Tuesday, December 01, 2009

ಕಡಲ ತಡಿಯಲ್ಲಿ ಐವತ್ತು ಕಿಮಿ ಸವಾರಿ

ರೋಹಿತ್ ರಾವ್ ಅವರು ಬಂದ ಕೂಡಲೇ ತಂಡದ ಮುಖಂಡತ್ವ ವಹಿಸಿಕೊಂಡರು. ಸದಾಸಂ ಸಾರಥಿ ಅನಿಲನಿಗೆ ಮಾಡು ಬೇಡಗಳ ವಿವರಿಸಿ ನಿರಂತರ ಸಂಚಾರವಾಣಿ ಸಂಪರ್ಕದಲ್ಲಿರುತ್ತೇನೆ ಮತ್ತು ಏನು ಸಂಶಯ ಇದ್ದರೂ ನನ್ನನ್ನು ವಿಚಾರಿಸು ಎಂದು ಸ್ಪಷ್ಟ ಪಡಿಸಿದರು. ಸ್ಥಳ ಗುರುತಿಸುವ ವಿಧಾನ ಅಂದರೆ ಯಾವುದು landmark ಹೌದು ಮತ್ತು ಯಾವುದು ಅಲ್ಲ ಎನ್ನುವುದರ ವ್ಯತ್ಯಾಸ ವಿವರಿಸಿದರು.

ಕೆಲವು ಕಡೆಗಳಲ್ಲಿ ನಮಗೆ ಜತೆಯಲ್ಲಿ ಸಾಗಲು ಸಾದ್ಯವಿಲ್ಲ ಎನ್ನುವ ಕಾರಣಕ್ಕೆ ಹದಿನಾರರ ಹಿರಿಯ ಮಗ ಅನಿಲ ಪ್ರಥಮ ಚಾಲಕ ಎಂದು ಮೊದಲೇ ನಿರ್ದರಿಸಿದ್ದೆ. ಸಂಪರ್ಕ ಸಾದ್ಯತೆಯ ನೆಲೆಯಲ್ಲಿ ಎಲ್ಲೆಲ್ಲಿ ಯಾರು ಗಾಡಿ ಓಡಿಸುವುದು ಎಂದು ಮುಂಚೆಯೇ ತೀರ್ಮಾನಿಸಿದ್ದೆ. ಆದರೆ ಹನ್ನೆರಡರ ಕಿರಿಯ ಸುನಿಲ ಹೊಟ್ಟೆ ಸಮಸ್ಯೆಯಿಂದಾಗಿ ನಿಗದಿತ ದೂರವನ್ನು ಕ್ರಮಿಸಲಿಲ್ಲ. ಇದರಿಂದಾಗಿ ಪ್ರಯಾಣದ ಸಿಂಹಪಾಲು ಅನಿಲ ಚಲಾಯಿಸಿದ ಮತ್ತು ರೋಹಿತರ ಪುಟ್ಟ ಮಗ ಅಭಿನವ ಅವನಿಗೆ ಜತೆಗಾರನಾಗಿದ್ದ. ರೋಹಿತರ ಬಾಷೆಯಲ್ಲಿ ಅಭಿಗೆ ಕಾಂಗರೂ ಸವಾರಿ.

ಅನಿಲನಿಗೆ ಅನಿರೀಕ್ಷಿತವಾಗಿ ಎದುರಾದದ್ದು ನೆಲ ಬಾಂಬುಗಳು. ಈ ನೆಲಬಾಂಬುಗಳ ಸಿಡಿಸುತ್ತಾ ಸಾಗಿದ ನಮ್ಮ ಸರದಾರ. ಅಲ್ಲಿ ಶೌಚಾಲಯ ವ್ಯವಸ್ತೆ ಇಲ್ಲದೆ ಸಮುದ್ರದ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕೂರುವುದು ಸಾಮಾನ್ಯ. ಈ ಸುಳಿವು ರೋಹಿತ್ ನನಗೆ ವಾರದ ಮೊದಲೇ ಹೇಳಿದ್ದರು ಮತ್ತು ನಾನು ಅನಿಲನಿಗೆ ಪೂರ್ವ ಸೂಚನೆ ಕೊಟ್ಟಿದ್ದೆ. ಅವನು ಅದನ್ನು ಗಂಬೀರವಾಗಿ ಪರಿಗಣಿಸಿರಲಿಲ್ಲ.

ಪಣಂಬೂರಿನಲ್ಲಿ ೭೫೦ ಮೀಟರ್ ಕಡಲ ತೀರ ಖಾಸಗಿ ಸಂಸ್ಥೆ ನಿರ್ವಹಣೆಯಾದುದರಿಂದ ಸ್ವಚ್ಚವಾಗಿತ್ತು. ಅದನ್ನು ನೋಡಿದ ನಮ್ಮ ಸಾರಥಿ ಅನಿಲ ಉದ್ದಕ್ಕೂ ಈ ರೀತಿ ಸ್ವಚ್ಚ ಇರುವುದೆಂದು ಬಾವಿಸಿ ವೇಗ ಹೆಚ್ಚಿಸಿಕೊಂಡಿರಬೇಕು. ನಿಧಾನವಾಗಿ ಹೋಗುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಸ್ವಚ್ಚವಾದ ಸ್ಥಳ ಕೊನೆಗೊಳ್ಳುವಾಗ ಇವನಿಗೆ ಗ್ರಹಿಕೆಗೆ ಬರಲು ವಿಳಂಬವಾಯಿತು.



