Monday, December 19, 2011

ವಿಶಿಷ್ಟ ಸೈಕಲಿನಲ್ಲಿ ಬೆಲ್ಜಿಯಂ ಜೋಡಿ

ನಡುರಾತ್ರೆ ಎಪಿ ಸುಬ್ರಮಣ್ಯಂ ಅವರಿಂದ ಸತತ ನನ್ನ ಸಂಪರ್ಕ ಪ್ರಯತ್ನ. ನಾನು ರಾತ್ರಿ ಬೇಗ ಮಲಗುವ ವ್ಯಕ್ತಿ. ಅದುದರಿಂದ ನಿದ್ದೆಯ ಮದ್ಯೆ ಕಿವಿಗೊಟ್ಟು ಎಲ್ಲಕ್ಕೂ ಹೂಂಗುಟ್ಟಿದೆ. ಎರಡು ಜನ ಎರಡು ಪೆಡಲ್ ಎರಡು ಚಕ್ರದ ಗಾಡಿ ಯಾವುದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ.   ಕಿವಿ ಸಮಸ್ಯೆಯೂ  ನನಗುಂಟು.    ಮರುದಿನ ಮಾಮೂಲಿ ಒಂಬತ್ತು ಕಿಮಿ ದೂರದ ತ್ರಿಚಕ್ರ ತಿರುಗಾಟದಿಂದ ಹಿಂತಿರುಗಿದ ನಂತರ ನಮ್ಮ ಸುಬ್ಬಣ್ಣ ಮೊದಲು ಮಾತನಾಡಿದ ಅನಿಲ ಪರದೇಶಿ ಸೈಕಲಿಗರ ಬೇಟಿಯಾದೆಯಾ ? ಎನ್ನುವಾಗಲೇ ನನಗೆ ಎಚ್ಚರವಾದುದು, ಒಂದು ಅವಕಾಶ ತಪ್ಪಿಸಿಕೊಂಡೆನಾ ? ಕೂಡಲೇ ಸುಬ್ರಮಣ್ಯಂ ಅವರ ಪುನಹ ಸಂಪರ್ಕಿಸಿದೆ. ಅವರು ಸೈಕಲ್ ಸವಾರರ ಜಾಲತಾಣದ ವಿಳಾಸವೂ ಚೂರು ಪ್ರವಾಸದ ವಿವರವನ್ನೂ ಕೊಟ್ಟರು.         http://eurasia.cyclic.eu/


ನೋಡಿದರೆ ಅವರಿರುವುದು ಜರ್ಮನಿಯ ಪ್ರಖ್ಯಾತ ಹೇಸ್ ಕಂಪೇನಿಯ ಪಿನೊ ಎನ್ನುವ ಇಬ್ಬರು ಪ್ರಯಾಣಿಸಬಹುದಾದ ಸೈಕಲು. ಪ್ರಾಯುಶ: ಈ ಸೈಕಲು ಇನ್ನೊಮ್ಮೆ ನೋಡುವ ಅವಕಾಶ ಸಿಗುವುದು ದುರ್ಲಬ. ಕೂಡಲೆ ಪೆಡಲಿಸಿದೆ ರಸ್ತೆ ಬದಿಗೆ. ಕಾಲು ಗಂಟೆಯೊಳಗೆ ಅವರು ಆಗಮಿಸಿದರು. ಒಬ್ಬ ಸೈಕಲ್ ಆಸಕ್ತ ನಿಮಗೆ ದಾರಿಯಲ್ಲಿ ಸಿಗಬಹುದೆಂಬ ಸೂಚನೆ ಮೊದಲೇ ಸುಬ್ಬಣ್ಣ ಅವರಿಗಿತ್ತಿದ್ದರು ಅನಿಸುತ್ತದೆ.

ಐದು ನಿಮಿಷ ಮಾತುಕಥೆಯ ಅನಂತರ ನಾನಂದೆ – ಇಲ್ಲಿ ಮಾರ್ಗದ ಬದಿ ಬಿಸಿಲಲ್ಲಿ ನಿಂತು ಮಾತನಾಡುವ ಬದಲು ಆರು ಕಿಮಿ ಮುಂದೆ ಕಲ್ಲಡ್ಕದಲ್ಲಿ ವಿಶಿಷ್ಟವಾದ ಚಾ ಕುಡಿಯೋಣ. ನಾನು ನಿಮ್ಮ ಜತೆ ಬರುತ್ತೇನೆ ಅಂದೆ. ಸಮ್ಮತಿಸಿದರು. ಕಲ್ಲಡ್ಕವರೆಗೆ ಹೆಚ್ಚಿನ ಬಾಗ ನಾನವರ ಅನುಸರಿಸಿದೆ. ಹಾಗೆ ಅವರ ಸೈಕಲ್ ಹಾಗೂ ಹಿಂಬಾಲಕ ಗಾಡಿಯ ವರ್ತನೆ ನೋಡುವ ಅವಕಾಶ ಸಿಕ್ಕಿತು.


ಎದುರು ಕುಳಿತ ವ್ಯಕ್ತಿಯ ಬಾರ ಮುಂದಿನ ಚಕ್ರದ ಮೇಲೆ ಬೀಳುವ ಕಾರಣ ರಸ್ತೆ ಹಿಡಿತ ಉತ್ತಮ. ರಸ್ತೆ ಹಾಗೂ ಸುತ್ತುಮುತ್ತಲ ಪರಿಸರವ ಇಬ್ಬರಿಗೂ ಏಕಕಾಲಕ್ಕೆ ನೋಡುವ ಅವಕಾಶ. ಇಬ್ಬರೂ ಅವರವರ ಸಾಮರ್ಥ್ಯದ ಅನುಸಾರವಾಗಿ ತುಳಿಯಬಹುದು. ಬೆಲೆ ಸುಮಾರು ಎರಡೂವರೆ ಲಕ್ಷ ರೂಪಾಯಿಯಿಂದ ಪ್ರಾರಂಬ. ಈ ನವೀನ ಸೈಕಲು ಹೇಸ್ ಕಂಪೇನಿಯ ಕೊಡುಗೆಯಾದರೂ ಈಗ ಟೈವಾನ್ ದೇಶದಿಂದ ಅನುಕರಣೆ ಮಾದರಿಯೂ ಹೊರಬಂದಿದೆ.
http://hasebikes.com/150-1-tandem-pino-tour.html


ಗಂಟೆ ಹನ್ನೆರಡಾಗಿತ್ತು. Geoff ಎರಡು ದಿನ ಹಿಂದೆ times ದಿನಪತ್ರಿಕೆಯಲ್ಲಿ ಈ ಹೊಟೆಲ್ ಮತ್ತು ವಿಶಿಷ್ಟ ಚಾ ಬಗೆಗೆ ಒಂದು ವರದಿ ಪ್ರಕಟವಾದುದನ್ನು ನೋಡಿದ್ದರು. ಕಲ್ಲಡ್ಕದ ಕೆಟಿ ಕುಡಿದ ನಂತರ ಮಂಗಳೂರು ನನ್ನ ಮಟ್ಟಿಗೆ ಒಂದೂವರೆ ಘಂಟೆ ಎಂದೆ. ದಾರಿಯಲ್ಲಿ ಊಟ ಸಿಗುವುದೋ ವಿಚಾರಿಸಿದರು. ಸಿಗಬಹುದಾದ ಬಿಸಿ ರೋಡ್ ಹೆಚ್ಚು ದೂರವಲ್ಲ. ಬಾನುವಾರ. ಮುಂದೆ ಮಂಗಳೂರಿನ ವರೆಗೆ ಊಟಕ್ಕೆಂದು ನಿಲ್ಲುವ ಬದಲು ಇಲ್ಲಿಯೇ ದೋಸೆ ತಿಂದರೆ ಉತ್ತಮವೆನ್ನುವುದು ನನ್ನ ಸೂಚನೆ ಪ್ರಕಾರ ತೀರ್ಮಾನಿಸಿದರು. ಹೀಗೆ ದೋಸೆ ಕೆಟಿಯ ನಡುವ ಸಂಗ್ರಹವಾದ ಸುದ್ದಿ ಇಷ್ಟು.


Geoff ಮತ್ತು Lodi - ಬೆಳ್ಜಿಯಂ ದೇಶಕ್ಕೆ ಸೇರಿದವರು. Geoff ಒಂದು ಥಿಯೇಟರ್ ಮೆನೇಜರ್ ಮತ್ತು Lodi ಪುಟ್ಟ ಮಕ್ಕಳ ಟೀಚರ್. ಇಬ್ಬರೂ ಸೈಕಲಿನಲ್ಲಿ ಕೆಲಸಕ್ಕೆ ಹೋಗುವವರು. ಕೆಲಸಕ್ಕೆ ಒಂದು ವರ್ಷ ರಜೆಮಾಡಿ ತಿರುಗಾಡುತ್ತಿದ್ದಾರೆ. ಜುಲೈ ತಿಂಗಳಲ್ಲಿ ಪ್ರವಾಸ ಹೊರಟಿದ್ದಾರೆ. ದುಬೈಯಿಂದ ಕೊಚ್ಚಿಗೆ ಹಾರಿ ಬಂದು ಮುಂಬಯಿ ಕಡೆಗೆ ಹೊರಟಿದ್ದಾರೆ. ವಿವರಗಳು ಅವರ ಜಾಲತಾಣದಲ್ಲಿವೆ. ಗೂಗಲ್ ಅನುವಾದ ಸ್ವಷ್ಟವಲ್ಲವಾದರೂ ಸಾಮಾನ್ಯ ಅರಿವು ಮೂಡಿಸುತ್ತದೆ.ಅವರ  ಹಿಂಬಾಲಕ ಗಾಡಿ  ಇಂಗ್ಲೇಂಡಿನ  http://www.carryfreedom.com/   ಅನ್ನುವ ಕಂಪೇನಿ  ತಯಾರಿಸಿದ್ದು. ಜಾಲದಲ್ಲಿ  ಅವರ  ಬಿದುರಿನ  ಗಾಡಿ  ಮಾಡುವ  ಬಗೆಗೆ  ಮಾಹಿತಿ ಇದೆ.  ನಾನು ಮಾಹಿತಿ  ಸಂಗ್ರಹಿಸಿದರೂ  ಗಾಡಿ  ತಯಾರಿ  ಸಾದ್ಯವಾಗಲೇ  ಇಲ್ಲ.  
ಪಾಣೆಮಂಗಳೂರು ದಾಟುವಾಗ ಅವರನ್ನು ವಾಹನದಟ್ಟಣೆ ಕಡಿಮೆ ಇರುವ ಹಳೆ ರಸ್ತೆಯಲ್ಲಿ ಕರೆದೊಯ್ದೆ. ಹಿಂಬಾಲಿಸುತ್ತಿದ್ದ ಅವರು ಗಲಿಬಿಲಿಗೊಡು ನಿದಾನಿಸಿದರು ಯಾಕೆಂದರೆ ಅವರ ಜಿಪಿಎಸ್ ಹೆದ್ದಾರಿಯಲ್ಲಿಯೇ ಮುಂದುವರಿಯುವುದರ ಸೂಚಿಸುತಿತ್ತು. ಶತಮಾನದ ಅಂಚಿನಲ್ಲಿರುವ ಹಳೆಯ ಸೇತುವೆ ಹಾಗೂ ಟಿಪ್ಪು ಸುಲ್ತಾನನ ಕಾಲದ ಕಲ್ಲಿನಿಂದ ಮಾಡಿದ ಫಿರಂಗಿ ತೋರಿಸಿದೆ. ಅದರ ಮುಂದೆ ಯಾವುದೇ ವಿವರಣೆ ಇಲ್ಲದ ಕಾರಣ ಅವರು ಅವರ ಸೈಕಲಿನೊಂದಿಗೆ ಫಿರಂಗಿಯ ಚಿತ್ರ ಸೆರೆ ಹಿಡಿದದ್ದು ನನ್ನ ಒತ್ತಾಯಕ್ಕೆ.

ಬಿ ಸಿ ರೋಡು ದಾಟಿದ ನಂತರ ನಾನು ಅವರಿಂದ ಬೀಳ್ಕೊಂಡೆ.  ಅವರೊಂದಿಗೆ  ಸುಮಾರು ಹದಿನೈದು ಕಿಮಿ  ಸಾಗುವ  ಸದವಕಾಶ  ನನ್ನದಾಗಿತ್ತು.   ಮಾತನಾಡುತ್ತಾ ನಾವು ಹತ್ತು ನಿಮಿಷ ಅಲ್ಲಿದ್ದೆವು. ಅವರು ಮುಂದಕ್ಕೆ ಸಾಗಿದ ನಂತರ ಪಕ್ಕದಲ್ಲಿದ್ದವರು ಹೇಳಿದರು – ಎದುರಿನಲ್ಲಿ ತಾಜ್ ಸೈಕಲ್ ಅಂಗಡಿ ಉದ್ಘಾಟನೆ. ಮೊದಲೇ ನಮಗೆ ಅರಿವಿಗೆ ಬಂದಿದ್ದರೆ ನಾನು ಈ ಬೆಳ್ಜಿಯಮ್ ಜೋಡಿಯನ್ನು ಅಲ್ಲಿ ಕರೆದೊಯ್ದು ಅವರಿಗೆ ಶುಭ ಕೋರುತ್ತಿದ್ದೆವು.


