Wednesday, December 01, 2010

ಈ ರಿಕಂಬಂಟ್ ಸೈಕಲುಗಳೆಂದರೆ

ಮೊದಲೆಲ್ಲ ಒಂದೇ ಸೈಕಲ್ ಮನೆಮಂದಿಗೆಲ್ಲ ಅನ್ನುವಂತಿತ್ತು. ಈ ರಿಕಂಬಂಟ್ ಸೈಕಲುಗಳಲ್ಲಿ ಅದಕ್ಕೆ ಆಸ್ಪದ ಕಡಿಮೆ.
ಈ ರಿಕಂಬಂಟ್ ಸೈಕಲುಗಳು ಟ್ರೈಕುಗಳು ಹೆಚ್ಚಾಗಿ ಬಳಕೆದಾರನ ಅಳತೆಗೆ ಸರಿಯಾಗಿ ರೂಪಿಸಲ್ಪಟ್ಟಿರುತ್ತದೆ. ಎಲ್ಲರಿಗೂ ಸೂಕ್ತ ಎನ್ನುವ ಒಂದೇ ಅಳತೆಯಲ್ಲ. ದರ್ಜಿ ಅಳತೆ ತೆಗೆದು ಬಟ್ಟೆ ಕತ್ತರಿಸಿ ಹೊಲಿಯುವಂತೆ ನನ್ನ ಟ್ರೈಕ್ ನನ್ನ ಸೊಂಟದ ಕೆಳಬಾಗದ ಉದ್ದಕ್ಕೆ [ x-seam] ಅನುಸಾರವಾಗಿ ನನ್ನಿಂದ ಜೋಡಿಸಲ್ಪಟ್ಟಿದೆ. ವ್ಯಾಪಾರಿಗಳಿಂದ ಕೊಳ್ಳುವುದಾದರೆ ಈ ಜೋಡಣೆಗಳನ್ನೆಲ್ಲ ಅವರೇ ಮಾಡಿಕೊಡುತ್ತಾರೆ. ನಾನು ಕಾರ್ಖಾನೆಯಿಂದ ನೇರವಾಗಿ ತರಿಸಿದ ಕಾರಣ ನಾನೇ ಮಾಡಬೇಕಾಯಿತು.


ನನ್ನ ಟ್ರೈಕ್ ಬರುವಾಗ ಉಳಿದ ಬಿಡಿಬಾಗಗಳೊಂದಿಗೆ ಉದ್ದವಾದ ಎರಡು ತುಂಡು ಚೈನ್ ಇಟ್ಟಿದ್ದರು. ನಾನು ಮೊದಲಿಗೆ ಟೈರು ಇತ್ಯಾದಿ ಬಾಗಗಳ ಸೇರಿಸಿ ಅದಕ್ಕೊಂಡು ರೂಪ ಕೊಡುತ್ತೇನೆ. ಅನಂತರ ಮುಂದಿನ ಚೈನ್ ಕೂರುವ ಬಾಗವನ್ನು ಜೋಡಿಸಿ ಟ್ರೈಕಿನ ಸೀಟಿನಲ್ಲಿ ಕಾಲು ಚಾಚಿ ಕುಳಿತು ನನಗೆ ಅಗತ್ಯವಿರುವ ಉದ್ದಕ್ಕೆ ಸರಿಯಾಗಿ ಅದನ್ನು ಬಿಗಿಮಾಡಿದೆ. ಅನಂತರ ಚೈನ್ ಆ ಅಳತೆಗೆ ಸರಿಯಾಗಿ ತುಂಡರಿಸಿ ಜೋಡಿಸಿದೆ.

ಹಾಗೆ ಇದರಲ್ಲಿ ಸವಾರನ ಎತ್ತರ ಮುಖ್ಯವಲ್ಲ, ಸೊಂಟದಿಂದ ಕೆಳಗಿರುವ ನಿರ್ದಿಷ್ಟ ಅಳತೆ ಸರಿಯಾಗಿದ್ದರೆ ಅದನ್ನು ಸವಾರಿ ಮಾಡಬಹುದು. ಹಾಗಾಗಿ ನನ್ನಿಂದ ಉದ್ದವಿರುವ ಅನಿಲನಿಗೆ ಒಂದು ಅಂಗಳದಲ್ಲಿ ಸುತ್ತು ಬರಬಹುದು ಹೊರತು ದೀರ್ಘ ಸವಾರಿ ಕಷ್ಟ ಸಾದ್ಯ. ಸಣ್ಣ ಪುಟ್ಟ ವ್ಯತ್ಯಾಸವಾಗಿದ್ದರೆ ಸೀಟಿನ ಹಿಂಬದಿ ಮಾಲುವಿಕೆಯಲ್ಲಿ ಹೆಚ್ಚು ಕಡಿಮೆ ಮಾಡಿ ಸರಿಪಡಿಸಲೂ ಬಹುದು.

ಕೆಲವು ರಿಕಂಬಂಟ್ ಸೈಕಲುಗಳಲ್ಲಿ ಆಸನವನ್ನು ಮುಂದೆ ಹಿಂದೆ ಮಾಡುವ ಅವಕಾಶ ಇರುತ್ತದೆ. ಅದರಲ್ಲಿ ಸ್ವಲ್ಪ ಗಾತ್ರ ವ್ಯತ್ಯಾಸ ಇದ್ದರೂ ಸವಾರಿ ಮಾಡಬಹುದು. ಆದರೆ ಗಾತ್ರ ವ್ಯತ್ಯಾಸ ಎಂದರೆ ಸಂಕೋಲೆ ಅಲ್ಲ ಚೈನ್ ಉದ್ದ ವ್ಯತ್ಯಾಸ ಮಾಡಬೇಕಾದರೆ ಅದು ಕಷ್ಟ ಸಾದ್ಯ.


ಅದುದರಿಂದ ಒಮ್ಮೆ ಕೂರಬಹುದೋ ಒಂದು ಸುತ್ತು ಚಲಾಯಿಸಬಹುದೋ ಎಂದೆಲ್ಲ ಕೇಳಿದವರು ಹೆಚ್ಚಿನವರು ನಿರಾಶೆ ಹೊಂದುತ್ತಾರೆ.

Tuesday, November 02, 2010

ಸೈಕಲ್ ಅಂಗಡಿಯಲ್ಲಿ

ಕಳೆದ  ವಾರ  ಸುನಿಲನ  ಜತೆ   ಸೈಕಲ್   ಅಂಗಡಿಗೆ  ಹೋಗಿದ್ದೆ. ನಿಜವಾಗಿ   ನಮ್ಮ  ಮುಂದೆ ಎರಡು  ಸಾದ್ಯತೆಗಳಿದ್ದವು. ಮೊದಲನೆಯದು   ಅವನ  ಹಳೆಯ ಸೈಕಲಿಗೆ  ಗೇರು ಅಳವಡಿಸುವುದು.  ಸುಮಾರು ಎಂಟು ನೂರು ರೂಪಾಯಿ  ಆಗುತ್ತದೆ  ಆದರೆ  ನಾವು  ಅದು  ಸರಿಯಾಗಿ ಕೆಲಸ ಮಾಡುವ  ಬಗೆಗೆ   ಗಾರಂಟಿ ಕೊಡುವುದಿಲ್ಲ  ಎಂದು    ಅಂಗಡಿಯವರು ಹೇಳಿದ ಕಾರಣ   ಆರು ಗೇರುಗಳ  ಒಂದು ಹೊಸ    ಹೀರೊ   ಸೈಕಲ್  ಕೊಂಡೆವು.  ಅನಂತರ  ನಾನು ಹಲವು  ಸೈಕಲ್ ಅಂಗಡಿಗಳಲ್ಲಿ ವಿಚಾರಿಸಲು  ಎಲ್ಲರೂ   ಅನಂತರ ಗೇರು ಅಳವಡಿಕೆ  ಬಗೆಗೆ    ಗಾರಂಟಿ ಇಲ್ಲವೆನ್ನುವ  ಮಾತು ಹೇಳುವುದನ್ನು ಕೇಳಿ ನನಗೆ  ನಿಜಕ್ಕೂ  ಆಶ್ಚರ್ಯ  ಉಂಟಾಗುತ್ತದೆ.    

ಇಪ್ಪತೈದು ವರ್ಷ ಹಿಂದೆ  ನಾನು ಮಂಗಳೂರಿನಲ್ಲಿ ಹೊಸ  ಸೈಕಲ್  ಕೊಂಡುಕೊಂಡಿದ್ದೆ.   ಆಗ  ಗೇರು ಅಳವಡಿಸಿದ  ಸೈಕಲ್  ಹೆಚ್ಚು  ಜನಪ್ರಿಯವಾಗಿರಲಿಲ್ಲ  ಮತ್ತು  ಅಂಗಡಿಗಳಲ್ಲಿ  ಮೊದಲೇ   ಗೇರು ಅಳವಡಿಸಿದ  ಸೈಕಲು  ಮಾರಾಟಕ್ಕೆ  ಲಭ್ಯವಿರಲಿಲ್ಲ.      ಸೈಕಲಿಗೆ   ಅಳವಡಿಸಲು   ಬೆಂಗಳೂರಿನ  ಅಂಗಡಿಯೊಂದರಿಂದ  ಇನ್ನೂರು ರೂಪಾಯಿ  ಕೊಟ್ಟು  ಬಿಡಿಬಾಗಗಳ  ತಂದು ನಾನು ಮನೆಯಲ್ಲಿಯೇ  ಜೋಡಿಸಿದ್ದೆ.  ಗೇರುಗಳ    alignment  ಸ್ವಲ್ಪ  ನಾಜೂಕು  ಕೆಲಸವಾದರೂ  ಸಾದ್ಯವಿಲ್ಲವೆನ್ನುವಷ್ಟು  ಕಷ್ಟಕರವಲ್ಲ.    ಐದು ಗೇರುಗಳ  ಅ ಸೈಕಲಿನಲ್ಲಿ  ದೆಹಲಿ  ವರೆಗೆ  ಹೋಗಿದ್ದೆ.

ನಮ್ಮ  ಸೈಕಲು ಅಂಗಡಿಯವರ  ಕೆಲಸದ ಗುಣಮಟ್ಟ ನೋಡುವಾಗ   ಕೆಲವೊಮ್ಮೆ   ನಿಜಕ್ಕೂ  ಬೇಸರವಾಗುತ್ತದೆ.  ನನಗೆ   ಸೊಂಟ  ಸಮಸ್ಯೆಯಿಂದಾಗಿ   ಬಗ್ಗಲು ಕಷ್ಟವಾಗುವುದರಿಂದ    ತರಿಕೆರೆಯಲ್ಲಿ   ಚಕ್ರ  ಉಜ್ಜುವ   ಸಮಸ್ಯೆಗೆ ಕಾರಣ  ಗುರುತಿಸಲು  ಕಷ್ಟವಾಯಿತು.  ಆಗ   ಸುತ್ತುಮುತ್ತಲು ಸೇರಿದ ಜನ  ಸಹಾಯ ಮಾಡುವ  ಬದಲು ತಲೆ ತಿನ್ನುತ್ತಾರೆ.       ಗಡ್ಡದಾರಿ  ಸೈಕಲ್ ಅಂಗಡಿಯವ ಸುತ್ತಿಗೆ ಸ್ಪಾನರ್  ಹಿಡಿದುಕೊಂಡು   ಬಂದು  ಅಕ್ಸಲ್  ಬೋಲ್ಟ್  ಸಡಿಲ ಮಾಡಿ ಗಟ್ಟಿ ಮಾಡಿ  ದೊಡ್ಡ  ಮೊತ್ತಕ್ಕೇ   ಕೈಯೊಡ್ಡಿದ.   ಅದರೆ  ಸಮಸ್ಯೆ    ಮಾತ್ರ   ಹಾಗೆ   ಉಳಕೊಂಡಿತ್ತು.   ಸಮಸ್ಯೆ ಪರಿಹಾರಕ್ಕೆ  ನೈಜ ಪ್ರಯತ್ನ  ಮಾಡುತ್ತಿದ್ದರೆ  -  ಬಗ್ಗಿ    ನೋಡಿದರೆ   ಟೈರ್  ಉಜ್ಜುವುದು  ಸಾಮಾನು ಹೊತ್ತಿರುವ   ಕಾರಿಯರಿನ  ಬದಿಯೆಂದು  ಅವನಿಗೆ    ಅರ್ಥವಾಗುತಿತ್ತು.   


ಅಂತೂ  ನಮ್ಮ  ಸೈಕಲ್  ರಿಪೇರಿಯವರ  ಕೆಲಸದ ಗುಣಮಟ್ಟ ನೋಡುವಾಗ  ಈ  ಚಿತ್ರ  ನೆನಪಾಗುತ್ತದೆ.   ಪರದೇಶಗಳಲ್ಲಿ  ಸೈಕಲಂಗಡಿಯವರು, ರಿಪೇರಿಯವರು  ಸ್ವತಹ  ಸೈಕಲ್ ಬಳಸುತ್ತಾರೆ.  ನಮ್ಮವರಿಗೆ  ನಿತ್ಯ   ಬಳಸಲು  ಕೀಳರಿಮೆ  ತಡೆಯೊಡ್ಡುತ್ತದೆ.  ಅವರು  ವ್ಯಾಪಾರ ಮಾಡುವುದು ಮಾತ್ರ.

Wednesday, October 27, 2010

ನಾಯಿ ಹೇಲು ವಿಲೆವಾರಿಗೆ ಜಿಪಿಎಸ್ ಬಳಕೆ

ಇತ್ತೀಚಿಗೆ ಹಲವು ವಾರಗಳಿಂದ ಜಿಪಿಎಸ್ ಸಂಬಂದಿಸಿದ ವಿಚಾರಗಳೇ ನನ್ನ ತಲೆಯಲ್ಲಿ ಸುಳಿದಾಡುತ್ತಿದೆ. ಜಿಪಿಎಸ್ ಮಾಪಿನಿಂದ ಸಮಾಜಕ್ಕೆ ಹಲವು ಪ್ರಯೋಜನಗಳಿವೆ., ನಮ್ಮ ದೈನಂದಿನ ಬಳಕೆಗೆ ಮಾತ್ರವಲ್ಲ, ಪೋಲೀಸ್, ಅಗ್ನಿ ಶಾಮಕ ದಳ ಮತ್ತು ತುರ್ತು ವೈದ್ಯಕೀಯ ನೆರವು ದಾವಿಸಲು ಜಿಪಿಎಸ್ ನಕ್ಷೆಗಳು ಸಹಾಯಕವಾಗಬಹುದು ಎನ್ನುವ ವಿಚಾರ ಮನದಲ್ಲಿ ಸುಳಿದಾಡುತಿತ್ತು.     ಆದರೆ -

ಫ್ರಾನ್ಸಿನಲ್ಲಿ ಜಿಪಿಎಸ್ ಬಳಕೆಯಲ್ಲಿ ಹೊಸತನ ತೋರಿದ್ದಾರೆ. ಊರಳಗಿನ ರಸ್ತೆಗಳಿಗೆ ನಾಯಿ ಮಲ ಕೆಟ್ಟ ಹೆಸರು ತರುತಿತ್ತು. ಮುಂದಿನ ೨೦೧೨ರ ಒಲಂಪಿಕ್ ನಡೆಸುವ ಅವಕಾಶ ತಪ್ಪಿದ್ದು ಸಹಾ ನಾಯಿ ಹೇಲಿನಿಂದಾಗಿ ಎನ್ನುವ ಗುಮಾನಿ ದಟ್ಟವಾಗಿದೆ. ನಮ್ಮ ಎರ್ ಬಸ್ ವಿಮಾನ ಗೊತ್ತಲ್ಲ- ಅದು ಜೋಡಣೆಯಾಗುವ ಟೌಲೋಸ್ ಪಟ್ಟಣದಲ್ಲಿ ಇದು ಪ್ರಥಮವಾಗಿ ಜಾರಿಗೆ ಬಂದಿದೆ. ಪೊಲೀಸ್ ಹಾಗೂ ಪಟ್ಟಣದ ಅಧಿಕಾರಿಗಳಿಗೆ ಕೆಮರ ಮತ್ತು ಜಿಪಿಎಸ್ ಕೊಡಲ್ಪಟ್ಟಿತು. ಅವರು ನಾಯಿ ಮಲ ಕಂಡಾಗ ತುರ್ತಾಗಿ ಪೋಟೊ ಕ್ಲಿಕ್ಕಿಸಿ ಪೌರ ಕಾರ್ಮಿಕರಿಗೆ ರವಾನಿಸಬೇಕು. ಪೌರ ಕಾರ್ಮಿಕರು ತಕ್ಷಣ ವಾಹನದಲ್ಲಿ ಬಂದು ಅದನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ. ಈಗ ಪರೀಸ್ಥಿತಿ ಉತ್ತಮಗೊಂಡಿದೆ ಎನ್ನುತ್ತಾರೆ ಅಲ್ಲಿನ ವಕ್ತಾರರು.

ಹತ್ತು ದಿನ ಹಿಂದೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಗೆಗೊಂದು ಗೂಗಲ್ ಮಾಪಿನ ತಪ್ಪು ಬೊಟ್ಟುಮಾಡಿದ್ದೆ. ಅದೀಗ ಹೆಚ್ಚಿನಂಶ ಸ್ವಯಂಸೇವಕರೊಬ್ಬರಿಂದ ತಿದ್ದಲ್ಪಟ್ಟಿದೆ. ನನ್ನ ಬ್ಲೋಗ್ ಬರಹದ ಕಾರಣ ಇದ್ದರೂ ಇರಬಹುದು. ಅದರೆ ಗೂಗಲ್ ಸಂಸ್ಥೆಯ ಹಕ್ಕುಗೊಳಪಟ್ಟಿರುವ ಬೂಪಟಕ್ಕೆ ನಮ್ಮ ಸೇವೆ ಸಲ್ಲಿಸುವುದರ ಬದಲಿಗೆ ಸಮಾಜದ ಒಳಿತಿಗಾಗಿ ಸ್ಥಾಪನೆಗೊಂಡಿರುವ ಈ ಒಪನ್ ಸ್ಟ್ರೀಟ್ ಬೂಪಟಕ್ಕೆ ಕೈಜೋಡಿಸಿದರೆ ಉತ್ತಮ ಅನಿಸುತ್ತದೆ. ಗೂಗಲ್ ನಲ್ಲಿ ನಮ್ಮೂರಿನಲ್ಲಿಯೇ ಇನ್ನೂ ಸುಮಾರು ತಪ್ಪುಗಳು ಉಳಿದಿವೆ.

ತಿಂಗಳ ಹಿಂದೆ ಮಂಗಳೂರು ಪುತ್ತೂರು ರಸ್ತೆಗೆ ಸಿಮಿತವಾಗಿದ್ದ ಒಪನ್ ಸ್ಟ್ರೀಟ್ ನಕ್ಷೆಗೆ  ಹಲವಾರು ಉಪಯುಕ್ತ ಒಳರಸ್ತೆಗಳ ಸೇರಿಸಿದ್ದೇನೆ. ಪುತ್ತೂರಿಗೆ ಮಂಗಳೂರು ಹಾಸನ ರಸ್ತೆಯಿಂದ ಬಂದು ಸೇರುವುದು ಒಂದು ಪೆರ್ನೆ ಬನ್ನೂರು ಒಳರಸ್ತೆ. ಉಪ್ಪಿನಂಗಡಿಯಿಂದ ಪುತ್ತೂರು ಇನ್ನೂ ಸಂಪರ್ಕಿಸಿಲ್ಲ. ನಾನು ಎಲ್ಲ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದು ಟ್ರೈಕ್ ಓಡಾಟದಲ್ಲಿಯೇ.


ಜರ್ಮನಿಯ ಸರಕಾರ ಹತ್ತಿರದ ಓಡಾಟಗಳಿಗೆ ಕಾಲ್ನಡುಗೆ ಮತ್ತು ಸೈಕಲ್ ಗಳನ್ನು ಪ್ರೋತ್ಸಾಹಿಸುತ್ತದೆ. ಬಿತ್ತಿಪತ್ರಗಳು ಸಿನೆಮಾ ಕ್ಲಿಪ್ ಗಳು ತಯಾರಾಗಿವೆ. ಸಿನೆಮಾತಾರೆಯರು ಕ್ರಿಡಾಪಟುಗಳು ಕೈಜೋಡಿಸಿದ್ದಾರೆ. ಜರ್ಮನ್ ಬಾಷೆಯಲ್ಲಿರುವ ಅವರ ಘೋಷವಾಕ್ಯ ಸಾಮಾನ್ಯವಾಗಿ Turn on your brain, turn off your motor , For zero CO2 on short trip ಅನ್ನುತ್ತದೆ. ಅದನ್ನು ಅರ್ಥ ಕೆಡದಂತೆ ಕನ್ನಡಕ್ಕೆ ಅನುವಾದಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ನನ್ನ ಗಮನಕ್ಕೆ ಬಂದ ಪುಟ್ಟ ಸಿನೆಮಾ ಕ್ಲಿಪ್ ಇಲ್ಲಿ ಅಂಟಿಸಿದ್ದೇನೆ.ಕಾರಲ್ಲಿ  ಕೂತವನಿಗೆ ......

ಹೆಚ್ಚು  ಅಗಲವಿರುವ  ಮೇಲಿನ ಚಿತ್ರ ನೇರ ವೀಕ್ಷಿಸಲು  http://is.gd/gm4oL  ಕ್ಲಿಕ್ಕಿಸಿ

Friday, October 22, 2010

ಮೂರು ಚಕ್ರದಲ್ಲಿ ಮಂಗಳೂರಿಗೆ

ನಿನ್ನೆ ಮಂಗಳೂರಿಗೆ ಟ್ರೈಕಿನಲ್ಲಿ ಹೋಗಿದ್ದೆ. ೧೬ ಕಿಮಿ ದೂರದ ಬಿ ಸಿ ರೋಡ್ ೪೫ ನಿಮಿಷಗಳಲ್ಲಿ ದಾಟಿದರೆ (ಬಿಸಿ ರಸ್ತೆಯಲ್ಲ, ಬಂಟವಾಳ ಕ್ರಾಸ್ ರೋಡ್ ಅನ್ನುವ ನೇತ್ರಾವತಿ ತೀರದಲ್ಲಿರುವ ಊರು) ಮಂಗಳೂರು ಹೊರವಲಯ ಒಂದು ಘಂಟೆ ಮೂವತ್ತೇಳು ನಿಮಿಷಗಳ ಪ್ರಯತ್ನದಲ್ಲಿ ಒಂದು ಬಾಟರಿಯ ಶಕ್ತಿಯ ಸಹಾಯದಲ್ಲಿ ತಲಪಿದೆ.


ಆ ಬಾಟರಿಯನ್ನು ಅಶೋಕನ ಅಂಗಡಿಯಲ್ಲಿ ಚಾರ್ಜಿಗಿಟ್ಟು ಮಂಗಳೂರು  ಪಟ್ಟಣದೊಳಗಿನ ತಿರುಗಾಟ ಮಾಡಿದೆ. ಅಗತ್ಯವಿರುವಾಗ  ಸುಮಾರು ಇಪ್ಪತ್ತೈದು ಕಿಮಿ ವೇಗ ಸಾದ್ಯವಾಗುವ ಕಾರಣ ಊರೊಳಗಿನ ತಿರುಗಾಟಕ್ಕೆ ಸರಿಸುಮಾರು ಕಾರಿನಷ್ಟೇ ಸಮಯ ಬೇಕಾಗುತ್ತದೆ. ಒಂದು ಪುಟ್ಟ ವಿಡಿಯೊ ತೆಗೆಯಲು ಪ್ರಯತ್ನಿಸಿದ್ದೆ. ಆದರೆ ಕೆಮರಾ ಮತ್ತದರ ಮೌಂಟ್ ಹೊಂದಾಣಿಕೆಯಾಗದೆ ನನ್ನ ತಲೆಯೇ ಚಿತ್ರದ ಅರ್ದ ಬಾಗ ಆವರಿಸುತ್ತದೆ ಎಂದು ತಡವಾಗಿ ಅರಿವಾಯಿತು. ಮೊದಲು ಈ ಕೆಮರಾ ಜತೆಗೆ ಉಪಯೋಗಿಸಿದ ಮೌಂಟ್ ಬೀಜಾಪುರದಿಂದ ಬರುವಾಗ ಬಸ್ಸಿನ ಮೇಲಿನ ಪ್ರಯಾಣದಲ್ಲಿ ಹುಡಿಯಾಗಿತ್ತು. ಮೊದಲೇ ಅರಿವಾಗಿದ್ದರೆ ಮೌಂಟಿನ ಜಾಗ ಬದಲಾಯಿಸುತ್ತಿದ್ದೆ.

ಮದ್ಯಾಹ್ನ ಸುಮಾರು ಮೂರುವರೆಗೆ ಮಂಗಳೂರಿನಿಂದ ಹೊರಟೆ. ವಾಪಾಸು ಬರುವಾಗ ಸ್ವಲ್ಪ ಹೆಚ್ಚು ಅಂದರೆ ಒಂದು ಬಾಟರಿಯ ಪೂರ್ತಿ ಚಾರ್ಜು (೧೦ Ah)   ಉಪಯೋಗವಾಗಿತ್ತು. ಮಂಗಳೂರಿನೊಳಗೆ ಹದಿನೈದು ಕಿಮಿ ಓಡಿಸಿದ ಕಾರಣ (4 Ah)  ಕಲ್ಲಡ್ಕ ದಾಟುವಾಗ ೨೦ Ah ಅಂದರೆ ಎರಡು ಬಾಟರಿಯ ಚಾರ್ಜು ಮುಗಿಸಿದ್ದೆ. ಮನೆಗೆ ತಲಪುವಾಗ ೨೩ Ah ಮುಗಿದಿತ್ತು. ಅಂದರೆ ಮಂಗಳೂರಿನಲ್ಲಿ ಅಶೋಕನ ಅಂಗಡಿಯಲ್ಲಿ ಮಾಡಿದ ಚಾರ್ಜು ನನ್ನನ್ನು ಕಲ್ಲಡ್ಕದಿಂದ ಮನೆಗೆ ತಲಪಿಸಿತು ಅನ್ನಬಹುದು.

