Showing posts with label farming. Show all posts
Showing posts with label farming. Show all posts

Wednesday, January 06, 2010

ಶೌಚಾಲಯ ಉಪಯೋಗಿಸುವ ಹಂದಿಗಳು.




ಹುಟ್ಟುವಾಗಲೇ ಹಂದಿಮರಿಗಳು ಶೌಚಾಲಯ ತರಬೇತಿ ಪಡೆದಿರುತ್ತದೆ ಎಂದು ಗೆಳೆಯ ತೋಮಸ್ ಜರ್ಮನಿಯ ಅಶಾಫೆನ್ ಬರ್ಗ್ ಪಕ್ಕದಲ್ಲಿರಿರುವ ವೈಲರ್ ಹೋಫ್ ಎಂಬ ಕೃಷಿ ಕ್ಷೇತ್ರದಲ್ಲಿ ಹೇಳುವಾಗ ನನಗೆ ಆಶ್ಚರ್ಯಕರ ಅನಿಸಿತ್ತು. ನನ್ನ ಸೈಕಲ್   ಪ್ರವಾಸದಲ್ಲಿ ಜರ್ಮನಿಯಲ್ಲಿ   ಹಲವು ಪ್ರಾಣಿಗಳ ಸಾಕಿದ  ಈ  ಬಯೋಡೈನಾಮಿಕ್  ಕೃಷಿ ಕ್ಷೇತ್ರಕ್ಕೆ ಬೇಟಿ ಇತ್ತಿದ್ದೆ. ಅಲ್ಲಿ   ದಾನ್ಯಗಳ   ಹಾಗೂ  ತರಕಾರಿಗಳ  ಬೆಳೆಸುವುದು  ಮಾತ್ರವಲ್ಲ  ಪಶು ಸಂಗೋಪನೆ  ಕೈಗೊಂಡಿದ್ದರು.    ಅಲ್ಲಿನ ಶಿಕ್ಷಣ ಪದ್ದತಿಯಲ್ಲಿ ಒಂದು ವರ್ಷ ಪ್ರಾಯೋಗಿಕ ತರಬೇತಿ ಪಡೆಯುವುದು ಅವಶ್ಯಕವಾಗಿದ್ದ ಕಾರಣ  ಇಂಗ್ಲೀಷ್  ಸಲೀಸಾಗಿ  ಮಾತನಾಡುವ   ಹಲವಾರು ಯುವಕರು ಯುವತಿಯರು   ಅಲ್ಲಿ ಕೆಲಸ ಮಾಡುತ್ತಿದ್ದರು.

ಅಲ್ಲಿ ಕುರಿ, ಕೋಳಿ, ಹಂದಿ, ಕುದುರೆ, ದನ ಇತ್ಯಾದಿ ಹಲವಾರು ಪ್ರಾಣಿಗಳನ್ನೂ ಸಾಕುತ್ತಿದ್ದರು. ಕುರಿ ಕೋಳಿಗಳಂತೆ ಉಳಿದ ಎಲ್ಲಾ ಪ್ರಾಣಿಗಳೂ ಅವಿರುವ ಆವರಣದಲ್ಲಿ ಎಲ್ಲೆಲ್ಲೂ ಗಲೀಜು ಮಾಡಿದರೂ ಹಂದಿಗಳು ಮಾತ್ರ ಒಂದು ಮೂಲೆಯಲ್ಲಿ ಮಾತ್ರ ಮಲಮೂತ್ರ ಮಾಡುವ ಕಾರಣ ಅವನ್ನು ಸ್ವಚ್ಚಗೊಳಿಸುವ ನಿತ್ಯ ಕೆಲಸ ಸುಲಭವಾಗಿತ್ತು. ಹಂದಿಗಳು ಬರೇ ಗಲೀಜು ಪ್ರಾಣಿಗಳು ಎನ್ನುವುದು ತಪ್ಪು ಕಲ್ಪನೆ.




ಟೈವಾನ್ ದೇಶದಲ್ಲಿ ಒಬ್ಬ ರೈತ ಶೌಚಾಲಯ ಬಳಸಲು ಅಂದರೆ ನಿರ್ದಿಷ್ಟ ಸ್ಥಳದಲ್ಲಿ ಮಲಮೂತ್ರ ಮಾಡಲು ಹಂದಿಗಳ ತರಬೇತಿ ಕೊಟ್ಟಿದ್ದಾನೆ ಎನ್ನುವ ಸುದ್ದಿ ಓದುವಾಗ ವಿಚಾರ ಹೊಸತು ಎನಿಸದಿದ್ದರೂ ಆ ಅನುಬವಗಳ ನೆನಪಾಯಿತು. ಟೈವಾನಿನ ರೈತನ ನೆರೆಕರೆಯವರು ಹಂದಿ ಸಾಕಣೆಯಿಂದಾಗಿ ವಾಸನೆ ಎಂದು ಕಿರಿಕಿರಿ ಮಾಡುತ್ತಿದ್ದರಂತೆ. ಹಾಗಾಗಿ   ಅವನು ಅವನ ಹಂದಿಗಳಿಗೆ ನಾಗರಿಕ ವರ್ತನೆ ಕಲಿಸಿದನಂತೆ.  ಹಂದಿಗಳು ತರಬೇತಿ ಕೊಟ್ಟರೆ ಹೇಗೆ ಸಲೀಸಾಗಿ ಪಳಗುತ್ತದೆ ಎನ್ನುವುದು ವಿಡಿಯೊ ಕಂಡಿತು.  ಹಾಗೆ  ಅದನ್ನೂ  ಇಲ್ಲಿಯೇ  ಹಾಕಿದೆ.

ಒಂದು  ಮಾತು.  ಸಿಂಹಾಸನವೇರುವ ಹಂದಿ ಚಿತ್ರಣಕ್ಕೂ    ಟೈವಾನ್  ಫಾರ್ಮಿಗೂ  ಸಂಬಂದವಿಲ್ಲ.   ಅಂತೆಯೇ ಮೇಲೆ  ಹಾಕಿದ   ನನ್ನ ಚಿತ್ರ ಜರ್ಮನಿಯ ಬೇರೊಂದು ಫಾರ್ಮಿನಲ್ಲಿ ತೆಗೆದದ್ದು.  weilerhof ನಲ್ಲಲ್ಲ.   ಈ ಫಾರ್ಮಿನಲ್ಲಿ ಒಳಗೆ ಹೋಗುವ ಮೊದಲು ನನಗೆ ದರಿಸಿಕೊಳ್ಳಲು ಉದ್ದನೆಯ  ಕೋಟು ಕೊಟ್ಟಿದ್ದರು.

Friday, June 12, 2009

ತೆಂಗಿನೆಣ್ಣೆ ಹಿಂಡಲು ಮಾಂಸಹಾರಿ ವಿಧಾನ

ಸೇವಾಗ್ರಾಮದ ಗಾಂಧಿ ಆಶ್ರಮ science for villages ಎನ್ನುವ ಪಾಕ್ಷಿಕ ಪ್ರಕಟಿಸುತಿತ್ತು. ನಾನು ಅದರ ಖಾಯಂ ಓದುಗನಾಗಿದ್ದೆ. ಹಲವು ಕೂತೂಹಲಕರ ಪ್ರಯೋಗಗಳು  ಅದರಲ್ಲಿ  ಇದ್ದವು.   ಇಪ್ಪತ್ತೋಂದು ವರ್ಷ ಹಿಂದೆ ಎಪ್ರಿಲ್ 1988 ರ ಸಂಚಿಕೆಯಲ್ಲಿ ಇಂಡೋನೇಶ್ಯದಲ್ಲಿ ಚಲಾವಣೆ ಇರುವ ತೆಂಗಿನ ಕಾಯಿಯಿಂದ ಎಣ್ಣೆ ಬೇರ್ಪಡಿಸುವ ವಿಧಾನ ಪ್ರಕಟವಾಗಿತ್ತು. ಪತ್ರಿಕೆ  ರದ್ದಿಗೆ ಸೇರುವಾಗ ಒಂದು ಪ್ರತಿ ಇರಲೆಂದು ಇಟ್ಟುಕೊಂಡೆ. ಜಗತ್ತಿನಲ್ಲಿ  ಒಂದೆಡೆ  ತೆಂಗಿನಕಾಯಿ  ಬೆಳೆಯುವಲ್ಲಿ   ಇಂತಹ ವಿಧಾನ ಚಾಲ್ತಿಯಲ್ಲಿತ್ತು ಎನ್ನುವ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಹೊರತು ಇದು ಪ್ರಾಯೋಗಿಕ ಎಂದಲ್ಲ.



ಸರಳವಾಗಿ  ಹೇಳುವುದಾದರೆ   ನದಿಯಲ್ಲಿರುವ ಏಡಿಯನ್ನು ಹಿಡಿದು ಅದರ ಚಿಪ್ಪನ್ನು ಬೇರ್ಪಡಿಸಿ ಪುಡಿಮಾಡಬೇಕಂತೆ. ಅನಂತರ ಅದನ್ನು ತೆಂಗಿನ ತುರಿಯೊಂದಿಗೆ ಮಿಶ್ರ ಮಾಡಿ ಒಂದು ರಾತ್ರಿ ಬಿಡಬೇಕು. ಮರುದಿನ ಬೆಳಗಾಗುವಾಗ ಅ ಮಿಶ್ರಣ ಕೆಂಬಣ್ಣದ ತೈಲಮಯವಾಗಿರುತ್ತದೆ. ಪ್ಲಾಸ್ಟೀಕ್ ಹಾಳೆಯಲ್ಲಿ ಮೂರುನಾಲ್ಕು ಘಂಟೆ ಒಣಗಿಸಿ ಎಣ್ಣೆ ಹಿಂಡಬೇಕು ಅನ್ನುತ್ತದೆ ಲೇಖನ. ವಿವರಕ್ಕೆ ಮೂಲ ಲೇಖನವನ್ನು ಜತೆಗಿರಿಸಿದ್ದೇನೆ. ಈಗ virgin coconut oil ಎನ್ನುವ ಹೊಸ ಸ್ವರೂಪವೂ ನಮ್ಮ ಮುಂದಿದೆ. ಈ ಎಣ್ಣೆ ಯಾವ ವರ್ಗಕ್ಕೆ ಸೇರಿದ್ದೆಂದು ದಯವಿಟ್ಟು ಪ್ರಶ್ನಿಸಬೇಡಿ. ನನಗೂ ಗೊತ್ತಿಲ್ಲ.ಇದು  ಸೇರುವುದು   ಸಸ್ಯಹಾರಕ್ಕೋ   ಮಾಂಸಹಾರಕ್ಕೋ   ಅನ್ನುವುದು  ಸಹಾ  ಗೊತ್ತಿಲ್ಲ.

Sunday, May 24, 2009

ಮಳೆಗಾಲದಲ್ಲಿ ಊರುಗೋಲಾದ ಸದಾಸಂ

ಸಕಲದಾರಿ ಸಂಚಾರಿ, ಸದಾಸಂ ನಮ್ಮಲ್ಲಿಗೆ ಬಂದು ಈಗ ಎರಡು ವರ್ಷ  ಪೂರ್ತಿಯಾಗಲು  ಒಂದು ಮಳೆಗಾಲ ಮಾತ್ರ ಬಾಕಿ. ಮಳೆಗಾಲದಲ್ಲೂ ಬೇಸಿಗೆಯಲ್ಲೂ ಉಪಯೋಗದ ಮಟ್ಟಿಗೆ ಸಾಕಷ್ಟು ಅನುಭವಗಳಾದವು. ನಾನು ಚೀನಾದಿಂದ ಸದಾಸಂ ತರಿಸುವಾಗ ಆಗಸ್ಟ್ ಮೊದಲ ವಾರವಾಗಿತ್ತು. ಮಳೆಗಾಲದ ಅಬ್ಬರ ಕಡಿಮೆಯಾಗಲು ಸುರುವಾಗಿತ್ತು. ಅದುದರಿಂದ ಆ ವರ್ಷ ಸದಾಸಂನ ಮಳೆಗಾಲದ ಉಪಯೋಗದ ಬಗ್ಗೆ ಸಂಪೂರ್ಣ ಅನುಭವ ನನಗೆ ಸಿಕ್ಕಿರಲಿಲ್ಲ. ಉಪಕಾರ ಅನಿಸಿತ್ತು. ಅಷ್ಟೇ
.

ಇಲ್ಲಿ ಮಳೆಗಾಲವನ್ನು ಪ್ರತ್ಯೇಕಿಸಿ ಹೇಳುವ ಕಾರಣ ಕಳೆದ ಹಲವು ವರ್ಷಗಳಲ್ಲಿ ಮಳೆಗಾಲದಲ್ಲಿ ನಾನು ತೋಟಕ್ಕೆ ಹೋದದ್ದು ಬಹಳ ಕಡಿಮೆ.  ಬೇಸಿಗೆಯಲ್ಲಿ  ಓಡಾಟಕ್ಕೆ   ಸಹಾಯ  ಮಾಡುವ  ಮಾರುತಿ  ಒಮ್ನಿ  ಮಳೆಗಾಲದಲ್ಲಿ  ಹೂತುಹೋಗುವ  ಕಾರಣ   ಸೋಲುತ್ತದೆ.   ಮಳೆಗಾಲದಲ್ಲಿ ಬಾದಿಸುವ ಕೊಳೆ ರೋಗ ತಡೆಯಲು ಮುಂಜಾಗ್ರತೆ ಔಷದಿ ಸಿಂಪರಣೆ ಅಡಿಕೆ ಕೃಷಿಕನ ಮಟ್ಟಿಗೆ ಅತಿ ಮುಖ್ಯ ವಿಚಾರ. ಕೊಳೆರೋಗದ ಸಿಂಪರಣೆ ಬಗೆಗೆ ನನಗೆ ಕೆಲಸದಾಳುಗಳು ಹೇಳಿದ್ದೇ ಸುದ್ದಿ. ನಮ್ಮಲ್ಲಿ ಇದು ನಿರ್ಲಕ್ಷಿತವಾಗಿ ರೋಗಕ್ಕೆ ಅಲ್ಲಲ್ಲಿ ಅಡಿಕೆ ಮರಗಳು ಸತ್ತವು. ತೋಟದ ನೈಜ ಸ್ಥಿತಿ ಅರಿಯಲು ಸಂಪೂರ್ಣ ಪರಾವಲಂಬನೆಯಿಂದಾಗಿ ಅಸಮರ್ಪಕ ಸಿಂಪರಣೆಯಿಂದಾಗಿ ನಾನು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಬವಿಸಿದೆ.

ಮಳೆಗಾಲದಲ್ಲಿ ಬೀಸುವ ಗಾಳಿಗೆ ಅಡಿಕೆ ಗೊನೆ ಭಾರಕ್ಕೆ ಮುರಿದುಬೀಳುವುದು ಮತ್ತು ಅಡಿಕೆ ಮೇಲಿನ ತೇವಾಂಶ ಒಣಗದೆ ಕೋಳೆರೋಗಕ್ಕೆ ತುತ್ತಾಗುವುದು ತೋಟದಲ್ಲಿರುವ ಅತ್ಯುತ್ತಮ ಮರಗಳೇ. ಈ ರೀತಿ ಅಂಗಚ್ಚೇದನವಾದ ತೋಟವನ್ನು ಇದ್ದು ಪ್ರಯೋಜನವಿಲ್ಲವೆಂದು ಒಂದಂಶವನ್ನು ಕಡಿಸಿದೆ.  ಕೃಷಿ  ಮುಂದುವರಿಸುವ  ಬಗೆಗೆ  ಗಂಬೀರ  ಚಿಂತನೆ  ನಡೆಸುವಂತಹ  ಸನ್ನಿವೇಶ  ನನ್ನ  ಮುಂದಿತ್ತು.

ಹಿನ್ನೆಲೆ ಹೀಗಿರುವಾಗ ನಾನು ಸದಾಸಂ ತರಿಸಿದ್ದೇ ಮಳೆಗಾಲದಲ್ಲಿ ತೋಟಕ್ಕೆ ಹೋಗಲು. ಅದುದರಿಂದ ಕಳೆದ ವರ್ಷ ಮಳೆ ಪ್ರಾರಂಬವಾಗಲು ಕಾಯುತ್ತಲಿದ್ದೆ. ಕಳೆದ ವರುಷ ಜೂನ್ ಸುರುವಿನ ವಾರ   ಕೋಳಿ ಜ್ವರ ಅನ್ನುವ ಮಾರಿ ಬಂದು ಮೊದಲೇ ದುರ್ಬಲನಾದ ನನ್ನನ್ನು ಸಾಕಷ್ಟು ಸೋಲಿಸಿತು. ಅದರೂ ಅಗತ್ಯಕ್ಕೆ ತಕ್ಕಷ್ಟು ಹೋಗಲು ಸಾದ್ಯವೂ ಆಯಿತೆನ್ನಿ.

