Thursday, March 03, 2011

ಸೈಕಲ್ ಮೇಲಿನ ಸ್ಕೌಟ್ ಮಕ್ಕಳ ಪಟಲಾಂನಲ್ಲಿ ನಾನೂ ಒಬ್ಬ

೨ ಮಾರ್ಚ್  ಬುದವಾರ  ಪುತ್ತೂರಿನ  ಸ್ಕೌಟ್   ಮತ್ತು ಗೈಡ್ಸ್  ಪರಿಸರ  ಜಾಗ್ರತಿ  ಸೈಕಲ್ ಜಾಥಾ  ಹಮ್ಮಿಕೊಂಡಿತ್ತು.  ಸ್ಕೌಟ್ ಸದಸ್ಯನಾದ    ಸುನಿಲ ಹೋಗುವವನಿದ್ದ. ನಾನೂ   ಅವನೊಂದಿಗೆ   ಸೇರಿಕೊಂಡೆ.   ಪುತ್ತೂರು  ಆಸುಪಾಸಿನ  ವಿವಿದ ಶಾಲೆಗಳ   ಸುಮಾರು ಎಪ್ಪತ್ತೈದು    ಮಕ್ಕಳು  ಸೈಕಲಿನಲ್ಲಿದ್ದರು.  ಹತ್ತು ಮಕ್ಕಳ  ಬೀದಿ ನಾಟಕ ತಂಡವೊಂದು  ನಮ್ಮ ಜತೆಗಿತ್ತು.  ಅಂತೂ  ಒಂಬತ್ತು ಕಾಲು   ಘಂಟೆಗೆ  ನಮ್ಮ ಸೈಕಲ್ ಸಾಲು ಪುತ್ತೂರು  ಮಹಾಲಿಂಗೇಶ್ವರ  ದೇವಸ್ಥಾನದ  ಎದುರಿನಿಂದ  ಹೊರಟಿತು.

ಕೆಮ್ಮಾಯಿಯಲ್ಲಿ   ಬಿದಿರಿನ ಉಪಯೋಗದ ಬಗೆಗೊಂದು  ಕಿರು ರೂಪಕ   ಆಡಿ ತೋರಿಸಿದ ನಂತರ  ತಂಡ ಸ್ವಲ್ಪ ಮುಂದಕ್ಕೆ   ಎಡಕ್ಕೆ ಸೇಡಿಯಾಪು   ರಸ್ತೆಯಲ್ಲಿ  ಮುಂದುವರಿಯಿತು.  ಸೇಡಿಯಾಪು ತಿರುವಿನಲ್ಲೊಂದು  ಅವಲಕ್ಕಿ ಕಿತ್ತಳೆ  ಬಾಟಲಿ ಪಾನಿಯ   ಹಂಚೋಣ.   ಎರಡೇ ಕಿಮಿ ಮುಂದೆ ರಸ್ತೆ ಪಕ್ಕದ ಮನೆಯ ಆವರಣದಲ್ಲಿ  ತಿಂಡಿ.  ಬಿಸಿಯಾದ ದೋಸೆ ಚಟ್ನಿ ಸಾಂಬಾರ್  ಮತ್ತು  ರಾಗಿ ಮಾಲ್ಟ್  ಮಕ್ಕಳಿಗೆ ಹೊಸ ಚೈತನ್ಯ   ದೊರಕಿಸಿದರೂ  ಕಡಿದಾದ ಸುಮಾರು ೧೦೦ ಮೀಟರ್ ಇಳಿವು ಅನಂತರ  ಏರು ನಮ್ಮ ಮುಂದಿದ್ದವು. ಆದರೂ  ಮಕ್ಕಳು ನಾ ಹೆದರಿದಂತೆ   ಸೋಲಲಿಲ್ಲ.   ಅದು ನನಗೆ  ಸಂಬಂದಿಕರ ಮನೆಯಾದುದರಿಂದ  ಬಾಟರಿಗೆ  ವಿದ್ಯುತ್ ಚಾರ್ಜು ಬೋನಸ್. 