ಹಾಗಾದರೆ ಸಲೀಸಾಗಿ ಮಂಗಳೂರಿಗೆ ಒಂದೇ ಬಾಟರಿಯನ್ನು ಅವಲಂಬಿಸಿ ಹೋಗಿ ಅಲ್ಲಿ ಮೂರು ಘಂಟೆ ಚಾರ್ಜಿಗಿಟ್ಟರೆ ಆರಾಮವಾಗಿ ವಾಪಾಸು ಬರಬಹುದು ಅಂದಾಯಿತು. ನಿನ್ನೆ ಕೆಲವೊಮ್ಮೆ ವಿಳಂಬವಾಗಿ GPS on ಮಾಡಿದ ಕಾರಣ ಪೂರ್ತಿ ದೂರ ನಿಖರವಾಗಿ ದಾಖಲಾಗಲಿಲ್ಲ. ಅದುದರಿಂದ ೯೦ ಕಿಮಿ ಮಿಕ್ಕಿದ ದೂರ ಪ್ರಯಾಣ ಮಾಡಿರಬಹುದು ಅನಿಸುತ್ತದೆ.

ಒಟ್ಟು  ೮೫೦ ವಾಟ್ಸ್ ವಿದ್ಯುತ್ ಖರ್ಚು ಅಂದರೆ ಸುಮಾರು ನಾಲ್ಕು ರೂಪಾಯಿ ಬೆಲೆಯ ವಿದ್ಯುತ್ ಬೆಂಬಲ ನನ್ನ ಪ್ರಯಾಣಕ್ಕೆ ಸಾಕಾಯಿತು. ಮನೆ ತಲಪುವಾಗ ನಾಲ್ಕು ಘಂಟೆ ಮೂವತ್ತ ಮೂರು ನಿಮಿಷ ಟ್ರೈಕ್ ಚಾಲನೆ ಮಾಡಿದ್ದೆ. ನಾನು ಕಾರಿನಲ್ಲಿ ಈ ಪ್ರಯಾಣ ಮಾಡಿದರೂ ಸುಮಾರು ಮೂರು ಘಂಟೆ ಬೇಕಾಗುತಿತ್ತು. ಹಾಗಾಗಿ ಟ್ರೈಕ್ ಪ್ರಯಾಣದಿಂದಾಗಿ ಬೇಕಾದ ಹೆಚ್ಚಿನ ಸಮಯ ಸುಮಾರು ಒಂದೂವರೆ ಘಂಟೆ ಮಾತ್ರ. ಇಲ್ಲಿ ನಾನು ಹೇಳಲಿಚ್ಚಿಸುವುದು ಈ ವಿದ್ಯುತ್ ಬೆಂಬಲದ ಪ್ರಯಾಣ ನಮಗೆ ಪ್ರಾಯೋಗಿಕ.

ನಿನ್ನೆಯ ವಿಜಯ ಕರ್ನಾಟಕದಲ್ಲಿ ನನ್ನ ಟ್ರೈಕ್ ಪ್ರವಾಸದ ಬಗೆಗೊಂದು ಬರಹ ಪ್ರಕಟವಾಗಿದೆ.   ಇದಕ್ಕೆ   ಐವತ್- ಮೂರರವ ಮೂರು ಚಕ್ರದ ಮೇಲೆ ಕುಳಿತ ಕಥೆ ವಿಕ ಚೆನ್ನಾಗಿ ಕೊಟ್ಟಿದೆ ಎಂದು ಅಶೋಕವರ್ಧನರು ಪ್ರತಿಕ್ರಿಯಿಸಿದ್ದಾರೆ.  ಸಂಪರ್ಕ ಕೊಂಡಿಗಳು  ಇಲ್ಲಿ ಮತ್ತು   ಇಲ್ಲಿವೆ. 


ಆದರೆ ಬಹಳ ಮುಖ್ಯವಾದ ವಿದ್ಯುತ್ ಬೆಂಬಲದ ಚಾಲನೆಗೆ ಅಗತ್ಯ ಪ್ರಾಮುಖ್ಯತೆ ದೊರಕಲೇ ಇಲ್ಲ ಎನ್ನುವುದು ನನಗೆ ಬಹಳ ಬೇಸರದ ವಿಚಾರ. ಈ ಲೇಖನದಲ್ಲಿ ಅರ್ಥ ಬರುವಂತೆ ಇದೊಂದು ವಿದ್ಯುತ್ ಚಾಲಿತ ವೀಲ್ ಚೇರ್ ಅಲ್ಲ - ವಿದ್ಯುತ್ ಬೆಂಬಲಿತ ಪೆಡಲಿಸುವ ಸೈಕಲ್. ಪ್ರವಾಸದ ಉದ್ದಕ್ಕೂ ಸುಮಾರು ಶೇಕಡಾ ಐವತ್ತು ನೂಕು ಬಲ ನನ್ನ ಕಾಲಿನಿಂದಲೇ ರವಾನೆಯಾಗಿದೆ.

ಮುಂದೆ ಸಾಗಲು ಅಡ್ಡಿಯಾಗುವ ಗಾಳಿಯ ತಡೆಯನ್ನು ಕನಿಷ್ಟಗೊಳಿಸುವ ಆಕಾರ - ರಿಕಂಬಂಟ್ ಅರ್ಥವನ್ನು ಬಾಟರಿ ಚಾಲನೆ ಅಂದಿದ್ದಾರೆ. ನನ್ನ ಅಂಗವಿಕಲತೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಆದರೂ ಒಟ್ಟಿನಲ್ಲಿ ಒಂದು ಹೊಸ ಚಿಂತನೆಗೆ ಅವಕಾಶವನ್ನು ದೊರಕಿಸಿಕೊಡುತ್ತದೆ.

ನಮ್ಮ ನಿತ್ಯದ ಓಡಾಟಕ್ಕೆ ಪರ್ಯಾಯವಾಗಬಲ್ಲ ಮಾನವ ಶ್ರಮ ಮತ್ತು ವಿದ್ಯುತ್ ಬೆಂಬಲ ಸಮ್ಮೀಲನವಾಗುವ ವಾಹನ ಹೊರತು ಇದು ಮೂಸಿಯಂನಲ್ಲಿಡುವ ಯಂತ್ರವಲ್ಲ.    ನಾನು ಮಾಡುತ್ತಿದ್ದೇನೆ,  ಹಾಗಾಗಿ   ಅನುಸರಿಸಿ ಅನ್ನುವ ಅರ್ಥದಲ್ಲಿ ಯಾರಿಗೂ ಇದನ್ನು ಉಪದೇಶಿಸುತ್ತಿಲ್ಲ.     ಪೆಟ್ರೋಲ್ ಬಳಕೆಗೆ ಪರ್ಯಾಯವಾಗಬಲ್ಲ  ಕಾರಣ  ಈ ನಿಟ್ಟಿನಲ್ಲಿ ಚಿಂತಿಸಿ ಎಂದಷ್ಟೇ ವಿನಂತಿಸಿಕೊಳ್ಳುತ್ತೇನೆ. ವಿದ್ಯುತ್ ಬೆಂಬಲಿತ ಚಾಲನೆಯ ಈ ಪರ್ಯಾಯದ ಬಗೆಗೆ ಜನಸಾಮಾನ್ಯರಿಗೆ ಅರ್ಥೈಸಲು ಒಂದು ಉತ್ತಮ ಅವಕಾಶ ತಪ್ಪಿಹೋಯಿತು ಅನ್ನುವ ನಿರಾಶೆ ನನಗೆ.

Saturday, October 16, 2010

ಭೂಪಟಕ್ಕೆ ಮಾಹಿತಿ ಸಂಗ್ರಹ ಟ್ರೈಕ್ ಸವಾರಿಯಲ್ಲಿ

ಇತ್ತೀಚೆಗೆ ಟ್ರೈಕ್ ಪ್ರವಾಸದಿಂದ ವಾಪಾಸಾದ ನಂತರ ಒಮ್ಮೆ http://www.openstreetmap.org/?lat=12.755&lon=75.069&zoom=11&layers=Mಪುಟ ಬಿಡಿಸಿದೆ. ನನಗಾಗ ಕೇರಳದಲ್ಲಿ ಈ ಬಗೆಗೆ ಸಾಕಷ್ಟು ಕೆಲಸ ಆಗಿದೆ ಮತ್ತು ಕರ್ನಾಟಕದ ನಮ್ಮ ಪರೀಸರದಲ್ಲಿ ಶೂನ್ಯ ಸೆರ್ಪಡೆ ಅನ್ನುವಾಗ ಬಹಳ ಬೇಸರವಾಯಿತು. ಚುರುಕಾಗಲು ಪ್ರೇರಣೆ ದೊರಕಿತು.


ಹಾಗೆ ಅನಂತರದ ದಿನಗಳಲ್ಲಿ ನಾನು ಈ ಭೂಪಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಭೂಪಟ ಎಂದರೆ ನನಗೆ ಚಿಕ್ಕಂದಿನಲ್ಲಿಯೇ ಬಹಳ ಅಭಿಮಾನ. ಸೈಕಲ್ ಯಾತ್ರೆ ಸಂಬಂದಿಸಿ ದೆಹಲಿಗೆ  ಹೋದಾಗ ನನಗೆ ಪಿಯುಸಿ ಕಲಿಯುವಾಗ ಸಹಪಾಠಿಯಾಗಿದ್ದ ಅಲ್ಲಿ   ಕಾಣ ಸಿಕ್ಕ ಹಾಗೂ ಅತಿಥೇಯನಾಗಿದ್ದ ಸತ್ಯಪ್ರಕಾಶ ಆಗಾಗಲೇ ಹಲವು ಭೂಪಟಗಳ ಒಟ್ಟುಹಾಕಿದ್ದ. ಮಡುಚುವುದು ಮೊದಲಿನಂತೆಯೇ ಆಗಬೇಕು. ಇಲ್ಲವಾದರೆ ಬೇಗ ಹರಿದುಹೋಗುತ್ತದೆ ಎನ್ನುವ ಕಿವಿಮಾತು ಹೇಳಿಕೊಟ್ಟಿದ್ದ.

ಅನಂತರದ ಸೈಕಲು ಪ್ರವಾಸದಲ್ಲಿ ಒಂದು ರಾಶಿ ಭೂಪಟಗಳ ನಾನೂ ಕಲೆಹಾಕಿದ್ದೆ. ಇಂದಿಗೂ ಹಲವು ದೇಶಗಳ ಭೂಪಟ ನನ್ನ ಹತ್ತಿರವಿದೆ. ಅವುಗಳ ತಿರುವಿಹಾಕುವಾಗ ಆ ಪ್ರದೇಶಗಳ ವಿಚಾರ ಮನಸ್ಸು ಅವರಿಸಿಕೊಳ್ಳುತ್ತದೆ. ಈ ಮದ್ಯೆ ಅಂತರ್ಜಾಲದಿಂದಾಗಿ ಕಾಗದ ಬೂಪಟಗಳು ತನ್ನ ಮಹತ್ವ ಕಳಕೊಂಡವು. ಗೂಗಲ್ ಅಂತರ್ಜಾಲದಲ್ಲಿ ಇಡೀ ಪ್ರಪಂಚದ ಉಪಗ್ರಹ ಬೂಪಟ ಹಾಕಿದ ನಂತರವಂತೂ ಸಮಸ್ಯೆ ಎಲ್ಲ ಪರಿಹಾರ ಎಂದು ಅಂದುಕೊಂಡೆವು.

ಆದರೆ ಗೂಗಲ್ ಹಲವು ಅನಾಹುತಗಳನ್ನೂ ತಂದಿಟ್ಟಿದೆ. ಹಲವು ಜನ ವಾಹನಗಳ ದಾರಿ ತಪ್ಪಿಸಿಕೊಂಡಿದ್ದಾರೆ, ಚೌಗು ಪ್ರದೇಶದ ಮದ್ಯಬಾಗಕ್ಕೆ,   ಪರ್ವತದ ತುದಿಗೆ ತಲಪಿದವರಿದ್ದಾರೆ.   ಮಾತ್ರವಲ್ಲ ಗೂಗಲ್ ಬೂಪಟ ಬಳಸಿ ಪರಲೋಕಕ್ಕೆ ಹೋದವರ ಸಂಖ್ಯೆ ನಗಣ್ಯವಲ್ಲ.       ಇದು copyright ಗೆ ಒಳಪಟ್ಟಿರುವುದರಿಂದ ನಮಗೆ ಸಿಮಿತ ಉಪಯೋಗ. ಅಮೇರಿಕದ ಗೂಗಲ್ ಕಂಪೇನಿಯ  ಅತಿಯಾದ ಅವಲಂಬನೆ ಸಮಾಜದ ಮಟ್ಟಿಗೆ  ಅಪಾಯಕಾರಿ ಬೆಳವಣಿಗೆ. ಎದುರಾಳಿಗಳ ನುಂಗುತ್ತಾ ಬಂದ ಈ ಸಂಸ್ಥೆ ಬವಿಷ್ಯದಲ್ಲಿ ಎಲ್ಲ ಮಾಹಿತಿಜಾಲದ ಮೇಲೆ ಬಿಗಿ ಹಿಡಿತ ಸಾಧಿಸುವ ಲಕ್ಷಣಗಳು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಗೂಗಲ್ ಬಳಸಿದ ಉಪಗ್ರಹ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಆದರೆ ಅದನ್ನು ಉಪಯೋಗಿಸಿ ಗೀಟು ಎಳೆದ ಬೂಪಟಗಳಲ್ಲಿ ಬಹಳ ತಪ್ಪುಗಳನ್ನು ಕಾಣಬಹುದು. ಅದನ್ನು ನಂಬಿ ಕಾರು ಓಡಿಸಿದರೆ ನಮ್ಮೂರಲ್ಲಿಯೇ ತೋಡಿಗೆ ಇಳಿಯಬಹುದು, ಗುಡ್ಡ ಬೆಟ್ಟ ಹತ್ತಬಹುದು ಏಕೆಂದರೆ ಅದರಲ್ಲಿ ರಸ್ತೆ ಎಂದು ಸೂಚಿಸಿದಲ್ಲಿ ರಸ್ತೆಗಳಿಲ್ಲ. ಇದಕ್ಕೆ  ಉದಾಹರಣೆ ಮೊನ್ನೆ ನಾನು ಸಾಗಿದ ಮಾಣಿ ಉಪ್ಪಿನಂಗಡಿ ಮದ್ಯೆದ ರಾಷ್ಟ್ರೀಯ ಹೆದ್ದಾರಿಯ ಬಾಗ. http://www.everytrail.com/view_trip.php?trip_id=849082 


ಕೆಂಪು ಗೀಟು ಹೆದ್ದಾರಿಯಲ್ಲಿ ನಾನು ಸಾಗಿದ ದಾರಿ. ಹಳದಿ ಗೀಟು ಅವರನ್ನುವ ರಾಷ್ಟ್ರೀಯ ಹೆದ್ದಾರಿ. ಆದರೆ ಅವರು ತಪ್ಪಿ ಬಿದ್ದಿದ್ದಾರೆ ಎನ್ನಲು ಉಪಗ್ರಹ ಚಿತ್ರದಲ್ಲಿರುವ ರಸ್ತೆಗಳ ಗಮನಿಸಿದರೆ ಸಾಕು. ಇದರಲ್ಲಿ default ಆಗಿರುವ hybrid ಬಿಟ್ಟು map ನ್ನು ಕ್ಲಿಕ್ಕಿಸಿದರೆ ಮೇಲ್ಕಾಣಿಸಿದ ಚಿತ್ರ ಸಿಗುವುದು. ನಾನು ಅದರಲ್ಲಿ ಕಾಣಿಸದ ಗ್ರಾಮೀಣ ರಸ್ತೆಯಲ್ಲಿ ಬಂದು ಹೆದ್ದಾರಿ ಸೇರಿದ್ದೆ.


ಜನರೆಲ್ಲ ಕೈ ಜೋಡಿಸಿ ತಯಾರಿಸುವ ಈ ಹಕ್ಕು ಮುಕ್ತ ಬೂಪಟಗಳು ಖಂಡಿತ ನಮ್ಮ    ಸಮಾಜಕ್ಕೆ ಉತ್ತಮ. ನಾವು ತಿದ್ದುಪಡಿ ಮಾಡಬಹುದು ಮಾತ್ರವಲ್ಲ ಇಷ್ಟಬಂದಂತೆ ಬಳಸಿಕೊಳ್ಳಬಹುದು.   http://tools.geofabrik.de/mc/?mt0=mapnik&mt1=googlemap&lon=-0.13434&lat=51.51805&zoom=18 ವನ್ನು ಗಮನಿಸಿದರೆ ಊರವರು ಕೈಜೋಡಿಸಿ ತಯಾರಿಸಿದ ನಕ್ಷೆ ಗೂಗಲಿನಿಂದ ಮಿಗಿಲು ಎನ್ನುವ ವಿಚಾರ ಕಾಣಬಹುದು. ಅದುದರಿಂದ ಸಾರ್ವಜನಿಕರೇ ಸೇರಿ ರೂಪಿಸುವ ಈ ಭೂಪಟದ ಬಗೆಗೆ ಹೆಚ್ಚು ಆಸಕ್ತಿ ಉಂಟಾಯಿತು. ಮುಂದಿನ ದಿನಗಳಲ್ಲಿ ನಮಗೆ ಇದನ್ನು ಮೊಬೈಲ್ ಪೋನಿಗೂ ಇಳಿಸಿಕೊಳ್ಳಲು ಸಾದ್ಯ. ಸ್ವಲ್ಪ ಸಮಯ ಹಿಂದೆ  ವಿಟ್ಲದ  ಬೂಪಟದಲ್ಲಿ  ನಾನು ಸೆರ್ಪಡೆಗೊಳಿಸಿದ  ಮಾಹಿತಿ ಇಲ್ಲಿ  ಕಾಣಬಹುದು.    ಇನ್ನೂ ಅಪಾರ ಕೆಲಸ ಬಾಕಿ ಇರುತ್ತದೆ.  ಗಂಟೆಗಟ್ಟಲೆ  ಒರ್ಕುಟ್ ಮುಂತಾದ  ತಾಣಗಳಲ್ಲಿ  ಕಳೆಯುವ  ಯುವ  ಜನ  ಇಂತಹ  ಕಾರ್ಯದಲ್ಲಿ  ಮಗ್ನರಾದರೆ   ಭೂಗೋಳಶಾಸ್ತ್ರ, ರಚನಾತ್ಮಕ  ಕಂಪ್ಯುಟರ್ ಬಳಕೆ  ಮುಂತಾದ  ಉಪಯುಕ್ತ ವಿಚಾರ  ಅರಿಯಲು  ಸಾದ್ಯ.

ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಎಂಬಂತೆ ಜಿಪಿಎಸ್ ಟ್ರಾಕ್ ಸಂಗ್ರಹ ನನ್ನ ಟ್ರೈಕ್ ಒಡಾಟವನ್ನು ಸದುಪಯೋಗಗೊಳಿಸುವ ದಾರಿ. ಹಾಗೆ ಈ ವಾರ ಗುರುವಾರ ೫೫ ಕಿಮಿ http://is.gd/g3e9i ಮತ್ತು ಶುಕ್ರವಾರ ೬೭ ಕಿಮಿ http://is.gd/g3dWN ಟ್ರೈಕ್ ಸವಾರಿ ಮಾಡಿ ಆ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದೇನೆ. ಅವುಗಳ ಭೂಪಟಕ್ಕೆ ಸೇರಿಸುವುದು   ಇನ್ನೂ ಬಾಕಿ ಇರುತ್ತದೆ. ಅಂತೂ  ಕೆಲಸ  ಪ್ರಾರಂಬವಾಗಿದೆ. ಹೆಚ್ಚು ಜನ  ಕೈಜೋಡಿಸಿದರೆ  ಹೆಚ್ಚು  ಅರ್ಥಪೂರ್ಣವಾಗಿ  ಈ ಭೂಪಟ   ರೂಪಿಸಬಹುದು  

Saturday, October 09, 2010

ವಿದ್ಯುತ್ ಬೆಂಬಲಿತ ಟ್ರೈಕ್ ಪ್ರವಾಸ

ಇದೊಂದು ಪರಿಸರ ಪೂರಕವಾದ ಪ್ರವಾಸ. ಪ್ರಾಯುಶ: ಪ್ರಥಮ ಬಾರಿಗೆ ಇಷ್ಟೊಂದು ದೀರ್ಘ ಅಂದರೆ ಸಾವಿರದ ಐನೂರು ಕಿಮಿ ವಿದ್ಯುತ್ ಬೆಂಬಲದ ಪ್ರವಾಸ ಬಾರತದಲ್ಲಿಯೇ ಹೊಸ ದಾಖಲೆ ಇರಬಹುದು. ಅಂದಾಜು ಇಪ್ಪತ್ತು ಯುನಿಟ್ ವಿದ್ಯುತ್ ಉಪಯೋಗ. ಮುನ್ನಡೆಯಲು ಮಾನವ ಶ್ರಮ ಸೆರ್ಪಡೆ ಅವಕಾಶವನ್ನೀಯದ ವಿದ್ಯುತ್ ಕಾರುಗಳು ಕನಿಷ್ಟ ಇದರ ಹತ್ತರಿಂದ ಹದಿನೈದು ಪಾಲು ವಿದ್ಯುತ್ ಉಪಯೋಗಿಸುತ್ತದೆ. ಅದುದರಿಂದ ಶಕ್ತಿಯನ್ನು ಅತ್ಯಂತ ಸದುಪಯೋಗಗೊಳಿಸುವ ಸೈಕಲಿಗೆ ಅಳವಡಿಸಿರುವ ಈ ವಿದ್ಯುತ್ ಬೆಂಬಲ ಸಲಕರಣೆ / ವ್ಯವಸ್ತೆ ಕನಿಷ್ಟ ಶಕ್ತಿಯಲ್ಲಿ ಗರೀಷ್ಟ ದೂರ ಕ್ರಮಿಸಲು ಸಹಾಯಕ.

ಖಂಡಿತಾ ಬಾರತಕ್ಕೆ ಇದೊಂದು ಪ್ರಾಯೋಗಿಕ ಪರ್ಯಾಯ. ನಾನು ನನ್ನ ಅರೆ ಅಂಗವಿಕಲತೆಯನ್ನು ಬದಿಗಿರಿಸಿ ದಿನಕ್ಕೆ ನೂರು ಐವತ್ತು ಕಿಮಿ ಸೈಕಲಿಸಿದ್ದೇನೆ ಎಂದರೆ ಹೆಚ್ಚು ಕಮ್ಮಿ ಇದು ಎಲ್ಲರ ಕಾಲಿಗೆಟಕುವ ತಂತ್ರಜ್ನಾನ. ಇಪ್ಪತೈದು ವರ್ಷ ವಯಸ್ಸಿರುವಾಗ ಪ್ರಪಂಚಕ್ಕೊಂದು ಸುತ್ತು ಬರುವ ಕಾಲದಲ್ಲಿ ನೂರ ಐವತ್ತರಿಂದ ಇನ್ನೂರು ಕಿಮಿ ಸಲೀಸಾಗಿಯೇ ಕ್ರಮಿಸಿದ್ದೆ. ಆದರೆ ಈಗ ಕ್ರಮಿಸಲು ಸಾದ್ಯವಾದುದು ಈ ವಿದ್ಯುತ್ ಬೆಂಬಲದ ವ್ಯವಸ್ಥೆಯಿಂದಾಗಿ. ಸೈಕಲಿಗಾಗಿ ಅಭಿವೃದ್ದಿ ಹೊಂದಿದ ಈ ಬೆಂಬಲ ವ್ಯವಸ್ತೆಯನ್ನು ಪ್ರಪಂಚದಲ್ಲಿ ಎಲ್ಲೂ ಟ್ರೈಕಿಗೆ ಅಳವಡಿಸಿ ದೀರ್ಘ ಪ್ರವಾಸ ಕೈಗೊಂಡ ಬಗೆಗೆ ಸುಳಿವುಗಳು ದೊರಕುವುದಿಲ್ಲ. ವಿದ್ಯುತ್ ಬೆಂಬಲದ ಟ್ರೈಕ್ ಪ್ರವಾಸ ಇದುವೇ ಪ್ರಥಮ ಅನಿಸುತ್ತದೆ.

ಶಕ್ತಿಯ ಉಪಯೋಗಕ್ಕೆ ಅರ್ಥಾತ್ ಮೈಲೇಜ್ ಲೆಕ್ಕಾಚಾರಕ್ಕೆ ಅಂತರ ಮಾತ್ರ ಲೆಕ್ಕವಲ್ಲ. ಎದುರಿಸಬೇಕಾದ ಮಳೆ ಹಾಗೂ ಬಿಸಿಲು, ತಡೆಯುಂಟು ಮಾಡುವ ಗಾಳಿ ಮತ್ತು ರಸ್ತೆಯ ಏರಿಳಿತಗಳು ಇದರಲ್ಲಿ ಗಣನೀಯ ಪಾತ್ರ ವಹಿಸುತ್ತದೆ. ವಿಪರೀತ ಶಕ್ತಿಯುತ ಯಂತ್ರ ಹೊಂದಿದ ಹಡಗಿನಂತಹ ಕಾರುಗಳಲ್ಲಿ ಇವು ನಗಣ್ಯವಾಗಿರಬಹುದು. ಆದರೆ ನನ್ನ ಪ್ರವಾಸದಲ್ಲಿ ಇವು ಕೆಟ್ಟಿರುವ ರಸ್ತೆಗಳ ಜತೆ ಸೇರಿ ದೊಡ್ಡ ತಡೆಯನ್ನೇ ಉಂಟು ಮಾಡಿದ್ದವು. ಪರಿಣಾಮ ಸಂಜೆಗಾಗುವಾಗ ಕ್ರಮಿಸುವ ಅಂತರ ಯೋಜನೆಯಿಂದ ಹೆಚ್ಚು ಕಡಿಮೆ ಆಗುತ್ತಲಿತ್ತು. ಇವುಗಳ ಒಟ್ಟು ಪರಿಣಾಮದಿಂದಾಗಿ ವಸತಿಗೃಹವಿಲ್ಲದ ಕವಲಂದೆಯಲ್ಲಿ ಅರಕ್ಷಕ ಠಾಣೆಯ ಆಶ್ರಯ ಸಿಕ್ಕಿದ್ದು ನನ್ನ ಸೌಭಾಗ್ಯ. ಇಂತಹ ಅನಿರೀರ್ಕ್ಷಿತ ಸನ್ನಿವೇಶಗಳಿಗೆ ಸಾದ್ಯವಾದಷ್ಟು ತಯಾರಿಮಾಡಿಕೊಂಡ ಕಾರಣ ಮಲಗಿಕೊಳ್ಳುವ ಸುರುಳಿ ಚಾಪೆ ನನ್ನಲ್ಲಿಯೇ ಇತ್ತು.