ಈಗ ಮಳೆಗಾಲದಲ್ಲೂ ತೋಟದಲ್ಲಿ ಕೆಸರಿನಲ್ಲಿ ಹೂತು ಹೋಗಿ ಬಾಕಿಯಾದರೆ ಅನ್ನುವ ಅಂಜಿಕೆ ಇಲ್ಲವೇ ಇಲ್ಲ. ಎರಡೂ ಚಕ್ರಗಳು ಜತೆಯಾಗಿಯೇ ತಿರುಗುವ ಕಾರಣ ಎಂತಹ ಕೆಸರಿನಿಂದಲೂ ಎದ್ದು ಬರುತ್ತದೆ. ಹಾಗೆ ಅಗಾಗ ತೋಟಕ್ಕೆ ದೈರ್ಯದಿಂದ ಹೋಗಿ ಬರಲು ಸದಾಸಂ ಬಹಳ ಸಹಾಯ ಮಾಡುತ್ತಿದೆ. ನಮ್ಮ ತೋಟದಲ್ಲಾಗುವ ಕೆಲಸದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ನನ್ನಲ್ಲಿ ಹಲವರಿಂದ ಕೇಳಲ್ಪಡುವ ಪ್ರಶ್ನೆ ಈಗ ಸದಾಸಂ ಬಂದು ಅದರಿಂದ ಕೃಷಿ ನಿರ್ವಹಣೆ ಉತ್ತಮಗೊಂಡು ಲಾಬ ಎನಿಸುತ್ತದೋ ? ನನ್ನ ಮುಖ್ಯ ಬೆಳೆಯಾದ ಅಡಿಕೆ ಬಹುವಾರ್ಷಿಕ ಬೆಳೆ. ನಿರ್ವಹಣೆಯಲ್ಲಿಸೋತು ಸುಮಾರು ಅರ್ಧದಷ್ಟು ತೋಟವನ್ನು ಕಳಕೊಂಡದ್ದು ವಾಪಾಸು ಪಡಕೊಳ್ಳಲು ಅಸಾದ್ಯ. ನನಗನಿಸುವಂತೆ ಈಗ ಉಳಿದಿರುವುದನ್ನು ಉಳಿಸಿಕೊಳ್ಳಲು ನಂಬಲರ್ಹವಾದ ಊರುಗೋಲಾದ ಸದಾಸಂನಿಂದ ಖಂಡಿತ ಸಹಾಯವೆನಿಸುತ್ತದೆ.

Tuesday, May 05, 2009

ರೈತರು ಉರಿಸುವ ಬೆಳೆ ತ್ಯಾಜ್ಯ ಬಾರತದ ಮೇಲೊಂದು ಬೊಕ್ಕೆ

ಇದೇನು ಬಾರತದ ಭೂಪಟದಲ್ಲಿ ಬೊಕ್ಕೆ ಎದ್ದಂತಿದೆಯಲ್ಲ ಎಂದು ಕೊಂಡೆ. ಮುಂದಕ್ಕೆ ಓದುವಾಗ ತಿಳಿದ ವಿಚಾರ, ಇವು ಪಂಜಾಬಿನ ರೈತರು ಬೆಳೆ ಕೊಯಿಲಾದ ನಂತರ ಗದ್ದೆಗೆ ಬೆಂಕಿ ಹಾಕಿರುವುದನ್ನು ಅಮೇರಿಕದ ನಾಸಾ ಬಿಡುಗಡೆ ಮಾಡಿದ ಈ ಚಿತ್ರದಲ್ಲಿ ಕೆಂಪು ಚುಕ್ಕಿಯಿಂದ ಗುರುತಿಸಲಾಗಿದೆ. ನಮ್ಮಲ್ಲಿ ಇಂತಹ ಪದ್ದತಿಯೊಂದು ಚಾಲ್ತಿಯಲ್ಲಿದ್ದು ಈಗ ಕಣ್ಮರೆಯಾಗಿದೆ. ಪಂಜಾಬಿನಿಂದ ದಕ್ಷಿಣ ಪೂರ್ವಕ್ಕೆ ಮಂಜು ಮುಸುಕಿದಂತಿದ್ದು ಗಂಗಾ ನದಿಯೇ ಮರೆಯಾಗಿದೆ. ಹೊಗೆ ಮತ್ತು ಡೀಸೆಲ್ ವಾಹನವೂ ಸೇರಿದಂತೆ ನಗರ ಪ್ರದೇಶದ ಮಲೀನತೆ ಈ ಬಿಳಿ ಹೊಗೆಗೆ ಕಾರಣವಿರಬಹುದು.

                                                                
ನಮ್ಮ ಕರಾವಳಿ ಪ್ರದೇಶದಲ್ಲಿ ಮೊದಲು ಮೇವಿಗಾಗಿ ಹುಲ್ಲು ಬೆಳೆಸುವ ಪರಿಪಾಠ ಇರಲಿಲ್ಲ. ಆಗ ಗುಡ್ಡದಲ್ಲಿ ತನಷ್ಟಕೆ ತಾನೆ ಬೆಳೆಯುವ ಮುಳಿ ಹುಲ್ಲು ಕೆಲವು ತಿಂಗಳ ಮೇವಿನ ಅವಶ್ಯಕಥೆ ಪೂರೈಸುತಿತ್ತು. ಮುಳಿ ಹುಲ್ಲು ಹುಲ್ಲು ಕತ್ತರಿಸಿದ ನಂತರ ಗುಡ್ಡಕ್ಕೆ ಬೆಂಕಿ ಹಾಕುವ ಸಂಪ್ರದಾಯ. ಉಳಿಕೆ ಬೇರು ಕಸವೆಲ್ಲ ಸುಟ್ಟು ಮುಂದಿನ ವರ್ಷ ಚಿಗುರಲು ಸಹಾಯಕ ಎನ್ನುವ ಚಿಂತನೆಯಿಂದ ಈ ಪರಿಪಾಠ ನಡೆದು ಬಂದಿತ್ತು. ಈಗ ಕೆಲಸದಾಳುಗಳ ಅಲಭ್ಯತೆ, ಗುಡ್ಡದಲ್ಲಿ ಕೃಷಿ ಮಾಡಿರುವ ಕಾರಣ ಈ ಸಂಪ್ರದಾಯ ಇತಿಹಾಸಕ್ಕೆ ಸೇರಿದೆ.


ಆಂದು ಮುಳಿ ಹುಲ್ಲು ಬಹಳ ಅಮೂಲ್ಯ ಮೇವಾಗಿತ್ತು. ಒಮ್ಮೆ ನಮ್ಮ ಅಜ್ಜ ಹೊರಗೆ ಹೋಗಿದ್ದವರು ಸಂಜೆ ತಡವಾಗಿ ಮನೆಗೆ ಬಂದವರೇ ಯಾರೋ @$&% ಮಕ್ಕಳು ಮುಳಿ ಗುಡ್ಡಕ್ಕೆ      ಬೆಂಕಿ ಹಾಕಿದ್ದಾರೆ ಎಂದು ಬೈದು ನಂತರ ಈ ವರ್ಷದಲ್ಲಿ ಮೇವಿನ ಕೊರತೆ ಉಂಟಾಗುತ್ತದೆ ಎಂದು ಪೇಚಾಡಿಕೊಂಡರಂತೆ. ರಾತ್ರಿ ಊಟದ ಸಮಯಕ್ಕಾಗುವಾಗಲೂ ಮನೆಯ ಮಕ್ಕಳು ನಾಪತ್ತೆ. ಹುಡುಕಾಡುವಾಗ ಮನೆಯ ಮೂಲೆಯಲ್ಲಿ ಅಡಗಿ ಕುಳಿತ ಮಕ್ಕಳು ನಾವು ಚಂದ ನೋಡಲು ಮುಳಿ ಹುಲ್ಲಿಗೆ ಬೆಂಕಿ ಹಾಕಿದ್ದು, ನಂತರ ನಂದಿಸಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ ಎನ್ನುತ್ತಾ ಅಡಗಿಕೂತಲ್ಲಿಂದ ಹೊರಬಂದರಂತೆ.

ಬಾರತದ ಕೆಲವು ಪ್ರದೇಶದಲ್ಲಿ ಇಂದಿಗೂ ಬೆಳೆ ಕೊಯಿಲಾದ ನಂತರ ಹೊಲಕ್ಕೆ ಬೆಂಕಿ ಇಡುವ ಸಂಪ್ರದಾಯ. ಶಿವಮೊಗ್ಗದ ಪ್ರಫುಲ್ಲಚಂದ್ರರಂತಹ ಅನುಭವಸ್ಥ ರೈತರು ಇದರಿಂದ ನಷ್ಟವೇ ಹೊರತು ಲಾಭವಿಲ್ಲ ಎಂದರೂ ಈ ಪದ್ದತಿ ಮಾಸಿಲ್ಲ. ಪರೀಸರ ಮಾಲಿನ್ಯ, ಹವಾಮಾನ ವ್ಯತ್ಯಾಸ ಮತ್ತು ಸಂಪನ್ಮೂಲಗಳ ದ್ವಂಸವಾಗುವ ಕೃತ್ಯ ನಮ್ಮ ರೈತರು ಬಿಡುವುದು ಉತ್ತಮ.

ಈ ಸುಳಿವಿನ ಮೂಲ ವ್ಯಾಪಾರಿ ಹಡಗು ಕಾಪ್ಟನ್ ವೇಲು ಎಂಬವರ ಬ್ಲೋಗ್ ಬರಹ. ಹಲವು ವಿಚಾರಗಳ ಬಗೆಗೆ ವೇಲು ಚೆನ್ನಾಗಿ ಬರೆಯುತ್ತಾರೆ. ಹುಡುಕುತ್ತ ಹೋದಂತೆ ಇದರ ಮೂಲ ಪುಟವೂ ಸಿಕ್ಕಿತು.

Sunday, March 08, 2009

ಮಣ್ಣಿನೊಳಗಿನ ಬಾಂಧವ್ಯ

ತೆರೆ  ಸರಿಸಿ  ನೋಡಿದರೆ    ಮಣ್ಣಿನೊಳಗಿನ   ವಿವಿದ  ಖನಿಜಾಂಶಗಳ ನಡುವಿನ  ಸಂಬಂದ  ಗೋಚರವಾಗುತ್ತದೆ. ಎಲ್ಲವೂ  ಪರಸ್ಪರ  ಬಾಂದವ್ಯ  ಹೊಂದಿರುತ್ತದೆ.  ಸಾವಯುವ  ಕೃಷಿಗೆ  ಈ  ಅರಿವು  ಸಹಾಯಕ.

ಸಾವಯುವ ಕೃಷಿಯ ಕಲ್ಪನೆಯಲ್ಲಿ ನಾವು ಪೋಷಿಸುವುದು ಮಣ್ಣನ್ನು ಹೊರತು ಬೆಳೆಯನ್ನಲ್ಲ,. ಮಣ್ಣಿನ ಫಲವತ್ತತೆಯ ಮಟ್ಟ ಕಾಯ್ದುಕೊಂಡಲ್ಲಿ ಅದು ಬೆಳೆಗೆ ಅಗತ್ಯವಿರುವಾಗ ಅಗತ್ಯದ ಪೋಷಕಾಂಶಗಳ ಬಿಡುಗಡೆ ಮಾಡುತ್ತದೆ. ಸಮಸ್ಯೆ ಬಂದಾಗ ಕಾರಣ ಹಿಡಿದು ಸರಿಪಡಿಸುವುದು ಸೂಕ್ತ ಹೊರತು ಲಕ್ಷಣ ನೋಡಿ ಗಡಿಬಿಡಿ ಮಾಡುವುದಲ್ಲ.

ಸಮೂಹದಲ್ಲಿ ಜನರು ವರ್ತಿಸುವ ಬಗ್ಗೆ ನಾನು ಗಮನಿಸಿದ್ದೇನೆ. ಮಣ್ಣಿನಲ್ಲಿರುವ ವಿವಿದ ಖನಿಜಾಂಶಗಳ ವರ್ತನೆಗೆ ಇಲ್ಲೊಂದು ಹೋಲಿಕೆ. ಗುಂಪಿನಲ್ಲಿ ಪ್ರತಿಯೊಬ್ಬರ ವರ್ತನೆಯೂ ಅಲ್ಲಿರುವ ಇತರರ ಇರುವನ್ನು ಅವಲಂಬಿಸಿರುತ್ತದೆ. ಜನರ  ಗುಂಪಿನಲ್ಲಿ ವೆಂಕಟನ ಸ್ವರ ಜೋರಾಗಿದೆ ಎಂದರೆ ದೇವಕಿ ಜತೆಗಿರಬೇಕು ಮತ್ತು ಸ್ವರ ಮಾಮೂಲಿಗಿಂತ ಕ್ಷೀಣ ಎಂದರೆ ಮಹಾಬಲ ಗುಂಪಿನಲ್ಲಿರಬಹುದೆನ್ನುವ ತೀರ್ಮಾನಕ್ಕೆ ಬರಬಹುದು. ಇದೇ ರೀತಿ ಮಣ್ಣಿನಲ್ಲಿ ಪೋಷಕಾಂಶಗಳ ವರ್ತನೆ ಇರಬಹುದಾದ ಇತರ ಖನಿಜಾಂಶಗಳನ್ನು ಅವಲಂಬಿಸಿದೆ. ಕೆಲವು ಪೋಷಕಾಂಶಗಳ ನಡುವಿನ ಸಂಬಂದ  ಸಾದ್ಯವಾದಷ್ಟು ಸರಳವಾಗಿ ಕೋಷ್ಟಕದಲ್ಲಿ ಕಾಣಿಸಿದ್ದೇನೆ.

ನಮ್ಮ ಕರಾವಳಿ ಪ್ರದೇಶದಲ್ಲಿ ಮಣ್ಣಿನಲ್ಲಿ ಕಾಲ್ಸಿಯಂ ಇದ್ದರೂ ಅದು ಅಲುಮೀನು ಮತ್ತು ಕಭ್ಭಿಣದ ಅಂಶಗಳೊಂದಿಗೆ ಸಂಯುಕ್ತವಾಗಿ ಬೆಳೆಗೆ ಸಿಗುವುದಿಲ್ಲ. . ಇದರ ಪರಿಣಾಮ ನಮ್ಮ ದನಗಳು ಎಲುಬು ಬೆಳೆಯದೆ ಮಲೆನಾಡು ಗಿಡ್ಡ ಎನಿಸಿಕೊಂಡಿವೆ.

ಎಡಗಡೆಯಲ್ಲಿ ಕಾಣಿಸಿರುವ ಪೋಷಕಾಂಶಗಳ ಸಾಂದ್ರತೆ ಹೆಚ್ಚು ಆಥವಾ ಕಡಿಮೆ ಇದ್ದರೆ
ಮೇಲಿನ ಸಾಲಿನಲ್ಲಿ ಕಾಣಿಸಿರುವ ಅಂಶಗಳ ಕೊರತೆ ಗೋಚರಿಸುತ್ತದೆ.


ಪೊಟಾಷ್ ಬೆಳೆಗೆ ಸಿಗುವ ವಿಚಾರವನ್ನು ಸಾರಜನಕ, ರಂಜಕ, ಮೆಗ್ನಿಸಿಯಂ, ಬೊರಾನ್, ಸೋಡಿಯಂ ಮತ್ತು ಕ್ಲೋರಿನ್ ಅಂಶಗಳ ಸಾಂದ್ರತೆ ನಿಯಂತ್ರಿಸುತ್ತವೆ. ಇವುಗಳ ಪ್ರಮಾಣ ಹೆಚ್ಚಿದ್ದಲ್ಲಿ ಬೆಳೆಗಳ ಮಟ್ಟಿಗೆ ಪೊಟಾಷ್ ಕನ್ನಡಿಯೊಳಗಿನ ಗಂಟಾಗುತ್ತದೆ. ಇಲ್ಲಿ ಸ್ವಾರ್ಥ ಹಿತಾಸಕ್ತಿಗಳಿಂದ ದಿಕ್ಕು ತಪ್ಪಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತದೆ. ಇಂದು ಕಡಿಮೆ ಬೆಲೆಯ ಮತ್ತು ಅತಿ ಹೆಚ್ಚು ಮಾರಾಟವಾಗುವ ಮುರಿಟ್ ಆಫ್ ಪೊಟಾಷ್ ರಸಾಯನಿಕ ಗೊಬ್ಬರ ಕ್ಲೋರಿನ್ ಮತ್ತು ಪೊಟಾಸಿಯಂ ಒಳಗೊಂಡಿದ್ದು ಸಮಸ್ಯೆ ಇರುವುದು ಈ ಮಿಶ್ರಣದಲ್ಲೇ. ಲಕ್ಷಣ ನೋಡಿ ರೈತರು ಮತ್ತೂ ಹೆಚ್ಚು ಗೊಬ್ಬರ ಹಾಕುತ್ತಾರೆ. ಇದೊಂದು ವಿಷ ವರ್ತುಲ.

ಸಾವಯುವ ಕೃಷಿಯಲ್ಲಿ ಈ ಖನಿಜಾಂಶಗಳ ನಿಬಾಯಿಸುವುದು ಹೆಚ್ಚು ಸರಳ ಏಕೆಂದರೆ ಅಲ್ಲಿ ಮಣ್ಣಿನ ಫಲವತ್ತತೆ ಕಾಪಾಡಲು ಹೆಚ್ಚಿನ ಗಮನ ಕೊಡಲಾಗುತ್ತದೆ. ಜೀವನದಲ್ಲೂ   ಕೆಲವೊಂದು  ಸನ್ನಿವೇಶದಲ್ಲಿ  ನಾವು   ಸಮಸ್ಯೆಯನ್ನೇ   ಪರಿಹಾರ  ಎಂದು ಕಲ್ಪಿಸಿಕೊಂಡಿರುತ್ತೇವೆ.    ಲಕ್ಷಣದ ಬದಲಿಗೆ ಕಾರಣವ ಹುಡುಕಿ ನೋಡಿ ಪರಿಹಾರ ಕೈಗೊಳ್ಳುವುದೇ    ಉತ್ತಮ.

Friday, February 27, 2009

ಸಮತೋಲನ ಪಶು ಆಹಾರದ ಮುಖ್ಯ ಅಂಶ ಕಾಣೆ

ಸಮತೋಲನ ಪಶು ಆಹಾರದಲ್ಲಿ ಪ್ರಮುಖ ಅಂಶವಾದ   ಖನಿಜ ಮಿಶ್ರಣ ಮಾರುಕಟ್ಟೆಯಲ್ಲಿ  ದುಬಾರಿ  ಹಾಗೂ  ಕಾಣೆಯಾಗಿರುವುದು  ಕಳವಳಕಾರಿ   ವಿಚಾರ.   ಮಾರುಕಟ್ಟೆಯಲ್ಲಿ  ಕಿಲೋ  ಒಂದಕ್ಕೆ   ಸುಮಾರು ನಲುವತ್ತು ರೂಪಾಯಿ ಮತ್ತು ಹಾಲು ಮಂಡಳಿ ಮೂವತ್ತಕ್ಕೆ ಮಾರುತ್ತಿದ್ದ ಖನಿಜ ಮಿಶ್ರಣದ ಕ್ರಯ ಇತ್ತೀಚಿನ ದಿನಗಳಲ್ಲಿ ಬಹಳ ಏರುತ್ತಾ ಹೋಗಿದೆ.  ಒಂದು   ಹೆಸರಾಂತ  ಕಂಪೇನಿ  ಮಾಲು  ತೊಂಬತ್ತು  ರೂಪಾಯಿ   ತಲಪಿದೆ.   ಡಾಕ್ಟರಲ್ಲದ ಡಾಕ್ಟ್ರಿಗೆ ಹಾಗೂ ಮಣ್ಣಿನ ಮಗನ ಮಗನಿಗೆ ಹಾಲು ಮಂಡಲಿ ರಾಜಕೀಯದ ಮದ್ಯೆ ಇದಕ್ಕೆ ಗಮನ ಹರಿಸಲು ಪುರುಸೊತ್ತಿಲ್ಲ. ಪರಿಣಾಮವಾಗಿ ನಮ್ಮೂರ ಹಾಲು ಖರೀದಿ ಸಂಘಗಳಲ್ಲಿ ದೊರಕುತ್ತಿದ್ದ ಖನಿಜ ಮಿಶ್ರಣ ಈಗ ಎರಡು ವಾರಗಳಿಂದ ಕಾಣೆಯಾಗಿದೆ.  ಪ್ರತ್ಯಕ್ಷ ಲಾಭ ಕಾಣದ ಕಾರಣ ಹಾಲು ಉತ್ಪಾದಕರು ನಿರ್ಲಕ್ಷಿಸುವ ಈ ಖನಿಜ  ಮಿಶ್ರಣ  ಕಾಣೆಯಾಗುವುದು ಸಮಾಜದ ಗೋ ಸಂಪತ್ತಿಗೆ ಮಾರಕ.

ನಮ್ಮಲ್ಲಿ ಹಸುವೊಂದು ಬೆದೆಗೆ ಬಂದರೆ ಹೋರಿ ಹುಡುಕುವುದು ಅಥವಾ ಕೃತಕ ಗರ್ಭದಾರಣೆಗೆ ವ್ಯವಸ್ಥೆ ಮಾಡುವುದಕ್ಕಷ್ಟೇ ನಮ್ಮ ಕಾಳಜಿ ಸಿಮಿತ. ಕರು ಗಂಡಾದರೂ ಹೆಣ್ಣಾದರೂ ಒಂದೇ ಅನ್ನುವ ಬಾವನೆ ಇದ್ದು ಕರುವನ್ನು ಸಾಕಿ ಹಸುವನ್ನಾಗಿ ಮಾಡುವುದು ವೆಚ್ಚದಾಯಕ. ಬೇಕಾದಾಗ ಹಾಲೂಡುವ ಹಸುವನ್ನು ಖರೀದಿಸಿದರಾಯಿತು ಎನ್ನುವ ಪಲಾಯನವಾದ ನಾವಿಂದು ಕಾಣುತ್ತೇವೆ. ನಮ್ಮ ಪಶು ಸಂಪತ್ತಿನ ತಳಿಯನ್ನು ಉತ್ತಮಪಡಿಸುವ ನೈಜ ಕಾಳಜಿ ಅಥವಾ ಮುಂದಾಲೋಚನೆ ಸರಕಾರಕ್ಕಾಗಲಿ ರೈತ ಸಮುದಾಯಕ್ಕಾಗಲಿ ಇಲ್ಲವೇ ಇಲ್ಲ ಎನ್ನಬಹುದು.

ಪಶ್ಚಿಮದ ದೇಶಗಳಲ್ಲಿ ಒಂದು ಹಸು ಬೆದೆಗೆ ಬರುವಾಗ ಹೆಚ್ಚು ಕಮ್ಮಿ ನಾವು ಬೆಳೆದು ನಿಂತ ಮಗಳ ಲಗ್ನಕ್ಕಾಗಿ ಕಾಳಜಿ ವಹಿಸಿದಷ್ಟೇ ಜಾಗ್ರತೆ ವಹಿಸುತ್ತಾರೆ. ವೀರ್ಯ ಲಭ್ಯವಿರುವ ಹೋರಿಗಳ ಜಾತಕಗಳ ಜಾಗ್ರತೆಯಿಂದ ಪರಿಶೀಲನೆ ನಡೆಸಿದ ನಂತರವಷ್ಟೇ ಕೃತಕ ಗರ್ಭದಾರಣೆಗೆ ಅನುವು ಮಾಡಿಕೊಡುತ್ತಾರೆ.  ಕೆಲವು  ಉತ್ತಮ  ಹೋರಿಗಳ  ವೀರ್ಯ  ಹೆಚ್ಚು ದುಬಾರಿ.    ಪ್ರತಿಯೊಂದು ಕರು ಹುಟ್ಟುವಾಗಲೂ ಅದರ ಹಿಂದೆ ನಿರ್ದಾರಿತ ಚಿಂತನೆ ಇದ್ದು ಅನಪೇಕ್ಷಿತ ಗುಣಗಳ ಕನಿಷ್ಟಗೊಳಿಸಲು ಸಾದ್ಯವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಉತ್ತಮ ವಂಶಶಾಹಿಗಳ ನಷ್ಟವಾಗುವುದಿಲ್ಲ.

ಎರಡನೆಯದಾಗಿ ನಮ್ಮಲ್ಲಿ ಮಲೆನಾಡು ಪ್ರದೇಶದಲ್ಲಿ ಕಾಲ್ಸಿಯಂ ಸತ್ವ ಮಣ್ಣಿನಲ್ಲಿದ್ದರೂ ನೀರಿನಲ್ಲಿ ಕರಗದ ಅಲಬ್ಯ ರೂಪದಲ್ಲಿರುವ ಕಾರಣ ನೂರಾರು ವರುಷಗಳಿಂದ ಕಾಲ್ಸಿಯಂ ಕೊರತೆಯಿಂದಾಗಿ ಎಲುಬು ಬೆಳವಣಿಕೆ ಕುಂಟಿತವಾಗಿ ಮಲೆನಾಡು ಗಿಡ್ಡ ಜಾತಿ ದನ ರೂಪಿತವಾಯಿತು. ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮಲ್ಲಿದ್ದ ಉತ್ತಮ ಮಾದರಿ ರಾಸುಗಳಿಗೆ ಖನಿಜ ಮಿಶ್ರಣ ಮತ್ತು ಪೌಷ್ಟಿಕ ಆಹಾರ ಕೊಟ್ಟು ಉತ್ತಮಗೊಳಿಸುವ ಬದಲು ತಳಿ ಸಂಕರಣ ಕೈಗೊಂಡರು.

ದನಕರುಗಳಿಗೆ ದಿನವೂ     ಖಂಡಿತವಾಗಿ  ಖನಿಜ ಮಿಶ್ರಣ ಕೊಡಲೇ ಬೇಕು. ಆಹಾರದಲ್ಲಿ  ಕಾಲ್ಸಿಯಂ   ಇಲ್ಲವಾದರೆ ಕ್ರಮೇಣ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಖನಿಜ ಮಿಶ್ರಣ ರೈತರಿಗೆ ಸುಲಭ ಬೆಲೆಯಲ್ಲಿ ಸಿಗುವುದು ಅವಶ್ಯ.   ಯಾರಾದರೂ    ಡಾಕ್ಟ್ರಿಗೆ ಹೇಳಿದರೆ  ಚೆನ್ನಾಗಿತ್ತು.

Thursday, October 02, 2008

ಗೊಬ್ಬರದ ರಾಶಿಯಲ್ಲಿ ಕಾರ್ಯ ನಿರತ ಹಂದಿಗಳು

ಅಮೇರಿಕದಲ್ಲಿರುವ ಗೆಳೆಯ ಎರಿಕ್ ಬೇಸಾಯಕ್ಕಾಗಿ ಕುದುರೆಗಳ ಸಾಕುವ ಸಾವಯುವ ರೈತ. ಈ ಕುದುರೆ ಗೊಬ್ಬರದ ಕಂಪೋಸ್ಟ್ ರಾಶಿಯನ್ನು ಅಗಾಗ ತಿರುವಿ ಹಾಕುವ ಕೆಲಸವನ್ನು ಎರಡು ಹಂದಿಗಳಿಗೆ ವಹಿಸಿಕೊಟ್ಟಿದ್ದಾನೆ.  ಈ  ಕೆಲಸವನ್ನು ಅಲ್ಲಿನ ರೈತರು  ಸಾಮಾನ್ಯವಾಗಿ    ಇಂತಹ ಯಂತ್ರ ಮೂಲಕ ಮಾಡುತ್ತಾರೆ.


ಎರಿಕ್ ನಮ್ಮ ಸಬ್ಬಲಿನಂತಹ ಚೂಪಾದ ಉಪಕರಣದಲ್ಲಿ ಗೊಬ್ಬರದ ರಾಶಿಯಲ್ಲಿ ತೂತು ಮಾಡಿ ಅದರಲ್ಲಿ ಜೋಳದ ಕಾಳುಗಳ ಸುರಿಯುತ್ತಾನೆ. ಈ ಕಾಳುಗಳ ತಿನ್ನುವ ಆಸೆಯಲ್ಲಿ ಹಂದಿಗಳು ಇಡೀ ರಾಶಿಯನ್ನು ಅಡಿಮೇಲು ಮಾಡುತ್ತವೆ. ಈ ಮಾದರಿಯನ್ನು   ಸಲಾಟಿನ್ ಎಂಬ ರೈತನ ಅವಿಷ್ಕಾರ   ಎನ್ನುತ್ತಿದ್ದ ಎರಿಕ್.  ಕೆಲವು ಬಾರಿ    ನಾಲ್ಕು  ಅಡಿ  ಆಳದ  ವರೆಗೆ  ಅಗೆಯುವ  ಕಾರ್ಯನಿರತ  ಹಂದಿಗಳ  ಬಾಲ   ಮಾತ್ರ  ಗೋಚರಿಸುತ್ತದೆ   ಎನ್ನುವರು  ಸಲಾಟಿನ್. 

ನಾನೂ ಹಲವು ಸಲ ಹಂದಿ ಆವರಣ ಹೊಕ್ಕು ಈ ಜೋಳ ಕಾಳನ್ನು ಅಡಗಿಸುವ ಕೆಲಸ ಮಾಡಿದ್ದೇನೆ. ಹಂದಿಗಳ ವರ್ತನೆ ಹೆಚ್ಚೇನು ಅರಿಯದ ನನಗೆ ಅವು ನನ್ನಿಂದಲೇ ಕಸಿದುಕೊಳ್ಳುವುದೋ ಎನ್ನುವ ಸಂಶಯ. ನಾವು ತೂತು ಮಾಡಿ ಅಡಗಿಸಿ ಹೊರಬರುವ ವರೆಗೆ ತಾಳ್ಮೆಯಿಂದ ಕಾಯುವ ಹಂದಿಗಳು ನಂತರ ರಾಶಿ ಅಡಿಮೇಲು ಮಾಡುವ ಕೆಲಸಕ್ಕೆ ಸುರುಮಾಡುತ್ತವೆ.




ಅಲ್ಲಿ ತೀರಾ ಬಡವರಿಗೆಂದು ಸೂಪ್ ಕಿಚನ್ ಎನ್ನುವ ದರ್ಮಾರ್ಥ ಊಟ ಮತ್ತು ರಾತ್ರಿ ಉಳಿಯುವ ವ್ಯವಸ್ಥೆ ಚರ್ಚು ಮತ್ತು ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತವೆ. ಹಲವು ತಿಂಗಳು ಸಾಕಿದ ಈ ಹಂದಿಗಳನ್ನು ಎರಿಕ್ ಅವರಿಗೆ ದಾನ ಮಾಡುತ್ತಾನೆ. ಇವರಿಗೆ ಹಂದಿ ಸಾಕಣೆಯಲ್ಲಿ ಕೈಗೊಡಿಸುವ ಅಂಗಡಿಯೊಂದು ಹಂದಿಗಳಿಗೆ ಹಾಕಲೆಂದು ವಾಯಿದೆ ದಾಟಿದ ಹಾಲು ಇತ್ಯಾದಿಯನ್ನು ದರ್ಮಾರ್ಥವಾಗಿ ಕೊಡುತ್ತದೆ.

ಹಂದಿ ಸಾಕಣೆಯಲ್ಲಿ ಸಿಮೆಂಟು ನೆಲದ ಮೇಲೆ ಮತ್ತು ಗೊಬ್ಬರದ ಮೇಲೆ ಎರಡು ವಿದಾನಗಳನ್ನೂ ಅನುಸರಿಸುವವರಿದ್ದಾರೆ. ಯುರೋಪಿನ ಫಾರ್ಮು ಒಂದರಲ್ಲಿ ಸಿಕ್ಕ ಗೆಳೆಯ ಹೇಳಿದ ಮಾತು pig is the only animal that is born toilet trained ಕೇಳಿ ನನಗೆ   ಮೊದಲು   ಆಶ್ಚರ್ಯವಾಗಿತ್ತು.   ಬುದ್ದಿಯೂ ಚುರುಕು. ನಾವು ಗಲೀಜು ಪ್ರಾಣಿ ಎನ್ನುವ   ಹಂದಿ   ಸಿಮೆಂಟು ನೆಲದ ಮೇಲೆ ಸಾಕಿದರೆ ಆವರಣದ ಒಂದು ಮೂಲೆಯಲ್ಲಿ ಮಾತ್ರ ಗಲೀಜು ಮಾಡುತ್ತದೆ. ಸಾಕಣೆ ಸುಲಭ  ಎನ್ನುತ್ತಾರೆ  ಅನುಭವಿಗಳು.

ಈ ಸಲದ ಅಡಿಕೆಪತ್ರಿಕೆಯಲ್ಲಿ ಹಂದಿ ಹಾಗೂ ದನಗಳ ಸಾಕುವ ರೈತರ    ಬಗೆಗೆ ಲೇಖನ ಕಂಡಾಗ ಇವೆಲ್ಲ ನೆನಪಾಯಿತು. ಆದರೆ ಈಗ ಎಲ್ಲರೂ ದ್ರವರೂಪ  ಗೊಬ್ಬರ ತೋಟಕ್ಕೆ ಹರಿಸುವ ಕಾರಣ    ಈ ಮಾದರಿ ನಮಗೆ ಪ್ರಾಯೋಗಿಕವಲ್ಲ.

Sunday, September 14, 2008

ಕೋಲ ಎಂಬ ಬಣ್ಣದ ನೀರು ನಮ್ಮಲ್ಲಿ ಹಾಲಿಗಿಂತಲೂ ಬಲು ದುಬಾರಿ

ಅಂತೂ ಇಂತೂ ಹಾಲಿಗೆ ಖರೀದಿ ದರ ಎರಡು ರೂಪಾಯಿ ಏರಿಕೆ. ನೂರು ದಿನ ಯಶಸ್ವಿ ಆಡಳಿತ ನಡೆಸಿದವರ ಕೊಡುಗೆ.  ಸರಕಾರದ  ಪರವಾಗಿ  ಮಾತನಾಡಲು  ಹಕ್ಕಿರುವ     ಶೋಭಕ್ಕನಿಂದಾದ   ಘೋಷಣೆ ಮೇಲ್ನೋಟಕ್ಕೆ ಅವರು ವೈಯುಕ್ತಿಕವಾಗಿ ಕೊಡುತ್ತಾರೊ ಎನ್ನುವ ಅನುಮಾನ. ಮನೆಯ ಹೆಂಗಸರ ಹೆಸರಿಗೆ ಬಾಂಕ್ ಖಾತೆ ಎನ್ನುವ ವಿನೂತನ ಬಳಸು ದಾರಿಯ ಪರಿಣಾಮ ಹೊಸತಾದ ಮರಕೋತಿ ಅಟದ ಪ್ರಾರಂಬ.  ರೇವಣ್ಣನವರ    ಹಾಲು ಮಹಾಮಂಡಲಿಗೆ ಬೆಲೆ ಏರಿಸುವ ಹಕ್ಕಿಲ್ಲವೆಂದು ಯೆಡ್ಯುರಪ್ಪನ ಗುಟುರು.    ಹೀಗೆಲ್ಲ    ಒಟ್ಟಿನಲ್ಲಿ ಗೊಂದಲಾಮಯವಾಗಿತ್ತು.   
                                                      
ನನ್ನ ಬ್ಲೋಗ್ ಬರಹ   ಅಮೇರಿಕದಲ್ಲಿ ಹಾಲು ಕುಡಿದ್ರಾ ಯೆಡ್ಯುರಪ್ಪ      ಸ್ವಲ್ಪ ಬದಲಾವಣೆ ಮಾಡಿ ಕನ್ನಡ ಪ್ರಭಕ್ಕೆ ಕಳುಹಿಸಿದ್ದೆ.    ಅದು ಗುರುವಾರ ೧೧ ಸೆಪ್ಟೆಂಬರ್ ಸಂಚಿಕೆಯಲ್ಲಿ ಚಿತ್ರ ಸಮೇತ ಪ್ರಕಟವಾಗಿದೆ.  ಅರ್ಥಪೂರ್ಣ  ವ್ಯಂಗ್ಯ ಚಿತ್ರ  ಬರೆದವರಿಗೂ  ಬರಹದ  ತಿರುಳು ಹೆಕ್ಕಿ  ಪ್ರಕಟಿಸಿದ  ಸಂಪಾದಕ ವರ್ಗಕ್ಕೂ  ನಾನು  ಕೃತಜ್ನ.    ಇಲ್ಲಿ  ಅಸ್ಪಷ್ಟವಾದರೆ  ಅದನ್ನು     http://www.kannadaprabha.com/pdf/1192008/6.pdf    ಪುಟದಲ್ಲಿ  ಓದಬಹುದು.   ಹಾಲಿನ  ಕ್ರಯದ  ಬಗೆಗೆ ಸರಿಯಾದ  ಮಾಹಿತಿ  ಸಿಕ್ಕ  ನಂತರ  ಈ   ಎರಡನೇಯ  ಬಾಗ  ಹಾಕುವುದೆಂದು  ವಿಳಂಬಿಸಿದೆ. 

