Monday, November 24, 2008

ವಿದ್ಯುತ್ ಮತ್ತು ಈ ವರ್ಷದ ಬೆಳೆ ??????

ಮಳೆಗಾಲ ಕಳೆದು ಪುನಹ ಬೇಸಿಗೆ ಸಮೀಪಿಸುತ್ತಿದೆ. ಪ್ರತಿ ವರ್ಷದಂತೆ ಈ ಸಲವೂ ಗ್ರಾಮೀಣ ವಿದ್ಯುತ್ ಸರಬರಾಜು ಮಟ್ಟಿಗೆ ಹೊಸ ವೇಳಾಪಟ್ಟಿ. ಈಗ ಬೆಳಗಿನ ಪಾಳಿಯಲ್ಲಿ ಬೆಳಗ್ಗೆ ಐದರಿಂದ ಹನ್ನೊಂದರ ವರೆಗೆ ಆರು ಘಂಟೆ ವಿದ್ಯುತ್ ಪೊರೈಕೆ. ಬೆಳಗಿನ ಐದು ಎಂದರೆ ಬೆಳಕು ಹರಿಯಲು   ಇನ್ನೂ ಹೊತ್ತಿದೆಯೆನ್ನುವುದು ಅನ್ನುವುದು ಬೇರೆ ವಿಚಾರ.

ವಿದ್ಯುತ್ ಪೊರೈಕೆ ಕಡಿತವನ್ನು ಕಳೆದ ಇಪ್ಪತೈದು ವರ್ಷಗಳಿಂದ ಕಾಣುತ್ತಿದ್ದೇನೆ. ಬೇಸಗೆಯಲ್ಲಿ ನೀರಾವರಿ ನಿರ್ವಹಣೆಗಾಗಿ ಬೆಳಗಿನ ಜಾವದ ವರೆಗೆ ನಿದ್ದೆಗೆಟ್ಟು ತೋಟದಲ್ಲೆಲ್ಲಾ ಓಡಾಡುತ್ತಾ ಮದ್ಯಂತರದಲ್ಲಿ ಓದುತ್ತಾ ಕೂತಿರುತ್ತಿದ್ದೆ. ಜೂನ್ ತಿಂಗಳಲ್ಲಿ ಮಳೆಗಾಲ ಸುರುವಾದರೂ ನನಗೆ ರಾತ್ರಿ ಹತ್ತಕ್ಕೆ ನಿದ್ರಿಸಲು ಸಾದ್ಯವಾಗಲು ಎರಡು ತಿಂಗಳು ಬೇಕಾಗುತಿತ್ತು.

ಕಳೆದ ಇಪ್ಪತ್ತು ವರ್ಷಗಳ ಗಮನಿಸಿದರೆ ರೈತರಿಗೆ ಹಗಲು ನಾಲ್ಕಾರು ಘಂಟೆ ಕೊಡುವ ವಿದ್ಯುತ್ ಬೆಳಗ್ಗೆ ಅಥವಾ ಮಧ್ಯಾಹ್ನ ನಂತರ ಎಂದು ವಿಭಾಗಿಸುತ್ತಾರೆ. ನಮಗೆ ಬೆಳಗಿನ ವಿದ್ಯುತ್ ಎಂದಾದರೆ ಬೆಳಗಿನ ಜಾವ ಐದರಿಂದ ಹತ್ತು ಘಂಟೆ ಮದ್ಯೆ ಪ್ರಾರಂಬವಾಗುವುದು ಹಾಗೂ ಮೂರರಿಂದ ಆರು ಘಂಟೆ ಅವದಿ.

ಎರಡು ಕಾರಣಗಳನ್ನೂ ಅನುಸರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಪ್ರತಿ ವರ್ಷವೂ ನೀರಾವರಿ ಕೊಳವೆ ಜಾಲ, ನಿಯಂತ್ರಣ ಗೇಟು ವಾಲ್ವ್ ಸೇರಿಸುತ್ತಾ ಬದಲಾಯಿಸುತ್ತಾ ಬಂದಿದ್ದೇವೆ. ನೀರಾವರಿ ಪ್ರಾರಂಬಿಸುವ ಸಮಯದಲ್ಲಿ ಈ ದೊಂಬರಾಟ ಪ್ರತಿ ವರ್ಷವೂ ಅನಿವಾರ್ಯ ಎಂಬಂತಾಗಿದೆ. ಇದರ ಬದಲಿಗೆ ಐದು ವರ್ಷಕ್ಕೆ ಖಾಯಂ ವೇಳಾಪಟ್ಟಿ ಕೊಟ್ಟರೆ ಉತ್ತಮ.

ಕೊರತೆ ಇರುವುದು ವಿದ್ಯುತ್ ಅಲ್ಲ, ರಾಜಕೀಯ ಇಚ್ಚಾ ಶಕ್ತಿ ಎಂಬ ವಿಚಾರ ಈಗಾಗಲೇ ಸಾಬೀತಾಗಿದೆ. ಹಣಕಾಸು ಸರಿದೂಗಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿರುವುದರಿಂದ ಕಡಿಮೆ ಆದಾಯ ಎನ್ನುವ ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೊರೈಸಲು ಅವರ ವರ್ಗಕ್ಕೆ ಆಸಕ್ತಿ ಕಡಿಮೆ. ಎಲ್ಲ ಸಮಸ್ಯೆಗಳಿಗೂ ಈ ದಾನಶೂರ ರಾಜಕಾರಣಿಗಳೇ ಕಾರಣ.

