ಪರದೇಶ ಸಂದರ್ಶಿಸಲು ನಮ್ಮ ಗುರುತು ಪತ್ರ ಪಾಸ್ ಪೋರ್ಟಿನಲ್ಲಿ ಅವರ ಪರವಾನಿಗೆ ವೀಸಾ ಮುದ್ರೆ ಅಗತ್ಯ. ಕೆಂದ್ರ ಸರಕಾರದ ಯುವಜನ ಇಲಾಖೆಯು ಈ ವಿಚಾರದಲ್ಲಿ ಸಹಾಯ ಮಾಡುತ್ತದೆ ಎನ್ನುವ ವಿಚಾರ ತಿಳಿದು ಅವರ ಸಂಪರ್ಕಿಸಿದೆ. ಹಲವಾರು ವಿರೋದಾಬಾಸಗಳುಳ್ಳ ಅವರ ಮಾಹಿತಿ ಪತ್ರ ಅಂಚೆಯಲ್ಲಿ ಬಂತು. ನಂತರ ದೆಹಲಿಯ ಹಾದಿಯಲ್ಲಿ ಪರಿಚಯವಾದ ಬಂಕರ್ ರಾಯ್ ನನ್ನ ಪರವಾಗಿ ಆ ಇಲಾಖೆಯ ಮುಖ್ಯಸ್ತರಿಗೆ ಫೊನಾಯಿಸಿ ನನಗೆ ಸಹಾಯ ಮಾಡುವಂತೆ ಕೇಳಿಕೊಂಡರು. ರಾಜೀವ ಗಾಂದಿಯವರ ಸಹಪಾಠಿಯಾಗಿದ್ದ ಬಂಕರ್ ರಾಯ್ ಆಗ ಯೋಜನಾ ಅಯೋಗಕ್ಕೆ ಗ್ರಾಮೀಣ ವಿಚಾರಗಳ ಸಲಹೆಗಾರರಾಗಿದ್ದರು. ಬಾರತದ ಮಟ್ಟಿಗೆ ಹೆಚ್ಚಿನ ಇಲಾಖೆಯ ಪ್ರಮುಖ ಅದಿಕಾರಿಗಳ ಮನೋಬಾವ ಹೇಗೆ ಇರಲಿ, ನಿರ್ಣಾಯಕ ವ್ಯಕ್ತಿಗಳು ಅಲ್ಲಿನ ಕಾರಕೂನರು.
ದೆಹಲಿಯಲ್ಲಿ ದಕ್ಷಿಣ ಬಾರತದ ನಾಲ್ಕು ರಾಜ್ಯದಿಂದ ಬಂದವರನ್ನೂ ಮದ್ರಾಸಿಗಳೆಂದು ಪರಿಗಣನೆ. ಮೊದಲೇ ನನಗೆ ಯುವಜನ ಸೇವಾ ಇಲಾಖೆಯಲ್ಲಿ ನನಗೆ ಸಂಬಂದಿಸಿದ ಕುರ್ಚಿಯಲ್ಲಿದ್ದ ಮದ್ರಾಸಿಗಳ ದ್ವೇಶಿಸುವ ವ್ಯಕ್ತಿಗಳಾದ ಪ್ರಬು ದಯಾಳ್ ಮತ್ತು ಸಾಹ್ನಿ ಎಂಬ ಕರಟಕ ದಮನಕರ ಬಗೆಗೆ ಹೇಳೀದ್ದರು. ಅಲ್ಲಿಗೆ ತಲಪಿ ಐದು ನಿಮಿಷಗಳಲ್ಲಿ ಅವರ ನಡುವಳಿಕೆ ನೋಡುವಾಗ ನನಗೆ ಅವರಿಂದ ಸಹಾಯ ಸಿಗದು ಎಂದು ಸಂಪೂರ್ಣ ಸ್ಪಷ್ಟವಾಗಿತ್ತು. ಸಂದರ್ಶನದ ಅಂಗವಾಗಿ ಅವರು ಅವರ ಮಾರ್ಗದರ್ಶನ ಚೀಟಿಗೆ ಅನುಸಾರವಾಗಿ ಪ್ರಶ್ನಿಸಿದರು Mr Bhat, ನಿನಗೆ ಎಷ್ಟು ಬಾಷೆಗಳು ಬರುತ್ತದೆ ? ಅವರ ಮಾನದಂಡಗಳ ಪ್ರಕಾರ ಇಂಗ್ಲೀಷ್ ಹಿಂದಿಯಲ್ಲದೆ ಕನಿಷ್ಟ ಒಂದು ಪರದೇಶಿಯ ಬಾಷೆ ತಿಳಿದಿರುವುದು ಅಗತ್ಯವಾಗಿತ್ತು. ಸ್ವರ ಏರಿಸಿ ಸಾರ್ ಎಂದೆ. ಅಫಿಸಿನಲ್ಲಿದ್ದವರೆಲ್ಲ ನಮ್ಮನ್ನೇ ನೋಡುತ್ತಿದ್ದಾರೆ ಎಂದಾದ ಮೇಲೆ ಈ ಜಗತ್ತಿನಲ್ಲಿ 13000 ಬಾಷೆಗಳಿವೆ. ಆದರೆ ಪರವಾಗಿಲ್ಲ ನನಗೆ ಅದರಲ್ಲಿ ಅತೀ ಹಳೆಯ ಬಾಷೆ ಬರುತ್ತದೆ ಎಂದೆ. ನನ್ನ ಅನಿರೀಕ್ಷಿತ ವರ್ತನೆಯಿಂದ ಗಲಿಬಿಲಿಯಾದ ಪ್ರಭು ದಯಾಳ್ ಅದು ಯಾವುದು ಎಂದ. ಕೈ ಸನ್ನೆಯ ಜತೆಯಲ್ಲಿ the language that deaf and dumb speaks ಎಂದು ಸೀದಾ ಹೊರನಡೆದೆ.