  ಸ್ಥಳೀಯ  ಸಹಕಾರಿ  ಸಂಘದ  ಮೂಲಕವೇ  ಈ  ಎರಡು  ರೂಪಾಯಿ  ತಲಪಿಸುವುದೆಂದು  ಸರಕಾರದ   ತೀರ್ಮಾನವೆಂದು  ಇತ್ತೀಚಿನ  ಪತ್ರಿಕಾ  ವರದಿ.  ಬಾಂಕ್  ಖಾತೆಯ  ಕನಸಿಲ್ಲಿದ್ದ   ಮಹೀಳೆಯರಿಗೆಲ್ಲ   ಅಶಾಭಂಗ.    ಈ  ಕೊಡುಗೆಯ ಹಿಂದೆ  ತಾನಿರುವೆಂದು  ರೇವಣ್ಣ  ಬಿಂಬಿಸಿದರೆ  ಎಂದು  ಯೆಡ್ಯು  ಗುಮಾನಿ.  ಈಗ  ನಮ್ಮ   ಸಮಾಜದಲ್ಲಿ   ಎಲ್ಲವೂ  ರಾಜಕೀಯಮಯ.    ಸಹೋದರಿಯ  ಸಮಸ್ಯೆ  ಪರಿಹಾರದ  ಹೆಗ್ಗಳಿಕೆ  ಸದಾಶಿವನಿಗೆ  ಸಿಕ್ಕರೆ  ಎಂದು  ಹಿರಿಯಣ್ಣ   ಹುಳಿ ಹಿಂಡಿದ  ಉದಾಹರಣೆ ನಮ್ಮೂರಲ್ಲಿದೆ.    


ಪ್ರಜಾವಾಣಿಯ  ಚಿತ್ರಕಾರ  ಮಹಮದ್  ಅವರು  ಈ  ಸಮಸ್ಯೆಯ  ಅರ್ಥಪೂರ್ಣವಾಗಿ  ಚಿತ್ರಿಸಿದ್ದಾರೆ.     ಶಿಕಾರಿಪುರ  ಅಕ್ಕಿ  ಮಿಲ್ಲಿನ  ಅಳಿಯನಾದ  ಯೆಡ್ಯುಗೆ   ಪಶು ಆಹಾರದ  ಒಂದು ಪ್ರಮುಖ ಅಂಶವಾದ    ಅಕ್ಕಿ  ತೌಡಿನ  ಬೆಲೆ ಈಗ ಗೊತ್ತಿಲ್ಲವೋ  ಏನೊ.  ಒಟ್ಟಿನಲ್ಲಿ    ಇವರ ರಾಜಕೀಯ ಆಟದಲ್ಲಿ  ರೈತರು  ಪುಡಿಯಾಗಲಿದ್ದಾರೆ.

Monday, September 01, 2008

ಅಮೇರಿಕದಲ್ಲಿ ಹಾಲು ಕುಡಿದ್ರಾ ಯಡ್ಯುರಪ್ಪ

ಇತ್ತೀಚೆಗೆ ಬೆಲೆ ಏರಿಕೆ ಪ್ರಬಾವ ಎಲ್ಲ ವಲಯದಲ್ಲೂ ಕಂಡುಬರುತ್ತಿದೆ. ಆಡಳಿತ ಪಕ್ಷದ ಪ್ರಣಾಳಿಕೆ ಪ್ರಕಾರ ಹಾಲಿನ ಬೆಲೆ ಎರಡು ರೂಪಾಯಿ ಏರಿಕೆಯ ಆಶ್ವಾಸನೆ ನೀಡಲಾಗಿತ್ತು. ಬಳಕೆದಾರರಿಗೆ ಈ ಹೊರೆ ವರ್ಗಾಯಿಸಲು ಚಿಂತನೆ ನಡೆಸಿ ಅವರು ಬೇಸರ ಪಟ್ಟುಕೊಂಡಾರು ಎಂದು ತಡೆ ಹಿಡಿಯಲಾಗಿದೆ. ಈ ಏರಿಕೆ ಆಡಳಿತ ಪಕ್ಷದ ಕೊಡುಗೆಯಲ್ಲ ಏರುತ್ತಿರುವ ಸಾಕಣೆ ಖರ್ಚನ್ನು ಸರಿದೂಗಿಸುವ ರೈತನ ಹಕ್ಕಿನ ಹಣ. ಈಗ ಹಾಲು ಉತ್ಪಾದನೆಯ ಖರ್ಚು ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರೈತನ ಕೊಬ್ಬು ಕರಗುತ್ತಲೇ ಇದೆ.  

ಪ್ರಪಂಚದ ಉಳಿದೆಡೆ ಹಾಲು ಎಷ್ಟಕ್ಕೆ ಮಾರಲ್ಪಡುತ್ತದೆ ಎಂದು ಗಮನಿಸಲು  ಈಗ   ಯಡ್ಯುರಪ್ಪನಿರುವ    ಅಮೇರಿಕದಲ್ಲಿ ಗ್ರಾಹಕರಿಗೆ ಹಾಲಿನ ಬೆಲೆ ಸುಮಾರು ಲೀಟರೊಂದಕ್ಕೆ ನಲುವತ್ತು ರೂಪಾಯಿ ದಾಟಿದೆ ಎಂಬ ವಿಚಾರ ಕಂಡು ಬಂತು .

ನಾನೂ     ಗೊಬ್ಬರದ ಆಸೆಯಲ್ಲಿ ದನ ಸಾಕುವ ಮತ್ತು   ನಮ್ಮೂರ ಹಾಲಿನ ಸೊಸೈಟಿಗೆ   ಹಾಲು  ಹಾಕುವ   ಮೊರ್ಖ.   ಅವರು ಮಾರುವ ಹಿಂಡಿಗಳನ್ನು ಮಾತ್ರ  ಬಳಸುವುದಿಲ್ಲ. ಪಟ್ಟಣದಲ್ಲಿ ಸಿಗುವ ಸಿದ್ದ ಪಶು ಆಹಾರವನ್ನು ನಾನು ತಿರಸ್ಕರಿಸುವುದಕ್ಕೆ ಕಾರಣ ವಿಷಪೊರಿತ ಹತ್ತಿ ಬೀಜದ ಹಿಂಡಿ ಹಾಗೂ  ಅಗ್ಗದ   ಪ್ರೊಟೀನ್  ಎಂದು  ಬಳಸುವ   ಯುರಿಯಾ.  ಇವೆರಡನ್ನೂ ನಮ್ಮಲ್ಲಿ ಪಶು ಆಹಾರದಲ್ಲಿ ದಾರಾಳ ಬಳಸುತ್ತಾರೆ. ಹನ್ನೆರಡು ವರ್ಷಗಳಿಂದ ನಾನು ರಾಗಿ ಹುಡಿ, ಜೋಳದ ಹುಡಿ, ಗೋದಿ ಬೂಸ, ಎಳ್ಳಿಂಡಿ ಇತ್ಯಾದಿಗಳನ್ನು ತಂದು ಮಿಶ್ರಣ ಮಾಡಿ ಬಳಸುತ್ತೇವೆ. ಎಂಟಾಣೆಯಿಂದ ಒಂದು ರೊಪಾಯಿ ಕಿಲೋವೊಂದಕ್ಕೆ ಹೆಚ್ಚುವರಿ ಖರ್ಚು. ಸಾಕಣೆ ದುಬಾರಿಯಾದರೂ ಹಸುಗಳ ಆರೋಗ್ಯದ ಮಟ್ಟಿಗೆ ಉತ್ತಮ ಫಲಿತಾಂಶ.

ಎರಡು ವರ್ಷ ಹಿಂದಿನ  ವರೆಗೆ  ಹಲವು  ವರ್ಷಗಳ  ಕಾಲ    ನನ್ನಲ್ಲಿ ಹಿಂಡಿ ಮಿಶ್ರಣಕ್ಕೆ ಅಂದಾಜು ಎಂಟು ರೂಪಾಯಿ ತಗಲುತಿದ್ದು ಈಗ ಇದು ಹದಿಮೂರರನ್ನು ದಾಟಿದೆ. ಒಂದು ಲೀಟರ್ ಹಾಲಿಗೆ ಸರಿಸುಮಾರು ಅರ್ಧ ಕಿಲೊ ಹಿಂಡಿ ಅಗತ್ಯವೆಂದು ಪರಿಗಣಿಸಬಹುದು. ಹಾಗಾಗಿ ಈಗಿನ ಲೀಟರೊಂದಕ್ಕೆ ಎರಡು ರೂಪಾಯಿ ಹೆಚ್ಚಳ ಹಿಂಡಿಯ ಕ್ರಯ ಹೆಚ್ಚಳವನ್ನೂ ತುಂಬಿಕೊಡದು. ಆದರೆ ಹಸು ಸಾಕಣೆಗೆ ಇತರ ಖರ್ಚುಗಳೂ ಇರುತ್ತವೆ. ಕೆಲಸಗಾರರನ್ನು ಹಳ್ಳಿಗಳಲ್ಲಿ ಹುಡುಕುವುದೇ ಸಾಹಸ.

ಒಂದು ವರ್ಷ ಹಿಂದೆ ಬಾರತದಲ್ಲಿ ಬಹಳ ಬದಲಾವಣೆಗಳಾಗುತ್ತಿವೆ ಎನ್ನುವ ಲೇಖನ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಬರೆದ ಅಮೇರಿಕದಲ್ಲಿ ರಾಯಬಾರಿ ಕಛೇರಿಯ ಅಧಿಕಾರಿಗೆ ನಾನು ಪ್ರಯೋಜನವಾಗುತ್ತಿರುವುದು ಪಟ್ಟಣಗಳಿಗೆ ಎಂದು ಅವರ ಬರಹದ ತಿರುಳನ್ನು ಪ್ರಶ್ನಿಸಿ ಪತ್ರಿಸಿದ್ದೆ. ಅದಕ್ಕವರು ಬದಲಾವಣೆಯನ್ನು ಅಮುಲ್ ಮಾದರಿ ಹಾಲಿನ ಕ್ರಾಂತಿ ಹಳ್ಳಿಗಳ ತಲಪಿದೆ ಎಂದು ಉದಾಹರಿಸಿ ಉತ್ತರಿಸಿದರು. ಪ್ರತ್ಯುತ್ತರವಾಗಿ ಹಾಲಿನ ಸೊಸೈಟಿಯಿಂದ ಪ್ರಯೋಜನ ಪಟ್ಟಣಿಗರಿಗೆ ಬೆಳಗಿನ ಲೋಟದ ಚಾ-ಕ್ಕೆ ಬೆರೆಸಲು ಕಡಿಮೆ ದರದ ಹಾಲು ಸಿಗಲು ಹೊರತು ಹಳ್ಳಿಗರ ಉದ್ದಾರಕ್ಕೆ ಖಂಡಿತ ಅಲ್ಲವೆಂದಿದ್ದೆ.

ಆಹಾರವನ್ನಾಗಿ ಇದೇ ಹಿಂಡಿ ಉಪಯೋಗಿಸಿ ಸಾಕುವ ಕೋಳಿಗಳ ಉತ್ಪನ್ನಗಳಿಗೆ ಜಾಗತಿಕ ವಿದ್ಯಮಾನಗಳ ಅನುಸರಿಸಿ ಶೇಕಡಾ ಐವತ್ತರಷ್ಟು ಕ್ರಯ ಏರಿದೆ. ಆದರೆ ಹಾಲಿಗೆ  ಶೇಕಡಾ  ಹದಿನೈದರ  ಇನ್ನೂ  ಕಾರ್ಯಗತವಾಗದ    ಆಶ್ವಾಸನೆ  ಮಾತ್ರ. ಮುಖ್ಯವಾದ ಕಾರಣ ಹಾಲು ಪೊರೈಕೆ ನಿಲ್ಲಿಸಿ ಪ್ರತಿಭಟಿಸುವ ಚೈತನ್ಯ ಮತ್ತು ಒಗ್ಗಟ್ಟು ಹೈನುಗಾರರಲ್ಲಿ ಇಲ್ಲ. ನಮ್ಮಲ್ಲಿ ರೈತರ ಸೇವೆ ಹೆಸರಿನಲ್ಲಿ ಹಾಲಿನ ಸೊಸೈಟಿ ಎಂಬ ಸರಕಾರಿ ಕೃಪಾಪೋಷಿತ ಸಂಸ್ಥೆ ಹಾಲಿನ ಮಾರುಕಟ್ಟೆಯಲ್ಲಿ ಸ್ಪರ್ದೆಯನ್ನು ಅವಕಾಶವನ್ನೀಯದೆ ರೈತರ ಶೋಷಣೆ ಮಾಡುತ್ತದೆ.

ಜರ್ಮನಿಯಲ್ಲಿ   ಇಂದು   ಹಾಲಿಗಿಂತ ಬೀರು ಅಗ್ಗ.  ನಮ್ಮಲ್ಲಿ ಕೋಲ ಎಂಬ ಬಣ್ಣದ ನೀರು ಸಹಾ ಹಾಲಿಗಿಂತಲೂ ದುಬಾರಿ.   ಇತರ ದೇಶಗಳ  ಸ್ಪರ್ದಾತ್ಮಕ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಹಾಲೂಡುವ ದನಗಳ ಸಂಖ್ಯೆಯನ್ನು ನಿರ್ದರಿಸುತ್ತದೆ. ಮಾಂಸದ ಬೆಲೆ ಏರಿದರೆ ತತ್ಕಾಲಿಕವಾಗಿ ಹಾಲಿನ ಪೊರೈಕೆ ಕಡಿಮೆಯಾಗುವುದುಂಟು. ನಮ್ಮಲ್ಲಿರುವಂತೆ ಹನ್ನೆರಡು    ರೂಪಾಯಿಗೆ ಮಾರಲು ರಾಜಕೀಯ ಕಾರಣಗಳಿಂದಾಗಿ ರೈತನ ಮೇಲೆ ಒತ್ತಡ ಇದ್ದರೆ ಹಾಲು ಅಲ್ಲಿನ ಮಾರುಕಟ್ಟೆಯಿಂದಲೇ ಮಾಯವಾಗುವುದು ಖಚಿತ.

Tuesday, August 19, 2008

ಫುಕುವೋಕರನ್ನು ನಾ ಕಂಡಂತೆ


ನಿನ್ನೆ ಬೆಳಗ್ಗೆ ನನ್ನ ಸಂಚಾರವಾಣಿಗೆ ಪೈಲೂರರಿಂದ ಒಂದು ಸುದ್ದಿ ಬಂತು. ೯೫ ವರ್ಷ ವಯಸ್ಸಾಗಿದ್ದ ಫುಕುವೋಕರು ಎರಡು ದಿನ ಹಿಂದೆ ಹೋಗಿ ಬಿಟ್ಟರಂತೆ. ಓದಿದ ತಕ್ಷಣ ನನ್ನ ಮನಸ್ಸು ಇಪ್ಪತ್ತೆರಡು ವರ್ಷ ಹಿಂದಕ್ಕೋಡಿತು.

ನಾನು ಫುಕುವೋಕರ ಒಂದು ಹುಲ್ಲಿನ ಕ್ರಾಂತಿ ಓದುವಾಗ ನನ್ನ ಸೈಕಲು ಯಾತ್ರೆಯ ತಯಾರಿಯಲ್ಲಿದ್ದೆ. ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಷೆ ಓದಿ ಅಂಚೆ ಮೂಲಕ ಪುಸ್ತಕವನ್ನು ತರಿಸಿ ಓದಿದೆ. ಬಹಳ ಪ್ರಬಾವಿತನಾದೆ ಎನ್ನಬಹುದು. ಆಗ ವರ್ಷದೊಳಗೆ ಅವರನ್ನು ಕಾಣುತ್ತೇನೆ ಎಂದು ಕನಿಸಿನಲ್ಲೂ ಯೋಚಿಸಿರಲಿಲ್ಲ. ಅಫ್ರಿಕಾ ಮೂಲಕ ಯೋರೋಪ್ ಮತ್ತು ವಾಪಾಸು ಎನ್ನುವುದು ನನ್ನ ಮೂಲ ಯೋಜನೆಯಾಗಿತ್ತು.

ಜಪಾನಿನ ಟೋಕಿಯೊದಲ್ಲಿ ಬಂದಿಳಿದಾಗ ಅವರ ಪುಸ್ತಕದಲ್ಲಿ ಹಿಂದೆ ಓದಿದ ಮತ್ಸುಯಾಮ ಪಟ್ಟಣದ ಸಮುದ್ರ ತೀರ ಎಂದಷ್ಟೆ ಸುಳಿವು. ಆದರೂ ಒಂಬೈನೂರು ಕಿಲೋಮೀಟರ್ ಸೈಕಲ್ ತುಳಿದು ಮತ್ಸುಯಾಮ ತಲಪಿ ವಿಚಾರಿದಾಗ ಅವರ ವಾಸ್ತವ್ಯ ಪಟ್ಟಣದ ಹೊರವಲಯದ ಇಯೋ ಎಂಬ ಊರೆಂದು ತಿಳಿಯಿತು. ಅಂತೂ ಹೋಗಿ ಬಾಗಿಲು ತಟ್ಟಿದೆ. ಎದುರಿಗೊಂಡರು.

ಹೆಚ್ಚೇನು ಮಾತುಕಥೆಯ ಮೊದಲೇ ತಮ್ಮ ಸೈಕಲು ಏರಿ ಹಿಂಬಾಲಿಸಲು ಹೇಳಿದರು. ಸುಮಾರು ಎರಡು ಕಿಮಿ ದೂರದ ಗುಡ್ಡದ ಬುಡದಲ್ಲಿ ಸೈಕಲನ್ನು ಗೋಡೆಗೆ ಒರಗಿಸಿದರು. ಮುಂದಿನದು ಕಾಲು ನಡುಗೆ. ಅಲ್ಲಿ ಹಲವು ಕುಟೀರಗಳು. ಆವಾಗ ಅವರ ಗುರುಕುಲ ಬರಿದಾಗಿತ್ತು. ಹಾಗಾಗಿ ನಾನು ಏಕಾಂಗಿಯಾಗಿ ವಾಸ್ತವ್ಯ.

