Monday, October 17, 2011

ನಾಲ್ಕು ಸದಾಸಂ ಮಾರಾಟವಾಯಿತು


ನಾನು ತರಿಸಿದ ಐದು ಸದಾಸಂಗಳಲ್ಲಿ ನಾಲ್ಕು ಇತ್ತೀಚೆಗೆ ಮಾರಾಟವಾದವು. ಇವು ನಾಲ್ಕು, ನಾಲ್ಕು ವರ್ಷಗಳ ಕಾಲ ನನ್ನ ಮನೆಯ ಕೋಣೆಯೊಂದರಲ್ಲಿ ಇದ್ದು ಈಗ ಒಮ್ಮೆಗೆ ಎಂಬಂತೆ ಮಾರಾಟವಾದವು. ಎರಡು ಗಿರಾಕಿಗಳೂ ಇಲ್ಲಿಗೆ ಬಂದು ಗುಣಮಟ್ಟ ಹಾಗೂ ಬೆಲೆ ಬಗೆಗೆ ತೃಪ್ತರಾಗಿ ಕೊಂಡುಹೋದದ್ದು ಈ ಬಗೆಗೆ ಮುಖ್ಯ ವಿವರಗಳ ಇಲ್ಲಿ ದಾಖಲಿಸುತ್ತಿದ್ದೇನೆ.

ದೇಹ ಸಹಕರಿಸದ ಕಾರಣ ಮಳೆಗಾಲ ನಾಲ್ಕು ತಿಂಗಳು ತೋಟಕ್ಕೆ ಹೋಗುವುದನ್ನೇ ನಿಲ್ಲಿಸಿದ್ದೆ. ಹಲವು ಬಾರಿ ಜಾರಿ ಬಿದ್ದೆ. ಹೋದಾಗಲೂ ಗಮನವೆಲ್ಲ ಅಡಿಕೆ ಮರ, ಕೊಳೆರೋಗದ ಬಾಧೆ, ಕಳೆ ಇತ್ಯಾದಿಗಳ ಬದಲಿಗೆ ನನ್ನ ಸದಾ ಬಾದಿಸುತ್ತಿರುವ ನೋವಿನ ಕಡೆಗೆ ಇರುತಿತ್ತು. ಪ್ರತಿಯೊಂದು ತೋಟದ ನಿರ್ವಹಣೆಯಲ್ಲೂ ಸಣ್ಣ ಪುಟ್ಟ ವ್ಯತ್ಯಾಸಗಳು. ಹಳೆಯ ಕೆಲಸಗಾರರೆಲ್ಲ ಬರುವುದ ನಿಲ್ಲಿಸಿದ ಕಾರಣ ನನ್ನ ತೋಟದ ಬಗೆಗೆ ಅನುಬವವಿಲ್ಲದ ಹೊಸಬರ ಅಬಿಪ್ರಾಯವನ್ನೇ ಅವಲಂಬಿಸುವಂತಾಯಿತು. ಆದರೆ ಕೃಷಿ ಕಾರ್ಮಿಕರದೊಂದು ಸಮಸ್ಯೆ. ಅವರು ತಲೆಯನ್ನು ಮನೆಯಲ್ಲಿಯೇ ಬಿಟ್ಟು ಬರುತ್ತಾರೆ.

