ಇತ್ತೀಚಿನ ದಿನಗಳಲ್ಲಿ ಇಟಲಿಯಲ್ಲಿ ಜನಪ್ರಿಯವಾಗುತ್ತಿರುವ ಶಾಲಾ ವಾಹನ ಎಂದರೆ ಪೀಡಿ ಬಸ್. ಈ ಆಂದೋಲನ ಪ್ರಾರಂಬವಾದ ಲೆಕ್ಕೊ ಪಟ್ಟಣದಲ್ಲಿ ಪ್ರತಿದಿನ ಬೆಳಗ್ಗೆ ಹತ್ತು ಬೇರೆ ಬೇರೆ ಪ್ರಾಥಮಿಕ ಶಾಲೆಗಳಿಗೆ ಸಾಗುವ ಆರು ನೂರು ಮಕ್ಕಳು ಹದಿನೇಳು ಪೀಡಿಬಸ್ ಏರುತ್ತಾರೆ. ಪೀಡಿಬಸ್ ಎಂದರೆ ಹೊಗೆ ಉಗುಳುವ ಬಸ್ಸಲ್ಲ, ಮಕ್ಕಳು ಕುಣಿಯುತ್ತಾ ನಡೆಯುತ್ತಾ ಶಾಲೆಗೆ ಸಾಗುವ ವ್ಯವಸ್ಥೆ. ನಿತ್ಯವೂ ನಡೆಯುವ ಇದೊಂದು ರೀತಿಯಲ್ಲಿ ನಮ್ಮ ಉತ್ಸವದ ಮೆರವಣಿಗೆಯಂತಿದೆ. [ಪೀಡಿಬಸ್ ಎಂದರೆ ಇಟಾಲಿಯನ್ ಬಾಷೆಯಲ್ಲಿ ಕಾಲು- ಬಸ್ಸು ಅನ್ನುವರ್ಥ. ಆದರೆ ನಮ್ಮೂರ ಆಡುಬಾಷೆ ತುಳುವಿನಲ್ಲಿ ಕಾರು ಎಂದರೆ ಕಾಲು ಎನ್ನುವ ಅರ್ಥ. ಅದುದರಿಂದ ನನ್ನ ಈ ಬರಹದಲ್ಲಿ ಮುಂದೆ ಇಟಲಿಯ ಪೀಡಿಬಸ್ ನಮ್ಮೂರ ಕಾರ್ ಬಸ್ಸಾಗುತ್ತದೆ ]
ಕಾರುಗಳು ಉಗುಳುವ ಹೊಗೆಯಿಂದ ಉಂಟಾಗುವ ವಾಯು ಮಲೀನತೆ, ಊರಿನಲ್ಲಿ ವಾಹನಗಳ ದಟ್ಟಣೆ ಮತ್ತು ಮಕ್ಕಳ ಬೊಜ್ಜು ಸಮಸ್ಯೆ - ಈ ಮೂರು ಉದ್ದೇಶಗಳ ಹೊಂದಿ ಏಳು ವರ್ಷ ಹಿಂದೆ ಲೆಕ್ಕೊ ಊರಿನಲ್ಲಿ ಕಾರ್ ಬಸ್ಸಿಗೆ ಚಾಲನೆ ನೀಡಲಾಯಿತು. ಪ್ರತಿ ವರ್ಷ ಜಗತ್ತಿನ ಮೂವತ್ತಾರು ಬಾಷೆಯಲ್ಲಿ ಜಾಗತಿಕ ಪರಿಸರ ಚಿತ್ರಣ ಸೂಚಿಸುವ ವರ್ಲ್ಡ್ ವಾಚ್ ನ ಕಳೆದ ತಿಂಗಳು ಬಿಡುಗಡೆಯಾದ ವಾರ್ಷಿಕ ವರದಿಯಲ್ಲಿ ಕಾರು ಬಸ್ಸಿನ ಪ್ರಥಮವಾಗಿ ಜಾರಿಗೆ ತಂದ ಲೆಕ್ಕೊ ಊರಿನ ಉಲ್ಲೇಖವಿದೆ. ಇದೊಂದು ಅವರಿಗೆ ಬಹಳ ಹೆಮ್ಮೆ ಪಡುವಂತಹ ವಿಚಾರ.
