Friday, January 23, 2009

ಬಾಷೆಗಳೊಂದಿಗೆ ಪರದಾಟ

ನಾವು ಪರದೇಶಕ್ಕೆ ಹೋದಾಗ ಅಲ್ಲಿ ಸಂವಾದಕ್ಕೆ ದಾರಿಗಳೇನು ಎನ್ನುವುದು ಪ್ರತಿಯೊಬ್ಬ ಯಾತ್ರಿಗೂ ಗೊಂದಲಗಳಿರುತ್ತದೆ. ಇಂಗ್ಲೀಷ್ ಪ್ರಪಂಚದ ಹೆಚ್ಚಿನ ಕಡೆಗಳಲ್ಲಿ ಪರವಾಗಿಲ್ಲ ಎನ್ನುವಂತಿದ್ದರೂ ಮದ್ಯ ಮತ್ತು ದಕ್ಷಿಣ ಅಮೇರಿಕದಲ್ಲಿ ಸ್ಪಾನಿಶ್ ಬಾಷೆಯದೇ ಕಾರುಬಾರು. ಯುರೋಪಿನಲ್ಲೂ ಅವರವರ ಬಾಷೆಗೆ ಪ್ರಾಮುಖ್ಯತೆಯಾದರೂ ಇಂಗ್ಲೀಷಿನಲ್ಲಿ ವ್ಯವಹರಿಸಬಹುದು. ಕೆಲವರು ಪ್ರವಾಸಕ್ಕಾಗಿ ಬಾಷೆಯ phrase book ಹಿಡಕೊಂಡು ಹೋಗುವುದುಂಟು. ಆದರೆ ನಾನು ಅಂತಹ ಪುಸ್ತಕಗಳು ನಿಷ್ಪ್ರಯೋಜಕ ಎನ್ನುವ ನಿಲುವಿನವನು. ಕೈಸನ್ನೆಯಲ್ಲೇ ಸಾಕಷ್ಟು ಸಂವಾದ ಸಾದ್ಯ.

ಡೆನ್ಮಾರ್ಕಿನಲ್ಲಿ ಒಮ್ಮೆ ಏಕಾಂಗಿಯಾಗಿ ವಾಸಿಸುವ ಅಜ್ಜಿಯಲ್ಲಿ ಅವರ ಮನೆಯ ಎದುರು ಹುಲ್ಲು ಹಾಸಿನಲ್ಲಿ   ನನ್ನ ಡೇರೆ ಹಾಕಿ ನಿದ್ದೆ ಮಾಡಬಹುದೇ ಎಂದು ಕೇಳಿದೆ. ಒಪ್ಪಿದರು. ಡೇರೆ ಎಬ್ಬಿಸಿದ ನಂತರ ತಿಂಡಿ ಕೊಡುತ್ತೇನೆ ಎಂದು ಕೈಸನ್ನೆ ಮಾಡಿದರು. ಸಂಜೆಯ ಅಹಾರ ಕೊಟ್ಟರು. ನಂತರ      ಸ್ನಾನಮಾಡುತ್ತಿಯಾ ಕೇಳಿ ಅವಕಾಶವನ್ನಿತ್ತರು. ಗೋಡೆಯಲ್ಲಿರುವ  ಚಿತ್ರಗಳ   ಮೂಲಕ    ಅವರ ಮಕ್ಕಳ ಪರಿಚಯವಾಯಿತು. ಮರುದಿನ  ಬೆಳಗ್ಗೆ  ಡೇರೆ  ಸುತ್ತಿಡುವಾಗ  ಕರೆದು  ಉಪಹಾರ ಕೊಟ್ಟರು.  ನಮ್ಮ   ಮಾತುಕಥೆಯೆಲ್ಲ  ಕೈ  ಸನ್ನೆಯಲ್ಲೇ  ನಡೆಯಿತು.  ಬಾಷೆ  ಅರಿಯದಿರುವುದು  ಕೊರತೆ  ಅನ್ನಿಸಲೇ  ಇಲ್ಲ.  


ಜಪಾನಿನಲ್ಲಿ ನಾನು ಎನ್ನಲು ನಾವು ಎದೆ ತೋರುವಂತೆ ಅವರು ಮೂಗಿಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಒಮ್ಮೆ ಒಂದು ಗದ್ದೆಯ ಬದಿಯಲ್ಲಿ ಡೇರೆ ಹಾಕಲು ಯೋಚಿಸುತ್ತಿರುವಾಗ ಒಂದು ಅಪ್ಪ ಮಗನ ಜತೆ ಕಂಡಿತು. ಗದ್ದೆ ಅವರದೇ ಅನಿಸಿ ನಾನು ಅವರ ಒಪ್ಪಿಗೆ ಕೇಳಿದೆ. ಅವರು ಮನೆಗೆ ಬಾ ಎಂದು ಸೈಕಲಿನಲ್ಲಿ ಅವರ ಕಾರನ್ನು ಹಿಂಬಾಲಿಸಲು ಹೇಳಿದರು. ಅಲ್ಲಿ ಆಗ ಹೈಸ್ಕೂಲ್ ಕೊನೆ ಹಂತದಲ್ಲಿದ್ದ ಸಟೋಶಿಗೆ ಹೊರತು ಯಾರಿಗೂ ಇಂಗ್ಲೀಷ್ ಬಾರದು. ಮರುದಿನ ಬೆಳಗ್ಗೆ ಗೆಳೆಯನ ಕಂಡು ಒಹಾಯೋ ಗೊಜೈಮಾಸು ಸಟೋಶಿ ಸಾನ್ ಎಂದೆ. Good morning, Mr Satoshi ಎನ್ನುವ ಅರ್ಥ. ಸಟೋಶಿ ಬಹಳ ಸಂತೋಷದಿಂದ ಅವರ ಬಾಷೆಯಲ್ಲಿ ಮಾತು ಮುಂದುವರಿಸಲು ಮಹರಾಯ, ನನಗೆ ಗೊತ್ತಿರುವುದು ಅಷ್ಟೇ, ದಯವಿಟ್ಟು ಇಂಗ್ಲೀಷಿನಲ್ಲಿ ಮಾತನಾಡು ಎಂದು ವಿನಂತಿಸಿದೆ. ನಾವು ಅವರ ಬಾಷೆಯಲ್ಲಿ ಮಾತನಾಡಿದರೆ ಅವರೂ ಅದರಲ್ಲೇ ಉತ್ತರಿಸುತ್ತಾರೆ.  ನಾವು  ಕಂಗಾಲು  ಆಗುತ್ತೇವೆ.    ಅಪರಿಚಿತ ಬಾಷೆಯಲ್ಲಿ ಮಾತನಾಡಿದರೆ ಅರ್ಥೈಸಲು ಹೆಚ್ಚು ಪ್ರಯತ್ನ ಮಾಡುತ್ತಾರೆ  ಅನ್ನುವುದು  ನನ್ನ ಅನುಭವ.

ದಕ್ಷಿಣ ಅಮೇರಿಕದಲ್ಲಿ  ಇಂಗ್ಲೀಷ್  ಜ್ನಾನ  ಕಡಿಮೆ.  ಅಲ್ಲಿ  ಪ್ರವಾಸ  ಮಾಡುವಾಗ  ಕೈಸನ್ನೆಯೊಂದಿಗೆ  ಕನ್ನಡದಲ್ಲೇ  ಹೇಳಿ  ಸುದಾರಿಸಿರುವುದಾಗಿ  ನೇಮಿಚಂದ್ರರು  ಪ್ರವಾಸ  ಕಥೆಯಲ್ಲಿ  ಬರೆದಿದ್ದಾರೆ.  ಮೊದಲು  ಇಂಗ್ಲೀಷ್   ಉಪಯೋಗಿಸುತ್ತಿದ್ದೆವು.  ಅದು  ಏನೂ  ಪ್ರಯೋಜನವಿಲ್ಲವೆಂದು  ಅರಿತ    ನಂತರ  ಇಂಗ್ಲೀಷ್  ಆದರೇನು  ಕನ್ನಡ  ಆದರೇನು  ಎಂದು  ಕನ್ನಡವೇ  ಬಳಸುತ್ತಿದ್ದೆವು  ಎಂದಿದ್ದಾರೆ. 

