Saturday, August 09, 2008

ಕೈದಿಗಳ ಗೂಡಿನಲ್ಲಿ ಕೂಡಿಡುವ ಅಮೇರಿಕದ ಸೇನೆ

ಹಲವಾರು ಡೈರಿ ಪಾರ್ಮ್ ಗಳನ್ನು ಯುರೋಪಿನಲ್ಲಿ ಸಂದರ್ಶಿಸಿದ ನನಗೆ ಗಂಡು ಕರುಗಳ ವಿಧಿ ಬಗ್ಗೆ ಕುತೂಹಲ. ಅವರಲ್ಲಿ ಪ್ರಶ್ನಿಸಲು ಅದನ್ನು ವಾರಕ್ಕೊಮ್ಮೆ ಬರುವ ಗಂಡುಕರು ಸಾಕುವವರಿಗೆ   ಆ  ವಾರ  ಹುಟ್ಟಿದ   ಕೊಡುತ್ತೇವೆ ಎನ್ನುವ ಉತ್ತರ ಸಿಗುತಿತ್ತು. ಕೊನೆಗೆ ನೆದರ್ ಲಾಂಡ್ ನಲ್ಲಿ ಈ ಗಂಡು ಕರುಗಳ ಉಳಿಕೆ ಜೀವನ ಕಣ್ಣಾರೆ ಕಾಣುವ ಅವಕಾಶ ದೊರಕಿತು.

ಅದು ನಿಜಕ್ಕೂ ಘೋರವಾದ ಚಿತ್ರ. ಅವುಗಳನ್ನು ಅಲುಗಾಡಲೂ ಸಾದ್ಯವಿಲ್ಲದ ಪೆಟ್ಟಿಗೆಗಳಲ್ಲಿ ಕೂಡಿಡುತ್ತಾರೆ. ಅನಾವಶ್ಯಕ ಕಾಲಾಡಿಸಿ ಕೊಬ್ಬು ಕರಗಿಸುವುದು ಬೇಡವೆಂದು ಸಾಕುವವರ ಉದ್ದೇಶ. ಕೋಳಿ ಸಾಕಣೆಯಲ್ಲೂ ಇದೇ ಚಿತ್ರ ಕಂಡರೂ ಕೋಳಿಗಳೊಂದಿಗೆ ಬಾವನಾತ್ಮಕ ಸಂಬಂದ ನಮಗೆ ಇರುವುದಿಲ್ಲ. ಕರುಗಳ ಉಳಿಕೆ ಜೀವನ ಇಂತಹ ಗೂಡಿನಲ್ಲಿ ನಿಂತುಕೊಂಡು ತಿನ್ನುವುದು ಸಗಣಿ ಹಾಕುವುದಷ್ಟೇ ಕೆಲಸ.     ಕರುಗಳ  ಕಣ್ಣಲ್ಲಿ  ಕಾಣುವ  ನೋವು, ಕೆಲವು ಕ್ಷಣ ಕೇಳಿದ  ರೋದನೆ ತಿಂಗಳುಗಟ್ಟಲೆ ಮನಸ್ಸಿನಿಂದ ಮಾಸದು.

ಇರಾಕಿನಲ್ಲಿ ಅಮೇರಿಕದ ಸೇನೆಯೂ ಕೈದಿಗಳನ್ನು ಇಂತಹ ಮೂರಡಿ ಉದ್ದ ಮೂರಡಿ ಅಗಲದ  ಹಾಗೂ   ಆರಡಿ  ಎತ್ತರದ    ಅಲುಗಾಡಲೂ ಸಾದ್ಯವಿಲ್ಲದಂತಹ ಚಿಕ್ಕ ಗೂಡಿನಲ್ಲಿ ನಿಲ್ಲಿಸುವ ಕ್ರೂರ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಸುದ್ದಿ ಬೆಳಕಿಗೆ ಬಂದ ನಂತರ ಸಂದರ್ಶನವೊಂದರಲ್ಲಿ ಅಂತಹ ಕ್ರೂರ ಸನ್ನಿವೇಷ ಎನಿಲ್ಲ, ಹೆಚ್ಚೆಂದರೆ ಒಮ್ಮೆಗೆ ಹನ್ನೆರಡು ಘಂಟೆ ನಿಲ್ಲಿಸಲಾಗುತ್ತದೆ ಹಾಗೂ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಈ ಪಂಜರಗಳ ಗಮನಿಸಲಾಗುತ್ತದೆ ಎನ್ನುವ ಸಮರ್ಥನೆ ನೀಡಲಾಗಿದೆ.

ಅಮೇರಿಕದವರೊಬ್ಬರು ಮಾಹಿತಿ ಹಕ್ಕಿನಲ್ಲಿ ಕೋರಿದ ಪ್ರಕಾರ ಸೇನೆ ಅಂತಹ ಆದರೆ ಅದಕ್ಕಿಂತ ದೊಡ್ಡ ಪೆಟ್ಟಿಗೆಗಳ ಕೆಲವು ಅಸ್ಪಷ್ಟ ಬಾವಚಿತ್ರಗಳ ಇತ್ತೀಚೆಗೆ ಕಳುಹಿಸಿಕೊಟ್ಟಿದೆ.  ಅಮೇರಿಕದ  ಈ  ಕೃತ್ಯ  ಖಂಡನೀಯ.  ಆದರೆ  ಈ  ಕೈದಿಗಳ  ಪರೀಸ್ಥಿತಿ  ಪಶ್ಚಿಮದ  ದೇಶದಲ್ಲಿ    ಜನಿಸುವ     ಗಂಡುಕರುಗಳಿಗೆ   ಬಿನ್ನವಲ್ಲ    ಅನ್ನಿಸುತ್ತದೆ.   .

