Friday, November 21, 2008

ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್

ಅಂತೂ ಗೆದ್ದದ್ದು ನಾವೇ. ಇತ್ತೀಚೆಗೆ ನಾನೊಂದು ಕದನದಲ್ಲಿ ತೊಡಗಿಸಿಕೊಂಡಿದ್ದೆ.ಕಳಪೆ ಗುಣಮಟ್ಟದ ಸೇವೆಗೆ ರಿಲಿಯನ್ಸ್ ದೂರಸಂಪರ್ಕ ಸಂಸ್ಥೆಯನ್ನು ಗ್ರಾಹಕ ನ್ಯಾಯಾಲಯಕ್ಕೆ ಅನಿವಾರ್ಯವಾಗಿ ಎಳೆಯಬೇಕಾಯಿತು.  ಮೂರು ತಿಂಗಳಿನಿಂದ ವಾಯಿದೆಯಾಗುತ್ತಿದ್ದ  ತೀರ್ಪು ಕೊನೆಗೂ  ಹೊರಬಂದಿದೆ.


ನನ್ನ ಮನೆಯ ದೂರವಾಣಿ ಕಾಡಿನ ಮದ್ಯೆ ಸರಿಗೆ ಬರುವ ಕಾರಣ ಅಗಾಗ ಹಾಳಾಗುತಿತ್ತು. ನನ್ನ ದೈಹಿಕ ಸಮಸ್ಯೆ ಹಾಗೂ ಹಳ್ಳಿಯಲ್ಲಿ ವಾಸವಾಗಿರುವ ಕಾರಣ ನಂಬಲರ್ಹ ಇನ್ನೊಂದು ದೂರವಾಣಿ ತುರ್ತು ಅಗತ್ಯಕ್ಕೆ ಇರಲಿ ಎಂದು ರಿಲಿಯನ್ಸ್ ಸ್ಥಾವರವಾಣಿ ಪಡಕೊಂಡೆ.

ರಿಲಿಯನ್ಸ್ ದೂರವಾಣಿಯದು ಅತ್ಯಾದುನಿಕ ಸಂಪೂರ್ಣ ಯಂತ್ರವೇ ನಿಯಂತ್ರಿಸುವ ಜಾಲ. ಎರಡು ತಿಂಗಳ ಉತ್ತಮ ಸೇವೆ. ಒಮ್ಮೆ ತೆರ ಬೇಕಾದ ಮೊತ್ತ  ಮತ್ತು ಹಣ ಕಟ್ಟಲು ಕೊನೆಯ ದಿನಾಂಕ ಎರಡನ್ನೂ ನಮೂದಿಸದ ಬಿಲ್ ನನ್ನ ಕೈಸೇರಿತು. ಬಿಲ್ಲಿನ ಮೊತ್ತಕ್ಕಿಂತ ಹೆಚ್ಚು ನನ್ನ ಹಣ ಅವರಲ್ಲಿದ್ದ ಕಾರಣ ನಾನು ಸುಮ್ಮನಿದ್ದೆ.

ಹತ್ತು ದಿನ ಕಳೆದು . ರಿಲಿಯನ್ಸ್ ಕಛೇರಿಯಿಂದ ಹಣ ಕಟ್ಟಲು ಆದೇಶಿಸುವ ಹಾಗೂ ಸಂಪರ್ಕ ಕಡಿತ ಸೂಚಿಸುವ ಕರೆಗಳನ್ನು ಮಾಡಿದರು. ಆಗ ನಾನು ನನ್ನ ಹಣ ನಿಮ್ಮಲ್ಲುಂಟು. ಯಾವುದೇ ಬಾಕಿ ಇಲ್ಲ. ದಯವಿಟ್ಟು ಕಡಿತಮಾಡಬೇಡಿ. ಅಗತ್ಯವಿದ್ದರೆ ಪಟ್ಟಣಕ್ಕೆ ಹೋದಾಗ ಖಂಡಿತ ಕಟ್ಟುತ್ತೇನೆ ಎಂದು ಪರಿಪರಿಯಾಗಿ ವಿನಂತಿಸಿದೆ. ಆದರೂ ಸಂಪರ್ಕ ಕಡಿತಗೊಂಡಿತು. ಒಂದು ವಾರ ಬಳಿಕ ಹಣ ಕಟ್ಟಿ ಸಂಪರ್ಕಕ್ಕೆ ಜೀವ ತುಂಬಿದೆ.

