Sunday, March 08, 2009

ಮಣ್ಣಿನೊಳಗಿನ ಬಾಂಧವ್ಯ

ತೆರೆ  ಸರಿಸಿ  ನೋಡಿದರೆ    ಮಣ್ಣಿನೊಳಗಿನ   ವಿವಿದ  ಖನಿಜಾಂಶಗಳ ನಡುವಿನ  ಸಂಬಂದ  ಗೋಚರವಾಗುತ್ತದೆ. ಎಲ್ಲವೂ  ಪರಸ್ಪರ  ಬಾಂದವ್ಯ  ಹೊಂದಿರುತ್ತದೆ.  ಸಾವಯುವ  ಕೃಷಿಗೆ  ಈ  ಅರಿವು  ಸಹಾಯಕ.

ಸಾವಯುವ ಕೃಷಿಯ ಕಲ್ಪನೆಯಲ್ಲಿ ನಾವು ಪೋಷಿಸುವುದು ಮಣ್ಣನ್ನು ಹೊರತು ಬೆಳೆಯನ್ನಲ್ಲ,. ಮಣ್ಣಿನ ಫಲವತ್ತತೆಯ ಮಟ್ಟ ಕಾಯ್ದುಕೊಂಡಲ್ಲಿ ಅದು ಬೆಳೆಗೆ ಅಗತ್ಯವಿರುವಾಗ ಅಗತ್ಯದ ಪೋಷಕಾಂಶಗಳ ಬಿಡುಗಡೆ ಮಾಡುತ್ತದೆ. ಸಮಸ್ಯೆ ಬಂದಾಗ ಕಾರಣ ಹಿಡಿದು ಸರಿಪಡಿಸುವುದು ಸೂಕ್ತ ಹೊರತು ಲಕ್ಷಣ ನೋಡಿ ಗಡಿಬಿಡಿ ಮಾಡುವುದಲ್ಲ.

ಸಮೂಹದಲ್ಲಿ ಜನರು ವರ್ತಿಸುವ ಬಗ್ಗೆ ನಾನು ಗಮನಿಸಿದ್ದೇನೆ. ಮಣ್ಣಿನಲ್ಲಿರುವ ವಿವಿದ ಖನಿಜಾಂಶಗಳ ವರ್ತನೆಗೆ ಇಲ್ಲೊಂದು ಹೋಲಿಕೆ. ಗುಂಪಿನಲ್ಲಿ ಪ್ರತಿಯೊಬ್ಬರ ವರ್ತನೆಯೂ ಅಲ್ಲಿರುವ ಇತರರ ಇರುವನ್ನು ಅವಲಂಬಿಸಿರುತ್ತದೆ. ಜನರ  ಗುಂಪಿನಲ್ಲಿ ವೆಂಕಟನ ಸ್ವರ ಜೋರಾಗಿದೆ ಎಂದರೆ ದೇವಕಿ ಜತೆಗಿರಬೇಕು ಮತ್ತು ಸ್ವರ ಮಾಮೂಲಿಗಿಂತ ಕ್ಷೀಣ ಎಂದರೆ ಮಹಾಬಲ ಗುಂಪಿನಲ್ಲಿರಬಹುದೆನ್ನುವ ತೀರ್ಮಾನಕ್ಕೆ ಬರಬಹುದು. ಇದೇ ರೀತಿ ಮಣ್ಣಿನಲ್ಲಿ ಪೋಷಕಾಂಶಗಳ ವರ್ತನೆ ಇರಬಹುದಾದ ಇತರ ಖನಿಜಾಂಶಗಳನ್ನು ಅವಲಂಬಿಸಿದೆ. ಕೆಲವು ಪೋಷಕಾಂಶಗಳ ನಡುವಿನ ಸಂಬಂದ  ಸಾದ್ಯವಾದಷ್ಟು ಸರಳವಾಗಿ ಕೋಷ್ಟಕದಲ್ಲಿ ಕಾಣಿಸಿದ್ದೇನೆ.

ನಮ್ಮ ಕರಾವಳಿ ಪ್ರದೇಶದಲ್ಲಿ ಮಣ್ಣಿನಲ್ಲಿ ಕಾಲ್ಸಿಯಂ ಇದ್ದರೂ ಅದು ಅಲುಮೀನು ಮತ್ತು ಕಭ್ಭಿಣದ ಅಂಶಗಳೊಂದಿಗೆ ಸಂಯುಕ್ತವಾಗಿ ಬೆಳೆಗೆ ಸಿಗುವುದಿಲ್ಲ. . ಇದರ ಪರಿಣಾಮ ನಮ್ಮ ದನಗಳು ಎಲುಬು ಬೆಳೆಯದೆ ಮಲೆನಾಡು ಗಿಡ್ಡ ಎನಿಸಿಕೊಂಡಿವೆ.

ಎಡಗಡೆಯಲ್ಲಿ ಕಾಣಿಸಿರುವ ಪೋಷಕಾಂಶಗಳ ಸಾಂದ್ರತೆ ಹೆಚ್ಚು ಆಥವಾ ಕಡಿಮೆ ಇದ್ದರೆ
ಮೇಲಿನ ಸಾಲಿನಲ್ಲಿ ಕಾಣಿಸಿರುವ ಅಂಶಗಳ ಕೊರತೆ ಗೋಚರಿಸುತ್ತದೆ.


ಪೊಟಾಷ್ ಬೆಳೆಗೆ ಸಿಗುವ ವಿಚಾರವನ್ನು ಸಾರಜನಕ, ರಂಜಕ, ಮೆಗ್ನಿಸಿಯಂ, ಬೊರಾನ್, ಸೋಡಿಯಂ ಮತ್ತು ಕ್ಲೋರಿನ್ ಅಂಶಗಳ ಸಾಂದ್ರತೆ ನಿಯಂತ್ರಿಸುತ್ತವೆ. ಇವುಗಳ ಪ್ರಮಾಣ ಹೆಚ್ಚಿದ್ದಲ್ಲಿ ಬೆಳೆಗಳ ಮಟ್ಟಿಗೆ ಪೊಟಾಷ್ ಕನ್ನಡಿಯೊಳಗಿನ ಗಂಟಾಗುತ್ತದೆ. ಇಲ್ಲಿ ಸ್ವಾರ್ಥ ಹಿತಾಸಕ್ತಿಗಳಿಂದ ದಿಕ್ಕು ತಪ್ಪಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತದೆ. ಇಂದು ಕಡಿಮೆ ಬೆಲೆಯ ಮತ್ತು ಅತಿ ಹೆಚ್ಚು ಮಾರಾಟವಾಗುವ ಮುರಿಟ್ ಆಫ್ ಪೊಟಾಷ್ ರಸಾಯನಿಕ ಗೊಬ್ಬರ ಕ್ಲೋರಿನ್ ಮತ್ತು ಪೊಟಾಸಿಯಂ ಒಳಗೊಂಡಿದ್ದು ಸಮಸ್ಯೆ ಇರುವುದು ಈ ಮಿಶ್ರಣದಲ್ಲೇ. ಲಕ್ಷಣ ನೋಡಿ ರೈತರು ಮತ್ತೂ ಹೆಚ್ಚು ಗೊಬ್ಬರ ಹಾಕುತ್ತಾರೆ. ಇದೊಂದು ವಿಷ ವರ್ತುಲ.

ಸಾವಯುವ ಕೃಷಿಯಲ್ಲಿ ಈ ಖನಿಜಾಂಶಗಳ ನಿಬಾಯಿಸುವುದು ಹೆಚ್ಚು ಸರಳ ಏಕೆಂದರೆ ಅಲ್ಲಿ ಮಣ್ಣಿನ ಫಲವತ್ತತೆ ಕಾಪಾಡಲು ಹೆಚ್ಚಿನ ಗಮನ ಕೊಡಲಾಗುತ್ತದೆ. ಜೀವನದಲ್ಲೂ   ಕೆಲವೊಂದು  ಸನ್ನಿವೇಶದಲ್ಲಿ  ನಾವು   ಸಮಸ್ಯೆಯನ್ನೇ   ಪರಿಹಾರ  ಎಂದು ಕಲ್ಪಿಸಿಕೊಂಡಿರುತ್ತೇವೆ.    ಲಕ್ಷಣದ ಬದಲಿಗೆ ಕಾರಣವ ಹುಡುಕಿ ನೋಡಿ ಪರಿಹಾರ ಕೈಗೊಳ್ಳುವುದೇ    ಉತ್ತಮ.

No comments: