Tuesday, December 16, 2008

ಗ್ರಾಮೀಣ ಪ್ರದೇಶಗಳಿಗೆ ಸೌರ ವಿದ್ಯುತ್ ಉತ್ಪಾದನಾ ಅವಕಾಶ

ಮೊನ್ನೆ ಇಂದನ ಉಳಿತಾಯ ದಿನಾಚರಣೆ ಅಂಗವಾಗಿ ವಿದ್ಯುತ್ ಮಂತ್ರಿಗಳು ಸೌರ ವಿದ್ಯುತ್ ಗೆ ಬೆಂಬಲ ಎಂದು ಬರೆದು ಕೊಟ್ಟಿರುವುದನ್ನು ಓದಿದರು. ನಮ್ಮಲ್ಲಿ ಮುಂದಿನ ಹತ್ತು ವರುಷಗಳ  ಮಟ್ಟಿಗೆ   ಸೌರ ವಿದ್ಯುತ್ ಖರೀದಿ ಕ್ರಯ ಹದಿನೈದು ರೂಪಾಯಿ ಎಂದು ವಿದ್ಯುತ್ ಪ್ರಾಧಿಕಾರ ಹಾಗೂ ಸರಕಾರ ನಿರ್ಣಯಿಸಿದೆ ಎನ್ನುವುದು ಕೇಂದ್ರ ಸರಕಾರದ  ಹಳೆಯ   ಸುದ್ದಿ. ಈ ಹಿನ್ನೆಲೆಯಲ್ಲಿ ಕಿರು (?) ವಿದ್ಯುತ್ ಉತ್ಪಾದಕನಾಗಿ ನಾನು ನನ್ನ ನಾಲ್ಕು ಅನಿಸಿಕೆಗಳ ಇಲ್ಲಿ ಹಂಚಿಕೊಳ್ಳುತ್ತೇನೆ.

ನಮ್ಮಲ್ಲಿ  ಹಿಂದೆ ಪಂಪಿನೊಡನೆ ಪಡಕೊಂಡ ಸೌರ ಫಲಕಗಳಿಂದ ಸಿಗುವ ವಿದ್ಯುತ್ ಪೂರ್ತಿ ಬಳಕೆಯಾಗುತ್ತಿಲ್ಲ. ಹೆಚ್ಚುವರಿ ಸುಮಾರು ಹತ್ತು ಯುನಿಟ್ ಗಳನ್ನು ನಾನು ಮಾರಬಹುದು. ಅವರ ಹೇಳಿಕೆಯಂತೆ ದಿನಕ್ಕೆ ಸುಮಾರು ನೂರ ಐವತ್ತು ರೂಪಾಯಿ ಮೌಲ್ಯ ಸಿಗಬಹುದು. ಆದರೆ ನಾನು ಹಿಂದೊಮ್ಮೆ ಬರೆದಂತೆ ನಾವು ಜಾಲಕ್ಕೆ ಹಾಯಿಸ ಬೇಕಾದರೆ ಅದರಲ್ಲಿ ವಿದ್ಯುತ್ ಇರಲೇಬೇಕು. ಸಮೀಪದ ಅವರ ಉಪಕೇಂದ್ರಕ್ಕೆ ಪ್ರತ್ಯೇಕ ತಂತಿ ಎಳೆಯುವಷ್ಟು ನಮ್ಮಲ್ಲಿ ಉತ್ಪಾದನೆಯಾಗುವುದಿಲ್ಲ. ಬರುವ ವರ್ಷದಿಂದ 24 ಘಂಟೆ ವಿದ್ಯುತ್ ಎನ್ನುವ ಆಶ್ವಾಸನೆಯ ಹಿನ್ನೆಲೆಯಲ್ಲಿ ಈ ಬಗೆಗೊಂದು ಚರ್ಚೆ.

ಜಾಲಕ್ಕೆ ಹರಿವಿನ ಬಗೆಗೆ ಎರಡು ವಿಧಗಳು ಪ್ರಪಂಚದ ವಿವಿದೆಡೆ ಚಾಲ್ತಿಯಲ್ಲಿದೆ. ಒಂದು ನಮ್ಮ ಮನೆಯ ಮಾಪಕ  ನಾವು ವಿದ್ಯುತ್ ಹರಿಸುವಾಗ ಹಿಂದಕ್ಕೆ ತಿರುಗುವಂತೆ ಮಾಡುವುದು. ಆಗ ನಮ್ಮ ವಿದ್ಯುತ್ ಖರೀದಿ ಹಾಗೂ ಮಾರಾಟ ಕ್ರಯ ಒಂದೇ ಆಗುತ್ತದೆ. ಹಾಗಾದರೆ ಆ ಸಂದರ್ಬದಲ್ಲಿ ನಮ್ಮ ಬಂಡವಾಳಕ್ಕೆ ಶ್ರಮಕ್ಕೆ ಯೋಗ್ಯ ಪ್ರತಿಫಲ ಸಿಗದು. ವಿದ್ಯುತ್ತಿನ ದರ ನಮ್ಮಿಂದ ತುಂಬ ಹೆಚ್ಚಿರುವ ಮುಂದುವರಿದ ದೇಶಗಳಲ್ಲಿ ಇದು ಪ್ರಾಯೋಗಿಕ ಎನಿಸಬಹುದು.

ಎರಡನೇಯದು ಪ್ರತ್ಯೇಕ ಮಾಪಕ  ಹಾಕಿ ನಮ್ಮ ಹೊರಹರಿವಿನ ಲೆಕ್ಕಾಚಾರ ಮಾಡುವುದು. ಆಗ ಯುನಿಟ್ ಒಂದಕ್ಕೆ ಹದಿನೈದು ರೂಪಾಯಿ ಕೊಡುವುದಾದರೆ ನಮ್ಮ ಬಂಡವಾಳಕ್ಕೆ ಶೇಕಡಾ ಏಳರಿಂದ ಒಂಬತ್ತರ ವರೆಗೆ ಪ್ರತಿಫಲ ದೊರಕಬಹುದು. ಕಡಿಮೆ ದರದ ಬಡ್ಡಿ ಹಾಗೂ ಹೂಡಿಕೆಗೆ ಸಹಾಯದನ ಇದ್ದರೆ ಮಾತ್ರ ಇದು ಆಕರ್ಷಕವಾಗಬಹುದು.