ಬಸ್ಸು ವಿವಿದ ನಿಲ್ದಾಣಗಳಿಗೆ ನಿಗದಿತ ಸಮಯಕ್ಕೆ ತಲಪುತ್ತದೆ. ನಿಗದಿತ ಬಸ್ಸು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಮಕ್ಕಳ ತಲಪಿಸಿದರಾಯಿತು. ಕರಕೊಂಡು ಹೋಗುತ್ತಾರೆ. ಬಸ್ಸು ಚಾಲಕ ಬೊಮ್ಮನಹಳ್ಳಿಯ ಕಿಂದರಿಜೋಗಿ ಮುನ್ನಡೆಸುತ್ತಾನೆ. ಕೊನೆಯಲ್ಲಿ ನಿರ್ವಾಹಕನೂ ಇರುತ್ತಾನೆ. ಪ್ರತಿ ದಿನ ಬೆಳಗ್ಗೆ ನೌಕರರು ಹಾಗೂ ಮಕ್ಕಳ ಪೋಷಕರು ಸ್ವಯಂ ಸೇವಕರು ಮಿನುಗುವ ಅರಿಶಿನ ಬಣ್ಣ ಮೇಲಂಗಿ ದರಿಸಿ ಮಕ್ಕಳ ಸಾಲು ಪ್ರಕಾರ ಮುನ್ನಡೆಸುತ್ತಾರೆ. ಈ ಬಸ್ಸು ಸಾಗಲು ಇತರ ವಾಹನಗಳ ತಡೆಯುತ್ತಾರೆ. ಕೆಲವು ಅಜ್ಜ ಅಜ್ಜಿಯರೂ ಸ್ವಯಂ ಸೇವೆಗೆ ಸಿದ್ದವಾಗಿರುವಂತೆ ಚಿತ್ರ ನೋಡುವಾಗ ಸಂಶಯ ಬರುತ್ತದೆ.
ಶಾಲೆ ಮುಗಿದ ನಂತರ ಬಸ್ಸು ವಾಪಾಸು ತಂದು ಬಿಡುತ್ತದೆ. ಎಲ್ಲ ಬಸ್ಸು ದಾರಿಗಳಿಗೂ ಅರ್ಥಪೂರ್ಣಹೆಸರುಗಳಿವೆ. ದಿನಾಲು ಮಕ್ಕಳ ಹಾಜರಿ ದಾಖಲಾಗುತ್ತದೆ. ಊರಿನ ಆಡಳಿತ ಈ ವ್ಯವಸ್ಥೆಗೆ ವರ್ಷಕ್ಕೆ ಒಂಬತ್ತು ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಮಕ್ಕಳೂ ಸಮಾಜದ ಬಗೆಗೆ ಕಾಳಜಿ ವ್ಯಕ್ತ ಪಡಿಸುತ್ತಾರೆ. ಎಲ್ಲಾದರೂ ಅಡ್ಡಾ ದಿಡ್ಡಿ ವಾಹನ ನಿಲ್ಲಿಸಿರುವುದು ಕಂಡರೆ ಎಚ್ಚರಿಸುತ್ತಾರೆ. ದಾರಿಯಲ್ಲಿ ಗಲೀಜು ಮಾಡುವ ನಾಯಿಗಳ ಯಜಮಾನರನ್ನು ಛೇಡಿಸುತ್ತಾರೆ.
ಕಾರ್ಡೂಸಿ ಶಾಲೆಗೆ ನೂರು ಮಕ್ಕಳು ಅಂದರೆ ಶಾಲೆಯ ಅರೆವಾಶಿ ಸಂಖ್ಯೆ ಇಂದು ಕಾರ್ ಬಸ್ಸಲ್ಲಿ ಬರುತ್ತಾರೆ. ಇವರಲ್ಲಿ ಹಲವರು ಹಿಂದೆ ಕಾರಲ್ಲಿ ಬರುತ್ತಿದ್ದರು. ಹೆಚ್ಚಿನ ಕಾರ್-ಬಸ್ ಪ್ರಯಾಣ ಒಂದು ಮೈಲು ಮಿಗದೆ ಇದ್ದರೂ ಒಟ್ಟಿನಲ್ಲಿ ಒಂದು ಲಕ್ಷ ಮೈಲು ಕಾರು ಓಡುವುದು ನಿವಾರಿಸಿದೆ ಎಂದು ಲೆಕ್ಕೊ ಪಟ್ಟಣದ ಶಾನುಬೋಗರು ಅಬಿಪ್ರಾಯ ಪಡುತ್ತಾರೆ. ದಿನಾಲೂ ನೂರ ನಲುವತ್ತನಾಲ್ಕು ಕಾರುಗಳು ಊರಿನ ಶಾಲೆಗಳಿಗೆ ಬರುವುದನ್ನು ಈ ವ್ಯವಸ್ಥೆ ತಡೆದಿದೆ.
