ನಮ್ಮಲ್ಲಿ ಮೊದಲು ಹುಚ್ಚು ನಾಯಿ ಕಡಿತ ಬಹಳ ಅಪಾಯಕಾರಿಯಾಗಿತ್ತು. ಅಂದು ಎರಡು ರೀತಿಯ ಚಿಕಿತ್ಸಾ ಕ್ರಮ ಚಲಾವಣೆಯಲ್ಲಿತ್ತು. ಮೊದಲನೆಯದು ಊರ ಸರಕಾರಿ ಆಸ್ಪತ್ರೆಯಿಂದ ಟೆಲಿಗ್ರಾಮ್ ಕಳುಹಿಸಿ ಕೂನೂರಿಂದ ತರಿಸಿದ ಹೊಕ್ಕುಳು ಸುತ್ತು ಕೊಡುವ ವಿಪರೀತ ನೋವು ಉಂಟು ಮಾಡುವ ಹದಿನಾಲ್ಕು ಚುಚ್ಚುಮದ್ದುಗಳು. ಅದಕ್ಕೆ ಹಲವು ಅಡ್ಡ ಪರಿಣಾಮಗಳಿದ್ದವು ಮತ್ತು ಚೇತರಿಸಿಕೊಳ್ಳುವ ಬಗ್ಗೆ ಸಂಪೂರ್ಣ ನಂಬಲರ್ಹವಾಗಿರಲಿಲ್ಲ. ಎರಡನೆಯದು ಯಾವುದೇ ದಾಖಲಾತಿಗೂ ಒಳಪಡದ ನಾಟಿ ಪದ್ದತಿಯಿಂದ ಹುಚ್ಚು ಹಿಡಿಸಿ ಗುಣಪಡಿಸುವುದು.
ಈಗ ಸಂಪೂರ್ಣ ಕಾಣೆಯಾಗಿರುವ ಈ ಚಿಕಿತ್ಸೆಯಲ್ಲಿ ಕಡಿತಕ್ಕೊಳಗಾದವನಿಗೆ ನಿರ್ದಿಷ್ಟ ಬೀಜ / ತೊಗಟೆ ತಿನ್ನಿಸಿ ಹುಚ್ಚು ಹಿಡಿಸುವುದು. ಎರಡು ಜನ ದಾಂಡಿಗರು ರೋಗಿಯ ಹಿಡಿದುಕೊಳ್ಳಲು ಮತ್ತು ಹತ್ತಾರು ಕೊಡಪಾನ ನೀರು ಹೊಯ್ಯಲು ತಯಾರಿರಬೇಕಾಗುತ್ತದೆ. ಔಷದ ತಿನ್ನಿಸಿದ ಪರಿಣಾಮ ನಾಯಿ ಕಡಿತಕ್ಕೊಳಗಾದವ ಹುಚ್ಚುಹುಚ್ಚಾಗಿ ವರ್ತಿಸಲು ಆರಂಬಿಸುತ್ತಾನೆ. ಪೂರಾ ಹುಚ್ಚ ಎನಿಸಿಕೊಂಡ ನಂತರ ನೀರು ಹೊಯ್ಯಲು ಪ್ರಾರಂಬವಾಗಿ ಸಾಕು, ಚಳಿಯಾಗುತ್ತದೆ ಎಂದು ಗೋಗೆರೆಯುವ ವರೆಗೂ ಮುಂದುವರಿಯುತ್ತದೆ. ನಾನು ಚಿಕ್ಕವನಾಗಿದ್ದಾಗ ಕೇಳಿದ ಇದು ಹುಚ್ಚು ನಾಯಿ ಕಡಿಸಿಕೊಂಡವನಿಗೆ ಹುಚ್ಚು ಹಿಡಿಸುವ ತೀರಾ ಮೂಡನಂಬಿಕೆ ಚಿಕಿತ್ಸೆ ಅವೈಜ್ನಾನಿಕ ಎನ್ನುವ ಬಾವನೆ ನನಗಿತ್ತು.
