Wednesday, January 27, 2010

ಕಲೆ ಅರಳುವ ಜಪಾನಿನ ಬತ್ತದಗದ್ದೆ



ಜಪಾನಿನ ಬತ್ತದ ಹೊಲಗಳಲ್ಲಿ ಕಲಾತ್ಮಕ ಚಿತ್ತಾರಗಳು ಕಾಣಿಸಿಕೊಳ್ಳಲು ಪ್ರಾರಂಬವಾಗಿದೆ. ಇವುಗಳು ಯಾವುದೇ ಇತರ ಗ್ರಹದ ಜೀವಿಗಳು ರಾತ್ರೋ ರಾತ್ರಿ ಸೃಷ್ಟಿಸಿದ ಕೈಚಳಕವಲ್ಲ ರೈತರು ಕಂಪ್ಯುಟರ್ ಮೂಲಕ ವಿನ್ಯಾಸಗೊಳಿಸಿದ ಹಾಗೂ ಕರಾರುವಕ್ಕಾದ ಜಾಗದಲ್ಲಿ ನಿಖರವಾಗಿ ನೇಜಿ ನೆಡುವುದರಿಂದಾದ  ಉಂಟಾಗುವ   ಚಿತ್ತಾರ.



ಟೋಕಿಯೊ ಪಟ್ಟಣದಿಂದ ಸಾವಿರ ಕಿಲೋಮಿಟರ್ ಉತ್ತರದಲ್ಲಿರುವ ಇನಕದಾತೆ ಗ್ರಾಮವು ೧೯೯೩ರಲ್ಲಿ ಈ ಸಂಪ್ರದಾಯಕ್ಕೆ ಬುನಾದಿ ಹಾಕಿತು. ಇದು ಅಂದು ಗ್ರಾಮ ಪಂಚಾಯತಿ ಸದಸ್ಯರ ಸಭೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸಲು ಹೊರ ಹೊಮ್ಮಿದ ಆಲೋಚನೆ. ಮೊದಲ ಒಂಬತ್ತು ವರ್ಷಗಳಲ್ಲಿ ಪಂಚಾಯತಿ ಕೆಲಸಗಾರರೂ ರೈತರು ಸರಳ ಇವಾಕಿ ಪರ್ವತದ ಚಿತ್ರಣದಲ್ಲಿ ತೃಪ್ತರಾಗಿದ್ದರು. ಕ್ರಮೇಣ ಅವರ ಆಲೋಚನೆಗಳು ವಿಸ್ತರಿಸಲು ಪ್ರಾರಂಬವಾಗಿ ದೊಡ್ಡ ಚಿತ್ರಗಳಿಗೂ ಕೈ ಹಾಕಲು ಪ್ರಾರಂಬಿಸಿದರು.



೨೦೦೫ರಲ್ಲಿ ಅಕ್ಕ ಪಕ್ಕದ ರೈತರು ಕೈ ಜೋಡಿಸಿ ಬೃಹತ್ ಆಕೃತಿಗಳ ರೂಪಿಸಲು ಪ್ರಾರಂಬಿಸಿದರು. ಪ್ರವಾಸಿಗಳಿಂದ ಊರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಈ ಕೃತಿಗಳ ಹಿಂದಿನ ನೂಕು ಶಕ್ತಿ. ಮೆ ತಿಂಗಳಲ್ಲಿ ನಾಟಿ ಮಾಡಿದ ಬೆಳೆಯು ಸೆಪ್ಟಂಬರ್ ತಿಂಗಳಿಗಾಗುವಾಗ ಬೆಳೆದು ನಿಂತು ಆ ಆಕರ್ಷಕ ಚಿತ್ರವನ್ನು ತೋರ್ಪಡಿಸುತ್ತದೆ. ಮೊದಲು ರೈತರು ಕಂಪ್ಯೂಟರಿನಲ್ಲಿ ವಿನ್ಯಾಸ ಮಾಡಿ ಯಾವ ರೀತಿಯಲ್ಲಿ ನೆಡುವುದೆಂದು ತೀರ್ಮಾನಿಸುತ್ತಾರೆ. ನೂರಾರು ಸ್ವಯಂಸೇವಕರು ನಾಲ್ಕು ಬಣ್ಣದ ನೇಜಿ ನೆಡುವುದರಲ್ಲಿ  ಕೈ  ಜೋಡಿಸುತ್ತಾರೆ. ಇದರಿಂದಾಗುವ  ಪ್ರಯೋಜನ  ಗುರುತಿಸಿ  ಈಗ  ಹಲವು  ಹಳ್ಳಿಗಳು  ಈ  ಮೇಲ್ಪಂಕ್ತಿ  ಅನುಸರಿಸುತ್ತಿವೆಯಂತೆ.  



ಸಾವಿರಾರು ನಾಟಿ ತಳಿಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ವಿಬಿನ್ನತೆ ಅನಿವಾರ್ಯ ಎನ್ನುವುದೂ ಇದರಿಂದ ನಾವು ಕಲಿಯುವ ಸಂದೇಶ.  ಮೇಲಿನ ಚಿತ್ರದಲ್ಲಿರುವ   ಬೇರೆ ಬೇರೆ ಬಣ್ಣದ   ನಾಲ್ಕು ತಳಿಯ ಬತ್ತದ ಸಸಿಗಳು ಉಪಯೋಗವಾಗುವುದಂತೆ. ಹದಿನೈದು ಸಾವಿರ ಚದರಡಿ ಮೀರುವ ಈ ಚಿತ್ರಗಳು ನೆಲದಲ್ಲಿ ನಿಂತರೆ ಹೆಚ್ಚೇನು ಗುರುತಿಸಲಾಗದ ಕಾರಣ, ಇದರ ಪೂರ್ತಿ ಸ್ವರೂಪ ಅರ್ಥೈಸಲು ಅಲ್ಲೊಂದು ನಿರ್ಮಿಸಲಾದ ಅಟ್ಟಳಿಗೆ ಏರಬೇಕಂತೆ. ವಿಮಾನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಣ್ಣಿಗೆ ಹಬ್ಬ.

1 comment:

Chamaraj Savadi said...

ಸೊಗಸಾದ ಲೇಖನ. ರೈತರ ಕ್ರಿಯಾಶೀಲತೆಗೆ ನಿದರ್ಶನ.