ಎರಡು ಕಿಮಿ ಮುಂದೆ ಚಿತ್ರಾಪುರದಲ್ಲಿ ರೋಹಿತರ ಗೆಳೆಯ ಯತೀಶ್ ಬೈಕಂಪಾಡಿ ಅವನನ್ನು ತಡೆಗಟ್ಟಿ ಒಳಗೆ ಕರೆಸಿದರು. ಅಲ್ಲಿ ಇವನು ಮೊದಲು ಕೇಳಿದ್ದೇ ಕೈ ಮೈ ತೊಳೆದುಕೊಳ್ಳಲು ನೀರು. ನೆರೆದವರಲ್ಲಿ ಒಬ್ಬರು ಛೀ ಪೀ ಎಂದಾಗ ಇವನು ಮತ್ತೂ ಕಂಗಾಲು. ಅಂತೂ ಗಂಧದ ಸಾಬೂನು ಹಾಕಿ ಚೆನ್ನಾಗಿ ತೊಳೆದುಕೊಂಡು ದುರ್ಗಂಧದಿಂದ ಪಾರಾದ. ಆಶ್ಚರ್ಯಕರವೆನಿಸುವಂತೆ ಮುಂದೆ ಕುಳಿತಿದ್ದ ಅಭಿಗೆ ಸ್ವಲ್ಪವೂ ಸಿಂಪರಣೆ ಆಗದಿರುವುದು ನಮಗೆ ಅನುಕೂಲವಾಯಿತು.

ಚಿತ್ರಾಪುರದಲ್ಲಿ ಕಡಲ ತೀರ ಸ್ವಚ್ಚಗೊಳಿಸುವ ಕರ ಸೇವೆ ನಡೆಯುತ್ತಿತ್ತು. ಹಾಗೆ ಅವರಿಗೆಂದು ಏರ್ಪಾಡಾದ ಅವಲಕ್ಕಿ ಸಜ್ಜಿಗೆ ಚಾ ನಮಗೂ ಸಮರಾಧನೆಯಾಯಿತು. ಸದಾಸಂ ಸವಾರಿ ಕಂಡ ಊರವರು ಮುಂದಿನ ದಾರಿಯ ಬಗೆಗೆ ಖಚಿತ ಮಾಹಿತಿ ಇತ್ತರು. ಅಭಿವೃದ್ದಿ ಕಾರ್ಯಗಳು ಕಡಲ ತೀರದ ರಸ್ತೆ ಹಾಗೂ ಸಮುದ್ರಕ್ಕೆ ಕಲ್ಲು ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿರುವ ಕಾರಣ ರೋಹಿತ್ ಆರು ತಿಂಗಳು ಹಿಂದಿನ ಕಣ್ಣಾರೆ ಕಂಡ ಮಾಹಿತಿ ಹಳೆಯ ಸುದ್ದಿಯಾಗುತ್ತದೆ.
 
ಸುರತ್ಕಲ್ ದೀಪಸ್ತಂಬ ಬಳಿಯಲ್ಲಿ ಸಮುದ್ರ ತೀರದಲ್ಲಿ ಪೂರಾ ಕಲ್ಲು. ತೀರದಿಂದ ಮೇಲಕ್ಕೆ ಬಂದು ಸುತ್ತು ಬಳಸಿ ಮರಳ ತೀರಕ್ಕೆ ವಾಪಾಸು. ಸದಾಸಂ ಸಾಗಲು ಸ್ಪಷ್ಟ ನಿರ್ದೇಶನ ಕೊಟ್ಟ ರೋಹಿತ್ ಮುಂದಿನ ಬೇಟಿಯ ಜಾಗಕ್ಕೆ ದಾವಿಸುತ್ತಿದ್ದರು. ನಾನು ಬಸ್ಸಿನಲ್ಲಿ ಬಂದಿಳಿದ ಗೆಳೆಯ ಅನಿಲ್ ಕುಮಾರರ ರಸ್ತೆ ಬದಿಯಿಂದ ಕರಕೊಂಡು ಶರತ್ ಬಾರಿನ ಹತ್ತಿರ ಸಾಗುವ ರಸ್ತೆಯಲ್ಲಿ ಸಸಿಹಿತ್ಲು ಸಮೀಪದ ಸಮುದ್ರ ತೀರಕ್ಕೆ ಹೋದೆ. ತಡವಾಗಿಯಾದರೂ ಅನಿಲಕುಮಾರ್ ನಮ್ಮ ತಂಡ ಸೇರಿಕೊಂಡದ್ದು ಬಹಳ ಉಪಕಾರವಾಯಿತು. ಮುಂದೆ ಸಂಜೆ ವರೆಗೆ ವಾನ್ ಓಡಿಸುವುದೂ ಪೋಟೊ ತೆಗೆಯುವುದೂ ಅವರು ಮಾಡಿದರು.




