Saturday, February 20, 2010

ನ್ಯೂ ಯೋರ್ಕಿನಲ್ಲೊಬ್ಬ ಅಪರೂಪದ ಫೊಟೊಗ್ರಾಫರ್

ಮೊದಲ ನೋಟದಲ್ಲಿ ಯಾವುದೋ ಪುರಾತನ ಕಾಲದ ಪೋಟೊ ಅನಿಸುತ್ತದೆ. ಹೌದು. ಶತಮಾನದಷ್ಟು ಹಳೆಯ ತಂತ್ರಜ್ನಾನ ಉಪಯೋಗಿಸುತ್ತಾರೆ ಮೈಕಲ್ ಬಯರ್ಡ್. ನ್ಯೂ ಯೋರ್ಕ್ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಫೋಟೊ ಮಾರುವ ಇವರು ಬಿಸಾಕುವಂತಹ ಚಿಕ್ಕ ಡಬ್ಬಗಳ ಉಪಯೋಗಿಸಿ ಕೆಮರ ತಯಾರಿಸಿಕೊಳ್ಳುತ್ತಾರೆ. ಅದರಲ್ಲಿ ಪಿಲ್ಮ್ ಕಾಗದ ಇಟ್ಟು ಪ್ರೇಕ್ಷಣೀಯ ಜಾಗಗಳಲ್ಲಿ ಕ್ಷಣ ಬೆಳಕು ಹಾಯಿಸುತ್ತಾರೆ. ಮನೆಯ ಕತ್ತಲು ಕೋಣೆಯಲ್ಲಿ ಸಂಸ್ಕರಿಸಿ ಕೊಂಟಾಕ್ಟ್ ಪ್ರಿಂಟ್ ಹಾಕಿ ಅದನ್ನು ಮಾರಲು ಸೈಕಲು ಏರಿ ಪಟ್ಟಣದ ಕೇಂದ್ರಬಾಗಕ್ಕೆ ಬರುತ್ತಾರೆ.  ಇವರ ದೊಡ್ಡ ಅಂಚೆ ಚೀಟಿ ಗಾತ್ರದ ಪೋಟೊ ಪ್ರವಾಸಿಗಳು ಕುತೂಹಲದಿಂದ ಇಪ್ಪತ್ತು ಡಾಲರ್ ತೆತ್ತು ಕೊಳ್ಳುತ್ತಾರೆ.  






ಸಿಕ್ಕ ಯಾವುದಾದರೂ ಡಬ್ಬದಲ್ಲಿ ಚೂರು ಪೋಟೊ ಕಾಗದ ಹಾಕಿ ತೂತಿನಲ್ಲಿ ಬೆಳಕಿಗೊಡ್ಡುತ್ತೇನೆ.   ಅದೊಂದು ಜಾದೂ ಎನಿಸುವಷ್ಟು ಸರಳ ಎನ್ನುತ್ತಾರೆ ಮೈಕಲ್ ಬಯರ್ಡ್. ಈ ಪೀಲ್ಮ್ ರೋಲ್ ಡಬ್ಬ ಒಳಬಾಗ ಉರುಟಾಗಿರುವ ಕಾರಣ ಈ ಪೋಟೊಗಳು ಸಹಾ ಅದನ್ನು ಪ್ರತಿಫಲಿಸುತ್ತವೆ. ಅವರ ಪೋಟೊಗಳು ತೀರಾ ಚಿಕ್ಕದು ಮತ್ತು ಸರಳವಾದುದು. ಪ್ರತಿಯೊಂದು ಪ್ರತ್ಯೇಕವಾಗಿ ಅವರ ಕತ್ತಲ ಕೋಣೆಯಲ್ಲಿ ಮುದ್ರಣಗೊಂಡಿರುತ್ತದೆ.






