Showing posts with label solar. Show all posts
Showing posts with label solar. Show all posts

Monday, May 18, 2009

ರೇವ ಎಂಬ ಗಗನಕುಸುಮ


 ಇತ್ತೀಚೆಗೆ ಲಂಡನಿನ ಮೇಯರ್ ವಿದ್ಯುತ್ ವಾಹನಗಳ ಬಗೆಗೆ ೩೦ ಮಿಲಿಯ ಡಾಲರ್ ಯೋಜನೆಯನ್ನು ಅನಾವರಣಗೊಳಿಸಿದರು. ಆ ಪಟ್ಟಣದಲ್ಲಿ ಒಂದು ಲಕ್ಷ ವಿದ್ಯುತ್ ಕಾರುಗಳು ಮತ್ತು ೨೫೦೦೦ ಕಾರುಗಳ ಚಾರ್ಜ್ ಮಾಡುವ ವ್ಯವಸ್ಥೆಯನ್ನು ೨೦೧೫ರ ಮೊದಲು ಅನುಷ್ಟಾನಗೊಳಿಸುವ ಗುರಿ ಹೊಂದಿದ್ದಾರೆ. ನಂತರದ ವಾರದಲ್ಲಿ ಅಲ್ಲಿನ ಕೆಂದ್ರ ಸರಕಾರ ವಿದ್ಯುತ್ ಚಾಲನೆ ವಾಹನಗಳಿಗೆ ಮೂರುವರೆ ಲಕ್ಷ ರೂಪಾಯಿವರೆಗಿನ ಸಹಾಯದನವನ್ನು ಘೋಷಿಸಿತು. ಅದನ್ನು ಕಂಡ ನನಗೆ ತುಂಬಾ ಕುಶಿಯ ಜತೆ ನಮ್ಮ ಸರಕಾರಗಳ ನಿರ್ಲಕ್ಷತೆ ಬಗೆಗೆ ಬೇಸರ ಮೂಡಿತು.

ಹೆಚ್ಚಿನ ಗ್ರಾಹಕರು ವಾಹನ ಖರೀದಿ ಮಾಡುವಾಗ ಇಂದನದ ವೆಚ್ಚದ ಬಗೆಗೆ ಚಿಂತಿಸುತ್ತಾರೆ ಹೊರತು ಅದರಿಂದಾಗ ಬಹುದಾದ ಪರಿಸರ ಮಲೀನತೆ ಅಲ್ಲ ಎನ್ನುವುದು ನಮಗೆ ಅರಿವಿದೆ ಎನ್ನುತ್ತಾರೆ ಅಲ್ಲಿನ ಸಾರಿಗೆ ಮಂತ್ರಿ ಹೂನ್. ಈಗ ಸಮಯ ಹೋದಂತೆ ಹೆಚ್ಚು ಹೆಚ್ಚು ಗ್ರಾಹಕರು ಈ ಬಗೆಗೆ ಜಾಗ್ರತಿ ತೋರ್ಪಡಿಸುತ್ತಿದ್ದು ಅವರಿಗೆ ಸಹಾಯ ಹಸ್ತ ಚಾಚುವುದು ಸರಕಾರದ ಕರ್ತವ್ಯವೂ ಆಗಿರುತ್ತದೆ. ಆವು ಉಪಯೋಗಿಸುವ ವಿದ್ಯುತ್ ಸಹಾ ಪರಿಸರ ಸ್ನೇಹಿಯಾಗಿದ್ದರೆ ಉತ್ತಮ ಎಂದೂ  ಹೇಳುತ್ತಾರೆ.

ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬರೇ ವಿದ್ಯುತ್ ಕಾರೆಂದರೆ ಪ್ರಯೋಜನವಿಲ್ಲ. ಆ ವಿದ್ಯುತ್ ಎಲ್ಲಿಂದ ಬರುತ್ತದೆ ಅನ್ನುವುದೂ ಮುಖ್ಯ. ಕಲ್ಲಿದ್ದಲು ಹೊತ್ತಿಸಿ ವಿದ್ಯುತ್ ತಯಾರಿಸಿ ಆ ವಿದ್ಯುತ್ ಉಪಯೋಗಿಸಿ ಕಾರು ಓಡಿಸಿದರೆ ಯಾವ ಪ್ರಯೋಜನವೂ ಇಲ್ಲ. ಬೆಂಗಳೂರಿನಲ್ಲಿ ಕಾರಿನ ಹೊಗೆ ನಳಿಗೆ ಉಗುಳುವ ಹೊಗೆಯನ್ನು ರಾಯಚೂರಿನಲ್ಲಿ ಉಗುಳಲಾಗುತ್ತದೆ ಅಷ್ಟೇ. ಈ  ಲೆಕ್ಕಾಚಾರ  ಒಟ್ಟಾರೆ  ಪರಿಸರಕ್ಕೆ  ಪೂರಕವಲ್ಲ.  ಅಲ್ಲದೆ ವಿದ್ಯುತ್ ಕೋಶಗಳ ತಯಾರಿ ಬಹಳ ಮಲೀನತೆಗೆ ಕಾರಣವಾಗಿರುತ್ತದೆ.

ವಿದ್ಯುತ್ ವಾಹನದ ಇತಿಹಾಸ ದೀರ್ಘವಾಗಿದ್ದರೂ ಅವಿಷ್ಕಾರ ನಿದಾನವಾಗಲು ಮುಖ್ಯ ಕಾರಣಗಳು ಮೂರು. ಅನುಕೂಲಕರವಾದ ಅಗ್ಗವಾಗಿರುವ ಇಂದನ ಪೆಟ್ರೋಲ್, ತಕ್ಕುದಾದ ವಿದ್ಯುತ್ ಕೋಶಗಳ ಕೊರತೆ ಮತ್ತು ಅಸಮರ್ಪಕ ಬಾಟರಿ ಚಾರ್ಜಿಂಗ್ ಜಾಲದಿಂದಾಗಿ ಬಾಟರಿ ವಾಹನಗಳು ಹೆಚ್ಚು ಜನಪ್ರಿಯವೆನಿಸಲು ತಡೆಯೊಡ್ಡಿದವು. ಈಗ ಪರಿಸರ ಕಾಳಜಿ ಎನ್ನುವ ಹೊಸ ವಿಚಾರ ಚಲಾವಣೆಗೆ ಬಂದಿದೆ.  ಹೊಸ  ಆಸಕ್ತಿ ಸುರುವಾಗಿದೆ.

ಅರುಣಾಚಲ ಪ್ರದೇಶದ ರಾಜ್ಯಪಾಲರು ರಾಜಭವನದಲ್ಲಿ ಬೆಂಗಳೂರಿನಲ್ಲಿ ತಯಾರಾಗುವ ಎರಡು ರೇವ ವಿದ್ಯುತ್ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಕಳೆದ ತಿಂಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಲ್ಲಿಗೆ ಬೇಟಿ ಇತ್ತಾಗ ಅದರಲ್ಲಿ ಸಂಚರಿಸಿದ್ದರು.   ಅವರು  ಎಪ್ರಿಲ್ ತಿಂಗಳಲ್ಲಿ  ಬೆಂಗಳೂರಿಗೆ  ಬೇಟಿ  ಇತ್ತಾಗ  ಇದೇ  ಸಂಸ್ಥೆ  ತಯಾರಿಸುವ  ವಿದ್ಯುತ್   ಗಾಲ್ಫ್ ಗಾಡಿಯಲ್ಲಿ  ಇಂಫೋಸಿಸ್  ಸಂಸ್ಥೆಯಲ್ಲಿ  ಸುತ್ತಾಡಿದ್ದರು.  ಇದೀಗ  ಇಂತಹ  ಗಾಲ್ಫ್  ಗಾಡಿಗಳು  ಮಂತ್ರಿಗಳಿಗೆ  ವಿದಾನ ಸೌದದ  ಸುತ್ತಲಿರುವ  ಕಛೇರಿಗಳ  ನಡುವೆ  ಓಡಾಡಲು  ಉಪಯೋಗಿಸುವ  ಸುದ್ದಿ  ಇರುತ್ತದೆ.  

