ಎಂಡೊಸಲ್ಪನ್ ಹಂತಹಂತವಾಗಿ ನಿಷೇದವನ್ನು ಶ್ರೀಪಡ್ರೆಯವರೂ ಡಾ ರವೀಂದ್ರನಾಥ ಶಾನುಬೋಗರೂ ಸ್ವಾಗತಿಸಿ ನೈತಿಕ ವಿಜಯ ಎಂದರೂ ನನಗೆ ಮನಸ್ಸಿನ ಕಿರಿಕಿರಿ ಮುಂದುವರಿಯುತ್ತಲೇ ಇತ್ತು. ಆದರೆ ಮೊನ್ನೆ ಶುಕ್ರವಾರ ನಮ್ಮ ಉಚ್ಚ ನ್ಯಾಯಾಲಯ ಎಂಟು ವಾರದ ಮಟ್ಟಿಗೆ ಇದರ ತಯಾರಿ ಹಾಗೂ ಬಳಕೆ ನಿಷೇದಿಸಿದ್ದನ್ನು ಕೇಳುವಾಗ ಬಹಳ ಸಂತಸ ಉಂಟಾಗಿದೆ. ಇದು ಸಮಾಜಕ್ಕೆ ಎಚ್ಚೆತ್ತುಕೊಳ್ಳಲು ಚಾಟಿ ಏಟಿನಂತಾಯಿತು ಅನಿಸುತ್ತದೆ.
ಈ ಸಿಂಪರಣೆ ಪಡ್ರೆ ಹಾಗೂ ಕೊಕ್ಕಡ ಪ್ರದೇಶಗಳಿಗೆ ಸಿಮಿತವಾಗಿಲ್ಲ. ಹೇಗೆ ಬಳಸಿದರೂ ಚೆಲ್ಲಿದರೂ ಈ ವಿಷ ಅಂತಿಮವಾಗಿ ಮನುಷ್ಯರ ದೇಹವನ್ನು ಸೇರುತ್ತದೆ. ಕಾಸರಗೋಡಿನಲ್ಲಿ ಹದಿನೈದು ಕಿಮಿ ತೋಡಿನ ಅಕ್ಕಪಕ್ಕದ ಬಾವಿಗಳೆಲ್ಲ ಎಂಡೊಸಲ್ಫನ್ ಮಯ ಎಂದರೆ ಇದರ ಗಂಬೀರತೆ ಅರಿವಾಗಬೇಕು. ಹಾಗೆ ನಮ್ಮ ದೇಶವಿಡೀ ಹೊಲಸಾಗಿದೆ. ನಾವು ಬಳಸುವ ಆಹಾರ ಪದಾರ್ಥಗಳೆಲ್ಲ ವಿಷಮಯವೇ ಆಗಿದೆ. ಆದರೆ ಸಣ್ಣ ಪ್ರಮಾಣದಲ್ಲಾದ ಕಾರಣ ಸಮಸ್ಯೆ ಅರಿವು ನಮಗಾಗಿಲ್ಲ ಅಷ್ಟೇ. ಮಾತ್ರವಲ್ಲ ನಾವು ತರುವ ಹಣ್ಣು ಹಂಪಲು ಆಹಾರ ಪದಾರ್ಥಗಳೆಲ್ಲವೂ ವಿಷಮಯವಾದಾಗ ಕಾರಣ ಇಂತಹದ್ದು ಎಂದು ಬೊಟ್ಟು ಮಾಡಿ ತೋರಿಸುವುದು ಸಾದ್ಯವೇ ಇಲ್ಲ.
ನಾನು ವಾಸ್ತವ್ಯ ಇರುವುದು ಅನಂತಾಡಿ ಗ್ರಾಮ ಎನ್ನುವಾಗ ಗೊತ್ತು, ಗೊತ್ತು ಅಲ್ಲಿ ಭಾರಿ ತರಕಾರಿ ಬೆಳೆಯುತ್ತಾರೆ. ಲೀಟರ್ ಗಟ್ಟಲೆ ಔಷದಿ [?] ದಾಸ್ತಾನು ಮಾಡುತ್ತಾರೆ, ಸಿಂಪರಣೆ ಮಾಡುತ್ತಾರೆ ಎನ್ನುವಾಗ ಮುಜುಗರವಾಗುತ್ತದೆ. ನನ್ನದೇ ಗ್ರಾಮದ ಇನ್ನೊಂದು ಮೂಲೆಯಲ್ಲಿ ನಡೆಯುವ ಈ ಸಮಾಜದ ವಿರೋದಿ ಅನ್ಯಾಯಕ್ಕೆ ನಾನು ಏನು ಮಾಡುವಂತಿಲ್ಲ ಎನ್ನುವಾಗ ಬೇಸರವಾಗುತ್ತದೆ.