ಆ ವರ್ಷ ಅವರು ಬತ್ತ ಬಿತ್ತನೆ ಅನಂತರ ಅಮೇರಿಕಕ್ಕೆ ಹೋಗಿದ್ದರಂತೆ. ಹಾಗಾಗಿ ನಿರ್ವಹಣೆ ಇಲ್ಲದೆ ಗದ್ದೆ ತುಂಬಾ ಕಳೆಗಳಿದ್ದವು. ಫಸಲು ನಿರ್ಣಯಿಸಲು ಕಷ್ಟ ಎನ್ನುವಂತಿತ್ತು. ಗುಡ್ಡದಲ್ಲಿ ಮಾತ್ರ ಕಿತ್ತಳೆ ಮರಗಳ ನಡುವೆ ನಾವು ಅಗೆದಲ್ಲೆಲ್ಲ ಮೂಲಂಗಿ ಲಬಿಸುತ್ತಿದ್ದವು. ಪಾತ್ರೆ ತೊಳೆಯುವಲ್ಲಿ ನೀರು ನಿಲ್ಲುವುದರ ತಪ್ಪಿಸಲು ಕಾಲುವೆ ಮಾಡಿದಾಗ ಅಡುಗೆಗೆ ದಾರಾಳ ಮೂಲಂಗಿ ಲಬಿಸಿತು.  ಅವರ  ಮಿಶ್ರ   ಕೃಷಿಯಲ್ಲಿ   ಒಟ್ಟು   ಬೆಳೆ  ಖಂಡಿತ  ಹೆಚ್ಚು.        ಆಗ ಜತೆಗೆ ಒಬ್ಬ ಇಂಗ್ಲೀಷ್ ಬಲ್ಲ ಜಪಾನಿನ ಯುವಕನಿದ್ದನೆಂದು ನೆನಪು.

ದೀಪದ ಅಡಿಯಲ್ಲಿ ಕತ್ತಲೆ ಎನ್ನುವಂತೆ ಮಗ ಮಸಾತೊ ಆಗ ದಾರಾಳ ರಸಾಯನಿಕಗಳನ್ನು ಬಳಸುತ್ತಿದ್ದ. ಇನ್ನು ರಸಾಯನಿಕಕ್ಕೆ ವಿದಾಯ ಎಂದು ಇಂದು ಆಶ್ವಾಸನೆ ಕೊಟ್ಟಿದ್ದಾನೆ ಎಂದು ಫುಕುವೋಕರು ಅಲ್ಲಿಗೆ ಬಂದ ಮಹಿಳೆಯೊಬ್ಬರಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ಅವರಿಗೆ ನೋವಿದ್ದಂತೆ ಕಂಡಿತು.

ಪ್ರತ್ಯೇಕವಾಗಿ ಕೃಷಿ ಮಾಡುತ್ತಿದ್ದ ಅವರ ಮಗ ಮಸಾತೋ ಅವರ ಜತೆ ಅವರ ತೋಟಕ್ಕೆ ಹೋಗಿದ್ದೆ. ಅಲ್ಲಿ ಖಾಲಿ ಇದ್ದ ಯಂತ್ರ ಚಲಾಯಿಸಿ ಬಲಗೈ ಹೆಬ್ಬೆರಳು ತುಂಡಾಗಿ ಏಕಲವ್ಯ ಗುರುದಕ್ಷಿಣೆ ಸಲ್ಲಿಸಿದಂತಾಯಿತು ನನ್ನ ಕಥೆ. ಯಂತ್ರ ಚಾಲಿತ ಗರಗಸದಲ್ಲಿ ಪುಟ್ಟದೊಂದು ಅಪಘಾತವಾಗಿ ಆ ಬೆರಳಿನ ಹೊಲಿಗೆ ತೆಗೆಯುವ ವರೆಗೆ ನಾನು ಅಲ್ಲಿರಬೇಕಾಯಿತು.

ಅವರ ಹೆಚ್ಚಿನ ಅಲೋಚನೆಗಳಿಗೆ ನಾನು ಒಪ್ಪಿದರೂ ಪಶು ಸಂಗೋಪನೆ ಅಂದರೆ ಕೋಳಿ ಹಸುಗಳಿಗೆ ಮೇವು ಕೊಡುವುದರ ವಿರೋದಿಸುವ ಅವರ ವಾದ ಒಪ್ಪಲು ಸಾದ್ಯವಿಲ್ಲ. ದನ ಸಾಕಿದುದರಿಂದ ಬಾರತ ಮರುಬೂಮಿಯಾಯಿತು ಎಂದು ಬರೆದ ಅವರೊಡನೆ ಈ ಬಗ್ಗೆ ಚರ್ಚಿಸಲು ಆಸಕ್ತಿಯಿದ್ದರೂ ಸಾದ್ಯವಾಗಿರಲಿಲ್ಲ.

ಬಾರತಕ್ಕೆ ಬೇಟಿ ಕೊಡಲೂ ಅವರಿಗೆ ಬಹಳ ಆಸಕ್ತಿ ಇತ್ತು. ಈ ವಿಚಾರ ನಾನು ಬಾರತದಲ್ಲಿ ಅವರ ಪುಸ್ತಕ ಪ್ರಕಟಿಸಿದವರನ್ನೂ ಸೇರಿದಂತೆ ಹಲವರಲ್ಲಿ ಪ್ರಸ್ತಾಪಿಸಿದ್ದೆ. ಕೊನೆಗೆ ಅವರನ್ನು ಬಾರತಕ್ಕೆ ಬರಮಾಡಿಕೊಂಡದ್ದು ಸಾವಯುವ ವಲಯದಲ್ಲಿ ಹೆಚ್ಚು ಗುರುತಿಸಿಕೊಳ್ಳದ ಕಲಕತ್ತಾ ಮೂಲದವರಾದುದರಿಂದ ನನಗೆ ಮಾಹಿತಿ ದೊರಕುವಾಗ ಬಹಳ ತಡವಾಗಿತ್ತು. ಬೆಂಗಳೂರಿಗೆ  ಬಂದ  ಅವರನ್ನು   ಬೇಟಿಯಾಗುವ ಅವಕಾಶ ತಪ್ಪಿ ಹೋಗಿತ್ತು.

ಅವರು ಬರೇ ಕೃಷಿ ಚಿಂತಕರಲ್ಲ   ಅವರೊಂದು ಬಹುಮುಖ ಪ್ರತಿಭೆ.   ಕೃಷಿ ಬಗೆಗೆ ಮಾತ್ರವಲ್ಲ ತತ್ವಜ್ನಾನದ ಪುಸ್ತಕಗಳನ್ನೂ ಬರೆದಿದ್ದರು. . ಜಪಾನಿ ಬಾಷೆಯಲ್ಲಿ ಅವರು ಬರೆದ ತತ್ವಶಾಸ್ತ್ರ ಪುಸ್ತಕ  ಅಲ್ಲಿನ   ಪದವಿ ತರಗತಿಗೆ ಪಠ್ಯ ಪುಸ್ತಕವಾಗಿತ್ತಂತೆ. ಅದರ ಇಂಗ್ಲೀಷ್ ಪ್ರಕಟನೆಗೆ ಅವರು ಉತ್ಸುಕರಾಗಿದ್ದರೂ ಅವರ ಇಂಗ್ಲೀಷ್ ಪ್ರಕಾಶಕರಿಗೆ ಅದು ಮಾರಾಟವಾಗುವ ದೈರ್ಯ ಇದ್ದಂತಿರಲಿಲ್ಲ.    ಬಿಡುವಿನಲ್ಲಿ ನಮ್ಮ ಚುಟುಕಿನ ಜಪಾನಿ ರೂಪವಾದ ಹೈಕು ಬರೆಯುತ್ತಿದ್ದರು. ನಾನು ನಾವು ಕೊಳೆರೋಗಕ್ಕೆ ಬೊರ್ಡೋ ದ್ರಾವಣ ಸಿಂಪಡಿವುದಾಗಿ ಹೇಳಿದಾಗ ಪರವಾಗಿಲ್ಲ ಎಂದಿದ್ದರು.

ನನ್ನ ಪ್ರವಾಸದಲ್ಲೊಂದು ಕೊಂಡಿಯಾದ ಮತ್ತು ನಂತರದ ಹಲವು ಪ್ರಯೋಗಗಳಿಗೆ ಸ್ಪೂರ್ತಿಯಾದ ಅಗಲಿದ ಈ ಹಿರಿಯ ಚೇತನಕ್ಕೆ ನನ್ನ ನಮನಗಳು.

Wednesday, July 09, 2008

ಸದಾಸಂ ಮಾರಾಟ

ನನಗೆ ಉಪಯೋಗಿಸಲು ಬೇಕಾದದ್ದು ಒಂದು ಸದಾಸಂ. ಇನ್ನೇನು ತರಿಸಲು ಹಣ ಕಳುಹಿಸುವುದು ಎನ್ನುವ ಕೊನೆ ಹಂತದ ಸನ್ನಿವೇಶದಲ್ಲಿ ಅವರು ಹಾಕಿದ ಬಾಂಬು ನಮ್ಮಲ್ಲಿ ಚಿಲ್ಲರೆ ವ್ಯಾಪಾರ ಇಲ್ಲ. ಇವರಿಂದ ಬೇಡ ಎಂದು ನಾನು ಕಾಲು ಹಿಂದೆ ಇಟ್ಟರೆ ನನಗೆ ಅದೇ ವರ್ಷದ ಮಳೆಗಾಲದಲ್ಲಿ ಸದಾಸಂ ಉಪಯೋಗ ಮಾಡಿನೋಡಲು ಅಸಾದ್ಯ.

ಸೋಲುತ್ತಿರುವ ದೇಹದಿಂದಾಗಿ ಮಳೆಗಾಲದಲ್ಲಿ ತೋಟಕ್ಕೆ ಹೋಗುವುದು ಕೃಷಿಕನಾಗಿ ಉಳಿಯುವುದರ ಪ್ರಶ್ನೆಯಾಗುತ್ತಲಿತ್ತು. ಗುಣ ದೋಷಗಳನ್ನೆಲ್ಲ ಅವಲೋಕಿಸಿ ಅವರಿಗೆ ಹಣ ಕಳುಹಿಸಿದೆ. ಐದು ಯಂತ್ರಗಳು ನಮ್ಮ ಅಂಗಳದಲ್ಲಿ ಬಂದಿಳಿದವು. ನನಗೆ ಒಂದು ಉಪಯೋಗಕ್ಕೂ ಮತ್ತೊಂದು ಅಗತ್ಯವಾದರೆ ಬಿಡಿ ಬಾಗಗಳಿಗೂ ಇಟ್ಟುಕೊಳ್ಳುವ ಆಲೋಚನೆ ಮಾಡಿದೆ. ಉಳಿದವುಗಳ ಅವುಗಳ ಬಗ್ಗೆ ಅರಿವಿದ್ದ ಹಾಗೂ ಅಗತ್ಯವಿದ್ದವರು ಸಿಕ್ಕರೆ ಕೊಡುವುದೆಂದು ತೀರ್ಮಾನಿಸಿದೆ.

ಚೀನಾ ಮಾಲು. ಹೇಗುಂಟೋ ? ಪ್ರಶ್ನೆಗಳು ನಮ್ಮ ಎದುರಾಗುತ್ತವೆ. ಇದರ ಬಗೆಗೆ ಯಾರೂ ನನ್ನನ್ನು ದೂರುವುದು ನನಗೆ ಬೇಕಿರಲಿಲ್ಲ. ಹಾಗಾಗಿ ಗುಣಮಟ್ಟ ಬಗ್ಗೆ ನನಗೆ ಖಾತರಿಯಾದ ನಂತರವೇ ಮಾರಾಟ ಎಂದು ನಾನು ತೀರ್ಮಾನಿಸಿದ್ದೆ. ಈಗ ಹನ್ನೊಂದು ತಿಂಗಳ ಉಪಯೋಗ ನನಗೆ ಇದರ ಗುಣಮಟ್ಟದ ಬಗ್ಗೆ ದೈರ್ಯ ಕೊಟ್ಟಿದೆ. ಸಾಮಾನ್ಯ ಬದಲಿಸುವಂತಹ ಎಲ್ಲ ಸಾಮಾನುಗಳು ನಮ್ಮ ದ್ವಿ-ಚಕ್ರ ವಾಹನಗಳ ಬಿಡಿ ಬಾಗಗಳು ಹೊಂದುತ್ತವೆ.

ಬಾಯಾರಿದವನಿಗೆ ನೀರಿನ ರುಚಿ ಎಂಬಂತೆ ನನ್ನಂತಹ ವ್ಯಕ್ತಿಗಳಿಗೆ ನನ್ನ ಮೊದಲ ಅಧ್ಯತೆ. ಇವು ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ. ವ್ಯಾಪಾರಿಗಳು ಹೇಳಿದ್ದೇ ಕ್ರಯ. ಒಂದೆರಡು ವಾಹನಗಳ ಪರದೇಶದಿಂದ ತರಿಸುವುದು ನಿಜಕ್ಕೂ ತಲೆಹರಟೆ ಕೆಲಸ. ನನಗೆ ಹೃದಯ ಚಿಕಿತ್ಸೆ ಆಗಿದೆ, ತೋಟಕ್ಕೆ ಹೋಗಲು ಸಾದ್ಯವಾಗುತ್ತಿಲ್ಲ ಎಂದೊಬ್ಬರು ಪರರಾಜ್ಯದಿಂದ ಪತ್ರಿಸಿದ್ದರು. ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನಿತ್ತೆ. ಅದುದರಿಂದ ನನ್ನಂತವರು ಸಂಪರ್ಕಿಸಿದರೆ ಅವರಿಗಾಗಿ ಉಳಿಯಲಿ ಎನ್ನುವ ನೆಲೆಯಲ್ಲಿ ಮಾರಾಟಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.

ಹಾಗೆಂದು ಇವುಗಳಿಗೆ ಇರಬಹುದಾದ ಮಾರುಕಟ್ಟೆ ಬಹಳ ಸಿಮಿತವಾದುದು. ತಿಂಗಳಿಗೆ ಹತ್ತಾರು ಮಾರುವಂತಹ ವಾಹನ ಇದಲ್ಲ. ಪರಿಸರಕ್ಕೆ ಹಾನಿ ಮಾಡುವ ವಾಹನಗಳು ಸಾಮಾನ್ಯವಾಗಿ ನನಗೆ ಸಮ್ಮತವಲ್ಲವಾದರೂ ಇವು ಅಂಗವಿಲಕರ ಗಾಲಿ ಕುರ್ಚಿಯ ತರಗತಿಗೆ ಸೇರುವಂತಹದ್ದು ಎನ್ನುವ ಸಮದಾನ.


ವಾರಂಟಿ, ಕಸ್ಟಮರ್ ಸಪೋರ್ಟ್ ಎಂದು ತಲೆಕೆಡಿಸಿಕೊಳ್ಳಲು ನನಗೆ ಅಸಕ್ತಿಯಾಗಲಿ ಸಮಯವಾಗಲಿ ಇಲ್ಲ. ನಮ್ಮ ತೋಟಕ್ಕೆ ಹೋಗಲು ಕಷ್ಟ ಪಡುವವ ಇದನೆಲ್ಲ ಎಳೆದಾಕಿಕೊಳ್ಳುವ ಉಸಾಬರಿ ನನಗೇತಕೆ ?













ನನ್ನ ದೋರಣೆ ಅನಿಸಿಕೆಗಳ ರೀತಿಯಲ್ಲಿಯೇ ಈ ವ್ಯಂಗ್ಯ ಚಿತ್ರ ಕಂಡು ಅನಿಸಿಕೆ ಹಾಗೂ ಚಿತ್ರ ಎರಡನ್ನೂ ಹಂಚಿಕೊಳ್ಳುತ್ತಿದ್ದೇನೆ.

ಕೊನೆ ಮಾತು : ತಲೆಬರಹವೇ ಒಗಟಿನಂತಿದೆ ಎಂದು ಹೇಳಿಸಿಕೊಂಡ ನಂತರ ಈ ವಿವರಣೆ. ಇಂಗ್ಲೀಷಿನಲ್ಲಿ ATV ಯೆಂದು ಕರೆಸಿಕೊಳ್ಳುವ ವಾಹನಕ್ಕೆ ಹೆಸರು ಸದಾಸಂ ಸಕಲ ದಾರಿ ಸಂಚಾರಿ ಎಂಬ ಕನ್ನಡದ ನಾಮಕರಣ ಶ್ರೀಪಡ್ರೆಯವರು ಟಂಕಿಸಿದ್ದು.

ಅಲ್ಲೂ  ಉಂಟು:  ಸದಾಸಂ

Sunday, July 06, 2008

ನಿಮ್ಮ ಮಗಳನ್ನು ಪದವೀದರ ಕೃಷಿಕನಿಗೆ ಕೊಡುವಿರಾ ?