ತೆರೆಮರೆಯಲ್ಲಿ ಆದದ್ದೇನು ಅಂದರೆ ನನ್ನ ಹಣ ಮತ್ತು ಜೀವಾವದಿ ಅವದಿ ಅರ್ಜಿ ಬಾಕಿಯಿಟ್ಟು ಬಿಲ್ ಮಾಡಿದ್ದು. ಅನಂತರ ಆ ಅರ್ಜಿಯನ್ನು ಅಂಗೀಕರಿಸಿ ಹಣ ವರ್ಗಾಯಿಸಿದಾಗ ನನ್ನ ಖಾತೆಯಲ್ಲಿ ಕನಿಷ್ಟ ಠೇವಣಿಯಲ್ಲಿ ಕೊರತೆ ಕಂಪ್ಯುಟರಿಗೆ ಕಂಡಂತಾಯಿತು. ಸಂಪರ್ಕ ಕಡಿಯುವಾಗಲೂ ನನ್ನ ಖಾತೆಯಲ್ಲಿ ಹಣ ಕೊರತೆ ಇರಲಿಲ್ಲ. ಆದರೂ ಯಂತ್ರಕ್ಕೆ ಒದಗಿಸಿದ ಮಾನದಂಡಗಳ ಅನುಸರಿಸಿ ಅದು ನನ್ನ ಬಾಕಿದಾರ ಎಂದು ಪರಿಗಣಿಸಿ ಸಂಪರ್ಕಕ್ಕೆ ಕತ್ತರಿ ಪ್ರಯೋಗವಾಯಿತು.

ಕಛೇರಿಗಳಲ್ಲಿ ಗ್ರಾಹಕ ಸಂಪರ್ಕ ಸ್ಥಾನಗಳಲ್ಲಿ ಒರಟು ವರ್ತನೆಯ ಬೇಜವಾಬ್ದಾರಿ ವ್ಯಕ್ತಿಗಳ ನೇಮಿಸುತ್ತಿರುವುದೂ ಸಮಸ್ಯೆಗೆ ಕಾರಣಗಳಲ್ಲೊಂದು.  ಗೆಳೆಯ   ದಿನಕರ್ ಹೇಳುವಂತೆ ಹಲವರಿಗೆ ಅವರ ಚೆಲುವಿಗೆ ಕೆಲಸ ಸಿಕ್ಕಿರುತ್ತದೆ ಹೊರತು ವ್ಯವಹಾರಿಕ ಕುಶಲತೆಗೆ ಅಲ್ಲ. ಬಾಲ ನೋಡಿ ಕುದುರೆ ಕೊಂಡುಕೊಂಡಂತೆ.  ಪರಿಣಾಮ ನಾವು ಪಡ್ಚ ಆಗುವುದು.