ಕಾರಣಾಂತರ ನನ್ನ ಕೆಮರಾ ದ್ವಂಸಗೊಂಡ ಕಾರಣ ಉತ್ತಮ ಚಿತ್ರ ತೆಗೆಯಲು ಸಾದ್ಯವಾಗಲಿಲ್ಲ. ಜತೆಯಲ್ಲಿರುವ ಪೋಟೊ ತೆಗೆದದ್ದು ಬಹು ಕಾಲ ಉಪಯೋಗಿಸದಿದ್ದ ಅಗಲ ಕೋನದ ಮಸೂರದ ಕೆಮರದಲ್ಲಿ. ಅದುದರಿಂದ ಗುಣಮಟ್ಟ ಕಳಪೆ.  http://is.gd/k0uj4b  ಯಲ್ಲಿ  ಅವರ  ಸೈಕಲ್ ಚಾಲನೆ ನೋಡಬಹುದು. ಇಪ್ಪತ್ತೈದು ವರ್ಷ  ಹಿಂದೆ ನಾನು ಸೈಕಲು ಪ್ರವಾಸ  ಕೈಗೊಂಡಾಗ  ಹಲವು ವಿದೇಶಿಯರ  ಆತಿಥ್ಯ  ಎಂದೂ  ಮರೆಯುವಂತದ್ದಲ್ಲ.  ಹಾಗೆ  ಈ  ಸೈಕಲಿಗರಿಗೆ   ನನ್ನ  ಕೈಲಾದ  ಆತಿಥ್ಯ ಕೊಡಲು  ಸಾದ್ಯವಾದುದು   ಧನ್ಯತಾ  ಬಾವ  ಮೂಡಿಸುತ್ತದೆ.   ಮತ್ತೊಂದು ತಮಾಷೆ ಎಂದರೆ  ಜರ್ಮನಿಯ  ಸೈಕಲು ಗೆಳೆಯ  ಫ್ರೆಡ್  ಬಾರತಕ್ಕೆ ಬಂದಾಗ    ನಾನು  ನಾಲ್ಕು   ವರ್ಷದ ಬಾಲಕ.  ಅದೇ  ರೀತಿ  ನಾನು  ಇವರ  ಬೆಳ್ಜಿಯಂ  ಸಂದರ್ಶಿಸಿದಾಗ  ಇವರಿಗೂ  ಸುಮಾರು  ಅದೇ ವಯಸ್ಸು -   ನಾಲ್ಕು ವರ್ಷದ  ಆಸುಪಾಸು.   

Friday, December 02, 2011

ಅಗತ್ಯವಿರುವವರಿಗೆ ವಿಮೆ ಕವಚ ಇಲ್ಲ

ಮೊನ್ನೆ ಮಂಗಳೂರಿನಿಂದ ಸರಕು ಹೊತ್ತು ಹೊರಟ ಹಡಗೊಂದು ಲಕ್ಷದ್ವೀಪದ ತೀರದಲ್ಲಿ ಮುಳುಗಿದ ವಿಚಾರ ಪತ್ರಿಕೆಯಲ್ಲಿ ಓದಿದೆ. ನಲುವತ್ತು ಲಕ್ಷ ರೂಪಾಯಿ ಹಡಗಿನ ಮೌಲ್ಯ. ಸಮುದ್ರದಲ್ಲಿ ಸಾಗುವ ಈ ಪುಟ್ಟ ಹಡಗುಗಳಿಗೆ ವೀಮೆ ಇಲ್ಲವೆನ್ನುವಾಗ ನನಗೆ ಕಳೆದ ವರ್ಷ ವೀಮಾ ಕಂಪೇನಿ ಸುತ್ತಿದ ವಿಚಾರ ನೆನಪಾಯಿತು.

ಕಳೆದ ವರ್ಷ ನಾನು ತ್ರಿಚಕ್ರ ತರಿಸಿ ನನ್ನ ದೂರ ಪ್ರಯಾಣದ ತಯಾರಿ ನಡೆಸುತ್ತಿದ್ದ ಕಾಲ. ಹಿರಿಯರಾದ ಶ್ರಿಪಡ್ರೆಯವರು ಹಲವು ಸಲಹೆ ಸೂಚನೆಗಳ ಕೊಟ್ಟಿದ್ದರು. ಅದರಲ್ಲಿ ಈ ವಿಮಾ ಯೋಜನೆಯೂ ಒಂದು. ಲಕ್ಷಾಂತರ ರೂಪಾಯಿ ವಿನಿಯೋಗಿಸಿದ ತ್ರಿಚಕ್ರದಲ್ಲಿ ಹಿಂದೆ ನೋಡದ ಪರಿಚಿತರಿಲ್ಲದ ಊರುಗಳಿಗೆ ಏಕಾಂಗಿಯಾಗಿ ಹೊರಟಿದ್ದೆ. ಅದುದರಿಂದ ವಿಮಾ ಪಡಕೊಳ್ಳುವುದು ಉತ್ತಮವೆನ್ನುವುದು ಸರಳ ವಿಚಾರ.

ಸೂಚನೆ ಕೊಟ್ಟುದಲ್ಲದೆ ಒಬ್ಬ ವಿಮಾ ಅಧಿಕಾರಿಯ ಸಂಪರ್ಕವನ್ನೂ ಶ್ರಿಪಡ್ರೆಯವರೇ ಕಲ್ಪಿಸಿಕೊಟ್ಟರು. ಹಾಗೆ ತಯಾರಿಯ ಗಡಿಬಿಡಿಯಲ್ಲಿಯೇ ಹಲವು ಬಾರಿ ಪುತ್ತೂರಿನ ವಿಮಾ ಕಛೇರಿಗೆ ಓಡಿದೆ. ಇದಕ್ಕೆ ಚಾಸಿ ನಂಬರ್ ಉಂಟಾ, ಆರ್ ಟಿ ಒ ಪರವಾನಿಗೆ ಉಂಟಾ ಇತ್ಯಾದಿ ಪ್ರಶ್ನೆಗಳ ಸರಮಾಲೆ ಮೇಲಿನವರು ರವಾನಿಸಿದರು. ಇಂತಹ ಗಾಡಿಗೆ ಹಿಂದೆ ಯಾವುದೇ ಬಾರತೀಯ ಕಂಪೇನಿ ವೀಮೆ ಕೊಟ್ಟಿರುವ ಸಾದ್ಯತೆ ಇಲ್ಲ. ಹಾಗಾಗಿ ನೀವೆ ಮೊದಲಿಗರಾಗಿರುತ್ತೀರಿ ಎಂದೂ ಹೇಳಿದೆ. ಪ್ರಯೋಜನವಾಗಲಿಲ್ಲ. ಅದರ ನೈಜ ಬೆಲೆ, ಖಚಿತ ಗುರುತು ಮೇಲಿನವರಿಗೆ ಸ್ಪಷ್ಟ ಪಡಿಸಲು ತಿಂಗಳುಗಳೇ ಬೇಕು ಅನಿಸಿತು. ಹಾಗಾಗಿ ಪ್ರವಾಸದ ಅವದಿಗೆ ವೀಮಾ ಕವಚದ ಆಸೆ ಬಿಟ್ಟೆ.

ನನ್ನ ಪ್ರವಾಸದುದ್ದಕ್ಕೂ ಯಾರಲ್ಲೂ ನನ್ನ ತ್ರಿಚಕ್ರದ ನೈಜ ಬೆಲೆ ಹೇಳುತ್ತಿರಲಿಲ್ಲ. ಹತ್ತು ಸಾವಿರವೋ ಅಂದಾಗ ಹೂಂ ಅನ್ನುತ್ತಿದ್ದೆ. ಹದಿನೈದೋ ಅಂದಾಗ ಹೌದು ಅನ್ನುತ್ತಿದ್ದೆ. ಅಂತೂ ಏನೂ ತೊಂದರೆಯಾಗದೆ ಸುಮಾರು ಒಂದೂವರೆ ವರ್ಷಗಳಿಂದ ಸುದಾರಿಸುತ್ತಿದ್ದೇನೆ. ನಮ್ಮೂರಲ್ಲಿ ಇಂತಹ ಬೇರೆ ತ್ರಿಚಕ್ರ ಇಲ್ಲದಿರುವದರಿಂದ ಕಳವು ಸಾದ್ಯತೆ ಕಡಿಮೆ. ಕದ್ದರೂ ಉಪಯೋಗಿಸುವುದು ಕಷ್ಟ. ಆಯಾ ಊರಲ್ಲಿ ನೆಲೆ ಇಲ್ಲದ ಪ್ರವಾಸಿಗಳು ಯಾವಾಗಲೂ ಪುಡಿಕಳ್ಳರ ಬಲಿಪಶು.


Monday, October 17, 2011

ನಾಲ್ಕು ಸದಾಸಂ ಮಾರಾಟವಾಯಿತು


ನಾನು ತರಿಸಿದ ಐದು ಸದಾಸಂಗಳಲ್ಲಿ ನಾಲ್ಕು ಇತ್ತೀಚೆಗೆ ಮಾರಾಟವಾದವು. ಇವು ನಾಲ್ಕು, ನಾಲ್ಕು ವರ್ಷಗಳ ಕಾಲ ನನ್ನ ಮನೆಯ ಕೋಣೆಯೊಂದರಲ್ಲಿ ಇದ್ದು ಈಗ ಒಮ್ಮೆಗೆ ಎಂಬಂತೆ ಮಾರಾಟವಾದವು. ಎರಡು ಗಿರಾಕಿಗಳೂ ಇಲ್ಲಿಗೆ ಬಂದು ಗುಣಮಟ್ಟ ಹಾಗೂ ಬೆಲೆ ಬಗೆಗೆ ತೃಪ್ತರಾಗಿ ಕೊಂಡುಹೋದದ್ದು ಈ ಬಗೆಗೆ ಮುಖ್ಯ ವಿವರಗಳ ಇಲ್ಲಿ ದಾಖಲಿಸುತ್ತಿದ್ದೇನೆ.

ದೇಹ ಸಹಕರಿಸದ ಕಾರಣ ಮಳೆಗಾಲ ನಾಲ್ಕು ತಿಂಗಳು ತೋಟಕ್ಕೆ ಹೋಗುವುದನ್ನೇ ನಿಲ್ಲಿಸಿದ್ದೆ. ಹಲವು ಬಾರಿ ಜಾರಿ ಬಿದ್ದೆ. ಹೋದಾಗಲೂ ಗಮನವೆಲ್ಲ ಅಡಿಕೆ ಮರ, ಕೊಳೆರೋಗದ ಬಾಧೆ, ಕಳೆ ಇತ್ಯಾದಿಗಳ ಬದಲಿಗೆ ನನ್ನ ಸದಾ ಬಾದಿಸುತ್ತಿರುವ ನೋವಿನ ಕಡೆಗೆ ಇರುತಿತ್ತು. ಪ್ರತಿಯೊಂದು ತೋಟದ ನಿರ್ವಹಣೆಯಲ್ಲೂ ಸಣ್ಣ ಪುಟ್ಟ ವ್ಯತ್ಯಾಸಗಳು. ಹಳೆಯ ಕೆಲಸಗಾರರೆಲ್ಲ ಬರುವುದ ನಿಲ್ಲಿಸಿದ ಕಾರಣ ನನ್ನ ತೋಟದ ಬಗೆಗೆ ಅನುಬವವಿಲ್ಲದ ಹೊಸಬರ ಅಬಿಪ್ರಾಯವನ್ನೇ ಅವಲಂಬಿಸುವಂತಾಯಿತು. ಆದರೆ ಕೃಷಿ ಕಾರ್ಮಿಕರದೊಂದು ಸಮಸ್ಯೆ. ಅವರು ತಲೆಯನ್ನು ಮನೆಯಲ್ಲಿಯೇ ಬಿಟ್ಟು ಬರುತ್ತಾರೆ.

ತೋಟವನ್ನು ಸುದಾರಿಸುವುದು ನನ್ನ ಕರ್ತವ್ಯ ಜೀವನೋಪಾಯ. ದೇಹ ಸೋತ ಐವತ್ತು ಸಮಿಪಿಸುತ್ತಿರುವ ನನಗೆ ಹೊಸ ಉದ್ಯೋಗ ಕಷ್ಟಸಾದ್ಯ. ನನ್ನ ಕುಟುಂಬ ಹಾಗೂ ಕೆಲಸಗಾರರಿಗಾಗಿ ಬೆಳೆ ರೂಡಿ ಮಾಡಿ ಮಾರುವುದು ಮತ್ತು ನಿರ್ವಹಿಸುವುಸುದು ನಾನು ಅವಶ್ಯ ಕರ್ತವ್ಯ ಎಂದು ಬಾವಿಸುತ್ತಿದ್ದೆ. ಕ್ರಮೇಣ ಕೆಲಸಗಾರರೂ ಕುಟುಂಬದವರೂ ಬೆನ್ನ ಹಿಂದಿರುವುದು ನನ್ನ ಭ್ರಮೆ ಅನಿಸಹತ್ತಿ ಅಗಿದುಗಿಯುವ ಅಡಿಕೆಯ ತೋಟದ ಬಗೆಗೆ ಆಸಕ್ತಿ ಕಳಕೊಂಡೆ.

ನಾಲ್ಕು ವರ್ಷಗಳ ಹಿಂದೆ ನನಗೆ ಚೀನಾದಿಂದ ಸದಾಸಂ ತರಿಸುವ ಅಲೋಚನೆ ಬಂತು. ದಶಕದ ಹಿಂದೆ ಅಡಿಕೆಪತ್ರಿಕೆಯಲ್ಲಿ ಸದಾಸಂ ಬಗೆಗೊಂದು ನುಡಿಚಿತ್ರವಿತ್ತು. ಸುತ್ತುಮುತ್ತು ವಿಚಾರಿಸಲು ಬೆಂಗಳೂರಿನಲ್ಲಿದ್ದ ಮಾರಾಟಗಾರರೊಬ್ಬರು ವಿಪರೀತ ದುಬಾರಿ ಬೆಲೆ ಹೇಳುತ್ತಿದ್ದುದರಿಂದ ನೇರವಾಗಿ ತರಿಸುವ ಆಲೋಚನೆ ಮಾಡಿದೆ. ಮೇಲ್ನೋಟಕ್ಕೆ ಅವರ ಮಾರಾಟ ನಂತರದ ಸೇವೆ ಸೊನ್ನೆ ಅನಿಸುತಿತ್ತು.