ಭೌತಶಾಸ್ತ್ರದ ಬೆಳಕಿನ ಬಗೆಗಿನ ಪ್ರಥಮ ಪಾಠದಲ್ಲಿ ಬರುವುದು ಪಿನ್ ಹೋಲ್ ಕೆಮರಾ. ಚಿಕ್ಕವನಾಗಿದ್ದಾಗಲೇ ಈ ಕಲೆಯ ಬಗೆಗೆ ಅಪಾರ ಆಸಕ್ತಿ ಹೊಂದಿದ ನನಗೆ ಉತ್ತಮ ಪಿನ್ ಹೊಲ್ ಕೆಮರಾ ಚಿತ್ರಗಳ ನೋಡಲು ಮೂವತ್ತೈದು ವರ್ಷ ಕಾಯಬೇಕಾಯಿತಲ್ಲ ಎನ್ನುವಾಗ ಬೇಸರವಾಗುತ್ತದೆ. ಅಂದು ತಿಳಿದಿದ್ದರೆ ಪ್ರಯೋಗ ಮಾಡಿ ಸಫಲನಾಗಲು ದಾರಾಳ ಅವಕಾಶಗಳಿದ್ದವು. ದ್ವಿತಿಯಾರ್ದ ಅಂದರೆ ಪೋಟೊ ಸಂಸ್ಕರಣೆ ತಿಳಿದ ಕಾರಣ ಯಶಸ್ಸಿಗೆ ಬಹಳ ಸಮೀಪದಲ್ಲಿಯೇ ಸಾಗಿದ್ದೆ. ಆದರೆ ಈಗ ಉಪಯೋಗಿಸುವಾಗ ಖರ್ಚಿಲ್ಲದ ಈ ಡಿಜಿಟಲ್ ಕೆಮರಗಳ ಉಪಯೋಗಿಸಿದ ನಂತರ ಈ ಫಿಲ್ಮ್ ಕೆಮರಗಳ ಉಪಯೋಗಿಸ ಹೊರಟರೆ ಉದ್ದಕ್ಕೂ ಒಂಟಿ ದಾರಿ. ನಮ್ಮ ಸ್ಟುಡಿಯೊದವರು ಸಂಸ್ಕರಣೆ ನಿಲ್ಲಿಸಿ ವರ್ಷಗಳಾದವು. ಇಂದು ಡೆವೆಲಪರ್, ಹೈಪೊ, ಪೋಟೊ ಮುದ್ರಣ ಕಾಗದ, ನೆಗೆಟಿವ್ ಹಾಳೆ ಎಲ್ಲವೂ ಹುಡುಕಾಡಲು ಸುಲಭವಲ್ಲ. ಮೊದಲು ನಮ್ಮೂರ ಸ್ಟುಡಿಯೊ ಗೆಳೆಯರಲ್ಲಿ ಈ ವಸ್ತುಗಳು ದಾರಾಳವಾಗಿ ಸಿಗುತಿತ್ತು.


ಇಂದಿಗೂ ಮಸೂರರಹಿತ ಪುಟ್ಟ ಕಿಂಡಿ ಕೆಮರಗಳ ತಯಾರಕರಿದ್ದಾರೆ. ಸಾಗುವಾನಿ ಮರದಲ್ಲಿ ಮಾಡಿದ ಗಾಜಿನ ಮಸೂರ ರಹಿತ ಚಿಕ್ಕ ತೂತಿನ ಕೆಮರಾ ಈಗ ಹಾಂಗ್ ಕಾಂಗಿನಲ್ಲಿ ತಯಾರಿಸಿ ಪ್ರಪಂಚಾದ್ಯಂತ ಮಾರಾಟ ಮಾಡುತ್ತಾರೆ. ಇಂದು ಇವರ ಗ್ರಾಹಕರಿರುವ ಇಪ್ಪತೇಳು ದೇಶಗಳ ಪಟ್ಟಿಯಲ್ಲಿ ಬಾರತದ ಹೆಸರಿಲ್ಲ. ನಾವು ಕಳಪೆ ಗುಣಮಟ್ಟದ ಡಿಜಿಟಲ್ ಕೆಮರಗಳಲ್ಲಿ ತೃಪ್ತರು.   ಈ ಅಧುನಿಕ ಕಿಂಡಿ ಕೆಮರಗಳ  ಮೇಲ್ಕಾಣಿಸಿರುವಂತಹ    ಚಿತ್ರಗಳನ್ನು ನೋಡಲು ಈ ತಾಣವ ಬೇಟಿ ಕೊಡಿ.