ಸರಕಾರಕ್ಕೆ ವಿದ್ಯುತ್ ಕಾರುಗಳ ಬಗೆಗೆ ಅರಿವಿಲ್ಲ ಎನ್ನುವಂತಿಲ್ಲ. ಕೇಂದ್ರ ತಂತ್ರ ಜ್ನಾನ ಮಂತ್ರಿ ಕಪಿಲ್ ಸಿಬಾಲ್ ದೆಹಲಿಯ ಮುಖ್ಯ ಮಂತ್ರಿಣಿ ಶೀಲಾ ದೀಕ್ಷಿತ್ ಇವರೆಲ್ಲ ರೇವ ಕಾರು ಬಳಸುವವರೇ. ಸರಕಾರಿ ಖರೀದಿಗೆ ಕೇಂದ್ರದ ಅಸಂಪ್ರದಾಯಿಕ ಇಂದನ ಖಾತೆ ಸಹಾಯ ಮಾಡುತ್ತದೆ. ಕೆಲವು ರಾಜ್ಯ ಸರಕಾರಗಳು ಚಿಲ್ಲರೆ ರಿಯಾಯತಿ ತೋರಿಸುತ್ತವೆ. ಸರಕಾರ ಮಾರುತಿ ಕಾರಿಗೆ,  ಟಾಟ ನ್ಯಾನೊವಿಗೆ ಕೊಟ್ಟ ಬೆಂಬಲದ ಸಣ್ಣ ಪಾಲು ಈ ವಾಹನಕ್ಕೆ ಕೊಟ್ಟರೆ ನಮ್ಮಲ್ಲಿ ಸಾವಿರಾರು   ವಾಹನಗಳು    ಮಾರಾಟವಾಗುತಿತ್ತು. ಇಂದಿಗೂ ಬೆಂಗಳೂರಿನಲ್ಲಿ ತಯಾರಾಗುವ ರೇವ ಕಾರಿಗೆ ಅತ್ಯದಿಕ ಬೆಂಬಲ ದೊರಕುತ್ತಿವುದು   ಯುರೋಪಿನಲ್ಲಿ. ಅಲ್ಲಿ   ಈ  ಬೆಂಬಲ ವಾರದಿಂದ ವಾರಕ್ಕೆ ಎಂಬಂತೆ ಹೆಚ್ಚುತ್ತಿದಯಂತೆ. ಮೇಲಿನ  ಎರಡೂ ಚಿತ್ರಗಳಲ್ಲಿ  ಕಾಣಿಸುವ  ಕಾರು  ಬೆಂಗಳೂರಿನಲ್ಲಿ ತಯಾರಾಗುವ ರೇವ.  ಇಂಗ್ಲೇಂಡಿನಲ್ಲಿ  G-Wiz ಅನ್ನುವ  ಹೆಸರಿನಲ್ಲಿ  ಮಾರುತ್ತಾರೆ. 

ಹತ್ತು ವರ್ಷ ಹಿಂದೆ ವರುಷಕ್ಕೆ ನಲುವತ್ತು ಸಾವಿರ ವಿದ್ಯುತ್ ಸ್ಕೂಟರ್ ಮಾರಿದ ಚೀನದಲ್ಲಿ ಕಳೆದ ವರ್ಷ ಮಾರಾಟವಾದ ಸ್ಕೂಟರ್ ಗಳ ಸಂಖ್ಯೆ ಒಂದೂವರೆ ಕೋಟಿ ಮೀರಿತ್ತು. ನಮ್ಮಲ್ಲೂ ಈಗ ಹೆಚ್ಚೇನು ಸರಕಾರದ ಬೆಂಬಲವಿಲ್ಲದೆಯೇ ವಿದ್ಯುತ್ ಸ್ಕೂಟರುಗಳು        ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ.  ದೈಹಿಕ  ಸಮಸ್ಯೆಯಿಂದಾಗಿ  ನನಗೆ ದ್ವಿಚಕ್ರ ಚಲಾಯಿಸಲು  ಸಾದ್ಯವಾಗುವುದಿಲ್ಲ.

ವರ್ಷಕ್ಕೆ ಸುಮಾರು ಹನ್ನೆರಡು ಸಾವಿರ ಕಿಮಿ ವಾಹನ ಚಲಾಯಿಸುವ ನಾನು ಬಹಳ ಸಮಯದಿಂದ ಈ ಬಗೆಗೆ ಚಿಂತಿಸುತ್ತಿದ್ದೇನೆ. ಪ್ರಯಾಣದ    ಅರ್ಧದಷ್ಟು    ದೂರ  ವಾಹನದಲ್ಲಿ   ಒಬ್ಬನೇ ಇರುತ್ತೇನೆ. ಮಕ್ಕಳಿಬ್ಬರನ್ನು ಒಮ್ಮೊಮ್ಮೆ ಶಾಲೆಗೆ ಬಿಡುವ ಕಾರಣ ಸುಮಾರು   ನಾಲ್ಕು ಸಾವಿರ ಕಿಮಿ ಮಕ್ಕಳೂ ಸೇರಿದಂತೆ ಮೂವರ ಪ್ರಯಾಣ. ಅಂತೂ ದಿನಕ್ಕೆ ನಲುವತ್ತು   ಮೀರುವುದು   ಅಪರೂಪ. ದಿನವಿಡೀ ಮನೆಯಲ್ಲಿರುವ ಕಾರಣ ಸೌರ ವಿದ್ಯುತ್ ತುಂಬಿಸಲು ಪೂರಕವಾಗಿರುತ್ತದೆ. ಅವಶ್ಯಕತೆಗಿಂತ ಹೆಚ್ಚು ಸೌರ ವಿದ್ಯುತ್ ಕೋಶಗಳು ನನ್ನಲ್ಲಿದ್ದು ಮಲೀನತೆ ಉಂಟಾಗದೆ ಪ್ರಯಾಣ ಸಾದ್ಯವಾಗುತಿತ್ತು. ಈ ಬಗೆಗೆ  ಉತ್ತಮ ಪ್ರಯೋಗವಾಗುತಿತ್ತು.