ನನ್ನ ಇಬ್ಬರು ಮಕ್ಕಳು ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಅವರ ಬೆನ್ನು ಚೀಲ ಬಾರವಾಗಿರುತ್ತದೆ ಎಂದು ಒಬ್ಬ ಮಾತೆ ಮಕ್ಕಳು ಹದಿನೈದು ನಿಮಿಷ ನಡೆಯುವುದರ ಬದಲಿಗೆ ಕಾರಿನಲ್ಲಿ ಕರೆ ತಂದುದಕ್ಕೆ ಸಮಜಾಯಶಿ ಕೊಡುತ್ತಾರೆ. ಕೆಲವರು ಈ ಕಾರು ಬಸ್ಸಿನ ದಾರಿಗಿಂತ ದೂರದಲ್ಲಿರುತ್ತಾರೆ. ಅಂತಹವರಿಗೆ ಊರ ಗಡಿಯಲ್ಲಿ ಕಾರು ಬಸ್ಸಿನ ನಿಲುಗಡೆಯಿದೆ ಎಂದು ಅದರ ವ್ಯವಸ್ಥಾಪಕರು ಹೇಳುತ್ತಾರೆ.
ಕಳೆದ ವರ್ಷದಲ್ಲಿ ಇಂಗ್ಲೇಂಡಿನಲ್ಲಿ ಶಾಲೆಗೆ ಮಕ್ಕಳ ಸಾಗಿಸಲು ಶೇಕಡ ಹದಿನೆಂಟು ಕಾರು ಓಡಾಟ ಎಂದು ಲೆಕ್ಕ ಹಾಕಿದ್ದಾರೆ ಮತ್ತು ಇದು ಹೆಚ್ಚಿನ ದೇಶಗಳಲ್ಲಿ ಹೆಚ್ಚುತ್ತಲೇ ಇದೆ. ಇಂದು ಪರದೇಶಗಳಿಂದ ಅಹಾರ ಅಮದು ಮಾಡುವುದು ಮತ್ತು ಅಗ್ಗದ ವಿಮಾನ ಪ್ರಯಾಣದ ಜತೆಗೆ ಶಾಲೆಗೆ ಕಾರು ಓಡಿಸುವುದು ಪರಿಸರದ ಮೇಲೆ ಅಪಾರ ದುಷ್ಪರಿಣಾಮ ಬೀಳುವುದೆಂದು ಯುರೋಪಿನ ಪರಿಸರ ಸಂಸ್ಥೆ ಕಳೆದ ವರ್ಷ ಎಚ್ಚರಿಸಿದೆ. ಈ ನಡೆಯುವ ಬಸ್ಸು ಕಾರುಗಳ ಅವಲಂಬನೆ ಕಡಿಮೆ ಮಾಡುವ ಉದ್ದೇಶ ಮಾತ್ರವಲ್ಲ, ಮಕ್ಕಳ ಬೊಜ್ಜು ಕರಗಿಸುವುದೂ ಹೌದು. ಹಲವಾರು ದೇಶಗಳಲ್ಲಿ ಮಕ್ಕಳ ಬೊಜ್ಜು ಗಂಬೀರ ಸಮಸ್ಯೆ.
