Wednesday, January 06, 2010

ಶೌಚಾಲಯ ಉಪಯೋಗಿಸುವ ಹಂದಿಗಳು.




ಹುಟ್ಟುವಾಗಲೇ ಹಂದಿಮರಿಗಳು ಶೌಚಾಲಯ ತರಬೇತಿ ಪಡೆದಿರುತ್ತದೆ ಎಂದು ಗೆಳೆಯ ತೋಮಸ್ ಜರ್ಮನಿಯ ಅಶಾಫೆನ್ ಬರ್ಗ್ ಪಕ್ಕದಲ್ಲಿರಿರುವ ವೈಲರ್ ಹೋಫ್ ಎಂಬ ಕೃಷಿ ಕ್ಷೇತ್ರದಲ್ಲಿ ಹೇಳುವಾಗ ನನಗೆ ಆಶ್ಚರ್ಯಕರ ಅನಿಸಿತ್ತು. ನನ್ನ ಸೈಕಲ್   ಪ್ರವಾಸದಲ್ಲಿ ಜರ್ಮನಿಯಲ್ಲಿ   ಹಲವು ಪ್ರಾಣಿಗಳ ಸಾಕಿದ  ಈ  ಬಯೋಡೈನಾಮಿಕ್  ಕೃಷಿ ಕ್ಷೇತ್ರಕ್ಕೆ ಬೇಟಿ ಇತ್ತಿದ್ದೆ. ಅಲ್ಲಿ   ದಾನ್ಯಗಳ   ಹಾಗೂ  ತರಕಾರಿಗಳ  ಬೆಳೆಸುವುದು  ಮಾತ್ರವಲ್ಲ  ಪಶು ಸಂಗೋಪನೆ  ಕೈಗೊಂಡಿದ್ದರು.    ಅಲ್ಲಿನ ಶಿಕ್ಷಣ ಪದ್ದತಿಯಲ್ಲಿ ಒಂದು ವರ್ಷ ಪ್ರಾಯೋಗಿಕ ತರಬೇತಿ ಪಡೆಯುವುದು ಅವಶ್ಯಕವಾಗಿದ್ದ ಕಾರಣ  ಇಂಗ್ಲೀಷ್  ಸಲೀಸಾಗಿ  ಮಾತನಾಡುವ   ಹಲವಾರು ಯುವಕರು ಯುವತಿಯರು   ಅಲ್ಲಿ ಕೆಲಸ ಮಾಡುತ್ತಿದ್ದರು.

ಅಲ್ಲಿ ಕುರಿ, ಕೋಳಿ, ಹಂದಿ, ಕುದುರೆ, ದನ ಇತ್ಯಾದಿ ಹಲವಾರು ಪ್ರಾಣಿಗಳನ್ನೂ ಸಾಕುತ್ತಿದ್ದರು. ಕುರಿ ಕೋಳಿಗಳಂತೆ ಉಳಿದ ಎಲ್ಲಾ ಪ್ರಾಣಿಗಳೂ ಅವಿರುವ ಆವರಣದಲ್ಲಿ ಎಲ್ಲೆಲ್ಲೂ ಗಲೀಜು ಮಾಡಿದರೂ ಹಂದಿಗಳು ಮಾತ್ರ ಒಂದು ಮೂಲೆಯಲ್ಲಿ ಮಾತ್ರ ಮಲಮೂತ್ರ ಮಾಡುವ ಕಾರಣ ಅವನ್ನು ಸ್ವಚ್ಚಗೊಳಿಸುವ ನಿತ್ಯ ಕೆಲಸ ಸುಲಭವಾಗಿತ್ತು. ಹಂದಿಗಳು ಬರೇ ಗಲೀಜು ಪ್ರಾಣಿಗಳು ಎನ್ನುವುದು ತಪ್ಪು ಕಲ್ಪನೆ.