ಜರ್ಮನಿಯಲ್ಲಿ ಕಳೆದ ವರ್ಷ ಎಂದರೆ 2007ರಲ್ಲಿಯೇ ಅಳವಡಿಸಲ್ಪಟ್ಟ   ಸೌರ  ಫಲಕಗಳ   ಮೊತ್ತ 1135 MW. ಇದರೊಂದಿಗೆ ಹೋಲಿಸಲು ನಮ್ಮ ದೇಶದಲ್ಲಿ ಈ ವರೆಗೆ ಒಟ್ಟು 120 MW ಗಳಷ್ಟು ಸೌರ ಫಲಕಗಳಿದ್ದರೆ ಅದರಲ್ಲಿ ಜಾಲಕ್ಕೆ ಸಂಪರ್ಕಿಸಿರುವುದು ಕೇವಲ 2.5 MW ಮಾತ್ರ. ಇದಕ್ಕೆ ಮುಖ್ಯ ಕಾರಣವೆಂದರೆ ಜರ್ಮನಿಯಲ್ಲಿ ಮನೆ ಮೇಲೆ ಅಳವಡಿಸಿದ ಫಲಕಗಳ ವಿದ್ಯುತ್ ಜಾಲಕ್ಕೆ ಸೇರಲು ಯುನಿಟ್ ಒಂದಕ್ಕೆ ಅಂದಾಜು ಮೂವತ್ತು ರೂಪಾಯಿ ಕೊಡುತ್ತಾರೆ. ಅಲ್ಲಿ ಸೂರ್ಯ ದರ್ಶನ ಅಪರೂಪ ಎನಿಸಿದರೂ ದರ ಸ್ಪರ್ದಾತ್ಮಕವಾಗಿರುತ್ತದೆ ಎನ್ನುವ ಕಾರಣದಿಂದ ಜನರು ಅಳವಡಿಸಲು ಆಸಕ್ತಿ ಹೊಂದುತ್ತಾರೆ. ಅದೇ ಫಲಕಗಳ ಇಲ್ಲಿ ಅಳವಡಿಸಿದರೆ ಅದರ ಎರಡು ಪಟ್ಟು ಶಕ್ತಿ ಉತ್ಪಾದಿಸಬಹುದು. ಉದಾಹರಣೆಗೆ ಒಂದು ಕಿಲೋ ಪೀಕ್ ವಾಟ್ ಫಲಕಗಳು ಉತ್ತರ ಜರ್ಮನಿಯಲ್ಲಿ ವರ್ಷಕ್ಕೆ 850 ಯುನಿಟ್ ಉತ್ಪಾದಿಸಿದರೆ ನಮ್ಮಲ್ಲಿ 1800 ಯುನಿಟ್ ಉತ್ಪಾದಿಸಬಹುದು.

ಜಾಲಕ್ಕೂ ನಮ್ಮ ಸೌರ ಫಲಕಗಳಿಗೆ ಮದ್ಯೆಯ ಪ್ರಮುಖ ಕೊಂಡಿ- ವಿಧ್ಯುತ್ ಜಾಲ ಸಂಪರ್ಕ ಇನ್ವೆರ್ಟರ್. ಪರದೇಶಗಳಲ್ಲಿ ತಯಾರಾಗುವ ಈ ಉಪಕರಣದ ಸಹಾಯದಿಂದ ನಮ್ಮಲ್ಲಿ ತಯಾರಾಗುವ ವಿದ್ಯುತ ಶಕ್ತಿಯನ್ನು ಜಾಲದೊಂದಿಗೆ ಹೊಂದಾಣಿಕೆ ಮಾಡಲು ಅವಕಾಶವಿರುತ್ತದೆ.

ಇದು ಸೌರ ವಿದ್ಯುತ್ ಫಲಕದಿಂದ ಬರುವ ಶಕ್ತಿಯ ವಿದ್ಯುದ್ಬಲ Voltage ಮತ್ತು ಪ್ರಮಾಣ Amps ಸಮತೋಲನ ಕಾಯ್ದುಕೊಂಡು ಗರೀಷ್ಟ ಉತ್ಪಾದನೆಗೆ ಪೂರಕವಾಗಿರುತ್ತದೆ. ಅನಂತರ ಅದನ್ನು ಜಾಲದಲ್ಲಿರುವಂತೆ ಉತ್ತಮ ತರಗತಿಯ sine wave ಅಲ್ಟರ್ನೇಟಿಂಗ್ ಕರೆಂಟಾಗಿ ಮಾರ್ಪಾಡಿಸುತ್ತದೆ ಹಾಗೂ ಜಾಲದ ವಿದ್ಯುತ್ ಪರೀಸ್ಥಿತಿ ಗಮನಿಸಿ ಅದಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತದೆ. ಅಂದರೆ ಜಾಲದಲ್ಲಿ ಇರುವಿಕೆ ಖಚಿತಪಡಿಸಿಯೇ ಸಂಪರ್ಕ ಮತ್ತು ವಿದ್ಯುತ್ ಇಲ್ಲವಾದರೆ ಹರಿವು ಇಲ್ಲ ಹಾಗೂ ಜಾಲದ ಆವರ್ತನ ಚಕ್ರಕ್ಕೆ ಹೊಂದಾಣಿಕೆಯಾಗುವಂತೆ ನಿಯಂತ್ರಣ. ಜಾಲದಲ್ಲಿರುವುದಕ್ಕಿಂತ ನಮ್ಮ ತಯಾರಿ ವಿದ್ಯುತ್ತಿನ voltage ತುಸು ಹೆಚ್ಚಿರುವ ಕಾರಣ ಸಲೀಸಾಗಿ ಜಾಲಕ್ಕೆ ಹರಿಯುತ್ತದೆ.

ಇವು ದುಬಾರಿ. ನನ್ನ ಸೌರ ಫಲಕಗಳ ವಿದ್ಯುತ್ತನ್ನು ಜಾಲಕ್ಕೆ ಹಾಯಿಸಲು  1500 watts grid- tie inverter ಗೆ ಅಂದಾಜು ನಮ್ಮ ದೇಶದಲ್ಲಿ ಒಂದು ಕಾಲು ಲಕ್ಷ ರೂಪಾಯಿ ಬೆಲೆಯುಂಟು. ಬೆಲೆ ಕೇಳಿ ಹುಬ್ಬೇರಿಸಬೇಡಿ. ಮಾಮೂಲಿ ಇನ್ವರ್ಟರ್ ಗಳಲ್ಲಿ ತಯಾರಾಗುವ ವಿಧ್ಯುತ್ ಗುಣ ಮಟ್ಟದ ಪ್ರಶ್ನೆಯಾಗಲಿ ಜಾಲದ ಆವರ್ತನಕ್ಕೆ ಹೊಂದಾಣಿಕೆಯಾಗುವ ಪ್ರಶ್ನೆಯಾಗಲಿ ಇರುವುದಿಲ್ಲ.

