Sunday, May 29, 2011

ಜನಹಿತ ಬಯಸದ ಬಾಟರಿ ಉದ್ಯಮ

ವಿಜ್ನಾನ ಹಾಗೂ ಕೈಗಾರಿಕೆಗಳು ಮನುಷ್ಯನ ಏಳಿಗೆಯೆಡೆಗೆ ಕೆಲಸ ಮಾಡುವುದೋ ? ತಮ್ಮ ಸ್ವಾರ್ಥ ಕಾಯ್ದು ಕೊಳ್ಳುವುದು ಮಾತ್ರವೋ ? ಕೆಲವೊಂದು ಉದಾಹರಣೆ ನೋಡುವಾಗ ತಮ್ಮ ಲಾಭಕ್ಕೆ ಮಾತ್ರ ಕೈಗಾರಿಕೆಗಳ ಗಮನವೆಂದು ಅನಿಸುತ್ತದೆ. ಅವುಗಳಲ್ಲೊಂದು ಈಗ ಹೆಚ್ಚು ಗಮನ ಸೆಳೆಯದ ಎಡಿಸನ್ ತನ್ನ ಕಾರಿಗೆ ಉಪಯೊಗಿಸಿದ ಕಬ್ಬಿಣ ನಿಕೆಲ್ ಪ್ಲೇಟಿನ ಬಾಟರಿ . ಆ ಬಾಟರಿ ಕಾರು ಚೆನ್ನಾಗಿ ಕೆಲಸ ಮಾಡಿದರೂ ಪೆಟ್ರೊಲ್ ವಾಹನ ಹೆಚ್ಚು ಲಾಬದಾಯಕ ಎಂದು ಪ್ರಚಾರ ಮಾಡಲಾಯಿತು.

೧೯೦೩ ರಿಂದ ೧೯೭೨ ರವರೆಗೆ ಎಪ್ಪತ್ತೊಂದು ವರ್ಷ ಯಶಸ್ವಿಯಾಗಿ ಬಾಟರಿ ತಯಾರು ಮಾಡಿದ ಅಮೇರಿಕದ ಎಡಿಸನ್ ಕಂಪೇನಿ ಇಂಗ್ಲೇಂಡಿನ ಎಕ್ಷೈಡ್ ಕಂಪೇನಿಗೆ ಮಾರಾಟವಾದ ಮೂರು ವರ್ಷಗಳಲ್ಲಿ ಬಾಟರಿ ತಯಾರಿ ನಿಲ್ಲಿಸಿತು. ಖರೀದಿಸಿದ ಕಂಪೇನಿಯ ಉದ್ದೇಶ ಬಾಟರಿ ತಯಾರು ಮಾಡುವುದಕ್ಕಾಗಿರಲಿಲ್ಲ – ತನ್ನ ಇತರ ಹಿತಾಸಕ್ತಿಗಳಿಗೆ ಪೂರಕವಾಗಿ ಕಂಪೇನಿಯ ಗುಳುಂ ಮಾಡಿದ್ದು.

ನೋಡಿ. ಸ್ವಾಮಿ, ಒಬ್ಬನಿಗೆ ಅವನ ಜೀವಿತಾವದಿಯಲ್ಲಿ ಒಂದೇ ಬಾಟರಿ ಮಾರುವುದು ಎಂದರೆ ಕೈಗಾರಿಕೆಗೆ ಅನ್ಯಾಯವಲ್ಲವೇ ? ಹೀಗಾದರೆ ಬಾಟರಿ ಕಂಪೇನಿ ಬದುಕುವುದಾದರೂ ಹೇಗೆ ? ಬಾಟರಿ ಕೈಗಾರಿಕೆಗೆ ಅಪಾರ ಲಾಭವಾಗುವುದಾದರೂ ಹೇಗೆ ? ಇಂದೀಗ ಈ ತಂತ್ರಜ್ನಾನದ ಬಾಟರಿಗಳ ಮಾಹಿತಿ ದೊರಕುವುದೂ ಸುಲಭವಲ್ಲ.