ಓಡುವುದರಿಂದ ಹೆಚ್ಚಿನ ವೇಗದಲ್ಲಿ ಚಲಿಸುವಾಗ ಸೈಕಲು ಸೇರಿದಂತೆ ಎಲ್ಲವಾಹನಗಳಿಗೂ ಗಾಳಿ ತಡೆಒಡ್ಡುತ್ತದೆ. ಗಾಳಿ ಎದುರಿಸುವ x section ಕಡಿಮೆಯಾಗುವ ಕಾರಣ ಈ ರಿಕಂಬಂಟ್ ಸೈಕಲು ಯಾ ಟ್ರೈಸಿಕಲುಗಳು ಕಡಿಮೆ ಶಕ್ತಿಯಲ್ಲಿ ಹೆಚ್ಚು ವೇಗವಾಗಿ ಚಲಿಸುತ್ತದೆ. ಪೂರಕವಾಗುವಂತೆ ವಿದ್ಯುತ್ ಬೆಂಬಲ ಅಳವಡಿಸಿದರೆ [ ತುಳಿಯುವ ಮಟ್ಟಿಗೆ ] ಗುಡ್ಡ ಬೆಟ್ಟಗಳು ಸಮತಟ್ಟಾಗುತ್ತವೆ. ಮುಖದಲ್ಲಿ ಮುಗುಳ್ನಗೆ ಮಾಸಬೇಕಾಗಿಲ್ಲ. ಸೌರ ಫಲಕಗಳ ಅಳವಡಿಸುವ ಯೋಜನೆ ಇದ್ದರೂ ಪ್ರಾಯೋಗಿಕ ಕಾರಣಗಳಿಂದ ಅದನ್ನು ಕೈಬಿಟ್ಟೆ. ನನಗೆ ಕಳೆದ ಪ್ರವಾಸ ಕಾಲದಲ್ಲಿ ಮೋಡ ಕವಿದ ವಾತಾವರಣವೇ ಹೆಚ್ಚು ಸಿಕ್ಕ ಕಾರಣ ಗಣನೀಯ ವಿದ್ಯುತ್ ತಯಾರಿಯಾಗುತ್ತಿರಲಿಲ್ಲ. ಅದುದರಿಂದ ಉಂಟಾಗಬಹುದಾದ ಗಾಳಿಯ ತಡೆ ತಯಾರಾಗಬಹುದಾದ ವಿದ್ಯುತ್ತಿನಿಂದ ಹೆಚ್ಚಾಗುತಿತ್ತು. ಎರಡನೆಯ ಚಾರ್ಜಿಂಗ್ ಅವಕಾಶ ಎಂದರೆ ಇಳಿಜಾರಿನಲ್ಲಿ ಅಥವಾ ಬ್ರೇಕ್ ಹಾಕುವಾಗ ಸಹಾ ಹೆಚ್ಚು ತೂಕವಿಲ್ಲದ ಕಾರಣ ಡೈನೆಮೊ ಅಳವಡಿಕೆ ಹೆಚ್ಚಿನ ಪ್ರಯೋಜನ ಸಿಗುತ್ತಿರಲಿಲ್ಲ.

ಮದ್ಯಾಹ್ನದ ಊಟ, ಸ್ವಲ್ಪ ಜನಸಂಪರ್ಕ ಮತ್ತು ಬಾಟರಿ ಚಾರ್ಜ್ ಇವು ಮೂರನ್ನೂ ಜತೆಯಾಗಿ ಹೊಂದಿಸಿಕೊಳ್ಳುವುದು ನನ್ನ ಚಿಂತನೆಯಾಗಿತ್ತು. ಆದರೆ ಎಲ್ಲವೂ ನಾನೇ ಮಾಡಬೇಕಾದ ಕಾರಣ ಇವುಗಳ ಕಾರ್ಯಗತಗೊಳಿಸಲು ಸಾದ್ಯವಾಗಲಿಲ್ಲ. ಹಲವು ಬಾರಿ ಮದ್ಯಾಹ್ನದ ಚಾರ್ಜಿಗಾಗಿ ಊಟವನ್ನೂ ತ್ಯಜಿಸಬೇಕಾಯಿತು.

ಜನರಿಗೆ ಈ ಕಲ್ಪನೆ ತೀರಾ ಹೊಸದು. ಸೊಲಾರ್, ರಿಮೋಟ್, ಪೆಟ್ರೊಲ್ ಎಂದೆಲ್ಲ ಪ್ರಶ್ನಿಸುವ ಜನಕ್ಕೆ ನಾನು ತುಳಿಯುವುದೂ ಕಾಣುವುದಿಲ್ಲವೆನೋ ? ಮೇಲ್ನೋಟಕ್ಕೆ ವಿದ್ಯಾವಂತರು ಅನಿಸಿಕೊಂಡವರಿಂದ ಸಹಾ ಹಲವಾರು ಅರ್ಥಹೀನ ಪ್ರಶ್ನೆಗಳು ಕೇಳಲ್ಪಡುತ್ತಿದ್ದೆ. ಈ ಅಸಂಬದ್ದ ಪ್ರಶ್ನೆಗಳು ಚರ್ಚೆಯ ಹಳಿ ತಪ್ಪಿಸುತ್ತದೆ. ಅದುದರಿಂದ ಅರ್ಥಪೂರ್ಣ ಸಂವಾದಕ್ಕೆ ಅವಕಾಶ ಬಹಳ ಕಡಿಮೆಯಾಗಿತ್ತು. ಇವರಿಗೆ ಅರ್ಥೈಸುವುದು ಪ್ರವಾಹದ ವಿರುದ್ದ ಈಜಿನಂತೆ. ಕಣ್ಣಿಗೆ ಕಾಣದ ಪರೀಸರ ಮಲೀನತೆ, ಅಪಾರ ಹಣ ಖರ್ಚುಗಳು ಇವರ ಚಿಂತನೆಗೆ ನಿಲುಕುವುದಿಲ್ಲ. ಆಸಕ್ತರಿಗೆ ಹಂಚಲು ಪುಟ್ಟದೊಂದು ಕರಪತ್ರ ನನ್ನಲ್ಲಿತ್ತು. ಅನಾವಶ್ಯಕ ಚರ್ಚೆಯಲ್ಲಿ ಸಿಲುಕಿಕೊಳ್ಳದೆ ನನ್ನ ದ್ಯೇಯ ದೋರಣೆಗನುಸಾರವಾಗಿ ಉಪಯುಕ್ತವೆನಿಸುವ ಹಾದಿಯಲ್ಲಿ ಸಾಗುವುದು ನನ್ನ ಜಾಯಮಾನ. ಸವೆಯದ ಹಾದಿಯೆಂದರೆ ಟೀಕೆಗಳು ಸಾಮಾನ್ಯ. ಹಾಗೆ ಇಲ್ಲೂ ಜನರ ಸ್ಪಂದನೆ ಮತ್ತು ನನ್ನ ನಡುವಳಿಕೆ ಪರಸ್ಪರ ಹೊಂದಾಣಿಕೆಯಾಗುವುದಿಲ್ಲ.

ಎಲ್ಲೆಡೆಯಲ್ಲೂ (ತಮಿಳುನಾಡು , ಕರ್ನಾಟಕ ಹಾಗೂ ಮಹಾರಾಷ್ಟ್ರ ) ವಿದ್ಯುತ್ ಕಡಿತ ನನ್ನ ಸಾಧನೆಗೆ ಬಹು ದೊಡ್ಡ ಅಡ್ಡಿಯಾಗಿತ್ತು. ಕರ್ನಾಟಕದ ನಾಲ್ಕು ಕಡೆಗಳಲ್ಲಿ ಕನಿಷ್ಟ ಕಡಿತವಿರುವ ವಿದ್ಯುತ್ ಇಲಾಖೆ ಕಛೇರಿ ಹಾಗೂ ನಿಯಂತ್ರಣ ಕೇಂದ್ರಗಳಲ್ಲಿ ನನಗೆ ಚಾರ್ಜಿಂಗ್ ಸಹಾಯ ದೊರಕಿತ್ತು. ಹಲವು ಕಡೆ ದಿನದ ಮದ್ಯೆ ವಿದ್ಯುತ್ತಿಗಾಗಿ ಕಾಯುವ ಸನ್ನಿವೇಶದಿಂದ ಸಮಯ ಪೋಲು. ಇಂತಹ ವಾಹನದಲ್ಲಿ ಊರೊಳಗಿನ ಒಡಾಟಕ್ಕೆ ವಿದ್ಯುತ್ ನಿಲುಗಡೆ ಸಮಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಇಂತಹ ದೀರ್ಘ ಪ್ರವಾಸಕ್ಕಾಗುವಾಗ ಮುಂದಿನ ಊರಿನಲ್ಲಿ ವಿದ್ಯುತ್ ಇದೆಯೋ ಎನ್ನುವುದು ಗೊತ್ತಿಲ್ಲದೆ ಕಷ್ಟವಾಗುತ್ತದೆ.ಬೀಜಾಪುರದಲ್ಲಿ ದೊರೆತಂತಹ ವಸತಿ ಗೃಹ ದೊರೆತರೆ ಕನಿಷ್ಟ ಒಂದು ಘಂಟೆಗೆ ಮಿಕ್ಕಿ ಉಳಿತಾಯ. ತಳಮಹಡಿಯಲ್ಲಿ ರೂಮು ಮತ್ತು ಪಕ್ಕದಲ್ಲಿಯೇ ಹೊಟೇಲು ನನ್ನ ಸಮಯ ಹಾಗೂ ಶ್ರಮ ಬಹಳಷ್ಟು ಉಳಿಸುತ್ತದೆ. ಹೆಚ್ಚಿನ ವಸತಿ ಗೃಹ ಎಂದರೆ ಉಪ್ಪರಿಗೆಯಲ್ಲಿ ರೂಮುಗಳು ಮಾತ್ರ. ತಮಿಳುನಾಡಿನ ಉದ್ದಕ್ಕೂ ಸಿಕ್ಕ ವಸತಿ ಗೃಹಗಳಲ್ಲಿ ನಾನು ಅಂದರೆ ನನ್ನ ದೇಹ ಬೆಳಗಿನ ಸ್ನಾನಕ್ಕೆ ಇಷ್ಟ ಪಡುವ ಬಿಸಿನೀರು ಒಮ್ಮೆಯೂ ದೊರಕಿರಲಿಲ್ಲ. ಪ್ರತಿ ರಾತ್ರಿ ಉಪ್ಪರಿಗೆಗೆ ನನ್ನ ಚೀಲಗಳ ಜತೆಗೆ ಬಾಟರಿ ಹೊರುವುದು ಹಾಗೂ ಆಹಾರ ಒದಗಿಸಿಕೊಳ್ಳುವುದು ಎಲ್ಲವೂ ನನ್ನ ದುರ್ಬಲ ದೇಹಕ್ಕೆ ಒತ್ತಡ ಉಂಟುಮಾಡುವಂತಹದಾಗಿತ್ತು.

ದಿನವೂ ಜಿಪಿಎಸ್ ಟ್ರಾಕ್ ನ್ನು ಅದರ ಪುಟಕ್ಕೆ ಹಾಕಲು ಮತ್ತು ಪುಟ್ಟ ವರದಿ ಹಾಗೂ ಚಿತ್ರಗಳ ಸಿದ್ದ ಪಡಿಸಿ ಅವುಗಳನ್ನು ಜಾಲತಾಣಕ್ಕೆ ಹಾಕಲು ಕನಿಷ್ಟ ಎರಡು ಘಂಟೆಗಳ ಕಾಲ ಬೇಕಾಗುತಿತ್ತು. ವಿಡಿಯೊ ಚಿತ್ರಗಳ ಸಂಕಲನ ಬಹಳ ಸಮಯ ಬೇಡುತ್ತದೆ. ಕೊನೆಗೆ ಆಯಲು ಸಿಗುವುದು ಅದರಲ್ಲಿ ಪುಟ್ಟ ತುಣುಕು ಮಾತ್ರ. ಅದರಿಂದಾಗಿ ನನ್ನ ನಿದ್ದೆಯ ಸಮಯಕ್ಕೆ ಕತ್ತರಿ ಬೀಳುತಿತ್ತು. ದಿನಗಳೆದಂತೆ ಈ ನಿದ್ದೆ ಸಾಲ ಹೆಚ್ಚುತ್ತಾ ಹೋಗಿ ದೇಹದ ಮೇಲೆ ದುಷ್ಪರಿಣಾಮ ಬೀಳುತ್ತದೆ.

ದಿನವೊಂದಕ್ಕೆ ಅತಿ ಹೆಚ್ಚು ದೂರ ಕ್ರಮಿಸಿದ್ದು ೧೫೫ ಕಿಮಿ. ಮರುದಿನ ಡಿಂಬಂ ಘಾಟಿ ಏರಲಿರುವುದರಿಂದ ಅದಕ್ಕೆ ಸಮೀಪದ ಪಟ್ಟಣ ಸತ್ಯಮಂಗಲದಲ್ಲಿಯೇ ಉಳಕೊಳ್ಳಲು ಮಳೆ ಬರುತ್ತಾ ಇದ್ದರೂ ಲೆಕ್ಕಿಸದೆ ಸಂಜೆ ಆರೂವರೆ ವರೆಗೆ ಪೆಡಲಿಸಿದ್ದೆ. ಉಳಿದ ದಿನಗಳಲ್ಲಿ ಸರಾಸರಿ ೧೨೦ ಕಿಮಿ ಎನ್ನಬಹುದು. ಕೊನೆಗೆ ಮಹಾರಾಷ್ಟ್ರದ ಗಡಿಯಾಚೆ ನನ್ನ ವಿದ್ಯುತ್ ನಿಯಂತ್ರಕ ತುಂಡಾಗಿ ಬಂದ ಕಾರಣ ಅನಿರೀಕ್ಷಿತವಾಗಿ ಪ್ರವಾಸ ಕೊನೆಗೊಳಿಸಬೇಕಾಯಿತು.

ಪ್ರವಾಸದ ಸಮಯದಲ್ಲಿ ಮಾದ್ಯಮಗಳಿಗೆ ಹೆಚ್ಚು ತೆರೆದುಕೊಳ್ಳದಿರಲು ಕಾರಣ ನನ್ನ ಟ್ರೈಕ್ ಲಕ್ಷಾಂತರ ರೂಪಾಯಿ ಬೆಲೆಬಾಳುವಂತದ್ದು ಎಂದು ತಿಳಿದರೆ ಉಪಕಾರದಿಂದ ತೊಂದರೆಯೇ ಹೆಚ್ಚು. ಹಾಗೆಂದು ಸಹಾಯ ಒದಗಿಸಿಕೊಳ್ಳುವ ಸಾದ್ಯತೆ ತೀರಾ ಕಡಿಮೆ. ಒಂದೆರಡು ಬಾರಿ ಸುತ್ತುವರಿದ ಮೂರ್ಖರ ಕೈಚಳಕ ನನ್ನ ಅಪಾಯಕರ ಸ್ಥಿತಿಗೆ ತಲಪಿಸಿದೆ. ಒಳ್ಳೆಯವರು ಪ್ರೇಕ್ಷಕರಾಗಿ ಉಳಿದರೆ ದುಷ್ಟರು ಚುರುಕಾಗುವ ಸಮಾಜ ನಮ್ಮದು. ನಿಜ, ಪಟ್ಟಣಗಳಲ್ಲಿ ವಸತಿ ಗೃಹ ನಿರ್ಣಯವಾದ ನಂತರ ಅವರು ನನಗೆ ಭದ್ರತೆ ಒದಗಿಸಿದ್ದಾರೆ ಅನ್ನುವುದು ಸಂತಸದ ವಿಚಾರ. ಆದರೆ ಅಪರಿಚಿತ ಪಟ್ಟಣಗಳಲ್ಲಿ ಸಂಜೆ ರಸ್ತೆಗಳಲ್ಲಿ ವಾಹನ ಜನದಟ್ಟಣೆ ಇರುವಾಗ ವಸತಿ ಗೃಹ ಹುಡುಕಾಡುವುದೂ ಕಷ್ಟದ ವಿಚಾರವಾಗುತಿತ್ತು.

ಹಲವಾರು ಕಡೆಗಳಲ್ಲಿ ಐವತ್ತು ಕಿಮಿ ವೇಗದಲ್ಲಿ ಇಳಿಜಾರಿನಲ್ಲಿ ಕೆಳ ಸಾಗುವಾಗ ಬಹಳ ರೋಮಾಂಚನಕಾರಿ ಅನುಭವ. ಅತಿ ದೊಡ್ಡ ಘಾಟಿ ರಸ್ತೆ ಸಿಕ್ಕಿದ್ದು – ಬನ್ನರಿ / ಡಿಂಬಂನಲ್ಲಿ. ವೈಜ್ನಾನಿಕವಾಗಿ ರೂಪಿಸಿದ ಅಗಲವಾದ ಮತ್ತು ಉತ್ತಮ ಪದರ ಹೊಂದಿದ್ದರಿಂದ ನನಗೆ ಅಷ್ಟೊಂದು ಶ್ರಮದಾಯಕ ಅನಿಸಿರಲಿಲ್ಲ. ಆದರೆ ಕರ್ನಾಟಕದಲ್ಲಿ ಅಲ್ಲಲ್ಲಿ ಕೃತಕವಾಗಿ ನಿರ್ಮಿಸಿದ ರಸ್ತೆ ಉಬ್ಬುಗಳು ಮತ್ತು ಗುಂಡಿ ಬಿದ್ದ ಹಾಳಾದ ರಸ್ತೆಗಳಲ್ಲಿ ವೇಗವನ್ನು ಪೂರ್ತಿ ಕಳಕೊಳ್ಳಬೇಕಾದ ಕಾರಣ ಶ್ರಮ ಹಾಗೂ ಸಮಯ ವಿಪರೀತ ಪೋಲಾಗುತ್ತಿತ್ತು. ಹೊಸಪೇಟೆ ಸಮೀಸುವಾಗ ಸಿಕ್ಕ ೧೫ ಕಿಮಿ ಸಂಪೂರ್ಣ ಕಿತ್ತು ಹೋದ ರಸ್ತೆಯಲ್ಲಿ ವಿರೂಪಗೊಂಡ ಅಕಾರದ ಮೈನು ಲಾರಿಗಳು ಸೃಷ್ಟಿಸುವ ಭಯಾನಕ ಸನ್ನಿವೇಶ ಮರೆಯಲಾಗದು. ನಾನು ಕೊನೆ ಘಳಿಗೆಯಲ್ಲಿ ನಿರ್ಣಯಿಸಿದಂತೆ ಕೇರಳದ ಬದಲು ತಮಿಳ್ನಾಡಿನಲ್ಲಿ ಉತ್ತರಕ್ಕೆ ಸಾಗಿದ್ದು ಒಳ್ಳೆಯದಾಗಿತ್ತು. ಅಲ್ಲಿನ ರಸ್ತೆಗಳು ಉದ್ದಕ್ಕೂ ತುಂಬಾ ಚೆನ್ನಾಗಿದ್ದವು.

ನನ್ನ ಕಾಲನ್ನು ಪೆಡಲಿಗೆ ಬಿಗಿಯಾಗಿ ಹಿಡಿದುಕೊಳ್ಳಲು ವ್ಯವಸ್ತೆಯಿತ್ತು. ಇದರಿಂದಾಗಿ ಪಕ್ಕನೆ ಎದ್ದು ಬರಲು ಸಾದ್ಯವಾಗದಂತಿದ್ದರೂ ಪೆಡಲಿನಿಂದ ಕಾಲು ಕಳಚಿಕೊಂಡರೆ ಗಾಯವಾಗುವ ಸಾದ್ಯತೆ ಬಹಳ ಕಡಿಮೆ. ಇದರಿಂದಾದ  ಒಂದು  ಸಮಸ್ಯೆ  ಎಂದರೆ  ಹೊಸ  ಊರುಗಳಲ್ಲಿ  ಅಪರಿಚಿತರಲ್ಲಿ    ಕೆಮರ ಕೊಟ್ಟು  ಪೋಟೊ  ತೆಗೆಯಪ್ಪಾ... ಎನ್ನಲು  ದೈರ್ಯ  ಸಾಲಲಿಲ್ಲ.     ಕಾಲಿನಿಂದ ಪೆಡಲ್ ತಳ್ಳುವಾಗಲೂ ಹಿಂದಕ್ಕೆ ಎಳೆಯುವಾಗಲೂ ನಮ್ಮ ಶಕ್ತಿ ವಾಹನವನ್ನು ಮುಂದಕ್ಕೆ ತಳ್ಳುವ ಕಾರಣ ಈ ವ್ಯವಸ್ತೆ ನಮ್ಮ ಶ್ರಮವನ್ನು ಹೆಚ್ಚು ಸದುಪಯೋಗಗೊಳಿಸುತ್ತದೆ. ಸಾಮಾನ್ಯವಾಗಿ ಪೆಡಲಿನ ಹಿಂದಿನ ಚಲನೆಯಲ್ಲಿ ಕಾಲು ತಪ್ಪದಂತೆ ಬಿಗಿಯಾಗಿ ಹಿಡಿದುಕೊಳ್ಳುವ ಮೂಲಕ ತಿರುಗುವ  ಪೆಡಲಿಗೆ   ನಾವೇ ತಡೆ ಉಂಟುಮಾಡುತ್ತೇವೆ.

ಸುಮಾರು ನೂರು ವರ್ಷ ಹಿಂದೆಯೇ ಏಳು ಯುನಿಟ್ ಬಾಟರಿ ಚಾರ್ಜಿನಲ್ಲಿ ನೂರು ಕಿಮಿ ಕಾರು ಚಲಿಸಿತ್ತು. ಇಂದಿನ ಕಾರುಗಳೂ ಹೆಚ್ಚು ಶಕ್ತಿದಾಯಕ ಯಂತ್ರಗಳು ಮತ್ತು ಹೆಚ್ಚಿರುವ ಬಾರದಿಂದಾಗಿ ನೂರು ಕಿಮಿಗೆ ಏಳು ಯುನಿಟ್ ಗಿಂತಲೂ ಹೆಚ್ಚು ಶಕ್ತಿ ಖರ್ಚು ಮಾಡುತ್ತದೆ. ಅರುವತ್ತು ಕಿಮಿ ವೇಗದ ನೂರು ಕಿಮಿ ಒಮ್ಮೆಗೆ ಕ್ರಮಿಸಲು ಸಾದ್ಯವಾಗುವ ಉತ್ತಮ ವಿದ್ಯುತ್ ವಾಹನಗಳ ಸ್ಪರ್ದಾತ್ಮಕ ಬೆಲೆಗೆ ಇಂದು ತಯಾರಿಸಲು ಸಾದ್ಯವಾಗುವುದಾದರೂ ಅವರ ಪೂರ್ವಾಗ್ರಹಗಳಿಗೆ ತರ್ಕಗಳಿಗೆ ತಯಾರಕರು ಜೋತು ಬಿದ್ದಿದ್ದಾರೆ. ಹಾಗೆಯೇ ಪ್ರತಿ ವರ್ಷ ವಿದ್ಯಾರ್ಥಿಗಳಿಂದ ಪ್ರೋಜೆಕ್ಟ್ ವರ್ಕ ಮಾಡಿಸುವ ತಾಂತ್ರಿಕ ಕಾಲೇಜುಗಳೂ ಇವುಗಳ ನಿರ್ಲಕ್ಷಿಸಿರುವುದು ಖೇದಕರ.

ಕಳೆದ ವರ್ಷ ಮಾದ್ಯಮದಲ್ಲಿ ಬಾರತಿಯ ವಿಜ್ನಾನಿಗಳು ರೂಪಿಸಿದ ಸೌರ ರಿಕ್ಷ ಬೆಳಕು ಕಂಡಿತ್ತು. ದೆಹಲಿಯ ಮಂತ್ರಿಗಳು ಅದರ ಜತೆ ಚಿತ್ರ ತೆಗಿಸಿಕೊಂಡದ್ದು ಮತ್ತು ಬಡ್ಜೇಟಿನಲ್ಲಿ ಉಲ್ಲೇಖವಷ್ಟೇ ಇದರ ಮಟ್ಟಿಗೆ ಸಾಧನೆ. ಯಾವುದೇ ಹೊಸತನವಿಲ್ಲದೆ ಓಬಿರಾಯನ ಕಾಲದ ಬಾಟರಿ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿರುವ ಮೋಟರುಗಳನ್ನು ಸೈಕಲ್ ರಿಕ್ಷಕ್ಕೆ ಹಾಕಿ ಚಿತ್ರಣದ ಪೂರ್ತಿ ಹೊರಗಿದ್ದು ಯಾವುದೇ ಸಂಬಂದವಿಲ್ಲದ ಸೌರ ವಿದ್ಯುತ್ [ನಾಮಕಾವಸ್ತೆ] ಹೆಸರಿಸಿದರು. ಮಾರುಕಟ್ಟೆ ಬೆಲೆ ಮೂವತ್ತೊಂದು ಸಾವಿರ ಎಂದರು. ಇದು ಬಾರತದ ವಿಜ್ನಾನಿಗಳು ಅದಿಕಾರಿಗಳು ರಾಜಕಾರಣಿಗಳು ಕೆಲಸ ಮಾಡುವ ವೈಖಿರಿ ಇದು ಬಿಂಬಿಸುತ್ತದೆ. ಬಾರತದ ತಂತ್ರಜ್ನಾನದ ಮಟ್ಟಿಗೆ ಇಂದಿನ ಹೀನ ಸ್ಥಿತಿಗೆ ಇವರೇ ಹೊಣೆಗಾರರು.

ಅತ್ಯಂತ ಬೇಸರದ ವಿಚಾರ ಎಂದರೆ ಪೆಟ್ರೋಲ್ ಕುಡಿಯುವ ನಾನೊ ಕಾರಿಗೆ ಎಂಟು ಸಾವಿರ ಸುಂಕ ಹಾಕುವ ಕೇಂದ್ರ ಸರಕಾರ ಈ ಪುಟ್ಟ ಟ್ರೈಕ್ ಹಾಗೂ ಮೋಟರುಗಳಿಗೆ ಅರುವತ್ತೆಂಟು ಸಾವಿರ ಕಸ್ಟಂ ಸುಂಕ ಹಾಕಿದ್ದು. ಚೀನಾ ಹಾಗೂ ಇಂಗ್ಲೇಂಡಿನಿಂದ ಸರಕು ತಂದ ಕೊರಿಯರ್ ಕಂಪೇನಿಗಳಿಗೆ ಮೊದಲೇ ಸಾಗಾಣಿಕೆ ವೆಚ್ಚ ಸಂದಾಯವಾದ ಕಾರಣವೋ ಎಂಬಂತೆ ಅವರೂ ಮತುವರ್ಜಿ ವಹಿಸಿರಲಿಲ್ಲ. ಈ ಬಗೆಗೆ ಕೇಂದ್ರ ಸರಕಾರವನ್ನು ಪುನಹ ಪರಿಶೀಲನೆಗೆ ಕೋರಿದಾಗ ಬಂದ ಎಲ್ಲ ಸರಿಯಾಗುಂಟು ಎನ್ನುವ ಸಮಜಾಯಶಿ ಸರಕಾರದ ಬಗೆಗೆ ಜುಗುಪ್ಸೆ ಮೂಡಿಸುತ್ತದೆ.

