Sunday, January 06, 2013

1890ರಲ್ಲಿ ವಿನ್ಯಾಸವಾದ ನಮ್ಮ ಸೈಕಲು ರಿಕ್ಷಾ


ಪ್ರಪಂಚದಲ್ಲಿ ಅತಿ   ಹೆಚ್ಚು  ಸೈಕಲು ರಿಕ್ಷಾ  ಇರುವ  ದೇಶ  ಬಾರತ.  ಹಾಗೆಯೇ  ಅತ್ಯಂತ  ಕಳಪೆ ಪುರಾತನ   ಗಾಡಿಗಳನ್ನೂ  ನೀವು  ಕಾಣಬಹುದು  ಬಾರತದಲ್ಲಿ  ಮಾತ್ರ.  ಶತಮಾನ  ಕಳೆದರೂ  ನಮ್ಮ  ದೇಶದ  ಸೈಕಲು  ರಿಕ್ಷಗಳು  ಏನೂ ಬದಲಾವಣೆ  ಹೊಂದಿಲ್ಲ  ಎನ್ನುವುದು ಬಹಳ  ಬೇಸರದ  ವಿಚಾರ. :-(    ಕೆಳಗಿನ  ಚಿತ್ರದಲ್ಲಿರುವ    ಸೈಕಲು  ಅಕ್ಷಲ್  1900 ದಿಂದ  ಹಿಂದಿನದು.


ಈ  ರಿಕ್ಷಗಳಲ್ಲಿ  ನಮ್ಮ  ರಸ್ತೆ   ಸಂಚಾರ  ಸನ್ನಿವೇಶದಲ್ಲಿ ಅನಿವಾರ್ಯ  ಅನಿಸುವ  ಅಡ್ಡಾದಿಡ್ಡಿ  ತಿರುಗಲು  ಸಾದ್ಯವೇ  ಇಲ್ಲ.  ತುಳಿದರೆ  ಎರಡೂ  ಚಕ್ರಗಳು  ಸಮಾನಂತರ  ಮುಂದಕ್ಕೆ  ಚಲಿಸುತ್ತವೆ.  ಹಾಗಾಗಿ  ಅಂತಹ  ಸನ್ನಿವೇಶದಲ್ಲಿ  ಇಳಿದು  ತಳ್ಳುವುದು  ಅನಿವಾರ್ಯವಾಗುತ್ತದೆ. ಇದರಿಂದಾಗಿ  ಚಾಲಕನಿಗೆ ಶ್ರಮ ಹಾಗೂ ರಸ್ತೆಯಲ್ಲಿರುವ   ಇತರರಿಗೆ  ತಡೆ ಉಂಟಾಗುತ್ತದೆ. 

ಪರದೇಶಗಳಲ್ಲಿ  ಚಾಲೂ  ಇರುವ  ಸೈಕಲು   ರಿಕ್ಷಗಳಲ್ಲಿ  differential   ಇರುತ್ತದೆ.  ಆಗ  ತುಳಿಯುವಾಗಳೂ  ಹಿಂದಿನ  ಚಕ್ರಗಳು  ಬೇರೆ  ಬೇರೆ ವೇಗದಲ್ಲಿ  ತಿರುಗಲು  ಸಾದ್ಯವಾಗುತ್ತದೆ.    ಇಂದು ನಾವು  ಕಾರು ಬಸ್ಸುಗಳಲ್ಲಿ  ನೋಡುವ  ಈ  ಬಿಡಿಬಾಗ  ಪ್ರಪ್ರಥಮವಾಗಿ     ಮೇಲಿನ  ಚಿತ್ರದಲ್ಲಿರುವಂತೆ   ತ್ರಿ ಚಕ್ರ   ಸೈಕಲುಗಳಿಗೆ  ವಿನ್ಯಾಸಗೊಂಡವು.  ಕ್ರಮೇಣ  ಕಾರು  ಲಾರಿ   ತಯಾರಕರಿಗೂ  ಇವರೇ  ಈ  ಬಿಡಿಬಾಗ  ಪೊರೈಸಲು  ಸುರುಮಾಡಿದರು.  ನಮ್ಮವರು  ಕಾರುಗಳ  ಬಿಡಿಬಾಗ  ತಂತ್ರಜ್ನಾನದಿಂದಲೇ  ಸುರುಮಾಡಿದ ಕಾರಣ  ಇನ್ನೂ  ಸರಳ ಸೈಕಲ್ ರಿಕ್ಷ  ಬಿಡಿಬಾಗ ತಯಾರಿಸಲೇ  ಇಲ್ಲ.  ನೇರವಾಗಿ  ಮೂರನೆಯ  ಕ್ಲಾಸಿಗೆ  ಸೇರಿದ  ಸನ್ನಿವೇಶ. :-(   ನಮ್ಮಲ್ಲಿ   ಇಂದಿಗೂ  ಇದರ  ತಯಾರಿಕೆ   ಪ್ರಸ್ತುತ.  


