Sunday, June 15, 2008

ಸೌರ ವಿದ್ಯುತ್ ಅವಕಾಶಗಳು



ಹಿಮ್ಮೊಗ ಹರಿದೀತೆ ವಿದ್ಯುತ್ ? ಎನ್ನುವ ಆಲೋಚನೆ ತುಂಬಾ ಕುತೊಹಲದಾಯಕ. ಶ್ರಿ ನಾಗೇಶ ಹೆಗಡೆಯವರ ಅಡಿಕೆ ಫತ್ರಿಕೆ ಮೆ 2008 ಅಂಕಣ ಒದುತ್ತಾ ಕುಳಿತಿದ್ದೆ. ಮೇಲ್ನೋಟಕ್ಕೆ ಅಸಾದ್ಯ ಎನ್ನುವ ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.


ಹಿಂದೊಮ್ಮೆ ಸೈಕಲಿನೊಂದಿಗೆ ಪ್ರಪಂಚಕ್ಕೊಂದು ಸುತ್ತು ಬಂದಿರುವ ನನಗೆ ಈ ವಿಚಾರಗಳಲ್ಲಿ ಬಹಳ ಆಸಕ್ತಿ. ಸೌದೆಯಿಂದ ಅನಿಲ (wood gasifier ) ಪಡೆದು ಅದರಿಂದ ಪಂಪ್ ಚಾಲೂ ಮಾಡಿದ್ದೆ. ಕಳೆದ ಆರು ವರುಷಗಳಿಂದ ಅಸಂಪ್ರದಾಯಕ ಶಕ್ತಿ ಮೂಲಗಳಲ್ಲಿ ಒಂದಾದ ಸೌರ ವಿದ್ಯುತ್ ಬಗೆಗೆ ನನ್ನ ಪ್ರಯತ್ನಗಳು ಸಾಗುತ್ತಾ ಬಂದಿದೆ. ಇದೊಂದು ಪೂರ್ವ ಉದಾಹರಣೆಗಳು ದೊರಕದ ಸವೆಯದ ಹಾದಿಯಲ್ಲಿ ಒಬ್ಬಂಟಿ ಪಯಣ. ಅದುದರಿಂದ ನನ್ನ ಅನುಭವ ಅನಿಸಿಕೆ ಎರಡನ್ನೂ ಹಂಚಿಕೊಳ್ಳುತ್ತೇನೆ.



ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.



ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.



ಸೌರ ಫಲಕಗಳು ಸಿಕ್ಕ ಕೂಡಲೇ ಪಂಪಿನ ಜತೆ ರಾತ್ರಿ ಉರಿಸಲು ಕೆಲವು ಸೌರ ದೀಪಗಳನ್ನೂ ವಿಧ್ಯುತ್ ಕಡಿತದ ಸಮಯದಲ್ಲಿ ಮನೆಯಾಕೆಗೆ ಅಕ್ಕಿ ಅರೆಯಲು, ಮಕ್ಕಳಿಗೆ ಸಚಿನ್ ಚೆಂಡು ಬಾರಿಸುವುದರ ನೋಡಲು ಮತ್ತು ನನ್ನ ಗಣಕಯಂತ್ರ ಉಪಯೋಗಿಸುವಂತೆ ವ್ಯವಸ್ಥೆ ಮಾಡಿಕೊಂಡೆ. ಹಗಲು ಶಕ್ತಿಯ ಒಳಹರಿವಿಂದಾಗಿ inverter ಸಹಾ ಹೆಚ್ಚು ಕಾಲ ಉಪಯೋಗಿಸಲು ಸಾದ್ಯವಾಯಿತು. ಇಷ್ಟಾದ ನಂತರ ವ್ಯರ್ಥವಾಗುತ್ತಿರುವ ಉಳಿಕೆ ವಿದ್ಯುತ್ ಬಗೆಗೆ ನನ್ನ ಗಮನ ಹರಿಯಿತು. ನನ್ನ ಫಲಕದಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ತಿನ ಸಂಪೂರ್ಣ ಬಳಕೆ ಕನ್ನಡಿಯೊಳಗಿನ ಗಂಟು ಎಂಬ ವಿಚಾರ ಕ್ರಮೇಣ ಅರಿವಾಯಿತು.