ನೀರಾವರಿಯೆಂದರೆ ಗಿಡ ಮರದ ಬೇರು ಪ್ರದೇಶ ಒಮ್ಮೆಗೆ ಸಂಪೂರ್ಣ ಒದ್ದೆಯಾಗಬೇಕು. ಎರಡು ಘಂಟೆ ನೀರಾವರಿ ಬಯಸುವ ಬೆಳೆಗೆ ಬೆಳಗ್ಗೆ ಒಂದು ಮತ್ತು ಸಂಜೆ ಒಂದು ಸೇರಿಸಿದರೆ ಎರಡು ಘಂಟೆ ಎನ್ನುವಂತಿಲ್ಲ. ಎರಡು ಬಾರಿಯೂ ಅದು ಬೇರು ಪ್ರದೇಶದ ಮೇಲಿನ ಅರ್ಧ ಬಾಗ ಮಾತ್ರ ತೋಯಿಸಿ ನೀರಾವರಿ ಅಪೂರ್ಣ ಎನಿಸಿಕೊಳ್ಳುತ್ತದೆ.

ನಮ್ಮ ಪ್ರದೇಶದ ಅಡಿಕೆತೋಟದಲ್ಲಿ ಋತುಮಾನ ಅನುಸರಿಸಿ ಅನುಭವದಿಂದ ನಿಗದಿ ಪಡಿಸಿ ಐದರಿಂದ ಏಳು ದಿನದ ಅವದಿಯಲ್ಲಿ ಸರ್ತಿಗೆ ಒಂದರಿಂದ ಮೂರು ಘಂಟೆ ಸ್ಪ್ರಿಂಕ್ಲರ್ ಚಾಲೂ ಮಾಡುವವರು ಇದ್ದಾರೆ. ಒಮ್ಮೆಗೆ ಐದು ಘಂಟೆ ವಿದ್ಯುತ್ ಎಂದರೆ ನಾವು ಎರಡು ಸಲ ಹರಿವು ಬದಲಾಯಿಸಿ ಸರ್ತಿಗೆ ಎರಡೂವರೆ ಘಂಟೆ ನೀರು ಹಾಕುವ ಅಬ್ಯಾಸ ಮಾಡಿಕೊಂಡಿದ್ದೆವು. ಅರು ಘಂಟೆ ಎಂದರೆ ಎರಡು ಘಂಟೆ ಗುಣಿಸು ಮೂರು ಆಗುವುದರ ಬದಲು ಸರ್ತಿಗೆ ಮೂರು ಘಂಟೆ ಆಗಿದೆ. ಪ್ರತಿ ವರ್ಷ ಬದಲಾಗುವ ಈ ಹೊಸ ವೇಳಾಪಟ್ಟಿಯ ಕಾರಣದಿಂದಾಗಿ ಹಾಗೂ ನಮ್ಮ ಸೋಮಾರಿತನದಿಂದಾಗಿ ನೀರು ಹಾಗೂ ವಿದ್ಯುತ್ ಶೇಕಡ ಹತ್ತರಿಂದ ಇಪ್ಪತ್ತರಷ್ಟು     ಪೋಲಾಗುವ ಸಾದ್ಯತೆಗಳಿವೆ.

ಫ್ರಾನ್ಸಿನ ಪ್ಯಾರಿಸ್ ಪಕ್ಕದ ಊರೊಂದರಲ್ಲಿ ಜನನ ಪ್ರಮಾಣ ಸಮೀಪದ ಉಳಿದ ಊರಿಗಿಂತ ಗಣನೀಯವಾಗಿ ಹೆಚ್ಚಿತ್ತು. ಅದಕ್ಕೆ ಕಾರಣ ಹುಡುಕಲು ಹೋದವರಲ್ಲಿ ಅಲ್ಲಿನ ಊರ ಗಣ್ಯರು ಕಾರಣ ಬೆಳಗ್ಗೆ 4.40 ರ ರೈಲು ಎಂದರಂತೆ. ಸಮೀಕ್ಷೆಗೆ ಹೋದವರಿಗೆ ಈ ಮಾತು ಅರ್ಥವಾಗಲಿಲ್ಲ. ಆಗ ಊರವರು ವಿವರಣೆ ಕೊಟ್ಟರು. ಊರ ಮದ್ಯೆ ಸೀಟಿ ಊದುತ್ತಾ ಸಾಗುವ ಬೆಳಗಿನ ಜಾವದ ರೈಲು ಊರವರನ್ನೆಲ್ಲ ಎಬ್ಬಿಸುತ್ತದೆ. ಹಾಸಿಗೆ ಬಿಟ್ಟೇಳಲು ಆಗ ಬೇಗ ಎನಿಸುತ್ತದೆ. ನಿದ್ರೆ ಬಾರದ ಜನರೆಲ್ಲ ಮಿಲನ ಮಹೋತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ.

ನಮ್ಮಲ್ಲಿ  ಕೃಷಿಕರು   ಈ ವರ್ಷ ಬೆಳಗಿನ ಐದು ಘಂಟೆಗೆ ಒಮ್ಮೆ ಪಂಪ್ ಚಾಲೂ ಮಾಡಲು ಏಳುವುದು ಅನಿವಾರ್ಯ. ಆದರೆ ಮದ್ಯಾಹ್ನ ಅನಂತರದ ವಿದ್ಯುತ್ ಅನ್ನುವ ದಿನಗಳಲ್ಲಿ ಉಳಿದ ಕಸುಬಿನವರಿಗೂ ಬೆಳಗ್ಗೆ ಐದು ಘಂಟೆಗೆ ಬೀಸಣಿಕೆ  ನಿಂತು ಎಚ್ಚರವಾಗುದರ ಮಟ್ಟಿಗೆ ವಿನಾಯತಿಯಿಲ್ಲ.

ಅನಂತರ ……….. .............ಕಾಲವೇ ಉತ್ತರಿಸಬಲ್ಲ ಪ್ರಶ್ನೆ.

