Sunday, March 28, 2010

ಸೈಕಲ್ ಲೋಕದಲ್ಲಿ ವೇಗದೂತ

ನೆದರ್ ಲಾಂಡಿನಲ್ಲಿ ನನ್ನ ಪಾಡಿಗೆ ಸೈಕಲಿಸುತ್ತಿದ್ದೆ. ಅನಿರೀಕ್ಷಿತವಾಗಿ ಬಹಳ ವೇಗವಾಗಿ ದಾಟಿ ಹೋದ ಸೈಕಲು ನನ್ನನ್ನು ಆಶ್ಚರ್ಯಚಕಿತನನ್ನಾಗಿ ಮಾಡಿತು. ಬಹಳ ಪ್ರಯತ್ನಿಸಿದರೂ ನನಗೆ ಅದರನ್ನು ಸಮೀಪಿಸಲು ಸಾದ್ಯವಾಗಲೇ ಇಲ್ಲ. ನಮ್ಮ ಮದ್ಯೆ ಇರುವ ಅಂತರ ಹೆಚ್ಚಾಗುತ್ತಲೇ ಹೋಯಿತು. ನಂತರ ಗೊತ್ತಾದ ವಿಚಾರ ಅದೊಂದು recumbent cycle.



ವೈಜ್ನಾನಿಕವಾಗಿ ಆಲೋಚಿಸುವಾಗ ನಾವು ಮುಂದೆ ಸಾಗುವಾಗ ಗಾಳಿಯನ್ನು ಸೀಳುತ್ತಾ ಸಾಗುತ್ತೇವೆ. ನಡುಗೆಯ ವೇಗದಲ್ಲಿ ಅದು ನಮ್ಮನ್ನು ಸಮಸ್ಯೆ ಉಂಟು ಮಾಡುವುದಿಲ್ಲ. ಆದರೆ ವೇಗ ಹೆಚ್ಚಿದಂತೆ ಅದು exponentially ಹೆಚ್ಚಾಗುತ್ತದೆ. ಇಪ್ಪತ್ತೈದು ಕಿಮಿ ವೇಗದಲ್ಲಿ ಸಾಗುವ ಸೈಕಲ್ ಸವಾರ ತನ್ನ ಶಕ್ತಿಯ ಅರ್ಧ ಬಾಗವನ್ನು ಈ ಗಾಳಿಯ ತಡೆಯನ್ನು ಭೇದಿಸುವಕ್ಕೆ ವಿನಿಯೋಗಿಸುತ್ತಾನೆ. ಸಾಗಿದ ಕೂಡಲೇ ಬೆನ್ನ ಹಿಂದೆ ಉಂಟಾಗುವ ಗಾಳಿಯ ಕಡಿಮೆ ಒತ್ತಡ ಸಾಗುವವನನ್ನು ಹಿಂದಕ್ಕೆ ಎಳೆಯುತ್ತದೆ. ಅದುದರಿಂದ ಗಾಳಿಗೆ ಎದುರಾಗುವ ದೇಹದ ವಿಸ್ತೀರ್ಣ ಕಡಿಮೆಯಾಗಲು ಸೈಕಲ್ ಸ್ಪರ್ಧಾಳುಗಳು ಬಾಗಿ ಸೈಕಲಿಸುತ್ತಾರೆ.

ಜೋರಾಗಿ ಸೈಕಲ್ ತುಳಿಯುವುದರಲ್ಲಿ ಗಾಲಿ ತಳ್ಳುವುದರ ಬದಲಿಗೆ ಗಾಳಿ ತಳ್ಳುವುದಕ್ಕೆ ಬಹಳ ಶಕ್ತಿ ವಿನಿಯೋಗವಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ಸುಮಾರು ನೂರು ವಾಟ್ಸ್ ಶಕ್ತಿಯಿಂದ ಸೈಕಲಿಸಬಹುದೆಂದು ಅಂದಾಜಿಸಲಾಗಿದೆ. ಎಡೆಬಿಡದೆ ಇಪ್ಪತ್ತನಾಲ್ಕು ಘಂಟೆ ಸೈಕಲಿಸಿದ ಹಳೆಯ ದಾಖಲೆಯನ್ನು ದಾಟಲು ಪ್ರಯತ್ನಿಸಿದ ಗ್ರೆಗ್ ಅವರ ಕತೆ ಚೆನ್ನಾಗಿದೆ. ಅವರು ಅದಕ್ಕಾಗಿ ತಯಾರು ಮಾಡಿದ ವಾಹನ ನೂರು ವಾಟ್ಸ್ ಶಕ್ತಿ ಉಪಯೋಗಿಸಿ ನಲುವತ್ತೈದು ಕಿಮಿ ಕ್ರಮಿಸಬಹುದಾದರೆ ನಮ್ಮ ಮಾಮೂಲಿ ಸೈಕಲ್ ಬರೇ ಇಪ್ಪತ್ತೆರಡು ಕಿಮಿ ಹೋಗುತ್ತದೆ. ಗ್ರೆಗ್ ಅವರು ಇಪ್ಪತ್ತ ನಾಲ್ಕು ಘಂಟೆಯಲ್ಲಿ ಒಂದು ಸಾವಿರದ ನಲುವತ್ತ ಎರಡು ಕಿಮಿ ದೂರದಷ್ಟು ಸೈಕಲಿಸಿದ್ದರು.

