Monday, January 18, 2010

ಮಾದರಿ ಆಗ ಬಹುದಾದ ಅಮೇರಿಕದ ಯೂರಿಯ ಕಡಿಮೆ ಬಳಸಿ ಚಳುವಳಿ

ಸಾರಜನಕ ಆಹಾರ ಬೆಳೆಯುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಾದ ಪಾಲು ತೊಳೆದು ಹೋಗಿ ನದಿ ಸರೋವರ ಸೇರಿ ಪಾಚಿ ಬೆಳೆಯಲು ಪ್ರೇರಣೆಯಾಗುತ್ತದೆ. ಅಲ್ಲಿ ಆಮ್ಲಜನಕದ ಜಾಗವನ್ನು ಸಾರಜನಕ ಆತಿಕ್ರಮಿಸಿ ಪಾಚಿ ಬೆಳೆಯಲು ಅನುಕೂಲ ಮಾಡಿ ಉಳಿದ ಸಾಗರ ಜೀವಿಗಳ ನಿರ್ನಾಮ ಮಾಡಿದೆ. ಪ್ರಪಂಚದಲ್ಲಿ ನಾಲ್ಕು ನೂರು ಕಡೆ ಸುಮಾರು ಎರಡೂವರೆ ಲಕ್ಷ ಚದರ ಕಿಲೋಮಿಟರ್ ಇಂತಹ ನಿರ್ಜೀವ ಪ್ರದೇಶ ಗುರುತಿಸಲ್ಪಟ್ಟಿದೆ. ಪರಿಸರದಲ್ಲಿ co2 ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ. ನಂತರದ ಸ್ಥಾನ Nox ಗೆ. ಸಾರಜನಕ ಪರಿಸರಕ್ಕೆ ಮಾರಕವಾಗುತ್ತಿದೆ ಎನ್ನುವುದು ಪರಿಸರ ಜಾಗೃತಿ ಹೊಂದಿದವರಿಗೆ ಹಳೆಯ ವಿಚಾರ.

ಸಾರಜನಕ ವಾತಾವರಣದಲ್ಲಿ ಉಳಿದುಕೊಳ್ಳುವುದಿಲ್ಲ. ಅಮೋನಿಯಾ ರೂಪದಲ್ಲಿ ಮಳೆಯ ಜತೆ ಭೂಮಿಗೆ ಬೀಳುತ್ತದೆ. ತಜ್ನರು ವಾತಾವರಣದಲ್ಲಿ ಹೆಚ್ಚಿರುವ ಅಮೋನಿಯಾ ಪ್ರಮಾಣವನ್ನು ಗುರುತಿಸುತಿದ್ದಾರೆ. ವಾಹನದ ಹೊಗೆ, ವಿದ್ಯುತ್ ಕೇಂದ್ರದ ಹೊಗೆ ನಳಿಗೆ ಗಣನೀಯವಾಗಿ ವಾತಾವರಣದ ಸಾರಜನಕವನ್ನು ಮಲೀನಗೊಳಿಸುತ್ತದೆ. ಅಮೇರಿಕದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗುವ ಸಾರಜನಕ ಮಲೀನತೆ ತಡೆಗಟ್ಟಲು ಹೆಜ್ಜೆ ಇಡುವ ಲಕ್ಷಣಗಳಿವೆ. ಇದು ಸಾಕಷ್ಟು ಪರಿಣಾಮಕಾರಿಯಾಗಬಹುದು.

ಬದಲಾದ ಸನ್ನಿವೇಶದಲ್ಲಿ ಸಾರಜನಕ ಪ್ರೀತಿಸುವ ಸಸ್ಯಗಳು ಬಲಶಾಲಿಗಳಾಗಿ ಸಮತೋಲನ ವ್ಯತ್ಯಾಸಪಡಿಸುತ್ತದೆ. ಅಲ್ಲಿರುವ ಮೂಲ ಸಸ್ಯಗಳು ಹೊರದೂಡಲ್ಪಟ್ಟು ಸಸ್ಯ ವೈವಿದ್ಯ ಸ್ವರೂಪ ಬದಲಾಗುತ್ತದೆ. ಹಲವು ಕಡೆಗಳಲ್ಲಿ ಹೊಸತಾಗಿ ಬೆಳೆಯಲು ಪ್ರಾರಂಬಿಸಿದ ಹುಲ್ಲು ಕಾಡ್ಕಿಚ್ಚಿಗೆ ಕಾರಣವಾಗಿದೆಯಂತೆ

