ಈ ಚಿತ್ರ ನೋಡುವಾಗ ನೆನಪು ಇಪ್ಪತೈದು ವರ್ಷ ಹಿಂದಕ್ಕೋಡಿತು. ಕಾರಣ ನ್ಯುಯೊರ್ಕ್ ಪಟ್ಟಣದಲ್ಲೊಮ್ಮೆ ನನ್ನ ಸೈಕಲೂ ಹೆಗಲೇರಿತ್ತು.
ತಡ ಸಂಜೆ ಅಮೇರಿಕ ತಲಪಿದ ಕಾರಣ ರಾತ್ರಿ ವಿಮಾನ ನಿಲ್ದಾಣದಲ್ಲೇ ಕಳೆದಿದ್ದೆ. ಅಲ್ಲೊಂದು ಕಂಬಕ್ಕೆ ಸೈಕಲು ಭದ್ರಪಡಿಸಿ ಮಲಗುವ ಚೀಲ ಬಿಡಿಸಿ ನಿದ್ದೆಗೆ ಜಾರಿದ್ದೆ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಪಟ್ಟಣದ ಹೊರಸಾಗಲು ದಾರಿ ಹುಡುಕುತ್ತಿದ್ದೆ. ನನ್ನಲ್ಲಿ ಭೂಪಟಗಳಿರಲಿಲ್ಲ. ಆದರೆ ಗುರಿ ಮತ್ತು ಸಾಗುವ ದಿಕ್ಕು ಎರಡೂ ಖಚಿತವಾಗಿತ್ತು. ನ್ಯೂ ಯೋರ್ಕ್ ಪಟ್ಟಣದ ವಿಮಾನ ನಿಲ್ದಾಣ ಇರೋದು ಲಾಂಗ್ ಐಲಾಂಡ್ ದ್ವೀಪದಲ್ಲಿ.
ಹಾಗಾಗಿ ಮೇಲು ಸೇತುವೆಯಲ್ಲಿ ಸಾಗುವ ಹೆದ್ದಾರಿ, ನದಿಯಡಿಯಲ್ಲಿ ಸಾಗುವ ರೈಲು ದಾರಿ ಎಲ್ಲವೂ ನನಗೆ ಅಸಾದ್ಯ ಅಥವಾ ದುಬಾರಿಯಾಗಿತ್ತು. ಆದರೂ ಬ್ರೊಂಕ್ಸ್ ಪ್ರದೇಶಕ್ಕೆ ಸಾಗಲು ವೀಟ್ ಸ್ಟೋನ್ ಸೇತುವೆ ಹತ್ತಿರ ಸಾಗಿದೆ. ಅಲ್ಲಿ ಖಚಿತ ಬೋರ್ಡ್ ಇತ್ತು – ಸೈಕಲುಗಳಿಗೆ ಪ್ರವೇಶವಿಲ್ಲ. ಅಲ್ಲಿ ಸಿಕ್ಕವರೆಲ್ಲ ವಿಚಾರಿಸಿದೆ. ಎಲ್ಲರೂ ಗೊತ್ತಿಲ್ಲವೆಂದು ತಲೆಯಾಡಿಸಿದರು. ಕೊನೆಗೊಬ್ಬನಲ್ಲಿ ನೀವು ನದಿಯಾಚೆ ಬ್ರೋಂಕ್ಸ್ ಗೆ ಹೇಗೆ ಹೋಗುವಿರಿ ಎಂದಾಗ ಆ ಪೂರ್ವಾಗ್ರಹ ಪೀಡಿತ ಅಸಾಮಿ ಇಲ್ಲಿಂದ ಯಾರೂ ಬ್ರೋಂಕ್ಸ್ ಗೆ ಹೋಗುವುದಿಲ್ಲ ಎಂದು ಬಿಟ್ಟ. ಅವನಿಗೆ ಅದೊಂದು ಕರಿಯರು ವಾಸವಾಗಿರುವ ಕೊಳಕು ಪ್ರದೇಶ ಅನ್ನುವ ಅನಿಸಿಕೆ.
ಕೊನೆಗೊಂದು ಪೋಲಿಸ್ ಕಾರು ಸಮೀಪಿಸಿ ಅದರಲ್ಲಿದ್ದ ಪೋಲಿಸರ ಹತ್ತಿರ ವಿಚಾರಿಸಿದೆ. ಅವರೂ ತಲೆ ಕೆರೆದು ಕೊಂಡರು. ಕೊನೆಗೆ ಅವರ ವೈರ್ಲೆಸ್ ಉಪಯೋಗಿಸಿ ಮಾಹಿತಿ ಹುಡುಕಿ ಕೊಟ್ಟರು. ನೀನು ಟ್ರೈಬೊರೊ ಸೇತುವೆ ಬಳಿ ಸಾಗು ಎಂದರು. ನನ್ನ ಸವಾರಿ ಟ್ರೈಬೊರೊ ಸೇತುವೆ ಬಳಿ ಸಾಗಿತು. ಅಲ್ಲಿ ಸೇತುವೆ ಮೇಲೆ ಸೈಕಲು ಸಾಗುವ ದಾರಿಯೇನೊ ಇತ್ತು. ಅದು ಮಾತ್ರ ನೂರು ಮೆಟ್ಟಲು ದಾಟಿದ ನಂತರವಿತ್ತು. ಕೆಲಸವಾಗಬೇಕಾದರೆ ಕತ್ತೆ ಕಾಲೂ ......... ನೆನಪಾಯಿತು. ಸರಿ ಸೈಕಲು ನನ್ನ ಹೆಗಲೇರಿತು. ಸೇತುವೆ ಮೇಲೆ ಮತ್ತು ಉತ್ತರದ ಬದಿಯಲ್ಲಿ ಸೈಕಲಿಗೆ ಪಾದಚಾರಿಗಳಿಗೆನ್ನುವ ಅಗಲವಾದ ದಾರಿ ಇತ್ತು.
ವಾಪಾಸು ಬಂದ ನಂತರ ಹೇಳುತ್ತಾ ಇದ್ದೆ. ಹೆಚ್ಚಿನ ಪಾಲು ಸೈಕಲು ನನ್ನ ಹೊತ್ತಿತು. ಕೆಲವೆಡೆ ಜತೆಯಲ್ಲಿ ವಿಮಾನ ಹಡಗು ರೈಲು ಪ್ರಯಾಣ ಮಾಡಿದ್ದೂ ಉಂಟು. ನ್ಯೂ ಯೊರ್ಕಿನಲ್ಲೊಮ್ಮೆ ಮಾತ್ರ ನಾನು ಸೈಕಲು ಹೆಗಲೇರಿಸುವುದು ಅನಿವಾರ್ಯವಾಗಿತ್ತು.
ಒಂದಂತೂ ಸತ್ಯ. ಸೈಕಲು ಸವಾರರೆಂದರೆ ಪ್ರಪಂಚದ ಎಲ್ಲ ಕಡೆಗಳಲ್ಲೂ ತಾತ್ಸಾರ. ಕಾರುಗಳ ಈ ರೀತಿ ಮೆಟ್ಟಲುಗಳ ಮೇಲೆ ಸಾಗಲು ಯಾರೂ ಹೇಳುವುದಿಲ್ಲ.
Wednesday, April 07, 2010
Subscribe to:
Posts (Atom)