Friday, November 21, 2008

ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್

ಅಂತೂ ಗೆದ್ದದ್ದು ನಾವೇ. ಇತ್ತೀಚೆಗೆ ನಾನೊಂದು ಕದನದಲ್ಲಿ ತೊಡಗಿಸಿಕೊಂಡಿದ್ದೆ.ಕಳಪೆ ಗುಣಮಟ್ಟದ ಸೇವೆಗೆ ರಿಲಿಯನ್ಸ್ ದೂರಸಂಪರ್ಕ ಸಂಸ್ಥೆಯನ್ನು ಗ್ರಾಹಕ ನ್ಯಾಯಾಲಯಕ್ಕೆ ಅನಿವಾರ್ಯವಾಗಿ ಎಳೆಯಬೇಕಾಯಿತು.  ಮೂರು ತಿಂಗಳಿನಿಂದ ವಾಯಿದೆಯಾಗುತ್ತಿದ್ದ  ತೀರ್ಪು ಕೊನೆಗೂ  ಹೊರಬಂದಿದೆ.


ನನ್ನ ಮನೆಯ ದೂರವಾಣಿ ಕಾಡಿನ ಮದ್ಯೆ ಸರಿಗೆ ಬರುವ ಕಾರಣ ಅಗಾಗ ಹಾಳಾಗುತಿತ್ತು. ನನ್ನ ದೈಹಿಕ ಸಮಸ್ಯೆ ಹಾಗೂ ಹಳ್ಳಿಯಲ್ಲಿ ವಾಸವಾಗಿರುವ ಕಾರಣ ನಂಬಲರ್ಹ ಇನ್ನೊಂದು ದೂರವಾಣಿ ತುರ್ತು ಅಗತ್ಯಕ್ಕೆ ಇರಲಿ ಎಂದು ರಿಲಿಯನ್ಸ್ ಸ್ಥಾವರವಾಣಿ ಪಡಕೊಂಡೆ.

ರಿಲಿಯನ್ಸ್ ದೂರವಾಣಿಯದು ಅತ್ಯಾದುನಿಕ ಸಂಪೂರ್ಣ ಯಂತ್ರವೇ ನಿಯಂತ್ರಿಸುವ ಜಾಲ. ಎರಡು ತಿಂಗಳ ಉತ್ತಮ ಸೇವೆ. ಒಮ್ಮೆ ತೆರ ಬೇಕಾದ ಮೊತ್ತ  ಮತ್ತು ಹಣ ಕಟ್ಟಲು ಕೊನೆಯ ದಿನಾಂಕ ಎರಡನ್ನೂ ನಮೂದಿಸದ ಬಿಲ್ ನನ್ನ ಕೈಸೇರಿತು. ಬಿಲ್ಲಿನ ಮೊತ್ತಕ್ಕಿಂತ ಹೆಚ್ಚು ನನ್ನ ಹಣ ಅವರಲ್ಲಿದ್ದ ಕಾರಣ ನಾನು ಸುಮ್ಮನಿದ್ದೆ.

ಹತ್ತು ದಿನ ಕಳೆದು . ರಿಲಿಯನ್ಸ್ ಕಛೇರಿಯಿಂದ ಹಣ ಕಟ್ಟಲು ಆದೇಶಿಸುವ ಹಾಗೂ ಸಂಪರ್ಕ ಕಡಿತ ಸೂಚಿಸುವ ಕರೆಗಳನ್ನು ಮಾಡಿದರು. ಆಗ ನಾನು ನನ್ನ ಹಣ ನಿಮ್ಮಲ್ಲುಂಟು. ಯಾವುದೇ ಬಾಕಿ ಇಲ್ಲ. ದಯವಿಟ್ಟು ಕಡಿತಮಾಡಬೇಡಿ. ಅಗತ್ಯವಿದ್ದರೆ ಪಟ್ಟಣಕ್ಕೆ ಹೋದಾಗ ಖಂಡಿತ ಕಟ್ಟುತ್ತೇನೆ ಎಂದು ಪರಿಪರಿಯಾಗಿ ವಿನಂತಿಸಿದೆ. ಆದರೂ ಸಂಪರ್ಕ ಕಡಿತಗೊಂಡಿತು. ಒಂದು ವಾರ ಬಳಿಕ ಹಣ ಕಟ್ಟಿ ಸಂಪರ್ಕಕ್ಕೆ ಜೀವ ತುಂಬಿದೆ.

ತೆರೆಮರೆಯಲ್ಲಿ ಆದದ್ದೇನು ಅಂದರೆ ನನ್ನ ಹಣ ಮತ್ತು ಜೀವಾವದಿ ಅವದಿ ಅರ್ಜಿ ಬಾಕಿಯಿಟ್ಟು ಬಿಲ್ ಮಾಡಿದ್ದು. ಅನಂತರ ಆ ಅರ್ಜಿಯನ್ನು ಅಂಗೀಕರಿಸಿ ಹಣ ವರ್ಗಾಯಿಸಿದಾಗ ನನ್ನ ಖಾತೆಯಲ್ಲಿ ಕನಿಷ್ಟ ಠೇವಣಿಯಲ್ಲಿ ಕೊರತೆ ಕಂಪ್ಯುಟರಿಗೆ ಕಂಡಂತಾಯಿತು. ಸಂಪರ್ಕ ಕಡಿಯುವಾಗಲೂ ನನ್ನ ಖಾತೆಯಲ್ಲಿ ಹಣ ಕೊರತೆ ಇರಲಿಲ್ಲ. ಆದರೂ ಯಂತ್ರಕ್ಕೆ ಒದಗಿಸಿದ ಮಾನದಂಡಗಳ ಅನುಸರಿಸಿ ಅದು ನನ್ನ ಬಾಕಿದಾರ ಎಂದು ಪರಿಗಣಿಸಿ ಸಂಪರ್ಕಕ್ಕೆ ಕತ್ತರಿ ಪ್ರಯೋಗವಾಯಿತು.