Tuesday, August 05, 2008

ವಿದ್ಯುತ್ ಬಳಕೆಯ ಗಮನಿಸಲು

ನಾವು ವಾಹನಕ್ಕೆ ಮೀಟರ್ ಅಳವಡಿಸುತ್ತೇವೆ. ಪ್ರಯಾಣಿಸುವಾಗ ಆಗಾಗ ಅದರ ಮೇಲೆ ಗಮನಿಸುತ್ತೇವೆ. ವೇಗ ಹೆಚ್ಚಾಯಿತು ಎನ್ನಿಸುವಾಗ ನಿದಾನಿಸುತ್ತೇವೆ. ಪೆಟ್ರೊಲ್ ಮೈಲೇಜಿನ ಬಗೆಗೆ ಕಣ್ಣಿಡುತ್ತೇವೆ.


ಇದೇ ರೀತಿಯ ಕಾಳಜಿ ನಮ್ಮ ವಿದ್ಯುತ್ ಉಪಯೋಗದ ಬಗೆಗೆ ನಾವು ತೋರಿಸುವುದಿಲ್ಲ. ತೋರಿಸಲು ಸಾದ್ಯವಾಗುವುದೂ ಇಲ್ಲ. ವಿದ್ಯುತ್ ಅಳೆಯುವ ಹತ್ಯಾರುಗಳೂ ನಮ್ಮಲ್ಲಿ ಹುಡುಕುವುದೇ ಕಷ್ಟ.   ಬಳಕೆ ಬಗೆಗೆ ನಮಗೆ ಈಗ ಚಿತ್ರಣ ಸಿಗುವುದು ವಿದ್ಯುತ್ ಮಾಪಕ ಓದುವವರು ಬಂದು ಬಿಲ್ ಕೊಡುವಾಗಲೇ. ಬದಲಾಗಿ  ಉಪಯೋಗದ  ಬಗ್ಗೆ  ಕ್ಷಣ ಕ್ಷಣಕ್ಕೂ ಚಿತ್ರಣ ಸಿಕ್ಕರೆ ಖಂಡಿತ ಉಳಿತಾಯ ಸಾದ್ಯ.

ಈ ಮದ್ಯೆ ನಾನು ಅಮೇರಿಕದಲ್ಲಿ ಸಿಗುವ ಒಂದು ಮೀಟರ್ ಬಗ್ಗೆ ಕುಶಿ ಪಟ್ಟು ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಎರಡು ಹಂತದಲ್ಲಿ ಅಬಿವೃದ್ದಿ ಹೊಂದಿದ ಸಲಕರಣೆ ಎನ್ನಬಹುದು. ಮೊದಲಿಗೆ ನೇರವಾಗಿ ಲೈನಿಗೆ ಸಿಕ್ಕಿಸುವ ಒಂದು ಮೀಟರ್ ಬಂತು. ಅದು ಹೆಚ್ಚು ಸುದಾರಣೆಗೊಂಡ ನಮ್ಮಲ್ಲಿರುವ ಅಂಪ್ಸ್-ಮೀಟರಿಗೆ ಹೋಲಿಸಬಹುದು.

ಎರಡನೇಯ ತಲೆಮಾರಿನ ಸುದಾರಣೆಯಲ್ಲಿ  ಮೇಲಿನ ಚಿತ್ರದಲ್ಲಿರುವಂತೆ  ನಿಮ್ಮ ಮೀಟರ್ ಮೇಲೆ    ಒಂದು ಚಿಕ್ಕ ಮಾಹಿತಿ ಸಂಗ್ರಾಹಕ ಮತ್ತು ಮನೆಯಲ್ಲಿ ಅನುಕೂಲವಿರುವಲ್ಲಿ ಅಳವಡಿಸುವ ಕೆಳಗಿನ  ಚಿತ್ರದಲ್ಲಿರುವಂತಹ   ಡಿಸ್ ಪ್ಲೆ.   ಕಾರ್ಡ್ ಲೆಸ್ ಪೋನ್ ಕೆಲಸ ಮಾಡುವಂತೆ ಸಂಗ್ರಾಹಕದಿಂದ ಮಾಹಿತಿ ನಿರಂತರವಾಗಿ ಹರಿದು ಬರುತ್ತದೆ. ಇದನ್ನು ನಮಗೆ ಅನುಕೂಲವಾಗುವ ಗೋಡೆಯಲ್ಲಿ ಅಳವಡಿಸಬಹುದು, ಮೇಜಿನ ಮೇಲೆ ಇಡಬಹುದು.  ಒಮ್ಮೆ ಇದನ್ನು ನೋಡಲು ನಾವು ಆ ಕ್ಷಣ ಉಪಯೋಗಿಸುವ ವಿದ್ಯುತ್ ಘಂಟೆಗೆ ಎಷ್ಟು ಹಣವಾಗುತ್ತದೆ ಎನ್ನುವುದನ್ನೊ ಅದು ಸ್ಪಷ್ಟವಾಗಿ ತೋರಿಸುತ್ತದೆ. ಸ್ವಾಬಾವಿಕವಾಗಿ   ಪೋಲಾಗುವಲ್ಲಿ   ಬ್ರೇಕ್  ಹಾಕಲು  ಅರಿವು ಹಾಗೂ   ಪ್ರೇರಣೆ  ದೊರಕುತ್ತದೆ. 

ಅಮೇರಿಕದಲ್ಲಿ ಇದರ ಬೆಲೆ ಸುಮಾರು ಐದು ಮುಕ್ಕಾಲು ಸಾವಿರ ರೂಪಾಯಿ ಅನ್ನಬಹುದು ( USD 135) ಅಲ್ಲಾದರೆ ಉಳಿತಾಯವೇ ಈ ಹಣವನ್ನು ದುಡಿದುಕೊಡುತ್ತದಂತೆ.  ನಮ್ಮಲ್ಲೂ   ಇದು  ಕೈಗೆಟಕುವ  ಬೆಲೆಗೆ   ಬೇಗನೆ  ಸಿಗುವಂತಾಗಲಿ. 

ವಿವರಗಳಿಗೆ : http://fivepercent.us/2008/07/28/cent-a-meter-centometer-or-power-cost-meter-pays-for-itself/

Saturday, August 02, 2008

ರಾಮರ ಸೇತುವೆಯೋ, ಅಲ್ಲಲ್ಲ

ಚಿತ್ರದಲ್ಲಿ ಕಾಣುವುದು ಶ್ರಿ ರಾಮಚಂದ್ರನೂ ವಾನರ ಸೇನೆಯೂ ಕಟ್ಟಿದ ರಾಮರ ಸೇತುವೆಯೋ ? ದೂರದಲ್ಲಿ ಕಾಣುವುದು ಶ್ರಿ ಲಂಕೆಯೋ ? ಸೇತುವೆ ಮೇಲಿರುವುದು ಪಿರಬಾಕರನ ಅನುಯಾಯಿ ತಮಿಳು ಹುಲಿಗಳೋ ? ಸುಗ್ರೀವನ ವಾನರ ಸೇನೆಯೋ ? ಪ್ರಶ್ನೆಗಳೆಲ್ಲ ನಿಮ್ಮ ಮನಸಿನಲ್ಲಿ ಮೂಡಿರಬಹುದು. ಕಾಂಗ್ರೇಸಿನವರು ಇದು ಸತ್ಯ ಚಿತ್ರವಲ್ಲ, ಹಿಂದುತ್ವದವರ ಪಿತೂರಿ ಅಂಶ ಎನ್ನಬಹುದು.   ಈಗ ರಾಮರ ಸೇತುವೆ ವಿವಾದ ಸುಪ್ರಿಮ್ ಕೋರ್ಟ್ನನಲ್ಲಿದ್ದು ಕೆಂದ್ರ ಸರಕಾರ ದಿನಕ್ಕೊಂದು ನಮೂನೆಯ ವಾದ ಮಂಡಿಸುತ್ತಿದೆ. ಸಂಪೂರ್ಣ ಗೊಂದಲಮಯವಾದ ಈ ವಿವಾದದ ಮದ್ಯೆ ಈ ವಿಷಯಕ್ಕೆ ಹೋಲಿಕೆಯ ನನಗೆ ಕಂಡ  ಒಂದು ನೈಸರ್ಗಿಕ ಉದಾಹರಣೆ.

ಇದು ದಕ್ಷಿಣ ಕೊರಿಯಾದ ಜಿಂಡೊ ಎಂಬಲ್ಲಿ ಕಂಡು ಬರುವ ನೈಸರ್ಗಿಕ ಮರಳ ದಾರಿ.  ಸುಮಾರು ಎರಡು ಮುಕ್ಕಾಲು ಕಿಲೋಮೀಟರ್ ಉದ್ದದ ಈ ಸೇತುವೆ  ದಾರಿ   ವರುಷಕ್ಕೆ ಒಂದೆರಡು ಬಾರಿ ಸಮುದ್ರದಿಂದ ಮೇಲೇಳುತ್ತದೆ.   ಜ್ಯೋತಿಷಿಗಳೂ   ವಿಜ್ನಾನಿಗಳೂ    ಸಮುದ್ರದ  ಇಳಿತವನ್ನು   ಮೊದಲೇ      ನಿರ್ಣಯಿಸುತ್ತಾರಂತೆ.    ಅಲೆಗಳ ಮಟ್ಟ ಕೆಳಗಿರುವ ಸುಮಾರು ಒಂದು ಘಂಟೆ ಸಮಯ ಈ ದಾರಿಯಲ್ಲಿ ನಡೆಯುತ್ತಾ ಆಚೆ ದಡ ತಲಪಬಹುದು.   ಇದೊಂದು ಹಬ್ಬವನ್ನಾಗಿ   ಅವರೀಗ    ಆಚರಿಸುತ್ತಾರೆ.  ಮೊಸೆಸ್ ಪವಾಡ ಎಂದು ಕರೆಯಲ್ಪಡುವ ಈ  ವರ್ಷ   ಎಪ್ರಿಲ್   17 ಕ್ಕೆ  ನಡೆದ   ಈ   ಹಬ್ಬಕ್ಕೆ ಪ್ರಪಂಚದ ಹಲವು ಮೂಲೆಗಳಿಂದ ಜನ ದಾವಿಸಿ ಬರುವರಂತೆ.

ಇಂದು  ಕಾಣಸಿಗುವ  ಕುರುಹುಗಳ    ಗಮನಿಸಿದರೆ ಎರಡು ಮೂರು ಶತಮಾನಗಳ ಹಿಂದೆ ಬಾರತ ಮತ್ತು ಲಂಕೆಯ ಮದ್ಯೆ ಈ  ರೀತಿಯ ದಾರಿ   ಖಂಡಿತ    ಇದ್ದಿರಬಹುದು. ನಮ್ಮ  ಪೂರ್ವಿಕರು  ನಡೆದು  ಶ್ರಿಲಂಕೆಗೆ  ಹೋದರು  ಎಂದು  ಇತಿಹಾಸದ ಪುಟ  ತೆರೆದಿಡುವ  ತಮಿಳರಿದ್ದಾರಂತೆ.     ಕ್ರಮೇಣ    ಪ್ರಕೃತಿಕ ಕಾರಣಗಳಿಗೆ ಈ  ಬಾರತಕ್ಕೆ  ಶ್ರಿಲಂಕವನ್ನು  ಲಿಂಕಿಸುವ  ಈ    ಶ್ರಿ ರಾಮಚಂದ್ರ ರಾಜ ರಸ್ತೆ ಸಮುದ್ರ ಪಾಲಾಗಿರಬಹುದು.    ರಾಜಕೀಯ ಕಾರಣಗಳಿಂದ ವಿಷಯ ಎಷ್ಟು ಗೊಜಲಾಗಿದೆ ಎಂದರೆ  ಎಲ್ಲರೂ  ಒಪ್ಪುವಂತಹ    ಸತ್ಯ ಸಂಗತಿ ಮುಂದಿನ ದಿನಗಳಲ್ಲಿ ಹೊರಬರಲು ಸಾದ್ಯವೇ ಇಲ್ಲ  ಎನ್ನುವುದು  ಖಚಿತ.  .