ಈ ವಿದ್ಯುತ್ ಬೆಂಬಲ ಕಷ್ಟವಾಗುವಾಗ ಬೆಂಬಲಕ್ಕೆ ಸಹಾಯವಿದೆ ಎನ್ನುವ ಚಿಂತನೆ ನಮ್ಮನ್ನು ಹೆಚ್ಚು ಶ್ರಮವಹಿಸಿ ಸೈಕಲ್ ತುಳಿಯಲು ಪ್ರೇರಣೆ ಸಿಗುತ್ತದೆ. ಹೆಚ್ಚು ಸಮಯ ಸೈಕಲ್ ತುಳಿಯುವುದು ಅಥವಾ ಹೆಚ್ಚು ಸಮಯ ಸೈಕಲಿನಲ್ಲಿ ಕಳೆಯುವುದು ಆರೋಗ್ಯಕ್ಕೂ ಉತ್ತಮ. ಪರದೇಶದಿಂದ ವಿದೇಶಿ ವಿನಿಮಯ ತೆತ್ತು ಅಮದಾಗುವ ಇಂದನವನ್ನು ಉಳಿಸಲು ಸಾದ್ಯ. ವಾತಾವರಣ ಮಲೀನತೆ ಮತ್ತು ರಸ್ತೆ ದಟ್ಟಣೆ, ಅಪಘಾತಗಳ ತಡೆಯುತ್ತದೆ.

ನನ್ನ ಹಣ ಹೆಚ್ಚಿನ ಬಾಗ ವಿನಿಯೋಗವಾದುದು ಟ್ರೈಕ್ ಖರೀದಿಗೆ. ಇಂದಿನಂತೆ ಅಲ್ಪ ಸಂಖ್ಯೆಯಲ್ಲಿ ತಯಾರಾಗುವ ಬದಲು ಟ್ರೈಕ್ ದೊಡ್ಡ ಸಂಖ್ಯೆಯಲ್ಲಿ ತಯಾರಾದರೆ ಅಗ್ಗವಾಗಲು ಸಾದ್ಯ. ಮಾರುತಿ ಕಾರ್ಖಾನೆಯಲ್ಲಿ ಒಬ್ಬ ಕೆಲಸಗಾರ ಹತ್ತು ಘಂಟೆ ಚಿಲ್ಲರೆ ಸಮಯದಲ್ಲಿ ಒಂದು ಕಾರನ್ನು ತಯಾರಿಸಿದರೆ ಈ ಟ್ರೈಕ್ ತಯಾರಿಸಲು ದುಬಾರಿ ಸಂಬಳದ ಮುಂದುವರಿದ ದೇಶಗಳಲ್ಲಿ ಎಪ್ಪತ್ತು ಮಾನವ ಘಂಟೆ ಬೇಕಾಗುತ್ತದೆ. ಸ್ವಾಭಾವಿಕವಾಗಿ ದುಭಾರಿಯಾಗುತ್ತದೆ.

ನನ್ನ ಊರೊಳಗಿನ ಓಡಾಟಕ್ಕೆ ಚಾರ್ಜೊಂದರ ನಲುವತ್ತು ಕಿಮಿ ಸಹಾಯಕೊಡುವ ಇಪ್ಪತ್ತು ಸಾವಿರ ರೂಪಾಯಿ ಬೆಲೆಯ ಒಂದು ಬಾಟರಿ ದಾರಾಳ ಸಾಕಾಗುತಿತ್ತು. ದೂರ ಪ್ರವಾಸ ಕೈಗೊಳ್ಳಲೆಂದು ಎರಡನೆಯ ಬಾಟರಿ ತರಿಸಿದ್ದೇನೆ. ಆದರೆ ಒಮ್ಮೆಗೆ ಹತ್ತು ಹದಿನೈದು ಕಿಮಿ ಓಡಾಡುವವರಿಗೆ ಇನ್ನೂ ಕಡಿಮೆ ಗಾತ್ರದ ಬಾಟರಿ ಸಾಕಾಗುತ್ತದೆ. ಅಂತಹ ಬಾಟರಿ ಅಬಿವೃದ್ದಿಗೆ ಹಾಗೂ ಅಲ್ಲಿ ಚಾರ್ಜಿಂಗ್ ವ್ಯವಸ್ತೆಗೆ ಪೂರಕವಾಗುವ ಸನ್ನಿವೇಶ ನಮ್ಮಲ್ಲಿ ನೀರ್ಮಾಣವಾಗಬೇಕಿದೆ.

ನನ್ನಲ್ಲಿ ಹಣ ಕೂಡಿದರೆ ಹಿಮಾಲಯ ಹತ್ತುತ್ತೇನೆ ಎನ್ನುವ ಬದಲು ಹಿಮಾಲಯ ಹತ್ತಲು ಈಗ ಹೊರಡುತ್ತೇನೆ, ನಾನು ಅದೃಷ್ಟಶಾಲಿಯಾದರೆ ಹಣ ಕೂಡುತ್ತದೆ ಎನ್ನುವ ದ್ಯೇಯ ನನ್ನದು. ಈ ಯೊಜನೆ ಸಾಕಷ್ಟು ಉಳಿತಾಯದ ಹಣ ವಿನಿಯೋಗಿಸಿದ್ದೇನೆ. ಮುಂದಿನ ದಾರಿಗೆ ಪ್ರಾಯೋಜಕರ ಸಹಾಯ ದೊರೆತರೆ ಉತ್ತಮವೆಂದು ಆಲೋಚಿಸುತ್ತೇನೆ. ಉತ್ತರ ಬಾರತವೆಂದರೆ ಸಹಾಯಕ್ಕೆ ಜತೆಗೊಬ್ಬರು ಬೇಕಿರುವುದರಿಂದ ಖರ್ಚು ಬಹು ಪಾಲು ಏರುತ್ತದೆ.

Wednesday, August 25, 2010

ವಿದ್ಯುತ್ ಸಹಾಯದಿಂದ ತ್ರಿ ಚಕ್ರ ಸವಾರಿ

ಇತ್ತೀಚಿನ  ದಿನಗಳಲ್ಲಿ  ನನ್ನ  ತ್ರಿ ಚಕ್ರ ಪ್ರವಾಸದ  ಬಗ್ಗೆ  ತಲೆ ಕೇಡಿಸಿಕೊಂಡಿದ್ದ  ಕಾರಣ    ಬ್ಲೋಗ್ ನಿರ್ಲಕ್ಷಕ್ಕೆ  ಒಳಗಾಯಿತು.  ಕೆಲವು  ಗೆಳೆಯರು  ಹಳ್ಳಿಯಿಂದ  ನಿರ್ಗಮಿಸಿದ್ದಿರಾ ?  ಎಂದು  ಪತ್ರಿಸಿದಾಗ  ಇಲ್ಲ  ಸದ್ಯದಲ್ಲಿ ನಿರ್ಗಮಿಸುತ್ತಿದ್ದೇನೆ  ಕನ್ಯಾಕುಮಾರಿಗೆ  ಎಂದು  ಉತ್ತರಿಸಿದ್ದೆ.

ಈಗೊಂದು ವಿಶಿಷ್ಟವಾದ  ಪ್ರವಾಸ  ಕೈಗೊಂಡಿದ್ದೇನೆ.  ಸೈಕಲಿನಲ್ಲಿ  ರಿಕಂಬಂಟ್  ಅರ್ಥಾತ್  ಮಲಗಿ  ಬಿಡುವುದು ಒಂದು  ಬೆಳಕು ಕಾಣದ  ಮಾದರಿ.  ನನಗೋ  ಮೈಮಾಲುವ  ಕಾರಣ   ದ್ವಿಚಕ್ರ ಪರವಾನಿಗೆ  ರದ್ದಾಗಿದೆ. ಹಾಗೆ  ಈಗ  ತ್ರಿಚಕ್ರಕ್ಕೆ  ಮೊರೆ ಹೋಗಿದ್ದೇನೆ.  ಸೈಕಲಿನ  ಅವಿಶ್ಕಾರದಲ್ಲಿ  ಗೇರುಗಳ  ಅನಂತರ  ಗಮನಾರ್ಹ  ಬೆಳವಣಿಕೆ  ಎಂದರೆ ಈ  ವಿದ್ಯುತ್  ಸಹಾಯಕ  ವ್ಯವಸ್ಥೆ. ಅದರಿಂದ  ದುರ್ಬಲರು  ಅಥವಾ  ಕಾರಣಾಂತರ  ಸೈಕಲ್  ಉಪಯೋಗಿಸದವರೂ  ಉಪಯೋಗಿಸಬಹುದಾದ  ಅನುಕೂಲಕರ  ವ್ಯವಸ್ಥೆ.

ನಿಜಕ್ಕೂ  ನಾವು  ಸಾರಿಗೆ  ಬಗೆಗೆ  ನಾವು  ಅನುಸರಿಸುತ್ತಿರುವ  ಮಾದರಿ  ತಪ್ಪು.  ಈಗಾಗಲೇ  ದೆಹಲಿಯಲ್ಲಿ  ಶೇಕಡ ೨೩ ರಷ್ಟು  ಭೂಬಾಗ   ರಸ್ತೆಗಳೇ  ಆಗಿವೆ.  ಆದರೂ  ಅಲ್ಲಿ  ಕಾರು  ನಿಲ್ಲಿಸಲು ಕಷ್ಟಪಡುತ್ತಿದ್ದಾರೆ  ಮಾತ್ರವಲ್ಲ    ವಿಚಾರ  ಹೊಡೆದಾಟ  ಕೊಲೆ  ಪ್ರಕರಣಗಳೂ  ನಡೆದಿವೆ. ಸುಮಾರು  ಮೂವತ್ತೈದು  ವರ್ಷ  ಹಿಂದೆ   ನಾನೊಮ್ಮೆ  ರಾಂಚಿಗೆ  ಹೋಗಿದ್ದೆ.  ರೈಲಿನಲ್ಲಿ  ಮೊದಲಾಗಿ    ಸೀಟ್ ಕಾದಿರಿಸಿರಲಿಲ್ಲ.    ಕೂಲಿಯವ  ಶಂಟಿಂಗ್ ಯಾರ್ಡ್ ನಿಂದ  ಮಾಮೂಲಿ  ಕಂಪಾರ್ಟ್ ಮೆಂಟ್ ನಲ್ಲಿ  ಸಾಮಾನಿಡುವ  ಅಟ್ಟಳಿಗೆಯಲ್ಲಿ  ಕುಳಿತು  ಬಂದು    ಜಾಗವನ್ನು  ನಮಗೆ  ಇಪ್ಪತ್ತಕ್ಕೋ  ಮೂವತ್ತಕ್ಕೋ  ಮಾರಿದ. ಅದುವೇ  ಮುಂದಿನ  ಮೂರು  ದಿನದ  ಸಿಂಹಾಸನ, ಶಯನ ಕೋಣೆ.  ಒಂದು  ಚಾ ಕೊಳ್ಳಲೋ  ಪಾಯಿಖಾನೆಗೋ  ಹೋಗಲೂ  ಅಳುಕು.  ಇತರರು   ಅಕ್ರಮಿಸಿದರೆ ಅನಂತರ  ನಮಗಿಲ್ಲವಲ್ಲ.  ಹಾಗೆ  ಇಂದು  ಹಲವರು ಬೆಳಗ್ಗಿನಿಂದ  ರಾತ್ರಿ ವರೆಗೆ  ಅಥವಾ  ವಾರಗಟ್ಟಲೆ  ಕಾರು  ನಿಂತಲ್ಲ್ಲಿಂದ  ಚಲಿಸುವುದೇ  ಇಲ್ಲ.

ಸುಮಾರು  ನಾಲ್ಕು ರೂಪಾಯಿ  ವಿದ್ಯುತ್  ನನಗೆ  ದಿನಕ್ಕೆ  ನೂರು  ಕಿಮಿ ಚಲಿಸಲು  ಸಾಕಾಗುತ್ತದೆ.  ನಿಜ,    ಬಗೆಗೆ  ಬಹಳ  ಲೆಕ್ಕಾಚಾರಗಳು  ಅಗತ್ಯ.  ಆದರೆ ನಮ್ಮ  ಹೆಚ್ಚಿನ  ಓಡಾಟ  ಒಮ್ಮೆಗೆ  ಪ್ಪತ್ತು  ಕಿಮಿ ದಾಟುವುದಿಲ್ಲ  ಎಂದಾಗ    ವಿದ್ಯುತ್  ಸೈಕಲು ನಿಜಕ್ಕೂ  ಉಪಯುಕ್ತ. ಇದರ  ಬಗೆಗೆ  ಹೆಚ್ಚಿನ  ವಿವರಣೆ  http://e-triking-india.blogspot.com/  ತಾಣದಲ್ಲಿ  ಲಭ್ಯ.

ನಾನು  ಉಪಯೋಗಿಸುತ್ತಿರುವುದು  ಮೊಬೈಲ್  ಅಥವಾ  ಲಾಪ್ ಟೋಪ್ ಗಳಲ್ಲಿ  ಉಪಯೋಗಿಸುತ್ತ್ರುವ   ಲಿತಿಯಂ ಅಯೋನ್ ಬಾಟರಿ.   ಇವು ಕಡಿಮೆ  ತೂಕ, ದುಬಾರಿ  ಆದರೆ  ಪರಿಸರ  ಸ್ನೇಹಿ.  ಹೀಗೆ    ಲೆಕ್ಕಾಚಾರದಿಂದ  ಕರಾರುವಕ್ಕಾಗಿ  ಎಷ್ಟು  ದೂರ  ಚಲಿಸಬಹುದು,  ಎಷ್ಟಕ್ಕೆ  ಚಾರ್ಜಿಂಗ್  ತಾಣಗಳು  ಸೇವೆ  ಒದಗಿಸಬಹುದು  ಮುಂತಾದ  ಪ್ರಶ್ನೆಗಳಿಗೆ  ಉತ್ತರಿಸಲು ಇನ್ನೂ  ಸಾಕಷ್ಟು  ಸಂಶೋಧನೆ  ಅಗತ್ಯ.      ಇದೊಂದು  ರೀತಿಯಿಯಲ್ಲಿ  technology  demo  ಪ್ರವಾಸ    ಅನ್ನಲೂ  ಬಹುದು. 

Friday, July 16, 2010

ಸೈಕಲ್ ಪರ ಜಾಹಿರಾತು

ಕಾರು ಓಡಿಸುವುದು ವಿಮಾನದಲ್ಲಿ ಪ್ರವಾಸ ಮಾಡುವುದು ಯಶಸ್ಸಿನ ಸಂಕೇತ ಎಂದು ನಮಗೆ ಚಿಕ್ಕಂದಿನಿಂದಲೇ ತಲೆಯಲ್ಲಿ ತುಂಬಲಾಗಿದೆ. ನಾವು   ನಮ್ಮ ಸಮಾಜದ ವಿದ್ಯಾಬ್ಯಾಸವನ್ನು ಮಾದ್ಯಮಕ್ಕೆ, ಜಾಹಿರಾತುಗಳಿಗೆ ವಹಿಸಿಕೊಟ್ಟು  ನಿಶ್ಚಿಂತೆಯಿಂದಿದ್ದೇವೆ. ಹೆಚ್ಚು ನೈಸರ್ಗಿಕ ಸಂಪನ್ಮೂಲಗಳ ಖರ್ಚು ಮಾಡಿದವನೇ ಜಾಣ ಅನ್ನುವ ಬಾವನೆ ಅವು ಮನದಲ್ಲಿ ಮೂಡಿಸುತ್ತವೆ. ಈ ಕ್ಷತ್ರಿಮ ಸಂದೇಶದ ಹಿಂದೆ ಸ್ವಾರ್ಥ ಹಿತಾಶಕ್ತಿಗಳ ಕೈವಾಡವಿರುವುದು ನಮಗೆ ಅರಿವಾಗುವುದೇ ಇಲ್ಲ. ಸೈಕಲಿನಲ್ಲಿ ಓಡಾಡುವವ ಸ್ವಾಭಿಮಾನ ಉಳಿಸಿಕೊಳ್ಳಲು ಹರಸಾಹಸ ಮಾಡುವ ಸನ್ನಿವೇಶ. ಪ್ರಪಂಚದ ಎಲ್ಲೆಡೆ ಪರೀಸ್ಥಿತಿ ಕೆಟ್ಟದಾಗಿಲ್ಲ ಅನ್ನುವುದಕ್ಕೊಂದು ಉದಾಹರಣೆ. .


ಡೆನ್ಮಾರ್ಕಿನಲ್ಲೊಂದು ಟಿವಿ ಜಾಹಿರಾತು. ಹೊಸ ಕಾರು ತೊಳೆಯುತ್ತಿರುವಾತ ಪಕ್ಕದ ಮನೆಯವನನ್ನು ಕೂಗಿ ಕರೆದು ತನ್ನ ಕಾರನ್ನು ಬಣ್ಣಿಸುತ್ತಾನೆ. ನನ್ನ ಕಾರಿನಲ್ಲಿ  ಎಬಿಎಸ್, ಹದಿನಾರು ಇಂಚು ರಿಮ್ ಮತ್ತು ಆರು ಗೇರು ಇತ್ಯಾದಿ ಇರುವುದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಎರಡನೇಯ ವ್ಯಕ್ತಿ ಇಪ್ಪತ್ತೆಂಟು ಇಂಚು ರಿಮ್, ಎಂಟು ಗೇರು, ಪ್ರಕಾಶಮಯ ದೀಪಗಳು ಮತ್ತು ಕಂಪ್ಯುಟರ್ ಅಳವಡಿಸಿದ ತಿರುಗಣಿ. ನನ್ನ ಪತ್ನಿ ಮತ್ತು ಮಗಳೂ ಅವುಗಳನ್ನು ಹೊಂದಿದ್ದಾರೆ ಎನ್ನುವಾಗ ಕಾರಿನ ಯಜಮಾನ ತಲೆ ತಗ್ಗಿಸಿ ಮನೆಯೊಳಗೆ ಹೋಗುತ್ತಾನೆ. ಕಂಡು ಕುಶಿಯಾಗಿ ಹಂಚಿಕೊಳ್ಳೋಣ ಅನಿಸಿತು.


ವ್ಯಾಯಾಮ ನಮ್ಮ ದೇಹದಲ್ಲಿ ಆರೋಗ್ಯಕರವಾದ endorphins ಹೆಚ್ಚು ತಯಾರಾಗಲು ಪೂರಕವಾಗಿದ್ದು ನಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಮುಂದುವರಿದ (?) ದೇಶಗಳಲ್ಲಿ ಕಾರು ಮೇಲಿನ ಅವಲಂಬನೆಯಿಂದಾಗಿ ಜನಸಾಮಾನ್ಯರು ವ್ಯಾಯಾಮ ಮಾಡುವ ಹಕ್ಕೂ  ಕಳಕೊಳ್ಳುತ್ತಿದ್ದಾರೆ. ಮನುಷ್ಯನ ವಿನ್ಯಾಸವು  ತನ್ನ ಪ್ರಯತ್ನದಲ್ಲೇ ಮುಂದೆ ಚಲಿಸುವಂತೆ ಇದ್ದು ನಮಗೆ ಈಗ ಕಾರು ಮತ್ತು ತೈಲ ಕಂಪೇನಿಗಳ ಬೋಧನೆಯಿಂದಾಗಿ ಆ ವಿಚಾರ ಮರೆತು ಹೋಗಿದೆ. ದರ್ಮಾರ್ಥ ಲಭ್ಯವಿರುವ ವಸ್ತುವನ್ನು ಪೊಟ್ಟಣ ಕಟ್ಟಿ ಮಾರುವುದು ಬಂಡವಾಳಶಾಹಿ ಚಿಂತನೆಯ ಫಲವಾಗಿದೆ. ಉದಾಹರಣೆ ಬಾಟಲಿ ನೀರು, ವ್ಯಾಯಾಮದ ಜಿಮ್, ಕಾರು ಮತ್ತು ಬಟ್ಟೆ ಒಣಗಿಸಲು ಉರುಳು ಯಂತ್ರಗಳು ಈಗ ಹಳ್ಳಿಗಳೂ ಸೇರಿದಂತೆ ಎಲ್ಲೆಲ್ಲೂ ಲಭ್ಯ.

Monday, July 05, 2010

ಮಠದಲ್ಲಿರುವ ಮಸೀದಿ

ನಿನ್ನೆ ತಿರುಗಾಟದಲ್ಲಿ ಉಪ್ಪಿನಂಗಡಿ ಸಮೀಪ ಮಠದಲ್ಲಿರುವ ಮಸೀದಿ ಕಂಡಾಗ ಹಿಂದಿನ ಕಥೆಯೊಂದು ನೆನಪಾಯಿತು. ಐಶ್ವರ್ಯ ತ್ರಿಲೋಕ ಸುಂದರಿಯೆಂದು ಆಯ್ಕೆಯಾಗುವಾಗ ಕೇಂದ್ರದಲ್ಲಿ ಕಲ್ಪನಾಥ ರೈ ಅನ್ನುವ ಮಂತ್ರಿಯಿದ್ದರು. ರೈ ಒಬ್ಬರು ಗೆದ್ದರೆ ನಾವು ಸುಮ್ಮನಿರುವುದಾದರೂ  ಹೇಗೆ ಎಂದು  ಬುದ್ದಿವಂತ  ಸಹಾಯಕನೊಬ್ಬ ಪ್ರಶ್ನಿಸಿ ಒಂದು  ಪ್ರಸ್ತಾಪವನ್ನು ಮುಂದಿಟ್ಟ. ಉತ್ತರ ಪ್ರದೇಶದ ಈ ರೈ ಮಂತ್ರಿಗಳು ರುಜು ಹಾಕಿದರು.ನಮ್ಮ ಯೆಡಿಯೂರಪ್ಪನವರು ಈ ಮಸೀದಿಯನ್ನೂ ಹಂಚೋಣಕ್ಕೆ ಸೇರಿಸುವರೇ ? ಏಕೆಂದರೆ ಅದು ಮಠದಲ್ಲಿದೆ.

Wednesday, April 07, 2010

ಹೆಗಲೇರಿದ ನನ್ನ ಸೈಕಲು

ಈ ಚಿತ್ರ ನೋಡುವಾಗ ನೆನಪು ಇಪ್ಪತೈದು ವರ್ಷ ಹಿಂದಕ್ಕೋಡಿತು. ಕಾರಣ ನ್ಯುಯೊರ್ಕ್ ಪಟ್ಟಣದಲ್ಲೊಮ್ಮೆ ನನ್ನ ಸೈಕಲೂ ಹೆಗಲೇರಿತ್ತು.
ತಡ ಸಂಜೆ ಅಮೇರಿಕ ತಲಪಿದ ಕಾರಣ ರಾತ್ರಿ ವಿಮಾನ ನಿಲ್ದಾಣದಲ್ಲೇ ಕಳೆದಿದ್ದೆ. ಅಲ್ಲೊಂದು ಕಂಬಕ್ಕೆ ಸೈಕಲು ಭದ್ರಪಡಿಸಿ ಮಲಗುವ ಚೀಲ ಬಿಡಿಸಿ ನಿದ್ದೆಗೆ ಜಾರಿದ್ದೆ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಪಟ್ಟಣದ ಹೊರಸಾಗಲು ದಾರಿ ಹುಡುಕುತ್ತಿದ್ದೆ. ನನ್ನಲ್ಲಿ ಭೂಪಟಗಳಿರಲಿಲ್ಲ. ಆದರೆ ಗುರಿ ಮತ್ತು ಸಾಗುವ ದಿಕ್ಕು ಎರಡೂ ಖಚಿತವಾಗಿತ್ತು. ನ್ಯೂ ಯೋರ್ಕ್ ಪಟ್ಟಣದ ವಿಮಾನ ನಿಲ್ದಾಣ ಇರೋದು ಲಾಂಗ್ ಐಲಾಂಡ್ ದ್ವೀಪದಲ್ಲಿ.

ಹಾಗಾಗಿ ಮೇಲು ಸೇತುವೆಯಲ್ಲಿ ಸಾಗುವ ಹೆದ್ದಾರಿ, ನದಿಯಡಿಯಲ್ಲಿ ಸಾಗುವ ರೈಲು ದಾರಿ ಎಲ್ಲವೂ ನನಗೆ ಅಸಾದ್ಯ ಅಥವಾ ದುಬಾರಿಯಾಗಿತ್ತು. ಆದರೂ ಬ್ರೊಂಕ್ಸ್ ಪ್ರದೇಶಕ್ಕೆ ಸಾಗಲು ವೀಟ್ ಸ್ಟೋನ್ ಸೇತುವೆ ಹತ್ತಿರ ಸಾಗಿದೆ. ಅಲ್ಲಿ ಖಚಿತ ಬೋರ್ಡ್ ಇತ್ತು – ಸೈಕಲುಗಳಿಗೆ ಪ್ರವೇಶವಿಲ್ಲ. ಅಲ್ಲಿ ಸಿಕ್ಕವರೆಲ್ಲ ವಿಚಾರಿಸಿದೆ. ಎಲ್ಲರೂ ಗೊತ್ತಿಲ್ಲವೆಂದು ತಲೆಯಾಡಿಸಿದರು. ಕೊನೆಗೊಬ್ಬನಲ್ಲಿ ನೀವು ನದಿಯಾಚೆ ಬ್ರೋಂಕ್ಸ್ ಗೆ ಹೇಗೆ ಹೋಗುವಿರಿ ಎಂದಾಗ ಆ ಪೂರ್ವಾಗ್ರಹ ಪೀಡಿತ ಅಸಾಮಿ ಇಲ್ಲಿಂದ ಯಾರೂ ಬ್ರೋಂಕ್ಸ್ ಗೆ ಹೋಗುವುದಿಲ್ಲ ಎಂದು ಬಿಟ್ಟ. ಅವನಿಗೆ ಅದೊಂದು ಕರಿಯರು ವಾಸವಾಗಿರುವ ಕೊಳಕು ಪ್ರದೇಶ ಅನ್ನುವ ಅನಿಸಿಕೆ.