ಮತ್ತೊಂದು  ಅನಿವಾರ್ಯ  ಬಿಡಿಬಾಗ – ಗೇರುಗಳು.  ಎಂತಹ  ಚಡಾವಿನಲ್ಲೂ  ಚಾಲಕ  ಇಳಿದು ತಳ್ಳುವ      ಸನ್ನಿವೇಶವೇ   ಬರುವುದಿಲ್ಲ.  ಕೂತವರಿಗೂ       ಅವನಿಗೆ  ಹಿಂಸೆ  ಕೊಡುತ್ತೇವೆ  ಅನ್ನುವ  ಬಾವನೆ  ಉಂಟಾಗುವುದಿಲ್ಲ.   ಮೇಲೆ ಕಾಣಿಸಿದ  ಎರಡೂ  ಬಿಡಿಬಾಗಗಳನ್ನು  ಚಿತ್ರದಲ್ಲಿರುವಂತೆ  ಜತೆಯಾಗಿ  ಅಥವಾ  ಪ್ರತ್ಯೇಕವಾಗಿಯೂ   ಅಳವಡಿಸಲು ಸಾದ್ಯ. 


ಅಮೇರಿಕದ     ವಾಶಿಂಗ್ಟನ್ ಪಟ್ಟಣದಲ್ಲಿ  ಅದುನಿಕ  ಸೈಕಲು ರಿಕ್ಷಗಳಿವೆ.    63   ಕಿಲೊ  ತೂಕದ  ಐದೂವರೆ  ಅಡಿ ಎತ್ತರದ ಕುಳ್ಳಿ  ಸಮಾಜಶಾಸ್ತ್ರ  ವಿದ್ಯಾರ್ಥಿನಿ 275   ಕಿಲೊ ಒಟ್ಟು   ತೂಕದ  ಮೂವರು ದಾಂಡಿಗರನ್ನು ಕೂರಿಸಿ    ಅವಳ  ರಿಕ್ಷದಲ್ಲಿ ಏರುರಸ್ತೆಯಲ್ಲಿ  ಕರಕೊಂಡು  ಹೋಗುವಾಗ ಸಾಕಷ್ಟು  ಕುಹಕ  ಮಾತು ಕೇಳಿದ್ದರೂ  ಕೊನೆಗೆ ಇಳಿಯುವಾಗ  ದಾರಾಳ  ಬಕ್ಷೀಸು ಕೊಟ್ಟ ಕಥೆ  ಹೇಳುತ್ತಾರೆ       ಸಾರಾ ರಾಬರ್ಟ್ಸ್.    ನಾನು ಅವರನ್ನು   ಕರಕೊಂಡು ಹೋಗಬಲ್ಲೆ  ಎನ್ನುವ ವಿಚಾರ ಜನ   ಆಶ್ಚರ್ಯ ಪಡುತ್ತಾರೆ  ಎನ್ನುತ್ತಾಳೆ    ಸಾರಾ.    ಕ್ಷಮಿಸಿ.   ಮೇಲೆ ಕಾಣಿಸುವುದು ಆಸ್ಟಿನ್ ಪಟ್ಟಣದ  ಸೈಕಲು ರಿಕ್ಷಾದ ಸಂದರ್ಬಿಕ ಚಿತ್ರ.  ನಾ  ಬರೆದ  ಪತ್ರಕ್ಕೆ  ಮೇಲಿನ   ಲೇಖನ  ಬರೆದ ಬಾರತೀಯಳಾದ  ಸುಜಾತ  ಉತ್ತರಿಸಲೇ  ಇಲ್ಲ. :-(   ಆದರೆ  ಅವರ  ಇಂಗ್ಲೀಷ್ ಲೇಖನ  ಕೊಂಡಿ ಕ್ಲಿಕ್ಕಿಸಿ  ಮೂಲದಲ್ಲಿ ಓದಬಹುದು.  