ಪಿನ್ ಹೋಲ್ ಕೆಮರಾ ಬಗೆಗಿನ ಕುತೂಹಲಕರ ಮಾಹಿತಿ ಈ ಕೊಂಡಿಯಲ್ಲೂ ನನಗೆ ದೊರೆತವು. ಅಂದು ಕಮುನಿಸ್ಟ್ ದೇಶಗಳಲ್ಲಿ ನೂರೆಂಟು ತಡೆಗಳಿದ್ದೂ ತಮ್ಮ ಕುತೂಹಲ ತಣಿಸಿಕೊಂಡ ಹಲವು ಹವ್ಯಾಸಿಗಳಿದ್ದಾರೆ. ಅಂತೆ ಈ ತಾಣದಲ್ಲೂ ಅದರ ಬಗೆಗೆ ಕಿರುನೋಟ ಸಿಗುತ್ತದೆ.

ಅತ್ಮೀಯ ಗೆಳೆಯ ರೋಹಿತ್ ಅವರಲ್ಲಿ ಕೆಮರಕ್ಕಿಂತ ದುಬಾರಿ ಮಸೂರಗಳಿವೆ. ಮುಂದೆ ಖರೀದಿಸುವ ಕೆಮರಗಳ ಜತೆಯೂ ಉಪಯೋಗಿಸಬಹುದು ಎನ್ನುತ್ತಾರೆ ರೋಹಿತ್. ಆದರೆ ಮಸೂರಗಳೇ ಇಲ್ಲದ ಕೆಮರಗಳು ಇನ್ನು ಮಾರಾಟವಾಗುತ್ತಿದೆ ಎನ್ನುವಾಗ ಅಶ್ಚರ್ಯ ಸಂತಸ ಎರಡೂ ಆಗುತ್ತದೆ. ಅದು ಕೆಲಸ ಮಾಡಲಾರದು ಎನ್ನುವ ಭಾವನೆ ಎಲ್ಲರಂತೆಯೇ ನನ್ನ ಮನದಲ್ಲಿ ಮನದಲ್ಲಿ ಮೂಡಿದ್ದು ಇರಬಹುದು. ಬಹಳ ಇಷ್ಟ ಪಟ್ಟು ಸಂಸ್ಕರಣೆ ಕಲಿತಿದ್ದೆ. ಎರವಲು ಪಡೆದ ಕೆಮರಗಳಲ್ಲಿ ಉತ್ತಮ ಚಿತ್ರ ಸೆರೆ ಹಿಡಿದಿದ್ದೆ. ಆದರೆ ಅದನ್ನು ಕಾಪಾಡಿಕೊಳ್ಳುವುದರ ಕಾಳಜಿ ಇಲ್ಲದೆ ಎಲ್ಲವೂ ಕಾಣೆಯಾಗಿವೆ.  ಎಷ್ಟು ಸಮೀಪದಲ್ಲಿ ಒಂದು ಅಧ್ಬುತ ಲೋಕ ತೆರೆದುಕೊಳ್ಳುವುದರ ತಪ್ಪಿಸಿಕೊಂಡಿದ್ದೇನೆ ಅಂತ ಯೋಚಿಸುವಾಗ ಬಹಳ ಬೇಸರವಾಗುತ್ತದೆ.

1 comment:

ಪೆಜತ್ತಾಯ ಎಸ್. ಎಮ್. said...

