Tuesday, February 02, 2010

ಮರಗಳನ್ನೇ ಕಲಾಕೃತಿಯನ್ನಾಗಿಸುವ ಆಸ್ಟ್ರೇಲಿಯದ ಪೀಟರ್

ಈ ಚಿತ್ರ ನೋಡುವಾಗ ಮೊದಲು ಹೆಚ್ಚೇನು ಅಚ್ಚರಿಯಾಗಲಿಲ್ಲ. ಹಲವು ಪಾರ್ಕುಗಳಲ್ಲಿರುವ ಇಂತಹ ಆಕೃತಿಯನ್ನು ಯಾವ ಯಂತ್ರಶಿಲ್ಪಿಯೂ ತಯಾರಿಸಬಲ್ಲ ಅನಿಸಿತು. ಆದರೆ ಇದು ತಯಾರಾದದ್ದು ಕಬ್ಬಿಣದಿಂದಲ್ಲ ಮತ್ತು ಎಚ್ಚರಿಕೆ ವಹಿಸಿ ರೂಪಿಸಿದ ಸಜೀವ ಮರ ಎನ್ನುವಾಗ ಅದ್ಬುತ ಅನಿಸಿತು.



ಆಭರಣಗಳ ಕೆಲಸ ಮಾಡುವ ಪೀಟರ್ ಅವರಿಗೆ ಈ ಅಲೋಚನೆ ಮೂಡಿ ಹಲವು ವರ್ಷಗಳ ಅನಂತರ ಬೆಕ್ಕಿ ಅವರ ಜತೆ ಜತೆಗಾರಿಕೆಯಲ್ಲಿ ಈ ಮರಗಳ ರೂಪಿಸುವುದಕ್ಕೆ ಕೈ ಹಾಕಿದರಂತೆ. ಇಂದು ಅವರ ಇಬ್ಬರು ಮಕ್ಕಳು  ಆಟವಾಡುವುದು ಕುಣಿದಾಡುವುದು  ಈ ಜೀವಂತ ಪಾರ್ಕಿನಲ್ಲಿ. ಆಸ್ಟ್ರೇಲಿಯದಲ್ಲಿರುವ ಇವರ ತೋಟದಲ್ಲಿ ಕರಾರುವಕ್ಕಾಗಿ ಬೆಳೆಸಿದ ಕೆಲವು ಮರಗಳು ಉತ್ತಮ ತರಗತಿಯ ಪೀಠೋಪಕರಣವಾದರೆ ಉಳಿದವುಗಳು ಜೀವಂತ ಕಲಾಕೃತಿಯಾಗಿ ಉಳಿಯುವುದಂತೆ.  ಇದರಲ್ಲಿ  ನಮಗೊಂದು  ಮಾದರಿ  ಇದೆಯೋ ?


ವರ್ಷಗಳ ಹಿಂದೆ ಆತ್ಮೀಯ ಗೆಳೆಯ ಅಶ್ವಿನ್ ಜೂಜುಗಾರರ ಸ್ವರ್ಗ ಮರುಭೂಮಿ  ಮಧ್ಯೆ ಇರುವ    ಲಾಸ್ ವೆಗಾಸಿಗೆ ಕರೆದೊಯ್ದಿದ್ದ. ಆಗ ಹೋಟೆಲ್ ಕಿಟಿಕಿಯಲ್ಲಿ ಹೊರ ನೋಡುವಾಗ ನನಗೆ ದೂರದಲ್ಲಿ ಒಂದು ಈಚಲಿನಂತಹ ಮರದ ಮರುನಾಟಿ ಕಂಡಿತ್ತು. ನಮ್ಮ ಅಡಿಕೆ ಕೃಷಿಗೆ ಪರ್ಯಾಯ ಉದ್ಯೋಗವಾಗಿ ಈ ರೀತಿ ವಿವಿದ ಮರಗಳ ನಾಲ್ಕಾರು ವರ್ಷ ಬೆಳೆಸಿ ಮಾರಬಹುದೋ ? ಎಂದು ಚಿಂತಿಸಿದ್ದೆ. ವಾಪಾಸಾದ ನಂತರ ಸಮಸ್ಯೆಗಳ ಕೊಚ್ಚೆಯಲ್ಲಿ ಸಿಲುಕಿದಾಗ ಈ ಆಲೋಚನೆ ಮನದಿಂದ ಜಾರಿತ್ತು.  ಮೇಲಾಗಿ   ಸುತ್ತಲಿರುವವರೆಲ್ಲರೂ  ನನ್ನ  ಹುಚ್ಚಾಟ  ವಿರೋದಿಸುವವರೇ.

ಬೆಂಗಳೂರಿನ ನರ್ಸರಿಗಳಿಗೆ ಕೆಲವು ಅಡಿಕೆ ಕೃಷಿಕರು ತೋಟದೆಡೆಯಲ್ಲಿ ಹೂವಿನ  ಗಿಡಗಳ   ತಯಾರಿಸಿ ಮಾರುವುದರ ಅಡಿಕೆ ಪತ್ರಿಕೆ ಬೊಟ್ಟು ಮಾಡಿತ್ತು. ಆಗ ಪುನಹ ಮೇಲಿನ ಅಲೋಚನೆ ಮಿಂಚಿ ಮಾಯವಾಗಿತ್ತು.  ಮರದ ಕಾಂಡದ ಸುತ್ತಳತೆ ಹೆಚ್ಚಿಸಲು ಅಕ್ಕಪಕ್ಕದಲ್ಲಿ ಒಂದೇ  ಜಾತಿಯ  ಸಸಿ ನೆಟ್ಟು ಅವುಗಳ ಮದ್ಯಬಾಗದಲ್ಲಿ ಕಸಿ ಕಟ್ಟುವುದೂ ಎಲ್ಲಿಂದಲೋ ಹೆಕ್ಕಿದ ಮಾಹಿತಿ ಅಡಿಕೆ ಪತ್ರಿಕೆ ಬಹು ಹಿಂದೆ ಪ್ರಕಟಿಸಿದೆ.   ಹಾಗೆ ಘಟ್ಟವೇರುವಾಗ ಕಾಫಿ ಗಿಡಗಳ ಉಪಯೋಗಿಸಿ ಮಾಡಿದ ಕಲಾತ್ಮಕ ಆಕೃತಿಗಳು ಮನಸೆಳೆದರೂ ಅವೆಲ್ಲ ಸತ್ತ ಗಿಡಗಳಿಗೆ ರೂಪ ಕೊಡುವ ಪ್ರಯತ್ನ.

ಈ ಚಿತ್ರಗಳ ನೋಡುವಾಗ ಮನಸ್ಸು ಚುರುಕಾಯಿತು. ಬೆಂಗಳೂರಿಗರ ಹುಲ್ಲುಹಾಸಿನ ಮದ್ಯೆ ನೆಡಲು ಐದು ವರ್ಷದ ಜೀವಂತ ಕುರ್ಚಿ............. ಇದರಲ್ಲಿ ಕತ್ತರಿಸುವುದು, ಬಗ್ಗಿಸುವುದು ಮತ್ತು ಕಸಿ ಕಟ್ಟುವ ಕೆಲಸ ತುಂಬಾ ಉಂಟು. ಲಾಭಕಲ್ಲವಾದರೂ ಹವ್ಯಾಸಕ್ಕೆ ಖಂಡಿತ ಮಾಡಬಹುದಾದ ಕೆಲಸ. ಕಿಸೆ ತುಂಬಿದರೆ ಬೋನಸ್ ಅಂದುಕೊಳ್ಳಬೇಕು. ಬೆಳೆಸುವುದರಲ್ಲಿ ಕುಶಿ ಖಂಡಿತಾ ಸಿಕ್ಕಿತು.  ಇಂತಹ ಕಲಾಕೃತಿ ರಚಿಸುವ ಇತರರ ಬಗೆಗೆ ವಿಕಿಪೇಡಿಯದಲ್ಲಿ ವಿವರಗಳಿವೆ

1 comment:

Anonymous said...

ಪ್ರಿಯ ಗೋವಿಂದಾ
ಪಲ್ಲಕ್ಕಿಗಳಿಗಾಗಿ ಬೇಕಾದ ಬಾಗನ್ನು ಬಿದಿರು ಬೆಳೆಯುವಾಗಲೇ ಮಾಡುವ ಕುರಿತು ಕೇಳಿದ್ದೆ. ಬೊನ್ಸಾಯ್ ಹವ್ಯಾಸಿಗಳು ಕೇವಲ ಬೇರು ಚಿವುಟಿದ ಗಿಡಗಳನ್ನು ಬೋಗುಣಿಯಲ್ಲಿಟ್ಟು ಕೂರುವುದಿಲ್ಲಾ ಎಂದೂ ನಿನಗೆ ಗೊತ್ತೇ ಇದೆ(ಕಾಂಡ, ಕೊಂಬೆಗಳು ಮನುಷ್ಯ ಕಣ್ಣಿನ ಭ್ರಮೆಗಳಿಗೆ ಚಂದ ಕಾಣಲು ದಪ್ಪ ದಪ್ಪದ ತಂತಿಗಳ ಒತ್ತಡದಲ್ಲೇ ರೂಪು ತಳೆಯುತ್ತವೆ). ಗಿಡ ಮರಳೇನು ಪುಟ್ಟ ಪಾದ, ಜೋಲು ತುಟಿ, ನೀಳ ಕತ್ತು ಮುಂತಾದ ಅನೈಜತೆಯನ್ನು ತಮ್ಮ ಸಂಸ್ಕೃತಿ ಎಂದೇ ಭ್ರಮಿಸಿ ಹಿಂಸೆ ಪಟ್ಟುಕೊಳ್ಳುವುದೂ ತಿಳಿದೇ ಇದೆ. ಬಹುಶಃ ಇಂಥವನ್ನೆಲ್ಲ ಒಟ್ಟು ಗ್ರಹಿಸಿಯೇ ಹಿರಿಯ ಕೃಷಿಕ, ಚಿಂತಕ ಕಿನ್ಯ ವಿಟ್ಟಲರಾಯರಂಥವರು ಬೊನ್ಸಾಯನ್ನು ‘ಅಮಾನುಷ’ ಕ್ರಿಯೆ ಎಂದೇ ತಿರಸ್ಕರಿಸುತ್ತಾರೆ. ಏನೇ ಇರಲಿ, ನನ್ನ ವೈಚಾರಿಕ ದಿಗಂತ ವಿಸ್ತರಿಸಲು ಅನುವು ಮಾಡಿಕೊಟ್ಟ ಬರಹಕ್ಕೆ ಕೃತಜ್ಞ.
ಅಶೋಕವರ್ಧನ