Friday, February 27, 2009

ಸಮತೋಲನ ಪಶು ಆಹಾರದ ಮುಖ್ಯ ಅಂಶ ಕಾಣೆ

ಸಮತೋಲನ ಪಶು ಆಹಾರದಲ್ಲಿ ಪ್ರಮುಖ ಅಂಶವಾದ   ಖನಿಜ ಮಿಶ್ರಣ ಮಾರುಕಟ್ಟೆಯಲ್ಲಿ  ದುಬಾರಿ  ಹಾಗೂ  ಕಾಣೆಯಾಗಿರುವುದು  ಕಳವಳಕಾರಿ   ವಿಚಾರ.   ಮಾರುಕಟ್ಟೆಯಲ್ಲಿ  ಕಿಲೋ  ಒಂದಕ್ಕೆ   ಸುಮಾರು ನಲುವತ್ತು ರೂಪಾಯಿ ಮತ್ತು ಹಾಲು ಮಂಡಳಿ ಮೂವತ್ತಕ್ಕೆ ಮಾರುತ್ತಿದ್ದ ಖನಿಜ ಮಿಶ್ರಣದ ಕ್ರಯ ಇತ್ತೀಚಿನ ದಿನಗಳಲ್ಲಿ ಬಹಳ ಏರುತ್ತಾ ಹೋಗಿದೆ.  ಒಂದು   ಹೆಸರಾಂತ  ಕಂಪೇನಿ  ಮಾಲು  ತೊಂಬತ್ತು  ರೂಪಾಯಿ   ತಲಪಿದೆ.   ಡಾಕ್ಟರಲ್ಲದ ಡಾಕ್ಟ್ರಿಗೆ ಹಾಗೂ ಮಣ್ಣಿನ ಮಗನ ಮಗನಿಗೆ ಹಾಲು ಮಂಡಲಿ ರಾಜಕೀಯದ ಮದ್ಯೆ ಇದಕ್ಕೆ ಗಮನ ಹರಿಸಲು ಪುರುಸೊತ್ತಿಲ್ಲ. ಪರಿಣಾಮವಾಗಿ ನಮ್ಮೂರ ಹಾಲು ಖರೀದಿ ಸಂಘಗಳಲ್ಲಿ ದೊರಕುತ್ತಿದ್ದ ಖನಿಜ ಮಿಶ್ರಣ ಈಗ ಎರಡು ವಾರಗಳಿಂದ ಕಾಣೆಯಾಗಿದೆ.  ಪ್ರತ್ಯಕ್ಷ ಲಾಭ ಕಾಣದ ಕಾರಣ ಹಾಲು ಉತ್ಪಾದಕರು ನಿರ್ಲಕ್ಷಿಸುವ ಈ ಖನಿಜ  ಮಿಶ್ರಣ  ಕಾಣೆಯಾಗುವುದು ಸಮಾಜದ ಗೋ ಸಂಪತ್ತಿಗೆ ಮಾರಕ.

ನಮ್ಮಲ್ಲಿ ಹಸುವೊಂದು ಬೆದೆಗೆ ಬಂದರೆ ಹೋರಿ ಹುಡುಕುವುದು ಅಥವಾ ಕೃತಕ ಗರ್ಭದಾರಣೆಗೆ ವ್ಯವಸ್ಥೆ ಮಾಡುವುದಕ್ಕಷ್ಟೇ ನಮ್ಮ ಕಾಳಜಿ ಸಿಮಿತ. ಕರು ಗಂಡಾದರೂ ಹೆಣ್ಣಾದರೂ ಒಂದೇ ಅನ್ನುವ ಬಾವನೆ ಇದ್ದು ಕರುವನ್ನು ಸಾಕಿ ಹಸುವನ್ನಾಗಿ ಮಾಡುವುದು ವೆಚ್ಚದಾಯಕ. ಬೇಕಾದಾಗ ಹಾಲೂಡುವ ಹಸುವನ್ನು ಖರೀದಿಸಿದರಾಯಿತು ಎನ್ನುವ ಪಲಾಯನವಾದ ನಾವಿಂದು ಕಾಣುತ್ತೇವೆ. ನಮ್ಮ ಪಶು ಸಂಪತ್ತಿನ ತಳಿಯನ್ನು ಉತ್ತಮಪಡಿಸುವ ನೈಜ ಕಾಳಜಿ ಅಥವಾ ಮುಂದಾಲೋಚನೆ ಸರಕಾರಕ್ಕಾಗಲಿ ರೈತ ಸಮುದಾಯಕ್ಕಾಗಲಿ ಇಲ್ಲವೇ ಇಲ್ಲ ಎನ್ನಬಹುದು.

