ರವಾದರೆ  ಇನ್ನೂ  ಕಡಿಮೆ ಸಮಯ ಸಾಕಾಗಬಹುದು.   ಮುಂದುವರಿದ  ದೇಶಗಳ  ಸನ್ನಿವೇಶ    ಅವಲೋಕಿಸಿದರೆ   ಸೈಕಲು  ಕಾರನ್ನು  ಸೋಲಿಸುವ  ಅಸಂಖ್ಯ  ಉದಾಹರಣೆಗಳು ದೊರಕುತ್ತದೆ.  ಅಲ್ಲಿ ನಮ್ಮಿಂದ ಹೆಚ್ಚು ವಾಹನ   ದಟ್ಟಣೆ    ಇರುವುದೂ  ಒಂದು ಕಾರಣ  ಇರಬಹುದು.  

Monday, March 21, 2011

ಹೀಗೊಂದು ತ್ರಿ ಚಕ್ರ ಸೈಕಲುಗಳ ಸ್ಪರ್ದೆ



ನಾವು  ವಿದೇಶಿಯರಿಂದ  ಕಲಿಯುವಂತದ್ದು  ಬಹಳ  ಇದೆ.  ಅದರಲ್ಲೊಂದು  ವಿವಿದ  ಜೀವನಾನುಭವಕ್ಕೆ   ಮುಜುಗರವಿಲ್ಲದೆ  ತಮ್ಮನ್ನು ಒಡ್ಡಿಕೊಳ್ಳುವುದು.   ಅಲ್ಲಿ ಯಾವುದೂ  ನಿಂತ ನೀರಲ್ಲ.  ನಮ್ಮಿಂದ  ಹೆಚ್ಚು    ಕಲೆಯ  ಹೊಸಮುಖಗಳ  ಅನ್ವೇಶಣೆ  ನಡೆಯುತ್ತಲೇ  ಇರುತ್ತದೆ.    ಹಾಗೆ   ಅಮೇರಿಕಲ್ಲೊಂದು   ಸಿಂಹಾಸನದ  ಸೈಕಲುಗಳ   ಸ್ಪರ್ದೆ.   ಅಲ್ಲಲ್ಲ, ಕಲಾ ಸ್ಪರ್ದೆಯಲ್ಲಿ   ಶೌಚಾಲಯ  ಆಸನದ   ಹಲವಾರು  ಸೈಕಲುಗಳು ಬಾಗವಹಿಸಿದ್ದು.  ಇದು   ಇಬ್ಬರು  ಪ್ರತಿಬಾವಂತ   ಕಲಾವಿದ    ಸೋದರರ   ಕೊಡುಗೆ.   ಉಳಿದ  ಸ್ಪರ್ಧೀಗಳು  ಸುಲಭವಾಗಿ  ಸೋಲೊಪ್ಪಿಕೊಂಡರಂತೆ. 



 


ನನ್ನ  ಮುಂದಿನ  ದೀರ್ಘ ಪ್ರವಾಸ  ಸಾದ್ಯವಾದರೆ   ಇಂತಹ  ಟ್ರೈಸಿಕಲ್ಲಿನಲ್ಲಿ  ಎಂದು ತೀರ್ಮಾನ ಮಾಡಿದ್ದೇನೆ.    ಮಲಮೂತ್ರ  ವಿಚಾರ ಬಂದಾಗ  ನಮಗೆ  ಹೇಸಿಕೆಯಾಗುತ್ತದೆ.  ಪರಿಣಾಮ  ನನ್ನಂತಹ  ಮೂತ್ರ ನಿಯಂತ್ರಣ  ಸಮಸ್ಯೆ ಬಾದಿಸುವವರ  ಬದುಕು ಅಸಹನೀಯವಾಗುತ್ತದೆ.  ನಮ್ಮಲ್ಲಿ  ಇಂತಹ   ಸಮಸ್ಯೆಗಳನ್ನು   ಸಮಾಜ  ಅರ್ಥಮಾಡಿಕೊಳ್ಳುವುದೂ  ಇಲ್ಲ,  ಸಹನೀಯವಾದ ವಾತಾವರಣ  ಕಲ್ಪಿಸುವುದೂ  ಇಲ್ಲ.  ಅಮೇರಿಕದ   ಎಲ್ಲ ಅಂಗಡಿಗಳಲ್ಲಿ ದೊರಕುವ  inconsistency napkins  ಇಲ್ಲಿ  ತರಿಸಿಕೊಳ್ಳುವುದೇ  ದೊಡ್ಡ  ಸಾಹಸ.    ಮಂಗಳೂರಿನಲ್ಲೂ  ಸಿಗದ  ಕಾರಣ   ಇತ್ತೀಚೆಗೆ  ಬೆಂಗಳೂರಿನಿಂದ    ತರಿಸಿಕೊಳ್ಳುತ್ತಿದ್ದೇನೆ.   ಪ್ರಯಾಣಕ್ಕೆ  ಕೂರುವುದೇ  ಸಿಂಹಾಸನದಲ್ಲಾದರೆ  ?