ಬೆಂಗಳೂರಿನಿಂದ ಪ್ರಕಟವಾಗುವ ಹವ್ಯಕ ಪತ್ರಿಕೆಯ 2008 ಫೆಬ್ರವರಿ ತಿಂಗಳ್ಲಿ ಪ್ರಕಟವಾದ ಈ ಶತಮಾನದ ಕೊನೆಯಲ್ಲಿ ಹಳ್ಳಿಯಲ್ಲಿ ಹವ್ಯಕರು ಇಲ್ಲವಾದರೆ ? ಎನ್ನುವ ಲೇಖನಕ್ಕೆ ಇದು ಪ್ರತಿಕ್ರಿಯೆ ಬರಹ. ಅಡಿಕೆ ಪತ್ರಿಕೆಯ ಅದುವೇ ಸಮಯ ಪ್ರಕಟವಾದ ಹಿರಿಯ ಹವ್ಯಕರಿಂದ ಬರೆಯಲ್ಪಟ್ಟ ಲೇಖನದಲ್ಲೂ ಇಲ್ಲೂ ಹಲವಾರು ಸಮಾನ ಅಂಶಗಳಿರುವ ಕಾರಣ ನನ್ನ ಪ್ರತಿಕ್ರಿಯೆಯಲ್ಲೂ ಕೆಲವಂಶ ನನ್ನ ಮೆ 22 ರ ಬ್ಲೋಗ್ ಮನೆಗೆ ಆಧಾರವಾಗಿರುವವನಿಗೆ ಶಾಪವಿಮೋಚನೆಯಿಲ್ಲ ಬರಹದಲ್ಲೂ ಕಾಣಬಹುದು.

ಹಳ್ಳಿಯಲ್ಲಿರುವ ಹೆಚ್ಚಿನ ಹವ್ಯಕರು ಕೃಷಿ ಅವಲಂಬಿತರು. ಬಹು ಪಾಲು ಜನ ಅನಿರೀಕ್ಷಿತ ಕ್ಷಣದಲ್ಲಿ ಆಸ್ತಿ ಪಾಲಿನ ವಿಚಾರದಲ್ಲಿ ಹೊಡೆತ ತಿಂದವರು. ಹಾಗಾಗಿ ಕೃಷಿಕರ ಅನಿಸಿಕೆಗಳ ಬಗ್ಗೆ ಪಟ್ಟಿ ಮಾಡುತ್ತಾ ಸಾಗುವೆ.

ಪ್ರತಿ ದಿನವೂ ಎಂಬಂತೆ ಹಳ್ಳಿಯಲ್ಲಿರುವ ಆಸ್ತಿ ಮಾರಿ ಪಟ್ಟಣ ಸೇರುತ್ತಿರುವ ಹವ್ಯಕರ ಸಂಖ್ಯೆ ಹಾಗೂ ಹಳ್ಳಿಗಳಲ್ಲಿ ಏರುತ್ತಿರುವ ಮದುವೆಯಾಗದ ಹುಡುಗರ ಸಂಖ್ಯೆ ಕಂಡು ನಾನು ಉಲ್ಲೇಖಿಸಿದ ಲೇಖನ ರೂಪುಗೊಂಡಿರಬಹುದು. ಇಂದು ನಿಜವಾಗಿ ನಮ್ಮ ಮುಂದಿರುವ ಪ್ರಶ್ನೆ -ಹವ್ಯಕರು ಒಂದು ಸಮಾಜವಾಗಿ ಉಳಿಯುವರೋ ? ನಶಿಸುವರೋ ? ಎನ್ನುವುದು ಹೆಚ್ಚು ಸಮಂಜಸ ಹೊರತು ಹಳ್ಳಿಯಲ್ಲಿ ಅನ್ನುವುದು ಅಪ್ರಸ್ತುತ ಎಂದು ನನಗೆ ಅನ್ನಿಸುತ್ತದೆ. ಒಂದು ಲೆಕ್ಕದಲ್ಲಿ ಕೆಲವು ದಶಕಗಳಲ್ಲಿ ಜನಸಾಗರದ ಮದ್ಯೆ ಪ್ರತ್ಯೇಕತೆ ಸಂಪೂರ್ಣ ಕಳಕೊಂಡ ಹವ್ಯಕರ ಸ್ಥಿತಿ ಅವಿಲಿನಲ್ಲಿರುವ ತರಕಾರಿಯಂತೆ ಅಗಲೂ ಬಹುದು.

ಹಳ್ಳಿಯಲ್ಲಿರುವ ಹುಡುಗರಿಗೆ ಮದುವೆಯಿಲ್ಲ ಎನ್ನುವ ಬಹುಕಾಲದ ಹೇಳಿಕೆ ಕಂಡು ರೋಸಿ ಹೋಗಿ ಈ ಪ್ರತಿಕ್ರಿಯೆ. ನೈಜ ಸಮಸ್ಯೆಯ ಅರಿಯುವ ಗೊಡವೆಗೆ ಹೋಗದೆ ಒಂದೇ ಮುಖದ ಹಲವು ಲೇಖನಗಳು ಪ್ರಕಟವಾಗಿವೆ. ಇದಕ್ಕೆ ನಮ್ಮ ಸಮಾಜದ ಊರ ಹೊರಗಿರುವ ಸಂಬಂದಿಗಳು ಪ್ರಮುಖ ಕಾರಣ ಎನ್ನುವುದು ನಂಬಲು ಸಾದ್ಯವಾಗದ ಕಟು ಸತ್ಯ. ಕುಟುಂಬದ ಸಂಪನ್ಮೂಲಗಳು ಬಹುಕಾಲದಿಂದ ಪಟ್ಟಣಾಬಿಮುಖವಾಗಿ ಚಲಿಸುತ್ತಿವೆಯಾದರೂ ಪರೀಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಈಗ ಹಳ್ಳಿವಾಸಿಗೆ ಉಳಿದವರ ಸೇವೆ ಮಾಡಿ ಮಾಡಿ ಲಂಗೋಟಿ ಉಳಿಸಿಕೊಳ್ಳಲು ಪರದಾಡುವ ಪರೀಸ್ಥಿತಿ.

ಲೇಖನದಲ್ಲಿ ಚರ್ಚಿಸಿದಂತೆ ಸಹಪಂಕ್ತಿ ಸಮಾಜದಿಂದ ಹುಡುಗಿಯನ್ನು ತರುವುದು ಸಮಸ್ಯೆ ಬಗೆ ಹರಿಸದು. ಇದರಿಂದ ಕೊಳುಯುತ್ತಿರುವ ಸಮಾಜಕ್ಕೆ ಸುಗಂದ ಪೂಸಿದಂತಾಗುವುದು ಅಷ್ಟೆ. ಮಾದ್ವರಿಗೆ ತಾವು ಹವೀಕರಿಂದ ಬಿನ್ನ ಅನ್ನುವ ಬಾವನೆ ಇರುವಾಗ ಹಲವಾರು ಹೊಸ ಬಗೆಯ ಸಮಸ್ಯೆಗಳು ಖಂಡಿತಾ ಈ ನವ ದಂಪತಿಗಳನ್ನು ಬಾದಿಸುತ್ತದೆ. ಅವನಿಗೆ ಸಹಪಂಕ್ತಿ ಸಮಾಜದ ಹೆಣ್ಣು ತರುವ ಎಂದು ಇತರರಿಗೆ ಹೇಳಲು ಹಕ್ಕಿದೆ ಎಂದು ನನಗನ್ನಿಸುವುದಿಲ್ಲ. ಹಾಗೆಂದು ನಾನು ಅಂತರ್ಜಾತಿ ವಿವಾಹದ ವಿರೋದಿಯೇನಲ್ಲ. ಆದರೆ ಏನೂ ತ್ಯಾಗ ಮಾಡದ ಇತರರಿಗಾಗಿ ಒಬ್ಬ ವ್ಯಕ್ತಿ ಮನೆಯ ಉಳಿವಿಗಾಗಿ ಎನ್ನುವ ನೆಪದಲ್ಲಿ ಬಲಿಪಶುವಾಗುವುದು ನನಗೆ ಸಮ್ಮತವಲ್ಲ. ಅಷ್ಟಕ್ಕೂ ಇತರ ಸಮುದಾಯದಿಂದ ಮದುವೆಯಾಗಿ ಹಳ್ಳಿಯಲ್ಲಿ ಸಾದಿಸುವುದು ಏನು ?? ಮತ್ತು ಯಾರಿಗಾಗಿ ?? ಎನ್ನುವ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ಪರಂಪರೆ ಉಳಿಯ ಬೇಕಾದರೆ ಸಮಾಜದ ದೋರಣೆ ಬದಲಾಗಬೇಕು ಹೊರತು ಇನ್ನೊಂದು ತಲೆಮಾರಿನ ಹುಡುಗರನ್ನು ಹರಿಕೆ ಕುರಿ ಮಾಡುವುದರಲ್ಲಿ ಅರ್ಥವಿಲ್ಲ. ಸಾಮಾಜಿಕ ಬದ್ದತೆ ಇರುವ ಎಳೆಯ ವಯಸ್ಸಿನವರ ದ್ವನಿ ಬಲೀಷ್ಟವಾದಾಗ ನಿರ್ಣಾಯಕ ಶಕ್ತಿಗಳು ಇವರ ಸಮಸ್ಯೆ ಅಲಿಸುವಾಗ ಸಮಸ್ಯೆ ಪರಿಹಾರವಾಗಬಹುದು. ಈ ಯುವಕ ಯುವತಿಯರ ಸಬಲಿಕರಣ ಇಂದಿನ ತುರ್ತು ಅಗತ್ಯ ಹೊರತು ಇತರ ಸಮಾಜದ ಹುಡುಗಿಯನ್ನು ತರುವುದಲ್ಲ.

ಮನೆ ದೆವರು ಊರ ದೇವಸ್ಥಾನ ಸಂಸ್ಕೃತಿ ಪರಂಪರೆ ಬಗೆಗೆ ಬೊಗಳೆ ಬಿಡುವ ಜನರು ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಗಳಾಗಿ ಕಂಗೊಳಿಸುತ್ತರೆ. ಬದ್ದತೆ ವರ್ತನೆಯಲ್ಲಿರಬೇಕು ಹೊರತು ತೋರ್ಪಡಿಕೆಯಲ್ಲಿ ಅಲ್ಲ. ಇಲ್ಲಿರುವವನಿಗೆ ಅತ್ಮಗೌರವ ಅಡವಿಡುವ ಪರೀಸ್ಥಿತಿ. ತರವಾಡು ಮನೆಗೆ ಆದಾರವಾಗಿದ್ದಾನೆ ಎಂದು ಅಬಿಮಾನದ ಬದಲು ಮೂದಲಿಕೆ ಕೇಳುವ ಅವನ ಜೀವನ ನರಕ.

ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವ ಸ್ವಯಂ ಘೋಷಿತ ದೈವಿ ಶಕ್ತಿಗಳು ಸಹಾ ನಮ್ಮ ಹವ್ಯಕ ಸಂಸ್ಕೃತಿಗೆ ಪರಂಪರೆಗೆ ಮಾರಕ. ಆಕರ್ಷಕವಾಗಿ ಹೊರ ನೋಟ ಹೊಂದಿದ ಆದರೆ ಸಾಂಪ್ರದಾಯಕ ಶಿಷ್ಯ ವರ್ಗ ಇಲ್ಲದ ಇವು ತಮ್ಮ ಪ್ರಬಾವ ಹೆಚ್ಚಿಸಿಕೊಳ್ಳಲು ಹಲವಾರು ಆಟಗಳನ್ನು ಆಡುತ್ತವೆ. ಕ್ರೈಸ್ತ ಮತ್ತು ಇಸ್ಲಾಂ ಮತ ಪ್ರಚಾರಕರಿಗೆ ಬಿನ್ನವಲ್ಲದ ಇವುಗಳ predatory ದೋರಣೆ ನಮ್ಮ ಗುರು ಪೀಠಕ್ಕೆ ಮಾತ್ರವಲ್ಲ ಸಂಸ್ಕೃತಿ ಪರಂಪರೆಗೂ ಮಾರಕ. ಮನೆಯಲ್ಲಿರುವವಳಿಗಿಂತ ಇವಳೇ ಹೆಚ್ಚು ಅಕರ್ಷಕ ಎಂದು ಬಾವಿಸಿದಂತಾಗುತ್ತಿದೆ ನಮ್ಮವರ ವರ್ತನೆ.


ಕೆಲವು ಸಮಯದ ಹಿಂದೆ ವಿಶ್ವವಿದ್ಯಾನಿಲಯದ ಸಂಶೋದನ ವಿಧ್ಯಾರ್ಥಿಯೊಬ್ಬರು ವಂಶಶಾಹಿಗಳ ಬಗೆಗೆ ಅಧ್ಯಯನ ಮಾಡಲು ಹವ್ಯಕರನ್ನು ಆಯ್ದುಕೊಂಡಿಇದ್ದರು. ಕಾರಣ ಹವ್ಯಕರಲ್ಲಿ ಸಂಕರವಾದುದು ಕಡಿಮೆ. ಆದರೆ ಇನ್ನು ಮುಂದೆ ಹವ್ಯಕ ಜನಾಂಗ ಉಳಿಯ ಬೇಕಾದರೆ ಹಳ್ಳಿಯಲ್ಲಿ ಬೇರುಮಟ್ಟದಲ್ಲಿ ಪ್ರಯತ್ನಿಸಿದರೆ ಮಾತ್ರ ಸಾದ್ಯ. ಪಟ್ಟಣಗಳಲ್ಲಿ ಹವ್ಯಕೇತರ ಜತೆ ನಡೆಯುವ ಮದುವೆ ಪ್ರಮಾಣ ಶೇಕಡವಾರು ಹೆಚ್ಚುತ್ತಲಿದೆ. ಹೆಚ್ಚಿನ ವಿಧ್ಯಾಬ್ಯಾಸ ಮತ್ತು ಉನ್ನತ ಉಧ್ಯೋಗ ಇವೆರಡೂ ಇಂದಿನ ಜನಾಂಗದ ಯುವಜನರನ್ನು ಹವ್ಯಕ ಸಮಾಜದಿಂದ ದೂರ ಮಾಡುತ್ತಿವೆ. ಸಹ ಉಧ್ಯೋಗಿಗಳ ಸಹಪಾಠಿಗಳ ನಡುವೆ ನಡೆಯುವ ಮದುವೆ ಹೆಚ್ಚುತ್ತಲಿದೆ. ಅದುದರಿಂದ ಹೊಸ ಗಾಳಿ ಬೀಸದ ಹಳ್ಳಿಗಳಲ್ಲಿ ಮಾತ್ರ ಕೆಲವು ಹವ್ಯಕ ಕುಟುಂಬಗಳು ಈ ಶತಮಾನದ ನಡುವಿನಲ್ಲಿ ಕಾಣಸಿಗಬಹುದು.

ಹವಾಮಾನ ಬೆಳೆ ಬೆಲೆ ಕೂಲಿಯಾಳುಗಳ ತೊಳಲಾಡುತ್ತಿರುವ ರೈತ ಸುದ್ದಿಯಾಗುವುದೇ ಇಲ್ಲ. ರೈತನಾದವನು ರಾತ್ರಿ ವಿಧ್ಯುತ್ ಕಾಯುತ್ತಾ ನಿಶಾಚರನಾದರೆ ಪಟ್ಟಣದಲ್ಲಿರುವ ಪಾಲುದಾರ ಈ ವರ್ಷ ಮನೆಯಿಂದ ಎಷ್ಟು ಕೀಳಬಹುದೆಂದು ಕನಸು ಕಾಣುತ್ತಾ ಸುಖ ನಿದ್ರೆಯಲ್ಲಿರುತ್ತಾನೆ. ನಾಲ್ಕುಎಕ್ರೆ ಅಡಿಕೆತೋಟವ್ದವನಿಗಿಂತ ಪಟ್ಟಣದಲ್ಲಿ ನಾಲ್ಕು ಚಕ್ರದ ಆಮ್ಲೇಟು ಗಾಡಿಯವ ಚೆನ್ನಾಗಿ ಜೀವನ ನಡೆಸುತ್ತಾನೆ. ಮಕ್ಕಳನ್ನು ಪಾರ್ಕಿಗೆ ಹೇಂಡತಿಯನ್ನು ಸಿನೆಮಕ್ಕೆ ಕರೆದೊಯ್ಯಲು ಅವನಿಗೆ ಬಿಡುವು ಇರುತ್ತದೆ. ಕೃಷಿಯೆಂದರೆ ಹೈನುಗಾರಿಕೆಯೆಂದರೆ ಬಿಡುವಿನ ಕಲ್ಪನೆಯಿರದ ನಿರಂತರ ಒತ್ತಡದ ಉದ್ಯೋಗ. ಪಟ್ಟಣದಲ್ಲಿರುವ ಸಂಬಂದಿಗಳು ಹೆಚ್ಚು ಸಹಕರಿಸಿದರೆ ಹಳ್ಳಿಯಲ್ಲಿರುವವನ ಜೀವನ ಉತ್ತಮವಾಗಿರಲು ಸಾದ್ಯ.

