Friday, February 27, 2009

ಸಮತೋಲನ ಪಶು ಆಹಾರದ ಮುಖ್ಯ ಅಂಶ ಕಾಣೆ

ಸಮತೋಲನ ಪಶು ಆಹಾರದಲ್ಲಿ ಪ್ರಮುಖ ಅಂಶವಾದ   ಖನಿಜ ಮಿಶ್ರಣ ಮಾರುಕಟ್ಟೆಯಲ್ಲಿ  ದುಬಾರಿ  ಹಾಗೂ  ಕಾಣೆಯಾಗಿರುವುದು  ಕಳವಳಕಾರಿ   ವಿಚಾರ.   ಮಾರುಕಟ್ಟೆಯಲ್ಲಿ  ಕಿಲೋ  ಒಂದಕ್ಕೆ   ಸುಮಾರು ನಲುವತ್ತು ರೂಪಾಯಿ ಮತ್ತು ಹಾಲು ಮಂಡಳಿ ಮೂವತ್ತಕ್ಕೆ ಮಾರುತ್ತಿದ್ದ ಖನಿಜ ಮಿಶ್ರಣದ ಕ್ರಯ ಇತ್ತೀಚಿನ ದಿನಗಳಲ್ಲಿ ಬಹಳ ಏರುತ್ತಾ ಹೋಗಿದೆ.  ಒಂದು   ಹೆಸರಾಂತ  ಕಂಪೇನಿ  ಮಾಲು  ತೊಂಬತ್ತು  ರೂಪಾಯಿ   ತಲಪಿದೆ.   ಡಾಕ್ಟರಲ್ಲದ ಡಾಕ್ಟ್ರಿಗೆ ಹಾಗೂ ಮಣ್ಣಿನ ಮಗನ ಮಗನಿಗೆ ಹಾಲು ಮಂಡಲಿ ರಾಜಕೀಯದ ಮದ್ಯೆ ಇದಕ್ಕೆ ಗಮನ ಹರಿಸಲು ಪುರುಸೊತ್ತಿಲ್ಲ. ಪರಿಣಾಮವಾಗಿ ನಮ್ಮೂರ ಹಾಲು ಖರೀದಿ ಸಂಘಗಳಲ್ಲಿ ದೊರಕುತ್ತಿದ್ದ ಖನಿಜ ಮಿಶ್ರಣ ಈಗ ಎರಡು ವಾರಗಳಿಂದ ಕಾಣೆಯಾಗಿದೆ.  ಪ್ರತ್ಯಕ್ಷ ಲಾಭ ಕಾಣದ ಕಾರಣ ಹಾಲು ಉತ್ಪಾದಕರು ನಿರ್ಲಕ್ಷಿಸುವ ಈ ಖನಿಜ  ಮಿಶ್ರಣ  ಕಾಣೆಯಾಗುವುದು ಸಮಾಜದ ಗೋ ಸಂಪತ್ತಿಗೆ ಮಾರಕ.

ನಮ್ಮಲ್ಲಿ ಹಸುವೊಂದು ಬೆದೆಗೆ ಬಂದರೆ ಹೋರಿ ಹುಡುಕುವುದು ಅಥವಾ ಕೃತಕ ಗರ್ಭದಾರಣೆಗೆ ವ್ಯವಸ್ಥೆ ಮಾಡುವುದಕ್ಕಷ್ಟೇ ನಮ್ಮ ಕಾಳಜಿ ಸಿಮಿತ. ಕರು ಗಂಡಾದರೂ ಹೆಣ್ಣಾದರೂ ಒಂದೇ ಅನ್ನುವ ಬಾವನೆ ಇದ್ದು ಕರುವನ್ನು ಸಾಕಿ ಹಸುವನ್ನಾಗಿ ಮಾಡುವುದು ವೆಚ್ಚದಾಯಕ. ಬೇಕಾದಾಗ ಹಾಲೂಡುವ ಹಸುವನ್ನು ಖರೀದಿಸಿದರಾಯಿತು ಎನ್ನುವ ಪಲಾಯನವಾದ ನಾವಿಂದು ಕಾಣುತ್ತೇವೆ. ನಮ್ಮ ಪಶು ಸಂಪತ್ತಿನ ತಳಿಯನ್ನು ಉತ್ತಮಪಡಿಸುವ ನೈಜ ಕಾಳಜಿ ಅಥವಾ ಮುಂದಾಲೋಚನೆ ಸರಕಾರಕ್ಕಾಗಲಿ ರೈತ ಸಮುದಾಯಕ್ಕಾಗಲಿ ಇಲ್ಲವೇ ಇಲ್ಲ ಎನ್ನಬಹುದು.