ಸಾರಜನಕ ಉಪಯೋಗದ ಕ್ಷಮತೆ ಹೆಚ್ಚಿಸಲು ಅಮೇರಿಕದಲ್ಲಿ ರೈತರು ಸಂಘಟಿತರಾಗುವುದು ಸಂತಸದ ವಿಚಾರ. ಎಷ್ಟು ಸಾರಜನಿಕ ಉಪಯೋಗಿಸಲೇ ಬೇಕೆಂದು ನಿಖರವಾಗಿ ಗುರುತಿಸಿ ಅಷ್ಟನ್ನೇ ಉಪಯೋಗಿಸುತ್ತಾರೆ. ದೇಶದಲ್ಲಿಯೇ ಸಾರಜನಕ ಉಪಯೋಗವನ್ನು ಶೇಕಡಾ ಇಪ್ಪತ್ತೈದರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಇಂತಹ ಗೊಬ್ಬರ ಉಪಯೋಗ ಕಡಿತಗೊಳಿಸುವ ನೂರಾರು ರೈತರಲ್ಲಿ ನಾನೂ ಒಬ್ಬ ಎನ್ನುವ ಲಿಂಡ್ಸೆ ಪರಿಸರ ಸ್ವಚ್ಚವಾಗಿರಬೇಕು. ನಾವೂ ಇಲ್ಲಿ ನೀರು ಕುಡಿಯುತ್ತೇವೆ ಎನ್ನುತ್ತಾರೆ. ಹತ್ತು ವರ್ಷ ಹಿಂದೆ ೪೦ ಐಯೊವಾ ರಾಜ್ಯದ ಸೋಯಾ ಬೆಳೆಸುವ ರೈತರು ಪಾಲ್ಗೊಳ್ಳುತ್ತಿದ್ದ ಈ ಚಳುವಳಿಗೆ ಈಗ ಐನೂರು ರೈತರು ಬೆಂಬಲಿಸುತ್ತಿದ್ದಾರೆ.  



ಅಮೇರಿಕದವರು ಹೇಳುತ್ತಿರುವ ಮಾದರಿ ನಮಗೆ ಅನುಕರಣೀಯವಾಗಿದೆ. ಯೂರಿಯಾ ಬಳಕೆ ಮಟ್ಟವನ್ನು ಅನಿವಾರ್ಯ ಮಿತಿಗೆ ಇಳಿಸಿ ಉಳಿದ ಪೋಷಕಾಂಶಗಳ ಬಗೆಗೆ ಗಮನಿಸುವುದು ಉತ್ತಮ. ಎಲ್ಲೆಡೆಯಂತೆ ನಮ್ಮಲ್ಲೂ ಈ ಕೃತಕ ಗೊಬ್ಬರದ ಅವಲಂಬನೆಯಿಂದಾಗಿ ಮಣ್ಣಿನ ಸ್ವರೂಪವೇ ಬದಲಾಗಿದೆ. ಭೂಮಿತಾಯಿ ಎಂದು ಬಾಯಿಮಾತಿನಲ್ಲಿ ಹೇಳುವ ನಾವು ಮಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಜೀವಿಗಳನ್ನೆಲ್ಲ ಕೊಲ್ಲುತ್ತಿದ್ದೇವೆ. ಒಂದು ಕಿಲೊ ಗೊಬ್ಬರದ ಉಪಯೋಗ ಇಪ್ಪತ್ತೈದು ಕಿಲೊ ಆಹಾರ ದಾನ್ಯ ಉತ್ಪತ್ತಿಯಾಗುತಿತ್ತು. ಈಗ ಎಂಟಕ್ಕೆ ಇಳಿದಿದೆ.

ಸಮತೋಲನ ಗೊಬ್ಬರ ಉಪಯೋಗ ನಮ್ಮಲ್ಲಿ ಅನುಸರಿಸಲಾಗುತ್ತಿಲ್ಲ. ಸರಕಾರದಿಂದ ಹೆಚ್ಚು ದರ ಬೆಂಬಲ ಯೂರಿಯಾಕ್ಕೆ. ಪರಿಣಾಮ ಹೆಚ್ಚು ಯೂರಿಯಾ ಉಪಯೋಗ. ಈ ಸರಕಾರಿ ಬೆಂಬಲ ೧೯೭೬- ೭೭ ರಲ್ಲಿ ಅರುವತ್ತು ಕೋಟಿ ರೂಪಾಯಿ ತೇರಿಗೆ ಹಣ ಉಪಯೋಗಿಸಿದ್ದರೆ ಮೂವತ್ತು ವರ್ಷಗಳ  ಅನಂತರ    ಕಳೆದ ವರ್ಷ ೨೦೦೮ -೦೯ ರಲ್ಲಿ ಅದು ತೊಂಬತ್ತಾರು ಸಾವಿರ ಕೋಟಿ ರೂಪಾಯಿ ಮುಟ್ಟಿದೆ. ಇದರಿಂದಾಗಿ ಯುರಿಯಾ ಅತ್ಯಂತ ಅಗ್ಗವಾಗಿ ಉಳಿದ ಗೊಬ್ಬರಗಳ ಉಪಯೋಗ ಕಡಿಮೆಯಾಗಿದೆ. 4:2:1 ಪ್ರಮಾಣದಲ್ಲಿ ವಿವಿದ ಪೋಷಕಾಂಶಗಳ   ಮಿಶ್ರಣ ನಮ್ಮಲ್ಲಿ ಉತ್ತಮ ಎಂದು ತಜ್ನರು ತೀರ್ಮಾನಿಸಿದ್ದರೆ ಇಂದು ಪಂಜಾಬಿನಲ್ಲಿ 35:9:1 ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