ಇಟಲಿಯಲ್ಲಿ ಈ ವರ್ಷ ಜನವರಿಯಲ್ಲಿ ಕಾರ್ ಬಸ್ಸು ವಿಚಾರದಲ್ಲಿ ಎರಡು ಹೊಸ ಬೆಳವಣಿಕೆಗಳು. ಅಮೇರಿಕದ ವರ್ಲ್ಡ್ ವಾಚ್ ಸಂಸ್ಥೆ ಈ ವರ್ಷ ಲಿಕ್ಕೊ ಪಟ್ಟಣದ ಈ ಕಾರ್ ಬಸ್ಸಿನ ಕೊಡುಗೆ ಗುರುತಿಸಿದೆ. ಜನವರಿ ಇಪ್ಪತ್ತನಾಲ್ಕರಂದು ಇನ್ನೊಂದು ಊರು ಕಾರ್ ಬಸ್ಸ್ ಪಟ್ಟಿಗೆ ಸೆರ್ಪಡೆಯಾಗಿದೆ. ಅದು ಸಾಗುವ ದಾರಿ ಮತ್ತು ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ.
ಇದನ್ನು ನಡೆಸಲು ಬಹಳ ಪ್ರಯತ್ನ ಅವಶ್ಯ. ಮಕ್ಕಳನ್ನು ಕಾರಿನಲ್ಲಿ ತುಂಬಿ ಶಾಲೆಗೆ ಬಿಡುವುದು ಸುಲಭದ ದಾರಿ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರುಗಳಿರುವಾಗ ಅವುಗಳ ಉಪಯೋಗಿಸದೆ ಇರುವುದೂ ಕಷ್ಟ. ಮಳೆ ಬಂದ ದಿನ ಹಾಜರಾತಿ ಕಡಿಮೆಯಿರುತ್ತದೆ. ಹಿಮ ಬೀಳುವಾಗ ಪೂರಾ ಮಕ್ಕಳು ಹಾಜರ್. ಆಟವಾಡಿಕೊಂಡು ಶಾಲೆಗೆ ಹೋಗಬಹುದಲ್ಲಾ.
ಹಳ್ಳಿಯೊಂದರ ಮೂಲೆಯಲ್ಲಿ ವಾಸವಾಗಿರುವ ನಾನು ಮಕ್ಕಳ ಶಾಲಾ ಬಾಬ್ತು ಸುಮಾರು ಹತ್ತು ವರ್ಷ ದಿನಕ್ಕೆ ಮೂವತ್ತೆರಡು ಕಿಮಿ ವಾಹನ ಓಡಿಸಿದ್ದೇನೆ. ಈ ರೀತಿಯ ಯಾವುದೇ ಪರ್ಯಾಯ ವ್ಯವಸ್ಥೆ ಇದ್ದರೆ ಶಾಲೆಯ ಬುಡದಲ್ಲಿ ಬಿಡುವ ಬದಲು ಊರ ಗಡಿಯಲ್ಲಿ ಬಿಡುತ್ತಿದ್ದೆ. ಶಾಲೆ ಸಮೀಪಿಸಿದಂತೆ ಹೆಚ್ಚಿನ ಮಕ್ಕಳು ಮತ್ತು ಗುರುಗಳು ನಡೆದುಕೊಂಡು ಹೋಗುವಾಗ ನಾವು ವಾಹನದಲ್ಲಿ ಬಂದಿಯಾಗಿರುವುದು ನಿಜಕ್ಕೂ ಮುಜುಗರ ಹಿಂಸೆಯಾಗುತ್ತಿತ್ತು. ಅದುದರಿಂದ ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅರ್ಧ ಕಿಮಿ ದೂರದಲ್ಲಿ ಬಿಡುತ್ತಿದ್ದೆ.
Saturday, February 06, 2010
Subscribe to:
Post Comments (Atom)
3 comments:
ಪ್ರೀತಿಯ ಗೋವಿಂದ
ಶುಭ ಮುಂಜಾನೆ!
ತಮ್ಮ 'ಪೀಡಿ ಬಸ್' ಓದಿ ಅದೆಷ್ಟು ಸಂತಸ ಆಯಿತು!
ಮನಸ್ಸಿದ್ದರೆ ಮಾರ್ಗ ಎಂದೆಂದಿಗೂ ಇದೆ!
ಐವತ್ತರ ದಶಕದಲ್ಲಿ ನಾವೆಲ್ಲಾ ಪೀಡಿ ಬಸ್ ನಲ್ಲೇ ಶಾಲೆಗೆ ಹೋಗುತ್ತಾ ಇದ್ದೆವು.