ಕೊನೆಗೊಂದು ಪೋಲಿಸ್ ಕಾರು ಸಮೀಪಿಸಿ ಅದರಲ್ಲಿದ್ದ ಪೋಲಿಸರ ಹತ್ತಿರ ವಿಚಾರಿಸಿದೆ. ಅವರೂ ತಲೆ ಕೆರೆದು ಕೊಂಡರು. ಕೊನೆಗೆ ಅವರ ವೈರ್ಲೆಸ್ ಉಪಯೋಗಿಸಿ ಮಾಹಿತಿ ಹುಡುಕಿ ಕೊಟ್ಟರು. ನೀನು ಟ್ರೈಬೊರೊ ಸೇತುವೆ ಬಳಿ ಸಾಗು ಎಂದರು. ನನ್ನ ಸವಾರಿ ಟ್ರೈಬೊರೊ ಸೇತುವೆ ಬಳಿ ಸಾಗಿತು. ಅಲ್ಲಿ ಸೇತುವೆ ಮೇಲೆ ಸೈಕಲು ಸಾಗುವ ದಾರಿಯೇನೊ ಇತ್ತು. ಅದು ಮಾತ್ರ ನೂರು ಮೆಟ್ಟಲು ದಾಟಿದ ನಂತರವಿತ್ತು. ಕೆಲಸವಾಗಬೇಕಾದರೆ ಕತ್ತೆ ಕಾಲೂ ......... ನೆನಪಾಯಿತು. ಸರಿ ಸೈಕಲು ನನ್ನ ಹೆಗಲೇರಿತು. ಸೇತುವೆ ಮೇಲೆ ಮತ್ತು ಉತ್ತರದ ಬದಿಯಲ್ಲಿ ಸೈಕಲಿಗೆ ಪಾದಚಾರಿಗಳಿಗೆನ್ನುವ ಅಗಲವಾದ ದಾರಿ ಇತ್ತು.

ವಾಪಾಸು ಬಂದ ನಂತರ ಹೇಳುತ್ತಾ ಇದ್ದೆ. ಹೆಚ್ಚಿನ ಪಾಲು ಸೈಕಲು ನನ್ನ ಹೊತ್ತಿತು. ಕೆಲವೆಡೆ ಜತೆಯಲ್ಲಿ ವಿಮಾನ ಹಡಗು ರೈಲು ಪ್ರಯಾಣ ಮಾಡಿದ್ದೂ ಉಂಟು. ನ್ಯೂ ಯೊರ್ಕಿನಲ್ಲೊಮ್ಮೆ ಮಾತ್ರ ನಾನು ಸೈಕಲು ಹೆಗಲೇರಿಸುವುದು ಅನಿವಾರ್ಯವಾಗಿತ್ತು.

ಒಂದಂತೂ ಸತ್ಯ. ಸೈಕಲು ಸವಾರರೆಂದರೆ ಪ್ರಪಂಚದ ಎಲ್ಲ ಕಡೆಗಳಲ್ಲೂ ತಾತ್ಸಾರ. ಕಾರುಗಳ ಈ ರೀತಿ ಮೆಟ್ಟಲುಗಳ ಮೇಲೆ ಸಾಗಲು ಯಾರೂ ಹೇಳುವುದಿಲ್ಲ.

Sunday, March 28, 2010

ಸೈಕಲ್ ಲೋಕದಲ್ಲಿ ವೇಗದೂತ

ನೆದರ್ ಲಾಂಡಿನಲ್ಲಿ ನನ್ನ ಪಾಡಿಗೆ ಸೈಕಲಿಸುತ್ತಿದ್ದೆ. ಅನಿರೀಕ್ಷಿತವಾಗಿ ಬಹಳ ವೇಗವಾಗಿ ದಾಟಿ ಹೋದ ಸೈಕಲು ನನ್ನನ್ನು ಆಶ್ಚರ್ಯಚಕಿತನನ್ನಾಗಿ ಮಾಡಿತು. ಬಹಳ ಪ್ರಯತ್ನಿಸಿದರೂ ನನಗೆ ಅದರನ್ನು ಸಮೀಪಿಸಲು ಸಾದ್ಯವಾಗಲೇ ಇಲ್ಲ. ನಮ್ಮ ಮದ್ಯೆ ಇರುವ ಅಂತರ ಹೆಚ್ಚಾಗುತ್ತಲೇ ಹೋಯಿತು. ನಂತರ ಗೊತ್ತಾದ ವಿಚಾರ ಅದೊಂದು recumbent cycle.ವೈಜ್ನಾನಿಕವಾಗಿ ಆಲೋಚಿಸುವಾಗ ನಾವು ಮುಂದೆ ಸಾಗುವಾಗ ಗಾಳಿಯನ್ನು ಸೀಳುತ್ತಾ ಸಾಗುತ್ತೇವೆ. ನಡುಗೆಯ ವೇಗದಲ್ಲಿ ಅದು ನಮ್ಮನ್ನು ಸಮಸ್ಯೆ ಉಂಟು ಮಾಡುವುದಿಲ್ಲ. ಆದರೆ ವೇಗ ಹೆಚ್ಚಿದಂತೆ ಅದು exponentially ಹೆಚ್ಚಾಗುತ್ತದೆ. ಇಪ್ಪತ್ತೈದು ಕಿಮಿ ವೇಗದಲ್ಲಿ ಸಾಗುವ ಸೈಕಲ್ ಸವಾರ ತನ್ನ ಶಕ್ತಿಯ ಅರ್ಧ ಬಾಗವನ್ನು ಈ ಗಾಳಿಯ ತಡೆಯನ್ನು ಭೇದಿಸುವಕ್ಕೆ ವಿನಿಯೋಗಿಸುತ್ತಾನೆ. ಸಾಗಿದ ಕೂಡಲೇ ಬೆನ್ನ ಹಿಂದೆ ಉಂಟಾಗುವ ಗಾಳಿಯ ಕಡಿಮೆ ಒತ್ತಡ ಸಾಗುವವನನ್ನು ಹಿಂದಕ್ಕೆ ಎಳೆಯುತ್ತದೆ. ಅದುದರಿಂದ ಗಾಳಿಗೆ ಎದುರಾಗುವ ದೇಹದ ವಿಸ್ತೀರ್ಣ ಕಡಿಮೆಯಾಗಲು ಸೈಕಲ್ ಸ್ಪರ್ಧಾಳುಗಳು ಬಾಗಿ ಸೈಕಲಿಸುತ್ತಾರೆ.

ಜೋರಾಗಿ ಸೈಕಲ್ ತುಳಿಯುವುದರಲ್ಲಿ ಗಾಲಿ ತಳ್ಳುವುದರ ಬದಲಿಗೆ ಗಾಳಿ ತಳ್ಳುವುದಕ್ಕೆ ಬಹಳ ಶಕ್ತಿ ವಿನಿಯೋಗವಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಸುಮಾರು ನೂರು ವಾಟ್ಸ್ ಶಕ್ತಿಯಿಂದ ಸೈಕಲಿಸಬಹುದೆಂದು ಅಂದಾಜಿಸಲಾಗಿದೆ. ಎಡೆಬಿಡದೆ ಇಪ್ಪತ್ತನಾಲ್ಕು ಘಂಟೆ ಸೈಕಲಿಸಿದ ಹಳೆಯ ದಾಖಲೆಯನ್ನು ದಾಟಲು ಪ್ರಯತ್ನಿಸಿದ ಗ್ರೆಗ್ ಅವರ ಕತೆ ಚೆನ್ನಾಗಿದೆ. ಅವರು ಅದಕ್ಕಾಗಿ ತಯಾರು ಮಾಡಿದ ವಾಹನ ನೂರು ವಾಟ್ಸ್ ಶಕ್ತಿ ಉಪಯೋಗಿಸಿ ನಲುವತ್ತೈದು ಕಿಮಿ ಕ್ರಮಿಸಬಹುದಾದರೆ ನಮ್ಮ ಮಾಮೂಲಿ ಸೈಕಲ್ ಬರೇ ಇಪ್ಪತ್ತೆರಡು ಕಿಮಿ ಹೋಗುತ್ತದೆ. ಗ್ರೆಗ್ ಅವರು ಇಪ್ಪತ್ತ ನಾಲ್ಕು ಘಂಟೆಯಲ್ಲಿ ಒಂದು ಸಾವಿರದ ನಲುವತ್ತ ಎರಡು ಕಿಮಿ ದೂರದಷ್ಟು ಸೈಕಲಿಸಿದ್ದರು.

ಎದುರು ಗಾಳಿ ಅನುಭವಿಸಿದ ಸೈಕಲಿಗನಿಗೆ ಅದು ಎಷ್ಟು ಕಷ್ಟವೆನ್ನುವುದು ಅರಿವಿರುತ್ತದೆ. ಗಾಳಿಗೆ ಎದುರಾಗುವ ನಮ್ಮ ದೇಹದ ಚದರಳತೆ ಗಾಳಿಯ ತಡೆಯನ್ನು ನಿರ್ಣಯಿಸುತ್ತದೆ. ಅದುದರಿಂದ ವೇಗವಾಗಿ ಸೈಕಲಿಸುವವರು ಬಗ್ಗಿ ಸೈಕಲ್ ತುಳಿಯುತ್ತಾರೆ. ನಾವು ದರಿಸುವ ಬಟ್ಟೆ ದೊರಗಾಗಿದ್ದರೆ ಸಹಾ ಗಾಳಿಯ ತಡೆ ಹೆಚ್ಚು. ದೇಹಕ್ಕಂಟುವ ಪೋಲಿಸ್ಟರ್ ಬಟ್ಟೆಯನ್ನು ಸೈಕಲ್ ಸವಾರಿಯನ್ನು ಗಂಬೀರವಾಗಿ ಪರಿಗಣಿಸುವವರು ದರಿಸುತ್ತಾರೆ.೧೮೯೯ರಲ್ಲಿ ಒಬ್ಬ ಸೈಕಲಿಗ ಅಂದು ಮಾರುಕಟ್ಟೆಯಲ್ಲಿದ್ದ ಅತ್ಯಂತ ವೇಗದ ವಾಹನಕ್ಕಿಂತ ಹೆಚ್ಚು ಜೋರಾಗಿ ಸಾಗಿ ಒಂದು ನಿಮಿಷದಲ್ಲಿ ಒಂದು ಮೈಲು ಕ್ರಮಿಸಿದ್ದ. ರೈಲು ಹಳಿಗಳ ಮದ್ಯೆ ಹಾಕಿದ್ದ ಹಲಗೆಯ ಮೇಲೆ ಸೈಕಲ್ ಸವಾರಿ ಕೈಗೊಳ್ಳಲಾಗಿತ್ತು. ಅವನಿಗೆ ಎದುರು ರೈಲು ಗಾಡಿಯೊಂದು ಗಾಳಿಯ ತಡೆ ನಿವಾರಿಸುತ್ತಾ ಸಾಗಿತ್ತು. ಅದರ ನೆರಳಲ್ಲಿ ಉಂಟಾದ ನಿರ್ವಾತ ಪ್ರದೇಶ ಹಿಂದಿನಿಂದ ಸಾಗಿದ ಚಾರ್ಲಿಗೆ ಪರೋಕ್ಷ ಸಹಾಯವನ್ನೂ ಮಾಡಿತ್ತು.


ಮೇಲಿನ ಚಿತ್ರದಲ್ಲಿರುವ ಬಾರ್ಬರ ಎಂಬವರು ಕಳೆದ ವರ್ಷ ಜೂನಿನಲ್ಲಿ ಕೇವಲ ಎಂಬತ್ತ ಎರಡು ಕಿಮಿ ವೇಗದಲ್ಲಿ ಸೈಕಲಿಸಿ ವೈಯುಕ್ತಿಕ ದಾಕಲೆ ಸ್ಥಾಪಿಸಿದರು. ಅವರಿಗೆ ಮಹಿಳೆಯರಲ್ಲಿ ಪ್ರಥಮ ಮತ್ತು ಪ್ರಪಂಚದ ನಾಲ್ಕನೆಯ ಸ್ಥಾನ ಎಂಬ ಎರಡು ದಾಖಲೆಗಳು ಲಬ್ಯವಾದವು. ಈ ಪುಟ್ಟ ರೀಲು ನೋಡುವಾಗ ನಿಮಗೆ ಅಂದು ನನಗಾದ ಅನುಭವ ಹೆಚ್ಚು ಅರ್ಥವಾಗಬಹುದು.

ಈ ಸೈಕಲುಗಳು ದೊಡ್ಡ ಸಂಖ್ಯೆಯಲ್ಲಿ ತಯಾಗದ ಕಾರಣ ಬಹಳ ದುಬಾರಿ. ಎಲ್ಲವೂ ಎಂಟು ಹತ್ತು ಜನ ಕೆಲಸ ಮಾಡುವ ತಿಂಗಳಿಗೆ ನಾಲ್ಕು ಎಂಟು ಸೈಕಲು ನಿರ್ಮಿಸುವ ಪುಟ್ಟ ಕಾರ್ಖಾನೆಗಳು. ಆಸಕ್ತ ಜನ ಮಾತ್ರ ಇವುಗಳ ಗಿರಾಕಿ.

ಅಮೇರಿಕದ ಬಾವಿ ಇಂಜಿನಿಯರುಗಳು ಮನುಷ್ಯ ಚಾಲಿತ ವಾಹನ ಅಬಿವೃದ್ದಿ ಪಡಿಸುತ್ತಿದ್ದಾರೆ. ಅವರು ಅತ್ಯುತ್ತಮ ಸೈಕಲುಗಳ ವಿನ್ಯಾಸಗೊಳಿಸುವ ಸ್ಪರ್ದೆಯಲ್ಲಿ ಬಾಗವಹಿಸುತ್ತಾರೆ. ಪ್ರಪಂಚದ ಹಲವು ಕಡೆಗಳಲ್ಲಿ ವಾಹನಗಳ ನೂಕು ಬಲ ಮಾನವ ಶಕ್ತಿಯಿಂದ ಮಾತ್ರ ಪೊರೈಸಲು ಸಾದ್ಯ. ಅದುದರಿಂದ ಮಾನವನ ಶ್ರಮ ಸದುಪಯೋಗಗೊಳಿಸುವ ಈ ಪ್ರಯತ್ನಗಳು ಖಂಡಿತ ಆರೋಗ್ಯಕರ.


ಕಳೆದ ತಿಂಗಳು ಪಿತಾಂಪುರದಲ್ಲಿ ಬಾರತದ ಐವತ್ತಕ್ಕೂ ಮಿಕ್ಕಿ ಇಂಜಿನಿಯರಿಂಗ್ ಕಾಲೇಜುಗಳು ಪಾಲ್ಗೊಂಡ ಬಗ್ಗಿ ವಾಹನ ವಿನ್ಯಾಸ ಸ್ಪರ್ದೆ ನಡೆದಿತ್ತು. ಎಲ್ಲಕ್ಕೂ ಲಂಬಾರ್ಡಿನಿ ಇಂಜಿನ್ ಅಳವಡಿಸಿದ ನಾಲ್ಕು ಚಕ್ರದ ವಾಹನಗಳು. ಅವುಗಳ ವಿನ್ಯಾಸಗೊಳಿಸುವುದರಲ್ಲಿ ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸಲು ಅವಕಾಶ ಇತ್ತು. ಅದರೆ ಈ ಗಾಡಿಗಳ ವಿನ್ಯಾಸದ ಸ್ಪರ್ದೆಯಲ್ಲಿ ಒಂದಷ್ಟು ಕೈಗಾರಿಕೆಗಳಿಗೆ ತಮಗೆ ಬೇಕಾದ ವಿದ್ಯಾರ್ಥಿಗಳ ಹೆಕ್ಕಲು ಸಹಾಯವಾಯಿತು ಹೊರತು ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಹೀಗೆ ಅಮೇರಿಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತುಳಿಯುವ ಶ್ರಮದ ಸದುಪಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಮ್ಮ ವಿದ್ಯಾರ್ಥಿಗಳು ಪ್ರಾಯೋಗಿಕವಲ್ಲದ project work ನಲ್ಲಿ ನಿರತರಾಗಿರುತ್ತಾರೆ.

ಇಂದು ನಮ್ಮ ವಿಜ್ನಾನಿಗಳು ತಂತ್ರಜ್ನರು ವಾಹನಗಳ ಗಾಳಿ ತಡೆಯನ್ನು ಕಡಿಮೆ ಮಾಡಲು ಹಲವು ವಿಧದಲ್ಲಿ ಪ್ರಯತ್ನಿಸುತ್ತಾರೆ. ಹೆಚ್ಚು ಗಾಳಿ ತಡೆ ಉಂಟುಮಾಡುವ ವಾಹನಗಳ ಮೊನಚಾದ ಮೂಲೆಗಳನ್ನು ಉರುಟಾಗಿಸುತ್ತಾರೆ. ಅದರೆ ಬಡವರ ಸೈಕಲ್ ತಂತ್ರಜ್ನಾನ ಕಳೆದ ನೂರು ವರ್ಷಗಳಲ್ಲಿ ಯಾವುದೇ ಪ್ರಗತಿಯನ್ನು ಹೊಂದಿಲ್ಲ. ಮೊದಲು ಅವರಿಗೆ ಬೇಕಾದ ಕಾರಕೂನರನ್ನು ರೂಪಿಸಲೆಂದು ನಮ್ಮ ವಿದ್ಯಾ ವ್ಯವಸ್ಥೆಗೆ ಬ್ರಿಟೀಷರು ಅಡಿಪಾಯ ಹಾಕಿದ್ದರು. ಅದು ಇಂದು ಸೈಬರ್ ಕೂಲಿಗಳ ತಯಾರಿಕೆಗೆ ಉಪಯೋಗವಾಗುತ್ತಲಿದೆ. ಸ್ವಾವಲಂಬನೆ ಚಿಂತನೆ ದೂರವೇ ಉಳಿದಿದೆ.

Saturday, February 20, 2010

ನ್ಯೂ ಯೋರ್ಕಿನಲ್ಲೊಬ್ಬ ಅಪರೂಪದ ಫೊಟೊಗ್ರಾಫರ್

ಮೊದಲ ನೋಟದಲ್ಲಿ ಯಾವುದೋ ಪುರಾತನ ಕಾಲದ ಪೋಟೊ ಅನಿಸುತ್ತದೆ. ಹೌದು. ಶತಮಾನದಷ್ಟು ಹಳೆಯ ತಂತ್ರಜ್ನಾನ ಉಪಯೋಗಿಸುತ್ತಾರೆ ಮೈಕಲ್ ಬಯರ್ಡ್. ನ್ಯೂ ಯೋರ್ಕ್ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಫೋಟೊ ಮಾರುವ ಇವರು ಬಿಸಾಕುವಂತಹ ಚಿಕ್ಕ ಡಬ್ಬಗಳ ಉಪಯೋಗಿಸಿ ಕೆಮರ ತಯಾರಿಸಿಕೊಳ್ಳುತ್ತಾರೆ. ಅದರಲ್ಲಿ ಪಿಲ್ಮ್ ಕಾಗದ ಇಟ್ಟು ಪ್ರೇಕ್ಷಣೀಯ ಜಾಗಗಳಲ್ಲಿ ಕ್ಷಣ ಬೆಳಕು ಹಾಯಿಸುತ್ತಾರೆ. ಮನೆಯ ಕತ್ತಲು ಕೋಣೆಯಲ್ಲಿ ಸಂಸ್ಕರಿಸಿ ಕೊಂಟಾಕ್ಟ್ ಪ್ರಿಂಟ್ ಹಾಕಿ ಅದನ್ನು ಮಾರಲು ಸೈಕಲು ಏರಿ ಪಟ್ಟಣದ ಕೇಂದ್ರಬಾಗಕ್ಕೆ ಬರುತ್ತಾರೆ.  ಇವರ ದೊಡ್ಡ ಅಂಚೆ ಚೀಟಿ ಗಾತ್ರದ ಪೋಟೊ ಪ್ರವಾಸಿಗಳು ಕುತೂಹಲದಿಂದ ಇಪ್ಪತ್ತು ಡಾಲರ್ ತೆತ್ತು ಕೊಳ್ಳುತ್ತಾರೆ.  


ಸಿಕ್ಕ ಯಾವುದಾದರೂ ಡಬ್ಬದಲ್ಲಿ ಚೂರು ಪೋಟೊ ಕಾಗದ ಹಾಕಿ ತೂತಿನಲ್ಲಿ ಬೆಳಕಿಗೊಡ್ಡುತ್ತೇನೆ.   ಅದೊಂದು ಜಾದೂ ಎನಿಸುವಷ್ಟು ಸರಳ ಎನ್ನುತ್ತಾರೆ ಮೈಕಲ್ ಬಯರ್ಡ್. ಈ ಪೀಲ್ಮ್ ರೋಲ್ ಡಬ್ಬ ಒಳಬಾಗ ಉರುಟಾಗಿರುವ ಕಾರಣ ಈ ಪೋಟೊಗಳು ಸಹಾ ಅದನ್ನು ಪ್ರತಿಫಲಿಸುತ್ತವೆ. ಅವರ ಪೋಟೊಗಳು ತೀರಾ ಚಿಕ್ಕದು ಮತ್ತು ಸರಳವಾದುದು. ಪ್ರತಿಯೊಂದು ಪ್ರತ್ಯೇಕವಾಗಿ ಅವರ ಕತ್ತಲ ಕೋಣೆಯಲ್ಲಿ ಮುದ್ರಣಗೊಂಡಿರುತ್ತದೆ.


ಭೌತಶಾಸ್ತ್ರದ ಬೆಳಕಿನ ಬಗೆಗಿನ ಪ್ರಥಮ ಪಾಠದಲ್ಲಿ ಬರುವುದು ಪಿನ್ ಹೋಲ್ ಕೆಮರಾ. ಚಿಕ್ಕವನಾಗಿದ್ದಾಗಲೇ ಈ ಕಲೆಯ ಬಗೆಗೆ ಅಪಾರ ಆಸಕ್ತಿ ಹೊಂದಿದ ನನಗೆ ಉತ್ತಮ ಪಿನ್ ಹೊಲ್ ಕೆಮರಾ ಚಿತ್ರಗಳ ನೋಡಲು ಮೂವತ್ತೈದು ವರ್ಷ ಕಾಯಬೇಕಾಯಿತಲ್ಲ ಎನ್ನುವಾಗ ಬೇಸರವಾಗುತ್ತದೆ. ಅಂದು ತಿಳಿದಿದ್ದರೆ ಪ್ರಯೋಗ ಮಾಡಿ ಸಫಲನಾಗಲು ದಾರಾಳ ಅವಕಾಶಗಳಿದ್ದವು. ದ್ವಿತಿಯಾರ್ದ ಅಂದರೆ ಪೋಟೊ ಸಂಸ್ಕರಣೆ ತಿಳಿದ ಕಾರಣ ಯಶಸ್ಸಿಗೆ ಬಹಳ ಸಮೀಪದಲ್ಲಿಯೇ ಸಾಗಿದ್ದೆ. ಆದರೆ ಈಗ ಉಪಯೋಗಿಸುವಾಗ ಖರ್ಚಿಲ್ಲದ ಈ ಡಿಜಿಟಲ್ ಕೆಮರಗಳ ಉಪಯೋಗಿಸಿದ ನಂತರ ಈ ಫಿಲ್ಮ್ ಕೆಮರಗಳ ಉಪಯೋಗಿಸ ಹೊರಟರೆ ಉದ್ದಕ್ಕೂ ಒಂಟಿ ದಾರಿ. ನಮ್ಮ ಸ್ಟುಡಿಯೊದವರು ಸಂಸ್ಕರಣೆ ನಿಲ್ಲಿಸಿ ವರ್ಷಗಳಾದವು. ಇಂದು ಡೆವೆಲಪರ್, ಹೈಪೊ, ಪೋಟೊ ಮುದ್ರಣ ಕಾಗದ, ನೆಗೆಟಿವ್ ಹಾಳೆ ಎಲ್ಲವೂ ಹುಡುಕಾಡಲು ಸುಲಭವಲ್ಲ. ಮೊದಲು ನಮ್ಮೂರ ಸ್ಟುಡಿಯೊ ಗೆಳೆಯರಲ್ಲಿ ಈ ವಸ್ತುಗಳು ದಾರಾಳವಾಗಿ ಸಿಗುತಿತ್ತು.


ಇಂದಿಗೂ ಮಸೂರರಹಿತ ಪುಟ್ಟ ಕಿಂಡಿ ಕೆಮರಗಳ ತಯಾರಕರಿದ್ದಾರೆ. ಸಾಗುವಾನಿ ಮರದಲ್ಲಿ ಮಾಡಿದ ಗಾಜಿನ ಮಸೂರ ರಹಿತ ಚಿಕ್ಕ ತೂತಿನ ಕೆಮರಾ ಈಗ ಹಾಂಗ್ ಕಾಂಗಿನಲ್ಲಿ ತಯಾರಿಸಿ ಪ್ರಪಂಚಾದ್ಯಂತ ಮಾರಾಟ ಮಾಡುತ್ತಾರೆ. ಇಂದು ಇವರ ಗ್ರಾಹಕರಿರುವ ಇಪ್ಪತೇಳು ದೇಶಗಳ ಪಟ್ಟಿಯಲ್ಲಿ ಬಾರತದ ಹೆಸರಿಲ್ಲ. ನಾವು ಕಳಪೆ ಗುಣಮಟ್ಟದ ಡಿಜಿಟಲ್ ಕೆಮರಗಳಲ್ಲಿ ತೃಪ್ತರು.   ಈ ಅಧುನಿಕ ಕಿಂಡಿ ಕೆಮರಗಳ  ಮೇಲ್ಕಾಣಿಸಿರುವಂತಹ    ಚಿತ್ರಗಳನ್ನು ನೋಡಲು ಈ ತಾಣವ ಬೇಟಿ ಕೊಡಿ.