ತೋಟವನ್ನು ಸುದಾರಿಸುವುದು ನನ್ನ ಕರ್ತವ್ಯ ಜೀವನೋಪಾಯ. ದೇಹ ಸೋತ ಐವತ್ತು ಸಮಿಪಿಸುತ್ತಿರುವ ನನಗೆ ಹೊಸ ಉದ್ಯೋಗ ಕಷ್ಟಸಾದ್ಯ. ನನ್ನ ಕುಟುಂಬ ಹಾಗೂ ಕೆಲಸಗಾರರಿಗಾಗಿ ಬೆಳೆ ರೂಡಿ ಮಾಡಿ ಮಾರುವುದು ಮತ್ತು ನಿರ್ವಹಿಸುವುಸುದು ನಾನು ಅವಶ್ಯ ಕರ್ತವ್ಯ ಎಂದು ಬಾವಿಸುತ್ತಿದ್ದೆ. ಕ್ರಮೇಣ ಕೆಲಸಗಾರರೂ ಕುಟುಂಬದವರೂ ಬೆನ್ನ ಹಿಂದಿರುವುದು ನನ್ನ ಭ್ರಮೆ ಅನಿಸಹತ್ತಿ ಅಗಿದುಗಿಯುವ ಅಡಿಕೆಯ ತೋಟದ ಬಗೆಗೆ ಆಸಕ್ತಿ ಕಳಕೊಂಡೆ.

ನಾಲ್ಕು ವರ್ಷಗಳ ಹಿಂದೆ ನನಗೆ ಚೀನಾದಿಂದ ಸದಾಸಂ ತರಿಸುವ ಅಲೋಚನೆ ಬಂತು. ದಶಕದ ಹಿಂದೆ ಅಡಿಕೆಪತ್ರಿಕೆಯಲ್ಲಿ ಸದಾಸಂ ಬಗೆಗೊಂದು ನುಡಿಚಿತ್ರವಿತ್ತು. ಸುತ್ತುಮುತ್ತು ವಿಚಾರಿಸಲು ಬೆಂಗಳೂರಿನಲ್ಲಿದ್ದ ಮಾರಾಟಗಾರರೊಬ್ಬರು ವಿಪರೀತ ದುಬಾರಿ ಬೆಲೆ ಹೇಳುತ್ತಿದ್ದುದರಿಂದ ನೇರವಾಗಿ ತರಿಸುವ ಆಲೋಚನೆ ಮಾಡಿದೆ. ಮೇಲ್ನೋಟಕ್ಕೆ ಅವರ ಮಾರಾಟ ನಂತರದ ಸೇವೆ ಸೊನ್ನೆ ಅನಿಸುತಿತ್ತು.

ಹೀಗೆ ಪರ್ಯಾಯಗಳ ಚಿಂತಿಸಹತ್ತಿದೆ. ಸ್ಪೈನ್ ದೇಶದ ಒಂದು ತಯಾರಕರೊಂದಿಗೆ ಪತ್ರವ್ಯವಹಾರ ನಡೆಯಿತು. ಅಗತ್ಯ ಬಿದ್ದರೆ ಹೋಗಿ ತರುವುದೆಂದು ನಿರ್ದರಿಸಿ ಅದಕ್ಕೂ ತಯಾರಿ ನಡೆಸಿದ್ದೆ. ಕೊನೆಗೆ ಅವರು ನಮ್ಮಲ್ಲಿ ನೇರಮಾರಾಟ ಇಲ್ಲ, ವ್ಯಾಪಾರಿಗಳಿಗೆ ಮಾತ್ರ ಎಂದು ಹೇಳಬೇಕೆ ?

