ಮಳೆಗಾಲ ಕಳೆದು ಪುನಹ ಬೇಸಿಗೆ ಸಮೀಪಿಸುತ್ತಿದೆ. ಪ್ರತಿ ವರ್ಷದಂತೆ ಈ ಸಲವೂ ಗ್ರಾಮೀಣ ವಿದ್ಯುತ್ ಸರಬರಾಜು ಮಟ್ಟಿಗೆ ಹೊಸ ವೇಳಾಪಟ್ಟಿ. ಈಗ ಬೆಳಗಿನ ಪಾಳಿಯಲ್ಲಿ ಬೆಳಗ್ಗೆ ಐದರಿಂದ ಹನ್ನೊಂದರ ವರೆಗೆ ಆರು ಘಂಟೆ ವಿದ್ಯುತ್ ಪೊರೈಕೆ. ಬೆಳಗಿನ ಐದು ಎಂದರೆ ಬೆಳಕು ಹರಿಯಲು ಇನ್ನೂ ಹೊತ್ತಿದೆಯೆನ್ನುವುದು ಅನ್ನುವುದು ಬೇರೆ ವಿಚಾರ.
ವಿದ್ಯುತ್ ಪೊರೈಕೆ ಕಡಿತವನ್ನು ಕಳೆದ ಇಪ್ಪತೈದು ವರ್ಷಗಳಿಂದ ಕಾಣುತ್ತಿದ್ದೇನೆ. ಬೇಸಗೆಯಲ್ಲಿ ನೀರಾವರಿ ನಿರ್ವಹಣೆಗಾಗಿ ಬೆಳಗಿನ ಜಾವದ ವರೆಗೆ ನಿದ್ದೆಗೆಟ್ಟು ತೋಟದಲ್ಲೆಲ್ಲಾ ಓಡಾಡುತ್ತಾ ಮದ್ಯಂತರದಲ್ಲಿ ಓದುತ್ತಾ ಕೂತಿರುತ್ತಿದ್ದೆ. ಜೂನ್ ತಿಂಗಳಲ್ಲಿ ಮಳೆಗಾಲ ಸುರುವಾದರೂ ನನಗೆ ರಾತ್ರಿ ಹತ್ತಕ್ಕೆ ನಿದ್ರಿಸಲು ಸಾದ್ಯವಾಗಲು ಎರಡು ತಿಂಗಳು ಬೇಕಾಗುತಿತ್ತು.
ಕಳೆದ ಇಪ್ಪತ್ತು ವರ್ಷಗಳ ಗಮನಿಸಿದರೆ ರೈತರಿಗೆ ಹಗಲು ನಾಲ್ಕಾರು ಘಂಟೆ ಕೊಡುವ ವಿದ್ಯುತ್ ಬೆಳಗ್ಗೆ ಅಥವಾ ಮಧ್ಯಾಹ್ನ ನಂತರ ಎಂದು ವಿಭಾಗಿಸುತ್ತಾರೆ. ನಮಗೆ ಬೆಳಗಿನ ವಿದ್ಯುತ್ ಎಂದಾದರೆ ಬೆಳಗಿನ ಜಾವ ಐದರಿಂದ ಹತ್ತು ಘಂಟೆ ಮದ್ಯೆ ಪ್ರಾರಂಬವಾಗುವುದು ಹಾಗೂ ಮೂರರಿಂದ ಆರು ಘಂಟೆ ಅವದಿ.
ಎರಡು ಕಾರಣಗಳನ್ನೂ ಅನುಸರಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಪ್ರತಿ ವರ್ಷವೂ ನೀರಾವರಿ ಕೊಳವೆ ಜಾಲ, ನಿಯಂತ್ರಣ ಗೇಟು ವಾಲ್ವ್ ಸೇರಿಸುತ್ತಾ ಬದಲಾಯಿಸುತ್ತಾ ಬಂದಿದ್ದೇವೆ. ನೀರಾವರಿ ಪ್ರಾರಂಬಿಸುವ ಸಮಯದಲ್ಲಿ ಈ ದೊಂಬರಾಟ ಪ್ರತಿ ವರ್ಷವೂ ಅನಿವಾರ್ಯ ಎಂಬಂತಾಗಿದೆ. ಇದರ ಬದಲಿಗೆ ಐದು ವರ್ಷಕ್ಕೆ ಖಾಯಂ ವೇಳಾಪಟ್ಟಿ ಕೊಟ್ಟರೆ ಉತ್ತಮ.
ಕೊರತೆ ಇರುವುದು ವಿದ್ಯುತ್ ಅಲ್ಲ, ರಾಜಕೀಯ ಇಚ್ಚಾ ಶಕ್ತಿ ಎಂಬ ವಿಚಾರ ಈಗಾಗಲೇ ಸಾಬೀತಾಗಿದೆ. ಹಣಕಾಸು ಸರಿದೂಗಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿರುವುದರಿಂದ ಕಡಿಮೆ ಆದಾಯ ಎನ್ನುವ ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೊರೈಸಲು ಅವರ ವರ್ಗಕ್ಕೆ ಆಸಕ್ತಿ ಕಡಿಮೆ. ಎಲ್ಲ ಸಮಸ್ಯೆಗಳಿಗೂ ಈ ದಾನಶೂರ ರಾಜಕಾರಣಿಗಳೇ ಕಾರಣ.