ಹೀಗೆ ಪರ್ಯಾಯಗಳ ಚಿಂತಿಸಹತ್ತಿದೆ. ಸ್ಪೈನ್ ದೇಶದ ಒಂದು ತಯಾರಕರೊಂದಿಗೆ ಪತ್ರವ್ಯವಹಾರ ನಡೆಯಿತು. ಅಗತ್ಯ ಬಿದ್ದರೆ ಹೋಗಿ ತರುವುದೆಂದು ನಿರ್ದರಿಸಿ ಅದಕ್ಕೂ ತಯಾರಿ ನಡೆಸಿದ್ದೆ. ಕೊನೆಗೆ ಅವರು ನಮ್ಮಲ್ಲಿ ನೇರಮಾರಾಟ ಇಲ್ಲ, ವ್ಯಾಪಾರಿಗಳಿಗೆ ಮಾತ್ರ ಎಂದು ಹೇಳಬೇಕೆ ?

ಮೊದಲೇ ಚೀನಾ ಕಂಪೇನಿಯೊಂದಿಗೆ ಸಂಪರ್ಕಿಸಿದ್ದೆ. ಹೆಚ್ಚು ಕಮ್ಮಿ ಅದೇ ಅಕಾರ ಆದರೆ ಸ್ವಲ್ಪ ಅಗ್ಗದ ಮಾಲು. ಹಲವಾರು ಪತ್ರಗಳ ವಿನಿಮಯವಾಯಿತು. ಎಲ್ಲವೂ ಸಮರ್ಪಕ ಅನಿಸಿದ ನಂತರ ಹಣ ಕಳುಹಿಸಲು ತಯಾರಾದೆ. ಹೀಗೆ ಎಲ್ಲವೂ ನಿರ್ದಾರವಾದ ನಂತರ ನಾವು ಕಳುಹಿಸುವುದು ಒಂದು ಪೆಟ್ಟಿಗೆ ಅಂದರೆ ಒಮ್ಮೆಗೆ ಮೂವತ್ತ ಮೂರು ಸದಾಸಂ. ಸಾಂಪಲ್ ಅಂದರೆ ಐದು ಆದರೆ ಅದಕ್ಕೆ ಮೂವತ್ತು ಡಾಲರ್ ಹೆಚ್ಚು ಕೊಡಬೇಕು ಎಂದರು. ಹೀಗಾಗಿ ಒಂದು ಉಪಯೋಗಕ್ಕೆ ಹಾಗೂ ಎರಡನೆಯದು ಬಿಡಿಬಾಗಕ್ಕೆ ಹೀಗೆ ಎರಡು ತರಿಸುವ ಆಸಕ್ತಿ ಇದ್ದ ನಾನು ಅನಿವಾರ್ಯವಾಗಿ ಐದು ತರಿಸಬೇಕಾಯಿತು.

ಐದರಲ್ಲಿ ನಾಲ್ಕನ್ನು ಒಳಗಿರಿಸಿ ಒಂದನ್ನು ಮಾತ್ರ ಉಪಯೋಗಿಸುತ್ತಿದ್ದೆ. ಅಗತ್ಯಕ್ಕೆ ಅವುಗಳಲ್ಲಿ ಒಂದರ ಚಕ್ರ, ಬಿಡಿ ಬಾಗಗಳ ಕಳಚಿದ್ದುಂಟು. ಮಳೆಗಾಲದಲ್ಲಿ ಸಿಂಪರಣೆ ನೋಡಿಕೊಳ್ಳಲು ಮತ್ತು ಬೇಸಿಗೆಯಲ್ಲಿ ನೀರಾವರಿ ಬಗೆಗಿನ ಓಡಾಟಕ್ಕೆ ಬಹಳ ಉಪಯುಕ್ತವಾಗಿತ್ತು. ಹಲವು ಬಾರಿ ಸಮುದ್ರತೀರಕ್ಕೆ ಒಮ್ನಿಯಲ್ಲಿ ಹಾಕಿ ಕೊಂಡುಹೋಗಿದ್ದೆವು. ಒಮ್ಮೆ ಪಣಂಬೂರಿನಿಂದ ಮಲ್ಪೆ ವರೆಗೆ ಮರಳಿನ ಮೇಲೆ ಓಡಿಸಿದ್ದೆವು.

ಸದಾಸಂ ಉಪಯೋಗಕ್ಕೆ ನಮಗಿರುವ ಅವಕಾಶಗಳು ಹೆಚ್ಚಿಲ್ಲ. ಸುತ್ತುಮುತ್ತಲಿನ ಎಲ್ಲ ರಸ್ತೆಗಳೂ ಜಲ್ಲಿ ಡಾಂಬರು ಹಾಸಿರುವುದರಿಂದ ಇದರ ಉಪಯೋಗಕ್ಕೆ ಯೋಗ್ಯವಲ್ಲ. ಹಾಗೆ ಕೆಲವು ಕಚ್ಚಾ ಮಣ್ಣ ರಸ್ತೆಗಳಿದ್ದರೂ ಅವರು ಅರಣ್ಯ ಇಲಾಖೆಯ ಮರ್ಜಿಯಲ್ಲಿವೆ. ಘಾಟಿ ರಸ್ತೆಗಳ ಬಗೆಗೆ ವಿಚಾರಿಸಿದರೂ ಅನುಕೂಲಕರ ಉತ್ತರ ಎಲ್ಲಿಂದಲೂ ಬಂದಿರಲಿಲ್ಲ. ಹಾಗೆ ನನ್ನ ಜಮೀನಿನ ಹೊರಗೆ ಎಂದರೆ ಸಮುದ್ರತೀರದಲ್ಲಿ ಮಾತ್ರ ಉಪಯೋಗಿಸಲು ಸಾದ್ಯವಾಯಿತು.

ಸರಕು ಸಾಗಾಣಿಕೆಗೆ ಆರು ಸಾವಿರ ಖರ್ಚಿನಲ್ಲಿ ಒಂದು ಹಿಂಬಾಲಕ ಗಾಡಿ ಮಾಡಿಸಿದರೂ ಅದು ಸದುಪಯೋಗವಾಗಲಿಲ್ಲ. ಹೆಚ್ಚು ಸಾಮಾನು ಹಾಕಲು ಇದರ ತೂಕ ಸಾಲುತ್ತಿರಲಿಲ್ಲ. ಸಾಮಾನು ಎತ್ತಿ ಹಾಕಲು ನಾನು ದುರ್ಬಲನಾಗಿ ವಿಫಲ. ಕೆಲಸದವರಿಗೆ ನಾನು ಎದುರಿಲ್ಲದಿದ್ದರೆ ಉತ್ತಮ ಎನಿಸಿ ನೀವು ಹೋಗಿ ನಾವು ಹೊತ್ತು ತರುತ್ತೇವೆ ಅನ್ನುತ್ತಿದ್ದರು.

ನಮ್ಮ ತೊಟದ ಬದಿಯ ತೋಡು ನಲ್ವತ್ತು ಕಿಮಿ ದೂರ ಸುತ್ತು ಬಳಸಿ ಕೊನೆಗೆ ಸಮುದ್ರ ಸೇರುವುದು ಕಾಸರಗೋಡು ತಾಲೂಕಿನ ಉಪ್ಪಳದಲ್ಲಿ. ಒಮ್ಮೆ ಎರಡು ಸದಾಸಂ ಬಳಸಿ ಸಾಗಲು ಎಲ್ಲ ಸಿದ್ದತೆ ನಡೆಸಿದ್ದೆ. ಬೆಂಬಲ ವಾಹನಕ್ಕೆ ಪಕ್ಕದ ಮನೆಯ ಅಪತ್ಬಾಂದವ ಅನಿಲ್ ಕುಮಾರರ ಸಹಕಾರ ಕೋರಿದೆ. ಇದಕ್ಕೆ ಅವಕಾಶದ ಕಿಂಡಿ ಇರುವುದು ಮಳೆ ಬರುವ ಮುನ್ನ ತೋಡು, ಹೊಳೆಯಲ್ಲಿ ಕಟ್ಟ ತೆಗೆದ ನಂತರದ ಒಂದು ವಾರ ಅಂದರೆ ಮೆ ತಿಂಗಳ ಕೊನೆಯಲ್ಲಿ ಮಾತ್ರ. ನನ್ನ ಉತ್ಸಾಹ ಮಕ್ಕಳಲ್ಲಿ ಇರದ ಕಾರಣ ನಿರೀಕ್ಷಿತ ಸಹಾಯ ದೊರಕಲಿಲ್ಲ. ತಯಾರಿ ವ್ಯರ್ಥವಾಯಿತು. ಪ್ರವಾಸ ಕನಸಿನಲ್ಲಿಯೇ ಉಳಿಯಿತು.

ಸದಾಸಂಗಳ ಮಾರಲು ತಯಾರಿದ್ದರೂ ತೀರಾ ಉತ್ಸುಕನೂ ಆಗಿರಲಿಲ್ಲ. ಅದು ಬಳಸುವ ಪೆಟ್ರೊಲ್ ಉಪಯೋಗ ಕನಿಷ್ಟಗೊಳಿಸಲು ಮನಸಾಕ್ಷಿ ಒತ್ತಡ ಹಾಕುತಿತ್ತು. ಒಮ್ಮೊಮ್ಮೆ ಉಳಿದ ನಾಲ್ಕರ ಗುಜರಿಗೆ ಹಾಕೋಣವೆನಿಸಿದ್ದೂ ಇದೆ. ಆದರೆ ಎರಡು ಕಾರಣಗಳಿಗೆ ಉಳಿಸಿದೆ. ಮೊದಲನೆಯದಾಗಿ ನಾನು ಅಷ್ಟೊಂದು ಆರ್ಥಿಕವಾಗಿ ಸಬಲನಲ್ಲ. ಎರಡನೆಯದು ಅದು ಅದರ ಸೇವಾವದಿಯ ಇಂದನ ಬಳಕೆ ಮತ್ತು ಪರೀಸರ ಮಲೀನತೆ ಲೆಕ್ಕಹಾಕಿದರೆ ಸುಮಾರು ಮೂರನೇಯ ಒಂದು ತಯಾರಿಯಲ್ಲಿಯೇ ಖರ್ಚಾಗಿರುತ್ತದೆ. ಅದುದರಿಂದ ನೈತಿಕವಾಗಿಯೂ ಒಂದು ಉಪಯೋಗವಾಗಬಹುದಾದ ವಸ್ತು ಗುಜರಿಗೆ ಹಾಕುವುದು ಸಮಂಜಸ ಎನಿಸಲಿಲ್ಲ.

ಲೆಕ್ಕಾಚಾರದಲ್ಲಿ ಅಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ಒಂದಕ್ಕೆ ೧೧೦ ಸಾವಿರ ಅಂತಿದ್ದರು. ನಾನು ಐದಕ್ಕೆ ಸುಮಾರು ೧೭೦ ಖರ್ಚು ಮಾಡಿದ್ದೇನೆ. ಅಂದರೆ ಒಂದಕ್ಕೆ ಸುಮಾರು ಮೂವತ್ತನಾಲ್ಕು. ಈಗ ನನಗೆ ಸಿಕ್ಕಿದ್ದು ಸರಾಸರಿ ನಲವತ್ತು.

ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ನನ್ನದಕ್ಕೆ ಎಪ್ಪತ್ತು ಸಾವಿರ ಅಂದೇ ತೆಗೆದಿರಿಸಿದ್ದರೆ ಉಳಿದ ನಾಲ್ಕರ ಆಂದಿನ ಅಸಲು ಒಂದು ಲಕ್ಷವೆಂದು ಪರಿಗಣಿಸಿದರೆ ನನಗೆ ಈಗ ಸಿಕ್ಕಿದ ೧೬೦ ಅನ್ನುವಾಗ ಬಡ್ಡಿ ಒಂದಂಶ ದೊರಕಿತು ಅನ್ನಬಹುದು. ಸರಿಯಾಗಿ ನಾಲ್ಕು ವರ್ಷ ಸಮಯ. ಅಂತೂ ಒಂದು ಲೆಕ್ಕಾಚಾರ ಮುಕ್ತಾಯ.

ನನಗಿವು ನನ್ನಂತೆ ಅಂಗವಿಕಲತೆ ಬಾದಿಸುವ ಅಥವಾ ಕೃಷಿಕರಿಗೆ ಉಪಯೋಗವಾಗಬೇಕೆನ್ನುವ ಆಸೆ ಇತ್ತು. ಆದರೆ ನಾಲ್ಕು ವರ್ಷ ಅಂದರೆ ಸಾವಿರದ ಐನೂರು ದಿನ ಯಾರೂ ಪೈಕಿ ಅನಿಸಿಕೊಳ್ಳುವವರು ಸಂಪರ್ಕಿಸಲಿಲ್ಲ. ಕೊನೆಗೆ ನಾನು ತ್ರಿಪುರಕ್ಕೆ ಮಾರಿದ ಒಂದು ಮತ್ತು ಚಂದಿಗಡಕ್ಕೆ ಮಾರಿದ ಮೂರು ಪಟ್ಟಣಿಗರ ಮೋಜಿನ ಸವಾರಿಗೆ ಉಪಯೋಗಿಸಲ್ಪಡುವುದೆನ್ನುವ ಬೇಸರ ನನಗುಳಿಯುತ್ತದೆ.

ನಾನು ತರಿಸುವಾಗಲೇ ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆಯವರು ತಕ್ಷಣ ಮಾರಲೂ ತಯಾರಾಗಿರು ಎನ್ನುವ ಒತ್ತಾಯದ ಸೂಚನೆ ಕೊಟ್ಟಿದ್ದರು. ಆದರೆ ನಾನು ನಾಲ್ಕು ದಿನ ಉಪಯೋಗಿಸಿ ಅನಂತರ ಆಲೋಚನೆ ನನ್ನದಾಗಿತ್ತು. ಗೋವಿಂದ ಗುಜರಿ ಮಾರಿ ಮೋಸ ಮಾಡಿದ ಅನ್ನುವ ಮಾತು ಕೇಳಲು ನಾನು ತಯಾರಿರಲಿಲ್ಲ.