ಯುರೋಪ್ ಅಮೇರಿಕದಲ್ಲಿರುವಂತೆ ಇಲ್ಲೂ ಬಿಸಿಲು ಇರುವಾಗ ಹೆಚ್ಚಿನ ವಿದ್ಯುತ್ ಜಾಲಕ್ಕೆ ಹಾಯಿಸಿ ರಾತ್ರಿ ಪಡಕೊಳ್ಳುವಂತಿದ್ದರೆ ಚೆನ್ನ. ಹಾಗೆ ಸಾದ್ಯವಾದರೆ ಮನೆಯಲ್ಲಿ ಉಳಿದ ಹೆಚ್ಚುವರಿ ಹಾಲು ನಾವು ಹಾಲಿನ ಸೊಸೈಟಿಗೆ ಹಾಕುವಂತೆ ಸರಳ ವ್ಯವಹಾರ. ನಮಗೆ ಬಾಟರಿಗಳಲ್ಲಿ ಶೇಖರಿಸುವ ಹಾಗೂ ಪರಿವರ್ತಿಸುವ ಉಪಕರಣಗಳು ಮುಂತಾದ ಅನಗತ್ಯ ದುಬಾರಿ ಖರ್ಚುಗಳು ತಪ್ಪುತ್ತದೆ ಹಾಗೂ ಲಬ್ಯವಿದ್ದರೂ ಅವುಗಳ ಗುಣಮಟ್ಟ ತೃಪ್ತಿದಾಯಕ ಎನ್ನುವಂತಿಲ್ಲ. ಆದರೆ ಜಾಲಕ್ಕೆ ವಿದ್ಯುತ್ ಹಾಯಿಸಲು ಎರಡು ಅಡಚಣೆಗಳು ನಮ್ಮ ಮುಂದಿವೆ.



ಅಪಾಯಕಾರಿ ಸನ್ನಿವೇಶಗಳ ತಪ್ಪಿಸಲು ಎನ್ನುವ ಕಾರಣಕ್ಕೆ ಜಾಲಕ್ಕೆ ವಿದ್ಯುತ್ ಹಾಯಿಸಬೇಕಾದರೆ ಯಾವಾಗಲು ವಿದ್ಯುತ್ ಇರಲೇಬೇಕು ಎಂಬುದು ಸ್ಪಷ್ಟ. ರಿಪೇರಿಗೆಂದು ನಿಲುಗಡೆ ಮಾಡಿದಾಗ ನಾವು ವಿದ್ಯುತ್ ಹಾಯಿಸಿದರೆ ಕೆಲಸಗಾರರ ಜೀವಕ್ಕೆ ಅಪಾಯ. ಆದರೆ ನಮ್ಮಲ್ಲಿ ಸೆಕೆಗಾಲದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಸೌರಫಲಕದಲ್ಲಿ ಉತ್ಪನ್ನ ಎರಡೂ ಅದಿಕವಾಗಿರುವಾಗ ಹಳ್ಳಿ ಕಡೆ ವಿದ್ಯುತ್ ಕಡಿತ ಇರುತ್ತದೆ ಎನ್ನುವ ವಿಚಾರ ಜಾಲಕ್ಕೆ ನಮ್ಮಿಂದ ವಿದ್ಯುತ್ ಹಾಯಿಸುವುದು ಅಸಾದ್ಯವಾಗಿಸುತ್ತದೆ. . ನಾವು ಜಾಲಕ್ಕೆ ಹುಯ್ಯುವ ವಿದ್ಯುತ್ತಿನ ಪ್ರಮಾಣ ಜಾಲದ ಮಟ್ಟಿಗೆ ಅತ್ಯಲ್ಪ. ಅದುದರಿಂದ ಅದಕ್ಕಾಗಿ ಜಾಲದಲ್ಲಿ ವಿದ್ಯುತ್ ಹಾಯಿಸಿ ಎಂದು ಕೇಳಲು ಸಾದ್ಯವಿಲ್ಲ.



ಎರಡನೆಯ ಸಿಮಿತಗೊಳಿಸುವ ವಿಚಾರ ಎಂದರೆ ನಾವು ಕಳುಹಿಸುವ ವಿದ್ಯುತ್ ಶಕ್ತಿಯ ತರಂಗಗಳು ಜಾಲದ ತರಂಗಗಳಿಗೆ ಹೊಂದಾಣಿಕೆಯಾಗ ಬೇಕು. ಅಲ್ಲಿ phase difference ಇರಲೇಬಾರದು. ಇದರ ತಾಂತ್ರಿಕತೆಯ ಬಗೆಗೆ ಇನ್ನೂ ನನಗೆ ಖಚಿತ ಮಾಹಿತಿ ಲಬ್ಯವಿಲ್ಲ. ಪಶ್ಚಿಮದ ದೇಶಗಳಲ್ಲಿ ಇವು ಮಿತ ದರದಲ್ಲಿ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.