ನನ್ನ ಎಳವೆಯಲ್ಲಿ ಪಿನ್ ಹೋಲ್ ಕೆಮೆರಾ, ಬ್ಯಾಟರಿ ಬೇಕಾಗದ ಕ್ರಿಸ್ಟಲ್ ರೇಡಿಯೋ, ಏರೋಪ್ಲೇನ್ ಮಾಡೆಲ್ ಮತ್ತು ಶಿಪ್ ಮಾಡೆಲ್ ಎಲ್ಲಾ ಕಷ್ಟ ಪಟ್ಟು ತಯಾರಿಸಿದೆ.
ಎಲ್ಲದರಲ್ಲೂ ಸ್ವಲ್ಪ ನಿರಾಶೆ !!!

ನನ್ನ ಫ್ಯಾಬ್ರಿಕೇಷನ್ ಅನುಭವಗಳು ಹೀಗೆ ಇವೆ:

೧. ಪಿನ್ ಹೋಲ್ ಕೆಮೆರಾ – ೧೯೫೬

ಕಷ್ಟ ಪಟ್ಟು ಕ್ಯಾಮೆರಾ ಮರದಿಂದ ತಯಾರಿಸಿ ಆಗ ಧಾರಾಳವಾಗಿ ಆರು ರೂಪಾಯಿಗಳಿಗೆ ಸಿಗುತ್ತಿದ್ದ 'ಆಗ್ಫಾ ' ಕಪ್ಪು ಬಿಳುಪು ಫಿಲ್ಮ್ ನ ತುಂಡೊಂದನ್ನು ಕತ್ತರಿಸಿ ಮರದ ಡಬ್ಬಿಯ ಕೆಮೆರಾದ ಓಳಗೆ ಹಾಕಿ ‘ಫೋಟೋಗ್ರಾಚಾರ ಮಾಡಿದರೆ’ ....... ಅದು ಅಂಡರ್ ಅಥವಾ ಓವರ್ ಎಕ್ಸ್ಪೋಸ್ ಆಗಿರುತ್ತಿತ್ತು.
ನನ್ನ ಫಿಲ್ಮ್ ಡೆವೆಲಪ್ ಮತ್ತು ಪ್ರಿಂಟ್ ಮಾಡಿಸಲು ಸ್ಟೂಡಿಯೋಗೆ ಹೋದರೆ " ನಿಂದೊಂದು! ಕಿರಿ ಕಿರಿ " ಅಂತ ಹೇಳಲು ಶುರು ಮಾಡಿದರು.
ಕೊನೆಗೆ ಅಣ್ಣನ ಕೊಡ್ಯಾಕ್ ಬಾಕ್ಸಿನಲ್ಲಿ ವರುಷಕ್ಕೆ ಮೂರೋ ನಾಲ್ಕೋ ಪಟ ತೆಗೆಯುವ ಅವಕಾಶ ಗಿಟ್ಟಿಸಿ ಬೀಗಿದೆ. ಆ ಫೋಟೋಗಳು ಚೆನ್ನಾಗಿಯೇ ಬಂದಿದ್ದುವು! ಅವೆಲ್ಲಿ ಇದ್ದಾವೋ? ....ಗೊತ್ತಿಲ್ಲ!