ಅದುದರಿಂದ ಹಾನಿಕರ ಕ್ರಿಮಿ ಕೀಟಗಳ ಜೀವನ ಚಕ್ರದ ಅರಿವು ರೈತರಿಗೆ ಮೂಡಿಸಬೇಕು. ಈಗ ಸಂಜೆ ಆಕಾಶದಲ್ಲಿ ಹಾರಬಹುದಾದ ಹಕ್ಕಿಗೆ ಬೆಳಗ್ಗೆಯೇ ಗುಂಡಿಕ್ಕುವ ಪ್ರವೃತ್ತಿಯೇ ಜೋರಾಗಿದೆ. ಇದರಿಂದಾಗಿ ಪರಿಸರ ಕುಲಷಿತವಾಗುವುದು ಹೊರತು ಯಾವುದೇ ಪ್ರಯೋಜನ ಇಲ್ಲ. ಕನಿಷ್ಟ ಶೇಕಡಾ ಎಪ್ಪತ್ತು ವಿಷ ಸಿಂಪರಣೆ ಅನಿವಾರ್ಯವಲ್ಲ. ಬೆಳೆ ಕಳಕೊಳ್ಳುವ ಬೆದರಿಕೆ, ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ವಿಷದ ಬಗೆಗಿನ ಜೋರಾದ ಪ್ರಚಾರ ಎಲ್ಲವೂ ನಮ್ಮನ್ನು ಸಿಂಪರಣೆಗೆ ಪ್ರೇರಣೆ ಮಾಡುತ್ತದೆ.
ಹೀಗೊಂದು ಶುದ್ದ ಹುಚ್ಚು ಆಲೋಚನೆ. ಹಲವೊಮ್ಮೆ ಹುಚ್ಚು ಆಲೋಚನೆಗಳಲ್ಲಿ ಒಂದಿಷ್ಟು ಸತ್ಯ ಒಳಗೊಂಡಿರುತ್ತದೆ. ಇನ್ನೊಬ್ಬರಿಗೆ ಮುಂದಿನ ಹೆಜ್ಜೆ ಅನ್ವೇಶಣೆ ಸಾದ್ಯವಾಗುತ್ತದೆ. ನಾವು ಯಾವುದೇ ಅಂಟಿಬಯೋಟಿಕ್ ವೈದ್ಯರಿಂದ ಅಥವಾ ಅವರ ಚೀಟಿ ತೋರಿಸಿ ಮದ್ದಿನ ಅಂಗಡಿಯಿಂದ ತರಬಹುದು ಹೊರತು ನೇರವಾಗಿ ಖರೀದಿಸುವಂತಿಲ್ಲ. ಎಲ್ಲರೂ ಇದನ್ನು ಅನುಸರಿಸುತ್ತಾರೆ ಅನ್ನುವಂತಿಲ್ಲವಾದರೂ ಹೀಗೊಂದು ಕಾನೂನು ವ್ಯವಸ್ಥೆ ಜಾರಿಯಲ್ಲಿದೆ. ಅದೇ ರೀತಿ ಕೃಷಿ ಸಂಬಂದಿ ವಿಷಗಳಿಗೆ ಮೂಗು ದಾರ ಹಾಕಿದರೆ ?
ದಾಸ್ತಾನು ಮಾಡುವುದರ ವಿರುದ್ದ ರೈತರ ಮನ ಒಲಿಸಬೇಕಾದರೆ ಅನಿವಾರ್ಯ ಸಂದರ್ಬದಲ್ಲಿ ತಕ್ಷಣ ಪೊರೈಕೆ ಸಾದ್ಯವಾಗಬೇಕು. ಸದಾ ನೋವು ಅನುಬವಿಸುವ ರೋಗಿಗಳಿಗೆ ವೈದ್ಯರು ದಿನಕ್ಕೆ ಮೂರು ಮಾತ್ರೆ ಎನ್ನುವ ಬದಲು ರೋಗಿಯ ಕೈಯಲ್ಲೇ ನಿಯಂತ್ರಣ ಕೊಟ್ಟರೆ ಹೇಗೆ ? ನೋವು ನಿವಾರಕ ಔಷದಿಯನ್ನು ರಕ್ತಕ್ಕೆ ಸೇರಿಸುವ ನಿಯಂತ್ರಣ ರೋಗಿಯ ಕೈಯಲ್ಲೇ ಇದ್ದರೆ ನಿವಾರಕದ ಉಪಯೋಗ ಗಣನೀಯವಾಗಿ ಕಮ್ಮಿಯಾಗಿದೆಯಂತೆ.