ತೆನಾಲಿ ರಾಮಕೃಷ್ಣನ  ಕಥೆಯೊಂದು ನೆನಪಾಗುತ್ತದೆ. ಅತ್ಯಂತ  ಸಂತಸದ  ವಿಚಾರ ಏನೆಂದು ಅರಸ ಕೇಳಿದಾಗ  ಶೌಚಾಲಯ ಬೇಟಿ ಎಂದ ರಾಮಕೃಷ್ಣ.  ಅದನ್ನು   ಖಚಿತಪಡಿಸು  ಎಂದು ಅರಸ  ಹೇಳಿದರೆ ಶೌಚಾಲಯಕ್ಕೆ ಹೋಗದೆ ವಾರವೊಂದು  ಕೂರು  ಎಂದು ರಾಮಕೃಷ್ಣನ ಸವಾಲು.  ನಿಯಂತ್ರಣ  ಸಮಸ್ಯೆ ಇರುವ  ನನಗೆ  ಸವಾಲು ಸ್ವೀಕಾರ ಸಾದ್ಯವಿಲ್ಲ, ಬಿಡಿ.   ನಾಲ್ಕು ದಿನ ಹೇಗೊ ಸುದಾರಿಸಿ  ಕೊನೆಗೆ   ಶ್ರಿಕೃಷ್ಣದೇವರಾಯ  ಸೋಲೊಪ್ಪಿಕೊಂಡನಂತೆ.   

Thursday, March 17, 2011

ಎಂಡೊ ತಯಾರಕರ ದೇಶ ಸೇವೆ ಮುಖವಾಡ

ಎಂಡೋಸಲ್ಫನ್   ತಯಾರಕರ  ಹೊಸ ವರಸೆ   ಗಾಬರಿಯಾಗುತ್ತದೆ.  ಅವರೀಗ  ಯುರೋಪಿನ   ವಿಷ ತಯಾರಕರು  ಎಂಡೋಸಲ್ಫನ್  ಬಹಿಷ್ಕಾರ  ಚಳುವಳಿಯ ಹಿಂದಿದ್ದಾರೆ ಎಂದು  ಆಪಾದಿಸುತ್ತಿದ್ದಾರೆ.   ಬಾರತದ  ತಯಾರಕರು   ಜೀವ  ಉಳಿಸುವ  ಔಷದಿಯಲ್ಲಿ  ಮೂಲವಸ್ತುಗಳ  ಹೆಸರಿನಲ್ಲಿ ತಯಾರಿಸಿ  ಕಡಿಮೆ  ಬೆಲೆಯಲ್ಲಿ ಮಾರಿದ್ದು  ಹಾಗೂ   ಸಮಾಜ    ಇವರಿಗೆ  ಬೆಂಬಲಿಸಿದ್ದು   ಈಗ   ಇತಿಹಾಸ.     ಈಗ  ಈ  ಕೀಟನಾಶಕ ವನ್ನೂ     generic ಅನ್ನೋ  ಮುಖವಾಡದ    ಹವಣಿಕೆಯಲ್ಲಿದ್ದಾರೆ.   ನಾವು ಕಡಿಮೆ  ಬೆಲೆಯಲ್ಲಿ ಎಂಡೋಸಲ್ಫನ್   ತಯಾರು ಮಾಡಿ ಮಾರುವುದು  ಬಾರತದ  ರೈತರ  ಉದ್ದಾರ  ಮಾಡುವುದನ್ನು    ಯುರೊಪಿಯನರು    ಸಹಿಸುತ್ತಿಲ್ಲ.  ನಾವು    ಬಾಗಿಲು  ಹಾಕಿದರೆ  ಯುರೋಪಿನ  ತಯಾರಕರು  ಇದಕ್ಕಿಂತ  ಹಲವು ಪಾಲು ದುಬಾರಿಯ  ಮಾಲುಗಳನ್ನು  ಬಾರತದ  ರೈತರು  ಅವಲಂಬಿಸಬೇಕಾಗುತ್ತದೆ. 

ನಾವಂತೂ  ಐವತ್ತೈದು ವರ್ಷಗಳಿಂದ  ಬಳಸುತ್ತಿರುವ  ಈ  ಕೀಟನಾಶಕವನ್ನು    ತಿಂದರೆ  ಈಗಲೂ  ಕೀಟಗಳು  ಸಾಯುತ್ತವೆ  ಎನ್ನುವ  ಭ್ರಮೆಯನ್ನು  ಉಳಿಸಿಕೊಂಡಿದ್ದೇವೆ.     ನಾನು  ವಾಸಿಸುವ  ಜಾಗದಿಂದ  ಕೇರಳದ   ಪಡ್ರೆ ಮತ್ತು  ಕರ್ನಾಟಕದ  ಕೊಕ್ಕಡ  ಎರಡೂ  ಮೂವತ್ತು ಕಿಮಿ ಒಳಗಿದೆ.  ಹಾಗಾಗಿ  ಇವರ ಮಾತಿಗೆ ಮರುಳಾಗುವುದು  ಕಷ್ಟವಾದರೂ  ಇದರಲ್ಲಿ ನಿಜ ಇರಬಹುದೋ  ಗೊಂದಲ  ಉಂಟುಮಾಡುತ್ತದೆ.  ಹಾಗೆ  ಈ  ಎಂಡೊ ವಿರೋದಿಗಳು ಕೊಕ್ಕಡ  ಮತ್ತು   ಪಡ್ರೆ ಹಾಗೂ  ಸುತ್ತಲಿನ  ಗ್ರಾಮಸ್ಥರೋ  ಯುರೋಪಿನ   ಗುಮ್ಮನೋ ??   ದೂರ  ಇರುವವರಿಗೆ   ಆಫ್ರಿಕದಲ್ಲಿ  ಎಂಬಂತೆ  ಇದೊಂದು  ಸುದ್ದಿಯಷ್ಟೇ

