Tuesday, December 16, 2008

ಗ್ರಾಮೀಣ ಪ್ರದೇಶಗಳಿಗೆ ಸೌರ ವಿದ್ಯುತ್ ಉತ್ಪಾದನಾ ಅವಕಾಶ

ಮೊನ್ನೆ ಇಂದನ ಉಳಿತಾಯ ದಿನಾಚರಣೆ ಅಂಗವಾಗಿ ವಿದ್ಯುತ್ ಮಂತ್ರಿಗಳು ಸೌರ ವಿದ್ಯುತ್ ಗೆ ಬೆಂಬಲ ಎಂದು ಬರೆದು ಕೊಟ್ಟಿರುವುದನ್ನು ಓದಿದರು. ನಮ್ಮಲ್ಲಿ ಮುಂದಿನ ಹತ್ತು ವರುಷಗಳ  ಮಟ್ಟಿಗೆ   ಸೌರ ವಿದ್ಯುತ್ ಖರೀದಿ ಕ್ರಯ ಹದಿನೈದು ರೂಪಾಯಿ ಎಂದು ವಿದ್ಯುತ್ ಪ್ರಾಧಿಕಾರ ಹಾಗೂ ಸರಕಾರ ನಿರ್ಣಯಿಸಿದೆ ಎನ್ನುವುದು ಕೇಂದ್ರ ಸರಕಾರದ  ಹಳೆಯ   ಸುದ್ದಿ. ಈ ಹಿನ್ನೆಲೆಯಲ್ಲಿ ಕಿರು (?) ವಿದ್ಯುತ್ ಉತ್ಪಾದಕನಾಗಿ ನಾನು ನನ್ನ ನಾಲ್ಕು ಅನಿಸಿಕೆಗಳ ಇಲ್ಲಿ ಹಂಚಿಕೊಳ್ಳುತ್ತೇನೆ.

ನಮ್ಮಲ್ಲಿ  ಹಿಂದೆ ಪಂಪಿನೊಡನೆ ಪಡಕೊಂಡ ಸೌರ ಫಲಕಗಳಿಂದ ಸಿಗುವ ವಿದ್ಯುತ್ ಪೂರ್ತಿ ಬಳಕೆಯಾಗುತ್ತಿಲ್ಲ. ಹೆಚ್ಚುವರಿ ಸುಮಾರು ಹತ್ತು ಯುನಿಟ್ ಗಳನ್ನು ನಾನು ಮಾರಬಹುದು. ಅವರ ಹೇಳಿಕೆಯಂತೆ ದಿನಕ್ಕೆ ಸುಮಾರು ನೂರ ಐವತ್ತು ರೂಪಾಯಿ ಮೌಲ್ಯ ಸಿಗಬಹುದು. ಆದರೆ ನಾನು ಹಿಂದೊಮ್ಮೆ ಬರೆದಂತೆ ನಾವು ಜಾಲಕ್ಕೆ ಹಾಯಿಸ ಬೇಕಾದರೆ ಅದರಲ್ಲಿ ವಿದ್ಯುತ್ ಇರಲೇಬೇಕು. ಸಮೀಪದ ಅವರ ಉಪಕೇಂದ್ರಕ್ಕೆ ಪ್ರತ್ಯೇಕ ತಂತಿ ಎಳೆಯುವಷ್ಟು ನಮ್ಮಲ್ಲಿ ಉತ್ಪಾದನೆಯಾಗುವುದಿಲ್ಲ. ಬರುವ ವರ್ಷದಿಂದ 24 ಘಂಟೆ ವಿದ್ಯುತ್ ಎನ್ನುವ ಆಶ್ವಾಸನೆಯ ಹಿನ್ನೆಲೆಯಲ್ಲಿ ಈ ಬಗೆಗೊಂದು ಚರ್ಚೆ.

