Thursday, April 21, 2011

ಕಾಸರಗೋಡಿನಲ್ಲಿ ವಂದನಾ ಶಿವ – ಎರಡೂವರೆ ಗಂಟೆ ಪ್ರಯಾಣ

ಶನಿವಾರ ಮದ್ಯಾಹ್ನ ಬಿ ಸಿ ರೋಡಿನ ಬಳಕೆದಾರರ ವೇದಿಕೆ ಕಾರ್ಯಕರ್ತರಾದ ಗೆಳೆಯ ಸುಂದರ ರಾಯರು ಸುಳಿವು ಕೊಟ್ಟರು - ನಾಳೆ ಕಾಸರಗೋಡಿನಲ್ಲಿ ಎಂಡೊಸಲ್ಫನ್ ಮೀಟಿಂಗ್ – ವಂದನಾ ಶಿವ ಅವರು ಬರುತ್ತಾರೆ. ತಕ್ಷಣ ಮನಸ್ಸು ಚುರುಕಾಯಿತು. ಸಾಮಾನ್ಯವಾಗಿ ನಾನು ಈ ಕಾರ್ಯಕ್ರಮಗಳಿಗೆ ಹೋಗುವುದು ಕಡಿಮೆ. ಕಿವಿ ಸಮಸ್ಯೆ ಇರುವುದರಿಂದ ಬಾಷಣ ಹೆಚ್ಚಿನ ಪಾಲು ಅರ್ಥವಾಗುವುದಿಲ್ಲ. ಆದರೆ ಅಪಾರ ಸಾಧನೆ ಮಾಡಿರುವ ಇವರನ್ನೊಮ್ಮೆ ನೋಡಬೇಕೆನ್ನುವ ಬಾಷಣ ಕೇಳಬೇಕೆನ್ನುವ ಆಸಕ್ತಿಯಲ್ಲಿ ಹೋಗುವ ತೀರ್ಮಾನ ಮಾಡಿದೆ.

ಇನ್ನೇನು ಬೆಳಕು ಹರಿಯಿತು ಅನ್ನುವಾಗ ಬೆಳಗ್ಗೆ ಆರು ಘಂಟೆಗೆ ಮನೆಯಿಂದ ತ್ರಿಚಕ್ರದಲ್ಲಿ ಹೊರಟೆ. ಪಡುಬಾಗಿಲು ತಲಪುವಾಗ ಸೂರ್ಯದೇವನ ದರ್ಶನವಾಯಿತು. ಪಡುಬಾಗಿಲಿನಲ್ಲಿ ನಾನಿರುವಾಗ ಸೂರ್ಯ ಮೂಡು ದಿಕ್ಕಿನಲ್ಲಿ ಉದಯಿಸುತ್ತಿದ್ದಾನೆ ಅನ್ನುವ ವಿಚಾರ ತಮಾಷೆ ಅನ್ನಿಸಿತು. ಗಡಿಬಾಗದಲ್ಲಿ ವಾಸ್ತವ್ಯ ಇರುವ ಗೆಳೆಯ ನಾರಾಯಣ ಮೂರ್ತಿಯಲ್ಲಿ ಬೆಳಗ್ಗೆ ಕಾಫಿಗೆ ಮತ್ತು ಸ್ವಲ್ಪ ಚಾರ್ಜು ಬೇಕಾಗಬಹುದು, ಬರುತ್ತೇನೆ ಎಂದಿದ್ದೆ. ಹಾಗಲ್ಲಿ ಕಾಫಿಯಾಗಿ ಅಲ್ಲಿಂದ ಏಳೂಮುಕ್ಕಾಲಕ್ಕೆ ಹೊರಟೆ.