Friday, January 02, 2009

ಬದುಕೊಂದು ಏಕ ಮುಖ ರಸ್ತೆ

ಜರ್ಮನಿ ಹೊಕ್ಕ ನಂತರ ನನಗೆ ಮೊದಲೆರಡು ದಿನಗಳಲ್ಲಿ ಗಮನ ಸೆಳೆದದ್ದು ಪ್ರತಿ ಊರಲ್ಲೂ ಇರುವ ಐನ್ ಬಾನ್ ಸ್ಟ್ರಾಸ್ಸೆ. ಸ್ವಿಜರ್ ಲಾಂಡಿನ  ಉತ್ತರ  ಬಾಗದಲ್ಲಿ  ಜರ್ಮನ್  ಉಪಯೋಗವಾಗುವ  ಕಾರಣ  ಸ್ಟ್ರಾಸ್ಸೆ ಎಂದರೆ ರಸ್ತೆ ಎನ್ನುವುದರನ್ನು     ಅರಿತಿದ್ದೆ. ಹಾಗೆ ಪ್ರತಿ ಊರಲ್ಲೂ ಇರಬೇಕಾದರೆ ಇದು ನಮ್ಮೂರಲ್ಲಿ ಮಹಾತ್ಮ ಗಾಂಧಿ ರಸ್ತೆ ಇದ್ದಂತಿರಬಹುದು.   ಇವನಾರೋ ಅಂತಹ   ಭಾರಿ  ಮಹಾತ್ಮನಿರಬಹುದು ಎಂದುಕೊಂಡಿದ್ದೆ. ನಾಲ್ಕು ದಿನ ಕಳೆದು ಇಂಗ್ಲೀಷ್ ಮಾತನಾಡುವ ಅಲ್ಲಿ ಪರಿಚಯವಾದ ಗೆಳೆಯರಲ್ಲಿ ವಿಚಾರಿಸಿದೆ - ಈ ಮಹಾತ್ಮನ ಇತಿಹಾಸ. ಅವರು ಆಗ ನಗುತ್ತಾ ಹೇಳಿದರು ಅದರರ್ಥ ಅದು ಏಕ ಮುಖ ರಸ್ತೆ.     
   
ಇತ್ತೀಚೆಗೆ   ಐನ್ ಬಾನ್ ಸ್ಟ್ರಾಸ್ಸೆಯಲ್ಲಿ  ವಾಹನ  ನಿಲ್ಲಿಸಿದ  ಜರ್ಮನ್  ಅರಿಯದ   ಪ್ರವಾಸಿಗಳ   ಪರದಾಟ   ನಿಯತಕಾಲಿಕವೊಂದರಲ್ಲಿ  ಓದಿದೆ.  ವಾಪಾಸು  ಬರುವಾಗ  ಅವರಿಗೂ  ಎಲ್ಲೆಲ್ಲೂ   ಇದೇ  ಹೆಸರಿನ  ರಸ್ತೆ  ಕಂಡು   ಅಕಾಶದಲ್ಲಿರುವ   ಮೋಡದ  ಗುರುತಿನಲ್ಲಿ  ನಿಧಿ  ಹುಗಿದಂತಾಗಿತ್ತು  ಅವರ  ಪರೀಸ್ಥಿತಿ.
 
ನಮ್ಮ ಜೀವನವೂ ಒಂದರ್ಥದಲ್ಲಿ ಏಕ ಮುಖ ಪಯಣ. ಈಗೊಂದು ಹೊಸ್ತಿಲು ದಾಟಿದ್ದೇವೆ. ೨೦೦೯ ಕ್ಕೆ ಕಾಲಿಡುತ್ತಿದ್ದೇವೆ. ಎಲ್ಲರಿಗೂ   ಶುಬಾಶಯಗಳು.