ಕಂಪ್ಯುಟರ್ ಕಕ್ಕುವ ಮಾಹಿತಿಯನ್ನು ವಿಷ್ಲೇಸಿಸುವ ಸಾಮರ್ಥ್ಯ ಇವರಿಗೆ ಇಲ್ಲದೆ ತೊಂದರೆ ಉಳಿದುಕೊಳ್ಳುತ್ತದೆ. ಡಾಕ್ಟ್ರೆ ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ ಎನ್ನುವ ರೋಗಿಯ ಮಾತಿಗೆ ನೀನು ಬದುಕಿದ್ದಿ ಅಂತ ನಾನು ಹೇಳಬೇಕು ಎಂದು ಡಾಕ್ಟ್ರು ಹೇಳಿದಂತೆ ಇವರ ಪ್ರತಿಕ್ರಿಯೆ.  ಕಂಪ್ಯುಟರ್ ತಂತ್ರಾಂಶ ಬರೆಯುವಾಗ ಹಾಗೂ ಮಾಹಿತಿ ಉಣಿಸುವಾಗ ಬಹಳ ಜಾಗ್ರತೆ ವಹಿಸಿರುತ್ತಾರೆ. ಸಂಬಾವ್ಯ ಅಡಚಣೆಗಳನ್ನೆಲ್ಲ ಊಹಿಸಿ ಪರಿಹಾರ ರೂಪಿಸಿರುತ್ತಾರೆ. ಆದರೂ ಕೆಲವು ತಪ್ಪುಗಳು ನುಸುಳುತ್ತವೆ. ಜವಾಬ್ದಾರಿ ಕುರ್ಚಿಯಲ್ಲಿರುವವರಿಗೆ ಗೊತ್ತಾದರೆ ಇಂತಹ ಸಮಸ್ಯಯ ಜಾಡು ಹಿಡಿದು ಹಿಂಬಾಲಿಸಿ ಸರಿಪಡಿಸುತ್ತಾರೆ. . ತಕ್ಷಣ ತಮ್ಮ ಹಿರಿಯ ಅದಿಕಾರಿಗಳ ಸಂಪರ್ಕಿಸುವಂತಹ ಪರ್ಯಾಯೊಪಾಯಗಳ ಕೈಗೊಳ್ಳುವ ಬದಲು ಗ್ರಾಹಕರನ್ನು ರೇಗುವುದು ಸುಲಭದ ದಾರಿ.

ವಾರಕ್ಕೊಮ್ಮೆ ಇ-ಮೈಲ್ ನೆನಪೋಲೆ ರವಾನಿಸುತ್ತಿದ್ದೆ. ಪ್ರತಿ ಸಲ ದೂರು ದಾಖಲಾದಾಗಲೂ ಸ್ವಿಕೃತ ಉತ್ತರದೊಂದಿಗೆ ಕ್ರಮ ಸಂಖ್ಯೆ ಸಿಗುತ್ತಿತ್ತು. ಜತೆಯಲ್ಲಿ ನಮ್ಮ ತಂತ್ರಜ್ನರು ನಿಮ್ಮ ಸಮಸ್ಯೆ ವಿಚಾರದಲ್ಲಿ ಕಾರ್ಯನಿರತರಾಗಿದ್ದಾರೆ ಎನ್ನುವ ಸಮಜಾಯಿಷಿ. ಒಮ್ಮೆ ನಿಮ್ಮ ತಂತ್ರಜ್ನರು ಮಂಗಳೂರಿನಿಂದ ತೆವಳಿಕೊಂಡು ಬಂದರೂ ಈಗಾಗಲೇ ತಲಪಬೇಕಾಗಿತ್ತು ಎನ್ನುವ ನನ್ನ ಪತ್ರಕ್ಕೂ ಸಿಕ್ಕಿದ್ದು ಕ್ರಮ ಸಂಖ್ಯೆ ಮಾತ್ರ.

ನಿಸ್ತಂತು ದೂರವಾಣಿ ಸಂಪರ್ಕ ನಿರ್ದಿಷ್ಟ ವಿಳಾಸಕ್ಕೆಂದು ಕೊಡಲ್ಪಡುತ್ತದೆ. ಅದನ್ನು ತಾಲೂಕಿನೊಳಗೆ ಜಾಗ ಬದಲಾಯಿಸಿದರೂ ಸಮಸ್ಯೆ ಇಲ್ಲ. ಕಂಪೇನಿಯವರು ಆಚೆ ಈಚೆ ತಾಲೂಕಿನಲ್ಲಿ ಹೊಸ ಹೊಸ ಹೆಚ್ಚು ಶಕ್ತಿಯುತವಾದ ಟವರ್ ಹಾಕಿದಾಗ ನನ್ನ ದೂರವಾಣಿ ಸ್ಥಬ್ದವಾಗುತಿತ್ತು. ಸರಿಪಡಿಸಲು ಸರಳ ವಿಷಯವಾದ ನನ್ನ ದೂರವಾಣಿಗೆ ಹೊಸ ಸಂಖ್ಯೆ ಕೊಡಲು ಹಲವು ಬಾರಿ ದೊರು ಕೊಟ್ಟರೂ ಸಹಾ   ಎರಡು ಸಲವೂ  ಒಂದೂವರೆ ತಿಂಗಳು ತೆಗೆದುಕೊಂಡು ಸತಾಯಿಸಿದಾಗ ನಾನು ತಾಳ್ಮೆ ಕಳಕೊಂಡೆ. ಹೀಗೆ ಮುನ್ನೂರು ದಿನದಲ್ಲಿ ನೂರು ದಿನಕ್ಕೊ ಹೆಚ್ಚು ಸೇವೆ ವಂಚಿತ ಗ್ರಾಹಕನಾಗಿ ನಾನು ಕಾನೂನಿಗೆ ಶರಣಾದೆ.