ಉಡುಪಿಯಲ್ಲಿ ಅಂದು ಸಿಟಿ ಬಸ್ ಇರಲಿಲ್ಲ. ಸೈಕಲ್ ಕೂಡಾ ಬಹು ಅಪರೂಪದ ವಸ್ತು ಆಗಿತ್ತು!
ನಾನು ಪ್ರೌಢಶಾಲೆಗೆ ಸುಮಾರು ಎರಡು ಮೈಲು ನಡೆಯುತ್ತಿದ್ದೆ. ಆರು ಮೈಲು ದೂರದಿಂದ ನಡೆದು ಬರುವ ಹಲವಾರು ಹುಡುಗ ಹುಡುಗಿಯರೂ ಇದ್ದರು.
ಪ್ರಸಿದ್ಧ ವ್ಯಕ್ತಿಗಳಾದ ಡಾ. ಬಿ. ಆರ್. ಶೆಟ್ಟಿ . ಶ್ರೀ ಆಸ್ಕರ್ ಫೆರ್ನಾಂಡಿಸ್ ಮುಂತಾದ ಹಲವರೂ ನಮ್ಮ ಜತೆಗೆ ಶಾಲೆಗೆ ಹೋಗುವ ಹುಡುಗರ ಪಟಲಾಮಿನಲ್ಲೇ ನಡೆಯುತ್ತಾ ಇದ್ದರು.
ದೊಡ್ದ ಕ್ಲಾಸುಗಳಲ್ಲಿ ಓದುತ್ತಿದ್ದ ಹಿರಿಯ ಹುಡುಗರು / ಹುಡುಗಿಯರು ಚಿಕ್ಕವರ ನಿಗಾ ತೆಗೆದು ಕೊಳ್ಳುತ್ತಾ ಇದ್ದರು. ಹಾಗಾಗಿ, ಚಿಕ್ಕ ಮಕ್ಕಳ ನಿಗಾ ತೆಗೆದುಕೊಳ್ಳುವ ಚಿಂತೆ ಹೆತ್ತವರನ್ನು ಬಾಧಿಸುತ್ತಿರಲಿಲ್ಲ.
ನನಗೆ ಒಂಬತ್ತನೇ ಕ್ಲಾಸಿನಲ್ಲಿ ನನ್ನ ಅಣ್ನನ ಸೈಕಲ್ ಸಿಕ್ಕಿದ್ದು ನನಗೆ ಇಂದಿಗೂ ಹೆಮ್ಮೆಯ ವಿಷಯ.
ಮುಂದಕ್ಕೆ ನಾಲ್ಕು ಮೈಲಿ ದೂರದ ಕಾಲೇಜಿಗೂ ಸೈಕಲ್ ಮೇಲೆಯೇ ಹೋದೆ.
ಅಂದಿನ ಜೀವನ ರೀತಿಯೂ ಹಾಗೇ ಇತ್ತು. ಇದಕ್ಕೆ ಹೆಚ್ಚಿನವರು ಹೊರತಾಗಿ ಇರಲಿಲ್ಲ.
ಇಂದು:
ಮಾರ್ಗದಲ್ಲಿ ವಾಹನಗಳ ಜಂಜಾಟ!
ನಡೆಯಲು ಸರಿಯಾದ ಫುಟ್ ಪಾತ್ ಇಲ್ಲ.
ಮಕ್ಕಳನ್ನು ಶಾಲೆಗೆ ಬಿಟ್ಟು ಕರೆತರಲೇಬೇಕು.
ಇಲ್ಲವೇ ರಿಕ್ಷಾ, ವ್ಯಾನ್ ಅಥವಾ ಬಸ್ಗಳಿಗೆ ಮೊರೆ ಹೋಗಲೇ ಬೇಕು.
ಮೋಪೆಡ್, ಬೈಕ್ ಓಡಿಸುವ ಪ್ರಾಯದಲ್ಲಿ ವಿದ್ಯಾರ್ಥಿಗಳಿಗೆ ಅವನ್ನು ಕೊಡಿಸಲೇ ಬೇಕು. ಸೈಕಲ್ ಮೇಲೆ ಹೆಚ್ಚಿನ ಮಕ್ಕಳಿಗೆ ಒಲವಿಲ್ಲ.
ಇದು ಇಂದಿನ ಕಾಲ ರೀತಿ.
ಇಲ್ಲಿ ಯಾರದೂ ತಪ್ಪಿಲ್ಲ.