ಸದಾಸಂನಲ್ಲಿ ಸಾಗುವ ಅನಿಲ ಅಭಿಗೆ ಕಡಲ ತೀರದ ನೇರದಾರಿ. ಅನುಸರಿಸುವ ನಾವು ಸುತ್ತು ಬಳಸಿ ಕೆಲವೊಮ್ಮೆ ಗುಡ್ಡ ಹತ್ತಿ ಇಳಿದು ಸಾಗುವಾಗ ಅವರು ಮೊದಲೇ ಗಮ್ಯ ಸ್ಥಾನ ತಲಪಿರುತ್ತಾರೆ. ಒಂದಷ್ಟು ದೂರ ಸದಾಸಂ ಸಾಗುವ ವರೆಗೆ ಪೊಟೊ ತೆಗೆಯುತ್ತಿದ್ದು ನಂತರ ಕಾರಿಗೆ ಹಿಂತಿರುಗಿ ಓಡಿ ಬಂದು ಕೆಮರ ಜೋಪಾನವಾಗಿ ತೆಗೆದಿರಿಸಿ ಕಾರು ಓಡಿಸುವ ರೋಹಿತ್ ಒಮ್ಮೆಲೆ ಎರಡು ಮೂರು ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಇದೆಲ್ಲಾ ಮಾಡುವುದಲ್ಲದೆ ಅಲ್ಲಲ್ಲಿ ಹಕ್ಕಿಗಳ ಚಿತ್ರವನ್ನೂ ಸೆರೆ ಹಿಡಿಯುತ್ತಿದ್ದರು.

ಮದ್ಯಾಹ್ನ ವರೆಗೆ ನಮ್ಮ ಜತೆಯಲ್ಲಿದ್ದ ಮೊಟರ್ ಸೈಕಲಿನಲ್ಲಿ ಬಂದ ನಿಬಿಶ್ ಇಲ್ಲಿ ಬಹಳ ಸಹಾಯಮಾಡಿದರು. ಅಂತೂ ಗಡಿಬಿಡಿಯಲ್ಲಿ ಕಡಲತೀರಕ್ಕೆ ತಲಪುವಾಗ ನಮಗೆ ಸದಾಸಂ ಸವಾರರು ಮುಂದೆ ಸಾಗಿದ್ದಾರೋ ಅಲ್ಲ ಇನ್ನೂ ಹಿಂದಿನಿಂದ ಬರುತ್ತಿದ್ದಾರೋ ಎನ್ನುವ ಗೊಂದಲ ಎದುರಾಗುತಿತ್ತು. ಕೆಲವು ಕಡೆಗಳಲ್ಲಿ ಸಮುದ್ರಕೊರೆತಕ್ಕೆ ಕಲ್ಲು ಹಾಕಿದ ಕಾರಣ ರಸ್ತೆಯಿಂದ ಗೋಚರಿಸುವುದಿಲ್ಲ.

ಸಸಿಹಿತ್ಲು ಮುಂದಿನ ಸುಮಾರು ಆರು ಕಿಮಿ ಉದ್ದಕ್ಕೂ ರಸ್ತೆ ಕಡಲ ತೀರದಲ್ಲಿಯೇ ಸಾಗುತ್ತದೆ. ಅನಂತರ ಸುನಿಲ ಸವಾರಿಗೆ ಕುಳಿತ. ಮುಂದಿನ ದಾರಿಯಲ್ಲಿ ಸಾಗುವಾಗ ಹೆಚ್ಚು ಕಮ್ಮಿ ನಮ್ಮ ಕಣ್ಣೆದುರೇ ಇದ್ದ ಅನ್ನಬಹುದು. ಅಂತೂ ಸುಮಾರು ಹನ್ನೆರಡುವರೆಗೆ ಮೂಲ್ಕಿ ಅಳಿವೆ ಬಾಗಿಲಿಗೆ ತಲಪಿದೆವು.



ಶಾಂಬವಿ ಮತ್ತು ನಂದಿನಿ ನದಿಗಳು ಜತೆಯಾಗಿ ಸಮುದ್ರ ಸೇರುವ ಈ ಜಾಗ ಬಹಳ ಚೆನ್ನಾಗಿದೆ. ಹೆಜಮಾಡಿ ಕೋಡಿ, ಕೊಳಚಿಕಂಬಳ ಮತ್ತು ಚಿತ್ರಾಪು ದ್ವೀಪ ನಮ್ಮ ಎದುರಿಗಿತ್ತು. ಸುನಿಲನಿಗೆ ಸಮುದ್ರದಲ್ಲಿ ಡಾಲ್ಫಿನ್ ಅಲ್ಲಿ ಕಂಡದ್ದು ಬಹಳ ಸಂತಸವಾಯಿತು. ಅಗಾಗ ಪಕ್ಷಿ ವೀಕ್ಷಣೆಗೆ ಹೊಳೆಯಾಚೆಯ ಚಿತ್ರಾಪುವಿಗೆ ಬರುವ ರೋಹಿತ್ ಅವರಿಗೆ ಇದು ಬಹಳ ಪರಿಚಿತ ಪ್ರದೇಶ. ನಮಗೆ ವಿವಿದ ಸಮಯದಲ್ಲಿ ಬರುವ ಹಕ್ಕಿಗಳ ಹಾಗೂ ಅವುಗಳ ವರ್ತನೆಯ ಬಗ್ಗೆ ಮಾಹಿತಿ ಕೊಟ್ಟರು. ಅಲ್ಲಿ ಮುಕ್ಕಾಲು ಘಂಟೆ ಕಳೆದದ್ದೇ ನಮಗೆ ಗೋತ್ತಾಗಲಿಲ್ಲ.