ನಾನ್ನೊಬ್ಬ ಕೃಷಿಕ. ಆದಾಯ ತೇರಿಗೆ ಪಟ್ಟಿಯಲ್ಲಿರುವವರಿಗೆ ಸವಕಳಿ ಎಂಬ ತೇರಿಗೆ ರಿಯಾಯತಿ ಅಂಶ ಖರೀದಿಗೆ ಸಹಾಯ ಮಾಡುತ್ತದೆ. ಕೊನೆಗೂ ಲೆಕ್ಕ ಮಾಡಿದರೆ ನಾನು ಉಳಿಸುವುದು ಪರಮಾವಧಿ ಒಂದೂವರೆ ಸಾವಿರ ಯುನಿಟ್ ಅಂದರೆ ಏಳೆಂಟು ಸಾವಿರ ರೂಪಾಯಿ. ಅದಕ್ಕಾಗಿ ನಾಲ್ಕು ಲಕ್ಷ ಚಿಲ್ಲರೆ ಖರ್ಚು ಮಾಡುವುದು ಬುದ್ದಿವಂತಿಕೆ ಅನಿಸದು. ಜತೆಯಲ್ಲಿ ನಾಲ್ಕನೇಯ ವರ್ಷ ಕಾರಿನಲ್ಲಿರುವ ವಿದ್ಯುತ್ ಕೋಶ ಬದಲಾಯಿಸಬೇಕಾಗ ಬಹುದು. ನನ್ನ ಇ ಪತ್ರಕ್ಕೆ ದೂರವಾಣಿ ಸಂಬಾಷಣೆಗೆ ಈ ಕಂಪೇನಿಯಿಂದ ಸಕಾರಾತ್ಮಕವಾದ ಉತ್ತರವೂ ನನಗೆ ಲಬಿಸಿರಲಿಲ್ಲ.

ಸೌರ ವಿದ್ಯುತ್ ಲಾಭ ಎನ್ನುವಂತಿಲ್ಲ.   ಇಲ್ಲೊಂದು  ಸ್ವಂತ   ಅನುಭವ. ನಾನು ಮೂರು ವರ್ಷ ಹಿಂದೆ ಮನೆಯ ಉಪಯೋಗಕ್ಕಾಗಿ ವಿದ್ಯುತ್ ಕೋಶಗಳು ಹಾಗೂ ವ್ಯವಸ್ಥೆಗಾಗಿ ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿದೆ. ಈಗ ವಿದ್ಯುತ್ ಬಿಲ್ಲಿನಲ್ಲಿ ತಿಂಗಳಿಗೆ ನಾಲ್ಕು ನೂರರಿಂದ ಐನೂರು ರೂಪಾಯಿ ವರೆಗೆ ಉಳಿತಾಯ. ದಿನವಿಡೀ ವಿದ್ಯುತ್  ಇಲ್ಲವಾದರೂ  ನಮಗೆ  ಸಮಸ್ಯೆಯಾಗುವುದಿಲ್ಲ  ಎನ್ನುವುದು  ಗುಣಾತ್ಮಕ ವಿಚಾರ. ಈ  ವಾಕ್ಯ  ಕುಟ್ಟುವಾಗಲೂ  ವಿದ್ಯುತ್ ಕಡಿತವಿರುವ  ಕಾರಣ ಸೂರ್ಯದೇವನಿಗೆ  ನಮೋ ನಮಹ.  ಈ ಮೂವತ್ತು ಸಾವಿರ ತುಂಬಲು ಐದು ವರ್ಷ ಬೇಕು. ಅಷ್ಟರೊಳಗೆ ನನ್ನ ವಿದ್ಯುತ್ ಕೋಶಗಳ ಹೆಚ್ಚಿನ ಆಯುಷ್ಯ ಮುಗಿದಿರುತ್ತದೆ.  ಪುನಹ ಮೂವತ್ತು ಸಾವಿರ.......

ಯಾರಲ್ಲೂ  ಸೌರ  ಫಲಕಗಳೂಗಳೂ  ವಿದ್ಯುತ್ ಕಾರು  ಎರಡೂ  ಇದ್ದಂತಿಲ್ಲ.  ಇರುವುದಾದರೆ  ಈ ಪರ್ಯಾಯದ  ಮೌಲ್ಯಮಾಪನೆ  ಸಾದ್ಯವಾಗುತಿತ್ತು.  ಹೊಸ ರೇವಾ  ಕಾರು  ಖರೀದಿಸುವ  ಚೈತನ್ಯ  ನನಗಿಲ್ಲವಾದುದರಿಂದ  ಸದ್ಯಕ್ಕೆ ವಿದ್ಯುತ್ ಕಾರಿನ ಬಗೆಗೆ ಕನಸು ಕಾಣುವುದೊಂದೇ ನನಗಿರುವ ದಾರಿ.

Sunday, March 29, 2009

ನಾವೂ ವಿದ್ಯುದ್ದೀಪಗಳ ಆರಿಸಿದೆವು.

ನಿನ್ನೆ ರಾತ್ರಿ ನಾವೂ ಒಂದು ಘಂಟೆ ಸರಕಾರಿ ವಿದ್ಯುತ್ ಜಾಲದಿಂದ ಸಂಪರ್ಕ ಕಡಿದುಕೊಂಡೆವು. ಕತ್ತಲಿನಲ್ಲಿ ಕೂರಲಿಲ್ಲ. ಮೇಣದ ಬತ್ತಿ ಉರಿಸಲೂ ಇಲ್ಲ. ಸೌರ ದೀಪಗಳ ಉರಿಸಿದೆವು.

ದೀಪ ಆರಿಸಿ ಲಕ್ಷಾಂತರ ಮೇಣದ ಬತ್ತಿ ಉರಿಸಿದರೂ ವಾತಾವರಣ ಮಲೀನತೆ ಉಂಟಾಗುತ್ತದೆ. ನಮ್ಮಲ್ಲಿ ವಿದ್ಯುತ್ ತಯಾರಿ ಹಿಂದಿರುವ ಮಲೀನತೆ ಬಗೆಗೆ ಖಚಿತವಾದ ಮಾಹಿತಿ ಲಬ್ಯವಾಗದಿದ್ದರೂ ಮೇಣದಬತ್ತಿಯಿಂದ ಸಿಎಫ್ಎಲ್ ಬಳಕೆ ಉತ್ತಮ ಎನಿಸುತ್ತದೆ.

ಅತಿ ಹೆಚ್ಚು ವಿದ್ಯುತ್ ಬೇಡಿಕೆ ಇರುವ ಸಂಜೆ ಏಳರಿಂದ ಒಂಬತ್ತರ ವರೆಗೆ ದಿನವೂ ನನಗೆ ಜಾಲದಿಂದ ಸಂಪರ್ಕ ಕಡಿದುಕೊಳ್ಳುವ ಆಸೆ. ರಾತ್ರಿ ವಿದ್ಯುತ್ ಖಾತರಿ ಪೊರೈಕೆ ಇದ್ದರೆ ಖಂಡಿತ ಮಾಡುತ್ತೇನೆ. ತಾಂತ್ರಿಕ ವೈಫಲ್ಯಗಳಾದರೆ ಗ್ರಾಮೀಣ ಫೀಡರ್ ಗಳನ್ನು ರಾತ್ರಿ ಸರಿಪಡಿಸುವುದಿಲ್ಲ. ಮರುದಿನ ಬೆಳಗ್ಗೆ ಏಳಕ್ಕೆ ವಿದ್ಯುತ್ ಪೊರೈಕೆ. ಹಾಗಾಗಿ ಇರುವ ದಾಸ್ತಾನು ಹೆಚ್ಚಿನ ಬಾಗ ಖಾಲಿ ಮಾಡಿಕೊಳ್ಳುವುದು ಮೂರ್ಖತನ ಎನಿಸುತ್ತದೆ. ಹಾಗೆ ರಾತ್ರಿಯಿಡೀ ವಿದ್ಯುತ್ ಪೊರೈಕೆ ಇದ್ದರೆ ನನಗೆ ಶೇಖರಿಸಿಟ್ಟ ವಿದ್ಯುತ್ ವ್ಯರ್ಥವಾಯಿತಲ್ಲ ಎನ್ನುವ ಬಾವನೆ ದಿನವೂ ಬೆಳಗ್ಗೆ ಆವರಿಸಿಕೊಳ್ಳುತ್ತದೆ.