ಪ್ರಥಮವಾಗಿ ನಮ್ಮ ಉಪಯೋಗಕ್ಕೆ ಉಳಿದದ್ದು ಸಮಾಜಕ್ಕೆ ಎನ್ನುವ ನೆಲೆಯಲ್ಲಿ ಸೌರ ಫಲಕಗಳ ಅಳವಡಿಸಿಕೊಂಡು ಹಳ್ಳಿಗರು ಸೌರ ಶಕ್ತಿಯನ್ನು ಕೊಯಿಲು ಮಾಡಬಹುದು. ಮಳೆನೀರ ಕೊಯಿಲಿನಂತೆ. ದಿನದ ನಡುಬಾಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವಾಗ ಗರಿಷ್ಟ ಉತ್ಪಾದನೆ. ಕೃಷಿಕರಿಗೆ ಸರಿಯಾದ ಅವಕಾಶ ಕಲ್ಪಿಸಿದರೆ ಇದೊಂದು ಉತ್ತಮ ವ್ಯವಹಾರವೂ ಆಗಬಹುದು.

ಹಳ್ಳಿಗಳಲ್ಲಾದರೆ ಹೆಚ್ಚು ಬೆಳಕು ಸಂಗ್ರಹಿಸುವ ಅವಕಾಶ. ಜತೆಯಲ್ಲಿ ಬೇಕಾದಷ್ಟು ಜಾಗ ಇರುತ್ತದೆ. ಪಟ್ಟಣಗಳಲ್ಲಿ ಎಲ್ಲೆಲ್ಲೂ ನೆರಳು. ಅವು ಚೆನ್ನಾಗಿ ಕೆಲಸ ಮಾಡಲು ಫಲಕಗಳನ್ನು ಸೂರ್ಯನೆಡೆಗೆ ತಿರುಗಿಸಲೂ ಸಮಯಾವಕಾಶ ಹಳ್ಳಿಗರಿಗೆ ಇರುತ್ತದೆ. ಸೂರ್ಯ ದೇವನ ಚಲನೆ ಅನುಸರಿಸುತ್ತಾ ಹೋದರೆ ಶೇಕಡಾ 25 ರಷ್ಟು ಅಧಿಕ ಶಕ್ತಿಯನ್ನು ಬಾಚಿಕೊಳ್ಳಬಹುದಾಗಿದ್ದು ಇದಕ್ಕಾಗಿ ಫಲಕಗಳ ಕೈಯಿಂದಲೇ ತಿರುಗಿಸಲು ಸಾದ್ಯ. ಈ ಕೆಲಸಕ್ಕೆ ಹೆಚ್ಚು ಕುಶಲತೆಯ ಅಗತ್ಯವೂ ಇರುವುದಿಲ್ಲ.

ಕಲ್ಲಿದ್ದಲು ದಹಿಸಿ ಉತ್ಪಾದಿಸುವ ವಿದ್ಯುತ್ ಹೋಲಿಸಿದರೆ ಸೌರ ವಿದ್ಯುತ್ ನಿಂದ ಗಾಳಿ ಹಾಗೂ ನೀರಿನ ಮಲೀನತೆ ಇಲ್ಲ. ಈಗ ನಾನು ಕೊಡ ಬಹುದಾದ ಕನಿಷ್ಟ ವರ್ಷಕ್ಕೆ 2500 ಯುನಿಟ್ ಲೆಕ್ಕಕ್ಕೆ ತೆಗೆದುಕೊಂಡರೂ ತುಂಗಭದ್ರಾ ನದಿಯ 6500 ಲೀಟರ್ ನೀರ ಬಳಕೆಯನ್ನು ತಪ್ಪಿಸುತ್ತದೆ.   ನನ್ನ ಕೃಷಿ ಮತ್ತು ಮನೆ ಉಪಯೋಗದ ಒಟ್ಟು  ವಿದ್ಯುತ್   ಬಳಕೆಯೂ ವರ್ಷಕ್ಕೆ ಎರಡೂವರೆ ಸಾವಿರದಿಂದ ಮೂರು ಸಾವಿರ ಯುನಿಟ್.   

ನನ್ನಲಿರುವ  ಸೌರ ಫಲಕಗಳ  ಮೌಲ್ಯ  ಸುಮಾರು  ನಾಲ್ಕುವರೆ  ಲಕ್ಷ  ರೂಪಾಯಿ.    ಸೌರ ಫಲಕಗಳಿಗೆ 25 ವರ್ಷ ಆಶ್ವಾಸನೆ ಕೊಡಬಹುದು. ಪರದೇಶಿ ನಿರ್ಮಿತ ಈ inverter ಗಳಿಗೆ ಏಳರಿಂದ ಹತ್ತು ವರ್ಷ ಆಶ್ವಾಸನೆ ತಯಾರಕರು ಕೊಡುತ್ತಾರೆ. ಸರಕಾರ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಕೊಟ್ಟರೆ ಖಂಡಿತ ಇವುಗಳು ಜನಪ್ರಿಯವಾಗಬಹುದು.  ಆಗ  ಶ್ರೀ ನಾಗೇಶ  ಹೆಗಡೆಯವರು  ಹೇಳಿದಂತೆ  ವಿದ್ಯುತ್  ಹಿಮ್ಮೊಗ  ಹರಿಯುವುದು. 

ಇದು ಲೆಕ್ಕಾಚಾರ ಬರೇ ಸಾದ್ಯತೆಗಳ ಬಗೆಗೆ ಚರ್ಚೆ ಹೊರತು ವ್ಯವಹಾರಿಕ ಅಲ್ಲ. ಸರಕಾರ ಸದ್ಯಕ್ಕೆ ಕೆಂಪು ಚಾಪೆ ಹಾಸಿದ್ದು ಕೋಟ್ಯಾದಿಪತಿಗಳಿಗೆ ಮಾತ್ರ.   ಸಣ್ಣ ಉತ್ಪಾದಕರನ್ನು ಅವರು   ಪರಿಗಣಿಸುವುದಿಲ್ಲ. ಖಜಾನೆಯಲ್ಲಿ ಕಾಸೂ ಇಲ್ಲ.

