Friday, October 22, 2010

ಮೂರು ಚಕ್ರದಲ್ಲಿ ಮಂಗಳೂರಿಗೆ

ನಿನ್ನೆ ಮಂಗಳೂರಿಗೆ ಟ್ರೈಕಿನಲ್ಲಿ ಹೋಗಿದ್ದೆ. ೧೬ ಕಿಮಿ ದೂರದ ಬಿ ಸಿ ರೋಡ್ ೪೫ ನಿಮಿಷಗಳಲ್ಲಿ ದಾಟಿದರೆ (ಬಿಸಿ ರಸ್ತೆಯಲ್ಲ, ಬಂಟವಾಳ ಕ್ರಾಸ್ ರೋಡ್ ಅನ್ನುವ ನೇತ್ರಾವತಿ ತೀರದಲ್ಲಿರುವ ಊರು) ಮಂಗಳೂರು ಹೊರವಲಯ ಒಂದು ಘಂಟೆ ಮೂವತ್ತೇಳು ನಿಮಿಷಗಳ ಪ್ರಯತ್ನದಲ್ಲಿ ಒಂದು ಬಾಟರಿಯ ಶಕ್ತಿಯ ಸಹಾಯದಲ್ಲಿ ತಲಪಿದೆ.


ಆ ಬಾಟರಿಯನ್ನು ಅಶೋಕನ ಅಂಗಡಿಯಲ್ಲಿ ಚಾರ್ಜಿಗಿಟ್ಟು ಮಂಗಳೂರು  ಪಟ್ಟಣದೊಳಗಿನ ತಿರುಗಾಟ ಮಾಡಿದೆ. ಅಗತ್ಯವಿರುವಾಗ  ಸುಮಾರು ಇಪ್ಪತ್ತೈದು ಕಿಮಿ ವೇಗ ಸಾದ್ಯವಾಗುವ ಕಾರಣ ಊರೊಳಗಿನ ತಿರುಗಾಟಕ್ಕೆ ಸರಿಸುಮಾರು ಕಾರಿನಷ್ಟೇ ಸಮಯ ಬೇಕಾಗುತ್ತದೆ. ಒಂದು ಪುಟ್ಟ ವಿಡಿಯೊ ತೆಗೆಯಲು ಪ್ರಯತ್ನಿಸಿದ್ದೆ. ಆದರೆ ಕೆಮರಾ ಮತ್ತದರ ಮೌಂಟ್ ಹೊಂದಾಣಿಕೆಯಾಗದೆ ನನ್ನ ತಲೆಯೇ ಚಿತ್ರದ ಅರ್ದ ಬಾಗ ಆವರಿಸುತ್ತದೆ ಎಂದು ತಡವಾಗಿ ಅರಿವಾಯಿತು. ಮೊದಲು ಈ ಕೆಮರಾ ಜತೆಗೆ ಉಪಯೋಗಿಸಿದ ಮೌಂಟ್ ಬೀಜಾಪುರದಿಂದ ಬರುವಾಗ ಬಸ್ಸಿನ ಮೇಲಿನ ಪ್ರಯಾಣದಲ್ಲಿ ಹುಡಿಯಾಗಿತ್ತು. ಮೊದಲೇ ಅರಿವಾಗಿದ್ದರೆ ಮೌಂಟಿನ ಜಾಗ ಬದಲಾಯಿಸುತ್ತಿದ್ದೆ.