ಹಗಲು ನಮಗೆ ವಿದ್ಯುತ್ ಕೊರತೆ ಬಾದಿಸುವುದೇ ಇಲ್ಲ. ದಿನಕ್ಕೆ ಆರು ಘಂಟೆಯ ಕಡಿತ ನಮಗೆ ಯಾವುದೇ ಪರಿಣಾಮ ಬೀಳುವುದಿಲ್ಲ. ಈಗ ಇದನ್ನು ನಾನು ಕುಟ್ಟುತ್ತಿರುವುದೂ ಸೂರ್ಯದೇವನ ಕೃಪೆಯಿಂದ. ನಮಗೆ ವಿದ್ಯುತ್ ಮದ್ಯಾಹ್ನದ ನಂತರ.
ನಮ್ಮಲ್ಲಿ ಕೆಲವರು ಉಪವಾಸ ಮಾಡುತ್ತಾರೆ. ಅಂದು ಅನ್ನ ಊಟಮಾಡುವುದು ನಿಶಿದ್ದ. ಇತರ ನಿರ್ಬಂಧ ಇಲ್ಲದ ಕಾರಣ ಗೋದಿ ಇತ್ಯಾದಿಗಳಿಂದ ತಯಾರಿಸಿದ ತಿಂಡಿತಿನಿಸುಗಳನ್ನು ಹಣ್ಣು ಹಂಪಲುಗಳನ್ನು ಹೆಚ್ಚಾಗಿಯೇ ಬಕ್ಷಿಸುತ್ತಾರೆ. ದೀಪ ಆರಿಸುವ ಬಗೆಯೂ ಹೀಗಾದರೆ ಮೊಂಬತ್ತಿ ಉಪಯೋಗ ಹೆಚ್ಚಾದರೆ ಇದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ.

ಬರುವ  ವರ್ಷ  ಮೇಲ್ಕಾಣಿಸಿದ  ಅಸ್ಟ್ರೇಲಿಯಾದ  ಸಿಡ್ನಿ   ಪಟ್ಟಣದಂತೆ ನಮ್ಮೂರ  ಪಟ್ಟಣಗಳೂ   ದೀಪವಾರಿಸಲಿ  ಎಂದು  ಹಾರೈಸೋಣ. 43 ಲಕ್ಷ  ಜನಸಂಖ್ಯೆಯ  ಈ  ಪಟ್ಟಣದಲ್ಲಿ  ಅರ್ಧಕ್ಕೂ  ಹೆಚ್ಚು  ಜನ  ದೀಪವಾರಿಸಿದ್ದರಂತೆ.   ಜನರಲ್ಲಿ    ಅರಿವು ಮೂಡಿಸಲು   ಈ  ಆಚರಣೆ  ಸಹಾಯಕ. 

ಚಿತ್ರ ಕೃಪೆ : National Geographic Society

Wednesday, September 24, 2008

ಹೀಗೊಂದು ಸೌರ ಶಕ್ತಿ ಚಾಲಿತ ಶೀತಕ



 ಸೌರಶಾಖವನ್ನೇಕೆ   ನಮ್ಮ   ಶೀತಕ   ಅನುಸರಿಸ ಬಾರದೆನ್ನುವ ಯೋಚನೆ ನನಗೆ ಮೊದಲು ಬಂದಿತ್ತು.  ಸೀಮೆ ಎಣ್ಣೆ ದೀಪ ಉರಿಸಿ ತಂಪಾಗಿಸುವ ಪುರಾತನ ಕಾಲದ ಫ್ರಿಡ್ಜ್ ಗಳು ಬಹಳ ಹಿಂದೆ ನೋಡಿದ್ದೆ. ಸುಮಾರು ನಲುವತ್ತು ವರ್ಷ ಹಿಂದೆ ಯಂತ್ರ ಚಾಲಿತ ಫ್ರಿಡ್ಜ್ ಗಳು ಬರುವ ವರೆಗೆ ಅವುಗಳು ಜನಪ್ರಿಯವಾಗಿದ್ದವು. ಕ್ರಮೇಣ ಅವುಗಳ ತಯಾರಿ ನಿಂತು ಅವುಗಳೆಲ್ಲ ಮೂಲೆ ಪಾಲಾದವು.

ಇದರ  ತಂತ್ರಜ್ನಾನ   ಹೊಸತಲ್ಲ.  ಇಂದಿನ    ಫ್ರಿಡ್ಜುಗಳು  ತುಂಬಾ  ವಿದ್ಯುತ್  ಅಪೇಕ್ಷಿಸುವ  ಯಂತ್ರಾವಲಂಬಿಯಾಗಿದೆ.  ಯಂತ್ರದ  ಮೂಲಕ  ಒತ್ತಡ  ಹೆಚ್ಚಿಸುವ  ಬದಲಿಗೆ  ಶಾಖ ಮೂಲಕ  ಹೆಚ್ಚಿಸುವ  ಕ್ರಿಯೆ  ಸರಳ.   ನೂರು  ವರ್ಷ ಹಿಂದೆ  ಅಗ್ಗದ  ಪೆಟ್ರೋಲ್   ವಿದ್ಯುತ್  ವಾಹನ  ಅವಿಶ್ಕಾರ  ತಡೆಗಟ್ಟಿದಂತೆ  ನಲುವತ್ತು  ವರ್ಷ    ಹಿಂದೆ  ಅಗ್ಗದ  ವಿದ್ಯುತ್  ಈ  ಸರಳ  ಶೀತಕಗಳನ್ನು  ಮಾರುಕಟ್ಟೆಯಿಂದ  ಓಡಿಸಿತು  ಅನ್ನಬಹುದು. 

ಇತ್ತೀಚೆಗೆ    ಅಮೇರಿಕದ ಸಾನ್ ಜೋಸ್ ವಿಶ್ವವಿದ್ಯಾಲಯದ ಚುರುಕು ಮೆದುಳುಗಳೆಲ್ಲ ಸೇರಿ ಇಂತಹ ಸೂರ್ಯನ ಶಾಖ ಬಳಸಿ ಮಂಜುಗಡ್ಡೆ ತಯಾರಿಸುವ ಯಂತ್ರ ರೂಪಿಸುವುದರಲ್ಲಿ ಸಫಲರಾಗಿದ್ದಾರೆ. ಯಾವುದೇ ಚಲಿಸುವ ಬಾಗಗಳಿಲ್ಲದ ಅದು ಬರೇ ಒಂದು ರಸಾಯನಿಕ ಕ್ರಿಯೆಯಲ್ಲಿ ಮಂಜುಗಡ್ಡೆ ಉತ್ಪಾದನೆ ಮಾಡುತ್ತದೆ.