ನೇಮಿಚಂದ್ರ  ಅವರನ್ನು ಹೊತ್ತ ಸೈಕಲು  ರಿಕ್ಷಾದ   ಚಾಲಕ ಮುರುಳಿ ನಾಗ್,  ಕರಗಪುರದಲ್ಲಿ  ಮೇಲು ಸೇತುವೆ ಬಂದಾಗ  ಇಳಿದು ತಳ್ಳಬೇಕಾಯಿತು.  ಕಾರಣ ಇಷ್ಟೇ.  ನಮ್ಮ  ಸೈಕಲು ರಿಕ್ಷ ಕಳೆದ ನೂರೂ  ಚಿಲ್ಲರೆ    ವರ್ಷಗಳಲ್ಲಿ ಯಾವ  ಮಾರ್ಪಾಡೂ  ಕಾಣಲಿಲ್ಲ.   ಅಮೇರಿಕ  ತಲಪಿದ  ತಕ್ಷಣ  ತಮ್ಮನ್ನು ಕರಗಪುರ    ಪಟ್ಟಣಕ್ಕೆ  ಕರೆದೊಯ್ಯುತ್ತಿದ್ದ  ಮುರುಳಿ ನಾಗನನ್ನು ಮರೆತು ಬಿಡುತ್ತಾರೆ  ನಮ್ಮ ಇಂಜಿನಿಯರುಗಳು.    ಮೇಲಾಗಿ  ಈ  ಸರಳ  ಸಾಮಾನು  ವಿನ್ಯಾಸಕ್ಕೆ  ಇಂಜಿನಿಯರುಗಳ  ಅವಶ್ಯಕಥೆ  ಇಲ್ಲ.  ತಮ್ಮದೇನಿದ್ದರೂ  ಹೆಚ್ಚು   ಕ್ಲಿಷ್ಟವಾದ  ಸಮಸ್ಯೆಗಳ ಮೇಲೆ  ಗಮನ.   ಎಮ್ ಡಿ  ಆದ  ಡಾಕ್ಟ್ರು  ಆಸ್ಪತ್ರೆಯಲ್ಲಿ   ರೋಗಿಗೆ  ಬಾಂಡೇಜು  ಹಾಕ್ತಾರಾ  ?? ಸೂಜಿ  ಚುಚ್ತಾರಾ  ?. ;)    


