Monday, April 04, 2011

ಅಣು ವಿದ್ಯುತ್ ಸುತ್ತಲಿನ ಸುಳ್ಳುಗಳೂ ಹಾಗೂ ವಿಕಿರಣದಿಂದ ಮಲೀನಗೊಂಡ ಕಾಡು ಹಂದಿ ಮಾಂಸ



ಚೆರ್ನೋಬಿಲ ಅಣು ಶಕ್ತಿ ದುರಂತದ ಸಮಯ  ನಾನು  ಜರ್ಮನಿಯಲ್ಲಿದ್ದೆ.  ಅಂದು  ದುರಂತ  ಸಂಬವಿಸಿದ್ದು  ಸಾವಿರಾರು  ಮೈಲು ದೂರವಾದರೂ  ತಕ್ಷಣ  ಅದಿಕಾರಿಗಳು  ಕಾರ್ಯಪ್ರವೃತ್ತರಾಗಿದ್ದರು.  ವಿಕಿರಣ  ಬಾದಿಸಿದ  ಸಾಮುಗ್ರಿಗಳ  ಆಹಾರ   ಜಾಲದಿಂದ ಹೊರಗಿಡಲು  ಕ್ರಮ ಕೈಗೊಂಡಿದ್ದರು.  ಅದು ನಡೆದು  ಈಗ ಇಪ್ಪತೈದು ವರ್ಷ.  ಆದರೂ  ಅಲ್ಲಿನ  ಅದಿಕಾರಿಗಳು  ವಿರಮಿಸಿಲ್ಲ.    ಜರ್ಮನಿಯವರ   ಅನುಭವ  ಇಂದು ಜಪಾನಿಗೂ  ಮಾತ್ರವಲ್ಲ   ಅಣು ವಿದ್ಯುತ್  ಎಂಬ  ಭೂತದ    ಬೆನ್ನಟ್ಟಿರುವ   ನಮಗೂ    ಪ್ರಸ್ತುತ. 

ಜರ್ಮನಿಯಲ್ಲಿರುವ    ಕಾಡು ಹಂದಿಗಳು  ಚರ್ನೋಬಿಲಿನಿಂದ  ೧೫೦೦ ಕಿಮಿ ದೂರದಲ್ಲಿ ಒಡಾಡುತ್ತವೆ.  ಆದರೂ  ಸಿಸಿಯಂ -೧೩೭ ಎಂಬ  ಅಣು ದಾತುವಿನ  ಅಂಶ ಅವುಗಳ  ಮಾಂಸದಲ್ಲಿ  ಇಂದಿಗೂ    ಅಪಾಯಕಾರಿ ಮಟ್ಟದಲ್ಲಿಯೇ  ಇರುತ್ತದೆ.   ಈ ಅಣುದಾತುವಿನ  ವಿಕಿರಣ  ಅರೆವಾಶಿಯಾಗುವುದು  ೩೦ ವರ್ಷಗಳಾದರೂ  ಇನ್ನೂ  ಹಲವಾರು ವರ್ಷ   ಇವುಗಳ  ಸಮಸ್ಯೆ ಮುಂದುವರಿಯುತ್ತದೆ.  ಆ ಬಾಗದ  ಜನ  ಬೇಟೆಯಾಡಿ ಕೊಂದ   ಕಾಡುಪ್ರಾಣಿಯ  ದೇಹ  ಸರಕಾರದ  ವತಿಯಿಂದ   ಪರಿಶೀಲನೆ ನಡೆಯುತ್ತದೆ.  ಕಳೆದ ಹನ್ನೆರಡು ತಿಂಗಳುಗಳಲ್ಲಿ  ಸುಮಾರು ಎರಡು ಕೋಟಿ ಎಪ್ಪತ್ತಾರು ಲಕ್ಷ ರೂಪಾಯಿಯಷ್ಟು   ಪರಿಹಾರ ಕೊಟ್ಟು   ಸರಕಾರ  ಆ ಮಲೀನಗೊಂಡ  ಹಂದಿ ದೇಹಗಳ  ದ್ವಂಸಮಾಡಿದೆ.  ಮುಂದಿನ  ಹದಿನೈದು  ವರ್ಷಗಳಲ್ಲಿ ಇದರ ಪ್ರಮಾಣ ಕಡಿಮೆಯಾದರೂ  ಮಕ್ಕಳ ಮೊಮ್ಮಕ್ಕಳ  ಕಾಲದವರೆಗೂ  ಸಮಸ್ಯೆ  ಗಮನಾರ್ಹವಾಗಿಯೇ  ಉಳಿಯುತ್ತದೆ  ಎನ್ನುವರು ಅಲ್ಲಿನ ಅಧಿಕಾರಿಗಳು.   
ಜಪಾನಿನ    ತಜ್ನರೊಬ್ಬರು  ೨೦೦೭ ರಲ್ಲಿಯೇ    ಒಂದು   ಹೇಳಿಕೆ ಇತ್ತಿದ್ದರು.   ಕಳೆದ  ನಲುವತ್ತು  ವರ್ಷಗಳಲ್ಲಿ  ಜಪಾನು  ಅಣು ವಿದ್ಯುತ್  ಕೇಂದ್ರಗಳ  ಕಟ್ಟುತ್ತಿರುವುದೇನೋ  ಹೌದು.    ಕಾಲದಲ್ಲಿ   ಭೂಕಂಪಗಳು   ಜರಗಲಿಲ್ಲ.  ಅದುದರಿಂದ  ಸರಕಾರ,  ಅಣು ತಜ್ನರು  ಮತ್ತು  ಅಣು ಕೈಗಾರಿಕೆ   ಭೂಕಂಪಗಳಿಂದ  ಆಗಬಹುದಾದ  ಹಾನಿಯ ಬಗೆಗೆ   ನಿರ್ಲಕ್ಷ  ವಹಿಸಿತು.   ಆದರೆ  ಕೋಬೆಯಲ್ಲಿ ಜರಗಿದ  ದೊಡ್ಡ  ಅಭೂಕಂಪದ  ಅನಂತರ  ನೆಲದಡಿಯಲ್ಲಿ ಚಟುವಟಿಕೆ  ಪ್ರಾರಂಬವಾಗಿದೆ.  ಇಡೀ ಜಪಾನು  ಕಂಪನ  ಅಪಾಯಕ್ಕೆ ಒಳಗಾಗಿದೆ.   ಹೀಗೆಲ್ಲ  ಅವಲಕ್ಷಣ  ಮಾತಾಡುವುದುಂತ  ಉಂಟಾ ?   ಜಪಾನು  ಸರಕಾರದ   ಅಣು ವಿದ್ಯುತ್  ಸಲಹಾ  ಸಮಿತಿಯಿಂದ  ರಾಜಿನಾಮೆ ಕೊಟ್ಟು  ಇಷಿಬಾಷಿ  ಹೊರನಡೆದರು. 
ಜಪಾನಿನ  ಅಣು ವಿದ್ಯುತ್  ನಡೆದು ಬಂದ ದಾರಿಯುದ್ದಕ್ಕೂ    ಹಲವಾರು  ಕೊರತೆಗಳು  ಮೇಲುನೋಟಕ್ಕೆ ಗೋಚರವಾಗುತ್ತದೆ.  ೨೦೦೨ರಲ್ಲಿ  ತಪ್ಪು ಸುರಕ್ಷಾ  ವರದಿ   ಕೊಟ್ಟ  ಕಾರಣ   ಸರಕಾರ ಫುಕುಶಿಮವೂ  ಸೇರಿದಂತೆ   ಒಟ್ಟು ಹದಿನೇಳು  ಕೇಂದ್ರಗಳ  ತಪಾಸಣೆಗೆ  ನಿಲ್ಲಿಸಿತ್ತು.  ಈಗಲೂ  ಅಪಘಾತಕ್ಕೆ   ಹತ್ತು ದಿನ ಮೊದಲು  ತಾನು  ೩೩  ಜಾಗದಲ್ಲಿ ತಪಾಸಣೆ ನಡೆಸಿಲ್ಲ  ಎಂದು  ಕಂಪೇನಿ   ಒಪ್ಪಿಕೊಂಡಿತ್ತು.   ಅದನ್ನು  ಸರಿಪಡಿಸಲು  ಸರಕಾರ  ಮೂರು ತಿಂಗಳ   ಗಡುವು  ವಿದಿಸಿತ್ತು.    ಆದರೆ  ಜೂನ್ ತಿಂಗಳ ವರೆಗೆ  ಪರೀಸ್ಥಿತಿ  ಮುಂದುವರಿಯಲಿಲ್ಲ.   ಜಪಾನಿನಲ್ಲಿಯೇ  ಹೀಗಾದರೆ  ನಮ್ಮಲ್ಲಿ  ?? 