ಜಾಲಕ್ಕೆ ಹರಿವಿನ ಬಗೆಗೆ ಎರಡು ವಿಧಗಳು ಪ್ರಪಂಚದ ವಿವಿದೆಡೆ ಚಾಲ್ತಿಯಲ್ಲಿದೆ. ಒಂದು ನಮ್ಮ ಮನೆಯ ಮಾಪಕ  ನಾವು ವಿದ್ಯುತ್ ಹರಿಸುವಾಗ ಹಿಂದಕ್ಕೆ ತಿರುಗುವಂತೆ ಮಾಡುವುದು. ಆಗ ನಮ್ಮ ವಿದ್ಯುತ್ ಖರೀದಿ ಹಾಗೂ ಮಾರಾಟ ಕ್ರಯ ಒಂದೇ ಆಗುತ್ತದೆ. ಹಾಗಾದರೆ ಆ ಸಂದರ್ಬದಲ್ಲಿ ನಮ್ಮ ಬಂಡವಾಳಕ್ಕೆ ಶ್ರಮಕ್ಕೆ ಯೋಗ್ಯ ಪ್ರತಿಫಲ ಸಿಗದು. ವಿದ್ಯುತ್ತಿನ ದರ ನಮ್ಮಿಂದ ತುಂಬ ಹೆಚ್ಚಿರುವ ಮುಂದುವರಿದ ದೇಶಗಳಲ್ಲಿ ಇದು ಪ್ರಾಯೋಗಿಕ ಎನಿಸಬಹುದು.

ಎರಡನೇಯದು ಪ್ರತ್ಯೇಕ ಮಾಪಕ  ಹಾಕಿ ನಮ್ಮ ಹೊರಹರಿವಿನ ಲೆಕ್ಕಾಚಾರ ಮಾಡುವುದು. ಆಗ ಯುನಿಟ್ ಒಂದಕ್ಕೆ ಹದಿನೈದು ರೂಪಾಯಿ ಕೊಡುವುದಾದರೆ ನಮ್ಮ ಬಂಡವಾಳಕ್ಕೆ ಶೇಕಡಾ ಏಳರಿಂದ ಒಂಬತ್ತರ ವರೆಗೆ ಪ್ರತಿಫಲ ದೊರಕಬಹುದು. ಕಡಿಮೆ ದರದ ಬಡ್ಡಿ ಹಾಗೂ ಹೂಡಿಕೆಗೆ ಸಹಾಯದನ ಇದ್ದರೆ ಮಾತ್ರ ಇದು ಆಕರ್ಷಕವಾಗಬಹುದು.

ಜರ್ಮನಿಯಲ್ಲಿ ಕಳೆದ ವರ್ಷ ಎಂದರೆ 2007ರಲ್ಲಿಯೇ ಅಳವಡಿಸಲ್ಪಟ್ಟ   ಸೌರ  ಫಲಕಗಳ   ಮೊತ್ತ 1135 MW. ಇದರೊಂದಿಗೆ ಹೋಲಿಸಲು ನಮ್ಮ ದೇಶದಲ್ಲಿ ಈ ವರೆಗೆ ಒಟ್ಟು 120 MW ಗಳಷ್ಟು ಸೌರ ಫಲಕಗಳಿದ್ದರೆ ಅದರಲ್ಲಿ ಜಾಲಕ್ಕೆ ಸಂಪರ್ಕಿಸಿರುವುದು ಕೇವಲ 2.5 MW ಮಾತ್ರ. ಇದಕ್ಕೆ ಮುಖ್ಯ ಕಾರಣವೆಂದರೆ ಜರ್ಮನಿಯಲ್ಲಿ ಮನೆ ಮೇಲೆ ಅಳವಡಿಸಿದ ಫಲಕಗಳ ವಿದ್ಯುತ್ ಜಾಲಕ್ಕೆ ಸೇರಲು ಯುನಿಟ್ ಒಂದಕ್ಕೆ ಅಂದಾಜು ಮೂವತ್ತು ರೂಪಾಯಿ ಕೊಡುತ್ತಾರೆ. ಅಲ್ಲಿ ಸೂರ್ಯ ದರ್ಶನ ಅಪರೂಪ ಎನಿಸಿದರೂ ದರ ಸ್ಪರ್ದಾತ್ಮಕವಾಗಿರುತ್ತದೆ ಎನ್ನುವ ಕಾರಣದಿಂದ ಜನರು ಅಳವಡಿಸಲು ಆಸಕ್ತಿ ಹೊಂದುತ್ತಾರೆ. ಅದೇ ಫಲಕಗಳ ಇಲ್ಲಿ ಅಳವಡಿಸಿದರೆ ಅದರ ಎರಡು ಪಟ್ಟು ಶಕ್ತಿ ಉತ್ಪಾದಿಸಬಹುದು. ಉದಾಹರಣೆಗೆ ಒಂದು ಕಿಲೋ ಪೀಕ್ ವಾಟ್ ಫಲಕಗಳು ಉತ್ತರ ಜರ್ಮನಿಯಲ್ಲಿ ವರ್ಷಕ್ಕೆ 850 ಯುನಿಟ್ ಉತ್ಪಾದಿಸಿದರೆ ನಮ್ಮಲ್ಲಿ 1800 ಯುನಿಟ್ ಉತ್ಪಾದಿಸಬಹುದು.