ಕೊನೆಯ ಮೂರು ನನ್ನ ಕಣ್ಣೆದುರಿನಿಂದ ಮರೆಯಾಗಿ ಒಂದೇ ಘಂಟೆಯಲ್ಲಿ ನನಗೊಂದು ದೂರವಾಣಿ ಸಂದೇಶ – ನಾಳೆ ನಿಮ್ಮಲ್ಲಿಗೆ ಬರುತ್ತೇವೆ. ಕೊನೆಗೆ ಬಂದ ಚಾಮರಾಜನಗರದ ಕೃಷಿಕ ಕೈಲಾಸಮೂರ್ತಿಯವರು ನನ್ನ ಸದಾಸಂ ಸುತ್ತು ಬಂದು ಹಲವು ಯೋಚನೆ ಯೋಜನೆಗಳ ನನ್ನ ಮುಂದಿಟ್ಟರು. ನಾನೂ ಯೋಚನೆಗೆ ಸಾದ್ಯವಾದ ಸಾದ್ಯತೆಗಳ ಅವರೊಂದಿಗೆ ಚರ್ಚಿಸಿದೆ. ಮರುದಿನ ಪುನಹ ದೂರವಾಣಿಯಲ್ಲಿ ನನ್ನ ವೈಯುಕ್ತಿಕ ಗಾಡಿಯನ್ನು ಕೊಡಬಹುದೋ ? ಕೇಳಿದರು. ಈಗ ಅದು ಉಪಯೋಗವಾಗುತ್ತಿಲ್ಲವಾದರೂ ನನಗಿರುವ ಆದರವಿದೆಯಲ್ಲಾ ? ಅದನ್ನು ಮೀರಲು ಸಾದ್ಯವಾಗುವುದಿಲ್ಲ.

Wednesday, October 05, 2011

ಸೈಕಲ್ ಹತ್ತಿ ಹೊರಟಿತು ರಾಣಿಯವರ ಬೇಟಿಗೆ ಹೊಸ ಮಂತ್ರಿಗಳ ಪಟಲಾಂ

ನಮ್ಮಲ್ಲಿ ಹೊಸ ಮಂತ್ರಿಮಂಡಲ ಅಧಿಕಾರ ಸ್ವೀಕರಿಸಿದ ಅನಂತರ ಅದ್ಯಕ್ಷರ ಅಥವಾ ರಾಜ್ಯಪಾಲರ ಬೇಟಿಗೆ ಹೊಗುವುದಿದೆಯಲ್ಲ, ಅಂತೆಯೇ ಡೆನ್ಮಾರ್ಕ್ ದೇಶದಲ್ಲಿ ಹೊಸ ಮಂತ್ರಿ ಮಂಡಲ ಅಧಿಕಾರ ಸ್ವೀಕರಿಸಿದ ಅನಂತರ ಸುದ್ದಿ ತಿಳಿಸಲೆಂದು ಸೌಹಾರ್ದ ಬೇಟಿಗೆಂದು ಅರಮನೆಗೆ ರಾಣಿಯ ಬೇಟಿಗೆ ಹೋಗುವುದು ಸಂಪ್ರದಾಯ. ಲ್ಲಿ ರಾಣಿಯವರು ಚಾ ಹಾಗೂ ಬಿಸ್ಕಿತು ಕೊಟ್ಟು ಈ ಹೊಸ ಮಂತ್ರಿಗಳ ಸತ್ಕರಿಸುತ್ತಾರೆ.

ನಮ್ಮಲ್ಲಾದರೆ ಇಂತಹ ಸನ್ನಿವೇಶಗಳಲ್ಲಿ ಹೊಸ ಮಾದರಿ ದುಬಾರಿ ಕಾರುಗಳ ಮೆರವಣಿಕೆಯೇ ಸಾಗುತ್ತದೆ. ಮೆರವಣಿಕೆ ಆಡಂಬವರವೆನಿಸಿದಷ್ಟು ತನ್ನ ಘನತೆ ಹೆಚ್ಚೆನ್ನುವ ಭ್ರಮೆ ಮಂತ್ರಿ ಸಾಹೇಬರಿಗೆ. ಯೆಡ್ಡಪ್ಪನ ಸರ್ಕಾರ ಸದಾ ಅಕಾಶದಲ್ಲಿ ಹಾರಾಡುತ್ತಿದ್ದ ಆತನಿಗಾಗಿ ಇತ್ತೀಚೆಗೆ ನಾಲ್ಕು ಬಹು ದುಬಾರಿ ಕಾರುಗಳನ್ನೂ ಕೊಂಡಿತ್ತು.

ಅಲ್ಲಿ ಇತ್ತೀಚೆಗೆ ಹೊಸ ಸಮ್ಮಿಶ್ರ ಸರಕಾರ ಅಧಿಕಾರ ಸ್ವೀಕಾರ ಮಾಡಿದ ಅನಂತರ ಹೊಸ ಮಂತ್ರಿಗಳೆಲ್ಲ ರಾಣಿಯ ಬೇಟಿಗೆಂದು ತೆರಳಿದರು. ಹೌದಾ ಇದರಲ್ಲೇನು ವಿಶೇಷ ? ೨೩ ಜನರ ಮಂತ್ರಿಮಂಡಲದಲ್ಲಿ ಆರು ಸ್ಥಾನ ಪಡಕೊಂಡ ಕಿರಿಯ ಪಕ್ಷದ ಹೊಸ ಮಂತ್ರಿಗಳು ಅರಮನೆಗೆ ಹೋದದ್ದು ಸೈಕಲು ತುಳಿದುಕೊಂಡು.

ಪ್ರಥಮ ಬಾರಿಗೆ ಮಂತ್ರಿಯಾದ ಮಧು ಸರೀನ್ ಎಂಬ ಬಾರತದಲ್ಲಿ ಜನಿಸಿದವರು ಒಂದು ವಿಶಿಷ್ಟ ಆದರೆ ಅಲ್ಲಿ ಜನಪ್ರಿಯವಾದ ಸರಕು ಸಾಗಾಣಿಕಾ ಸೈಕಲಿನಲ್ಲಿ ತೆರಳಿದ್ದರು. ಚುನಾವಣಾ ಪ್ರಚಾರಕ್ಕೂ ಅವರು ಇದೇ ಸೈಕಲು ಬಳಸಿದ್ದರು. ಅವರ ಸೈಕಲಿನಲ್ಲೊಂದು ಅಣು ವಿದ್ಯುತ್ ಬೇಡ ಕೃತಜ್ನತೆಗಳೆಂಬ ಸ್ಟಿಕ್ಕರ್ ಇತ್ತು. ಪ್ರಪಂಚಕ್ಕೊಂದು ಸುತ್ತು ಸೈಕಲು ಪ್ರವಾಸದಲ್ಲಿ ಇದೇ ಸ್ಟಿಕ್ಕರ್ ನನ್ನ ಸೈಕಲ್ ಡೈನೆಮೊಕ್ಕೆ ಅಂಟಿಸಿದ್ದೆ.


ಮುಮು ಸದಾನಂದ ಗೌಡ್ರು ಅಧಿಕಾರ ಸ್ವೀಕರಿಸಿ ದಕ್ಷಿಣ ಕನ್ನಡಕ್ಕೆ ಬಂದಾಗ ಮಂಗಳೂರಿನಿಂದ ಪುತ್ತೂರಿಗೆ ದಾವಿಸುತ್ತಿದ್ದ ಅವರ ಮೆರವಣಿಕೆಯಲ್ಲಿ ಐವತ್ತಕ್ಕೂ ಹೆಚ್ಚು ಕಾರು ಜೀಪುಗಳಿದ್ದವು ಎಂದು ನೆನಸಿಕೊಳ್ಳುವಾಗ ಹೇಸಿಗೆಯಾಗುತ್ತದೆ. ಹಲವರಲ್ಲಿ ಇದ್ದುದು ಚಾಲಕ ಮಾತ್ರ. ಅವುಗಳಲ್ಲಿ ಬಹುಪಾಲು ಇಂದನ ಖರ್ಚು ಸಮಾಜ ತುಂಬಿಕೊಡುವ ಸರಕಾರಿ ವಾಹನಗಳು. ನನ್ನ ಗ್ರಹಚಾರ ಎಂದರೆ ಅಂದು ನಾನು ಮಂಗಳೂರಿಗೆ ಹೊರಟಿದ್ದೆ.

http://www.copenhagenize.com/2011/10/bicycles-to-visit-queen.html

http://www.copenhagenize.com/2011/09/election-campaigning-by-bicycle.html

http://news.xinhuanet.com/english2010/world/2011-10/03/c_131173286.htm

Saturday, July 09, 2011

ದಕ್ಷಿಣ ಸುಡಾನ್ ಇಂದು ಸ್ವತಂತ್ರ

ಸೈಕಲು ಪ್ರವಾಸದಲ್ಲಿ ನಾನು ಕೆನ್ಯಾ ರಾಜದಾನಿ ನೈರೋಬಿಗೆ ಹಾರುವುದು. ಅನಂತರ ಉಗಂಡಾ, ಸುಡಾನ್ ದಾರಿಯಾಗಿ ಈಜಿಪ್ಟ್ ತಲಪುವುದು ನನ್ನ ಗುರಿಯಾಗಿತ್ತು. ಬಹು ಪಾಲು ರಸ್ತೆ ಇಲ್ಲದ ಕಾರಣ ಜುಬಾ ಪಟ್ಟಣದಿಂದ ನೈಲ್ ನದಿಯ ದೋಣಿಯಲ್ಲಿ ಉತ್ತರಕ್ಕೆ ಸಾಗುವುದು ನನ್ನ ಆಲೋಚನೆಯಾಗಿತ್ತು. ನನ್ನ ಉದ್ದೇಶಿತ ಹಾದಿಯಲ್ಲಿ ಬಹು ಕಾಲದಿಂದ ಅಂದರೆ ಅಂದಿಗೆ ಮೂವತ್ತು ವರ್ಷದಿಂದ ಜನಾಂಗಿಯ ಕಲಹ ನಡೆಯುತ್ತಿದ್ದರೂ ಹಲವು ಪ್ರವಾಸಿಗರು ದೋಣಿಯಲ್ಲಿ ದಾಟುವುದರಲ್ಲಿ ಸಫಲರಾಗಿದ್ದರು. ಅಲ್ಲಿನ ಒಂದು ದೋಣಿಯ ಚಿತ್ರ ಇಲ್ಲಿದೆ. http://is.gd/yuNje2 ನನ್ನ ಜರ್ಮನಿಯ ಸೈಕಲು ಗೆಳೆಯ ಫ್ರೆಡ್ ಪೋಲ್ ೧೯೬೪ ರಲ್ಲಿ ಇಲ್ಲೆ ದಾಟಿದ್ದರು. ಅದಕ್ಕೆ ನಾನು ಸಾಕಷ್ಟು ತಯಾರಿ ನಡೆಸಿದ್ದೆ.

ಆದರೆ ಕೆನ್ಯಾ ತಲಪುವಾಗ ಪರೀಸ್ಥಿತಿ ಕಠೀಣವಾಗಿರುವುದು ಅರಿವಾಯಿತು. ನನ್ನ ದಾರಿಯಲ್ಲಿದ್ದ ಉಗಂಡಾ ಹಾಗೂ ಸುಡಾನ್ ಅಂತರ್ಯುದ್ದ ಬರ್ಜರಿಯಾಗಿ ನಡೆಯುತ್ತಿದ್ದರೆ ಉತ್ತರದ ಇತಿಯೋಪಿಯ ಸಹಾ ದಾರಿ ಬಿಡುತ್ತಿರಲಿಲ್ಲ. ಹಾಗಾಗಿ ನನ್ನ ಯೋಜನೆಗಳೆಲ್ಲ ತಲೆಕೆಳಗಾಗಿ ಯುರೋಪಿನಿಂದ ಹಿಂತಿರುಗುವ ಬದಲು ಅಮೇರಿಕವನ್ನು ಹಾದು ಜಗತ್ತು ಪೂರ್ತಿ ಸುತ್ತು ಬರಲು ತೀರ್ಮಾನಿಸಿದೆ.

ಸುಡಾನ್ ದೇಶದಲ್ಲಿ ಉತ್ತರದಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯ. ಅದಿಕಾರವೆಲ್ಲ ಅವರ ಕೈಯಲ್ಲಿ ಕೇಂದ್ರಿತ. ದಕ್ಷಿಣದಲ್ಲಿ ವಾಸ್ತವ್ಯ ಇರುವುದು ಕರಿಯ ಕ್ರೈಸ್ತ ಅನುಯಾಯಿಗಳು. ಬ್ರೀಟಿಶರು ಸ್ವಾತಂತ್ರ ಕೊಡುವಾಗ ಈಜಿಪ್ಟ್ ಜತೆ ಒಪ್ಪಂದ ಮಾಡಿ ಒಂದು ಕಿತಾಪತಿ ಮಾಡಿದ್ದರು. ಕರಿ ಜನರೇ ಜೀವಿಸುವ ದಕ್ಷಿಣ ಸುಡಾನ್ ಪ್ರಾಂತ್ಯವನ್ನು ಪಕ್ಕದ ಕರಿಯ ಜನರಿರುವ ಕೆನ್ಯಾ ಉಗಂಡಾದಿಂದ ಬೇರ್ಪಡಿಸಿ ಬಹು ಕಾಲ ಈಜಿಪ್ಟ್ ವಶವಾಗಿದ್ದ ಉತ್ತರ ಸುಡಾನ್ ಜತೆ ಸೇರಿಸಿಬಿಟ್ಟರು. ಚಿತ್ರದಲ್ಲಿ ಕಾಣುವಂತೆ ಉತ್ತರಬಾಗ ಮರುಭೂಮಿಯಾದರೆ ದಕ್ಷಿಣಬಾಗದಲ್ಲಿ ಹುಲ್ಲುಗಾವಲು ಹಾಗೂ ಕುರುಚಲು ಕಾಡು. ಉತ್ತರದವರಿಂದ ಸತತವಾಗಿ ದಬ್ಬಾಳಿಕೆ, ಅನ್ಯಾಯ. ಶ್ರೀಲಂಕದಲ್ಲಿ ಇದ್ದಂತಹ ಪರೀಸ್ಥಿತಿ.