ದಾಖಲೆಗಳ ಸಮೇತ ನ್ಯಾಯವಾದಿ ಶ್ರಿ ದರ್ಬೆ ಈಶ್ವರ ಭಟ್ಟರು ನನ್ನ ಪರವಾಗಿ ಸಮರ್ಥವಾಗಿ ವಾದಿಸಿದರು ಹಾಗೂ ನ್ಯಾಯಾಲಯ ನಾನು ಹಾಜರುಪಡಿಸಿದ ದಾಖಲೆಗಳ ಪರಿಶೀಲಿಸಿ ನಮ್ಮ   ವಾದವನ್ನು ಪುರಸ್ಕರಿಸಿತು. ಇಷ್ಟೆಲ್ಲ  ಆದರೂ  ನನಗೆ  ಸಿಕ್ಕಿದ್ದು  ಜುಜುಬಿ  ಪರಿಹಾರ.        ಈಗ    ಶಸ್ತ್ರ ಕ್ರಿಯೆ   ಯಶಸ್ವಿ  ಮತ್ತು  ರೋಗಿ  ಸತ್ತ  ಎನ್ನುವ  ಅನುಭವ.

ದಕ್ಷಿಣ  ಕನ್ನಡ   ಜಿಲ್ಲಾ ಗ್ರಾಹಕ ವೇದಿಕೆ    ಈ ರಿಲಯನ್ಸ್ ಸಂಸ್ಥೆಯ ಸೇವಾ ನ್ಯೊನತೆಗಾಗಿ ಎರಡು  ಸಾವಿರ   ರೊಪಾಯಿ ಪರಿಹಾರ ಒಂದು  ಸಾವಿರ     ರೂಪಾಯಿ ನ್ಯಾಯಾಲಯ ವೆಚ್ಚ ನೀಡುವಂತೆ ತೀರ್ಪು ನೀಡಿತು.    ಹೆಚ್ಚಿನ  ವಿವರಗಳು  ಇನ್ನೂ  ಅಲಭ್ಯ.  ನಾನು  ಇದಕ್ಕೆ  ಮಾಡಿದ  ಒದ್ದಾಟ   ಹಾಗೂ  ನನ್ನ  ಅಭಿಪ್ರಾಯ    ಇನ್ನೊಮ್ಮೆ  ಬರೆಯುವೆ.

ಟೆಲಿಫೋನ್ ವಿಚಾರದಲ್ಲಿ ತಿಂಗಳುಗಟ್ಟಲೆ ಸತಾಯಿಸಿದಂತಹ ನನ್ನ ಅನುಭವಕ್ಕೆ ಹೋಲುವಂತಹ ಕಥೆ ಇಂಗ್ಲೇಂಡಿನಿಂದಲೂ ಬಂದಿದೆ. ಮನೆಯವರಿಗೆ ಸ್ಟ್ರೋಕ್ ಆದ ಕ್ಷಣದಲ್ಲೇ ಗ್ರಾಮೀಣ ಪ್ರದೇಶದ ಆ ದೂರವಾಣಿ ಸಂಪರ್ಕ ಕತ್ತರಿಸಲ್ಪಟ್ಟಿದೆ. ವಿಷಯ ಅರಿತ ದೂರದಲ್ಲಿರುವ ಮಗಳಿಂದ ದೂರವಾಣಿ ಕಛೇರಿಗೆ ಹಲವಾರು ಕರೆಗಳು. ಒಂದಂತೂ 80 ನಿಮಿಷದ ದೀರ್ಘ ಹಾಗೂ ನಿಷ್ಪ್ರಯೋಜಕ ಸಂಬಾಷಣೆ. ಅಂತೂ 40 ಘಂಟೆಗಳ ಅನಂತರ ಸಂಪರ್ಕ. ಅನಂತರ ಗುಣಮುಖಗೊಳ್ಳುತ್ತಿದ್ದ ರೋಗಿಗೆ ತಪ್ಪೊಪ್ಪಿಗೆಗಳ ಸುರಿಮಳೆ. ಗ್ರಾಹಕರ ಬಗೆಗಿನ ಕಾಳಜಿ ಹೆಚ್ಚಿರುವ ಇಂಗ್ಲೇಂಡಿನಲ್ಲಿ ಹೀಗಾದರೆ ನಮ್ಮಲ್ಲಿ ??? ನಾನು ಹೇಳಲಿಚ್ಚಿಸಿದ ಈ ಗ್ರಾಹಕ ಮತ್ತು ಸೇವೆ ಪೊರೈಸುವವರ ನಡುವಿನ ವಿಚಾರವನ್ನು ಇಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ.

