Thursday, March 19, 2009

ತಾಲಿಬಾನಿಗಳನ್ನು ಪ್ರೀತಿಸುವ ಮಾದ್ಯಮ

ಮುಂಬಯಿಯ ಭಯೋತ್ಪಾದನೆ ಜತೆಗೆ ಮಂಗಳೂರಿನ ಪಬ್ ದಾಳಿ, ಚಾಪ್ಲಿನ್ ವಿಗ್ರಹ ಚರ್ಚೆ ಇಂದು ಜೋರಾಗಿ ಕೇಳುವುದರಿಂದ ನನ್ನ ಮನಸಿನಲ್ಲಿರುವುದರ ದಾಖಲಾತಿಗೆ ಪ್ರೇರಣೆಯಾಯಿತು. ಮಾದ್ಯಮಗಳು ನಮಗೆ ನೈಜ ಚಿತ್ರಣ ತೋರುವುದಿಲ್ಲವೆಂದು ನನ್ನ ಚಿಕ್ಕಂದಿನಲ್ಲೇ ಅನಿಸಿಕೆಯಾಗಿತ್ತು.


ತೆರೆ ಮರೆಯ ನೈಜ ಚಿತ್ರಣ ನೋಡಿ ಬರೋಣವೆಂದು ನಾನು ಸೈಕಲು ಸಮೇತ ದೀರ್ಘ ಪ್ರವಾಸ ಕೈಗೊಂಡದ್ದು, ಪ್ರವಾಸ ನನ್ನ ಅನಿಸಿಕೆಯನ್ನು ಅನುಮೋದಿಸಿದೆ. ಹಲವು ವಿಚಾರಗಳಲ್ಲಿ ಬಾರತದಲ್ಲಿ ಕೂತ ನಮ್ಮ ಕಲ್ಪನೆಗೂ ನೈಜ ಸ್ಥಿತಿಗೂ ಬಹಳಷ್ಟು ವ್ಯತ್ಯಾಸ ಇರುತ್ತದೆ. ಭಾರತದ     ಮಟ್ಟಿಗೆ .ಪರದೇಶದವರ ಅನಿಸಿಕೆಯೂ ಬಿನ್ನವಾಗಿಲ್ಲ. ಅಮೇರಿಕದಲ್ಲಿ ಅಸಮಧಾನಗೊಂಡಲ್ಲಿ ನಿನ್ನ ಪತ್ನಿಯನ್ನು ಬೆಂಕಿಗಾಹುತಿ ಮಾಡುತ್ತೀಯ ಎನ್ನುವ ಪ್ರಶ್ನೆ ಹಲವು ಬಾರಿ ಎದುರಿಸಿದ್ದೇನೆ. ಅವರ ತಿಳುವಳಿಕೆ ಪ್ರಕಾರ  ಬಾರತದಲ್ಲಿ ಪತ್ನಿಗೆ ಬೆಂಕಿ ಹಾಕಿ ಸುಡುವುದು ಮಾಮೂಲಿ ಅನ್ನುವ ಚಿತ್ರಣ.

ಮಂಗಳೂರಿನ ಪಬ್ ದಾಳಿಗೆ ಸಿಕ್ಕ ಅಂತರಾಷ್ಟ್ರೀಯ ಪ್ರಚಾರ ಕಾಣುತ್ತಿರುವಾಗ ನಿಜಕ್ಕೂ ಮೈ ಪರಚಿಕೊಳ್ಳುವಂತಾಗಿದೆ. ಇದು “ಈ ಕಲ್ಚರ್ ಪೊಲೀಸಿಂಗ್ಗೆ ನಾಗರಿಕ ಸಮಾಜದ ಧಿಕ್ಕಾರ” ಎಂಬ ತಲೆಬರಹದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಯಿತು. ಹಿಂದೂ ತಾಲಿಬಾನ್ಗಳು, ಹಿಂದೂ ಮೂಲಭೂತವಾದಿಗಳು ಎಂದೆಲ್ಲಾ ದೊಡ್ಡ ಚರ್ಚೆಯೇ ನಡೆಯಿತು. ನಮ್ಮೂರ ಮಾನ ಪೂರಾ ಹರಾಜಾಯಿತು.