ಟೈವಾನ್ ದೇಶದಲ್ಲಿ ಒಬ್ಬ ರೈತ ಶೌಚಾಲಯ ಬಳಸಲು ಅಂದರೆ ನಿರ್ದಿಷ್ಟ ಸ್ಥಳದಲ್ಲಿ ಮಲಮೂತ್ರ ಮಾಡಲು ಹಂದಿಗಳ ತರಬೇತಿ ಕೊಟ್ಟಿದ್ದಾನೆ ಎನ್ನುವ ಸುದ್ದಿ ಓದುವಾಗ ವಿಚಾರ ಹೊಸತು ಎನಿಸದಿದ್ದರೂ ಆ ಅನುಬವಗಳ ನೆನಪಾಯಿತು. ಟೈವಾನಿನ ರೈತನ ನೆರೆಕರೆಯವರು ಹಂದಿ ಸಾಕಣೆಯಿಂದಾಗಿ ವಾಸನೆ ಎಂದು ಕಿರಿಕಿರಿ ಮಾಡುತ್ತಿದ್ದರಂತೆ. ಹಾಗಾಗಿ   ಅವನು ಅವನ ಹಂದಿಗಳಿಗೆ ನಾಗರಿಕ ವರ್ತನೆ ಕಲಿಸಿದನಂತೆ.  ಹಂದಿಗಳು ತರಬೇತಿ ಕೊಟ್ಟರೆ ಹೇಗೆ ಸಲೀಸಾಗಿ ಪಳಗುತ್ತದೆ ಎನ್ನುವುದು ವಿಡಿಯೊ ಕಂಡಿತು.  ಹಾಗೆ  ಅದನ್ನೂ  ಇಲ್ಲಿಯೇ  ಹಾಕಿದೆ.

ಒಂದು  ಮಾತು.  ಸಿಂಹಾಸನವೇರುವ ಹಂದಿ ಚಿತ್ರಣಕ್ಕೂ    ಟೈವಾನ್  ಫಾರ್ಮಿಗೂ  ಸಂಬಂದವಿಲ್ಲ.   ಅಂತೆಯೇ ಮೇಲೆ  ಹಾಕಿದ   ನನ್ನ ಚಿತ್ರ ಜರ್ಮನಿಯ ಬೇರೊಂದು ಫಾರ್ಮಿನಲ್ಲಿ ತೆಗೆದದ್ದು.  weilerhof ನಲ್ಲಲ್ಲ.   ಈ ಫಾರ್ಮಿನಲ್ಲಿ ಒಳಗೆ ಹೋಗುವ ಮೊದಲು ನನಗೆ ದರಿಸಿಕೊಳ್ಳಲು ಉದ್ದನೆಯ  ಕೋಟು ಕೊಟ್ಟಿದ್ದರು.

1 comment:

ಅಶೋಕ ವರ್ಧನ said...

ಹನ್ನೆರಡೇ ಮನೆಯಿರುವ ನಮ್ಮ ಸಣ್ಣ ದಾರಿಯಲ್ಲೂ ನಾನು ದಿನಾಲೂ ಕನಿಷ್ಠ ನಾಲ್ಕು ನಾಯಿ-ಹೇಲು ಗುಡ್ಡೆಯನ್ನು ಹುಡಿಮಾಡದೇ ವಾಹನ ಓಡಿಸಲಾರೆ. ಇದಕ್ಕೆ ಕಾರಣರಾದ ನಾಲ್ಕು ಗಣ್ಯ ನಾಯಿ-ಧಣಿಗಳಿಗೆ ಈ ಹಂದಿ ಶಿಸ್ತಿನ ಚಿತ್ರ ಹೇಗೆ ತೋರಿಸಲಿ? ದಾಸರು ‘ನಿಂದಕರಿರಬೇಕು ಹಂದಿಯಂದದಲಿ’ ಎಂದಲ್ಲೂ ಹಂದಿಗಳು ನಮಗೆ ಕೊಳಕು ಎನ್ನಿಸಿದವನ್ನು ತಿಂದು ಕೊಡುತ್ತವೆ ಎನ್ನುವ ಸೂಚನೆಯಿದೆಯೇ ಹೊರತು ಹಂದಿಯೇ ಕೊಳಕು ಎಂಬ ನಿಂದೆಯಿಲ್ಲ. ಸೂಕರಕ್ಕೆ ಜೈ!