ಕಛೇರಿಗಳಲ್ಲಿ ಗ್ರಾಹಕ ಸಂಪರ್ಕ ಸ್ಥಾನಗಳಲ್ಲಿ ಒರಟು ವರ್ತನೆಯ ಬೇಜವಾಬ್ದಾರಿ ವ್ಯಕ್ತಿಗಳ ನೇಮಿಸುತ್ತಿರುವುದೂ ಸಮಸ್ಯೆಗೆ ಕಾರಣಗಳಲ್ಲೊಂದು.  ಗೆಳೆಯ   ದಿನಕರ್ ಹೇಳುವಂತೆ ಹಲವರಿಗೆ ಅವರ ಚೆಲುವಿಗೆ ಕೆಲಸ ಸಿಕ್ಕಿರುತ್ತದೆ ಹೊರತು ವ್ಯವಹಾರಿಕ ಕುಶಲತೆಗೆ ಅಲ್ಲ. ಬಾಲ ನೋಡಿ ಕುದುರೆ ಕೊಂಡುಕೊಂಡಂತೆ.  ಪರಿಣಾಮ ನಾವು ಪಡ್ಚ ಆಗುವುದು.

ಕಂಪ್ಯುಟರ್ ಕಕ್ಕುವ ಮಾಹಿತಿಯನ್ನು ವಿಷ್ಲೇಸಿಸುವ ಸಾಮರ್ಥ್ಯ ಇವರಿಗೆ ಇಲ್ಲದೆ ತೊಂದರೆ ಉಳಿದುಕೊಳ್ಳುತ್ತದೆ. ಡಾಕ್ಟ್ರೆ ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ ಎನ್ನುವ ರೋಗಿಯ ಮಾತಿಗೆ ನೀನು ಬದುಕಿದ್ದಿ ಅಂತ ನಾನು ಹೇಳಬೇಕು ಎಂದು ಡಾಕ್ಟ್ರು ಹೇಳಿದಂತೆ ಇವರ ಪ್ರತಿಕ್ರಿಯೆ.  ಕಂಪ್ಯುಟರ್ ತಂತ್ರಾಂಶ ಬರೆಯುವಾಗ ಹಾಗೂ ಮಾಹಿತಿ ಉಣಿಸುವಾಗ ಬಹಳ ಜಾಗ್ರತೆ ವಹಿಸಿರುತ್ತಾರೆ. ಸಂಬಾವ್ಯ ಅಡಚಣೆಗಳನ್ನೆಲ್ಲ ಊಹಿಸಿ ಪರಿಹಾರ ರೂಪಿಸಿರುತ್ತಾರೆ. ಆದರೂ ಕೆಲವು ತಪ್ಪುಗಳು ನುಸುಳುತ್ತವೆ. ಜವಾಬ್ದಾರಿ ಕುರ್ಚಿಯಲ್ಲಿರುವವರಿಗೆ ಗೊತ್ತಾದರೆ ಇಂತಹ ಸಮಸ್ಯಯ ಜಾಡು ಹಿಡಿದು ಹಿಂಬಾಲಿಸಿ ಸರಿಪಡಿಸುತ್ತಾರೆ. . ತಕ್ಷಣ ತಮ್ಮ ಹಿರಿಯ ಅದಿಕಾರಿಗಳ ಸಂಪರ್ಕಿಸುವಂತಹ ಪರ್ಯಾಯೊಪಾಯಗಳ ಕೈಗೊಳ್ಳುವ ಬದಲು ಗ್ರಾಹಕರನ್ನು ರೇಗುವುದು ಸುಲಭದ ದಾರಿ.

ವಾರಕ್ಕೊಮ್ಮೆ ಇ-ಮೈಲ್ ನೆನಪೋಲೆ ರವಾನಿಸುತ್ತಿದ್ದೆ. ಪ್ರತಿ ಸಲ ದೂರು ದಾಖಲಾದಾಗಲೂ ಸ್ವಿಕೃತ ಉತ್ತರದೊಂದಿಗೆ ಕ್ರಮ ಸಂಖ್ಯೆ ಸಿಗುತ್ತಿತ್ತು. ಜತೆಯಲ್ಲಿ ನಮ್ಮ ತಂತ್ರಜ್ನರು ನಿಮ್ಮ ಸಮಸ್ಯೆ ವಿಚಾರದಲ್ಲಿ ಕಾರ್ಯನಿರತರಾಗಿದ್ದಾರೆ ಎನ್ನುವ ಸಮಜಾಯಿಷಿ. ಒಮ್ಮೆ ನಿಮ್ಮ ತಂತ್ರಜ್ನರು ಮಂಗಳೂರಿನಿಂದ ತೆವಳಿಕೊಂಡು ಬಂದರೂ ಈಗಾಗಲೇ ತಲಪಬೇಕಾಗಿತ್ತು ಎನ್ನುವ ನನ್ನ ಪತ್ರಕ್ಕೂ ಸಿಕ್ಕಿದ್ದು ಕ್ರಮ ಸಂಖ್ಯೆ ಮಾತ್ರ.

ನಿಸ್ತಂತು ದೂರವಾಣಿ ಸಂಪರ್ಕ ನಿರ್ದಿಷ್ಟ ವಿಳಾಸಕ್ಕೆಂದು ಕೊಡಲ್ಪಡುತ್ತದೆ. ಅದನ್ನು ತಾಲೂಕಿನೊಳಗೆ ಜಾಗ ಬದಲಾಯಿಸಿದರೂ ಸಮಸ್ಯೆ ಇಲ್ಲ. ಕಂಪೇನಿಯವರು ಆಚೆ ಈಚೆ ತಾಲೂಕಿನಲ್ಲಿ ಹೊಸ ಹೊಸ ಹೆಚ್ಚು ಶಕ್ತಿಯುತವಾದ ಟವರ್ ಹಾಕಿದಾಗ ನನ್ನ ದೂರವಾಣಿ ಸ್ಥಬ್ದವಾಗುತಿತ್ತು. ಸರಿಪಡಿಸಲು ಸರಳ ವಿಷಯವಾದ ನನ್ನ ದೂರವಾಣಿಗೆ ಹೊಸ ಸಂಖ್ಯೆ ಕೊಡಲು ಹಲವು ಬಾರಿ ದೊರು ಕೊಟ್ಟರೂ ಸಹಾ   ಎರಡು ಸಲವೂ  ಒಂದೂವರೆ ತಿಂಗಳು ತೆಗೆದುಕೊಂಡು ಸತಾಯಿಸಿದಾಗ ನಾನು ತಾಳ್ಮೆ ಕಳಕೊಂಡೆ. ಹೀಗೆ ಮುನ್ನೂರು ದಿನದಲ್ಲಿ ನೂರು ದಿನಕ್ಕೊ ಹೆಚ್ಚು ಸೇವೆ ವಂಚಿತ ಗ್ರಾಹಕನಾಗಿ ನಾನು ಕಾನೂನಿಗೆ ಶರಣಾದೆ.