ರಾಷ್ಟ್ರೀಯ   ಹೆದ್ದಾರಿ  ನಮಗೆ ಸಿಕ್ಕಿದ್ದು ಒಂದೇ  ಕಿಮಿ.  ಪುನಹ ಏರಿಳಿವು ರಸ್ತೆ.  ಕಡೆಶಿವಾಲಯ ಊರಲ್ಲೊಂದು  ಬೀದಿ ನಾಟಕವಾಗಿ  ಹೊಳೆ ಬದಿಯ ದೇವಸ್ಥಾನಕ್ಕೆ   ಸೈಕಲು ಸಾಲು ಮುಂದುವರಿಯಿತು.  ಹನ್ನೆರಡು  ಐವತ್ತೈದಕ್ಕೆ  ದೇವಸ್ಥಾನದ  ಹಾಲ್  ತಲಪುವಾಗ  ಊಟಕ್ಕೆ  ಬಾಳೆ ಹಾಕುತ್ತಿದ್ದರು.  ಬರ್ಜರಿ ಪಾಯಸ ಸಮೇತ   ಊಟ ಸಿಕ್ಕಿತು.  ನಂತರ  ಸ್ವಲ್ಪ ಹೊತ್ತು ಮಕ್ಕಳ ಕಾರ್ಯಕ್ರಮ  ಮತ್ತು  ಅನಂತರ ಮಕ್ಕಳಿಗೆ ಹೊಳೆಬದಿಯಲ್ಲಿ  ನೀರಾಟ.  ಜತೆಯಲ್ಲಿ ಸಾಗಿದ  ಮಾಷ್ಟ್ರುಗಳು  ಮಕ್ಕಳನ್ನು  ನಿಗದಿತ ಸಮಯಕ್ಕೆ  ನೀರಿನಿಂದ ಹೊರಕ್ಕೆಳೆದರು. 

ಒಂದು   ಪಾನಕ ಸೇವನೆ   ಅನಂತರ  ಮೂರುವರೆ ಘಂಟೆಗೆ   ಮಕ್ಕಳೆಲ್ಲ   ಸೈಕಲ್ ಏರಿದರು.  ಗಡಿಬಿಡಿಯಲ್ಲಿ ನನಗೆ  ಜಿಪಿಎಸ್  ಸ್ವಿಚ್ ಹಾಕಲು ಮರೆತು  ಒಂದೂವರೆ    ಕಿಮಿ ದಾಖಲೆ  ಅಲಭ್ಯ.     ವಾಪಾಸು ಬರುವಾಗ  ಗಡಿಯಾರ  ಪೆರ್ನೆ ದಾಟುವ ಸುಮಾರು ಮೂರು ಕಿಮಿ  ಹೆಚ್ಚು ಕಮ್ಮಿ  ಇಳಿಜಾರಾದ  ರಾಷ್ಟ್ರೀಯ   ಹೆದ್ದಾರಿ. ನಂತರ  ಮುಖ್ಯಸ್ಥರು  ಹೊರಡುವಾಗ  ಮೈಕಿನಲ್ಲಿ   ಹೇಳಿದಂತೆ   ಹೋಗುವಾಗ ಇಳಿದಲ್ಲಿ ಹತ್ತುವುದು  ಮತ್ತು ಹತ್ತಿದಲ್ಲಿ  ಇಳಿಯುವುದು.  ಬರುವಾಗ   ಒಂದು ಕಡಿದಾದ  ಅಪಾಯಕಾರಿ ಅನಿಸುವ ಸ್ವಲ್ಪ ದೂರ  ಇಳಿಯಲು ಸಿಕ್ಕಿದ್ದು ಅನಂತರದ  ದೀರ್ಘ  ಏರು  ಎಲ್ಲ ಮಕ್ಕಳನ್ನೂ  ಸುಸ್ತಾಗಿಸಿತು.  ಗುಡ್ಡದ ತುದಿಯಲ್ಲಿ ಬನ್  ಮತ್ತು  ಬಚ್ಚಂಗಾಯಿ  ಹೋಳುಗಳು  ಕಾಯುತ್ತಿತ್ತು.    ಎಲ್ಲ ಕಡೆಗಳಲ್ಲೂ  ಬಹು ದೂರದ ವರೆಗೆ  ಕಾಣುತ್ತಿದ್ದು  ನೋಟ ಸವಿಯುವ ಮನಸ್ಥಿತಿ  ಮಕ್ಕಳಲ್ಲಿ ಇರಲಿಲ್ಲ. ಘಂಟೆ ಸುಮಾರು ಐದಾಗಿತ್ತು.