ಜರ್ಮನಿಯಲ್ಲಿ 1999ರಲ್ಲಿ ತಂದ ಕಾನೂನು ತಿದ್ದುಪಡಿ ಜಾಲಕ್ಕೆ ವಿದ್ಯುತ್ ಹಾಯಿಸುವುದಕ್ಕೆ ಸುಗಮವಾಗಿಸಿ ಇಂದು ಅಲ್ಲಿ ಎಲ್ಲೆಡೆ ವಿದ್ಯುತ್ ಮಟ್ಟಿಗೆ ಸ್ವಾವಲಂಬಿಗಳನ್ನು ಕಾಣಬಹುದು. ಇಂದು ಈ ಕೈಗಾರಿಕೆ ದೇಶದಲ್ಲಿ 2 ಲಕ್ಷ ಜನಕ್ಕೆ ಉದ್ಯೋಗ ಕಲ್ಪಿಸಿರುವುದು ಮಾತ್ರವಲ್ಲ ಒಟ್ಟು ದೇಶದ ವಿದ್ಯುತ್ ಉತ್ಪಾದನೆಯ ಶೇಕಡಾ ಹನ್ನೆರಡರಷ್ಟು ಹೀಗೆ ಜನಸಾಮಾನ್ಯರ ಸೌರ ಫಲಕಗಳು ಹಾಗೂ ಗಾಳಿ ಯಂತ್ರಗಳಿಂದಲೇ ತಯಾರಾಗುತ್ತಿದೆ. ಜಗತ್ತಿನ ಸೌರ ಹಾಗೂ ಪವನ ಶಕ್ತಿ ಉಪಕರಣಗಳ ತಯಾರಿಕೆಯಲ್ಲಿ ಶೇಕಡ 30 ರಷ್ಟು ಪಾಲು ಇಂದು ಜರ್ಮನಿ ಹೊಂದಿರುತ್ತದೆ. ಅಲ್ಲಿ ಇತರ ಮೂಲಗಳ ವಿದ್ಯುತ್ ಯುನಿಟ್ ಒಂದಕ್ಕೆ ರೂಪಾಯಿ 3 ಕ್ಕೆ ಜಾಲ ಪಡಕೊಂಡರೆ ಸೌರ ಹಾಗೂ ಪವನ ಶಕ್ತಿ ಮೂಲದ ವಿದ್ಯುತ್ತಿಗೆ ಈಗ ರೂಪಾಯಿ 6 ರಷ್ಟು ಬೆಂಬಲ ಬೆಲೆ ಇರುತ್ತದೆ. ಈ ಪ್ರೋತ್ಸಾಹಕ ಬೆಂಬಲ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು ಕೊನೆಗೊಮ್ಮೆ ಇತರ ವಿದ್ಯುತ್ ಮೂಲಗಳ ಜತೆ ಸ್ಪರ್ದಿಸಲು ಒತ್ತಡ ಇರುತ್ತದೆ.
ಡೆನ್ಮಾರ್ಕ್ ಶೇಕಡ 20 ರಷ್ಟು ವಿಧ್ಯುತ್ ಪವನಯಂತ್ರಗಳಿಂದ ಪಡಕೊಳ್ಳುತ್ತಿದ್ದು ಉಳಿದ ಕೊರತೆ ಬೀಳುವ ಬೇಡಿಕೆಯ ನಿರ್ವಹಣೆಗೆ ಅಕ್ಕ ಪಕ್ಕದ ದೇಶಗಳಿಂದ ಖರೀದಿಸುತ್ತದೆ. 1986 ಜೂನ್ ತಿಂಗಳಲ್ಲಿ ಒಂದು ರಾತ್ರಿಯ ಮಟ್ಟಿಗೆ ಸಮುದ್ರ ತೀರದಲ್ಲಿರುವ ಗಾಳಿಯಂತ್ರದಿಂದ ವಿದ್ಯುತ್ ತಯಾರಿಸುವ ಒಬ್ಬರು ರೈತರ ಅತಿಥಿಯಾಗಿದ್ದೆ. ಇಲ್ಲಿ ಪವನ ಶಕ್ತಿ ಕ್ಷೇತ್ರದಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಸಹಕಾರ ಸಂಸ್ಥೆಗಳು ಸಕ್ರಿಯವಾಗಿದ್ದು ಇಲ್ಲಿನ ಶೇಕಡ 85 ಜನಸಂಖ್ಯೆ ಅಂದರೆ ಒಂದೂವರೆ ಲಕ್ಷ ಕುಟುಂಬಗಳು ಸ್ವಂತ ಅಥವಾ ಪರೋಕ್ಷವಾಗಿ ಸಹಕಾರಿ ಸಂಸ್ಥೆಗಳ ಮೂಲಕ ಪವನಯಂತ್ರಗಳ ಹೊಂದಿದವರಾಗಿರುತ್ತಾರೆ. ಇಂದು ನಮ್ಮಲ್ಲೂ ಪ್ರಯತ್ನ ಪಟ್ಟರೆ ಈ ಮಾದರಿಗಳು ಸಾದ್ಯವೆಂದು ಹೇಳಬಹುದು.