ಸ್ವಾತಂತ್ರ ಸಿಕ್ಕರೂ ಶಾಂತಿ ನೆಲೆಸುವುದು ??? ನಲುವತ್ತು ಬಿಲಿಯ ಡಾಲರ್ ಸಾಲವನ್ನು ಹೇಗೆ ಪಾಲು ಮಾಡುವುದು – ಈ ಸಾಲ ಕರಿಯರ ದಮನಕ್ಕೆ ವಿಮಾನ ಹಾಗೂ ಮದ್ದುಗುಂಡು ಖರೀದಿಗೆ ಈ ಸಾಲದ ಹಣ ಉಪಯೋಗವಾದದ್ದು ಹೊರತು ಅನ್ನ ಬಟ್ಟೆಗಾಗಿ ಅಲ್ಲ. ಕರಿಯರಿಗಂತೂ ಬಡಿಗೆ ಕೊಟ್ಟು ಬಡಿಸಿಕೊಂಡ ಅನುಭವ. ಅಪಾರ ಜೀವಹಾನಿಯಾಗಿದೆ. ಉದ್ದೇಶಿತ ಗಡಿ ಪ್ರದೇಶದ ನೆಲದಡಿಯಲ್ಲಿ ತೈಲಸಂಪತ್ತಿದೆ. ಸತತ ದಬ್ಬಾಳಿಕೆ ಅನುಭವಿಸಿದ ದಕ್ಷಿಣದಲ್ಲೀಗ ಬೆಡಿ ಹಿಡಿದ ಹಲವಾರು ಬಣಗಳಿವೆ. ಅವುಗಳ ಒಟ್ಟುಗೂಡಿಸುವುದು ಸುಲಭಸಾದ್ಯವಲ್ಲ. ಇವೆಲ್ಲ ಲೆಕ್ಕಾಚಾರ ಗೊಂದಲಾಮಯ. ಅದರೂ ಇನ್ನಾದರೂ ಶಾಂತಿ ನೆಲಸುವುದೋ ?

Friday, July 08, 2011

ಕೆನಡಾದ ವಿಕಲಾಂಗ ಮಹಿಳೆ ಕೈ ಚಾಲನೆ ತ್ರಿ ಚಕ್ರದಲ್ಲಿ ಬಾರತ ಅಳೆದದ್ದು


ಕಳೆದ ವಾರ ನನ್ನ ಪ್ರೀತಿಯ ನಾಯಿ ರಾಜುವನ್ನು ಪಶುವೈದ್ಯರಲ್ಲಿ ಕರಕೊಂಡು ಹೋದಾಗ ಹಿಂದಿನ ಬ್ರಿಯಾನ್ ಬಗೆಗಿನ ಪುಟದ ಬಗ್ಗೆ ಎರಡು ಮಾತುಗಳ ಹೇಳಿದ್ದೆ. ಮಾತಾಡುತ್ತಿರುವಾಗ ಡಾ ಪ್ರಸನ್ನಕುಮಾರ್ ಅವರು ಬ್ರಿಯಾನ್ ವಿಲ್ಸನ್ ಅವರಿಗೆ ವಿದ್ಯುತ್ ಅಳವಡಿಕೆ ಗೊತ್ತಿಲ್ಲವೇನೊ ಅನ್ನುವ ಸಂಶಯ ವ್ಯಕ್ತ ಪಡಿಸಿದ್ದರು. ಅಂದಿನ ಹುಡುಕಾಟದಲ್ಲಿಯೇ ಸ್ಲೊವೆನಿಯ ದೇಶದ ಸೈಕಲು ತಾಣವೊಂದರಲ್ಲಿ ಬಾರತಕ್ಕೆ ಸಂಬಂದಿಸಿದ ಈ ಕೆಳಗಿನ ಸುಳಿವು ಸಿಕ್ಕಿತು. http://www.udobnoposvetu.si/

ಇದೊಂದು ಕೆನಡ ದೇಶದ ಅಪಘಾತಕ್ಕೊಳಗಾದ ಕಾರಣ ದೇಹ ಸೋತ ೩೨ ವರ್ಷದ ಮಹಿಳೆ ಮೊರ್ಗನ್ ಬ್ರೇಡಾ ಅವರು ವಿದ್ಯುತ್ ಸಹಾಯಕ ಅಳವಡಿಸಿದ ಕೈ ಸೈಕಲಿನಲ್ಲಿ ಬಾರತವನ್ನು ಅಳೆದ ಕಥೆ. ಇದು ಹಲವು ಕಾರಣಗಳಿಗೆ ಹೆಚ್ಚು ಬೆಳಕು ಚೆಲ್ಲಬೇಕಾಗಿತ್ತು. ಅಂಗವಿಕಲತೆ ಮೀರಿ ನಡೆವ ಹಾಗೂ ವಿದ್ಯುತ್ ಸಹಾಯ ಸಮರ್ಥವಾಗಿ ಬಳಸುವ ಅತ್ಯುತ್ತಮ ಮಾರ್ಗದರ್ಶಿ ನಮಗಾಗಬಲ್ಲದು. ಸೊಂಟದ ಕೆಳಗೆ ವಶವಿಲ್ಲದ ಮಹಿಳೆ ಗಂಟೆಗಟ್ಟಲೆ ಕುಳಿತು ಸೈಕಲು ಚಾಲನೆ ಮಾಡುವುದು ಅದ್ಬುತವೇ ಸರಿ.http://theableproject.com/blog/


ನಾನು ಈ ಗುಂಪು ಪ್ರವಾಸದ ಬಗೆಗೆ ಮೊದಲು ಓದಿದರೂ ಈ ತ್ರಿಚಕ್ರ ಚಾಲಕಿ ಬಗೆಗೆ ಆಗ ಸುಳಿವು ಗೋಚರಿಸಿರಲಿಲ್ಲ. ಏಳು ವಾರಗಳಲ್ಲಿ ಅಗ್ರಾದಿಂದ ಕನ್ಯಾಕುಮಾರಿ ತನಕ ಸುಮಾರು ನಾಲ್ಕು ಸಾವಿರ ಕಿಮಿ ಇವರು ತ್ರಿ ಚಕ್ರ ತಿರುಗಿಸಿದ್ದರು. ಅದರ ಬಾಗವಾಗಿ ನಾನು ಕಳೆದ ವರ್ಷ ಹೋದ ಹೊಸಪೇಟೆಯಿಂದ ಮೈಸೂರು ವರೆಗಿನ ರಸ್ತೆಯಲ್ಲಿಯೇ ಆದರೆ ವಿರುದ್ದ ದಿಕ್ಕಿನಲ್ಲಿ ಅವರು ಸಾಗಿದ್ದರು. ಗುಂಪು ಪ್ರವಾಸದ ಬಾಗಿಯಾದರೂ ಇವರಿಗೆ ವಿಶೇಷ ವ್ಯವಸ್ಥೆಗಳ ಮಾಡಲಾಗಿತ್ತಂತೆ. ವೈಯುಕ್ತಿಕ ಬೆಂಗಾವಲು ವಾಹನ ಮೋರ್ಗನ್ ಬ್ರೇಡಾ ಅವರನ್ನು ಅನುಸರಿಸುತ್ತಿತ್ತು. ಮುಂಬಯಿಯಲ್ಲಿ ೪೨ ತ್ರಿಚಕ್ರ ಸೈಕಲುಗಳ ಅಂಗವಿಕಲರಿಗೆ ದಾನ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇಂತಹ ನಿಯೊಜಿತ ಪ್ರವಾಸಗಳು ನಮ್ಮಲ್ಲಿ ಅಪರೂಪ. ಮುಂಚಿನ ಸಂಜೆಯೇ ಯಾತ್ರಿಗಳಿಗೆ ಮರುದಿನದ ದಾರಿ ಬಗೆಗೆ ಸ್ಪಷ್ಟ ಮಾಹಿತಿ ಕೊಡಲಾಗುತ್ತದೆ. ನಿರ್ಣಾಯಕ ತಿರುವುಗಳ ಬಗೆಗೆ ವಿವರಗಳು ಕೊಡುವುದು ಮಾತ್ರವಲ್ಲ, ರಸ್ತೆ ಬದಿಯ ಯಾವುದಾದರೂ ಮರಕ್ಕೋ ಕಂಬಕ್ಕೋ ಹಳದಿ ರಿಬ್ಬನ್ ಕಟ್ಟಿರುತ್ತಾರೆ. ಪ್ರವಾಸಿಗಳು ಏಕಾಂಗಿಯಾಗಿ ಅಥವ ಜತೆಗೂಡಿ ಸಾಗಬಹುದು. ನಡುದಿನಕ್ಕಾಗುವಾಗ ದಾರಿಯಲ್ಲಿ ಊಟದ ವಾಹನ ಇವರಿಗೆ ಕಾದಿರುತ್ತದೆ. ಹಾಗೆ ದಾರಿಯಲ್ಲಿ ಊರವರ ದೋಸ್ತಿ ಮಾಡಲು, ಡಬ್ಬಾ ಹೋಟೆಲ್ ನುಗ್ಗಲು ಎಲ್ಲಕ್ಕೂ ಈ ಸೈಕಲು ಸವಾರರು ಸ್ವತಂತ್ರರು.

ದಿನಕ್ಕೆ ಸುಮಾರು ೮೦ – ೧೦೦ ಕಿಮಿ ಪ್ರಯಾಣ. ಒಮ್ಮೆ ಅದು ೧೮೦ ಆದದ್ದೂ ಉಂಟಂತೆ. ನಾಲ್ಕು ಐದು ದಿನಗಳಿಗೊಮ್ಮೆ ಒಂದು ದಿನ ವಿಶ್ರಾಂತಿ. ಅಪಾಯಕರ ದಾರಿ ದಾಟಿಸಲು ವಾಹನ ವ್ಯವಸ್ಥೆ ಇದ್ದರೂ ಇವರ ಪ್ರವಾಸ ಯೋಜಿಸಿದವರೇ ಬಂಡಿಪುರದಲ್ಲಿ ಆನೆಯಲ್ಲಿ ತುಳಿಸಿಕೊಂಡು ಕೆಲವು ದಿನ ಆಸ್ಪತ್ರೆ ವಾಸ ಮಾಡಿದ್ದಾರೆ. ವೇಗವಾಗಿ ಸಾಗುವ ಕಾರಿನ ಹಾರ್ನ್ ಕೇಳಿ ಕೆರಳಿದ ಗಂಡಾನೆ ಇವರನ್ನು ಬಂದು ತುಳಿಯಿತಂತೆ. ಒಬ್ಬ ಕೆಟ್ಟ ಕಾರು ಚಾಲಕ ದೇಶದ ಮರ್ಯಾದೆಯನ್ನೇ ತೆಗೆದ ಅನ್ನೋಣ. http://is.gd/X6HSX8 ಮತ್ತು http://is.gd/pi3iDc ರಲ್ಲಿ ಈ ಘಟನೆ ವಿವರಗಳಿವೆ.

ಮೋರ್ಗನ್ ಬ್ರೇಡಾ ಅವರು ಬಾರತಕ್ಕೆ ಬಂದಿರುವುದು ಬರೇ ಪ್ರವಾಸಕ್ಕಲ್ಲ. ದೆಹಲಿಯ ವೈದ್ಯರೊಬ್ಬರ ಹತ್ತಿರ ಹೊಸ ಬಗೆಯ ಬೆನ್ನೆಲುಬು ಚಿಕಿತ್ಸೆಯನ್ನು ಪಡಕೊಳ್ಳಲು ಸಹಾ. ಈಗ ಬಹಳ ದುಬಾರಿಯಾದ ಸುಮಾರು ಇಪ್ಪತ್ತು ಲಕ್ಷ ರೂಪಾಯಿ ಖರ್ಚಾಗುವ ಚಿಕಿತ್ಸೆ ಯಶಸ್ವಿಯಾಗಿ ತನ್ನ ಕಾಲ ಮೇಲೆ ನಿಲ್ಲುವ ಅವರ ಗುರಿ ತಲಪಲು ಸಹಾಯಕವಾಗಲೆಂದು ಹಾರೈಸುತ್ತೇನೆ.

http://www.spinalcordinjuryzone.com/news/10431/riding-a-bike-with-her-hands


Monday, June 27, 2011

ಕೈ ಸೈಕಲು ಯಾತ್ರೆ ಹೊರಟ ಶಾಂತಿದೂತ

ಅಮೇರಿಕದ ಪಶ್ಚಿಮ ಕರಾವಳಿಯಲ್ಲಿ ೧೧೦೦ ಮೈಲುಗಳ ತ್ರಿಚಕ್ರ ಪ್ರಯಾಣ ಹೊರಟಿದ್ದಾರೆ ಬ್ರಿಯಾನ್ ವಿಲ್ಸನ್. ಎಪ್ಪತ್ತರ ಮಾಜಿ ಸೇನಾನಿ ಶಾಂತಿಯುತ ಪ್ರತಿಭಟನೆಯಲ್ಲಿ ಸರಕಾರದ ದೌರ್ಜನ್ಯದಿಂದ ಎರಡೂ ಕಾಲುಗಳ ಕಳಕೊಂಡ ಕಾರಣ ಕೈಯಲ್ಲಿ ತಿರುಗಿಸಿ ಚಾಲನೆ ಮಾಡುವ ಮೂರು ಚಕ್ರದ ವಾಹನದಲ್ಲಿ ಹೊರಟಿದ್ದಾರೆ. ವಿಲ್ಸನ್ ಅವರು ತ್ರಿ ಚಕ್ರ ತುಳಿಯುವುದಲ್ಲ, ತಳ್ಳುವುದು ಅನ್ನುಬಹುದೇನೊ ? ಯಾಕೆಂದರೆ ಅವರು ಚಕ್ರಕ್ಕೆ ಚಾಲನೆ ಕೊಡುವುದು ಕೈಯಲ್ಲಿ. ಅವರು ಹಳಿಯಲ್ಲಿ ರಕ್ತ ಎನ್ನುವ ತಮ್ಮ ಜೀವನ ಕಥೆ ಇತ್ತೀಚೆಗೆ ಪ್ರಕಟಿಸಿದ್ದಾರೆ. ಪುಸ್ತಕದ ಬಗೆಗೆ ಅಲ್ಲಲ್ಲಿ ಸಂವಾದಗಳಲ್ಲೂ ಪಾಲ್ಗೊಳ್ಳಲಿದ್ದಾರೆ.