ಇವರಲ್ಲಿರುವ ಒಂದು ನಿಮಿಷದ ತುಣುಕನ್ನು Gobbels ಮಾದರಿಯಲ್ಲಿ ಪದೇ ಪದೆ ಪ್ರದರ್ಶಿಸಿ ನಮ್ಮ ಮನಸ್ಸಿಗೆ ತಪ್ಪು ಕಲ್ಪನೆ ತುಂಬಿಸಿದರು. ಒಂದು ದೃಶ್ಯ ಮಾದ್ಯಮ ( ಶುದ್ದ ವ್ಯಾಪಾರಿ ದೋರಣೆಯ Toi -let group  ಎಂದು   ಕರೆಯಲ್ಪಡುವ  Times Of  India ) ಮತ್ತು ವಾನರ ಸೇನೆಯ ಮದ್ಯೆ ಇದ್ದ ಹಳೆಯ ದ್ವೇಷ ಊರ ಹಾಗೂ ದೇಶದ ಮರ್ಯಾದೆಯನ್ನೇ ತೆಗೆಯಿತು. ಮಾಧ್ಯಮಗಳು ಯಾವ ರೀತಿ ಒಂದು ವಿಷಯದ ಮೇಲೆ ಪ್ರಭಾವ ಬೀರಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ನಮ್ಮೂರು ಅಪಾಯಕಾರಿ ಎನ್ನುವ ತಪ್ಪು ಚಿತ್ರಣ ವ್ಯವಹಾರ ಪ್ರವಾಸೋದ್ಯಮಗಳಿಗೆ ಹಿನ್ನೆಡೆ ತರುವುದು ಖಚಿತ. ಇತರ ನಾಗರಿಕ ಸಮಾಜದ ದೃಶ್ಯ ಮಾದ್ಯಮಗಳ ಮನಸ್ಥಿತಿ ಇಷ್ಟು ಹೊಲಸಲ್ಲ ಎಂದು ಖಚಿತವಾಗಿ ಹೇಳಬಹುದು.

ಮುಂಬಯಿ ಮಾತ್ರವಲ್ಲ ಜಗತ್ತನ್ನೇ ತುದಿಗಾಲಿನಲ್ಲಿರಿಸಿದ ಇನ್ನೂರಕ್ಕೂ ಹೆಚ್ಚು ಜನ ಜೀವ ಕಳಕೊಂಡಿರುವ ಭಯೋತ್ಪಾದನೆ ಕೃತ್ಯವನ್ನೂ ಮಂಗಳೂರಿನ ಚಿಲ್ಲರೆ ಘಟನೆಯನ್ನು ಹೋಲಿಸುವುದು ಮೂರ್ಖತೆಯ ಪರಮಾವದಿ. ಆದರೆ ಲೋಕಸಭಾ ಚುನಾವಣೆಗಳು ಹತ್ತಿರ ಬರುತ್ತಿರುವಾಗ ಪರೀಸ್ತಿತಿ ಕದಡುವ ಅನಿವಾರ್ಯತೆ ರಾಜಕಾರಣಿಗಳಿಗೂ ಇದೆ. ಇದಕ್ಕಿಂತ ಎಷ್ಟೋ ಘೋರವಾದ ಘಟನೆಗಳು ಮರೆಮಾಚುವಂತಾಗಿ ಮಾದ್ಯಮಗಳು ಹೇಳುವುದೆಲ್ಲ ಅರ್ಧ ಸತ್ಯ ಎಂಬಂತಾಗಿದೆ.

Speed ಆಂಗ್ಲ ಬಾಷೆಯ ಸಿನೇಮದಲ್ಲಿ ಖಳನಾಯಕ ಟಿವಿ ಮೂಲಕ ಪರೀಸ್ಥಿತಿ ಅವಲೋಕಿಸುತ್ತಿದ್ದಾನೆ ಎಂದರಿತ ಪೋಲೀಸರು ಹಳೇ ರೀಲನ್ನೇ ಪುನಹ ಬಿಡಲು ಟಿವಿಯವರಿಗೆ ಹೇಳಿದರು. ಆಗ ಖಳನಾಯಕ ಮೂರ್ಖನಾಗುವ ಸನ್ನಿವೇಶವನ್ನು ನಾವು ನೋಡುತ್ತೇವೆ. ಏನನ್ನು ಬಿತ್ತರಿಸಬಹುದು ಎನ್ನುವ ಪಾಠ ನಮ್ಮ ಟಿವಿ ಕಂಪೇನಿಯವರಿಗೆ ಮುಂಬಯಿ ದಾಳಿ ಸಮಯದಲ್ಲಿ ತಡವಾಗಿಯಾದರೂ ಪೋಲೀಸರು ಮಾಡಬೇಕಾಯಿತು.