೨. ಲೈಸನ್ಸ್ ಫೀ ಇಲ್ಲದ ಕ್ರಿಸ್ಟಲ್ ರೇಡಿಯೋ - ೧೯೫೮

ಅಂದ ಕಾಲತ್ತಿಲೆ ರೇಡಿಯೋ ಕೇಳಲು ರಿಸೀವರಿಗೆ ಲೈಸನ್ಸ್ ಬೇಕಿತ್ತು!
" ಕ್ರಿಸ್ಟಲ್ ರೇಡಿಯೋಗೆ ಬ್ಯಾಟರಿ ಇಲ್ಲ. ಆದ್ದರಿಂದ ಅದು ಲೈಸನ್ಸ್ ಫ್ರೀ!! " ಅಂದರು ನನ್ನ ಪೋಸ್ಟ್ ಮಾಸ್ಟರ್ ಮಾವ. ಆಗ ಅವರು ಇಡೀ ಉಡುಪಿ ನಗರಕ್ಕೆ ಲೈಸನ್ಸಿಂಗ್ ಅಥಾರಿಟಿ ಆಗಿದ್ದರು!
ನನ್ನ ಆಸೆ ಗರಿ ಕೆದರಿತು.
ವಾರ್ಷಿಕ ರಜೆಯಲ್ಲಿ ಊರಿಗೆ ಬಂದಿದ್ದ ನನ್ನ ಆರ್ ಫೋರ್ಸ್ ಮಾವನ ಸಂಗ್ರಹದಲ್ಲಿ ಕ್ರಿಸ್ಟಲ್ ರೇಡಿಯೋ ಮಾಡುವ ಮಾಹಿತಿಯ ಪುಸ್ತಕ ಇತ್ತು. ಅವರಿಂದ ಅದನ್ನು ಎರವಲು ಪಡೆದು ಬಹು ಕಷ್ಟ ಪಟ್ಟು ಅದರಲ್ಲಿನ ಇಂಗ್ಲಿಷ್ ಪದಗಳ ಅರ್ಥ ಕೇಳುತ್ತಾ ಕೇಳುತ್ತಾ, ಅದನ್ನು ನಾನು ನೂರು ಬಾರಿ ಓದಿರಬಹುದು!
ಕೊನೆಗೆ ಅದರ ಡಯಾಗ್ರಾಮ್ ಕಾಪಿ ಮಾಡಿ ಕೊಂಡೆ.
ಅದಕ್ಕೆ ಬೇಕಾದ ಎಲ್ಲಾ ಬಿಡಿ ಭಾಗಗಳ ಹೆಸರು ಪಟ್ಟಿಮಾಡಿದೆ.
ಅದರ ಮುಖ್ಯ ಪಾರ್ಟ್ ಗಳ ಯಾದಿ ನನ್ನ ನೆನಪಿನಂತೆ -- ಒಂದು ಏರಿಯಲ್, ಒಳ್ಳೆಯ ಅರ್ಥಿಂಗ್, ಕ್ರಿಸ್ಟಲ್ ಡಯೋಡ್, ಗ್ಯಾಂಗ್ ಕಂದೆನ್ಸರ್, ಯಾವುದೋ ಸಂಖ್ಯೆಯ ಒಂದು ರೆಸಿಸ್ಟನ್ಸ್ ಅಂತ ನೆನಪು. ಎಲ್ಲಕ್ಕಿಂತ ಮುಖ್ಯ - ರೇಡಿಯೋ ಕೇಳಲು ಒಂದು ಹೈ ಇಂಪಿಡೆನ್ಸ್ ಹೆಡ್ ಫೋನ್!!! ( ಇದು ದುಬಾರಿ ಮಾಲು! )
ನಾನು ಎಲ್ಲಾ ವಿವರ ನೋಟ್ಸ್ ಮಾಡಿಕೊಂಡು ಮಾವನಲ್ಲಿ ತೋರಿದೆ.
“ ಸರಿ ಇದೆ! ” - ಅಂದರು.
ಅವರ ಪುಸ್ತಕ ಪುಸ್ತಕ ಹಿಂದಿರುಗಿಸಿದೆ! ರಜೆ ಮುಗಿದಾಗ ಅವರು ಆಗ್ರಾಬೇಸಿಗೆ ಹಿಂದಿರುಗಿ ಹೊರಟು ಹೋದರು