ವಿಯಟ್ನಾಂ ಯುದ್ದದಲ್ಲಿ ಪಾಲ್ಗೊಂಡ ಅವರಿಗೆ ಕ್ರಮೇಣ ಅಮೇರಿಕದ ವಿದೇಶಿ ನೀತಿ ಬಗೆಗೆ ಅಸಹನೆ ಮೂಡಿತು. ಯುದ್ದ ವಿರೋದಿ ಚಟುವಟಿಗಳಲ್ಲಿ ತೊಡಗಿಸಿಕೊಂಡರು. ಹೀಗೆ ಒಂದು ಪೂರ್ವನಿರ್ದಾರಿತ ಯುದ್ದ ಸಾಮುಗ್ರಿ ಕೊಂಡೊಯ್ಯುತ್ತಿದ್ದ ರೈಲು ನಿಲುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಬಂದ ಪಟ್ಟವರಿಗೆಲ್ಲ ತಿಳಿಸಿದ ಪೂರ್ವ ನಿಯೋಜಿತ ಸತ್ಯಾಗ್ರಹದಲ್ಲಿ ಊಹಿಸಿದಂತೆ ರೈಲು ನಿಲ್ಲುವುದು ಮತ್ತು ಇವರ ಬಂಧನ ನಡೆಯಲಿಲ್ಲ. ರೈಲು ಚಾಲಕರಿಗೆ ಸೀದಾ ಸಾಗಲು ಮೇಲಿನಿಂದ ಆದೇಶ ಬಂದಿತ್ತು. ಪರಿಣಾಮ ಸರಕಾರಿ ಪ್ರೇರಿತ ಕೊಲೆ ಪ್ರಯತ್ನ - ಇವರ ತಲೆಬುರುಡೆ ಜಖಂ ಹಾಗೂ ಕಾಲುಗಳೆರಡೂ ಖತಂ.

ದೈಹಿಕ ಸಮಸ್ಯೆಗಳಿಂದ ಸೋತ ನನಗೆ ತ್ರಿಚಕ್ರ ಬಹಳ ಜೀವನೋತ್ಸಾಹ ಮರಳಿಸಿದಂತೆ ವಿಲ್ಸನರಿಗೂ ಖಿನ್ನತೆಯ ಹೋರಾಡಲು ತ್ರಿಚಕ್ರ ಸಹಾಯ ಮಾಡಿದೆಯಂತೆ. ಈ ವಾಹನ ಕೊಡುವ ಸ್ವಾತಂತ್ರ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಜೀವನಕ್ಕೆ ಬಹಳ ಸಹಾಯಕವಾಗಿದೆಯೆನ್ನುತ್ತಾರೆ ವಿಲ್ಸನ್. ಇವರ T – ಅಂಗಿಯಲ್ಲಿ ಗಾಂದೀಜಿಯವರ ಚಿತ್ರ ಹಾಗೂ ಮಾತುಗಳೂ ನನಗೆ ಕುಶಿಯಾದವು. ಹಾಗೆ ಕಾರು ಹಾಗೂ ಸೈಕಲುಗಳ ಹೋಲಿಸುವ ಕೆಳಗಿನ ಪಾರವೂ ಇಷ್ಟವಾಯಿತು - ಬಾಷಾಂತರಿಸಿ ಅರ್ಥ ಕೆಡಿಸುವ ಬದಲು ಮೂಲವನ್ನೇ ಇಲ್ಲಿ ಅಂಟಿಸುತ್ತಿರುವೆ.

Cars have artificially enabled us to think we can move fast and go wherever we want instantaneously without any impact on our psyche, on the earth, or on our relationships. I like going 10 mph, that's the speed at which I believe my human genetics are designed for... that's a human scale. A bicycle begins to recover that feeling of a pace that is more human that enables you to be able to reflect and see more around you... To me, it's thrilling almost, to be on my handcycle."

http://bikeportland.org/2011/06/24/veteran-peace-activist-brian-willson-embarks-on-1100-handcycle-tour-55504#more-55504

ಇದು ವಿಲ್ಸನರ ಪ್ರಥಮ ದೀರ್ಘ ಪ್ರಯಾಣವಲ್ಲ. ೨೦೦೬ರಲ್ಲಿ ಸುಮಾರು ೯೦೦ ಮೈಲು ಗುಂಪು ಸೈಕಲು ಪ್ರವಾಸವನ್ನು ಮುನ್ನಡೆಸಿದ್ದರು. ಶಾಂತಿ ಮಂತ್ರ ಜಪಿಸುವ ಒಂದು ಕಾರ್ಯಕ್ರಮಕ್ಕೆ ಪೆಟ್ರೋಲ್ ಬಳಸದ ಸರಳ ಜೀವನ ಪ್ರತಿಪಾದಿಸುವ ಒಂದು ಸಂದೇಶವನ್ನೂ ಹೊತ್ತು ಸೈಕಲುಗಳಲ್ಲಿಯೇ ಸಾಗಿದ್ದರು.

http://www.vfp56.org/seattle.html

ಸರಕಾರಿ ರೈಲು ವಿಲ್ಸನ್ ಅವರ ಕಾಲು ಕಿತ್ತುಕೊಂಡ ಪ್ರಕರಣ ಓದುವಾಗ ಯಾಕೋ ಸ್ವಾಮಿ ನಿಗಮಾನಂದರ ನೆನಪಾಗುತ್ತದೆ. ಗಂಗಾ ನದಿ ತಟದಲ್ಲಿರುವ ಜಲ್ಲಿ ಪುಡಿಮಾಡುವ ಕೈಗಾರಿಕೆ ವಿರುದ್ದ ಹಲವಾರು ಬಾರಿ ಸತ್ಯಾಗ್ರಹ ಕೈಗೊಂಡ ಸ್ವಾಮಿ ನಿಗಮಾನಂದರು ಮಾದ್ಯಮದ ದೃಷ್ಟಿಗೆ ಬೀಳದೆ ಆತ್ಮಾರ್ಪಣೆ ಮಾಡಿಕೊಂಡರು. ಪವಿತ್ರ ಗಂಗಾನದಿಯನ್ನು ರಾಜಕೀಯವಾಗಿ ಬಳಸುವ ಅಲ್ಲಿ ಅದಿಕಾರದಲ್ಲಿರುವ ಕೇಸರಿ ಪಕ್ಷ ಅಪರಾದಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅವರು ಕೊನೆಯುಸಿರು ಎಳೆಯುವ ಸಮಯದಲ್ಲಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡಕೊಂಡ ರಾಮದೇವ ಸ್ವಾಮಿಗಳಿಗೆ ಸರಕಾರ ಹಾಗೂ ಮಾದ್ಯಮಗಳಿಂದ ರಾಜಮರ್ಯಾದೆ ದೊರಕಿತ್ತು.

http://www.tehelka.com/story_main50.asp?filename=Ne020711COVERSTORY.asp

Sunday, May 29, 2011

ಜನಹಿತ ಬಯಸದ ಬಾಟರಿ ಉದ್ಯಮ

ವಿಜ್ನಾನ ಹಾಗೂ ಕೈಗಾರಿಕೆಗಳು ಮನುಷ್ಯನ ಏಳಿಗೆಯೆಡೆಗೆ ಕೆಲಸ ಮಾಡುವುದೋ ? ತಮ್ಮ ಸ್ವಾರ್ಥ ಕಾಯ್ದು ಕೊಳ್ಳುವುದು ಮಾತ್ರವೋ ? ಕೆಲವೊಂದು ಉದಾಹರಣೆ ನೋಡುವಾಗ ತಮ್ಮ ಲಾಭಕ್ಕೆ ಮಾತ್ರ ಕೈಗಾರಿಕೆಗಳ ಗಮನವೆಂದು ಅನಿಸುತ್ತದೆ. ಅವುಗಳಲ್ಲೊಂದು ಈಗ ಹೆಚ್ಚು ಗಮನ ಸೆಳೆಯದ ಎಡಿಸನ್ ತನ್ನ ಕಾರಿಗೆ ಉಪಯೊಗಿಸಿದ ಕಬ್ಬಿಣ ನಿಕೆಲ್ ಪ್ಲೇಟಿನ ಬಾಟರಿ . ಆ ಬಾಟರಿ ಕಾರು ಚೆನ್ನಾಗಿ ಕೆಲಸ ಮಾಡಿದರೂ ಪೆಟ್ರೊಲ್ ವಾಹನ ಹೆಚ್ಚು ಲಾಬದಾಯಕ ಎಂದು ಪ್ರಚಾರ ಮಾಡಲಾಯಿತು.

೧೯೦೩ ರಿಂದ ೧೯೭೨ ರವರೆಗೆ ಎಪ್ಪತ್ತೊಂದು ವರ್ಷ ಯಶಸ್ವಿಯಾಗಿ ಬಾಟರಿ ತಯಾರು ಮಾಡಿದ ಅಮೇರಿಕದ ಎಡಿಸನ್ ಕಂಪೇನಿ ಇಂಗ್ಲೇಂಡಿನ ಎಕ್ಷೈಡ್ ಕಂಪೇನಿಗೆ ಮಾರಾಟವಾದ ಮೂರು ವರ್ಷಗಳಲ್ಲಿ ಬಾಟರಿ ತಯಾರಿ ನಿಲ್ಲಿಸಿತು. ಖರೀದಿಸಿದ ಕಂಪೇನಿಯ ಉದ್ದೇಶ ಬಾಟರಿ ತಯಾರು ಮಾಡುವುದಕ್ಕಾಗಿರಲಿಲ್ಲ – ತನ್ನ ಇತರ ಹಿತಾಸಕ್ತಿಗಳಿಗೆ ಪೂರಕವಾಗಿ ಕಂಪೇನಿಯ ಗುಳುಂ ಮಾಡಿದ್ದು.

ನೋಡಿ. ಸ್ವಾಮಿ, ಒಬ್ಬನಿಗೆ ಅವನ ಜೀವಿತಾವದಿಯಲ್ಲಿ ಒಂದೇ ಬಾಟರಿ ಮಾರುವುದು ಎಂದರೆ ಕೈಗಾರಿಕೆಗೆ ಅನ್ಯಾಯವಲ್ಲವೇ ? ಹೀಗಾದರೆ ಬಾಟರಿ ಕಂಪೇನಿ ಬದುಕುವುದಾದರೂ ಹೇಗೆ ? ಬಾಟರಿ ಕೈಗಾರಿಕೆಗೆ ಅಪಾರ ಲಾಭವಾಗುವುದಾದರೂ ಹೇಗೆ ? ಇಂದೀಗ ಈ ತಂತ್ರಜ್ನಾನದ ಬಾಟರಿಗಳ ಮಾಹಿತಿ ದೊರಕುವುದೂ ಸುಲಭವಲ್ಲ.

ಅಮೇರಿಕದಲ್ಲಿ ಹಲವು ಪಟ್ಟಣಗಳಲ್ಲಿದ್ದ ಟ್ರಾಮ್ ಕಂಪೇನಿಗಳನ್ನು ಖರೀದಿಸಿದ ಕಾರು ಉದ್ಯಮ ಕ್ರಮೇಣ ಅವನ್ನು ಕ್ರಮೇಣ ಹೊಸಕಿ ಹಾಕಿತು. ಪ್ರಯಾಣಿಕ ದರ ಏರಿಸಿ ಹಾಗೂ ಕಾರುಗಳಲ್ಲಿ ಹೋಗುವುದು ಹೊಸತನವೆಂಬ ಜಾಹಿರಾತು ಹರಿಸಿ ಟ್ರಾಮ್ ಗಳಿಂದ ಪ್ರಯಾಣಿಕರನ್ನು ಹೊರ ದೂಡಿದವು. ಆಗ ಅಲ್ಲಿನ ಪೇಟೆ ಜನ ಹೆಚ್ಚು ಕಾರುಗಳ ಕೊಳ್ಳುವುದು ಅವುಗಳಲ್ಲಿ ಸಂಚರಿಸುವುದು ಅನಿವಾರ್ಯವಾಯಿತು. ಅದೇ ರೀತಿ ಒಂದು ಬಾಟರಿ ಕಂಪೇನಿ ಪರಿಸರಪೂರಕ ಪರ್ಯಾಯವನ್ನು ಸಮಾಜಕ್ಕೆ ಇಲ್ಲವಾಗಿಸಿತು.