Friday, July 25, 2008

ಚೆರ್ನೋಬಿಲ್ ಪಾಠ ನಮಗೆ ಪ್ರಸ್ತುತವೇ

ಮೊನ್ನೆ ನಮ್ಮ ನರೇಂದ್ರ ಪತ್ರಿಸಿದ ಅಣು ಸಂಬಂದದ ಬಗ್ಗೆ ನಿಮ್ಮ ಅಬಿಪ್ರಾಯವೇನು ? ಒಳ್ಳೆ ಗೊಂದಲವಾಯಿತಲ್ಲ. ಅಣು ಸಂಬಂದ ಬಗ್ಗೆ ಮಾತನಾಡಲು ನನಗೆ ಪರಿಣಿತಿಯಾಗಲಿ ಸ್ವಾರ್ಥವಾಗಲಿ ಇಲ್ಲದಿರುವಾಗ ನಾನು ಅದರ ಬಗೆಗೆ ಇದುವರೆಗೆ ಅಷ್ಟು ಗಂಬೀರವಾಗಿ ಚಿಂತಿಸಿರಲಿಲ್ಲ ಅದ್ಯಯನ ಮಾಡಿರಲಿಲ್ಲ. ನಾನೇನು ಬರೆಯಲಿ. ಆದರೆ ಈ ಪತ್ರ ಹಲವು ನೆನಪುಗಳ ಚುರುಕು ಮಾಡಿತು.

 ಇಪ್ಪತ್ತು ವರ್ಷ ಹಿಂದೆ ನಾನೊಂದು  ಅಣು ವಿರೋದಿ ಪ್ರತಿಬಟನೆಯಲ್ಲಿ ಬಾಗಿಯಾಗಿದ್ದೆ. ಜರ್ಮನಿಯಲ್ಲಿ ಒಂದು ಉದ್ದೇಶಿತ ಅಣು  ಸ್ಥಾವರದ ವಿರೋದ ಒಂದು ಪ್ರತಿಭಟನೆ ಎರ್ಪಡಿಸಲಾಗಿತ್ತು. ಆಗಷ್ಟೆ ಪರಿಚಿತನಾದ ಅಲ್ಲಿಗೆ ಹೋಗುವ ಗೆಳೆಯ ತೋಮಸ್ ನನ್ನನ್ನೂ ಕರೆದೊಯ್ದ. ಒಂದು ಸ್ಥಾವರದ ಹೊರವಲಯದ ವನದಲ್ಲಿ ಸಂಜೆ ಜನ ಸೇರಿದರು. ರಾತ್ರಿಯಿಡೀ  ಜಾನಪದ   ಸಂಗೀತ ಕಾರ್ಯಕ್ರಮ.  ನಿದ್ದೆ  ಬಂದವರು  ಅಲ್ಲಲ್ಲಿಯೇ  ನಿದ್ರಿಸಿದೆವು.   ಮರುದಿನ   ಬೆಳಗ್ಗೆ   ನಡೆದ ನಮ್ಮ  ಅಂತರಾಷ್ಟ್ರೀಯ   ಪ್ರತಿಬಟನೆಯನ್ನು ಪೋಲಿಸರ ನೀರ ಫಿರಂಗಿ ತೊಯಿಸಿತು.

ನಂತರದ ವಾರ ಎಂದರೆ ಚೆರ್ನೋಬಿಲ್ ದುರಂತದ ಮರುದಿನ ನಾನು ಜರ್ಮನಿಯಲ್ಲಿ ಒಂದು ಡೈರಿಯಲ್ಲಿ ರೈತ ಕುಟುಂಬದೊಂದಿಗೆ  ಬೆಳಗಿನ    ಉಪಹಾರಕ್ಕೆ ಕುಳಿತಿದ್ದೆ. ಆಗ ಆಗಮಿಸಿದ ಸರಕಾರಿ ಅಧಿಕಾರಿಗಳು ಅಣು ವಿಕಿರಣಕ್ಕೆ ಒಳಗಾದ   ಹುಲ್ಲು ಈಗ ದನಗಳು ತಿನ್ನುವುದು ಬೇಡ. ಅದುದರಿಂದ ಒಂದು ವಾರ ದನಗಳ ಹೊರಗೆ ಬಿಡಬೇಡವೆಂದು ವಿನಂತಿಸಿ ಸಾಕಷ್ಟು ಮೇವು ದಾಸ್ತನು ಇರುವುದನ್ನು ಖಚಿತ ಪಡಿಸಿ ಹೋಗಿದ್ದರು. ನಮ್ಮಲ್ಲೂ ದುರಂತಗಳಾಗುತ್ತವೆ. ಸರಕಾರಿ  ಪ್ರತಿಕ್ರಿಯೆ  ??


ಸೈಕಲಿಗ ಗೆಳೆಯ ಫ್ರೆಡ್ ಫೊಲ್ ಅವರೊಂದಿಗೆ ಜರ್ಮನಿಯ ಗೊಟ್ಟಿಂಗನ್ ಪಟ್ಟಣದಲ್ಲಿ ಚರ್ಚಿಗೆ ಹೋಗಿದ್ದೆ. ಅದು ಚೆರ್ನೋಬಿಲ್ ಅಣು ಸ್ಥಾವರದಲ್ಲಿ ನಡೆದ ದುರಂತದ ನಂತರದ ವಾರ. ಅಂದು ಪಾದ್ರಿಗಳು ಜರ್ಮನ್ ಬಾಷೆಯಲ್ಲಿ ಬಹಳ ಚೆನ್ನಾಗಿ ಪ್ರವಚನ ನೀಡಿದರೆಂದು ಫ್ರೆಡ್ ಫೋಲ್ ಅವರು ಅನಂತರ ನನಗೆ ಹೇಳಿದರು. ಸಾವಿರಾರು ಕಿ.ಮಿ.  ಪ್ರವಹಿಸಿದ ಆದರೆ ಕಣ್ಣಿಗೆ ಕಾಣದ ಅಣು ವಿಕಿರಣಕ್ಕೆ ಪಾದ್ರಿಯವರು ನಮ್ಮೆದುರು ಕಾಣದ ದೇವರನ್ನು ಹೋಲಿಸಿದ್ದರಂತೆ.   ಉಪಕರಣಗಳಲ್ಲಿ ಗುರುತಿಸಲು ಸಾದ್ಯವಾದ ವಿಕಿರಣದ ಬಗ್ಗೆ ಅಂದು ಜರ್ಮನಿಯವರು   ತೆಗೆದುಕೊಂಡ ರಕ್ಷಣೋಪಾಯಗಳು ನಮ್ಮಲ್ಲಿ ಸಾದ್ಯವೇ ಇಲ್ಲ ಎಂದರೂ ತಪ್ಪಲ್ಲ.