ನಾನು ಚಾಪ್ಲಿನ್ ವಿಗ್ರಹವನ್ನು ವಿರೋಧಿ ಎಂದರೆ ನಾನು ಮತಾಂಧ ಎನಿಸುಕೊಳ್ಳುವ ಪರಿಸ್ಥಿತಿ ಇತ್ತೀಚೆಗೆ ಬೆಳೆದು ಬಂದಿರುವುದು ಆತಂಕಕಾರಿ ಬೆಳವಣಿಗೆ.  ಅಭಿಪ್ರಾಯಗಳು ಕೇವಲ    ಕಪ್ಪು-ಬಿಳುಪಿನಲ್ಲಿ ಇರಬೇಕು. ಒಂದೋ ಈ ಪಕ್ಷ ಇಲ್ಲಾ ಆ ಪಕ್ಷ ಎನ್ನುವಂಥಾ ಮನೋಭಾವ ನಮ್ಮಲ್ಲಿ ಬೆಳೆದು ಬಂದಿದೆ ಇತ್ತೀಚೆಗೆ. ಮೂರನೆಯ ದೃಷ್ಟಿ ಕೋನ ಎನ್ನುವುದು ಇಲ್ಲದಂತೆ ಆಗಿದೆ.    ಕಳೆದ ಚುನಾವಣೆಯಲ್ಲಿ ನಿರಾಕರಣ ಮತ ಹಾಕುವಾಗ ಮತಗಟ್ಟೆಯಲ್ಲಿ ಕೂತಿದ್ದ ಕೈ ಕಮಲ ತೆಂಗಿನ ಕಾಯಿ ಪಕ್ಷದ ಯುವಕರು ಜತೆಯಾಗಿಯೇ ಕೆಕ್ಕರಿಸಿ ನೋಡಿದರು. ಇವನು ನಮ್ಮವನಲ್ಲ ಎನ್ನುವ ಭಾವನೆ ಸ್ಪಷ್ಟವಾಗಿತ್ತು.

ಚಾಪ್ಲಿನ್  ವಿಚಾರದಲ್ಲಿಯೂ  ಅಲ್ಲಿನ ಗ್ರಾಮಸ್ಥರಲ್ಲಿ ಹೆಚ್ಚಿನವರಿಗೆ ಚಾಪ್ಲಿನ್ ಹೆಸರು ಜಾತಿ ಎರಡೂ ಗೊತ್ತಿರಲಿಲ್ಲವಂತೆ. ಅವರು ಇದನ್ನು ಅವನ ಜಾತಿ ಧರ್ಮದ ನೆಲೆಯಲ್ಲಿ ನೋಡಿರಲಿಲ್ಲ. ನಮ್ಮ ದೇವಸ್ಥಾನಕ್ಕೆ ತೊಂದರೆಯಾಗಬಹುದು, ಬೇರೆಡೆ ಮಾಡಿ ಅಂತಲೇ ಸಲಹೆ ಮಾಡಿದ್ದಾರಂತೆ. ಈ ಸುದ್ದಿಗೆ ಜಾತಿ-ಧರ್ಮದ ವಿಷವನ್ನು ಯಾರೋ ಸೇರಿಸಿ ಗರಂ ಮಾಡಿದರು.

ಪಬ್ ಧಾಳಿಯ ಸಮಯದಲ್ಲಿ ಹೊಡೆದದ್ದು ತಪ್ಪು ಎಂದರೆ ಕುಡಿತದ ಬೆಂಬಲಿಗರೋ ಎನ್ನುವ ಪ್ರಶ್ನೆ ಕೇಳುತ್ತಾರೆ. ಕುಡಿತ ಸರಿಯಲ್ಲ ಎಂದು ಹೇಳಿದರೆ ನೀವು ರಾಮಸೇನೆಯ ಬೆಂಬಲಿಗರೋ ಎಂದು ಎದುರಿನವರು ನಮ್ಮನ್ನು ಕೇಳದೆಯೇ ಪರಿಗಣಿಸುತ್ತಾರೆ. ಇಂದಿನ ಯುದ್ಧ ಸನ್ನಿವೇಶದಲ್ಲಿ ಬುಷ್ ಹೇಳಿದಂತೆ ನೀನು ವೈರಿ ಪಕ್ಷದವನೋ ಇಲ್ಲ ಮಿತ್ರ ಪಕ್ಷದವನೋ? ಇದೆರಡಕ್ಕೂ ಸೇರಿಲ್ಲ ಎಂದಾದರೆ ನಿನಗೆ ಅಸ್ತಿತ್ವವೇ ಇಲ್ಲ ಎನ್ನುತ್ತದೆ ಇಂದು  ಕಾಣಿಸಿಕೊಳ್ಳುವ ಪ್ರಕರಣಗಳು. ಗಮನಿಸಿ, ಯಾವ  ಪಕ್ಷಕ್ಕೂ  ಸೇರದ  ಬಹುಸಂಖ್ಯಾತರು  ಲೆಕ್ಕದಿಂದ  ಹೊರಗೆ  ಎನ್ನುವಂತಾಗುತ್ತಾರೆ. 