ಮೂಲ್ಕಿಯಲ್ಲಿ ನದಿ ದಾಟುವ ಬಗೆಗೆ ಬಾರಿ ಜಿಜ್ನಾಸೆಯಲ್ಲಿದ್ದೆ. ಯೋಚನೆ ಬೇಡ ನನ್ನನ್ನು ಹಿಂಬಾಲಿಸು ಎಂದ ರೋಹಿತ್ ನೇರವಾಗಿ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಕಾರು ಓಡಿಸಿದರು. ಮದ್ಯದಲ್ಲಿ ಅನಿಲ ಸದಾಸಂನಲ್ಲಿದ್ದು ನಾನು ಮತ್ತು ಅನಿಲ್ ಕುಮಾರ್ ವಾನಿನಲ್ಲಿ ಹಿಂಬಾಲಿಸಿದೆವು. ಕೆಲವೆಡೆ ಹೋಂಡ ಗುಂಡಿ ತುಂಬಿದ ರಾಜ ರಸ್ತೆ ವಾಹನಗಳಿಗಿಂತ ಸದಾಸಂಗೆ ಹೆಚ್ಚು ಸೂಕ್ತವೆನಿಸುವಂತಿತ್ತು. ಮೂಲ್ಕಿ ಊರ ಮದ್ಯೆ ನಮ್ಮ ಮೆರವಣಿಗೆ ಊಟಕ್ಕೆಂದು ಹೋಟೆಲ್ ಪಕ್ಕದಲ್ಲಿ ನಿಂತಿತು.


ಸದಾ ರೋಹಿತರ ಕಾರನ್ನು ಹಿಂಬಾಲಿಸುತ್ತಿದ್ದ ಸದಾಸಂ ಫಕ್ಕನೆ ಎದುರಲ್ಲಿರುವವರಿಗೆ ಗೋಚರವಾಗುತ್ತಿರಲಿಲ್ಲ. ದಾಟಿದ ತಕ್ಷಣ ಇದ್ಯಾವ ಕರ್ಕಶ ಶಬ್ದ ಎಂದು ಜನರು ತಿರುಗಿ ನೋಡುವಾಗ ಅನಿರೀಕ್ಷಿತವಾಗಿ ಅಪರೂಪವೆನಿಸುವ ಆಕಾರದ ಸದಾಸಂ ಗೋಚರವಾಗುತ್ತದೆ. ಆಗ ಬಾಯಿ ಬಿಟ್ಟು ನೋಡುವ ಅವರ ಅಶ್ಚರ್ಯದ ನೋಟ ನನಗೂ ನಾನಿದ್ದ ವಾಹನ ಚಾಲನೆ ಮಾಡುತ್ತಿದ್ದ ಅನಿಲ್ ಕುಮಾರರಿಗೂ ಒಳ್ಳೆಯ ಮನರಂಜನೆಯಾಗಿತ್ತು.



ಉಳಿದ ಇಬ್ಬರು ಚಾಲಕರಂತೆ ಅನಿಲನೂ ಅವನ ವಾಹನದ ಕೀಲಿಕೈ ಹಿಡಿದುಕೊಂಡು ಹೊಟೇಲಿನೊಳಗೆ ಹೋದ. ನೆನಪಾಯಿತು - ಮೂವತ್ತೈದು ವರ್ಷ ಹಿಂದೆ ನಾನು ಮೊದಲು ನಮ್ಮ ಹಳ್ಳಿಯ ಪಕ್ಕದ ಪಟ್ಟಣಕ್ಕೆ ಕೊಂಡು ಹೋದ  ಮೊದಲ  ವಾಹನ ಹಿಂಬಾಲಕ ಗಾಡಿ ಒಳಗೊಂಡ ನಮ್ಮ ಪವರ್ ಟಿಲ್ಲರ್.  ನೂರು ಲೀಟರ್ ಡೀಸಲ್ ತರಲು ಟಿಲ್ಲರ್ ತಗೊಂಡು ಹೋಗಲು ಅಪ್ಪನ ಒಪ್ಪಿಗೆ ಪಡಕೊಂಡಿದ್ದೆ. ಅಂದು ವಾಹನ ಚಾಲನೆ ಪರವಾನಿಗೆ ಪಡಕೊಳ್ಳಲು ನನಗೆ ಪ್ರಾಯ ಆಗಿರಲಿಲ್ಲ.  ಅನಿಲನಿಗೂ ಈಗ  ಇತರ ವಾಹನ ಪರವಾನಿಗೆ ಪಡಕೊಳ್ಳಲು ಪ್ರಾಯ ಆಗಲಿಲ್ಲ.

ನಮಗೆ ಮೊದಲ ನೋಟಕ್ಕೆ ಮರಳಿನಲ್ಲಿ ಸಾಮ್ಯತೆ ಕಂಡರೂ ಸಮೀಪದಿಂದ ನೋಡುವಾಗ ವ್ಯತ್ಯಾಸ ಗುರುತಿಸಲು ಸಾದ್ಯವಾಗುತ್ತದೆ. ಒದ್ದೆ ಮರಳಾಗಲಿ ಒಣ ಮರಳಾಗಲಿ ತುಲನೆ ಮಾಡುವಾಗ ಚಕ್ರಕ್ಕೆ ಕೊಡುವ ಹಿಡಿತದಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಅದುದರಿಂದ ನಮ್ಮ ಸಮಯಸೂಚಿ ಪೂರಾ ಅಡಿಮೇಲಾಯಿತು. ಚಕ್ರಕ್ಕೆ ಹಿಡಿತ ಸಿಗದೆ ಹುಗಿಯುತ್ತಾ ನಿದಾನವಾಗಿ ಸಾಗುವುದು ಹಲವು ಕಡೆಗಳಲ್ಲಾಯಿತು.