ಹಳ್ಳಿಯಲ್ಲಿರುವವನ ಮಕ್ಕಳಿಗೆ ಪಟ್ಟಣದ ಮಕ್ಕಳ ಜೀವನ ಅವಕಾಶಗಳು ತೆರೆದುಕೊಳ್ಳುವುದಿಲ್ಲ. ಸಂಬಂದಿಕರ ಮಾತ್ರವಲ್ಲ ಮನೆಮಂದಿಯ ಅಬಿಮಾನದ ಕಣ್ಣೆಲ್ಲ ಊರ ಹೊರಗಿರುವವನ ಮತ್ತು ಅವನ ಮಕ್ಕಳ ಮೇಲೆ ಎಂಬ ವಿಚಾರದಿಂದ ಹಳ್ಳಿಯಲ್ಲಿವವನಿಗೆ ಬಂದನದಲ್ಲಿರುವ ಅನುಭವ. ಅದುದರಿಂದ ಮಕ್ಕಳ ವಿದ್ಯಬ್ಯಾಸದ ಮತ್ತು ಅವರು ವಾಪಾಸು ಹಳ್ಳಿಗೆ ಹಿಂತಿರುಗದ ನೆಪದಲ್ಲಿ ಬಹುಪಾಲು ಜನ ಹವ್ಯಕರು ಮುಂದೆಯೂ ಪಟ್ಟಣ ಸೇರಲಿದ್ದಾರೆ. ಒಂದು ಲೆಕ್ಕದಲ್ಲಿ ಹಳ್ಳಿಯಲ್ಲಿರುವುದರ ವಿರುದ್ದ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ. ಹೆಚ್ಚು ಜನ ಪಟ್ಟಣ ಸೇರಿದಂತೆ ಪ್ರತ್ಯೇಕತೆ ಉಳಿಸಿಕೊಳ್ಳುವ ಸಾದ್ಯತೆ ಕ್ಷೀಣಿಸುತ್ತದೆ. ಜಾತಿಯೊಳಗಿನ ಬಾವನಾತ್ಮಕ ಸಂಬಂದಗಳು ಸಡಿಲವಾಗುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ಹಳ್ಳಿಮನೆಯಲ್ಲಿ ಜರಗುವ ನಿರ್ಣಾಯಕ ಸಭೆಯಲ್ಲಿ ಸಮಸ್ಯೆಗಳ ಹೆಚ್ಚು ಅರಿವು ಇರುವ ಹಳ್ಳಿ ಮನೆಯ ಉಸ್ತುವಾರಿಯ ಸ್ಥಾನ ಕಾಫಿ ಚಾ ಸರಬರಾಜು ಮಾಡಿ ಮೂಲೆಯಲ್ಲಿ ಕೈ ತಟ್ಟಿ ನಿಲ್ಲುವುದಾಗಿರುತ್ತದೆ. ಬೆಂಗಳೂರಿನಲ್ಲಿರುವವರ ಅಮೇರಿಕದಲ್ಲಿರುವವರ ಬದಲಾಗಿ ಮನೆಯ ಉಸ್ತುವಾರಿಯ ಅದ್ಯಕ್ಷತೆಯಲ್ಲೇ ಈ ಸಭೆಗಳು ನಡೆಯ ಬೇಕು. ಆಗ ನಮ್ಮ ಸಮಾಜದ ಚೇತರಿಕೆ ಸಾದ್ಯ.

ನಿಜ ಹೇಳಿ ನೀವು ನಿಮ್ಮ ಮಗಳನ್ನು ಹಳ್ಳಿಯಲ್ಲಿರುವ ಕೂಡು ಕುಟುಂಬದ ಆಸ್ತಿ ನೋಡಿಕೊಳ್ಳುತ್ತಿರುವ ಪದವೀದರ ಕೃಷಿಕನಿಗೆ ಕೊಡುವಿರಾ ? ಹವ್ಯಕ ಸಮಾಜ ಉಳಿಯಲು ನಿಮ್ಮ ಪಾಲಿನ ಅಳಿಲು ಸೇವೆಗೆ ತಯಾರಿದ್ದಿರೋ ?





`

Wednesday, June 25, 2008

ಅಮೇರಿಕದಲ್ಲಿಂದು ಅಡಿಕೆ ಹಾಳೆ ತಟ್ಟೆ

ಅಮೇರಿಕದ ಒಂದು MBA ವಿದ್ಯಾರ್ಥಿ ತನ್ನ project work ಗೆಂದು ಕೊಳೆತು ಗೊಬ್ಬರವಾಗಬಲ್ಲ ಪರಿಸರಕ್ಕೆ ಕನಿಷ್ಟ ಹಾನಿ ಉಂಟುಮಾಡುವ ಪರಿಸರ ಸ್ನೇಹಿ ತಟ್ಟೆಯ ಹುಡುಕಾಟದಲ್ಲಿ ಕೊನೆಗೆ ತಲಪಿದ್ದು ದಕ್ಷಿಣ ಬಾರತಕ್ಕೆ. ವಿದ್ಯಾರ್ಥಿಗಳು ಕಾಟಾಚಾರಕ್ಕೆ ಎನ್ನುವ ಬದಲು ಕಷ್ಟ ಪಟ್ಟು project work ಮಾಡಿದರೆ ಮುಂದಿನ ಜೀವನಕ್ಕೆ ಪೂರಕ ಎನ್ನುವುದಕ್ಕೆ ಇನ್ನೊಂದು ಉದಾಹರಣೆ. ಅಡಿಕೆ ಹಾಳೆ ತಟ್ಟೆ ಬಗೆಗೆ ಮಂಡಿಸಿರುವ ಅವನ ಪ್ರಬಂದಕ್ಕೆ ಲಕ್ಷಾಂತರ ಡಾಲರ್ ಹರಿದು ಬಂತು. ಎಂಬತ್ತು ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನ ಹಾಗೂ ಸಹಾಯದನ ಲಬಿಸಿದ ಈ ವಿದ್ಯಾರ್ಥಿ ಹಾಳೆ ತಟ್ಟೆಯನ್ನು ಬಾರತದಿಂದ ತರಿಸಿ ಮಾರಾಟ ಮಾಡಲೂ ಪ್ರಾರಂಬಿಸಿದ.



ಇಂದು ಅಮೇರಿಕದಲ್ಲಿ ಒಂಬತ್ತಿಂಚು ಚೌಕದ ಹಾಳೆ ತಟ್ಟೆಯ ಚಿಲ್ಲರೆ ಮಾರಾಟ ಬೆಲೆ ಕೇವಲ ನಲುವತ್ತು ರೂಪಾಯಿ. ನಮ್ಮಲ್ಲಿ ಒಂದೂವರೆ ರೂಪಾಯಿಗೆ ಚಿಕ್ಕ ಪುಟ್ಟ ಹಾಳೆ ತಟ್ಟೆ ತಯಾರಕರು ಮಾರಾಟ ಮಾಡುವ ಈ ತಟ್ಟೆ ಅಮೇರಿಕ ತಲಪುವಾಗ ಡಾಲರ್ ಲೆಕ್ಕದ ಬೆಲೆಗೆ ಮಾರಾಟವಾಗುತ್ತದೆಯಂತೆ. ಪ್ರಕಟಣೆಯಲ್ಲಿ ಮಾಲು ಬಾರತದ್ದು ಎನ್ನುವ ವಿಚಾರ ಸಾದ್ಯವಾದಷ್ಟು ಅಡಗಿಸಿದ್ದಾರೆ. ಬದಲಾಗಿ South East Asia ಎನ್ನುತ್ತಾರೆ. ಇದೊಂದು ಉತ್ತಮ ವ್ಯವಹಾರ ಸಾದ್ಯತೆಯೆಂದು ಅನಿಸುತ್ತದೆ.


ಅಮೇರಿಕದ ಪೂರ್ವ ಕರಾವಳಿಯಲ್ಲಿ ಸಾವಯುವ ಕೃಷಿ ಸಾಮುಗ್ರಿ ಹಂಚುವುದರಲ್ಲಿ Paul Keene ಎಂಬವರು ಸ್ಥಾಪಿಸಿದ walnut acres ಬಹಳ ಪ್ರಸಿದ್ದವಾಗಿತ್ತು. ಬಾರತದಲ್ಲಿ ಕೆಲವು ಕಾಲ ಕಳೆದ ಇವರನ್ನು ಆಮೇರಿಕದಲ್ಲಿ ಸೈಕಲಿಸುವಾಗ ಗೆಳೆಯರೊಂದಿಗೆ ಇವರಲ್ಲಿಗೆ ಹೋಗುವ ಅವಕಾಶ ಸಿಕ್ಕಿ ಮಾತನಾಡಿಸಿದ್ದೆ. 1998 ರಲ್ಲಿ ನಾನು ಅಮೇರಿಕಕ್ಕೆ ಹೋಗುವಾಗ ಇವರಿಗೆ ತೋರಿಸಲು ಒಂದಷ್ಟು ಹಾಳೆ ತಟ್ಟೆಗಳ ತಗೊಂಡು ಹೋಗಿದ್ದೆ. ಆದರೆ Paul ಅವರು ವ್ಯವಹಾರದಿಂದ ಆಗ ನಿವೃತ್ತರಾದ ಕಾರಣ ತೋರಿಸಲು ಸಾದ್ಯವಾಗಿರಲಿಲ್ಲ. ಜಾಗತೀಕರಣದ ಪ್ರಬಾವವೋ ಎಂಬಂತೆ Walnut Acres ಇಂದು ಇತಿಹಾಸಕ್ಕೆ ಸೇರಿದೆ. ಇತರ ಸಾವಯುವ ಗೆಳೆಯರಿಗೆ ತೋರಿಸಲು ನನ್ನ ಆರೋಗ್ಯ ಸಮಸ್ಯೆಗಳು ಅಡ್ಡವಾದವು.ಇಪ್ಪತೈದು ವರ್ಷಗಳಿಂದ ನಮ್ಮಲ್ಲಿ ತಯಾರಾಗುತ್ತಿರುವ ಅಡಿಕೆ ಹಾಳೆ ತಟ್ಟೆ ಅಮೇರಿಕದಲ್ಲಿನ್ನೂ ಅಪರಿಚಿತ ಎನ್ನುವಾಗ ಆಶ್ಚರ್ಯವಾಗುತ್ತದೆ.
ಹೆಚ್ಚಿನ ಮಾಹಿತಿ:




Thursday, May 22, 2008

ಮನೆಗೆ ಆದಾರವಾಗುವವನಿಗೆ ಶಾಪ ವಿಮೋಚನೆಯಿಲ್ಲ

ಶ್ರೀಪಾದ ಹೆಗಡೆಯವರ 2008 ಮಾರ್ಚ್ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಮನೆಯಲ್ಲುಳಿದವ ಹಿಂದುಳಿಯಬೇಕೆ ಸಕಾಲಿಕ ಹಾಗೂ ಅರ್ಥಪೂರ್ಣ. ಹಲವು ಮಜಲುಗಳನ್ನು ಒಳಗೊಂಡ ಬರಹ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಮನದಲ್ಲೇಳುವ ಪ್ರಶ್ನೆಗಳಿಗೆ ಪ್ರಾಯೋಗಿಕ ಪರಿಹಾರಗಳು ದೊರಕದೆ ನಮ್ಮನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡುತ್ತದೆ.

ಹಳ್ಳಿಯ ಬದುಕೆಂದರೆ ಕೃಷಿ ಮಾತ್ರವಲ್ಲ ನಮ್ಮ ಸಂಸ್ಕೃತಿ ಪರಂಪರೆಯೊಂದಿಗೆ ಹಾಸು ಹೊಕ್ಕಾದ ಜೀವನ ಪದ್ದತಿಯ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ. ಬದಲಾವಣೆ ಜಗದ ನಿಯಮ ಎಂದರೂ ಕಳೆದ ಹತ್ತು ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ ಊಹನಾತೀತ ಬದಲಾವಣೆ ಕಾಣುತ್ತಿದ್ದೇವೆ. ದಿನಕ್ಕೊಂದು ಕಾನೂನು ಎನ್ನುವಾಗ ಈ ದೀರ್ಘ ಕಾಲಮಿತಿಯ ವಿಚಾರಕ್ಕೆ ಸುಲಬವಾಗಿ ಉತ್ತರ ಕಂಡುಕೊಳ್ಳಲು ಕಷ್ಟಸಾದ್ಯ. ಮೊದಲಿಗೆ ವ್ಯಕ್ತಿಯೊಬ್ಬ ಯಾಕಾಗಿ ಮತ್ತು ಯಾರಿಗಾಗಿ ಹಳ್ಳಿಯಲ್ಲಿ ಉಳಿಯಬೇಕು ಎನ್ನುವುದರ ವಿಮರ್ಷೆ ಆಗಬೇಕು.

ಮನೆದೇವರಿಗೆ ತಮ್ಮ ಪರವಾಗಿ ಪೂಜೆ ಸಲ್ಲಿಸಲೋ ? ಕಣಿಲೆ ಉಪ್ಪಿನಕಾಯಿ ಪುನರ್ಪುಳಿ ಸಿಪ್ಪೆ ಕಾಲಕಾಲಕ್ಕೆ ಒದಗಿಸಲೋ ? ತಮ್ಮ ಸಂಸ್ಕೃತಿ ಪರಂಪರೆಗಳ ಜೀವಂತವಿರಿಸಿ ತಳಮಟ್ಟದ ಬೇರು ಉಳಿಸಿಕೊಳ್ಳಲು ಕೊಂಡಿಯಾಗಿರಲೋ ? ಹಳ್ಳಿ ಮನೆ ಒಂದು ಪ್ರವಾಸಿ ತಾಣವಾಗಿ ಕುಟುಂಬದವರಿಗೆ ಉಳಿಸಿಕೊಳ್ಳಲೋ ? ಒಟ್ಟಿನಲ್ಲಿ ಪಟ್ಟಣದಲ್ಲಿರುವವರ ಅನುಕೂಲಕ್ಕೆ ಮಾತ್ರವೋ ಅಥವಾ ನೈಜ ಕಾಳಜಿಯೋ ? ಎಲ್ಲರೂ ವ್ಯಕ್ತಿಗತವಾಗಿ ಕಾರ್ಯಮುಖರಾಗಿರುವಾಗ ಒಬ್ಬನನ್ನು ಮನೆತನಕ್ಕಾಗಿ ಸಮಾಜಕ್ಕಾಗಿ ಬಲಿ ಕೋಡಲು ಪ್ರರೇಪಿಸುವುದು ಸರಿಯಲ್ಲ.

ಪರಂಪರೆ ಉಳಿಯಲೇ ಬೇಕಾದರೆ ಸಮಾಜದ ದೋರಣೆ ಬದಲಾಗಬೇಕು. ಹಳ್ಳಿ ಮನೆ ವ್ಯವಸ್ಥೆಗೆ ಹೆಗಲು ಕೊಟ್ಟವನ ಪರೀಸ್ಥಿತಿ ಗಾಳಿಪಟಕ್ಕೆ ಆಕಾರ ಕೊಟ್ಟ ಕಡ್ಡಿಯಂತೆ ದೂರದಿಂದ ಗೋಚರಿಸದು. ಅದೇ ರೀತಿ ಇವನ ಪಾತ್ರವೂ ನೇಪಥ್ಯಕ್ಕೆ ಸರಿಯುವುದು ಬೇಸರದ ವಿಚಾರ. ಈ ಯುವಕ ಯುವತಿಯರ ಸಬಲಿಕರಣ ಇಂದಿನ ತುರ್ತು ಅಗತ್ಯ.

ಎಳೆಪ್ರಾಯದ ಅಲೆದಾಟದಲ್ಲಿ ಪ್ರಪಂಚದ ಹಲೆವೆಡೆ ಜನರ ಮನೋಬಾವ ಸಮೀಪದಿಂದ ನೋಡಲು ನನಗೆ ಅವಕಾಶವಿತ್ತು. ಪ್ರತಿಯೊಬ್ಬರ ಜೀವನದೃಷ್ಟಿ ದೋರಣೆಗಳು ಅವರು ಬೆಳೆದ ಹಾಗೂ ವಾಸಿಸುವ ಪರಿಸರವ ಹೊಂದಿಕೊಂಡು ರೂಪಿಸಲ್ಪಡುತ್ತದೆ. ಹಳ್ಳಿಯಲ್ಲಿರುವವರಿಗೆ ಕೂಡು ಕುಟುಂಬ ಸಹಜೀವಿಗಳೂ ಸೇರಿದಂತೆ ಸಮುಗ್ರ ದೃಷ್ಟಿ ಹೊಂದಿದ್ದರೆ ನಗರದಲ್ಲಿರುವವರ ಕಾಳಜಿ ಗಂಡ ಹೆಂಡತಿ ಮಕ್ಕಳಿಗೆ ಸಿಮಿತವಾಗಿರುತ್ತದೆ. ತನ್ನ ಇತಿಮಿತಿಯ ಅರಿವಿನಲ್ಲಿಯೇ ಸಾದ್ಯವಾದುದಕ್ಕೆ ತೃಪ್ತಿಪಟ್ಟುಕೊಂಡು ತನ್ನ ಮನೆಯವರ ಬಗೆಗೆ ಸುತ್ತಲಿನವರ ಬಗೆಗೆ ಕಾಳಜಿ ಇಟ್ಟು ಮನಶಾಂತಿ ನೆಮ್ಮದಿಯಿಂದ ಬಾಳಲು ಆಶಿಸುವ ರೈತ ಹುಡುಗ ಕೊನೆಗೆ ತನ್ನ ಪರೀಸ್ತಿತಿ ಅರಿತು ಕಂಗೆಡುತ್ತಾನೆ.

ಹಳ್ಳಿಗಳು ಖಾಲಿಯಾಗುತ್ತಿರುವುದು ನಮ್ಮಲ್ಲಿ ಮಾತ್ರವಲ್ಲ, ಅದೊಂದು ಜಾಗತಿಕ ಸಮಸ್ಯೆ. ಇಲ್ಲಿ ಮುಖ್ಯವಾಗಿ ಕೃಷಿ ಅವಲಂಬಿ ಕುಟುಂಬಗಳಲ್ಲಿ ಅಸ್ತಿ ಹಕ್ಕು ಅನ್ನುವ ಕಾನೂನು ಹಳ್ಳಿಯಲ್ಲಿ ಉಳಿಯುವವನನ್ನು ಬಹಳಷ್ಟು ಶೋಷಿಸುತ್ತದೆ. ಪರಿಣಾಮವಾಗಿ ಇಂದು ಯಾರೂ ಹಳ್ಳಿಯಲ್ಲಿ ಉಳಿಯಲು ಒಪ್ಪ್ಪುವುದಿಲ್ಲ. ಪಟ್ಟಣದಲ್ಲಿ ಇರುವ ಸೊತ್ತು ಹಳ್ಳಿಯ ಹಣದ ಮೂಲವಾದರೂ ವೈಯುಕ್ತಿಕ ಎನಿಸುತ್ತದೆ. ಹಳ್ಳಿಯಲ್ಲಿ ಎಲ್ಲರಿಗೂ ಸಮಪಾಲು ಎನ್ನುವ ದ್ವಿಮುಖ ದೋರಣೆ ಆಚರಣೆ ಕಾಣುತ್ತೇವೆ. ಬಂದುಗಳು ಬಂದಣಿಕೆಗಳಾಗಿ ಮೂಲ ಮನೆಯೇ ನಾಶವಾಗುವುದು ನಮ್ಮೆದುದುರು ಕಾಣುವ ವಿಚಾರ. ಹಳ್ಳಿಯಲ್ಲಿ ನೊಗ ಹೊತ್ತವನ ನಡುಪ್ರಾಯದ ಸಮಸ್ಯೆಗಳು ಸೂಕ್ಶ್ಮವಾಗಿ ಅವಲೋಕಿಸುತ್ತಿರುವ ನಂತರದ ಜನಾಂಗದವರಲ್ಲಿ ಬವಿಷ್ಯದ ಬಗೆಗೆ ಗಲಿಬಿಲಿ ಉಂಟು ಮಾಡುತ್ತದೆ.