ಉಬ್ಬಿನ ಪ್ರತಿಫಲಿಸುವ ಹಲಗೆಯನ್ನು ಉಪಯೋಗಿಸಿ ಬೆಳಕು ಮತ್ತು ಶಾಖವನ್ನು ಕೊಳವೆ ಮೇಲೆ ಕೇಂದ್ರೀಕರಿಸುವುದರಿಂದ ಇದರಲ್ಲಿ ತುಂಬಿಸಿರುವ ದ್ರಾವಣ ಅನಿಲ ರೂಪಕ್ಕೆ ಪರಿವರ್ತನೆಯಾಗುತ್ತದೆ. ಸೂರ್ಯ ಮುಳುಗಿದ ನಂತರ ಒತ್ತಡದ ವ್ಯತ್ಯಾಸದಿಂದಾಗಿ ಈ ಅನಿಲ ರೂಪ ವಿಪರೀತ ಶಾಖವನ್ನು ಕಳಕೊಳ್ಳುವ ಮೂಲಕ ತಣ್ಣಗಾಗಿಸಿ ಇದರಲ್ಲಿ ಸುಮಾರು ಆರು  ಕಿಲೊ ಐಸ್ ತಯಾರಾಗುತ್ತದೆ. ಈ ದ್ರವ  ತಣ್ಣಗಾಗುವಾಗ   ೧೦೪  ಡಿಗ್ರಿ ಫಾರಿನ್ ಹೀಟ್ ಅಂದರೆ ಸುಮಾರು ೪೦ ಡಿಗ್ರಿ ಸೆಂಟಿಗ್ರೇಡ್ ದಾಟಿದ ನಂತರ  ವೇಗವಾಗಿ ಶಾಖವನ್ನು ಕಳಕೊಳ್ಳುವ ಕಾರಣ ಇದು ಉಷ್ಣವಲಯದಲ್ಲೂ ಕೆಲಸ ಮಾಡಲು ಸಾದ್ಯ. ಯಾವುದೇ ಚಲಿಸುವ ಬಾಗಗಳಿಲ್ಲದ ಕಾರಣ ಹಾಳಾಗುವ ಸಾದ್ಯತೆಗಳು ಅತ್ಯಲ್ಪ.   ಪೈಪು ತೂತಾಗದಂತೆ ನೋಡಿಕೊಂಡರೆ ಸೈ.


ಮನೆಯಲ್ಲಿ ಆಹಾರ ಪದಾರ್ಥಗಳ ಮತ್ತು ವೈದ್ಯಕೀಯ ಲಸಿಕೆಗಳ ಮದ್ದುಗಳ ಬಹುಕಾಲ ಇಟ್ಟುಕೊಳ್ಳಲು ಇದು ಸಹಾಯ ಆಗಬಹುದು. ವಿದ್ಯುತ್ ಶಕ್ತಿ ಲಬ್ಯವಾಗದ ಸ್ಥಳಗಳಲ್ಲೂ ಇದು ಚೆನ್ನಾಗಿ ಕೆಲಸ ಮಾಡಬಲ್ಲದು. ನಮ್ಮಲ್ಲಿರುವಂತೆ ದಿನಕ್ಕೆ ಎಂಟು ಘಂಟೆ ವಿದ್ಯುತ್ ಕಡಿತ ಇರುವಲ್ಲಿಗೂ   ಬಹಳ   ಉಪಯುಕ್ತ.    ವಿಪರ್ಯಾಸ ಎಂದರೆ ನಮ್ಮಂತೆ ಹಳ್ಳಿಗರ ಮನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವುದು ಶೀತಕವೇ.   ಇದಿಲ್ಲವಾದರೆ  ನಾವು  ಮನೆ ಬಳಕೆ    ವಿದ್ಯುತ್  ಮಟ್ಟಿಗೆ   ಸ್ವಾವಲಂಬಿಗಳು.

Sunday, June 15, 2008

ಸೌರ ವಿದ್ಯುತ್ ಅವಕಾಶಗಳು



ಹಿಮ್ಮೊಗ ಹರಿದೀತೆ ವಿದ್ಯುತ್ ? ಎನ್ನುವ ಆಲೋಚನೆ ತುಂಬಾ ಕುತೊಹಲದಾಯಕ. ಶ್ರಿ ನಾಗೇಶ ಹೆಗಡೆಯವರ ಅಡಿಕೆ ಫತ್ರಿಕೆ ಮೆ 2008 ಅಂಕಣ ಒದುತ್ತಾ ಕುಳಿತಿದ್ದೆ. ಮೇಲ್ನೋಟಕ್ಕೆ ಅಸಾದ್ಯ ಎನ್ನುವ ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.


ಹಿಂದೊಮ್ಮೆ ಸೈಕಲಿನೊಂದಿಗೆ ಪ್ರಪಂಚಕ್ಕೊಂದು ಸುತ್ತು ಬಂದಿರುವ ನನಗೆ ಈ ವಿಚಾರಗಳಲ್ಲಿ ಬಹಳ ಆಸಕ್ತಿ. ಸೌದೆಯಿಂದ ಅನಿಲ (wood gasifier ) ಪಡೆದು ಅದರಿಂದ ಪಂಪ್ ಚಾಲೂ ಮಾಡಿದ್ದೆ. ಕಳೆದ ಆರು ವರುಷಗಳಿಂದ ಅಸಂಪ್ರದಾಯಕ ಶಕ್ತಿ ಮೂಲಗಳಲ್ಲಿ ಒಂದಾದ ಸೌರ ವಿದ್ಯುತ್ ಬಗೆಗೆ ನನ್ನ ಪ್ರಯತ್ನಗಳು ಸಾಗುತ್ತಾ ಬಂದಿದೆ. ಇದೊಂದು ಪೂರ್ವ ಉದಾಹರಣೆಗಳು ದೊರಕದ ಸವೆಯದ ಹಾದಿಯಲ್ಲಿ ಒಬ್ಬಂಟಿ ಪಯಣ. ಅದುದರಿಂದ ನನ್ನ ಅನುಭವ ಅನಿಸಿಕೆ ಎರಡನ್ನೂ ಹಂಚಿಕೊಳ್ಳುತ್ತೇನೆ.



ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.



ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.



ಸೌರ ಫಲಕಗಳು ಸಿಕ್ಕ ಕೂಡಲೇ ಪಂಪಿನ ಜತೆ ರಾತ್ರಿ ಉರಿಸಲು ಕೆಲವು ಸೌರ ದೀಪಗಳನ್ನೂ ವಿಧ್ಯುತ್ ಕಡಿತದ ಸಮಯದಲ್ಲಿ ಮನೆಯಾಕೆಗೆ ಅಕ್ಕಿ ಅರೆಯಲು, ಮಕ್ಕಳಿಗೆ ಸಚಿನ್ ಚೆಂಡು ಬಾರಿಸುವುದರ ನೋಡಲು ಮತ್ತು ನನ್ನ ಗಣಕಯಂತ್ರ ಉಪಯೋಗಿಸುವಂತೆ ವ್ಯವಸ್ಥೆ ಮಾಡಿಕೊಂಡೆ. ಹಗಲು ಶಕ್ತಿಯ ಒಳಹರಿವಿಂದಾಗಿ inverter ಸಹಾ ಹೆಚ್ಚು ಕಾಲ ಉಪಯೋಗಿಸಲು ಸಾದ್ಯವಾಯಿತು. ಇಷ್ಟಾದ ನಂತರ ವ್ಯರ್ಥವಾಗುತ್ತಿರುವ ಉಳಿಕೆ ವಿದ್ಯುತ್ ಬಗೆಗೆ ನನ್ನ ಗಮನ ಹರಿಯಿತು. ನನ್ನ ಫಲಕದಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ತಿನ ಸಂಪೂರ್ಣ ಬಳಕೆ ಕನ್ನಡಿಯೊಳಗಿನ ಗಂಟು ಎಂಬ ವಿಚಾರ ಕ್ರಮೇಣ ಅರಿವಾಯಿತು.