ಪಿನ್ ಹೋಲ್ ಕೆಮರಾ ಬಗೆಗಿನ ಕುತೂಹಲಕರ ಮಾಹಿತಿ ಈ ಕೊಂಡಿಯಲ್ಲೂ ನನಗೆ ದೊರೆತವು. ಅಂದು ಕಮುನಿಸ್ಟ್ ದೇಶಗಳಲ್ಲಿ ನೂರೆಂಟು ತಡೆಗಳಿದ್ದೂ ತಮ್ಮ ಕುತೂಹಲ ತಣಿಸಿಕೊಂಡ ಹಲವು ಹವ್ಯಾಸಿಗಳಿದ್ದಾರೆ. ಅಂತೆ ಈ ತಾಣದಲ್ಲೂ ಅದರ ಬಗೆಗೆ ಕಿರುನೋಟ ಸಿಗುತ್ತದೆ.

ಅತ್ಮೀಯ ಗೆಳೆಯ ರೋಹಿತ್ ಅವರಲ್ಲಿ ಕೆಮರಕ್ಕಿಂತ ದುಬಾರಿ ಮಸೂರಗಳಿವೆ. ಮುಂದೆ ಖರೀದಿಸುವ ಕೆಮರಗಳ ಜತೆಯೂ ಉಪಯೋಗಿಸಬಹುದು ಎನ್ನುತ್ತಾರೆ ರೋಹಿತ್. ಆದರೆ ಮಸೂರಗಳೇ ಇಲ್ಲದ ಕೆಮರಗಳು ಇನ್ನು ಮಾರಾಟವಾಗುತ್ತಿದೆ ಎನ್ನುವಾಗ ಅಶ್ಚರ್ಯ ಸಂತಸ ಎರಡೂ ಆಗುತ್ತದೆ. ಅದು ಕೆಲಸ ಮಾಡಲಾರದು ಎನ್ನುವ ಭಾವನೆ ಎಲ್ಲರಂತೆಯೇ ನನ್ನ ಮನದಲ್ಲಿ ಮನದಲ್ಲಿ ಮೂಡಿದ್ದು ಇರಬಹುದು. ಬಹಳ ಇಷ್ಟ ಪಟ್ಟು ಸಂಸ್ಕರಣೆ ಕಲಿತಿದ್ದೆ. ಎರವಲು ಪಡೆದ ಕೆಮರಗಳಲ್ಲಿ ಉತ್ತಮ ಚಿತ್ರ ಸೆರೆ ಹಿಡಿದಿದ್ದೆ. ಆದರೆ ಅದನ್ನು ಕಾಪಾಡಿಕೊಳ್ಳುವುದರ ಕಾಳಜಿ ಇಲ್ಲದೆ ಎಲ್ಲವೂ ಕಾಣೆಯಾಗಿವೆ.  ಎಷ್ಟು ಸಮೀಪದಲ್ಲಿ ಒಂದು ಅಧ್ಬುತ ಲೋಕ ತೆರೆದುಕೊಳ್ಳುವುದರ ತಪ್ಪಿಸಿಕೊಂಡಿದ್ದೇನೆ ಅಂತ ಯೋಚಿಸುವಾಗ ಬಹಳ ಬೇಸರವಾಗುತ್ತದೆ.

Tuesday, February 16, 2010

ಸಾಕು ಪ್ರಾಣಿಗಳಿಗೂ ಸರಕಾರಿ ವಕೀಲರು

ಸ್ವಿಜರ್ ಲಾಂಡ್ ಬರುವ ತಿಂಗಳು ಮಾರ್ಚ್ ಏಳರಂದು ಜನಾಭಿಮತ ಸಂಗ್ರಹಿಸಲು ಮತದಾನ ಮಾಡುತ್ತದೆ. ಈ ವಿಚಾರಕ್ಕೆ ಜನಬೆಂಬಲ ದೊರೆತರೆ ಪ್ರತಿ ಜಿಲ್ಲೆಯಲ್ಲೂ ಸಾಕು ಪ್ರಾಣಿ ಹಿತಕಾಯುವ ಸರಕಾರಿ ವಕೀಲರ ನೇಮಕಕ್ಕೆ ಕಾರಣವಾಗುತ್ತದೆ. ಇಂದು ನಾಯಿ ಬೆಕ್ಕುಗಳ ವಿಚಾರ ಮತದಾನಕ್ಕೆ ಹೊರಟಿರುವ ಸ್ವಿಜರ್ಲಾಂಡಿನಲ್ಲಿ ಹೆಂಗಸರಿಗೆ ಮತದಾನದ ಹಕ್ಕು ದೊರಕಿದ್ದೇ ೧೯೭೧ ರಲ್ಲಿ ಅಂದರೆ ಈಗ ಮತದಾನದ ಹಕ್ಕು ಸಿಕ್ಕಿ ಬರೇ ಮೂವತ್ತೊಂಬತ್ತು ವರ್ಷಗಳಾದವು.

ಈಗಾಗಲೇ ಸ್ವಿಜರ್ಲಾಂಡಿನಲ್ಲಿ ಮರ್ಯಾದೆಯಲ್ಲಿ ಜೀವಿಸುವ ಹಕ್ಕು ಮೀನ್ಮನೆಯಲ್ಲಿರುವ ಕೆಂಪು ಮೀನುಗಳಿಗೂ ಪೆಟ್ಟಿಗೆಯಲ್ಲಿರುವ ಗಿನಿ ಪಿಗ್ ಗಳಿಗೂ ಲಭಿಸಿದೆ. ಇಂದು ಜಾರಿಯಿರುವ ಕಾಯಿದೆ ಪ್ರಕಾರ ಸಂಘಜೀವಿಯಾದ, ಗುಂಪಿನಲ್ಲಿ ವಾಸಿಸುವ ಗೊಲ್ಡ್ ಫಿಶ್ ಗಳನ್ನು ಒಂಟಿಯಾಗಿರಿಸುವಂತಿಲ್ಲ. ಅವುಗಳ ಮೀನ್ಮನೆಗಳು ನಾಲ್ಕು ಬದಿಯೂ ಪಾರದರ್ಶಕವಾಗಿರುವಂತಿಲ್ಲ. ನಾಯಿ ಸಾಕಲಿಚ್ಚಿಸುವವರು ನಾಲ್ಕು ಘಂಟೆ ಪಾಠ ಹೇಳಿಸಿಕೊಂಡನಂತರ ಸಾಕಲು ಅನುಮತಿ ಪಡೆಯುತ್ತಾರೆ. ಬರುವ ತಿಂಗಳು ನಡೆಯುವ ಪ್ರಜಾನಿರ್ಧಾರದಲ್ಲಿ ಜನ ಬೆಂಬಲ ದೊರೆತರೆ ಪ್ರತಿ ಜಿಲ್ಲೆಯೂ ವಕೀಲರನ್ನು ನೇಮಿಸಬೇಕಾಗುತ್ತದೆ.

ಪ್ರಾಣಿ ದೌರ್ಜನ್ಯ ಅಪವಾದ ಎದುರಿಸುವ ಅಪರಾದಿಗಳು ವಕೀಲರನ್ನು ನೇಮಿಸಿಕೊಳ್ಳಬಹುದಾಗಿದೆ. ಆದರೆ ಪ್ರಾಣಿಗಳು ಇಂದಿನ ಪರೀಸ್ಥಿತಿಯಲ್ಲಿ ವಕೀಲರ ನೇಮಿಸಿಕೊಳ್ಳುವಂತಿಲ್ಲ. ಸುದ್ದಿ ಗೋಷ್ಟಿಯಲ್ಲಿ ಮಾತನಾಡುತ್ತಾ  ಅಂಟೋನ್  ಗೋತ್ಚಲ್  ಎನ್ನುವ ವಕೀಲರು ಅಂತಹ ಸಂದರ್ಭ ನನ್ನ ಪ್ರವೇಶವಾಗುವುದು ಎನ್ನುತ್ತಾರೆ. ಇವರು ಝೂರಿಚ್ ಜಿಲ್ಲೆಯ ಪ್ರಾಣಿಗಳ ವಕೀಲರಾಗಿ ೨೦೦೭ರಲ್ಲಿ ನೇಮಿಸಲ್ಪಟ್ಟರು. ತಮ್ಮ ವಾದ ಮಂಡಿಸಲು ಕೋರ್ಟಿಗೆ ಪ್ರಾಣಿಗಳು ಹಾಜರಾಗಬೇಕಾಗಿಲ್ಲ. ನಮ್ಮ ಗೋತ್ಚಲ್ ವಕೀಲರು ಅವುಗಳ ಪರವಾಗಿ ವಾದಿಸುತ್ತಾರೆ.ಈ ಪ್ರಯೋಗವನ್ನು ದೇಶಾದ್ಯಂತ ಹರಡಲು ಈಗಾಗಲೇ ಒಂದು ಲಕ್ಷಕ್ಕೂ ಮಿಕ್ಕಿ ಸಹಿ ಸಂಗ್ರಹಿಸಲಾಗಿದೆ.

ಅಲ್ಲಿ ಇದು ಕಾನೂನಾಗಿ ಜಾರಿಗೆ ಬಂದರೆ ಯುರೋಪ್ ಅಮೇರಿಕವನ್ನು ಕುರಿಮಂದೆಯಂತೆ ಹಿಂಬಾಲಿಸುವ ನಮ್ಮ ದೇಶವೂ ಅನುಸರಿಸಬಹುದಾಗಿದೆ. ನಮ್ಮ ಜನಪ್ರತಿನಿಧಿಗಳು ಅನುಮೋದಿಸುವ ವಿಚಾರದಲ್ಲಿ ಖಂಡಿತ ಕೈ ಎತ್ತುತ್ತಾರೆ. ಹೆಮ್ಮೆಯಿಂದ ನನ್ನ ಮಗ ನಾಯಿಬೆಕ್ಕುಗಳ ಡಾಕ್ಟ್ರು ಎನ್ನುವ ದಾಟಿಯಲ್ಲಿಯೇ ಆಗ ನಮ್ಮ ಹುಡುಗ ನಾಯಿ ವಕೀಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಬರಬಹುದು. ಪಶು ವೈದ್ಯ ಮನೋಹರ ಉಪಾದ್ಯರ ಚಿಕಿತ್ಸಾಲಯ ಪಕ್ಕದಲ್ಲಿ ನಾಯಿ ವಕೀಲರ ಕಛೇರಿ ಇದ್ದರೆ ಸುಲಭ. ಒಂದು ಕಡೆ ಹೋದರೆ ಎರಡು ಕೆಲಸವೂ ಆದಂತೆ.

ಒಮ್ಮೆ ಸಾಕು ಪ್ರಾಣಿಗಳಿಗೆ ವಕೀಲರ ನೇಮಿಸುವ ಹಕ್ಕುಗಳು ಲಬಿಸಿದರೆ ಅನಂತರ ಹೊಸ ತರದ ವ್ಯಾಜ್ಯಗಳು ಸುರುವಾಗಬಹುದು. ಹತ್ತು ವರ್ಷ ವಿದೇಯನಾಗಿ ಯಜಮಾನನ ಸೇವೆ ಮಾಡಿದ ನಾಯಿ ಎಂಟು ವರ್ಷ ಯಜಮಾನತಿಗೆ ಸಂಗಾತಿಯಾಗಿದ್ದ ಬೆಕ್ಕುಗಳು ಆಸ್ತಿ ಪಾಲಿಗಾಗಿ ಕೋರ್ಟ್ ಬಾಗಿಲು ತಟ್ಟಬಹುದು. ಅನಿಲ ಬಾವಿ ಮೇಲೆ ಕಣ್ಣಿಟ್ಟಿರುವ ಅಂಬಾನಿ ಕುಟುಂಬದ ನಾಯಿಗಂತೂ ಜೆತ್ಮಲಾನಿ ( ಬದುಕಿದ್ದರೆ ) ವಕೀಲರಾಗಲು ಸಿದ್ದವಾಗುವುದು ಖಚಿತ.

Saturday, February 06, 2010

ನಾವ್ಯಾಕೆ ಇಟಲಿಯ ಪೀಡಿಬಸ್ ಮಾದರಿ ಅನುಸರಿಸಬಾರದು ?

ಇತ್ತೀಚಿನ ದಿನಗಳಲ್ಲಿ ಇಟಲಿಯಲ್ಲಿ ಜನಪ್ರಿಯವಾಗುತ್ತಿರುವ ಶಾಲಾ ವಾಹನ ಎಂದರೆ ಪೀಡಿ ಬಸ್. ಈ ಆಂದೋಲನ ಪ್ರಾರಂಬವಾದ ಲೆಕ್ಕೊ ಪಟ್ಟಣದಲ್ಲಿ ಪ್ರತಿದಿನ ಬೆಳಗ್ಗೆ ಹತ್ತು ಬೇರೆ ಬೇರೆ ಪ್ರಾಥಮಿಕ ಶಾಲೆಗಳಿಗೆ ಸಾಗುವ ಆರು ನೂರು ಮಕ್ಕಳು ಹದಿನೇಳು ಪೀಡಿಬಸ್ ಏರುತ್ತಾರೆ. ಪೀಡಿಬಸ್ ಎಂದರೆ ಹೊಗೆ ಉಗುಳುವ ಬಸ್ಸಲ್ಲ, ಮಕ್ಕಳು ಕುಣಿಯುತ್ತಾ ನಡೆಯುತ್ತಾ ಶಾಲೆಗೆ ಸಾಗುವ ವ್ಯವಸ್ಥೆ. ನಿತ್ಯವೂ ನಡೆಯುವ ಇದೊಂದು ರೀತಿಯಲ್ಲಿ ನಮ್ಮ ಉತ್ಸವದ ಮೆರವಣಿಗೆಯಂತಿದೆ. [ಪೀಡಿಬಸ್ ಎಂದರೆ ಇಟಾಲಿಯನ್ ಬಾಷೆಯಲ್ಲಿ ಕಾಲು- ಬಸ್ಸು ಅನ್ನುವರ್ಥ. ಆದರೆ ನಮ್ಮೂರ ಆಡುಬಾಷೆ ತುಳುವಿನಲ್ಲಿ ಕಾರು ಎಂದರೆ ಕಾಲು ಎನ್ನುವ ಅರ್ಥ. ಅದುದರಿಂದ ನನ್ನ ಈ ಬರಹದಲ್ಲಿ ಮುಂದೆ ಇಟಲಿಯ ಪೀಡಿಬಸ್ ನಮ್ಮೂರ ಕಾರ್ ಬಸ್ಸಾಗುತ್ತದೆ ]


ಕಾರುಗಳು ಉಗುಳುವ ಹೊಗೆಯಿಂದ ಉಂಟಾಗುವ ವಾಯು ಮಲೀನತೆ, ಊರಿನಲ್ಲಿ ವಾಹನಗಳ ದಟ್ಟಣೆ ಮತ್ತು ಮಕ್ಕಳ ಬೊಜ್ಜು ಸಮಸ್ಯೆ - ಈ ಮೂರು ಉದ್ದೇಶಗಳ ಹೊಂದಿ ಏಳು ವರ್ಷ ಹಿಂದೆ ಲೆಕ್ಕೊ ಊರಿನಲ್ಲಿ ಕಾರ್ ಬಸ್ಸಿಗೆ ಚಾಲನೆ ನೀಡಲಾಯಿತು. ಪ್ರತಿ ವರ್ಷ ಜಗತ್ತಿನ ಮೂವತ್ತಾರು ಬಾಷೆಯಲ್ಲಿ ಜಾಗತಿಕ ಪರಿಸರ ಚಿತ್ರಣ ಸೂಚಿಸುವ ವರ್ಲ್ಡ್ ವಾಚ್ ನ ಕಳೆದ ತಿಂಗಳು ಬಿಡುಗಡೆಯಾದ ವಾರ್ಷಿಕ ವರದಿಯಲ್ಲಿ ಕಾರು ಬಸ್ಸಿನ ಪ್ರಥಮವಾಗಿ ಜಾರಿಗೆ ತಂದ ಲೆಕ್ಕೊ ಊರಿನ ಉಲ್ಲೇಖವಿದೆ. ಇದೊಂದು ಅವರಿಗೆ ಬಹಳ ಹೆಮ್ಮೆ ಪಡುವಂತಹ ವಿಚಾರ.ಬಸ್ಸು ವಿವಿದ ನಿಲ್ದಾಣಗಳಿಗೆ ನಿಗದಿತ ಸಮಯಕ್ಕೆ ತಲಪುತ್ತದೆ. ನಿಗದಿತ ಬಸ್ಸು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಮಕ್ಕಳ ತಲಪಿಸಿದರಾಯಿತು. ಕರಕೊಂಡು ಹೋಗುತ್ತಾರೆ. ಬಸ್ಸು ಚಾಲಕ ಬೊಮ್ಮನಹಳ್ಳಿಯ ಕಿಂದರಿಜೋಗಿ ಮುನ್ನಡೆಸುತ್ತಾನೆ. ಕೊನೆಯಲ್ಲಿ ನಿರ್ವಾಹಕನೂ ಇರುತ್ತಾನೆ. ಪ್ರತಿ ದಿನ ಬೆಳಗ್ಗೆ ನೌಕರರು ಹಾಗೂ ಮಕ್ಕಳ ಪೋಷಕರು ಸ್ವಯಂ ಸೇವಕರು ಮಿನುಗುವ ಅರಿಶಿನ ಬಣ್ಣ ಮೇಲಂಗಿ ದರಿಸಿ ಮಕ್ಕಳ ಸಾಲು ಪ್ರಕಾರ ಮುನ್ನಡೆಸುತ್ತಾರೆ. ಈ ಬಸ್ಸು ಸಾಗಲು ಇತರ ವಾಹನಗಳ ತಡೆಯುತ್ತಾರೆ. ಕೆಲವು ಅಜ್ಜ ಅಜ್ಜಿಯರೂ ಸ್ವಯಂ ಸೇವೆಗೆ ಸಿದ್ದವಾಗಿರುವಂತೆ ಚಿತ್ರ ನೋಡುವಾಗ ಸಂಶಯ ಬರುತ್ತದೆ.
 
ಶಾಲೆ ಮುಗಿದ ನಂತರ ಬಸ್ಸು ವಾಪಾಸು ತಂದು ಬಿಡುತ್ತದೆ. ಎಲ್ಲ ಬಸ್ಸು ದಾರಿಗಳಿಗೂ ಅರ್ಥಪೂರ್ಣಹೆಸರುಗಳಿವೆ. ದಿನಾಲು ಮಕ್ಕಳ ಹಾಜರಿ ದಾಖಲಾಗುತ್ತದೆ. ಊರಿನ ಆಡಳಿತ ಈ ವ್ಯವಸ್ಥೆಗೆ ವರ್ಷಕ್ಕೆ ಒಂಬತ್ತು ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಮಕ್ಕಳೂ ಸಮಾಜದ ಬಗೆಗೆ ಕಾಳಜಿ ವ್ಯಕ್ತ ಪಡಿಸುತ್ತಾರೆ. ಎಲ್ಲಾದರೂ ಅಡ್ಡಾ ದಿಡ್ಡಿ ವಾಹನ ನಿಲ್ಲಿಸಿರುವುದು ಕಂಡರೆ ಎಚ್ಚರಿಸುತ್ತಾರೆ. ದಾರಿಯಲ್ಲಿ ಗಲೀಜು ಮಾಡುವ ನಾಯಿಗಳ ಯಜಮಾನರನ್ನು ಛೇಡಿಸುತ್ತಾರೆ.


ಕಾರ್ಡೂಸಿ ಶಾಲೆಗೆ ನೂರು ಮಕ್ಕಳು ಅಂದರೆ ಶಾಲೆಯ ಅರೆವಾಶಿ ಸಂಖ್ಯೆ ಇಂದು ಕಾರ್ ಬಸ್ಸಲ್ಲಿ ಬರುತ್ತಾರೆ. ಇವರಲ್ಲಿ ಹಲವರು ಹಿಂದೆ ಕಾರಲ್ಲಿ ಬರುತ್ತಿದ್ದರು. ಹೆಚ್ಚಿನ ಕಾರ್-ಬಸ್ ಪ್ರಯಾಣ ಒಂದು ಮೈಲು ಮಿಗದೆ ಇದ್ದರೂ ಒಟ್ಟಿನಲ್ಲಿ ಒಂದು ಲಕ್ಷ ಮೈಲು ಕಾರು ಓಡುವುದು ನಿವಾರಿಸಿದೆ ಎಂದು ಲೆಕ್ಕೊ ಪಟ್ಟಣದ ಶಾನುಬೋಗರು ಅಬಿಪ್ರಾಯ ಪಡುತ್ತಾರೆ. ದಿನಾಲೂ ನೂರ ನಲುವತ್ತನಾಲ್ಕು ಕಾರುಗಳು ಊರಿನ ಶಾಲೆಗಳಿಗೆ ಬರುವುದನ್ನು ಈ ವ್ಯವಸ್ಥೆ ತಡೆದಿದೆ.

ನನ್ನ ಇಬ್ಬರು ಮಕ್ಕಳು ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಅವರ ಬೆನ್ನು ಚೀಲ ಬಾರವಾಗಿರುತ್ತದೆ ಎಂದು ಒಬ್ಬ ಮಾತೆ ಮಕ್ಕಳು ಹದಿನೈದು ನಿಮಿಷ ನಡೆಯುವುದರ ಬದಲಿಗೆ ಕಾರಿನಲ್ಲಿ ಕರೆ ತಂದುದಕ್ಕೆ ಸಮಜಾಯಶಿ ಕೊಡುತ್ತಾರೆ. ಕೆಲವರು ಈ ಕಾರು ಬಸ್ಸಿನ ದಾರಿಗಿಂತ ದೂರದಲ್ಲಿರುತ್ತಾರೆ. ಅಂತಹವರಿಗೆ ಊರ ಗಡಿಯಲ್ಲಿ ಕಾರು ಬಸ್ಸಿನ ನಿಲುಗಡೆಯಿದೆ ಎಂದು ಅದರ ವ್ಯವಸ್ಥಾಪಕರು ಹೇಳುತ್ತಾರೆ.

ಕಳೆದ ವರ್ಷದಲ್ಲಿ ಇಂಗ್ಲೇಂಡಿನಲ್ಲಿ ಶಾಲೆಗೆ ಮಕ್ಕಳ ಸಾಗಿಸಲು ಶೇಕಡ ಹದಿನೆಂಟು ಕಾರು ಓಡಾಟ ಎಂದು ಲೆಕ್ಕ ಹಾಕಿದ್ದಾರೆ ಮತ್ತು ಇದು ಹೆಚ್ಚಿನ ದೇಶಗಳಲ್ಲಿ ಹೆಚ್ಚುತ್ತಲೇ ಇದೆ. ಇಂದು ಪರದೇಶಗಳಿಂದ ಅಹಾರ ಅಮದು ಮಾಡುವುದು ಮತ್ತು ಅಗ್ಗದ ವಿಮಾನ ಪ್ರಯಾಣದ ಜತೆಗೆ ಶಾಲೆಗೆ ಕಾರು ಓಡಿಸುವುದು ಪರಿಸರದ ಮೇಲೆ ಅಪಾರ ದುಷ್ಪರಿಣಾಮ ಬೀಳುವುದೆಂದು ಯುರೋಪಿನ ಪರಿಸರ ಸಂಸ್ಥೆ ಕಳೆದ ವರ್ಷ ಎಚ್ಚರಿಸಿದೆ. ಈ ನಡೆಯುವ ಬಸ್ಸು ಕಾರುಗಳ ಅವಲಂಬನೆ ಕಡಿಮೆ ಮಾಡುವ ಉದ್ದೇಶ ಮಾತ್ರವಲ್ಲ, ಮಕ್ಕಳ ಬೊಜ್ಜು ಕರಗಿಸುವುದೂ ಹೌದು. ಹಲವಾರು ದೇಶಗಳಲ್ಲಿ ಮಕ್ಕಳ ಬೊಜ್ಜು ಗಂಬೀರ ಸಮಸ್ಯೆ.


ಇಟಲಿಯಲ್ಲಿ ಈ ವರ್ಷ ಜನವರಿಯಲ್ಲಿ ಕಾರ್ ಬಸ್ಸು ವಿಚಾರದಲ್ಲಿ ಎರಡು ಹೊಸ ಬೆಳವಣಿಕೆಗಳು. ಅಮೇರಿಕದ ವರ್ಲ್ಡ್ ವಾಚ್ ಸಂಸ್ಥೆ ಈ ವರ್ಷ ಲಿಕ್ಕೊ ಪಟ್ಟಣದ ಈ ಕಾರ್ ಬಸ್ಸಿನ ಕೊಡುಗೆ ಗುರುತಿಸಿದೆ. ಜನವರಿ ಇಪ್ಪತ್ತನಾಲ್ಕರಂದು ಇನ್ನೊಂದು ಊರು ಕಾರ್ ಬಸ್ಸ್ ಪಟ್ಟಿಗೆ ಸೆರ್ಪಡೆಯಾಗಿದೆ. ಅದು ಸಾಗುವ ದಾರಿ ಮತ್ತು ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ.

ಇದನ್ನು ನಡೆಸಲು ಬಹಳ ಪ್ರಯತ್ನ ಅವಶ್ಯ. ಮಕ್ಕಳನ್ನು ಕಾರಿನಲ್ಲಿ ತುಂಬಿ ಶಾಲೆಗೆ ಬಿಡುವುದು ಸುಲಭದ ದಾರಿ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರುಗಳಿರುವಾಗ ಅವುಗಳ ಉಪಯೋಗಿಸದೆ ಇರುವುದೂ ಕಷ್ಟ. ಮಳೆ ಬಂದ ದಿನ ಹಾಜರಾತಿ ಕಡಿಮೆಯಿರುತ್ತದೆ. ಹಿಮ ಬೀಳುವಾಗ ಪೂರಾ ಮಕ್ಕಳು ಹಾಜರ್. ಆಟವಾಡಿಕೊಂಡು ಶಾಲೆಗೆ ಹೋಗಬಹುದಲ್ಲಾ.

ಹಳ್ಳಿಯೊಂದರ ಮೂಲೆಯಲ್ಲಿ ವಾಸವಾಗಿರುವ ನಾನು ಮಕ್ಕಳ ಶಾಲಾ ಬಾಬ್ತು ಸುಮಾರು ಹತ್ತು ವರ್ಷ ದಿನಕ್ಕೆ ಮೂವತ್ತೆರಡು ಕಿಮಿ ವಾಹನ ಓಡಿಸಿದ್ದೇನೆ. ಈ ರೀತಿಯ ಯಾವುದೇ ಪರ್ಯಾಯ ವ್ಯವಸ್ಥೆ ಇದ್ದರೆ ಶಾಲೆಯ ಬುಡದಲ್ಲಿ ಬಿಡುವ ಬದಲು ಊರ ಗಡಿಯಲ್ಲಿ ಬಿಡುತ್ತಿದ್ದೆ. ಶಾಲೆ ಸಮೀಪಿಸಿದಂತೆ ಹೆಚ್ಚಿನ ಮಕ್ಕಳು ಮತ್ತು ಗುರುಗಳು ನಡೆದುಕೊಂಡು ಹೋಗುವಾಗ ನಾವು ವಾಹನದಲ್ಲಿ ಬಂದಿಯಾಗಿರುವುದು ನಿಜಕ್ಕೂ ಮುಜುಗರ ಹಿಂಸೆಯಾಗುತ್ತಿತ್ತು. ಅದುದರಿಂದ ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅರ್ಧ ಕಿಮಿ ದೂರದಲ್ಲಿ  ಬಿಡುತ್ತಿದ್ದೆ.