ಔಷದಿಯ ಶಾಸ್ತ್ರದ ಇತಿಹಾಸ ನೋಡುವಾಗ ಹೆಚ್ಚಿನ ರೇಬಿಸ್ ಸಾವುಗಳು ತಾತ್ಕಾಲಿಕವಾಗಿ ಮೆದುಳು ನಿರ್ವಹಿಸಲು ವಿಫಲವಾಗಿ ಉಸಿರಾಟ ಸಮಸ್ಯೆ ಉಂಟಾಗಿ ಹೊರತು ಮೆದುಳಿಗೆ ಯಾವುದೇ ಶಾಶ್ವತ ಬದಲಾವಣೆಯೂ ಸಮಸ್ಯೆಯೂ ಆಗಿರುವುದಿಲ್ಲ. ಅಮೇರಿಕದಲ್ಲಿ ಐದು ವರ್ಷ ಹಿಂದೆ ಒಂದು ಬಾವಲಿ ಕಚ್ಚಿದ ಹುಡುಗಿಯ ಚಿಕಿತ್ಸೆಗೆ ಈ ಜಾಡಿನಲ್ಲಿ ಸಾಗಿದ ವೈದ್ಯರು ಈ ಅಘಾತದಿಂದ ಮೆದುಳು ವಿಫಲವಾಗುವುದರ ತಪ್ಪಿಸಲು ಅವಳನ್ನು ಕೊಮ ಸ್ಥಿತಿಯಲ್ಲಿರಿಸಿದರು. ಅಂತೂ ಆ ಹುಡುಗಿ ಬದುಕಿದಳು ಮತ್ತು ಇದು ರೇಬಿಸ್ ರೋಗ ಉಲ್ಬಣಗೊಂಡರೂ ಬದುಕಿ ಉಳಿದ ಪ್ರಥಮ ದಾಖಲೆ. ಒಂದು ರೀತಿಯಲ್ಲಿ ಇದು ನಮ್ಮ ಹುಚ್ಚು ಹಿಡಿಸುವ ಪ್ರಯತ್ನವನ್ನು ಹೋಲುತ್ತದಲ್ಲವೇ ?
ಇದನ್ನು ನೋಡುವಾಗ ಆ ಆಘಾತ ತಡಕೊಳ್ಳುವ ಶಕ್ತಿಯನ್ನು ಈ ಹುಚ್ಚು ಹಿಡಿಸುವ ಪ್ರಯೋಗ ನೀಡುವುದೋ ಎನ್ನುವ ಸಂಶಯ ಬರುತ್ತದೆ. ರೋಗ ಉಲ್ಬಣಗೊಳ್ಳುವುದೂ ಚಿಕಿತ್ಸಾ ಸಮಯವೂ ತುಂಬ ಹಿಂದು ಮುಂದಾದರೆ ಇದು ವಿಫಲವಾಗುವ ಸಾದ್ಯತೆ ಹೆಚ್ಚು. ಆದರೆ ಈ ಜಾಡಿನಲ್ಲಿ ಸಾಗಿದರೆ ಖಂಡಿತ ಚಿಕಿತ್ಸಾ ವಿಧಾನ ರೂಪಿಸಬಹುದು ಅನಿಸುತ್ತದೆ.
ಪ್ರಯತ್ನಿಸುವುದಾದರೆ ನಮ್ಮ ಕೇಂದ್ರ ಆಸ್ಪತ್ರೆಗಳಲ್ಲಿ ಈ ಪ್ರಯೋಗಕ್ಕೆ ಬಲಿಪಶು ಆಗಲು ಸಾಯಲು ಸಿದ್ದವಾದ ರೇಬಿಸ್ ರೋಗಿಗಳು ಸಿಗುತ್ತಲೇ ಇರುತ್ತಾರೆ. ಇಂದು ನಮ್ಮ ಹಲವು ಆಸ್ಪತ್ರೆಗಳು ಪರದೇಶಿ ಕಂಪೇನಿಗಳ ವಿವಿದ ಔಷದಿಗಳ ದೃಡಿಕರಣಕ್ಕಾಗಿ ಚಿಕಿತ್ಸೆ ಒಪ್ಪಂದ ಮಾಡಿಕೊಂಡಿವೆ. ಆ ಕಂಪೇನಿಗಳಿಗೆ ನಮ್ಮವರು ಅಗ್ಗದ ಬಲಿಪಶುಗಳು. ಹಾಗೆಯೇ ಈ ಹುಚ್ಚು ನಾಯಿ ರೋಗದ ಪ್ರಯೋಗಗಳಿಗೆ ಪರದೇಶಿ ಹಣ ಹರಿದು ಬಂದಿತೋ ನಮ್ಮ ವೈದ್ಯರು ಪ್ರಶ್ನಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಲಾಭವಿಲ್ಲದ ಪ್ರಯೋಗಗಳಿಗೆ ಔಷದಿ ಕಂಪೇನಿಗಳ ನೆರವು ಇಲ್ಲ ಮಾತ್ರವಲ್ಲದೆ ಸಾದ್ಯವಾದರೆ ಅಡ್ಡಗಾಲನ್ನೂ ಖಂಡಿತಾ ಹಾಕುತ್ತಾರೆ.