ಜಾಲಕ್ಕೂ ನಮ್ಮ ಸೌರ ಫಲಕಗಳಿಗೆ ಮದ್ಯೆಯ ಪ್ರಮುಖ ಕೊಂಡಿ- ವಿಧ್ಯುತ್ ಜಾಲ ಸಂಪರ್ಕ ಇನ್ವೆರ್ಟರ್. ಪರದೇಶಗಳಲ್ಲಿ ತಯಾರಾಗುವ ಈ ಉಪಕರಣದ ಸಹಾಯದಿಂದ ನಮ್ಮಲ್ಲಿ ತಯಾರಾಗುವ ವಿದ್ಯುತ ಶಕ್ತಿಯನ್ನು ಜಾಲದೊಂದಿಗೆ ಹೊಂದಾಣಿಕೆ ಮಾಡಲು ಅವಕಾಶವಿರುತ್ತದೆ.

ಇದು ಸೌರ ವಿದ್ಯುತ್ ಫಲಕದಿಂದ ಬರುವ ಶಕ್ತಿಯ ವಿದ್ಯುದ್ಬಲ Voltage ಮತ್ತು ಪ್ರಮಾಣ Amps ಸಮತೋಲನ ಕಾಯ್ದುಕೊಂಡು ಗರೀಷ್ಟ ಉತ್ಪಾದನೆಗೆ ಪೂರಕವಾಗಿರುತ್ತದೆ. ಅನಂತರ ಅದನ್ನು ಜಾಲದಲ್ಲಿರುವಂತೆ ಉತ್ತಮ ತರಗತಿಯ sine wave ಅಲ್ಟರ್ನೇಟಿಂಗ್ ಕರೆಂಟಾಗಿ ಮಾರ್ಪಾಡಿಸುತ್ತದೆ ಹಾಗೂ ಜಾಲದ ವಿದ್ಯುತ್ ಪರೀಸ್ಥಿತಿ ಗಮನಿಸಿ ಅದಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತದೆ. ಅಂದರೆ ಜಾಲದಲ್ಲಿ ಇರುವಿಕೆ ಖಚಿತಪಡಿಸಿಯೇ ಸಂಪರ್ಕ ಮತ್ತು ವಿದ್ಯುತ್ ಇಲ್ಲವಾದರೆ ಹರಿವು ಇಲ್ಲ ಹಾಗೂ ಜಾಲದ ಆವರ್ತನ ಚಕ್ರಕ್ಕೆ ಹೊಂದಾಣಿಕೆಯಾಗುವಂತೆ ನಿಯಂತ್ರಣ. ಜಾಲದಲ್ಲಿರುವುದಕ್ಕಿಂತ ನಮ್ಮ ತಯಾರಿ ವಿದ್ಯುತ್ತಿನ voltage ತುಸು ಹೆಚ್ಚಿರುವ ಕಾರಣ ಸಲೀಸಾಗಿ ಜಾಲಕ್ಕೆ ಹರಿಯುತ್ತದೆ.

ಇವು ದುಬಾರಿ. ನನ್ನ ಸೌರ ಫಲಕಗಳ ವಿದ್ಯುತ್ತನ್ನು ಜಾಲಕ್ಕೆ ಹಾಯಿಸಲು  1500 watts grid- tie inverter ಗೆ ಅಂದಾಜು ನಮ್ಮ ದೇಶದಲ್ಲಿ ಒಂದು ಕಾಲು ಲಕ್ಷ ರೂಪಾಯಿ ಬೆಲೆಯುಂಟು. ಬೆಲೆ ಕೇಳಿ ಹುಬ್ಬೇರಿಸಬೇಡಿ. ಮಾಮೂಲಿ ಇನ್ವರ್ಟರ್ ಗಳಲ್ಲಿ ತಯಾರಾಗುವ ವಿಧ್ಯುತ್ ಗುಣ ಮಟ್ಟದ ಪ್ರಶ್ನೆಯಾಗಲಿ ಜಾಲದ ಆವರ್ತನಕ್ಕೆ ಹೊಂದಾಣಿಕೆಯಾಗುವ ಪ್ರಶ್ನೆಯಾಗಲಿ ಇರುವುದಿಲ್ಲ.