ಮದ್ಯಾಹ್ನ ಸುಮಾರು ಮೂರುವರೆಗೆ ಮಂಗಳೂರಿನಿಂದ ಹೊರಟೆ. ವಾಪಾಸು ಬರುವಾಗ ಸ್ವಲ್ಪ ಹೆಚ್ಚು ಅಂದರೆ ಒಂದು ಬಾಟರಿಯ ಪೂರ್ತಿ ಚಾರ್ಜು (೧೦ Ah)   ಉಪಯೋಗವಾಗಿತ್ತು. ಮಂಗಳೂರಿನೊಳಗೆ ಹದಿನೈದು ಕಿಮಿ ಓಡಿಸಿದ ಕಾರಣ (4 Ah)  ಕಲ್ಲಡ್ಕ ದಾಟುವಾಗ ೨೦ Ah ಅಂದರೆ ಎರಡು ಬಾಟರಿಯ ಚಾರ್ಜು ಮುಗಿಸಿದ್ದೆ. ಮನೆಗೆ ತಲಪುವಾಗ ೨೩ Ah ಮುಗಿದಿತ್ತು. ಅಂದರೆ ಮಂಗಳೂರಿನಲ್ಲಿ ಅಶೋಕನ ಅಂಗಡಿಯಲ್ಲಿ ಮಾಡಿದ ಚಾರ್ಜು ನನ್ನನ್ನು ಕಲ್ಲಡ್ಕದಿಂದ ಮನೆಗೆ ತಲಪಿಸಿತು ಅನ್ನಬಹುದು.

ಹಾಗಾದರೆ ಸಲೀಸಾಗಿ ಮಂಗಳೂರಿಗೆ ಒಂದೇ ಬಾಟರಿಯನ್ನು ಅವಲಂಬಿಸಿ ಹೋಗಿ ಅಲ್ಲಿ ಮೂರು ಘಂಟೆ ಚಾರ್ಜಿಗಿಟ್ಟರೆ ಆರಾಮವಾಗಿ ವಾಪಾಸು ಬರಬಹುದು ಅಂದಾಯಿತು. ನಿನ್ನೆ ಕೆಲವೊಮ್ಮೆ ವಿಳಂಬವಾಗಿ GPS on ಮಾಡಿದ ಕಾರಣ ಪೂರ್ತಿ ದೂರ ನಿಖರವಾಗಿ ದಾಖಲಾಗಲಿಲ್ಲ. ಅದುದರಿಂದ ೯೦ ಕಿಮಿ ಮಿಕ್ಕಿದ ದೂರ ಪ್ರಯಾಣ ಮಾಡಿರಬಹುದು ಅನಿಸುತ್ತದೆ.

ಒಟ್ಟು  ೮೫೦ ವಾಟ್ಸ್ ವಿದ್ಯುತ್ ಖರ್ಚು ಅಂದರೆ ಸುಮಾರು ನಾಲ್ಕು ರೂಪಾಯಿ ಬೆಲೆಯ ವಿದ್ಯುತ್ ಬೆಂಬಲ ನನ್ನ ಪ್ರಯಾಣಕ್ಕೆ ಸಾಕಾಯಿತು. ಮನೆ ತಲಪುವಾಗ ನಾಲ್ಕು ಘಂಟೆ ಮೂವತ್ತ ಮೂರು ನಿಮಿಷ ಟ್ರೈಕ್ ಚಾಲನೆ ಮಾಡಿದ್ದೆ. ನಾನು ಕಾರಿನಲ್ಲಿ ಈ ಪ್ರಯಾಣ ಮಾಡಿದರೂ ಸುಮಾರು ಮೂರು ಘಂಟೆ ಬೇಕಾಗುತಿತ್ತು. ಹಾಗಾಗಿ ಟ್ರೈಕ್ ಪ್ರಯಾಣದಿಂದಾಗಿ ಬೇಕಾದ ಹೆಚ್ಚಿನ ಸಮಯ ಸುಮಾರು ಒಂದೂವರೆ ಘಂಟೆ ಮಾತ್ರ. ಇಲ್ಲಿ ನಾನು ಹೇಳಲಿಚ್ಚಿಸುವುದು ಈ ವಿದ್ಯುತ್ ಬೆಂಬಲದ ಪ್ರಯಾಣ ನಮಗೆ ಪ್ರಾಯೋಗಿಕ.

ನಿನ್ನೆಯ ವಿಜಯ ಕರ್ನಾಟಕದಲ್ಲಿ ನನ್ನ ಟ್ರೈಕ್ ಪ್ರವಾಸದ ಬಗೆಗೊಂದು ಬರಹ ಪ್ರಕಟವಾಗಿದೆ.   ಇದಕ್ಕೆ   ಐವತ್- ಮೂರರವ ಮೂರು ಚಕ್ರದ ಮೇಲೆ ಕುಳಿತ ಕಥೆ ವಿಕ ಚೆನ್ನಾಗಿ ಕೊಟ್ಟಿದೆ ಎಂದು ಅಶೋಕವರ್ಧನರು ಪ್ರತಿಕ್ರಿಯಿಸಿದ್ದಾರೆ.  ಸಂಪರ್ಕ ಕೊಂಡಿಗಳು  ಇಲ್ಲಿ ಮತ್ತು   ಇಲ್ಲಿವೆ. 


ಆದರೆ ಬಹಳ ಮುಖ್ಯವಾದ ವಿದ್ಯುತ್ ಬೆಂಬಲದ ಚಾಲನೆಗೆ ಅಗತ್ಯ ಪ್ರಾಮುಖ್ಯತೆ ದೊರಕಲೇ ಇಲ್ಲ ಎನ್ನುವುದು ನನಗೆ ಬಹಳ ಬೇಸರದ ವಿಚಾರ. ಈ ಲೇಖನದಲ್ಲಿ ಅರ್ಥ ಬರುವಂತೆ ಇದೊಂದು ವಿದ್ಯುತ್ ಚಾಲಿತ ವೀಲ್ ಚೇರ್ ಅಲ್ಲ - ವಿದ್ಯುತ್ ಬೆಂಬಲಿತ ಪೆಡಲಿಸುವ ಸೈಕಲ್. ಪ್ರವಾಸದ ಉದ್ದಕ್ಕೂ ಸುಮಾರು ಶೇಕಡಾ ಐವತ್ತು ನೂಕು ಬಲ ನನ್ನ ಕಾಲಿನಿಂದಲೇ ರವಾನೆಯಾಗಿದೆ.

ಮುಂದೆ ಸಾಗಲು ಅಡ್ಡಿಯಾಗುವ ಗಾಳಿಯ ತಡೆಯನ್ನು ಕನಿಷ್ಟಗೊಳಿಸುವ ಆಕಾರ - ರಿಕಂಬಂಟ್ ಅರ್ಥವನ್ನು ಬಾಟರಿ ಚಾಲನೆ ಅಂದಿದ್ದಾರೆ. ನನ್ನ ಅಂಗವಿಕಲತೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಆದರೂ ಒಟ್ಟಿನಲ್ಲಿ ಒಂದು ಹೊಸ ಚಿಂತನೆಗೆ ಅವಕಾಶವನ್ನು ದೊರಕಿಸಿಕೊಡುತ್ತದೆ.

ನಮ್ಮ ನಿತ್ಯದ ಓಡಾಟಕ್ಕೆ ಪರ್ಯಾಯವಾಗಬಲ್ಲ ಮಾನವ ಶ್ರಮ ಮತ್ತು ವಿದ್ಯುತ್ ಬೆಂಬಲ ಸಮ್ಮೀಲನವಾಗುವ ವಾಹನ ಹೊರತು ಇದು ಮೂಸಿಯಂನಲ್ಲಿಡುವ ಯಂತ್ರವಲ್ಲ.    ನಾನು ಮಾಡುತ್ತಿದ್ದೇನೆ,  ಹಾಗಾಗಿ   ಅನುಸರಿಸಿ ಅನ್ನುವ ಅರ್ಥದಲ್ಲಿ ಯಾರಿಗೂ ಇದನ್ನು ಉಪದೇಶಿಸುತ್ತಿಲ್ಲ.     ಪೆಟ್ರೋಲ್ ಬಳಕೆಗೆ ಪರ್ಯಾಯವಾಗಬಲ್ಲ  ಕಾರಣ  ಈ ನಿಟ್ಟಿನಲ್ಲಿ ಚಿಂತಿಸಿ ಎಂದಷ್ಟೇ ವಿನಂತಿಸಿಕೊಳ್ಳುತ್ತೇನೆ. ವಿದ್ಯುತ್ ಬೆಂಬಲಿತ ಚಾಲನೆಯ ಈ ಪರ್ಯಾಯದ ಬಗೆಗೆ ಜನಸಾಮಾನ್ಯರಿಗೆ ಅರ್ಥೈಸಲು ಒಂದು ಉತ್ತಮ ಅವಕಾಶ ತಪ್ಪಿಹೋಯಿತು ಅನ್ನುವ ನಿರಾಶೆ ನನಗೆ.