ಅಮೇರಿಕದಲ್ಲಿ ಯಶಸ್ವಿಯಾದ ಸಾಕು ನಾಯಿಗಳಿಗೆ ಚುಚ್ಚು ಮದ್ದು ನಮ್ಮಲ್ಲಿ ಗೆಲ್ಲುವುದು ಕಷ್ಟ. ಎರಡು ವರ್ಷ ಹಿಂದೆ ನಮ್ಮ ಗ್ರಾಮದಲ್ಲಿ ದರ್ಮಾರ್ಥ ಚುಚ್ಚುಮದ್ದು ಕೊಡುವ ಕಾರ್ಯಕ್ರಮದಲ್ಲೂ ಕೆಲವರು ನಾಯಿಯನ್ನು ಕೊಂಡುಹೋಗಲೇ ಇಲ್ಲ. ಒಬ್ಬರು ಅಲ್ಲಿ ಹಣ ಕೊಡಬೇಕಂತೆ ಎಂದು ವದಂತಿ ಹಬ್ಬಿಸಿದರು. ಮರುವರ್ಷ ಅವರ ನಾಯಿ ರೇಬಿಸ್ ಸೀಕು ಹಿಡಿದು ಕಟ್ಟಿ ಹಾಕಲು ಹೋದ ಅವರ ಮಗಳನ್ನೇ ಕಚ್ಚಿತು. ಆದರೆ ಇದರಿಂದ ಪಾಠ ಕಲಿಯುವರೇ ? ಪ್ರಪಂಚದಲ್ಲಿಯೇ ಅತಿ ಹೆಚ್ಚು ಹುಚ್ಚು ನಾಯಿ ಕಡಿತ ಹಾಗೂ ಸಾವಿನ ಹೆಗ್ಗಳಿಕೆ ನಮ್ಮ ದೇಶದ್ದು. ಅದುದರಿಂದ ಇದಕ್ಕೆ ಪರಿಹಾರವೂ ನಾವೇ ಹುಡುಕಬೇಕು.
ಸಾವು ಶೇಕಡಾ ೧೦೦ ಖಚಿತವಾದ ರೇಬಿಸ್ ರೋಗದಿಂದ ಚೇತರಿಸಿಕೊಳ್ಳುವ ಅವಕಾಶ ಮೊದಲು ಸೊನ್ನೆಯಿಂದ ಎಂಟಕ್ಕೇರಿದೆಯಂತೆ. ನಂತರದ ಲಕ್ಷಣಗಳು ಇನೂ ಹೆಚ್ಚು ಆಶಾದಾಯಕವಾಗಿವೆ ಅಂದರೆ ಅನಂತರ ಚಿಕಿತ್ಸೆಗೆ ಒಳಪಟ್ಟ ಹತ್ತರಲ್ಲಿ ಎರಡು ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಶೇಕಡಾ ಇಪ್ಪತ್ತು ಅನ್ನಬಹುದು. ಹಾಗೆ ಮೂವತ್ತು ವರ್ಷ ಹಿಂದೆ ಇದೇ ಸ್ಥಾನದಲ್ಲಿದ್ದ ಮಕ್ಕಳ ರಕ್ತ ಕಾನ್ಸರಿನ ರೋಗಿಗಳಲ್ಲಿ ಶೇಕಡಾ ಎಂಬತ್ತು ಇಂದು ಗುಣಮುಖರಾಗುತ್ತಿದ್ದಾರಂತೆ. ಕ್ರಮೇಣ ಸೂಕ್ತ ಚಿಕಿತ್ಸಾ ಕ್ರಮ ಹುಚ್ಚು ನಾಯಿ ಕಡಿತಕ್ಕೂ ಬಂದರೂ ಸ್ವಾಬಾವಿಕ ಅನಿಸುತ್ತದೆ. ಮೆದುಳನ್ನು ರಕ್ಷಿಸುವ ವೈದ್ಯ ವಿಜ್ನಾನಿಗಳು ವೈಜ್ನಾನಿಕವಾಗಿ ಕಂಡ ಗುಟ್ಟು ನಮ್ಮ ಪಾರಂಪರಿಕ ಜ್ನಾನದಲ್ಲಿ ಅಡಗಿದೆಯೋ ಎನ್ನುವ ಗೊಂದಲ ಮೂಡಿದೆ.