ಅಮೇರಿಕದಲ್ಲಿ ಹಲವು ಪಟ್ಟಣಗಳಲ್ಲಿದ್ದ ಟ್ರಾಮ್ ಕಂಪೇನಿಗಳನ್ನು ಖರೀದಿಸಿದ ಕಾರು ಉದ್ಯಮ ಕ್ರಮೇಣ ಅವನ್ನು ಕ್ರಮೇಣ ಹೊಸಕಿ ಹಾಕಿತು. ಪ್ರಯಾಣಿಕ ದರ ಏರಿಸಿ ಹಾಗೂ ಕಾರುಗಳಲ್ಲಿ ಹೋಗುವುದು ಹೊಸತನವೆಂಬ ಜಾಹಿರಾತು ಹರಿಸಿ ಟ್ರಾಮ್ ಗಳಿಂದ ಪ್ರಯಾಣಿಕರನ್ನು ಹೊರ ದೂಡಿದವು. ಆಗ ಅಲ್ಲಿನ ಪೇಟೆ ಜನ ಹೆಚ್ಚು ಕಾರುಗಳ ಕೊಳ್ಳುವುದು ಅವುಗಳಲ್ಲಿ ಸಂಚರಿಸುವುದು ಅನಿವಾರ್ಯವಾಯಿತು. ಅದೇ ರೀತಿ ಒಂದು ಬಾಟರಿ ಕಂಪೇನಿ ಪರಿಸರಪೂರಕ ಪರ್ಯಾಯವನ್ನು ಸಮಾಜಕ್ಕೆ ಇಲ್ಲವಾಗಿಸಿತು.

ಈ ಎಡಿಸನ್ ಬಾಟರಿಗಳಿಗೆ ಬಾಯಾರಿಕೆಯಾದರೂ ಮರಣಾಂತಿಕವಲ್ಲ. ಹಲವು ವರ್ಷಗಳ ಕಾಲ ಮೂಲೆಯಲ್ಲಿದ್ದ ಬಾಟರಿಗಳಿಗೆ ಯಶಸ್ವಿಯಾಗಿ ಜೀವದಾನ ಮಾಡಿದ ಉದಾಹರಣೆಗಳಿವೆ. ಇವುಗಳಿಗೆ ವೇಗವಾದ ಚಾರ್ಜಿಂಗ್, ಚಾರ್ಜು ಪೂರ್ತಿ ಖಾಲಿಯಾಗುವುದು ಹಾಗೂ ಅಸಿಡ್ ಖಾಲಿಯಾಗುವ ಸಮಸ್ಯೆಗಳಿಲ್ಲ. ಲೆಡ್ ಅಸಿಡ್ ನಂತೆ ಹಳೆ ಮತ್ತು ಹೊಸ ಬಾಟರಿಗಳ ಒಟ್ಟು ಸೇರಿಸುವುದೂ ಸಮಸ್ಯೆ ಅಲ್ಲವಾದ ಕಾರಣ ಹಣವಿದ್ದಂತೆ ಖರೀದಿಸಬಹುದು. ಒಮ್ಮೆಲೆ ಹಣ ಸುರಿಯಬೇಕಾಗಿಲ್ಲ. ಇವುಗಳ ಶೇಖರವಾಗಿರುವ ಶಕ್ತಿ ಪೂರ್ತಿ ಉಪಯೋಗಿಸಬಹುದು. ಲೆಡ್ ಅಸಿಡ್ ಚಾರ್ಜ್ ಸಂಪೂರ್ಣ ಖಾಲಿ ಮಾಡುವಂತಿಲ್ಲ.

ಇಂದು ಮಾಮೂಲಿ ಲೆಡ್ ಅಸಿಡ್ ಬಾಟರಿಯ ಮೂರು ಪಾಲು ಕ್ರಯವಾದರೂ ಹತ್ತು ಪಾಲು ಬಾಳ್ವಿಕೆ ಇರುವಾಗ ಪರವಾಗಿಲ್ಲ ಅನಿಸುತ್ತದೆ. ಹಲವೊಮ್ಮೆ ಇಡೀ ರಾತ್ರಿ ವಿದ್ಯುತ್ ವಿಫಲವಾದಾಗ ರಾತ್ರಿ ಹೋಗಿ ಬಾಟರಿ ಖಾಲಿಯೆಂದು ಕಿರಿಚಾಡುವ ಇನ್ವರ್ಟರ್ ಒಫ್ ಮಾಡಿದ್ದೇನೆ. ಇಲ್ಲವಾದರೆ ನನ್ನ ಸೌರ ಫಲಕಗಳಿಂದ ಶಕ್ತಿ ತುಂಬಿಕೊಳ್ಳುವ ಬಾಟರಿ ನಾಲ್ಕು ವರ್ಷವೂ ಬಾಳಲಿಕ್ಕಿಲ್ಲ. ನನ್ನಲ್ಲಿರುವ ಲೆಡ್ ಅಸಿಡ್ ಬಾಟರಿಗಳು ಅದರೊಳಗಿನ ಆಸಿಡ್ ಪೂರ್ತಿ ಅಲ್ಲವಾದರೂ ಗಣನೀಯವಾಗಿ ಖಾಲಿಯಾಗಿ ತಮ್ಮ ಆಯುಷ್ಯ ಕಡಿಮೆ ಮಾಡಿಕೊಂಡಿವೆ. ಆದರೆ ಇಂತಹ ಬಾಟರಿಯಲ್ಲಿ ಅಂತಹ ಹೆದರಿಕೆ ಇಲ್ಲ. ಪೂರಾ ಚಾರ್ಜು ಅಥವಾ ಆಸಿಡ್ ಖಾಲಿಯಾದರೂ ಬಾಳ್ವಿಕೆಯಲ್ಲಿ ಮೋಸವಿಲ್ಲ.