ಅಮೇರಿಕದಲ್ಲಿ ಪದವಿಪೂರ್ವ ಶಿಕ್ಷಣ ಪೊರೈಸುವ ಸನ್ನಿವೇಶದಲ್ಲಿ ಶಿಕ್ಷಕ ರಕ್ಷಕ ಹಿತಚಿಂತಕರ ಅನೌಪಚಾರಿಕ ಸಲಹಾತ್ಮಕ ರಕ್ಷಣಾ ಜಾಲ ನಿರ್ಮಿಸಲ್ಪಡುತ್ತದೆ. ಎಲ್ಲರೂ ಸೇರಿ ಚರ್ಚಿಸುತ್ತಾರೆ. ಅದೊಂದು ಆ ವ್ಯಕ್ತಿಯ ಶ್ರೇಯೋಭಿವೃದ್ದಿಗೆ ಪೂರಕವಾಗುವ ಅನುಕರಣೀಯ ವಿದಾನ. ಇಲ್ಲಿ ಅನಿವಾರ್ಯವಾಗಿ ಮನೆಯಲ್ಲೊಂದು ಜನ ನೆಲೆನಿಲ್ಲಬೇಕು ಎಂದು ತೀರ್ಮಾನ ಕೈಗೊಳ್ಳುವ ಸಂದರ್ಬದಲ್ಲಿ ಎಲ್ಲರೂ ಹಿತಚಿಂತಕರೆಂದು ತೋರ್ಪಡಿಸುತ್ತಾ ಈ ಪೆದ್ದನನ್ನು ಮರಹತ್ತಿಸುತ್ತಾರೆ.

ಶ್ರೀಪಾದ ಹೆಗಡೆಯವರು ಹೇಳುವಂತೆ ಮದುವೆ ಮಾಡುವಾಗಲೇ ಅವರ ಹಕ್ಕಿನ ಇತ್ಯರ್ಥಮಾಡಿ ಕಳುಹಿಸ ಬೇಕಾದೀತೇನೊ ಅನ್ನುವ ವಿಚಾರ ಪ್ರಆಯೋಗಿಕವಲ್ಲ. ಅಸಹಾಯಕ ಅನಾಥ ಬಾವನೆ ಮನೆಮಾಡಿರುವಂತಹ ಮದುಮಗಳಲ್ಲಿ ಅವಳ ಸಂಪೂರ್ಣ ಹಕ್ಕು ಬರೆದು ಕೊಡುವಂತೆ ಹೇಳಲು ಯಾರಿಗೂ ಮನಸು ಬಾರದು. ಸ್ವಂತ ಸಹೋದರಿಯಿಂದ ಸಮಸ್ಯೆ ಬರಬಹುದೆಂಬ ದೂರಾಲೋಚನೆ ಯಾರಿಗೂ ಇರುವುದಿಲ್ಲ. ಅದೊಂದು ಬೇಲಿ ಹಾಕದ ನಿರ್ಲಕ್ಷಿತ ಗಡಿ. ಸಮಸ್ಯೆ ಬಂದಾಗ ಪರಿತಪಿಸುವುದೊಂದೇ ದಾರಿ.

ಅವಿಭಕ್ತ ಕುಟುಂಬದಲ್ಲಿ ಮನೆಯ ಯಜಮಾನ ಸತ್ತಾಗ ಅರ್ಥಾತ್ ಮಹಾಭಾರತ ಜರಗುತ್ತದೆ. ಅಧಿಕಾರ ಬದಲಾವಣೆ ಎಂದೂ ಶಾಂತಿಯುತವಾಗಿ ಸೌಹಾರ್ದತೆಯಲ್ಲಿ ಜರಗುವುದಿಲ್ಲ. ಹಲವೆಡೆ ಕುಟುಂಬದ ಯಜಮಾನನ ಒತ್ತಡಕ್ಕೆ ತಲೆ ಬಾಗಿ ಹಳ್ಳಿಗೆ ವಾಪಾಸಾದವ ನಂತರ ಜೀವನವಿದೀ ತನ್ನನ್ನು ಶಪಿಸಿಕೊಳ್ಳುವ ಪರೀಸ್ಥಿ ಉಂಟಾಗುತ್ತದೆ. ಯಜಮಾನರ ಸಾವಿಗೆ ಕಾದ ಜನ ಸಮಾನಾಸಕ್ತರ ವೇದಿಕೆ ನಿರ್ಮಿಸಿಕೊಳ್ಳುತ್ತಾರೆ. ಎಲ್ಲಾರೂ ಹಕ್ಕು ಸ್ಥಾಪನೆಗೆ ಮುಸುಕುಕಿನೊಳಗೆ ಹೋರಾಡಿ ಹೊಸ ಸಮೀಕರಣ ಏರ್ಪಡಿಸಿಕೊಳ್ಳುತ್ತಾರೆ. ಹಲವು ಸ್ವಾರ್ಥಿಗಳು ಹಿತಚಿಂತಕರೆನ್ನುವ ನೆಲೆಯಲ್ಲಿ ಈ ಚರ್ಚೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ತನ್ನು ನಡು ಪ್ರಾಯದ ವರೆಗಿನ ಆಯುಸ್ಸು ಕುಟುಂಬಕ್ಕಾಗಿ ತೇಯ್ದ ವ್ಯಕ್ತಿಗೆ ಒಂದೇ ಮತವಾಗಿ ಅಲ್ಪಸಂಖ್ಯಾತನಾಗುತ್ತನೆ. ಅವನಿಗೆ ಇತರ ಜೀವನವಕಾಶಗಳು ಮುಚ್ಚಿಕೊಂಡು ಅಳಿವು ಉಳಿವಿನ ಅನ್ನದ ಪ್ರಶ್ನೆಯಾಗುತ್ತದೆ. ಪಾಲುದಾರರು ಎನ್ನುವವರಿಗೆ ಸಿಕ್ಕರೆ ಪಾಯಸ ಅಷ್ಟೇ.

ಮನೆಯಲ್ಲಿ ನಡೆದು ಬಂದ ದಾಖಲೆಗಳ ಬಗೆಗೆ ಸ್ಪಷ್ಟ ದಾಖಲೆಗಳಿದ್ದರೂ ಅವು ಹೆಚ್ಚಾಗಿ ಪಟ್ಟಣದಲ್ಲಿರುವ ಬಹುಮತಕ್ಕೆ ಅನುಕೂಲವಲ್ಲದ ರೀತಿಯಲ್ಲಿರುವ ಕಾರಣ ಅವುಗಳು ಉಪಯೋಗಕ್ಕೆ ಬರುವುದಿಲ್ಲ. ಮೀಟರ್ ಲೆಕ್ಕ ದನಿಗೆ (ನಾವು ಹಣ ಕೊಡುವಾಗ ಮಾತ್ರ ) ಎಂದು ರಿಕ್ಷವಾಲರು ಹೇಳುವಂತಾಗುತ್ತದೆ.

ಮೊದಲೇ ಕಾನೂನು ರೀತ್ಯಾ ಒಪ್ಪಂದ ಮಾಡಿಕೊಳ್ಳೋಣ ಎಂದರೆ ಹಲವು ವ್ಯವಹಾರಿಕ ಹಾಗೂ ಕಾನೂನು ರೀತ್ಯಾ ತೊಡಕುಗಳು. ಕೃಷಿಕನಲ್ಲದ ವ್ಯಕ್ತಿ ದೇಶದ ಹಲವು ಬಾಗದಲ್ಲಿ ಕೃಷಿ ಬೂಮಿ ಖರೀದಿ ಮಾಡುವಂತಿಲ್ಲ. ಹಲವರಿಗೆ ತೇರಿಗೆ ಇತ್ಯಾದಿ ಪರೋಕ್ಷ ಅನುಕೂಲಕ್ಕೆ ಕೃಷಿ ಭೂಮಿ ಮೇಲೆ ಕಣ್ಣಿರುತ್ತದೆ. ಹಾಗಾಗಿ ಕೃಷಿಕ ಹಣೆಪಟ್ಟಿ ಕಳದುಕೊಳ್ಳಲು ಹಲವರು ತಯಾರು ಇರುವುದಿಲ್ಲ. ಪರಿಮಿತಿ ಕಾನೂನು ಹಲವು ಕಡೆ ಸಮಸ್ಯೆ ತಂದೊಡ್ಡುತ್ತದೆ.

ಅಳಿಯಕಟ್ಟು ಸಮಾಜದಲ್ಲಿ ಹುಡುಗರು ಹಳ್ಳಿಯಲ್ಲಿ ಉಳಿದರೂ ತಾನು ಇಲ್ಲಿಂದ ಬಿಟ್ಟು ಹೆಂಡತಿ ಮನೆಗೆ ಹೋಗುವವನೆಂಬ ಬಾವನೆಯಲ್ಲಿ ಕೃಷಿ ಅಭಿವೃದ್ದಿಯಲ್ಲಿ ಹೆಚ್ಚಿನ ಆಸಕ್ತಿ ತೋರದಿರುವುದುಂಟು. ಅದುದರಿಂದ ಎಲ್ಲರಿಗೂ ಸಮಪಾಲು ಶೇಷ ಮಾತ್ರ ತನಗುಳಿಯುವುದು ಎನ್ನುವ ಚಿಂತೆನೆ ಕೃಷಿ ಕುಟುಂಬದ ಹುಡುಗರನ್ನು ನಿರುತ್ಸಾಹಗೊಳಿಸಿದರೆ ಕನ್ಯಾಪಿತೃಗಳನ್ನು ಬೆದರಿಸುತ್ತದೆ. ಇಲ್ಲಿ ಸಮಾಜವನ್ನು ಸರಿದಾರಿಗೆ ತಂದರೆ ಮಾತ್ರ ಸಂಸ್ಕೃತಿ ಪರಂಪರೆಗಳು ಉಳಿದಾವು.

ಇವರಲ್ಲೂಟ ಅವರ ಪರ ಆಟ ಮಾಡುವ ಬಹಳ ಜನ ತಂದೆ ತಾಯಂದಿರು ನಮ್ಮಲ್ಲಿದ್ದಾರೆ. ಮೊನ್ನೆ ಅವನು ಪೇಟೆಯಿಂದ ಬರುವಾಗ ನಶ್ಯ ತರಲಿಲ್ಲ ಎನ್ನುವುದೇ ಮನೆಯಲ್ಲೊಂದು ಸಮಸ್ಯೆ ಹುಟ್ಟಿಸಲು ಸಾಕು. ಈ ರೀತಿ ಮನೆ ಒಡೆಯಲು ಸಂಪರ್ಕ ಕ್ರಾಂತಿ ಉಂಟು ಮಾಡಿದ ದೂರವಾಣಿ ತನ್ನದೇ ಕೊಡುಗೆ ಸಮರ್ಪಿಸುತ್ತದೆ. ಕಣ್ಣು ತಪ್ಪಿಸಿ ಮಾಡುವ ಈ ಕರೆಗಳಿಂದ ಕಾಡುವ ಅಪರಾದಿ ಪ್ರಜ್ನೆ ತಂದೆ ತಾಯಿಗೆ ಮನೆಯಲ್ಲಿರುವವನ ಮೇಲೆ ಅವನಿಗೆ ಅರಿವೇ ಇಲ್ಲದೆ ಸಿಟ್ಟು ಅಸಹನೆಗೆ ದಾರಿ ಮಾಡಿಕೊಡುತ್ತದೆ. ಪಟ್ಟಣದಲ್ಲಿರುವ ಮಕ್ಕಳ (ಅ) ನೈತಿಕ ಬಾಯಿ ಮಾತಿಗೆ ಸಿಮಿತವಾಗುವ ಬೆಂಬಲ ಸೌಹಾರ್ದತೆ ಕದಡಿ ವಾಪಾಸು ಬಾರದ ಸ್ಥಿತಿ ತಲಪಿಸುತ್ತದೆ. ಈ ಸಂಪರ್ಕದಿಂದ ಪ್ರಪಂಚದ ಯಾವುದೇ ಮೂಲೆಯಿಂದ ಕಿಡಿ ಹಚ್ಚಲು ಮತ್ತು ಉರಿಯುತ್ತಿರುವ ಬೆಂಕಿಗೆ ನಿರಂತರ ಇಂದನ ಪೊರೈಸಲು ಸಾದ್ಯವಾಗುತ್ತದೆ.

ಮಗ ಸೊಸೆ ಯಾ ಮಗಳು ಅಳಿಯನ ಜತೆ ಇರಬಹುದು. ಹಿರಿಯ ನಾಗರೀಕರಲ್ಲಿ ದೂರುಗಳು ಇದ್ದೇ ಇರುತ್ತವೆ. ಇವರ ತಕರಾರಿಗೆ ಕಿವಿಕೊಡಲು ಸಮಯಸಾದಕರು ಸುತ್ತುಮುತ್ತಲೂ ಇದ್ದು ತೆರೆಮರೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ದೂರದಲ್ಲಿರುವ ಮಕ್ಕಳು ತಪ್ಪು ಮಾಡುವುದಿಲ್ಲ ಎನಿಸುವ ಹಿರಿಯರಿಗೆ ಅವರ ಕೊಡುಗೆಯೂ ಶೂನ್ಯ ಎನ್ನುವುದು ಗೋಚರಿಸುವುದಿಲ್ಲ. ದೂರದಲ್ಲಿರುವವ ಸಂಶಯಾತೀತ ಎನಿಸಿಕೊಂಡರೆ ಸಮಸ್ಯೆಗೆ ಅಡಿಗಲ್ಲು ಹಾಕಿದಂತೆ.

ಮನೆಯಲ್ಲಿ ಉಳಿಯುವವನ ಬವಣೆ ತಪ್ಪಿಸಲು ಕಷ್ಟಸಾದ್ಯ. ಗ್ರಾಮೀಣ ಜನರ ನೋವುಗಳಿಗೆ ಪಟ್ಟಣಕೇಂದ್ರಿತ ಮಾದ್ಯಮದ ಹಾಗೂ ಸಮಾಜದ ಸ್ಪಂದನ ಬಹಳ ಕಡಿಮೆ. ಹಳ್ಳಿಮನೆ ವಿಚಾರಕ್ಕೆ ತಲೆಹಾಕುವ ಪ್ರತಿಯೊಬ್ಬನೂ ತನ್ನ ಕೊಡುಗೆಯೇನು ಎನ್ನುವುದರ ಬಗೆಗೆ ಆತ್ಮಶೋಧನೆ ಮಾಡಿಕೊಳ್ಳಬೇಕು. ಇತಿಹಾಸ ಅವಲೋಕಿಸಿದರೆ ಮುಂದುವರಿದ ದೇಶಗಳು ಈ ಹಂತ ದಾಟಿ ಬಂದಂತಿದೆ.
ಜಾರುದಾರಿಯಲ್ಲಿರುವ ಕೃಷಿಕ ಸಮಾಜ ಇನ್ನೂ ನಿರ್ಣಾಯಕ ಹಂತ ದಾಟಿಲ್ಲ. ಒಗ್ಗಟ್ಟಿನಲ್ಲಿ ಪ್ರಯತ್ನಿಸಿದರೆ ಪುನಶ್ಚೇತನ ಸಾದ್ಯವೆಂದು ಅನಿಸುತ್ತದೆ. ಎತ್ತು ಪ್ರಯತ್ನಿಸಿದರೆ ಸಾಲದು, ಹಸುವೂ ಸಹಕರಿಸಬೇಕು ಎನ್ನುವ ಆಂಗ್ಲ ಬಾಷೆಯಲ್ಲೊಂದು ಮಾತಿದೆ. ಬೂಮಿಯ ಫಲವತ್ತತೆ ಬಗೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಸಾವಯುವ ಕೃಷಿ ಪುಸ್ತಕಗಳಲ್ಲಿ ಈ ಮಾತು ಕಂಡುಬರುತ್ತದೆ.

ಹಳ್ಳಿಯ ಬದುಕು ಸಹನೀಯ ಆದಷ್ಟು ಮದುವೆ ಮಾರುಕಟ್ಟೆಯಲ್ಲಿ ಕೃಷಿಕನ ಮೌಲ್ಯ ಏರುತ್ತದೆ ಮತ್ತು ಪರಂಪರೆ ಉಳಿಯುವ ಸಾದ್ಯತೆ ಹೆಚ್ಚಾಗುತ್ತದೆ. ಅದಕ್ಕೆ ಸಮಾಜ ಬಾಂದವರಿಂದ ಸಹಾಯ ಬಾಯುಪಚಾರಕ್ಕೆ ಸಿಮಿತಗೊಳ್ಳದೆ ಪ್ರವಾಹದ ವಿರುದ್ದ ಈಜಲು ಪ್ರಶ್ನಾತೀತ ನೈತಿಕ ಬೆಂಬಲವಾಗಬೇಕು.

ಸಮಸ್ಯೆ ಪರಿಹಾರಕ್ಕೆ ಲಕ್ಷಣ ನೋಡಿ ಮದ್ದು ಅರೆದರೆ ಯಾವ ಪ್ರಯೋಜನವೂ ಇಲ್ಲ. ಮೂಲ ಕಾರಣ ಹುಡುಕಿ ಪರಿಹಾರೋಪಾಯ ಕೈಗೊಳ್ಳಬೇಕು. ಎಲ್ಲರೂ ನೀರೆರೆದರೆ ಗಡಿಗೆಯಲ್ಲಿ ಹಾಲು ತುಂಬುವುದು ಅಸಾದ್ಯ.