ಮೇಲೆ ಸೂಚಿಸಿದ ಎರಡನೆಯ ಮಾಹಿತಿ ಮೂಲಕ್ಕೆ http://en.wikipedia.org/wiki/Milwaukee_protocol ದಾರಿಯಾಗಿ http://www.medscape.com/viewarticle/712839_7 ಗೆ ಸಾಗಬೇಕು.
Monday, January 25, 2010
Subscribe to:
Post Comments (Atom)
1 comment:
ಪ್ರಿಯ ಗೋ
ನಾಟೀ ವೈದ್ಯ ಮತ್ತು ಮೂಢನಂಬಿಕೆಗಳ ನಡುವಣ ತೆಳು ಗಡಿರೇಖೆಯನ್ನು ‘ವೈಚಾರಿಕ ಉನ್ನತಿಯಲ್ಲಿ’ ನಾವೆಷ್ಟೋ ಬಾರಿ ಗಮನಿಸದೇ ಹೋಗುತ್ತೇವೆ. ಅದಕ್ಕೇ ‘ಕೆಲವಂ ಬಲ್ಲವರಿಂದ ಕಲ್ತು’ ಎಂಬ ಮಾತು ರೂಢಿಯಲ್ಲಿದೆ. ಗೆಳೆಯ, ಪಶುವೈದ್ಯ ಮನೋಹರ ಉಪಾಧ್ಯರು (ಆಧುನಿಕ ಪಶುವೈದ್ಯ ಶಾಸ್ತ್ರವನ್ನು ಅಧ್ಯಯನ ಮಾಡಿ, ಅತ್ಯಂತ ಯಶಸ್ವಿಯಾಗಿ ವೃತ್ತಿಯನ್ನಾಗಿಸಿಕೊಂಡಿದ್ದರೂ) ನಾಟೀ ವೈದ್ಯವೆಂದಲ್ಲ ಎಲ್ಲಾ ಜ್ಞಾನಶಾಖೆಗಳಿಗೂ ತೆರೆದುಕೊಂದಿದ್ದಾರೆ. ಜಾನುವಾರುಗಳ ಕೀಲು ತಪ್ಪುವ ಜಾಡ್ಯಕ್ಕೆ ಇವರು (ಎಲ್ಲಿಂದಲೋ ಹೆಕ್ಕಿಕೊಂಡು ಯಶಸ್ವಿಯಾಗಿ ಪ್ರಯೋಗಕ್ಕೆ ತಂದಿರುವ) ಅದರದೇ ದವಡೆಗೆ ತೆಂಗಿನ ಕಡ್ಡಿ ನುಗ್ಗಿಸುವ ಚಿಕಿತ್ಸೆ ಇಂಥದ್ದೇ ಒಂದು. ಹೆಚ್ಚಿನ ವಿಚಾರಗಳಿಗೆ ನಾನು ಗೆಳೆಯ ಉಪಾಧ್ಯರಿಗೇ ಈ ಬ್ಲಾಗಿನ ಸಂಪರ್ಕ ಸೇತುವನ್ನು ಕೊಡುತ್ತಿದ್ದೇನೆ. ಅವರ ಅನುಭವದಡುಗೆಗೆ ಬಟ್ಟಲಿಟ್ಟು ಕಾದಿದ್ದೇನೆ.
Post a Comment