ದಾಖಲೆಗಳ ಸಮೇತ ನ್ಯಾಯವಾದಿ ಶ್ರಿ ದರ್ಬೆ ಈಶ್ವರ ಭಟ್ಟರು ನನ್ನ ಪರವಾಗಿ ಸಮರ್ಥವಾಗಿ ವಾದಿಸಿದರು ಹಾಗೂ ನ್ಯಾಯಾಲಯ ನಾನು ಹಾಜರುಪಡಿಸಿದ ದಾಖಲೆಗಳ ಪರಿಶೀಲಿಸಿ ನಮ್ಮ   ವಾದವನ್ನು ಪುರಸ್ಕರಿಸಿತು. ಇಷ್ಟೆಲ್ಲ  ಆದರೂ  ನನಗೆ  ಸಿಕ್ಕಿದ್ದು  ಜುಜುಬಿ  ಪರಿಹಾರ.        ಈಗ    ಶಸ್ತ್ರ ಕ್ರಿಯೆ   ಯಶಸ್ವಿ  ಮತ್ತು  ರೋಗಿ  ಸತ್ತ  ಎನ್ನುವ  ಅನುಭವ.

ದಕ್ಷಿಣ  ಕನ್ನಡ   ಜಿಲ್ಲಾ ಗ್ರಾಹಕ ವೇದಿಕೆ    ಈ ರಿಲಯನ್ಸ್ ಸಂಸ್ಥೆಯ ಸೇವಾ ನ್ಯೊನತೆಗಾಗಿ ಎರಡು  ಸಾವಿರ   ರೊಪಾಯಿ ಪರಿಹಾರ ಒಂದು  ಸಾವಿರ     ರೂಪಾಯಿ ನ್ಯಾಯಾಲಯ ವೆಚ್ಚ ನೀಡುವಂತೆ ತೀರ್ಪು ನೀಡಿತು.    ಹೆಚ್ಚಿನ  ವಿವರಗಳು  ಇನ್ನೂ  ಅಲಭ್ಯ.  ನಾನು  ಇದಕ್ಕೆ  ಮಾಡಿದ  ಒದ್ದಾಟ   ಹಾಗೂ  ನನ್ನ  ಅಭಿಪ್ರಾಯ    ಇನ್ನೊಮ್ಮೆ  ಬರೆಯುವೆ.

ಟೆಲಿಫೋನ್ ವಿಚಾರದಲ್ಲಿ ತಿಂಗಳುಗಟ್ಟಲೆ ಸತಾಯಿಸಿದಂತಹ ನನ್ನ ಅನುಭವಕ್ಕೆ ಹೋಲುವಂತಹ ಕಥೆ ಇಂಗ್ಲೇಂಡಿನಿಂದಲೂ ಬಂದಿದೆ. ಮನೆಯವರಿಗೆ ಸ್ಟ್ರೋಕ್ ಆದ ಕ್ಷಣದಲ್ಲೇ ಗ್ರಾಮೀಣ ಪ್ರದೇಶದ ಆ ದೂರವಾಣಿ ಸಂಪರ್ಕ ಕತ್ತರಿಸಲ್ಪಟ್ಟಿದೆ. ವಿಷಯ ಅರಿತ ದೂರದಲ್ಲಿರುವ ಮಗಳಿಂದ ದೂರವಾಣಿ ಕಛೇರಿಗೆ ಹಲವಾರು ಕರೆಗಳು. ಒಂದಂತೂ 80 ನಿಮಿಷದ ದೀರ್ಘ ಹಾಗೂ ನಿಷ್ಪ್ರಯೋಜಕ ಸಂಬಾಷಣೆ. ಅಂತೂ 40 ಘಂಟೆಗಳ ಅನಂತರ ಸಂಪರ್ಕ. ಅನಂತರ ಗುಣಮುಖಗೊಳ್ಳುತ್ತಿದ್ದ ರೋಗಿಗೆ ತಪ್ಪೊಪ್ಪಿಗೆಗಳ ಸುರಿಮಳೆ. ಗ್ರಾಹಕರ ಬಗೆಗಿನ ಕಾಳಜಿ ಹೆಚ್ಚಿರುವ ಇಂಗ್ಲೇಂಡಿನಲ್ಲಿ ಹೀಗಾದರೆ ನಮ್ಮಲ್ಲಿ ??? ನಾನು ಹೇಳಲಿಚ್ಚಿಸಿದ ಈ ಗ್ರಾಹಕ ಮತ್ತು ಸೇವೆ ಪೊರೈಸುವವರ ನಡುವಿನ ವಿಚಾರವನ್ನು ಇಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ.