ಮುಂದಕ್ಕೆ ಒಮ್ಮೆ ಉಡುಪಿಯಿಂದ ಬೇಸಿಗೆ ರಜೆಯಲ್ಲಿ ಬೆಂಗಳೂರಿಗೆ ಬಂದಾಗ, ಅವೆನ್ಯೂ ರೋಡಿನ ಗುಜರಿಯಲ್ಲಿ ಬೇಕಾದ ಎಲ್ಲಾ ಪಾರ್ಟ್ಸ್ ಕೊಂಡು ಒಬ್ಬ ರೇಡಿಯೋ ಅಂಗಡಿಯವನಿಗೆ ' ದಮ್ಮಯ ದಕ್ಕಯ ' ಹಾಕಿ ಕ್ರಿಸ್ಟಲ್ ರೇಡಿಯೋ ಅಸೆಂಬಲ್ ಮಾಡಿಯೇ ಬಿಟ್ಟೆ! ಅವನ ಅಂಗಡಿಯಲ್ಲೇ ಹೆಡ್ ಫೋನ್ ಹಾಕಿಕೊಂಡು ಆಕಾಶವಾಣಿಯ 'ಗೊರ್ ಗೊರ್ ' ಒಂದು ಗಂಟೆಯ ಮಟ್ಟಿಗೆ ಮಾತ್ರ ಕೇಳಿದೆ! ಆತನೂ ನನ್ನ ಉಮೇದು ಕಂಡು ಖುಷಿ ಪಟ್ಟ. ಆದರೂ ಇಪ್ಪತ್ತು ರೂಪಾಯಿ ರುಸುಮು ಪಡೆದ!
ಅಂದು “ನಾನೇ ಮಾರ್ಕೋನಿ” ಎಂಬಷ್ಟು ಸಂತಸ ಪಟ್ಟೆ!

ಆ ಮೇಲೆ ಉಡುಪಿಗೆ ಹೋಗಿ ....ನಾನು ಏನು ಕುಸ್ತಿ ಮಾಡಿದರೂ, ನನಗೆ ಯಾವ ಸ್ಟೇಶನಿನ 'ಗೊರ್ ಗೊರ್ ' ಕೇಳಲೇ ಇಲ್ಲ ! ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ರೇಡಿಯೋ ಸ್ಟೇಶನ್ ಇರಲೇ ಇಲ್ಲ!
ನನಗೆ ತುಂಬಾ ನಿರಾಸೆ ಆಯಿತು.
ನನ್ನ ಅಮೂಲ್ಯ ಪಾಕೆಟ್ ಮನಿ ಮತ್ತು ಭಗೀರತ ಪ್ರಯತ್ನ ಎಲ್ಲಾ ನಿಶ್ಪಲ ಆದುವು.

೩. ಏರೋ ಮಾಡೆಲಿಂಗ್ ಪ್ರಯತ್ನ : ೧೯೫೯

ಮುಂದಕ್ಕೆ ಇಂಡಿಯಾ ಹಾಬಿ ಸೆಂಟರ್ ಬಾಂಬೆ ಇವರಿಂದ ಅರುವತ್ತು ರೂಪಾಯಿ ತೆತ್ತು ಒಂದು ಗ್ಲೈಡರ್ ಕಿಟ್ ವಿ ಪಿ ಪಿ ಮೂಲಕ ತರಿಸಿಕೊಂಡೆ. ಸೂಚನೆಗಳನ್ನು ಓದಿ ಅವರು ಕೊಟ್ಟಿದ್ದ ಬಾಲ್ಸಾ ಮರದ ಪ್ರಿಂಟ್ ಶೀಟ್ ಗಳನ್ನು ಕಷ್ಟ ಪಟ್ಟು ಕತ್ತರಿಸಿದೆ.
ಆ ನೂರಾರು ಪೀಸ್ ಗಳನ್ನು ಜೋಡಿಸಲು ಸರಿಯಾದ 'ಗಮ್' ಸಿಗದೇ ಪರದಾಡಿದೆ.
ಕೊನೆಗೆ ವಾಸನೆಯ ಗಬ್ಬು ನಾತ ಹೊಡೆಯುತ್ತಿದ್ದ ವಜ್ರ ಸರಿಗೆ ಎಂಬ ' ಲೋಕಲ್ ಗ್ಲೂ ' ಬಳಸಿ ನನ್ನ ಐದು ಅಡಿ ವಿಂಗ್ ಸ್ಪ್ಯಾನ್ ಇದ್ದ ' ಮಾರ್ಟಿನ್ ಗ್ಲೈಡರ್ " ಅನ್ನು ಪರ್ಫೆಕ್ಟ್ ಆಗೇ ಫ್ಯಾಬ್ರಿಕೇಟ್ ಮಾಡಿದೆ.