ಸದಾಸಂಗಳಲ್ಲಿ     ಸಹಾ  ಹಿಂದೆ  ಡಿಫೆರೆನ್ಶಿಯಲ್    ಅಳವಡಿಸಿಲ್ಲ.     ಅದುದರಿಂದ   ನೇರವಾಗಿ ಮುನ್ನುಗ್ಗುತ್ತದೆ.    ಆದರೆ  ಅದರ  ಓಡಾಟವೆಲ್ಲ  ಮಣ್ಣು  ಮರಳಿನಲ್ಲಿ  ಕೆಸರಿನಲ್ಲಿ    ಹೊರತು  ಗಟ್ಟಿ ನೆಲದಲ್ಲಿ  ಅಲ್ಲವೇ   ಅಲ್ಲ.   ಅಪರೂಪವಾಗಿ   ಡಾಮರು ರಸ್ತೆಯಂತಹ   ಗಟ್ಟಿ  ನೆಲದಲ್ಲಾದರೆ ಚಿತ್ರದಲ್ಲಿ ಕಾಣುವಂತೆ   ಅದರ  ಒಂದು ಚಕ್ರವನ್ನು  ನೆಲದಿಂದ  ಮೇಲೆತ್ತುವ   ಕಸರತ್ತು  ಅಬ್ಯಾಸ  ಮಾಡಿಕೊಂಡಿರುತ್ತೇವೆ.    ಆದರೆ  ಪಟ್ಟಣ್ದದೊಳಗೆ ಓಡಾಡುವ    ಈ   ಸೈಕಲು  ರಿಕ್ಷದಲ್ಲಿ  ಅದಕ್ಕೆ ಅವಕಾಶ  ಇಲ್ಲವಲ್ಲಾ . :-(ಪಾಕಿಸ್ಥಾನದ  ಗಡಿಯಲ್ಲಿರುವ  ಫಜಿಲ್ಕಾ  ಪಟ್ಟಣದ  ಮುಖ್ಯ  ರಸ್ತೆಯಲ್ಲಿ   ಹಗಲಿಡೀ    ವಾಹನ  ಸಂಚಾರ  ಇಲ್ಲ.  ಸೈಕಲು ರಿಕ್ಷಾ    ಒಕೆ.  ಅಲ್ಲಿ  ಹಲವು  ರಿಕ್ಷಾ  ನಿಲ್ದಾಣಗಳಿವೆ.  ಅಲ್ಲಿನ   ಚಾಲಕರಲ್ಲಿ    ಮೊಬೈಲ್  ಹಾಗೂ  ಗುರುತು ಚೀಟಿ  ಉಂಟು.  ರಿಕ್ಷಾ  ನಿಲ್ದಾಣಕ್ಕೆ  ಪೋನಿಸಿದರೆ  ಸಾಕು  ಗಾಡಿ  ಬರುತ್ತದೆ  ಮನೆ ಬಾಗಿಲಿಗೆ. :-)  ಸೈಕಲು  ರಿಕ್ಷಾ ವಿಚಾರ    ಬಾರತದ  ಮಟ್ಟಿಗೆ  ಗಣನೀಯ  ಕೆಲಸವಾದುದು  ಫಜಿಲ್ಕಾ, ವಾರಣಾಶಿ  ಮತ್ತು  ಅಗರ್ತಾಲದಲ್ಲಿ  ಅನ್ನಬಹುದು.  ಆಲ್ಲೂ  ಚಾಲಕರಿಗೆ  ಸರಳ ರೀತಿಯಲ್ಲಿ  ಕೈಗೆಟಕುವ  ಶರ್ತಗಳಲ್ಲಿ   ರಿಕ್ಷಾ  ಪೊರೈಕೆಯಾಯಿತು ಅಂದರೆ  ಆರ್ಥಿಕ  ಬದಿಗೆ  ಗಮನ  ಹರಿಸಲಾಗಿದೆ  ವಿನಹ  ತಾಂತ್ರಿಕತೆಗೆ  ಅಲ್ಲ. 

