ಮೇಲಿನ ಚಿತ್ರದಲ್ಲಿ ಅವರ ಪತ್ರಿಕೆಯೊಂದಿಗೆ ಸಂಪಾದಕರು ನಿಂತಿದ್ದಾರೆ. ಪಶ್ಚಿಮ ಆಫ್ರಿಕದಲ್ಲಿ ಪತ್ರಿಕೆ ಕೊಳ್ಳಲು ಚೈತನ್ಯವಿರದವರಿಗೆ ಅವರದೇ ಬಾಷೆಯಲ್ಲಿ ಸುದ್ದಿ ತಲಪಿಸುವ ಪ್ರಯತ್ನ ಈ Daily Talk ನಿತ್ಯ ಮಾತು. ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆಯಂತೆ ಎನ್ನುವುದು ಈ ಮಾದರಿಯ ಬಗ್ಗೆ ಕುತೂಹಲ ಕೆರಳಿಸುತ್ತದೆ. ಚಾಪೆ ಕುರ್ಚಿ ಈಸಿಚೈರ್ ಎನ್ನುವ ನಮ್ಮ ಯಕ್ಷಗಾನ ಪ್ರದರ್ಶನದಂತೆ ತಳಕ್ಕೆ ಐದು, ಬದಿಯಲ್ಲಿ ಪ್ರಕಟಿಸಿದರೆ ಹತ್ತು ಮತ್ತು ಮುಖ್ಯ ಪುಟದಲ್ಲಿ ಇಪ್ಪತ್ತೈದು ನಮ್ಮ ಜಾಹಿರಾತು ದರಗಳು ಎನ್ನುವ ಈ ಪತ್ರಿಕೆಗೆ (?) ತೇಲುತ್ತಾ ಇರುವಷ್ಟು ಜಾಹಿರಾತು ಬೆಂಬಲವಿರುತ್ತದೆ.
ಸಂಪಾದಕ Alfred Sirleaf ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕರಿಹಲಗೆಯಲ್ಲಿ ಬರೆಯುವ ಸುದ್ದಿಯೇ ಪತ್ರಿಕೆ. ವಿದ್ಯುತ್ ಅವಲಂಬನೆ ಇಲ್ಲದ ತೀರಾ ಸರಳವಾದ ವ್ಯವಸ್ತೆ. ಊರ ಪರಊರ ಗೆಳೆಯರು ಇವರ ಸಂಚಾರವಾಣಿಗೆ ಸುದ್ದಿಯನ್ನು ಕಳುಹಿಸುತ್ತಲೇ ಇರುತ್ತಾರೆ. ದಿನವೊಂದಕ್ಕೆ ಆ ದಾರಿಯಾಗಿ ಓಡಾಡುವ ಹತ್ತು ಸಾವಿರ ಜನ ಓದುಗರು. ಪತ್ರಿಕೆ ಓದುವವರೆಲ್ಲರೂ ಅಕ್ಷರ ಜ್ನಾನ ಇರುವವರಲ್ಲ. ಈ ಅನಕ್ಷರಸ್ತರಿಗೆ ತಲಪಲು ಸಂಕೇತಗಳ ಚಿತ್ರಗಳ ಉಪಯೋಗ ದಾರಾಳ.
ನನಗೆ ಈ ವಿಚಾರ ಪ್ರಾಮುಖ್ಯ ಎನಿಸಲು ಇನ್ನೊಂದು ಕಾರಣವೆಂದರೆ ಪಕ್ಕದ Guinea Bissau ಎಂಬ ಹದಿನಾರು ಲಕ್ಷ ಜನಸಂಖ್ಯೆಯ ದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಪತ್ರಿಕೆಗಳಿಂದ ಸುದ್ದಿ ಪೊರೈಕೆ ಇಲ್ಲ. ದೇಶದ ಐದು ನಿಯತಕಾಲಿಕಗಳು ಮುದ್ರಣ ಕಾಗದ ಕೊರತೆಯಿಂದ ಮುಚ್ಚಿವೆ. ನಾವು ನೆದರ್ಲಾಂಡಿನಲ್ಲಿ ಖರೀದಿಸುತ್ತಿದ್ದ ಮಾಲು ಈಗ ಅಲ್ಲಿನ ಮಾರುಕಟ್ಟೆಯಲ್ಲಿ ಇಲ್ಲ. ಬೇರೆ ಮೂಲಗಳಿಂದ ಪಡೆಯಲು ನಮಗೆ ಆರ್ಥಿಕ ಚೈತನ್ಯವಿಲ್ಲ ಎನ್ನುತ್ತಾರೆ ಪತ್ರಿಕಾ ಮುದ್ರಕರು.
ಗೋಡೆ ಬರಹ ನಮಗೇನು ಹೊಸತಲ್ಲ. ವಿಟ್ಲದ ಅಡಿಕೆ ವ್ಯಾಪಾರಿಯೊಬ್ಬರು ರಸ್ತೆಗೆ ಕಾಣುವಂತೆಯೇ ಅಂಗಡಿಯ ಗೋಡೆಯಲ್ಲಿ ಕರಿಬಣ್ಣ ಬಳಿದು ಅದರಲ್ಲಿ ದಿನದ ಅಡಿಕೆ ಖರೀದಿ ದರ ಬರೆಯುತ್ತಿದ್ದರು. ಅಲ್ಲಿ ದಾಟುವಾಗ ಗೋಡೆಯ ಮೇಲೊಮ್ಮೆ ನಮ್ಮ ಕಣ್ಣುಗಳು ಹಾಯ್ದು ಮಾಹಿತಿಯನ್ನು ಹೀರಿಕೊಳ್ಳುತ್ತಿತ್ತು. ಈಗ ಈ ಪ್ರಯೋಗ ನಿಂತಿದೆ.
ಇಂದು SMS ಅಗ್ಗವಾಗಿದೆ. ಆದರೆ ತಲಪುವ ಸಾದ್ಯತೆ ಮಾತ್ರ ೫೦:೫೦ ಅನ್ನಬಹುದು. ಶಾಲೆಗೆ ಇಂದು ರಜೆ, ಹಳೆ ಅಡಿಕೆಗೆ ೧೦೩, ತರಕಾರಿ ಅಗ್ಗ- ಟೊಮೆಟೊ ಆರು, ಸೊಸೈಟಿಯಲ್ಲಿ ಸುಫಲ ಲಬ್ಯ ಇಂತಹ ಸುದ್ದಿ ಹಾಗೂ ಎಚ್ಚರಿಸುವ SMS ಕಳಿಸುವ ವ್ಯವಸ್ಥೆ ಪ್ರಾಯೋಗಿಕ ಎನಿಸಲೂ ಬಹುದು.
ಈ ಮದ್ಯೆ ಊರ ಸುದ್ದಿ ಹಂಚುವ ವಿಚಾರವನ್ನು ನಾನು ನನ್ನ ಇ-ಪತ್ರದಲ್ಲಿ ಬರೆದ ಗೆಳೆಯರಿಗೆ ವಿವರಿಸಲು ಒಂದು ತಾತ್ಕಾಲಿಕ ಮಾದರಿಯನ್ನು ಸಿದ್ದಪಡಿಸಿದೆ. ಹಲವಾರು ಮಾಹಿತಿ ಹಂಚುವ ಸಾದ್ಯತೆಗಳು. ಗೆಲ್ಲುವ ಕುದುರೆಯನ್ನು ಕಾಲವೇ ನಿರ್ದರಿಸುವುದು.
No comments:
Post a Comment