ಹಾಗೆ ಬರಿಗಾಲ ವೈದ್ಯರಂತೆ ಬರಿಗಾಲ ಕೃಷಿ ತಜ್ನರನ್ನು ತಯಾರಿಸುವ ವ್ಯವಸ್ಥೆ ನಮ್ಮಲ್ಲಿ ಆಗಬೇಕು. ಇವರು ಊರೊಳಗೆ ಅಥವಾ ಆಸುಪಾಸಿನಲ್ಲಿ ಇರುವವರಾಗ ಬೇಕು. ಅವರಿಗೆ ಸರಕಾರ ಅಥವಾ ಸಮಾಜ ಅದಕ್ಕೊಂದು ಅರ್ಥಿಕ ಬೆಂಬಲ ಒದಗಿಸಬೇಕು. ಅವರು ಹಾನಿಗೊಳಗಾದ ಹೊಲಕ್ಕೆ ಬೇಟಿ ನೀಡಿ ಅಲ್ಲಿನ ಪರೀಸ್ಥಿತಿ ಕೂಲಂಕಶವಾಗಿ ಪರಿಶೀಲನೆ ನಡೆಸಬೇಕು. ಅಕಸ್ಮಾತ್ ಕೀಟ ಹಾವಳಿ ಬೀಕರವಾಗಿದ್ದರೆ ತಕ್ಷಣ ಪರಿಹಾರ ವಿಷದ ಪೊರೈಕೆಯಾಗಿ ಅಕ್ಕಪಕ್ಕದವರ ಸಹಾಯದಿಂದ ಸಿಂಪರಣೆ ಇತ್ಯಾದಿ ನಡೆಯಬೇಕು. ಬೆಂಕಿ ಹರಡದಂತೆ ನಾವು ನೆರೆಕರೆಯಲ್ಲಿ ಕೈ ಜೋಡಿಸುವುದಿಲ್ಲವೇ – ಹಾಗೆ.
ನಾನು ಎರಡು ತಿಂಗಳು ಹಿಂದೆ ಬರೆದ ಯುರೋಪಿನವರ ಎಂಡೊ ವಿರೋದಿ ಆಸಕ್ತಿ ಬಗೆಗೆ ಇಂದಿನ ಉದಯವಾಣಿ ಪುರವಣಿಯಲ್ಲಿ ಮೂರನೇಯ ಪುಟದ ಅವರ ಅಂಕಣದಲ್ಲಿ ಹಾ. ಮ. ಕನಕರವರೂ ಬರೆದಿದ್ದಾರೆ. ಇದೂ ಎಚ್ಚರಿಕೆ ವಹಿಸಬೇಕಾದ ವಿಚಾರ. ಅವರು ಅಂದರೆ ಯುರೋಪಿನ ಹಿತಾಸಕ್ತಿಗಳು ಗೆಲ್ಲುವುದು ನಮಗೆ ಮುಖ್ಯವಲ್ಲವಾದರೂ ವಿಷರಹಿತ ಪರಿಸರ ಆಹಾರ ನಮ್ಮ ಹಕ್ಕು. ನಾವೀಗ ಪರ್ಯಾಯ ವಿಷಗಳನ್ನಲ್ಲ, ವಿಷರಹಿತ ಪರಿಹಾರಗಳ ರೂಪಿಸಬೇಕು. ಕಳೆದ ನಲುವತ್ತು ವರ್ಷಗಳಿಂದ ನಾವು ಎಂಡೊ ತಯಾರಿಸುತ್ತೇವೆ ಬಳಸುತ್ತೇವೆ ಎನ್ನುವಾಗ ಇದರ ಪರ್ಯಾಯಗಳ ಇನ್ನೂ ತಯಾರಿಸಲು ಸಾದ್ಯವಾಗಿಲ್ಲ ಎನ್ನುವುದೂ ನಾಚಿಕೆಗೇಡು.