ಎರಡೆರಡ್ಲಿ ನಾಲ್ಕು ಎನ್ನುವ ಲೆಕ್ಕದಲ್ಲಿ ಕಂಪ್ಯುಟರ್ ತಪ್ಪುವುದಿಲ್ಲ. ಕಂಪ್ಯುಟರ್ ಕೊಡ ತಪ್ಪಿ ಬೀಳಬಹುದೆನ್ನುವ ನನ್ನ ಅನುಭವಗಳಲ್ಲಿ ಸಮಸ್ಯೆ ಇರುವುದು ತಂತ್ರಾಂಶದಲ್ಲಿರುವ ಅಂದಿನ ವರೆಗೆ ಗುರುತಿಸಲ್ಪಡದ ಹುಳುಕು. ಮುಂದೆ ಕಂಪ್ಯುಟರ್ ಅವಲಂಬನೆ ಹೆಚ್ಚಿದಂತೆ ಇಂತಹ ತೊಂದರೆ ಆಗಾಗ ಮರುಕಳಿಸಬಹುದು. ಮಾಮೂಲಿ ರೀತಿಯ ಸಮಸ್ಯೆಗಳ ನಿವಾರಣೆಗೆ ನಿರ್ದಿಷ್ಟ ವ್ಯವಸ್ತೆ ಚೆನ್ನಾಗಿ ಕೆಲಸ ಮಾಡುತ್ತದೆ. ಈ ರೀತಿ ಅನಿರೀಕ್ಷಿತವಾಗಿ ತಲೆ ಚಚ್ಚಿಕೊಳ್ಳುವಂತಹ ಸಮಸ್ಯೆಗಳು ಎದುರಾಗಬಹುದೆಂಬ ತಿಳುವಳಿಕೆ ನಮ್ಮಲ್ಲಿದ್ದರೆ ಪರಿಹಾರ ಕಾಣುವುದು ಸುಲಬವೆನ್ನುವ ನೆಲೆಯಲ್ಲಿ ಈ ಬರಹ ಬರೆದಿದ್ದೇನೆ.

ದೂರವಾಣಿ  ದೈತ್ಯನೊಂದಿಗೆ   ನಡೆದ    ಈ  ಹೋರಾಟಕ್ಕೆ    ನಮ್ಮ   ಕುಟುಂಬ ವೈದ್ಯರಾದ   ಡಾ| ಕೆ. ಜಿ. ಭಟ್ ಅವರು ಕೊಟ್ಟ   ಮಾರ್ಗದರ್ಶನ   ನೈತಿಕ  ಬೆಂಬಲವನ್ನೂ  ಸ್ಮರಿಸಿಕೊಳ್ಳುತ್ತೇನೆ.     . ಈ ಅನುಭವ ನಿಮಗೂ ಆಗಬಹುದು ಎನ್ನುವ ವಿಚಾರ ನೆನಪಿರಲಿ.

Sunday, November 16, 2008

ಜಿಹಾದಿಗಳ ಕೂಟಕ್ಕೆ ಹೆಂಗಸರು

ನಿನ್ನೆಯ ಕನ್ನಡ ಪ್ರಭ ಏಳನೆಯ ಪುಟದ ಸುದ್ದಿ ಓದುವಾಗ ನಿಜಕ್ಕೂ ಗಾಬರಿಯಾಗುತ್ತದೆ. ಬಯೋತ್ಪಾದನೆ ಎಲ್ಲೆಡೆ ವ್ಯಾಪಿಸಿ ಈಗ ನಮ್ಮ ಹಿತ್ತಿಲಿಗೂ ತಲಪಿದೆ. ಅದೊಂದು ಮೆದುಳನ್ನು ಕಿತ್ತು ಹಾಕಿ ಮನುಷ್ಯರನ್ನು ವಿವೇಚನೆ ಇಲ್ಲದ ಯಂತ್ರಮಾನವರನ್ನಾಗಿ ಮಾಡುವ ಏಕಮುಖ ದಾರಿ.  ಜಿಹಾದಿಗಳಿಗಾಗಿ ನಮ್ಮ ಆಸುಪಾಸಿನಲ್ಲಿ ಈಗಾಗಲೇ ಹುಡುಗರನ್ನು ಸೇರಿಸಿಕೊಂಡು ತರಬೇತಿಗೆ ಕಳುಹಿಸಿದ್ದು ಹಳೇಯ ಸುದ್ದಿ. ಈಗ ಹೆಂಗಸರನ್ನೂ ವಿದ್ವಂಸಕ ಕೃತ್ಯ ನಡೆಸಲು ತರಬೇತಿ ಕೊಡುವುದು ಇನ್ನೂ ಹೆಚ್ಚು ಗಂಬೀರ ವಿಚಾರ.


ಅಮೇರಿಕದಲ್ಲಿ ಎಲ್ಲರೂ ತಮ್ಮ ಸರಹದ್ದಿನಲ್ಲಿ ಕಣ್ಣಿಡುವ ವ್ಯವಸ್ಥೆಯಿರುತ್ತದೆ. ಅಪರಿಚಿತ ವ್ಯಕ್ತಿ ಸಂಶಯಾಸ್ಪದ ವರ್ತನೆ ಕಂಡರೆ ತಕ್ಷಣ ಪೋಲೀಸರ ಗಮನಕ್ಕೆ ತರುತ್ತಾರೆ. ಎಲ್ಲರೂ ತಮ್ಮ ಬಡಾವಣೆ ರಕ್ಷಣಾ ಕಾರ್ಯದಲ್ಲಿ ಪಾಲುದಾರರೇ. ಜತೆಯಲ್ಲಿ ಈ ಬಡಾವಣೆಯಲ್ಲಿ neighborhood watch ಉಂಟೆನ್ನುವ ಫಲಕಗಳ ನೋಡಿದಾಗ ಜನ ತನ್ನ ಗಮನಿಸಿದರೆ ಎಂದು ಅಪರಾದಿಯನ್ನು ಗಲಿಬಿಲಿಗೊಳಿಸುತ್ತವೆ. ಆದರೂ ನಾಳೆ ಬಾಂಬು ಹಾಕುವವನನ್ನು ಇಂದು ಅಪರಾಧಿಯೆಂದು ಪರಿಗಣಿಸುವಂತಿಲ್ಲ . ಯುರೋಪಿನಲ್ಲಿ ಹುಡುಗನೊಬ್ಬ ಅಸ್ತ್ರಗಳೊಂದಿಗೆ ತನ್ನ ಚಿತ್ರ ಅಂತರ್ಜಾಲದಲ್ಲಿ ಹಾಕಿಕೊಂಡ ವಿಚಾರ ಅಕಸ್ಮಾತಾಗಿ ಪೋಲೀಸರ ಗಮನಕ್ಕೆ ಬಂದು ಅವರು ಅವನನ್ನು ಕರೆಸಿ ತನಿಖೆ ಮಾಡಿದರು. ಮರು ದಿನ ಆ ಹುಡುಗ ಹತ್ತು ಸಹಪಾಠಿಗಳ ಕೊಂದು ಆತ್ಮಹತ್ಯೆ ಮಾಡಿಕೊಂಡ.

ಪವಿತ್ರ ಗ್ರಂಥಗಳಲ್ಲಿ ಬರೆದಿರುದಕ್ಕೂ ಅವರ ಆಚರಣೆಗೂ ಯಾವುದೇ ಹೋಲಿಕೆ ಇರುವುದಿಲ್ಲ. ತಾವು ಮಹಾನ್ ಸಾಹಸಿ ಎನ್ನುವ ಭ್ರಮೆಗೆ ಒಳಗಾಗಿರುವ ಇವರ ನಂಬಿಕೆ ಪ್ರಕಾರ ಆತ್ಮಾಹುತಿ ಮಾಡಿಕೊಂಡ ಗಂಡಸರಿಗೆ ಸ್ವರ್ಗದಲ್ಲಿ ದೇವರು ಇವರ ಸೇವೆಗಾಗಿ ಒಬ್ಬೊಬ್ಬರಿಗೂ ಎಪ್ಪತ್ತೆರಡು ಕನ್ಯೆಯರ ಒದಗಿಸುತ್ತಾರೆ ಎನ್ನುವ ನಂಬಿಕೆ. ಈ  ಗಂಡಸರಿಗೆ ಎಪ್ಪತ್ತೆರಡು ಕುಮಾರಿಯರೊಂದಿಗೆ ಶಾಶ್ವತವಾಗಿ ವಿಹರಿಸಲು ಸಿಗುತ್ತಾರೆ ಎನ್ನುವ ಜಿಹಾದಿ ಕರಪತ್ರಗಳ ಓದಿದ ಹೆಣ್ಣು ಮಾನವ ಬಾಂಬರ್ ಮೌಲವಿಯವರಲ್ಲಿ ಕೇಳುತ್ತಾಳೆ - ಆಚೆ ಲೋಕದಲ್ಲಿ ನನ್ನ ಸೇವೆಗೆ ಎಪ್ಪತ್ತೆರಡು  ಕುಮಾರರು ಸಿಗುವರೋ. ಪ್ರಶ್ನೆ ಉಚಿತವಾದುದು. ಅನಿರೀಕ್ಷಿತ ಪ್ರಶ್ನೆಗೆ ಬಿನ್ ಲಾಡನ್ ತತ್ತರಿಸಿದನಂತೆ.


ಮುಸ್ಲಿಂ ಸಮಾಜ ಸ್ವಲ್ಪ ಎಚ್ಚರಗೊಡಿರುವುದು ಸ್ವಾಗತಾರ್ಹ. ಒಮ್ಮೆ ಸೃಷ್ಟಿಯಾದ ದರ್ಮಾಂಧ ತನಗೆ ಕರೆ ಬರುವ ವರೆಗೆ ಮಾಮೂಲಿ ಜೀವನ ನಡೆಸುತ್ತಾನೆ. ಸಮಾಜದವರಿಗಲ್ಲ ಸ್ವಂತ ಮನೆಯವರಿಗೆ ಸಹಾ ಈ ಸ್ಪೋಟಿಸಲು ಸಿದ್ದವಾದ ಬಾಂಬು ಗುರುತಿಸುವುದು  ಅಸಾದ್ಯ. ಸಹಚರರು ಸಿಕ್ಕಿ ಬಿದ್ದಾಗ ಮಾತ್ರ ಸುಳಿವು ಸಮಾಜಕ್ಕೆ ಪೋಲೀಸರಿಗೆ ದೊರಕುವುದು. . ನಮ್ಮ ರಾಜಕಾರಣಿಗಳು ಬುದ್ದಿ ಜೀವಿಗಳು  ಮಾನವ ಹಕ್ಕು ಕಾರ್ಯಕರ್ತರು    ಅ   ಸಮಾಜವನ್ನು    ಸರಿದಾರಿಯಲ್ಲಿ   ಸಾಗಲು ಬಿಡಲಾರರು ಅನ್ನಿಸುತ್ತದೆ.   ಸಮಾಜ ಜಾಗ್ರತಾವಸ್ಥೆಯಲ್ಲಿ ಇದ್ದರೆ ಕೆಲವು ಸಮಸ್ಯೆಗಳ ಪರಿಹಾರ ಸಿಗಬಹುದೇನೊ ?

ನಮ್ಮ   ಬುದ್ದಿಜೀವಿಗಳ ಬಗೆಗೆ   ರವಿಯವರ http://kannadathinktank.blogspot.com/     ದಲ್ಲಿರುವ ಅಣಕ ನೆನಪಾಗುತ್ತಿದೆ. ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

Saturday, November 01, 2008

ಅನಿರೀಕ್ಷಿತವಾಗಿ ಸಿಕ್ಕ ನೋಟಿನ ಕಥೆ

ಸ್ವಿಟ್ಸರ್ ಲಾಂಡಿನಲ್ಲಿ ರೈಲು ನಿಲ್ದಾಣದಲ್ಲಿ ವಿದೇಶಿ ವಿನಿಮಯ ವ್ಯವಹಾರ ಅಂದರೆ ಹಣ ಪರಿವರ್ತನೆ ಸೌಲಬ್ಯ ಇರುತ್ತದೆ. ಹಾಗೆ ಇನ್ನೇನು ಜರ್ಮನಿ ಗಡಿಯೊಳಗೆ ದಾಟುತ್ತೇನೆ ಅನ್ನುವಾಗ ಅಲ್ಲಿದ್ದ ರೈಲು ನಿಲ್ದಾಣಕ್ಕೆ ನುಗ್ಗಿದೆ. ನನ್ನಲ್ಲಿರುವ ಸ್ವಿಸ್ ಹಣ, ಪರಿವರ್ತನ ಶುಲ್ಕ ಮತ್ತು ಅಪೇಕ್ಷಿಸುವ ಜರ್ಮನಿಯ ಹಣದ  ಮೊತ್ತ, ಹೀಗೆ  ಎಲ್ಲ    ಲೆಕ್ಕಾಚಾರವನ್ನು ಹಣದ ಜತೆ  ರೈಲು ನಿಲ್ದಾಣದ   ಕಿಟಿಕಿಯ  ಎದುರಿದ್ದ     ಆ ಕಾರಕೂನರ     ಮುಂದಿಟ್ಟೆ. 