ಎರಡೆರಡ್ಲಿ ನಾಲ್ಕು ಎನ್ನುವ ಲೆಕ್ಕದಲ್ಲಿ ಕಂಪ್ಯುಟರ್ ತಪ್ಪುವುದಿಲ್ಲ. ಕಂಪ್ಯುಟರ್ ಕೊಡ ತಪ್ಪಿ ಬೀಳಬಹುದೆನ್ನುವ ನನ್ನ ಅನುಭವಗಳಲ್ಲಿ ಸಮಸ್ಯೆ ಇರುವುದು ತಂತ್ರಾಂಶದಲ್ಲಿರುವ ಅಂದಿನ ವರೆಗೆ ಗುರುತಿಸಲ್ಪಡದ ಹುಳುಕು. ಮುಂದೆ ಕಂಪ್ಯುಟರ್ ಅವಲಂಬನೆ ಹೆಚ್ಚಿದಂತೆ ಇಂತಹ ತೊಂದರೆ ಆಗಾಗ ಮರುಕಳಿಸಬಹುದು. ಮಾಮೂಲಿ ರೀತಿಯ ಸಮಸ್ಯೆಗಳ ನಿವಾರಣೆಗೆ ನಿರ್ದಿಷ್ಟ ವ್ಯವಸ್ತೆ ಚೆನ್ನಾಗಿ ಕೆಲಸ ಮಾಡುತ್ತದೆ. ಈ ರೀತಿ ಅನಿರೀಕ್ಷಿತವಾಗಿ ತಲೆ ಚಚ್ಚಿಕೊಳ್ಳುವಂತಹ ಸಮಸ್ಯೆಗಳು ಎದುರಾಗಬಹುದೆಂಬ ತಿಳುವಳಿಕೆ ನಮ್ಮಲ್ಲಿದ್ದರೆ ಪರಿಹಾರ ಕಾಣುವುದು ಸುಲಬವೆನ್ನುವ ನೆಲೆಯಲ್ಲಿ ಈ ಬರಹ ಬರೆದಿದ್ದೇನೆ.

ದೂರವಾಣಿ  ದೈತ್ಯನೊಂದಿಗೆ   ನಡೆದ    ಈ  ಹೋರಾಟಕ್ಕೆ    ನಮ್ಮ   ಕುಟುಂಬ ವೈದ್ಯರಾದ   ಡಾ| ಕೆ. ಜಿ. ಭಟ್ ಅವರು ಕೊಟ್ಟ   ಮಾರ್ಗದರ್ಶನ   ನೈತಿಕ  ಬೆಂಬಲವನ್ನೂ  ಸ್ಮರಿಸಿಕೊಳ್ಳುತ್ತೇನೆ.     . ಈ ಅನುಭವ ನಿಮಗೂ ಆಗಬಹುದು ಎನ್ನುವ ವಿಚಾರ ನೆನಪಿರಲಿ.

4 comments:

ಮಹೇಶ್ ಪುಚ್ಚಪ್ಪಾಡಿ said...

ಉತ್ತಮವಾದ ಕೆಲಸ ಮಾಡಿದ್ದೀರಿ. ಗ್ರಾಹಕರನ್ನು ಯಾವಾಗಲೂ ಸತಾಯಿಸುವ ಇಂತಹ ದೈತ್ಯ ಕಂಪನಿಗಳಿಗೆ ಇದೊಂದು ಶಾಕ್ ಆಗಲಿ.