ಪ್ರಥಮವಾಗಿ ನಮ್ಮ ಉಪಯೋಗಕ್ಕೆ ಉಳಿದದ್ದು ಸಮಾಜಕ್ಕೆ ಎನ್ನುವ ನೆಲೆಯಲ್ಲಿ ಸೌರ ಫಲಕಗಳ ಅಳವಡಿಸಿಕೊಂಡು ಹಳ್ಳಿಗರು ಸೌರ ಶಕ್ತಿಯನ್ನು ಕೊಯಿಲು ಮಾಡಬಹುದು. ಮಳೆನೀರ ಕೊಯಿಲಿನಂತೆ. ದಿನದ ನಡುಬಾಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವಾಗ ಗರಿಷ್ಟ ಉತ್ಪಾದನೆ. ಕೃಷಿಕರಿಗೆ ಸರಿಯಾದ ಅವಕಾಶ ಕಲ್ಪಿಸಿದರೆ ಇದೊಂದು ಉತ್ತಮ ವ್ಯವಹಾರವೂ ಆಗಬಹುದು.

ಹಳ್ಳಿಗಳಲ್ಲಾದರೆ ಹೆಚ್ಚು ಬೆಳಕು ಸಂಗ್ರಹಿಸುವ ಅವಕಾಶ. ಜತೆಯಲ್ಲಿ ಬೇಕಾದಷ್ಟು ಜಾಗ ಇರುತ್ತದೆ. ಪಟ್ಟಣಗಳಲ್ಲಿ ಎಲ್ಲೆಲ್ಲೂ ನೆರಳು. ಅವು ಚೆನ್ನಾಗಿ ಕೆಲಸ ಮಾಡಲು ಫಲಕಗಳನ್ನು ಸೂರ್ಯನೆಡೆಗೆ ತಿರುಗಿಸಲೂ ಸಮಯಾವಕಾಶ ಹಳ್ಳಿಗರಿಗೆ ಇರುತ್ತದೆ. ಸೂರ್ಯ ದೇವನ ಚಲನೆ ಅನುಸರಿಸುತ್ತಾ ಹೋದರೆ ಶೇಕಡಾ 25 ರಷ್ಟು ಅಧಿಕ ಶಕ್ತಿಯನ್ನು ಬಾಚಿಕೊಳ್ಳಬಹುದಾಗಿದ್ದು ಇದಕ್ಕಾಗಿ ಫಲಕಗಳ ಕೈಯಿಂದಲೇ ತಿರುಗಿಸಲು ಸಾದ್ಯ. ಈ ಕೆಲಸಕ್ಕೆ ಹೆಚ್ಚು ಕುಶಲತೆಯ ಅಗತ್ಯವೂ ಇರುವುದಿಲ್ಲ.

ಕಲ್ಲಿದ್ದಲು ದಹಿಸಿ ಉತ್ಪಾದಿಸುವ ವಿದ್ಯುತ್ ಹೋಲಿಸಿದರೆ ಸೌರ ವಿದ್ಯುತ್ ನಿಂದ ಗಾಳಿ ಹಾಗೂ ನೀರಿನ ಮಲೀನತೆ ಇಲ್ಲ. ಈಗ ನಾನು ಕೊಡ ಬಹುದಾದ ಕನಿಷ್ಟ ವರ್ಷಕ್ಕೆ 2500 ಯುನಿಟ್ ಲೆಕ್ಕಕ್ಕೆ ತೆಗೆದುಕೊಂಡರೂ ತುಂಗಭದ್ರಾ ನದಿಯ 6500 ಲೀಟರ್ ನೀರ ಬಳಕೆಯನ್ನು ತಪ್ಪಿಸುತ್ತದೆ.   ನನ್ನ ಕೃಷಿ ಮತ್ತು ಮನೆ ಉಪಯೋಗದ ಒಟ್ಟು  ವಿದ್ಯುತ್   ಬಳಕೆಯೂ ವರ್ಷಕ್ಕೆ ಎರಡೂವರೆ ಸಾವಿರದಿಂದ ಮೂರು ಸಾವಿರ ಯುನಿಟ್.   