ಇಪ್ಪತೈದು ವರ್ಷ ಬಾಳುವ ಸೌರ ವಿದ್ಯುತ್ ಫಲಕಗಳ ಜತೆ ಈ ದೀರ್ಘಾಯುಷ್ಯದ ಬಾಟರಿ ಜೋಡಣೆಯಾಗಬೇಕಾಗಿತ್ತು. ಹಲವೆಡೆ ಹೊಸ ಬಾಟರಿಗೆ ಹಣ ಹಾಕಲು ಪರದಾಡುತ್ತಿರುವ ಜನ ಫಲಕಗಳನ್ನೇ ಮೂಲೆಪಾಲು ಮಾಡಿದ್ದಾರೆ. ಹೀಗಾಗಿ ತಾಂತ್ರಿಕ ಸಮಸ್ಯೆಗಳಿಂದಲ್ಲ, ವ್ಯಾಪಾರಿ ಸ್ವಾರ್ಥ ಕಾರಣಗಳಿಗೆ ಈ ಬಾಟರಿ ನಮಗೆ ದೊರಕುತ್ತಿಲ್ಲ ಅನಿಸುತ್ತದೆ.

ಇಪ್ಪತ್ತು ಸಾವಿರ ಕೋಟಿ ರೂಪಾಯಿಯ ವಾರ್ಷಿಕ ವ್ಯವಹಾರ ಮಾಡುವ ಬಾರತೀಯ ಬಾಟರಿ ಉದ್ಯಮ ನಮಗೆ ಲೆಡ್ ಅಸಿಡ್ ಬಾಟರಿಯನ್ನು ಕೊಡುವುದರಲ್ಲೇ ಆಸಕ್ತಿ ವಹಿಸುತ್ತದೆ. ನಾವೂ ತೃಪ್ತರಾಗಿದ್ದೇವೆ.

http://en.wikipedia.org/wiki/Nickel-iron_battery

http://www.nickel-iron-battery.com/

1 comment:

ಎಚ್. ಸುಂದರ ರಾವ್ said...

ಪ್ರಿಯ ಗೋವಿಂದಣ್ಣ,
ಕೊಂಚ ನಿಧಾನವಾಗಿ ಈ ಪ್ರತಿಕ್ರಿಯೆ: ವಿಜ್ಞಾನ ಮಾನವನ ಒಳಿತಿಗಾಗಿ ಕೆಲಸ ಮಾಡುವ ಕಾಲ ಎಂದೋ ಹೋಗಿದೆ. Dr. Mercola ಎಂಬ ವೆಬ್ ಸೈಟಿನಲ್ಲಿ ಕ್ಯಾನ್ಸರಿಗೆ ಪರಿಣಾಮಕಾರಿ ಮದ್ದು ಕಂಡು ಹಿಡಿದ ವೈದ್ಯರೊಬ್ಬರಿಗೆ, ಅಮೆರಿಕದಲ್ಲಿ ಅಲ್ಲಿನ ಸರಕಾರವೂ ಸೇರಿದಂತೆ, ವ್ಯವಸ್ಥೆ ಹೇಗೆ ಕಿರುಕುಳ ಕೊಟ್ಟಿತೆಂಬುದನ್ನು ಓದಿದರೆ, ಈ ಸತ್ಯ ಚೆನ್ನಾಗಿ ಮನದಟ್ಟಾಗುತ್ತದೆ.