ಮೊದಲೇ ಚೀನಾ ಕಂಪೇನಿಯೊಂದಿಗೆ ಸಂಪರ್ಕಿಸಿದ್ದೆ. ಹೆಚ್ಚು ಕಮ್ಮಿ ಅದೇ ಅಕಾರ ಆದರೆ ಸ್ವಲ್ಪ ಅಗ್ಗದ ಮಾಲು. ಹಲವಾರು ಪತ್ರಗಳ ವಿನಿಮಯವಾಯಿತು. ಎಲ್ಲವೂ ಸಮರ್ಪಕ ಅನಿಸಿದ ನಂತರ ಹಣ ಕಳುಹಿಸಲು ತಯಾರಾದೆ. ಹೀಗೆ ಎಲ್ಲವೂ ನಿರ್ದಾರವಾದ ನಂತರ ನಾವು ಕಳುಹಿಸುವುದು ಒಂದು ಪೆಟ್ಟಿಗೆ ಅಂದರೆ ಒಮ್ಮೆಗೆ ಮೂವತ್ತ ಮೂರು ಸದಾಸಂ. ಸಾಂಪಲ್ ಅಂದರೆ ಐದು ಆದರೆ ಅದಕ್ಕೆ ಮೂವತ್ತು ಡಾಲರ್ ಹೆಚ್ಚು ಕೊಡಬೇಕು ಎಂದರು. ಹೀಗಾಗಿ ಒಂದು ಉಪಯೋಗಕ್ಕೆ ಹಾಗೂ ಎರಡನೆಯದು ಬಿಡಿಬಾಗಕ್ಕೆ ಹೀಗೆ ಎರಡು ತರಿಸುವ ಆಸಕ್ತಿ ಇದ್ದ ನಾನು ಅನಿವಾರ್ಯವಾಗಿ ಐದು ತರಿಸಬೇಕಾಯಿತು.

ಐದರಲ್ಲಿ ನಾಲ್ಕನ್ನು ಒಳಗಿರಿಸಿ ಒಂದನ್ನು ಮಾತ್ರ ಉಪಯೋಗಿಸುತ್ತಿದ್ದೆ. ಅಗತ್ಯಕ್ಕೆ ಅವುಗಳಲ್ಲಿ ಒಂದರ ಚಕ್ರ, ಬಿಡಿ ಬಾಗಗಳ ಕಳಚಿದ್ದುಂಟು. ಮಳೆಗಾಲದಲ್ಲಿ ಸಿಂಪರಣೆ ನೋಡಿಕೊಳ್ಳಲು ಮತ್ತು ಬೇಸಿಗೆಯಲ್ಲಿ ನೀರಾವರಿ ಬಗೆಗಿನ ಓಡಾಟಕ್ಕೆ ಬಹಳ ಉಪಯುಕ್ತವಾಗಿತ್ತು. ಹಲವು ಬಾರಿ ಸಮುದ್ರತೀರಕ್ಕೆ ಒಮ್ನಿಯಲ್ಲಿ ಹಾಕಿ ಕೊಂಡುಹೋಗಿದ್ದೆವು. ಒಮ್ಮೆ ಪಣಂಬೂರಿನಿಂದ ಮಲ್ಪೆ ವರೆಗೆ ಮರಳಿನ ಮೇಲೆ ಓಡಿಸಿದ್ದೆವು.

ಸದಾಸಂ ಉಪಯೋಗಕ್ಕೆ ನಮಗಿರುವ ಅವಕಾಶಗಳು ಹೆಚ್ಚಿಲ್ಲ. ಸುತ್ತುಮುತ್ತಲಿನ ಎಲ್ಲ ರಸ್ತೆಗಳೂ ಜಲ್ಲಿ ಡಾಂಬರು ಹಾಸಿರುವುದರಿಂದ ಇದರ ಉಪಯೋಗಕ್ಕೆ ಯೋಗ್ಯವಲ್ಲ. ಹಾಗೆ ಕೆಲವು ಕಚ್ಚಾ ಮಣ್ಣ ರಸ್ತೆಗಳಿದ್ದರೂ ಅವರು ಅರಣ್ಯ ಇಲಾಖೆಯ ಮರ್ಜಿಯಲ್ಲಿವೆ. ಘಾಟಿ ರಸ್ತೆಗಳ ಬಗೆಗೆ ವಿಚಾರಿಸಿದರೂ ಅನುಕೂಲಕರ ಉತ್ತರ ಎಲ್ಲಿಂದಲೂ ಬಂದಿರಲಿಲ್ಲ. ಹಾಗೆ ನನ್ನ ಜಮೀನಿನ ಹೊರಗೆ ಎಂದರೆ ಸಮುದ್ರತೀರದಲ್ಲಿ ಮಾತ್ರ ಉಪಯೋಗಿಸಲು ಸಾದ್ಯವಾಯಿತು.