ನನ್ನಲಿರುವ  ಸೌರ ಫಲಕಗಳ  ಮೌಲ್ಯ  ಸುಮಾರು  ನಾಲ್ಕುವರೆ  ಲಕ್ಷ  ರೂಪಾಯಿ.    ಸೌರ ಫಲಕಗಳಿಗೆ 25 ವರ್ಷ ಆಶ್ವಾಸನೆ ಕೊಡಬಹುದು. ಪರದೇಶಿ ನಿರ್ಮಿತ ಈ inverter ಗಳಿಗೆ ಏಳರಿಂದ ಹತ್ತು ವರ್ಷ ಆಶ್ವಾಸನೆ ತಯಾರಕರು ಕೊಡುತ್ತಾರೆ. ಸರಕಾರ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಕೊಟ್ಟರೆ ಖಂಡಿತ ಇವುಗಳು ಜನಪ್ರಿಯವಾಗಬಹುದು.  ಆಗ  ಶ್ರೀ ನಾಗೇಶ  ಹೆಗಡೆಯವರು  ಹೇಳಿದಂತೆ  ವಿದ್ಯುತ್  ಹಿಮ್ಮೊಗ  ಹರಿಯುವುದು. 

ಇದು ಲೆಕ್ಕಾಚಾರ ಬರೇ ಸಾದ್ಯತೆಗಳ ಬಗೆಗೆ ಚರ್ಚೆ ಹೊರತು ವ್ಯವಹಾರಿಕ ಅಲ್ಲ. ಸರಕಾರ ಸದ್ಯಕ್ಕೆ ಕೆಂಪು ಚಾಪೆ ಹಾಸಿದ್ದು ಕೋಟ್ಯಾದಿಪತಿಗಳಿಗೆ ಮಾತ್ರ.   ಸಣ್ಣ ಉತ್ಪಾದಕರನ್ನು ಅವರು   ಪರಿಗಣಿಸುವುದಿಲ್ಲ. ಖಜಾನೆಯಲ್ಲಿ ಕಾಸೂ ಇಲ್ಲ.

3 comments:

Unknown said...

ಇನ್ನೂ ಇಪ್ಪತ್ತೈದು ವರ್ಷಗಳಲ್ಲಿ ಸಾಧ್ಯವಾಗಬಹುದು. ಸಧ್ಯಕ್ಕೆ ಅಷ್ಟೊಂದು ರಾಜಕೀಯ ಇಚ್ಚಾಶಕ್ತಿ ವೈಜ್ಞಾನಿಕವಾಗಿ ಪ್ರದರ್ಶಿಸುವ ವ್ಯಕ್ತಿಗಳು ನಮ್ಮಲ್ಲಿ ಇಲ್ಲ. ಇನ್ನೂ ದೇವರು ದಿಂಡಿರು ಎಂದು ಸುತ್ತುವ ರಾಜಕಾರಣಿಗಳ ಹಂತವನ್ನೇ ನಾವು ದಾಟಿಲ್ಲ. ಮನುಷ್ಯ ಪ್ರಯತ್ನದ ಮೇಲೆ ನಂಬಿಕೆಯಿರುವ ರಾಜಕೀಯ ನಮ್ಮಲ್ಲಿ ಸಾಧ್ಯವಾದಮೇಲೆ ಇಂತಹ ಕನಸು ನನಸಾಗಲು ಸಾಧ್ಯ. ಅಲ್ಲಿಯವರೆಗೆ ಹೀಗೆ ಬರೆಯುತ್ತಾ ಇರಬಹುದು. ಮುಂದೆ ಇವುಗಳು ಕೆಲಸಕ್ಕೆ ಬರುತ್ತವೆ. ಉತ್ತಮ ಮಾಹಿತಿಗಾಗಿ ಧನ್ಯವಾದಗಳು.

Prasad Yerumbu said...

ನೀವು ಹೇಳುವ ವಿಷಯ 100% ಸತ್ಯ..ಇತ್ತೀಚಿನ ದಿನಗಳಲ್ಲಿ ಕಾಣುವ ವಿದ್ಯುತ್ ಕಣ್ಣಾಮುಚ್ಚಾಲೆಯಿ೦ದ ಬಡಪಾಯಿ ಕ್ರಿಷಿಕರಿಗೆ ಸದ್ಯಕ್ಕೆ ಇದೋ೦ದೇ ಪರಿಹಾರವೆ೦ಬ೦ತೆ ಕಾಣುತ್ತದೆ...ಅಳವಡಿಕೆ ಖರ್ಚು ದುಭಾರಿಯೆ೦ಬ ವಿಚಾರಬಿಟ್ಟರೆ ಉಳಿದ ಎಲ್ಲಾ ok...

Dr.K.G.Bhat,M.B:B.S said...

i saw the article and thought i should make my presence felt.good try.keep it up