ಮೊನ್ನೆ ಉಚ್ಚ ನ್ಯಾಯಾಲಯದಲ್ಲಿ ನಡೆದ ವಾದಪ್ರತಿವಾದದ ತಿರುಳು Down to Earth ತಾಣದಲ್ಲಿದೆ. ಸರಕಾರಿ ವಕೀಲರು ನ್ಯಾಯಾದೀಶರ ಮಾತಿಗೆ ಉತ್ತರಿಸಲು ತಡವರಿಸುವುದು ಕುತೂಹಲಕರವಾಗಿದೆ. ಹಾಗೆ ರಪ್ತಿಗಾಗಿ ತಯಾರು ಮಾಡಲು ಅವಕಾಶ ಕೊಡಬೇಕು ಎಂದು ಬಿನ್ನವಿಸಿದ ತಯಾರಕರು ಬೇಡಿಕೆಯ ರುಜುವಾತು ಹಾಜರು ಪಡಿಸುವುದರಲ್ಲಿ ವಿಫಲರಾದರು.
http://www.downtoearth.org.in/node/33493
ಈ ಎಂಟುವಾರದ ತಾತ್ಕಾಲಿಕ ತಡೆ ಶಾಶ್ವತ ನಿರ್ಬಂದವಾಗಲೆಂದು ಹಾರೈಸೋಣ.
ಕೊನೆಮಾತು: ನಮ್ಮ ಬ್ಲೋಗುಗಳಲ್ಲಿರುವ ಪ್ರತಿಕ್ರಿಯೆ ಕಾಣೆಯಾಗಬಹುದೋ ? ಹೌದೆನಿಸುತ್ತದೆ. ಈ ಬ್ಲೋಗಿನ ಹಿಂದಿನ ಪುಟದಲ್ಲಿದ್ದ ಎರಡು ಪ್ರತಿಕ್ರಿಯೆ ಕಾರಣವಿಲ್ಲದೆ ಕಾಣೆಯಾಗಿದೆ. ನಾನು ಓದಿದ ಇತರ ಆಂಗ್ಲ ಬ್ಲೋಗುಗಳಲ್ಲಿಯೂ ಇದೇ ರೀತಿ ಕಾಣೆಯಾದ ಸೂಚನೆ ಕಾಣುತ್ತದೆ.
3 comments:
ಗೋವಿಂದಣ್ಣ, ಸತ್ಯ!! ಎಂಟು ವಾರಗಳ ನಿಷೇಧ ಶಾಶ್ವತ ವಾಗಲಿ ಎಂಬುದು ನಮ್ಮ ಕೂಡ ಆಶಯ..
ಹಾಗೇನೆ, ಉಡುಪಿಯ ಹತ್ತಿರದ 'ಹಾರೋ ಬೂದಿ' ಗೆ ಈಗಲೇ ಕಡಿವಾಣ ಬೀಳದಿದ್ದರೆ, ಮುಂದೊಂದು ದಿನ ಆ ಊರಿನ ಕಥೆ ಕೂಡ ಇದಕ್ಕಿಂತ ಭಿನ್ನವಾಗಿರದು !!.
First time visitor.. ಕೆಲವು ಹಳೆಯ posts ಓದಿದೆ... nice, interesting blog... Regards & best wishes :)
ಪ್ರಿಯ ಗೋವಿಂದಣ್ಣ
ಹಲವು ವರ್ಷಗಳ ಹಿಂದೆ ಕ್ಯೂಬಾ ಎಂಬ ಸಣ್ಣ ದೇಶಕ್ಕೆ ರಾಜಕೀಯ ಕಾರಣಗಳಿಂದ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಪೂರ್ತಿ ನಿಂತು ಹೋಯಿತು. ಆ ದೇಶದಲ್ಲಿ ಪೆಟ್ರೋಲ್ ಸಿಗುತ್ತಿರಲಿಲ್ಲ. ಕ್ಯೂಬಾಕ್ಕೆ ಕಷ್ಟವಾದದ್ದು ನಿಜ. ಆದರೂ ಅದರಿಂದಾಗಿ ಜನ ಸತ್ತ ಹಾಗೆ ಕಾಣಲಿಲ್ಲ. ಅವರು ಹೆಚ್ಚು ಕ್ರಿಯಾಶೀಲರಾದರು!
ಎಂಡೋಸಲ್ಫಾನ್ ಶಾಶ್ವತ ನಿಷೇಧವಾಗಲಿ ಎಂದು ನಾನೂ ಹಾರೈಸುತ್ತೇನೆ.
ಬ್ಲಾಗಿನಿಂದ ಕಾಮೆಂಟ್ಸ್ ಮಾತ್ರ ಅಲ್ಲ, ಇಡಿಡೀ ಲೇಖನಗಳೇ ಮಾಯವಾಗುವುದನ್ನು ನಾನು ಗಮನಿಸಿದ್ದೇನೆ!
Post a Comment