ಸರಕು ಸಾಗಾಣಿಕೆಗೆ ಆರು ಸಾವಿರ ಖರ್ಚಿನಲ್ಲಿ ಒಂದು ಹಿಂಬಾಲಕ ಗಾಡಿ ಮಾಡಿಸಿದರೂ ಅದು ಸದುಪಯೋಗವಾಗಲಿಲ್ಲ. ಹೆಚ್ಚು ಸಾಮಾನು ಹಾಕಲು ಇದರ ತೂಕ ಸಾಲುತ್ತಿರಲಿಲ್ಲ. ಸಾಮಾನು ಎತ್ತಿ ಹಾಕಲು ನಾನು ದುರ್ಬಲನಾಗಿ ವಿಫಲ. ಕೆಲಸದವರಿಗೆ ನಾನು ಎದುರಿಲ್ಲದಿದ್ದರೆ ಉತ್ತಮ ಎನಿಸಿ ನೀವು ಹೋಗಿ ನಾವು ಹೊತ್ತು ತರುತ್ತೇವೆ ಅನ್ನುತ್ತಿದ್ದರು.

ನಮ್ಮ ತೊಟದ ಬದಿಯ ತೋಡು ನಲ್ವತ್ತು ಕಿಮಿ ದೂರ ಸುತ್ತು ಬಳಸಿ ಕೊನೆಗೆ ಸಮುದ್ರ ಸೇರುವುದು ಕಾಸರಗೋಡು ತಾಲೂಕಿನ ಉಪ್ಪಳದಲ್ಲಿ. ಒಮ್ಮೆ ಎರಡು ಸದಾಸಂ ಬಳಸಿ ಸಾಗಲು ಎಲ್ಲ ಸಿದ್ದತೆ ನಡೆಸಿದ್ದೆ. ಬೆಂಬಲ ವಾಹನಕ್ಕೆ ಪಕ್ಕದ ಮನೆಯ ಅಪತ್ಬಾಂದವ ಅನಿಲ್ ಕುಮಾರರ ಸಹಕಾರ ಕೋರಿದೆ. ಇದಕ್ಕೆ ಅವಕಾಶದ ಕಿಂಡಿ ಇರುವುದು ಮಳೆ ಬರುವ ಮುನ್ನ ತೋಡು, ಹೊಳೆಯಲ್ಲಿ ಕಟ್ಟ ತೆಗೆದ ನಂತರದ ಒಂದು ವಾರ ಅಂದರೆ ಮೆ ತಿಂಗಳ ಕೊನೆಯಲ್ಲಿ ಮಾತ್ರ. ನನ್ನ ಉತ್ಸಾಹ ಮಕ್ಕಳಲ್ಲಿ ಇರದ ಕಾರಣ ನಿರೀಕ್ಷಿತ ಸಹಾಯ ದೊರಕಲಿಲ್ಲ. ತಯಾರಿ ವ್ಯರ್ಥವಾಯಿತು. ಪ್ರವಾಸ ಕನಸಿನಲ್ಲಿಯೇ ಉಳಿಯಿತು.

ಸದಾಸಂಗಳ ಮಾರಲು ತಯಾರಿದ್ದರೂ ತೀರಾ ಉತ್ಸುಕನೂ ಆಗಿರಲಿಲ್ಲ. ಅದು ಬಳಸುವ ಪೆಟ್ರೊಲ್ ಉಪಯೋಗ ಕನಿಷ್ಟಗೊಳಿಸಲು ಮನಸಾಕ್ಷಿ ಒತ್ತಡ ಹಾಕುತಿತ್ತು. ಒಮ್ಮೊಮ್ಮೆ ಉಳಿದ ನಾಲ್ಕರ ಗುಜರಿಗೆ ಹಾಕೋಣವೆನಿಸಿದ್ದೂ ಇದೆ. ಆದರೆ ಎರಡು ಕಾರಣಗಳಿಗೆ ಉಳಿಸಿದೆ. ಮೊದಲನೆಯದಾಗಿ ನಾನು ಅಷ್ಟೊಂದು ಆರ್ಥಿಕವಾಗಿ ಸಬಲನಲ್ಲ. ಎರಡನೆಯದು ಅದು ಅದರ ಸೇವಾವದಿಯ ಇಂದನ ಬಳಕೆ ಮತ್ತು ಪರೀಸರ ಮಲೀನತೆ ಲೆಕ್ಕಹಾಕಿದರೆ ಸುಮಾರು ಮೂರನೇಯ ಒಂದು ತಯಾರಿಯಲ್ಲಿಯೇ ಖರ್ಚಾಗಿರುತ್ತದೆ. ಅದುದರಿಂದ ನೈತಿಕವಾಗಿಯೂ ಒಂದು ಉಪಯೋಗವಾಗಬಹುದಾದ ವಸ್ತು ಗುಜರಿಗೆ ಹಾಕುವುದು ಸಮಂಜಸ ಎನಿಸಲಿಲ್ಲ.

ಲೆಕ್ಕಾಚಾರದಲ್ಲಿ ಅಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ಒಂದಕ್ಕೆ ೧೧೦ ಸಾವಿರ ಅಂತಿದ್ದರು. ನಾನು ಐದಕ್ಕೆ ಸುಮಾರು ೧೭೦ ಖರ್ಚು ಮಾಡಿದ್ದೇನೆ. ಅಂದರೆ ಒಂದಕ್ಕೆ ಸುಮಾರು ಮೂವತ್ತನಾಲ್ಕು. ಈಗ ನನಗೆ ಸಿಕ್ಕಿದ್ದು ಸರಾಸರಿ ನಲವತ್ತು.

ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ನನ್ನದಕ್ಕೆ ಎಪ್ಪತ್ತು ಸಾವಿರ ಅಂದೇ ತೆಗೆದಿರಿಸಿದ್ದರೆ ಉಳಿದ ನಾಲ್ಕರ ಆಂದಿನ ಅಸಲು ಒಂದು ಲಕ್ಷವೆಂದು ಪರಿಗಣಿಸಿದರೆ ನನಗೆ ಈಗ ಸಿಕ್ಕಿದ ೧೬೦ ಅನ್ನುವಾಗ ಬಡ್ಡಿ ಒಂದಂಶ ದೊರಕಿತು ಅನ್ನಬಹುದು. ಸರಿಯಾಗಿ ನಾಲ್ಕು ವರ್ಷ ಸಮಯ. ಅಂತೂ ಒಂದು ಲೆಕ್ಕಾಚಾರ ಮುಕ್ತಾಯ.

ನನಗಿವು ನನ್ನಂತೆ ಅಂಗವಿಕಲತೆ ಬಾದಿಸುವ ಅಥವಾ ಕೃಷಿಕರಿಗೆ ಉಪಯೋಗವಾಗಬೇಕೆನ್ನುವ ಆಸೆ ಇತ್ತು. ಆದರೆ ನಾಲ್ಕು ವರ್ಷ ಅಂದರೆ ಸಾವಿರದ ಐನೂರು ದಿನ ಯಾರೂ ಪೈಕಿ ಅನಿಸಿಕೊಳ್ಳುವವರು ಸಂಪರ್ಕಿಸಲಿಲ್ಲ. ಕೊನೆಗೆ ನಾನು ತ್ರಿಪುರಕ್ಕೆ ಮಾರಿದ ಒಂದು ಮತ್ತು ಚಂದಿಗಡಕ್ಕೆ ಮಾರಿದ ಮೂರು ಪಟ್ಟಣಿಗರ ಮೋಜಿನ ಸವಾರಿಗೆ ಉಪಯೋಗಿಸಲ್ಪಡುವುದೆನ್ನುವ ಬೇಸರ ನನಗುಳಿಯುತ್ತದೆ.