ಅನಂತರ  ಬನ್ನೂರು ರಸ್ತೆಯಾಗಿ  ಪುತ್ತೂರಿಗೆ  ತಲಪುವಾಗ   ಸಮಯ ಸಂಜೆ  ಆರಾಗಿತ್ತು.   ಪುತ್ತೂರು   ಹೊರವಲಯದಿಂದ   ನಂತರ  ಒಳರಸ್ತೆಮೂಲಕ   ಪುನಹ  ದೇವಸ್ಥಾನದ ಎದುರಿನ  ಮೈದಾನಕ್ಕೆ. ಬೆಳಗ್ಗಿನ  ಮುಖ್ಯ  ರಸ್ತೆಯಾದರೆ  ಈ ಎಪ್ಪತ್ತೈದು  ಸವಾರರಿಗೆ  ಸಂಜೆಯ ವಾಹನ ದಟ್ಟಣೆಯ  ಮದ್ಯೆ   ದಾರಿ ತೋರಿಸಲು    ಕಷ್ಟವಾಗುತಿತ್ತು. 
    
ಏರಿಳಿತ  ಕೂಡಿದ  ರಸ್ತೆಗಳಲ್ಲಿ   ಹೆಚ್ಚಿನ  ಸೈಕಲುಗಳು  ಗೇರುರಹಿತವಾಗಿದ್ದೂ  ಮಕ್ಕಳಿಗೆ  ಹೆಚ್ಚು  ಕಷ್ಟವಾಗಿತ್ತು.    ನಮಗೆ  ಸವಾಲಾಗಿದ್ದ  ರಸ್ತೆಯಲ್ಲಿ  ಮೇಲಿನ  ಚಿತ್ರವೊಂದರಲ್ಲಿ    ಕಾಣುವ   ವೈಷ್ಣವಿ   ಎಂಬ ಪ್ರಾಥಮಿಕ  ಶಾಲೆಯ  ಬಾಲಕಿಯೊಬ್ಬಳ  ಸಾಧನೆ ಮೆಚ್ಚುವಂತದ್ದಾಗಿತ್ತು.      ಸುಮಾರು  ಮೂವತ್ತೆಂಟು ಕಿಮಿ  ಒಟ್ಟು  ದೂರವೆಂದು ನಾನು  ದಾಖಲಿಸಿದರೂ    ರಸ್ತೆಯ   ಸನ್ನಿವೇಶ  ಗಮನಿಸುವಾಗ  ಮಕ್ಕಳು  ಅದಕ್ಕಿಂತ ತುಂಬಾ ಹೆಚ್ಚಿನ   ದೂರ  ಸೈಕಲಿಸಿದ   ಶ್ರಮ ಪಟ್ಟಿದ್ದಾರೆ. 


ವಾಪಾಸು  ಮನೆ ಸೇರಲು  ಬಾಟರಿ ಸಾಕೋ ? ಸಂಶಯದಲ್ಲಿ ಶಂಕರಣ್ಣನ  ಕಾರ್ಯಾಗಾರ  ನುಗ್ಗಿದೆ.  ಅರ್ದ ಘಂಟೆ ಚಾರ್ಜು ಬರೋಬರಿ   ಅನಿಸಿ  ಹೊರಡುವಾಗ  ಕಗ್ಗತ್ತಲು. ಸಮಯ  ಏಳೂವರೆ.  ತಲೆಗೊಂದು  ಹೆಡ್ ಲಾಂಪ್ ಏರಿಸಿ  ಅಲ್ಲಿಂದ  ಹೊರಟೆ.  ಕೆಲವು  ಹೊಂಡಕ್ಕೆ ಚಕ್ರವಿಳಿಸಿದರೂ    ಹೆಚ್ಚಿನ ಪಾಲು  ಹೆದ್ದಾರಿಯಲ್ಲಿ ಉಳಿದ ವಾಹನದ  ದೀಪ ನನಗೆ ದಾರಿ ತೋರಿಸಿತು.   ಸಮಸ್ಯೆಯಾದುದು ವಾತಾವರಣದಲ್ಲಿನ   ಹನಿ ಮತ್ತು ದೂಳು ಮಿಶ್ರಣವನ್ನು  ನನ್ನ   ತಲೆ ಮೇಲಿನಿಂದ  ಹೊರಡುವ  ಎಲ್ಇಡಿ ಬೆಳಕು ಕೋಲು  ಕೇಂದ್ರಿಕರಿಸಿ  ಅದೊಂದು ಪರದೆಯಂತಾಗಿತ್ತು.  ಶುಭ್ರ  ಎಲ್ಇಡಿ   ಬಿಳಿಗಿಂತ  ಅರಿಶಿನ ಮಿಶ್ರಣದ ಬೆಳಕೂ ಹೆಚ್ಚು ಚೆನ್ನಾಗಿ  ರಸ್ತೆ ತೋರಿಸುತ್ತದೆ.  ನಮ್ಮ  ಮನೆಯ ಒಳ ರಸ್ತೆಯನ್ನು  ತಲಪುವಾಗ  ಅಲ್ಲಿ ವಾಹನ ಸಂಚಾರದಿಂದ  ದೂಳು ಏಳದ ಕಾರಣ  ಸ್ಪಷ್ಟವಾಗಿ ಕಾಣಲು ಪ್ರಾರಂಬವಾಯಿತು.  