5 comments:

Rai said...

i was surprised wen i saw article related to your journey. i never knew about this and your world tour as i am living at your next door. all the best .... definetley u will succeed your planned india tour..

Keshav.Kulkarni said...

Well done! Inspiring.

Anonymous said...

ಪತ್ರಕರ್ತ ಎಂಬ ಸರ್ವಜ್ಞರು ಸದಾ ಹೀಗೇ! ಬಿಡುವು, ಬಿತ್ತರಿಸಲು ಜಾಗ ಮತ್ತು ಬಾಸು ಎಂಬ ಬ-ತಾಪತ್ರಯಗಳಲ್ಲಿ ಬಳಲುವ ಇವರ ಹಂಗಿಲ್ಲಾಂತ ಇಲ್ಲಿ ಬಂದ್ರೂ ಬ್ಲಾಗಿನಲ್ಲಿ ಬ ಇದೆಯಲ್ಲಾ :-)
ಅಗಲೀಕರಣ, ಚತುಷ್ಪಥೀಕರಣ, ಉನ್ನತೀಕರಣ ಎಂಬಿತ್ಯಾದಿ ಎಂದೂ ಮುಗಿಯುವಂತೆ ಕಾಣದ ಗೋಠಾಳೆಗಳಲ್ಲಿ ಬಿದ್ದಿರುವ ಜೋಡುಮಾರ್ಗಕ್ಕೆ ‘ಬಿಸಿ ರಸ್ತೆ’ ಎಂದರೆ ತಪ್ಪೇನೂ ಆಗದು.
ದ್ವಿಚಕ್ರವರ್ತಿ

ವನಿತಾ / Vanitha said...

wow!!..well done :-)
ನಿಂಗಳ ಮತ್ತು ಹೀರೋ ಸೈಕಲ್ ಫೋಟೋ ತುಂಬಾ ತುಂಬಾ ಚೆಂದ ಇದ್ದು ಗೋವಿಂದಣ್ಣ :)

Pejathaya said...

ಪತ್ರಿಕೆಗಳ ಲೇಖನಗಳು " ಮೇಲುನೋಟ " ಮಾತ್ರ ಒದಗಿಸಿದುವು. ತಮ್ಮ ಬ್ಲಾಗಿನ ಪೂರಕ ವಿವರಗಳನ್ನು ಓದಿದ ಮೇಲೆ ತಮ್ಮ ತ್ರಿಚಕ್ರಿಯ ಬಗ್ಗೆ ಸ್ವಲ್ಪ " ಅರಿವು " ಮೂಡಿತು. ತಾವು ತಮ್ಮ ತ್ರಿಚಕ್ರಿಯನ್ನು ಇತ್ತೀಚೆಗೆ ತಮ್ಮ ಕಾರಿನ ಬದಲು ಉಪಯೋಗಿಸುತ್ತಾ ಇರುವ ವಿಚಾರ ತಿಳಿದು ತಮ್ಮ ಪರಿಸರಸ್ನೇಹಿ ವಾಹನದ ಬಗ್ಗೆ ಅಪಾರ ಗೌರವ ಮೂಡುತ್ತಿದೆ. ತಮಗೆ ಶುಭ ಹಾರೈಕೆಗಳು. ತಮ್ಮ ಸಾಹಸ ಯಾತ್ರೆಗೆ ಸಹಾಯಕ ವಾಹನಹೊಂದಿದ Team Mates ಮತ್ತು ಧನಸಹಾಯ ನೀಡಿ ಪ್ರೋತ್ಸಾಹಿಸುವ Corporate ಪ್ರಾಯೋಜಕರು ಮೂಡಿಬರಲಿ! - ಪೆಜತ್ತಾಯ ಎಸ್. ಎಮ್.