Wednesday, December 10, 2008

ಅಂತೂ ಕೈಗೆ ಸಿಕ್ಕಿತು ನ್ಯಾಯಾಲಯ ತೀರ್ಪು

ರಿಲಿಯನ್ಸ್ ಸ್ಥಾವರವಾಣಿಯ ಕಳಪೆ ಗುಣಮಟ್ಟದ ಸೇವೆಗೆ ಅವರನ್ನು ಗ್ರಾಹಕ ನ್ಯಾಯಾಲಯಕ್ಕೆ ಒಯ್ದ ಸಂಗತಿ ಮೊದಲು ಬರೆದಿದ್ದೆ. ಕೊನೆಗೂ ಗ್ರಾಹಕ ನ್ಯಾಯಾಲಯದಿಂದ ನವೆಂಬರ್ ೧೪ ರಂದು ತೀರ್ಪು ಕೊಡಲ್ಪಟ್ಟಿತು. ಅನಂತರ ಇಪ್ಪತ್ತು ದಿನಗಳು ಕಳೆದು ಅಂತರ್ಜಾಲದಲ್ಲಿ ಲಬ್ಯವಾಯಿತು. ಇಲ್ಲಿದೆ ಸಂಪರ್ಕ ಕೊಂಡಿ.

http://cms.nic.in/ncdrcrep/judgement/18542167-07--14.11.08.htm

ಈ ಹೋರಾಟದ ಬಗೆಗೆ ಬರೆಯುವುದಾದರೆ ನಾನು ಈ ಬಗ್ಗೆ ಹತ್ತಕ್ಕೂ ಹೆಚ್ಚು ಬಾರಿ ನನ್ನ ಮನೆಯಿಂದ   ೫೦ ಕಿಮಿ ದೂರಲ್ಲಿರುವ  ಮಂಗಳೂರಿಗೆ ಹೋಗುವುದು ಅಗತ್ಯವಾಗಿತ್ತು. ನನ್ನ ಆರೋಗ್ಯದ ಬಗೆಗೆ ಅವರು ಅಲ್ಲಗಳೆಯಲು ಜಿಲ್ಲಾ ಆರೋಗ್ಯದಿಕಾರಿಗಳ ಪ್ರಮಾಣ ಪತ್ರ ಒದಗಿಸಿದ್ದೇನೆ. ಅವರು ನನ್ನ ದೂರುಗಳಿಗೆ ಸ್ಪಂದಿಸಲಿಲ್ಲ ಎನ್ನುವುದಕ್ಕೂ ಸಾಕಷ್ಟು ರುಜುವಾತು ಒದಗಿಸಿದ್ದೇನೆ. ಹತ್ತ್ತಕ್ಕೂ ಹೆಚ್ಚು e mail ಪಡಿಯಚ್ಚುಗಳು. ಅಸಂಖ್ಯ ದೂರವಾಣಿ ಕರೆಗಳು. ಇವೆಲ್ಲವೂ ಖರ್ಚಿನ ಬಾಬುಗಳು. ಕೊನೆಗೆ ಪರಿಹಾರದ ಮೊತ್ತ ನಾನು ಮಾಡಿದ ಖರ್ಚಿನ ಅರ್ಧ ಭಾಗವನ್ನೂ ತುಂಬಿ ಕೊಡದಿರುವುದು ವಿಷಾದನೀಯ.

ಕೆಲವೊಮ್ಮೆ ಪರಿಹಾರ ತೃಪ್ತಿಕರ ಎನಿಸುವುದಿಲ್ಲ. ತಪ್ಪು ರುಜುವಾತು ಪಡಿಸಿದಲ್ಲಿ ಕೂಡ ಸರಿಯಾದ ಪರಿಹಾರ ದೊರಕುವುದಿಲ್ಲ ಎಂದರೆ ಗ್ರಾಹಕರು ಏಕೆ ನ್ಯಾಯಾಲಯಕ್ಕೆ ಹೋಗುತ್ತಾರೆ ? ಇದು ಎಂತಹ ಸಂದೇಶ ರವಾನಿಸುತ್ತದೆ. ಯೋಚಿಸಿದರೆ ಈ ಗ್ರಾಹಕ ನ್ಯಾಯಾಲಯಕ್ಕೆ ದೂರು ಒಯ್ಯುವುದು ಎಂದರೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದಂತೆ. ಸೇವಾ ನ್ಯೂನತೆ ಸರಿಪಡಿಸಿಕೊಳ್ಳುವ ಒತ್ತಡ ಸದಾ ಸೇವೆ ಕೊಡುವವರ ಮೇಲಿರಬೇಕು. ಇಲ್ಲವಾದರೆ ಅವರು ನಡೆದದ್ದೇ ದಾರಿ.

ಲಕ್ಷಕ್ಕೊಬ್ಬ  ಗ್ರಾಹಕರು  ಇವರನ್ನು   ನ್ಯಾಯಾಲಯಕ್ಕೆ   ಕರೆದೊಯ್ಯುವುದು. ಮುಖ್ಯ  ಕಾರಣ  ರುಜುವಾತು ಸಂಗ್ರಹ   ಕಷ್ಟ.   ಅಲ್ಲೂ    ಬರೇ ಪುಡಿಗಾಸು ಪರಿಹಾರ ಕೊಡುವುದಾದರೆ ಆ ಕಂಪೇನಿಗಳಿಗೆ ತಿದ್ದಿಕೊಳ್ಳುವ ಅಗತ್ಯವೇ ಇರುವುದಿಲ್ಲ. ದೂರವಾಣಿ ಬಳಕೆದಾರ ಅಪೇಕ್ಷಿಸದ ಹಾಗೂ ಉಪಯೋಗಿಸದ ಸೇವೆಗೆ ಉದಾಹರಣೆ ಸಂಗೀತದ ಕಾಲ್ ಟ್ಯೂನ್ ಜೋತಿಷ್ಯ ಶಾಸ್ತ್ರ ಕ್ರಿಕೆಟು ಸುದ್ದಿ ಇತ್ಯಾದಿಗಳಿಗೆ ಹಣ ವರ್ಗಾವಣೆಯಾಗುವುದು ಸಾಮಾನ್ಯ ಎಂಬಂತಾಗಿದೆ. ಸಲೀಸಾಗಿ ಇಂತ ಕ್ಷೌರಕ್ಕೆ  ಕುಳ್ಳಿರುಸುತ್ತಾರೆ.   ನಂತರ ಇದರಿಂದ ಪಾರಾಗುವ ಬಗೆಗೆ ಅವರ ಗ್ರಾಹಕ ಸೇವಾ ಸಿಬಂದಿಗಳಲ್ಲೂ ಸ್ಪಷ್ಟ ಉತ್ತರವಿರುವುದಿಲ್ಲ.