ಪಶ್ಚಿಮದ ದೇಶಗಳಲ್ಲಿ ಒಂದು ಹಸು ಬೆದೆಗೆ ಬರುವಾಗ ಹೆಚ್ಚು ಕಮ್ಮಿ ನಾವು ಬೆಳೆದು ನಿಂತ ಮಗಳ ಲಗ್ನಕ್ಕಾಗಿ ಕಾಳಜಿ ವಹಿಸಿದಷ್ಟೇ ಜಾಗ್ರತೆ ವಹಿಸುತ್ತಾರೆ. ವೀರ್ಯ ಲಭ್ಯವಿರುವ ಹೋರಿಗಳ ಜಾತಕಗಳ ಜಾಗ್ರತೆಯಿಂದ ಪರಿಶೀಲನೆ ನಡೆಸಿದ ನಂತರವಷ್ಟೇ ಕೃತಕ ಗರ್ಭದಾರಣೆಗೆ ಅನುವು ಮಾಡಿಕೊಡುತ್ತಾರೆ.  ಕೆಲವು  ಉತ್ತಮ  ಹೋರಿಗಳ  ವೀರ್ಯ  ಹೆಚ್ಚು ದುಬಾರಿ.    ಪ್ರತಿಯೊಂದು ಕರು ಹುಟ್ಟುವಾಗಲೂ ಅದರ ಹಿಂದೆ ನಿರ್ದಾರಿತ ಚಿಂತನೆ ಇದ್ದು ಅನಪೇಕ್ಷಿತ ಗುಣಗಳ ಕನಿಷ್ಟಗೊಳಿಸಲು ಸಾದ್ಯವಾಗಿದೆ. ಇಂತಹ ವ್ಯವಸ್ಥೆಯಲ್ಲಿ ಉತ್ತಮ ವಂಶಶಾಹಿಗಳ ನಷ್ಟವಾಗುವುದಿಲ್ಲ.

ಎರಡನೆಯದಾಗಿ ನಮ್ಮಲ್ಲಿ ಮಲೆನಾಡು ಪ್ರದೇಶದಲ್ಲಿ ಕಾಲ್ಸಿಯಂ ಸತ್ವ ಮಣ್ಣಿನಲ್ಲಿದ್ದರೂ ನೀರಿನಲ್ಲಿ ಕರಗದ ಅಲಬ್ಯ ರೂಪದಲ್ಲಿರುವ ಕಾರಣ ನೂರಾರು ವರುಷಗಳಿಂದ ಕಾಲ್ಸಿಯಂ ಕೊರತೆಯಿಂದಾಗಿ ಎಲುಬು ಬೆಳವಣಿಕೆ ಕುಂಟಿತವಾಗಿ ಮಲೆನಾಡು ಗಿಡ್ಡ ಜಾತಿ ದನ ರೂಪಿತವಾಯಿತು. ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮಲ್ಲಿದ್ದ ಉತ್ತಮ ಮಾದರಿ ರಾಸುಗಳಿಗೆ ಖನಿಜ ಮಿಶ್ರಣ ಮತ್ತು ಪೌಷ್ಟಿಕ ಆಹಾರ ಕೊಟ್ಟು ಉತ್ತಮಗೊಳಿಸುವ ಬದಲು ತಳಿ ಸಂಕರಣ ಕೈಗೊಂಡರು.

ದನಕರುಗಳಿಗೆ ದಿನವೂ     ಖಂಡಿತವಾಗಿ  ಖನಿಜ ಮಿಶ್ರಣ ಕೊಡಲೇ ಬೇಕು. ಆಹಾರದಲ್ಲಿ  ಕಾಲ್ಸಿಯಂ   ಇಲ್ಲವಾದರೆ ಕ್ರಮೇಣ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಖನಿಜ ಮಿಶ್ರಣ ರೈತರಿಗೆ ಸುಲಭ ಬೆಲೆಯಲ್ಲಿ ಸಿಗುವುದು ಅವಶ್ಯ.   ಯಾರಾದರೂ    ಡಾಕ್ಟ್ರಿಗೆ ಹೇಳಿದರೆ  ಚೆನ್ನಾಗಿತ್ತು.

No comments: