Wednesday, December 10, 2008

ಅಂತೂ ಕೈಗೆ ಸಿಕ್ಕಿತು ನ್ಯಾಯಾಲಯ ತೀರ್ಪು

ರಿಲಿಯನ್ಸ್ ಸ್ಥಾವರವಾಣಿಯ ಕಳಪೆ ಗುಣಮಟ್ಟದ ಸೇವೆಗೆ ಅವರನ್ನು ಗ್ರಾಹಕ ನ್ಯಾಯಾಲಯಕ್ಕೆ ಒಯ್ದ ಸಂಗತಿ ಮೊದಲು ಬರೆದಿದ್ದೆ. ಕೊನೆಗೂ ಗ್ರಾಹಕ ನ್ಯಾಯಾಲಯದಿಂದ ನವೆಂಬರ್ ೧೪ ರಂದು ತೀರ್ಪು ಕೊಡಲ್ಪಟ್ಟಿತು. ಅನಂತರ ಇಪ್ಪತ್ತು ದಿನಗಳು ಕಳೆದು ಅಂತರ್ಜಾಲದಲ್ಲಿ ಲಬ್ಯವಾಯಿತು. ಇಲ್ಲಿದೆ ಸಂಪರ್ಕ ಕೊಂಡಿ.

http://cms.nic.in/ncdrcrep/judgement/18542167-07--14.11.08.htm

ಈ ಹೋರಾಟದ ಬಗೆಗೆ ಬರೆಯುವುದಾದರೆ ನಾನು ಈ ಬಗ್ಗೆ ಹತ್ತಕ್ಕೂ ಹೆಚ್ಚು ಬಾರಿ ನನ್ನ ಮನೆಯಿಂದ   ೫೦ ಕಿಮಿ ದೂರಲ್ಲಿರುವ  ಮಂಗಳೂರಿಗೆ ಹೋಗುವುದು ಅಗತ್ಯವಾಗಿತ್ತು. ನನ್ನ ಆರೋಗ್ಯದ ಬಗೆಗೆ ಅವರು ಅಲ್ಲಗಳೆಯಲು ಜಿಲ್ಲಾ ಆರೋಗ್ಯದಿಕಾರಿಗಳ ಪ್ರಮಾಣ ಪತ್ರ ಒದಗಿಸಿದ್ದೇನೆ. ಅವರು ನನ್ನ ದೂರುಗಳಿಗೆ ಸ್ಪಂದಿಸಲಿಲ್ಲ ಎನ್ನುವುದಕ್ಕೂ ಸಾಕಷ್ಟು ರುಜುವಾತು ಒದಗಿಸಿದ್ದೇನೆ. ಹತ್ತ್ತಕ್ಕೂ ಹೆಚ್ಚು e mail ಪಡಿಯಚ್ಚುಗಳು. ಅಸಂಖ್ಯ ದೂರವಾಣಿ ಕರೆಗಳು. ಇವೆಲ್ಲವೂ ಖರ್ಚಿನ ಬಾಬುಗಳು. ಕೊನೆಗೆ ಪರಿಹಾರದ ಮೊತ್ತ ನಾನು ಮಾಡಿದ ಖರ್ಚಿನ ಅರ್ಧ ಭಾಗವನ್ನೂ ತುಂಬಿ ಕೊಡದಿರುವುದು ವಿಷಾದನೀಯ.

ಕೆಲವೊಮ್ಮೆ ಪರಿಹಾರ ತೃಪ್ತಿಕರ ಎನಿಸುವುದಿಲ್ಲ. ತಪ್ಪು ರುಜುವಾತು ಪಡಿಸಿದಲ್ಲಿ ಕೂಡ ಸರಿಯಾದ ಪರಿಹಾರ ದೊರಕುವುದಿಲ್ಲ ಎಂದರೆ ಗ್ರಾಹಕರು ಏಕೆ ನ್ಯಾಯಾಲಯಕ್ಕೆ ಹೋಗುತ್ತಾರೆ ? ಇದು ಎಂತಹ ಸಂದೇಶ ರವಾನಿಸುತ್ತದೆ. ಯೋಚಿಸಿದರೆ ಈ ಗ್ರಾಹಕ ನ್ಯಾಯಾಲಯಕ್ಕೆ ದೂರು ಒಯ್ಯುವುದು ಎಂದರೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದಂತೆ. ಸೇವಾ ನ್ಯೂನತೆ ಸರಿಪಡಿಸಿಕೊಳ್ಳುವ ಒತ್ತಡ ಸದಾ ಸೇವೆ ಕೊಡುವವರ ಮೇಲಿರಬೇಕು. ಇಲ್ಲವಾದರೆ ಅವರು ನಡೆದದ್ದೇ ದಾರಿ.