ಎದುರು ಗಾಳಿ ಅನುಭವಿಸಿದ ಸೈಕಲಿಗನಿಗೆ ಅದು ಎಷ್ಟು ಕಷ್ಟವೆನ್ನುವುದು ಅರಿವಿರುತ್ತದೆ. ಗಾಳಿಗೆ ಎದುರಾಗುವ ನಮ್ಮ ದೇಹದ ಚದರಳತೆ ಗಾಳಿಯ ತಡೆಯನ್ನು ನಿರ್ಣಯಿಸುತ್ತದೆ. ಅದುದರಿಂದ ವೇಗವಾಗಿ ಸೈಕಲಿಸುವವರು ಬಗ್ಗಿ ಸೈಕಲ್ ತುಳಿಯುತ್ತಾರೆ. ನಾವು ದರಿಸುವ ಬಟ್ಟೆ ದೊರಗಾಗಿದ್ದರೆ ಸಹಾ ಗಾಳಿಯ ತಡೆ ಹೆಚ್ಚು. ದೇಹಕ್ಕಂಟುವ ಪೋಲಿಸ್ಟರ್ ಬಟ್ಟೆಯನ್ನು ಸೈಕಲ್ ಸವಾರಿಯನ್ನು ಗಂಬೀರವಾಗಿ ಪರಿಗಣಿಸುವವರು ದರಿಸುತ್ತಾರೆ.



೧೮೯೯ರಲ್ಲಿ ಒಬ್ಬ ಸೈಕಲಿಗ ಅಂದು ಮಾರುಕಟ್ಟೆಯಲ್ಲಿದ್ದ ಅತ್ಯಂತ ವೇಗದ ವಾಹನಕ್ಕಿಂತ ಹೆಚ್ಚು ಜೋರಾಗಿ ಸಾಗಿ ಒಂದು ನಿಮಿಷದಲ್ಲಿ ಒಂದು ಮೈಲು ಕ್ರಮಿಸಿದ್ದ. ರೈಲು ಹಳಿಗಳ ಮದ್ಯೆ ಹಾಕಿದ್ದ ಹಲಗೆಯ ಮೇಲೆ ಸೈಕಲ್ ಸವಾರಿ ಕೈಗೊಳ್ಳಲಾಗಿತ್ತು. ಅವನಿಗೆ ಎದುರು ರೈಲು ಗಾಡಿಯೊಂದು ಗಾಳಿಯ ತಡೆ ನಿವಾರಿಸುತ್ತಾ ಸಾಗಿತ್ತು. ಅದರ ನೆರಳಲ್ಲಿ ಉಂಟಾದ ನಿರ್ವಾತ ಪ್ರದೇಶ ಹಿಂದಿನಿಂದ ಸಾಗಿದ ಚಾರ್ಲಿಗೆ ಪರೋಕ್ಷ ಸಹಾಯವನ್ನೂ ಮಾಡಿತ್ತು.


ಮೇಲಿನ ಚಿತ್ರದಲ್ಲಿರುವ ಬಾರ್ಬರ ಎಂಬವರು ಕಳೆದ ವರ್ಷ ಜೂನಿನಲ್ಲಿ ಕೇವಲ ಎಂಬತ್ತ ಎರಡು ಕಿಮಿ ವೇಗದಲ್ಲಿ ಸೈಕಲಿಸಿ ವೈಯುಕ್ತಿಕ ದಾಕಲೆ ಸ್ಥಾಪಿಸಿದರು. ಅವರಿಗೆ ಮಹಿಳೆಯರಲ್ಲಿ ಪ್ರಥಮ ಮತ್ತು ಪ್ರಪಂಚದ ನಾಲ್ಕನೆಯ ಸ್ಥಾನ ಎಂಬ ಎರಡು ದಾಖಲೆಗಳು ಲಬ್ಯವಾದವು. ಈ ಪುಟ್ಟ ರೀಲು ನೋಡುವಾಗ ನಿಮಗೆ ಅಂದು ನನಗಾದ ಅನುಭವ ಹೆಚ್ಚು ಅರ್ಥವಾಗಬಹುದು.

ಈ ಸೈಕಲುಗಳು ದೊಡ್ಡ ಸಂಖ್ಯೆಯಲ್ಲಿ ತಯಾಗದ ಕಾರಣ ಬಹಳ ದುಬಾರಿ. ಎಲ್ಲವೂ ಎಂಟು ಹತ್ತು ಜನ ಕೆಲಸ ಮಾಡುವ ತಿಂಗಳಿಗೆ ನಾಲ್ಕು ಎಂಟು ಸೈಕಲು ನಿರ್ಮಿಸುವ ಪುಟ್ಟ ಕಾರ್ಖಾನೆಗಳು. ಆಸಕ್ತ ಜನ ಮಾತ್ರ ಇವುಗಳ ಗಿರಾಕಿ.