ಯುರೋಪ್ ಅಮೇರಿಕದಲ್ಲಿರುವಂತೆ ಇಲ್ಲೂ ಬಿಸಿಲು ಇರುವಾಗ ಹೆಚ್ಚಿನ ವಿದ್ಯುತ್ ಜಾಲಕ್ಕೆ ಹಾಯಿಸಿ ರಾತ್ರಿ ಪಡಕೊಳ್ಳುವಂತಿದ್ದರೆ ಚೆನ್ನ. ಹಾಗೆ ಸಾದ್ಯವಾದರೆ ಮನೆಯಲ್ಲಿ ಉಳಿದ ಹೆಚ್ಚುವರಿ ಹಾಲು ನಾವು ಹಾಲಿನ ಸೊಸೈಟಿಗೆ ಹಾಕುವಂತೆ ಸರಳ ವ್ಯವಹಾರ. ನಮಗೆ ಬಾಟರಿಗಳಲ್ಲಿ ಶೇಖರಿಸುವ ಹಾಗೂ ಪರಿವರ್ತಿಸುವ ಉಪಕರಣಗಳು ಮುಂತಾದ ಅನಗತ್ಯ ದುಬಾರಿ ಖರ್ಚುಗಳು ತಪ್ಪುತ್ತದೆ ಹಾಗೂ ಲಬ್ಯವಿದ್ದರೂ ಅವುಗಳ ಗುಣಮಟ್ಟ ತೃಪ್ತಿದಾಯಕ ಎನ್ನುವಂತಿಲ್ಲ. ಆದರೆ ಜಾಲಕ್ಕೆ ವಿದ್ಯುತ್ ಹಾಯಿಸಲು ಎರಡು ಅಡಚಣೆಗಳು ನಮ್ಮ ಮುಂದಿವೆ.



ಅಪಾಯಕಾರಿ ಸನ್ನಿವೇಶಗಳ ತಪ್ಪಿಸಲು ಎನ್ನುವ ಕಾರಣಕ್ಕೆ ಜಾಲಕ್ಕೆ ವಿದ್ಯುತ್ ಹಾಯಿಸಬೇಕಾದರೆ ಯಾವಾಗಲು ವಿದ್ಯುತ್ ಇರಲೇಬೇಕು ಎಂಬುದು ಸ್ಪಷ್ಟ. ರಿಪೇರಿಗೆಂದು ನಿಲುಗಡೆ ಮಾಡಿದಾಗ ನಾವು ವಿದ್ಯುತ್ ಹಾಯಿಸಿದರೆ ಕೆಲಸಗಾರರ ಜೀವಕ್ಕೆ ಅಪಾಯ. ಆದರೆ ನಮ್ಮಲ್ಲಿ ಸೆಕೆಗಾಲದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಸೌರಫಲಕದಲ್ಲಿ ಉತ್ಪನ್ನ ಎರಡೂ ಅದಿಕವಾಗಿರುವಾಗ ಹಳ್ಳಿ ಕಡೆ ವಿದ್ಯುತ್ ಕಡಿತ ಇರುತ್ತದೆ ಎನ್ನುವ ವಿಚಾರ ಜಾಲಕ್ಕೆ ನಮ್ಮಿಂದ ವಿದ್ಯುತ್ ಹಾಯಿಸುವುದು ಅಸಾದ್ಯವಾಗಿಸುತ್ತದೆ. . ನಾವು ಜಾಲಕ್ಕೆ ಹುಯ್ಯುವ ವಿದ್ಯುತ್ತಿನ ಪ್ರಮಾಣ ಜಾಲದ ಮಟ್ಟಿಗೆ ಅತ್ಯಲ್ಪ. ಅದುದರಿಂದ ಅದಕ್ಕಾಗಿ ಜಾಲದಲ್ಲಿ ವಿದ್ಯುತ್ ಹಾಯಿಸಿ ಎಂದು ಕೇಳಲು ಸಾದ್ಯವಿಲ್ಲ.



ಎರಡನೆಯ ಸಿಮಿತಗೊಳಿಸುವ ವಿಚಾರ ಎಂದರೆ ನಾವು ಕಳುಹಿಸುವ ವಿದ್ಯುತ್ ಶಕ್ತಿಯ ತರಂಗಗಳು ಜಾಲದ ತರಂಗಗಳಿಗೆ ಹೊಂದಾಣಿಕೆಯಾಗ ಬೇಕು. ಅಲ್ಲಿ phase difference ಇರಲೇಬಾರದು. ಇದರ ತಾಂತ್ರಿಕತೆಯ ಬಗೆಗೆ ಇನ್ನೂ ನನಗೆ ಖಚಿತ ಮಾಹಿತಿ ಲಬ್ಯವಿಲ್ಲ. ಪಶ್ಚಿಮದ ದೇಶಗಳಲ್ಲಿ ಇವು ಮಿತ ದರದಲ್ಲಿ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.



ಜರ್ಮನಿಯಲ್ಲಿ 1999ರಲ್ಲಿ ತಂದ ಕಾನೂನು ತಿದ್ದುಪಡಿ ಜಾಲಕ್ಕೆ ವಿದ್ಯುತ್ ಹಾಯಿಸುವುದಕ್ಕೆ ಸುಗಮವಾಗಿಸಿ ಇಂದು ಅಲ್ಲಿ ಎಲ್ಲೆಡೆ ವಿದ್ಯುತ್ ಮಟ್ಟಿಗೆ ಸ್ವಾವಲಂಬಿಗಳನ್ನು ಕಾಣಬಹುದು. ಇಂದು ಈ ಕೈಗಾರಿಕೆ ದೇಶದಲ್ಲಿ 2 ಲಕ್ಷ ಜನಕ್ಕೆ ಉದ್ಯೋಗ ಕಲ್ಪಿಸಿರುವುದು ಮಾತ್ರವಲ್ಲ ಒಟ್ಟು ದೇಶದ ವಿದ್ಯುತ್ ಉತ್ಪಾದನೆಯ ಶೇಕಡಾ ಹನ್ನೆರಡರಷ್ಟು ಹೀಗೆ ಜನಸಾಮಾನ್ಯರ ಸೌರ ಫಲಕಗಳು ಹಾಗೂ ಗಾಳಿ ಯಂತ್ರಗಳಿಂದಲೇ ತಯಾರಾಗುತ್ತಿದೆ. ಜಗತ್ತಿನ ಸೌರ ಹಾಗೂ ಪವನ ಶಕ್ತಿ ಉಪಕರಣಗಳ ತಯಾರಿಕೆಯಲ್ಲಿ ಶೇಕಡ 30 ರಷ್ಟು ಪಾಲು ಇಂದು ಜರ್ಮನಿ ಹೊಂದಿರುತ್ತದೆ. ಅಲ್ಲಿ ಇತರ ಮೂಲಗಳ ವಿದ್ಯುತ್ ಯುನಿಟ್ ಒಂದಕ್ಕೆ ರೂಪಾಯಿ 3 ಕ್ಕೆ ಜಾಲ ಪಡಕೊಂಡರೆ ಸೌರ ಹಾಗೂ ಪವನ ಶಕ್ತಿ ಮೂಲದ ವಿದ್ಯುತ್ತಿಗೆ ಈಗ ರೂಪಾಯಿ 6 ರಷ್ಟು ಬೆಂಬಲ ಬೆಲೆ ಇರುತ್ತದೆ. ಈ ಪ್ರೋತ್ಸಾಹಕ ಬೆಂಬಲ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು ಕೊನೆಗೊಮ್ಮೆ ಇತರ ವಿದ್ಯುತ್ ಮೂಲಗಳ ಜತೆ ಸ್ಪರ್ದಿಸಲು ಒತ್ತಡ ಇರುತ್ತದೆ.
ಡೆನ್ಮಾರ್ಕ್ ಶೇಕಡ 20 ರಷ್ಟು ವಿಧ್ಯುತ್ ಪವನಯಂತ್ರಗಳಿಂದ ಪಡಕೊಳ್ಳುತ್ತಿದ್ದು ಉಳಿದ ಕೊರತೆ ಬೀಳುವ ಬೇಡಿಕೆಯ ನಿರ್ವಹಣೆಗೆ ಅಕ್ಕ ಪಕ್ಕದ ದೇಶಗಳಿಂದ ಖರೀದಿಸುತ್ತದೆ. 1986 ಜೂನ್ ತಿಂಗಳಲ್ಲಿ ಒಂದು ರಾತ್ರಿಯ ಮಟ್ಟಿಗೆ ಸಮುದ್ರ ತೀರದಲ್ಲಿರುವ ಗಾಳಿಯಂತ್ರದಿಂದ ವಿದ್ಯುತ್ ತಯಾರಿಸುವ ಒಬ್ಬರು ರೈತರ ಅತಿಥಿಯಾಗಿದ್ದೆ. ಇಲ್ಲಿ ಪವನ ಶಕ್ತಿ ಕ್ಷೇತ್ರದಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಸಹಕಾರ ಸಂಸ್ಥೆಗಳು ಸಕ್ರಿಯವಾಗಿದ್ದು ಇಲ್ಲಿನ ಶೇಕಡ 85 ಜನಸಂಖ್ಯೆ ಅಂದರೆ ಒಂದೂವರೆ ಲಕ್ಷ ಕುಟುಂಬಗಳು ಸ್ವಂತ ಅಥವಾ ಪರೋಕ್ಷವಾಗಿ ಸಹಕಾರಿ ಸಂಸ್ಥೆಗಳ ಮೂಲಕ ಪವನಯಂತ್ರಗಳ ಹೊಂದಿದವರಾಗಿರುತ್ತಾರೆ. ಇಂದು ನಮ್ಮಲ್ಲೂ ಪ್ರಯತ್ನ ಪಟ್ಟರೆ ಈ ಮಾದರಿಗಳು ಸಾದ್ಯವೆಂದು ಹೇಳಬಹುದು.