Govinda Nelyaru said...

ಶ್ರೀ ಅಶೋಕವರ್ಧನರು ಪತ್ರ ಬರೆಯುತ್ತಾರೆ :

ಪ್ರಿಯ ಗೋವಿಂದ

ನಿನ್ನನ್ನು ಈ ಮಾಧ್ಯಮದಲ್ಲೂ ಭೇಟಿಯಾಗಿ ಸಂತೋಷವಾಯ್ತು.

ನಿನ್ನ ರಿಲಾಯನ್ಸ್ ಹೋರಾಟ ನೋಡಿದೆ. ಅಲ್ಲಿ ಪ್ರತಿಕ್ರಿಯೆ ತುಂಬಲು ಹೊರಟು (ನನ್ನ ಪರಿಮಿತ ಕಂಪ್ಯೂ ಜ್ಞಾನದಲ್ಲಿ) ಸೋತೆ. ಅದಕ್ಕೆ ಇಲ್ಲಿ ಬರೆದಿದ್ದೇನೆ. ನೀನೇ ಅಲ್ಲಿಗೆ ಬೇಕಾದರೆ ಸೇರಿಸಿಬಿಡು, ಬೇರೆಯವರಿಗೆ ಪ್ರೇರಣೆ ಕೊಡಲು ಸಹಕಾರಿಯಾದೀತು (ನನ್ನ ಡಂಗುರ ಹೊಡೆಯುವ ಹುಚ್ಚಲ್ಲ!) ಕರ್ನಾಟಕ ಬ್ಯಾಂಕ್ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ನನ್ನ ಹಳೆಯ ಖಾತೆಗೆ ಏನೆಲ್ಲಾ ಸೌಲಭ್ಯಗಳನ್ನು ಅಯಾಚಿತವಾಗಿ ಕೊಟ್ಟಿತು. ಆದರೆ ಸ್ವಲ್ಪೇ ಸಮಯದಲ್ಲಿ ದೈನಂದಿನವ ವ್ಯವಹಾರಕ್ಕೆಲ್ಲ ಏನೇನೋ ದಂಡ ಹಾಕಲು ಸುರು ಮಾಡಿತು. ಮ್ಯಾನೇಜರನ್ನು ಕೇಳುವಾಗ "ಇಲ್ಲಿಲ್ಲ, ಅದು computer generated ಅಷ್ಟೆ. ತಿಂಗಳ ಕೊನೆಗೆ ನಾನು reverse ಮಾಡ್ತೇನೆ" ಎಂದರು. "ಕಂಪ್ಯೂಟರ್ ಹಿಂದೆ ಮನುಷ್ಯನೇ ಇರಬೇಕಲ್ಲವೇ ಸ್ವಾಮೀ? ಅನಾವಶ್ಯಕ ಹಣ ಸೇರಿಸುವುದು ಮತ್ತೆ ಕಳೆಯುವುದು ಎಲ್ಲಾ ಲೆಕ್ಕಗಳ ರಗಳೆ ಕಡಿಮೆ ಮಾದಿ" ಎಂದೆ, ಪ್ರಯೋಜನವಾಗಲಿಲ್ಲ. ಪ್ರಧಾನ ಕಛೇರಿಯ ವಿಭಾಗೀಯ ಮುಖ್ಯಸ್ಥನನ್ನೂ ನೋಡಿದೆ - ಪ್ರಯೋಜನವಾಗಲಿಲ್ಲ. ಅಢ್ಯಕ್ಷ ಅನಂತಕೃಷ್ಣ ನನಗೆ ಅಪರಿಚಿತರಲ್ಲ. ಅವರಿಗೆ ನೇರ ಪತ್ರ ಬರೆದೆ. ೨೪ ಗಂಟೆಯ ಒಳಗೆ ಎಲ್ಲಾ ರಿಪೇರಿ ಮಾಡಿದರು. ಮತ್ತೆ ಅವರ ವೈಯಕ್ತಿಕ ಕಾರ್ಯದರ್ಶಿಯ ಮೂಲಕ ನನ್ನ ಬಿಡುವು ಕೇಳಿಕೊಂಡು ಸ್ವತಃ ಅವರೇ ಹತ್ತು ಮಿನಿಟು ಮಾತಾಡಿ "ನಮ್ಮ ಕಾರ್ಯಕ್ರಮಗಳ feedback ಕೊಡಬೇಕಾದ ಮ್ಯಾನೇಜರುಗಳು ಅನಾವಶ್ಯಕ ವಿಧೇಯತನದಲ್ಲಿ ಅವರ ಮಟ್ಟದಲ್ಲೇ ಸುಧಾರಿಸಲು ತೊಡಗುತ್ತಾರೆ. ಪ್ರಸಂಗಗಳ ತಾರ್ಕಿಕ ಸತ್ಯವನ್ನು ಕಂಡುಕೊಂಡರೆ ಇಂಥಾ ಸಮಸ್ಯೆಗಳು ಬರುವುದಿಲ್ಲ. ನಿಮಗೆ ಉಪದ್ರ ಕೊಟ್ಟದ್ದಕ್ಕೆ ಕ್ಷಮೆಯಿರಲಿ. ಮುಂದೆ ಇನ್ನೇನಾದರೂ ಇದ್ದರೆ ಹೀಗೆ ತಿಳಿಸಲು ಸಂಕೋಚ ಮಡಬೇಡಿ"