ಬಿಸಿಲಿನ ಹೊಡೆತ ಬಹಳ ಇರುತ್ತದೆ ಎಂದು ರೋಹಿತ್ ಸೂಚನೆ ಮೊದಲೇ ಕೊಟ್ಟ ಕಾರಣ sunscreen lotion ತಗೊಂಡು ಹೋಗಿದ್ದೆವು. ಮೂವರು ಮಕ್ಕಳು ಅದನ್ನು ಹಚ್ಚಿಕೊಂಡು ಚರ್ಮ ಬೆಂದು ಹೋಗುವುದರ ತಪ್ಪಿಸಿಕೊಂಡರು. ನಾವು ನಿರಂತರವಾಗಿ ಬಿಸಿಲಿನಲ್ಲಿ ಇಲ್ಲದ ಕಾರಣ ನಮಗೆ ಹಚ್ಚಿಕೊಳ್ಳದಿರುವುದು ತೊಂದರೆಯಾಗಲಿಲ್ಲ.

ಸದಾಸಂ ಬಿಡಿಬಾಗಗಳ ಬಗ್ಗೆ ಬಹಳ ಕಾಳಜಿ ವಹಿಸಿದ್ದೆ. ಭಾನುವಾರ ಎಂದರೆ ಯಾವ ಬಿಡಿಬಾಗ ಅಂಗಡಿಯೂ ತೆರೆದಿರುವುದಿಲ್ಲ. ಸಾಮಾನ್ಯವಾಗಿ ಬದಲಾಯಿಸುವ ಎಲ್ಲ ಸಾಮಾನುಗಳ ಪಟ್ಟಿ ಮಾಡಿ ಒಯ್ದಿದ್ದೆ. ಚಕ್ರ ಮೇಲೆ ಎರಚುವ ಮರಳು ಚೈನ್ ಕೊರೆಯುವ ಕಾರಣ ಒಂದು ಚೈನ್ ಮಾತ್ರವಲ್ಲ ಹೆಚ್ಚುವರಿ ಲಿಂಕ್ ಸಹಾ ನನ್ನಲ್ಲಿತ್ತು. ಆದರೆ CD unit ಹೊರತು ಪಡಿಸಿ ಯಾವ ಬಾಗವೂ ಕೈಕೊಡಲಿಲ್ಲ. ಅದೂ ಸಹಾ ಮುಂಚಿನ ದಿನದ ಸ್ನಾನದಿಂದಾಗಿ ಇರಬಹುದು ಅನ್ನಿಸುತ್ತದೆ. ಯಾಕೆಂದರೆ ವಿಫಲವಾದ ಬಿಡಿ ಬಾಗ ಈಗ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.




ಭರತದ ಸಮಯವಾದುದರಿಂದ ಎರಡು ಜಾಗಗಳಲ್ಲಿ ಏರಿನಿಂತ ನೀರು ನಮಗೆ ದಾರಿಗಡ್ಡವಾಯಿತು. ಪಡುಬಿದ್ರೆ ಸಮೀಪ ವಾಪಾಸು ಹೆದ್ದಾರಿಗೆ ಬರದೆ ವಿದಿಯಿರಲಿಲ್ಲ. ಉಚ್ಚಿಲ ಸಮೀಪದಲ್ಲಿ ಪಕ್ಕದಲ್ಲಿರುವ ರಸ್ತೆಗೆ ಏರಿ ದಾಟಲು ಸಾದ್ಯವಾಯಿತು. ಗೂಗಲ್ ಚಿತ್ರವನ್ನು ಅನುಸರಿಸಿ ಕಣ್ಮುಚ್ಚಿ ಬರುವಂತಿಲ್ಲ ಅನ್ನುವುದಕ್ಕೆ ಇದೊಂದು ಉದಾಹರಣೆ. ಭಟ್ಕಳ ಸಮೀಪದ ಗೂಗಲ್ ಚಿತ್ರದಲ್ಲಿ ಸದಾ ಮೋಡ ಹಾಗೂ ಮೋಡದ ನೆರಳು ಕಾಣುತ್ತದೆ ಅನ್ನೋದು ಬೇರೆ ವಿಚಾರ.
 
ಸಂಜೆ ನಾಲ್ಕೂವರೆಗೆ ಕಾಪು ದೀಪಸ್ಥಂಬ ತಲಪಿದರು ಅನಿಲ್ ಮತ್ತು ಅಭಿ. ಅಲ್ಲಿ ಸುಂದರ ಮರಳ ಶಿಲ್ಪ ಮಾಡಿದ್ದರು. ಕಾಪುವಿನಲ್ಲಿ ದೀಪಸ್ಥಂಬ ದಾಟಿದ ನಂತರ ಗೂಗಲ್ ಚಿತ್ರ ಒಂದು ತೋಡು ದಾಟಲು ಸಂಕ ತೋರಿಸುತ್ತದೆ. ಆದರೆ ಅದನ್ನು ಸಮೀಪಿಸಲು ದಾರಿ ಉಂಟೊ ಅನ್ನುವುದು ನನಗೆ ಅಲ್ಲಿಗೆ ತಲಪುವ ತನಕವೂ ಸಂಶಯ ಇತ್ತು. ಆದರೆ ತೊಂದರೆ ಉಂಟಾಗಲಿಲ್ಲ. ಸದಾಸಮ್ ಮತ್ತು ಜತೆ ವಾಹನಗಳು ಸಂಕ ಸಲೀಸಾಗಿ ದಾಟಿದವು. ಅನಂತರ ಹೊಯಿಗೆಯಲ್ಲಿ ಹೋಗುವವನನ್ನು ಬೀಳ್ಕೊಟ್ಟೆವು.