ಹಿಂದೆ ಈ ನಮ್ಮ ದೇಶವನ್ನು ರಾಜೀವನೆಂಬ ಮಹಾರಾಜ ಆಳುತ್ತಿದ್ದ. ಅವನು ಆಗ ಯುರಿಯಾ ಉತ್ಪಾದನೆ ಹೆಚ್ಚಿಸಲು ಉತ್ತೇಜನವಿತ್ತಿದ್ದ. ಉದ್ಯಮಿಗಳಿಗೆ ಕನಿಷ್ಟ ಲಾಬದ ಬೆಂಬಲ ಸರಕಾರವೇ ಕೊಡುವ ಕಾರಣ ಸಾಕಷ್ಟು ಯೂರಿಯಾ ಕಾರ್ಖಾನೆಗಳು ಸ್ಥಾಪನೆಗೊಂಡವು. ಆಗ ಎಲ್ಲವೂ ಸೋನಿಯಳ ಗೆಳೆಯ ಕ್ವಾಟ್ರೋಚಿ ಅಣತಿಯಂತೆ ನಡೆಯುತಿತ್ತು. ೧೯೬೭ರಲ್ಲಿ ಮದ್ರಾಸ್ ತೈಲಾಗಾರ ಗುತ್ತಿಗೆಯ ಕೆಲಸದಲ್ಲಿ ಬಾರತಕ್ಕೆ ಬಂದ ಕ್ವಾಟ್ರೋಚಿ ರಾಜೀವನ ಆಡಳಿತದ ಕಾಲದಲ್ಲಿ ಅತ್ಯಂತ ಪ್ರಬಾವಶಾಲಿಯಾಗಿದ್ದ. ೧೫೦೦೦ ಕೋಟಿ ರೂಪಾಯಿಯ ಯುರಿಯಾ ಕಾರ್ಖಾನೆಗಳ ಗುತ್ತಿಗೆ ಇವನ ಪಾಲಾಗಿತ್ತು. ರಾಜೀವನಿಗೆ ಉರುಳಾದ ಬೋಪೋರ್ಸ್ ಫಿರಂಗಿಯ ೬೪ ಕೋಟಿ ರೂಪಾಯಿ ಲಂಚದಿಂದ ಹೆಚ್ಚು ಹಣ ನಮ್ಮ ದೇಶ ಈ ಗುತ್ತಿಗೆಗಳಿಂದ ಕಳಕೊಂಡಿದೆ. ಆದರೆ ರುಜುವಾತು ಸಿಗುವಂತೆ ಇವರುಗಳು ಎಡವಿದ್ದು ಫೀರಂಗಿ ವ್ಯವಹಾರದಲ್ಲಿ.

1 comment:

ಅಶೋಕವರ್ಧನ said...

ಪಣಂಬೂರಿನಲ್ಲಿ ಗಾಳಿಪಟ ಹಾರಿಸಲು ಬಂದ ಜರ್ಮನ್ ತರುಣ - Axel Kostros, ನಿನ್ನೆ ನನ್ನ ಹಳೆ ಬಂದರ್ ಓಡಾಟದಲ್ಲಿ ಹೀಗೇ ಜೊತೆಗೊಟ್ಟಿದ್ದ. ಅಲ್ಲಿ ಬಿಟ್ಟಿ ಮೀನಿಗೆ ಠಳಾಯಿಸುತ್ತಿದ್ದ ಹದ್ದು ನೋಡಿ, "Haa Kites" ಎಂದು ಉದ್ಗರಿಸಿದ ಮತ್ತು ತಮ್ಮೂರಿನಲ್ಲಿ ಇಷ್ಟು, ಇಂಥ ಹಕ್ಕಿಗಳಿಲ್ಲ ಎಂದು ವಿವರಿಸಿದ. ನಮ್ಮ ಕೀಟನಾಶಕಗಳ (ಈ ಸಂದರ್ಭದಲ್ಲಿ ಒಟ್ಟಾರೆ ರಾಸಾಯನಿಕಗಳ ಎಂದು ತಿದ್ದಿಕೊಳ್ಳಬಹುದು) ಅತಿ ಪ್ರೀತಿಯಲ್ಲಿ ಹೇಗೆ ಅವುಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ಸೂಕ್ಷ್ಮವಾಗಿ ವಿವರಿಸಿದೆ. ಆತ ಗಾಬರಿಯಾಗಿ "ನಾವು, stupid europeans ಏ ರಾಸಾಯನಿಕಗಳ ಒಳಸುರಿಗಳನ್ನು ನಿರಾಕರಿಸುವುದನ್ನು ನೀವು ಯಾಕೆ ಅನುಕರಿಸುತ್ತಿಲ್ಲಾ" ಎಂದು ಬೊಬ್ಬೆ ಹಾಕಿದ!

ಅಶೋಕವರ್ಧನ