ತಾಂತ್ರಿಕತೆ  ಮುಂದುವರಿಯದಿರಲು    ಮುಖ್ಯ  ಕಾರಣ    ಅವುಗಳ  ಚಲಾವಣೆ  ಮಾಡುವ  ಹೆಚ್ಚಿನ  ವ್ಯಕ್ತಿಗಳು  ಅದರ  ಯಜಮಾನರಲ್ಲ.  ಬೆಳಗ್ಗೆ  ಈಸ್ಕೊಂಡು  ಬಂದು ಸಂಜೆ  ಇಪ್ಪತ್ತು   ಮೂವತ್ತು   ರೂಪಾಯಿ  ಬಾಡಿಗೆ  ಕೊಡುವ  ವಲಸೆ ಕೆಲಸಗಾರರು.  ಹೊಟ್ಟೆಪಾಡಿಗಾಗಿ   ಬಹಳ  ದೂರದ  ಹಳ್ಳಿಯಿಂದ ಬಂದ  ಇವರಿಗೆ   ಪಟ್ಟಣಗಳಲ್ಲಿ  ಅಗತ್ಯವಿರುವ   ಬೇರೇನೂ  ಕೌಶಲ್ಯ  ಇರುವುದಿಲ್ಲ.  ಆದುದರಿಂದ  ಅವರು  ಮೊರೆಹೋಗುವ  ಕೆಲಸ – ರಿಕ್ಷಾ  ಚಾಲನೆ.  ಕೊಳ್ಳಲು  ಬಂಡವಾಳವೂ  ಬೇಡ.  ಮುಖ್ಯವಾಗಿ  ಬೇಕಾದ್ದು  ತುಳಿಯುವ  ತಾಕತ್ತು.  ಯಜಮಾನರಿಗೂ  ಪುನಹ  ಖರ್ಚು ಮಾಡಿ  ಅದನ್ನು  ಉನ್ನತ ಸ್ತಿತಿಗೇರಿಸುವುದು   ಅನಿವಾರ್ಯ  ಅನಿಸುವುದಿಲ್ಲ.  ಹಾಗೆ  ನಮ್ಮ  ದೇಶದಲ್ಲಿ   ಸ್ವಂತ   ತ್ರಿ ಚಕ್ರ  ಸೈಕಲು  ಉಪಯೋಗಿಸುವವರ  ಸಂಖ್ಯೆ  ನಗಣ್ಯ. ಇದನ್ನು  ಉತ್ತಮಗೊಳಿಸುವ  ಬದಲಿಗೆ ರಾಜಕಾರಣಿಗಳೂ  ಅಧಿಕಾರಿಗಳೂ  ವಾಹನ ಸಂಚಾರ ಸುಗಮಗೊಳಿಸುವ  ನೆಪವೊಡ್ಡಿ    ಸೈಕಲು ರಿಕ್ಷಾಗಳನ್ನು      ರಸ್ತೆಯಿಂದಲೇ    ಓಡಿಸಲು ಪ್ರಯತ್ನಿಸುವುದು  ಖೇದಕರ. :@


ಮೇಲೆ  ಕಾಣಿಸುವ  ಕರಪತ್ರ   ಸುಮಾರು ನೂರು  ವರ್ಷ  ಹಿಂದಿನದು.    ಏರುತಗ್ಗುಗಳಿರುವ  ನನ್ನ  ಊರಲ್ಲಿ  ಸೈಕಲು ರಿಕ್ಷಾಕ್ಕೆ  ಅವಕಾಶವಿಲ್ಲ.  ಅದುದರಿಂದ  ನಾನು   ಆಸಕ್ತಿ  ಇದ್ದರೂ   ವೈಯುಕ್ತಿಕವಾಗಿ    ಇದರ  ಬಗೆಗೆ  ಕೆಲಸ ಮಾಡುವಂತಿಲ್ಲ.    ಆರೋಗ್ಯ  ಸಮಸ್ಯೆಯೂ  ಇದೆಯನ್ನಿ. :-(  

ಈ  ಎರಡು ತಾಂತ್ರಿಕ  ಬದಲಾವಣೆಗೆ  ಹೆಚ್ಚೆಂದರೆ  ನಾಲ್ಕು ಐದು ಸಾವಿರ ರೂಪಾಯಿ  ಖರ್ಚಾಗಬಹುದು.  ಹದಿನೈದರ  ಬದಲು ಇಪ್ಪತ್ತು ಸಾವಿರ  ಅನ್ನಿ.    ಅಂತಹ  ಬದಲಾವಣೆಯಾದಲ್ಲಿ  ಮೇಲು ಸೇತುವೆ ಬಂದಾಗ    ಮುದುಕ  ಮುರುಳಿ ನಾಗ್  ಇಳಿದು  ತಳ್ಳಬೇಕಾಗಿಲ್ಲ. :-)   ಪಟ್ಟಣದ  ಇಕ್ಕಟ್ಟಿನ   ತಿರುವುಗಳಲ್ಲೂ  ಕೂತೇ  ಸುದಾರಿಸಬಹುದು.  ಉಳಿದ  ವಾಹನದವರಿಗೆ ತಡೆ ಉಂಟು ಮಾಡುವುದಿಲ್ಲ.    ಆಗ  ಪ್ರಯಾಣಿಕರಿಗೆ  ಮುಜುಗರವಾಗುವುದೂ  ಇಲ್ಲ.   ಶೋಷಣೆ   ಮಾಡಿದ  ಬಾವನೆಯೂ  ಉಂಟಾಗುವುದಿಲ್ಲ.    ಆರಾಮದಾಯಕ   ಸವಾರಿಯಿಂದಾಗಿ    ಹೆಚ್ಚಿದ    ವ್ಯವಹಾರ  ವರ್ಷದೊಳಗೆ ಈ ಐದು ಸಾವಿರ  ತುಂಬಿಕೊಡಬಹುದು. 