ಗುಡುಗು ಮಿಂಚು ಮಳೆಯ ಲಕ್ಷಣಗಳು ಜೋರಾಗುತ್ತಾ ಇತ್ತು. ಅನಿಲ ಒದ್ದೆಯಾಗಲು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ನಮ್ಮ ಒತ್ತಡಕ್ಕೆ ಮುಂದುವರಿಯಲು ಒಪ್ಪಿದ. ಸ್ವಲ್ಪ ದೂರ ಅನಂತರ ನಮ್ಮ ಮುಂದಿನ ಭೇಟಿಯಲ್ಲಿ ನಾನು ಅವನನ್ನು ಇಳಿಸಿ ಸವಾರಿಗೆ ಸದಾಸಂ ಏರಿದೆ. ಎರಡು ಕಿಮಿ ಮುಂದೆ ತಂಡದವರನ್ನು ನನಗೆ ಸಿಕ್ಕಲು ಹೇಳಿದೆ.

ಐವತ್ತಡಿ ಅಡಿ ಸಾಗುವುದರೊಳಗೆ ಬಂದ ಬೃಹತ್ ತೆರೆ ನನ್ನನ್ನು ಸೊಂಟದ ವರೆಗೂ ಸದಾಸಂನ್ನು ಸಂಪೂರ್ಣವಾಗಿ ತೋಯಿಸಿತು. ಎಲ್ಲಿಯೊ ವಾಹನದ ವಿದ್ಯುತ್ ಜಾಲದಲ್ಲಿ ಅವ್ಯವಸ್ಥೆ ಉಂಟು ಮಾಡಿತು. ಯಂತ್ರ ಸ್ಥಬ್ದವಾಯಿತು. ಅಲ್ಲಿನ ವರೆಗೆ ಸದಾಸಂ ಚಾಲಕ ಸದಾ ಸಂಚಾರವಾಣಿ ಇಟ್ಟುಕೊಂಡಿದ್ದರೆ ಇಲ್ಲಿ ನನ್ನ ಜತೆಯಲ್ಲಿ ಮಾತ್ರ ಅದು ಇರಲಿಲ್ಲ. ಹಾಗಾಗಿ ನನಗೆ ತಂಡದವರ ಸಂಪರ್ಕಿಸಲು ಕಷ್ಟವಾಯಿತು. ಎರಡೂ ಬದಿ ನೀರಿನ ಮದ್ಯೆ ಅಲ್ಲಿದ್ದದ್ದು ಒಂದೇ ಹಾದಿ. ಕೊನೆಗೆ ದಾರಿಯಲ್ಲಿ ಹೋಗುತ್ತಿರುವ ಒಂದು ರಿಕ್ಷವನ್ನು ನಿಲ್ಲಿಸಿ ಪಾಚಿ ಬಣ್ಣದ ಒಮ್ನಿಗೆ ಸಂದೇಶ ಕಳುಹಿಸಲು ಯತ್ನಿಸಿದೆ.

ನಾನು ಮನೆಯಿಂದ ಹೊರಡುವಾಗ ಸಿದ್ದ ಪಡಿಸಿದ ವೇಳಾಪಟ್ಟಿಯಲ್ಲಿ ಸಂಜೆ ಐದೂವರೆಗೆ ಸದಾಸಂ ವಾಹನಕ್ಕೆ ಹೇರುವುದಾಗಿತ್ತು. ಮನೆಗೆ ವಾಪಾಸು ಬರಲು ಕನಿಷ್ಟ ಮೂರು ಘಂಟೆ ಬೇಕೆಂದು ತೀರ್ಮಾನಿಸಿದ್ದೆ. ಆದರೆ ನಾನು ಸದಾಸಂ ಏರಿದಾಗಲೇ ಘಂಟೆ ಐದಾಗಿತ್ತು.

ಮುಂದೆ ಹೋದವರು ಸ್ವಲ್ಪ ಸಮಯ ಕಾದು ಅನಂತರ ವಾಪಾಸು ಬಂದರು. ನಾನು ಅಷ್ಟರೊಳಗೆ ಊರ ಹುಡುಗರ ಸಹಾಯದಿಂದ ನನ್ನ ಕುದುರೆಯನ್ನು ರಸ್ತೆ ಬದಿಗೆ ತಂದಿರಿಸಿದ್ದೆ. ಮಳೆ ಜೋರಾಗಿತ್ತು. ನಾವೆಲ್ಲ ಒದ್ದೆಯಾಗಿದ್ದೆವು. ಸದಾಸಂ ಎತ್ತಿ ಒಮ್ನಿಯೊಳಗಿಟ್ಟೆವು. ಹೆದ್ದಾರಿ ತಲಪುವಾಗ ಗುಡುಗು ಸಿಡಿಲು ಮಳೆ. ವಾಪಾಸು ಬರುವಾಗಲೂ ಮುಡಿಪು ದಾರಿಯಾಗಿ ಬಂದೆ. ಬಸ್ಸಿನಲ್ಲಿ ಬಂದ ಇಬ್ಬರು ಅನಿಲರು ಊರು ಮುಟ್ಟುವಾಗ ನಾನೂ ತಲಪಿದೆ. ಅಂತೂ ರಾತ್ರಿ ಒಂಬತ್ತುವರೆಗೆ ಮನೆ ಸೇರಿದೆವು.