ನಾವು ದಿನವೊಂದರಲ್ಲಿ ಕಾಣುವ ಅನ್ಯಾಯ ಅನಾಚಾರದ ಬೆನ್ನಟ್ಟಲು ಈ ಜೀವಮಾನವೇ ಸಾಲದು. ನಮ್ಮ ಹಳ್ಳಿ ರಸ್ತೆಯಲ್ಲಿ ಕೇರಳಕ್ಕೆ ಕಾನೂನು ಬಾಹಿರವಾಗಿ ಮರಳು ಸಾಗಿಸುವ ಲಾರಿಗಳು ಪುನಃ ಪ್ರತ್ಯಕ್ಷವಾಗಿವೆ. ಯಾರೂ ಮಾತನಾಡುತ್ತಿಲ್ಲ. ದೆಹಲಿಯಿಂದ ಬಂದ ಕೋಟಿ ರೂಪಾಯಿ ನುಂಗಿದ ನಮ್ಮ ಹಳ್ಳಿ ರಸ್ತೆಯಲ್ಲಿ ಆರು ತಿಂಗಳಲ್ಲೇ  ಹೊಂಡಗಳು ಕಾಣಲು ಪ್ರಾರಂಬವಾಗಿವೆ. ಎಲ್ಲರೂ ಸುಮ್ಮನಿದ್ದಾರೆ. ನಾಲ್ಕಾರು ಬಿಎಸೆನೆಲ್ ಟವರ್ ಗಳು ಹತ್ತು ಕಿಮಿಯೊಳಗಿದ್ದು ಒಮ್ಮೊಮ್ಮೆ ನಿಲುಕುವುದಾದರೂ ನಮ್ಮ ಮೊಬೈಲ್ ತರಂಗ ಸೂಚನೆ ದಿನದ ಹೆಚ್ಚಿನ ಬಾಗ ತೋರಿಸುವುದು ಶೂನ್ಯ. ಪಟ್ಟಣದ ಅಂಗಡಿಗೆ ಹೋದರೆ ಅಲ್ಲಿ ಕಂಪ್ಯುಟರ್ ಬಳಸಿ ಹೊಸ ರೀತಿಯ ಟೋಪಿ ಹಾಕಿಸ್ಕೊಳ್ಳುವ ಅವಕಾಶ. ಎಲ್ಲ ತೇರಿಗೆಗಳು ಸೇರಿದ ಮಾರಾಟ ದರಕ್ಕೆ ವಾಟ್ ಸೇರಿಸುವುದು ಮೇಲ್ನೋಟಕ್ಕೆ ನಮಗೆ ಗೊತ್ತಾಗದ ವಿಚಾರ.

ಶ್ರೀ ಶಿವರಾಮ ಕಾರಂತರು ಹೇಳಿದಂತೆ ಸಾಮಾನು ಕದ್ದರೂ ಕಳ್ಳ ಸಮಯ ಕದ್ದರೂ ಕಳ್ಳ. ಹೀಗೆ ಸೇವಾ ನ್ಯೂನತೆ ಮತ್ತು ಭ್ರಷ್ಟಾಚಾರ ಎರಡೂ ಸಮಾಜಕ್ಕೆ ದ್ರೋಹವೇ.     ಈ   ತರಹದ  ಹೋರಾಟ  ಎಂದರೆ  ಒಂದು  ರೀತಿಯಲ್ಲಿ  ಪ್ರವಾಹದ  ವಿರುದ್ದ  ಈಜುವುದು.  ಬೇರೆ   ಕೆಲಸ  ಇಲ್ಲವೇ  ಎಂಬ  ಮೂದಲಿಕೆ  ಕೇಳಲು  ನಾವು ತಯಾರಿರಬೇಕಾಗುತ್ತದೆ.   ಎಲ್ಲರೂ ಅವರಿವರು ಸರಿ ಮಾಡಲೆಂದು ಪ್ರತಿಭಟಿಸಲೆಂದು ಕಾಯುತ್ತಾರೆ. ಇದು ಬೆಕ್ಕಿಗೆ ಗಂಟೆ ಯಾರು ಕಟ್ಟುವುದು ಎನ್ನುವಂತಹ ಸಮಸ್ಯೆ.

Monday, December 08, 2008

ಪಾಕಿಸ್ತಾನದ ಅಂಕಣಕಾರ ಕೋವಸ್ ಜೀ


ಈಗ ಸುಮಾರು ಎರಡು ವರ್ಷಗಳಿಂದ ನಾನು ಭಾನುವಾರ ಬೆಳಗ್ಗೆ ಇ ಅಂಚೆ ಜತೆಗೆ ಮೊದಲು ಕ್ಲಿಕ್ಕಿಸುವ ಕೊಂಡಿ ಕರಾಚಿಯ ಡಾನ್ ಪತ್ರಿಕೆಯ ಕೋವಸ್ ಜೀ ಅವರ ಅಂಕಣ. ಇಳಿ ವಯಸ್ಸಿನಲ್ಲೂ ಅವರು ಕರಾಚಿಯ ಭೂಗಳ್ಳರ, ಅಧಿಕಾರಿಗಳ ಹಾಗೂ ಮುಲ್ಲಾಗಳ ಜತೆಗಿನ ಹೋರಾಟವನ್ನು ಅಂಕಣದಲ್ಲಿ ರಂಗುರಂಗಾಗಿ ವಿವರಿಸುತ್ತಾರೆ. ರಾಜಕಾರಣ, ವಾಣಿಜ್ಯ ಕಾನೂನು ವಿಚಾರಗಳ ಚೆನ್ನಾಗಿ ಮಂಡಿಸುತ್ತಾರೆ. ಆಂಗ್ಲ ಬಾಷಾ ಪ್ರಬುತ್ವ ಚೆನ್ನಾಗಿದೆ. ಪ್ರಾಯುಷ: ಪಾಕಿಸ್ತಾನದಲ್ಲೇ ಹೆಚ್ಚು ನಿರ್ಭೀತ ಅಂಕಣಕಾರ ಎಂದರೂ ಸರಿ

http://www.dawn.com/weekly/cowas/cowas.htm


ಈ ವಾರದ ಅಂಕಣದಲ್ಲಿ ಮುಂಬಯಿಯಲ್ಲಿ ಭಯೋತ್ಪಾದಕರು ಕಾರ್ಯನಿರತರಾಗಿದ್ದಾಗ ಯಾರೋ ಪೋಕರಿಗಳು ಪಾಕಿಸ್ಥಾನದ ಅದ್ಯಕ್ಷರಿಗೆ ಬಾರತದ ವಿದೇಶ ಮಂತ್ರಿ ಪ್ರಣವ್ ಮುಖರ್ಜಿ ಹೆಸರಿನಲ್ಲಿ ಪಾಕಿಸ್ಥಾನವನ್ನು ನೋಡಿಕೊಳ್ಳುತ್ತೇವೆ ಎಂದು ಫೋನಿಸಿದ್ದು ವಿವರಿಸಿದ್ದಾರೆ. ಜರ್ದಾರಿ ಬೆಸ್ತು ಬಿದ್ದು ಮಂತ್ರಿಗಳ ಮಿಲಿಟರಿ ಅದಿಕಾರಿಗಳನ್ನೆಲ್ಲ ಒಟ್ಟು ಸೇರಿಸಿ ಸೇನೆಯನ್ನು ಬಾರತದ ಗಡಿಗೆ ರವಾನಿಸುವ ಬಗೆಗೆ ಮಾತನಾಡಿದ್ದು ಎಲ್ಲವನ್ನೂ ಚೆನ್ನಾಗಿ ಬರೆದಿದ್ದಾರೆ.