 ಈ  ದಿಕ್ಕು ತಪ್ಪಿಸುವ   ಆಂದೋಲನ  ಕೆಲವೊಮ್ಮೆ   ಪ್ರಯೋಜನ  ಕಾಣುತ್ತದೆ.  ಕೆಲವೊಮ್ಮೆ   ಪರಿಚಿತರೊಂದಿಗೆ   ಮಾತುಕತೆಯೇ  ನಮ್ಮ  ಆಲೋಚನಾಲಹರಿ   ಕೆಡಿಸುತ್ತದೆ.    ಕಳೆದ ಇಪ್ಪತ್ತೈದು    ವರ್ಷಗಳಿಂದ  ಸಾವಯುವ  ಜಪಿಸುತ್ತಿರುವ  ನಾನು ಒಂದು  ವರ್ಷ   ಕಳೆನಾಶಕ    ಉಪಯೋಗಿದ್ದೇನೆ.  ಆಗ   ಕೆಲಸದವರ  ಕೊರತೆಯ  ಜತೆಗೆ  ಅಡಿಕೆ  ತೋಟದ  ಕಳೆಯ   ಅಡಿಯಲ್ಲಿ ಅಡಗಿ ಕುಳಿತಿತ್ತು.    ಕೂಡಲೇ  ಕಳೆ  ತೆಗೆಯುವುದು  ಅನಿವಾರ್ಯವಾಗಿತ್ತು. 
  
ಹಲವು ವರ್ಷ  ಹಿಂದೆ    ಕೃಷಿಕರೊಬ್ಬರಿಗೆ  ಒಂದು ಹಳೆಯ  ಸಾಮಾನು ಒಂದರ ಮಾರಿದ್ದೆ.   ಕೃಷಿ  ಬಗೆಗೆ  ಮಾತಾಡುವಾಗ  ಶೆಟ್ರು   ಕಳೆನಾಶಕ  ಒಂದರ  ಗುಣಗಾನ  ಮಾಡಿದರು.  ವಿದ್ಯಾವಂತರಾದ  ಅವರು ಮೊದಲು ಮಹಾಪಟ್ಟಣದಲ್ಲಿ  ಉನ್ನತ ಹುದ್ದೆಯಲ್ಲಿದ್ದರು.    ಈ  ಹೊಸತಲೆಮಾರಿನ  ಕಳೆನಾಶಕದಲ್ಲಿ  ಬೇರೆ ಯಾವುದೇ  ಜೀವಿಗಳಿಗೆ  ತೊಂದರೆಯಿಲ್ಲವೆಂದು ಒತ್ತಿ ಹೇಳಿದರು.   ಅದನ್ನು ತಯಾರಿಸುವ  ಎಕ್ಸಲ್     ಕಂಪೇನಿಯೊಂದು    ಪಟ್ಟಣ  ಕೊಳಚೆಗೆ  ಹಾಕಿದರೆ   ಅದನ್ನು  ಬೇಗನೆ  ಕೊಳೆಯುವಂತೆ  ಮಾಡುವ  ವೇಗವರ್ದಕ  ತಯಾರಿಸಿದ್ದೇವೆ  ಎಂದು  ಹೇಳಿಕೊಳ್ಳುತ್ತಿತ್ತು.    ಈ  ಎಕ್ಸಲ್ ಕಂಪೇನಿ  ಎಂಡೊಸಲ್ಫನ್  ಸಹಾ  ತಯಾರಿಸುತ್ತದೆ.     ಹೀಗೆ  ಕಂಪೆನಿ   ಮತ್ತು  ಸಾಮುಗ್ರಿ  ಎರಡೂ  ಸೇರಿ   ನನ್ನ  ವಿವೇಚನೆಯಲ್ಲಿ   ಕಳೆನಾಶಕದ  ಬಗೆಗೆ   ಒಪ್ಪಿಗೆ  ಗಿಟ್ಟಿಸಿಕೊಂಡವು.  ನನ್ನಂತಹ  ವಿದ್ಯೆ  ಇದ್ದು  ಈ  ಕೃಷಿವ್ಯಾಪಾರಿ ಸಂಸ್ಥೆ  ಕುಯುಕ್ತಿ ಅರಿತವನೇ   ಹೊಂಡಕ್ಕೆ  ಬಿದ್ದರೆ,  ಅಮಾಯಕ  ಹಳ್ಳಿಗರು  ವರ್ಷಾನುಗಟ್ಟಲೆ   ಸುಲಭವಾಗಿ  ಮೋಸ ಹೊಂದುತ್ತಾರೆ.  ನಮ್ಮ  ವಿಜ್ನಾನಿಗಳು  ಅದಿಕಾರಿಗಳು  ರಾಜಕಾರಣಿಗಳು      ಈ  ಕಂಪೇನಿಗಳ  ಬೆಂಬಲಕ್ಕೆ  ನಿಲ್ಲುತ್ತಾರೆ.      