ಈ ಎಡಿಸನ್ ಬಾಟರಿಗಳಿಗೆ ಬಾಯಾರಿಕೆಯಾದರೂ ಮರಣಾಂತಿಕವಲ್ಲ. ಹಲವು ವರ್ಷಗಳ ಕಾಲ ಮೂಲೆಯಲ್ಲಿದ್ದ ಬಾಟರಿಗಳಿಗೆ ಯಶಸ್ವಿಯಾಗಿ ಜೀವದಾನ ಮಾಡಿದ ಉದಾಹರಣೆಗಳಿವೆ. ಇವುಗಳಿಗೆ ವೇಗವಾದ ಚಾರ್ಜಿಂಗ್, ಚಾರ್ಜು ಪೂರ್ತಿ ಖಾಲಿಯಾಗುವುದು ಹಾಗೂ ಅಸಿಡ್ ಖಾಲಿಯಾಗುವ ಸಮಸ್ಯೆಗಳಿಲ್ಲ. ಲೆಡ್ ಅಸಿಡ್ ನಂತೆ ಹಳೆ ಮತ್ತು ಹೊಸ ಬಾಟರಿಗಳ ಒಟ್ಟು ಸೇರಿಸುವುದೂ ಸಮಸ್ಯೆ ಅಲ್ಲವಾದ ಕಾರಣ ಹಣವಿದ್ದಂತೆ ಖರೀದಿಸಬಹುದು. ಒಮ್ಮೆಲೆ ಹಣ ಸುರಿಯಬೇಕಾಗಿಲ್ಲ. ಇವುಗಳ ಶೇಖರವಾಗಿರುವ ಶಕ್ತಿ ಪೂರ್ತಿ ಉಪಯೋಗಿಸಬಹುದು. ಲೆಡ್ ಅಸಿಡ್ ಚಾರ್ಜ್ ಸಂಪೂರ್ಣ ಖಾಲಿ ಮಾಡುವಂತಿಲ್ಲ.

ಇಂದು ಮಾಮೂಲಿ ಲೆಡ್ ಅಸಿಡ್ ಬಾಟರಿಯ ಮೂರು ಪಾಲು ಕ್ರಯವಾದರೂ ಹತ್ತು ಪಾಲು ಬಾಳ್ವಿಕೆ ಇರುವಾಗ ಪರವಾಗಿಲ್ಲ ಅನಿಸುತ್ತದೆ. ಹಲವೊಮ್ಮೆ ಇಡೀ ರಾತ್ರಿ ವಿದ್ಯುತ್ ವಿಫಲವಾದಾಗ ರಾತ್ರಿ ಹೋಗಿ ಬಾಟರಿ ಖಾಲಿಯೆಂದು ಕಿರಿಚಾಡುವ ಇನ್ವರ್ಟರ್ ಒಫ್ ಮಾಡಿದ್ದೇನೆ. ಇಲ್ಲವಾದರೆ ನನ್ನ ಸೌರ ಫಲಕಗಳಿಂದ ಶಕ್ತಿ ತುಂಬಿಕೊಳ್ಳುವ ಬಾಟರಿ ನಾಲ್ಕು ವರ್ಷವೂ ಬಾಳಲಿಕ್ಕಿಲ್ಲ. ನನ್ನಲ್ಲಿರುವ ಲೆಡ್ ಅಸಿಡ್ ಬಾಟರಿಗಳು ಅದರೊಳಗಿನ ಆಸಿಡ್ ಪೂರ್ತಿ ಅಲ್ಲವಾದರೂ ಗಣನೀಯವಾಗಿ ಖಾಲಿಯಾಗಿ ತಮ್ಮ ಆಯುಷ್ಯ ಕಡಿಮೆ ಮಾಡಿಕೊಂಡಿವೆ. ಆದರೆ ಇಂತಹ ಬಾಟರಿಯಲ್ಲಿ ಅಂತಹ ಹೆದರಿಕೆ ಇಲ್ಲ. ಪೂರಾ ಚಾರ್ಜು ಅಥವಾ ಆಸಿಡ್ ಖಾಲಿಯಾದರೂ ಬಾಳ್ವಿಕೆಯಲ್ಲಿ ಮೋಸವಿಲ್ಲ.

ಇಪ್ಪತೈದು ವರ್ಷ ಬಾಳುವ ಸೌರ ವಿದ್ಯುತ್ ಫಲಕಗಳ ಜತೆ ಈ ದೀರ್ಘಾಯುಷ್ಯದ ಬಾಟರಿ ಜೋಡಣೆಯಾಗಬೇಕಾಗಿತ್ತು. ಹಲವೆಡೆ ಹೊಸ ಬಾಟರಿಗೆ ಹಣ ಹಾಕಲು ಪರದಾಡುತ್ತಿರುವ ಜನ ಫಲಕಗಳನ್ನೇ ಮೂಲೆಪಾಲು ಮಾಡಿದ್ದಾರೆ. ಹೀಗಾಗಿ ತಾಂತ್ರಿಕ ಸಮಸ್ಯೆಗಳಿಂದಲ್ಲ, ವ್ಯಾಪಾರಿ ಸ್ವಾರ್ಥ ಕಾರಣಗಳಿಗೆ ಈ ಬಾಟರಿ ನಮಗೆ ದೊರಕುತ್ತಿಲ್ಲ ಅನಿಸುತ್ತದೆ.

ಇಪ್ಪತ್ತು ಸಾವಿರ ಕೋಟಿ ರೂಪಾಯಿಯ ವಾರ್ಷಿಕ ವ್ಯವಹಾರ ಮಾಡುವ ಬಾರತೀಯ ಬಾಟರಿ ಉದ್ಯಮ ನಮಗೆ ಲೆಡ್ ಅಸಿಡ್ ಬಾಟರಿಯನ್ನು ಕೊಡುವುದರಲ್ಲೇ ಆಸಕ್ತಿ ವಹಿಸುತ್ತದೆ. ನಾವೂ ತೃಪ್ತರಾಗಿದ್ದೇವೆ.

http://en.wikipedia.org/wiki/Nickel-iron_battery

http://www.nickel-iron-battery.com/

Saturday, May 21, 2011

ಮಲೆಯಾಳ ಮಾತೃಭೂಮಿಯಲ್ಲೊಂದು ಸಂದರ್ಶನ

ಮೊನ್ನೆ ಮಂಗಳವಾರ ೧೭ರಂದು ಬೆಳಗ್ಗೆ ನನಗೆ ಇದ್ದಕ್ಕಿದ್ದಂತೆ ಕೇರಳದಿಂದ ಇ-ಪತ್ರಗಳು ಬರಲು ಪ್ರಾರಂಬವಾಯಿತು. ಪಕ್ಕನೆ ಕಾರಣ ಗೊತ್ತಾಗಲಿಲ್ಲ. ಹೆಚ್ಚಿನವು ನಿನ್ನ ಬಗ್ಗೆ ನನ್ನ ಪೇಪರಿನಲ್ಲಿ ಓದಿದ್ದೆ. ಹೆಚ್ಚು ವಿವರ ತಿಳಿಸಿ ಎನ್ನುವ ಪತ್ರಗಳು. ಯಾವ ಪತ್ರಿಕೆ, ಯಾವಾಗ ಪ್ರಕಟನೆ ಎನ್ನುವ ವಿವರಗಳು ಎರಡು ಗೀಟಿನ ಪತ್ರಗಳಲ್ಲಿ ಒಂದರಲ್ಲೂ ಇರಲಿಲ್ಲ. ಮೊದಲು ಅದನ್ನು ಅಷ್ಟು ಗಂಬೀರವಾಗಿ ಪರಿಗಣಿಸದೆ ಅವನ್ನೆಲ್ಲ ಕಸದ ಬುಟ್ಟಿಗೆಸೆದೆ. ಆದರೆ ಇದೇ ಸಾರಾಂಶದ ಪತ್ರಗಳು ಮತ್ತೂ ಬಂದ ಕಾರಣ ಎಲ್ಲವನ್ನೂ ಪುನಹ ತೆಗೆದು ನೋಡಿ ಕಾರಣ ಊಹಿಸಿದೆ.

ಸರಿಯಾಗಿ ತಿಂಗಳ ಹಿಂದೆ ಅಂದರೆ ಎಪ್ರಿಲ್ ೧೭ರಂದು ಮಾತೃಭೂಮಿ ವರದಿಗಾರರು ಕಾಸರಗೋಡಿನಲ್ಲಿ ನನ್ನ ಬೇಟಿ ಮಾಡಿದ್ದರು. ಎಂಡೊ ಕಾರ್ಯಕ್ರಮದಲ್ಲಿ ಅವರನ್ನು ಡಾ ಶ್ರೀಪತಿ ಪರಿಚಯ ಮಾಡಿಕೊಟ್ಟಿದ್ದರು. ವರದಿಗಾರರಾದ ವಿನೋದ್ ನಾಲ್ಕೆಂಟು ಪ್ರಶ್ನೆ ಕೇಳಿ ತಕ್ಷಣ ಪೋಟೊಗ್ರಾಫರ್ ಒಬ್ಬರನ್ನು ಬರಮಾಡಿ ಚಿತ್ರ ತೆಗೆಸಿದರು. ನಾನು ನನ್ನಲ್ಲಿದ ಈ ವಾಹನದ ವೈಶಿಷ್ಟ ವಿವರಿಸುವ ಒಂದು ಕರಪತ್ರ ಕೊಟ್ಟೆ. ಅಕಸ್ಮಾತ್ ಹೆಚ್ಚಿನ ವಿವರ ಬೇಕಾದರೆ ಸಂಶಯಗಳಿದ್ದರೆ ಸಂಪರ್ಕಿಸಿ ಎಂದು ಹೇಳಿದೆ.

ಪತ್ರಿಕಾವರದಿ ಬಗೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ನನ್ನ ಪ್ರಕಾರ ಮುಖ್ಯ ಅನಿಸುವ - ಮನುಷ್ಯ ಪ್ರಯತ್ನ ಹಾಗೂ ಯಂತ್ರ ಸಹಾಯ ಸಮ್ಮೀಳನವಾಗುವ ಏಕಮಾತ್ರ ವಾಹನ ಎಂದು ಯಾವ ಪತ್ರಿಕಾ ವರದಿಯಲ್ಲೂ ಇಂದಿನ ವರೆಗೆ ನನಗೆ ತಿಳಿದಂತೆ ಪ್ರಕಟವಾಗಿಲ್ಲ. ತಿಂಗಳು ಕಳೆಯುವಾಗ ನಾನು ಅದನ್ನು ಮರೆತು ಬಿಟ್ಟೆ. ಕೇರಳದಿಂದಲೇ ಹಲವಾರು ಪತ್ರ ಬಂದ ನಂತರ ಚುರುಕಾಯಿತು ಮನಸ್ಸು.

ವರದಿಗಾರರ ಸಂಪರ್ಕ ಕೋರಿ ಶ್ರೀಪಡ್ರೆಯವರಿಗೆ ನಾನು ಪತ್ರಿಸಿದೆ. ಶ್ರೀಪಡ್ರೆಯವರೂ ವರದಿಗಾರರಿಗೆ ಇ-ಪತ್ರಿಸಿದರು. ಅಂತೂ ಪ್ರಕಟವಾದ ಐದು ದಿನ ಕಳೆದು ಮಾತೃಭೂಮಿಯಲ್ಲಿರುವ ರಾಜೇಶ್ ನನಗೊಂದು ಪುಟ್ಟ ಚಿತ್ರಣ ಕಳುಹಿಸಿಕೊಟ್ಟರು. ಚಿತ್ರ ಸಣ್ಣದು. ನನಗೆ ಮಲೆಯಾಳ ಓದಲು ಬರುವುದಿಲ್ಲ. ಹಾಗಾಗಿ ಸಾಕು. ನಿಮಗೆ ಬರುವುದಾಗಿದ್ದರೆ ನಾನೇನು ಮಾಡುವಂತಿಲ್ಲ. ಅಂದು ನನ್ನ ಆಸಕ್ತಿ ಬದಿಗಿರಿಸಿ ಅವರೊಂದಿಗೆ ಮಾತನಾಡಿದ್ದೆ. ದಿನ ಪತ್ರಿಕೆ ಸಂಜೆಗಾಗುವಾಗ ಪೊಟ್ಟಣ ಕಟ್ಟಲು ಮಾತ್ರ ಉಪಯೋಗ ಅನ್ನುವಂತೆ ಸಂದರ್ಶನ ಮುಗಿದ ನಂತರ ನಮ್ಮ ಮಟ್ಟಿಗೆ ವರದಿಗಾರರ ವರ್ತನೆಯೂ ಅಷ್ಟೇ. ಈ ಚಿತ್ರ ದೊರಕಲು ಕಾರಣರಾದ ಶ್ರೀ ಪಡ್ರೆಯವರಿಗೆ ಕೃತಜ್ನತೆಗಳು. ಪ್ರಕಟವಾದ ವಿಚಾರ ಸಂಬಂದಿಸಿದ ವ್ಯಕ್ತಿಗೆ ತಿಳಿಸುವ ಸೌಜನ್ಯ ವರದಿಗಾರರಿಗಿದ್ದರೆ ಚೆನ್ನ.

Sunday, May 15, 2011

ಎಂಡೊ ನಿಷೇದ ತಾತ್ಕಾಲಿಕವಾದರೂ

ಎಂಡೊಸಲ್ಪನ್ ಹಂತಹಂತವಾಗಿ ನಿಷೇದವನ್ನು ಶ್ರೀಪಡ್ರೆಯವರೂ ಡಾ ರವೀಂದ್ರನಾಥ ಶಾನುಬೋಗರೂ ಸ್ವಾಗತಿಸಿ ನೈತಿಕ ವಿಜಯ ಎಂದರೂ ನನಗೆ ಮನಸ್ಸಿನ ಕಿರಿಕಿರಿ ಮುಂದುವರಿಯುತ್ತಲೇ ಇತ್ತು. ಆದರೆ ಮೊನ್ನೆ ಶುಕ್ರವಾರ ನಮ್ಮ ಉಚ್ಚ ನ್ಯಾಯಾಲಯ ಎಂಟು ವಾರದ ಮಟ್ಟಿಗೆ ಇದರ ತಯಾರಿ ಹಾಗೂ ಬಳಕೆ ನಿಷೇದಿಸಿದ್ದನ್ನು ಕೇಳುವಾಗ ಬಹಳ ಸಂತಸ ಉಂಟಾಗಿದೆ. ಇದು ಸಮಾಜಕ್ಕೆ ಎಚ್ಚೆತ್ತುಕೊಳ್ಳಲು ಚಾಟಿ ಏಟಿನಂತಾಯಿತು ಅನಿಸುತ್ತದೆ.