ಕೊನೆಗೆ ಅಮೇರಿಕದ ರೈಸಮ್ಮ ಮಧ್ಯರಾತ್ರಿಯಲ್ಲಿ ಕಾಲ್ ಮಾಡಿ ಮಲಗಿದ್ದ ನಮ್ಮ ಮಂತ್ರಿ ಪ್ರಣವ್ ಮುಖರ್ಜಿಯವರನ್ನು ವಿಚಾರಿಸಿದಾಗ ಅವರು ಆ ರೀತಿ ಬೆದರಿಸಿಲ್ಲವಷ್ಟೆ ಅಲ್ಲ, ಅವರು ಜರ್ದಾರಿಗೆ ಫೋನ್ ಸಹ ಮಾಡಿಲ್ಲ ಎನ್ನುವುದು ತಿಳಿದುಬಂತು. ವಾರ ಕಳೆಯುವ ವರೆಗೆ ನಮ್ಮ ಮಾದ್ಯಮದವರಿಗೂ ಇದು ಯಾರದೋ ಕಿತಾಪತಿ ಎಂದು ಅರಿವು ಆಗಿರಲಿಲ್ಲ. ಅಂತೂ ಕೊನೆಗೆ ಎಲ್ಲರಿಗೂ ನಿರಾಳ.

ಕಳೆದ ಬಾರಿ ನಾಲ್ಕು ವರ್ಷ ಹಿಂದೆ ಮುಶಾರಫ್ ಬಂದಾಗ ಅವರ ತಂಡದಲ್ಲಿ ಒಬ್ಬ ವಯೋವೃದ್ದ ಪತ್ರಿಕಾ ಅಂಕಣಕಾರರಿದ್ದರು. ನಮ್ಮ ಪತ್ರಿಕೆಯಲ್ಲಿ ಕಾಣ ಸಿಕ್ಕಿದ ಅವರ ಸಂದರ್ಶನದಲ್ಲಿ ಅವರಾಡಿದ ಮಾತು ನನ್ನ ಗಮನ ಸೆಳೆದಿದ್ದವು. ಕೋವಸ್ ಜೀ  ಪಾರ್ಸಿ ಜನಾಂಗಕ್ಕೆ ಸೇರಿದ್ದು ಭುಟ್ಟೊ ರಾಷ್ಟ್ರೀಕರಣಗೊಳಿಸಿದ ಹಡಗು ಸಂಸ್ಥೆಯ ಯಜಮಾನರಾಗಿದ್ದರಂತೆ.  ಕೊನೆಗೆ ಗೂಗ್ಲಿಂಗ್ ಮಾಡಿ ಅವರ ಅಂಕಣ ಹುಡುಕಿ ಓದಲಾರಾಂಬಿಸಿದೆ.

ಒಂದು ಅಂಕಣದಲ್ಲಿ  ಇತಿಹಾಸದ  ಪುಟ  ತೆರೆದಿಟ್ಟಿದ್ದಾರೆ. .   ಮಾಜಿ ಮಿಲಿಟರಿ ಮುಖ್ಯಸ್ತನಾಗಿದ್ದ ಅಂದಿನ ಅಧ್ಯಕ್ಷರಿಗೆ ಇಡೀ ದೇಶದಲ್ಲಿ ಒಂದೇ ದಿನ ಹಬ್ಬಗಳ ಆಚರಿಸುವ ಆಲೋಚನೆ ಬಂತು. ಆದರೆ ಕೆಲವು ಮುಲ್ಲಾಗಳಿಗೆ ಅದು ಸಮ್ಮತಿ ಇರಲಿಲ್ಲ. ಚಂದ್ರ ಕಾಣಬೇಕಲ್ಲ ??. ಈ ಹಕ್ಕು ಬಿಟ್ಟು ಕೊಡಲು ಅವರು ತಯಾರಿರಲಿಲ್ಲ. ಹಾಗೆ ಒಂದು ಮುಖ್ಯ ಪಟ್ಟಣ, ಪೇಶಾವರ ಅಂತ ನನ್ನ ನೆನಪು – ಅಲ್ಲಿನ ಧರ್ಮ ಗುರುಗಳಿಗೆ ಚಂದ್ರನನ್ನು ತೋರಿಸುವ ಜವಾಬ್ದಾರಿಯನ್ನು ಅಲ್ಲಿನ ಮಿಲಿಟರಿ ಕಮಾಂಡರಿಗೆ ಅಧ್ಯಕ್ಷರು ವಹಿಸಿದರು. ಸೇನಾ ಶಿಬಿರದ  ಹೊರಗಿನ  ಮೈದಾನಿನಲ್ಲಿ  ನಡೆದ    ಅವರ ಸಂಬಾಷಣೆ ಈ ರೀತಿಯಾಗಿತ್ತಂತೆ.

ಚಾಂದ್ ದೇಖಾ ?
ನಹೀ ದೇಖಾ

ಅಗ ಮಿಲಿಟರಿ ಅಧಿಕಾರಿ ಬಲತ್ಕಾರವಾಗಿ ಈ ಮುಲ್ಲಾನ ಅರ್ಧ ಸುತ್ತು ತಿರುಗಿಸಿ ಕೇಳಿದರಂತೆ.

ಕಂಟೋನ್ಮೆಟ್ ದೇಖಾ ?
ಹಾಂ ದೇಖಾ

ಪುನಹ ರಭಸವಾಗಿ ಚಂದ್ರನೆಡೆಗೆ ತಿರುಗಿಸಿ ಕೇಳಿದರಂತೆ.

ಚಾಂದ್ ದೇಖಾ ?
ಹಾಂ ದೇಖಾ

ಅ ವರುಷ ಮೊದಲ ಬಾರಿಗೆ ಇಡೀ ಪಾಕಿಸ್ಥಾನದಲ್ಲಿ ಹಬ್ಬ ಒಂದೇ ದಿನ ಆಚರಿಸಲ್ಪಟ್ಟಿತು. ಆ ಅದ್ಯಕ್ಷರ   ಅಧಿಕಾರ ಮುಗಿದ ನಂತರ ನಾಯಿ ಬಾಲ ಡೊಂಕು ಎನ್ನುವಂತೆ ವಿವಿದ ಊರುಗಳ ಮುಲ್ಲಾಗಳಿಗೆ ಬೇರೆ ಬೇರೆ ದಿನ ಚಂದ್ರ ಗೋಚರಿಸಲು ಪ್ರಾರಂಬವಾಯಿತಂತೆ.  ಕ್ಷಮಿಸಿ. ಆ ಸಂಪರ್ಕ ಕೊಂಡಿ ತಕ್ಷಣ ಲಬ್ಯವಾಗುತ್ತಿಲ್ಲ.