Sunday, March 13, 2011

ದುರ್ದಿನ ಕರೆ ಕೊಟ್ಟ ಡಾ ದೇವಿ ಶೆಟ್ರು

ಕಳೆದ  ವಾರ  ಬೆಂಗಳೂರಿನ ಆಸ್ಪತ್ರೆಯೊಂದರ  ಯಜಮಾನ   ಡಾ ದೇವಿ   ಶೆಟ್ಟಿ ಅವರು ಬಹಿರಂಗ ಪತ್ರ ಬರೆದರು.   ಆತ್ಮೀಯ  ಸಹಪಾಠಿ  ಗೆಳೆಯ ವೆಂಕಟೇಶ್  ಅವರು ಈ ಪತ್ರದ ಪ್ರತಿಯನ್ನು ನನಗೆ ರವಾನಿಸಿದರು.   ಪತ್ರದಲ್ಲಿ  ಹೃದಯವಂತ  ವೈದ್ಯರು    ಸರಕಾರಿ ತೇರಿಗೆ ಹೆಚ್ಚು ಮಾಡಿದರೆ   ತಮ್ಮಲ್ಲಿ ಬಂದ  ರೋಗಿಗಳಿಂದ  ಹೆಚ್ಚು ಹಣ   ಪಡಕೊಳ್ಳಬೇಕಾಗುತ್ತದೆ  ಎಂದು ಅಲವತ್ತು ಪಟ್ಟುಕೊಂಡರು.  ಹಾಗೆ  ಮಾರ್ಚು ೧೨ ರಂದು ರಾಜ್ ಭವನ್  ಚಲೋ  ಕರೆ ಕೊಟ್ಟರು.   ಆ  ದಿನವನ್ನು    ದುರವಸ್ಥೆ ದಿನ /ಬೇಗುದಿ ದಿನವೆಂದು  ಆಚರಿಸಲು  ಹೇಳಿದರು.      ರೋಗಿಗಳ ಬಗೆಗಿನ ಕಾಳಜಿ ಕಂಡು  ನನಗೆ ಕುಶಿಯಾಯಿತು  ಮತ್ತು ಮುನ್ನೂರ  ಐವತ್ತು ಕಿಮಿ ದೂರವಲ್ಲವಾದರೆ  ಖಂಡಿತ ಪಾಲ್ಗೊಳ್ಳುವ   ಅವರ  ಕೈ  ಬಲ ಪಡಿಸುವ   ಹುಮ್ಮಸ್ಸು  ಬಂತು.   ಡಾ. ಶೆಟ್ರು   ಪತ್ರಿಕೆಗಳಿಗೂ  ಈ ಪತ್ರ ರವಾನಿಸಿ  ಓದುಗರ  ಪತ್ರಗಳು  ಅಂಕಣದಲ್ಲಿ   ಪ್ರಕಟವಾಗುವಂತೆ ನೋಡಿಕೊಂಡರು.    ಆಮೇಲೆ  ?


 ಮರುದಿನ   ಅವರು ದೆಹಲಿಯಲ್ಲಿ    ವಿತ್ತ ಮಂತ್ರಿ ಪ್ರಣಬ್ ಮುಖರ್ಜಿಯನ್ನು ಬೇಟಿಯಾದದ್ದು   ಪತ್ರಿಕೆಗಳು  ಸುದ್ದಿಮಾಡಿವೆ.  ಆದರೆ   ಮಾತುಕತೆಯ  ಪರಿಣಾಮ ಮಾತ್ರ  ಹೊರಹಾಕಿಲ್ಲ.  ಇಂದು ಪತ್ರಿಕೆಗಳಲ್ಲಿ  ನಿನ್ನೆ ನಡೆದಿರಬಹುದಾದ   ಈ ರಾಜ್ ಭವನ್  ಚಲೋ ಕಾರ್ಯಕ್ರಮ  ಏನಾಯಿತು  ಎಂದು ಹುಡುಕಲು  ಏನೂ  ಸುಳಿವು ದೊರಕುತ್ತಿಲ್ಲ.  ಆಸ್ಪತ್ರೆ ಜಾಲತಾಣದ  ಮೊದಲ ಪುಟದಲ್ಲಿದ್ದ    ಅವರ   ಬಹಿರಂಗ ಪತ್ರವೂ    ಈಗ ನಾಪತ್ತೆ.    ಅಂತೂ  ಪ್ರತಿಭಟನೆ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು   ಹೊರಡದೆ ಇದ್ದುದು  ಒಳ್ಳೆದಾಯಿತು ಅನ್ನಿಸಿತು. 