ಪಶ್ಚಿಮದ ದೇಶಗಳಲ್ಲಿ ಒಂದು ಹಸು ಬೆದೆಗೆ ಬರುವಾಗ ಹೆಚ್ಚು ಕಮ್ಮಿ ನಾವು ಬೆಳೆದು ನಿಂತ ಮಗಳ ಲಗ್ನಕ್ಕಾಗಿ ಕಾಳಜಿ ವಹಿಸಿದಷ್ಟೇ ಜಾಗ್ರತೆ ವಹಿಸುತ್ತಾರೆ. ವೀರ್ಯ ಲಭ್ಯವಿರುವ ಹೋರಿಗಳ ಜಾತಕಗಳ ಜಾಗ್ರತೆಯಿಂದ ಪರಿಶೀಲನೆ ನಡೆಸಿದ ನಂತರವಷ್ಟೇ ಕೃತಕ ಗರ್ಭದಾರಣೆಗೆ ಅನುವು ಮಾಡಿಕೊಡುತ್ತಾರೆ.  ಕೆಲವು  ಉತ್ತಮ  ಹೋರಿಗಳ  ವೀರ್ಯ  ಹೆಚ್ಚು ದುಬಾರಿ.    ಪ್ರತಿಯೊಂದು ಕರು ಹುಟ್ಟುವಾಗಲೂ ಅದರ ಹಿಂದೆ ನಿರ್ದಾರಿತ ಚಿಂತನೆ ಇದ್ದು ಅನಪೇಕ್ಷಿತ ಗುಣಗಳ ಕನಿಷ್ಟಗೊಳಿಸಲು ಸಾದ್ಯವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಉತ್ತಮ ವಂಶಶಾಹಿಗಳ ನಷ್ಟವಾಗುವುದಿಲ್ಲ.

ಎರಡನೆಯದಾಗಿ ನಮ್ಮಲ್ಲಿ ಮಲೆನಾಡು ಪ್ರದೇಶದಲ್ಲಿ ಕಾಲ್ಸಿಯಂ ಸತ್ವ ಮಣ್ಣಿನಲ್ಲಿದ್ದರೂ ನೀರಿನಲ್ಲಿ ಕರಗದ ಅಲಬ್ಯ ರೂಪದಲ್ಲಿರುವ ಕಾರಣ ನೂರಾರು ವರುಷಗಳಿಂದ ಕಾಲ್ಸಿಯಂ ಕೊರತೆಯಿಂದಾಗಿ ಎಲುಬು ಬೆಳವಣಿಕೆ ಕುಂಟಿತವಾಗಿ ಮಲೆನಾಡು ಗಿಡ್ಡ ಜಾತಿ ದನ ರೂಪಿತವಾಯಿತು. ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮಲ್ಲಿದ್ದ ಉತ್ತಮ ಮಾದರಿ ರಾಸುಗಳಿಗೆ ಖನಿಜ ಮಿಶ್ರಣ ಮತ್ತು ಪೌಷ್ಟಿಕ ಆಹಾರ ಕೊಟ್ಟು ಉತ್ತಮಗೊಳಿಸುವ ಬದಲು ತಳಿ ಸಂಕರಣ ಕೈಗೊಂಡರು.

ದನಕರುಗಳಿಗೆ ದಿನವೂ     ಖಂಡಿತವಾಗಿ  ಖನಿಜ ಮಿಶ್ರಣ ಕೊಡಲೇ ಬೇಕು. ಆಹಾರದಲ್ಲಿ  ಕಾಲ್ಸಿಯಂ   ಇಲ್ಲವಾದರೆ ಕ್ರಮೇಣ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಖನಿಜ ಮಿಶ್ರಣ ರೈತರಿಗೆ ಸುಲಭ ಬೆಲೆಯಲ್ಲಿ ಸಿಗುವುದು ಅವಶ್ಯ.   ಯಾರಾದರೂ    ಡಾಕ್ಟ್ರಿಗೆ ಹೇಳಿದರೆ  ಚೆನ್ನಾಗಿತ್ತು.