ಮರುದಿನ ಮಧ್ಯಾಹ್ನ ನೋಡುವಾಗ ಪೈಂಟ್ ಮಾಸಿದ ಜಾಗದಲ್ಲಿ ತುಕ್ಕು ಹಿಡಿಯಲು ಪ್ರಾರಂಬವಾಗಿತ್ತು. ಅಂದು ಸಂಪತ್ ಚೆನ್ನಾಗಿ ತೊಳೆದ ಕಾರಣ ಉಪ್ಪು ನೀರಿನ ಲೇಪನ ಅಳಿಸಿಹೋಯಿತು.

4 comments:

ಕೇಸರಿ ಪೆಜತ್ತಾಯ said...

ಗೋವಿಂದರೇ!

ಎರಡನೇ ಕಂತಿನ ತಮ್ಮ ಕಡಲ ತೀರದ ಗುಡು ಗುಡು ಕುದುರೆ ಸವಾರಿಯ ಸಚಿತ್ರ ವಿಭಾಗ ನಿಜವಾಗಿಯೂ ಒಳ್ಳೆಯ ಮಾಹಿತಿ ಮತ್ತು ಮನರಂಜನೆ ನೀಡಿತು. ಐವತ್ತು ವರುಷಗಳ ಹಿಂದೆ ಉಡುಪಿ ಮಲ್ಪೆಯಿಂದ ಮಂಗಳೂರಿನ ಕಿನಾರೆಯ ವಾಕೋ ಮೊಬೈಲ್ (= ಪಾದ = ಬಸ್ ನಂ. 11 ) ಯಾತ್ರೆ ಮಾಡಿದ್ದ ನೆನಪು ನನಗೆ ಮರಳಿ ಬಂತು.

ಸಮುದ್ರ ಬದಿಯಲ್ಲಿ ಸೈಕಲ್ ಓಡಿಸಲು ಯಾರೂ ಬಾಡಿಗೆ ಸೈಕಲ್ ನಮಗೆ ಕೊಡುತ್ತಾ ಇರಲಿಲ್ಲ. ನಮ್ಮ ಚಪ್ಪಲಿಗಳಿಗೆ ಮರಳು ತುಂಬುತ್ತಾ ಇದ್ದುದರಿಂದ, ನಮ್ಮ ಯ್ಯಾತ್ರೆ ತೆರೆಯ ಬದಿಯಗಟ್ಟಿ ಮರಳಲ್ಲೇ ಸಾಗಿತ್ತು. ನಮ್ಮ ಅಮೂಲ್ಯ ಚಪ್ಪಲಿಗಳು ಕೈಚೀಲ ಸೇರಿದ್ದುವು. ನಿಮ್ಮ ನೆಲಬಾಂಬುಗಳು ಆ ದಿನಗಳಲ್ಲಿ 'ಹೆಚ್ಚಿನ ಪ್ರಮಾಣದಲ್ಲಿ' ಇರಲಿಲ್ಲ. ಆಗ ಜನರಿಗೆ ಸಮುದ್ರ 'ಪವಿತ್ರ' ಎಂಬ ಭಾವನೆ ಇತ್ತು. ಈಗ ಜನಸಂಖ್ಯೆಯ ಒತ್ತಡದಿಂದ ಹೀಗಾಗಿದೆ. ತಾವುಗಳು ಈ ತರಹೆಯ ಲ್ಯಾಂಡ್ ಮೈನ್ಗಳನ್ನು ಅವಾಇಡ್ ಮಾಡಿದ್ದೇ ದೊಡ್ದ ಸಾಹಸ! ತಮ್ಮ ಸುಪುತ್ರ ಅನಿಲನ ಧೈರ್ಯ ಮತ್ತು ಸಾಹಸ ಪ್ರಿಯತೆಗೆ ನಮೋ ನಮೋ! ತಾವು ನೆಲ ಬಾಂಬು ಎಂಬ ಪದವನ್ನು ಅಂದು ಬಳಸುತ್ತಾ ಇರಲಿಲ್ಲ. 'ಅಪರೂಪದ ಸಾಲಿಗ್ರಾಮ " - ಅಂತ ತಮಾಷೆಗೆ ಆಡಿಕೊಳ್ಳುತ್ತಾ ಇದ್ದೆವು.

ಗೋವಿಂದರೇ! ಅನಿಲ ಮತ್ತು ಸುನಿಲರೇ ತಮಗಿಂತ ಹುಶಾರಿ! ತಾವು ಕುದುರೆ ಹತ್ತಿ ಓಡಿಸಿದಾಗ ತಮ್ಮ 'ಕುದುರೆ ನೀರುಕಂಡಾಗ ನಿಲ್ಲುವ ಕುದುರೆ'ಯೇ ಆಯಿತು! ತಮ್ಮ ಬರವಣಿಗೆ ಇದೇ ರೀತಿ ಸಾಗುತ್ತಾ ಇರಲಿ!