ನಮಗೀಗ  ಮಾದ್ಯಮಗಳ ಹಾಗೂ  ಅಂತರ್ಜಾಲದ ಮೂಲಕ  ವರುಷದಲ್ಲಿ ನೂರಾರು    ಆಚರಣೆ ಪ್ರತಿಭಟನೆ  ಕರೆಗಳು  ಬರುತ್ತವೆ.  ಅಪ್ಪನ  ದಿನ, ಅಮ್ಮನ ದಿನ,. ಕೆಲಸಗಾರರ ದಿನ,  ದೇವರ  ಜನ್ಮ  ದಿನ, ಸ್ವಾತಂತ್ರ ದಿನ,  ದೀಪವಾರಿಸುವ ದಿನ, ಏನೂ  ಖರೀದಿಸದಿರುವುದು, ಪರಸ್ಪರ ಅಪ್ಪಿಕೊಳ್ಳುವುದು ........ ಇತ್ಯಾದಿ  ಇತ್ಯಾದಿ.  ಮೊನ್ನೆ  ಫೆಬ್ರವರಿ  ೧೪ ರಂದು  ಪೆಟ್ರೋಲ್ ಖರೀದಿ  ಮಾಡದಿರುವ ಕರೆ ಇತ್ತು.   ಇಂತಹ  ಆಚರಣೆಗಳಿಂದ     ಯಾವ  ಪ್ರಯೋಜನವೂ  ಇಲ್ಲ.  ಎಲ್ಲರೂ  ಹಿಂದಿನ ದಿನವೇ  ಬೇಕಾದಷ್ಟು  ದಾಸ್ತಾನು ಮಾಡಿಕೊಂಡಿರಬಹುದು.   ಅಂದು ಖಾಸಗಿ ವಾಹನ  ಉಪಯೋಗಿಸುವುದಿಲ್ಲ ಎಂದಿದ್ದರೂ  ಅರ್ಥವಿರುತಿತ್ತು.  ಅಂದ ಹಾಗೆ   ಬರುವ ತಿಂಗಳು ಎಪ್ರಿಲ್ ೨೨  ಭೂಮಿ ದಿನವಾಗಿ  ಆಚರಿಸಲಾಗುತ್ತದೆ.    ಅದಕ್ಕೀಗ  ದೇವಿ ಶೆಟ್ರ   ದುರ್ದಿನವೂ  ಸೆರ್ಪಡೆಯಾಗಿ ಕ್ರಮೇಣ  ಇನ್ಯಾವುದೋ   ಕಾರಣಕ್ಕೆ   ಮುಂದೆ  ಜನಪ್ರಿಯವಾಗಬಹುದು.  


ಕೆಲವು ಕರೆಗಳು ಮಜವಾಗಿಯೂ  ಇರುತ್ತದೆ.  ಅಂತಹದರಲ್ಲೊಂದು ಪಾಂಟ್ ದರಿಸದಿರುವ ಕರೆ. ಪ್ರಪಂಚದ ವಿವಿದ ಕಡೆಗಳಲ್ಲಿ ಸಾರ್ವಜನಿಕ  ಸ್ಥಳಗಳಲ್ಲಿ ಮತ್ತು   ಮೆಟ್ರೊ ರೈಲುಗಳಲ್ಲಿ  ಪಾಂಟ್ ದರಿಸದಿರುವ  ದಿನ   ಬೇರೆ ಬೇರೆಯಾಗಿಯೇ ಆಚರಿಸಲಾಗುತ್ತದೆ. ಉಳಿದೆಡೆ ಮೆ ತಿಂಗಳ ಮೊದಲ ಶುಕ್ರವಾರ ಪಾಂಟ್ ಹಾಕದಿರುವ ದಿನವಾದರೆ   ರೈಲುಗಳಲ್ಲಿ ಜನವರಿ  ೧೧  ರಂದು  ಆಚರಿಸಲಾಗುತ್ತದೆ.




ಮಾರ್ಚು ೧೨ ರಂದು  ದುರ್ದಿನ  ಆಚರಣೆ  ಬಗೆಗೆ   ಕರೆ ಕೊಟ್ಟ  ಡಾ|  ಶೆಟ್ರು  ಆಮೇಲೆ ಮರೆತು ಬಿಟ್ಟರೋ ಅನ್ನುವ    ಕಾರಣ  ಇದೆಲ್ಲ  ಬರೆಯೋಣ ಅನ್ನಿಸಿತು. 

Thursday, March 03, 2011

ಸೈಕಲ್ ಮೇಲಿನ ಸ್ಕೌಟ್ ಮಕ್ಕಳ ಪಟಲಾಂನಲ್ಲಿ ನಾನೂ ಒಬ್ಬ

೨ ಮಾರ್ಚ್  ಬುದವಾರ  ಪುತ್ತೂರಿನ  ಸ್ಕೌಟ್   ಮತ್ತು ಗೈಡ್ಸ್  ಪರಿಸರ  ಜಾಗ್ರತಿ  ಸೈಕಲ್ ಜಾಥಾ  ಹಮ್ಮಿಕೊಂಡಿತ್ತು.  ಸ್ಕೌಟ್ ಸದಸ್ಯನಾದ    ಸುನಿಲ ಹೋಗುವವನಿದ್ದ. ನಾನೂ   ಅವನೊಂದಿಗೆ   ಸೇರಿಕೊಂಡೆ.   ಪುತ್ತೂರು  ಆಸುಪಾಸಿನ  ವಿವಿದ ಶಾಲೆಗಳ   ಸುಮಾರು ಎಪ್ಪತ್ತೈದು    ಮಕ್ಕಳು  ಸೈಕಲಿನಲ್ಲಿದ್ದರು.  ಹತ್ತು ಮಕ್ಕಳ  ಬೀದಿ ನಾಟಕ ತಂಡವೊಂದು  ನಮ್ಮ ಜತೆಗಿತ್ತು.  ಅಂತೂ  ಒಂಬತ್ತು ಕಾಲು   ಘಂಟೆಗೆ  ನಮ್ಮ ಸೈಕಲ್ ಸಾಲು ಪುತ್ತೂರು  ಮಹಾಲಿಂಗೇಶ್ವರ  ದೇವಸ್ಥಾನದ  ಎದುರಿನಿಂದ  ಹೊರಟಿತು.