ಅಮೇರಿಕದ ಕಾಲಿಪೋರ್ನಿಯದಲ್ಲಿ ಒಂದು ಸೌರಫಲಕಗಳ ಅಳವಡಿಸುವ ಸಂಸ್ಥೆ ನೀವು ದೂರವಾಣಿಯಲ್ಲಿ ಸೂಚನೆ ಕೊಟ್ಟ ಕ್ಷಣದಲ್ಲಿ ಕಾರ್ಯಮುಖವಾಗುತ್ತದೆ. ನಿಮ್ಮ ಮನೆಯ ಛಾವಣಿಯ ಗೂಗಲ್ ಉಪಗ್ರಹ ಚಿತ್ರವನ್ನು ನೋಡಿ ಅಲ್ಲಿ ಯಾವ ರೀತಿ ಮತ್ತು ಎಷ್ಟು ಫಲಕಗಳ ಅಳವಡಿಸಬಹುದೆಂಬ ಸ್ಪಷ್ಟ ಯೋಜನೆ ಅವರ ಕಛೇರಿಯಲ್ಲೇ ತಯಾರಾಗುತ್ತದೆ. ಅವರು ಸಂಪೂರ್ಣ ಮಾಹಿತಿಯೊಂದಿಗೆ ಬಂದು ನಿಮ್ಮೊಂದಿಗೆ ಸಂವಾದಕ್ಕೆ ಕೂರುತ್ತಾರೆ. ನಿಮ್ಮ ಸಂಶಯಗಳನ್ನೆಲ್ಲ ಪರಿಹರಿಸುತ್ತಾರೆ. ದೊಡ್ಡ ವ್ಯವಸ್ಥೆಯಾದರೆ ದೈನಿಂದಿನ ನಿರ್ವಹಣೆಯಲ್ಲೂ ಸಹಾಯ ಮಾಡುತ್ತಾರೆ. ಹೀಗೆ ಅಲ್ಲಿ ಇದೊಂದು ಬೆಳೆಯುತ್ತಿರುವ ಉದ್ಯಮ.



ನಮ್ಮ ಸರಕಾರ ನಮ್ಮಲ್ಲಿ ತಯಾರಾಗುವ ಆದರೆ ಹಿಡಿದಿರಿಸಿಕೊಳ್ಳಲು ಸಾದ್ಯವಾಗದೆ ನಷ್ಟವಾಗುವ ವಿದ್ಯುತ್ ಪಡಕೊಳ್ಳುವ ಕಾಲ ಇನ್ನೂ ಬಂದಿಲ್ಲ. ಹಾಗಾಗಿ ನಮ್ಮ ಮುಂದಿರುವ ಇತರ ಅವಕಾಶಗಳ ಪರಿಶೀಲನೆ ಮಾಡೋಣ.



ಪಂಪು 48 V ಅಪೇಕ್ಷಿಸಿದರೆ ನಮ್ಮ ಮಾಮೂಲಿ ಉಪಕರಣಗಳೆಲ್ಲವೂ 12 V ನವು. ನಮ್ಮಲ್ಲಿ 48V ಹಾಗೆಯೇ ಬಳಸಿದರೆ ಉಪಕರಣ ದುಬಾರಿ ಮತ್ತು ಎಲ್ಲ ಫಲಕವನ್ನು 12V ಕ್ಕೆ ಪರಿವರ್ತಿಸಿದರೆ ಬೆರಳ ಗಾತ್ರದ ದುಬಾರಿ ಸರಿಗೆಯಲ್ಲಿ ಹಾಯಿಸುವುದು ಅನಿವಾರ್ಯ ಎನ್ನುವ ದ್ವಂದ್ವಕ್ಕೆ ಒಳಗಾದೆ. ಹೀಗೆ ಒಮ್ಮೆ ಹೆಚ್ಚಿನ ಬಳಕೆಗೆ ಸಹಾಯವಾಗಲು ಒಂದು 48V invertor ಸಹಾ ಪಡಕೊಂಡೆ. ಅದು ಆನೆ ಗಾತ್ರದ ಕಾರಿನಲ್ಲಿ ಕೊತ್ತಂಬರಿ ಸೊಪ್ಪು ತರಲು ಹೋದದ್ದು ಎನ್ನುವಂತಾಯಿತು. ಕಡಿಮೆ ವಿದ್ಯುತ್ ಬಳಸುವ ಸಮಯದಲ್ಲಿ ಶಕ್ತಿಯ ಬಹು ಅಂಶ ಅದುವೇ ಕಬಳಿಸುತ್ತದೆ ಹಾಗೂ ನನ್ನ ಉಪಯೋಗಕ್ಕೆ ಸಿಗುವುದು ಕಡಿಮೆ ಎನ್ನುವ ವಿಚಾರ ಕ್ರಮೇಣ ಅನುಭವಕ್ಕೆ ಬಂತು. ಹಗಲ ಉಪಯೋಗಕ್ಕಿಂತ ರಾತ್ರಿ ನಾನು ಬಾಟರಿಯಲ್ಲಿ ತುಂಬಿಸಿಟ್ಟ ವಿದ್ಯುತ್ ಉಪಯೋಗದಲ್ಲಿ ಜಾಗ್ರತೆ ವಹಿಸಲೇ ಬೇಕು.