Tuesday, February 02, 2010

ಮರಗಳನ್ನೇ ಕಲಾಕೃತಿಯನ್ನಾಗಿಸುವ ಆಸ್ಟ್ರೇಲಿಯದ ಪೀಟರ್

ಈ ಚಿತ್ರ ನೋಡುವಾಗ ಮೊದಲು ಹೆಚ್ಚೇನು ಅಚ್ಚರಿಯಾಗಲಿಲ್ಲ. ಹಲವು ಪಾರ್ಕುಗಳಲ್ಲಿರುವ ಇಂತಹ ಆಕೃತಿಯನ್ನು ಯಾವ ಯಂತ್ರಶಿಲ್ಪಿಯೂ ತಯಾರಿಸಬಲ್ಲ ಅನಿಸಿತು. ಆದರೆ ಇದು ತಯಾರಾದದ್ದು ಕಬ್ಬಿಣದಿಂದಲ್ಲ ಮತ್ತು ಎಚ್ಚರಿಕೆ ವಹಿಸಿ ರೂಪಿಸಿದ ಸಜೀವ ಮರ ಎನ್ನುವಾಗ ಅದ್ಬುತ ಅನಿಸಿತು.ಆಭರಣಗಳ ಕೆಲಸ ಮಾಡುವ ಪೀಟರ್ ಅವರಿಗೆ ಈ ಅಲೋಚನೆ ಮೂಡಿ ಹಲವು ವರ್ಷಗಳ ಅನಂತರ ಬೆಕ್ಕಿ ಅವರ ಜತೆ ಜತೆಗಾರಿಕೆಯಲ್ಲಿ ಈ ಮರಗಳ ರೂಪಿಸುವುದಕ್ಕೆ ಕೈ ಹಾಕಿದರಂತೆ. ಇಂದು ಅವರ ಇಬ್ಬರು ಮಕ್ಕಳು  ಆಟವಾಡುವುದು ಕುಣಿದಾಡುವುದು  ಈ ಜೀವಂತ ಪಾರ್ಕಿನಲ್ಲಿ. ಆಸ್ಟ್ರೇಲಿಯದಲ್ಲಿರುವ ಇವರ ತೋಟದಲ್ಲಿ ಕರಾರುವಕ್ಕಾಗಿ ಬೆಳೆಸಿದ ಕೆಲವು ಮರಗಳು ಉತ್ತಮ ತರಗತಿಯ ಪೀಠೋಪಕರಣವಾದರೆ ಉಳಿದವುಗಳು ಜೀವಂತ ಕಲಾಕೃತಿಯಾಗಿ ಉಳಿಯುವುದಂತೆ.  ಇದರಲ್ಲಿ  ನಮಗೊಂದು  ಮಾದರಿ  ಇದೆಯೋ ?


ವರ್ಷಗಳ ಹಿಂದೆ ಆತ್ಮೀಯ ಗೆಳೆಯ ಅಶ್ವಿನ್ ಜೂಜುಗಾರರ ಸ್ವರ್ಗ ಮರುಭೂಮಿ  ಮಧ್ಯೆ ಇರುವ    ಲಾಸ್ ವೆಗಾಸಿಗೆ ಕರೆದೊಯ್ದಿದ್ದ. ಆಗ ಹೋಟೆಲ್ ಕಿಟಿಕಿಯಲ್ಲಿ ಹೊರ ನೋಡುವಾಗ ನನಗೆ ದೂರದಲ್ಲಿ ಒಂದು ಈಚಲಿನಂತಹ ಮರದ ಮರುನಾಟಿ ಕಂಡಿತ್ತು. ನಮ್ಮ ಅಡಿಕೆ ಕೃಷಿಗೆ ಪರ್ಯಾಯ ಉದ್ಯೋಗವಾಗಿ ಈ ರೀತಿ ವಿವಿದ ಮರಗಳ ನಾಲ್ಕಾರು ವರ್ಷ ಬೆಳೆಸಿ ಮಾರಬಹುದೋ ? ಎಂದು ಚಿಂತಿಸಿದ್ದೆ. ವಾಪಾಸಾದ ನಂತರ ಸಮಸ್ಯೆಗಳ ಕೊಚ್ಚೆಯಲ್ಲಿ ಸಿಲುಕಿದಾಗ ಈ ಆಲೋಚನೆ ಮನದಿಂದ ಜಾರಿತ್ತು.  ಮೇಲಾಗಿ   ಸುತ್ತಲಿರುವವರೆಲ್ಲರೂ  ನನ್ನ  ಹುಚ್ಚಾಟ  ವಿರೋದಿಸುವವರೇ.

ಬೆಂಗಳೂರಿನ ನರ್ಸರಿಗಳಿಗೆ ಕೆಲವು ಅಡಿಕೆ ಕೃಷಿಕರು ತೋಟದೆಡೆಯಲ್ಲಿ ಹೂವಿನ  ಗಿಡಗಳ   ತಯಾರಿಸಿ ಮಾರುವುದರ ಅಡಿಕೆ ಪತ್ರಿಕೆ ಬೊಟ್ಟು ಮಾಡಿತ್ತು. ಆಗ ಪುನಹ ಮೇಲಿನ ಅಲೋಚನೆ ಮಿಂಚಿ ಮಾಯವಾಗಿತ್ತು.  ಮರದ ಕಾಂಡದ ಸುತ್ತಳತೆ ಹೆಚ್ಚಿಸಲು ಅಕ್ಕಪಕ್ಕದಲ್ಲಿ ಒಂದೇ  ಜಾತಿಯ  ಸಸಿ ನೆಟ್ಟು ಅವುಗಳ ಮದ್ಯಬಾಗದಲ್ಲಿ ಕಸಿ ಕಟ್ಟುವುದೂ ಎಲ್ಲಿಂದಲೋ ಹೆಕ್ಕಿದ ಮಾಹಿತಿ ಅಡಿಕೆ ಪತ್ರಿಕೆ ಬಹು ಹಿಂದೆ ಪ್ರಕಟಿಸಿದೆ.   ಹಾಗೆ ಘಟ್ಟವೇರುವಾಗ ಕಾಫಿ ಗಿಡಗಳ ಉಪಯೋಗಿಸಿ ಮಾಡಿದ ಕಲಾತ್ಮಕ ಆಕೃತಿಗಳು ಮನಸೆಳೆದರೂ ಅವೆಲ್ಲ ಸತ್ತ ಗಿಡಗಳಿಗೆ ರೂಪ ಕೊಡುವ ಪ್ರಯತ್ನ.

ಈ ಚಿತ್ರಗಳ ನೋಡುವಾಗ ಮನಸ್ಸು ಚುರುಕಾಯಿತು. ಬೆಂಗಳೂರಿಗರ ಹುಲ್ಲುಹಾಸಿನ ಮದ್ಯೆ ನೆಡಲು ಐದು ವರ್ಷದ ಜೀವಂತ ಕುರ್ಚಿ............. ಇದರಲ್ಲಿ ಕತ್ತರಿಸುವುದು, ಬಗ್ಗಿಸುವುದು ಮತ್ತು ಕಸಿ ಕಟ್ಟುವ ಕೆಲಸ ತುಂಬಾ ಉಂಟು. ಲಾಭಕಲ್ಲವಾದರೂ ಹವ್ಯಾಸಕ್ಕೆ ಖಂಡಿತ ಮಾಡಬಹುದಾದ ಕೆಲಸ. ಕಿಸೆ ತುಂಬಿದರೆ ಬೋನಸ್ ಅಂದುಕೊಳ್ಳಬೇಕು. ಬೆಳೆಸುವುದರಲ್ಲಿ ಕುಶಿ ಖಂಡಿತಾ ಸಿಕ್ಕಿತು.  ಇಂತಹ ಕಲಾಕೃತಿ ರಚಿಸುವ ಇತರರ ಬಗೆಗೆ ವಿಕಿಪೇಡಿಯದಲ್ಲಿ ವಿವರಗಳಿವೆ

Wednesday, January 27, 2010

ಕಲೆ ಅರಳುವ ಜಪಾನಿನ ಬತ್ತದಗದ್ದೆಜಪಾನಿನ ಬತ್ತದ ಹೊಲಗಳಲ್ಲಿ ಕಲಾತ್ಮಕ ಚಿತ್ತಾರಗಳು ಕಾಣಿಸಿಕೊಳ್ಳಲು ಪ್ರಾರಂಬವಾಗಿದೆ. ಇವುಗಳು ಯಾವುದೇ ಇತರ ಗ್ರಹದ ಜೀವಿಗಳು ರಾತ್ರೋ ರಾತ್ರಿ ಸೃಷ್ಟಿಸಿದ ಕೈಚಳಕವಲ್ಲ ರೈತರು ಕಂಪ್ಯುಟರ್ ಮೂಲಕ ವಿನ್ಯಾಸಗೊಳಿಸಿದ ಹಾಗೂ ಕರಾರುವಕ್ಕಾದ ಜಾಗದಲ್ಲಿ ನಿಖರವಾಗಿ ನೇಜಿ ನೆಡುವುದರಿಂದಾದ  ಉಂಟಾಗುವ   ಚಿತ್ತಾರ.ಟೋಕಿಯೊ ಪಟ್ಟಣದಿಂದ ಸಾವಿರ ಕಿಲೋಮಿಟರ್ ಉತ್ತರದಲ್ಲಿರುವ ಇನಕದಾತೆ ಗ್ರಾಮವು ೧೯೯೩ರಲ್ಲಿ ಈ ಸಂಪ್ರದಾಯಕ್ಕೆ ಬುನಾದಿ ಹಾಕಿತು. ಇದು ಅಂದು ಗ್ರಾಮ ಪಂಚಾಯತಿ ಸದಸ್ಯರ ಸಭೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸಲು ಹೊರ ಹೊಮ್ಮಿದ ಆಲೋಚನೆ. ಮೊದಲ ಒಂಬತ್ತು ವರ್ಷಗಳಲ್ಲಿ ಪಂಚಾಯತಿ ಕೆಲಸಗಾರರೂ ರೈತರು ಸರಳ ಇವಾಕಿ ಪರ್ವತದ ಚಿತ್ರಣದಲ್ಲಿ ತೃಪ್ತರಾಗಿದ್ದರು. ಕ್ರಮೇಣ ಅವರ ಆಲೋಚನೆಗಳು ವಿಸ್ತರಿಸಲು ಪ್ರಾರಂಬವಾಗಿ ದೊಡ್ಡ ಚಿತ್ರಗಳಿಗೂ ಕೈ ಹಾಕಲು ಪ್ರಾರಂಬಿಸಿದರು.೨೦೦೫ರಲ್ಲಿ ಅಕ್ಕ ಪಕ್ಕದ ರೈತರು ಕೈ ಜೋಡಿಸಿ ಬೃಹತ್ ಆಕೃತಿಗಳ ರೂಪಿಸಲು ಪ್ರಾರಂಬಿಸಿದರು. ಪ್ರವಾಸಿಗಳಿಂದ ಊರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಈ ಕೃತಿಗಳ ಹಿಂದಿನ ನೂಕು ಶಕ್ತಿ. ಮೆ ತಿಂಗಳಲ್ಲಿ ನಾಟಿ ಮಾಡಿದ ಬೆಳೆಯು ಸೆಪ್ಟಂಬರ್ ತಿಂಗಳಿಗಾಗುವಾಗ ಬೆಳೆದು ನಿಂತು ಆ ಆಕರ್ಷಕ ಚಿತ್ರವನ್ನು ತೋರ್ಪಡಿಸುತ್ತದೆ. ಮೊದಲು ರೈತರು ಕಂಪ್ಯೂಟರಿನಲ್ಲಿ ವಿನ್ಯಾಸ ಮಾಡಿ ಯಾವ ರೀತಿಯಲ್ಲಿ ನೆಡುವುದೆಂದು ತೀರ್ಮಾನಿಸುತ್ತಾರೆ. ನೂರಾರು ಸ್ವಯಂಸೇವಕರು ನಾಲ್ಕು ಬಣ್ಣದ ನೇಜಿ ನೆಡುವುದರಲ್ಲಿ  ಕೈ  ಜೋಡಿಸುತ್ತಾರೆ. ಇದರಿಂದಾಗುವ  ಪ್ರಯೋಜನ  ಗುರುತಿಸಿ  ಈಗ  ಹಲವು  ಹಳ್ಳಿಗಳು  ಈ  ಮೇಲ್ಪಂಕ್ತಿ  ಅನುಸರಿಸುತ್ತಿವೆಯಂತೆ.  ಸಾವಿರಾರು ನಾಟಿ ತಳಿಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ವಿಬಿನ್ನತೆ ಅನಿವಾರ್ಯ ಎನ್ನುವುದೂ ಇದರಿಂದ ನಾವು ಕಲಿಯುವ ಸಂದೇಶ.  ಮೇಲಿನ ಚಿತ್ರದಲ್ಲಿರುವ   ಬೇರೆ ಬೇರೆ ಬಣ್ಣದ   ನಾಲ್ಕು ತಳಿಯ ಬತ್ತದ ಸಸಿಗಳು ಉಪಯೋಗವಾಗುವುದಂತೆ. ಹದಿನೈದು ಸಾವಿರ ಚದರಡಿ ಮೀರುವ ಈ ಚಿತ್ರಗಳು ನೆಲದಲ್ಲಿ ನಿಂತರೆ ಹೆಚ್ಚೇನು ಗುರುತಿಸಲಾಗದ ಕಾರಣ, ಇದರ ಪೂರ್ತಿ ಸ್ವರೂಪ ಅರ್ಥೈಸಲು ಅಲ್ಲೊಂದು ನಿರ್ಮಿಸಲಾದ ಅಟ್ಟಳಿಗೆ ಏರಬೇಕಂತೆ. ವಿಮಾನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಣ್ಣಿಗೆ ಹಬ್ಬ.

Monday, January 25, 2010

ಹುಚ್ಚು ನಾಯಿ ಕಡಿತಕ್ಕೆ ನಾಟಿ ಚಿಕಿತ್ಸೆ ಪರಿಣಾಮಕಾರಿಯೇ ?

ನಮ್ಮಲ್ಲಿ ಮೊದಲು ಹುಚ್ಚು ನಾಯಿ ಕಡಿತ ಬಹಳ ಅಪಾಯಕಾರಿಯಾಗಿತ್ತು. ಅಂದು ಎರಡು ರೀತಿಯ ಚಿಕಿತ್ಸಾ ಕ್ರಮ ಚಲಾವಣೆಯಲ್ಲಿತ್ತು. ಮೊದಲನೆಯದು ಊರ ಸರಕಾರಿ ಆಸ್ಪತ್ರೆಯಿಂದ ಟೆಲಿಗ್ರಾಮ್ ಕಳುಹಿಸಿ ಕೂನೂರಿಂದ ತರಿಸಿದ ಹೊಕ್ಕುಳು ಸುತ್ತು ಕೊಡುವ ವಿಪರೀತ ನೋವು ಉಂಟು ಮಾಡುವ ಹದಿನಾಲ್ಕು ಚುಚ್ಚುಮದ್ದುಗಳು. ಅದಕ್ಕೆ ಹಲವು ಅಡ್ಡ ಪರಿಣಾಮಗಳಿದ್ದವು ಮತ್ತು ಚೇತರಿಸಿಕೊಳ್ಳುವ ಬಗ್ಗೆ ಸಂಪೂರ್ಣ ನಂಬಲರ್ಹವಾಗಿರಲಿಲ್ಲ. ಎರಡನೆಯದು ಯಾವುದೇ ದಾಖಲಾತಿಗೂ ಒಳಪಡದ ನಾಟಿ ಪದ್ದತಿಯಿಂದ ಹುಚ್ಚು ಹಿಡಿಸಿ ಗುಣಪಡಿಸುವುದು.

ಈಗ ಸಂಪೂರ್ಣ ಕಾಣೆಯಾಗಿರುವ ಈ ಚಿಕಿತ್ಸೆಯಲ್ಲಿ ಕಡಿತಕ್ಕೊಳಗಾದವನಿಗೆ ನಿರ್ದಿಷ್ಟ ಬೀಜ / ತೊಗಟೆ ತಿನ್ನಿಸಿ ಹುಚ್ಚು ಹಿಡಿಸುವುದು. ಎರಡು ಜನ ದಾಂಡಿಗರು ರೋಗಿಯ ಹಿಡಿದುಕೊಳ್ಳಲು ಮತ್ತು ಹತ್ತಾರು ಕೊಡಪಾನ ನೀರು ಹೊಯ್ಯಲು ತಯಾರಿರಬೇಕಾಗುತ್ತದೆ. ಔಷದ ತಿನ್ನಿಸಿದ ಪರಿಣಾಮ ನಾಯಿ ಕಡಿತಕ್ಕೊಳಗಾದವ ಹುಚ್ಚುಹುಚ್ಚಾಗಿ ವರ್ತಿಸಲು ಆರಂಬಿಸುತ್ತಾನೆ. ಪೂರಾ ಹುಚ್ಚ ಎನಿಸಿಕೊಂಡ ನಂತರ ನೀರು ಹೊಯ್ಯಲು ಪ್ರಾರಂಬವಾಗಿ ಸಾಕು, ಚಳಿಯಾಗುತ್ತದೆ ಎಂದು ಗೋಗೆರೆಯುವ ವರೆಗೂ ಮುಂದುವರಿಯುತ್ತದೆ. ನಾನು ಚಿಕ್ಕವನಾಗಿದ್ದಾಗ ಕೇಳಿದ ಇದು ಹುಚ್ಚು ನಾಯಿ ಕಡಿಸಿಕೊಂಡವನಿಗೆ ಹುಚ್ಚು ಹಿಡಿಸುವ ತೀರಾ ಮೂಡನಂಬಿಕೆ ಚಿಕಿತ್ಸೆ ಅವೈಜ್ನಾನಿಕ ಎನ್ನುವ ಬಾವನೆ ನನಗಿತ್ತು.

ಔಷದಿಯ ಶಾಸ್ತ್ರದ ಇತಿಹಾಸ ನೋಡುವಾಗ ಹೆಚ್ಚಿನ ರೇಬಿಸ್ ಸಾವುಗಳು ತಾತ್ಕಾಲಿಕವಾಗಿ ಮೆದುಳು ನಿರ್ವಹಿಸಲು ವಿಫಲವಾಗಿ ಉಸಿರಾಟ ಸಮಸ್ಯೆ ಉಂಟಾಗಿ ಹೊರತು ಮೆದುಳಿಗೆ ಯಾವುದೇ ಶಾಶ್ವತ ಬದಲಾವಣೆಯೂ ಸಮಸ್ಯೆಯೂ ಆಗಿರುವುದಿಲ್ಲ. ಅಮೇರಿಕದಲ್ಲಿ ಐದು ವರ್ಷ ಹಿಂದೆ ಒಂದು ಬಾವಲಿ ಕಚ್ಚಿದ ಹುಡುಗಿಯ ಚಿಕಿತ್ಸೆಗೆ ಈ ಜಾಡಿನಲ್ಲಿ ಸಾಗಿದ ವೈದ್ಯರು ಈ ಅಘಾತದಿಂದ ಮೆದುಳು ವಿಫಲವಾಗುವುದರ ತಪ್ಪಿಸಲು ಅವಳನ್ನು ಕೊಮ ಸ್ಥಿತಿಯಲ್ಲಿರಿಸಿದರು. ಅಂತೂ ಆ ಹುಡುಗಿ ಬದುಕಿದಳು ಮತ್ತು ಇದು ರೇಬಿಸ್ ರೋಗ ಉಲ್ಬಣಗೊಂಡರೂ ಬದುಕಿ ಉಳಿದ ಪ್ರಥಮ ದಾಖಲೆ. ಒಂದು ರೀತಿಯಲ್ಲಿ ಇದು ನಮ್ಮ ಹುಚ್ಚು ಹಿಡಿಸುವ ಪ್ರಯತ್ನವನ್ನು ಹೋಲುತ್ತದಲ್ಲವೇ ?

ಇದನ್ನು ನೋಡುವಾಗ ಆ ಆಘಾತ ತಡಕೊಳ್ಳುವ ಶಕ್ತಿಯನ್ನು ಈ ಹುಚ್ಚು ಹಿಡಿಸುವ ಪ್ರಯೋಗ ನೀಡುವುದೋ ಎನ್ನುವ ಸಂಶಯ ಬರುತ್ತದೆ. ರೋಗ ಉಲ್ಬಣಗೊಳ್ಳುವುದೂ ಚಿಕಿತ್ಸಾ ಸಮಯವೂ ತುಂಬ ಹಿಂದು ಮುಂದಾದರೆ ಇದು ವಿಫಲವಾಗುವ ಸಾದ್ಯತೆ ಹೆಚ್ಚು. ಆದರೆ ಈ ಜಾಡಿನಲ್ಲಿ ಸಾಗಿದರೆ ಖಂಡಿತ ಚಿಕಿತ್ಸಾ ವಿಧಾನ ರೂಪಿಸಬಹುದು ಅನಿಸುತ್ತದೆ.

ಪ್ರಯತ್ನಿಸುವುದಾದರೆ  ನಮ್ಮ ಕೇಂದ್ರ ಆಸ್ಪತ್ರೆಗಳಲ್ಲಿ   ಈ ಪ್ರಯೋಗಕ್ಕೆ ಬಲಿಪಶು ಆಗಲು ಸಾಯಲು ಸಿದ್ದವಾದ ರೇಬಿಸ್ ರೋಗಿಗಳು ಸಿಗುತ್ತಲೇ ಇರುತ್ತಾರೆ. ಇಂದು   ನಮ್ಮ ಹಲವು ಆಸ್ಪತ್ರೆಗಳು ಪರದೇಶಿ ಕಂಪೇನಿಗಳ ವಿವಿದ ಔಷದಿಗಳ ದೃಡಿಕರಣಕ್ಕಾಗಿ ಚಿಕಿತ್ಸೆ ಒಪ್ಪಂದ ಮಾಡಿಕೊಂಡಿವೆ. ಆ ಕಂಪೇನಿಗಳಿಗೆ ನಮ್ಮವರು ಅಗ್ಗದ ಬಲಿಪಶುಗಳು. ಹಾಗೆಯೇ ಈ ಹುಚ್ಚು ನಾಯಿ ರೋಗದ ಪ್ರಯೋಗಗಳಿಗೆ ಪರದೇಶಿ ಹಣ ಹರಿದು ಬಂದಿತೋ ನಮ್ಮ ವೈದ್ಯರು ಪ್ರಶ್ನಿಸಿಕೊಳ್ಳುತ್ತಾರೆ.  ಆದರೆ  ಅವರಿಗೆ  ಲಾಭವಿಲ್ಲದ ಪ್ರಯೋಗಗಳಿಗೆ   ಔಷದಿ ಕಂಪೇನಿಗಳ ನೆರವು ಇಲ್ಲ ಮಾತ್ರವಲ್ಲದೆ ಸಾದ್ಯವಾದರೆ ಅಡ್ಡಗಾಲನ್ನೂ ಖಂಡಿತಾ ಹಾಕುತ್ತಾರೆ.

ಅಮೇರಿಕದಲ್ಲಿ ಯಶಸ್ವಿಯಾದ ಸಾಕು ನಾಯಿಗಳಿಗೆ ಚುಚ್ಚು ಮದ್ದು ನಮ್ಮಲ್ಲಿ ಗೆಲ್ಲುವುದು ಕಷ್ಟ. ಎರಡು ವರ್ಷ ಹಿಂದೆ ನಮ್ಮ ಗ್ರಾಮದಲ್ಲಿ ದರ್ಮಾರ್ಥ ಚುಚ್ಚುಮದ್ದು ಕೊಡುವ ಕಾರ್ಯಕ್ರಮದಲ್ಲೂ ಕೆಲವರು ನಾಯಿಯನ್ನು ಕೊಂಡುಹೋಗಲೇ ಇಲ್ಲ. ಒಬ್ಬರು ಅಲ್ಲಿ ಹಣ ಕೊಡಬೇಕಂತೆ ಎಂದು ವದಂತಿ ಹಬ್ಬಿಸಿದರು. ಮರುವರ್ಷ ಅವರ ನಾಯಿ ರೇಬಿಸ್ ಸೀಕು ಹಿಡಿದು ಕಟ್ಟಿ ಹಾಕಲು ಹೋದ ಅವರ ಮಗಳನ್ನೇ ಕಚ್ಚಿತು. ಆದರೆ ಇದರಿಂದ ಪಾಠ ಕಲಿಯುವರೇ ? ಪ್ರಪಂಚದಲ್ಲಿಯೇ ಅತಿ ಹೆಚ್ಚು ಹುಚ್ಚು ನಾಯಿ ಕಡಿತ ಹಾಗೂ ಸಾವಿನ ಹೆಗ್ಗಳಿಕೆ ನಮ್ಮ ದೇಶದ್ದು. ಅದುದರಿಂದ ಇದಕ್ಕೆ ಪರಿಹಾರವೂ ನಾವೇ ಹುಡುಕಬೇಕು.