ನಾನು ಪೂರ್ವಬಾವಿಯಾಗಿ ನಮ್ಮ ದೇಶದಲ್ಲಿರುವ ಐವತ್ತಕ್ಕೂ ಹೆಚ್ಚಿನ ರಾಯಬಾರಿ ಕಛೇರಿಗಳಿಗೆ ಚುಟುಕಾಗಿ ನನ್ನ ಪ್ರವಾಸದ

ಈ ಮದ್ಯೆ ಯಾರೋ ಗೆಳೆಯರು ಒಂದು ಸುಳಿವು (?) ಕೊಟ್ಟರು. ಎಲ್ಲ ಸುಳಿವುಗಳನ್ನೂ ಮುಖಬೆಲೆಯಲ್ಲಿ ಪಡಕೊಂಡು ಬೆನ್ನಟ್ಟುವ ಕಾಲ. ನಿರ್ದಿಷ್ಟ ಕಾರಣಕ್ಕೆಂದು ಪರದೇಶದಿಂದ ಹಣ ತರಿಸಿದರೆ ಅದನ್ನು ಪುನ: ದೇಶದಿಂದ ಹೊರ ಕೊಂಡೊಯ್ಯಲು ರಿಜರ್ವ ಬಾಂಕ್ ಅನುಮತಿ ಕೊಡುತ್ತದೆ. ವಿಶಯ ನಿಜವಿರಬಹುದೆಂದು ನಂಬಿ ನಾನು ಬೆಂಗಳೂರಿಗೆ ಓಡಿದೆ. ಬೆಂಗಳೂರಿನ ರಿಜರ್ವ್ ಬಾಂಕಿನಲ್ಲಿ ಪಿಳ್ಳೈ ಎಂಬವರು ಸಂಬಂದ ಪಟ್ಟ ವಿಬಾಗದಲ್ಲಿದ್ದರು. ಎರಡನೆಯ ಸಲ ನಮ್ಮ ಬೇಟಿಯಾದಾಗ ನಾನು ಶಬರಿಮಲೈಗೆ ಹೊರಟಿದ್ದೇನೆ, ವಾಪಾಸು ಬಂದಾಕ್ಷಣ ನಿನ್ನ ಕೆಲಸ ಮಾಡಿಕೊಡುತ್ತೇನೆ ಎಂದರು. ಸರಿ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದೆ. ಈ ಮದ್ಯೆ ದುಬೈಯಲ್ಲಿ ಕೆಲಸಕ್ಕಿದ್ದ ಊರಿಗೆ ಆಗಾಗ ಹಣ ಕಳಿಸುವ ನಮ್ಮವರಿಗೆ ಗಾಳ ಹಾಕಿದ್ದೂ ಆಯಿತು. ನಾನು ನನ್ನ ಸಹೋದರನಿಂದ ಹಣ ತರಿಸಿ ಕೊಡುತ್ತೇನೆ ಎಂಬ ಆಶ್ವಾಸನೆ ಗೆಳೆಯರಿಂದ ಸಿಕ್ಕಿದ್ದೂ ಆಯಿತು. ನಂತರದ ಬೇಟಿಯಲ್ಲಿ ಮಾತ್ರ ಪಿಳ್ಳೈಯವರು ಈ ರೀತಿ ಪರವಾನಿಗೆಗೆ ಕಾನೂನು ಅವಕಾಶವಿಲ್ಲ ಎಂದು ಕೈ ಚೆಲ್ಲಿದರು. ನಾನು ನಮ್ಮನೆಯಿಂದ 325 ಕಿಲೋಮೀಟರ್ ದೂರದ ಬೆಂಗಳೂರಿಗೆ ಈ ಪಿಳ್ಳೈಯವರ ಕಾಣಲು ಮೂರು ಬಾರಿ ಓಡಾಡಿದ್ದು ಪೂರ ದಂಡ ಎನ್ನುವಂತಾಯಿತು.
No comments:
Post a Comment