ಅವರು ಅಮೇರಿಕದ ಸುಪ್ರೀಂ ಕೋರ್ಟನ್ನು ಸಂದರ್ಶಿಸಿದ ಅದರ ಕಾರ್ಯವೆಸಗುವುದರ ಬಗೆಗೆ ಬರೆದಿದ್ದಾರೆ. ಆ ಕೋಂಡಿ ಇಲ್ಲಿದೆ.

http://www.dawn.com/weekly/cowas/20070411.htm

Friday, December 05, 2008

ರಕ್ಷಣೆಯ ನೆಪದಲ್ಲೊಂದು ದುಬಾರಿ ಯೋಜನೆ

ನಿನ್ನೆಯ ಪತ್ರಿಕೆಯಲ್ಲಿ ಒಂದು ಸುದ್ದಿ ಅಂದರೆ ಸರಕಾರಿ ಪ್ರಕಟನೆ ನನ್ನ ಗಮನ ಸೆಳೆಯಿತು. ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ೩೦೦೦ ಮೀನುಗಾರಿಕಾ ದೋಣಿಗಳಿಗೆ ಜಿಪಿಎಸ್ ಅಳವಡಿಕೆಗೆ ಕೇಂದ್ರ ಸರಕಾರಕ್ಕೆ ಅಹವಾಲು. ಪಾಕಿಸ್ತಾನದ ಬಯೋತ್ಪಾದಕರಿಗೆ   ಸಮುದ್ರದಲ್ಲಿ  ಮುಂಬಯಿಗೆ    ದಾರಿ ತೋರಲು ಉಪಯೋಗಿಸಿದ ಕಾರಣ ಜಿಪಿಎಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.ನಮ್ಮ ಮೊಬೈಲ್ ಪೋನ್ ಗಾತ್ರದ ಈ ಉಪಕರಣ ನಿಜಕ್ಕೂ ಅದ್ಬುತ ಸಾದನ. ಅಮೇರಿಕ ಇದಕ್ಕಾಗಿ ಹಾರಿಸಿರುವ ೨೪ ಉಪಗ್ರಹಗಳಲ್ಲಿ ಅಲ್ಲಿಗೆ ಕಾಣುವ ಎರಡು ಯಾ ಮೂರು ಉಪಗ್ರಹಗಳಿಂದ ಬರುವ ಸಂಕೇತವನ್ನು ಉಪಯೋಗಿಸಿ ಇದು ನಾವಿರುವ ಸ್ಥಳದ ಅಕ್ಷಾಂಶ ರೆಖಾಂಶವನ್ನು ನಿಖರವಾಗಿ ಹೇಳುತ್ತದೆ. ಇಪ್ಪತ್ತು ಅಡಿ ವ್ಯತ್ಯಾಸವ ಸಹಾ ಇದರಲ್ಲಿ ಲೆಕ್ಕಕ್ಕೆ ಸಿಗುವುದು. ನಾವಿಕರಿಗೆ ಪೋಲಿಸರಿಗೆ ಕಾಡು ಉಳಿಸಲು ಅಗ್ನಿ ನಿಯಂತ್ರಣಕ್ಕೆ ಎಲ್ಲಕ್ಕೂ ಸಹಾಯವಾಗಬಲ್ಲ ಸಾದನ.

ವರ್ಷದ ಹಿಂದೆ ಸಕಲೇಶಪುರ ಹತ್ತಿರ ಕಾಡು ನುಗ್ಗಿದ ಸಾಫ್ಟ್ ವೇರ್ ತಂತ್ರಜ್ನರು ಅನಿರೀಕ್ಷಿತವಾಗಿ ಮಳೆಗಾಲ ಪ್ರಾರಂಬವಾಗಿ ದಿಕ್ಕಿನ ಪ್ರಜ್ನೆ ತಪ್ಪಿ ವಾಪಾಸು ಬರಲು ಸಾದ್ಯವಾಗದೆ ಮೃತ ಪಟ್ಟಿದ್ದರು. ಗೋವಾ ಕರ್ನಾಟಕ ಗಡಿಯಲ್ಲಿ ಉದುರಿದ ನೌಕಾದಳದ ಹೆಲಿಕಾಫ್ಟರಿನಲ್ಲಿ ಬದುಕುಳಿದ ವ್ಯಕ್ತಿ ಮೊಬೈಲ್ ಪೋನ್ ಮೂಲಕ ಸುದ್ದಿ ಹೇಳಿದರೂ ಕಾಡಿನ ಮದ್ಯೆ ಇದ್ದ ಅವರನ್ನು ಹುಡುಕಲು ಸಾದ್ಯವಾಗಿರಲಿಲ್ಲ. ಎರಡೂ ಸನ್ನಿವೇಶದಲ್ಲಿ ಸರಳ ಜಿಪಿಎಸ್ ಸಾದನ ಜೀವ ಉಳಿಸುತಿತ್ತು.

ಕಳೆದ ವರ್ಷ ನಾನು ವಿಚಾರಿಸುವಾಗ ಸುಮಾರು ನಾಲ್ಕು ಸಾವಿರ ರೂಪಾಯಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಬ್ಯವಿರುವ ಇದು ನಮ್ಮೂರು ತಲಪುವಾಗ ಒಂಬತ್ತು ಸಾವಿರವಾಗುತ್ತದೆ ಎಂದು ತಿಳಿದು ಬಂತು. ವಿಪರೀತ ಸುಂಕ (basic 30 % + ) ಮತ್ತು ಸ್ಪರ್ದಾತ್ಮಕವಲ್ಲದ ಸಣ್ಣ ಮಾರುಕಟ್ಟೆಯಿಂದಾಗಿ ಹೆಚ್ಚು ದುಬಾರಿಯೆನಿಸುತ್ತದೆ. ಸರಕಾರ   ಅಮದು   ಸುಂಕ  ಕಡಿಮೆ ಮಾಡಿ   ಈ  ಉಪಕರಣ   ಜನರ  ಕೈಗೆಟಕುವಂತೆ  ಮಾಡಿದರೆ   ತುಂಬಾ  ಉಪಕಾರವಿದೆ. 