ಲಕ್ಷಕ್ಕೊಬ್ಬ  ಗ್ರಾಹಕರು  ಇವರನ್ನು   ನ್ಯಾಯಾಲಯಕ್ಕೆ   ಕರೆದೊಯ್ಯುವುದು. ಮುಖ್ಯ  ಕಾರಣ  ರುಜುವಾತು ಸಂಗ್ರಹ   ಕಷ್ಟ.   ಅಲ್ಲೂ    ಬರೇ ಪುಡಿಗಾಸು ಪರಿಹಾರ ಕೊಡುವುದಾದರೆ ಆ ಕಂಪೇನಿಗಳಿಗೆ ತಿದ್ದಿಕೊಳ್ಳುವ ಅಗತ್ಯವೇ ಇರುವುದಿಲ್ಲ. ದೂರವಾಣಿ ಬಳಕೆದಾರ ಅಪೇಕ್ಷಿಸದ ಹಾಗೂ ಉಪಯೋಗಿಸದ ಸೇವೆಗೆ ಉದಾಹರಣೆ ಸಂಗೀತದ ಕಾಲ್ ಟ್ಯೂನ್ ಜೋತಿಷ್ಯ ಶಾಸ್ತ್ರ ಕ್ರಿಕೆಟು ಸುದ್ದಿ ಇತ್ಯಾದಿಗಳಿಗೆ ಹಣ ವರ್ಗಾವಣೆಯಾಗುವುದು ಸಾಮಾನ್ಯ ಎಂಬಂತಾಗಿದೆ. ಸಲೀಸಾಗಿ ಇಂತ ಕ್ಷೌರಕ್ಕೆ  ಕುಳ್ಳಿರುಸುತ್ತಾರೆ.   ನಂತರ ಇದರಿಂದ ಪಾರಾಗುವ ಬಗೆಗೆ ಅವರ ಗ್ರಾಹಕ ಸೇವಾ ಸಿಬಂದಿಗಳಲ್ಲೂ ಸ್ಪಷ್ಟ ಉತ್ತರವಿರುವುದಿಲ್ಲ.

ನಾವು ದಿನವೊಂದರಲ್ಲಿ ಕಾಣುವ ಅನ್ಯಾಯ ಅನಾಚಾರದ ಬೆನ್ನಟ್ಟಲು ಈ ಜೀವಮಾನವೇ ಸಾಲದು. ನಮ್ಮ ಹಳ್ಳಿ ರಸ್ತೆಯಲ್ಲಿ ಕೇರಳಕ್ಕೆ ಕಾನೂನು ಬಾಹಿರವಾಗಿ ಮರಳು ಸಾಗಿಸುವ ಲಾರಿಗಳು ಪುನಃ ಪ್ರತ್ಯಕ್ಷವಾಗಿವೆ. ಯಾರೂ ಮಾತನಾಡುತ್ತಿಲ್ಲ. ದೆಹಲಿಯಿಂದ ಬಂದ ಕೋಟಿ ರೂಪಾಯಿ ನುಂಗಿದ ನಮ್ಮ ಹಳ್ಳಿ ರಸ್ತೆಯಲ್ಲಿ ಆರು ತಿಂಗಳಲ್ಲೇ  ಹೊಂಡಗಳು ಕಾಣಲು ಪ್ರಾರಂಬವಾಗಿವೆ. ಎಲ್ಲರೂ ಸುಮ್ಮನಿದ್ದಾರೆ. ನಾಲ್ಕಾರು ಬಿಎಸೆನೆಲ್ ಟವರ್ ಗಳು ಹತ್ತು ಕಿಮಿಯೊಳಗಿದ್ದು ಒಮ್ಮೊಮ್ಮೆ ನಿಲುಕುವುದಾದರೂ ನಮ್ಮ ಮೊಬೈಲ್ ತರಂಗ ಸೂಚನೆ ದಿನದ ಹೆಚ್ಚಿನ ಬಾಗ ತೋರಿಸುವುದು ಶೂನ್ಯ. ಪಟ್ಟಣದ ಅಂಗಡಿಗೆ ಹೋದರೆ ಅಲ್ಲಿ ಕಂಪ್ಯುಟರ್ ಬಳಸಿ ಹೊಸ ರೀತಿಯ ಟೋಪಿ ಹಾಕಿಸ್ಕೊಳ್ಳುವ ಅವಕಾಶ. ಎಲ್ಲ ತೇರಿಗೆಗಳು ಸೇರಿದ ಮಾರಾಟ ದರಕ್ಕೆ ವಾಟ್ ಸೇರಿಸುವುದು ಮೇಲ್ನೋಟಕ್ಕೆ ನಮಗೆ ಗೊತ್ತಾಗದ ವಿಚಾರ.

ಶ್ರೀ ಶಿವರಾಮ ಕಾರಂತರು ಹೇಳಿದಂತೆ ಸಾಮಾನು ಕದ್ದರೂ ಕಳ್ಳ ಸಮಯ ಕದ್ದರೂ ಕಳ್ಳ. ಹೀಗೆ ಸೇವಾ ನ್ಯೂನತೆ ಮತ್ತು ಭ್ರಷ್ಟಾಚಾರ ಎರಡೂ ಸಮಾಜಕ್ಕೆ ದ್ರೋಹವೇ.     ಈ   ತರಹದ  ಹೋರಾಟ  ಎಂದರೆ  ಒಂದು  ರೀತಿಯಲ್ಲಿ  ಪ್ರವಾಹದ  ವಿರುದ್ದ  ಈಜುವುದು.  ಬೇರೆ   ಕೆಲಸ  ಇಲ್ಲವೇ  ಎಂಬ  ಮೂದಲಿಕೆ  ಕೇಳಲು  ನಾವು ತಯಾರಿರಬೇಕಾಗುತ್ತದೆ.   ಎಲ್ಲರೂ ಅವರಿವರು ಸರಿ ಮಾಡಲೆಂದು ಪ್ರತಿಭಟಿಸಲೆಂದು ಕಾಯುತ್ತಾರೆ. ಇದು ಬೆಕ್ಕಿಗೆ ಗಂಟೆ ಯಾರು ಕಟ್ಟುವುದು ಎನ್ನುವಂತಹ ಸಮಸ್ಯೆ.

1 comment:

Lakshmi Shashidhar Chaitanya said...

nija . tumbaa nija. aadru...satyakke jaya aaytalla, adakke santosha padabeku.