ಅಣು ವ್ಯವಹಾರ ಯಾವತ್ತೂ  ಗುಪ್ತ  ಚಟುವಟಿಕೆ.   ೧೯೫೭ರಲ್ಲಿ  ರಷ್ಯದಲ್ಲೊಂದು  Kyshtm   ಅಣುಶಕ್ತಿ ಕೇಂದ್ರ ಅಪಘಾತವಾಗಿತ್ತು.  ರಷ್ಯದ ಸರಕಾರ   ಅಲ್ಲಿ   ನೈಸರ್ಗಿಕ ವಲಯವೆಂದು  ಘೋಷಿಸಿ  ಆ  ಮಲೀನತೆ  ಬಾದಿಸಿದ  ಭೂಮಿಯಿಂದ  ಜನರನ್ನು  ಹೊರಗಿಟ್ಟಿತು.  ಭದ್ದ  ವೈರಿಯಾದ  ಅಮೇರಿಕದ    ಗುಪ್ತಚರ ಸಂಸ್ಥೆ  ಸಿಐಎ ಇದರ ಅರಿವಿದ್ದರೂ  ವರ್ದಿಸುತ್ತಿರುವ  ತಮ್ಮ  ದೇಶದ    ಅಣು ಕೈಗಾರಿಕಾ  ಹಿತಾಸಕ್ತಿಗೆ  ಮಾರಕವಾಗುವುದು  ಬೇಡ ಎಂದು  ಗುಟ್ಟಾಗಿರಿಸಿತು.     ಕೊನೆಗೂ  ಇದು ಬೆಳಕಿಗೆ  ಬಂದದ್ದು  ರಷ್ಯದಿಂದ   ಹೊರಬಂದಿದ್ದ   ಒಬ್ಬ    ವಿಜ್ನಾನಿಯು    ಇಪ್ಪತ್ತು  ವರ್ಷ  ಅನಂತರ  ಪ್ರಕಟಿಸಿದ ಪುಸ್ತಕದಿಂದಾಗಿ.     ಅನಂತರ ನಡೆದ  ಅಸಂಖ್ಯ  ಅಪಘಾತಗಳು  ಜನರ ತಿಳುವಳಿಕೆಗೆ ಬರಲೇ  ಇಲ್ಲ. ಜನರ ಅರಿವಿಗೆ ಬಂದದ್ದು  ಕೆಲವು ಮಾತ್ರ.  ಚೆರ್ನೋಬಿಲ್  ಸಹಾ   ಬೆಳಕಿಗೆ  ಬಂದದ್ದು   ಸ್ವೇಡನಿನ  ಅಣು ಶಕ್ತಿ ಕೇಂದ್ರ  ವಿಕಿರಣ  ಗುರುತಿಸಿದ ಕಾರಣ. ಅನಂತರವಷ್ಟೇ    ರಷ್ಯ  ದುರ್ಘಟನೆ ನಡೆದುದಾಗಿ  ಒಪ್ಪಿಕೊಂಡಿತು    ಇದರಲ್ಲಿ  ನಮಗೆ  ಸ್ಪಷ್ಟವಾಗುವ   ವಿಚಾರ  ಎಂದರೆ   ಸಮಸ್ಯೆಗಳ  ಮುಚ್ಚಿ  ಹಾಕುವುದರಲ್ಲಿ  ಎಲ್ಲ ಸರಕಾರಗಲೂ  ಒಂದೇ. ನಮ್ಮ   ಶಾಸಕರು  ತಮ್ಮ  ಸಂಬಳ  ಏರಿಸಲು  ಪಕ್ಷ ಬೇದ ಮರೆತು  ಕೈ ಎತ್ತಿದಂತೆ. 


ಆಸಕ್ತ    ಕು-ತಂತ್ರಿಗಳು  ನಮ್ಮೆಡೆಗೆ   ಅಣುಶಕ್ತಿ ಬಗೆಗೆ   ಹಲವಾರು  ಅರ್ಧ ಸತ್ಯಗಳ ಬಿಸಾಕುತ್ತಲೇ  ಇರುತ್ತಾರೆ.  ಅದರಲ್ಲೊಂದು  ಅಣು  ವಿಕಿರಣ  ಸೂಸುವ  ನೀರು  ಹೊರಬರಲು ಸಾದ್ಯವೇ  ಇಲ್ಲ ಎನ್ನುವುದು.   ಅಣು ಶಕ್ತಿ ಕೇಂದ್ರದಲ್ಲಿ  ಎರಡು ನೀರಿನ   ಚಲಾವಣ   ಚಕ್ರ ಇರುತ್ತದೆ  ಅನ್ನುವುದು  ನಿಜ.  ಮೊದಲನೆಯದು   ಅಲ್ಲಿಯೇ  ಸುತ್ತಾಡುತ್ತಿರುವುದಲ್ಲದೆ  ಹೊರ ಬರುವುದೇ  ಇಲ್ಲ.     ಎರಡನೆಯದು  ಸಮೀಪದಲ್ಲಿರುವ  ನೀರಿನ  ಮೂಲದಿಂದ  ಹೊರಟು  ಉಗಿಯಾಗಿ ಮಾರ್ಪಟ್ಟು   ಟರ್ಬೈನ್   ಯಂತ್ರಗಳ  ತಿರುಗಿಸಿ  ತಣ್ಣಗಾದ ನಂತರ  ಹೊರಟ  ನೀರಿನ ಮೂಲಕ್ಕೆ  ಸೇರುತ್ತವೆ.  ಇವೆರಡೂ ನೀರುಗಳ ಮದ್ಯೆ ಪರಸ್ಪರ ಸಂಬಂದ ಇಲ್ಲ. ಕಾರಿನ  ರೆಡಿಯೇಟರ್ ನೀರು ಮತ್ತು  ಯಂತ್ರ ಸವೆತ  ತಡೆಯುವ ಎಣ್ಣೆ ಪರಸ್ಪರ ಸಂಬಂದಿಸದ ಹಾಗೆ.  ರೆಡಿಯೇಟರ್  ತರಹದಲ್ಲಿಯೇ  ಒಳಗಿನ ನೀರು ಮತ್ತು ಹೊರಗಿನ ನೀರಿನ ಮದ್ಯೆ    ಶಾಖ    ವಿನಿಮಯ.     ಆದರೆ ಇಲ್ಲಿ ಮದ್ಯೆ ಇರುವ  ವಾಶರ್ ಹಾಳಾದರೆ ?  ಇದನ್ನು  ಅಲ್ಲಗಳೆಯುವಂತೆ  ಇಲ್ಲ.   ನಾನೊಬ್ಬ  ಕೃಷಿಕ.  ಪಂಪಿನ  ವಾಶರ್ ಹಾಳಾಗಿ  ನೀರು ಸೋರುವುದರ ಕಂಡವ.  ಅಲ್ಲದೆ  ಸೆಖೆಗಾಲದಲ್ಲಿ ಅಪಾರ  ವಿದ್ಯುತ್  ಬೇಡಿಕೆಯಿರುವಲ್ಲಿ  ಇದಕ್ಕೆ ನೀರನ್ನು ಎಲ್ಲಿಂದ  ತರೋಣ ?
ಉಪಯೋಗಿಸಿದ  ಅಣು  ಇಂದನವನ್ನು  ಏನು ಮಾಡುವುದೆಂದು  ಇನ್ನೂ  ಯಾವ  ದೇಶದ  ವಿಜ್ನಾನಿಗಳಿಗೂ     ತಿಳಿದಿಲ್ಲ.    ಜಪಾನಿನ   ಫುಕುಷಿಮದಲ್ಲೂ  ನಲುವತ್ತು  ವರ್ಷಗಳಿಂದ  ದಾಸ್ತಾನು  ಹೆಚ್ಚುತ್ತಲೇ  ಇದ್ದ  ಇಂದನ   ತ್ಯಾಜ್ಯ  ಈಗ  ಅಪಾಯಕಾರಿಯಾಗಿ  ವಿಕಿರಣ  ಹೊರಹಾಕುತ್ತಿರುವುದು.     ಅಮೇರಿಕದ    ನೂರಕ್ಕೂ  ಹೆಚ್ಚು  ಕೆಂದ್ರಗಳಲ್ಲಿ  ಸುಮಾರು  ಎಪ್ಪತ್ತು  ಸಾವಿರ ಟನ್  ಈ  ಕಲ್ಮಶ   ದಾಸ್ತಾನು ಇರುತ್ತದೆ.  ಬಿಲಿಯಗಟ್ಟಲೆ  ಡಾಲರ್  ಇವುಗಳ  ಭದ್ರತೆಗೆ  ಖರ್ಚು ಮಾಡಲಾಗುತ್ತಿದೆ.      ಈ  ಅಣು ಇಂದನ ನಿರಪಾಯವಾಗಲು ಬೇಕಾಗುವ  ಸಮಯ  ಸುಮಾರು ಹತ್ತು ವರ್ಷದಿಂದ  ಇಪ್ಪತ್ತು  ಸಾವಿರ ವರ್ಷಗಳೆಂದು  ಅಂದಾಜಿಸಲಾಗಿದೆ.  ಅಂದರೆ  ಮುಂದಿನ  ಹತ್ತು    ಸಾವಿರ ವರ್ಷಗಳಿಗೆ   ಭದ್ರತೆ ಬಗೆಗೆ  ನಾವು ತಯಾರಿರಬೇಕಾಗುತ್ತದೆ.  ಕಟ್ಟಲು  ಹತ್ತಾರು  ವರ್ಷ  ಹಾಗೂ  ಅಪಾರ  ಸಾಮುಗ್ರಿ    ಬೇಕಾಗುವ  ಈ  ಅಣುವಿದ್ಯುತ್ ಕೇಂದ್ರಗಳು  ಮಾನವನಿಗೊಂದು  ಶಾಪವೇ  ಸರಿ.  ಅಪಾಯರಹಿತವಾದ  ಅಣುಶಕ್ತಿ  ತಯಾರಕ  ತೊಂಬತ್ತ ಮೂರು ಮಿಲಿಯ  ಮೈಲು ದೂರದಲ್ಲಿರುವ  ಭಗವಾನ್   ಸೂರ್ಯದೇವ  ಮಾತ್ರ.  

1 comment:

Pejathaya said...

ಗುರು ಗೋವಿಂದ್!
ಭಾರತದೇಶದಲ್ಲಿ ಅಣುಶಕ್ತಿಯ ಬದಲು ಸೂರ್ಯ ದೇವನು ಧರ್ಮಾರ್ಥವಾಗಿ ನೀಡುವ ಶಾಖವನ್ನೇ ಪರ್ಯಾಯ ವಿದ್ಯುತ್ ಜನಕವಾಗಿ ಬಳಸಿಕೊಂಡರೆ? ..... ಅದೆಷ್ಟು ಚೆನ್ನಿತ್ತು! ವಂದನೆಗಳು. - ಪೆಜತ್ತಾಯ