ಕೆಮ್ಮಾಯಿಯಲ್ಲಿ   ಬಿದಿರಿನ ಉಪಯೋಗದ ಬಗೆಗೊಂದು  ಕಿರು ರೂಪಕ   ಆಡಿ ತೋರಿಸಿದ ನಂತರ  ತಂಡ ಸ್ವಲ್ಪ ಮುಂದಕ್ಕೆ   ಎಡಕ್ಕೆ ಸೇಡಿಯಾಪು   ರಸ್ತೆಯಲ್ಲಿ  ಮುಂದುವರಿಯಿತು.  ಸೇಡಿಯಾಪು ತಿರುವಿನಲ್ಲೊಂದು  ಅವಲಕ್ಕಿ ಕಿತ್ತಳೆ  ಬಾಟಲಿ ಪಾನಿಯ   ಹಂಚೋಣ.   ಎರಡೇ ಕಿಮಿ ಮುಂದೆ ರಸ್ತೆ ಪಕ್ಕದ ಮನೆಯ ಆವರಣದಲ್ಲಿ  ತಿಂಡಿ.  ಬಿಸಿಯಾದ ದೋಸೆ ಚಟ್ನಿ ಸಾಂಬಾರ್  ಮತ್ತು  ರಾಗಿ ಮಾಲ್ಟ್  ಮಕ್ಕಳಿಗೆ ಹೊಸ ಚೈತನ್ಯ   ದೊರಕಿಸಿದರೂ  ಕಡಿದಾದ ಸುಮಾರು ೧೦೦ ಮೀಟರ್ ಇಳಿವು ಅನಂತರ  ಏರು ನಮ್ಮ ಮುಂದಿದ್ದವು. ಆದರೂ  ಮಕ್ಕಳು ನಾ ಹೆದರಿದಂತೆ   ಸೋಲಲಿಲ್ಲ.   ಅದು ನನಗೆ  ಸಂಬಂದಿಕರ ಮನೆಯಾದುದರಿಂದ  ಬಾಟರಿಗೆ  ವಿದ್ಯುತ್ ಚಾರ್ಜು ಬೋನಸ್. 

ರಾಷ್ಟ್ರೀಯ   ಹೆದ್ದಾರಿ  ನಮಗೆ ಸಿಕ್ಕಿದ್ದು ಒಂದೇ  ಕಿಮಿ.  ಪುನಹ ಏರಿಳಿವು ರಸ್ತೆ.  ಕಡೆಶಿವಾಲಯ ಊರಲ್ಲೊಂದು  ಬೀದಿ ನಾಟಕವಾಗಿ  ಹೊಳೆ ಬದಿಯ ದೇವಸ್ಥಾನಕ್ಕೆ   ಸೈಕಲು ಸಾಲು ಮುಂದುವರಿಯಿತು.  ಹನ್ನೆರಡು  ಐವತ್ತೈದಕ್ಕೆ  ದೇವಸ್ಥಾನದ  ಹಾಲ್  ತಲಪುವಾಗ  ಊಟಕ್ಕೆ  ಬಾಳೆ ಹಾಕುತ್ತಿದ್ದರು.  ಬರ್ಜರಿ ಪಾಯಸ ಸಮೇತ   ಊಟ ಸಿಕ್ಕಿತು.  ನಂತರ  ಸ್ವಲ್ಪ ಹೊತ್ತು ಮಕ್ಕಳ ಕಾರ್ಯಕ್ರಮ  ಮತ್ತು  ಅನಂತರ ಮಕ್ಕಳಿಗೆ ಹೊಳೆಬದಿಯಲ್ಲಿ  ನೀರಾಟ.  ಜತೆಯಲ್ಲಿ ಸಾಗಿದ  ಮಾಷ್ಟ್ರುಗಳು  ಮಕ್ಕಳನ್ನು  ನಿಗದಿತ ಸಮಯಕ್ಕೆ  ನೀರಿನಿಂದ ಹೊರಕ್ಕೆಳೆದರು. 