ಹಾರ್ದಿಕ ಅಭಿನಂದನೆಗಳು.

- ಕೇಸರಿ ಪೆಜತ್ತಾಯ

ಕೄಷ್ಣಮೋಹನ said...

ಸದಾಸಂ ಮೇಲಿನ ಸವಾರಿ ಐವತ್ತು ಕಿಮಿ ಕ್ರಮಿಸಿದನ್ನು ಎರಡು ಕಂತಿನಲ್ಲೂ ಬಹಳ ಸ್ವಾರಸ್ಯದಿಂದ ವರ್ಣಿಸಿದ್ದೀರಿ. ನೆಲ ಬಾಂಬು ಸಾಹಸ ಮನರಂಜನೆ ನೀಡಿತು. ನಿಮ್ಮ, ಹಾಗೂ ಅನಿಲ ಮತ್ತು ಸುನಿಲರ ಸಾಹಸ ಇದೇ ರೀತಿ ಸಾಗುತ್ತಾ ಇರಲಿ.
ಕೄಷ್ಣಮೋಹನ

ವನಿತಾ / Vanitha said...

ನಿಂಗಳ ಬಗ್ಗೆ ಅಜ್ಜಿ, ಅಮ್ಮನಿಂದ
ತಿಳಿದು ಗೊತ್ತಿತ್ತು.(ಅಂದಹಾಗೆ ಆನು ಸೊಂದಿ ಅಜ್ಜಿಯ ಮೊಮ್ಮಗಳು). ನಿಮ್ಮ ಮಕ್ಕಳಾದ ಅನಿಲ,ಸುನಿಲರ ಸದಾಸಂ ಸವಾರಿ ಕೇಳಿ ಕುಶಿಯಾತು. Like father; Like son..hats off to you and your kids efforts!!...

ಅಶೋಕವರ್ಧನ said...

ಪ್ರಿಯ ಗೋ
ಪಣಂಬೂರಿನಿಂದ ಕಾಪಿನವರೆಗೆ ನಿನ್ನ ನೋಟದಲ್ಲಿ ಪಾಲುದಾರನಾಗಿ, ನಿನ್ನ ಬರಹದಲ್ಲಿ ಅನುಭವಿಯಾಗಿ ಸಂತೋಷಪಟ್ಟೆ. ವಿದ್ಯಾರ್ಥಿ ದೆಸೆಯಲ್ಲಿ (ಮೈಸೂರಿನಲ್ಲಿ) ಕಪಿನಿ ನದಿ ದಂಡೆಯಲ್ಲಿ ಎರಡು ದಿನ ಚಾರಣ ನಡೆಸಿದ್ದರಿಂದ ತೊಡಗಿ ಆರೋಹಣದ ಅನುಭವಗಳ ಎಡೆಯಲ್ಲಿನ ಸಮ-ಭಾವದ ನೆನಪುಗಳೂ ಮರುಕಳಿಸುವಂತೆ ಮಾಡಿದ್ದಕ್ಕೆ ಕೃತಜ್ಞ. ನಮ್ಮ ಕುದುರೆಮುಖ ಗಣಿಗಾರಿಕೆ ವಿರೋಧಿ ಚಟುವಟಿಕೆಗಳು ತೀವ್ರವಾಗಿದ್ದ ಕಾಲದಲ್ಲಿ ಕೇವಲ ನಾಲಿಗೆ ಚಾಪಲ್ಯದ ಡಾ| ಬಿ.ಎಂ. ಹೆಗಡೆ ಎಂಬ ಪರಿಸರ-ವ್ಯಾಧಿ, "ದಾರಿ ಬದಿಯಲ್ಲಿ ಹೇಲುವುದರಿಂದಾಗುವ ಪರಿಸರ ಹಾನಿ ದೊಡ್ಡದು." ಅದನ್ನು ತಡೆಯಲು ನಮಗೆ ಸಲಹೆ ಕೊಟ್ಟದ್ದೂ ನೆನಪಿಗೆ ಬಂತು.

ಮೋಟಾರ್ ಬೈಕ್ ವಿಶ್ವಯಾನದ ಕನಸಿಗೆ ರಗಳೆಗಳು ಸಾವಿರ ಕಾಡಿದಾಗ ಇದ್ದಕ್ಕಿದ್ದಂತೆ ಸೈಕಲ್ ಕೊಂಡು ಗುಜರಾತಿನವರೆಗೆ trial run ಮಾಡಿದವ ನೀನು. ಹಾಗೇ ಈ ಪಣ-ಕಾಪು ಓಟ ನಾಳೆ ಸದಾಸಂ ವಿಶ್ವಯಾನಕ್ಕೆ ನಾಂದಿಯಾದೀತೇ ಎಂದು ಯೋಚನೆ ಬರುತ್ತಿದೆ - ಹಾಗಾದರೆ ಅದೂ ಸೇರಿದಂತೆ ನಿನ್ನ, ಮಕ್ಕಳ (ಕಾಂಗರೂ ಮರಿ ಅಭಿಗೂ) ಸೈನ್ಯಕ್ಕೆ ಶುಭವಾಗಲಿ

ಅಶೋಕವರ್ಧನ