ಸಿಂಪರಣೆ ಪಡ್ರೆ ಹಾಗೂ ಕೊಕ್ಕಡ ಪ್ರದೇಶಗಳಿಗೆ ಸಿಮಿತವಾಗಿಲ್ಲ. ಹೇಗೆ ಬಳಸಿದರೂ ಚೆಲ್ಲಿದರೂ ವಿಷ ಅಂತಿಮವಾಗಿ ಮನುಷ್ಯರ ದೇಹವನ್ನು ಸೇರುತ್ತದೆ. ಕಾಸರಗೋಡಿನಲ್ಲಿ ಹದಿನೈದು ಕಿಮಿ ತೋಡಿನ ಅಕ್ಕಪಕ್ಕದ ಬಾವಿಗಳೆಲ್ಲ ಎಂಡೊಸಲ್ಫನ್ ಮಯ ಎಂದರೆ ಇದರ ಗಂಬೀರತೆ ಅರಿವಾಗಬೇಕು. ಹಾಗೆ ನಮ್ಮ ದೇಶವಿಡೀ ಹೊಲಸಾಗಿದೆ. ನಾವು ಬಳಸುವ ಆಹಾರ ಪದಾರ್ಥಗಳೆಲ್ಲ ವಿಷಮಯವೇ ಆಗಿದೆ. ಆದರೆ ಸಣ್ಣ ಪ್ರಮಾಣದಲ್ಲಾದ ಕಾರಣ ಸಮಸ್ಯೆ ಅರಿವು ನಮಗಾಗಿಲ್ಲ ಅಷ್ಟೇ. ಮಾತ್ರವಲ್ಲ ನಾವು ತರುವ ಹಣ್ಣು ಹಂಪಲು ಆಹಾರ ಪದಾರ್ಥಗಳೆಲ್ಲವೂ ವಿಷಮಯವಾದಾಗ ಕಾರಣ ಇಂತಹದ್ದು ಎಂದು ಬೊಟ್ಟು ಮಾಡಿ ತೋರಿಸುವುದು ಸಾದ್ಯವೇ ಇಲ್ಲ.

ನಾನು ವಾಸ್ತವ್ಯ ಇರುವುದು ಅನಂತಾಡಿ ಗ್ರಾಮ ಎನ್ನುವಾಗ ಗೊತ್ತು, ಗೊತ್ತು ಅಲ್ಲಿ ಭಾರಿ ತರಕಾರಿ ಬೆಳೆಯುತ್ತಾರೆ. ಲೀಟರ್ ಗಟ್ಟಲೆ ಔಷದಿ [?] ದಾಸ್ತಾನು ಮಾಡುತ್ತಾರೆ, ಸಿಂಪರಣೆ ಮಾಡುತ್ತಾರೆ ಎನ್ನುವಾಗ ಮುಜುಗರವಾಗುತ್ತದೆ. ನನ್ನದೇ ಗ್ರಾಮದ ಇನ್ನೊಂದು ಮೂಲೆಯಲ್ಲಿ ನಡೆಯುವ ಸಮಾಜದ ವಿರೋದಿ ಅನ್ಯಾಯಕ್ಕೆ ನಾನು ಏನು ಮಾಡುವಂತಿಲ್ಲ ಎನ್ನುವಾಗ ಬೇಸರವಾಗುತ್ತದೆ.

ಅದುದರಿಂದ ಹಾನಿಕರ ಕ್ರಿಮಿ ಕೀಟಗಳ ಜೀವನ ಚಕ್ರದ ಅರಿವು ರೈತರಿಗೆ ಮೂಡಿಸಬೇಕು. ಈಗ ಸಂಜೆ ಆಕಾಶದಲ್ಲಿ ಹಾರಬಹುದಾದ ಹಕ್ಕಿಗೆ ಬೆಳಗ್ಗೆಯೇ ಗುಂಡಿಕ್ಕುವ ಪ್ರವೃತ್ತಿಯೇ ಜೋರಾಗಿದೆ. ಇದರಿಂದಾಗಿ ಪರಿಸರ ಕುಲಷಿತವಾಗುವುದು ಹೊರತು ಯಾವುದೇ ಪ್ರಯೋಜನ ಇಲ್ಲ. ಕನಿಷ್ಟ ಶೇಕಡಾ ಎಪ್ಪತ್ತು ವಿಷ ಸಿಂಪರಣೆ ಅನಿವಾರ್ಯವಲ್ಲ. ಬೆಳೆ ಕಳಕೊಳ್ಳುವ ಬೆದರಿಕೆ, ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ವಿಷದ ಬಗೆಗಿನ ಜೋರಾದ ಪ್ರಚಾರ ಎಲ್ಲವೂ ನಮ್ಮನ್ನು ಸಿಂಪರಣೆಗೆ ಪ್ರೇರಣೆ ಮಾಡುತ್ತದೆ.

ಹೀಗೊಂದು ಶುದ್ದ ಹುಚ್ಚು ಆಲೋಚನೆ. ಹಲವೊಮ್ಮೆ ಹುಚ್ಚು ಆಲೋಚನೆಗಳಲ್ಲಿ ಒಂದಿಷ್ಟು ಸತ್ಯ ಒಳಗೊಂಡಿರುತ್ತದೆ. ಇನ್ನೊಬ್ಬರಿಗೆ ಮುಂದಿನ ಹೆಜ್ಜೆ ಅನ್ವೇಶಣೆ ಸಾದ್ಯವಾಗುತ್ತದೆ. ನಾವು ಯಾವುದೇ ಅಂಟಿಬಯೋಟಿಕ್ ವೈದ್ಯರಿಂದ ಅಥವಾ ಅವರ ಚೀಟಿ ತೋರಿಸಿ ಮದ್ದಿನ ಅಂಗಡಿಯಿಂದ ತರಬಹುದು ಹೊರತು ನೇರವಾಗಿ ಖರೀದಿಸುವಂತಿಲ್ಲ. ಎಲ್ಲರೂ ಇದನ್ನು ಅನುಸರಿಸುತ್ತಾರೆ ಅನ್ನುವಂತಿಲ್ಲವಾದರೂ ಹೀಗೊಂದು ಕಾನೂನು ವ್ಯವಸ್ಥೆ ಜಾರಿಯಲ್ಲಿದೆ. ಅದೇ ರೀತಿ ಕೃಷಿ ಸಂಬಂದಿ ವಿಷಗಳಿಗೆ ಮೂಗು ದಾರ ಹಾಕಿದರೆ ?

ದಾಸ್ತಾನು ಮಾಡುವುದರ ವಿರುದ್ದ ರೈತರ ಮನ ಒಲಿಸಬೇಕಾದರೆ ಅನಿವಾರ್ಯ ಸಂದರ್ಬದಲ್ಲಿ ತಕ್ಷಣ ಪೊರೈಕೆ ಸಾದ್ಯವಾಗಬೇಕು. ಸದಾ ನೋವು ಅನುಬವಿಸುವ ರೋಗಿಗಳಿಗೆ ವೈದ್ಯರು ದಿನಕ್ಕೆ ಮೂರು ಮಾತ್ರೆ ಎನ್ನುವ ಬದಲು ರೋಗಿಯ ಕೈಯಲ್ಲೇ ನಿಯಂತ್ರಣ ಕೊಟ್ಟರೆ ಹೇಗೆ ? ನೋವು ನಿವಾರಕ ಔಷದಿಯನ್ನು ರಕ್ತಕ್ಕೆ ಸೇರಿಸುವ ನಿಯಂತ್ರಣ ರೋಗಿಯ ಕೈಯಲ್ಲೇ ಇದ್ದರೆ ನಿವಾರಕದ ಉಪಯೋಗ ಗಣನೀಯವಾಗಿ ಕಮ್ಮಿಯಾಗಿದೆಯಂತೆ.

ಹಾಗೆ ಬರಿಗಾಲ ವೈದ್ಯರಂತೆ ಬರಿಗಾಲ ಕೃಷಿ ತಜ್ನರನ್ನು ತಯಾರಿಸುವ ವ್ಯವಸ್ಥೆ ನಮ್ಮಲ್ಲಿ ಆಗಬೇಕು. ಇವರು ಊರೊಳಗೆ ಅಥವಾ ಆಸುಪಾಸಿನಲ್ಲಿ ಇರುವವರಾಗ ಬೇಕು. ಅವರಿಗೆ ಸರಕಾರ ಅಥವಾ ಸಮಾಜ ಅದಕ್ಕೊಂದು ಅರ್ಥಿಕ ಬೆಂಬಲ ಒದಗಿಸಬೇಕು. ಅವರು ಹಾನಿಗೊಳಗಾದ ಹೊಲಕ್ಕೆ ಬೇಟಿ ನೀಡಿ ಅಲ್ಲಿನ ಪರೀಸ್ಥಿತಿ ಕೂಲಂಕಶವಾಗಿ ಪರಿಶೀಲನೆ ನಡೆಸಬೇಕು. ಅಕಸ್ಮಾತ್ ಕೀಟ ಹಾವಳಿ ಬೀಕರವಾಗಿದ್ದರೆ ತಕ್ಷಣ ಪರಿಹಾರ ವಿಷದ ಪೊರೈಕೆಯಾಗಿ ಅಕ್ಕಪಕ್ಕದವರ ಸಹಾಯದಿಂದ ಸಿಂಪರಣೆ ಇತ್ಯಾದಿ ನಡೆಯಬೇಕು. ಬೆಂಕಿ ಹರಡದಂತೆ ನಾವು ನೆರೆಕರೆಯಲ್ಲಿ ಕೈ ಜೋಡಿಸುವುದಿಲ್ಲವೇ – ಹಾಗೆ.

ನಾನು ಎರಡು ತಿಂಗಳು ಹಿಂದೆ ಬರೆದ ಯುರೋಪಿನವರ ಎಂಡೊ ವಿರೋದಿ ಆಸಕ್ತಿ ಬಗೆಗೆ ಇಂದಿನ ಉದಯವಾಣಿ ಪುರವಣಿಯಲ್ಲಿ ಮೂರನೇಯ ಪುಟದ ಅವರ ಅಂಕಣದಲ್ಲಿ ಹಾ. ಮ. ಕನಕರವರೂ ಬರೆದಿದ್ದಾರೆ. ಇದೂ ಎಚ್ಚರಿಕೆ ವಹಿಸಬೇಕಾದ ವಿಚಾರ. ಅವರು ಅಂದರೆ ಯುರೋಪಿನ ಹಿತಾಸಕ್ತಿಗಳು ಗೆಲ್ಲುವುದು ನಮಗೆ ಮುಖ್ಯವಲ್ಲವಾದರೂ ವಿಷರಹಿತ ಪರಿಸರ ಆಹಾರ ನಮ್ಮ ಹಕ್ಕು. ನಾವೀಗ ಪರ್ಯಾಯ ವಿಷಗಳನ್ನಲ್ಲ, ವಿಷರಹಿತ ಪರಿಹಾರಗಳ ರೂಪಿಸಬೇಕು. ಕಳೆದ ನಲುವತ್ತು ವರ್ಷಗಳಿಂದ ನಾವು ಎಂಡೊ ತಯಾರಿಸುತ್ತೇವೆ ಬಳಸುತ್ತೇವೆ ಎನ್ನುವಾಗ ಇದರ ಪರ್ಯಾಯಗಳ ಇನ್ನೂ ತಯಾರಿಸಲು ಸಾದ್ಯವಾಗಿಲ್ಲ ಎನ್ನುವುದೂ ನಾಚಿಕೆಗೇಡು.

ಮೊನ್ನೆ ಉಚ್ಚ ನ್ಯಾಯಾಲಯದಲ್ಲಿ ನಡೆದ ವಾದಪ್ರತಿವಾದದ ತಿರುಳು Down to Earth ತಾಣದಲ್ಲಿದೆ. ಸರಕಾರಿ ವಕೀಲರು ನ್ಯಾಯಾದೀಶರ ಮಾತಿಗೆ ಉತ್ತರಿಸಲು ತಡವರಿಸುವುದು ಕುತೂಹಲಕರವಾಗಿದೆ. ಹಾಗೆ ರಪ್ತಿಗಾಗಿ ತಯಾರು ಮಾಡಲು ಅವಕಾಶ ಕೊಡಬೇಕು ಎಂದು ಬಿನ್ನವಿಸಿದ ತಯಾರಕರು ಬೇಡಿಕೆಯ ರುಜುವಾತು ಹಾಜರು ಪಡಿಸುವುದರಲ್ಲಿ ವಿಫಲರಾದರು.

http://www.downtoearth.org.in/node/33493

ಈ ಎಂಟುವಾರದ ತಾತ್ಕಾಲಿಕ ತಡೆ ಶಾಶ್ವತ ನಿರ್ಬಂದವಾಗಲೆಂದು ಹಾರೈಸೋಣ.

ಕೊನೆಮಾತು: ನಮ್ಮ ಬ್ಲೋಗುಗಳಲ್ಲಿರುವ ಪ್ರತಿಕ್ರಿಯೆ ಕಾಣೆಯಾಗಬಹುದೋ ? ಹೌದೆನಿಸುತ್ತದೆ. ಈ ಬ್ಲೋಗಿನ ಹಿಂದಿನ ಪುಟದಲ್ಲಿದ್ದ ಎರಡು ಪ್ರತಿಕ್ರಿಯೆ ಕಾರಣವಿಲ್ಲದೆ ಕಾಣೆಯಾಗಿದೆ. ನಾನು ಓದಿದ ಇತರ ಆಂಗ್ಲ ಬ್ಲೋಗುಗಳಲ್ಲಿಯೂ ಇದೇ ರೀತಿ ಕಾಣೆಯಾದ ಸೂಚನೆ ಕಾಣುತ್ತದೆ.