ಈ ಅಣು ಸಂಬಂದ ಎಂದರೆ  ಒಂದು  ಶಾಶ್ವತ ಬಂದನ. ಈ ಸಂಬಂದದಲ್ಲಿ ಡೈವೋರ್ಸ್ ಎನ್ನುವ ಶಬ್ದವೇ ಇಲ್ಲ. ಅಣು ಸರಣಿ ಪ್ರತಿಕ್ರಿಯ ಮನುಷ್ಯನಿಂದ ಪ್ರಾರಂಬಿಸಲು ಮಾತ್ರ ಸಾದ್ಯ. ಅನಂತರ ಅದು ನಿರಂತರ ವರ್ಷಾನುಗಟ್ಟಲೆ ನಡೆಯುತ್ತಲೇ ವಿಕಿರಣ ಸೂಸುತ್ತಲೇ ಇರುತ್ತದೆ. ಇಂದು ಅಣು ಶಕ್ತಿ ಬಗ್ಗೆ ಮಾಹಿತಿ ದೇಶದ ಹಿತಾಸಕ್ತಿ ಎಂಬ ಪರದೆ ಮರೆಮಾಚಿರುವುದರಿಂದ ನಮ್ಮ ಮುಂದೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಇದಕ್ಕೆ ಮಾಡುವ ಖರ್ಚು ಮತ್ತು ವೈಫಲ್ಯಗಳು ನಮ್ಮ ಜನಪ್ರತಿನಿದಿಗಳ ತಿಳುವಳಿಕೆಗೂ ಬರುವುದಿಲ್ಲ. ಎಲ್ಲವೂ ಗುಪ್ತ ಕಡತಗಳಲ್ಲಿ ಹುದುಗಿರುತ್ತದೆ.

ಅಣು ವಿಕಿರಣ ಮಾನವನ ಮೇಲೆ ಬೀರುವ ಪರಿಣಾಮವೇ ನಮಗಿನ್ನೊ ಪೂರ್ತಿ ತಿಳಿಯದು. ಏಡ್ಸ್ ಖಾಯಿಲೆಗೆ ಅಣು ಪ್ರಯೊಗವೇ ಮೂಲ ಎನ್ನುವ ವಾದ ಕಳೆದ ಇಪ್ಪತ್ತು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಸ್ವಾರ್ಥ ಹಿತಾಸಕ್ತಿಗಳಿಗೆ ಇದು ಪ್ರತಿಕೂಲ. ಹಾಗಾಗಿ ಹೆಚ್ಚು ಚರ್ಚೆಗೆ ಪ್ರಚಾರಕ್ಕೆ ಅವಕಾಶವನ್ನೀಯಲಿಲ್ಲ. ಹುಳುಕು ಅರಿತವರೂ ಬಾಯಿ ಬಿಡುವಂತಿಲ್ಲ. ಸೋಲುತ್ತಿರುವ ಜಪಾನಿನ ಮೇಲೆ ಅಣು ಬಾಂಬು ಹಾಕಿದ ಅಮೇರಿಕ ಜನರ ಮೇಲೆ ವಿಕಿರಣದ ಪರಿಣಾಮ ಅರಿಯಲು ಹಲವು ಹಿಂದುಳಿದ ಪ್ರದೇಶಗಳಲ್ಲಿ ದ್ವೀಪಗಳಲ್ಲಿ ವಿಕಿರಣ ಸೂಸುವ ವಸ್ತುಗಳ ಹುದುಗಿಟ್ಟ ದಾಖಲೆಗಳಿವೆ. ಅಣು ವಿಕಿರಣಕ್ಕೆ ಒಳಗಾದ ಜೀವಕೋಶಗಳು ತಮ್ಮ ರೋಗ ನಿರೋದಕ ಶಕ್ತಿಯನ್ನು ಸಂಪೂರ್ಣ ಕಳಕೊಳ್ಳುತ್ತವೆ. ದಿಕ್ಕು ತಪ್ಪಿಸಲು ಏಡ್ಸ್ ಮಂಗನಿಂದ ಆಫ್ರಿಕದ ಮಾನವನಿಗೆ ಎಂಬ ಸೂತ್ರ ತೂರಿ ನಮ್ಮನ್ನೆಲ್ಲ ಮಂಗ ಮಾಡಿದರೋ ?

ಆಂಟಿಬಯಾಟಿಕ್ ಗಳ ಅತೀ ಬಳಕೆ ಸಹಾ ಆರೋಗ್ಯಕ್ಕೆ ಹಾನಿಕರ. ಇವು ದೇಹದೊಳಗೆ ಬಾಂಬು ಹಾಕಿದಂತೆ. ಇವುಗಳು ಉತ್ತಮ ಬ್ಯಾಕ್ಟಿರಿಯಾಗಳು, ಕೆಟ್ಟ ಬ್ಯಾಕ್ಟಿರಿಯಾಗಳೆಂದು ಭಿನ್ನವಿಲ್ಲದೇ ಎಲ್ಲಾ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತವೆ. ಕ್ರಮೇಣ ದೇಹದ ಸಹಜ ರೋಗನಿರೋಧಕ ಶಕ್ತಿ ಕುಗ್ಗುತ್ತ ಇಲ್ಲವಾಗಿಬಿಡುತ್ತದೆ ಹಾಗೂ ಏಡ್ಸಿಗೆ ಹೋಲುವ ಲಕ್ಷಣಗಳು ವೈದ್ಯಕೀಯವಾಗಿ ಕಾಣಲಾರಂಬಿಸುತ್ತದಂತೆ. ಹೀಗೆ ಏಡ್ಸ್ ರೋಗ  ಅಧುನಿಕ   ವಿಜ್ನಾನದ ಕೊಡುಗೆ ಎನ್ನುವುದನ್ನು ಸಂಪೂರ್ಣ ಅಲ್ಲಗಳೆಯಲು ಸಾದ್ಯವಿಲ್ಲ.  ಇವು ಯಾವುದೂ ನಮ್ಮ ಜನಪ್ರತಿನಿದಿಗಳಿಗೆ ಅರ್ಥವಾಗುವ ವಿಚಾರವಲ್ಲ. ಬಿಡಿ. ಅವರಿಗೆಲ್ಲ ತಮ್ಮದೇ ಆದ ಸ್ವಾರ್ಥ ಹಿತಾಸಕ್ತಿಗಳಿದ್ದು ಎಲ್ಲರೂ ಡೀಲುಗಳಲ್ಲಿ ತೊಡಗಿಸಿಕೊಂಡಿದ್ದರು. ಅದರ ಬೆಲೆಯನ್ನು ಮಾತ್ರ ದೇಶ ಮುಂದೆ ತೆರಬೇಕಾಗುತ್ತದೆ.