ಒಂದು   ಪಾನಕ ಸೇವನೆ   ಅನಂತರ  ಮೂರುವರೆ ಘಂಟೆಗೆ   ಮಕ್ಕಳೆಲ್ಲ   ಸೈಕಲ್ ಏರಿದರು.  ಗಡಿಬಿಡಿಯಲ್ಲಿ ನನಗೆ  ಜಿಪಿಎಸ್  ಸ್ವಿಚ್ ಹಾಕಲು ಮರೆತು  ಒಂದೂವರೆ    ಕಿಮಿ ದಾಖಲೆ  ಅಲಭ್ಯ.     ವಾಪಾಸು ಬರುವಾಗ  ಗಡಿಯಾರ  ಪೆರ್ನೆ ದಾಟುವ ಸುಮಾರು ಮೂರು ಕಿಮಿ  ಹೆಚ್ಚು ಕಮ್ಮಿ  ಇಳಿಜಾರಾದ  ರಾಷ್ಟ್ರೀಯ   ಹೆದ್ದಾರಿ. ನಂತರ  ಮುಖ್ಯಸ್ಥರು  ಹೊರಡುವಾಗ  ಮೈಕಿನಲ್ಲಿ   ಹೇಳಿದಂತೆ   ಹೋಗುವಾಗ ಇಳಿದಲ್ಲಿ ಹತ್ತುವುದು  ಮತ್ತು ಹತ್ತಿದಲ್ಲಿ  ಇಳಿಯುವುದು.  ಬರುವಾಗ   ಒಂದು ಕಡಿದಾದ  ಅಪಾಯಕಾರಿ ಅನಿಸುವ ಸ್ವಲ್ಪ ದೂರ  ಇಳಿಯಲು ಸಿಕ್ಕಿದ್ದು ಅನಂತರದ  ದೀರ್ಘ  ಏರು  ಎಲ್ಲ ಮಕ್ಕಳನ್ನೂ  ಸುಸ್ತಾಗಿಸಿತು.  ಗುಡ್ಡದ ತುದಿಯಲ್ಲಿ ಬನ್  ಮತ್ತು  ಬಚ್ಚಂಗಾಯಿ  ಹೋಳುಗಳು  ಕಾಯುತ್ತಿತ್ತು.    ಎಲ್ಲ ಕಡೆಗಳಲ್ಲೂ  ಬಹು ದೂರದ ವರೆಗೆ  ಕಾಣುತ್ತಿದ್ದು  ನೋಟ ಸವಿಯುವ ಮನಸ್ಥಿತಿ  ಮಕ್ಕಳಲ್ಲಿ ಇರಲಿಲ್ಲ. ಘಂಟೆ ಸುಮಾರು ಐದಾಗಿತ್ತು.





ಅನಂತರ  ಬನ್ನೂರು ರಸ್ತೆಯಾಗಿ  ಪುತ್ತೂರಿಗೆ  ತಲಪುವಾಗ   ಸಮಯ ಸಂಜೆ  ಆರಾಗಿತ್ತು.   ಪುತ್ತೂರು   ಹೊರವಲಯದಿಂದ   ನಂತರ  ಒಳರಸ್ತೆಮೂಲಕ   ಪುನಹ  ದೇವಸ್ಥಾನದ ಎದುರಿನ  ಮೈದಾನಕ್ಕೆ. ಬೆಳಗ್ಗಿನ  ಮುಖ್ಯ  ರಸ್ತೆಯಾದರೆ  ಈ ಎಪ್ಪತ್ತೈದು  ಸವಾರರಿಗೆ  ಸಂಜೆಯ ವಾಹನ ದಟ್ಟಣೆಯ  ಮದ್ಯೆ   ದಾರಿ ತೋರಿಸಲು    ಕಷ್ಟವಾಗುತಿತ್ತು. 
    
ಏರಿಳಿತ  ಕೂಡಿದ  ರಸ್ತೆಗಳಲ್ಲಿ   ಹೆಚ್ಚಿನ  ಸೈಕಲುಗಳು  ಗೇರುರಹಿತವಾಗಿದ್ದೂ  ಮಕ್ಕಳಿಗೆ  ಹೆಚ್ಚು  ಕಷ್ಟವಾಗಿತ್ತು.    ನಮಗೆ  ಸವಾಲಾಗಿದ್ದ  ರಸ್ತೆಯಲ್ಲಿ  ಮೇಲಿನ  ಚಿತ್ರವೊಂದರಲ್ಲಿ    ಕಾಣುವ   ವೈಷ್ಣವಿ   ಎಂಬ ಪ್ರಾಥಮಿಕ  ಶಾಲೆಯ  ಬಾಲಕಿಯೊಬ್ಬಳ  ಸಾಧನೆ ಮೆಚ್ಚುವಂತದ್ದಾಗಿತ್ತು.      ಸುಮಾರು  ಮೂವತ್ತೆಂಟು ಕಿಮಿ  ಒಟ್ಟು  ದೂರವೆಂದು ನಾನು  ದಾಖಲಿಸಿದರೂ    ರಸ್ತೆಯ   ಸನ್ನಿವೇಶ  ಗಮನಿಸುವಾಗ  ಮಕ್ಕಳು  ಅದಕ್ಕಿಂತ ತುಂಬಾ ಹೆಚ್ಚಿನ   ದೂರ  ಸೈಕಲಿಸಿದ   ಶ್ರಮ ಪಟ್ಟಿದ್ದಾರೆ. 