ಅಂತೂ  ಹಗಲು  ಬೇಕಾಗುವ  ಸಮಯದಲ್ಲಿಯೇ   ರಾತ್ರಿಯ ಅಸ್ಪಷ್ಟ  ಬೆಳಕಿನಲ್ಲಿಯೂ    ಪ್ರಯಾಣಿಸಿದ್ದೆ.   ಜನಸಂಚಾರ ಕಡಿಮೆಯಾಗಿ ಶಿವರಾತ್ರಿ  ಕಿತಾಪತಿಗಳು ಪ್ರಾರಂಬವಾಗುವ ಮೊದಲೇ  ಮನೆಗೆ ತಲಪಿದ್ದೆ.     ನಾನು  ಇಂದು   ಸುಮಾರು  ೭೦ ಕಿಮಿ ಸೈಕಲಿಸಲು  ನಾಲ್ಕು ಘಂಟೆ  ತೆಗೆದುಕೊಂಡಿದ್ದೆ.  ೮೫೦ ವಾಟ್ಸ್ ವಿದ್ಯುತ್ ಬಳಕೆಯಾಗಿತ್ತು. ಕೆಟ್ಟ ರಸ್ತೆ ಮತ್ತು  ಮಕ್ಕಳ  ದಾರಿಗಡ್ಡವಾಗದಂತೆ  ಜಾಗರೂಕತೆ  ಸ್ವಲ್ಪ ಹೆಚ್ಚು  ವಿದ್ಯುತ್ ಬಳಕೆಗೆ ಕಾರಣವಾಯಿತು.  
  
ಈ  ಕಾರ್ಯಕ್ರಮವನ್ನು ಮಂಗಳೂರಿನ  ವಾರ್ತಾ ಬಾರತಿ ಮತ್ತು   ಪುತ್ತೂರಿನ  ಸುದ್ದಿ  ಬಿಡುಗಡೆ  ಕನ್ನಡ ದಿನ ಪತ್ರಿಕೆಗಳು   ಪ್ರಕಟಿಸಿವೆ.  ಸುದ್ದಿ ಬಿಡುಗಡೆಯ  ಮುಖಪುಟದ   ಮತ್ತು  ಮುಂದುವರಿದ ಬಾಗ ನೋಡಲು  ಇಲ್ಲಿ  ಮತ್ತು ಇಲ್ಲಿ  ಚಿಟಿಕೆ ಹೊಡೆಯಿರಿ.   ಮೇಲೆ ಕಾಣುವ   ವಾರ್ತಾ  ಬಾರತಿಯ  ಸುದ್ದಿಚಿತ್ರವನ್ನು ಮೂಲದಲ್ಲಿ ನೋಡಲು 
http://vbepaper.com/epapermain.aspx   ತೆರೆದ ನಂತರ    ಮೂರನೇಯ  ಪುಟಕ್ಕೆ  ಸಾಗಿ. 

2 comments:

Pejathaya said...

ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಉತ್ಸಾಹ ಕಂಡು ಬಹು ಸಂತೋಷವಾಯಿತು. ಶುಭ ಹಾರೈಕೆಗಳು. - ಪೆಜತ್ತಾಯ ಎಸ್. ಎಮ್.

Anonymous said...

ಉದಯವಾಣಿಯೋ ಪ್ರಜಾವಾಣಿಯೋ ‘ಹಿರಿಯ ಗೋವಿಂದ ಭಟ್ಟರೂ ಭಾಗವಹಿಸಿದ್ದರು’ ಎಂದು ಉಲ್ಲೇಖಿಸಿದ್ದು ನೋಡಿ ಮಂಗಳೂರಿನ ಇನ್ನಷ್ಟು ಹಿರಿಯನಿಗೆ ಹೊಟ್ಟೆಕಿಚ್ಚಾಯ್ತು :-)
ಆಕ್ರೋಶವರ್ಜನ