ಹಿಂದಿನ ದಿನ ಮೂರ್ತಿ ಹತ್ತಿರ ಗಡಿಯಾಚೆಗೆ ಕೇರಳದಲ್ಲಿ ಮಾರ್ಗ ಹೇಗಿದೆ ? ಅನ್ನುವುದರ ವಿಚಾರಿಸಲು ಹೇಳಿದ್ದೆ. ನಾನು ಹಿಂದೆ ನೋಡುವಾಗ ಜಲ್ಲಿ ಎದ್ದು ಹೋಗಲು ಸಾದ್ಯವೇ ಅಲ್ಲ ಅನ್ನುವಂತಿತ್ತು. ಮೂರ್ತಿಯ ವರದಿ ಒಕೆ ಎಂದಿದ್ದರೂ ನಾನು ಅಲ್ಲಿಗೆ ತಲಪುವ ವರೆಗೆ ಮನದೊಳಗೆ ಕಸಿವಿಸಿ ಇತ್ತು. ಯಾಕೆಂದರೆ ಜಲ್ಲಿ ರಸ್ತೆಯಾದರೆ ಚಕ್ರ ರಸ್ತೆಯನ್ನೂ ಕಾಲು ಪೆಡಲನ್ನೂ ಕಚ್ಚಿ ಹಿಡಿಯುವುದಿಲ್ಲವಾದುದರಿಂದ ಶ್ರಮ ಪೋಲಾಗುತ್ತದೆ. ಆಸಕ್ತಿ ಕಡಿಮೆಯಾಗುತ್ತದೆ. ಪುಣ್ಯಕ್ಕೆ ರಸ್ತೆ ಚೆನ್ನಾಗಿತ್ತು. ಸರಿಯಾಗಿ ಎರಡೂವರೆ ಗಂಟೆ ಚಾಲನೆಯಲ್ಲಿ ಐವತ್ತನಾಲ್ಕು ಕಿಮಿ ಸಾಗಿದ್ದೆ. ಉದ್ದಕ್ಕೂ ರಸ್ತೆ ಗುಡ್ಡ ಏರುವುದು ಕಣಿವೆಗೆ ಇಳಿಯುವುದಾದರೂ   ನನ್ನ ಬೆಂಬಲ ಸಹಾಯಕ ಚೆನ್ನಾಗಿ ಕೆಲಸ ಮಾಡಿ ನನಗೆ ಹೆಚ್ಚು  ಶ್ರಮವಾಗಲಿಲ್ಲ.  
 


ವಂದನಾ ಶಿವ ಅವರು ಸರಳ ಇಂಗ್ಲೀಷಿನಲ್ಲಿ ಮಾತನಾಡಿದರು. ಆದನ್ನು ಪ್ರತಿ ಸಾಲಿಗೊಮ್ಮೆ ಅನುವಾದಕರು ಮಲೆಯಾಳಕ್ಕೆ ಅನುವಾದಿಸಿದರು. ಅದು ನನಗೆ ಸರಿಯಾಗಿ ಅರ್ಥವಾಗುವುದಕ್ಕೆ ತಡೆಯಾಯ್ತು. ನನಗೆ ಕಿವಿ ಸಮಸ್ಯೆ ಇರುವುದರಿಂದ ಅರಿವು ಮೂರು ಹೆಜ್ಜೆಯಲ್ಲಿ ನಡೆಯುತ್ತದೆ ಅನಿಸುತ್ತದೆ. ಗ್ರಹಿಕೆ / ಸಂಸ್ಕರಣೆ ಮತ್ತು ಅರ್ಥೈಸುವಿಕೆ ಎನ್ನುವ ಮೂರು ಹೆಜ್ಜೆಯ ದಾಟುವಾಗ ಸಂಬಾಷಣೆ ಅಥವಾ ಬಾಷಣ ಮತ್ತೆರಡು ವಾಕ್ಯ ಮುಂದುವರಿದಿರುತ್ತದೆ. ಇಲ್ಲಿ ಕೇಳಿದ ಮುಂದಿನ ವಾಕ್ಯಗಳು ಮಲೆಯಾಳದಲ್ಲಿ ಆದುದರಿಂದ ಚಿಂತನಾ ಕೊಂಡಿಗಳು ಕಡಿದು ಗೊಂದಲ ಉಂಟಾಗುತ್ತದೆ. ಮದ್ಯಾಹ್ನ ವರೆಗೆ ಡಾ| ವಂದನಾ ಶಿವ ಅವರ ಮಾತು ಹೊರತು ಪಡಿಸಿದರೆ ಹೆಚ್ಚಿನ ಪಾಲು ಸಮಯ ರಾಜಕಾರಣಿಗಳಿಗೆ ಮೀಸಲು. ಅವರು ಮಲೆಯಾಳದಲ್ಲಿ ವೀರಾವೇಶದಿಂದ ಮಾತನಾದುವುದರ ನೋಡುವುದೇ ಸೊಗಸು.