ಭಾರತ ಚಲನಚಿತ್ರದ ಮಹಾಪ್ರದರ್ಶನ ಗೋವಾದಲ್ಲಿ ನಡೆಯುತ್ತಿದೆ. ಅಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಕನ್ನಡದ ಮೂರರಲ್ಲಿ ಅಭಯನ ಚೊಚ್ಚಲ ಚಿತ್ರ ಗುಬ್ಬಚ್ಚಿಗಳು ಒಂದು. ಅವನು ಬೆಂಗಾಳೂರಿನಿಂದ ನೇರಾಲ್ಲಿಗೆ ಹೋಗಿದ್ದ. ನಾನು ಆದಿತ್ಯವಾರ ರಾತ್ರಿ ಬಸ್ಸಿನಲ್ಲಿ ಹೋಗಿ ಸೊಸೆಯನ್ನ ಅವನ ಜೊತೆಗೆ ಬಿಟ್ಟು ಈಗಶ್ಟೇ ಮರಳಿದೆ.
ಸದ್ಯಕ್ಕಿಷ್ಟೇ.

ಇಂತು ನಿನ್ನ ವಿಶ್ವಾಸಿ

ಅಶೋಕವರ್ಧನ


--
Athree Book Center
PH: +91-824-2425161
Blog: athree.wordpress.com

ವಿ.ರಾ.ಹೆ. said...

ತೊಂದರೆಗೊಳಗಾದ ಎಷ್ಟೋ ಜನರಲ್ಲಿ ಗೊಣಗಾಡಿ ಸುಮ್ಮನಾಗುವವರೇ ಹೆಚ್ಚು. ಹೀಗೆ ಕೆಲವರಾದರೂ ಕಾನೂನಿನ ಪ್ರಕಾರವೋ ಇನ್ಯಾವ ರೀತಿಯಲ್ಲಾದರೋ ಪ್ರತಿಭಟನೆ ತೋರಿದರೆ ನಿಜಕ್ಕೂ ಸೇವೆ ಉತ್ತಮಗೊಳ್ಳಬಹುದು. ಧನ್ಯವಾದ.

Govinda Nelyaru said...

ಪ್ರಿಯ ವಿಕಾಸ್

ನಿಮ್ಮ ಮೆಚ್ಚುಗೆಯ ಮಾತಿಗೆ ಕೃತಜ್ನತೆಗಳು. ಅಂದ ಹಾಗೆ ಹೇಗಿದೆ ಇಟಲಿ. ಮಾರ್ಚು ೧೯೮೫ ರಲ್ಲಿ ರೋಮ ಫಿರಂಜೆ ಮಿಲಾನೋ ಕೊಮೊ ಹೀಗೆ ಸಾಗಿತ್ತು ನನ್ನ ಸೈಕಲ್ ಸವಾರಿ.

ಗೋವಿಂದ