ಮೂರು  ಚಕ್ರದ    ಸೈಕಲ್    ಬರೇ  ಪ್ರಾಯಾಣಿಕರ  ಓಡಾಟಕ್ಕೆ    ಸಿಮಿತವಾಗಬೇಕಾಗಿಲ್ಲ.   ಆಸುಪಾಸಿನಲ್ಲಿ  ಸರಕು ಸಾಗಾಟಕ್ಕೂ  ದಾರಾಳವಾಗಿ  ಉಪಯೋಗಿಸಬಹುದು.  ಹಲವು ಮುಂದುವರಿದ ದೇಶಗಳಲ್ಲಿ ಯಶಸ್ವಿಯಾಗಿ  ಉಪಯೋಗವಾಗುತ್ತಿದೆ.  ದುಬಾರಿ  ಅಮದು ಇಂದನವ  ದಹಿಸುವ   ಬದಲಿಗೆ    ಪರಿಸರ ಸ್ನೇಹಿಯಾದ  ಈ ವಾಹನವ    ಉಪಯೋಗಿಸುವ  ಮನಸ್ಸು ಮಾಡ ಬೇಕಷ್ಟೇ. :-)  


2 comments:

ಅಶೋಕವರ್ಧನ said...

ಭಾರತೀಯ ಸೈಕಲ್ ಕಂಪೆನಿಗಳೂ ಇಂದು ಸಂಶೋಧನಾ/ ಅಭಿವೃದ್ಧಿ ವಿಭಾಗವನ್ನು ಮುಚ್ಚಿ ಉತ್ಪಾದನಾ ಸರಣಿ ತುಂಡಾಗದ ಎಚ್ಚರ ಮಾತ್ರ ವಹಿಸಿರುವುದಕ್ಕೆ ಈ ಸಮಸ್ಯೆ ಬಿಗಡಾಯಿಸಿದೆ. ಉದಾಹರಣೆಗೆ ನಾವು ಕೊಂಡ ಜಂಟಿ ಸೈಕಲ್ ಅಥವಾ ಟ್ಯಾಂಡಮ್ ಸೈಕಲ್ ಅವಸ್ಥೆಯೇ ಕಾಣುತ್ತಲ್ಲಾ. ಬಿಎಸ್ಸೆ ಕಂಪೆನಿಗೆ ಬರೆದ ಪತ್ರಕ್ಕೆ ಒಂದು ಸಾಲಿನ ಉತ್ತರವೂ ನನಗೆ ಬಂದಿಲ್ಲ. ನಾವು ತಗ್ಗು ಚಕ್ರದ ವಿಶೇಷ ಯಾವ ಗೇರೂ ಇಲ್ಲದ ಜಂಟಿ ಸೈಕಲ್ ಕೊಂಡ ತಪ್ಪಿಗೆ ಬಿಡುವಿರುವ ಪ್ರತಿ ಸಂಜೆ ಮಂಗಳೂರಿನ ಪ್ರತಿ ಏರಿನ ಬುಡದಲ್ಲಿ ದಮ್ಮು ಕಟ್ಟಿ ಇಳಿದು ನೂಕುತ್ತಿರುತ್ತೇವೆ. ನಮಗೆ ವ್ಯಾಯಾಮ ಸಿಗುತ್ತದೆ ಎಂಬ ಒಂದೇ ಕಾರಣ, ಧರ್ಮಕ್ಕೆ ಸಿಗುವ ಅಸಂಖ್ಯ ಪ್ರೇಕ್ಷಕರಿಗೆ ಹೀಗೂ ಮಾಡಬಹುದು ಎಂಬ ಒಂದೇ ಪ್ರೇರಣೆಗೆ ಈ ಹಿಂಸೆ ಮುಂದುವರಿಸಿಯೇ ಇದ್ದೇವೆ. ನಿನ್ನಂತೆ ವಿಶ್ವಯಾನವಲ್ಲದಿದ್ದರೂ ಕನಿಷ್ಠ ನಮ್ಮ ಅಗತ್ಯದ ಪುತ್ತೂರು, ಉಡುಪಿಯವರೆಗೆ ಆರಾಮವಾಗಿ ಹೋಗಿಬರುವ ಕನಸು ವಾಸ್ತವವಾಗುವ ಅಂದಾಜೇ ಕಾಣಲಿಲ್ಲ :-(
ಅಶೋಕವರ್ಧನ