ಮದ್ಯಾಹ್ನ ಮೊದಲ ಮಾತುಗಾರ ಖ್ಯಾತ ಬಳಕೆದಾರ ಚಳುವಳಿಗಾರ ಡಾ| ರವೀಂದ್ರನಾಥ ಶಾನುಬೋಗರು. ತುಂಬಾ ಚೆನ್ನಾಗಿ ಚಿತ್ರಗಳ ಸಮೇತ ವಿವರಣೆ ಕೊಟ್ಟರು. ರೈತರು ಅದನ್ನು ಬಳಸುವುದು, ಅದು ಬಾವಿ ನೀರಿಗೂ ಸೆರ್ಪಡೆಯಾಗಿ ಅದನ್ನೇ ರೈತರು ಕುಡಿಯುವಂತಹ ಒಂದು ವಿಶವರ್ತುಲ ಸೃಷ್ಟಿಸುವ ಬಗೆಗೆ ಚೆನ್ನಾಗಿ ವಿವರಿಸಿದರು. ಡಾ| ರವಿಂದ್ರನಾಥ ಶಾನುಬೋಗರ ಒಂದು ಮಾತು ಈಗಲೂ ಮನಸ್ಸಿಗೆ ಚುಚ್ಚುತ್ತಿದೆ - ಈಗ ವರ್ಷಕ್ಕೆ ಹದಿನಾಲ್ಕು ಸಾವಿರ ಟನ್ ಎಂಡೊಸಲ್ಫನ್ ತಯಾರಿ. ಈಗಲೇ ಇದಕ್ಕೆ ನಿರ್ಬಂದ ಹಾಕಿದರೂ ಆಪತ್ತಿನಿಂದ ಪೂರ್ಣ ಬಿಡುಗಡೆ ಅಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಎಪ್ಪತ್ತೈದು ಸಾವಿರ ಟನ್ ದಾಸ್ತಾನು ಇದೆ. ಇದನ್ನು ಏನು ಮಾಡೋಣ ?





ನಮ್ಮ ಪಾಣೆಮಂಗಳೂರಿನಲ್ಲಿ ೧೯೧೪ರಲ್ಲಿ ಕಟ್ಟಿದ ಸೇತುವೆ ಸಪೂರ. ನಾನು ದಾಟುತ್ತಿರುವ ಮೇಲಿನ ಚಿತ್ರಣ ಇತ್ತೀಚೆಗೆ ಶಂಕರಣ್ಣ ಸೆರೆ ಹಿಡಿದದ್ದು. ಸೇತುವೆ ಮೇಲೆ ಎರಡು ದೊಡ್ಡ ವಾಹನ ಎದುರುಬದುರಾದರೆ ಒಂದು ಹಿಂದಕ್ಕೆ ಚಲಿಸಬೇಕಾಗುತ್ತದೆ. ಆದರೆ ಸಂಕ ಪ್ರವೇಶಿಸುವಾಗ ಇನ್ನೊಂದು ದೊಡ್ಡ ವಾಹನ ಕಂಡರೂ ಎರಡರಲ್ಲೊಂದು ಹಿಂದೆ ಸಾಗಬೇಕೆಂದು ಗೊತ್ತಿದ್ದರೂ ಹೆಚ್ಚಿನ ಚಾಲಕರು ನಿಲ್ಲುವ ಬದಲು ಮುನ್ನುಗ್ಗುತ್ತಾರೆ – ನಿರ್ಣಾಯಕ ನಡು ರೇಖೆ ದಾಟಿಬಿಡಲು. ಹಾಗೆ ಎಂಡೊಸಲ್ಫನ್ ಸಮಸ್ಯೆ ಇದೆಯೆಂದು ಗೊತ್ತಿದ್ದರೂ   ಭಾರಿ  ದಾಸ್ತಾನು ಮಾಡಿಕೊಂಡಿದ್ದಾರೆ.


ನಿನ್ನೆ  ತ್ರಿಚಕ್ರದಲ್ಲಿ ಸಾಗುತ್ತಿರುವಾಗ  ಮನಸ್ಸಿಗೆ ಬಂದ ವಿಚಾರ.  ನಮಗೆ   ಕೃಷಿಗೆ ಎಂಡೊಸಲ್ಫನ್ ಅಗತ್ಯವಿಲ್ಲ.  ಹಾಗೆಯೇ  ವೈಯುಕ್ತಿಕ  ಪ್ರಯಾಣಕ್ಕೆ  ತೈಲ ಅವಲಂಬನೆ ಅನಿವಾರ್ಯವಲ್ಲ.  ಬಹುಪಾಲು ನಮ್ಮ  ಪ್ರಯತ್ನದಿಂದಲೇ  ಮುಂದಕ್ಕೆ ಸಾಗಬಹುದು.  ಎರಡಕ್ಕೂ  ಅಡ್ಡಿ ಬರುವುದು  ಮಾನಸಿಕ ತಡೆಯೇ  ಮುಖ್ಯ ಕಾರಣ.   ನನಗೆ  ಈ ಕಾರ್ಯಕ್ರಮಕ್ಕೆ ಹೋಗಬೇಕೆನಿಸಿತು.  ಹಾಗೆ   ಪೆಟ್ರೋಲ್  ಕಾರು  ಅವಲಂಬಿಸುವ  ಬದಲಿಗೆ  ತುಳಿದೇ  ಸಾಗಲು  ಆಲೊಚಿಸಿದೆ.  ನಾವು ಹೋಗುತ್ತೇವೆ, ನಮ್ಮ ಜತೆ   ಬನ್ನಿ ಎನ್ನುವ  ಆಮಂತ್ರಣ ಸುಂದರ  ರಾಯರಿಂದ ಬಂದರೂ  ನಾನು ನಿರಾಕರಿಸಿದ್ದೆ.   