ನಮಗೆ ಬೇಕಾದಷ್ಟು ಶಕ್ತಿಯನ್ನು ಬಳಸಲು ಅನುಕೂಲವಾಗಲೆಂದು 12 ಯಾ 48 volt ಲಬ್ಯವಾಗುವಂತೆ dipole relay ಗಳನ್ನು ಸೌರ ಫಲಕದಲ್ಲಿ ಗೆಳೆಯ ಅಶೋಕ ಅಳವಡಿಸಿದ. ಸುಮಾರು ಒಂದು ವರುಷ ಅವುಗಳು ಶಕ್ತಿ ಪೊರೈಕೆ ವಿಚಾರ ಚೆನ್ನಾಗಿ ಕೆಲಸ ಮಾಡಿದವು ಅನಂತರ ಅವುಗಳ contacts ಸುಟ್ಟು ಹೋದಂತಾಗಿ ಕ್ಷಮತೆ ಕಳಕೊಂಡವು. ಅದುದರಿಂದ ನಾನು ಅವುಗಳನ್ನು ಕಳಚುವುದು ಅನಿವಾರ್ಯವಾಯಿತು.



ಸೌರ ಫಲಕಗಳಿಂದ ಬರುವ ವಿದ್ಯುತ್ ಶಕ್ತಿಯ ನಿಯಂತ್ರಣ ಬಹಳ ಅಗತ್ಯ. ತಯಾರಿ, ದಾಸ್ತಾನು ಮತ್ತು ಬೇಡಿಕೆಗಳ ಹೊಂದಾಣಿಕೆ ನಿರ್ವಹಿಸುವ ಈ charge controllers ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇಲ್ಲವಾದರೆ ನಮ್ಮ ಬಾಟರಿ ಅತಿ ಹೆಚ್ಚು ಚಾರ್ಜ್ ಆಗಿ ಹಾಳಾಗಬಹುದು. ನಮ್ಮಲ್ಲಿ ಪುಟ್ಟ ಫಲಕಗಳಿಂದ ಬರುವ 12V ನಿಯಂತ್ರಣಕ್ಕೆ ಬೇಕಾದ ಉಪಕರಣ ಊರಲ್ಲಿಯೇ ದೊರಕುತ್ತದೆ. ಆದರೆ ಹೆಚ್ಚು ವಿಧ್ಯುತ್ (30 A) ಅಥವಾ ಹೆಚ್ಚು ವೊಲ್ಟೇಜ್ (48 V) ಎರಡಕ್ಕೂ ಮಾರಾಟಗಾರರಲ್ಲಿ ಸ್ಪಷ್ಟ ಉತ್ತರವಿಲ್ಲ. ಬೇಕಾದ ಬಿಡಿ ಬಾಗ ಲಬ್ಯವಿಲ್ಲ ಮತ್ತು ಯಾರಿಗೂ ಬಿನ್ನ ಹಾದಿಯಲ್ಲಿ ಸಾಗುವ ಆಸಕ್ತಿಯೂ ಇಲ್ಲ. ನನ್ನ ಬೇಡಿಕೆ ಮೇಲೆ ಬೆಂಗಳೂರಿನಲ್ಲಿ ತಯಾರಾದ ಒಂದು 48 V charge controller ಗುಣಮಟ್ಟ ಸಮದಾನಕರವಲ್ಲ.



ನಮ್ಮ ಉಳಿದ ಎಲ್ಲ ಉಪಕರಣಗಳ ಮಟ್ಟಿಗೆ ನಾನು ಸ್ವಾವಲಂಬಿ ಎನಿಸಿದರೂ ನಮ್ಮ ಬಾಟರಿ ಅವಲಂಬಿತ ಸೌರ ವ್ಯವಸ್ಥೆಯಲ್ಲಿ ರೆಫ್ರಿಜರೇಟರ್ ಬಳಸುವಂತಿಲ್ಲ. ಅದು ಇನ್ನೂ ಸರಕಾರಿ ವಿದ್ಯುತ್ ಉಪಯೋಗಿಸುತ್ತದೆ. ಹಗಲಿನಲ್ಲಿ ಅದೆರೆಡೆಗೆ ನಿಗಾ ವಹಿಸಿದರೆ ಸಾದ್ಯವಾದರೂ ಅದು ಪ್ರಾಯೋಗಿಕವಲ್ಲ. ಅಗಾಗಿ ನಿಂತು ನಡೆಯುವ ಈ ಯಂತ್ರ ಪ್ರಾರಂಬವಾಗುವಾಗ ಒಮ್ಮೆಗೆ ಹೆಚ್ಚು ಶಕ್ತಿಯನ್ನು ಬೇಡುವ ಕಾರಣ ಬಾಟರಿಯನ್ನು ಹಿಂಡಿದಂತಾಗಿ ಬಾಳ್ವಿಕೆ ಕಡಿಮೆಯಾಗುತ್ತದೆ.


ನಮ್ಮಲ್ಲಿ ವಿದ್ಯುತ್ ಉಳಿತಾಯದ CFL ಮತ್ತು LED ದೀಪಗಳು. ಎರಡೂ ದುಬಾರಿ ಮಾಲುಗಳು. ಒಂದು ವರ್ಷ ಖಾತರಿ ಎನ್ನುವ ಈ CFL ದೀಪಗಳ ಸರಾಸರಿ ಬಾಳ್ವಿಕೆ ಒಂದೂವರೆಯಿಂದ ಎರಡು ವರ್ಷಗಳು. ಅದುದರಿಂದ ಇವು ವಿದ್ಯುತ್ ಉಳಿಸಿದರೂ ಉಳಿಕೆ ಹಣದ ಒಂದಂಶ ಹೊಸ ದೀಪಗಳ ಖರೀದಿಗೆ ವಿನಿಯೋಗ. LED ದೀಪಗಳು ಬಹಳ ಹೆಚ್ಚು ಬಾಳ್ವಿಕೆ ಎಂದು ಹೇಳಲ್ಪಟ್ಟಿದೆ. ಇದನ್ನು ಇನ್ನೂ ಏನೂ ಹೇಳಲು ಸಾದ್ಯವಿಲ್ಲ. ಆದರೆ ಶಕ್ತಿಯ ಉಪಯೋಗ ಕನಿಷ್ಟ ಎನ್ನುವುದು ನಿರ್ವಿವಾದ. ಒಟ್ಟಿನಲ್ಲಿ ಉಳಿತಾಯದ ವಿಚಾರ ನಿರ್ಣಾಯಕವಾಗಿ ಹೇಳಲು ಕಷ್ಟ.


ನಾನು ಒಂಟಿಯಾಗಿ ಅನುಬವಿಸಿದ ವೈಫಲ್ಯಗಳ ಬಗೆಗೆ ಹಂಚಿಕೊಳ್ಳಲು ಈ ವಿಚಾರಗಳ ಬರೆದೆ. ಈ ವಿದ್ಯುತ್ ಹಿಮ್ಮೊಗ ಹರಿವು ಸಾದ್ಯತೆಗಳು ನನಗೆ ನಿಕಟ ಬವಿಷ್ಯದಲ್ಲಿ ಗೋಚರಿಸುವುದಿಲ್ಲ. ಕಾರ್ಯಗತವಾದರೆ ಸಮಾಜಕ್ಕೆ ಬಹಳ ಉಪಕಾರಿ. ಆದರೆ ನಮ್ಮ ಸರಕಾರಗಳ ಅಸ್ಪಷ್ಟ ದೋರಣೆಗಳಿಂದಾಗಿ ಯಾರೂ ಸಮಾಜಕ್ಕಾಗಿ ಹಣ ಮತ್ತು ಸಮಯ ವಿನಿಯೋಗಿಸುವುದು ಕಷ್ಟಸಾದ್ಯ.