ಅಮೇರಿಕದ ಕಾಲಿಪೋರ್ನಿಯದಲ್ಲಿ ಒಂದು ಸೌರಫಲಕಗಳ ಅಳವಡಿಸುವ ಸಂಸ್ಥೆ ನೀವು ದೂರವಾಣಿಯಲ್ಲಿ ಸೂಚನೆ ಕೊಟ್ಟ ಕ್ಷಣದಲ್ಲಿ ಕಾರ್ಯಮುಖವಾಗುತ್ತದೆ. ನಿಮ್ಮ ಮನೆಯ ಛಾವಣಿಯ ಗೂಗಲ್ ಉಪಗ್ರಹ ಚಿತ್ರವನ್ನು ನೋಡಿ ಅಲ್ಲಿ ಯಾವ ರೀತಿ ಮತ್ತು ಎಷ್ಟು ಫಲಕಗಳ ಅಳವಡಿಸಬಹುದೆಂಬ ಸ್ಪಷ್ಟ ಯೋಜನೆ ಅವರ ಕಛೇರಿಯಲ್ಲೇ ತಯಾರಾಗುತ್ತದೆ. ಅವರು ಸಂಪೂರ್ಣ ಮಾಹಿತಿಯೊಂದಿಗೆ ಬಂದು ನಿಮ್ಮೊಂದಿಗೆ ಸಂವಾದಕ್ಕೆ ಕೂರುತ್ತಾರೆ. ನಿಮ್ಮ ಸಂಶಯಗಳನ್ನೆಲ್ಲ ಪರಿಹರಿಸುತ್ತಾರೆ. ದೊಡ್ಡ ವ್ಯವಸ್ಥೆಯಾದರೆ ದೈನಿಂದಿನ ನಿರ್ವಹಣೆಯಲ್ಲೂ ಸಹಾಯ ಮಾಡುತ್ತಾರೆ. ಹೀಗೆ ಅಲ್ಲಿ ಇದೊಂದು ಬೆಳೆಯುತ್ತಿರುವ ಉದ್ಯಮ.



ನಮ್ಮ ಸರಕಾರ ನಮ್ಮಲ್ಲಿ ತಯಾರಾಗುವ ಆದರೆ ಹಿಡಿದಿರಿಸಿಕೊಳ್ಳಲು ಸಾದ್ಯವಾಗದೆ ನಷ್ಟವಾಗುವ ವಿದ್ಯುತ್ ಪಡಕೊಳ್ಳುವ ಕಾಲ ಇನ್ನೂ ಬಂದಿಲ್ಲ. ಹಾಗಾಗಿ ನಮ್ಮ ಮುಂದಿರುವ ಇತರ ಅವಕಾಶಗಳ ಪರಿಶೀಲನೆ ಮಾಡೋಣ.