ಮೂವರು   ಸ್ಥಳೀಯ  ಹಾಗೂ    ತಳಮಟ್ಟದ  ಹೋರಾಟಗಾರರು ನಂತರ ಮಾತನಾಡುವವರಿದ್ದರು.  ಪತ್ರಕರ್ತರಾದ   ಶ್ರಿಪಡ್ರೆಯವರು   ಮತ್ತು  ಇಬ್ಬರು  ವೈದ್ಯರು –ಡಾ ಮೊಹನ್ ಕುಮಾರ್ ಮತ್ತು ಡಾ ಶ್ರೀಪತಿ  -  ಮೂವರ   ಮಾತು ಕೇಳಲು  ನನಗೆ   ಆಸಕ್ತಿ ಇತ್ತು.  ಆದರೆ    ನನಗೆ ರಾತ್ರಿಯಾಗುವ ಮೊದಲು ಗೂಡು ಸೇರುವುದು  ಅನಿವಾರ್ಯವಾದ  ಕಾರಣ  ಮೂರುವರೆಗೆ  ನಾನು  ತ್ರಿಚಕ್ರದಲ್ಲಿ  ಆಸೀನನಾದೆ.  ಮಳೆ ಅಂಜಿಕೆಯೂ  ನನ್ನ ಹೊರಡಿಸಿತು.  ವಾಪಾಸಾಗುವಾಗಲೂ  ಎರಡೂವರೆ  ಘಂಟೆ  ಪ್ರಯಾಣ.    ಇನ್ನೇನು  ಕತ್ತಲಾಯಿತು  ಅನ್ನುವಾಗ  ಮನೆ ತಲಪಿದ್ದೆ.  

2 comments:

Anonymous said...

ಪುರಾಣಪ್ರಸಿದ್ಧ ಗೋವಿಂದನಾದರೆ ಸೂರ್ಯನನ್ನು ಪಡುಕೆರೆಯಿಂದ ಉದಿಸಿದಂತೆ ಕಾಣಿಸುತ್ತಿದ್ದ, ಸಂಜೆ ಅಕಾಲಕ್ಕೆ ಬೆಳಕು ಉಳ್ಯುವಂತೆ ಮಾಡಿ ಪಾಷಾಣದ ಕುರಿತು ಬಾಕಿ ಉಳಿದ ಮೂರೂ ಭಾಷಣ ಕೇಳಿಯೇ ಹೋಗುವಂತೆ ಮಾದಿಕೊಳ್ಳುತ್ತಿದ್ದ. ಆದರೂ ನೆಲ್ಯಾರು ಗೋವಿಂದಾ ನಿನ್ನ ತ್ರಿವಿಕ್ರಮತ್ವ ಕೇವಲ ಮಾರ್ಗಕ್ರಮಣದಿಂದ ಉಪಯುಕ್ತ ಕಾರ್ಯಗಳಿಗೂ ವಿನಿಯೋಗವಾದ್ದು ಕೇಳಿದಾಗ ಹೆಚ್ಚು ಸಂತೋಷವಾಯ್ತು. ಅವನಂತೆ ನನ್ನಂತೆ ಆ ಸಭೆಗೆ ಹೋಗಲಾಗದವರು ಎಂಡೋಸಲ್ಪಾನ್ ಸಮಸ್ಯೆಯ ವಿವರಗಳಿಗೆ ಅವಶ್ಯ ಸುಂದರರಾಯರ ಬ್ಲಾಗಿಗೆ ಭೇಟಿಕೊಡುವುದುತ್ತಮ.
ಅಶೋಕವರ್ಧನ

Nanda Kishor B said...

:)
nice article sir...