Friday, December 02, 2011

ಅಗತ್ಯವಿರುವವರಿಗೆ ವಿಮೆ ಕವಚ ಇಲ್ಲ

ಮೊನ್ನೆ ಮಂಗಳೂರಿನಿಂದ ಸರಕು ಹೊತ್ತು ಹೊರಟ ಹಡಗೊಂದು ಲಕ್ಷದ್ವೀಪದ ತೀರದಲ್ಲಿ ಮುಳುಗಿದ ವಿಚಾರ ಪತ್ರಿಕೆಯಲ್ಲಿ ಓದಿದೆ. ನಲುವತ್ತು ಲಕ್ಷ ರೂಪಾಯಿ ಹಡಗಿನ ಮೌಲ್ಯ. ಸಮುದ್ರದಲ್ಲಿ ಸಾಗುವ ಈ ಪುಟ್ಟ ಹಡಗುಗಳಿಗೆ ವೀಮೆ ಇಲ್ಲವೆನ್ನುವಾಗ ನನಗೆ ಕಳೆದ ವರ್ಷ ವೀಮಾ ಕಂಪೇನಿ ಸುತ್ತಿದ ವಿಚಾರ ನೆನಪಾಯಿತು.

ಕಳೆದ ವರ್ಷ ನಾನು ತ್ರಿಚಕ್ರ ತರಿಸಿ ನನ್ನ ದೂರ ಪ್ರಯಾಣದ ತಯಾರಿ ನಡೆಸುತ್ತಿದ್ದ ಕಾಲ. ಹಿರಿಯರಾದ ಶ್ರಿಪಡ್ರೆಯವರು ಹಲವು ಸಲಹೆ ಸೂಚನೆಗಳ ಕೊಟ್ಟಿದ್ದರು. ಅದರಲ್ಲಿ ಈ ವಿಮಾ ಯೋಜನೆಯೂ ಒಂದು. ಲಕ್ಷಾಂತರ ರೂಪಾಯಿ ವಿನಿಯೋಗಿಸಿದ ತ್ರಿಚಕ್ರದಲ್ಲಿ ಹಿಂದೆ ನೋಡದ ಪರಿಚಿತರಿಲ್ಲದ ಊರುಗಳಿಗೆ ಏಕಾಂಗಿಯಾಗಿ ಹೊರಟಿದ್ದೆ. ಅದುದರಿಂದ ವಿಮಾ ಪಡಕೊಳ್ಳುವುದು ಉತ್ತಮವೆನ್ನುವುದು ಸರಳ ವಿಚಾರ.

ಸೂಚನೆ ಕೊಟ್ಟುದಲ್ಲದೆ ಒಬ್ಬ ವಿಮಾ ಅಧಿಕಾರಿಯ ಸಂಪರ್ಕವನ್ನೂ ಶ್ರಿಪಡ್ರೆಯವರೇ ಕಲ್ಪಿಸಿಕೊಟ್ಟರು. ಹಾಗೆ ತಯಾರಿಯ ಗಡಿಬಿಡಿಯಲ್ಲಿಯೇ ಹಲವು ಬಾರಿ ಪುತ್ತೂರಿನ ವಿಮಾ ಕಛೇರಿಗೆ ಓಡಿದೆ. ಇದಕ್ಕೆ ಚಾಸಿ ನಂಬರ್ ಉಂಟಾ, ಆರ್ ಟಿ ಒ ಪರವಾನಿಗೆ ಉಂಟಾ ಇತ್ಯಾದಿ ಪ್ರಶ್ನೆಗಳ ಸರಮಾಲೆ ಮೇಲಿನವರು ರವಾನಿಸಿದರು. ಇಂತಹ ಗಾಡಿಗೆ ಹಿಂದೆ ಯಾವುದೇ ಬಾರತೀಯ ಕಂಪೇನಿ ವೀಮೆ ಕೊಟ್ಟಿರುವ ಸಾದ್ಯತೆ ಇಲ್ಲ. ಹಾಗಾಗಿ ನೀವೆ ಮೊದಲಿಗರಾಗಿರುತ್ತೀರಿ ಎಂದೂ ಹೇಳಿದೆ. ಪ್ರಯೋಜನವಾಗಲಿಲ್ಲ. ಅದರ ನೈಜ ಬೆಲೆ, ಖಚಿತ ಗುರುತು ಮೇಲಿನವರಿಗೆ ಸ್ಪಷ್ಟ ಪಡಿಸಲು ತಿಂಗಳುಗಳೇ ಬೇಕು ಅನಿಸಿತು. ಹಾಗಾಗಿ ಪ್ರವಾಸದ ಅವದಿಗೆ ವೀಮಾ ಕವಚದ ಆಸೆ ಬಿಟ್ಟೆ.

ನನ್ನ ಪ್ರವಾಸದುದ್ದಕ್ಕೂ ಯಾರಲ್ಲೂ ನನ್ನ ತ್ರಿಚಕ್ರದ ನೈಜ ಬೆಲೆ ಹೇಳುತ್ತಿರಲಿಲ್ಲ. ಹತ್ತು ಸಾವಿರವೋ ಅಂದಾಗ ಹೂಂ ಅನ್ನುತ್ತಿದ್ದೆ. ಹದಿನೈದೋ ಅಂದಾಗ ಹೌದು ಅನ್ನುತ್ತಿದ್ದೆ. ಅಂತೂ ಏನೂ ತೊಂದರೆಯಾಗದೆ ಸುಮಾರು ಒಂದೂವರೆ ವರ್ಷಗಳಿಂದ ಸುದಾರಿಸುತ್ತಿದ್ದೇನೆ. ನಮ್ಮೂರಲ್ಲಿ ಇಂತಹ ಬೇರೆ ತ್ರಿಚಕ್ರ ಇಲ್ಲದಿರುವದರಿಂದ ಕಳವು ಸಾದ್ಯತೆ ಕಡಿಮೆ. ಕದ್ದರೂ ಉಪಯೋಗಿಸುವುದು ಕಷ್ಟ. ಆಯಾ ಊರಲ್ಲಿ ನೆಲೆ ಇಲ್ಲದ ಪ್ರವಾಸಿಗಳು ಯಾವಾಗಲೂ ಪುಡಿಕಳ್ಳರ ಬಲಿಪಶು.


1 comment:

Pejathaya said...

ಒಂದು ಅಜ್ಜಿ ಹೇಳಿದ ಹಾಗೆ! ನಿಮ್ಮದು ಆಟೋ ರಿಕ್ಷಾ ಸೈಕಲ್ - ಇಂಜಿನ್ ಮಾತ್ರ ಇಲ್ಲ!
ಹಾಗೆ ಅಂದರೆ ಆಟೋ ವಿಮೆ ಕೊಡ್ತಾ ಇದ್ರೋ ಏಮೊ!