ನನ್ನ ವರ್ತನೆಗೆ ಅವರು  ಆಶ್ಚರ್ಯಚಕಿತರಾಗಿ ನನ್ನನ್ನು ನೋಡಿದರು.    ಪ್ರಾಯುಷ:    ಈ ರೀತಿಯ ಕರಾರುವಕ್ಕಾದ   ವ್ಯವಹಾರ ಅವರಿಗೆ   ಹೊಸದು.   ಅದೊಂದು  ಬಹಳ   ದೊಡ್ಡ  ಮೊತ್ತವಾಗಿರಲಿಲ್ಲ.    ಆಗ ನಾನು ನನ್ನ ಕಥೆ ಚುಟುಕಾಗಿ ಹೇಳಿದೆ. ಬಾರತದಿಂದ ಬಂದದ್ದು,   ಸೈಕಲಿಸುತ್ತಿದ್ದೇನೆ, ಗಡಿ ದಾಟಿದ ನಂತರ ಚಿಲ್ಲರೆ ನಾಣ್ಯಗಳನ್ನು ಬಾಂಕಿನವರು ಪಡಕೊಳ್ಳುವುದಿಲ್ಲ, ನಾನು ನೆನಪಿಗೋಸ್ಕರ ಸ್ವಲ್ಪ ಚಿಲ್ಲರೆ ಕೊಂಡೊಯ್ಯುತ್ತೇನೆ, ಹೆಚ್ಚು ಕೊಂಡೊಯ್ಯಲು ನನಗೆ ಹೊರಲು ಕಷ್ಟ ಮತ್ತು ಅಷ್ಟು ಹಣವೂ ನನಗೆ ಅಮೂಲ್ಯ ಎಂದು ನನ್ನ ವಿಚಾರ ಅವನ ಮುಂದಿಟ್ಟೆ. ವ್ಯವಹಾರ ಮುಗಿಯಿತು. ಹೊರ ಬಂದು ಸೈಕಲೇರಿದೆ.

ಜರ್ಮನಿ ಗಡಿ ಸಮೀಪಿಸುವಾಗ ಪಕ್ಕದಲ್ಲೊಂದು ಕಾರು ನಿದಾನಿಸಿತು. ಅದರಲ್ಲಿದ್ದ ಇಬ್ಬರು ಐವತ್ತು ದಾಟಿದ ಮಹಿಳೆಯರಲ್ಲಿ ಒಬ್ಬರು ಒಂದು ನೋಟನ್ನು ನನ್ನೆಡೆಗೆ ಚಾಚಿದರು. ನಾನು ಅರ್ಥವಾಗದೆ ಗಲಿಬಿಲಿಗೊಂಡಾಗ ಅವರು ಭಾನ್ ಹೋಫ್ ಅಂದರೆ  ಜರ್ಮನ್  ಬಾಷೆಯಲ್ಲಿ    ರೈಲು ನಿಲ್ದಾಣ ಎಂದು   ಹೇಳುತ್ತಾ       ಹಿಂಬದಿಗೆ ಕೈ ಸನ್ನೆ ಮಾಡಿದರು. ಆಗ ಚಿತ್ರ ಸ್ಪಷ್ಟವಾಯಿತು. ಇವರೂ ಆಗ  ರೈಲು ನಿಲ್ದಾಣದಲ್ಲಿದ್ದರು.  ನಾನು  ಈಚೆ  ಬಂದ  ನಂತರ  ಅಲ್ಲಿ   ನನ್ನ   ಬಗೆಗೆ   ಮಾತುಕಥೆಯಾಗಿರಲೂ  ಬಹುದು.    ನನ್ನ ಸಂಬಾಷಣೆ ಕೇಳಿ ಸಹಾಯ ಮಾಡುವ ಮನಸ್ಸಾಗಿ ಈ ಹಣದ ನೋಟನ್ನು ನನ್ನೆಡೆಗೆ ಚಾಚಿದ್ದರು. ನೋಟು ನನ್ನ ಕೈ ಸೇರಿತು ಎಂದಾಕ್ಷಣ ವೇಗ ಹೆಚ್ಚಿಸಿ ಹೊರಟು ಹೋದರು.


ಅನಿರೀಕ್ಷಿತ ಕಡೆಯಿಂದ ನಮಗೆ ಸಿಗುವ ಸಹಾಯದ ಬಗೆಗೆ ಇದೊಂದು ಉತ್ತಮ ಉದಾಹರಣೆ. ಈ ಘಟನೆಯ ನೆನಪಿಗಾಗಿ ನೋಟನ್ನು ಜೋಪಾನವಾಗಿರಿಸಿದ್ದೇನೆ.   ನನ್ನ  ಪ್ರವಾಸ  ಸುಗಮವಾಗಿ  ನೆರವೇರಲು  ಇಂತಹ  ಹಲವಾರು  ಮನಸ್ಸುಗಳೇ  ಕಾರಣ.   ಅಂದ  ಹಾಗೆ  ಪ್ರವಾಸ  ಕೊನೆಯಾಗುವಾಗ    ನನ್ನಲ್ಲಿ  ಹಲವು  ದೇಶಗಳ   ಸುಮಾರು  ಅರ್ಧ ಕಿಲೊ  ನಾಣ್ಯಗಳು  ಶೇಖರವಾಗಿತ್ತು.