ಇಂದಿನ ಕಾಲ ಹಾಗಿದೆ!
ಇಂದು ಕೆಲವು ನಡೆದು ಬರುವ ವಿದ್ಯಾರ್ಥಿಗಳನ್ನು ಓರಗೆಯವರು " ಅವರು ಬಸ್ ನಂಬ್ರ 11 ರಲ್ಲಿ ಬರುತ್ತಾ ಇದ್ದಾರೆ! " ಅಂತ ಛೇಡಿಸಿಸುತ್ತಾರಂತೆ! ಬಸ್ ನಂಬ್ರ 11 ಅಂದರೆ 'ವಾಕೋಮೋಬೈಲ್!'
ಮೇಲಿನ ಈ ಹೆಸರುಗಳಿಗೂ ತಾವು ಬರೆದ 'ಪೀಡಿ ಬಸ್' ಎಂಬ ಶಬ್ದಕ್ಕೂ ಸಾಮ್ಯ ಕಂಡಿತು.
ಪರಿಸರ ಸ್ನೇಹಿ ಪೀಡಿ ಬಸ್ ಸ್ನೇಹವನ್ನೂ ಹೆಚ್ಚಿಸುತ್ತದೆ. ಅದರ ಬಗ್ಗೆ ಓದಿ ಅಭಿಮಾನ ಹೆಚ್ಚಿತು.
ವಂದನೆಗಳು
ಪೆಜತ್ತಾಯ ಎಸ್. ಎಮ್.
’ಪೀಡಿ ಬಸ್’ಗೆ ನಾವಿಲ್ಲಿ ’ವಿನೋಬಾ ಸರ್ವಿಸ್’ ಅನ್ನುತ್ತೇವೆ. ನನಗೆ ಬಲು ಇಷ್ಟವಾದ ಸರ್ವಿಸ್ ಅದು. ನಾನಾಗಲೀ ನನ್ನ ಕುಟುಂಬದ ಸದಸ್ಯರಾಗಲೀ ಯಾವ ವಾಹನವನ್ನೂ ಹೊಂದಿಲ್ಲ. ನಮ್ಮದು ’ವಿನೋಬಾ ಸರ್ವಿಸ್’ ಎಂಬ ’ಪೀಡಿ ಬಸ್’. ದೂರ ಹೆಚ್ಚಿದ್ದರೆ ಸಾರ್ವಜನಿಕ ಬಸ್. ಸಮಾನತೆ, ಇಂಧನ ಉಳಿತಾಯ, ಪರಿಸರ ನೈರ್ಮಲ್ಯ ಮತ್ತು ವಾಹನದಟ್ಟಣೆ ನಿವಾರಣೆ ಈ ಉದ್ದೇಶಗಳಿಂದ ನಮ್ಮ ಈ ಕ್ರಮ.
ಪ್ರಿಯ ಗೋವಿಂದಾ
ಪೆಜತ್ತಾಯರು ನಮ್ಮ ಬಾಲ್ಯಕ್ಕೆ ಅವಮಾನ ಮಾಡಿದ್ದಾರೆ. ವಾಸ್ತವವಾಗಿ ಇಟಾಲಿಯನ್ನರು ಭಾರತೀಯ ಮಕ್ಕಳ ಬಾಲ್ಯದ ಅನುಭವವನ್ನೇ ಕದ್ದಿದ್ದಾರೆ ಎನ್ನಲಡ್ಡಿಯಿಲ್ಲ. ಹಲ್ಲು ಕಚ್ಚಿ, ತುಟಿಯರಳಿಸಿ, ಜೊಲ್ಲು ರಟ್ಟಿಸುತ್ತ ಭುರ‍್ರ‍್ರ‍್ರ‍್ರ‍್ರ‍್ ಬಸ್ಸಿನ ಶಬ್ದ ಹೊರಡಿಸುತ್ತಾ ಆಗಾಗ ಬಲಗೈಯಲ್ಲಿ ಪೊಂವ್ಕ್ ಪೊಂವ್ಕ್ ಹಾರನ್ನ್ ಬಾರಿಸುತ್ತಾ ಎಡಗೈಯಲ್ಲಿ ಗೇರು ಬದಲಿಸುತ್ತಾ ಉಳಿದಂತೆ ಎದುರು ಸ್ಟೀರಿಂಗನ್ನು ಅತ್ತ ಇತ್ತ ಹೊರಳಿಸುತ್ತ ನಮ್ಮನಮ್ಮದೇ ಬಸ್ಸೋ (ಕಾರೋ - ಯದ್ಭಾವಂ ತದ್ಭವತಿ) ಬಿಡುತ್ತಿದ್ದದ್ದು ನೆನಪಿಲ್ಲವಾ? ಎದುರಿನವನ ಶರಟಿನ ಚುಂಗು ಹಿಡಿದು ರೈಲೂ ಸಾಮಾನ್ಯವಿತ್ತು. ಸೈಕಲ್ಲಿನ ಹಳೇ ಚಕ್ರ, (ಮೋಟಾರ್ ಸೈಕಲ್ ಚಕ್ರ ಭಾರೀ ವೈಭವವಾಯ್ತು) ಅದರಲ್ಲು ಬರಿಯ ರಿಮ್ಮು, ಅದಕ್ಕೊಂದು ಸ್ವಲ್ಪ ನಡು ಬಗ್ಗಿದ ಕೋಲೋ ಗಟ್ಟಿ ತಂತಿಯೋ ಸಿಕ್ಕಿಬಿಟ್ಟರಂತೂ ಮುಗೀತು. ಅದು ಓಡುವ ಭರದಲ್ಲಿ ಬಿಟ್ಟ ಬಾಯಿಗೆ ರಸ್ತೆಯಿಂದ ಹಾರುವ ಕೊಳಕು, ರಿಮ್ಮು ಕಾಲಾನುಕ್ರಮದಲ್ಲಿ ಸವೆದೋ ತುಕ್ಕು ಹಿಡಿದೋ ವೇಗೋತ್ಕರ್ಷದಲ್ಲಿ ಕೋಲು ಸಿಕ್ಕಿ ಜಖಂ ಆಗುತ್ತಿದ್ದದ್ದು ಯಾರೂ ಲೆಕ್ಕವಿಟ್ಟಿಲ್ಲ. ಇಟ್ಟಿದ್ದರೆ, ಗಾಳೀಪಟ ಹಾರಿಸಿ ಆಗುವ ಅಪಾಯ ತಪ್ಪಿಸಲು ಕೊಂಗಾಟಿಗಳ ಸರ್ಕಾರ BAN ಮಾಡಿದಂತೆ ಇದಕ್ಕೂ ನಿಷೇಧ ಬರುತ್ತಿತ್ತು ಗ್ಯಾರಂಟಿ.
ನೀನೀಗಲೇ ತುರ್ತಾಗಿ ಇದನ್ನು ಸಕಲ ಹಿಂದೂ ಹಿತರಕ್ಷಕ ವ್ಯಕ್ತಿ ಸಂಸ್ಥೆಗಳಿಗೆ ತಿಳಿಸಿ (ನಮ್ಮ ಇಟಾಲಿನ್ ಸೊಸೆ ಮಾಡಿದ್ದೂ ಇರಬಹುದು - ಡಾ| ತೊಗಾಡಿಯಾರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ತನಿಖಾ ಆಯೋಗ ಹೊರಡಿಸಬೇಕೆಂಬ ಹಕ್ಕೊತ್ತಾಯ ಪ್ರತ್ಯೇಕವಿರಲಿ). ಅಖಿಲ ಭಾರತ ಮಟ್ಟದ ಬಂದ್ ಕರೆ ಕೊಡಿಸಿ (ಹತ್ತೆಂಟು ಇಗರ್ಜಿಗಳಿಗೆ ಕಲ್ಲು ತೂರಾಟ ನಡೆಸಿ?) ಇಟಲಿ ರಾಯಭಾರಿಗೆ, ಪ್ರಧಾನಿಗೆ (ಅಲ್ಲೂ ಸೂಪರ್ ಪ್ರಧಾನಿ ಇದ್ದಾರಾ? ಇದ್ದರೆ ಅವರಿಗೂ ) ಕಳಿಸಿ ಬೇಷರತ್ ಕ್ಷಮೆ ಕೇಳಿಸಲೇ ಬೇಕು.
ಇಂತು
ವಿಶ್ವಾಸಿ
ಅಶೋಕವರ್ಧನ
Post a Comment