ಈ ಸರಳ ಸಾದನ ದೊಡ್ಡ ಸಂಖ್ಯೆಯಲ್ಲಿ ತರಿಸಿದರೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿ ಖರ್ಚಾಗಬಹುದು. ಅಂದರೆ ಕೋಟಿ ರೂಪಾಯಿಗೆ ಸಾವಿರ ಉಪಕರಣಗಳು ಸಿಗುತ್ತವೆ. ಮೂರು ಸಾವಿರ ಉಪಕರಣಗಳಿಗೆ ಮೂರು ಕೋಟಿ ರೂಪಾಯಿ ಸಾಕು. ದೋಣಿ ಎಲ್ಲಿದೆಯೆಂದು ಗುರುತಿಸಲು ಅಳವಡಿಸುವಂತಹದಕ್ಕೂ ಅಷ್ಟು ಖರ್ಚಿಲ್ಲ. ಒಂದಕ್ಕೆ ಹದಿನೈದು ಸಾವಿರ ಮಿಗದು. ಇವರ ಇಪ್ಪತ್ತು ಕೋಟಿ ಲೆಕ್ಕಾಚಾರದಲ್ಲಿ ಜೇಬಿಗಿಳಿಸುವ ಮೊತ್ತವೇ ಹೆಚ್ಚಿನ ಪಾಲು ಎನಿಸುತ್ತದೆ.

ಒಮ್ಮೆ ಇತಿಹಾಸದ ಕ್ಲಾಸಿನಲ್ಲಿ ಮೇಡಂ ಕೇಳಿದರಂತೆ. ನಾನು ಎಲ್ಲಿದ್ದೆ ಅಂದರೆ ಎಲ್ಲಿಯವರೆಗೆ ಪಾಠ ತಲಪಿದೆಯೆಂದು. ಕೊನೆ ಬೆಂಚಿನ ಯಜಮಾನರ ಉತ್ತರ ಬಂತು ಅಕ್ಬರನ ಶಯನ ಕೋಣೆಯಲ್ಲಿ, ಮೇಡಂ.

ಅಂದ  ಹಾಗೆ    ಯಾರಾದರೂ ನಮಗೆ ಎಲ್ಲಿದ್ದಿಯ ? ಎಂದು ಮೊಬೈಲಿಗೆ ಫೋನಿಸಿದರೆ ನಾವು ಮುಖ್ಯ ರಸ್ತೆ ಅದ್ರಾಮ ಬ್ಯಾರಿಯ ತರಕಾರಿ ಅಂಗಡಿಯ ……..ಅನ್ನಬೇಕಾಗಿಲ್ಲ.      ಉತ್ತರ 13.210320 ಪೂರ್ವ 73.45213 ಅಂದರಾಯಿತು.

Tuesday, December 02, 2008

ಹೀಗೊಂದು ಸಂಪ್ರದಾಯ

ಕೆಲವೊಂದು ಸಂಪ್ರದಾಯಗಳು ಬಲೇ ಮಜವಾಗಿರುತ್ತದೆ. ತಿಥಿ ಮಾಡುವಾಗ ಬೆಕ್ಕನ್ನು ಕಟ್ಟಿ ಹಾಕುವ ಹಾಗೆ. ಹಲವಾರು ದೇಶ ಸುತ್ತಾಡಿದ ನನಗೆ ಇವುಗಳ ಬಗೆಗೆ ಕುತೂಹಲ ಆಸಕ್ತಿ. ನಮ್ಮನ್ನು ನಾವು ಸೂಚಿಸಲು ಎದೆ ತೋರಿಸಿದರೆ ಜಪಾನಿನಲ್ಲಿ ಮೂಗಿಗೆ ಬೊಟ್ಟು ಮಾಡುವರೆಂದು ಅಸ್ಪಷ್ಟವಾದ ನೆನಪು. ಒಂದು ಸಮಾಜದಲ್ಲಿ ಸಹಜ ಎನ್ನಿಸುವ ವಿಚಾರ ಇನ್ನೊಂದೆಡೆ ಮನನೋಯಿಸುವ ಅಶ್ಲೀಲ ನಡುವಳಿಕೆ ಆಗಲೂಬಹುದು. ಸಂಪ್ರದಾಯಗಳ ಬಗೆಗೆ ಕುತೂಹಲಕ್ಕೆ ಅದೂ ಒಂದು ಕಾರಣ.


ರಷ್ಯದಲ್ಲಿ ಗಗನಯಾತ್ರಿಗಳು ಅವರ ಗಗನ ನೌಕೆ ಏರುವ ಮೊದಲು ಅವರನ್ನು ಅಲ್ಲಿಗೆ ಕರೆತಂದ ಬಸ್ಸಿನ ಗಾಲಿಗೆ ಮೂತ್ರ ಮಾಡುವುದು ಕಳೆದ ನಲುವತ್ತು ವರ್ಷಗಳಿಂದ ಆಚರಣೆಯಲ್ಲಿರುವ ಸಂಪ್ರದಾಯವಂತೆ. ಇತ್ತೀಚೆಗೆ ಆಕಾಶಕ್ಕೆ ಹಾರಿದ ಯಾತ್ರಿಗಳ ಅಪರೂಪದ ಚಿತ್ರ ಇಲ್ಲಿದೆ.

ಹಲವು ದಶಕಗಳ ಹಿಂದೆ ಸ್ನೇಹಿತರಲ್ಲಿನ    ಮದುವೆಯಲ್ಲಿ    ನಮ್ಮ ಪೋಕರಿ ಪಟಲಾಂ ಮದುವೆ ಚಿತ್ರಣಕ್ಕೆ ನೇಮಿಸಲಾಗಿತ್ತು. ಇವರು  ಸಿಕ್ಕ  ಅವಕಾಶ  ಚೆನ್ನಾಗಿ   ಉಪಯೋಗಿಸಿಕೊಂಡರು.  ಈ ಗೆಳೆಯರು ಅಂಟಿಸಿ ಕೊಟ್ಟ ಅಲ್ಬಂನಲ್ಲಿ ಮೊದಲ ಚಿತ್ರ ಗಂಡಿನ ಕಡೆ ಗಂಡಸರು ಛತ್ರದ ಬಳಿ ಬಸ್ಸಿನಿಂದಿಳಿದು ಸಾಲಾಗಿ ನಿಂತು  ಆವರಣ  ಗೋಡೆಗೆ   ಮೂತ್ರ ಮಾಡುವ ಚಿತ್ರವಾಗಿತ್ತು.  ಮುಜುಗರದಿಂದ ಹೆಣ್ಣಿನ ಮನೆಯವರೆಲ್ಲರೂ ನಮ್ಮ ಹುಡುಗರಿಗೆ ಚೆನ್ನಾಗಿ ಉಗಿದರು.