ವಾಪಾಸು  ಮನೆ ಸೇರಲು  ಬಾಟರಿ ಸಾಕೋ ? ಸಂಶಯದಲ್ಲಿ ಶಂಕರಣ್ಣನ  ಕಾರ್ಯಾಗಾರ  ನುಗ್ಗಿದೆ.  ಅರ್ದ ಘಂಟೆ ಚಾರ್ಜು ಬರೋಬರಿ   ಅನಿಸಿ  ಹೊರಡುವಾಗ  ಕಗ್ಗತ್ತಲು. ಸಮಯ  ಏಳೂವರೆ.  ತಲೆಗೊಂದು  ಹೆಡ್ ಲಾಂಪ್ ಏರಿಸಿ  ಅಲ್ಲಿಂದ  ಹೊರಟೆ.  ಕೆಲವು  ಹೊಂಡಕ್ಕೆ ಚಕ್ರವಿಳಿಸಿದರೂ    ಹೆಚ್ಚಿನ ಪಾಲು  ಹೆದ್ದಾರಿಯಲ್ಲಿ ಉಳಿದ ವಾಹನದ  ದೀಪ ನನಗೆ ದಾರಿ ತೋರಿಸಿತು.   ಸಮಸ್ಯೆಯಾದುದು ವಾತಾವರಣದಲ್ಲಿನ   ಹನಿ ಮತ್ತು ದೂಳು ಮಿಶ್ರಣವನ್ನು  ನನ್ನ   ತಲೆ ಮೇಲಿನಿಂದ  ಹೊರಡುವ  ಎಲ್ಇಡಿ ಬೆಳಕು ಕೋಲು  ಕೇಂದ್ರಿಕರಿಸಿ  ಅದೊಂದು ಪರದೆಯಂತಾಗಿತ್ತು.  ಶುಭ್ರ  ಎಲ್ಇಡಿ   ಬಿಳಿಗಿಂತ  ಅರಿಶಿನ ಮಿಶ್ರಣದ ಬೆಳಕೂ ಹೆಚ್ಚು ಚೆನ್ನಾಗಿ  ರಸ್ತೆ ತೋರಿಸುತ್ತದೆ.  ನಮ್ಮ  ಮನೆಯ ಒಳ ರಸ್ತೆಯನ್ನು  ತಲಪುವಾಗ  ಅಲ್ಲಿ ವಾಹನ ಸಂಚಾರದಿಂದ  ದೂಳು ಏಳದ ಕಾರಣ  ಸ್ಪಷ್ಟವಾಗಿ ಕಾಣಲು ಪ್ರಾರಂಬವಾಯಿತು.  


ಅಂತೂ  ಹಗಲು  ಬೇಕಾಗುವ  ಸಮಯದಲ್ಲಿಯೇ   ರಾತ್ರಿಯ ಅಸ್ಪಷ್ಟ  ಬೆಳಕಿನಲ್ಲಿಯೂ    ಪ್ರಯಾಣಿಸಿದ್ದೆ.   ಜನಸಂಚಾರ ಕಡಿಮೆಯಾಗಿ ಶಿವರಾತ್ರಿ  ಕಿತಾಪತಿಗಳು ಪ್ರಾರಂಬವಾಗುವ ಮೊದಲೇ  ಮನೆಗೆ ತಲಪಿದ್ದೆ.     ನಾನು  ಇಂದು   ಸುಮಾರು  ೭೦ ಕಿಮಿ ಸೈಕಲಿಸಲು  ನಾಲ್ಕು ಘಂಟೆ  ತೆಗೆದುಕೊಂಡಿದ್ದೆ.  ೮೫೦ ವಾಟ್ಸ್ ವಿದ್ಯುತ್ ಬಳಕೆಯಾಗಿತ್ತು. ಕೆಟ್ಟ ರಸ್ತೆ ಮತ್ತು  ಮಕ್ಕಳ  ದಾರಿಗಡ್ಡವಾಗದಂತೆ  ಜಾಗರೂಕತೆ  ಸ್ವಲ್ಪ ಹೆಚ್ಚು  ವಿದ್ಯುತ್ ಬಳಕೆಗೆ ಕಾರಣವಾಯಿತು.  
  
ಈ  ಕಾರ್ಯಕ್ರಮವನ್ನು ಮಂಗಳೂರಿನ  ವಾರ್ತಾ ಬಾರತಿ ಮತ್ತು   ಪುತ್ತೂರಿನ  ಸುದ್ದಿ  ಬಿಡುಗಡೆ  ಕನ್ನಡ ದಿನ ಪತ್ರಿಕೆಗಳು   ಪ್ರಕಟಿಸಿವೆ.  ಸುದ್ದಿ ಬಿಡುಗಡೆಯ  ಮುಖಪುಟದ   ಮತ್ತು  ಮುಂದುವರಿದ ಬಾಗ ನೋಡಲು  ಇಲ್ಲಿ  ಮತ್ತು ಇಲ್ಲಿ  ಚಿಟಿಕೆ ಹೊಡೆಯಿರಿ.   ಮೇಲೆ ಕಾಣುವ   ವಾರ್ತಾ  ಬಾರತಿಯ  ಸುದ್ದಿಚಿತ್ರವನ್ನು ಮೂಲದಲ್ಲಿ ನೋಡಲು 
http://vbepaper.com/epapermain.aspx   ತೆರೆದ ನಂತರ    ಮೂರನೇಯ  ಪುಟಕ್ಕೆ  ಸಾಗಿ.