ಸಾವು ಶೇಕಡಾ ೧೦೦ ಖಚಿತವಾದ ರೇಬಿಸ್ ರೋಗದಿಂದ ಚೇತರಿಸಿಕೊಳ್ಳುವ ಅವಕಾಶ ಮೊದಲು ಸೊನ್ನೆಯಿಂದ ಎಂಟಕ್ಕೇರಿದೆಯಂತೆ. ನಂತರದ ಲಕ್ಷಣಗಳು ಇನೂ ಹೆಚ್ಚು ಆಶಾದಾಯಕವಾಗಿವೆ ಅಂದರೆ ಅನಂತರ ಚಿಕಿತ್ಸೆಗೆ ಒಳಪಟ್ಟ ಹತ್ತರಲ್ಲಿ ಎರಡು ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಶೇಕಡಾ ಇಪ್ಪತ್ತು ಅನ್ನಬಹುದು. ಹಾಗೆ ಮೂವತ್ತು ವರ್ಷ ಹಿಂದೆ ಇದೇ ಸ್ಥಾನದಲ್ಲಿದ್ದ ಮಕ್ಕಳ ರಕ್ತ ಕಾನ್ಸರಿನ ರೋಗಿಗಳಲ್ಲಿ ಶೇಕಡಾ ಎಂಬತ್ತು ಇಂದು ಗುಣಮುಖರಾಗುತ್ತಿದ್ದಾರಂತೆ. ಕ್ರಮೇಣ ಸೂಕ್ತ ಚಿಕಿತ್ಸಾ ಕ್ರಮ ಹುಚ್ಚು ನಾಯಿ ಕಡಿತಕ್ಕೂ ಬಂದರೂ ಸ್ವಾಬಾವಿಕ ಅನಿಸುತ್ತದೆ. ಮೆದುಳನ್ನು ರಕ್ಷಿಸುವ ವೈದ್ಯ ವಿಜ್ನಾನಿಗಳು ವೈಜ್ನಾನಿಕವಾಗಿ ಕಂಡ ಗುಟ್ಟು ನಮ್ಮ ಪಾರಂಪರಿಕ ಜ್ನಾನದಲ್ಲಿ ಅಡಗಿದೆಯೋ ಎನ್ನುವ ಗೊಂದಲ ಮೂಡಿದೆ.


ಮೇಲೆ ಸೂಚಿಸಿದ ಎರಡನೆಯ ಮಾಹಿತಿ ಮೂಲಕ್ಕೆ http://en.wikipedia.org/wiki/Milwaukee_protocol ದಾರಿಯಾಗಿ http://www.medscape.com/viewarticle/712839_7 ಗೆ ಸಾಗಬೇಕು.

Monday, January 18, 2010

ಮಾದರಿ ಆಗ ಬಹುದಾದ ಅಮೇರಿಕದ ಯೂರಿಯ ಕಡಿಮೆ ಬಳಸಿ ಚಳುವಳಿ

ಸಾರಜನಕ ಆಹಾರ ಬೆಳೆಯುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಾದ ಪಾಲು ತೊಳೆದು ಹೋಗಿ ನದಿ ಸರೋವರ ಸೇರಿ ಪಾಚಿ ಬೆಳೆಯಲು ಪ್ರೇರಣೆಯಾಗುತ್ತದೆ. ಅಲ್ಲಿ ಆಮ್ಲಜನಕದ ಜಾಗವನ್ನು ಸಾರಜನಕ ಆತಿಕ್ರಮಿಸಿ ಪಾಚಿ ಬೆಳೆಯಲು ಅನುಕೂಲ ಮಾಡಿ ಉಳಿದ ಸಾಗರ ಜೀವಿಗಳ ನಿರ್ನಾಮ ಮಾಡಿದೆ. ಪ್ರಪಂಚದಲ್ಲಿ ನಾಲ್ಕು ನೂರು ಕಡೆ ಸುಮಾರು ಎರಡೂವರೆ ಲಕ್ಷ ಚದರ ಕಿಲೋಮಿಟರ್ ಇಂತಹ ನಿರ್ಜೀವ ಪ್ರದೇಶ ಗುರುತಿಸಲ್ಪಟ್ಟಿದೆ. ಪರಿಸರದಲ್ಲಿ co2 ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ. ನಂತರದ ಸ್ಥಾನ Nox ಗೆ. ಸಾರಜನಕ ಪರಿಸರಕ್ಕೆ ಮಾರಕವಾಗುತ್ತಿದೆ ಎನ್ನುವುದು ಪರಿಸರ ಜಾಗೃತಿ ಹೊಂದಿದವರಿಗೆ ಹಳೆಯ ವಿಚಾರ.

ಸಾರಜನಕ ವಾತಾವರಣದಲ್ಲಿ ಉಳಿದುಕೊಳ್ಳುವುದಿಲ್ಲ. ಅಮೋನಿಯಾ ರೂಪದಲ್ಲಿ ಮಳೆಯ ಜತೆ ಭೂಮಿಗೆ ಬೀಳುತ್ತದೆ. ತಜ್ನರು ವಾತಾವರಣದಲ್ಲಿ ಹೆಚ್ಚಿರುವ ಅಮೋನಿಯಾ ಪ್ರಮಾಣವನ್ನು ಗುರುತಿಸುತಿದ್ದಾರೆ. ವಾಹನದ ಹೊಗೆ, ವಿದ್ಯುತ್ ಕೇಂದ್ರದ ಹೊಗೆ ನಳಿಗೆ ಗಣನೀಯವಾಗಿ ವಾತಾವರಣದ ಸಾರಜನಕವನ್ನು ಮಲೀನಗೊಳಿಸುತ್ತದೆ. ಅಮೇರಿಕದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗುವ ಸಾರಜನಕ ಮಲೀನತೆ ತಡೆಗಟ್ಟಲು ಹೆಜ್ಜೆ ಇಡುವ ಲಕ್ಷಣಗಳಿವೆ. ಇದು ಸಾಕಷ್ಟು ಪರಿಣಾಮಕಾರಿಯಾಗಬಹುದು.

ಬದಲಾದ ಸನ್ನಿವೇಶದಲ್ಲಿ ಸಾರಜನಕ ಪ್ರೀತಿಸುವ ಸಸ್ಯಗಳು ಬಲಶಾಲಿಗಳಾಗಿ ಸಮತೋಲನ ವ್ಯತ್ಯಾಸಪಡಿಸುತ್ತದೆ. ಅಲ್ಲಿರುವ ಮೂಲ ಸಸ್ಯಗಳು ಹೊರದೂಡಲ್ಪಟ್ಟು ಸಸ್ಯ ವೈವಿದ್ಯ ಸ್ವರೂಪ ಬದಲಾಗುತ್ತದೆ. ಹಲವು ಕಡೆಗಳಲ್ಲಿ ಹೊಸತಾಗಿ ಬೆಳೆಯಲು ಪ್ರಾರಂಬಿಸಿದ ಹುಲ್ಲು ಕಾಡ್ಕಿಚ್ಚಿಗೆ ಕಾರಣವಾಗಿದೆಯಂತೆ

ಸಾರಜನಕ ಉಪಯೋಗದ ಕ್ಷಮತೆ ಹೆಚ್ಚಿಸಲು ಅಮೇರಿಕದಲ್ಲಿ ರೈತರು ಸಂಘಟಿತರಾಗುವುದು ಸಂತಸದ ವಿಚಾರ. ಎಷ್ಟು ಸಾರಜನಿಕ ಉಪಯೋಗಿಸಲೇ ಬೇಕೆಂದು ನಿಖರವಾಗಿ ಗುರುತಿಸಿ ಅಷ್ಟನ್ನೇ ಉಪಯೋಗಿಸುತ್ತಾರೆ. ದೇಶದಲ್ಲಿಯೇ ಸಾರಜನಕ ಉಪಯೋಗವನ್ನು ಶೇಕಡಾ ಇಪ್ಪತ್ತೈದರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಇಂತಹ ಗೊಬ್ಬರ ಉಪಯೋಗ ಕಡಿತಗೊಳಿಸುವ ನೂರಾರು ರೈತರಲ್ಲಿ ನಾನೂ ಒಬ್ಬ ಎನ್ನುವ ಲಿಂಡ್ಸೆ ಪರಿಸರ ಸ್ವಚ್ಚವಾಗಿರಬೇಕು. ನಾವೂ ಇಲ್ಲಿ ನೀರು ಕುಡಿಯುತ್ತೇವೆ ಎನ್ನುತ್ತಾರೆ. ಹತ್ತು ವರ್ಷ ಹಿಂದೆ ೪೦ ಐಯೊವಾ ರಾಜ್ಯದ ಸೋಯಾ ಬೆಳೆಸುವ ರೈತರು ಪಾಲ್ಗೊಳ್ಳುತ್ತಿದ್ದ ಈ ಚಳುವಳಿಗೆ ಈಗ ಐನೂರು ರೈತರು ಬೆಂಬಲಿಸುತ್ತಿದ್ದಾರೆ.  ಅಮೇರಿಕದವರು ಹೇಳುತ್ತಿರುವ ಮಾದರಿ ನಮಗೆ ಅನುಕರಣೀಯವಾಗಿದೆ. ಯೂರಿಯಾ ಬಳಕೆ ಮಟ್ಟವನ್ನು ಅನಿವಾರ್ಯ ಮಿತಿಗೆ ಇಳಿಸಿ ಉಳಿದ ಪೋಷಕಾಂಶಗಳ ಬಗೆಗೆ ಗಮನಿಸುವುದು ಉತ್ತಮ. ಎಲ್ಲೆಡೆಯಂತೆ ನಮ್ಮಲ್ಲೂ ಈ ಕೃತಕ ಗೊಬ್ಬರದ ಅವಲಂಬನೆಯಿಂದಾಗಿ ಮಣ್ಣಿನ ಸ್ವರೂಪವೇ ಬದಲಾಗಿದೆ. ಭೂಮಿತಾಯಿ ಎಂದು ಬಾಯಿಮಾತಿನಲ್ಲಿ ಹೇಳುವ ನಾವು ಮಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಜೀವಿಗಳನ್ನೆಲ್ಲ ಕೊಲ್ಲುತ್ತಿದ್ದೇವೆ. ಒಂದು ಕಿಲೊ ಗೊಬ್ಬರದ ಉಪಯೋಗ ಇಪ್ಪತ್ತೈದು ಕಿಲೊ ಆಹಾರ ದಾನ್ಯ ಉತ್ಪತ್ತಿಯಾಗುತಿತ್ತು. ಈಗ ಎಂಟಕ್ಕೆ ಇಳಿದಿದೆ.

ಸಮತೋಲನ ಗೊಬ್ಬರ ಉಪಯೋಗ ನಮ್ಮಲ್ಲಿ ಅನುಸರಿಸಲಾಗುತ್ತಿಲ್ಲ. ಸರಕಾರದಿಂದ ಹೆಚ್ಚು ದರ ಬೆಂಬಲ ಯೂರಿಯಾಕ್ಕೆ. ಪರಿಣಾಮ ಹೆಚ್ಚು ಯೂರಿಯಾ ಉಪಯೋಗ. ಈ ಸರಕಾರಿ ಬೆಂಬಲ ೧೯೭೬- ೭೭ ರಲ್ಲಿ ಅರುವತ್ತು ಕೋಟಿ ರೂಪಾಯಿ ತೇರಿಗೆ ಹಣ ಉಪಯೋಗಿಸಿದ್ದರೆ ಮೂವತ್ತು ವರ್ಷಗಳ  ಅನಂತರ    ಕಳೆದ ವರ್ಷ ೨೦೦೮ -೦೯ ರಲ್ಲಿ ಅದು ತೊಂಬತ್ತಾರು ಸಾವಿರ ಕೋಟಿ ರೂಪಾಯಿ ಮುಟ್ಟಿದೆ. ಇದರಿಂದಾಗಿ ಯುರಿಯಾ ಅತ್ಯಂತ ಅಗ್ಗವಾಗಿ ಉಳಿದ ಗೊಬ್ಬರಗಳ ಉಪಯೋಗ ಕಡಿಮೆಯಾಗಿದೆ. 4:2:1 ಪ್ರಮಾಣದಲ್ಲಿ ವಿವಿದ ಪೋಷಕಾಂಶಗಳ   ಮಿಶ್ರಣ ನಮ್ಮಲ್ಲಿ ಉತ್ತಮ ಎಂದು ತಜ್ನರು ತೀರ್ಮಾನಿಸಿದ್ದರೆ ಇಂದು ಪಂಜಾಬಿನಲ್ಲಿ 35:9:1 ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

ಹಿಂದೆ ಈ ನಮ್ಮ ದೇಶವನ್ನು ರಾಜೀವನೆಂಬ ಮಹಾರಾಜ ಆಳುತ್ತಿದ್ದ. ಅವನು ಆಗ ಯುರಿಯಾ ಉತ್ಪಾದನೆ ಹೆಚ್ಚಿಸಲು ಉತ್ತೇಜನವಿತ್ತಿದ್ದ. ಉದ್ಯಮಿಗಳಿಗೆ ಕನಿಷ್ಟ ಲಾಬದ ಬೆಂಬಲ ಸರಕಾರವೇ ಕೊಡುವ ಕಾರಣ ಸಾಕಷ್ಟು ಯೂರಿಯಾ ಕಾರ್ಖಾನೆಗಳು ಸ್ಥಾಪನೆಗೊಂಡವು. ಆಗ ಎಲ್ಲವೂ ಸೋನಿಯಳ ಗೆಳೆಯ ಕ್ವಾಟ್ರೋಚಿ ಅಣತಿಯಂತೆ ನಡೆಯುತಿತ್ತು. ೧೯೬೭ರಲ್ಲಿ ಮದ್ರಾಸ್ ತೈಲಾಗಾರ ಗುತ್ತಿಗೆಯ ಕೆಲಸದಲ್ಲಿ ಬಾರತಕ್ಕೆ ಬಂದ ಕ್ವಾಟ್ರೋಚಿ ರಾಜೀವನ ಆಡಳಿತದ ಕಾಲದಲ್ಲಿ ಅತ್ಯಂತ ಪ್ರಬಾವಶಾಲಿಯಾಗಿದ್ದ. ೧೫೦೦೦ ಕೋಟಿ ರೂಪಾಯಿಯ ಯುರಿಯಾ ಕಾರ್ಖಾನೆಗಳ ಗುತ್ತಿಗೆ ಇವನ ಪಾಲಾಗಿತ್ತು. ರಾಜೀವನಿಗೆ ಉರುಳಾದ ಬೋಪೋರ್ಸ್ ಫಿರಂಗಿಯ ೬೪ ಕೋಟಿ ರೂಪಾಯಿ ಲಂಚದಿಂದ ಹೆಚ್ಚು ಹಣ ನಮ್ಮ ದೇಶ ಈ ಗುತ್ತಿಗೆಗಳಿಂದ ಕಳಕೊಂಡಿದೆ. ಆದರೆ ರುಜುವಾತು ಸಿಗುವಂತೆ ಇವರುಗಳು ಎಡವಿದ್ದು ಫೀರಂಗಿ ವ್ಯವಹಾರದಲ್ಲಿ.

Monday, January 11, 2010

ಅಮೇರಿಕ ಎಂದರೆ ಇನ್ನೊಂದು ಲೋಕ

ಅಮೇರಿಕಕ್ಕೆ ಹೋಗುವುದೆಂದರೆ ಪುನರ್ಜನ್ಮ ಹೊಂದುವುದೇ ಸರಿ. ಎಲ್ಲರೂ ಬತ್ತಲೆಯಾಗಿಯೇ ಅಮೇರಿಕ  ಪ್ರವೇಶಿಸುತ್ತಾರೆ. ಆಲ್ಲಲ್ಲ,  ಪ್ರವೇಶಿಸುವ ಮೊದಲು ಬತ್ತಲಾಗುತ್ತಾರೆ. ಅಮೇರಿಕ ಎಂದರೆ ಸ್ವರ್ಗ ಸಮಾನ ಎನ್ನುವ ಕಲ್ಪನೆ ನಮ್ಮಲ್ಲಿ ಹಲವರಿಗಿತ್ತು. ಅದು ಈಗ ನಿಜವಾಗಿದೆ.   ಆರು ವರ್ಷ ಹಿಂದೆ ನಮ್ಮ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡೀಸ್ ಅವರನ್ನು ಬತ್ತಲೆ ಮಾಡಿದ ಅಮೇರಿಕದ ರಕ್ಷಣಾಪಡೆ ಇನ್ನು ಎಲ್ಲರನ್ನೂ ಬತ್ತಲಾಗಿಸಲಿದೆ.     ದಯವಿಟ್ಟು ಯಾರೂ ಸ್ಕಾನ್ ಚಿತ್ರ ದರ್ಮಾರ್ಥವಾಗಿ ಕೇಳಬಾರದು. ಅಮೇರಿಕದಲ್ಲಿ ದುಡ್ಡೇ ದೊಡ್ಡಪ್ಪ. ದರ್ಮಾರ್ಥ ಸೇವೆ ಇಲ್ಲ.
ನನ್ನ ಒಂದು ಕಣ್ಣು ಹೋದರೇನಾಯಿತು, ಅವನ ಎರಡೂ ಕಣ್ಣು ಹೋಗಿದೆ ಎನ್ನುವಂತೆ ಇಲ್ಲೂ ನಾವು  ಬಹಳ  ಸಂಬ್ರಮ ಪಡಬಹುದಾದ  ವಿಚಾರ ಒಂದಿದೆ. ಪಾಕಿಸ್ತಾನದವರನ್ನು ಎಲ್ಲರನ್ನೂ ಪೂರ್ತಿ ಬತ್ತಲೆ ಮಾಡುತ್ತಾರಂತೆ.  ಭಾರತ ಆ ಪಟ್ಟಿಯಲ್ಲಿಲ್ಲ.
ಬರಹಗಾರ ಕಾಲ್ವಿನ್ ಟ್ರಿಲ್ಲಿನ್ ಮೂರು ವರ್ಷ ಹಿಂದೆಯೇ ಇದರ ಸಾದ್ಯತೆಯನ್ನು ಟಿವಿ ಎದುರುಗಡೆ ಹೇಳಿ ಬಿಟ್ಟಿದ್ದರು.  ಮೊನ್ನೆ ಸಿಕ್ಕಿಬಿದ್ದ  ನೈಜೀರಿಯದ   ಭಯೋತ್ಪಾದಕ ಚಡ್ಡಿಯೊಳಗೆ ಹುದುಗಿಸಿದ್ದ ಬಾಂಬು ಡಮಾರ್ ಎಂದಿದ್ದರೆ ಸ್ವರ್ಗದಲ್ಲಿ ಅಶ್ವಾಸನೆ ಪ್ರಕಾರ ಸಿಗುವ ಎಪ್ಪತ್ತೆರಡು ಸುಂದರ ಕನ್ಯೆಯರ ಜತೆ ಸಿಕ್ಕರೂ  ಏನೂ   ಪ್ರಯೋಜನವಾಗುತ್ತಿರಲಿಲ್ಲ ಎಂದು ಟ್ರಿಲ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ.   ಅವರ  ಪತ್ರಿಕಾ  ಅಂಕಣದ ಕೊಂಡಿ ಇಲ್ಲಿದೆ.  

ಹತ್ತು ವರ್ಷ ಹಿಂದೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಯ ಮುಂದೆ ನಿಂತಿದ್ದೆ. ಅವನೊಬ್ಬ ಇಂಗ್ಲೀಷ್ ಅರಿಯದ ಮುಂಬಯಿ ಪೊಲೀಸ್ ಇಲಾಖೆಯ ಕನಿಷ್ಟ ಬಿಲ್ಲೆ. ಸಾಲಿನಲ್ಲಿ ಎಲ್ಲರನ್ನೂ ಸತಾಯಿಸುತ್ತಿದ್ದ ಕಾರಣ ಬುದ್ದಿವಂತರು ಸಾಲು ಬದಲಾಯಿಸಿದರು. ಅಲ್ಲಿ ಪಂಚೆ ಉಟ್ಟವ ನಾನೊಬ್ಬನೇ ಆದ ಕಾರಣ ಸುಲಭವಾಗಿ ಗುರುತಿಸುವಂತಿದ್ದೆ. ನನ್ನನ್ನು ಹೋಗಲು ಬಿಡುವುದಿಲ್ಲ ಎಂದ ಸರಿ. ಪರವಾಗಿಲ್ಲ ಎಂದು ನಿರ್ಲಿಪ್ತವಾಗಿ ಹೇಳಿದೆ. ಏನೂ ಪ್ರಯೋಜನವಿಲ್ಲ ಅನಿಸಿ ಪಾಸ್ ಪೊರ್ಟಿನಲ್ಲಿ ಮುದ್ರೆ ಒತ್ತಿದ. ಇಂತಹ ಜನಗಳನ್ನೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಿಸುವ ನಮ್ಮ ಸರಕಾರದ ಬಗ್ಗೆ   ಜುಗುಪ್ಸೆ  ಮೂಡುತ್ತದೆ.

Wednesday, January 06, 2010

ಶೌಚಾಲಯ ಉಪಯೋಗಿಸುವ ಹಂದಿಗಳು.
ಹುಟ್ಟುವಾಗಲೇ ಹಂದಿಮರಿಗಳು ಶೌಚಾಲಯ ತರಬೇತಿ ಪಡೆದಿರುತ್ತದೆ ಎಂದು ಗೆಳೆಯ ತೋಮಸ್ ಜರ್ಮನಿಯ ಅಶಾಫೆನ್ ಬರ್ಗ್ ಪಕ್ಕದಲ್ಲಿರಿರುವ ವೈಲರ್ ಹೋಫ್ ಎಂಬ ಕೃಷಿ ಕ್ಷೇತ್ರದಲ್ಲಿ ಹೇಳುವಾಗ ನನಗೆ ಆಶ್ಚರ್ಯಕರ ಅನಿಸಿತ್ತು. ನನ್ನ ಸೈಕಲ್   ಪ್ರವಾಸದಲ್ಲಿ ಜರ್ಮನಿಯಲ್ಲಿ   ಹಲವು ಪ್ರಾಣಿಗಳ ಸಾಕಿದ  ಈ  ಬಯೋಡೈನಾಮಿಕ್  ಕೃಷಿ ಕ್ಷೇತ್ರಕ್ಕೆ ಬೇಟಿ ಇತ್ತಿದ್ದೆ. ಅಲ್ಲಿ   ದಾನ್ಯಗಳ   ಹಾಗೂ  ತರಕಾರಿಗಳ  ಬೆಳೆಸುವುದು  ಮಾತ್ರವಲ್ಲ  ಪಶು ಸಂಗೋಪನೆ  ಕೈಗೊಂಡಿದ್ದರು.    ಅಲ್ಲಿನ ಶಿಕ್ಷಣ ಪದ್ದತಿಯಲ್ಲಿ ಒಂದು ವರ್ಷ ಪ್ರಾಯೋಗಿಕ ತರಬೇತಿ ಪಡೆಯುವುದು ಅವಶ್ಯಕವಾಗಿದ್ದ ಕಾರಣ  ಇಂಗ್ಲೀಷ್  ಸಲೀಸಾಗಿ  ಮಾತನಾಡುವ   ಹಲವಾರು ಯುವಕರು ಯುವತಿಯರು   ಅಲ್ಲಿ ಕೆಲಸ ಮಾಡುತ್ತಿದ್ದರು.

ಅಲ್ಲಿ ಕುರಿ, ಕೋಳಿ, ಹಂದಿ, ಕುದುರೆ, ದನ ಇತ್ಯಾದಿ ಹಲವಾರು ಪ್ರಾಣಿಗಳನ್ನೂ ಸಾಕುತ್ತಿದ್ದರು. ಕುರಿ ಕೋಳಿಗಳಂತೆ ಉಳಿದ ಎಲ್ಲಾ ಪ್ರಾಣಿಗಳೂ ಅವಿರುವ ಆವರಣದಲ್ಲಿ ಎಲ್ಲೆಲ್ಲೂ ಗಲೀಜು ಮಾಡಿದರೂ ಹಂದಿಗಳು ಮಾತ್ರ ಒಂದು ಮೂಲೆಯಲ್ಲಿ ಮಾತ್ರ ಮಲಮೂತ್ರ ಮಾಡುವ ಕಾರಣ ಅವನ್ನು ಸ್ವಚ್ಚಗೊಳಿಸುವ ನಿತ್ಯ ಕೆಲಸ ಸುಲಭವಾಗಿತ್ತು. ಹಂದಿಗಳು ಬರೇ ಗಲೀಜು ಪ್ರಾಣಿಗಳು ಎನ್ನುವುದು ತಪ್ಪು ಕಲ್ಪನೆ.
ಟೈವಾನ್ ದೇಶದಲ್ಲಿ ಒಬ್ಬ ರೈತ ಶೌಚಾಲಯ ಬಳಸಲು ಅಂದರೆ ನಿರ್ದಿಷ್ಟ ಸ್ಥಳದಲ್ಲಿ ಮಲಮೂತ್ರ ಮಾಡಲು ಹಂದಿಗಳ ತರಬೇತಿ ಕೊಟ್ಟಿದ್ದಾನೆ ಎನ್ನುವ ಸುದ್ದಿ ಓದುವಾಗ ವಿಚಾರ ಹೊಸತು ಎನಿಸದಿದ್ದರೂ ಆ ಅನುಬವಗಳ ನೆನಪಾಯಿತು. ಟೈವಾನಿನ ರೈತನ ನೆರೆಕರೆಯವರು ಹಂದಿ ಸಾಕಣೆಯಿಂದಾಗಿ ವಾಸನೆ ಎಂದು ಕಿರಿಕಿರಿ ಮಾಡುತ್ತಿದ್ದರಂತೆ. ಹಾಗಾಗಿ   ಅವನು ಅವನ ಹಂದಿಗಳಿಗೆ ನಾಗರಿಕ ವರ್ತನೆ ಕಲಿಸಿದನಂತೆ.  ಹಂದಿಗಳು ತರಬೇತಿ ಕೊಟ್ಟರೆ ಹೇಗೆ ಸಲೀಸಾಗಿ ಪಳಗುತ್ತದೆ ಎನ್ನುವುದು ವಿಡಿಯೊ ಕಂಡಿತು.  ಹಾಗೆ  ಅದನ್ನೂ  ಇಲ್ಲಿಯೇ  ಹಾಕಿದೆ.

ಒಂದು  ಮಾತು.  ಸಿಂಹಾಸನವೇರುವ ಹಂದಿ ಚಿತ್ರಣಕ್ಕೂ    ಟೈವಾನ್  ಫಾರ್ಮಿಗೂ  ಸಂಬಂದವಿಲ್ಲ.   ಅಂತೆಯೇ ಮೇಲೆ  ಹಾಕಿದ   ನನ್ನ ಚಿತ್ರ ಜರ್ಮನಿಯ ಬೇರೊಂದು ಫಾರ್ಮಿನಲ್ಲಿ ತೆಗೆದದ್ದು.  weilerhof ನಲ್ಲಲ್ಲ.   ಈ ಫಾರ್ಮಿನಲ್ಲಿ ಒಳಗೆ ಹೋಗುವ ಮೊದಲು ನನಗೆ ದರಿಸಿಕೊಳ್ಳಲು ಉದ್ದನೆಯ  ಕೋಟು ಕೊಟ್ಟಿದ್ದರು.