ಪಂಪು 48 V ಅಪೇಕ್ಷಿಸಿದರೆ ನಮ್ಮ ಮಾಮೂಲಿ ಉಪಕರಣಗಳೆಲ್ಲವೂ 12 V ನವು. ನಮ್ಮಲ್ಲಿ 48V ಹಾಗೆಯೇ ಬಳಸಿದರೆ ಉಪಕರಣ ದುಬಾರಿ ಮತ್ತು ಎಲ್ಲ ಫಲಕವನ್ನು 12V ಕ್ಕೆ ಪರಿವರ್ತಿಸಿದರೆ ಬೆರಳ ಗಾತ್ರದ ದುಬಾರಿ ಸರಿಗೆಯಲ್ಲಿ ಹಾಯಿಸುವುದು ಅನಿವಾರ್ಯ ಎನ್ನುವ ದ್ವಂದ್ವಕ್ಕೆ ಒಳಗಾದೆ. ಹೀಗೆ ಒಮ್ಮೆ ಹೆಚ್ಚಿನ ಬಳಕೆಗೆ ಸಹಾಯವಾಗಲು ಒಂದು 48V invertor ಸಹಾ ಪಡಕೊಂಡೆ. ಅದು ಆನೆ ಗಾತ್ರದ ಕಾರಿನಲ್ಲಿ ಕೊತ್ತಂಬರಿ ಸೊಪ್ಪು ತರಲು ಹೋದದ್ದು ಎನ್ನುವಂತಾಯಿತು. ಕಡಿಮೆ ವಿದ್ಯುತ್ ಬಳಸುವ ಸಮಯದಲ್ಲಿ ಶಕ್ತಿಯ ಬಹು ಅಂಶ ಅದುವೇ ಕಬಳಿಸುತ್ತದೆ ಹಾಗೂ ನನ್ನ ಉಪಯೋಗಕ್ಕೆ ಸಿಗುವುದು ಕಡಿಮೆ ಎನ್ನುವ ವಿಚಾರ ಕ್ರಮೇಣ ಅನುಭವಕ್ಕೆ ಬಂತು. ಹಗಲ ಉಪಯೋಗಕ್ಕಿಂತ ರಾತ್ರಿ ನಾನು ಬಾಟರಿಯಲ್ಲಿ ತುಂಬಿಸಿಟ್ಟ ವಿದ್ಯುತ್ ಉಪಯೋಗದಲ್ಲಿ ಜಾಗ್ರತೆ ವಹಿಸಲೇ ಬೇಕು.



ನಮಗೆ ಬೇಕಾದಷ್ಟು ಶಕ್ತಿಯನ್ನು ಬಳಸಲು ಅನುಕೂಲವಾಗಲೆಂದು 12 ಯಾ 48 volt ಲಬ್ಯವಾಗುವಂತೆ dipole relay ಗಳನ್ನು ಸೌರ ಫಲಕದಲ್ಲಿ ಗೆಳೆಯ ಅಶೋಕ ಅಳವಡಿಸಿದ. ಸುಮಾರು ಒಂದು ವರುಷ ಅವುಗಳು ಶಕ್ತಿ ಪೊರೈಕೆ ವಿಚಾರ ಚೆನ್ನಾಗಿ ಕೆಲಸ ಮಾಡಿದವು ಅನಂತರ ಅವುಗಳ contacts ಸುಟ್ಟು ಹೋದಂತಾಗಿ ಕ್ಷಮತೆ ಕಳಕೊಂಡವು. ಅದುದರಿಂದ ನಾನು ಅವುಗಳನ್ನು ಕಳಚುವುದು ಅನಿವಾರ್ಯವಾಯಿತು.



ಸೌರ ಫಲಕಗಳಿಂದ ಬರುವ ವಿದ್ಯುತ್ ಶಕ್ತಿಯ ನಿಯಂತ್ರಣ ಬಹಳ ಅಗತ್ಯ. ತಯಾರಿ, ದಾಸ್ತಾನು ಮತ್ತು ಬೇಡಿಕೆಗಳ ಹೊಂದಾಣಿಕೆ ನಿರ್ವಹಿಸುವ ಈ charge controllers ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇಲ್ಲವಾದರೆ ನಮ್ಮ ಬಾಟರಿ ಅತಿ ಹೆಚ್ಚು ಚಾರ್ಜ್ ಆಗಿ ಹಾಳಾಗಬಹುದು. ನಮ್ಮಲ್ಲಿ ಪುಟ್ಟ ಫಲಕಗಳಿಂದ ಬರುವ 12V ನಿಯಂತ್ರಣಕ್ಕೆ ಬೇಕಾದ ಉಪಕರಣ ಊರಲ್ಲಿಯೇ ದೊರಕುತ್ತದೆ. ಆದರೆ ಹೆಚ್ಚು ವಿಧ್ಯುತ್ (30 A) ಅಥವಾ ಹೆಚ್ಚು ವೊಲ್ಟೇಜ್ (48 V) ಎರಡಕ್ಕೂ ಮಾರಾಟಗಾರರಲ್ಲಿ ಸ್ಪಷ್ಟ ಉತ್ತರವಿಲ್ಲ. ಬೇಕಾದ ಬಿಡಿ ಬಾಗ ಲಬ್ಯವಿಲ್ಲ ಮತ್ತು ಯಾರಿಗೂ ಬಿನ್ನ ಹಾದಿಯಲ್ಲಿ ಸಾಗುವ ಆಸಕ್ತಿಯೂ ಇಲ್ಲ. ನನ್ನ ಬೇಡಿಕೆ ಮೇಲೆ ಬೆಂಗಳೂರಿನಲ್ಲಿ ತಯಾರಾದ ಒಂದು 48 V charge controller ಗುಣಮಟ್ಟ ಸಮದಾನಕರವಲ್ಲ.