Thursday, February 26, 2009

ನೂಡಲ್ ತಿನ್ನುವ ಪಾಠ


ಇಟಲಿಯಲ್ಲಿ ನಾನು ತಲಪುವಾಗ ಇನ್ನೂ ಚಳಿಗಾಲ. ಹವೆಗೆ ಹೊಂದಿಕೊಳ್ಳಲು ಹಾಗೂ ಮುಂದಿನ ದೇಶಗಳ ವೀಸಾ ಪಡಕೊಳ್ಳಲು  ನಾಲ್ಕು ದಿನ  ರೋಮಿನಲ್ಲಿದ್ದೆ. ಅಲ್ಲಿನ ರೋಟರಾಕ್ಟ ಕ್ಲಬ್ ಸದಸ್ಯರ ಸಂಪರ್ಕವಾಯಿತು. ಅವರು ನನಗೆ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಮಾಡಿಕೊಟ್ಟರು. ಅವರ ರಾತ್ರಿಯೂಟದ ಒಂದು ಸಭೆಗೂ ಕರಕೊಂಡು ಹೋಗಿದ್ದರು. ಅಲ್ಲಿ ಒಂದು ಪ್ರದಾನ ಖಾದ್ಯ - ನಮ್ಮಲ್ಲಿ ಈಗ ಜನಪ್ರಿಯವೆನಿಸಿರುವ ನೂಡಲ್ಸ್. ಮೊದಲು ಎಂದೂ ನೋಡದ ಈ ಸೇವಿಗೆಯನ್ನು ಚಾಕು ಚಮಚಗಳಲ್ಲಿ ತಿನ್ನುವುದು ನನಗೆ ಸವಾಲಾಯಿತು.

ಪಕ್ಕದಲ್ಲಿದ್ದ    ಅಪ್ತ  ಗೆಳೆಯ  ಸ್ಟೆಫೇನೊ ನೋಡು ಮಾರಾಯ ಫೋರ್ಕು ಹೀಗೆ ಹಿಡಿದು ಹೀಗೆ ತಿರುವಿ ತಿರುವಿ ಅದು ಸುತ್ತಿಕೊಳ್ಳುವಂತೆ ಮಾಡಿ ………. ನನಗೆ ಮೊದಲೇ ಗಲಿಬಿಲಿ.  ಅಲ್ಲಿ   ಸೇರಿದ ಸುಮಾರು ಹದಿನೈದು ಜನ ವಾರೆ ಕಣ್ಣಲ್ಲಿ ನನ್ನನ್ನು ಗಮನಿಸುತ್ತಿದ್ದ   ಅನುಭವವಾಗುತ್ತಿದ್ದು   ಮತ್ತೂ  ಗಡಿಬಿಡಿಗೆ  ಕಾರಣ.   ನಾನು ನೀನು ನಿನ್ನ ತಟ್ಟೆ ನೋಡು ಸ್ಟೆಫೇನೊ, ನಾನು ನನ್ನ ತಟ್ಟೆ ನಿಬಾಯಿಸುವೆ ಎಂದು  ಹೇಳಿದ ತಕ್ಷಣ ಮಾತು ಅತಿಯಾಯಿತೆನಿಸಿ ಮುಜುಗರದಿಂದ ಬಾಯಿ ಕಚ್ಚಿಕೊಂಡೆ.  ತಕ್ಷಣ  ನೆನಪಿಗೆ  ಬಂದ  ನಮ್ಮೂರ ರಾಜನ ಕಥೆ ಹೇಳಿದೆ.

ಒಬ್ಬ ಅಕ್ಕಿ ಕಾಳಲ್ಲಿ ರಾಜನ ಹೆಸರು ನೂರು ಸರ್ತಿ ಬರೆದು ತಂದು ರಾಜನಿಗೆ ಅರ್ಪಿಸಿದ. ಬಹು ದೊಡ್ಡ ಬಹುಮಾನ ಅಪೇಕ್ಷಿಸಿದ. ರಾಜ ವ್ಯವಹಾರಿಕ ಮನುಷ್ಯ. ಅಕ್ಕಿಯಲ್ಲಿ ಬರೆಯುವ ಕೆಲಸ ಬದುಕಿನ ದೃಷ್ಟಿಯಲ್ಲಿ ಪ್ರಯೋಜನಕಾರಿಯಲ್ಲ. ಬಹುಮಾನವಾಗಿ ಅವನಿಗೊಂದು ಕಿಲೊ ಅಕ್ಕಿ ಕೊಟ್ಟ. ಹಾಗೆಯೇ ಇಲ್ಲಿ ಕಷ್ಟ ಪಟ್ಟು ತಿನ್ನುವ ನೂಡಲ್ ನನ್ನ ಊರಲ್ಲಿ ತಿನ್ನುವ ಸಂಭವ ತೀರಾ ಕಡಿಮೆ ಎಂದು ಹೇಳಿ ಪರೀಸ್ಥಿತಿಯನ್ನು ತಿಳಿಯಾಗಿಸಿದೆ.

ಈ ಚಿತ್ರ ನೋಡುವಾಗ  ಅಂದು   ನಾನು ಪಟ್ಟ ಪಚೀತಿ ನೆನಪಾಯಿತು.  ಈಗ  ನಮ್ಮನೆಗೂ  ನೂಡಲ್ಸ್  ತಲಪಿದೆ.