ಅದನ್ನು ಹಾರಿಸಲು ಒಂದು ದೊಡ್ದ ಗುಡ್ಡ ಹತ್ತಿ ಗಾಳಿಗೆ ಇದುರು ಅದನ್ನು ನೂಕಿದೆ. ಗ್ಲೈಡರ್ ನೂರು ಗಜ ಹಾರಿತು! ನನ್ನ ಸಂತೋಷಕ್ಕೆ ಪಾರವೇ ಇಲ್ಲ.
ಆಮೇಲೆ ಗಾಳಿಯ ದಿಕ್ಕು ಬದಲಾಯಿತು! ನನ್ನ ಸಂತೋಷ ಅದೇ ಕ್ಷಣ ಕೊನೆಗೊಂಡಿತು.
ನನ್ನ ಹೆಮ್ಮೆಯ ಗ್ಲೈಡರ್ ಗೋತಾ ಹೊಡೆದು ಕ್ರ್ಯಾಷ್ ಆಯಿತು.
ಅದರ ಹೆಣ ಮಾತ್ರ ನನಗೆ ಸಿಕ್ಕಿತು!
ಅಂದು ನಾನು ತುಂಬಾ ದುಃಖ ಪಟ್ಟೆ.

ಅಂದು ನನ್ನ ಎರಡು ವರುಷದ ಪಾಕೆಟ್ ಮನಿ ಮತ್ತು ಒಂದು ತಿಂಗಳ ಸತತ ಶ್ರಮ ಕೂಡಾ ಕ್ರ್ಯಾಷ್ ಆಗಿದ್ದುವು!

ಶಿಪ್ ಮಾಡೆಲಿಂಗ್: ೧೯೬೬

ಮುಂದಕ್ಕೆ ನೇವಲ್ ವಿಂಗ್ ಎನ್ ಸಿ ಸಿ ಯಲ್ಲಿ ರೇಡಿಯೋ ಕಂಟ್ರೋಲ್ ಇರುವ ಶಿಪ್ ಮಾಡೆಲಿಂಗ್ ಕೂಡಾ ಮಾಡಿದೆ! ಅದು ಒಂದು ಫ್ರಿಗೇಟ್ ಹಡಗಿನ ಮಾದರಿ.
ಅದನ್ನು ೧೯೬೬ ಗಣರಾಜ್ಯ ಪೆರೇಡಿನ ನಂತರದ ಒಂದು ಸಮಾರಂಭದಲ್ಲಿ ಮಾನ್ಯ ಮುಖ್ಯ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಇದುರು ನಡೆಸಿ ಬಹಳ ಸಂತಸ ಮತ್ತು ಹೆಮ್ಮೆ ಅನುಭವಿಸಿದೆ!
ಆ ಮಾಡೆಲಿನ ಖರ್ಚು ಎಲ್ಲಾ ನೌಕಾದಲದ ಎನ್ ಸಿ ಸಿ ನಿರ್ವಹಿಸಿತ್ತು.
ಪೆರೇಡ್ ಮುಗಿದು ಬೆಂಗಳೂರಿಗೆ ಹೊರಟಾಗ ಅದನ್ನು ನಮ್ಮ ಎನ್ ಸಿ ಸಿ ಡೈರೆಕ್ಟೋರೇಟ್ನವರಿಗೆ ಹಿಂದಿರುಗಿಸುವಾಗ ನನಗೆ ಬಹು ದುಃಖ ಆಯಿತು.

ಆದರೆ, ಆದು ಭಾರತ ಸರಕಾರದ ಮಾಲು!
ನನ್ನದಲ್ಲ! - ಎಂತ ಸಮಧಾನ ಪಟ್ಟೆ.

ಗೋವಿಂದರೇ! ನಿಮ್ಮ ಪಿನ್ ಹೋಲ್ ಕ್ಯಾಮೆರಾ ಏನೆಲ್ಲಾ ನೆನಪು ಬೆದಕಿ ಹಾಕಿತು ನೋಡಿ.

ಪೆಜತ್ತಾಯ ಎಸ್. ಎಮ್.