ಅಮೇರಿಕದ ಬಾವಿ ಇಂಜಿನಿಯರುಗಳು ಮನುಷ್ಯ ಚಾಲಿತ ವಾಹನ ಅಬಿವೃದ್ದಿ ಪಡಿಸುತ್ತಿದ್ದಾರೆ. ಅವರು ಅತ್ಯುತ್ತಮ ಸೈಕಲುಗಳ ವಿನ್ಯಾಸಗೊಳಿಸುವ ಸ್ಪರ್ದೆಯಲ್ಲಿ ಬಾಗವಹಿಸುತ್ತಾರೆ. ಪ್ರಪಂಚದ ಹಲವು ಕಡೆಗಳಲ್ಲಿ ವಾಹನಗಳ ನೂಕು ಬಲ ಮಾನವ ಶಕ್ತಿಯಿಂದ ಮಾತ್ರ ಪೊರೈಸಲು ಸಾದ್ಯ. ಅದುದರಿಂದ ಮಾನವನ ಶ್ರಮ ಸದುಪಯೋಗಗೊಳಿಸುವ ಈ ಪ್ರಯತ್ನಗಳು ಖಂಡಿತ ಆರೋಗ್ಯಕರ.


ಕಳೆದ ತಿಂಗಳು ಪಿತಾಂಪುರದಲ್ಲಿ ಬಾರತದ ಐವತ್ತಕ್ಕೂ ಮಿಕ್ಕಿ ಇಂಜಿನಿಯರಿಂಗ್ ಕಾಲೇಜುಗಳು ಪಾಲ್ಗೊಂಡ ಬಗ್ಗಿ ವಾಹನ ವಿನ್ಯಾಸ ಸ್ಪರ್ದೆ ನಡೆದಿತ್ತು. ಎಲ್ಲಕ್ಕೂ ಲಂಬಾರ್ಡಿನಿ ಇಂಜಿನ್ ಅಳವಡಿಸಿದ ನಾಲ್ಕು ಚಕ್ರದ ವಾಹನಗಳು. ಅವುಗಳ ವಿನ್ಯಾಸಗೊಳಿಸುವುದರಲ್ಲಿ ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸಲು ಅವಕಾಶ ಇತ್ತು. ಅದರೆ ಈ ಗಾಡಿಗಳ ವಿನ್ಯಾಸದ ಸ್ಪರ್ದೆಯಲ್ಲಿ ಒಂದಷ್ಟು ಕೈಗಾರಿಕೆಗಳಿಗೆ ತಮಗೆ ಬೇಕಾದ ವಿದ್ಯಾರ್ಥಿಗಳ ಹೆಕ್ಕಲು ಸಹಾಯವಾಯಿತು ಹೊರತು ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಹೀಗೆ ಅಮೇರಿಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತುಳಿಯುವ ಶ್ರಮದ ಸದುಪಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಮ್ಮ ವಿದ್ಯಾರ್ಥಿಗಳು ಪ್ರಾಯೋಗಿಕವಲ್ಲದ project work ನಲ್ಲಿ ನಿರತರಾಗಿರುತ್ತಾರೆ.

ಇಂದು ನಮ್ಮ ವಿಜ್ನಾನಿಗಳು ತಂತ್ರಜ್ನರು ವಾಹನಗಳ ಗಾಳಿ ತಡೆಯನ್ನು ಕಡಿಮೆ ಮಾಡಲು ಹಲವು ವಿಧದಲ್ಲಿ ಪ್ರಯತ್ನಿಸುತ್ತಾರೆ. ಹೆಚ್ಚು ಗಾಳಿ ತಡೆ ಉಂಟುಮಾಡುವ ವಾಹನಗಳ ಮೊನಚಾದ ಮೂಲೆಗಳನ್ನು ಉರುಟಾಗಿಸುತ್ತಾರೆ. ಅದರೆ ಬಡವರ ಸೈಕಲ್ ತಂತ್ರಜ್ನಾನ ಕಳೆದ ನೂರು ವರ್ಷಗಳಲ್ಲಿ ಯಾವುದೇ ಪ್ರಗತಿಯನ್ನು ಹೊಂದಿಲ್ಲ. ಮೊದಲು ಅವರಿಗೆ ಬೇಕಾದ ಕಾರಕೂನರನ್ನು ರೂಪಿಸಲೆಂದು ನಮ್ಮ ವಿದ್ಯಾ ವ್ಯವಸ್ಥೆಗೆ ಬ್ರಿಟೀಷರು ಅಡಿಪಾಯ ಹಾಕಿದ್ದರು. ಅದು ಇಂದು ಸೈಬರ್ ಕೂಲಿಗಳ ತಯಾರಿಕೆಗೆ ಉಪಯೋಗವಾಗುತ್ತಲಿದೆ. ಸ್ವಾವಲಂಬನೆ ಚಿಂತನೆ ದೂರವೇ ಉಳಿದಿದೆ.