ನೀರಾವರಿಯೆಂದರೆ ಗಿಡ ಮರದ ಬೇರು ಪ್ರದೇಶ ಒಮ್ಮೆಗೆ ಸಂಪೂರ್ಣ ಒದ್ದೆಯಾಗಬೇಕು. ಎರಡು ಘಂಟೆ ನೀರಾವರಿ ಬಯಸುವ ಬೆಳೆಗೆ ಬೆಳಗ್ಗೆ ಒಂದು ಮತ್ತು ಸಂಜೆ ಒಂದು ಸೇರಿಸಿದರೆ ಎರಡು ಘಂಟೆ ಎನ್ನುವಂತಿಲ್ಲ. ಎರಡು ಬಾರಿಯೂ ಅದು ಬೇರು ಪ್ರದೇಶದ ಮೇಲಿನ ಅರ್ಧ ಬಾಗ ಮಾತ್ರ ತೋಯಿಸಿ ನೀರಾವರಿ ಅಪೂರ್ಣ ಎನಿಸಿಕೊಳ್ಳುತ್ತದೆ.
ನಮ್ಮ ಪ್ರದೇಶದ ಅಡಿಕೆತೋಟದಲ್ಲಿ ಋತುಮಾನ ಅನುಸರಿಸಿ ಅನುಭವದಿಂದ ನಿಗದಿ ಪಡಿಸಿ ಐದರಿಂದ ಏಳು ದಿನದ ಅವದಿಯಲ್ಲಿ ಸರ್ತಿಗೆ ಒಂದರಿಂದ ಮೂರು ಘಂಟೆ ಸ್ಪ್ರಿಂಕ್ಲರ್ ಚಾಲೂ ಮಾಡುವವರು ಇದ್ದಾರೆ. ಒಮ್ಮೆಗೆ ಐದು ಘಂಟೆ ವಿದ್ಯುತ್ ಎಂದರೆ ನಾವು ಎರಡು ಸಲ ಹರಿವು ಬದಲಾಯಿಸಿ ಸರ್ತಿಗೆ ಎರಡೂವರೆ ಘಂಟೆ ನೀರು ಹಾಕುವ ಅಬ್ಯಾಸ ಮಾಡಿಕೊಂಡಿದ್ದೆವು. ಅರು ಘಂಟೆ ಎಂದರೆ ಎರಡು ಘಂಟೆ ಗುಣಿಸು ಮೂರು ಆಗುವುದರ ಬದಲು ಸರ್ತಿಗೆ ಮೂರು ಘಂಟೆ ಆಗಿದೆ. ಪ್ರತಿ ವರ್ಷ ಬದಲಾಗುವ ಈ ಹೊಸ ವೇಳಾಪಟ್ಟಿಯ ಕಾರಣದಿಂದಾಗಿ ಹಾಗೂ ನಮ್ಮ ಸೋಮಾರಿತನದಿಂದಾಗಿ ನೀರು ಹಾಗೂ ವಿದ್ಯುತ್ ಶೇಕಡ ಹತ್ತರಿಂದ ಇಪ್ಪತ್ತರಷ್ಟು ಪೋಲಾಗುವ ಸಾದ್ಯತೆಗಳಿವೆ.
ಫ್ರಾನ್ಸಿನ ಪ್ಯಾರಿಸ್ ಪಕ್ಕದ ಊರೊಂದರಲ್ಲಿ ಜನನ ಪ್ರಮಾಣ ಸಮೀಪದ ಉಳಿದ ಊರಿಗಿಂತ ಗಣನೀಯವಾಗಿ ಹೆಚ್ಚಿತ್ತು. ಅದಕ್ಕೆ ಕಾರಣ ಹುಡುಕಲು ಹೋದವರಲ್ಲಿ ಅಲ್ಲಿನ ಊರ ಗಣ್ಯರು ಕಾರಣ ಬೆಳಗ್ಗೆ 4.40 ರ ರೈಲು ಎಂದರಂತೆ. ಸಮೀಕ್ಷೆಗೆ ಹೋದವರಿಗೆ ಈ ಮಾತು ಅರ್ಥವಾಗಲಿಲ್ಲ. ಆಗ ಊರವರು ವಿವರಣೆ ಕೊಟ್ಟರು. ಊರ ಮದ್ಯೆ ಸೀಟಿ ಊದುತ್ತಾ ಸಾಗುವ ಬೆಳಗಿನ ಜಾವದ ರೈಲು ಊರವರನ್ನೆಲ್ಲ ಎಬ್ಬಿಸುತ್ತದೆ. ಹಾಸಿಗೆ ಬಿಟ್ಟೇಳಲು ಆಗ ಬೇಗ ಎನಿಸುತ್ತದೆ. ನಿದ್ರೆ ಬಾರದ ಜನರೆಲ್ಲ ಮಿಲನ ಮಹೋತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ.
ನಮ್ಮಲ್ಲಿ ಕೃಷಿಕರು ಈ ವರ್ಷ ಬೆಳಗಿನ ಐದು ಘಂಟೆಗೆ ಒಮ್ಮೆ ಪಂಪ್ ಚಾಲೂ ಮಾಡಲು ಏಳುವುದು ಅನಿವಾರ್ಯ. ಆದರೆ ಮದ್ಯಾಹ್ನ ಅನಂತರದ ವಿದ್ಯುತ್ ಅನ್ನುವ ದಿನಗಳಲ್ಲಿ ಉಳಿದ ಕಸುಬಿನವರಿಗೂ ಬೆಳಗ್ಗೆ ಐದು ಘಂಟೆಗೆ ಬೀಸಣಿಕೆ ನಿಂತು ಎಚ್ಚರವಾಗುದರ ಮಟ್ಟಿಗೆ ವಿನಾಯತಿಯಿಲ್ಲ.
ಅನಂತರ ……….. .............ಕಾಲವೇ ಉತ್ತರಿಸಬಲ್ಲ ಪ್ರಶ್ನೆ.
Monday, November 24, 2008
Subscribe to:
Post Comments (Atom)
No comments:
Post a Comment