ನಾನು ತರಿಸುವಾಗಲೇ ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆಯವರು ತಕ್ಷಣ ಮಾರಲೂ ತಯಾರಾಗಿರು ಎನ್ನುವ ಒತ್ತಾಯದ ಸೂಚನೆ ಕೊಟ್ಟಿದ್ದರು. ಆದರೆ ನಾನು ನಾಲ್ಕು ದಿನ ಉಪಯೋಗಿಸಿ ಅನಂತರ ಆಲೋಚನೆ ನನ್ನದಾಗಿತ್ತು. ಗೋವಿಂದ ಗುಜರಿ ಮಾರಿ ಮೋಸ ಮಾಡಿದ ಅನ್ನುವ ಮಾತು ಕೇಳಲು ನಾನು ತಯಾರಿರಲಿಲ್ಲ.

ಕೊನೆಯ ಮೂರು ನನ್ನ ಕಣ್ಣೆದುರಿನಿಂದ ಮರೆಯಾಗಿ ಒಂದೇ ಘಂಟೆಯಲ್ಲಿ ನನಗೊಂದು ದೂರವಾಣಿ ಸಂದೇಶ – ನಾಳೆ ನಿಮ್ಮಲ್ಲಿಗೆ ಬರುತ್ತೇವೆ. ಕೊನೆಗೆ ಬಂದ ಚಾಮರಾಜನಗರದ ಕೃಷಿಕ ಕೈಲಾಸಮೂರ್ತಿಯವರು ನನ್ನ ಸದಾಸಂ ಸುತ್ತು ಬಂದು ಹಲವು ಯೋಚನೆ ಯೋಜನೆಗಳ ನನ್ನ ಮುಂದಿಟ್ಟರು. ನಾನೂ ಯೋಚನೆಗೆ ಸಾದ್ಯವಾದ ಸಾದ್ಯತೆಗಳ ಅವರೊಂದಿಗೆ ಚರ್ಚಿಸಿದೆ. ಮರುದಿನ ಪುನಹ ದೂರವಾಣಿಯಲ್ಲಿ ನನ್ನ ವೈಯುಕ್ತಿಕ ಗಾಡಿಯನ್ನು ಕೊಡಬಹುದೋ ? ಕೇಳಿದರು. ಈಗ ಅದು ಉಪಯೋಗವಾಗುತ್ತಿಲ್ಲವಾದರೂ ನನಗಿರುವ ಆದರವಿದೆಯಲ್ಲಾ ? ಅದನ್ನು ಮೀರಲು ಸಾದ್ಯವಾಗುವುದಿಲ್ಲ.

3 comments:

Nanda Kishor B said...

hmmm:)
ಆಗೋದೆಲ್ಲ ಒಳ್ಳೇದಿಕ್ಕೆ ಸಾರ್... ಬಿಡಿ...

Ravi Hegde said...

ನಿಮ್ಮ ಉತ್ಸಾಹಕ್ಕೆ ,ನನ್ನ ಒಂದು ಸಲ್ಲಾಂ
ರವಿ

ಶ್ರೀನಿವಾಸ ಪಶುಪತಿ said...

ನಿಮ್ಮ ಉತ್ಸಾಹ ಕಂಡು ನಿಜಕ್ಕೂ ಮೂಕ ವಿಸ್ಮಿತನಾಗಿದ್ದೇನೆ. ನಿಮಗೆ ಒಳ್ಳೆಯದಾಗಲಿ.

ಈ ಸದಾಸಂ ಬಗ್ಗೆ ನೆಟ್‍ನಲ್ಲಿ ಹುಡುಕೋದು ಹೇಗೆ ಸರ್?