ಡಾಬೋಲ್ ವಿದ್ಯುತ್ ಕೇಂದ್ರ ಪ್ರಕರಣದಲ್ಲಿ ಎಲ್ಲ ಪಕ್ಷಗಳೂ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದವು. ಅಮೇರಿಕನರ ಈ ಯೋಜನೆಯಲ್ಲಿ ನಮ್ಮವರಿಗೆ ಅಂದರೆ ರಾಜಕಾರಣಿಗಳಿಗೆ ಮತ್ತು ಅದಿಕಾರಿಗಳಿಗೆ ಕಲಿಸಲೆಂದು (ಲಂಚ ಕೊಡಲೆಂದು) ಪ್ರತ್ಯೇಕ ಹಣ ತೆಗೆದಿರಿಸಿಲಾಗಿತ್ತು. ಜೇಬು ತುಂಬಿಸಿದ ನಂತರ ಸಿದ್ದಾಂತ, ನಿಷ್ಟೆ  ಎಲ್ಲವೂ ಗೌಣವಾಗುವಾಗ ನಮ್ಮ ದೇಶದಲ್ಲಿ ಅಣು ಸ್ಥಾವರ ಹೆಚ್ಚು ಅಪಾಯಕಾರಿ ಅಗಬಲ್ಲದು.


ಕಲ್ಲಿದ್ದಲು, ತೈಲ, ಅಣುಶಕ್ತಿ ಮುಂತಾದವುಗಳು ಪರಿಸರ ಹಾನಿಯುಂಟು ಮಾಡಿ ಪರೋಕ್ಷವಾಗಿ ಈ ಲೋಕದಲ್ಲಿ ಮಾನವನ ಉಳಿವನ್ನೇ ಪ್ರಶ್ನಾರ್ತಕವಾಗಿಡುವ ಶಕ್ತಿ ಮೂಲಗಳು. ಮಾನವ ಚಾಲಿತ ಹಾಗೂ ಸೌರ ಶಕ್ತಿಗಳಂತಹ ಮೂಲಗಳ ಬಗೆಗೆ ನನಗೆ ಹೆಚ್ಚು ಅಬಿಮಾನ.   ನಾನು  ಸಾದ್ಯವಾದಷ್ಟು  ಸೌರ  ಶಕ್ತಿಯನ್ನು  ಬಳಸಿ  ನನ್ನಿಂದಾಗುವ  ಮಾಲಿನ್ಯ  ಕನಿಷ್ಟಗೊಳಿಸಲು  ಪ್ರಯತ್ನಿಸುತ್ತೇನೆ.  ನನ್ನೊಂದಿಗೆ ಪ್ರಪಂಚವನ್ನು ಸುತ್ತಿದ ಸೈಕಲಿನ ಡೈನೆಮೊದಲ್ಲಿ ಅಂಟಿಸಿದ ಚಿತ್ರ ನನ್ನ ನಿಲುವನ್ನು ಹೇಳುತ್ತದೆ Atomic Energy, No thanks.

Tuesday, July 22, 2008

ಪ್ರವಾಸಿಯ ಸಂಪರ್ಕ ಅವಕಾಶ

ಅಂದು ಪ್ರಪಂಚಕ್ಕೊಂದು ಸುತ್ತು ಸೈಕಲಿಸುವಾಗ ನನಗೆ ಸಂಪರ್ಕ ಅವಕಾಶಗಳು ಬಹಳ ಕಡಿಮೆಯಿತ್ತು. ಮನೆಯವರೊಡನೆ ಆಗಾಗ ಪತ್ರಗಳು ವಿನಿಮಯವಾದರೂ ಊರ ಪತ್ರಗಳಲ್ಲಿ ಬರೇ ಹಳೆಯ ಸುದ್ದಿಗಳೇ ತುಂಬಿರುತಿತ್ತು ಎಂದರೂ ಸರಿ. ನಾನು ಹೋಗುವ ದಾರಿ ವೀಸಾ ಸಿಕ್ಕಿ ನಿರ್ದಾರಿತವಾದ ತಕ್ಷಣ ನನ್ನಪ್ಪನಿಗೆ ಪತ್ರಿಸಿ ಆಯಾ ಊರಿನ ವಿಳಾಸ ಮತ್ತು ತಲಪುವ ದಿನ ತಿಳಿಸುತ್ತಿದ್ದೆ. ಅವರು ಮುಂದಾಗಿ ಬರೆದ ಪತ್ರ ಆ ಊರಿನಲ್ಲಿ ನನಗೆ ಕಾಯುತ್ತಿತ್ತು. ಮೊದಲಾಗಿ ಸಂಪರ್ಕಿಸಿದ ಸ್ಥಳೀಯರು ಇದ್ದರೆ ಸುಲಭ. ಇಲ್ಲವಾದರೆ ಗುರುತು ಹಾಜಿರು ಪಡಿಸಿ ಆ ಊರಿನ ನಿರ್ದಿಷ್ಟ ಅಂಚೆ ಕಛೇರಿ ಅಥವಾ ಅಮೇರಿಕನ್ ಎಕ್ಷ್ ಪ್ರೆಸ್ಸ್ ಪ್ರವಾಸಿ ಹಣದ ಕಛೇರಿಗಳನ್ನು ಅವಲಂಬಿಸುತ್ತಿದ್ದೆ. ಅದು ಹಕ್ಕಿಗೆ ಗುಂಡು ಇಡುವಂತೆ ಮುಂದಾಗಿ ತಲಪಿದರೆ ಮಾತ್ರ ನನಗೆ ದೊರಕುವುದು. ಅಂತೂ ಹೆಚ್ಚಿನ ಪತ್ರ ಬರೆದು ಮೂರು ನಾಲ್ಕು ವಾರ ಕಳೆದು ನಾನು ಓದುತ್ತಿದ್ದೆ.

ಹೊರಹೋಗುವಾಗ ಒಂದಷ್ಟು ಹದಿನೈದು ಪೈಸೆಯ ಅಂಚೆ ಕಾಗದ ಒಯ್ದಿದ್ದೆ. ರಾಯಬಾರಿ ಕಛೇರಿಗಳ ಸಿಬಂದಿಗೆ ಒಂದು ಸೌಲಬ್ಯ ಇರುತ್ತದೆ -ಸರಕಾರಿ ಟಪಾಲಿನೊಟ್ಟಿಗೆ ಅವರ ವೈಯುಕ್ತಿಕ ಪತ್ರಗಳ ಬಾರತಕ್ಕೆ ರವಾನೆ. ಇದರ ಸುಳಿವು ಸಿಕ್ಕ ನಾನು ಹಲವು ಸಲ ಊರಿಗೆ ರಾಯಬಾರಿ ಕಛೇರಿಗಳ ಮೂಲಕ ಸರಕಾರಿ ಅದಿಕೃತ ಚೀಲದಲ್ಲಿ ರವಾನಿಸಿದ್ದುಂಟು. ಅದನ್ನು ವಿದೇಶಿ ಸಚಿವಾಲಯದ ಸಿಬ್ಬಂದಿ ದೆಹಲಿಯಲ್ಲಿ ಅಂಚೆಗೆ ಹಾಕುತ್ತಾರೆ. ಆದರೆ ಮಾಮೂಲಿ ಪ್ರವಾಸಿ ಊರುಗಳ ರಾಯಬಾರಿ ಕಛೇರಿಗಳಲ್ಲಿ ಅದಿಕಾರ ದರ್ಪ ತೋರಿಸಿ ಇದಕ್ಕೆ ನಿರಾಕರಿಸುವವರೂ ಇರುತ್ತಾರೆ. .

ಅಮೇರಿಕದ ಗ್ರಾಮೀಣ ಪ್ರದೇಶದಲ್ಲಿ ಪತ್ರವನ್ನು ಅಂಚೆಗೆ ಹಾಕುವುದೊಂದು ಸಾಹಸ. ಅಲ್ಲಿ ಸಾರ್ವಜನಿಕ ಅಂಚೆ ಪೆಟ್ಟಿಗೆಗಳು ಕಡಿಮೆ. ಪ್ರತಿ ಮನೆಯ ಮುಂದೆ ಅವರವರ ವೈಯುಕ್ತಿಕ ಅಂಚೆ ಪೆಟ್ಟಿಗೆಯಿದ್ದು ಅಂಚೆಯಾಳು ಬಂದು ಇವರಿಗಿರುವ ಪತ್ರಗಳ ಹಾಕಿ ಅದರಲ್ಲಿರುವ ಪತ್ರಗಳ ಪಡಕೊಂಡು ಮುಂದೆ ಹೋಗುತ್ತಾರೆ. ನಾನು ಹಾಗೆ ಯಾರದೋ ಪೆಟ್ಟಿಗೆಯಲ್ಲಿ ಹಾಕಿದರೆ ಅಂಚೆಯಾಳಿನ ಬದಲು ಮನೆಯವರ ಕೈಗೆ ಸಿಕ್ಕರೆ ಅದನ್ನು ಎಸೆದು ಬಿಟ್ಟಾರೆಂದು ಅಳುಕು. ಹಾಗೆ ದೂರ ದೂರದಲ್ಲಿರುವ ಅಂಚೆಪೆಟ್ಟಿಗೆಯ ಹುಡುಕಾಟ ಅನಿವಾರ್ಯ.


ಹಲವು ಜನ ನನ್ನ ಅತಿಥೇಯರು ನಾನು ದಾಟಿ ಮುಂದೆಹೋದ ಅನಂತರ ನಮ್ಮ ಮನೆಗೆ ಪತ್ರಿಸಿದ್ದಾರೆ. ನಿಮ್ಮ ಹುಡುಗ ನಮ್ಮಲ್ಲಿದ್ದು ಈಗ ಮುಂದೆ ಹೋಗಿದ್ದಾನೆ. ಅವನ ಅರೋಗ್ಯ ಒಕೆ. ಅಗತ್ಯವಿದ್ದರೆ ನಮ್ಮ ಸಹಾಯ ಲಬ್ಯ ಎಂದು ಅವನಿಗೆ ಗೊತ್ತು. ಆದರೆ ಅವನಿಗೆ ನಮ್ಮ ಸಹಾಯವಿಲ್ಲದೆ ನಿಬಾಯಿಸಲು ಸಾದ್ಯವೆಂದು ನಮಗೆ ವಿಶ್ವಾಸವಿದೆ ಎನ್ನುವ ಪತ್ರ ನಮ್ಮ ಮನೆಯವರಿಗೆ ಕೊಟ್ಟ ದೈರ್ಯ ಅಪಾರ. ಕೆಲವು ಕಡೆ ಅತಿಥೇಯರು ನನ್ನಲ್ಲಿ ಬೇಕಾದರೆ ನಮ್ಮಲ್ಲಿಂದ ನಿನ್ನ ಮನೆಗೆ ಫೋನಿಸು ಎನ್ನುವ ದಾರಾಳತನ ತೋರಿದರೂ ನಿಮ್ಮ ಕೊಡುಗೆಗೆ ದನ್ಯವಾದ ಆದರೆ ನಮ್ಮ ಮನೆಯಲ್ಲಿ ಫೋನಿಲ್ಲ ಎಂದು ನಯವಾಗಿ ತಿರಸ್ಕರಿಸಬೇಕಾಗಿತ್ತು.

ಊರಲ್ಲಿ ಹಲವಾರು ಗೆಳೆಯರು ನನ್ನ ಕಳಿಸಿಕೊಡುವುದಕ್ಕೆ ಸಹಾಯ ಮಾಡಿದ್ದರು. ಅವರಿಗೂ ಆಗಾಗ ಪತ್ರಿಸಲು ಯೋಚಿಸುತ್ತಿದ್ದೆ. ಅಂಚೆ ವೆಚ್ಚ ದುಬಾರಿ ಎನ್ನುವುದು ತಡೆಯಾಗಿತ್ತು. ಆಗ ಒಂದು ಸಾಮೂಹಿಕ ಪತ್ರ ತಯಾರು ಮಾಡಿ ಅದನ್ನು   ಕ್ಷೆರಾಕ್ಷ್   ಮಾಡಿಸಿ      ಎಲ್ಲಕ್ಕೂ ಕೊನೆಗೂ ಮೊದಲಿಗೂ ವೈಯುಕ್ತಿಕವಾಗಿ  ನಾಲ್ಕು  ಮಾತು  ಮತ್ತು   ವಿಳಾಸ   ಗೀಚಿ ಒಟ್ಟಿಗೆ ಊರಿಗೆ ಪಾರ್ಸೆಲ್ ಕಳುಹಿಸುತ್ತಿದ್ದೆ. ನಮ್ಮಪ್ಪ ಅದಕ್ಕೆ ಆಂಚೆ ಚೀಟಿ ಅಂಟಿಸಿ ಅಂಚೆಗೆ ಹಾಕುತ್ತಿದ್ದರು. ಇಂದಾದರೆ ಬ್ಲೋಗ್ ಬರೆದರೆ ಸಾಕಿತ್ತು.   ಪಿಜ್ಜಾ  ತಿಂದದ್ದು    ಜೀರ್ಣವಾಗುವಾಷ್ಟರಲ್ಲಿ  ಸುದ್ದಿ  ಎಲ್ಲರಿಗೂ  ತಿಳಿಯಲು  ಸಾದ್ಯ.    ಇದರಿಂದ ಸಾಕಷ್ಟು ಪ್ರಚಾರ ಹಾಗೂ ಅಗತ್ಯದ ಸಹಾಯ ಲಬಿಸುತಿತ್ತು.


ಇಪ್ಪತ್ತು ವರ್ಷ ಹಿಂದಿನದಕ್ಕೂ ಇಂದಿಗೂ ಹೋಲಿಸಿದರೆ ಸಂಪರ್ಕ ವಿಚಾರದಲ್ಲಿ ಜಗತ್ತು ಬಹಳಷ್ಟು ಮುಂದುವರಿದಿದೆ. ಈಗ ಒಂದು ಕಮೆರಾ, ಲಾಪ್ ಟೋಪ್ ಮತ್ತು ಮೊಬೈಲ್ ಫೋನ್ ಇದ್ದರೆ ಪ್ರಪಂಚದ ಹೆಚ್ಚಿನ ಜಾಗಗಳಿಂದ ನಿರಂತರ ಪತ್ರ ವ್ಯವಹಾರ ಮಾತ್ರವಲ್ಲ ಮಾತನಾಡಲು ಹಾಗೂ ಪೊಟೊ ಕಳಿಸಲು ಸಾದ್ಯ. . ಹೆಚ್ಚಿನ ಎಲ್ಲ ದೇಶಗಳ ಸಿಮ್ ಬಾರತದಲ್ಲೇ ಸಿಗುತ್ತದೆ. ಅದುದರಿಂದ ಸಂಪರ್ಕಕ್ಕೆ ಇಲ್ಲೆಯೇ ಅಡಿಪಾಯ ಹಾಕಬಹುದು. ಆದರೆ ಬಾರತದಲ್ಲಿಯೇ ಉಳಿದೆಡೆಯ ಕೆಲವು ಸಿಮ್ ಕಾಶ್ಮೀರದಲ್ಲಿ ಕೆಲಸ ಮಾಡುವುದಿಲ್ಲ ಎನ್ನುವ ರೀತಿಯ ಪರಿಮಿತಿಯ ಸುಳಿವುಗಳಿಗೆ ನಾವು ಕಣ್ಣಿಡಬೇಕಾಗುತ್ತದೆ.

ಸೈಕಲು ಪ್ರವಾಸಿಗೆ ಪುಟ್ಟದಾದರೂ ಕಂಪ್ಯುಟರ್ ಹೊರುವುದು ಕಷ್ಟ ಮತ್ತು ಅಪಾಯಕಾರಿ. ಆಗ ಸಹಾಯಕ್ಕೆ ಬರುವಂತಹ ಸೈಬರ್ ಕೇಫ್ ಈಗ ಹೆಚ್ಚಿನ ಎಲ್ಲ ದೇಶಗಳಲ್ಲೂ ಕಾಣಸಿಗುತ್ತದಂತೆ. ಚೀನಾದಲ್ಲಿ ಸೈಬರ್ ಕೇಫ್ ಕಿಬೋರ್ಡ ಎಷ್ಟು ಗಲೀಜೆಂದರೆ ಗ್ಲೌಸ್ ಹಾಕ್ಕೊಳ್ಳೋದು ಉತ್ತಮ ಎನ್ನುತ್ತದೆ ಪ್ರವಾಸಿ ಮಾಹಿತಿ. ಆದರೂ ಸೌಲಬ್ಯಗಳು ಸಿಗುತ್ತವೆ ಎನ್ನುವುದು ಬದಲಾವಣೆಯ ಲಕ್ಷಣ. ಸೈಕಲ್ ಪ್ರವಾಸ ಎಂದರೆ ತುಳಿಯುವುದು ಅಗತ್ಯವಾದರೂ ಉಳಿದ ವಿಚಾರಗಳು ಬಹಳ ಮುಂದುರಿದುದು ಸಂತಸದ ವಿಚಾರ.