Govinda Nelyaru said...

ಸೈಕಲು ತಯಾರಿಕೆಯಲ್ಲಿ ನಾವು ಬಹಳ ಹಿಂದಿದ್ದೇವೆ ಅಂತ ನಾನು ಇಪ್ಪತೈದು ವರ್ಷಗಳಿಂದ ಕಿವಿಗೊಡುವವರಿಗೆಲ್ಲ ಕೊರೆಯುತ್ತಾ ಬಂದಿದ್ದೇನೆ. ಅಂದು ಅಂತರಾಷ್ಟ್ರೀಯ ಮಾರುಕಟ್ಟೆ ಟೈವಾನ್ ವಶದಲ್ಲಿತ್ತು. ಇಂದು ಟೈವಾನ್ / ಚೀನಾ ವಶದಲ್ಲಿದೆ. ಹೌದು ನೀವು ಹೇಳುವ ಹಾಗೆ “ಭಾರತೀಯ ಸೈಕಲ್ ಕಂಪೆನಿಗಳೂ ಇಂದು ಸಂಶೋಧನಾ/ ಅಭಿವೃದ್ಧಿ ವಿಭಾಗವನ್ನು ಮುಚ್ಚಿ ಉತ್ಪಾದನಾ ಸರಣಿ ತುಂಡಾಗದ ಎಚ್ಚರ ಮಾತ್ರ ವಹಿಸಿರುವುದಕ್ಕೆ ಈ ಸಮಸ್ಯೆ ಬಿಗಡಾಯಿಸಿದೆ. “

ಸ್ಪರ್ಧಾತ್ಮಕ ಮನೋಬಾವವೇ ಇಲ್ಲದಿರುವ ನಮ್ಮ ತಯಾರಕರು ಉತ್ತಮ ಸೈಕಲು ತಯಾರಿಸುವ ಬದಲು ಸೋನಿಯಾ ಸರಕಾರದ ಮೇಲೆ ಪ್ರಭಾವ ಬೀರಿ ಹೊರಗಿನಿಂದ ಬರುವ ಸೈಕಲು / ಸೈಕಲು ಬಿಡಿ ಬಾಗಕ್ಕೆ ಹೆಚ್ಚು ಅಮದು ತೇರಿಗೆ ವಿದಿಸುವುದರಲ್ಲಿ ಸಫಲರಾಗಿದ್ದಾರೆ. ಇತರ ಕೈಗಾರಿಕೆಗಳು ಜಾಗತಿಕ ಮಾರುಕಟ್ಟೆಗೆ ತಯಾರಾದರೂ ಸೈಕಲು ಕೈಗಾರಿಕೆ ಎರಡೇ ವರ್ಷದಲ್ಲಿ ಗುಜರಿಯಾಗುವ ಯೆಡ್ಡಿ ಸೈಕಲು ತಯಾರಿಕೆಯಲ್ಲಿಯೇ ಗಮನಹರಿಸಿವೆ. :-(