ಇಂದಿನ ಇತಿಹಾಸದ ದಾಖಲಾತಿ ಮಾಡುವ ಮಾದ್ಯಮದವರು ಜವಾಬ್ದಾರಿಯುತ ಸ್ಥಾನದಲ್ಲಿರುವ ಅರ್ಥ ಮಾದಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಸಾಮಾಜಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳುವುದು ಮಾಧ್ಯಮಗಳ ಧರ್ಮ. ಸಮಾಜದ ಏಕತೆಗೆ ಭಂಗ ಬಾರದಂತೆ ವರ್ತಿಸುವುದು, ಜನರ ಭಾವನೆಗೆ ಧಕ್ಕೆಯಾಗದಂತೆ ಕಾಳಜಿ ವಹಿಸುವುದು ಅವುಗಳ ಕರ್ತವ್ಯವೂ ಹೌದು. ಇವರ ಸೇವೆ ಸಮಾಜಕ್ಕೊಂದು ಮುಂದುವರಿದ ಶಿಕ್ಷಣ. ಆದರೆ ಮಾದ್ಯಮ ಎಡವಿದರೆ ಎಲ್ಲೆಲ್ಲೂ ತಪ್ಪು ಅಭಿಪ್ರಾಯಗಳು ಮೂಡುತ್ತದೆ.

ಬ್ರೇಕಿಂಗ್ ನ್ಯೂಸ್ ಆವಾಂತರಗಳಲ್ಲಿ ಈಗಾಗಲೇ ದೃಶ್ಯ ಮಾಧ್ಯಮಗಳ ವಸ್ತುನಿಷ್ಠತೆಗೆ, ಅದರ ವಿಶ್ವಾಸಾರ್ಹತೆಗೆ ಸಂಶಯ ಉಂಟಾಗಿದೆ. ಮುಂದೆ ಅಂತರ್ಜಾಲ ಇನ್ನೂ ವಿಸ್ತಾರಗೊಂಡಂತೆ ಪತ್ರಿಕಾ ಪ್ರಪಂಚ ಸೋಲುತ್ತಾ ಹೋಗುವ ಲಕ್ಷಣಗಳು ಗೋಚರಿಸುತ್ತವೆ. ಹಲವು ಪತ್ರಿಕೆಗಳು ಈಗಲೇ ವರದಿಗಾರರನ್ನು ಮನೆಗೆ ಕಳುಹಿಸಿದೆ. ಪರಿಸ್ಥಿತಿ ಇನ್ನೂ ಗಂಬೀರವಾಗುತ್ತಿದೆ. ಮುಂದೆ ಸುದ್ದಿ ಎನ್ನುವುದರ ಬದಲು ಜಾಹಿರಾತುಗಳು ಮಾತ್ರ ಉಳಿದುಕೊಳ್ಳುತ್ತವೆ.

2 comments:

Unknown said...

Article is powerfull. state level news paper editorial lli barabekagittu.

Govinda Nelyaru said...

ವಂದನೆಗಳು ಶ್ರೀಶಂ. ಕೇಂದ್ರ ಸರಕಾರಕ್ಕೆ ಕಸಬ್ ವಿಡಿಯೋ ಪ್ರದರ್ಶನ ಬೇಡವೆಂದು ಮಾದ್ಯಮಕ್ಕೆ ಹೇಳಿದೆ ಎಂದು ಇಂದಿನ ಕನ್ನಡ ಪ್ರಭ ಪ್ರಕಟಿಸಿದೆ. ಯೋಚಿಸುವಾಗ ಗಾಬರಿಯಾಗುತ್ತದೆ.

ಗೋವಿಂದ