ನಮ್ಮ ಉಳಿದ ಎಲ್ಲ ಉಪಕರಣಗಳ ಮಟ್ಟಿಗೆ ನಾನು ಸ್ವಾವಲಂಬಿ ಎನಿಸಿದರೂ ನಮ್ಮ ಬಾಟರಿ ಅವಲಂಬಿತ ಸೌರ ವ್ಯವಸ್ಥೆಯಲ್ಲಿ ರೆಫ್ರಿಜರೇಟರ್ ಬಳಸುವಂತಿಲ್ಲ. ಅದು ಇನ್ನೂ ಸರಕಾರಿ ವಿದ್ಯುತ್ ಉಪಯೋಗಿಸುತ್ತದೆ. ಹಗಲಿನಲ್ಲಿ ಅದೆರೆಡೆಗೆ ನಿಗಾ ವಹಿಸಿದರೆ ಸಾದ್ಯವಾದರೂ ಅದು ಪ್ರಾಯೋಗಿಕವಲ್ಲ. ಅಗಾಗಿ ನಿಂತು ನಡೆಯುವ ಈ ಯಂತ್ರ ಪ್ರಾರಂಬವಾಗುವಾಗ ಒಮ್ಮೆಗೆ ಹೆಚ್ಚು ಶಕ್ತಿಯನ್ನು ಬೇಡುವ ಕಾರಣ ಬಾಟರಿಯನ್ನು ಹಿಂಡಿದಂತಾಗಿ ಬಾಳ್ವಿಕೆ ಕಡಿಮೆಯಾಗುತ್ತದೆ.


ನಮ್ಮಲ್ಲಿ ವಿದ್ಯುತ್ ಉಳಿತಾಯದ CFL ಮತ್ತು LED ದೀಪಗಳು. ಎರಡೂ ದುಬಾರಿ ಮಾಲುಗಳು. ಒಂದು ವರ್ಷ ಖಾತರಿ ಎನ್ನುವ ಈ CFL ದೀಪಗಳ ಸರಾಸರಿ ಬಾಳ್ವಿಕೆ ಒಂದೂವರೆಯಿಂದ ಎರಡು ವರ್ಷಗಳು. ಅದುದರಿಂದ ಇವು ವಿದ್ಯುತ್ ಉಳಿಸಿದರೂ ಉಳಿಕೆ ಹಣದ ಒಂದಂಶ ಹೊಸ ದೀಪಗಳ ಖರೀದಿಗೆ ವಿನಿಯೋಗ. LED ದೀಪಗಳು ಬಹಳ ಹೆಚ್ಚು ಬಾಳ್ವಿಕೆ ಎಂದು ಹೇಳಲ್ಪಟ್ಟಿದೆ. ಇದನ್ನು ಇನ್ನೂ ಏನೂ ಹೇಳಲು ಸಾದ್ಯವಿಲ್ಲ. ಆದರೆ ಶಕ್ತಿಯ ಉಪಯೋಗ ಕನಿಷ್ಟ ಎನ್ನುವುದು ನಿರ್ವಿವಾದ. ಒಟ್ಟಿನಲ್ಲಿ ಉಳಿತಾಯದ ವಿಚಾರ ನಿರ್ಣಾಯಕವಾಗಿ ಹೇಳಲು ಕಷ್ಟ.


ನಾನು ಒಂಟಿಯಾಗಿ ಅನುಬವಿಸಿದ ವೈಫಲ್ಯಗಳ ಬಗೆಗೆ ಹಂಚಿಕೊಳ್ಳಲು ಈ ವಿಚಾರಗಳ ಬರೆದೆ. ಈ ವಿದ್ಯುತ್ ಹಿಮ್ಮೊಗ ಹರಿವು ಸಾದ್ಯತೆಗಳು ನನಗೆ ನಿಕಟ ಬವಿಷ್ಯದಲ್ಲಿ ಗೋಚರಿಸುವುದಿಲ್ಲ. ಕಾರ್ಯಗತವಾದರೆ ಸಮಾಜಕ್ಕೆ ಬಹಳ ಉಪಕಾರಿ. ಆದರೆ ನಮ್ಮ ಸರಕಾರಗಳ ಅಸ್ಪಷ್ಟ ದೋರಣೆಗಳಿಂದಾಗಿ ಯಾರೂ ಸಮಾಜಕ್ಕಾಗಿ ಹಣ ಮತ್ತು ಸಮಯ ವಿನಿಯೋಗಿಸುವುದು ಕಷ್ಟಸಾದ್ಯ.

4 comments:

Srinidhi said...

ಕನ್ನಡದಲ್ಲಿ ವಿಜ್ಞಾನ/ತಂತ್ರಜ್ಞಾನದ ಬಗ್ಗೆ ಮಾಹಿತಿ ಇರುವ ಬ್ಲಾಗುಗಳ ಸಂಖ್ಯೆ ಬಹಳ ಕಡಿಮೆ ಅಂದುಕೊಳ್ಳುತ್ತಿದ್ದಂತೆಯೇ ಗೆಳೆಯ ಸುಶ್ರುತ ನಿಮ್ಮ ಬ್ಲಾಗಿನ ಬಗ್ಗೆ ಹೇಳಿದ. ನೀವು-ನಿಮ್ಮ ಬರಹ-ನಿಮ್ಮ ಬ್ಲಾಗು ಎಲ್ಲ very interesting!

ಸಂಪರ್ಕದಲ್ಲಿರಿ,
ಶ್ರೀನಿಧಿ

Mahesh said...
This comment has been removed by the author.
Mahesh said...

ನಮ್ಮ ದೇಶದಲ್ಲಿ ವಿದ್ಯುತ ಅಭಾವವಿರುವುದರಿಂದ ನಾವು ಸೋಲಾರನಿಂದ ತಯಾರಿಸಿದ ವಿದ್ಯುತನ್ನು ಗ್ರಿಡಗೆ ಕೊಡುವುದರಿಂದ ನಮಗೆ ಬೇಕಾದಾಗ ಉಪಯೋಗಿಸಲು ಅನಾನುಕೂಲಗಳೆ ಹೆಚ್ಚು. ಆದರೆ ನಮಗೆ ಬೇಕಾದ ವಿದ್ಯುತನ್ನು ನಾವೇ ತಯಾರಿಸಿ ಉಪಯೋಗಿಸಬಹದು .

Govinda Nelyaru said...

ಇಲ್ಲ, ಮಹೇಶ್. ನಮಗೆ ಬೇಕಾದ ವಿದ್ಯುತ್ ಬೇಡಿಕೆ ಸ್ಥಿರವಾಗಿರುವುದೇ ಇಲ್ಲ. ಅದುದರಿಂದ ಬೇಕಾಗುವಷ್ಟು ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿ ಉಳಿಕೆಯನ್ನು ಜಾಲಕ್ಕೆ ಪೊರೈಸುವುದೇ ಉತ್ತಮ. ಪಟ್ಟಣಗಳಲ್ಲಿ ಎಸಿ ಇರುವವರು ಜಾಲ ಸಂಪರ್ಕಿತ ಸೌರ ಫಲಕ ಹಾಕಲೇ ಬೇಕೆನ್ನುವ ಕಾನೂನು ಮಾಡಬಹುದು. ಈಗ ಪಟ್ಟಣಗಳಲ್ಲಿರುವ ಬಿಸಿನೀರಿನ ವ್ಯವಸ್ಥೆ ಬೆಳಗ್ಗಿನ ವಿದ್ಯುತ್ ಒತ್ತಡ ಒಂದಷ್ಟು ಕಡಿಮೆ ಮಾಡುವುದಿಲ್ಲವೇ ?